‘ಗ್ರಸ್ತ’ ಕಾದಂಬರಿ – ನನ್ನ ಅನಿಸಿಕೆಗಳು. (By Sudarshana G Rao)

‘ಗ್ರಸ್ತ’  ಕಾದಂಬರಿ – ನನ್ನ ಅನಿಸಿಕೆಗಳು. 

ಕೊಂಡು ತಂದು  ೨ ವರ್ಷಗಳಷ್ಟೇ ಆಗಿದ್ದರೂ ಗ್ರಸ್ತವನ್ನು  ಓದಲು ಕಾಲ ಕೂಡಿ ಬಂದಿರಲೇ ಇಲ್ಲ. ಅಂತರ್ಜಾಲದಲ್ಲೂ ,ಫೇಸ್ಬುಕ್ ಪುಟಗಳಲ್ಲೂ ಸಾಕಷ್ಟು ಓದುಗರು ಈ ಕಾದಂಬರಿಯನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮೊದಲು ಕರಣಂ ಅವರ ಕರ್ಮ ಮತ್ತು ನನ್ನಿ  ಎರಡನ್ನೂ ಓದಿ ಮೆಚ್ಚಿದ್ದೆ.ಈ ಭಾನುವಾರ ಯಾವ ಕೆಲಸ ಇಲ್ಲದ ಕಾರಣ ನಿಧಾನವಾಗಿ ಕುಳಿತು ಓದಿದ್ದಾಯ್ತು. ಚಿಕ್ಕದಾದ ಕಾದಂಬರಿ ಚೆನ್ನಾಗಿ ಓದಿಸಿಕೊಂಡು ಹೋಯಿತು. 

 

ಬೆಂಗಳೂರಿನ ಬ್ರಾಹ್ಮಣ ಬಡಾವಣೆಯಲ್ಲಿ ಪ್ರಾರಂಭವಾಗುವ ಕಥೆ ಅಲ್ಲ್ಲಿಲ್ಲಿ ಹರಿದು, ಪ್ರಾಗ್ ಎಂಬ ವಿದೇಶಕ್ಕೆ ಹೋಗಿ ಪುನಃ ಬೆಂಗಳೂರಿಗೆ ಬಂದು, ತಿರುವು ಪಡೆದು ಮಲೆನಾಡಿನ ಮಲೆಯೊಂದರ ಮೇಲೆ ಬಂದು ನಿಲ್ಲುತ್ತದೆ  ಮುಕ್ತಾಯವೋ ಹೊಸ ಆರಂಭವೋ ಎಂಬುದನ್ನು ಓದುಗರು ಊಹಿಸಿಕೊಳ್ಳಬೇಕು. 

 

ಕೆಳ ಮಧ್ಯಮ ವರ್ಗದ ಮಾಧ್ವ ಬ್ರಾಹ್ಮಣ ಕುಟುಂಬದಲ್ಲಿ ಕಣ್ಣಿನ ತುಂಬಾ ಕನಸು ಹೊತ್ತ ಯುವತಿ, ಸರಿಯಾಗಿ ತಿಳಿಯದೆ, ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿ ಮನೆಬಿಟ್ಟು ಓಡಿಹೋಗಿ ಮದುವೆ ಮಾಡಿಕೊಳ್ಳುವ ಜಯಶ್ರೀ; ಕನಸುಗಳೊಂದೂ ಸಾಕಾರವಾಗದೆ ಬರೀ  ಬೀಳುಗಳ ಹಾದಿಯಲ್ಲಿ ಕ್ರಮಿಸುತ್ತಲೇ ಇನ್ನೇನು ಸ್ವಲ್ಪ ಏಳು ಕಾಣುತ್ತಿದೆ ಎಂಬಲ್ಲಿ ಹೃದಯಾಘಾತದಿಂದ ನಿಧನಳಾಗುತ್ತಾಳೆ. ಕನಸುಗಳು ತುಂಬಿದ ಜೀವವೊಂದು, ಕನಸುಗಳೇ ಇಲ್ಲದ, ಕೆಲಸ ಮಾಡುವ ಕಸುವೂ ಇಲ್ಲದ ಒಬ್ಬನನ್ನು ಓಡಿಹೋಗಿ ಮದುವೆಯಾಗುವ ವಿಪರ್ಯಾಸಗಳು ದಿನವೂ ಕಂಡು ಕೇಳುವ ವಿಚಾರವೇ. ಬವಣೆಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಅವಳ ಮಗನೇ ಅಸಾಧಾರಣ ಬುದ್ಧಿಮತ್ತೆ ಮತ್ತು ಅತೀಂದ್ರಿಯ ಮನ:ಶಕ್ತಿ ಇರುವ ಅವಿನಾಶ್!

ಅವನ ತಾಯಿ ಜಯಶ್ರೀ ಗೆ ಅಡುಗೆ ಮಾಡಿ ಮನೆ ಸಂಭಾಳಿಸುವ ಕೆಲಸ ಕೊಟ್ಟಿದ್ದ ಪ್ರೊಫೆಸ್ಸರ್ ಗೋಪೀನಾಥ್ ಮನೆಯಲ್ಲೇ ಜಯಶ್ರೀ ಮತ್ತು ಶಿವಕುಮಾರ್ ಗೆ ಹುಟ್ಟಿದ ಮಗ ಅವಿನಾಶ ಕೆಲಸಕ್ಕೆ ಉಳಿಯುತ್ತಾನೆ. ಅವನೂ ತನ್ನ ಅಮ್ಮನಂತೆ ಅಡುಗೆಯಲ್ಲಿ ನುರಿತವನೇ. ಜಯಶ್ರೀಯಿಂದ ಒಮ್ಮೆ ಅವಳ ಕಥೆಯನ್ನು ಕೇಳಿ ತಿಳಿದು, ತಮ್ಮ ಸಾಂಪ್ರದಾಯಿಕ ಒತ್ತಡಗಳನ್ನು ಬದಿಗೆ ಸರಿಸಿ,ಮೀರಿ, ಆಕೆಯನ್ನು ಕೆಲಸಕ್ಕೆ ಇಟ್ಟುಕೊಂಡು ಅವಳ ಮಗನ ವಿದ್ಯಾಭ್ಯಾಸದ ಬಗೆಗೆಯೂ ಆಸಕ್ತಿ ವಹಿಸುವ ಗೋಪೀನಾಥರು ಅನಂತರವೂ ಅವನಿಗೆ ಮಾರ್ಗದರ್ಶನ  ಮತ್ತಿತರ ಸಹಾಯ ಮಾಡುತ್ತಲೇ ಇರುತ್ತಾರೆ. ತಮ್ಮ ಕಾಲೇಜಿನಲ್ಲೇ ಕೆಲಸವನ್ನೂ ಕೊಡಿಸುತ್ತಾರೆ , ಅವನ ಸ್ಕಾಲರ್ಷಿಪ್ ಗೆ ತಮ್ಮದೇ ಥೀಸಿಸ್ ಕೊಟ್ಟಿರುತ್ತಾರೆ, ಅವನ ಏಳಿಗೆಯನ್ನು ಕಂಡು ಸಂತೋಷಿಸಿಯೂ ಇರುತ್ತಾರೆ. ವಿಜ್ಞಾನ -ತಂತ್ರಜ್ಞಾನ-ತತ್ವಶಾಸ್ತ್ರ ಇವುಗಳನ್ನು ಸಮನ್ವಯ ಸಾಧಿಸಿ ಅರ್ಥೈಸಿಕೊಳ್ಳುವ ಪ್ರಯತ್ನ ನಡೆಸುತ್ತಲೇ ಅವಿನಾಶನನ್ನೂ ಕಡೆಗೆ ಗಮನ ವಹಿಸಲು ಪ್ರಚೋದಿಸುತ್ತಾರೆ. ಅವಿನಾಶನ ತಂದೆ ತೀರಿಕೊಂಡಾಗ ತಮ್ಮ ಸಂಪ್ರದಾಯ, ಮಡಿ ಮೈಲಿಗೆ, ಆಚಾರಗಳನ್ನು ಮೀರಿ ಮಾನವೀಯತೆ ತೋರಿಸುತ್ತಾರೆ. ಅವರ ಮಗಳಿಗೆ ಅವಿನಾಶನೆಂದರೆ ಪ್ರೀತಿ. ಅವಿನಾಶನಿಗೂ ಅವಳನ್ನು ಮದುವೆಯಾಗುವ ಬಯಕೆ. ಈ ನಡುವೆ ರೇಖಾ ಎಂಬ ಸುಂದರಿಯೂ, ಜಾಣೆಯೂ,, ಸ್ಥಿತಿವಂತ ಮನೆತನದ, ಮದುವೆಯಾದ ಆದರೆ ದಾಂಪತ್ಯದಲ್ಲಿ ಅಸಂತುಷ್ಟಳಾದ ಹೆಣ್ಣಿನ ಪರಿಚಯ ಅವಿನಾಶನಿಗೆ ಆಗಿ, ಅವಳೊಂದಿಗೆ, ಅವಳ ಗಂಡನ ಅನುಪಸ್ಥಿತಿಯಲ್ಲಿ ದೇಹಸಂಪರ್ಕ ಬೆಳೆಸುತ್ತಾನೆ. ಹೇಳದೆ ಕೇಳದೆ ಅವಳಿಂದ ಬಿಡಿಸಿಕೊಂಡು ದೂರವೂ ಸರಿಯುತ್ತಾನೆ. ವಿದೇಶ ತಿರುಗಿ ವಾಪಸ್ಸು ಬಂದಮೇಲೆ, ಗಂಡನನ್ನು ಬಿಟ್ಟು ಹೊರಟು ಬಂದ  ರೇಖಾ, ಮಗುವಿನ ಜೊತೆಗೆ, ಗೋಪೀನಾಥರ ಮಧ್ಯಸ್ಥಿಕೆಯಲ್ಲಿ ಅವಿನಾಶನ ಮನೆ ಸೇರುತ್ತಾಳೆ. ಅವನ ವಿಕ್ಷಿಪ್ತ ನಡವಳಿಕೆಗಳನ್ನು ಸಹಿಸಿಕೊಂಡು, ಅವನೂ  ಅವಳನ್ನು ಒಪ್ಪಿಕೊಂಡು,ಬಾಳುವೆ ನಡೆಸುತ್ತಿರುತ್ತಾರೆ. ಅಷ್ಟರಲ್ಲಿ, ವಿದೇಶದಿಂದ ಇವನ ಸಂಶೋಧನೆಗೆ ಸಲ್ಲಬೇಕಾದ  ಹಣದ ಮೊತ್ತವೊಂದು ಬರುತ್ತದೆ. ಈ ಮಧ್ಯೆ ಗೋಪೀನಾಥರ ಮಗಳ ಮದುವೆಯೂ ಆಗಿ ಆ ಕಹಿಯನ್ನು ಮೀರಿ ನಿರ್ಭಾವುಕನಾಗಿ,ದೇಹ,ಮಾಂಸ, ಸೌಂದರ್ಯ,ಅದರ ಪ್ರಚೋದನೆ ಆ ಪ್ರಚೋದಕ ಶಕ್ತಿ,ಒಂದು ಆಕರವಾಗಿ,ಇನ್ನೊಂದು ಸ್ಪಂದಿಸಿ ಶಕ್ತಿ ಸೋರಿಕೆಯಾಗುವ ಐಡಿಯಾ ಬಂದುಬಿಡುತ್ತದೆ., ಅದೇ ಸ್ಪಷ್ಟವಾಗುತ್ತಾ ಹೋಗಿ ಇವನಿಗೆ ಧಿಗ್ಗನೆ ಪ್ರಪಂಚದಲ್ಲಿ ಸರ್ವವ್ಯಾಪಿಯಾಗಿರುವ ವಿದ್ಯುತ್ತನ್ನು  ನಿಸ್ತಂತು  ಮಾಧ್ಯಮದ ಮೂಲಕ ನಿರಂತರ ಚಾರ್ಜ್ ಮಾಡಬಲ್ಲ ವಿಧಾನದ ಸಾಕ್ಷಾತ್ಕಾರ ಹೊಳೆಯುತ್ತದೆ. ಅದನ್ನು ಭೌತಿಕವಾಗಿ ಕಾರ್ಯರೂಪಕ್ಕೆ ತರಲು ಮಲೆನಾಡಿನ ಮಧ್ಯದಲ್ಲಿ ಮನೆ ಮಾಡಿ , ಬೆಟ್ಟದ ಮೇಲೆ ತನ್ನ ಪ್ರಯೋಗ ನಡೆಸಿ, ತನ್ನ ಹೆಂಡತಿಯಂತೆಯೇ ಇದ್ದ ರೇಖಾಳನ್ನು ನಡುರಾತ್ರಿಯಲ್ಲಿ ಅಲ್ಲಿಗೆ ಕರೆದೊಯ್ದು, ಅವಳಿಂದ , ಅವಳ ಪ್ರತಿಭಟನೆ ಮೀರಿ, ಆಕಸ್ಮಿಕ ಅಕ್ರಮಣಕ್ಕೆ ಅವಳ ಗಂಡನಾದ ಸುಂದರನಿಂದಲೇ  ಅತ್ಯಾಚಾರದ ಹೇಯ ಕೆಲಸಕ್ಕೆ ಪ್ರಮಾಣವನ್ನು ಪಡೆಯುತ್ತಾನೆ. ಅತಿಇಂದ್ರಿಯ ಶಕ್ತಿಯಿಂದಾಗಿ, ಮತ್ತೊಬ್ಬರ ಉದ್ದೇಶವನ್ನು ತಿಳಿಯುವ,ಘಟಿಸಿದ ಘಟನೆಯ ವಿವರಗಳನ್ನು ಅಪ್ರತ್ಯಕ್ಷವಾಗಿ ಅರಿಯುವ ಒಂದು ಜನ್ಮಜಾತ ಅಲೌಕಿಕ  ಶಕ್ತಿ ಅವಿನಾಶನಿಗಿರುತ್ತದೆ!. ಅವನ ನಿಸ್ತಂತು  ವಿದ್ಯುತ್ಪ್ರವಾಹದ  ಉತ್ಪಾದನೆ,, ಪ್ರಸರಣ ಹಾಗೂ ಅದರ ಬಳಕೆಯನ್ನು ಮಾಡಿಕೊಳ್ಳುವ ಪ್ರಯೋಗದ ಸಾಫಲ್ಯವನ್ನೂ ಕಾಣುತ್ತಲೇ ಅವಳನ್ನು ಒಂಟಿಯಾಗಿ ಬಿಟ್ಟು ದಿಗಂಬರನಾಗಿ ಎತ್ತಲೋ ಕಳೆದು ಹೋಗುವಲ್ಲಿ ಕಥೆ ಬಂದು ನಿಲ್ಲುತ್ತದೆ. 

 

ಎಲ್ಲಿಯೂ ನಿಲ್ಲದೆ, ಹೆಚ್ಚು ಎಳೆದಾಡದೆ ಓದಿಸಿಕೊಂಡು ಹೋಗುವ ಕಥೆಯಲ್ಲಿ ಅಲ್ಲಲ್ಲಿ ಪ್ರಾಸ್ತವಿಕವಾಗಿ, ಉಪನಿಷತ್, ವೇದ, ಪ್ರಾಚೀನ ಭಾರತೀಯ ಗಣಿತ, ಅಮೂರ್ತವಾದದ್ದರ ಅದ್ಭುತ ಚಿಂತನೆ, ನಿಕೋಲಾ ಟೆಸ್ಲಾ ಸೇರಿದಂತೆ ಹಲವಾರು ವಿಜ್ಞಾನಿಗಳ ಉಲ್ಲೇಖ ಬಂದು ಹೋಗುತ್ತದೆ. 

 

ದೇಹದಿಂದ ಆತ್ಮ ಬೇರೆಯಾಗುವುದಲ್ಲ, ದೇಹವೇ ಅಖಂಡವಾದ ಆತ್ಮ ಎಂಬಂತೆ ನಾವು ಗ್ರಹಿಸುವ ಸರ್ವವ್ಯಾಪಿ ಶಕ್ತಿ ಎಂಬ ಜಾಲದಿಂದ  ಬೇರ್ಪಡುತ್ತದೆ, ಎಂಬಂಥ ಹಲವು ಜಿಜ್ಞಾಸೆಗೆ ಒಡ್ಡಿಸಿಕೊಳ್ಳುವ ಹೇಳಿಕೆಗಳಿವೆ; ಚೆನ್ನಾಗಿವೆ. 

ನಿರ್ಗುಣ ನಿರಾಕಾರ ಬ್ರಹ್ಮ, ಪಂಚಭೂತಗಳಲ್ಲಿ ಬ್ರಹ್ಮವು ಪ್ರವೇಶಿಸಿ, ತಾನೇ ಅದಾಗುವುದು ಎಂಬ ರೀತಿಯ  ಉಪನಿಷತ್ ವಾಕ್ಯಗಳನ್ನು ಯಥಾಯೋಗ್ಯವಾಗಿ ಬಳಸಿಕೊಂಡಿದ್ದಾರೆ.  

 

ಕಾದಂಬರಿಗೆ ಬೇಕಾದ ಬಿಗಿಯಾದ ಶೈಲಿ, ಸರಸರನೆ ನಡೆದು ಹೋಗುವ ಘಟನೆಗಳು, ಒಂದರಿಂದ ಇನ್ನೊಂದಕ್ಕೆ ತೆರೆದುಕೊಳ್ಳುವ ಬೆಳವಣಿಗೆಗಳು, ಒಂದು ದಿಕ್ಕಿಗೆ ಹರಿದ ಕಥೆ ಮತ್ತೊಂದು ದಿಕ್ಕಿಗೆ ಹರಿದು ಪುನಃ ಎಲ್ಲಿಗೆ ಬಿಟ್ಟಿತ್ತೋ ಅಲ್ಲಿಗೆ ಬಂದು ಮುಂದುವರಿದು ಅಂತ್ಯಕಾಣುವ ವರಸೆಯೂ ಚೆನ್ನಾಗಿದೆ. ವಿಭಿನ್ನ ಕಥಾವಸ್ತು, ಭಾಷೆ, ಸರಳತೆ ಎಲ್ಲದರಲ್ಲೂ ಆಪ್ತವೆನಿಸುವ ಈ ಕಿರುಕಾದಂಬರಿ ಬಹಳ ಕಡೆ ಕರ್ತೃವು ಎಡವಿದ ಅನುಭವ ನನಗೆ ನೀಡಿತು. 

 

ಕಳೆದ ಶತಮಾನ ಕಂಡ ಮೇಧಾವಿ ಆದರೆ ಹತಭಾಗ್ಯನಾದ ವಿಜ್ಞಾನಿ ನಿಕೋಲಾ ಟೆಸ್ಲಾ ೧೯೧೦-೧೨ ರಲ್ಲಿಯೇ ಇಡೀ ವಿಶ್ವಕ್ಕೆ ವಿದ್ಯುತ್ತನ್ನೂ , ಮಾಹಿತಿ ತರಂಗಗಳನ್ನೂ ಬೇಕಾದಷ್ಟು ಪ್ರಮಾಣದಲ್ಲಿ ಉಚಿತವಾಗಿ ಕೊಡುವ ಆಲೋಚನೆ ಹಾಕಿ ಅದಕ್ಕೆ ಆರಂಭಿಕ ಕೆಲಸವನ್ನೂ ಪ್ರಾರಂಭಿಸಿದ್ದ. ಎಡಿಸನ್ನ್ನನ ನಿರಂತರ ಕಿರುಕುಳ, ಆರ್ಥಿಕ ಪ್ರಹಾರ, ರಾಜಕೀಯ, ಮಾರ್ಕೋನಿಯ ಶೀಘ್ರ ಫಲಿತಾಂಶ ಕೊಟ್ಟ ಪ್ರಯೋಗಗಳು ಇವನಿಗೆ ಸಹಾಯ ಸಿಗದಂತೆ ಮಾಡಿ, ದಿವಾಳಿಯೆದ್ದುಹೋದ ಟೆಸ್ಲಾ, ಅಜ್ಞಾತನಾಗಿ ಸತ್ತುಹೋದ. ಅದೇನೋ ಕೆಲವರಿಗೆ ಬಾಳಿನಲ್ಲಿ ಅದೃಷ್ಟ  ಎಂಬುದಿರುವುದಿಲ್ಲ. ಕನ್ನಡದ ಪಿ.ಬಿ.ಶ್ರೀನಿವಾಸ್, ಶ್ರೀನಿವಾಸ ರಾಮಾನುಜಂ, ಅಂತಹ ಕೆಲವರು. ಲೇಖಕರ ಕಥೆಗೆ ಇದು ತಳಹದಿಯೂ, ಸ್ಫುರ್ತಿಯೂ  ಆಗಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಕರಣಂ ಅವರ ವೈಜ್ಞಾನಿಕ ಪರಿಕಲ್ಪನೆಯಲ್ಲಿ ಹೊಸದೆಂಬುದೇನೂ ಇಲ್ಲ; ಟೆಸ್ಲಾನಿಗೆ ತೋರಿಸಲು ಅವಕಾಶ ಆಗಲಿಲ್ಲ, ಅದನ್ನೇ ಇಲ್ಲಿ ಬಳಸಿಕೊಂಡಿದ್ದಾರೆ. ಅವಿನಾಶನ ಆವಿಷ್ಕಾರ  ಎಂಬಂತೆ ಬಿಂಬಿಸಿ ಟೆಸ್ಲಾನ ನೇರ ಕಾಣಿಕೆಯನ್ನು ಮರೆಮಾಚಿದ್ದು ಯಾಕೋ ತಿಳಿಯಲಿಲ್ಲ. ಅವಿನಾಶನ ವ್ಯಕ್ತಿತ್ವದಲ್ಲಿ ಮಾಂತ್ರಿಕ ವಾಸ್ತವತೆಯ ಬಳಕೆ ಮಾಡಿಕೊಂಡಿದ್ದಾರೆ. ಅದನ್ನೇ ಬಳಸಿ ಈ ಪ್ರಯೋಗ-ಪರಿಕಲ್ಪನೆ- ಪರಿಣಾಮಗಳಿಗೆ ಟೆಸ್ಲಾನನ್ನು ಬೆಸೆದಿದ್ದರೆ ವಾಸ್ತವಕ್ಕೆ ನ್ಯಾಯ ಒದಗಿಸಿದಂತಾಗುತ್ತಿತ್ತು. ಕಥಾ ಸಮಯ ಎಂದು ರಿಯಾಯಿತಿ ತೋರಿಸಬಹುದೇನೋ!! ಶ್ರುತಿ -ಸ್ಮೃತಿಗಳು ವಿದ್ಯುತ್ ತರಂಗದ ರೂಪದಲ್ಲಿ ಒಬ್ಬರಿಂದ ಇನೋಬ್ಬರಿಗೆ ಇಳಿಯಬಹುದಾದರೆ ಅದನ್ನು ಭಾರತೀಯ ಭೌಗೋಲಿಕ ಮಿತಿಗೆ ನಿಯಂತ್ರಿಸುವುದರಲ್ಲಿ ಅರ್ಥವಿಲ್ಲ. 

 

ಕಥೆಯ ಮೂಲ ಎಳೆ  “ಹುಟ್ಟು ಮತ್ತದರ ಮೂಲ ಮುಖ್ಯವಲ್ಲ, ಹುಟ್ಟಿನ ಪರಿಣಾಮ  ಮುಖ್ಯ” ಎಂದಾಗಿರುವುದರಿಂದ, ಹುಟ್ಟನ್ನು ಬ್ರಾಹ್ಮಣ ಜಾತಿಗೆ ತಗುಲಿ ಹಾಕಲಾಗಿದೆ. ಇಂದಿನ ಕಾಲದ ಅವಶ್ಯಕತೆಯಾದ, ಎಲ್ಲರಿಂದಲೂ ಅನ್ನಿಸಿಕೊಳ್ಳುವ ಬ್ರಾಹ್ಮಣ, ಆ ಜಾತಿಯ ಸ್ಥಿತಿ, ಗತಿ, ಆಚಾರ ವಿಚಾರ ಎಲ್ಲವುಗಳನ್ನೂ ಲೇಖಕರು ಚೆನ್ನಾಗಿ ಬಳಸಿಕೊಂಡು, ಅದಕ್ಕೊಂದಷ್ಟು ಮಸಿಯನ್ನೂ ಬಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮಾಂತ್ರಿಕ ವಾಸ್ತವವನ್ನು ಅವಿನಾಶನಿಗಷ್ಟೇ, ಅವನ ಉದ್ದೇಶಗಳಿಗಷ್ಟೇ ಬಳಸಿಕೊಂಡು, ಅವನನ್ನು ಲಾಂಚ್ ಮಾಡಲು ಇತರ ಪಾತ್ರಗಳನ್ನೂ ದುರ್ಬಲವನ್ನಾಗಿ ಚಿತ್ರಿಸಿರುವುದು ಲೇಖಕರು ಪೂರ್ವತಯಾರಿಯಲ್ಲಿ ಎಡವಿರುವುದನ್ನು ತೋರಿಸುತ್ತದೆ. ಜಾತಿಯಿಲ್ಲದೆಯೂ , ಬ್ರಾಹ್ಮಣ ಜಾತಿಯನ್ನು ಹೊರತುಪಡಿಸಿಯೂ ಈ ಕಥೆಯನ್ನು ವಿಭಿನ್ನ ನೆಲೆಯಲ್ಲಿ ಕಟ್ಟಬಹುದಿತ್ತೇ ಎಂದರೆ ಹೌದು ಎನ್ನಬಹುದು. ಗಾರ್ಸಿಯ ಮಾರ್ಕ್ವೆಜ್ ನ one hundred years of solitude ಅನ್ನು ಓದಿದವರಿಗೆ, ಪಾತ್ರಗಳನ್ನೂ ನಿರ್ವಚನೆಯಿಂದ ಬೆಳೆಸುವುದು ಹೇಗೆ ಎಂದು ತಿಳಿದೀತು. ‘ಪಾತ್ರಗಳ ಮೇಲೆ ಲೇಖಕನಿಗೆ ಹಿಡಿತವಿಲ್ಲ, ಅವು ತೆರೆದುಕೊಂಡಂತೆ ಬರೆಯುತ್ತಾನೆ’ ಎನ್ನುವುದಾದರೆ, ಒಂದು ಪಾತ್ರವನ್ನುಜಾತಿ ಮತ ಇತ್ಯಾದಿಗಳಿಗೆ ಬಿಗಿದು  ಅಧೋಗತಿಯ ಪ್ರಪಾತಕ್ಕೆ ಇಳಿಸುವಾಗ, ಅದಕ್ಕೆ ಸಂವಾದಿಯಾದ ಮತ್ತೊಂದು ಚಿತ್ರವನ್ನು ಕಟ್ಟಿ ಕೊಡಬೇಕಾಗುತ್ತದೆ ಮತ್ತು ಇದೆ ಲೇಖಕರ ‘ಕರ್ಮಾ ‘ಕಾದಂಬರಿಯಲ್ಲಿ ಆ ಕೆಲಸವನ್ನು ಅಯಾಚಿತವಾಗಿ ಮಾಡಿದ್ದಾರೆ. ಜೀವನದ ಸ್ವಾರಸ್ಯ, ಜಗತ್ತಿನ ವೈಚಿತ್ರ ಇರುವುದೇ ಅಲ್ಲಿ. ಆದರೆ ಪವನ ಪ್ರಸಾದರ ಈ ಪ್ರಪಂಚದಲ್ಲಿ ನಾಯಕನನ್ನು ಬಿಟ್ಟು ಉಳಿದೆಲ್ಲ ಪಾತ್ರಗಳೂ ದುರ್ಬಲವಾಗಬೇಕು, ಅಂದರೆ ನಾಯಕನ ಹೊಳಹು ಹೆಚ್ಚಿತು ಎಂದು ತಿಳಿದಂತಿದೆ.  

 

 ಪಾತ್ರಗಳನ್ನ ಚಿತ್ರಿಸಿದ ರೀತಿಯಲ್ಲಿಯೂ ಲೇಖಕರು ಎಡವಿದ್ದಾರೆ ಎಂದೆನಲ್ಲ, ಅದನ್ನು ನೋಡೋಣ. ಈ ಮಾತನ್ನು ಹೇಳುವಾಗ ಪಾತ್ರಗಳನ್ನೂ ಅವುಗಳು ಇದ್ದಂತೆಯೇ ಒಪ್ಪಿಕೊಳ್ಳುವ ಅವಶ್ಯಕತೆಯನ್ನೂ. ಕಾದಂಬರಿಕಾರನ  ಸ್ವಾತಂತ್ರ್ಯವನ್ನೂ ಅನುಲಕ್ಷ್ಯದಲ್ಲಿ ಇಟ್ಟುಕೊಂಡೆ ಹೇಳುತ್ತಿದ್ದೇನೆ.

ಲೇಖಕರ ಅನುಭವದ ಮೂಸೆಯಿಂದ ಮೂಡಿದ ಪಾತ್ರಗಳೆಂದರೆ ಜಯಶ್ರೀ ಮತ್ತು ಶಿವಕುಮಾರ ಮಾತ್ರ. ಜಯಶ್ರೀ ಪಡುವ ಕಾರ್ಪಣ್ಯಗಳು, ಇಟ್ಟ ಹೆಜ್ಜೆಗಳು, ಅವಳ ಮಿತಿಯಲ್ಲಿ ತೆಗೆದುಕೊಂಡ ನಿರ್ಧಾರಗಳು ಹಾಗೂ ಅವಳ ಅಂತ್ಯ, ಅವಳ ಗಂಡನಾದ ಶಿವಕುಮಾರ, ಅವನ ನಿಷ್ಕ್ರಿಯತೆ, ನಡೆಸಿದ ದೈನೇಸಿ ಜೀವನ ಎಲ್ಲವೂ ವಾಸ್ತವದಿಂದ ಭಿನ್ನವಿಲ್ಲ. ಓದುಗ, ತನ್ನ ಸುತ್ತಲಿನ ಪ್ರಪಂಚದ ಜತೆಗೆ ಗುರುತಿಸಿಕೊಳ್ಳಬಹದು ಹಾಗೂ ಆ ಪಾತ್ರಗಳನ್ನೂ ಚೆನ್ನಾಗಿ ಕಟ್ಟಿಕೊಡಲಾಗಿದೆ.

 

ಮತ್ತೊಂದು ಪ್ರಮುಖ ಪಾತ್ರವಾದ ಗೋಪೀನಾಥರು ತಮ್ಮ ಮಿತಿಯಲ್ಲಿ ತಮಗೆ ಯಾವುದೂ ಅಲ್ಲದ ಅವಿನಾಶನ ಕೈಹಿಡಿದು ಮೇಲೆತ್ತಿ, ಅವನ ಬದುಕಿಗೆ ಒಂದು ದಿಕ್ಕು, ಗುರಿ ತೋರಿಸುವ ತನಕ ಬೆಳೆಸಿ,ಅನಂತರದಲ್ಲಿ ಸ್ವಾರ್ಥಕ್ಕೆ ಪಕ್ಕಾಗಿ ಅವಿನಾಶನಿಗೆ ಮೋಸ ಮಾಡುವ ವಂಚಕನನ್ನಾಗಿ ಚಿತ್ರಿಸಲಾಗಿದೆ. ಅಲ್ಲಿಯೂ ಅವರು ತಮ್ಮ ಮಗಳನ್ನು ಇವನು ಮದುವೆಯಾಗುವ ಅನಿವಾರ್ಯತೆಯಿಂದ ತಪ್ಪಿಸಲು ಹಾಗೆ ಮಾಡಿದರು , ರೇಖಾಳಿಗೆ ಇವನನ್ನು ತಗುಲಿಹಾಕಲು ಮಾಧ್ಯಮವಾದರು, ಮಗಳ ಮದುವೆಗೆ ಕುಹಕದಿಂದ ಆಮಂತ್ರಿಸಿದರು, ಎಂದು ಓದುಗರನ್ನು ನಂಬಿಸಲು ಹರಸಾಹಸ ಪಟ್ಟಿದ್ದಾರೆ. ರೇಖಳಂಥ, ತಿಳಿದ ಬುದ್ಧಿವಂತ ಹೆಣ್ಣಿಗೆ ರೇಪು ಅಪಾದನೆ  ಮಾಡಿ ಇವನನ್ನು ಬೀಳಿಸಲು, ವಯೋವೃದ್ಧರಾದ, ಧರ್ಮ ಕರ್ಮಗಳನ್ನು ಅರಿತ ಒಬ್ಬ ಸದ್ಬ್ರಾಹ್ಮಣಾನೇ ಬೇಕಿತ್ತ?.ಇಲ್ಲಿ ಪಾತ್ರಗಳನ್ನೂ ಸ್ವಾಭಾವಿಕವಾಗಿ ಬೆಳೆಯಲು ಬಿಡದೆ ತಮ್ಮ ಒಗ್ಗರಣೆ ಹಾಕಿರುವುದು ರಾಚುತ್ತದೆ. ಇದನ್ನು ಮೀರಿ, ಅವಿನಾಶನ ಬಾಯಲ್ಲಿ “ನಾನು ಬ್ರಾಹ್ಮಣನಲ್ಲದಿದ್ದರೆ ನೀವು ನನಗೆ ಅನ್ನ  ಹಾಕುತ್ತಿದ್ದಿರಾ, ಸಹಾಯ ಮಾಡುತ್ತಿದ್ದೀರಾ, ಇಲ್ಲ; ನನ್ನ ಯೋಗ್ಯತೆಯಿಂದ ನೀವು ನನ್ನನ್ನು ಗಳಿಸಿಕೊಂಡಿರಿ, ನಿಮ್ಮ ಅಯೋಗ್ಯತೆಯಿಂದ ನನ್ನನ್ನು ಕಳೆದುಕೊಂಡಿರಿ ‘ಎಂಬ ಮಾತನ್ನು ಆಡಿಸಿ ,ಅದಕ್ಕೆ ಸಂವಾದಿಯಾಗಿ ಗೋಪಿನಾಥರಿಂದ, ಸ್ವಗತವೋ, ಇನ್ನೊಂದೋ ತಂದು ಆ ವಿಚಾರಗಳ ಸಮತೋಲನ ಸಾಧಿಸಲಿಲ್ಲ. ಇದು ನನಗೆ ಪೂರ್ವಾಗ್ರಹ ಎಂದೆನಿಸುತ್ತದೆ. 

ಮುಂದೆ ರೇಖಾಳನ್ನಂತೂ ಒಂದು ಕೃತ್ರಿಮಿಯಾಗಿ ಬೆಳೆಸಿಕೊಂಡು ಹೋಗಿದ್ದಾರೆ, ಅನಂತರದಲ್ಲಿ ಸ್ವಂತಿಕೆಯಿಲ್ಲದ, ಬದುಕಲು ಏನೋ ಮಾಡುವ ಹತಾಶ ಹೆಣ್ಣಾಗಿ ಚಿತ್ರಿಸಿದ್ದಾರೆ. ಮದುವೇಗೆ ಮುಂಚೆ, ಮದುವೆಯ ನಂತರ, ಮದುವೆ ಮುರಿದ ಮೇಲೆ, ಎಲ್ಲಾ ಹಂತಗಳಲ್ಲೂ ಅವಳು ಒಂದು ರೀತಿ ಜಾರಿದ ಹೆಂಗಸು ಎನ್ನುವ ಭಾವ ಬರುವಹಾಗೆ ಚಿತ್ರಿಸಿದ್ದೂ ಅಲ್ಲದೆ ತನ್ನ ಗಂಡನಿಗೆ ಅನುಮಾನ ಬರುವಂತೆ ತಾನೇ ಸುಳಿವುಗಳನ್ನು ಸೃಷ್ಟಿಸಿದಳು ಎಂಬಲ್ಲಿಯವರೆಗೂ ಎಳೆದಿದ್ದಾರೆ. ಇದೂ ಸಹಾ ಒಂದು ವಾಸ್ತವದ ಚೌಕಟ್ಟಿನಲ್ಲಿ ಬೆಳೆಸಿದ ಪಾತ್ರವಲ್ಲ. 

ಆನಂದತೀರ್ಥ ಎಂಬ ಜಯಶ್ರೀಯ ತಂದೆ, ಮಗಳು ಯಾರೊಂದಿಗೋ ಓಡಿಹೋದನಂತರ ನೇಣು ಬಿಗಿದು ಸತ್ತರೆ, ಅದಕ್ಕೂ ಜಯಶ್ರೀಯ ಬಾಯಲ್ಲಿ ಬಾಳು ನೀಗಿಸಲಾಗದ ಹೇಡಿ , ಸಂದರ್ಭವನ್ನು ಬಳಸಿಕೊಂಡು ನೇಣು ಬಿಗಿದು ಸತ್ತ ಎಂದು ಹೇಳಿಸಿ ಕೈತೊಳೆದುಕೊಂಡಿದ್ದಾರೆ. ಸುಶ್ಮಾಳನ್ನೂ ಬಿಡದೆ, ಅವಳೂ ಯಾರೊಂದಿಗೋ ಒಂದು ರಾತ್ರಿ ಮಲಗಿ ವ್ಯಭಿಚಾರ ಮಾಡಿದಳು ಎಂದೂ ತೋರಿಸಿಬಿಟ್ಟಿದ್ದಾರೆ. ಒಟ್ಟಿನಲ್ಲಿ ಎಲ್ಲರೂ ಭ್ರಷ್ಟ ಮನಸ್ಸಿನ ಆಷಾಢಭೂತಿಗಳು ಎಂದಾಯಿತು ಅನಿಸುವಂತಿದೆ 

ಅವಿನಾಶನ ಪಾತ್ರ ಈ ಕಾದಂಬರಿಯ ಕೇಂದ್ರಬಿಂದು. ಪಾತ್ರದ ಹುಟ್ಟು, ಬೆಳವಣಿಗೆ, ವಿಸ್ತಾರ ಎಲ್ಲಾ ಚೆನ್ನಾಗಿದೆ. ಇಲ್ಲವೆನ್ನಲಾಗದು. ಅವನ ದೂಷಣೆಗಳು, ಹೇಳಿಕೆಗಳು, ಎಲ್ಲವೂ ಅವನೊಬ್ಬ ವಿಕ್ಷಿಪ್ತ ವ್ಯಕ್ತಿ ಎಂದು ತಿಳಿದು ಬರುತ್ತದೆ. ಅವನ ಕಾಲೇಜಿನ ಕೆಲವು ಸಂದರ್ಭಗಳು, ಅವನ ಸ್ಕಾಲರ್ಷಿಪ್ ನ ಸಂದರ್ಶನ ಪರಿಣಾಮಕಾರಿಯಾಗಿಲ್ಲ. ಅಲ್ಲಿನ ಪ್ರಶ್ನೆಗಳು, ಇವನ ಉತ್ತರ, ಅವರ ನಿರ್ಧಾರ, ಮಾತುಕತೆಗಳು ಒಂದು ನಿಜ ಸಂದರ್ಶನದ  ಅನುಭವವನ್ನುಓದುಗನಿಗೆ  ಕೊಡುವುದಿಲ್ಲ. ಹಲವ್ರು ಸಂದರ್ಶನಗಳನ್ನು ಎದುರಿಸಿದವನಾಗಿ, ಹಲವಾರು ಸಂದರ್ಶನಗಳನ್ನು ಮಾಡಿದವನಾಗಿ ಹೇಳುತ್ತೇನೆ.ಇಲ್ಲಿ ಇನ್ನಷ್ಷ್ಟು ಪರಿಶ್ರಮದ ಅವಶ್ಯಕತೆ ಇತ್ತು. ತನ್ನ ಅಲೌಕಿಕ ಶಕ್ತಿಯಿಂದ ಏನೇನನ್ನೋ ಗ್ರಹಿಸುವ, ಇತರರ ಮನಸ್ಸನ್ನು ಓದಬಲ್ಲ ಅವಿನಾಶನ ಆ ಗ್ರಹಿಕೆಗಳಿಗೆ ಸಂವಾದಿಯಾದ ಆಲೋಚನೆಗಳನ್ನೇ ಬೆಳೆಸದ ಕಾರಣ, ಈ ಕಾದಂಬರಿ, ಇಲ್ಲಿ ಬರುವ “ ಬ್ರಾಹ್ಮಣ” ಪಾತ್ರಗಳ ಬಗ್ಗೆ ಒಂದು ಘನವಾದ ತಪ್ಪು ಕಲ್ಪನೆಯನ್ನು ತಪ್ಪಾಗಿ ಮೂಡಿಸುವ ಪ್ರಮಾದವೆಸಗುತ್ತವೆ. ಕರ್ಮ ಕಾದಂಬರಿಯಲ್ಲಿ ಇರುವ ಸತ್ಯನಿಷ್ಠುರತೆ ಇಲ್ಲಿ ಪವನಪ್ರಸಾದರಿಗೆ ಸಿದ್ಧಿಸಿಲ್ಲ. ಈ ಕಾದಂಬರಿಯಲ್ಲಿ ಪಾತ್ರಗಳೆಲ್ಲವೂ ಕರಣಂ ಪವನ ಪ್ರಸಾದರ ಶಾಪಕ್ಕೆ “ಗ್ರಸ್ತ” ವಾಗಿವೆ..ಇಡೀ ಕಾದಂಬರಿಯೇ ಒಂದು ಅಜೇಂಡಾವೇನೋ ಅನ್ನಿಸಿಬಿಡುತ್ತದೆ, ಹಾಗೂ ವೈಜ್ಞಾನಿಕ ಆವಿಷ್ಕಾರದ ಕಥೆಯ ಎಳೆ   ಅದಕ್ಕೆ ಕೇವಲ ದುರ್ಬಲ ಆಧಾರ ಒದಗಿಸುವಂತಿದೆ.  

ವೈಜ್ಞಾನಿಕ ವಿವರಣೆಗಳ ಬಗೆಗೂ ಬರೆಯುವುದಾದರೆ, ಸರಳವಾಗಿ ವಿವರಿಸುವ ಪ್ರಯತ್ನದಲ್ಲಿ ಒಂದಷ್ಟು ಮುಖ್ಯವಾದ ಅಂಶಗಳನ್ನು ಉಪೇಕ್ಷಿಸಿದ್ದಾರೆ. ಸಾಮಾನ್ಯ ಓದುಗನಿಗೆ ಅದರ ಅವಶ್ಯಕತೆ ಇಲ್ಲ. ಪರಿಪೂರ್ಣತೆಯ ದೃಷ್ಟಿಯಿಂದ ಬೇಕಿತ್ತೇನೋ ಎಂದು, ಭೌತಶಾಸ್ತ್ರದಲ್ಲಿ ಪ್ರವೇಶ ಇರುವ ಕೆಲವರಿಗೆ ಅನ್ನಿಸಬಹುದು. ದ್ರವ್ಯ-ಶಕ್ತಿಯ ಸಮನ್ವಯತೆಯನ್ನು, ವಿದ್ಯುತ್ತಿನ ವಿವಿಧ ಅಲೆಗಳ ತರಂಗಾಂತರಗಳನ್ನೂ ಹೇಗೆ ಪ್ರತ್ಯೇಕಿಸಿ ಬಳಸಬೇಕು, ವಿವಿಧ ಉಪಕರಣಗಳು ತರಂಗಾಂತರದ ವ್ಯತ್ಯಾಸವಿದ್ದಾಗ ಅದನ್ನು ಪ್ರಸರಿಯುವ ಟ್ರಾನ್ಸ್ಮಿಟರ್ ನಿಂದ ಹೇಗೆ ಪಡೆದುಕೊಳ್ಳುತ್ತವೆ? LED ಬಲ್ಬು ಮತ್ತು  ತಂತಿಯ ಸುರುಳಿಯ ಬಲ್ಬುಗಳು ಒಂದೇ ಟ್ರಾನ್ಸ್ಮಿಟರ್ ನ ತರಂಗಗಳನ್ನು ಪಡೆದು ಹೇಗೆ ಕೆಲಸ ಮಾಡಬಲ್ಲವು, inductive ಟೆಕ್ನಾಲಜಿಯ ವಿವರಣೆ ಸರಿಯಾ? ಎಂಬ ಹಲವಾರು ಸಂದೇಹಗಳು ಬಂದು ಹೋದವು. ಇವು ಬೇಕಿಲ್ಲದ ಆಕ್ಷೇಪಣೆಗಳು. ಪರಿಪೂರ್ಣತೆಯ ದೃಷ್ಟಿಯಿಂದ ಮುಂದಿನ ಆವೃತ್ತಿಯಲ್ಲಿ ಗಣಿಸಬಹುದು. 

 

ಇಷ್ಟೆಲ್ಲಾ ಹೇಳಿದಮೇಲೆಯೂ, ಇದೊಂದು ಉತ್ತಮವಾಗಿ ಓದಿಸಿಕೊಂಡು ಹೋಗುವ ಕಾದಂಬರಿ.ಓದುಗನನ್ನು ಚಿಂತನೆಗೆ ಹಚ್ಚುವ, ವಿಭಿನ್ನ ಕಥಾವಸ್ತು ಇರುವ ಕಾದಂಬರಿ.  

ಸುದೀರ್ಘವಾದ ಅವಲೋಕನ ಎಲ್ಲಿಯೂ ಇಲ್ಲದ ಕಾರಣ, ನನಗೆ ತಿಳಿದಷ್ಟು ನಾನಿಲ್ಲಿ ದಾಖಲಿಸಿದ್ದೇನೆ. 

 

(ಯಾವುದೇ ವ್ಯಕ್ತಿ ಇನ್ನೊಬ್ಬನಿಗೆ ಸಹಾಯ ಮಾಡುವಾಗ ಅಲ್ಲಿ ಹೆಚ್ಚು ಲೆಕ್ಖಕ್ಕೆ ಬರುವುದು ಸಹಾಯ ಪಡೆಯುವವನು ನಮ್ಮ ಮನೋಧರ್ಮಕ್ಕೆ ಎಷ್ಟು ಸ್ಪಂದಿಸುತ್ತಾನೆ ಎಂಬುದು. ಅಲ್ಲಿ ಜಾತಿಯೊಂದು ಅಂಶವಷ್ಟೇ. ಅದನ್ನು ಬಳಸಿ ಇಡೀ ಬ್ರಾಹ್ಮಣ ಜಾತಿಯಮೇಲೆ ಗೂಬೆ ಕೂರಿಸುವ ಅವಶ್ಯಕತೆ ಇರಲಿಲ್ಲ.ಅಸಲಿಗೆ, ಅವಿನಾಶ ಬ್ರಾಹ್ಮಣನೇ ಅಲ್ಲ. ತಾಯಿಯ ಸಂಸ್ಕಾರ ಅವನಿಗೆ ಸಿಕ್ಕಿದ್ದಷ್ಟೇ. ಜಿ.ಎಸ.ಶಿವರುದ್ರಪ್ಪ ಅವರನ್ನು ಬೆಳೆಸಿದ ತ.ಸು. ಶ್ಯಾಮರಾಯ, ಕು.ವೇಂಪು ಅವರನ್ನು ಬೆಳೆಸಿದ ಟಿ.ಎಸ. ವೆಂಕಣ್ಣಯ್ಯ , ಅಂಬೇಡ್ಕರ್, ಹೀಗೆ ಚಾಣಕ್ಯ-ಚಂದ್ರಗುಪ್ತನಿಂದ ಇತ್ತೀಚಿನವರೆಗೂ ಉದಾಹರಣೆಗಳನ್ನು ಕೊಡಬಹುದು.ಲೇಖಕನಿಗೆ, ತನ್ನ ಪ್ರಸ್ತುತ ಸಮಾಜದ , ಶೋಷಣೆಗೆ ಗುರಿಯಾಗುತ್ತಿರುವ ಒಂದು ವರ್ಗದ ಕುರಿತು ಸಾಮಾಜಿಕ ಜವಾಬ್ದಾರಿ ಇರಲಿ ಎಂಬುದಕ್ಕೆ ಈ ಮಾತು)  

 

 

ನುಡಿ ಮರಣ / ಭಾಷಾವಸಾನ

ನುಡಿ ಮರಣ / ಭಾಷಾವಸಾನ

ಮುನ್ನುಡಿ: ಕೆಳಗಿನ  ಕವಿತಾ ಸಂಭಾಷಣೆಯ ಮೂಲಕ  – ಸಮಸ್ಯೆಯ ಪರಿಚಯ ಗಮನಿಸಿ

 

ಕನ್ನಡಿಗ:

ಓ ತಾಯಿ ನೀನೇಕೆ ಬೇಡುತಿಹೆ ಭಿಕ್ಷೆ

ಎಲ್ಲಿ ಹೋಯಿತು ನಿನ್ನ ಮನೆ ಮಂದಿ ರಕ್ಷೆ

ಬಾಡಿ ನಲುಗಿಹುದಲ್ಲ ಈ ನಿನ್ನ ವದನ

ಏನಾಯ್ತು ಆ ನಿನ್ನ ಬಹು ಭವ್ಯ ಸದನ

 

ಭುವನೇಶ್ವರಿ ದೇವಿ (ಕನ್ನಡ ಮಾತೆ:)

ಓ ಮಗುವೆ ಮನೆಯಿದ್ದು ಪರದೇಶಿ ನಾನು

ದಿನವೂ ನಾ ಅರೆಹೊಟ್ಟೆ ನೀ ತಿಳಿಯೆಯೇನು

ನನ್ನ ಕೋರಿಕೆಗಿನಿತು ಕೊಡದೆ ಬೆಲೆಯನ್ನು

ಬೇಯಿಸುತ ಬಡಿಸಿಹರು ಕಲಬೆರೆಕೆಯನ್ನು

 

ಹಸಿವೆಯಿಂ ಕಂಗೆಟ್ಟು ದೇಹ ಸೊರಗಿಹುದು

ಭಿಕ್ಷೆ ಬೇಡಲು ನಡೆಯೆ ಕಾಲು ಸೋತಿಹುದು

ಬರಿ ಹೊಟ್ಟೆ, ಕಲಬೆರಕೆ ಸೌಖ್ಯವೆನಗಿಲ್ಲ

ನಾ ಪೊರೆದ ಮಕ್ಕಳಿಂ ಏನು ಸುಖವಿಲ್ಲ

 

ಕನ್ನಡ ಮಾತೆ ತನ್ನ ಮಕ್ಕಳಿಂದಲೇ ಕಡೆಗಣಿಸಲ್ಪಡುತ್ತಿರುವ ಕರಾಳ ಪರಿಸ್ಥಿತಿಯನ್ನು ಚಿತ್ರಿಸುವ ಕವನದ ಸಾಲುಗಳು ಇವು.

 

ಕನ್ನಡವನ್ನು ಕುರಿತಂತೆ ಕೆಳಗಿನ ಚಿಂತಾಜನಕ ಬೆಳವಣಿಗೆಗಳನ್ನು ಗಮನಿಸಿ:

 

 • ಸರಕಾರೀ ಕನ್ನಡ ಶಾಲೆಗಳಲ್ಲಿ ಮಕ್ಕಳಿಲ್ಲ
 • ಕನ್ನಡ ಶಾಲೆಗಳನ್ನು ಮುಚ್ಚಲು ಸರಕಾರದ ನಿರ್ಧಾರ
 • ಕನ್ನಡ ಮಾಧ್ಯಮದಲ್ಲಿ ಕಲಿಸುವ ಖಾಸಗೀ ಶಾಲೆಗಳಿಲ್ಲ
 • ಕನ್ನಡ ಮಾಧ್ಯಮದ ಪರವಾನಗಿ ಪಡೆದು ಆಂಗ್ಲ ಮಾಧ್ಯಮದಲ್ಲಿ ಕಲಿಸುವ ಶಾಲೆಗಳು
 • ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲು ಸರಕಾರದ ನಿರ್ಧಾರ
 • ಖಾಸಗೀ ಶಾಲೆಗಳ ಶುಲ್ಕ ಪೋಷಕರಿಗೆ ಹೊರೆ ಆದರೆ ಸರಕಾರೀ ಶಾಲೆಗಳಿಗೆ ಬೆನ್ನು
 • ಗುಣಮಟ್ಟದ  ಮೌಲ್ಯಾಧಾರಿತ ಶಿಕ್ಷಣದ ಕೊರತೆ
 • ಆಂಗ್ಲ ಮಾಧ್ಯಮದಲ್ಲಿ ಕಲಿತರೆ ಯಶಸ್ಸು- ಕನ್ನಡದಲ್ಲಿ ಕಲಿತರೆ ಆಪತ್ತು
 • ಸರ್ವೋಚ್ಛನ್ಯಾಯಾಲಯದ ತೀರ್ಪು

 

 

ಈ ಎಲ್ಲ ಮೇಲಿನ ತಲೆಬರಹಗಳುಳ್ಳ ಲೇಖನಗಳನ್ನು ನೀವೆಲ್ಲಾ ಓದೇ ಇರುತ್ತೀರಿ. ಕನ್ನಡವನ್ನು ಆದರಿಸಿ ಪೋಷಿಸುವ ಬದಲು ಅದರ ಬುಡಕ್ಕೇ ಕೊಡಲಿ ಹಾಕುವಂತಹ ಕಾನೂನಿನ ಹೋರಾಟವನ್ನು ಪೋಷಕರೂ, ಖಾಸಗೀ ಶಾಲೆಯ ಬಂಡವಾಳಶಾಹಿಗಳೂ ನಡೆಸಿದ್ದು ಒಂದು ದುರದೃಷ್ಟಕರ ಬೆಳವಣಿಗೆಯಲ್ಲದೆ ಮತ್ತೇನು?

 

ಭಾರತದ ಉಚ್ಛ ನ್ಯಾಯಾಲಯ ಮಕ್ಕಳ ಶಿಕ್ಷಣದಲ್ಲಿ ಮಾಧ್ಯಮವನ್ನು ಕುರಿತಂತೆ ಯಾವ ಭಾಷೆಯಲ್ಲಿ ಕಲಿಸಬೇಕು ಎನ್ನುವ ನಿರ್ಣಯ ಪೋಷಕರದ್ದು ;ಸರಕಾರಕ್ಕೆ ಆ ಅಧಿಕಾರ ಇಲ್ಲ ಎಂದು ಹೇಳಿದೆ. ಮಾತೃಭಾಷೆ ಎಂಬ ಪರಿಕಲ್ಪನೆಯ ಹಿಂದಿನ ಭಾವನಾತ್ಮಕ/ ಸಾಂಸ್ಕೃತಿಕ / ರಾಷ್ಟ್ರೀಯ / ಪ್ರಾಂತೀಯ ಪ್ರಾಮುಖ್ಯತೆಯನ್ನು ಕಡೆಗಣಿಸಿ, ಶಿಕ್ಷಣವನ್ನು ಒಂದು ಸರ್ವತೋಮುಖ ಪರಿವೀಕ್ಷಣೆಗೆ ಒಳಪಡಿಸದೆ ಕೇವಲ ವ್ಯಾಪಾರೀ ದೃಷ್ಟಿಯಿಂದ ಮಾತ್ರ ಪರಿಗಣಿಸಿ , ದೀರ್ಘಕಾಲಿಕ ದುಷ್ಪರಿಣಾಮಗಳನ್ನು ನಿರ್ಲಕ್ಷಿಸಿ ನೀಡಿದ ಈ ತೀರ್ಪು ಕನ್ನಡದ ಅಳಿವು ಉಳಿವನ್ನು ನಿರ್ಧರಿಸಲಿದೆ.

ನೀವು ಈ ಲೇಖನ ಓದ್ತಾ ಇದೀರಾ ಅಂತ ಅಂದ್ರೆ ನಿಮಗೆ ಕನ್ನಡದ ಮೇಲಿನ ಕಳಕಳಿ ಇದೆ ಅಂತಾಯ್ತು.ಇಲ್ದೇ ಇದ್ರೆ ಇಷ್ಟ್ಹೊತ್ಗೆ  ಮೂಗ್ ಮುರ್ದು ಬೇರೆ ಪುಟಕ್ಕೆ ಹೋಗಿರ್ತಿದ್ರಿ. ನಾನು ಯಾಕೆ- ಯಾರಿಗೆ ಈ ಲೇಖನ ಬರೀಬೇಕು? ಅಂತ ನನ್ನನ್ನು ನಾನೇ ಬಹಳ ಸಾರಿ ಪ್ರಶ್ನೆ ಮಾಡ್ಕೊಂಡೆ. ಭಾಷಾ ಮರಣದ ಬಗ್ಗೆ ಜಾಗೃತಿ ಮೂಡಿದ್ರೆ, ಅದರ ಸಂದೇಶ ನಿಧಾನವಾಗಿ ಬೇರೆಯವ್ರಿಗೂ ಹರಡಬಹುದೇನೋ  ಆ ಮೂಲಕ ಜನರ  ವಿಚಾರಸರಣಿಯಲ್ಲಿ ಸ್ವಲ್ಪ ಬದಲಾವಣೆ ಆಗಬಹುದೆಂಬ ಅಭಿಲಾಷೆ ನನ್ನದು.  ರೋಗಿಯನ್ನು ಗುಣಪಡಿಸಲು ವೈದ್ಯರಿಗೆ ರೋಗಲಕ್ಷಣಗಳ ಪರಿಚಯ ಹೇಗೆ ಮುಖ್ಯವೋ ಹಾಗೆ ಕನ್ನಡದ ಇಂದಿನ ಬವಣೆ ನೀಗಿಸಲು ನಾವೆಲ್ಲರೂ ಒಂದು ಬಗೆಯ ನುಡಿ ವೈದ್ಯರಾಗುವ ಅವಷ್ಯಕತೆ- ಅನಿವಾರ್ಯತೆ ಇದೆ ಎಂಬುದು ನನ್ನ ಭಾವನೆ.

ಈ ನಿಟ್ಟಿನಲ್ಲಿ ಹಲವಾರು ಆಯಾಮಗಳಿಂದ ಕನ್ನಡದ ದುರ್ಗತಿಯನ್ನು ಪರೀಕ್ಷಿಸಿ ಕನ್ನಡಿಗರಾಗಿ ನಮ್ಮ ಭಾಷೆಗೆ ನಾವು ಮಾಡಬಹುದಾದ ಸೇವೆಯನ್ನು ಪರ್ಯವಲೋಕಿಸುವುದು ಅದನ್ನು ನಿಮ್ಮೊಂದಿಗೆ ಹಂಚಿಕೊಳುವುದು ನನ್ನ ಸದಾಶಯ.

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮಹಾನ್ ಕೃತಿಗಳ ಸಂಪತ್ತಿದೆ, ತನ್ನದೇ ಆದ ಸರಳ, ಸಮೃದ್ಧ,ಸುಂದರ ಲಿಪಿಯೂ ಇದೆ,ಕನ್ನಡವನ್ನಾಡುವ ಜನಗಳು ತಮ್ಮ ನೆಲವೆಂದು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲ ಭೌಗೋಳಿಕ ಚೌಕಟ್ಟಿನ ಪರಿಸರವೂ ಇದೆ, ಇತ್ತೀಚೆಗೆ ಶಾಸ್ತ್ರೀಯ ಸ್ಠಾನ ಮಾನಗಳೂ ದೊರೆತಿವೆ. ಇವೆಲ್ಲಾ ಇದ್ದೂ ಕನ್ನಡಮಾತೆ ಭಿಕ್ಷೆ ಬೇಡುವ ಕಾರ್ಪಣ್ಯಕ್ಕೂ, ನಾನಿಂದು ಈ ಲೇಖನವನ್ನು ಬರೆಯುತ್ತಿರುವುದಕ್ಕೂ ಕಾರಣವೇನು?

ಒಂದು ಭಾಷೆ ಉಳಿದು ಬೆಳೆಯಲು ಭಾಷೆಯ ಸಮೃದ್ಧಿ ಮತ್ತು ಶಕ್ತಿಯಷ್ಟೇ ಸಾಲದು. ಅದನ್ನು ಬಳಸುವ ಸಮಾಜದಲ್ಲಿನ ಜನಗಳ ಮನೋವ್ಯಾಪಾರ / ಅಭಿರುಚಿ / ಅವಶ್ಯಕತೆಗಳು/ಬದಲಾಗುತ್ತಿರುವ ಜಾಗತಿಕ ವಿದ್ಯಮಾನಗಳು /ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿಗಳು ಹಾಗೂ ಸಾಮಾಜಿಕ ಮೌಲ್ಯಗಳು ಪರಿಣಾಮ ಬೀರುತ್ತವೆ. ಎಲ್ಲಕ್ಕಿಂತ ಪ್ರಮುಖವಾಗಿ ಭಾಷಿಕರು ಅದರಲ್ಲೂ ಮಕ್ಕಳು ಮತ್ತು ಯುವಪೀಳಿಗೆ  ಭಾಷೆಯೊಂದರ ಅಳಿವು ಉಳಿವಿನ ಅತಿಮುಖ್ಯ ರೂವಾರಿಗಳು. ಇವುಗಳನ್ನು ಒಂದೊಂದಾಗಿ ಗಮನಿಸೋಣ.

ಕನ್ನಡ ಭಾಷೆಯ  ಸ್ಥಿತಿ ಗತಿಗಳು ಸವಾಲುಗಳು ಮತ್ತು ಅವಕಾಶಗಳು

 • ಕನ್ನಡವನ್ನು ಕುರಿತಾಗಿ ಕನ್ನಡಿಗರ ಮನೋಧರ್ಮ-  ಒಂದು ಪಕ್ಷಿ ನೋಟ
 • ಕನ್ನಡ ಭಾಷೆಯ ಸಧ್ಯದ ಪರಿಸ್ಥಿತಿಯ ಸರಳ ನೋಟ
 • ನುಡಿಯ ಮಹತ್ವ
 • ಬದಲಾಗುವ ಮನೋಧರ್ಮದ ಹಿಂದಿನ ವೈಜ್ಞಾನಿಕ ಕಾರಣಗಳು

 • ಮನುಷ್ಯನ ಅವಶ್ಯಕತೆಗಳ ಶ್ರೇಣಿ
 • ಮ್ಯಾಸ್ಲೊ ನ ಮನೋವೈಜ್ಞಾನಿಕ ವಿಶ್ಲೇಷಣೆ
 • ಮನೋಧರ್ಮದ ಅನುಸಾರ ಕನ್ನಡ ಜನಪದದ ಹರಹು
 • ಭಾಷೆ ಮತ್ತು ಅವಶ್ಯಕತೆಗಳ ಪೂರೈಕೆ- ಭಾಷೆಯೆಂಬ ಸಾಧನ
 • ಅವಶ್ಯಕತೆಗಳ ಹಿನ್ನೆಲೆಯಲ್ಲಿ ಭಾಷೆಗಳ ಉದಯ
 • “ತಾಯಿ ನುಡಿ” ಯ ಪರಿಕಲ್ಪನೆ
 • ನುಡಿಯ (ಭಾಷೆಯ) ಜೀವ ಯಾತ್ರೆ- ಭಾಷೆ ಹಾಯ್ದು ಹೋಗುವ ವಿವಿಧ ಹಂತಗಳು (ಸಂಕ್ಷಿಪ್ತ ಪರಿಚಯ)

 • ಅವಶ್ಯಕತೆಗಳ ಪೂರೈಕೆಯಲ್ಲಿ ಭಾಷಾ ಮಾಧ್ಯಮ
 • ಏಕ ಭಾಷಾ ವ್ಯವಸ್ಥೆ ಮತ್ತು ಭಾಷೆಯ ಸ್ವಾಸ್ಥ್ಯ- ಕನ್ನಡ ಒಂದೇ ಇದ್ದಲ್ಲಿ
 • ದ್ವಿಭಾಷಾ ಪದ್ಧತಿ ಮತ್ತು ಅದರ ಪರಿಣಾಮಗಳು- ಕನ್ನಡ ಮತ್ತು ಇಂಗ್ಲೀಷ್ ಪೈಪೋಟಿಯಲ್ಲಿ
 • ಕಂಗ್ಲೀಷ್ ಮತ್ತದರ ಪರಿಣಾಮಗಳು
 • ಜಾಗತೀಕರಣ ಮತ್ತು ಸಂಸ್ಕೃತಿ
 • ನುಡಿಯ (ಭಾಷೆಯ)  ಜೀವಯಾತ್ರೆ – ವಿವರಣೆ ಮತ್ತು ವಿಶ್ಲೇಷಣೆ  ( ಸವಿವರ ನಿರೂಪಣೆ)
 • ಪರಿಹಾರೋಪಾಯಗಳು ಮತ್ತು ಅವುಗಳ ಸಾಧ್ಯಾಸಾಧ್ಯತೆಗಳ ನಿರೂಪಣೆ.
 • ಕೊನೆಹನಿ.
 • ಉಪಸಂಹಾರ ಮತ್ತು ಪರಿಸಮಾಪ್ತಿ

 

ಕನ್ನಡವ ಕುರಿತಂತೆ ಕನ್ನಡಿಗರ

ಮನೋಧೋರಣೆಗಳ ಪಕ್ಷಿನೋಟ

 

ವಿಶ್ವದಲ್ಲಿ ಇಂದು  ( ಮತ್ತು ಕರ್ನಾಟಕದಲ್ಲಿ ಅನ್ಯ ಭಾಷೆಯ ಜನಗಳನ್ನು ಹೊರತುಪಡಿಸಿ ) ಕನ್ನಡಿಗರೆಂದು ಅವರ ಹುಟ್ಟು ಹಾಗೂ ವಂಶಜರ ಭಾಷೆಯ ಮೂಲಕ ಗುರುತಿಸಲ್ಪಟ್ಟ ಜನಗಳನ್ನು ಒಟ್ಟುಗೂಡಿಸಿ ಕನ್ನಡದ ಬಗೆಗಿನ ಅವರ ಧೋರಣೆಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದರೆ ಅವರುಗಳನ್ನು ಹಲವು ಗುಂಪು (ಪಂಗಡ) ಗಳಾಗಿ ವಿಂಗಡಿಸಬಹುದು.

 

ಗುಂಪು-೦ ( ಅಲ್ಪಸಂಖ್ಯಾತ ಕನ್ನಡ ಪ್ರೇಮಿಗಳು)

 • ಆರ್ಥಿಕ ಚೈತನ್ಯ ಇಲ್ಲಿ ಅಮುಖ್ಯ. ನಾಡು-ನುಡಿ-ಸಂಸ್ಕೃತಿಗೆ ಪ್ರಾಮುಖ್ಯತೆ.
 • ಸಮಾಜ ಮುಖಿ ಕುಟುಂಬ ವ್ಯವಸ್ಥೆ. ವೈಯಕ್ತಿಕ ಹಿತಕ್ಕಿಂತ ಸಾರ್ವತ್ರಿಕ ಹಿತಕ್ಕೆ ಆದ್ಯತೆ.
  • ಮನೆಯಲ್ಲಿ ಪೂರಕ ವಾತಾವರಣ. ಮಕ್ಕಳ ಸಮಗ್ರ ಬೆಳವಣಿಗೆ- ಆತ್ಮವಿಶ್ವಾಸ ವಿಕಾಸ.
 • ನನ್ ಮಕ್ಳು ಕನ್ನಡದಲ್ಲೇ ಕಲಿತು ಬೆಳೆಯಲಿ
 • ಕನ್ನಡದಲ್ಲಿ ಕಲಿತ್ರೆ ನಮ್ಮ ಸಂಸ್ಕೃತಿ ಸಾಹಿತ್ಯದ ಬಗ್ಗೆ ತಿಳುವಳಿಕೆ ಬರುತ್ತೆ
 • ನಾವ್ ಅಲ್ದೆ ನಂ ಭಾಷೆ -ಸಂಸ್ಕೃತಿನ ಯಾರು ಉಳಿಸಬೇಕು
 • ಮಕ್ಕಳಿಸ್ಕೂಲ್ ಮನೇಲಲ್ವೆ. ನಾವ್ ಪ್ರೋತ್ಸಾಹ ಕೊಟ್ರೆ ಯಾವ್ ಮಾಧ್ಯಮ ದಲ್ಲಿ ಓದಿದ್ರೂ ಜಯಿಸ್ಕೊಂಡ್ ಬರ್ತಾರೆ.
 • ಹೊರ ನಾಡಿನಲ್ಲಿದ್ದರೂ ಮಕ್ಕಳಿಗೆ ಕನ್ನಡದ ತಿಳಿವು ಮೂಡಿಸಿ ಬೆಳೆಸುವ ಮಹಾ ಚೈತನ್ಯಗಳು

 

ಗುಂಪು-೧/೨ ( ಕನ್ನಡದ್ ಮೇಲ್ ಅಭಿಮಾನ ಇದ್ರೂ ಸಮಾಜದ ಪ್ರತಿಷ್ಟೆ/ ಭವಿಷ್ಯದ ಆತಂಕ ಇತ್ಯಾದಿಗಳಿಂದ ಮತಿಭ್ರಮಣೆಗೊಳಗಾದ ಗುಂಪು)

 • ಹೆಂಗಾದ್ರೂ ಸರಿ ಮಕ್ಕಳು ಮುಂದೆ ಬರ್ಲಿ. ನಮ್ಗೆ ಸಿಗ್ದೇ ಇದ್ದದ್ದು ನಮ್ ಮಕ್ಳಿಗಾದ್ರೂ ಸಿಗ್ಲಿ
 • ಹೆಣಗಾಟ ಇವರ ಮುಖ್ಯ ಲಕ್ಷಣ. ಆರ್ಥಿಕವಾಗಿ  ಬಹಳ ಬಲಿಷ್ಠರಲ್ಲದ ಸಾಮಾಜಿಕ ವರ್ಗ.
 • ಪೋಷಕರ ವಿದ್ಯಾರ್ಹತೆಯೂ ಬಹುತೇಕ ಮಧ್ಯಮ ಅಥವಾ ಕನಿಷ್ಠ
 • ಆರ್ಥಿಕ ಚೈತನ್ಯ ಕಡಿಮೆ; ಅದರೆ ತೀರಾ ಬಡವರಲ್ಲ
 • ಕಡಿಮೆ ದರ್ಜೆಯ ಖಾಸಗೀ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವುದು
 • ಉತ್ತಮ ದರ್ಜೆಯ ಸರ್ಕಾರೀ ಶಾಲೆ ತಿರಸ್ಕರಿಸುವುದು
 • ಕೆಳಮಟ್ಟದ ಶಿಕ್ಷಕರು,ಬೋಧನೆ,ಮನೆಯಲ್ಲಿ ಪೂರಕ ಮಾರ್ಗದರ್ಶನದ ಕೊರತೆ
 • ಮಕ್ಕಳ ಯೋಗ್ಯತೆ ಹಾಗೂ ಇರುವ ಸೌಲಭ್ಯಗಳನ್ನು ಮೀರಿದ ನಿರೀಕ್ಷೆ
 • ಮಕ್ಕಳು ಎಲ್ಲಿಯೂ ಸಲ್ಲದಂತಾಗುವೆ ಅನಿವಾರ್ಯತೆ

 

ಗುಂಪು -೧ ( ಕಾವೇರಿ ನೀರ್ ಕುಡ್ದು ಕನ್ನಡದಲ್ಲೇ ಮಾತಾಡ್ತಾ ಕನ್ನಡಕ್ಕೆ ಗುನ್ನ ಹಾಕೋವ್ರು)

 • ಆರ್ಥಿಕವಾಗಿ ಸಬಲರು. ಆಡಂಬರ,ಅರೆ ತಿಳುವಳಿಕೆ ಹೆಚ್ಚು.
 • ಭೌತಿಕ ಸಂಪನ್ಮೂಲಗಳ ಮೂಲಕ ಮನುಷ್ಯನ ದರ್ಜೆ ಅಳೆಯುವ ಮಂದಿ
 • ವೈಯಕ್ತಿಕ ಹಿತ, ಪ್ರತಿಷ್ಠೆ ಪ್ರಮುಖ ಅಂಶಗಳು
 • ಭಾಷೆಯೂ ವ್ಯಾವಹಾರಿಕ ಸರಕು ಮಾತ್ರ.
 • ಅಯ್ಯೊ ನಮ್ ಮಗನ್ನ ನಾವು ಕಾನ್ವೆಂಟ್ಗೆ ಸೆರ್ಸೋದು. ದುಡ್ಡು ಎಷ್ಟಾದ್ರೂ ಸರೀನೆ.
 • ಎಲ್ಲರ್ ಮಕ್ಳೂ ಇಂಗ್ಲೀಷ್ ನಲ್ಲೇ ಓದ್ತವೆ, ನಮ್ ಮಕ್ಳು ಮಾತ್ರಾ ಭಿಕಾರಿಗಳ್ ಥರ ಕನ್ನಡದಲ್ಲಿ ಓದ್ಬೇಕಾ
 • ಕನ್ನಡ ಮೀಡಿಯಮ್ ನಲ್ಲಿ ಓದಿದ್ರೆ ಮಣ್ ತಿನ್ಬೇಕಷ್ಟೆ
 • ನಮ್ ಭಾಷೆ ಕನ್ನಡ ಆದ್ರೆ ಏನಂತೆ; ನಾವು ಅದನ್ನ ಮಕ್ಳಿಗೆ ಕಲ್ಸದೇನ್ ಬೇಕಿಲ್ಲ.
 • ಕನ್ನಡ ಕಲಿಯೊದ್ರಿಂದ ಏನೂ ಪ್ರಯೋಜನ ಇಲ್ಲ. ಈಗೆಲ್ಲಾ ಕಡೆ ಇಂಗ್ಲೀಷೇ ಬೇಕು.
 • ಇವೆಲ್ಲಾ ಯಾಕ್ರೀ ತಲೆನೋವು. ಒಳ್ಳೆ ಸ್ಕೂಲಿಗ್ ಹಾಕ್ತೀವಿ. ಇಂಗ್ಲೀಶ್ನಲ್ಲೇ ಓದ್ಲಿ ಬಿಡಿ. ಕನ್ನಡ ಕಟ್ಕೊಂಡ್ ನಮ್ಗೇನಾಗ್ಬೇಕು

ಗುಂಪು-೨ (ಕಾವೇರಿ ನೀರ್ ಕುಡುದ್ರೂ ಥೇಮ್ಸ್ ನದಿ ನೀರ್ ಕುಡ್ದೌರ್ ಥರ ಆಡೋರು)

 • ಮೇಲಿನ ಗುಂಪಿನ ಎಲ್ಲ ಗುಣಗಳೂ ಇವರಲ್ಲಿ ಮೇಳೈಸಿರುವುದಲ್ಲದೆ ಕೆಳಗಿನ ಕುಚೇಷ್ಟೆಯೂ ಸೇರಿರುತ್ತವೆ
 • ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಬಲ ಪೋಷಕರು. ರಾಷ್ಟ್ರೀಯತೆಯಾಗಲೀ, ಭಾಷಾಭಿಮಾನವಾಗಲೀ ಕಡಿಮೆ. ಸ್ವಾರ್ಥಪರ ಕುಟುಂಬ ವ್ಯವಸ್ಥೆ. ಸಾಮಾಜಿಕ ಹಿತಕ್ಕಿಂತ  ವೈಯಕ್ತಿಕ ಪ್ರತಿಷ್ಠೆ ಮುಖ್ಯ.
 • ಆರ್ಥಿಕವಾಗಿ ಬಲಿಷ್ಠರು
  • ಸಾಂಸ್ಕೃತಿಕವಾಗಿ ದಿವಾಳಿಗಳು. ಮೋಜು, ಮಸ್ತಿ , ಹಣ, ಹನನಕ್ಕೆ ಆದ್ಯತೆ.
 • ನಾನು ನಮ್ ಹಸ್ಬಂಡು ಮೊದ್ಲೇ ಡಿಸೈಡ್ ಮಾಡಿದ್ದೀವಿ. ಆಲ್ ಅವರ್ ಚಿಲ್ಡ್ರೆನ್ ವಿಲ್ ಗೊ ಟು ಇಂಗ್ಲೀಷ್ ಮೀಡಿಯಮ್
 • ಈಗೆಲ್ಲ ಗ್ಲೋಬಲ್ ಸಿವಿಲೈಸೇಷನ್. ವ್ಹೂ ವುಡ್ ವಾಂಟ್ ಕನ್ನಡ
 • ಹಾಯ್ ಚಿಲ್ಡ್ರೆನ್ ಹ್ಯಾಡ್ ಯುವರ್ ಫುಡ್. ತಿಂದ್ರಾ?
 • ಡೋಂಟ್ ಡೂ ಇಟ್. ಐ ಹ್ಯಾವ್ ಟೋಲ್ಡ್ ಯು.ಹೇಳ್ಲಿಲ್ವಾ?
 • ಆಲ್ ಅವರ್ ಚಿಲ್ದ್ರೆನ್  ಅಂಡರ್ಸ್ತ್ಯಾಂಡ್ ವೆರಿ ಲಿಟ್ಟ್ಲ್ ಕನ್ನಡ.

 

ಗುಂಪು -೩ ( ಕನ್ನಡದವರಾದ್ರೂ ಕನ್ನಡಾದ ಹಂಗೇ ಇಲ್ಲದಂತಿರುವವರು).

 • ಇವರ ಬಗ್ಗೆ ಬರೆಯೋಕೂ ನನಗೆ ಬೇಜಾರು ಬರುತ್ತೆ. ನೀವೇ ಊಹೆ ಮಾಡ್ಕೊಳಿ.

 

ಗುಂಪು -೪ (ಜೀವನದಲ್ಲಿ ಆಯ್ಕೆಯ ಸ್ವಾತಂತ್ರ್ಯ- ಸಾಮರ್ಥ್ಯ ಇಲ್ಲದ ಬಡ ಜನತೆ)

 • ಆಪಾರ ಸಂಖ್ಯೆಯ ಜನಸ್ತೋಮ ಆದರೆ ಬದಲಾವಣೆಯ ಪ್ರಕ್ರಿಯಯಲ್ಲಿ ಇವರ ಯಾವ ಪಾತ್ರವೂ ಇರದು
 • ಕನ್ನಡದ ಉಳಿವಿಗೆ ಈ ಗುಂಪು ಹೆಚ್ಚು ಶಕ್ತಿ ನೀಡಬಲ್ಲದು. ಆದರೆ ಉತ್ಕೃಷ್ಟ ಕಲಿಕಾ ಸೌಲಭ್ಯ ಇವರಿಗೆ ಲಭ್ಯವಾಗುವುದೆಂತು?

ಹೀಗೆ ಮೇಲೆ ವಿಶದೀಕರಿಸಿದಂತೆ ವಿವಿಧ ಬಗೆಯ ಮನೋಧೋರಣೆಗಳಿಂದಾದ ಒಂದು ಭಾಷೆಯ ಜನಪದವು ಆ ಭಾಷೆಯ ಆರೋಗ್ಯ ಮತ್ತು ಸ್ಥಿತಿ-ಗತಿಗಳನ್ನು ನಿರ್ಧರಿಸುತ್ತದೆ. ಅದನ್ನು ಈಗ ನೋಡೋಣ.

 

ಭಾಷೆಯಾಗಿ ಕನ್ನಡದ ಸ್ಥಿತಿ-ಗತಿ ಮತ್ತು ಸ್ವಾಸ್ಥ್ಯ- ಒಂದು ಸರಳ ನೋಟ

ಈ ಕೆಳಗಿನ ಹೇಳಿಕೆಗಳನ್ನು ಕುರಿತು ಯೋಚಿಸಿ ಅದರ ಅಂಕಿ ಅಂಶಗಳನ್ನು ಕೆದಕಿದರೆ/ಚಿತ್ರಿಸಿಕೊಂಡರೆ ಕನ್ನಡ ನಿಧಾನವಾಗಿ ಕನ್ನಡಿಗರ ಮನ ಮನೆಗಳಿಂದ ದೂರವಾಗುತ್ತಿರುವುದನ್ನು ಗಮನಿಸಬಹುದು.

 • ಕರ್ನಾಟಕದ ಜನಸಂಖ್ಯೆ-
 • ಕನ್ನಡಿಗರ ಸಂಖ್ಯೆ
 • ಕನ್ನಡ ಮಾತನಾಡುವವರ ಸಂಖ್ಯೆ
 • ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳು
 • ಕನ್ನಡ ಮೊದಲ ಭಾಷೆಯಾಗಿ ಕಲಿಯುತ್ತಿರುವ ಮಕ್ಕಳು
 • ಕನ್ನಡ ನಿರರ್ಗಳ ಮಾತನಾಡಬಲ್ಲ ಕನ್ನಡಿಗರು
 • ಕನ್ನಡವನ್ನು ಸುಲಭವಾಗಿ ಬರೆಯಬಲ್ಲವರ ಸಂಖ್ಯೆ.
 • ಕನ್ನಡ ನಿಯತ ಕಾಲಿಕೆ/ ದಿನಪತ್ರಿಕೆ ಓದಬಲ್ಲ ಯುವ ಪೀಳಿಗೆ
 • ಕನ್ನಡ ಪುಸ್ತಕಗಳನ್ನು ಓದಬಲ್ಲ ಮಕ್ಕಳು
 • ಮನೆಯಲ್ಲಿ ಕನ್ನಡ ವ್ಯವಹಾರಿಕ ಭಾಷೆ
 • ಮನೆಯಲ್ಲಿ ಕಂಗ್ಲೀಶ್ ವ್ಯವಹಾರಿಕ ಭಾಷೆ
 • ಮನೆಯಲ್ಲಿ ಬಹುತೇಕ ಇಂಗ್ಲೀಶ್ ವ್ಯವಹಾರಿಕ ಭಾಷೆ
 • ಶಾಲೆ- ಹೊರಗಡೆ ಬಹುತೇಕ ಇಂಗ್ಲೀಷ್ ಬಳಸುವವರ ಸಂಖ್ಯೆ
 • ಕನ್ನಡ ದಿನಪತ್ರಿಕೆಗಳ ಮಾರಾಟದ ಒಟ್ಟು ಸಂಖ್ಯೆ
 • ನಿಯತಕಾಲಿಕೆಗಳ ಮಾರಾಟದ ಒಟ್ಟು ಸಂಖ್ಯೆ.

 

ಬದಲಾಗುತ್ತಿರುವ ಜನಸಂಖ್ಯಾ ಚಿತ್ರಣ ಮತ್ತು ಅದರ ಪರಿಣಾಮಗಳು

  • ಕುಟುಂಬ ಕಲ್ಯಾಣ ಯೋಜನೆ
  • ಒಂದು ಅಥವಾ ಎರಡು ಮಕ್ಕಳು
  • ಸಣ್ಣ ಪ್ರಮಾಣದ ಮಕ್ಕಳ ಸಂಖ್ಯೆ
  • ಹೆಚ್ಚುತ್ತಿರುವ ಕನ್ನಡ ವಿಮುಖತೆ
 • ಸಂಕುಚಿತಗೊಂಡ ಯುವ ಪೀಳಿಗೆಯ ಜನಸಂಖ್ಯೆ
 • ಸಂಕುಚಿತಗೊಂಡ ಕನ್ನಡವನ್ನು ಸಮರ್ಪಕವಾಗಿ ಬಳಸಬಲ್ಲ ಯುವಪೀಳಿಗೆಯ ಪ್ರಮಾಣ
 • ಸಂಕುಚಿತ ಭಾಷಾ ಬಳಕೆದಾರರ ಸಂಖ್ಯೆ
 • ಕನ್ನಡ ಭಾಷಾ ಅಲ್ಪ ಸಂಖ್ಯಾತರು
 • ಕನ್ನಡ ಭಾಷೆಯ ನಿರ್ವಹಣೆ  ಸರಕಾರಗಳಿಗೆ ಅರ್ಥಿಕ ಹೊರೆ
 • ಕನ್ನಡ ಭಾಷೆಗೆ ಸರಕಾರಗಳ ನಿರ್ಲಕ್ಷ್ಯ
 • ಕನ್ನಡ ಭಾಷಾ ಮರಣ ಶಾಸನ!!

ಇವೆಲ್ಲ ಪ್ರಶ್ನೆಗಳು ಕನ್ನಡದ ವತಿಯಿಂದ ಬಹಳ ಮುಖ್ಯವಾದವುಗಳು. ಕಾರಣ, ಕನ್ನಡ ಒಂದು ಪ್ರಾದೇಶಿಕ ಭಾಷೆ. ಅದಕ್ಕೆ ಸೀಮಿತ ಸಂಖ್ಯೆಯ ಜನರು ಮಾತ್ರವೇ ವಾರಸುದಾರರು. ಕನ್ನಡಕ್ಕೆ ಇಂಗ್ಲೀಷಿಗಿರುವಂತೆ ಜಾಗತಿಕ ವೇದಿಕೆ ಇಲ್ಲ.ಕನ್ನಡದ ಪುಸ್ತಕಗಳನ್ನು ಕನ್ನಡದವರು ಮಾತ್ರವೇ ಓದುವುದು. ಹೀಗಾಗಿ ಸಂಖ್ಯಾ ಪ್ರಮಾಣ ಕಡಿಮೆಯಿರುವಲ್ಲಿ ಪ್ರತಿಯೊಂದು ಸದಸ್ಯನಿಗೂ ಪ್ರಾಮುಖ್ಯತೆ ಬರುತ್ತದೆ ಹಾಗೂ ಅವರ ಕೊಡುಗೆಗೆ ಮಹತ್ವ ಇದೆ. ಇದನ್ನೇ ಇನ್ನೊಂದು ರೀತಿ ಹೇಳ ಬೇಕೆಂದರೆ, ಕನ್ನಡನುಡಿಯಿಂದ ವಿಮುಖನಾಗುವ ಪ್ರತಿಯೊಬ್ಬ ಪ್ರಜೆಯೂ ಕನ್ನಡವನ್ನು ವಿನಾಶದೆಡೆಗೆ ತಳ್ಳುತ್ತಿದ್ದಾನೆ/ಳೆ ಎಂದೆನ್ನಬಹುದು.

ಈ ಹಿನ್ನೆಲೆಯಲ್ಲಿ ನುಡಿಯ ಬಗೆಗೆ ನಾವೇಕೆ ಇಷ್ಟೊಂದು ಆತಂಕ ತಾಳಬೇಕೆಂಬುದನ್ನು ಇಲ್ಲಿ ಪರೀಕ್ಷಿಸೋಣ.

ನುಡಿಯ ಮಹತ್ವ:

ಈಗ ನುಡಿಯ ಮಹತ್ವ ಏನು? ನಾವು ಏಕೆ ನಮ್ಮ ಭಾಷೆಯ ಕುರಿತು ಅಭಿಮಾನ ತಳೆಯಬೇಕೆಂಬುದನ್ನು ಸ್ವಲ್ಪ ಪರ್ಯಾವಲೋಚಿಸೋಣ

ಸಂಘ ಜೀವಿಯಾಗಿ ವಿಕಾಸ ಹೊಂದಿದ ಮನುಷ್ಯ ಸಮಾಜಮುಖಿಯಾಗಿ ಸಮಾಜದ ಮೂಲಕ ತನ್ನ ಭದ್ರತೆಯನ್ನು ಕಂಡುಕೊಂಡಿದ್ದು ಈಗ ಓಬೀರಾಯನ ಇತಿಹಾಸವಾಗಿ ಕಾಣಬಹುದು. ಇವತ್ತು ನಾವು ಸಮಾಜವನ್ನು ನಮ್ಮ ದೇಹದ ಭಾಗದಷ್ಟೇ ಸ್ವಾಭಾವಿಕವಾಗಿ ಸ್ವೀಕರಿಸಿದ್ದೇವೆ. ಎಲ್ಲರಿಗೂ ಇದು ತಿಳಿದದ್ದೇ.ಚಿಕ್ಕ ಚಿಕ್ಕ ಗುಂಪುಗಳಾಗಿ, ನಂತರ ಪುಟ್ಟ ಸಮಾಜಗಳಾಗಿ, ಪುಟ್ಟ ಸಮಾಜಗಳು ದೊಡ್ದ ಸಮಾಜಗಳಾಗಿ,ಪ್ರಾಂತ್ಯ,ರಾಜ್ಯ, ದೇಶಗಳೆಂದು ಬೆಳೆದು ಇಂದು ತಮ್ಮದೇ ವೈಶಿಷ್ಟ್ಯಗಳನ್ನು ಪ್ರದರ್ಶಿಸುತ್ತ ಪ್ರಪಂಚದಲ್ಲಿ ತಮ್ಮ ತಮ್ಮ ಛಾಪು ಮೂಡಿಸುತ್ತಿರುವುದು, ತಮ್ಮ ಜೀವನಕ್ರಮವನ್ನು ಇತರರ ಮೇಲೆ ಹೇರುವ ಪ್ರಯತ್ನ ನಡೆಸುವುದು, ಅದನ್ನು ಇನ್ನೊಂದು ಸಮಾಜ ಪ್ರತಿಭಟಿಸುವುದು, ಕಾಲಾಂತರದಲ್ಲಿ ಒಂದು ಇನ್ನೊಂದನ್ನು ನುಂಗಿ ಹಾಕುವುದು, ಪ್ರತಿದಿನ ಕೇಳಿ, ಓದಿ, ತಿಳಿದ ಸರ್ವವೇದ್ಯ ಸತ್ಯ. ಧರ್ಮ, ದೇಶ, ಜಾತಿ, ನಂಬಿಕೆಗಳು ಮಾನವನನ್ನು ಪ್ರಬಲವಾಗಿ ಪ್ರಚೋದಿಸಬಲ್ಲ ವಿಷಯಗಳು. ಇವೆಲ್ಲವನ್ನು ಭಾವನಾತ್ಮಕವಾಗಿ ಬಂಧಿಸುವ ಸಾಮಾನ್ಯ ಕೊಂಡಿಯೇ ಭಾಷೆ. ಹೀಗಾಗಿ ಭಾಷೆ ಒಂದು ಸಮಾಜದ ಗುಣ-ಲಕ್ಷಣಗಳನ್ನು  ಪ್ರತಿನಿಧಿಸುವ ಅಪೂರ್ವ ಮತ್ತು ಶಕ್ತಿಶಾಲೀ  ಸಾಧನ. ಕರ್ನಾಟಕವೆಂಬ ಪ್ರಾಂತ್ಯದ ಕನ್ನಡಿಗರಿಗೂ ಕೊಂಡಿಯ ರೂಪದಲ್ಲಿ ಕನ್ನಡ ಭಾಷೆಯ ಪ್ರಸ್ತುತತೆ ಅನ್ವಯಿಸುತ್ತದೆ. ಕನ್ನಡವನ್ನು ಕಳೆದುಕೊಂಡಾಗ ನಮ್ಮ ಸ್ವಂತಿಕೆಯೂ ನಶಿಸಿಹೋಗುವುದು ಅನಿವಾರ್ಯವಾಗುತ್ತದೆ. ಹೀಗೆ ಭಾಷೆಯನ್ನು ಕಳೆದುಕೊಳ್ಳುವ  ಪರಿಸ್ಥಿತಿ ಏಕೆ ಬರುತ್ತದೆ? ಇದನ್ನು ಅರಿತುಕೊಳ್ಳಲು, ಮಾನವನ ಅವಶ್ಯಕತೆಯನ್ನು ಪೂರೈಸುವ ಸಾಧನವಾಗಿ ಭಾಷೆಯೊಂದು ಉದಯವಾಗಿ ಬೆಳೆದು ಪ್ರಾದೇಶಿಕತೆ ಮತ್ತು ಬಾಂಧವ್ಯವನ್ನು ಬೆಸೆಯುವ ಪ್ರಕ್ರಿಯೆಯನ್ನು ಮೊದಲು ತಿಳಿಯಬೇಕು.

 

ಮ್ಯಾಸ್ಲೋ ಮತ್ತು  ಮಾನವನ ಅವಶ್ಯಕತೆಗಳ ಶ್ರೇಣಿ: ಭಾಷೆಯ ಬೆಳವಣಿಗೆಗೆ ಸಂಬಂಧಿಸಿದಂತೆ

maslo

 

ಮನುಷ್ಯನ ಅವಶ್ಯಕತೆಗಳನ್ನು ಪೂರೈಸುವ ಸಾಧನವಾಗಿ ಉದಯವಾಗುವ ಭಾಷೆ ಮುಂದೆ ಭಾವನಾತ್ಮಕವಾಗಿ ಜೀವನದೊಂದಿಗೆ ಬೆಸೆದುಕೊಳ್ಳುವ ಪರಿ ಬಹಳ ಆಸಕ್ತಿ ದಾಯಕ. ಮನುಷ್ಯನ ಅಭಿವೃದ್ಧಿಯ ಜೊತೆ ಜೊತೆಗೆ ಭಾವನಾತ್ಮಕ ಅವಶ್ಯಕತೆಗಳನ್ನೂ ಪೂರೈಸಬಲ್ಲದ್ದಾದ್ದರಿಂದ ಭಾಷೆಯ ಸುತ್ತಲೂ ಕೆಲವಾರು ವೃತ್ತಿ -ಪ್ರವೃತ್ತಿಗಳ ಉಗಮವಾಗಿ ಜನರು ಮನರಂಜೆನೆಗೂ,ಮಾಹಿತಿ/ವಿಷಯ ಪರಿಗ್ರಹಣೆಗೂ, ಇನ್ನಿತರ ಸೇವೆ ಸೌಲಭ್ಯಗಳಿಗೂ ಬಳಸುವುದರ ಪರಿಣಾಮವಾಗಿ ಜೀವಾವಶ್ಯಕತೆಗಳ ಎಲ್ಲ ಸ್ಥರಗಳಲ್ಲೂ ಭದ್ರ ಸ್ಥಾನ ಪಡೆಯುತ್ತದೆ ಹಾಗೂ ಜನರ ಅಭಿಮಾನ/ಸರಕಾರಗಳ ಮನ್ನಣೆ /ಪ್ರೋತ್ಸಾಹ ಇತ್ಯಾದಿಗಳು ಭಾಷೆಗೆ ಕಾಲಾಂತರದಲ್ಲಿ ದೊರೆಯುತ್ತದೆ. ಮನುಷ್ಯನ ಅವಶ್ಯಕತೆಗಳು ಮತ್ತು ಆದ್ಯತೆಗಳ ಬಗ್ಗೆ ನೋಡೋಣ.

ಮನುಷ್ಯನ ಅವಶ್ಯಕತೆಗಳನ್ನು ಮ್ಯಾಸ್ಲೋ ಎಂಬ ಮನೋವಿಜ್ಞಾನಿ ಕೆಳಗಿನ ಚಿತ್ರದಲ್ಲಿಯಂತೆ  ವಿವಿಧ ಸ್ತರಗಳಲ್ಲಿ ಶ್ರೇಣೀಕರಿಸಿದ್ದಾನೆ.(ದಯವಿಟ್ಟು ಕೆಳಗಿನಿಂದ ಮೇಲಕ್ಕೆ ಓದಿಕೊಳ್ಳಬೇಕು).

 

 • ಸ್ವ ಸಾಕ್ಷಾತ್ಕಾರ / ಆತ್ಮ ಸಾಕ್ಷಾತ್ಕಾರ.- ಕಲೋಪಾಸನೆ, ಆಧ್ಯಾತ್ಮ,ತತ್ವಜ್ಞಾನ,ವಿಜ್ಞಾನ, ಆವಿಷ್ಕಾರ. ಲೌಕಿಕ ಆಕರ್ಷಣೆಗಳನ್ನು ಮೀರಿದ ಮನೋಸ್ಥಿತಿಯ ಅನ್ವೇಷಣೆ.
 • ಗೌರವಾದರಗಳ ಹಂಬಲ/ಕಲೋಪಾಸನೆ/ಕಲಾಭಿವ್ಯಕ್ತಿ/ಸಾಮಾಜಿಕ ಘನತೆ– ನವರಸಗಳ ಅಭಿವ್ಯಕ್ತಿ/ಆದರ,ಪೋಷಣೆ/ಸಮಾಜದಲ್ಲಿ ತನ್ನದೇ ಗುರುತು ಮೂಡಿಸಬಲ್ಲ ಹಂಬಲ/ ಮನೋಸಂಕಲ್ಪ/ಸಂಗೀತ,ಸಾಹಿತ್ಯ/
 • ಸಂಬಂಧಗಳು/ಕುಟುಂಬ/ಸಮರ್ಪಣಾ ಭಾವ- ಬಹುಮಟ್ಟಿಗೆ ಭಾವನಾತ್ಮಕ ಮಜಲು. ಪ್ರೀತಿ, ಮಮತೆ, ಆದರ/ಗೌರವ/ರೀತಿ/ರಿವಾಜು/ಸಂಪ್ರದಾಯ/ಹೊಣೆ/ಜವಾಬುದಾರಿಕೆ/ಉತ್ತರದಾಯಿತ್ವ
 • ಸುರಕ್ಷಿತತೆಯ ಭಾವನೆ- ತಂಡಗಳು/ಗುಂಪುಗಳು/ವ್ಯಾವಹಾರಿಕ ಬೆಸುಗೆ/ಸಮಾಜಿಕ ಜೀವನ ಕ್ರಮ
 • ಮೂಲಭೂತ ಅವಶ್ಯಕತೆಗಳು– ಊಟ/ವಸತಿ/ಬಟ್ಟೆ/ಉದ್ಯೋಗಾಭಿಲಾಶೆ.

 

ಮನುಷ್ಯನ ಜೀವನ ಈ ಎಲ್ಲ ಅವಶ್ಯಕತೆಗಳನ್ನ ಲಭ್ಯ ಮಾಡಿಕೊಳ್ಳುವುದರ ಅನ್ವೇಷಣೆಯಲ್ಲಿ ಸಾಗಿರುತ್ತದೆ. ಭಾಷೆ ಈ ಅನ್ವೇಷಣೆಯಲ್ಲಿ ಪೂರಕವಾದ ಪಾತ್ರ ಧರಿಸಿದಲ್ಲಿ ಅದರ ಉಳಿವು ಹಾಗೂ ಬೆಳವಣಿಗೆ ಆಯಾಚಿತವಾಗಿ, ಸ್ವಾಭಾವಿಕವಾಗಿ, ಅಪ್ರಯತ್ನಪೂರ್ವಕವಾಗಿ ತಂತಾನೇ ಆಗುತ್ತಾ ಸಾಗುತ್ತದೆ.

ಸುಧಾರಣೆಯ ಹರಿಕಾರ ಬಸವಣ್ಣನವರು ಇದೇ ಸಂದೇಶವನ್ನು ಸರಳ ಕನ್ನಡದಲ್ಲಿ  ೧೨ನೇ ಶತಮಾನದಲ್ಲಿಯೇ ಈ ಕೆಳಗಿನ ವಚನದ ಮೂಲಕ ತಿಳಿಸಿರುವರು:

ಬಡತನಕೆ ಉಂಬುವ ಚಿಂತೆ

ಉಂಬುವುದಾದರೆ ಉಡುವ ಚಿಂತೆ

ಉಡುವುದಾದರೆ ಹೆಂಡಿರ ಚಿಂತೆ

ಹೆಂಡಿರಾದರೆ ಮಕ್ಕಳ ಚಿಂತೆ

ಹೀಗೆ ಅವಶ್ಯಕತೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

 

ಪುರಂದರ ದಾಸರು ಹೇಳಿದಂತೆ:

ಇಷ್ಟು ದೊರಕಿದರೆ ಮತ್ತಷ್ಟು ಬೇಕೆಂಬಾಸೆ

ಅಷ್ಟು ದೊರಕಿದರೆ ಮತ್ತಷ್ಟರಾಸೆ

ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ

ನಷ್ಟ ಜೀವನದಾಸೆ ಪುರಂದರಾ ವಿಠಲ.

ಮ್ಯಾಸ್ಲೋ ೨೦ ನೇ ಶತಮಾನದಲ್ಲಿ ಹೇಳಿದ್ದನ್ನು ಕನ್ನಡದ ಮಹಾನುಭಾವರು ಹಿಂದೆಯೇ ಸುಂದರವಾಗಿ ಹೇಳಿದ್ದಾರೆ, ಇರಲಿ.

maslo

`ಮ್ಯಾಸ್ಲೋ `ನ ಪಿರಮಿಡ್ಡನ್ನು ಗಮನಿಸಿ

ಈ ಎಲ್ಲ  ಹಂತಗಳ ಅವಶ್ಯಕತೆಗಳನ್ನು ಪುರೈಸಬಲ್ಲ ಸಂವಹವನಾ ಸಾಧನವಾಗಿದ್ದಲ್ಲಿ ಭಾಷೆ ಸುಸ್ಥಿತಿಯಲ್ಲಿರುತ್ತದೆ. ಇದನ್ನು  ಮಾತೃ ಭಾಷೆಯ ಮೂಲಕ ಸಾಧ್ಯ ಮಾಡಬೇಕಾದದ್ದು ಅಭಿಮಾನ ಇರಬೇಕಾದ ಆಳುವ ಸಂಸ್ಥೆಯ ಹೊಣೆ. ಹಿಂದಿನ ಮಹಾರಾಜರುಗಳು ಪಾಲಿಸಿ ಪೊಷಿಸಿದ್ದು ಇದೇ ಧ್ಯೇಯವನ್ನೇ. ಇಂದಿನ ಹಲವಾರು ದೇಶಗಳ (ಸ್ವೀಡನ್,ಡೆನ್ಮಾರ್ಕ್, ಜರ್ಮನಿ, ಜಪಾನ್,ಚೀನಾ, ಇಸ್ರೇಲ್,ರಷ್ಯಾ) ಸರಕಾರಗಳು ಮಾಡುತ್ತಿರುವುದೂ ಇದೇ- ಭಾಷೆಯ ಪೋಷಣೆ. ಆದರೆ ಬೇಲಿಯೇ ಎದ್ದು ಹೊಲ ಮೇಯುವ ರೀತಿಯಲ್ಲಿ ನಮ್ಮ ಪುಢಾರಿಗಳು, ದೂರದೃಷ್ಟಿಯಿಲ್ಲದ ಸರಕಾರದ ಕಾರ್ಯವೈಖರಿ, ಕನ್ನಡದ ಹೆಸರಿನ ಸಂಸ್ಥೆಗಳಿಗೆ ಅನುದಾನ ನೀಡಿ ಕೈತೊಳೆದುಕೊಳ್ಳುವ ಬೇಜವಾಬ್ದಾರಿ ಧೋರಣೆ ಕನ್ನಡದ ಉಳಿವಿಗೆ ಪೂರಕವಾಗಿಲ್ಲದಿರುವುದು ಮೇಲುನೋಟಕ್ಕೇ ಕಂಡು ಬರುತ್ತಿದೆ.

ಕನ್ನಡ ಭಾಷೆಗೆ, ಈ ಎಲ್ಲ ಸ್ತರಗಳಲ್ಲೂ ತಂತಮ್ಮ ಅವಶ್ಯಕತೆಗಳನ್ನು ಅರಸುತ್ತಿರುವ ಕನ್ನಡ ಜನಗಳ ಅಭಿಲಾಷೆ ಪೂರೈಸುವ ಸಾಮರ್ಥ್ಯ ಇದೆಯೇ ಎಂದು ಕೇಳಿದರೆ ನಿಸ್ಸಂದೇಹವಾಗಿ ಇದೆ ಎಂದು ಎದೆ ತಟ್ಟಿ ಹೇಳಿಕೊಳ್ಳಬಹುದು. ಆದರೆ ತಂತ್ರಜ್ಞಾನದ ವಿವಿಧ ಶಾಖೆಗಳಲ್ಲಿ ಆದ ಬೆಳವಣಿಗೆಯ ಸ್ಫೋಟ ಮತ್ತು ಜಾಗತೀಕರಣದ ಓಟ ಎರಡೂ ಪ್ರಾರಂಭವಾದ ಸಮಯಕ್ಕೇ ಕನ್ನಡದಲ್ಲಿ ಉನ್ನತ ಶಿಕ್ಷಣ ರೂಪಿಸುವ ಹೊಣೆಗಾರಿಕೆಯಿಂದ ನಮ್ಮ ವಿದ್ಯಾಲಯಗಳು ಮತ್ತು ಸರಕಾರ ಸೋತಿದ್ದರ ಪರಿಣಾಮವಾಗಿ ಇಂದು ಈ ವಿಷಯವಾಗಿ ಕನ್ನಡ ಹಿಂದಿದೆ ಎನ್ನಬಹುದಾದರೂ ಅದು ಸಾಮರ್ಥ್ಯ ಇಲ್ಲವೆಂದಲ್ಲ. ಈ ದಿಶೆಯಲ್ಲಿ ಆಗುತ್ತಿರುವ ಪ್ರಗತಿಪರ ಬದಲಾವಣೆಗಳನ್ನು ಮುಂದೆ ತಿಳಿಸುತ್ತೇನೆ.

ಹಂತ (ಶ್ರೇಣಿ)

ಕನ್ನಡದ ತಾಕತ್ತು (ಸಾಮರ್ಥ್ಯ/ಯೋಗ್ಯತೆ)

ಮೂಲಭೂತ (ಹಸಿವು/ಬಟ್ಟೆ/ವಸತಿ) ಇಲ್ಲಿಯವರೆಗೆ ಬಹುತೇಕರು ಕನ್ನಡದಲ್ಲಿ ವ್ಯವಹಾರ ನಡೆದು ಹೊಟ್ಟೆ ಹೊರೆದುಕೊಳ್ಳುತ್ತಿದ್ದರು. ಈಗಲೂ ಭಾಷೆ ಮರೆತು ಹೊಟ್ಟೆಹೊರೆದುಕೊಳ್ಳುವ ಪರಿಸ್ಠಿತಿ ಇಲ್ಲ. ಇಂಗ್ಲೀಷಿನ ಜೊತೆಯಲ್ಲಿ ಕನ್ನಡವನ್ನೂ ಕಲಿತು ವ್ಯವಹಾರದಲ್ಲಿ/ವಿದ್ಯಾಭ್ಯಾಸದಲ್ಲಿ ಬೇಕೆನಿಸಿದಲ್ಲಿ ಮಾತ್ರ ಇಂಗ್ಲೀಷ್ ಬಳಸಬಹುದು.
ಭದ್ರತೆ ಕನ್ನಡಿಗರೆಂಬ ಬೆಚ್ಚನೆಯ ಭಾವ ನಮ್ಮನ್ನು ನಮ್ಮ ನಾಡಿನಲ್ಲಷ್ಟೇ ಅಲ್ಲ ಹೊರಗಡೆಯೂ ಒಂದುಗೂಡಿಸುವುದಲ್ಲದೆ ಒಗ್ಗಟ್ಟಿಗೆ ಸಹಕಾರಿ. ಈ ಬಾಂಧವ್ಯಗಳು ನಮ್ಮ ಕಷ್ಟ-ಸುಖಗಳಲ್ಲಿ ನಮ್ಮ ಕೈಹಿಡಿಯುವುದಿಲ್ಲವೇ ಯೋಚಿಸಿ. ಇದೇ ಭದ್ರತೆ ಇಲ್ಲವಾದಲ್ಲಿ ಅಭದ್ರತೆ/ಒಂಟಿಶನಿಯಾಗಿರಬೇಕಾದೀತು
ಕುಟುಂಬ/ಜವಾಬ್ದಾರಿ/ಸಮರ್ಪಣೆ ವೈವಾಹಿಕ ಸಂಬಂಧಗಳು ಮೊದಲಾಗಿ ಒಂದೇ ಭಾಷೆ/ನಾಡಿನ ನಡೆ ನುಡಿಗಳ ಸಾಮ್ಯತೆ ,ಸಂಸ್ಕಾರಗಳು ಇರುವಲ್ಲಿ ಭಿನಾಭಿಪ್ರಾಯಗಳು ಕಡಿಮೆ ಇರಬಹುದು. ಕನ್ನಡನಾಡಿನ ಕುಟುಂಬ ನಿರ್ವಹಣಾ ವ್ಯವಸ್ಥೆ/ತ್ಯಾಗ ಬಲಿದಾನಗಳು ಜೀವನಕ್ಕೊಂದು ಚೌಕಟ್ಟನ್ನು ನೀಡುವುದಿಲ್ಲವೇ. ಇವೆಲ್ಲವೂ ಹರಿದು ಹೋಗಿರುವ ಸಮಾಜಗಳನ್ನು ನೋಡಿದರೆ ಆಗುವ ಅವ್ಯವಸ್ಥೆಯ ಅರಿವು ನಮಗಾಗುವುದು.

ನಮ್ಮ ಸಾಹಿತ್ಯ, ಸಂಸ್ಕೃತಿ ,ಪುರಾಣ, ಜನಪದ ಕಾವ್ಯಗಳು ಜೀವನಧರ್ಮವನ್ನು ತಿಳಿಸಿಕೊಡುವುದಷ್ಟೇ ಅಲ್ಲ, ನೈತಿಕ ತಳಹದಿಯನ್ನೂ ಹಾಕಿ ನಮ್ಮನ್ನು ಬೆಳೆಯಲು ಪ್ರೇರೇಪಿಸುತ್ತವೆ

ಸಾಮಾಜಿಕ ಸ್ಥಾನ ಮಾನ /ಕಲೆ/ಕಲೋಪಾಸನ / ಪೋಷಣೆ ಕರ್ನಾಟಕ ಶಿಲ್ಪ/ಸಾಹಿತ್ಯ/ಸಂಗೀತ/ಜನಪದ/ಇತಿಹಾಸ/ಪರಂಪರೆ/ನಾಟ್ಯ/ನಾಟಕ ಎಲ್ಲ ವಿಭಾಗಗಳಲ್ಲಿ ಮನುಷ್ಯನ ಉನ್ನತ ಸ್ತರದ ಅವಷ್ಯಕತೆಗಳನ್ನು ಪೂರೈಸಬಲ್ಲಷ್ಟು ಹೇರಳ ಸಂಪತ್ತಿದೆ. ನೋಡುವ ಕಣ್ಣಿದ್ದರೆ /ಮನಸ್ಸಿದ್ದರೆ ಸಾಕು.

ರಾಜಕುಮಾರ್, ಎಸ್.ಎಲ್.ಭೈರಪ್ಪ, ಸಿ. ಅಶ್ವತ್,ಸಿ.ಎನ್.ಆರ್. ರಾವ್ ಇನ್ನೂ ಹಲವು ಉದಾಹರಣೆಗಳಿವೆ. ಇಂಗ್ಲೀಷಿನ ಜೊತೆಯಲ್ಲಿ ಕನ್ನಡವನ್ನೂ ಕೊಂಡೊಯ್ಯುವಲ್ಲಿ ಇರುವ ಅಡೆತಡೆಗಳನ್ನು ನಿವಾರಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.
ರಾಷ್ಟ್ರ ಕವಿ ಗೊವಿಂದ ಪೈಗಳು ಹೇಳಿದಂತೆ “ ಎಮ್ಮ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ“ ಮೂರ್ಖತನಕ್ಕೆ ಏನು ಹೇಳಬೇಕು?

ಅತ್ಮ ಸಾಕ್ಷಾತ್ಕಾರ ಭಾಷೆಯ ಮೂಲಕ ತಮ್ಮ ಅತ್ಮಸಾಕ್ಷಾತ್ಕಾರ ಬಯಸುವವರಿಗೆ ಕನ್ನಡದಲ್ಲಿ ರತ್ನದ ಗಣಿಯೇ ದೊರೆಯುತ್ತದೆ. ಪಂಪನಾದಿಯಾಗಿ ಕಾವ್ಯಗಳು, ಕುಮಾರವ್ಯಾಸನ ಭಾರತ,ರಾಮಾಯಣ ದರ್ಶನ,ಶರಣರ ವಚನಗಳು, ಹರಿದಾಸರ ಗೀತೆಗಳು, ಸಂಗೀತಗಾರರ ಪರಂಪರೆ, ಮುದ್ದಣನ ರಾಮಾಯಣಗಳು,ಜೈನ ಚರಿತಗಳು, ಚಾರ್ವಾಕರಾದಿಯಾಗಿ ಎಲ್ಲ ದರ್ಶನಗಳ ಕನ್ನಡ ಅವತರಣಿಕೆ, ವೈಜ್ಞಾನಿಕ ಗಣಿತ ಸಂಬಂಧೀ ಪುಸ್ತಕಗಳು, ಇವೆಲ್ಲಕ್ಕೂ ಮುಕುಟಪ್ರಾಯವಾಗಿ ನಮ್ಮ ಡಿ.ವಿ.ಜಿ ಯವರ “ಮಂಕುತಿಮ್ಮನ ಕಗ್ಗ“ ದ ಜೀವನದರ್ಶನ ಹೀಗೆ ಏನು ಬೇಕು, ಏನು ಬೇಡ?

ಎಲ್ಲವು ಇದ್ದೂ ಇರದಂತಾಡುವ ಇಂದಿನ ಕನ್ನಡಿಗರಿಗೇನು ಹೇಳುವುದು.

ನಮ್ಮದೇ ಬರಹಕ್ಕೆ ಲಿಪಿಯೂ ಇದೆ!!

 

ಎಲ್ಲ ಬಗೆಯ ಅವಶ್ಯಕತೆಗಳನ್ನು ಪೂರೈಸಬಲ್ಲ ಶಕ್ತಿ ಕನ್ನಡಕ್ಕಿದೆಯೆಂದು ಮೇಲೆ ನೋಡಿದೆವು.

ಏನೆಲ್ಲ ಇದ್ದರೂ ಜನಗಳು ತಮ್ಮ ಬದುಕಿನಲ್ಲಿ ಆದ್ಯತೆ ನೀಡುವ / ಪ್ರಮುಖವೆಂದು ಭಾವಿಸುವ / ಜೀವನದ ಗುರಿ ಎಂದಿಟ್ಟುಕೊಳ್ಳುವ ಪರಿ ಬೇರೆ ಬೇರೆ ಹಾಗೂ ವೈವಿಧ್ಯಮಯ. ಅವರುಗಳನ್ನು ಈ ಕೆಳಗಿನಂತೆ ವಿಂಗಡಿಸಬಹುದು:

( ಚಿತ್ರ ನೋಡಿ)

ಮನೋಧರ್ಮದ ಆದ್ಯತೆ  ಅನುಸಾರ ಕನ್ನಡ ಜನಪದದ ಹರಹು

ಸಮಸ್ತ ಕನ್ನಡಿಗರನ್ನೂ ಅವರ ಜೀವನದಲ್ಲಿ ವಿವಿಧ ಅವಶ್ಯಕತೆಗಳಿಗೆ ಅವರುಗಳು ನೀಡಬಹುದಾದ ಆದ್ಯತೆಯ ಮೇರೆಗೆ ವಿಂಗಡಿಸಿದಲ್ಲಿ ಆ ಜನಸಂಖ್ಯೆಯ ಹರಹು ಕೆಳಗಿನ ಚಿತ್ರದಂತೆ ಕಂಡು ಬರುತ್ತದೆ.

Picture1

ಕೆಳಸ್ತರದಲ್ಲಿ ಉಳಿದವರು ಬಹುಸಂಖ್ಯಾತ ಸಾಮಾನ್ಯ ಗುಂಪು ಉನ್ನತ ಸ್ತರಕ್ಕೆ ಆದ್ಯತೆ

                                                       ಜನ ಸಂಖ್ಯೆಯ ಹರಹು.

1.ಬಹುಸಂಖ್ಯಾತ ಸಾಮಾನ್ಯ ಗುಂಪು: (middle, large group)

ಬಹುತೇಕ ಜನರು ಮ್ಯಾಸ್ಲೋ ಮನೋವಿಜ್ಞಾನಿ ಹೇಳಿದಂತೆ ಹಸಿವು, ವಸತಿ ಮುಂತಾದ ಮೂಲಭೂತ ಅವಶ್ಯಕತೆಗಳಾದಿಯಾಗಿ ಮೊದಲುಗೊಂಡು ಉನ್ನತ ಸ್ತರದ ಅವಶ್ಯಕತೆಗಳಾದ ಕಲೋಪಾಸನ, ಕಲಾ ಪೋಷಣೆ, ಸಾಮಾಜಿಕ ಸ್ಥಾನಮಾನ ದೊರಕಿಸಿಕೊಳ್ಳುತ್ತಾ  ಆತ್ಮಸಾಕ್ಷಾತ್ಕಾರದ ಕಡೆಗೆ ನಡೆಯುವವರು. ಇವರುಗಳಿಗೆ ಭಾಷೆ ತಮ್ಮ ಉದ್ದೇಶೆ ಪೂರೈಸುವ ಸಾಧನವಾದರೆ ಮಾತ್ರ ಅದನ್ನು ಪೋಷಿಸಬಲ್ಲರು. ಇವರುಗಳ ಸಂಖ್ಯಾ ಪ್ರಮಾಣ ಹೆಚ್ಚಿರುವ ಕಾರಣ ಭಾಷೆಯ ಉಳಿವಿನಲ್ಲಿ ಮಹತ್ವದ ಪಾತ್ರ ವಹಿಸುವರು. ಈ ಗುಂಪಿನ ಜನಸ್ತೋಮ ತಮ್ಮ ಮೂಲಭೂತ ಅವಶ್ಯಕತೆಗಳು ಪೂರೈಸಿದಾಗ ಸಮಾಜಮುಖಿಗಳಾಗಿ ಉತ್ತಮ ಕೆಲಸ ಮಾಡಬಲ್ಲವರು. ಸರಕಾರಗಳು, ಸಂಘಟನಕಾರರು, ಸಂಘ ಸಂಸ್ಥೆಗಳು ಈ ಸತ್ಯವನ್ನು ಗ್ರಹಿಸಿದರೆ ಕನ್ನಡ ಉಳಿಸುವ ಕೈಂಕರ್ಯದಲ್ಲಿ ಇವರುಗಳನ್ನು ಭಾಗಿಯಾಗಿಸುವ ಯೊಜನೆ ಹಾಕುವುದು ಸುಲಭವಾಗುತ್ತದೆ. ಜೀವನದ ಅತೀ ಅವಶ್ಯಕವೆನ್ನುವ ಸೌಲಭ್ಯಗಳನ್ನು ದಕ್ಕಿಸಿಕೊಂಡ ಇವರುಗಳಲ್ಲಿ ಕನ್ನಡದ ಕಿಚ್ಚನ್ನು ಹೊತ್ತಿಸಿ ಬೆಳೆಸಿದರೆ ಕನ್ನಡದ ಸ್ಥಿತಿಗತಿಗಳು ಉತ್ತಮವಾಗುವುದರಲ್ಲಿ ಅನುಮಾನವಿಲ್ಲ.

2.ಉನ್ನತ ಸ್ತರಕ್ಕೆ ಆದ್ಯತೆ ಕೊಡುವವರ ಗುಂಪು

ಬಲಭಾಗದ ತುದಿಯಲ್ಲಿರುವ ಜನಗಳ ಸಂಖ್ಯೆ ಕಡಿಮೆ; ಆದರೆ ಇವರುಗಳ ಆದ್ಯತೆ ಎತ್ತರದ ಸ್ತರದಲ್ಲಿ ಇರುತ್ತದೆ. ಮಹಾ ಕವಿಗಳು, ಸಾಮಾಜಿಕ ಬದಲಾವಣೆಯ ಹರಿಕಾರರು, ಕನ್ನಡಕ್ಕಾಗಿ, ಕರ್ನಾಟಕಕ್ಕಾಗಿ ಸಕಲವನ್ನೂ ಸಮರ್ಪಿಸಿದ, ನಾಡಿಗಾಗಿ ಹಸಿವು ನಿದ್ರೆಗಳನ್ನು ವರ್ಜಿಸಿದ್ದ ಪ್ರಾತ್ಃಸ್ಮರಣೀಯರು ಇವರು. ಕೈಯ್ಯಾರ ಕಿಯ್ಯಣ್ಣ ರೈ, ಆಲೂರು ವೆಂಕಟರಾಯರು, ಡಿ.ವಿ.ಜಿ ಮುಂತಾದವರನ್ನು ಹೆಸರಿಸಬಹುದು. ಸಮಾಜಮುಖಿ, ಸಾರ್ವತ್ರಿಕ ಹಿತ ಇವರ ಅದ್ಯತೆ.

3.ಕೆಳಸ್ತರದಲ್ಲಿ ಉಳಿದವರ ಗುಂಪು

ಎಡ ಭಾಗದ ಕೊನೆಯಲ್ಲಿರುವ ಮಂದಿ, ಇವರುಗಳ ಪ್ರಮಾಣವೂ ದೈವ ವಶಾತ್ ಕಡಿಮೆಯೇ. ಸ್ವಾರ್ಥದ ಪರಿಧಿಯಿಂದ ಮೇಲೇರದ ಜನ. ವೈಯಕ್ತಿಕ ಹಿತಾಸಕ್ತಿಗಳು, ವೈಭೋಗ, ಮೋಜು ಇವರುಗಳ ಜೀವನಧರ್ಮ. ಇರುವ ಶಕ್ತಿ, ಕಾಲವನ್ನು ಇವರಿಗಾಗಿ ಸಂವಚಯಿಸುವುದು ವ್ಯರ್ಥ.

 

ಯಾವುದೇ ಗುಣಲಕ್ಷಣ ಕುರಿತು ನಡೆಸಿದ ಜನಗಣತಿಯ ಹರಹು ಮೇಲಿನ ಗಂಟೆಯಾಕಾರದಲ್ಲಿ ಇರುವುದು ಒಂದು ನೈಸರ್ಗಿಕ ಸತ್ಯ. ಮೂರರಲ್ಲಿ ಎರಡು ಭಾಗ ಸಮಾನ ಅಭಿರುಚಿಯ ಪ್ರಜೆಗಳಿದ್ದರೆ ಇನ್ನುಳಿದ ಜನರು ಎರಡೂ ತುದಿಗಳಲ್ಲಿ ಹಂಚಿಹೋಗಿರುತ್ತಾರೆ. ಬಲಭಾಗದವರಿಂದ ಭಾಷೆಯ ಸುಧಾರಣೆ/ಉನ್ನತ ಚಿಂತನೆಗಳು ಮೂಡಿಬಂದರೆ  ಎಡಭಾಗದ ಜನರು ಕೇವಲ ಬಳಸುವ ಪ್ರವೃತ್ತಿಯವರು . ಇವರುಗಳಿಂದ ಯಾವುದೇ ಸದುದ್ದೇಶಗಳು ಹಾಗೂ ಮಹದುದ್ದೇಶಗಳು ಕೈಗೂಡವು.

ಇದನ್ನು ಅರಿತು ನಮ್ಮ ಕಾರ್ಯ ಸಾಧನೆ ಆಯೋಜಿಸಿಕೊಳ್ಳಬೇಕು.

ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗುವ ಪದಸಮೂಹ ಅಥವಾ ಅವಕಾಶ ಇಂದು ಕನ್ನಡದಲ್ಲಿ ಇಲ್ಲದಿರಬಹುದು; ಅದರೆ ಈ ದಿಶೆಯಲ್ಲಿ ಪ್ರಯತ್ನಗಳು ನಡೆದಿವೆ. ಅಲ್ಲಿಯವರೆಗೂ ಈ ಭಾಷೆಯನ್ನು ಪೋಷಿಸಿ ಬೆಳೆಸುವುದು ನಮ್ಮ ಕರ್ತವ್ಯವಾಗುತ್ತದೆ.

 

ಅವಶ್ಯಕತೆಗಳ ಹಿನ್ನೆಲೆಯಲ್ಲಿ ಭಾಷೆಗಳ ಉದಯ ಮತ್ತು ಪಯಣ (ಜನನದಿಂದ ಮರಣದವರೆಗೆ)

ನುಡಿ ಯಾತ್ರೆ

ನಮ್ಮ ಜೀವನದಂತೆಯೇ ಎಲ್ಲ ಭಾಷೆಗಳು ವಿವಿಧ ಹಂತಗಳನ್ನು ಹಾದು-ಹೊಕ್ಕು ಬೆಳೆಯುತ್ತವೆ. ಆದರೆ ನಮ್ಮ ದೇಹ ಕ್ಷರವಾದದ್ದು. ನಾವೇನೇ ತಿಪ್ಪರಲಾಗಹೊಡೆದರೂ ಒಂದಲ್ಲ ಒಂದು ದಿನ ನಮ್ಮ ಇಹಲೋಕ ಯಾತ್ರೆ ಮುಗಿಸಬೇಕಾದದ್ದು ಒಂದು ಅನಿವಾರ್ಯ ಸತ್ಯ. ಆದರೆ ಭಾಷೆಗೆ ಇದನ್ನು ಮೀರುವ ಸಾಮರ್ಥ್ಯ ಇದೆ. ಅದು ಅಕ್ಷರಗಳಿಂದಾದದ್ದು. ಅ-ಕ್ಷರ -ಅಂದರೆ ಅಳಿವಿಲ್ಲದ್ದು ಎಂದರ್ಥ. ಈ ಸಾಮರ್ಥ್ಯ ಇರುವುದರ ಕಾರಣದಿಂದಲೇ ಭಾಷೆ (ಕನ್ನಡವೂ ಸೇರಿದಂತೆ ) ಸಾವಿರಾರು ವರ್ಷಗಳಿಂದ ಅಳಿಯದೆ ಉಳಿದು-ಬೆಳೆದು ಬಂದಥದ್ದಾಗಿರುತ್ತವೆ. ಇದು ಭಾಷೆಯ ಬಳಕೆ ಇರುವಲ್ಲಿ ಅನ್ವಯಿಸುವಂಥಾ ಮಾತು.. ಭಾಷೆಯ ವಾರಸುದಾರರು ಕನ್ನಡವನ್ನು ತೊರೆದಲ್ಲಿ ಕನ್ನಡ ಭಾಷೆ ನಿಧಾನವಾಗಿ ಅವಸಾನದತ್ತ ಸಾಗುತ್ತದೆ. ಇಂತಹ ಸನ್ನಿವೇಶ ಉದಯವಾದರೆ ಕನ್ನಡ ಭಾಷೆಯ ಉದಯದಿಂದ   ಅಸ್ತಮಾನದ ವರೆಗಿನ  ಪಯಣವನ್ನು ಕೆಳಗಿನಂತೆ ಚಿತ್ರಿಸಬಹುದು

1.ಊರ್ಧ್ವಮುಖ ಬೆಳವಣಿಗೆಗಳು: (ಏರು ಮುಖ)

  • ಮೂಲದಲ್ಲಿ ಮಾತಾ-ಪಿತ-ಮಕ್ಕಳ ಸಂವಹನ (ಕನ್ನಡ)
 • ಮಾತೃ ಭಾಷೆಯ ಜನನ- ಪಾಲನ (ಕನ್ನಡ)
 • ಮಾತೃ ಭಾಷೆಯ ವಿಕಾಸ-ಬೆಳವಣಿಗೆ (ಕನ್ನಡ)

2.ಸ್ಥಿತ್ಯಂತರದ ಹಂತಗಳು: ( ವಿಭ್ರಮಣೆ)

 • ಎರಡನೇ ಭಾಷೆಯ ಆಗಮನ  (ಕನ್ನಡ ಮತ್ತು ಇಂಗ್ಲೀಷ್)
 • ಭ್ಹಾಷಾ ತಾರತಮ್ಯತೆ ( ಇಂಗ್ಲೀಷಿಗೆ ವ್ಯಾಮೋಹ ಮತ್ತು ಅತ್ಯಾದರ )

3.ಅಧೋಮುಖ ಹಂತಗಳು: (ಇಳಿ ಮುಖ)

 • ಕನ್ನಡ ಭಾಷಾ ವಿಕಾಸ ಸ್ಥಂಭನ
 • ಕನ್ನಡ ಭಾಷಾ ಸ್ಥಂಭನ
 • ಕನ್ನಡ ನುಡಿ ತಲ್ಲಣ/ನುಡಿ ಕಂಪನ
 • ಕನ್ನಡ ನುಡಿ ಪಲ್ಲಟ
 • ಕನ್ನಡ ನುಡಿ ಹೀನತೆ ( ಭಾಷಾ ಸವಕಳಿ)
 • ಕನ್ನಡ ನುಡಿ ಕ್ಷೀಣತೆ
 • ಕನ್ನಡ ನುಡಿ ಮರಣ

ಈ ಎಲ್ಲ ಮೇಲಿನ ಹಂತಗಳನ್ನೂ ಈಗ  ತಿಳಿಯೋಣ

ಭಾಷೆಯ ಉದಯ-(ಹುಟ್ಟು/ಜನನ):

ಭಾಷೆಯ ಹುಟ್ಟು ಹೇಗೆ ಆಯ್ತು ಎಂಬುದು ಸತತವಾಗಿ ಚರ್ಚೆಗೊಳಪಡುವ ವಿಚಾರ. ಹಲವಾರು ವ್ಯಾಖ್ಯೆಗಳು ಬಂದಿವೆ. ಪ್ರತಿಯೊಂದರ ಉದಯಕ್ಕು/ಆವಿಷ್ಕಾರಕ್ಕೂ ತನ್ನದೇ ಆದ ಕಾರಣ ಅಥವಾ ಅವಶ್ಯಕತೆ ಇರುತ್ತದೆ. ಈ ಅವಶ್ಯಕತೆಗಳನ್ನು ವ್ಯಾವಹಾರಿಕ ಹಾಗೂ ಭಾವನಾತ್ಮಕ ಎಂದು ವಿಂಗಡಿಸಬಹುದು. ಯಾವುದು ಮೊದಲು- ಭಾವನಾತ್ಮಕವೋ? ಇಲ್ಲಾ  ವ್ಯಾವಹಾರಿಕವೋ? ಎಂಬ ಜಿಜ್ಞಾಸೆ ಬಗೆಹರಿದಿಲ್ಲವಾದರೂ, ಭಾವನಾತ್ಮಕ ಕಾರಣವೇ ಪ್ರಧಾನ ಎಂದು ಊಹಿಸಬಹುದು. ಕಾರಣ ಇಷ್ಟೆ– ಎಲ್ಲ ದೇಶಗಳ ನೆಲಗಳನ್ನೂ ತಾಯಿನಾಡು ಎಂದು ಉದ್ಧರಿಸುವುದು ಗೌರವಿಸುವುದು ವಾಡಿಕೆ. ತಾಯಿಯಂತೆ ಅವಶ್ಯಕತೆಗಳನ್ನು ಪೂರೈಸಬಲ್ಲ ನೆಲವೇ, ನಮಗೆ ಜನ್ಮತಾಳಲು, ನಿಲ್ಲುವ ನೆಲೆ ನೀಡಿದ ನೆಲವೇ ತಾಯಿನಾಡು ಎಂದು ನಮ್ಮ ಭಾವಪೂರ್ಣ ನಂಬಿಕೆ. ಜೀವಸಂಕುಲಗಳನ್ನು ಪೊರೆಯುವ ನದಿಗಳನ್ನೂ ಹೆಣ್ಣು-ತಾಯಿ ಎಂದು ಪರಿಗಣಿಸಿ ಪೂಜಿಸುವ ಪರಿಪಾಠವೂ ಇದೆ. (ನದ ಎಂಬುದು `ನದಿ` ಎನ್ನ್ನುವುದರ ಪುಲ್ಲಿಂಗ ವಾಚಕವಾದರೂ ನದಿಗಳ ಹೆಸರಿಗೆ ~`ಸ್ತ್ರೀ` ಸಂಬೊಧಕ ಪದಗಳ ಬಳಕೆಯೇ ಹೆಚ್ಚು ಪ್ರಚಲಿತದಲ್ಲಿರುವುದು)  ಹಾಗೆಯೇ ಭಾಷೆಯೂ ಕೂಡ ಭಾವನಾತ್ಮಕ ಪ್ರಾಮುಖ್ಯತೆ ಪಡೆದಿರುವುದು ಒಂದು ಅಧ್ಯಾತ್ಮಿಕ ಸತ್ಯ ಎಂದು ವ್ಯಾಖ್ಯಾನಿಸಬಹುದು. ಈಗ ಭಾಷೆಗೆ ಏಕೆ “ತಾಯಿನುಡಿ” ಎಂಬ ಅನ್ವರ್ಥಕ ನಾಮ ಬಂತು ಎಂಬುದು ಯೋಚಿಸಬೇಕಾದ ವಿಚಾರ.

“ತಾಯಿ ನುಡಿ”ಯ ಪರಿಕಲ್ಪನೆ:

ಒಂದು ವ್ಯಾಖ್ಯಾನದ ಪ್ರಕಾರ:

ಮಾನವ ವಿಕಾಸವಾಗುವ ಹಂತದಲ್ಲಿ ಭಾಷೆ ಇರಲಿಲ್ಲ. ವಿಕಾಸ ಪಥದಲ್ಲಿ, ಜೀವನ ಕ್ರಮಗಳಲ್ಲಿ ಆದ ಬದಲಾವಣೆಗಳಿಂದ ಮಾನವನಿಗೆ, ಅದರಲ್ಲೂ ನೆರಳಲ್ಲಿದ್ದುಕೊಂಡು/ಹವಾಮಾನಕ್ಕೆ ಅದರ ವೈಪರೀತ್ಯಗಳಿಗೆ ಮೈಒಡ್ಡುವ ಅನಿವಾರ್ಯತೆಯಿಂದ ತಪ್ಪಿಸಿಕೊಂಡ ಹೆಣ್ಣಿನ ದೇಹದಲ್ಲಿ ಬದಲಾವಣೆಗಳಾಗಿ, ಮೈಮೇಲಿನ ಕೂದಲು (ಉದ್ದ ವಾದ ರೋಮಗಳು) ಹೊರಟು ಹೋದದ್ದರಿಂದ, ಶಿಶುಗಳನ್ನು ಮುಂಚಿನಂತೆ ಸದಾಕಾಲ ಹೊತ್ತು ತಿರುಗಲು ಸಾಧ್ಯವಾಗದೆ ಹೋಯಿತು.ಚಿಕ್ಕ ಮಕ್ಕಳಿಗೂ ಹಿಡಿದುಕೊಳ್ಳಲು ತಾಯಿಯ ಮೈಮೇಲೆ ಯಾವುದೇ ಆಧಾರ ಸಾಕಾಗದೆ ಹೋಯ್ತು. ತಾಯಿಯ ದೇಹವನ್ನು ತಬ್ಬದೆ ದೂರ ಇರುವುದು ಕಂದಮ್ಮಗಳಿಗೆ ಭಯ ಹುಟ್ಟಿಸುವ, ಅವು ರಚ್ಚೆ ಹಿಡಿಯುವ, ಅಳುವ ಕಾರಣವಾಯ್ತು. ಇಂತಹ ಪರಿಸ್ಥಿತಿಯಲ್ಲಿ, ಅವುಗಳಿಗೆ ರಕ್ಷಣೆಯ ಭರವಸೆ ನೀಡುವ,ಆತ್ಮವಿಶ್ವಾಸ ಮೂಡಿಸುವ ಸಂವಹನದ ಮಾಧ್ಯಮವಾಗಿ ಬೆಳೆದ ಸಾಧನವೇ ಭಾಷೆ; ಜೋಗುಳದ ಹಾಡಿನಂತೆ ಪ್ರಾರಂಭವಾದ ಈ ಬಗೆಯ ಸಂವಹನದ ಮೊದಲ ದನಿಗಳು ,ಆ ಮೂಲಕ ಮೊದಲ ನುಡಿ ಪದಗಳು ಕಾಲಾನುಕ್ರಮದಲ್ಲಿ ಇತರ ಗುಣಲಕ್ಷಣಗಳನ್ನು ಮೈಗೂಡಿಸಿಕೊಂಡಿರಲೂ ಸಾಕು. ಇದು ಮುಂದೆ ಗುಂಪಿನ ಇತರ ತಾಯಿಯರಿಗೆ ಅಲ್ಲಿಂದ ಕುಟುಂಬ-ಸಮಾಜಕ್ಕೆ ಹರಡಿ ಪೀಳಿಗೆಯಿಂದ ಪೀಳಿಗೆಗೆ ಸಾಗಿಬಂದ ಸಾಧನವೇ ಭಾಷೆ. ಹೀಗೆ ತಾಯಿ- ಮಗುವಿನ ಒಡನಾಟದ ಫಲವಾಗಿ ತಾಯಿಯ ಭರವಸೆಯ ನುಡಿಗಳ ರೂಪದಲ್ಲಿ ಉದಯವಾಗಿರಬಹುದಾದ್ದರಿಂದ ಮೂಲ ಭಾಷೆಗೆ ತಾಯಿ ಭಾಷೆ,ಮಾತೃ ಭಾಷೆ, ತಾಯಿ ನುಡಿ ಎಂದೆನ್ನುವುದು.

ಭಾಷೆ ಮತ್ತು ಅವಶ್ಯಕತೆಗಳ ಪೂರೈಕೆ- ಭಾಷೆಯೆಂಬ ಸಾಧನ

ಈ ರೀತಿಯಾಗಿ ಉದಯವಾದ ಭಾಷೆ ಸಾವಧಾನವಾಗಿ ದೈನಂದಿನ ಇತರ ವ್ಯವಹಾರಗಳಲ್ಲೂ  ಬಳಸಲ್ಪಟ್ಟು ಸಮಾಜದ, ವ್ಯಕ್ತಿಯ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಸಾಧನವಾಗುತ್ತದೆ. ಹೀಗೆ ಭಾವನಾತ್ಮಕ-ವ್ಯಾವಹಾರಿಕ ಜಗತ್ತಿನಲ್ಲಿ ಬೆಳೆದ ನುಡಿ ತನ್ನ ಪರಿಮಿತಿಗಳನ್ನು/ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಾ ಭಾವನೆಗಳು, ಸಂವೇದನೆಗಳು, ಮುಂತಾದ ಉಚ್ಛಸ್ತರದ ಆಲೋಚನೆಗಳ ಅಭಿವ್ಯಕ್ತಿಯ ಮಾಧ್ಯಮವಾಗಿಯೂ ಉಪಯೋಗಿಸಿಕೊಳ್ಳಲ್ಪಡುತ್ತದೆ. ಊಟ, ವಸತಿ, ಭದ್ರತೆಗಳನ್ನು ದೊರಕಿಸಿಕೊಂಡ  ಮನಸ್ಸು ಸುಖ,ಮನರಂಜನೆಗಳಿಗೆ ತೆರೆದು ಕೊಳ್ಳುತ್ತದೆ. ಇದರ ಅನುಭೂತಿ ಭಾಷೆಯ ಮೂಲಕವೇ ಆಗಬೇಕಾದ ಕಾರಣದಿಂದ, ಸಂಗೀತ, ಅನಂತರ ಸಾಹಿತ್ಯ, ಕಥೆ, ಕಾವ್ಯಗಳು ಒಡಮೂಡಿರಬಹುದು. ಇವು ನಿರ್ದಿಷ್ಟ ಜನಪದದಲ್ಲಿ ಹರಡಿದುದಲ್ಲದೆ, ಲೋಕಾನುಭವಗಳು, ಗಾದೆಗಳು, ಒಗಟುಗಳು, ಸಮಾಜದ ಕಟ್ಟು-ಪಾಡುಗಳಿಗೆ ಅನುಸಾರವಾಗಿ ಧಾರ್ಮಿಕ ಭಾವನೆಗಳು, ಅವುಗಳ ಅಂಶಗಳನ್ನೊಳಗೊಂಡ ಕಥೆ ಕಾವ್ಯಗಳು ಕಲಾಂತರದಲ್ಲಿ ಸೇರಿ ಬೆಳೆದು ಭಾಷೆಗೆ ಆ ಸಮಾಜವನ್ನು, ಆ ಮೂಲಕ ಪ್ರಾಂತ್ಯದ ಜನತೆಯನ್ನು ಬೆಸೆಯುವ ಶಕ್ತಿ ಬರುತ್ತದೆ. ಇದಕ್ಕೆ ಲಿಪಿಯ ಬಲವೂ ಸೇರಿದಾಗ ಭಾಷೆಗೆ ಒಂದು ಅಧಿಕೃತತೆಯೂ ದೊರೆತು ಈ ಎಲ್ಲ ಬೆಳವಣಿಗೆಗಳು ಪೀಳಿಗೆಯಿಂದ ಪೀಳಿಗೆಗೆ ಶೃತಿ (ಕೇಳುವುದು) ,ಸ್ಮೃತಿ (ಮನನ ಮತ್ತು ಜ್ಞಾಪಕ ಇಟ್ಟುಕೊಳ್ಳುವುದು),ಲಿಪಿಗಳ (ಬರಹ) ಮೂಲಕ ರವಾನಿಸಲ್ಪಡುತ್ತದೆ. ಮುಂದೆ ಅಧಿಕಾರ-ಸತ್ತೆಗಳು ಪ್ರವರ್ಧಮಾನಕ್ಕೆ ಬಂದಾಗ ಭಾಷೆಗೆ ಆಡಳಿತಾತ್ಮಕ ಸ್ಥಾನಮಾನಗಳು ದೊರೆತು ತನ್ನ ಹರಹುಗಳನ್ನು ಮತ್ತೂ ವಿಸ್ತರಿಸಿಕೊಳ್ಳುತ್ತಾ ಸಾಗುತ್ತದೆ

ವೇದ ಉಪನಿಷತ್ತುಗಳು, ಪುರಾಣ-ಪುಣ್ಯಕಥೆಗಳು,ಜಾನಪದ ಗೀತೆ, ಜೋಗಿ-ಜಂಗಮ ಗೀತೆಗಳು, ಜೋಗುಳದ ಹಾಡುಗಳು,ದಾಸವಾಣಿ, ಶರಣರ ವಚನ, ಪಂಪನಿಂದಾದಿಯಾಗಿ ಇಂದಿನ ಎಲ್ಲರ ಬಳಕೆಯಲ್ಲಿರುವ ಕನ್ನಡ ಭಾಷೆಯೂ ಇದೇ ರೀತಿಯಾಗಿ  ತನ್ನದೇ ಆದ ಸ್ಮೃತಿ, ಶೃತಿ ಹಾಗೂ  ಲಿಪಿಯಿಂದ ಕೂಡಿ ಭವ್ಯವಾಗಿ ಬೆಳೆದು ಸುಮಾರು ಸಾವಿರ ವರ್ಷಗಳಿಂದ ಕಂಗೊಳಿಸುತ್ತಿರುವ ಭಾಷೆಯೇ. ಇಂತಹ ಪರಂಪರೆಯ ಸಮೃದ್ಧ ಭಾಷೆಯೊಂದು ಕೇವಲ ಇಪ್ಪತ್ತು ಮೂವತ್ತು ವರ್ಷಗಳಲ್ಲಿ ಗಣನೀಯವಾಗಿ ಕುಸಿಯಿತೆಂದರೆ ಆಘಾತಕರ ವಿಚಾರವಲ್ಲವೇ. ಇದರ ಕಾರಣಗಳನ್ನು ತಿಳಿದರೆ ಸರಿಪಡಿಸುವ ಬಗೆಗೆ ಯೋಚಿಸಲು / ಆ ದಿಶೆಯಲ್ಲಿ ಕಾರ್ಯ ಪ್ರವೃತ್ತರಾಗಲು ಅನುಕೂಲವಾಗಬಹುದು.

ಈ ನಿಟ್ಟಿನಲ್ಲಿ ಮೂಲಭೂತ ಅವಶ್ಯಕತೆಗಳನ್ನು ಪೂರೈಸುತ್ತಾ ಭಾಷೆಯೊಂದು ವಿಕಾಸಗೊಳ್ಳುವ ಪ್ರಕ್ರಿಯೆಯನ್ನು ತಿಳಿಯೋಣ.

ಭಾಷೆಯ ವಿಕಾಸ:

ಮಾನವನ ಜೊತೆಜೊತೆಗೆ, ಸಮಾಜದ ಅವಶ್ಯಕತೆಗಳ ಜೊತೆಗೆ ಭಾಷೆ ವಿಭಿನ್ನ ಆಯಾಮಗಳಲ್ಲಿ ಹೇಗೆ ವಿಕಾಸಗೊಳ್ಳುತ್ತದೆ ಎಂಬುದನ್ನು ಕ್ಷಿಪ್ರವಾಗಿ ಅವಲೋಕಿಸಿದೆವು. ನುಡಿ, ನುಡಿಗಟ್ಟುಗಳು, ಗಾದೆ,ಒಗಟು, ಹಾಡು ಹಸೆ, ಕಥೆ, ಕಾವ್ಯ ಎಲ್ಲವೂ ಬೆಳೆಯುತ್ತಾ ಹೋದಂತೆ ಅದಕ್ಕನುಗುಣವಾಗಿ ವ್ಯಾಕರಣವೂ ರೂಪುಗೊಳ್ಳುತ್ತದೆ. ಲಿಪಿಯಿಂದ ಒಂದಷ್ಟು ಉಳಿದು ಬೆಳೆದರೆ, ಇನ್ನೂ ಕೆಲವು ಕುಲಕಸುಬಿಗೆ, ದೈನಂದಿನ ಆಚರಣೆಗೆ ತಳುಕು ಹಾಕಿಕೊಂಡು ಶೃತಿ ಹಾಗೂ ಸ್ಮೃತಿಯ ರೂಪದಲ್ಲೇ ಪ್ರಸಾರವಾಗಿರುತ್ತವೆ- ಜಾನಪದ, ಜೊಗಿ, ಜಂಗಮ, ಶರಣರ, ದಾಸರ, ಗೊರವರು, ಹಕ್ಕಿ ಪಿಕ್ಕೆಯವರು,ಬಸವಣ್ನನ ಆಡಿಸುವವರು,ಹರಿಕಥೆಗಳ ದಾಸರು, ಬೀದಿ ನಾಟಕದವರು,ಮುಂತಾದವರು ಅಕ್ಷರ ಕಲಿಯದೆಯೂ ಭಾಷೆಯನ್ನು ಅದರ ಸಾರವನ್ನು ಮುಂದಿನ ಪೀಳಿಗೆಗಳಿಗೆ ವರ್ಗಾಯಿಸುವುದನ್ನು ಕಾಣಬಹುದು, ಉದಾಹರಣೆಗಳನ್ನು ಕೊಡಬಹುದು. (ಈಗೀಗ ಧ್ವನಿ ಮುದ್ರಣ, ದೃಶ್ಯ ಮಾಧ್ಯಮದ ಆವಿಷ್ಕಾರ ಆದ ನಂತರದಲ್ಲಿ ಅವುಗಳ ಮೂಲಕವೂ ಸಂಗ್ರಹಿಸಿ ಶೇಖರಿಸಿಡಬಹುದು. ಆದರೆ ಅದನ್ನು ಬಳಸುವ, ಅದರ ಮಹತ್ವ ತಿಳಿದು ಉಳಿಸದ ಪೀಳಿಗೆ ಇಲ್ಲದಿದ್ದಲ್ಲಿ ಈ ಎಲ್ಲ ಕರ್ಮಗಳಿಗೆ ಯಾವುದೇ ಅರ್ಥ ಬರದು.)

ಹೀಗೆ ವ್ಯವಸ್ಥಿತವಾಗಿ, ಒಂದೇ ನುಡಿಯಾಡುವ , ಸಾಮ್ಯತೆ ಇರುವ ಜೀವನ ಧರ್ಮ ಅನುಸರಿಸುವ ಜನಪದ ಇದ್ದಲ್ಲಿ ಕನ್ನಡ ಭಾಷೆ ಸುರಕ್ಷಿತವಾಗಿರುತ್ತದೆ. ಭ್ಹಾಷೆಯನ್ನು ಆಡುವ ವರಸೆ, ಬಳಸುವ ಪರಿ ಭಿನ್ನವಾದರೂ ಲಿಪಿ ಒಂದೇ ಆಗಿದ್ದು, ಸಾಮಾನ್ಯ ಪದಗಳು ಎಲ್ಲರಲ್ಲೂ ಬಳಕೆಯಲ್ಲಿ ಇರುವ ಕಾರಣದಿಂದ ಭಾಷೆ ಶ್ರೀಮಂತವೂ ಆಗಿರುತ್ತದೆ. ನಮ್ಮ ಉತ್ತರ- ದಕ್ಷಿಣ ಕರ್ನಾಟಕಗಳ ಭಾಷೆ,, ಕರಾವಳಿ ಕನ್ನಡದಂತೆ!! ವಿಭಿನ್ನವಾಗಿ ನುಡಿದರೂ ಎಲ್ಲವೂ ಕನ್ನಡವೇ!!

ಕರ್ನಾಟಕದ ಜನಗಳು ಒಂದೇ ಕನ್ನಡ ಆಡುತ್ತಿರುವಲ್ಲಿ, ಭಾಷೆ ಸ್ವಲ್ಪ ರೂಪಾಂತರ ಹೊಂದಿದರೂ,ಪರಿಸ್ಥಿತಿ ಹಾಗೂ ಪ್ರಗತಿಗೆ ಅನುಗುಣವಾಗಿ ಹೊಸ ಹೊಸ ಪದಗಳು ಸೇರಿಕೊಂಡರೂ ಅನ್ಯ ಭಾಷೆಯ ಜನಗಳ ಸಂಪರ್ಕದಿಂದ ಅಯಾ ಭಾಷೆಯ ಕೆಲವು ಪದಗಳು ಮಿಳಿತಗೊಂಡರೂ, ಆ ಹೊಸ ಪದಗಳ ಅರ್ಥ ಸ್ಫುರಿಸುವ ಹೊಸ ಪಾರಿಭಾಷಿಕ ಪದಗಳು ಸೇರಿಕೊಂಡರೂ, ಮೂಲಭಾಷೆ ತನ್ನ ಗತ್ತು ಗೈರತ್ತು,ಛಂದಸ್ಸು, ವ್ಯಾಕರಣ,ಇತ್ಯಾದಿಗಳನ್ನು ಆರೋಗ್ಯಪೂರ್ಣವಾಗಿ ಉಳಿಸಿಕೊಂಡು ಬಂದಿರುತ್ತದೆ.

ಬೇರೆ ಭಾಷೆಯ ಆಕ್ರಮಣದ ಭಯವಿಲ್ಲದ ಕಾರಣ,ಸಾಮಾನ್ಯ ಸಂವಹನದ ಮಾಧ್ಯಮವಾದ ಕಾರಣ, ಜೀವನಾವಶ್ಯಕತೆಗಳನ್ನು  ಪೂರೈಸಬಲ್ಲ ಸಾಧನವಾಗುವ ಕಾರಣದಿಂದ ಕನ್ನಡ, ತನ್ಮೂಲಕ ಅದರ ವಿಶಿಷ್ಟ ಪರಂಪರೆ , ಸುಸ್ಥಿತಿಯಲ್ಲಿರಬಹುದಾದ ಪರಿಸರ ನಿರ್ಮಾಣವಾಗಿ ತಂತಾನೆ ನಿರ್ವಹಣೆಗೊಳಪಟ್ಟಿರುತ್ತದೆ.

ಕಳೆದ ಶತಮಾನದ ಅಂತ್ಯದವರೆಗೂ ಕನ್ನಡದ ವಿಷಯದಲ್ಲಿ ಈ ಪರಿಸ್ಥಿತಿ ಇತ್ತು.

ಅಲ್ಲಲ್ಲಿ ಇಂಗ್ಲೀಷ್ ಶಾಲೆಗಳಿದ್ದರೂ, ಮನೆ, ಸಮಾಜದಲ್ಲಿ ಕನ್ನಡದ ಬಳಕೆ ವ್ಯಾಪಕವಾಗಿದ್ದ ಕಾರಣ ಭಾಷೆಗೆ ಹೆಚ್ಚಿನ ಕುಂದು ಇರಲಿಲ್ಲ.

ತೊಂಭತ್ತರ ದಶಕದಿಂದೀಚೆಗೆ ನಗರೀಕರಣ, ಜಾಗತೀಕರಣ ನೆಪವಾಗಿ ಕನ್ನಡವನ್ನು ಕಡೆಗಣಿಸುವ ಪ್ರಕ್ರಿಯೆ ಪ್ರಾರಂಭವಾಯ್ತು. ಜೊತೆ ಜೊತೆಗೆ ಹಳೆ ತಲೆಮಾರಿನ ಆದರ್ಶ ಶಿಕ್ಷಕರು ಸರಕಾರೀ ಶಾಲೆಗಳಿಂದ ಮರೆಯಾಗಿ ಅನೇಕಾನೇಕ ಹೊಸ ತಲೆಮಾರಿನ ಬಧ್ಧತೆ ಇಲ್ಲದ ಹೊಟ್ಟೇ ಹೊರಕ ಜಂತುಗಳು ಸೇರಿದ ಪರಿಣಾಮ (ಎಲ್ಲರೂ ಅಲ್ಲ; ಇಂದಿಗೂ ನಿಷ್ಠೆಯಿಂದ ದುಡಿಯುವ ಮಹಾನುಭಾವರುಗಳು ಇದ್ದಾರೆ) ಸರಕಾರೀ ಶಾಲೆಗಳ ಗುಣಮಟ್ಟವೂ, ಅದರ ಜೊತೆಯಲ್ಲಿ ಈ ಶಾಲೆಗಳಿಂದ ಮಕ್ಕಳ ವಲಸೆಯೂ ಪ್ರಾರಂಭವಾಗಿ ಅದು ಕಾಳ್ಗಿಚ್ಚಿನೋಪಾದಿಯಲ್ಲಿ, ಪಾರ್ಥೇನಿಯಂ ಹುಲ್ಲಿನ ತೆರದಲ್ಲಿ ಮನೆ ಮನೆಗೂ ಹಬ್ಬಿರುವ ಕಾರಣವನ್ನು ನಾವು ಅವಲೋಕಿಸಬೇಕಾಗಿದೆ.

ಮೂರನೆಯ ಹಂತದ-ಅವಶ್ಯಕತೆ- ಕುಟುಂಬದ ಸಂಬಂಧವಾಗಿ ಮೂಡುವ ಹಲವಾರು ಬಗೆಯ ಮಾನಸಿಕ ಬದಲಾವಣೆಗಳು ಭಾಷೆಯ ಉಳಿವಿನ ಜೊತೆಯಲ್ಲಿ ತಳುಕು ಹಾಕಿಕೊಂಡಿರುವುದನ್ನು ನಾವು ಕಾಣಬಹುದು. ಮನೆಗಳಲ್ಲಿ /ಕುಟುಂಬಗಳಲ್ಲಿ

ರೀತಿ/ರಿವಾಜು/ಧರ್ಮಾಚರಣೆ ಇವುಗಳು ಕಥೆ ,ಕಾವ್ಯ,ಸಾಂಪ್ರದಾಯಿಕ ಆಚರಣೆಗಳ ಮೂಲಕ ಪೀಳಿಗೆಯಿಂದ ಪೀಳಿಗೆಗೆ ಭಾಷೆಯ ರೂಪದಲ್ಲಿ ವರ್ಗಾವಣೆ ಅಗುತ್ತಾ ಹಿರಿಯ,ಮಧ್ಯಮ ಹಾಗೂ ಕಿರಿಯ ಪೀಳಿಗೆಗಳಲ್ಲಿ ಬೆಸುಗೆಯಾಗಿ ಆ ಎಲ್ಲರಲ್ಲೂ ಕಾಣಬಲ್ಲ ಸಾಮಾನ್ಯ ತತ್ವಗಳಾಗಿ ಕೌಟುಂಬಿಕ ,ತನ್ಮೂಲಕ ಸಾಮಾಜಿಕ ಬಾಂಧವ್ಯವನ್ನು ಕಾಯ್ದುಕೊಳ್ಳುತ್ತದೆ. ಭಾಷೆಯ ಪಲ್ಲಟವಾದಾಗ ನಂಬಿಕೆಗಳ ಮತ್ತು ಆಚರಣೆಗಳ ಪಲ್ಲಟವೂ ಕಂಡು ಬಂದು ಈ ಸಮತೋಲನ ಅಸಮತೋಲನದಲ್ಲಿ ಬದಲಾಗಬಹುದು- ಆಗುತ್ತದೆ.

ನಮ್ಮ ಕರ್ನಾಟಕದಲ್ಲಿ ಮನೆ ಮನೆಗಳಲ್ಲಿ ಇರುವ ಪೀಳಿಗೆಗಳಲ್ಲಿನ ಅಂತರ ಗಮನಿಸಿದರೆ ಇದು ಸ್ಪಷ್ಟವಾಗುವುದು. ಅಜ್ಜಿ-ತಾತಂದಿರ ಭಾವನೆಗಳು ಇಂದಿನ ಯುವ ಪೀಳಿಗೆಗೆ ಅರ್ಥಹೀನ ಎನ್ನಿಸಬಹುದು. ಜೀವನವನ್ನು ಕುರಿತ ದೃಷ್ಟಿಕೋನಗಳು ಬದಲಾಗುವುದರಿಂದ ಬಾಂಧವ್ಯ ಶಿಥಿಲವಾಗಿರುವುದನ್ನೂ ಕಾಣಬಹುದು. ಮಧ್ಯಮ ಪೀಳಿಗೆಯ ಪೋಷಕವರ್ಗ ಭಾಷೆಯನ್ನು ಕುರಿತಂತೆ ನಿರ್ಭಾವುಕವಾದಲ್ಲಿ ಯುವ ಪೀಳಿಗೆ ಭಾಷೆಯಿಂದ ವಿಮುಖವಾಗುವ ಸಾಧ್ಯತೆ ಬಹಳ. ಹಬ್ಬ ಹರಿದಿನಗಳು, ಅದರ ಹಿಂದಿರುವ ಸಾಮಾಜಿಕ ಆಶಯಗಳು, ಭಾಷೆಯ ಮೂಲಕ ಕಲಿಯುವ ಸಾಂದರ್ಭಿಕ ಕಥೆ- ಹಾಡು-ಪುರಾಣ-ಕಾವ್ಯಗಳು ಎಲ್ಲವೂ ಕನ್ನಡ ಭಾಷೆಯಿಲ್ಲದಿದ್ದಲ್ಲಿ ನಶಿಸಿಹೋಗುತ್ತವೆ. ಈಗಾಗಲೇ ಈ ಪ್ರಕ್ರಿಯೆ ಶುರು ಆಗಿರುವುದನ್ನು ನಾವು ನೋಡುತ್ತಿದ್ದೇವೆ. ಕನ್ನಡವನನ್ನು ಸರಿಯಾಗಿ ಅರಿಯದ ಪೋಷಕ ವರ್ಗ ಕನ್ನಡದಿಂದ ತಮ್ಮ ಮಕ್ಕಳುಗಳನ್ನು ವಿಮುಖಗೊಳಿಸುತ್ತಿರುವ ಆತಂಕಕಾರೀ ಬದಲಾವಣೆ ಇಂದು ನಗರಗಳಲ್ಲಿ ವ್ಯಾಪಕವಾಗಿ ಕಾಣಬಹುದು.

ಅವಶ್ಯಕತೆಗಳ ಪೂರೈಕೆಯಲ್ಲಿ ಭಾಷಾ ಮಾಧ್ಯಮ

ಒಂದೇ ಭಾಷೆಯು ವ್ಯಾಪಕವಾಗಿ ಬಳಕೆಯಲ್ಲಿದ್ದರೆ ಸಾಮಾಜಿಕ ಪಲ್ಲಟ ಸಾವಧಾನವಾಗಿ ಆಗುತ್ತದೆ ಅಥವಾ ಆಗದೆಯೂ ಇರಬಹುದು. ಜೊತೆಯಲ್ಲಿ ಪರಂಪರೆ ಉಳಿದುಬರಲು ಪೂರಕ ವಾತಾವರಣ ಇರುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ ಎರಡು ಭಾಷೆಗಳು ಬಳಕೆಗೆ ಬಂದು ಹೊರಗಿನ ಭಾಷೆ (ಇಂಗ್ಲೀಷು) ಮೇಲುಗೈ ಸಾಧಿಸಿದಾಗ ಆಗುವ ಬದಲಾವಣೆಗಳು ತೀವ್ರವಾಗಿಯೂ, ಇತರ ಬೆಳವಣಿಗೆಗಳಿಗೆ ಅನುಸಾರವಾಗಿ ಕ್ಷಿಪ್ರವಾಗಿಯೂ ಆಗಬಹುದು. ಈ ವಿದ್ಯಮಾನಗಳನ್ನು ಕನ್ನಡದ ದೃಷ್ಟಿಯಿಂದ  ಗಮನಿಸೋಣ.

ಏಕ ಭಾಷಾ ಪರಿಸರ ಮತ್ತು ಏಕ ಭಾಷಾ ಸಮಾಜ. ( ಕನ್ನಡ ಒಂದೇ ಇರುವಲ್ಲಿ)

Picture2

ಸಮಾಜದ ಬಹುತೇಕ ಜನರು ಒಂದೇ ಭಾಷೆ ನುಡಿಯುವಲ್ಲಿ ಮೇಲೆ  ನಿರೂಪಿಸಿದ `ಮ್ಯಾಸ್ಲೋ` ನ ಎಲ್ಲ ಸ್ತರಗಳ ಅವಶ್ಯಕತೆಗಳನ್ನೂ ಅದು ಪೂರೈಸುವುದರ ಫಲವಾಗಿ ಭಾಷೆ ಸುಸ್ಥಿತಿಯಲ್ಲಿ ಉಳಿದಿರುತ್ತದೆ.

ಇಂತಹ ಸಮಾಜದಲ್ಲಿ  ಭಾಷೆ ಕಾಲಾಂತರದಲ್ಲಿ ಪಡೆಯಬಹುದಾದ ರೂಪಾಂತರವನ್ನು ಈ ಕೆಳಗಿನಂತೆ ಚಿತ್ರದ ಮೂಲಕ ತೋರಿಸಬಹುದು– ಕನ್ನಡಕ್ಕೆ ಅನ್ವಯಿಸುವಂತೆ

ದ್ವಿಭಾಷಾ ಪರಿಸರ: ಕನ್ನಡ ಮತ್ತು ಇಂಗ್ಲೀಷ್  ಎರಡೂ ಭಾಷೆಗಳ ಬಳಕೆ

ಬ್ರಿಟಿಷರ ಆಳ್ವಿಕೆ ಮುಗಿದು ಭಾಷಾವಾರು ಪ್ರ್ಯಾಂತ್ಯಗಳ ರಚನೆಯಾದಮೇಲೂ ಆಯಾ ಪ್ರಾಂತೀಯ ಭಾಷೆಗಳಲ್ಲಿ ಆಡಳಿತಾತ್ಮಕ ವ್ಯವಹಾರ ಸಂಪೂರ್ಣವಾಗಿ ಜಾರಿಗೆ ಬರದ ಕಾರಣ ಕನ್ನಡ ಕಲಿಕಾ ಮಾಧ್ಯಮವಾಗಿದ್ದಾಗ್ಯೂ ಇಂಗ್ಲೀಷ್ ಬಳಕೆ ವ್ಯಾಪಕವಾಗಿ ಉಳಿಯಿತು. ಇದಕ್ಕೆ ಪೂರಕವಾಗಿ ಉನ್ನತ ಶಿಕ್ಷಣಗಳು, ರಾಷ್ಟ್ರೀಯ  ನೇಮಕಾತಿ ಪರೀಕ್ಷೆಗಳು ಇಂಗ್ಲೀಷಿನಲ್ಲೇ ನಡೆದುದರ ಕಾರಣ ಇಂಗ್ಲೀಷಿಗೆ ಸಿಗುವ ಆದ್ಯತೆ ಹೆಚ್ಚುತ್ತಲೇ ಹೋಯಿತು. ಈ ಪರಿಸ್ಥಿತಿ ಯೂರೋಪಿನ ಇತರ ದೇಶಗಳಲ್ಲಿ ಹಾಗೂ ರಾಷ್ಟ್ರೀಯ ಭಾವನೆ ಜಾಗೃತವಾಗಿರುವ ಚೈನಾ ,ರಷ್ಯಾ, ಜ಼ಪಾನ್ ಇನ್ನಿತರ ದೇಶಗಳಲ್ಲಿ ಕಂಡುಬರುವುದಿಲ್ಲ. ಪ್ರಾಪಂಚಿಕ ಬದಲಾವಣೆಗನುಗುಣವಾಗಿ ತಮ್ಮ ತಮ್ಮ ಭಾಷೆಗಳನ್ನು ಅಲ್ಲಿನ ಭಾಷಾ ಯೋಜನಾ ಆಯೋಗಗಳು ಅಚ್ಚುಕಟ್ಟಾಗಿ ನಿಭಾಯಿಸಿ ಇಂಗ್ಲೀಷಿನ ಪದಗಳು ನುಡಿಯಲ್ಲಿ ನುಸುಳದಂತೆ ಹಾಗೂ ಎಲ್ಲ ಹಂತದ ವಿದ್ಯಾಭ್ಯಾಸದಲ್ಲಿ ಕುಂದು ಬರದಂತೆ ನೋಡಿಕೊಂಡಿವೆ. ನಮ್ಮಲ್ಲಿ ಈ ದೂರಗಾಮೀ ಯೋಜನೆಗಳು ಇಲ್ಲವಾದ ಕಾರಣ ಇಂದು ಕನ್ನಡ ಇಂಗ್ಲೀಷಿನಿಂದ ಪ್ರಬಲ ಆಕ್ರಮಣ ಎದುರಿಸಬೇಕಾಗಿದೆ.  ಇಂಗ್ಲೀಷನ್ನು ಕಲಿಸುವ ಸಮಾಜ ಗಳನ್ನು ಎರಡು ವಿಧವಾಗಿ ನೋಡ ಬಹುದು.

 1. ಕನ್ನಡ ( ಮೂಲಭಾಷೆ) ಪ್ರಾಥಮಿಕ ಮಾಧ್ಯಮ ಹಾಗೂ ಇಂಗ್ಲೀಷ್ ಕೇವಲ ಒಂದು ಭಾಷೆಯಾಗಿ ಕಲಿಕೆ. ಕನ್ನಡಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಓದಿ ಬೆಳೆದ ಡಾ.ಎಸ್.ಎಲ್.ಭೈರಪ್ಪ,ಕುಂ.ವೀರಭದ್ರಪ್ಪನವರಂತಹ ಪ್ರಸಿದ್ಧ ಲೇಖಕರುಗಳು, ವಿಜ್ಞಾನಿಗಳು, ತಂತ್ರಜ್ಞಾನಿಗಳು,  ಈ ಮಾದರಿಯಲ್ಲಿ ಕಲಿತವರು ನಮ್ಮೆದುರಿಗೆ ಇಂದಿಗೂ ಇದ್ದಾರೆ. ಹೊರದೇಶಗಳಿಗೆ ಹೋಗಿ ಸಾಧನೆಯ ಶಿಖರಗಳನ್ನೂ ಏರಿದ್ದಾರೆ.
 2. ಕನ್ನಡ (ಮೂಲಭಾಷೆ) ಕೇವಲ ಸಂವಹನದ ಭಾಷೆ  ಹಾಗೂ ಇಂಗ್ಲೀಷ್ ಮಾಧ್ಯಮ ಭಾಷೆಯಾಗಿ ಎಲ್ಲ ವಿಷಯಗಳ ಕಲಿಕೆ.

ಈ ಮಿಶ್ರತಳಿ ವ್ಯವಸ್ಥೆ ಸಮಾಜದಲ್ಲಿ ಹಲವು ಅನಪೇಕ್ಷಿತ ಬದಲಾವಣೆಗಳಿಗೆ ಕಾರಣವಾಗುತ್ತದೆ.

ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಸುವ ಶಾಲೆಗಳು ಬಹುತೇಕ ನಗರಗಳಲ್ಲಿ ಹಾಗೂ ಪಟ್ಟಣಗಳಲ್ಲಿದ್ದು ಹಳ್ಲಿಗರಿಗೆ  ಸರಕಾರೀ ಶಾಲೆಗಳು ಕಲಿಕಾಕೇಂದ್ರಗಳಾಗುತ್ತವೆ. ಮೂಲಭೂತವಾಗಿ ಇದರಲ್ಲಿ ಯಾವುದೇ ಸಮಸ್ಯೆ ಇಲ್ಲವಾದರೂ, ನಗರವಾಸಿಗಳಿಗೆ, ಉಳ್ಳವರಿಗೆ,ವಿದ್ಯಾವಂತ ಪೋಷಕರ ಮಕ್ಕಳಿಗೆ ಲಭ್ಯವಾಗುವೆ ಆಂಗ್ಲಭಾಷಾ ಮಾಧ್ಯಮ ಜೀವನದಲ್ಲಿ ಸ್ಫರ್ಧೆಗಳು ಬಂದಾಗ ಎದುರಿಸಲು ಸಜ್ಜು ಮಾಡುತ್ತವೆ; ಕಾರಣ ಹೆಚ್ಚುವರಿ ಮಾರ್ಗದರ್ಶನ ಹಾಗೂ ಬೋಧನೆಗೆ ಇಲ್ಲಿ ಅವಕಾಶ ಇರುವುದೇ ಆಗಿರುತ್ತದೆ. ಬುದ್ಧಿವಂತಿಕೆಯಲ್ಲೂ, ಬೇರ್ಯಾವುದೇ ವಿಷಯದಲ್ಲೂ  ಕಡಿಮೆಯಿರದ ಹಳ್ಳೆ ಮಕ್ಕಳು ಹಿಂದೆ ಬೀಳುವುದು ಒಂದು ಮಿಥ್ಯಾ ವಾದಕ್ಕೆ ದಾರಿ ಮಾಡಿಕೊಡುತ್ತದೆ.ಆಂಗ್ಲ ಮಾಧ್ಯಮಕ್ಕೂ ಜೀವನದಲ್ಲಿನ ಯಶಸ್ಸಿಗೂ ಅವಿನಾಭಾವ ಸಂಬಂಧವನ್ನು ಮಿಥ್ಯಾರೋಪಿಸಿ ಕನ್ನಡದಲ್ಲಿ ಕಲಿಯುವ ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ಕೀಳರಿಮೆಯನ್ನೂ, ಆತಂಕವನ್ನೂ ಸೃಷ್ಟಿಸಿ ಸಮಾಜವನ್ನು ವಿಭಜಿಸುವ ಪರಿಕ್ರಿಯೆಗೆ ಹಾದಿ ಮಾಡಿಕೊಡುತ್ತದೆ. ಇಂದು ಕರ್ನಾಟಕದಲ್ಲಿ ಸರ್ವವ್ಯಾಪಿಯಾಗಿ ಕಂಡು ಬರುತ್ತಿರುವ ವಿಭಜಿತ ಸಮಾಜ ಈ ದ್ವಿಭಾಷಾ ನೀತಿಯ ಸೃಷ್ಟಿ.

ಕನ್ನಡ ( ಮೂಲಭಾಷೆ) ಪ್ರಾಥಮಿಕ ಮಾಧ್ಯಮ ಹಾಗೂ ಇಂಗ್ಲೀಷ್ ಕೇವಲ ಒಂದು ಹೆಚ್ಚುವರಿ ಭಾಷೆಯಾಗಿ ಮಾತ್ರ ಕಲಿಕೆ.

 

Picture3ಇದು ನಾವೆಲ್ಲಾ ಮಕ್ಕಳಾಗಿದ್ದಾಗ ಬಹುತೇಕ ಇದ್ದ ಪರಿಸ್ಥಿತಿ. ಜನಪದದ ಬಹುಭಾಗ ಮಕ್ಕಳು ಇಂಗ್ಲೀಷನ್ನು ಒಂದು ಭಾಷೆಯಾಗಿ ಕಲಿಯುತ್ತಿದ್ದರೇ ವಿನಃ ಮಾಧ್ಯಮವಾಗಿ ಅಲ್ಲ. ಭಾಷೆಯ ಮೇಲಿನ ಹಿಡಿತ, ಅಭಿಮಾನ, ಭಾಷೆಯ ಮೂಲಕ ಸಂಸ್ಕೃತಿಯ ಅರಿವು, ಭಾಷೆ ಅಷ್ಟೇ ಅಲ್ಲದೆ ಇತರ ಕಲಿಕಾ ವಿಷಯಗಳ ಬಗೆಗೆ ಕುತೂಹಲ, ಅರಿವು  ಮಾತೃ ಭಾಷೆಯ ಮೂಲಕ ಕಲಿಯುವುದರಿಂದ ಸುಲಭ ಸಾಧ್ಯ ಎಂಬುದು ಪ್ರಪಂಚದ ಎಲ್ಲ ಸಂಶೋಧನೆಗಳಿಂದ ಸಾಬೀತಾಗಿರುವುದು ಎಲ್ಲರಿಗೂ ತಿಳಿದದ್ದೆ. ಇಂತಹ ಪರಿಸ್ಥಿತಿಯು ಸಹ ಕನ್ನಡದ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನೇ ನಿರ್ಮಿಸುತ್ತದೆ. ಮತ್ತೊಂದು ಭಾಷೆಯ ಅರಿವು ವ್ಯಕ್ತಿಯ ಜ್ಞಾನಾಭಿವೃದ್ಧಿಗೆ ಸಹಾಯಕ ಮತ್ತು ಆಲೋಚನೆಯ ಪರಿಧಿಯನ್ನು ವಿಸ್ತರಿಸುತ್ತದೆ ಎನ್ನುವುದು ನಿರ್ವಿವಾದ. ಇದೇ ಕಾರಣಕ್ಕೆ ಕನ್ನಡದೊಂದಿಗೆ ಇಂಗ್ಲೀಷನ್ನು ಕಲಿತ ಬಿ.ಎಮ್.ಶ್ರೀ, ಕುವೆಂಪು, ಡಿ.ವಿ. ಜಿ ಇತರರು ಮಹತ್ಸಾಧನೆ ಮಾಡಲು ಸಾಧ್ಯವಾಯಿತು. . ಇದು ಅನುವಾದಗಳಿಗೂ ಪ್ರೇರೇಪಿಸಿ ನಮ್ಮ ಭಾಷಿಗರಿಗೆ ಅನ್ಯ ಭಾಷೆಯ ಜ್ಞಾನ, ಸೊಗಡು ಇತ್ಯಾದಿಗಳನ್ನು ಪರಿಚಯಿಸಲು ಸೂಕ್ತ ವೇದಿಕೆಯನ್ನು ನಿರ್ಮಿಸುತ್ತದೆ. ಪ್ರಪಂಚದ ಹಲವಾರು ದೇಶಗಳು (ಇಸ್ರೇಲ್, ಸ್ವೀಡನ್, ಡೆನ್ಮಾರ್ಕ್, ಜರ್ಮನಿ,ಫ಼್ರಾನ್ಸ್,ಜಪಾನ್, ತೈವಾನ್,ಸ್ಪೈನ್)  ಈ ಮಾದರಿಯನ್ನೇ ಅಲವಡಿಸಿಕೊಂಡು `ಹೊಸಚಿಗುರು-ಹಳೆ ಬೇರು`  ಗಳಿಂದ ಕೂಡಿದ ಸೊಗಸಾದ ಸಂಸ್ಕೃತಿಯ ಕಲ್ಪವೃಕ್ಷವನ್ನು ಕಾಪಾಡಿಕೊಂಡು ಬಂದಿವೆ.

ಈ ಕೆಳಗಿನ  ರೇಖಾಚಿತ್ರ ಈ ಪರಿಸ್ಥಿತಿಯ ಸಾರಾಂಶ ಹೇಳುತ್ತದೆ.

Picture3

ಮೇಲಿನ ಚಿತ್ರವನ್ನು ಗಮನಿಸಿದರೆ ನಿಮಗೆ ಒಂದು ಅಂಶ ಸ್ಪಷ್ಟವಾಗುತ್ತದೆ. ನಮ್ಮ ಕನ್ನಡ ಜೀವನದ ಒಳಭಾಗವನ್ನು ಆವರಿಸಿಕೊಂಡು ತನ್ಮೂಲಕ ಅವಷ್ಯಕತೆಗಳ ಶ್ರೇಣಿಯಲ್ಲಿ ಜನಗಳಿಗೆ ಬೇಕಾದದ್ದನ್ನು ಬಹುತೇಕ ಪೂರೈಸುವ ಕೆಲಸ ಮಾಡುತ್ತದೆ. ಇಂಗ್ಲೀಷ್ ಭಾಷೆ ಹಲವು ಆಯಾಮಗಳಲ್ಲಿ ಹೊಕ್ಕರೂ ಅದರ ಸ್ಥಾನ ಹೊರವಲಯದಲ್ಲಿ ಇರುವುದರ ಕಾರಣದಿಂದ ಸಂಸ್ಕೃತಿ /ಸಾಹಿತ್ಯ /ಸಂಗೀತ /ಆಚರಣೆ /ಪರಂಪರೆ  ಇತ್ಯಾದಿಗಳಲ್ಲಿ ಅದು ಪೂರಕ ಪಾತ್ರವೇ ಹೊರತು ಮಾರಕ ವಾಗಿರುವುದಿಲ್ಲ. ಈ ಸರಹದ್ದನ್ನು  ಎರಡನೇ ಭಾಷೆ (ಇಂಗ್ಲೀಷ್) ದಾಟಿದರೆ ಭಾಷೆಯನ್ನು ಭಾಷೆ ನುಂಗುವ ಸಾಧ್ಯತೆ ಉಂಟಾಗಿ ನುಡಿ ನಲುಗುತ್ತದೆ.

ಕನ್ನಡದ ಮಟ್ಟಿಗೂ, ಈ ಸುಭದ್ರ ಪರಿಸ್ಥಿತಿಯನ್ನು ನಿರ್ಮಿಸಲು ಸಾಧ್ಯ. ಇಂಗ್ಲೀಷ್ ಇಂದಿನ ಜಾಗತೀಕರಣದ ವ್ಯವಸ್ಥೆಯಲ್ಲಿ ಅನಿವಾರ್ಯ ಭಾಷೆಯಾಗಿರುವುದು ಖಂಡಿತ. ಆದರೆ ಅದನ್ನು ನಮ್ಮ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಸಿಕೊಂಡು  ನಮ್ಮ ಕನ್ನಡವನ್ನು ಹೊಸಕಿ ಕೊಂದುಹಾಕುವುದು ಎಷ್ಟರಮಟ್ಟಿಗೆ ಶ್ರೇಯಸ್ಕರ ಹಾಗೂ ಸಮಂಜಸ ಮತ್ತು ಅವಶ್ಯಕವೇ ಎನ್ನುವ ಪ್ರಶ್ನೆಯನ್ನು ನಾವೆಲ್ಲರೂ ಕೇಳಿಕೊಳ್ಳಬೇಕಾಗಿದೆ. ಇಂಗ್ಲೀಷಿನ ಜೊತೆಗೇ  ಕಡ್ಡಾಯ ಕನ್ನಡವನ್ನೂ ಕಲಿಯುವುದು ಸಾಧ್ಯ ಹಾಗೂ ಸಾಧುವಾದ ಕಾರ್ಯವೂ ಹೌದು.

ತಮ್ಮ ಮಕ್ಕಳಿಗೆ ಲ್ಯಾಟಿನ್, ಸ್ಪ್ಯಾನಿಷ್, ಫ್ರೆಂಚ್  ಭಾಷೆಗಳನ್ನು ಕಲಿಸಲು ತೋರುವ ಉತ್ಸುಕತೆ ಇಂದಿನ ಕನ್ನಡಿಗರಲ್ಲಿ ಕನ್ನಡವನ್ನು ಮಕ್ಕಳಿಗೆ ಕಲಿಸುವುದರಲ್ಲಿ ಇಲ್ಲವೆಂಬುದು ಎದೆ ಬಿರಿಯುವ ವಿಚಾರ.

 

ದ್ವಿಭಾಷಾ ಪರಿಸರ- (ಎರಡು ಭಾಷೆಗಳಿಗೆ ಸಮಾನ ಸ್ಥಾನ ನೀಡುವಲ್ಲಿ)

Picture3

ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಇಂಗ್ಲೀಷ್  ಪ್ರಾತಿನಿಧ್ಯ ಪಡೆದು ಮೇಲುಗೈ ಸಾಧಿಸಿದಾಗ

Picture4

ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಇಂಗ್ಲೀಷ್ ಪ್ರಾಥಮಿಕ ಮಾಧ್ಯಮವಾಗಿ ಕನ್ನಡ ಒಂದು ಭಾಷೆಯಷ್ಟೇ ಆಗಿ ಕಲಿಸಲ್ಪಟ್ಟರೆ ಹಲವಾರು ಅನಪೇಕ್ಷಿತ ದುಷ್ಪರಿಣಾಮಗಳು ಭಾಷೆಯ ಮೇಲೂ ಅದನ್ನು ಆಡುವ ಜನ ಸಮುದಾಯದ ಮೇಲೂ ಆಗುತ್ತವೆ.

 • ಕನ್ನಡ ಪ್ರಥಮ, ದ್ವಿತೀಯ, ತೃತೀಯ ಸ್ಥಾನಕ್ಕೆ ನೂಕಲ್ಪಡುತ್ತದೆ
 • ಕನ್ನಡ ಭಾಷೆಯ ಕಲಿಕೆ ಕಡ್ಡಾಯ ಆಗದಿದ್ದ ಪಕ್ಷದಲ್ಲಿ ಅದನ್ನು ವರ್ಜಿಸಲೂ ಬಹುದು
 • ಹೀಗೆ ಕಲಿಯುವ ಕನ್ನಡ ಭಾಷೆಗೆ  ವ್ಯಾವಹಾರಿಕ ಸ್ಥಾನಮಾನ ಸಿಗದೇ ಹೋದಲ್ಲಿ ಕಾಟಾಚಾರಕ್ಕೆ ಕಲಿಯುವ ಪ್ರಕ್ರಿಯೆಗೆ ಚಾಲನೆ ಸಿಗುತ್ತದೆ. ಕಾಟಾಚಾರಕ್ಕೆ ಕಲಿತದ್ದು ಅಭಿಮಾನ ಹೇಗೆ ತಾನೇ ಮೂಡಿಸಬಲ್ಲದು?
 • ಕನ್ನಡ ಭಾಷೆಯಲ್ಲಿ ಅನ್ಯ ಭಾಷೆಯ ಪರಿಣಾಮೆ ಸಹಜವಾಗಿಯೇ ಹೆಚ್ಚುತ್ತಾ ಹೋಗುತ್ತದೆ- ಇದಕ್ಕೆ ಕಾರಣ ಮಾನವನ ಸಹಜ ಸೋಂಬೇರೀ ಪ್ರವೃತ್ತಿ. ಮಾಧ್ಯಮದಲ್ಲಿ ಕಲಿಯದಿದ್ದಾಗ ಸಮಾನಾರ್ಥಕ ಪಾರಿಭಾಷಿಕ ಪದಗಳ ಜ್ಞಾನ ಕಡಿಮೆ ಇರುವ ಕಾರಣ, ಇಂಗ್ಲೀಷಿನ ಪದಗಳನ್ನು ಸೇರಿಸಿ ಕನ್ನಡ ಮಾತನಾಡುವ ಅಭ್ಯಾಸ ಪ್ರಾರಂಭವಾಗಿ ಸೋಂಕುರೋಗದ ರೂಪದಲ್ಲಿ ಸರ್ವವ್ಯಾಪಿಯಾಗಿ ಹರಡುತ್ತದೆ. ಇಂದು ಕನ್ನಡದ ಪರಿಸ್ಥಿತಿ ಇದೇ ಆಗಿರುವುದು ಸರ್ವ ವೇದ್ಯ.
 • ಮಾಧ್ಯಮ ಭಾಷೆಯಾಗಿ ಇಂಗ್ಲೀಷ್ ಪ್ರಾಧಾನ್ಯತೆ ಪಡೆದ ನಂತರ ವಿದ್ಯಾಭ್ಯಾಸದಲ್ಲೂ, ಕೆಲಸ ಕಾರ್ಯಗಳಲ್ಲೂ, ಉನ್ನತ ಶಿಕ್ಷಣದಲ್ಲೂ ನುಸುಳುವ ಅನಿವಾರ್ಯತೆಯಿಂದಾಗಿ, ಮಾತೃಭಾಷೆಯ ಕಲಿಕೆ ಕೇವಲ ಹೇರಿಕೆಯಂತೆ ಕಂಡು ಬರುವುದು ಸಾಧ್ಯ. ಪೋಷಕರೂ, ಮಕ್ಕಳೂ ಈ ಭಾಷೆಯನ್ನು ಕಲಿಯುವುದರ ಪ್ರಸ್ತುತತೆಯನ್ನು ಪ್ರಶ್ನಿಸಲು ಪ್ರಯತ್ನಿಸುವರು.

ಈ ಬದಲಾವಣೆಗಳು ದೇಹಕ್ಕೆ ಸುಳಿವು ಕೊಡದೆ ಬೆಳೆಯುವ ಮಾರಣಾಂತಿಕ ಕ್ಯಾನ್ಸರ್ (ಅರ್ಭುದ) ಖಾಯಿಲೆಯಂತೆ ನಿಧಾನವಾಗಿ ನಡೆಯುವ ಪ್ರಕ್ರಿಯೆ ಆದ್ದರಿಂದ ಕನ್ನಡ ಭಾಷೆಯ ಸ್ವಾಸ್ಥ್ಯ ಕಾಪಾಡಲು ಈ ರೀತಿಯ ಬದಲಾವಣೆಗಳ ಮೇಲೆ ಗಮನ ಇಡುವುದು ಅವಶ್ಯಕವಾಗುತ್ತದೆ. ಈ ಕನ್ನಡ ನುಡಿ ಮರಣದ ಪ್ರಕ್ರಿಯೆಯನ್ನು ಈ ಕೆಳಗಿನ ರೇಖಾಚಿತ್ರದಲ್ಲಿರುವಂತೆ ವಿಶ್ಲೇಷಿಸಬಹುದು ಯಾವುದೇ ಭಾಷೆ ಸಧೃಢವಾಗಿರಬೇಕಾದರೆ ಅದನ್ನು ಬಳಸುವ ಯುವ ಪೀಳಿಗೆಯ ಸಂಖ್ಯೆ ದೊಡ್ಡದಿರಬೇಕು. ಯುವ ಪೀಳಿಗೆಯು ಕನ್ನಡದಿಂದ ವಿಮುಖವಾದರೆ ಬಳಕೆದಾರರಿಲ್ಲದೆ ಸೊರಗುವ ಉದ್ಯಮದಂತೆ ಭಾಷೆಯೂ ಸೊರಗುತ್ತಾ ಹೋಗುತ್ತದೆ.

ಈ ಹಂತಗಳನ್ನು ಕೆಳಗಿನಂತೆ ವರ್ಗೀಕರಿಸಬಹುದು.

ಈ ಮೊದಲು ಮೇಲೆ ವಿವರಿಸಿದ ದ್ವಿಭಾಷಾ ನೀತಿಯು ಸಮಾಜವನ್ನು ಒಡೆಯಬಹುದಾದ ಸಾಧ್ಯತೆಯನ್ನು ನೋಡಿದೆವು.ಈ ರೀತಿಯ ಶ್ರೇಣೀಕೃತ ಸಮಾಜ ಕೇವಲ ಭಾಷಾ ಮಾಧ್ಯಮದ ಕೃತಕ ಸೃಷ್ಟಿಯಾದ   ಸನ್ನಿವೇಶವನ್ನು ಖಾಸಗೀ ಸಂಘ ಸಂಸ್ಥೆಗಳು, ಪಟ್ಟಭದ್ರ ಹಿತಾಸಕ್ತಿಗಳು, ಅವಿವೇಕೀ ರಾಜಕಾರಿಣಿಗಳು,  ದುರುಪಯೋಗಪಡಿಸಿಕೊಂಡು ಜೀವನದ ಯಶಸ್ಸಿನ ಹುಡುಕಾಟದಲ್ಲಿರುವ ಪ್ರಜೆಗಳ ಆತಂಕವನ್ನೇ ಬಂಡವಾಳವಾಗಿಸಿಕೊಂಡು ಆಂಗ್ಲ ಮಾಧ್ಯಮಶಾಲೆಗಳನ್ನು ಎಲ್ಲೆಲ್ಲಿಯೂ ತೆರೆಯುತ್ತಿರುವುದನ್ನು ನಾವಿಂದು ಕಾಣುತ್ತಿದ್ದೇವೆ. ಶಿಕ್ಷಣ ಮೌಲ್ಯಾಧಾರಿತವಾಗಿರದೆ ಹಾಗೂ  ಗುಣಮಟ್ಟದಿಂದ ಕೂಡಿರದಿದ್ದಾಗ್ಯೂ ಹಣ ಸುಲಿಯುವ ವ್ಯಾಪಾರೀ ವೃತ್ತಿಯನ್ನಾಗಿ ಮಾಡಿಕೊಂಡಿರುವುದು ಸರ್ವವಿದಿತ. ೮೦-೯೦ ರ ದಶಕಗಳಲ್ಲಿ ದೊಡ್ಡ ನಗರ ಪ್ರದೇಶಗಳಲ್ಲಿದ್ದ ಉತ್ತಮ ದರ್ಜೆಯ ಖಾಸಗೀಶಾಲೆಗಳು ರ್ಯಾಂಕ್ ವಿಜೇತರ ಪಟ್ಟಿ ಪ್ರಕಟಿಸಿ ಪ್ರಚಾರ ಗಿಟ್ಟಿಸಿಕೊಂಡಿದ್ದು ಖಾಸಗೀ ಶಾಲೆಗಳೆಂದರೆ ಯಶಸ್ವೀ ವಿದ್ಯಾಭ್ಯಾಸದ ತಾನಗಳೆಂಬ ಭಾವನೆ ಜನಗಳಲ್ಲಿ ಮೂಡಿತು. ಇದಕ್ಕೆ ವ್ಯತಿರಿಕ್ತವಾಗಿ ಸರಕಾರೀ ಶಾಲೆಯ ಮಕ್ಕಳಿಗೆ ಯಾವ ಪ್ರಚಾರವೂ ದೊರೆಯದಾಯಿತು. ಜೊತೆಗೆ ಸರಕಾರಗಳ ನಿರ್ಲಕ್ಷ್ಯ, ಅನರ್ಹ ಶಿಕ್ಷಕರ ನೇಮಕ ಮುಂತಾದ ದೊಂಬರಾಟಗಳಿಂದ ಜನ ಕನ್ನಡ ಶಾಲೆಗಳಿಂದ ವಿಮುಖರಾಗುರತ್ತ ನಡೆದರು. ಸರಕಾರೀ ಶಾಲೆಯಲ್ಲಿ ಓದಿದ (ನನ್ನನ್ನೂ ಒಳಗೊಂಡು) ಎಷ್ಟೋ ಜನ ಖಾಸಗೀ ಶಾಲೆಯ ಮಕ್ಕಳಿಗೆ ಸಮನಾಗಿ ಸಾಧನೆ ಮಾಡಿದ್ದಾರೆ. ಆದರೆ ಅದರ ತಿಳಿವು ಪ್ರಜೆಗಳಿಗೆ ಇಂದು ಇಲ್ಲವಾಗಿದೆ.

ಈ ಖಾಸಗೀ ಅಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಸ್ಫರ್ಧಾತ್ಮಕ ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ಹಾಗೂ ಗ್ರಾಮ ಮೂಲದ ಸರಕಾರೀ ಕನ್ನಡ ಶಾಲೆಯ ಮಕ್ಕಳು ಹಿಂದೆ ಬೀಳುವ ಮೂಲ ಕಾರಣಗಳನ್ನು ಹುಡುಕೋಣ

 

 • ಬುದ್ಧಿವಂತಿಕೆ: ಇದು ಯಾರೊಬ್ಬರ ಸ್ವತ್ತೂ ಅಲ್ಲ. ಈ ಮಕ್ಕಳ ತಂದೆ-ತಾಯಿಯರು ಬಹುತೇಕ ವಿದ್ಯಾವಂತರಾಗಿದ್ದು ಮಕ್ಕಳ ಕಲಿಕೆಯಲ್ಲಿ ವೈಯಕ್ತಿಕ ಆಸಕ್ತಿ ತೋರುವುದರ ಫಲ. ಅದು ಅಲ್ಲದೆ ಇವರಲ್ಲಿ ಸಂಪನ್ಮೂಲಗಳು ಇರುವ ಕಾರಣದಿಂದ ಹೆಚ್ಚುವರಿ ಪಾಠ- ಪ್ರವಚನಗಳನ್ನು ಮಕ್ಕಳಿಗೆ ಕೊಡಿಸಬಲ್ಲವರಾಗಿರುತ್ತಾರೆ. ಶಾಲೆಯಲ್ಲಿ ಸಿಕ್ಕದ ಬೋಧನೆ ಮತ್ತು ಕಲಿಕೆ ಹೊರಗಿನ ಪಾಠಗಳಿಂದ ಲಭ್ಯವಾಗುತ್ತದೆ.
 • ಇಂಗ್ಲೀಷ್ ಸುಯೋಗ- ಕಲಿಕೆ ಸರಾಗ: ಇದು ಸ್ವಲ್ಪ ಮಟ್ಟಿಗೆ ಸತ್ಯವಾದರೂ ಪೂರ್ಣ ಅಲ್ಲ. ಇಂಗ್ಲೀಷ್ ಕಲಿತ ಮಕ್ಕಳು ಮೊದ ಮೊದಲಲ್ಲಿ ಸ್ವಲ್ಪ ಮುಂಚೂಣಿಯಲ್ಲಿದ್ದರೂ, ಸತತ ಪರಿಶ್ರಮದಿಂದ ಈ ಅಂತರವನ್ನು ಮೀರುವ ಸಾಮರ್ಥ್ಯ ಕನ್ನಡದಲ್ಲಿ ಕಲಿತ ಮಕ್ಕಳಿಗೂ ಇರುತ್ತದೆ. ಸಾಧನೆ ಮಾಡಿದ ಮಹನೀಯರಲ್ಲಿ ಅನೇಕ ಜನ ತಮ್ಮ ತಾಯಿ ಭಾಷೆಯಲ್ಲಿ ಓದಿದವರೇ ಆಗಿರುತ್ತಾರೆ. ಇಂಗ್ಲೀಷ್ ಶಾಲೆಗೆ ಹೋಗಿ ಸಫಲರಾದ ವಿದ್ಯಾರ್ಥಿಗಳ ಸಮಾಜಿಕ ಹಾಗೂ ಕೌಟುಂಬಿಕ ಪರಿಸರವನ್ನು ಗಮನಿಸಿದಾಗ ಅವರ ಅರ್ಥಿಕ ಚೈತನ್ಯ, ಪೋಷಕರ ಸಹಕಾರ, ಮಾರ್ಗದರ್ಶನ, ಹೆಚ್ಚುವರಿ ಮನೆ ಪಾಠ, ಹೊರಗಿನ ತರಬೇತಿ, ಸಂಪನ್ಮೂಲಗಳ ಹರಿವು ಎಲ್ಲವೂ ಇವರಿಗೆ ಒದಗಿರುವುದು ಸ್ಪಷ್ಟ.
 • ಇದಕ್ಕೆ ವಿರುದ್ಧವಾಗಿ ಸರಕಾರೀ ಶಾಲೆಗೆ ಹೋಗುವ ಮಕ್ಕಳಿಗೆ ಹಲವಾರು ಸವಾಲುಗಳು ಎದುರಾಗುತ್ತವೆ. ಇಲ್ಲಿ ಭಾಷಾಮಾಧ್ಯಮ ಬೆದರುಬೊಂಬೆಯ ರೂಪದಲ್ಲಿ ಬಲಿಪಶು ಆಗುವುದು ಆಧುನಿಕ ಜಗತ್ತಿನ, ಸತ್ಯವನ್ನು ಅರಸದೆ ಸುಲಭ ಸುಳ್ಳಿಗೆ ಬಲಿಯಾಗುವ ಸಮಾಜದ ಮೌಢ್ಯ ಪ್ರವೃತ್ತಿಯ ವಿಪರ್ಯಾಸ.
 • ಪೋಷಕರ ಆರ್ಥಿಕ ಮುಗ್ಗಟ್ಟು
 • ಶಾಲೆಗಳಲ್ಲಿ ಸಂಪನ್ಮೂಲಗಳ ಕೊರತೆ
 • ಉತ್ತಮ ಶಿಕ್ಷಕರ ಕೊರತೆ
 • ನೇಮಕಾತಿಯಲ್ಲಿ ಅರ್ಹತೆಯ ಕಡೆಗಣನೆ
 • ಜಾತಿ- ಲಂಚ-ವಶೀಲಿಗೆ ಮಣೆ
 • ಹಳ್ಲಿಗಳಿಗೆ ಹೋಗಲು ಶಿಕ್ಷಕರ ನಿರಾಕರಣೆ
 • ಮನೆ ಪಾಠ- ಹೆಚ್ಚುವರಿ ಬೋಧನೆಯ ಕೊರತೆ
 • ಅವಿದ್ಯಾವಂತ ಪೋಷಕರು

 

ಈ ಎಲ್ಲ ಅವ್ಯವಸ್ಥೆಗಳ ನಡುವೆಯೂ ಅರಳಿದ ಎಷ್ಟೋ ಪ್ರತಿಭೆಗಳು ಇಂದಿಗೂ ನಮ್ಮ ಕಣ್ಮುಂದೆ ಇವೆ. ಆದರೆ ಪ್ರತಿಷ್ಟೆ ಹಾಗೂ ಮಾಧ್ಯಮದ -ಭಾಷೆಯ ಮೇಲಿನ ಹುಸಿ ಅಪನಂಬಿಕೆಯಿಂದ ಲಕ್ಷಾಂತರ ರುಪಾಯಿಗಳನ್ನು ನೀರಿನಂತೆ ಖರ್ಚು ಮಾಡುವ ಸಮಾಜ ನಮ್ಮಲ್ಲಿ ಈಗ ಸೃಷ್ಟಿಯಾಗಿದೆ.

ದ್ವಿಭಾಷಾ ವ್ಯವಸ್ಥೆಯ ಮುಂಪರಿಣಾಮಗಳು.ಕನ್ನಡ, ಕಂಗ್ಲೀಷ ಆಗುವುದರ ವೈಪರೀತ್ಯಗಳು

ತೋಟದಂಚಿನಲೆಲ್ಲೊ ಬೆಳೆದಿದ್ದ ಕಳೆಹುಲ್ಲು

ನೋಟವನು ತಪ್ಪಿಸುತ ಒಳನುಗ್ಗುತಿಹುದಲ್ಲೊ

ದಿಟವಾಗಿ ಕಿತ್ತೆಸೆದು ತೊಡೆಯದಿರೆ ನೀನು

ಕಾಟಕ್ಕೆ ಗಿಡಬಳ್ಳಿ  ಸೊರಗದಿಹವೇನು?

 

ಆಂಗ್ಲ ಭಾಷೆಯ ಪದವು ಕನ್ನಡದಿ ಬೆರೆತಿರಲು

ಆಂಗ್ಲ ಪದಗಳೆ ನಮ್ಮ ಮಾತೆಲ್ಲ ತುಂಬಿರಲು

ಕಳೆ ಬೆಳೆದ ತೋಟದಂತೆಮ್ಮ ನುಡಿ ಸೊರಗಿರಲು

ಗೆಳೆಯ ಬರುವೆಯ ಜೊತೆಗೆ ಕಳೆಯ ಕಿತ್ತೊಗೆಯಲು!

 • ಸೀಮಿತ ಕನ್ನಡ ಪದ ಬಳಕೆ (ಚಿತ್ರಗೀತೆಗಳನ್ನು ಗಮನಿಸಿ)
 • ಕನ್ನಡದ ಪದ ಸಿರಿಯ ಅಳಿವು
 • ಕನ್ನಡ ಪದಪರಿಚಯದ ಅಭಾವದಿಂದ ಕನ್ನಡ ಓದುವಲ್ಲಿ ಹಿನ್ನಡೆ
 • ಅಲ್ಪಮಿತಿಯಿರುವ  ಅಲ್ಪಮತಿಗಳಿಂದ ಅಲಂಕಾರವಿಲ್ಲದ ಸಾಹಿತ್ಯ
 • ಸೌರಭ ಸಾರಗಳಿಲ್ಲದ ಗೀತ-ಸಂಗೀತ (ಇಂದಿನ ಚಿತ್ರ ಗೀತೆಗಳನ್ನು ಗಮನಿಸಿ)
 • ಕುಸಿವ ಗುಣಮಟ್ಟ ಮತ್ತು ಅಭಿರುಚಿ
 • ಅಭಿವ್ಯಕ್ತಿ ಮಾಧ್ಯಮವಾಗಿ ಭಾಷೆ ಕ್ಷೀಣಿಸುವ ವಿಪರ್ಯಾಸ
 • ದೂರದರ್ಶನ / ರೇಡಿಯೋಗಳಲ್ಲಿ ಕನ್ನಡದ ಹಗಲುಗೊಲೆ ಕಂಗ್ಲೀಷ್ ನ ವಿಜೃಂಭಣೆ
 • ಕಂಗ್ಲೀಷಿನ ಸಾಂಕ್ರಾಮಿಕ ಸೋಂಕು- ಅದರ ಪ್ರಸಾರ
 • ಗುಣಮಟ್ಟದ ಕೊರತೆಯಿಂದ ವಾಚಕರ ವಿಮುಖತೆ
 • ಭಾಷೆಯು ಅಳಿವಿನ ಹಾದಿಯಲ್ಲಿ.
 • ಇಂಗ್ಲೀಷಿನ / ಪಾಶ್ಚಿಮಾತ್ಯ ಸಂಗೀತ ಹಾಗೂ ಸಾಹಿತ್ಯಕ್ಕೆ ಮಣೆ ಹಾಗೂ ಸಂಪನ್ಮೂಲಗಳ ಹರಿವು; ಕನ್ನಡದ ಸಾಹಿತ್ಯ /ಸಂಗೀತ ಅಳಿವು

ಇಂಗ್ಲೀಷ್ ಪ್ರಾಬಲ್ಯ ಹೆಚ್ಚುವ ಕಾರಣಗಳು:

ಉಳ್ಳವರು – ನಗರವಾಸಿಗಳು ಇಲ್ಲದವರು-ಬಡತನ-  ಅನಾನುಕೂಲತೆ-   ಹಳ್ಳಿ ಗಾಡು
 • ಅನುಕೂಲತೆಗಳ ಸಾಮೀಪ್ಯ ಹಾಗೂ ಕೊಳ್ಳಬಲ್ಲ ಶಕ್ತಿ
 • ಖಾಸಗೀ ಶಾಲೆಗಳು
 • ಇಂಗ್ಲೀಷ್ ಮಾಧ್ಯಮ
 • ಪೋಷಕರ ಪ್ರೋತ್ಸಾಹ/ನೆರವು/ಮಾರ್ಗದರ್ಶನ
 • ಗುಣಮಟ್ಟದ ಶಿಕ್ಷಣ
 • ಸ್ಫರ್ಧಾತ್ಮಕ ಪರಿಸರ
 • ಕೀಳು ಮಟ್ಟದ ಪರಿಸರ/ ಅನರ್ಹ ಶಿಕ್ಷಕರು
 • ಪ್ರತಿಭೆಯ ಕಡೆಗಣನೆ
 • ಪ್ರೋತ್ಸಾಹ/ಮಾರ್ಗದರ್ಶನದ ಅಭಾವ
 • ಸಂಪನ್ಮೂಲಗಳ ಕೊರತೆ
 • ಅಪೂರ್ಣ ಶಿಕ್ಷಣ
 • ಪ್ರತಿಭೆಯ ನಾಶನ
 • ಸವಾಲು-ಸೋಲುಗಳ ಕೌಟುಂಬಿಕ ವಿಷವೃತ್ತ ಸುಳಿ
ಯಶಸ್ಸಿನ  ವ್ಯಾಪಕ ಪ್ರಚಾರ ಯಶಸ್ಸಿನ ಆವರಣ/ಅಪಯಶಸ್ಸಿನ ಅನಾವರಣ
ಆಂಗ್ಲ ಮಾಧ್ಯಮದ ಜೊತೆಗೆ ಯಶಸ್ಸಿನ  ಕೃತಕ ಜೋಡಣೆ

ರಾಜಕಾರಿಣಿಗಳು-ಖಾಸಗೀ ವಲಯದ ಕುಮ್ಮಕ್ಕು

ಕನ್ನಡ ಶಾಲೆಗಳನ್ನು ಮುಚ್ಚಿಸಲು ವ್ಯವಸ್ಥಿತ ಸಂಚು

ಕನ್ನಡ ಮಾಧ್ಯಮದ ಜೊತೆಗೆ ಅಪಯಶಸ್ಸಿನ ಮಿಥ್ಯಾರೋಪ

ಸರಕಾರಗಳ ನಿರ್ಲಕ್ಷ್ಯ

ದೂರದೃಷ್ಟಿಯ ಕೊರತೆ

ಅಬದ್ಧತೆ

ಆಂಗ್ಲ ಮಾಧ್ಯಮಕ್ಕೆ ಮಣೆ ಕನ್ನಡ ಮಾಧ್ಯಮಕ್ಕೆ ಬೆಣೆ (ಕಡೆಗಣನೆ)

ಜಾಗತೀಕರಣ ಹಾಗೂ ಕನ್ನಡದ ಅವಗಣನೆ:

 

ನುಡಿ ಪಯಣ ( ಜನನದಿಂದ ಮರಣದ ವರೆಗೆ).

ಮೊದಲು ಹೇಳಿದಂತೆ ಅಕ್ಷರಗಳಿಂದಾದ ಕನ್ನಡ ಭಾಷೆಗೆ ಕ್ಷರವಾಗದೆ ಉಳಿಯುವ ಸಾಮರ್ಥ್ಯ, ಚೈತನ್ಯ, ಜೀವಂತಿಕೆ ಎಲ್ಲವೂ ಇವೆ ಆದರೆ ಭಾಷೆ ಬಳಕೆಯಲ್ಲಿದ್ದಾಗ ಮಾತ್ರ ಇದು ಸತ್ಯ ಸಾಧ್ಯ. ಇಲ್ಲವಾದಲ್ಲಿ ಭಾಷೆಯು ಮರಣಹೊಂದುತ್ತದೆ.

ಹಾಗಾದರೆ ಈ ಭಾಷೆಯನ್ನು ಕೊಲ್ಲುವವರು ಯಾರು?

ಎಂದರೆ ಉತ್ತರ ಸ್ಪಷ್ಟ– ಭಾಷೆಯ ಜನರೇ ಅದನ್ನು ಕೊಲ್ಲುವುದು. ತಾಯಿಯನ್ನು ತೊರೆದ ಮಕ್ಕಳ ರೀತಿಯಲ್ಲಿ. ಇದಕ್ಕೆ ಬೇರೆ ಭಾಷೆ, ಸಂಸ್ಕೃತಿ, ಆಕ್ರಮಣ ಇತ್ಯಾದಿಗಳು ನೆಪ ಮಾತ್ರ. ಮೂಲ ದೋಷ ಕನ್ನಡವನ್ನಾಡುವ ಜನರಲ್ಲೇ ಇರಲು ಬೇರಯವರನ್ನು ದೂಷಿಸುವ ದುಸ್ಸಾಹಸವೇಕೆ?

ಹರ ಕೊಲ್ಲಲ್ ಪರ ಕಾಯ್ವನೇ???

ಕನ್ನಡ ಭಾಷೆ ಸಧೃಢ-ಸಮೃದ್ಧ-ಸ್ವಸ್ಥ ವಾಗಿರಬೇಕಾದರೆ ಅದನ್ನು ನುಡಿಯಬಲ್ಲ, ಬಳಸಬಲ್ಲ, ಆದರಿಸಿ ಪೋಷಿಸಬಲ್ಲ ಯುವ ಪೀಳಿಗೆ ಇರುವುದು ಅತಿ ಮುಖ್ಯ ಅಂಶ. ಇಂದು ನಾವುಗಳು ಎಡವುತ್ತಿರುವುದು ಈ ವಿಷಯದಲ್ಲೇ. ನಮ್ಮ ಮಕ್ಕಳು, ಯುವಜನತೆಯಲ್ಲಿ ಅಭಿಮಾನ ಮೂಡಿಸಿ ಪ್ರಚೊದಿಸುವಲ್ಲಿ ಸೋಲುತ್ತಿದ್ದೇವೆ. ಭಾಷಾ ಮಾಧ್ಯಮ ಕುರಿತ ತೀರ್ಪು ಇದೇ ಕಾರಣಕ್ಕೆ ಮಹತ್ವ ಪಡೆದುಕೊಳ್ಳುತ್ತದೆ. ಹೀಗೆ ಯುವ ಪೀಳಿಗೆಯಿಂದ ಕಡೆಗಣಿಸಲ್ಪಟ್ಟ ಭಾಷೆಯಾಗಿ ಕನ್ನಡ ಹೇಗೆ ಮರಣದೆಡೆಗೆ ಸಾಗುತ್ತದೆಂಬುದನ್ನು ಈಗ ವಿವೇಚಿಸೋಣ.

 

ಧನಾತ್ಮಕ ಹಂತಗಳು ( ಊರ್ಧ್ವಮುಖ ಬೆಳವಣಿಗೆಗಳು)

 • ಮೂಲದಲ್ಲಿ ಮಾತಾ-ಪಿತ-ಮಕ್ಕಳ ಸಂವಹನ
 • ಭಾಷೆಯ ಜನನ- ಪಾಲನ
 • ಭಾಷೆಯ ವಿಕಾಸ-ಬೆಳವಣಿಗೆ

ಮ್ಯಾಸ್ಲೋ ನ ಅವಶ್ಯಕತೆಗಳ ಶ್ರೇಣಿಯ ಆಧಾರದ ಮೇಲೆ ಭಾಷೆಯ ಬೆಳವಣಿಗೆ ಮತ್ತು ವಿಕಾಸವನ್ನು ಆಗಲೆ ವಿವರಿಸಿದ್ದಾಗಿದೆ.

ಭಾಷಾ ಸ್ಥಿತ್ಯಂತರದ ಹಂತಗಳು

 • ಎರಡನೇ ಭಾಷೆಯ ಆಗಮನ  (ಕನ್ನಡ ಮತ್ತು ಇಂಗ್ಲೀಷ್)
 • ಇಂಗ್ಲೀಷಿಗೆ ವ್ಯಾಮೋಹ ಮತ್ತು ಅತ್ಯಾದರ

ಮುಂಚಿನ ಸಾಲುಗಳಲ್ಲಿ ಇಂಗ್ಲೀಷು, ಕನ್ನಡವನ್ನುಕಡೆಗಣಿಸಲು ಹೇಗೆ ಸಹಕಾರಿಯಾಗುತ್ತದೆಂಬುದನ್ನು  ವಿವರಿಸಲಾಗಿದೆ.

ಋಣಾತ್ಮಕ  ಹಂತಗಳು (ಅಧೋಮುಖ ಬೆಳವಣಿಗೆಗಳು)

ದ್ವಿಭಾಷಾ ಪದ್ಧತಿ ಸ್ವೀಕರಿಸಿ ಸ್ಥಿತ್ಯಂತರದ ಹಂತಗಳನ್ನು ಮುಟ್ಟಿದರೆ ಮತ್ತು ಪರಿಸರವನ್ನು  ಎಚ್ಚರಿಕೆಯಿಂದ ನಿಭಾಯಿಸದೇ ಇದ್ದ ಪಕ್ಷದಲ್ಲಿ ಇಂಗ್ಲೀಷ್ ಭಾಷೆಯು ಕನ್ನಡದ ನುಡಿಮರಣದ ವೇದಿಕೆಯನ್ನು (ಶವ ಪೆಟ್ಟಿಗೆ) ಸಿದ್ಧಗೊಳಿಸುತ್ತದೆ. ಕನ್ನಡದ ಪದಗಳಿಗೆ ಬದಲಾಗಿ ನಾವು ಬಳಸುವ ಭಾಷೆಯಲ್ಲಿ ಸೇರುವ ಪ್ರತಿಯೊಂದು ಕನ್ನಡದ್ದಲ್ಲದ (ಇಂಗ್ಲೀಷಿನ) ಪದಗಳೂ ಈ ಶವ ಪಟ್ಟಿಗೆಗೆ ಹೊಡೆಯುವ ಮೊಳೆಗಳೇ ಸರಿ. ಈ ಪ್ರಕ್ರಿಯೆ ಸುಪ್ತವಾಗಿ ಆರಂಭವಾಗಿ ಗುಪ್ತವಾಗಿ ಹರಡುವುದರಿಂದ ಜನಮಾನಸದ ಅರಿವಿಗೆ ಬರದಂತೆ ಒಂದು ಭಾಷೆ(ಇಂಗ್ಲೀಷ್)  ಇನ್ನೊಂದು ಭಾಷೆಯನ್ನು (ಕನ್ನಡವನ್ನು) ತಿಂದು ಹಾಕತೊಡಗುತ್ತದೆ. ಇದು ಅರಿವಾಗುವ ವೇಳೆಗೆ ಬಹಳ ಸಂದರ್ಭಗಳಲ್ಲಿ ಕಾಲ ಮಿಂಚಿಹೋಗಿರುತ್ತದೆ. ಭಾಷೆಯ ಮರಣ ಏಕಾಏಕಿ ಆಗುವುದಿಲ್ಲ. ಸೂಕ್ಷ್ಮವಾಗಿ ಗಮನಿಸಿದಾಗ ಈ ನುಡಿಮರಣದ ಪ್ರಕ್ರಿಯೆಯಲ್ಲಿ ಹಲವು ಹಂತಗಳನ್ನು ಗುರುತಿಸಬಹುದು.

 • ಭಾಷಾ ವಿಕಾಸ ಸ್ಥಂಭನ
 • ಭಾಷಾ ಸ್ಥಂಭನ
 • ನುಡಿ ತಲ್ಲಣ/ನುಡಿ ಕಂಪನ
 • ನುಡಿ ಪಲ್ಲಟ
 • ನುಡಿ ಕ್ಷೀಣತೆ ( ಭಾಷಾ ಸವಕಳಿ)
 • ನುಡಿ ಹೀನತೆ
 • ನುಡಿ ಮರಣ

 

ಪ್ರತಿಯೊಂದು ಹಂತವನ್ನೂ ಈಗ ವಿಶ್ಲೇಷಿಸೋಣ:

 • ಭಾಷಾ ವಿಕಾಸ ಸ್ಥಂಭನ

ಕನ್ನಡದಲ್ಲಿ ಮಾತನಾಡುವ/ಓದುವ ಪ್ರಜೆಗಳ ಸಂಖ್ಯೆ ಕ್ಷೀಣಿಸುತ್ತಿದ್ದಂತೆ ಹೊಸ ಹೊಸ ಬದಲಾವಣೆಗೆ ತೆರೆದುಕೊಳ್ಳುವ, ಅದನ್ನು ನಮ್ಮ ಭಾಷೆಯಲ್ಲಿ ಓದಿ ತಿಳಿಯುವವರು ಕಡಿಮೆಯಾಗುತ್ತದೆ. ಹೀಗಾಗಿ ಈ ಬೆಳವಣಿಗೆಗಗಳನ್ನು ತಿಳಿಸಬಲ್ಲ ಪಠ್ಯಗಳು, ಪುಸ್ತಕಗಳು, ಲೇಖನಗಳು, ಪಾರಿಭಾಷಿಕ ಪದಗಳು, ತರಬೇತಿ ಕಾರ್ಯಾಗಾರಗಳು ಎಲ್ಲವೂ ಇಂಗ್ಲೀಷಿನಲ್ಲೇ ನಡೆಯುವ ಕಾರಣ ಭಾಷೆಯ ವಿಕಾಸ ನಿಂತು ಹೋಗುತ್ತದೆ. ತನ್ನ ಪರಿಮಿತಿಗಳನ್ನು ವಿಸ್ತರಿಸಿಕೊಳ್ಳದ ಭಾಷೆ ಮನುಷ್ಯನ ಮೂಲಭೂತ ಅವಶ್ಯಕತೆಗಳನ್ನು ಬೇಕೆಂದವರಿಗೂ ದೊರಕಿಸಿ ಕೊಡುವಲ್ಲಿ ವಿಫಲವಾಗುವುದರಿಂದ ಕನ್ನಡ ಭಾಷಿಕರೂ ಇಂಗ್ಲೀಷಿನ ಮೊರೆ ಹೋಗುವ ಅನಿವಾಯರ್ಯತೆ ಮೂಡುತ್ತದೆ. ಭಾಷೆಯ ವಿಸ್ತಾರ ಇಲ್ಲದಾಗಿ ನಿಂತ ನೀರಾಗುತ್ತದೆ.

 • ಭಾಷಾ ಸ್ಥಂಭನ:

ಈ ಹಂತದಲ್ಲಿರುವ ಕನ್ನಡ ಭಾಷೆ ಬೆಳೆಯದೆ ನಿಂತು ಬಿಡುತ್ತದೆ. ಹೊಸ ಸಾಹಿತ್ಯ/ಸಂಗೀತ , ಪ್ರಯೋಗಗಳು ಅಗದೆ ಇರುವ ಚರ್ವಿತ ಚರ್ವಣವನ್ನೇ ಭಾಷಿಕರಿಗೆ ಬಡಿಸಲಾಗುತ್ತದೆ. ಹೊಸತನ್ನು, ಬದಲಾವಣೆಯನ್ನು ಬಯಸುವ ಮನಸ್ಸು ಹೀಗೆ ಹಳಸಿದ ಭಾಷಾ ಸರಕಿನಿಂದ ದೂರ ಸರಿಯಲ್ಲರಂಭಿಸುತ್ತದೆ. ಮೊದಲೇ ಪಾಂಡಿತ್ಯ ಇಲ್ಲದ ಪ್ರತಿಭೆಗಳು ಈಗ ಪೋಷಣೆಯೂ ಇಲ್ಲದೆ ಸೊರಗುವುದರಿಂದ, ಆರ್ಥಿಕವಾಗಿಯೂ ಲಾಭವಿಲ್ಲದ್ದರಿಂದ ಸೃಷ್ಟಿಪ್ರಕ್ರಿಯೆಯಿಂದ ಹಿಂದೆ ಸರಿದು ಅಳಿಯದೆ ಉಳಿದ ಹಳೆಯ ಸರಕುಗಳಷ್ಟೇ ಭಾಷೆಯ ಆಸ್ತಿಯಾಗಿರುವ ಪರಿಸ್ಥಿತಿ ನಿರ್ಮಾಣವಾಗುವುದು ಈ ಹಂತದ ಲಕ್ಷಣ.

 • ನುಡಿ ತಲ್ಲಣ/ನುಡಿ ಕಂಪನ

ಈ ಪರಿಸ್ಥಿತಿಯು ಮೊದಲ ಎರಡು ಹಂತಗಳ ನಂತರವೇ ಅಗಬೇಕೆಂದಿಲ್ಲ. ಇಂಗ್ಲೀಷ್ ಭಾಷೆಯು ಕನ್ನಡದ ಮೇಲೆ ನಡೆಸುವ ಅಕ್ರಮಣದಿಂದ ಮೊದಲು ಕನ್ನಡ ನುಡಿ ಕಂಪನ ಅಥವಾ ತಲ್ಲಣ ನಡೆದು ನಂತರ ಭಾಷೆಯ ಸ್ಥಂಭನವೂ ಅಗಬಹುದು. ಕನ್ನಡದ ಈಗಿನ ಪರಿಸ್ಥಿತಿಯನ್ನು ನುಡಿಕಂಪನ ಪ್ರತಿನಿಧಿಸುತ್ತಿದೆ. ಅತಿಯಾದ ಇಂಗ್ಲೀಷ್ ವ್ಯಾಮೋಹ, ಕನ್ನಡದಲ್ಲಿ ಕಲಿತರೆ ಉಳಿಗಾಲವೇ ಇಲ್ಲವೇನೋ ಎಂಬ ಆತಂಕ, ಅಜ್ಞಾನ ಭಾಷೆಯನ್ನು ಅಲುಗಾಡಿಸುತ್ತಿರುವುದು ಮುಂದೆ ಭಾಷೆಯು ಕಾಲ ಪ್ರವಾಹದಲ್ಲಿ ಕೊಚ್ಚಿ ಹೋಗಬಹುದಾದುದರ ಮುನ್ಸೂಚನೆಯಂತಿರುತ್ತದೆ. ಕನ್ನಡ ಭಾಷೆಯನ್ನು ಹಿಡಿದೆತ್ತಿ ನಿಲ್ಲಿಸಿ ಭದ್ರ ನೆಲೆ ನೀಡಿ ವೈಭವವನ್ನು ಪುನರ್ಸ್ಥಾಪಿಸಲು ಇದು ಸೂಕ್ತ ಕಾಲ. ಈ ಹಂತವನ್ನು ದಾಟಿದ ಭಾಷೆ ಮರಳಿ ತನ್ನ ಮೂಲ ಸ್ವರೂಪದಲ್ಲಿ ಸ್ವತಂತ್ರವಾಗಿ ಇರಲಾರದು.

 • ನುಡಿ ಪಲ್ಲಟ

ಮೇಲಿನ ಮೂರೂ ಹಂತಗಳು ದಾಟಿ ಅಧೋಗತಿಯಲ್ಲಿ ಸಾಗುತ್ತಿರುವ ಭಾಷೆ ತನ್ನ ಎದುರಾಳಿ ಭಾಷೆಗೆ ಸೋಲೊಪ್ಪಿಕೊಂಡಾಗಿನ ಪರಿಸ್ಥಿತಿ ನುಡಿ ಪಲ್ಲಟ. ಕನ್ನಡವು ಈ ಹಂತವನ್ನು ಪ್ರವೇಶಿಸುತ್ತಿರುವುದು ಆತಂಕಕಾರೀ ಬೆಳವಣಿಗೆ.

ಈ ಹಂತದಲ್ಲಿ ಕನ್ನಡವು ಭಾಷಿಕರ ದೈನಂದಿನ ಜೀವನದಲ್ಲಿ ಯಾವುದೇ ಸಂವೇದನೆಯನ್ನೂ, ಸಾಂಸ್ಕೃತಿಕ, ಭಾವನಾತ್ಮಕ ತರಂಗಗಳನ್ನೂ ಎಬ್ಬಿಸುವಲ್ಲಿ ಸೋತಿರುತ್ತದೆ. ಕನ್ನಡ ಇರುವಿಕೆಗೆ ನಮ್ಮ ಕಣ್ಣುಗಳು ಕುರುಡಾಗಿರುತ್ತದೆ. ಇಂದಿನ ನಮ್ಮ ಜನಾಂಗ ಸಂಸ್ಕೃತದ ಬಗೆಗೋ , ಬುದ್ಧನ ಪಾಳೀ ಭಾಷೆಯ ಬಗೆಗೋ,ನಮ್ಮದಲ್ಲದ ಬೇರೆ ಯಾವುದೋ ಭಾಷೆಯ ಕುರಿತು ಈಗಿನ ದಿವ್ಯ ನಿರ್ಲಕ್ಷ್ಯಕ್ಕೆ ಆಗ ಕನ್ನಡ ತುತ್ತಾಗಿರುತ್ತದೆ.  ಈ ನಿರ್ಭಾವುಕ ನಿಲುವು ಕನ್ನಡದ ಬಗೆಗೆ ಬೆಳೆದಾಗ ,ಕನ್ನಡವೆಂಬುದೊಂದು ಇದೆ ಆದರೆ, ನಮಗೆ ಅದರ ಗೊಡವೆ ಬೇಡ, ಇಂಗ್ಲೀಷೇ ಸಾಕು ಎನ್ನುವ ಧೋರಣೆ ಸರ್ವಾಂತರ್ಯಾಮಿಯಾಗಿರುವುದು ಈ ಸ್ಥಿತಿಯಲ್ಲಿರುವ ಜನಗಳ ಲಕ್ಷಣ. ನಗರ ಪ್ರದೇಶಗಳಲ್ಲಿ ಈ ಪ್ರವೃತ್ತಿಯನ್ನು ಜನಗಳಲ್ಲಿ ಇಂದು ಕಾಣುತ್ತಿದ್ದೇವೆ.

 • ನುಡಿ ಕ್ಷೀಣತೆ

ಇಲ್ಲಿ ಭಾಷೆಯನ್ನು ಬಳಸುವವರ, ಬಳಸಿದವರ ನುಡಿಯಲ್ಲೂ ಕನ್ನಡದ ಪದಗಳ ವ್ಯಾಪ್ತಿ ಮತ್ತು ಸಂಖ್ಯೆ ತೀವ್ರವಾಗಿ ಕುಸಿದಿದ್ದು ಕೆಲವೇ ಸೀಮಿತ ಪದಗಳ ಬಳಕೆ ಆಗುತ್ತಿರುತ್ತದೆ. ಕನ್ನಡ ಭಾಷೆಯ ಆರೋಗ್ಯ ಗಂಭೀರ ಪರಿಸ್ಥಿತಿ ತಲುಪಿದ್ದ್ದು ಈ ಹಂತದಿಂದ ಭಾಷೆಯನ್ನು ಪುನರುತ್ಥಾನ ಗೊಳಿಸುವುದು ಅಸಾಧ್ಯ.

ಲಿಪಿಯ ಬಳಕೆ ಬಹುತೇಕ ಇಲ್ಲವಾಗಿರುತ್ತದೆ.

 • ನುಡಿ ಹೀನತೆ

ನಡೆ,ನುಡಿ, ಆಡಳಿತ, ವ್ಯವಹಾರ,ವಿದ್ಯಾಭ್ಯಾಸ,ಮನೆ ಮನಗಳಲ್ಲಿ  ಕನ್ನಡ ಭಾಷೆ ಅಳಿಸಿ ನಶಿಸಿ ಹೋಗಿರುತ್ತದೆ. ಆದರೂ ಯಾವುದೋ ಊರಿನಲ್ಲಿ, ಮೂಲೆಯಲ್ಲಿ ಬೆರಳೆಣಿಕೆಯಷ್ಟು ಜನ ಇನ್ನೂ ಮಾತನಾಡುತ್ತಿರಬಹುದೆಂದು ಎಣಿಸಿದರೂ, ಒಂದು ಪ್ರಾಂತ್ಯದ ಮೊದಲ ಭಾಷೆಯಾಗಿದ್ದ ಕನ್ನಡವು ಇಂದು ಜನಜೀವನದಿಂದ ಮರೆಯಾಗಿ ಹೋಗಿರುವ ಸಂದರ್ಭ. ಮರಣಶಯ್ಯೆಯಲ್ಲಿ ತನ್ನ ದಿನಗಳನ್ನು ದೂಡುತ್ತಿರುವ ರೋಗಿಯ ಪರಿಸ್ಥಿತಿಯಲ್ಲಿ ಕನ್ನಡ ಇರುವಂಥ ಪರಿಸ್ಥಿತಿ ಇದು. ಇಂತಹ ಹಂತದಲ್ಲಿ ಲಿಪಿಯ ಬಳಕೆ ಆದಾಗಲೇ ನಿಂತುಹೋಗಿರುತ್ತದೆ.

 • ನುಡಿ ಮರಣ

ಭಾಷೆಯನ್ನು ಬಳಸಬಲ್ಲ ಕೊನೆಯ ವ್ಯಕ್ತಿ ಮರಣ ಹೊಂದಿ ಕನ್ನಡವನ್ನು ಮಾತನಾಡುವವರೇ ಪ್ರಪಂಚದಲಿ ಇಲ್ಲವೆಂದು ಅಧಿಕೃತವಾಗಿ ಘೋಷಿಸಪಲ್ಪಟ್ಟಾಗ ಭಾಷೆ ಮರಣಹೊಂದಿದೆ ಎಂದು ದಾಖಲಾಗುತ್ತದೆ. ಇದು ಕೇವಲ ಅಂಕಿ ಅಂಶಗಳ ಸಲುವಾಗಿ, ದಾಖಲುಗೊಳಿಸುವ ಪ್ರಕ್ರಿಯೆ ಅಷ್ಟೆ. ವಾಸ್ತವಿಕವಾಗಿ ನುಡಿ ಪಲ್ಲಟವಾದಾಗಲೇ ಅಥವಾ ನುಡಿ ಕ್ಷೀಣತೆ ಪ್ರಾರಂಭವಾದಾಗಲೇ ನುಡಿಮರಣ ಸಂಭವಿಸಿರುತ್ತದೆ ಏಕೆಂದರೆ ಭಾಷೆಯನ್ನು ಪುನರ್ಜೀವನಗೊಳಿಸಲಾರದಷ್ಟು ಅದು ಅವನತಿ ಹೊಂದಿರುತ್ತದೆ; ಆದರೆ ಡಾಕ್ಟರು ಹಾಗೆ ಪ್ರಕಟಪಡಿಸಿರುವುದಿಲ್ಲ ಅಷ್ಟೆ!

ಅದರ ಜೊತೆಯಲ್ಲಿ ಸಾವಿರಾರು ವರ್ಷಗಳಿಂದ ಬೆಳೆದುಬಂದ ಸಾಹಿತ್ಯ, ಸಂಗೀತ, ಗಾದೆಗಳು, ನುಡಿಗಟ್ಟುಗಳು, ಜೀವನಧರ್ಮಗಳು,ಜೀವನರೀತಿ,ಬುದ್ಧಿವಂತಿಕೆ, ಒಗಟುಗಳು, ಕಥೆ ಕಾವ್ಯಗಳು, ಪುರಾಣ, ಆದರ್ಶಗಳು, ಸ್ವಂತಿಕೆ,ಇತಿಹಾಸ, ಧರ್ಮ, ಸಮಾನ ಮನೋರೀತಿ ಎಲ್ಲವೂ ಜಗದ ತೆರೆಯಿಂದ ಮರೆಗೆ ಸರಿದು  ಸಮಾಧಿ ಸೇರಿ ಪೀಳಿಗೆಗಳ ಪಾಲಿಗೆ ಇಲ್ಲವಾಗುತ್ತವೆ.

ನುಡಿಮರಣ- ಒಂದು ಪ್ರಾಪಂಚಿಕ(ಜಾಗತಿಕ) ವಿದ್ಯಮಾನ:

ಪ್ರಧಾನವಾಗಿ ಕನ್ನಡವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಾನು ಬರೆಯುತ್ತಿರುವುದಾದರೂ ಕನ್ನಡ ಭಾಷೆ ಮಾತ್ರವೇ ಇಂದು ಈ ಅಳಿವಿನ ಸಮಸ್ಯೆ ಎದುರಿಸುತ್ತಿದೆ ಎಂದು ತಿಳಿಯಬೆಕಾಗಿಲ್ಲ. ಇದೊಂದು ಜಾಗತಿಕ ವಿದ್ಯಮಾನ.

ಇಂದು ಅಳಿವನ್ನು ಎದುರಿಸುತ್ತಿರುವ ಭಾಷೆಗಳು ಒಂದೆರೆಡಲ್ಲ- ನೂರಾರು-ಸಾವಿರಾರು. ಕಳೆದ ಶತಮಾನದ ಆರಂಭದಲ್ಲಿ ಒಟ್ಟು ಹನ್ನೆರೆಡು ಸಾವಿರ ಭಾಷೆಗಳಿದ್ದುವೆಂದು ಅಂದಾಜಿಸಿದ್ದು, ಇಂದು ಕೇವಲ ೬೦೦೦ ಕ್ಕೂ ಕಡಿಮೆ ಭಾಷೆಗಳು ಬಳಕೆಯಲ್ಲಿವೆ ಅವುಗಳಲ್ಲಿ ೩೦೦೦ ಭಾಷೆಗಳು ತೀವ್ರ ಸಂಕಟ ಅನುಭವಿಸುತ್ತಿದ್ದು ಅಳಿವಿನಂಚಿನಲ್ಲಿವೆ. ಎಲ್ಲಾ ಭಾಷೆಗಳಿಗೆ ತಮ್ಮದೇ ಲಿಪಿ ಇಲ್ಲ. ಕೇವಲ ೩೫೦ ಭಾಷೆಗಳಿಗೆ ಮಾತ್ರ ತಮ್ಮದೇ ಲಿಪಿ ಇದೆ. ಲಿಪಿ ಇರುವ ಭಾಷೆಗಳು ಅಳಿವಿನಿಂದ ಸ್ವಲ್ಪ ಸುರಕ್ಷಿತವಾಗಿದ್ದರೂ ಪೂರ್ಣ ರಕ್ಷಣೆ ಇಲ್ಲ.

 • ಕೇವಲ ೬% ಭಾಷೆಗಳನ್ನು ೯೪% ಜನ ಮಾತಾಡ್ತಾರೆ
 • ೯೪% ಭಾಷೆಗಳನ್ನು ಬರೀ ೬% ಜನ ಮಾತಾಡ್ತಾರೆ
 • ಪ್ರಪಂಚದಲ್ಲಿ ಅತಿ ಹೆಚ್ಚು ಜನ ಮಾತನಾಡುವ ಭಾಷೆಗಳು
 • ಮ್ಯಾಂಡರಿನ್ ೮೪೫ ಮಿಲ್ಲಿಯನ್
 • ಸ್ಪಾನಿಷ್ ೩೨೯ ಮಿಲ್ಲಿಯನ್
 • ಇಂಗ್ಲೀಷ್ ೩೨೮ ಮಿಲ್ಲಿಯನ್
 • ೧೩೩ ಭಾಷೆಗಳನ್ನು ಕೇವಲ ಹತ್ತು ಅಥವ ಅದಕ್ಕಿಂತ ಕಡಿಮೆ ಜನ
 • ಮಾತಾಡ್ತಾರೆ.
 • ಪ್ರತಿ ಹದಿನೈದು ದಿನಕ್ಕೆ ಒಂದು ಭಾಷೆ ಸಾಯುತ್ತಿದೆ!!!! (ಆಘಾತಕರ ಸತ್ಯ)
 • ಕನ್ನಡವನ್ನು ಮಾತನಾಡುವವರು ಕೂಡಾ ಇಂದು ಸಂಖ್ಯಯಲ್ಲಿ ಕ್ಷೀಣಿಸುತ್ತಿದ್ದಾರೆ

ತಮ್ಮ ಪರಂಪರೆಯನ್ನು ಕಾಯ್ದುಕೊಂಡು ಬಂದಿರದ ಯಾವುದೇ ಕುಟುಂಬ ವ್ಯವಸ್ಥೆಯಲ್ಲಿ ಎರಡನೇ ಪೀಳಿಗೆಯಿಂದಾಚೆಗೆ ಸಾಫಲ್ಯ ಹಾಗೂ ಯಶಸ್ಸಿನ ಪ್ರಮಾನ ಗಣನೀಯವಾಗಿ ಕುಸಿಯುವುದೆಂದು ಜಗದಾದ್ಯಂತ ನಡೆದ ಸಂಶೋಧನೆಗಳಿಂದ ತಿಳಿದಿದೆ. ಹಾಗಾಗಿ, ನಮ್ಮ ಮುಂದಿನ ಸ್ವಂತದ ಪೀಳಿಗೆಗಳು ಯಶಸ್ಸನ್ನು ಕಾಣಬೇಕೆಂಬ ಸ್ವಾರ್ಥಪರ ಉದ್ದೇಶದಿಂದಲಾದರೂ ಭಾಷೆಯನ್ನು ಉಳಿಸಿ ಬೆಳೆಸುವ ಹಾಗೂ ಅದರ ಮೂಲಕ ನಮ್ಮ ಪರಂಪರೆ, ಪುರಾಣೇತಿಹಾಸಗಳ ಪರಿಚಯ ಮಾಡಿಕೊಡುವ ಗುರುತರ ಹೊಣೆ ನಮ್ಮದಾಗಿದೆ.

ಹೇಗೆ ಅದನ್ನು ಕಾರ್ಯ ರೂಪಕ್ಕೆ ತರಬಹುದೆಂದು ಯೋಚಿಸೋಣ:

 

ಹೊಸಚಿಗುರಿಗೆ ಹಳೆ ಬೇರು ಕೂಡಿದರೆ ಮರ ಸೊಗಸು

ಪಂಪರೆಯ ಮರೆತು ನಡೆಯೆ ನನಸಾಗದು ಕನಸು

ಕನ್ನಡವನೆ ನುಡಿಯಿರಿ ಬಳಸಿ ಅದರ ಪದಸಿರಿ

ಬೆರಕೆ ಇರದ ಭಾಷೆ ಬಳಸಿ ಪರಂಪರೆಯ ಉಳಿಸಿರಿ

 

ಮಾಸಕೊಮ್ಮೆ ದೊರೆವ ಹಣವೆ ಆಂಗ್ಲ ಭಾಷೆ ಪ್ರಕೃತಿ

ಜೀವವಿಮೆಯ ಶ್ರೀ ರಕ್ಷೆಯು ಕನ್ನಡದ ಸುಸಂಸ್ಕೃತಿ

 

ಸರ್ವ ಶಕ್ತ ನಮ್ಮ ಭಾಷೆ ನಮಗೆ ಇರಲಿ ಗರ್ವವು

ಕನ್ನಡವನೆ ಬಳಸಿ ಗೆಲ್ಲು ಉದಯಿಸಲಿ ಹೊಸ ಪರ್ವವು.

 

ಕನ್ನಡವನ್ನು ಉಳಿಸಿ ಬೆಳೆಸುವ

ಮಾರ್ಗೋಪಾಯಗಳು.

ಮೇಲೆ ನಾವು ಚರ್ಚಿಸಿದ ಎಲ್ಲಾ ಅಂಶಗಳನ್ನು ಕಾರ್ಯರೂಪಕ್ಕೆ ತಂದು ಪ್ರಯೋಜನ ಒದಗಿಸದಿದ್ದರೆ ಆ ಎಲ್ಲ ಮಾಹಿತಿ ಹಾಗೂ ಜ್ಞಾನಸಂಪಾದನೆ ಅರ್ಥಿಹೀನವೆನಿಸುತ್ತದೆ.

‘’ಸಾವಿರ ಪುಸ್ತಕಗಳ ಜ್ಞಾನಕ್ಕಿಂತಲೂ ಕೃತಿಗಿಳಿದ ಒಂದು ಅಲೋಚನೆಯೇ ಮೇಲು’’ ಎಂದು ಬಲ್ಲವರು ಹೇಳಿರುತ್ತಾರೆ. ಅದರಂತೆ ನಾವೀಗ ನಮ್ಮ ಮುಂದಿರುವ ಸಮಸ್ಯೆಗೆ ಪರಿಹಾರವನ್ನು ಹುಡುಕುವ.

ಲೇಖನದ ಮೊದಲಲ್ಲಿ ಕವಿತಾ ಸಂಭಾಷಣೆಯ ಮುಂದುವರಿದ ಭಾಗ ( ಪರಿಹಾರ)

ಕನ್ನಡಿಗ:  

ಹೆತ್ತ ತಾಯಿಯ ಋಣವ ತೀರಿಸದ ನಾನು

ಎಲ್ಲ ಭೋಗವ ಪಡೆದು ಬದುಕಿದ್ದರೇನು

  ಹಸಿವ ಕಳೆಯುವುದೆಂತು ಹೇಳು ನೀ ನನಗೆ

ಮೂ ಲೋಕ ನಾ ಸುತ್ತಿ ತರುವೆ ಪದದಡಿಗೆ

ಭುವನೇಶ್ವರಿ:

ಅಕ್ಷರದ ಕಣಜದಿಂ ಪದಗಳಕ್ಕಿಯನಳೆದು

ಕಲಬೆರಕೆ ಕಲ್ಲುಗಳನದರಿಂದ ಕಳೆದು

ವ್ಯಾಕರಣದುದಕದಿಂ ಅಕ್ಕಿಯನೆ ತೊಳೆದು

ಬೇಯಿಸಲು ಅದು ನನ್ನ ಹಸಿವ ಕಳೆಯುವುದು

 

ಹೃದಯದಾ ಪಾತ್ರೆಯಲಿ ಅಕ್ಕಿಯನು ಇಟ್ಟು

ನಿನ್ನೆದೆಯ ಕುಲುಮೆಗೆ ಬೆಂಕಿಯನು ಒಟ್ಟು

ನಿನ್ನುಸಿರ ಬಿಸಿಗಾಳಿ ಊದುತಲಿ ನಿರತ

ನೀಡುವೆಯ ನೀ ಎನಗೆ ಭಿಕ್ಷೆ ಅನವರತ

ಕನ್ನಡಿಗ:

ನಿನ್ನ ಮಣ್ಣಿನ ಋಣವು ನನ್ನ ಮೇಲಿರಲು

ನಿನ್ನ ಅನ್ನವನುಂಡು ನಾನು ಬೆಳೆದಿರಲು

ಭಿಕ್ಷೆಯನು ನೀಡೆಂದು ಬೇಡದಿರು ತಾಯೆ

ನನ್ನ  ಸೇವೆಯನುಂಡು ಪ್ರೇಮದಲಿ ಪೊರೆಯೆ

 

ದೀಕ್ಷೆಯಾ ಕುಲುಮೆಗೆ ಸಂಕಲ್ಪದಿಟ್ಟಿಗೆ

ಉರಿವ ಬೆಂಕಿಗೆ ನನ್ನ ಕೈಗಳೇ ಕಟ್ಟಿಗೆ

ಬೇಯಿಸುವೆ ಅನ್ನವನು ನಾನಿನ್ನ ಹೊಟ್ಟೆಗೆ

ಮನೆಗೆ ಬರುವೆಯ  ತಾಯಿ ನೀ ಎನ್ನ ಒಟ್ಟಿಗೆ

 

ನಾನಿನ್ನ ಮಗನಾಗಿ ಬದುಕಿರುವ ವರೆಗೂ

ಪರದೇಶಿ ನೀನಲ್ಲ ಬಿಡು ನಿನ್ನ ಕೊರಗು

ದುಡಿಯುತಲಿ ಮರಳಿಸುವೆ ನಿನಗೆ ವೈಭವವ

ಭುವನೇಶ್ವರಿ ನೀ ಆಳು ಮತ್ತೆ ಈ ಜಗವ.

ಎಲ್ಲರೂ ಸಂಕಲ್ಪವನ್ನು ತೊಟ್ಟು ಧನ್ಯತೆಯನ್ನು ಕಾಣುವ ಹಂಬಲದೊಂದಿಗೆ ದುಡಿದರೆ ಈ ಕಾರ್ಯ ಅಸಾಧ್ಯವಲ್ಲ. ಈ ಬಗೆಗೆ ನೋಡೋಣ:

ಕನ್ನಡಕ್ಕಾಗಿ ಹೋರಾಡುವಲ್ಲಿ ಸವಾಲು-ಸಮಸ್ಯೆಗಳು:

ಕೆಲಸವನ್ನು ಮಾಡುವಲ್ಲಿ ಹಲವು ಸಮಸ್ಯೆಗಳು, ಸವಾಲುಗಳು ಎದುರಾಗುವುದು ಸಹಜ.ಕನ್ನಡವನ್ನು ಪುನರುತ್ಥ್ಹಾನ ಗೊಳಿಸುವ ಕಾರ್ಯ ಒಬ್ಬರಿಂದ ಪ್ರಾರಂಭವಾದರೂ ಅದೊಂದು ಸಾಮೂಹಿಕ ಯಜ್ಞ. ಸಮೂಹವೆಂದಾಗ, ಗುಂಪಿನಲ್ಲಿರುವ ಪ್ರತಿಯೊಬ್ಬರೂ ತಮ್ಮದೇ ಆದ ಕಾರ್ಯ ವೈಖರಿಯನ್ನೂ, ಆಲೋಚನೆಗಳನ್ನೂ ಹೊಂದಿರುವುದು ವಾಸ್ತವ. ಆದರ್ಶವಾದ ಹಲವರ ಆಶಯವಾದರೆ ವಾಸ್ತವ ವಾದ ಉಳಿದವರಿಗೆ ಸರಿ ಎನ್ನಿಸಬಹುದು.ಸಾರ್ವತ್ರಿಕ ಹಿತ ಒಬ್ಬರ ಧ್ಯೇಯವಾದರೆ, ವೈಯಕ್ತಿಕ ಹಿತಾಸಕ್ತಿ ಮತ್ತೊಬ್ಬರಲ್ಲಿ ಮನೆ ಮಾಡಿರಬಹುದು.  ಮನುಷ್ಯನ ಮೂಲಭೂತ ಗುಣ,` ತಾನು ನಂಬಿರುವುದು ಮಾತ್ರ ಸತ್ಯ ಉಳಿದವರದ್ದು ಅಲ್ಲ` ಎನ್ನುವ ಧೋರಣೆಯಿಂದ ಭಿನ್ನಭಿಪ್ರಾಯಗಳು ಮೂಡಿ ಆಗಬೇಕಾದ ಕೆಲಸದ ಮೂಲ ಉದ್ದೇಶವನ್ನು ಮರೆತು ಒಡೆದು ಚೆದುರಿ ಹೋದ ಎಷ್ಟೋ ನಿದರ್ಶನಗಳು ನಮ್ಮ ಮುಂದಿವೆ. ಹೀಗಾಗಿ ಸಮಾಧಾನ, ಸಮಾಲೋಚನೆ, ಒಮ್ಮತ ಸಮ್ಮತದಿಂದ ಕಾರ್ಯ್ಪ್ರವೃತ್ತರಾಗಿ ದುಡಿಯುವ ಗುರುತರ ಹೊಣೆ ಇಂದು ನಮ್ಮದಿದೆ.

 

“ಇರಲಿ ಕನ್ನಡವೇ ಧ್ಯೇಯ, ಬಿಡಿ ನಿಮ್ಮೆಲ್ಲ ಭಿನ್ನಾಭಿಪ್ರಾಯ“

ಇನ್ನು ಸರಕಾರ ಹಾಗೆ ಹೀಗೆ, ಪ್ರಾಧಿಕಾರ ಸರಿಯಿಲ್ಲ, ಸರಕಾರಿ ಶಾಲೆಗಳು ಉಪಯೊಗವಿಲ್ಲ, ಸುಪ್ರೀಂ ಕೋರ್ಟು ಪುನಃ ಪರಿಶೀಲಿಸಲಿ, ಸಂವಿಧಾನ ಬದಲಾಗಲಿ .. ಹೀಗೆ ನಾನಾ ರೀತಿಯ ಕೂಗು, ಹೇಳಿಕೆ,ಘೋಷಣೆ ಮಾಡಬಹುದು. ವಾಸ್ತವವಾಗಿ ಅವು ಯಾವುದರಿಂದಲೂ ಕನ್ನಡದ ಇಂದಿನ ಪರಿಸ್ಥಿತಿ ಸುಧಾರಿಸದು. ಆಗದ ಹೋಗದ ಈ ಆಶಯಗಳಿಂದ ಯಾವುದೇ ಲಾಭವಿಲ್ಲ. ಈ ನಿಟ್ಟಿನಲ್ಲ್ಲಿನಾವು ಸುಲಭ ಸಾಧ್ಯವಾಗಿ, ಹೆಚ್ಚು ಖರ್ಚಿನ ತೊಂದರೆಯಿಲ್ಲದೆ, ಯಾರ ಕೃಪಾಕಟಾಕ್ಷದ ಹಂಗೂ ಇಲ್ಲದೆ ನಾವುಗಳು ಎಲ್ಲರೂ ನಮ್ಮ ನಮ್ಮ ಶಕ್ತಿ ಸಾಮರ್ಥ್ಯಗಳ ಪರಿಮಿತಿಯಲ್ಲಿಯೇ ಮಾಡಬಹುದಾದ ಕೆಲಸಗಳನ್ನು ವಿವೇಚಿಸೋಣ.ಜೊತೆ ಜೊತೆಗೇ ಕನ್ನಡದ ಬಗೆಗಿರುವ ಜನಗಳ ತಿಳುವಳಿಕೆಯನ್ನು ಬೆಳೆಸೋಣ

ವಿದ್ಯಾಭ್ಯಾಸ

ಜನರ ಕುರುಡು ನಂಬಿಕೆ ವಾಸ್ತವ ಪರಿಹಾರ
ಇಂಗ್ಲೀಷ್ ಶಾಲೆಗಳು ಶ್ರೇಷ್ಠ ಎಲ್ಲವೂ ಅಲ್ಲ. ಕೆಲವು ಉತ್ತಮ ಸಂಸ್ಥೆಗಳ ಶಾಲೆಗಳು ಮಾತ್ರ ವಿಚಾರಿಸಿ. ಹಣ ಕಟ್ಟಿ. ಕನ್ನಡ ಪ್ರಥಮ ಭಾಷೆಯಾಗಿ ಮಕ್ಕಳಿಗೆ ಕೊಡಿಸಿ
ಕನ್ನಡದಲ್ಲಿ ಕಲಿತರೆ ಇಂಗ್ಲೀಶ್ ಬರದು ಇಂಗ್ಲೀಶ್ ಒಂದು ಭಾಷೆಯಾಗಿ ಕಲಿತರೆ ಸಾಕು. ಮಾಧ್ಯಮದಲ್ಲಿ ಕಲಿಯುವ ಅವಷ್ಯಕತೆ ಇಲ್ಲ. ವಿಜ್ಞಾನ,ತಾಂತ್ರಿಕ ಹಾಗೂ ವೈದ್ಯಕೀಯ ವಿಭಾಗಗಳ ನಿಘಂಟು ಇದ್ದಲ್ಲಿ ಯಾವ ಕಷ್ಟವೂ ಆಗದು
ಇಂಗ್ಲೀಷ್ ಕಷ್ಟ. ಅದಕ್ಕೇ ಆ ಮಾಧ್ಯಮದಲ್ಲೇ ಓದಲಿ ವ್ಯಾಕರಣ ಅಲ್ಲಿಯೂ ಕಲಿಯಲೇ ಬೇಕು. ಹರುಕು ಮುರುಕು ಮಾತನಾಡಿದಾಕ್ಷಣ ಭಾಷೆ ಬಂತೆಂಬ ಲೆಕ್ಖ ಅಲ್ಲ ಭಾಷಾಂತರ ಪಾಠಮಾಲೆ ಎನ್ನುವ ಪುಸ್ತಕಗಳಿವೆ. ಮಗುವಿಗೆ ನಾಲ್ಕನೇ ತರಗತಿಯಿಂದ ಕಲಿಸ ತೊಡಗಿದರೆ, ವ್ಯಾಕರಣ ಸಮೇತವಾಗಿ ಆಂಗ್ಲ ಭಾಷೆಯನ್ನ ನಿರರ್ಗಳವಾಗಿ ಬಳಸಬಲ್ಲ ಸಾಮರ್ಥ್ಯ ಮಗುವಿಗೆ ಬರುತ್ತದೆ
ಸರಕಾರೀ ಶಾಲೆಗಳು ಸರಿಯಿಲ್ಲ ಸ್ವಲ್ಪ ಮಟ್ಟಿಗೆ ನಿಜ. ಆದರೆ ಎಲ್ಲಾ ಶಾಲೆಗಳೂ ಆ ರೀತಿಯಿಲ್ಲ. ಈ ನಡುವೆ ಶಾಲೆಗಳಲ್ಲಿ ಸಂಪನ್ಮೂಲಗಳನ್ನೂ ಒದಗಿಸಲಾಗಿದೆ ವಿಚಾರಿಸಿ. ನಿಮ್ಮ ಸ್ಥಳೀಯ ಸರಕಾರೀ ಶಾಲೆ ಮೂರನೇ ದರ್ಜೆಯ ಖಾಸಗೀ ಶಾಲೆಗಿಂತ ಉತ್ತಮವಾಗಿರಬಹುದು. ಉಳಿಸಿದ ಹಣದಲ್ಲಿ ಮಕ್ಕಳ ಭವಿಷ್ಯನಿಧಿ ಮಾಡಿ
ಸರಕಾರೀ ಶಾಲೆಯ ಮಕ್ಕಳು ಸರಿಯಿಲ್ಲ ಅಲ್ಪ ಸ್ವಲ್ಪ ಸಾಮರ್ಥ್ಯವಿರುವವರೂ ತೊರೆದರೆ, ಬರುವ ಕೆಲವೇ ಮಕ್ಕಳ ಹಿನ್ನೆಲೆ ಸರಿಯಿರದೊರಬಹುದು. ಈ ಸವಕಳಿ ತೊಡೆದು ಬೆಳೆಸುವ ಹೊಣೆ ನಮ್ಮದಿಲ್ಲವೇ ಊರವರ ಸಹಕಾರ ಇದ್ದಲ್ಲಿ ಶಾಲೆಗಳು ,ಶಿಕ್ಷಕರು ಮಹತ್ಸಾಧನೆ ಮಾಡಬಹುದು
ಇಂಗ್ಲೀಷ್ ಶಾಲೆಯ ಮಕ್ಕಳು ಬುದ್ಧಿವಂತರು ಬುದ್ಧಿವಂತಿಕೆ ಸ್ವ್ಲಲ್ಪಮಟ್ಟಿಗೆ ಅನುವಂಶಿಕ,ಬಹು ಮಟ್ಟಿಗೆ ಪಾರಿಸರಿಕ. ಪೋಷಕರ ತೆಳು ಒತ್ತಡ, ಪ್ರೋತ್ಸಾಹ, ಮಾರ್ಗದರ್ಶನ ಮಕ್ಕಳು ಬುದ್ಧಿವಂತರಾಗಲು ಪ್ರೇರೇಪಿಸುತ್ತದೆ “ಮಕ್ಕಳಿಸ್ಕೂಲ್ ಮನೇಲ್ಮಾಡಿ”. ಯಾವ ಶಾಲೆಗೆ ಹೋದರೂ ಜಯ ಇರುತ್ತದೆ. ಉಳಿಸಿದ ಹಣದಲ್ಲಿ ಅವರ ಕುತೂಹಲ ತಣಿಸುವ ಶೈಕ್ಷಣಿಕ ಸಾಮಗ್ರಿಗಳನ್ನು ಕೊಡಿಸಿ.
ಉನ್ನತ ಶಿಕ್ಷಣದಲ್ಲಿ ತೊಂದರೆಯಾಗುತ್ತದೆ ನಿಘಂಟುಗಳನ್ನು ಬಳಸಿ ವ್ಯವಸ್ಥಿತವಾಗಿ ಅಭ್ಯಾಸ ಮಾಡಿದವರು ಚೆನ್ನಾಗಿಯೇ ಸಾಧನೆ ಮಾಡಿದ್ದಾರೆ. ಯಾವುದೇ ಭಾಷೆಯ ಮೇಲೆ ಹಿಡಿತ ಸಾಧಿಸಲು ಪದ ಪರಿಚಯ ಚೆನ್ನಾಗಿರಬೇಕು. ವ್ಯವಸ್ಥಿತವಾಗಿ ಇಂಗ್ಲೀಶಿನ ಪದಗಳನ್ನೂ , ಕನ್ನಡದಲ್ಲಿ ಅರ್ಥವನ್ನೂ ಬಾಯಿಪಾಠ ಮಾಡಿಸಿದರೆ ಕಾಲೇಜಿಗೆ ಬರುವಷ್ಟರಲ್ಲಿ ಭಾಷೆಯ ಭಯ ಹೊರಟುಹೋಗಿರುತ್ತದೆ.
ಜನರ  ಕುರುಡು ನಂಬಿಕೆ ವಾಸ್ತವ ಪರಿಹಾರ
ಇಂಗ್ಲೀಷ್ /ಖಾಸಗೀ ಶಾಲೆಗಳಲ್ಲಿ ಬೋಧನೆ ಉತ್ತಮ ಎಲ್ಲಾ ಶಾಲೆಗಳಲ್ಲೂ ಅಲ್ಲ. ಬಾಹ್ಯ ಥಳುಕು ಬಳುಕು ಒಳಗೆ ಬರೀ ಹುಳುಕು. ಎಚ್ಚರದಿಂದಿರಿ. ನನಗೆ ತಿಳಿದ ಎಷ್ಟೋ ಮಕ್ಕಳು ಉತ್ತಮ ಹೆಸರಿನ ಶಾಲೆಗೆ ಹೋಗುತ್ತಿದ್ದರೂ ಅವರ ಜ್ಞಾನಸಂಪತ್ತು, ಯೋಚನಾ ಸಾಮರ್ಥ್ಯ ಅಷ್ಟಕ್ಕಷ್ಟೇ ಅಥವಾ ಆಘಾತಕಾರಿ. ಪೋಷಕರು ಮಕ್ಕಳ ಪುಸ್ತಕಗಳನ್ನೂ ಅದಕ್ಕೆ ಸಂಬಂಧಿಸಿದ ವಿಷಯಗಳನ್ನೂ ಅಭ್ಯಾಸಮಾಡಿ ಹೋಲಿಕೆ, ಉದಾಹರಣೆ, ಚಿತ್ರ, ಇತ್ಯಾದಿಗಲ ಮೂಲಕ ಆಸಕ್ತಿದಾಯಕವಾಗಿ ಹೇಳಿಕೊಟ್ಟರೆ, ಮಾರ್ಗದರ್ಶನ ಮಾಡಿದರೆ ಈ ದುಬಾರಿ ಶುಲ್ಕ ಕೊಟ್ಟು ಮಕ್ಕಳ ತಲೆಗ ಬೇಕಾದು ಬೇಡಾದ್ದು ತುಂಬುವ ಪ್ರಮೇಯ ಇರುವುದಿಲ್ಲ
ನಮಗೆ ಮಕ್ಕಳಿಗೆ ಹೇಗೆ/ಏನು ಕಲಿಸಬೇಕೆಂದು ತಿಳಿಯದು ಆಸಕ್ತಿ ಹಾಗೂ ಬದ್ಧತೆ ಇಲ್ಲಿ ಮುಖ್ಯ. ಉಳಿದೆಲ್ಲ ದಾರಿಗಳು ತಾಏ ತೆರೆದು ಕೊಳ್ಳುತ್ತವೆ.

ಶುಲ್ಕದ ದುಡ್ಡಿನಲ್ಲಿ ಯಾವುದಾದರೂ ಒಳ್ಳೆಯ ಗುರುಗಳ ಹತ್ತಿರ ಹೆಚ್ಚುವರಿ ಪಾಠಕ್ಕೂ ಹಾಕಬಹುದು.

ಎಷ್ಟೊಂದು ಜನಪ್ರಿಯ ವಿಜ್ಞಾನ, ಜನಪ್ರಿಯ ಗಣಿತ, ಭೂಗೋಲ ಮುಂತಾದ ಪುಸ್ತಕಗಳು ಇಂದು ಲಭ್ಯ ಇವೆ. ಅಂತರ್ಜಾಲದಲ್ಲೂ ಸಾಕಷ್ಟು ಅಕರಗಳಿವೆ. ಓದಿ ಅಭ್ಯಾಸ ಮಾಡಿ ಹೇಳಿಕೊಡಿ. ಮಕ್ಕಳೊಂದಿಗೆ ಸಮಯ ಕಳೆದಂತೆಯೂ, ಅವರಿಗೆ ಮಾದರಿಯೂ ಆಗುವ ಅವಕಾಶ
ಕನ್ನಡ ಕಠಿಣ ಕನ್ನಡದಷ್ಟು ಸಮೃದ್ಧ ಭಾಷೆ ಇನ್ನೊಂದಿಲ್ಲ. ಸರಳ ಹಾಗೂ ಸುಂದರ. ಕಲಿಕೆಯ ದೃಷ್ಟಿಯಿಂದ ನುಡಿಯ ಸೌಂದರ್ಯವನ್ನು ಮುಂದೆ ಒಂದು ಬೇರೆ ಲೇಖನದಲ್ಲಿ  ಬರೆಯುತ್ತೇನೆ- ಎಲ್ಲ ಕಲಿಕೆಗೂ ಅನ್ವಯಿಸುವಂತೆ ಕನ್ನಡಕ್ಕೂ ಬದ್ಧತೆ ಮತ್ತು ಪರಿಶ್ರಮದ ಅವಶ್ಯಕತೆ ಇದೆ.ಆಸಕ್ತಿ ಇದ್ದಲ್ಲಿ ಕನ್ನಡ ಬಹು ಸುಲಭ
ಕನ್ನಡದಲ್ಲಿ ಓದಿದರೆ ರ್ಯಾಂಕ್ ಬರಲಾಗದು ಇಂದಿನ ದಿನಗಳಲ್ಲಿ ರ್ಯಾಂಕ್ ವಿಜೇತರಿಗೆ ಹೆಚ್ಚಿನ ಸೌಲಭ್ಯ-ಸವಲತ್ತುಗಳಿಲ್ಲ. ವಿಷಯ ಗ್ರಹಣೆ ಮುಂದಿನ ಜೀವನಕ್ಕೆ ಮುಖ್ಯವಾದ ಅಂಶ. ಐದು ಹತ್ತು ಅಂಕ ಕಡಿಮೆಯಾಗಿ ರ್ಯಾಂಕ್ ಬರಲಿಲ್ಲವೆಂಬುದು ದೊಡ್ಡ ವಿಷಯವಾಗಬಾರದು ರ್ಯಾಂಕ್ ಬಂದರೆ ಸಂತೋಷ ಆದರೆ ಒಳ್ಳೆಯ ಅಂಕ ತೆಗೆದರೆ ಸಾಕು. ಇಂದು ಎಲ್ಲರೂ ಮುಂದೆ ಓದಲು ದುಡ್ಡು ತೆರಲೇ ಬೇಕಾದ ಪರಿಸ್ಥಿತಿ ಇರುವಾಗ ರ್ಯಾಂಕ್ ಗಾಗಿ ಸಂಸ್ಕಾರ ಬಲಿಕೊಡುವ ಅವಶ್ಯಕತೆ ಇಲ್ಲ ಎಂಬುದು ಎಲ್ಲ ಬಲ್ಲವರ ಅಭಿಪ್ರಾಯ.

ಕನ್ನಡ ಭಾಷೆ ಬಳಕೆ ಮತ್ತು ಇಂದಿನ ಜನಜೀವನ

ಜನರ  ಕುರುಡು ನಂಬಿಕೆ ವಾಸ್ತವ ಪರಿಹಾರ
ಹೊರಗಡೆಯೆಲ್ಲ ಇಂಗ್ಲೀಷ್ , ಮನೇಲಿ ಅದೇ ಅಭ್ಯಾಸ ಅಭ್ಯಾಸ ಅಷ್ಟೇ. ಸೋಂಬೇರಿತನ ತೊರೆದರೆ ಬದಲಾಯಿಸಿಕೊಳ್ಳಬಹುದು ಪ್ರಜ್ಞಾಪೂರ್ವಕ ಕನ್ನಡ ಬಳಸಿದರೆ ಸಾಕು. ಬೇಗನೆ ಕನ್ನಡದ ಬಲಕೆ ಅಭ್ಯಾಸವಾಗುತ್ತದೆ
ಬೇರೆಯವರು ಇಂಗ್ಲೀಷ್ನಲ್ಲೇ ಮಾತಾಡ್ತಾರೆ ನೀವು ಕನ್ನಡದಲ್ಲಿ ಮಾತನಾಡಿದರೆ ಕಡಿಮೆಯೆಂಬ ಕೀಳರಿಮೆಗೆ ಸಿಕ್ಕಿರಬಹುದು ವಿನಯಪೂರ್ವಕ ಕನ್ನಡದಲ್ಲೇ ಮಾತನಾಡಿ. ಮಧ್ಯೆ ಕನ್ನಡದ ಕಳಕಳಿಯನ್ನೂ ಸಂಕೋಚಪಡದೆ ವ್ಯಕ್ತಪಡಿಸಿ
ಹೊರಗಡೆ (ಮಾಲ್) ಮಳಿಗೆ ಗಳಲ್ಲಿ ಇಂಗ್ಲೀಷೇ ಭಾಷೆ

ಹೋಟೇಲಗಳಲ್ಲೂ ಅಷ್ಟೆ

ಬ್ಯಾಂಕ್ ಗಳಲ್ಲೂ

ಎಲ್ಲೆಲ್ಲೂ……..

ನಿಜವೇ… ಆದರೆ ಇದು ನಾಚಿಕೆಗೇಡಿನ ಸಂಗತಿಯಲ್ಲವೇ. ಕರುನಾಡಿನಲ್ಲಿ ಕನ್ನಡದ ವ್ಯವಹಾರ ಇಲ್ಲವೆಂದರೆ. ಬದಲಾಯಿಸಬೇಕಾದ್ದು ನಮ್ಮ ಹೊಣೆಯಲ್ಲವೆ? ಗುಂಪಿನಲ್ಲಿ ಅಂಗಡಿ ಮುಗ್ಗಟ್ಟುಗಳಿಗೆ ಹೋಗಿ. ಕನ್ನಡದಲ್ಲಿ ವ್ಯವಹರಿಸಿ ಇಲ್ಲವಾದಲ್ಲಿ ಆಗ್ರಹಿಸಿ. ವ್ಯಾಪಾರ ಮಾಡಿ ಸಾವಿರಾರು ರೂಪಾಯಿಗಳ ವಹಿವಾಟನ್ನು ನಿಲ್ಲಿಸಿದರೆ ನಷ್ಟ ಅವರಿಗೇ ಹೊರತು ನಿಮಗಲ್ಲ. ಈ ರೀತಿಯ ಗ್ರಾಹಕ ಚಳುವಳಿಗೆ ಚಾಲನೆ ನೀಡಿ. ಸಂಕೋಚ ಬೇಡ.
ಮಕ್ಕಳು ಕನ್ನಡದಲ್ಲಿ ಉತ್ತರಿಸೋಲ್ಲ. ಇಂಗ್ಲೀಷೇ ಮಾತಾಡ್ತವೆ ೧)ಗಿಡವಾಗಿ ಬಗ್ಗದ್ದು.

೨)ತಾಯಿಯಂತೆ ಮಗಳು ನೂಲಿನಂತೆ ಸೀರೆ

೩)ಹಿರಿಯಕ್ಕನ ಚಾಳಿ ಮನೆಮಕ್ಕಳಿಗೆಲ್ಲ

೪)ಅಯ್ಯ ನಿಂತ್ಕೊಂಡ್ ಉಚ್ಚೆ ಹುಯ್ದ್ರೆ ಮಕ್ಳು ಓಡಾಡ್ಕೊಂಡ್ ಹುಯ್ತವೆ
ನೋಡಿ ಎಷ್ಟೊಂದ್ ಗಾದೆ ಇವೆ ಯೋಚ್ನೆ ಮಾಡಿ.

ಮಕ್ಕಳು ಕನ್ನಡದಲ್ಲಿ ಕೇಳುವ ಪ್ರಯತ್ನ ಮಾಡುವವರೆಗೂ ಅವರಿಗೆ ಬೇಕಾದು ಸಿಗುವುದಿಲ್ಲವೆಂಬ ಮನವರಿಕೆ ಮಾಡಿಕೊಟ್ಟರೆ ತಾವೇ ಮಾತಾಡ್ತವೆ. ಅವುಗಳಿಗೆ ಯಾವುದು ಸರಾಗವೋ ಅ ದಾರಿ ಹಿಡಿಯುವುದು ಎಲ್ಲ ಜೀವಿಗಳ ಲಕ್ಷ್ಣಣ. ನೀರು ಹರಿಯುವ ಜಾಡನ್ನು ತೀಡುವುದು ಬೇಸಾಯಗಾರನ ಕೆಲಸವಲ್ಲವೇ??
ಮನೆಯಲ್ಲಿ ಕನ್ನಡ ಪರ ವಾತಾವರಣ ಇಲ್ಲ ವಾತಾವರಣವನ್ನು ಮೂಡಿಸುವ ಮನಸ್ಥಿತಿ/ಅಭಿಲಾಷೆ ಇಲ್ಲ
ಎಲ್ಲಾ ಬದಲಾವಣೆಗಳೂ ಒಮ್ಮೆಗೇ ಆಗುವುದಿಲ್ಲ. ಹಂತ ಹಂತವಾಗಿ ಗುರಿಸಾಧಿಸಬೇಕು.
ಕನ್ನಡ ಮಾತಾಡಿ, ಕನ್ನಡ ಓದಿ, ಕನ್ನಡ ವಾರ್ತೆ ಕೇಳಿ, ಕನ್ನಡ ಪತ್ರಿಕೆ ತರಿಸಿ,ದೂರದರ್ಶನದಲ್ಲಿ ಕನ್ನಡ ಕಾರ್ಯಕ್ರಮಗಳನ್ನು ವೀಕ್ಷಿಸಿ
ಕನ್ನಡದ ಸಂಬಂಧೀ ಪತ್ರಿಕೆ, ಕಾರ್ಯಕ್ರಮಗಳಲ್ಲಿ ಗುಣಮಟ್ಟ ಇಲ್ಲ ಸ್ವಲ್ಪ ಮಟ್ಟಿಗೆ ನಿಜ ಇರಬಹುದು. ಅದರೆ ಪ್ರಪಂಚದದ್ಯಂತ ಇಂಗ್ಲೀಷಿಗೆ ಇರುವ ಮಾರುಕಟ್ಟೆಯನ್ನೂ, ವಹಿವಾಟನ್ನು ಕನ್ನಡಕ್ಕೆ ಹೊಲಿಸಿ ನೋಡಿ. ನಮ್ಮ ಆರ್ಥಿಕ ಅನುಕೂಲತೆಗೆ /ಅಭಿರುಚಿಗೆ ಅನುಗುಣವಾಗಿ ತಯಾರಿಕೆ ಇರುತ್ತದೆ ಇರುವುದನ್ನು ನೋಡಿ, ಪ್ರೋತ್ಸಾಹಿಸಿ ನಿಮಗೆ ಬೇಕಾದ ಬದಲಾವಣೆ ತರಲು  ಪ್ರಯತ್ನಿಸಿ. ಹಣದ ವಹಿವಾಟು ಹೆಚ್ಛಾದಂತೆ ಗುಣಮಟ್ಟ, ವ್ಯಾಪ್ತಿ ವಿಸ್ತಾರಗೊಳ್ಳುವ ಸಾಧ್ಯತೆ ಇದೆ.

ಮಾಯಾಮೃಗ, ಮಂಥನ, ಅನಾವರಣ ಮುಂತಾದ ಧಾರಾವಾಹಿಗಳು ಯಾವ ಭಾಷೆಗೂ ಕಡಿಮೆಯಿರದಂತೆ  ಮೂಡಿಲ್ಲವೇ. ಸದಭಿರುಚಿಯನ್ನು ಬೆಳೆಸುವುದು ಎಲ್ಲ ಸದ್ಗುಣಿಗಳ ಕರ್ತವ್ಯವಲ್ಲವೇ

ಕನ್ನಡದಲ್ಲಿ ಮಾತನಾಡುವಾಗ ಇಂಗ್ಲೀಷ್ ಪದಗಳು ತಿಳಿಯದೆ ಸೇರಿಬಿಡುತ್ತವೆ ಇದು ಅಭ್ಯಾಸ ಬಲ. ನಿಜಕ್ಕೂ ಇಂದು ಕನ್ನಡದ ಬವಣೆಗೆ ನಮ್ಮ ಈ ದೌರ್ಬಲ್ಯವೇ ಕಾರಣ ಪ್ರಜ್ಞಾಪೂರ್ವಕವಾಗಿ ಅದಷ್ಟೂ ಕನ್ನಡವನ್ನು ಶುದ್ಧವಾಗಿ ಬಳಸಲು ಪ್ರಯತ್ನಿಸಿ
ಎಷ್ಟೋ ಇಂಗ್ಲೀಷ್ ಪದಗಳಿಗೆ ಪರ್ಯಾಯವಾದ ಕನ್ನಡಪದಗಳು ನಮಗೆ ಗೊತ್ತಿಲ್ಲ ನಿಜ. ಇದು ಕೂಡಾ ಸರಿಪಡಿಸಿಕೊಳ್ಲಬಲ್ಲ ದೌರ್ಬಲ್ಯ ಮತ್ತು ವ್ಯಾಪಕವಾದ ಸಮಸ್ಯೆ ಮೊದಮೊದಲು ಸ್ವಲ್ಪ ಕಶ್ಟವಾದರೂ ಕನ್ನಡದ ಮೇಲಿನ ಅಭಿಮಾನದಿಂದ ಪ್ರಯತ್ನಿಸಿದರೆ/ನಿಘಂಟುಗಳನ್ನು ತೆಗೆದು ನೋಡಿ.ಬಲ್ಲವರನ್ನು ಕೇಳಿ ಅಭ್ಯಾಸ ಮಾಡಿಕೊಂಡರೆ ಮೀರುವುದೇನು ಕಷ್ಟವಲ್ಲ

ಮಂಥನ, ಅನಾವರಣ ಧಾರಾವಾಹಿಗಳನ್ನು ಕನ್ನಡದ ದೃಷ್ಟಿಕೋನದಿಂದಲೇ ನೋಡಿ. ಕಲಿತುಬಿಡುತ್ತೀರಿ.

ಕನ್ನಡ ಮತ್ತು ತಂತ್ರಜ್ಞಾನ (ಟೆಕ್ನಾಲಜಿ):

ಜನರ ನಂಬಿಕೆ ವಾಸ್ತವ ಪರಿಹಾರ
ಈಗೆಲ್ಲಾ ವಿದ್ಯುನ್ಮಾನ ಯುಗ (ಇಲೆಕ್ತ್ರೋನಿಕ್). ಕನ್ನಡದಲ್ಲಿ ಓದಲು ಸಾಕಷ್ಟು ಮೂಲಗಳಿಲ್ಲ ಬೇಕಾದಷ್ಟು ಕನ್ನಡದ ಜಾಲಜಗುಲಿಗಳಿವೆ, ಬ್ಲಾಗುತಾಣಗಳಿವೆ ಗೂಗಲ್ನಲ್ಲಿ ಬೆರಳಚ್ಚಿಸಿ ನೋಡಿ.
ಕನ್ನಡದಲ್ಲಿ ಓದಲು ಸರಿ, ಬರೆಯಲು ಸಾಧ್ಯವಿಲ್ಲ ಕಂಪ್ಯೂಟರ್ನಲ್ಲಿ ಬರಹ, ನುಡಿ ಮುಂತಾದ ತಂತ್ರಾಂಶಗಳನ್ನು ಕೊಳ್ಳಬಹುದು. ಉಚಿತ ರೂಪವೂ ಇದೆ ಫೋನೆಟಿಕ್ ಎಂಬ ವ್ಯವಸ್ಥೆಯನ್ನು ಅಯ್ಕೆ ಮಾಡಿಕೊಂಡರೆ ಕನ್ನಡದಲ್ಲಿ ಮಾತನಾಡಿದಂತೆ ಬೆರಳಚ್ಚಿಸಿದರೆ ಕನ್ನಡದ ಪದಗಳು ಪರದೆಯ ಮೇಲೆ ಮೂಡುತ್ತವೆ
ನಾನು ದುಡ್ಡು ಕೊಟ್ಟು ಖರೀದಿಸಲಾರೆ ಮಾನವನ ದುರ್ಗುಣವನೇನೆಂದು ಪೇಳುವೆನು ದಾನ ಗೈ ಎನಲು ಕನಲುವರು ದಂಡವನು ಮೌನದೀಯುವರು ಸರ್ವಜ್ಞ ಗೂಗಲ್ ನಲ್ಲಿ ಕನ್ನಡವನ್ನು ಇನ್ ಪುಟ್ ಸ್ಕ್ರಿಪ್ಟ್ ಎಂದು ಆಯ್ಕೆ ಮಾಡಿದರೆ ಎಲ್ಲವನ್ನೂ ಕನ್ನಡದಲ್ಲೇ ಬರೆಯುವ ಸೌಲಭ್ಯ ಇದೆ.
ಎಲ್ಲ ತಾಂತ್ರಿಕ ವಿಭಾಗಕ್ಕೆ ಸಂಬಂಧಿಸಿದ ಪದಗಳು ಇಂಗ್ಲೀಷಿನಲ್ಲೇ ಇವೆ. ನಿಜ. ತಾಂತ್ರಿಕ ಆವಿಷ್ಕಾರಗಳು  ಪಾಶ್ಚಿಮಾತ್ಯ ದೇಶಗಳಲ್ಲಿ ಆದುದ್ದರ ಪರಿಣಾಮ. ನಮ್ಮ ಸಾವಿರಾರು ಧಾರ್ಮಿಕ, ತತ್ವಶಾಸ್ತ್ರದ ಪದಗಳಿಗೆ ಇಂಗ್ಲೀಷಿನಲ್ಲೂ ಪರ್ಯಾಯ ಪದಗಳಿಲ್ಲ ಇರುವುದನ್ನು ಸಧ್ಯಕ್ಕೆ ಸ್ವೀಕರಿಸಿ ಕನ್ನಡವನ್ನು ಬೆಳೆಸಿದರೆ, ಬಳಸುವವರ ಸಂಖ್ಯಾ ಪ್ರಮಾಣ, ಅವಶ್ಯಕತೆಗಳಿಗನುಗುಣವಾಗಿ ಮುಂದೆ ಪಾರಿಭಾಷಿಕ ಪದಗಳು ಬರುತ್ತವೆ.
ಕಂಪ್ಯೂಟರ್ ಸರಿ ಮೊಬೈಲ್ ಫೋನನಲ್ಲಿ (ಜಂಗಮ ವಾಣಿ) ಹೇಗೆ? ಯಾವುದೇ ಚರ ದೂರವಾಣಿಯಲ್ಲೂ ಕನ್ನಡದ (‘ಆಪ್’) ಅನ್ವಯಿಕ ಸೌಲಭ್ಯಗಳು ಲಭ್ಯ ಇವೆ ಪಾಣಿನಿ ಬೆರಳಚ್ಚು ಮಣೆ ಎಂಬ         ’’ ಆಪ್’’ ಇದೆ. ಐ- ಫೋನಿಗೂ ಅದರದ್ದೆ ಪರ್ಯಾಯ ಇದೆ.

ಕನ್ನಡಕ್ಕಾಗಿ ಆರ್ಥಿಕ ಬೆಂಬಲ:

 1. ಕನ್ನಡದ ಪತ್ರಿಕೆಗಳನ್ನು ಕೊಂಡು ಓದಿ
 2. ಒಂದು ಮಸಾಲೆ ದೋಸೆಯ ಬದಲು ತಿಂಗಳಿಗೆ ಒಂದು ಪತ್ರಿಕೆ ಕೊಂಡರೂ ಸಾಕು
 3. ಚೈತನ್ಯವಿದ್ದಲ್ಲಿ ಬೆಂಬಲ ಇನ್ನೂ ಇರಲಿ
 4. ಕನ್ನಡದ ಪುಸ್ತಕಗಳನ್ನು ಖರೀದಿಸಿ ಕಾಣಿಕೆ ಕೊಡಿ
 5. ಸ್ಥಳೀಯ ಶಾಲೆಗಳಲ್ಲಿ ಕನ್ನಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಇರಲಿ
 6. ಕನ್ನಡ ಕುರಿತಾದ ಕಮ್ಮಟಗಳಲ್ಲಿ ಭಾಗವಹಿಸಿ
 7. ನಮ್ಮ ನಾಡು-ನುಡಿ ವೈಭವ ತಿಳಿಸುವ ಚರಿತ್ರಾರ್ಹ ಸ್ಠಳಗಳಿಗೆ ಮಕ್ಕಳನ್ನು ಕರೆದೊಯ್ದು ನಮ್ಮ ಪರಂಪರೆಯ ಪರಿಚಯ ಮಾಡಿಕೊಡಿ. ಸ್ಥಳೀಯ ಕೈಗಾರಿಕೆ, ವಾಣಿಜ್ಯ ಬೆಂಬಲಿಸಿ.
 8. ಕನ್ನಡದ ನುಡಿತಾಣಗಳಿಗೆ ಭೇಟಿ ಕೊಡುತ್ತಿರಿ. ಹೆಚ್ಚು ಹೆಚ್ಚು ಜನ ಇವುಗಳನ್ನು ಸಂದರ್ಶಿಸಿದಷ್ಟೂ ಕನ್ನಡದ ವಾಣಿಜ್ಯಿಕ ಪ್ರತಿಷ್ಠೆ ಹೆಚ್ಚುತ್ತದೆ.

ಸರಕಾರ-ವಿದ್ಯಾಸಂಸ್ಥೆಗಳ ಹೊಣೆ:

ಇದು ಆದರ್ಶಪೂರ್ವಕವಾದ ನಿರೀಕ್ಷೆ. ಆದರೆ ಇದರಲ್ಲಿ ಹಲವಾರು ಒಳಸಂಚುಗಳು/ಹಿತಾಸಕ್ತಿಗಳು ಸಮ್ಮಿಳಿತವಾಗಿರುವ ಕಾರಣ ಯಾವುದೇ ಹಂತದಲ್ಲೂ ವಿಫಲಗೊಳಿಸುವ ಪ್ರಯತ್ನ ನಡೆದೇ ಇರುತ್ತದೆ. ಸರಕಾರಗಳು ಬದ್ಧತೆ ತೋರಬೇಕೆಂದರೆ ಕನ್ನಡದ ಕೂಗು ಸರಕಾರದ ಅಳಿವು-ಉಳಿವನ್ನು ನಿರ್ಧರಿಸುವ ಮಟ್ಟಕ್ಕೆ ಬಲಾಢ್ಯವಾಗಿದ್ದರೆ ಮಾತ್ರ ಸಾಧ್ಯ. ಆಗ ವಿದ್ಯಾಸಂಸ್ಥೆಗಳೆಂದು ಕರೆಯಲ್ಪಡುವ ಖಾಸಗೀ ವಲಯ ತಾನೇ ತಾನಾಗಿ ದಾರಿಗೆ ಬರುತ್ತದೆ,. ಈ ಪ್ರಕ್ರಿಯೆಯು ಜನರಲ್ಲಿ ಜನರ ಒಳಗಡೆಯಿಂದಲೇ ಅಂತರಾಗ್ನಿಯ ರೂಪದಲ್ಲಿ ಉದಿಸಿ ಹರಡಿದಾಗ ಕೈಗೂಡುವ ಸಂಭವ ಇರುತ್ತದೆ. ನಮ್ಮೆಲ್ಲರ ಕ್ರಿಯೆಗಳು ಈ ದಿಶೆಯಲ್ಲಿ ಪ್ರವೃತ್ತವಾಗಬೇಕು;ಶಕ್ತಿ ಈ ದಿಶೆಯಲ್ಲಿ ಸಂಚಯಿಸಬೇಕು.

 • ರಕಾರಗಳು ಕನ್ನಡವನ್ನು ಅನ್ನ ಕೊಡಬಲ್ಲ ಮೂಲವನ್ನಾಗಿ ಮಾಡಬೇಕು
  • ಕನ್ನಡ ಮಾಧ್ಯಮ ಕಡ್ಡಾಯ ಸರಕಾರೀ ಕೆಲಸಗಳಿಗೆ
  • ಕನ್ನಡದ ನೆಲ ಜಲ ಸಂಪನ್ಮೂಲಗಳನ್ನು ಬಳಸಿದಲ್ಲಿ ಕನ್ನದವನ್ನು ಪ್ರಥಮಭಾಶೆಯಾಗಿ ಕಲಿಸುವ ನಿಯಮ
  • ಪ್ರತಿಯೊಂದು ವ್ಯವಹಾರವೂ ಕನ್ನಡದಲ್ಲೇ ನಡೆಯತಕ್ಕದ್ದು . ಇಂಗ್ಲೀಷಿನ ಪ್ರತಿ ಬೇಕಾದಲ್ಲಿ ಶುಲ್ಕ ವಿಧಿಸತಕ್ಕದ್ದು ಆ ಹಣವನ್ನು ಕನ್ನಡಪರ ಕಾರ್ಯಗಳಿಗೆ ಬಳಸತಕ್ಕದ್ದು
  • ಉನ್ನತ ಶಿಕ್ಷಣದಲ್ಲಿ ಕನ್ನಡ ಮಾಧ್ಯಮದ ಮಕ್ಕಳಿಗೆ ಆದ್ಯತೆ
  • ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಕನ್ನಡವನ್ನು ಕಡ್ಡಾಯ ವಿಷಯವಾಗಿಸುವುದು
  • ಸರಕಾರದ ಪ್ರತಿ ನೌಕರಿಗೂ ಕನ್ನಡ ಪ್ರಥಮ ಭಾಷೆಯಲ್ಲಿ ಕಲಿತಿರತಕ್ಕ ನಿಯಮ ರೂಪಿಸುವುದು
  • ಖಾಸಗೀ ಸಂಸ್ಥೆಗಳಲ್ಲೂ ಕೆಲಸಕ್ಕೆ ಸೇರಲು ಕನ್ನಡದ ಕನಿಷ್ಠ ಜ್ಞಾನದ ಅಗತ್ಯ
  • ಕನ್ನಡವನ್ನು ಅಧಿಕೃತವಾಗಿ ಬಳಸುವ/ಪೋಷಿಸುವ ಸಂಸ್ಥೆಗಳಿಗೆ ವಿಶೇಷ ರಿಯಾಯಿತಿಗಳು.
 • ಕನ್ನಡ ಶಾಲೆಗಳು- ಕಾಲೇಜುಗಳು
  • ವೃತ್ತಿಪರ ಶಿಕ್ಷಣದಲ್ಲೂ ಕನ್ನಡ ಭಾಷೆ ಒಂದು ಕಡ್ಡಾಯ ವಿಷಯ. ಇಲ್ಲಿ ಭಾಷೆಯ ಹರಹು ಮತ್ತು ಸೌಂದರ್ಯಕ್ಕೆ ಮಹತ್ವ ನೀಡಿ ಅದನ್ನು ಆಸಕ್ತಿಕರವಾಗಿಡುವ ಪಠ್ಯವಾಗಿಡುವುದು. ಒಣ-ನೀರಸ ಪಠ್ಯ ಬೇಡ.
  • ಕನ್ನಡ ಶಾಲೆಗಳ ಮೌಲ್ಯ ಹಾಗೂ ಸವಲತ್ತುಗಳನ್ನು ಅಭಿವೃದ್ಧಿಗೊಳಿಸುವುದು
  • ಅರ್ಹರನ್ನು ಉತ್ತಮ ಸಂಬಳದ ಮೇಲೆ ಕೆಲಸಕ್ಕೆ ನೇಮಿಸುವುದು
 • ಪಠ್ಯ ಪುಸ್ತಕಗಳನ್ನು ಸಕಾಲಕ್ಕೆ ಒದಗಿಸುವುದು
 • ಯಾವುದೇ ಲಾಬಿಗೆ ಬಲಿಯಾಗದೆ ಭಾಷೆಯನ್ನು ರಕ್ಷಿಸುವ ಧ್ಯೇಯದಿಂದಲೇ ಕಾನೂನುಗಳನ್ನು ರೂಪಿಸುವುದು
 • ಇನ್ನೂ ಬೇಕಾದಷ್ಟು- ಮಾಡ ಬೇಕೆಂದರೆ ಮಾಡಬಹುದು…… ಅದರೆ ಅಲ್ಲೊಂದು  ದೊಡ್ಡ ‘ಆದರೆ’ ‘ಇದೆ!!!

ಇವು ಯಾವುದೂ ನಮ್ಮ ಕೈಲಿಲ್ಲ. ನೆರವಾಗಿ ನಾವು ಇವುಗಳನ್ನು ಅನುಷ್ಠಾನಗೊಳಿಸಲಾಗದು. ದೂರಗಾಮೀ ಯೋಜನೆಗಳೆಂದು ಇವುಗಳನ್ನು ಪರಿಗಣಿಸಿ ನಮ್ಮ ಹತೋಟಿಯಲ್ಲಿ ಇರುವ ಕನ್ನಡಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸಿಕೊಳ್ಳಬೇಕಾಗಿದೆ. ಈ ಬಗೆಯ ಹಲವು ಆಶಾದಾಯಕ ಬೆಳವಣಿಗೆಗಳು ಉದಾಹರಣೆಯಾಗಿ  ನಮ್ಮ ಮುಂದಿವೆ.

ಆಶಾದಾಯಕ ಬೆಳವಣಿಗೆಗಳು

ಇದು ನಮ್ಮ ಬದ್ಧತೆ, ಅಭಿಮಾನ, ಕಾರ್ಯಕ್ಷಮತೆ ಹಾಗೂ ಏಕತೆಯನ್ನು ಅವಲಂಬಿಸಿರುತ್ತದೆ.

 • ಅಳಿಯುತ್ತಿದ್ದ ಭಾಷೆಗಳನ್ನು ಮತ್ತೆ ಉಳಿಸಿ ಬೆಳೆಸಿದ ಉದಾಹರಣೆಗಳಿವೆ
 •  ವೆಲ್ಷ್ ( ವೇಲ್ಸ್ ದೇಶ, ಯುನೈಟೆಡ್ ಕಿಂಗ್ಡಂ), ಕೊರ್ನಿಶ್ ( ಕರನ್ ವಾಲ್ ಪ್ರಾಂತ್ಯ), ಯುನೈಟೆಡ್ ಕಿಂಗ್ ಡಂ), ಫ್ರೆಂ ಚ್ ( ಫ಼್ರಾನ್ಸ್ ದೇಶದ ವಸಾಹತು ದೇಶಗಳಲ್ಲಿ), ಹೀಬ್ರೂ ( ಇಸ್ರೇಲ್ ದೇಶ)

ಕನ್ನಡವನ್ನೂ ಮತ್ತೆ ಪ್ರವರ್ಧಮಾನಕ್ಕೆ ತರುವುದು ಅಸಂಭವವೇನಲ್ಲ. ಈಗಾಗಲೇ ಈ ದಿಶೆಯಲ್ಲಿ ಹಲವಾರು ಧನಾತ್ಮಕ ಬೆಳವಣಿಗೆಗಳು ಆಗುತ್ತಿದ್ದು, ಬೆಂಗಳೂರಿನಲ್ಲಿರುವ ಹಲವಾರು ಇಂಜಿನಿಯರುಗಳು ತಮ್ಮ ತನು,  ಮನ, ಧನಗಳನ್ನು ಕನ್ನಡಕ್ಕಾಗಿ ಧಾರೆಯೆರೆಯುತ್ತಿದ್ದಾರೆ. ಉನ್ನತ ಶಿಕ್ಷಣವೂ ಕನ್ನಡದಲ್ಲಿ ಸಾಧ್ಯವಾಗುವಂತೆ, ಇಂಗ್ಲೀಷ್ ಭಾಷೆಯ ಹಂಗಿಲ್ಲದೆಯೂ ಅರ್ಥ ಮಾಡಿಕೊಳ್ಳಬಲ್ಲ ವಿಜ್ಞಾನದ ವಿವಿಧ ಶಾಖೆಗಳ ಅಧ್ಯಾಯಗಳನ್ನು, ವಿಷಯಗಳನ್ನೂ ಕನ್ನಡದಲ್ಲೇ, ಕನ್ನಡಿಗರಿಗೆ ಅರ್ಥವಾಗುವಂಥ ರೀತಿಯಲ್ಲೇ ಹೊಸ ಹಾಗೂ ಹಳೆಯ ಕನ್ನಡ ಪದಗಳನ್ನು ಬಳಸಿ ಬರೆಯುತ್ತಿದ್ದಾರೆ. ಗ್ರಾಹಕ ಆಂದೋಲನದ ಮಾದರಿಯಲ್ಲಿ ಕನ್ನಡಕ್ಕಾಗಿ ಚಳುವಳಿಗಳನ್ನು ಮಾಡುತ್ತಿದ್ದಾರೆ. ಇವೆಲ್ಲಕ್ಕೂ ನಮ್ಮೆಲ್ಲೆರ ಪುಟ್ಟ ಅಳಿಲುಸೇವೆಯ ಮಾದರಿಯಲ್ಲಿ ಕೈ ಜೋಡಿಸುವಂತಾದರೆ ನಮ್ಮ ಕನ್ನಡದ ಋಣ ತೀರಿಸಿದಂತಾಗುವುದಿಲ್ಲವೇ??

ತ್ವರಿತವಾಗಿ ಆಗಬೇಕಾದ ಕೆಲಸ

ಮಕ್ಕಳು ಹಾಗೂ ಯುವ ಪೀಳಿಗೆಗಳನ್ನು ಕನ್ನಡದತ್ತ ಸೆಳೆಯುವ ಕಾರ್ಯ

Picture6

 

ಕೊನೆ ಹನಿ:

ಮನುಷ್ಯನ ಮೆದುಳಿನಲ್ಲಿ ದರ್ಪಣಾ ನರವ್ಯೂಹವೆಂಬುದೊಂದು ಇರುತ್ತದಂತೆ. ಇದರ ಕೆಲಸ ನಾವು ಎದುರಲ್ಲಿರುವ ವ್ಯಕ್ತಿಯ ಮನೋಸ್ಥಿತಿ, ದೇಹದ ಭಾವ-ಭಂಗಿ (ಆಸನ) ಇವುಗಳನ್ನು ಗುರುತಿಸಿ ಅದರಂತೆ ತನ್ನ ಪ್ರತಿಕ್ರಿಯೆಯನ್ನೂ , ದೇಹ ಮನಸ್ಸುಗಳನ್ನೂ ಬದಲಾಯಿಸಿ ಮಾರ್ಪಡಿಸಿಕೊಳ್ಳಲು ನೆರವಾಗುವುದು. ಇದರ ನೆರವಿನಿಂದ ನಾವು ವ್ಯವಹರಿಸುತ್ತಿರುವ ವ್ಯಕ್ತಿಗಳೊಂದಿಗೆ ಸ್ನೇಹಮಯ ಸಂವಹನವನ್ನೋ, ಇಲ್ಲವೇ ಆಪತ್ತಿನ ಮುನ್ಸೂಚನೆ ಕಂಡು ಆ ವ್ಯಕ್ತಿ/ಸನ್ನಿವೇಶದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವಲ್ಲಿ ಸಜ್ಜಾಗಲು ನೆರವಾಗುತ್ತದೆ. ನಮ್ಮ ದೈನಂದಿನ ವ್ಯವಹಾರಗಳಲ್ಲಿ  ನಮ್ಮ ಸುತ್ತಲಿನ ಪರಿಸರದ ಪ್ರಭಾವಕ್ಕೊಳಗಾಗಿ ನಮ್ಮ ಮನಸ್ಥಿತಿ ಬದಲಾಗುವುದನ್ನು ನಾವೆಲ್ಲರೂ ಅರಿತೇ ಇರುತ್ತೇವೆ. ಹಲವಾರು  ಸಂದರ್ಭಗಳಲ್ಲಿ ಇತರರ ಸಿಟ್ಟು, ಸಂತೋಷ, ಹುರುಪು, ಹತಾಶೆ ಮುಂತಾದ ಮನೋಭಾವನೆಗಳನ್ನು ಮೈಮನಗಳ ಮೇಲೆ ಆರೋಪಿಸಿಕೊಂಡೇ ಇರುತ್ತೇವೆ.ಇದನ್ನು ಕನ್ನಡದ ಉಳಿವು -ಬೆಳವಣಿಗೆಗೆ ಅಳವಡಿಸಿಕೊಳ್ಳಬಹುದೆಂದು ನನ್ನ ಆಳವಾದ ನಂಬಿಕೆ. ಇದೇ ಕಾರಣಕ್ಕೆ ನಾವು ಉಳಿದವರೊಂದಿಗೆ ಮಾತನಾಡುವಾಗ ಅವರ ಕಂಗ್ಲೀಷಿನ ಪ್ರಭಾವಕ್ಕೆ ಒಳಗಾಗದೆ ಕನ್ನಡದಲ್ಲಿ ವ್ಯವಹರಿಸಿದರೆ ಎದುರಾಳಿಯ ದರ್ಪಣಾವ್ಯೂಹ ಅವರನ್ನು ಕಂಗ್ಲೀಷ-ಇಂಗ್ಲೀಷಿನಿಂದ ಕನ್ನಡದೆಡೆಗೆ ಸೆಳೆಯಬಹುದೆಂಬ ಮಹದಾಶೆ ನನ್ನದು.

ಉಪಸಂಹಾರ ಮತ್ತು ಪರಿಸಮಾಪ್ತಿ:

ಬೆರಕೆಯ ಭಾಷೆಯಿಂದ ನಮ್ಮ ಮಾತಿನಲ್ಲಿ ಸೇರ್ಪಡೆಯಾಗುವೆ ಪ್ರತಿಯೊಂದು ಅನ್ಯ ಭಾಷಿಕ ಪದವೂ ಕನ್ನಡದ ಅಧಿಕೃತ ಪದಗಳನ್ನು ಮರೆಸುವುದರಿಂದ ಕನ್ನಡ ಭಾಷೆಯ ಶವ ಪೆಟ್ಟಿಗೆಗೆ ಹೊಡೆವ ಮೊಳೆಗಳಂತೆ, ಅನ್ನದಲ್ಲಿ ಸಿಗುವ ಕಲ್ಲಿನಂತೆ, ತೋಟದಲ್ಲಿ ಬೆಳೆದ ಕಳೆಗಳಂತೆ. ಈ ಉಪಮೆ/ರೂಪಕವನ್ನು ಬಳಸಿದ  ಕೆಳಗಿನ ಕೆಲವು ಕವಿತೆಯ ಸಾಲುಗಳ ಜೊತೆಗೆ ಈ ದೀರ್ಘ ಲೇಖನವನ್ನು ಮುಗಿಸುತ್ತಿದ್ದೇನೆ. ಓದಿದ ನಿಮಗೆ ಧನ್ಯವಾದಗಳು. ನಿಮ್ಮಲ್ಲಿ ಶೇಕಡಾ ೨೦-೨೫ ರಷ್ಟು ಬದಲಾವಣೆ ಕಂಡರೆ ಕನ್ನಡಮಾತೆ ಧನ್ಯಳು!!

 

ತುತ್ತಲೊಂದು ಕಲ್ಲು ಸಿಗಲು ಉಗಿಯಬಹುದು ದೂರಕೆ

ತುತ್ತತುಂಬ ಕಲ್ಲೆ ಇರಲು ಒಗ್ಗಲಹುದೆ ದೇಹಕೆ

ಕಲ್ಲು ತುಂಬಿದನ್ನದಂತೆ ಬೆರಕೆಯಾದ ಭಾಷೆಯು

ಕೀಳರಿಮೆಗೆ ಆಲಸ್ಯವು ಸೇರಿ ಬೆಳೆದ ಕ್ಲೀಷೆಯು

 

ಕನ್ನಡವನೆ ನುಡಿಯಿರಿ ಬಳಸಿ ಅದರ ಪದಸಿರಿ

ಶುದ್ಧವಾದ ಭಾಷೆ ಬಳಸಿ ಪರಂಪರೆಯ ಉಳಿಸಿರಿ

ಕನ್ನಡವ ನುಡಿವಲ್ಲಿ ಶುದ್ಧಕನ್ನಡ ನುಡಿದು

ಕನ್ನಡದ ಪದಸಿರಿಯ ಮನದಾಳದಿಂದಗೆದು

ಕನ್ನಡವ ಕನ್ನಡದ ಸೊಗಡಿನಲೆ ಬಳಸಿದರೆ

ಕನ್ನಡದ ತೋಟದೋಳ್ ಹರಿಯದೇ ಶುಭ್ರ ತೊರೆ

 

ಕನ್ನಡದ ನುಡಿತೋಟ ನಿನ ಸೇವೆ ಬೇಡುತಿದೆ

ಮನ್ನಿಸು ಕನ್ನಡದ ಕೋರಿಕೆಯ ಗೆಳೆಯಾ

ನಿನ್ನ ಮನೆಯಲಿ ದಿನವು ನೀವಾಡೊ ಮಾತಿನಲಿ

ಕನ್ನಡದ ಪದಗಳನೆ ಬಿಡದೆ ಬಯಸುವೆಯಾ

 

_______________________________________________________________

ತನು ಕನ್ನಡ ,ಮನ ಕನ್ನಡ ,ನುಡಿ ಕನ್ನಡ ಎಮ್ಮವು

 

ಹೆಚ್ಚಿನ ತಿಳಿವಿಗಾಗಿ: (ಕನ್ನಡ ಸಂಪತ್ತಿನ ಆಕರಗಳು)

ಪ್ರೊ. ಜಿ. ವೆಂಕಟಸುಬ್ಬಯ್ಯನವರ ಮೂರು ಸಂಪುಟಗಳ ನಿಘಂಟು

ಕಣಜ, ಭಾರತವಾಣಿ

ಕನ್ನಡ ಅಭಿವೃದ್ಧಿ ಪ್ರಾಧಿಕಾರ’ ದ ಮಿನ್ನೆಲ (ಮಿಂಚು ನೆಲ/ ವೆಬ್ ಸೈಟ್).

ಕನ್ನಡ ಡಿಂಡಿಮ’ ಜಾಲ ತಾಣ

ಕನ್ನಡ ದೀವಿಗೆ ಜಾಲತಾಣ

 

 

 

—————————————– ——–XXXXXXXXXX————————————————-

 

ಭಾವ

ಭಾವ

 

ಮಗುವಿನ ಜೊಚ್ಚಿಲ ಅಳುವನು ಕೇಳುತ

ತಾಯಿಯು ಹರಿಸಿದ ಬಾಷ್ಪ೦ಗಳಲ್ಲಿ

ಹಸಿವನು ಅಳಿಸುತ ನೋವನು ಮರೆಸುತ

ಸಲಹುವ ತಾಯಿಯ ವಾತ್ಸಲ್ಯದಲಿ

 

ತಾಯಿಯ ಪ್ರೀತಿಯ ಸಾರವ ಸವಿಯುತ

ಬೆಳೆಯುವ ಕಂದನ ಮನದಾಳದಲಿ

ಮಕ್ಕಳ ಕನಸನು ನನಸನು ಮಾಡಲು

ದುಡಿಯುವ ತಂದೆಯ ಕೈ ಕಸುವಿನಲಿ

 

ವಿದ್ಯೆಯ  ಕಲಿಸಿದ ಗುರುವನು ನೆನೆಯುತ

ಬೆಳೆಯುವ ಶಿಷ್ಯನ ಗುರು ಭಕುತಿಯಲಿ

ತನ್ನನೆ ಮೀರಿಪ ಶಿಷ್ಯನ ಏಳಿಗೆ

ಕಾಣುವ ಗುರುವಿನ ಸಾರ್ಥಕ್ಯದಲಿ

 

ಮನವನು ಮನೆಯನು ಅನುದಿನ ಬೆಳಗುವ

ಮಡದಿಯ ಕೈಬಳೆ ನಿನಾದದಲಿ

ಪ್ರತಿಫಲ ಬಯಸದೆ ಪ್ರೀತಿಯ ತೋರುವ

ನಿಜರೂಪದ ಸಿಹಿ ಗೆಳೆತನದಲ್ಲಿ

 

ವಿಧ ವಿಧ ಬಗೆಯಲಿ ವಿಧ ವಿಧ ರೂಪದಿ

ಒಳಗೂ ಹೊರಗೂ ತೋರುತಲಿರುವ

ಜೀವರ ನಡುವಿನ ಬೆಸುಗೆಯ ಬೆಸೆಯುತ

ತನ್ಮಯಲೋಕಕೆ ತಳ್ಳುತಲಿರುವ

 

ಕಾಣುವೆ ಅನುದಿನ ಕಾಣುವೆ ಪ್ರತಿಕ್ಷಣ

ಇರದಿರಲದು ಬರಿ ಬರಡೇ ಜೀವನ

ಏನಿದು,ಏನಿದು, ಏನಿದು ಜೀವ

ಬಾಳನು ಸುಂದರ ಮಾಡಿದ ಭಾವ

ಏನಿದರ ಹೆಸರು

ಏನಿದರ ಹೆಸರು?

 

ಜಗ ಎದುರು ಬಿದ್ದಾಗ ಜಗದೆದುರು ಬಿದ್ದಾಗ

ಜಗದ ಜೀವರುಗಳೆಲ್ಲ ನಕ್ಕಾಗ

ಜಗಕೆ ಕಿವಿಗೊಡದಂತೆ ಜಗದ ಪರಿವೆಯ ಚಿಂತೆ

ಇರದಂತೆ ನೀನಂದು ನನಗಾಗಿ ನಿಂತೆ

 

ಕೈ ಚಾಚಿ ಎಬ್ಬಿಸುತ ಮೈ ಮನವ ಝಾಡಿಸುತ

ಮೈದಡವಿ ಮನದಲ್ಲಿ ಮನದಲ್ಲಿ ಧೈಯ೯ ಮೂಡಿಸಿದೆ

ತನುವ  ಧೂಳನು ಒರೆಸಿ ಮನದ ಗಾಯವ ಮರೆಸಿ

ಹಳೆಯ ಪುಟಗಳ ಹರಿದು ಹೊಸದು ತೋರಿಸಿದೆ

 

ಹೊಸ ಬದುಕ ನಾಳೆಗಳು, ನಾಳೆಗಳ ಹಾಳೆಗಳು

ಹಾಳೆಗಳು ತುಂಬಿರುವ ಪುಸ್ತಕವಿದೆ

ಪುಸ್ತಕದ ಮೊದಲೇನು, ನಡುವೇನು ಕೊನೆಯೇನು

ಪುಸ್ತಕದ ತುಂಬೆಲ್ಲ ನಿನ್ನಿರುವಿದೆ

 

ಕರುಳ ಕುಡಿ ನಾವಲ್ಲ, ಕರುಳ ರಕ್ತವು ಇಲ್ಲ

ನೆರೆ ನೆರೆದು ನಿಂತ ಸಂಬಂಧಗಳು ಇಲ್ಲ

ಬರಿದೆ ಭಾವದ ಬೇರು ಹೀರಿ ಪ್ರೀತಿಯ ನೀರು

ಬೆಳೆಸಿರುವ ಈ ತರುವಿಗೇನು ಹೆಸರು?

 

ನಿನಗೇನು ಅಲ್ಲದ ಎನಗಾರು ನೀನು?

ನಮ್ಮ ನಡುವಿನ ಬಂಧಕಿರುವ ಹೆಸರೇನು?

ಮಂಗ(ಗ)ಳ ಯಾನ- ಸುದರ್ಶನ ಗುರುರಾಜರಾವ್

ಮಂಗ(ಗ)ಳ  ಯಾನ

ವಿಶ್ವದಲ್ಲೇ ಪ್ರಥಮಬಾರಿಗೆ ಪ್ರಥಮ ಪ್ರಯತ್ನದಲ್ಲೇ ಪ್ರತಿಷ್ಠಿತ ಇಸ್ರೋ ಸಂಸ್ಥೆಯ ವಿಜ್ಞಾನಿಗಳು ಮಂಗಳನ ಅಂಗಳಕ್ಕೆ ಉಪಗ್ರಹವೋಂದನ್ನು ಇಳಿಸಿದ್ದು ವಿಜಯಾ ಮತ್ತೆ  ಅವನ ದಂಡಿಗೆ  ಭಾರೀ ಉನ್ಮಾದನಾನ್ನೂ, ದೇಶಪ್ರೇಮವನ್ನೂ,ಹುರುಪನ್ನು ಮೂಡಿಸಿಬಿಟ್ಟಿತು. ದೇಶದ ಸಮಸ್ತ ಜನಸ್ತೋಮದ ಜೊತೆಜೊತೆಗೆ ತಾವೂ ಈ ಸಾಧನೆಯನ್ನು ಸಂಭ್ರಮಿಸಿ ಪರಸ್ಪರ ಭಾರತೀಯರಾಗಿ ಅಭಿನಂದಿಸಿಕೊಂಡರು. ಅದೇ ಖುಷಿಯಲ್ಲಿ ತಾವು ಭಾರತೀಯರಾಗಿ ಈ ಭೂಮಿಯಲ್ಲಿ ಜನ್ಮ ತಾಳಿದ್ದಕ್ಕೆ ಸಾರ್ಥಕಭಾವವನ್ನು ಅನುಭವಿಸಿದರು. ತಮಗೆ ಕೆಲಸ ಸಿಗುವ ಮುನ್ನ, ಪೋಲಿಗಳಾಗಿ ಅಲೆಯುತ್ತಿದ್ದಾಗ ದಿನವೂ ಪೈಸೆ ಪೈಸೆಗೆ ಲೆಕ್ಖ ಕೇಳುತ್ತಿದ್ದ ತಂದೆತಾಯಿಯರನ್ನು ದಿನವೂ ಶಪಿಸುತ್ತಿದ್ದ, ತಮ್ಮನ್ನು ಈ ಭೂಮಿಗೆ ತಂದ ತಪ್ಪಿಗೆ ಅವರನ್ನೇ ನಿಂದಿಸುತ್ತಿದ್ದ ಅವರುಗಳಿಗೆಲ್ಲ ತಮ್ಮ ಮಾತಾ ಪಿತೃಗಳು ದೈವೀ ಸಮಾನರಾಗಿ ಗೋಚರಿಸಿದರು. ಅವರಿಗೆ ವಂದಿಸಿ ಹೆಚ್ಚು ಹುರುಪಿನಿಂದ ತಮ್ಮ ಕೆಲಸಕ್ಕೆ ನಡೆದರು.

ಅದಾದ ಒಂದು ತಿಂಗಳು ವಿಜಯನ ಸುದ್ದಿಯೇ ಇರಲಿಲ್ಲ,. ಯಾವ ಫೋನಿಗೂ ಈ-ಮೇಲಿಗೂ ಸಿಗಲಿಲ್ಲ. ಎಲ್ಲಿ ಹೋದ ಇವನು ಎಂದು ಎಲ್ಲರೂ ತಲೆ ಕೆರೆದು ಕೊಳ್ಳುತ್ತಿರುವಾಗಲೇ ಅವನು ಪ್ರತ್ಯಕ್ಷನಾದ. ಎಲ್ಲಿ ಹಾಳಾಗಿ ಹೋಗಿದ್ಯೋ ದರ್ಬೇಶಿ  ಈ -ಮೇಲು ಕಳಿಸಿದರು ಉತ್ತರ ಇಲ್ಲ ಎಂದು ಅವರು ಕೇಳಲಾಗಿ,  ನಾನು ಹಾರುತ ದೂರಾ ದೂರಾ, ಫೀ ಮೇಲು ಜೊತೆ ಹೋಗಿರುವಾಗ ನಿಮ್ಮ ಮೇಲು ಗಳಿಗೆ ನನ್ನ ಜೀವನದಲ್ಲಿ ಪಾಲಿಲ್ಲ ಎಂದು ಅಸಂಬದ್ಧವಾಗಿ ನುಡಿದ. ಅದೇನು ಸರಿಯಾಗಿ ಹೇಳೋ ಅಂದಿದ್ದಕ್ಕೆ, ನಾನು ಮಾರ್ಸು,ಆರ್ಬಿಟ್ ಎಲ್ಲ ಸೊನಾಲಿ ಜೊತೆ ಸುತ್ತುಹಾಕಿಕೊಂಡು ಬಂದೆನಮ್ಮ. ಬೇಕಾದ್ರೆ ನೀವೂ ಮಾರ್ಸ್ ನೋಡ್ಬೋದು. ಅಷ್ಟ್ಯಾಕೆ, ಗ್ಯಾಲಾಕ್ಸೀನೆ ಭೇದಿಸಬಹುದು. ಡೀಟೈಲಾಗಿ ಕೇಳ್ಬೇಕಾದ್ರೆ ಸಾಯಂಕಾಲ ನಮ್ಮ ಮಾಮೂಲು ಜಾಗಕ್ಕೆ ಬನ್ನಿ. ಕಾಫೀ ತಿಂಡಿ ಜೊತೆ ಹೇಳ್ತೀನಿ ಈಗ ಟೈಮಿಲ್ಲಮ್ಮ ಅಂತ ತನ್ನ “ಆಪಲ್ ವಾಚು” ನೋಡಿಕೊಂಡು ಹೊರಟು ಹೋದ.

 

ಎಲಾ ಇವನ. ಇದೇನಪ್ಪ ಇವನ ಹೊಸ ವರಸೆ, ಎರಡು ಗೇಣು ಉದ್ದ ಇಲ್ಲ ಮಾರು ಗಟ್ಲೆ ಮಾತಾಡ್ತಾನಲ್ಲ. ಮನೆ ಮುಂದಿನ ಅಂಗಳಕ್ಕೆ ಹೊಟ್ಟೆ ಬಿಟ್ಕೊಂಡು ಮೂರು ಮಾರು ಹಾರಕ್ಕೆ ಆಗದವನು ಮಾರ್ಸ್ ಗೆ ಹಾರುವುದೆಂದರೇನು? ಅದರ ಅರ್ಬಿಟ್, ಅಂದರೆ ಕಕ್ಷೆಯನ್ನು ಸೇರುವುದೆಂದರೇನು?ಕೋಟಿ ಮೈಲು ದೂರದಲ್ಲಿರುವ ಆ ಮಾರ್ಸ್, ಮಂಗಳನ ಅಂಗಳಕ್ಕೆ ಒಂದೇ ತಿಂಗಳಲ್ಲಿ ಹೋಗಿಬರುವುದೆಂದರೇನು? ಅದೂ ಅಲ್ಲದೆ ನಮಗೇ ಬರೀ ಮಾರ್ಸ್, ಮಂಗಳನೇ ಅಲ್ಲ, ಗ್ಯಲಾಕ್ಸಿಯನ್ನೇ ತೋರಿಸುತ್ತಾನೆಂದರೇನು? ತುಂಗೆ ನದಿಯನ್ನೇ ಕಾಣದ ಇವನು ಆಕಾಶಗಂಗೆಯನ್ನು ಕಂಡಿದ್ದಾನೆಂದರೆ  ನಂಬುವುದಾದರೂ ಹೇಗೆ? ಅರ್ಧ ಟೀ ಕುಡಿಸಿದ ಖರ್ಚಿಗೆ ನಮ್ಮಿಂದ ಎರಡರಷ್ಟು ಕೆಲಸ ತೆಗೆಯುವ ಇವನು ಕೋಟ್ಯಾನು ಕೋಟಿ ಖರ್ಚಿನ ಬಾಬತ್ತಿಗೆ ಕೈ ಹಾಕಿದಾದರೂ ಹೇಗೆ. ತಮ್ಮ ಮನೆಯ ಅಂಗಳವನ್ನೇ ಸರಿಯಾಗಿ ನೋಡದ ಇವನು ಮಂಗಳನ ಅಂಗಳವನ್ನು ಹೊಕ್ಕು ಬರುವುದೆಂದರೇನು, ಇಷ್ಟಕ್ಕೂ ನಮ್ಮ ಕಡೆಗೆ ಕಣ್ಣೆತ್ತಿಯೂ ನೋಡದ ಆ ಚಿನ್ನಾಲಿ, ಸೊನಾಲಿ ಇವನ ಜೊತೆ ಹಾರುತ್ತಾ ಹೋಗಿದ್ದಳೆಂ ದರೆ, ಅಬ್ಬಬ್ಬಾ !!! ಹೇಗೆ ಸಾಧ್ಯ ? ಎಂದುಕೊಂಡರೂ  ಕೆಟ್ಟ ಕುತೂಹಲ ಅವರನ್ನು ಕೆಣಕದೆ ಬಿಡಲಿಲ್ಲ. ಆ ಚಿನ್ನಾಲಿಯೊಡಾನೆ ಇವನು ಏನೇನು ಚಿನ್ನಾಟವಾಡಿರಬಹುದೆಂಬ ಅವರ ಕಸಿವಿಸಿ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದ್ದು ಸಾಯಂಕಾಲ ಅವಧಿಗೆ ಮೊದಲೇ ಜಮಾಯಿಸಿದರು.

ವಿಜಯ ಬೇಗನೆ ಬರಲಿಲ್ಲ. ಕಾದೂ, ಕಾದೂ ಎರೆಡೆರೆಡು ಬೈಟು ಟೀ  ಕುಡಿದರು. ಸಿಟ್ಟು ಪಾದರಸದಂತೆ ಏರುತ್ತ ಹೋಯ್ತು. ಏನೋ ಹುನ್ನಾರ ಮಾಡಿದ್ದಾನೆ. ಒಂದು, ಎಲ್ಲೋ ಇವನಿಗೆ ದೇಶ ಪ್ರೇಮ ಹುಚ್ಚೆದ್ದು ಭ್ರಾಂತು ಬಡಿದುಕೊಂಡಿರಬೇಕು ಅದಕ್ಕೇ ಏನೇನೋ ಬಡಬಡಿಸುತ್ತಿದ್ದಾನೆ. ಇಲ್ಲವೇ ನಮ್ಮನ್ನು ಮತ್ತೆ ಬೇಸ್ತು ಬೀಳಿಸಲು ಸಂಚು ಮಾಡಿರಬೇಕು. ಬರಲಿ, ಇವತ್ತು ಮಂಗಳನಾದಿಯಾಗಿ ಗ್ರಹಚಾರ ಬಿಡಿಸುವ; ರಾಹು ಕೇತು, ಶನಿ ಎಲ್ಲಾ ಇವತ್ತು ಈ ನನ್ಮಗನ ಒಂಭತ್ತನೇ ಮನೆಯಲ್ಲಿ ಸೇರಿಕೊಂಡಿರಬೇಕು.. ಕರಾರುವಾಕ್ ಸಮಯಪಾಲನೆಯ  ಕುರುಹು ಗೊತ್ತಿಲ್ಲ್ಲದ ಇವನು ಮಂಗಳನ ಮುಖ ನೋಡಿರುವುದು ಅಷ್ಟರಲ್ಲೇ ಇದೆ ಮಂಗ ನನ್ನ ಮಗ ಎಂದೆಲ್ಲಾ ಬೈದಾಡಿಕೊಂಡರು.

ಕಡೆಗೂ ವಿಜಯನ ಆಕೃತಿ ಕಣ್ಣಿಗೆ ಗೋಚರಿಸಿತು. ಹತ್ತಿರ ಬಂದ. ಬರುತ್ತಲೇ  ತನ್ನ ಮುಖದಿಂದ ಮುಗುಳು ನಗೆಯ ಬೆಳಕ ಬೀರಿ, ಕಂಗಳಲ್ಲೇ ಒಲವ ತೋರಿ .. ‘ಮಂಗಳದ ಈ ಸುದಿನ ಮಧುರವಾಗಲಿ’ ಎಲ್ಲರಿಗೂ ಅಂದ. ಅದು ಅವರಿಗೆ  “ಮಂಗಗಳ ಈ ಸುದಿನ “ ಅಂದಂತೆ ಕೇಳಿ ಸಿಟ್ಟು ಇನ್ನೂ ಕೆರಳಿತು. ಪುಟ್ಟ ಹೇಳಿದ “ ಲೋ ಸೋಂಬೇರಿ ನನ್ಮಗನೇ, ಮೂರು  ಮಾರು ದೂರ ಇರುವ ನಿಮ್ಮ ಮನೆಯಿಂದ ಬರುವುದೇ ನಿನಗಾಗಲ್ಲ, ಇನ್ನು ಮಾರ್ಸ್ ಮೇಲೆ ಮಜಾ ಮಾಡಿಬಂದೆ ಅಂತ ಪಟ್ಟಿ ಕುಯ್ತೀಯ ನಿನ್ನ ನಂಬ್ತೀವಲ್ಲ ನಮಗೆ ಮೆಟ್ಟಿನಲ್ಲಿ ಹೊಡ್ಕೋಬೇಕು. ಆ ಮಾರಮ್ಮಂಗೆ  ಕೋಣನ್  ಬದ್ಲು ನಿನ್ನೆ ಬಲಿಹಾಕಬೇಕು ಮಗನೆ ಅಂದ.”

ವಿಜಯ “ ಶಾಂತಿ, ಶಾಂತಿ ಪುಟ್ಟ. ನಾನಿನ್ನೂ ತಿದಿನೇ ಒತ್ತಿಲ್ಲ ಆಗಲೇ ಭುಸು ಗುಟ್ಟ್ತಾಇದೀಯ. ನೀನೊಂಥರ ಪಾಕಿಸ್ತಾನದಲ್ಲಿರೋ ಕ್ಷಿಪಣಿ ಥರ ನೋಡು. ಕುಂಡಿನಲ್ಲಿ ಯಾವಾಗಲೂ ಬೆಂಕಿ ಹತ್ಕೊಂಢಂಗೆ ಆಡ್ತೀಯ. ಸ್ವಲ್ಪ ಇರ್ರಪ್ಪಾ ಹೇಳ್ತೀನಿ” ಅಂದ

‘ಅದೇನ್ ಹೇಳ್ತೀಯೋ ನಾವೇನೇನ್ ಕೇಳ್ಬೇಕೋ,..  ನೋಡು ನಾವಾಗಲೇ ಟಿ ಎರೆಡೆರೆಡು ಸಾರಿ ಕುಡಿದಿದ್ದೀವಿ. ಈಗ ತಿನ್ನಕ್ಕೆ ಚುರುಮುರಿ ಆರ್ಡರ್ ಮಾಡು ಅಮೇಲೆ ಕಾಫೀನೂ ನೀನೇ ಕೊಡಿಸಬೇಕು’ ಅಂತ ಓಂಕಾರಿ ಮತ್ತೆ ಉಗ್ರಪ್ಪ ಇಬ್ಬರೂ ಆಗ್ರಹ ಮಾಡಿದರು.

‘ಹಂಗೇ ಆಗಲಿ ಬಿಡ್ರೋ. ನಿಮ್ಗೂ ಶಕ್ತಿ ಬೇಕಲ್ಲ. ಈಗ್ಲೇ ತಿನ್ಕೊಂಡು ಬಿಡ್ರಿ, ಆಮೇಲೆ ಕಷ್ಟ ಆಗ್ಬಹುದು’ ಅಂತ ಹೇಳಿ ಆರ್ಡರ್ ಕೊಟ್ಟ. ಅಡಿಗೆ ಭಟ್ಟ  ಗುಡಿಬಂಡೆ ಫುಲ್ ಖುಷ್ ಆಗಿ ಚುರುಮುರಿ ಬೆರೆಸಲು ಮೆಣಸಿನಕಾಯಿಗಳನ್ನು ಕಚಕಚನೆ ಕೊಚ್ಚತೊಡಗಿದ.

‘ಸರಿ ಈಗ ಅದೇನ್ ಪಿಟೀಲ್ ಕುಯ್ತೀಯೋ ಕುಯ್ಯಿ. ಆಮೇಲೆ ಏನಾದ್ರೂ ನಾನ್ಸೆನ್ಸ್ ಹೇಳಿದ್ರೆ ನೋಡ್ತಾ ಇರು ..’ ಜಗ್ಗು ಎಚ್ಚರಿಕೆ ಕೊಟ್ಟ.

‘ನೋಡ್ರಪ್ಪಾ ನಾನೇನು ಇಲ್ಲ ಸಲ್ಲದ್ದೆಲ್ಲಾ ಹೇಳ್ತಿಲ್ಲಾ. ನೀವಿ ಹೇಳಿಕೊಂಡ ಹಾಗೆ ಇದೇನು ಕನಸು ಅಲ್ಲ. ನಿಮಗೆ ಬೇಕಾದ್ರೆ ಸುಬ್ಬನ್ನೂ , ದಮ್ಮಿದ್ರೆ ಸೋನಾಲಿನೂ ಕೇಳ್ಕೊಳೀ. ಅವಳು ಹೆಂಗೂ ನಂಜೊತೆಲೇ ಬಂದಿದ್ಲಲ್ಲ…’ ಮೆಣಸಿನ ಕಾಯಿ ಕಿವುಚಿದ. ಕೇಳಿ ಅವರೆಲ್ಲರ ತಲೆ ಗಿರ್ರಂತು, ಹೊಟ್ಟೆ ಕಿರ್ರೆಂತು, ಅಂಡು  ಚುರ್ರಂತು.  ಈ  ಮೂರು ಗೇಣುದ್ದ ಇರುವ ನನ್ಮಗ ಅವಳ ಜೊತೆ ಹೆಂಗೆ ಸೆಟ್ ಅಪ್ ಮಾಡ್ಕೊಂಡ? ಅದಕ್ಕೇ ಇರಬೇಕು love is blind ಅಂತ ಅಂದಿರಬೇಕು. ಮಂಗಳಯಾನ ಅಂತ ಹಾಗೇ ಶುಭಮಂಗಳ ಮಾಡ್ಕೊಂಡು ಬಿಟ್ಟಿದ್ರೆ ಹೆಂಗಪ್ಪಾ..  ಎಂಬ  ಚಿದಂಬರ ರಹಸ್ಯವನ್ನು ಭೇದಿಸಲು ಪುಟ್ಟ ಕೇಳಿಯೇ ಬಿಟ್ಟ.

“ಮಂಗಳಯಾನಕ್ಖೋಗಿ, ಶುಭಮಂಗಳ ಮಾಡ್ಕೊಂಡು ಹಂಗೇ ವಾಪಸ ಬರ್ತಾ ಚಂದ್ರಯಾನದಲ್ಲಿ ಮಧುಚಂದ್ರನೂ ಮುಗಿಸಿಕೊಂಡು ಬಂದಿರೋ ಹಂಗಿದೆ ಯಜಮಾನ್ರು” ಉರ್ಕೊಂಡ.

ನಸುನಕ್ಕ ವಿಜಯ ತಲೆದೂಗುತ್ತಲೂ ಹುಸಿ ನಾಚಿಕೆಯನ್ನು ತೋರುತ್ತಲೂ ಎಲ್ಲರಿಗೂ ಅವರವರ ತಿಂಡಿ ಪ್ಲೇಟುಗಳನ್ನು ತಾನೇ ಆಸ್ಥೆಯಿಂದ ಕೊಡುತ್ತಾ ಜೊತೆಗೆ ಅವರ್ಗಳು ಕೇಳದೇ ಇದ್ದರೂ ಮೈಸೂರುಪಾಕನ್ನೂ ಇಡಿಸಿದ್ದ. ಅದನ್ನು ನೋಡಿದ ಅವರ ತಳಮಳ ಇನ್ನೂ ಹೆಚ್ಚಾಯ್ತು. ಈ ನನ್ಮಗ ಆ ಸೊಟ್ಟ ಮೂತಿ ಸುಬ್ಬು ಸಾಕ್ಷಿಯಲ್ಲಿ ಅ ಚಿನಾಲಿ ಕೈಹಿಡಿದು ರಿಜಿಸ್ಟರ್ ಮಾಡುವೆ ಮಾದ್ಕೊಂಡಿರಬೇಕು ,ಅದಕ್ಕೇ ಅವರ ಅಪ್ಪ ಅಮ್ಮಂಗೂ ಇವನ ಅಡ್ರೆಸ್ ಗೊತ್ತಿರಲಿಲ್ಲ. ಒಳಗೇ ಮಸಲತ್ ಮಾಡಿದ್ದಾನೆ ಮಿತ್ರದ್ರೋಹಿ ಅಂತ ಮನದಲ್ಲೇ ಬೈದುಕೊಂಡರು.

ವಿಜಯ ಶುರು ಮಾಡ್ದ .” ನೋಡ್ರಪ್ಪಾ ನಾನು ಒಂದು ವರ್ಷದಿಂದ ಆಗಾಗ ರಜಾಹಾಕಿ ಹೋಗ್ತಾ ಇದ್ದಿದ್ದು ನಿಮಗೆ ಗೊತ್ತು. ಅವಾಗೆಲ್ಲ ನಾನು ಸೊನಾಲಿ ಟ್ರೈನಿಂಗ್ ಜೊತೆನೇ ಹೋಗ್ತಾ ಇದ್ದಿದ್ದು. ಆ ಪ್ರಾಜೆಕ್ಟು ಬಹಳ ರಹಸ್ಯ. ಭೈರಪ್ಪನವರ ಯಾನದಲ್ಲ್ಲಿತ್ತಲ್ಲಾ ಆ ಥರ ಅಂದ್ಕೊಳ್ಳಿ . ನಮಗೆ ಟ್ರೇನಿಂಗ – ತರಬೇತಿ ಅಂತ ಅದೆಲ್ಲಾ, ಕಡೆಗೆ ಅದು ಯಶಸ್ವಿಯಾಗಿದ್ದಕ್ಕೆ  ನಾವು ಮಾರ್ಸ್ ಆರ್ಬಿಟಲ್ಗೇ ಹೋಗಿ  ಹಂಗೇ ಸುತ್ತಾಡಿಕೊಂಡು ಬಂದ್ವಿ” ಅಂದ

‘ಅಲ್ಲಾ..ಹಂಗೇ ಸುತ್ತಾಕ್ಕಂಡು ಬರಕ್ಕೆ ಅದೇನು ಬುಡೇನ್ ಸಾಬಿ ಬಾಡಿಗೆ ಸೈಕಲ್ನಲ್ಲಿ ಸೀಗೇಹಳ್ಳಿಗೆ ಹೋಗಿ ಬಂದಂಗಾ .. ನನ್ಮಗನೇ.. ಮಾರ್ಸ್ ಆರ್ಬಿಟಲ್ ಗೆ ರಾಕೆಟ್ ನಲ್ಲಿ ಕೂತ್ಕೊಂಡು   ಹೋಗದಲ್ವಾ..’ ಓಂಕಾರಿ ಹೂಮ್ಕಾರ ಮಾಡಿದ .

‘ಮತ್ತಿನ್ನೇನು, ಕಂಬಿ ಇಲ್ದೇ ರೈಲು ಓಡ್ಸೋದು ಇವನಿಗೆ ಹೇಳ್ಕೊಡ್ಬೇಕಾ ..’ ಜಗ್ಗು ಅನುಮೋದಿಸಿದ.

‘ನೋಡ್ರೋ ನೀವು ನಂಬಿದ್ರೆ ನಂಬಿ ಬಿಟ್ರೆ ಬಿಡಿ, ನಾವಂತೂ ರೋವರ್  ನಲ್ಲಿ ಕೂತು, ಮಾರ್ಸ್ ಆರ್ಬಿಟಲ್ ಗೆ ಹೋಗಿ ಸುತ್ತಾಕೊಂಡ್ ಬಂದ್ವಿ. ಸೊನಾಲಿ ನನ್ನ ಪಕ್ಕನೆ ಕೂತಿದ್ಲು. ನಾನು ಹೇಳಿದ ಜೋಕ್ ಗೆಲ್ಲ  ನಕ್ಕಳು.’ ಕಿಚಾಯಿಸಿದ. ಅವರೆಲ್ಲರ ಹೊಟ್ಟೆ ಯೋಗ ಗುರು ರಾಮ್ ದೇವ್ ಹೊಟ್ಟೆ ಥರ ಗುರ್ ಗುರಾ ಅಂತ ಅಲ್ಲಾಡ್ತು.

ಅದೇನ್ ಸರಿಯಾಗಿ ಬೊಗಳಿ ಪುಣ್ಯ ಕಟ್ಕೋ , ಆರ್ಬಿಟಲ್ ನಲ್ಲಿ ಎಷ್ಟು ಸುತ್ತು  ಹಾಕಿದ್ರಿ ? ಉಗ್ರಿ ವ್ಯಗ್ರನಾಗಿ ಕೇಳಿದ.

“ ಆರ್ಬಿಟಲ್ ಅಂದ್ರೆ ಏನೂ ಅಂತ ಮೊದಲು ತಿಳ್ಕೋ ಬೇಕು. ಅದೊಂದು ಮುಗಿಯದೆ ಇರುವ ಜಗಿತ. ನೀವೆಷ್ಟೇ ಜಗಿದರೂ ಮುಗಿಯುವುದೇ ಇಲ್ಲ ಹೌದೋ ಅಲ್ವೋ ?” ಕೇಳಿದ

ಉಗ್ರಿಗೆ ಅವನು ಜಗಿತ ಅಂದದ್ದು ಜಿಗಿತ ಅನ್ನೋಥರ ಕೇಳಿಸಿ  ತಲೆದೂಗುತ್ತಾ, “ಹೌದು ಹೌದು, ಆರ್ಬಿಟ್ ದೀರ್ಘವೃತ್ತಾಕಾರದ ಕಕ್ಷೆ. ವೃತ್ತಕ್ಕೆ ಎಲ್ಲಾದರೂ ಆದಿ  ಅಂತ್ಯಗಳಿರುವುದುಂಟೇ ,. ನಮ್ಮ ಬೆಂಗಳೂರಿನ ರಿಂಗ್ ರೋಡ್ ಥರ” ಸಮರ್ಥನೆ ಕೊಟ್ಟ.

“ಒರ್ಬಿಟ್ ನ ಜಗಿದು ಜಗಿದು ಬೇಜಾರಾದ್ರೆ ನೀವು ಮಾರ್ಸ್ ಗೆ ಹೋಗಬೇಕು. ಅದು ಕಂದು  ಬಣ್ಣ ಇರುತ್ತೆ,. ಮೇಲ್ಮೈ ಎಲ್ಲಾ ಒರಟು, ಸಪಾಟಾಗಿ ನೈಸಾಗಿ ಇರಲ್ಲ ; ಆದರೆ ಮಾತ್ರ ಒಳಗೆ ಮೆದು” ವಿಜಯ ಹೇಳಿದ

ಜಗ್ಗು ಅನುಮೋದಿಸುತ್ತಾ,, ಹೌದಪ್ಪಾ , ಎಲ್ಲ್ಲಾ ಫೋಟೋದಲ್ಲೂ ತೋರ್ಸಲ್ವಾ,. ಗುಡ್ಡಗಳು ಕಣಿವೆಗಳು ಇವೆ. “

“ಇಲ್ಲ,ಅದೆಲ್ಲಾ ತಪ್ಪು. ಮಾರ್ಸ್ ಮೇಲೆ ದೊಡ್ಡ ಗುಡ್ಡಗಳಿಲ್ಲ. ಬರೀ ಮೋಟು ದಿಣ್ಣೆಗಳಷ್ಟೇ. ಕಣಿವೆಗಳಂತು ಇಲ್ಲವೇ ಇಲ್ಲ”. ವಿಜಯ ಒತ್ತಿ ಹೇಳಿದ, ಅವನ ಮೀಸೆಯ ಕೆಳಗಿನ ನಗು ಮಬ್ಬುಗತ್ತಲಲ್ಲಿ ಅವರಿಗೆ ಕಾಣಲಿಲ್ಲ.   

ಸರಿ ಆಮೇಲೆ, ಕಿಟ್ಟು ಬಾಯಿ ಬಿಟ್ಟ.

“ ಸರಿ ನಮಗೆ ಆರ್ಬಿಟ್ ಜಗಿದು ಜಗಿದು ಬೇಜಾರಾಗಿ ಕಡೆಗೆ ಮಾರ್ಸ್ ಕಡೆ ನಡೆದೆವು. ಆರ್ಬಿಟ್ ಅನ್ನು ತೊರೆದು ಮಾರ್ಸ್ ಒಳಗೆ ಇಳಿಸಿದೆವು. ಅಂದ .

ಮಾರ್ಸ್ ಮೇಲಲ್ವಾ ಎಲ್ಲಾರೂ ಇಳಿಯೋದು ? ಒಳಗೆ ಇಳಿಯೋದು ಅಂದ್ರೆ ಏನು? ಕಿಟ್ಟು ಮತ್ತೆ ಕೇಳಿದ

‘ಇಲ್ಲ, ಇಲ್ಲಾ, ಮಾರ್ಸ್ ಇರೋದೇ ಒಳಗೆ ಇಳಿಯಕ್ಕೆ. ಅದು ಬಹಳ ಚೆನ್ನಾಗಿರುತ್ತೆ. ಮರಳು ಮರಳಾಗಿ, ಸ್ವಲ್ಪ ಜಿಗುಟು, ಕಚ್ಚಿಕೊಂಡು ಬಿಡುತ್ತೆ’ ಅಂದ.

‘ಹಾಗೋ., ಅಂದ್ರೆ ನೆಲ ಮೆತ್ತಗಿರುತ್ತೋ? ಕಚ್ಚಿಕೊಂಡು ಬಿಡೋಕೆ ಅಲ್ಲೇನು ನೀರಿರುತ್ತಾ?’ ಓಂಕಾರಿ ಕೇಳಿದ.

‘ಲೋ,.. ಮಂಕು ಮುಂಡೇದೆ,ನೀನು ಭೂಗೋಲದಲ್ಲಿ ಓದಿಲ್ವಾ ,. ಭೂಮಿಗೆ ಬಹಳ ಹೋಲುವ ಗ್ರಹ ಮಂಗಳ- ಅದೇ ನಮ್ಮ ಮಾರ್ಸ್. ನೀರಿರೋದು ಈಗ ಸಾಬೀತಾಯ್ತಲ್ಲ,.’ ಉಗ್ರಿ ಬಾಯಿ ಹಾಕಿದ.

‘ಹೌದು, ಚೆನ್ನಾಗಿ ಜಗಿದಷ್ಟೂ ನೀರು ಜಾಸ್ತೀನೆ , ಬಲವಾಗಿ ತಳ್ಳಿದರೆ ಒಳಗೂ ಹೋಗುತ್ತೆ.’ ಅಂತ ತಡೆಯಲಾಗದೆ ಜೋರಾಗಿ ನಕ್ಕ. ಜಗ್ಗುವಿನ ಅನುಮಾನ ಜಾಸ್ತಿ ಆಯಿತು. ಅಷ್ಟರಲ್ಲಿ ಸುಬ್ಬನ ಆಗಮನ ಆಯ್ತು.

ತಂಗಳನ್ನ ತಿನ್ನುವ ಕಂಗಾಳಿ ಹಂಗಿರುವ ಇವನನ್ನು ಆ  ಮಂಗಳನ ಅಂಗಳಕ್ಕೆ ಯಾವ   ಮಂಗ ನನ್ನ ಮಗ ಕಳಿಸಿರಬಹುದು  ಎಂದುಕೊಳ್ಳುತ್ತಾ ಅವನನ್ನೇ

‘ಏನೋ ಸುಬ್ಬು ಈ ವಿಜಯ ನೀನು ಮತ್ತೆ ಸೊನಾಲಿ ಮಾರ್ಸ್ ಆರ್ಬಿಟಲ್ ಗೆಲ್ಲಾ ಹೋಗಿ ಬಂದ್ರೇನೋ’ ಒಕ್ಕೊರಲಿನಿಂದ ಕೇಳಿದರು.

ಹಿಂದು ಮುಂದು ಗೊತ್ತಿಲ್ಲದ ಸುಬ್ಬು ಹೇಳಿದ ‘ಹೌದು ಆ ಮಾರಯ್ಯನ ಕಾಫೀ ಕ್ಲಬ್ ಇರಲಿಲ್ಲವಾ., ಅಲ್ಲೆಲ್ಲಾ ಕ್ಲಾಸಿಗೆ  ಚಕ್ಕರ್ ಹೊಡೆದು ಸೂರ್ಯನ ಸುತ್ತಾ ತಿರುಗೋ ಗ್ರಹಗಳ ಹಾಗೆ ತಿರುಗೋ ಕಾಲೇಜು ಹುಡುಗೀರು ಹುಡುಗರು ಸುತ್ತಾಕ್ತಾ ಇರಲ್ವಾ, ಅದೇ ಕಾಫೀ ಕ್ಲಬ್ ಮಾರಯ್ಯ ಮೊನ್ನೆ ಮಂಗಳಯಾನ ಯಶಸ್ವೀ ಆಗಿದ್ದಕ್ಕೆ,ಆ  ಖುಷಿಗೆ ತನ್ನ ಅಂಗಡೀನ ಮಾರ್ಸ್ ಆರ್ಬಿಟಲ್ ಅಂತ ಬದಲಾಯಿಸಿಕೊಂಡಿದಾನೆ. ಈ ನನ್ಮಗ ವಿಜಯ ಅವತ್ತು ಆ ಸುಂದ್ರಿ ಸೊನಾಲಿ ಜೊತೆ ‘ಹಾರುತ ದೂರಾ ದೂರಾ’ ಅಂತ ನಡ್ಯೋದ ಬಿಟ್ಟು ತೇಲಾಡ್ ಕೊಂಡು ವಯ್ಯಾರ ಮಾಡ್ ಕೊಂಡು ಹೋಗ್ತಾ ಇದ್ದ. ಅಲ್ಲಿ ನಾನು ಇದ್ರೂ ನನ್ನ ನೋಡದ  ಹಾಗೇ ಕಣ್ಣು ಹೊರಳಿಸಿ , ಮುಖ ತಿರುಗಿಸಿಕೊಂಡು ಹೋಗ್ತಾ ಇದ್ದ. ಸೊನಾಲಿ ಮುಂಚೆ ನನ್ನ ಜೊತೆ ಕೆಲಸ ಮಾಡಿದ್ಳಲ್ಲ ಅವಳೇ ಹಾಯ್ ಅಂದ ಬಿಟ್ಳು.ಈ ಲೋಫರ್ನ ಮುಖ ನೋಡ್ಬೇಕಾಗಿತ್ತು. ಕೇಸರೀಭಾತ್ ನಲ್ಲಿ ಜಿರಳೆ  ಸಿಕ್ಕೋರ್ ಥರ ಮಾಡ್ದ. ಕೊನೆಗೆ ಕಾಟಾಚಾರಕ್ಕೆ ನನ್ನನ್ನೂ  ಕರೆದ. ಇವಂದು ಜಟಕಾ ಗಾಡಿ ಥರ ಇದ್ಯಲ್ಲಾ, ಆ ಕಿತ್ತೋಗಿರೋ ರೋವರ್ ಕಾರು, ಅದರಲ್ಲೇ ಆ ಮಾರಯ್ಯನ ಕಾಫಿ ಕ್ಲಬ್ ಗೆ ಕರ್ಕೊಂಡ್ ಹೋದ. ಈ ನನ್ಮಗನ ಡೌಲು ನೋಡ್ಬೇಕಾಗಿತ್ತು. ಇಂದ್ರನ ಐರಾವತ ಓಡ್ಸೋ ಥರ. ಆ ಮಾರ್ಸ್ ಅರ್ಬಿಟಲ್ ಅಂತ ಹೆಸರು ಬದಲಾಯಿಸಿ ಬೋರ್ಡ್ ಅವತ್ತೇ ಹಾಕಿದ್ದಕ್ಕೆ ಅಲ್ಲಿ ಕಾಫಿ ತಿಂಡಿ ತಗೊಂಡ್ರೆ ಮಾರ್ಸ್ ಚಾಕಲೇಟು ಬಾರು , ಆರ್ಬಿಟ್ ಚ್ಯೂಯಿಂಗ್ ಗಮ್ ಪ್ಫ್ರೀ ಆಗಿ ಕೊಟ್ಟರು . ಈ ಮೀರ್ ಸಾದಿಕ್ ನನ್ಮಗ ಅವಳ ಹತ್ರ ಲಲ್ಲೆ ಹೊಡೆದದ್ದೇನು? ಸೊಟ್ಟ  ಮೂತಿ ಮಾಡ್ಕೊಂಡು ರಜನೀಕಾಂತ್ ಸ್ಟೈಲ್ ನಲ್ಲಿ ಆ ಆರ್ಬಿಟ್ ಜಗಿದಿದ್ದೇನು, ಅವಳು ಆ ಮಾರ್ಸ್ ಚಾಕಲೇಟ್ ಬಾರ್ ನ ಒಂಥರಾ ಮಾದಕವಾಗಿ ಬಾಯಿಗಿಟ್ಟುಕೊಂಡು ಕಚ್ಚಿದರೆ ಈ ನನ್ಮಗ ಕೂತಲ್ಲೇ ನಲೀತಿದ್ದ,. ನನ್ನ ಒಂದೂ ಮಾತಾಡ್ಸಿದ್ರೆ ಕೇಳು!

ಕೊನೆಗೆ ಬೋರಾಗಿ ನಾನು ಲೇಟಾಯ್ತು ಹೊರಡ್ತೀನಿ ಅಂದ್ರೆ ಮೆತ್ತಗೆ ಎದ್ಬಂದು ಪರಸ್ ಮರೆತು ಬಂದೆ ‘ಬಿಲ್ಲು’ ಕೊಡು ಅಂತ ನನಗೇ  ಮೋಸದ್ ಬಾಣ ಹೊಡೀತಾನೆ ಭಡವ. ನಾನೇನಾದ್ರೂ ಅಲ್ಲಿ ಸಿಕ್ಕಿಲ್ಲಾಂ ದಿದ್ರೆ ಎನ್ಮಾಡ್ತಿದ್ದ ಅಂತೀನಿ….” ಅಂತ ವಿಷಯವನ್ನೇ ತನ್ನ ವಿಷದ ರೀತಿಯಲ್ಲಿ ಕಕ್ಕಿದ. ‘ಇಲ್ಲಿ ನಿಮಗೆ ಏನು ಬತ್ತಿ ಇಟ್ಟಿದ್ದಾನೆ ?’ ಅಂತಲೂ ಕೇಳಿದ.

ಇಂಗು ತಿಂಗ ಮಂಗಳಂತಾದ  ಅವರ ಮೂತಿ ನೋಡಿದ ವಿಜಯನಿಗೆ ನಗು ತಡೆಯಲೇ ಆಗಲಿಲ್ಲ. ತಾಳು ನನ್ನ ಮಗನೆ ಇವತ್ತು ನಾವೆಲ್ಲಾ ಸೇರಿ ಒದ್ದು ನಿನ್ನ  ಈ ಮಾರ್ಸ್ ಯಾಕೆ ಆ ಗ್ಯಾಲಾಕ್ಸಿಯಿಂದಲೇ ಗಡಿ ಪಾರು ಮಾಡಿಬಿಡುತ್ತೇವೆ’ ಎಂದು ಎದ್ದ ಅವರಿಂದ ತಪ್ಪಿಸಿಕೊಳ್ಳಲು ಚಂಗನೆ ನೆಗೆದು ವಿಜಯ ಓಡುವಲ್ಲಿ  ಗ್ಯಾಲಾಕ್ಸಿ ನಾಮಧೇಯ ಹೊತ್ತ ಕವಚ ಖಚಿತ ಚಾಕಲೇಟಿನ ದೊಡ್ಡ ಬಿಲ್ಲೆಯೊಂದು ಅವನ ಜೇಬಿನಿಂದ ಎಗರಿ ಅವರ ಮುಂದೆ ಬಿತ್ತು. !!!

_______________________________________________________

ಋಣ: ಫೇಸ್ ಬುಕ್ ನ ಗೋಡೆಗಳ ಮೇಲೆ ಬಂದ ಕೆಲವು ಕಾಮೆಂಟ್ (ಟೀಕೆ-ಟಿಪ್ಪಣಿ) ಗಳಿಂದ  ಸ್ಫೂರ್ತಿ ಪಡೆದು ರಚಿಸಿದ ಲೇಖನ.

ಕೃತಜ್ಞತೆಗಳು : ಶ್ರೀವತ್ಸ ಜೋಶಿ ಮತ್ತು ಅವರ ಗೆಳೆಯರ ಬಳಗ  

ಸುದರ್ಶನ ಗುರುರಾಜರಾವ್ ಅವರ ಬರಹ

“ನೆಟ್ಟಿ”ಗೇರಿದ ಪಠ್ಯ @ ನೆತ್ತಿಗೇರುವುದೇ? ಅಂತರ್ಜಾಲದಲ್ಲಿ ಕನ್ನಡ ಮಾಧ್ಯಮ ಶಾಲಾ ಪಠ್ಯಗಳು

“ನೆಟ್ಟಿ”ಗೇರಿದ ಪಠ್ಯ @ ನೆತ್ತಿಗೇರುವುದೇ? ಅಂತರ್ಜಾಲದಲ್ಲಿ ಕನ್ನಡ

ಮಾಧ್ಯಮ ಶಾಲಾ ಪಠ್ಯಗಳು

ನಾವು ಶಾಲೆಯಲ್ಲಿ ಓದುತ್ತಿರುವಾಗ ಒಂದು ತರಗತಿಯಿಂದ  ಉತ್ತೀರ್ಣರಾಗಿ ಇನ್ನೊಂದು ತರಗತಿಗೆ ಹೋಗುವುದರ ಜೊತೆಗೆ ಮುಂದಿನ ತರಗತಿಯ ಪಠ್ಯ ಪುಸ್ತಕಗಳ ಬೇಟೆಯೂ ಶುರುವಾಗುತ್ತಿತ್ತು. ಏಪ್ರಿಲ್ ಹತ್ತನೇ ತಾರೀಖು ನಮ್ಮ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಿ ಅಧಿಕೃತವಾಗಿ ಪಾಸಾಗಿದ್ದೇವೆಂದು ಘೋಷಣೆಯಾಗುತ್ತಿದ್ದಂತೆ ನಮಗಿಂತ  ಒಂದು ವರ್ಷ ಮುಂದಿನ ವಿದ್ಯಾರ್ಥಿ ಗಳೊಂದಿಗೆ ನಮ್ಮ ಮಾತುಕತೆ ಶಾಲಾ ಆವರಣದಲ್ಲೇ ಶುರುವಾಗುತ್ತಿತ್ತು. .

ಮುಂಚಿನ ಪರಿಚಯದ ಆಧಾರದ ಮೇಲೆ, ಪುಸ್ತಕಗಳನ್ನು ಜೋಪಾನವಾಗಿ ಬೈಂ ಡು  ಹಾಕಿ ಕಾಪಾಡಿಕೊಂಡಿದ್ದನೆಯೇ ಇಲ್ಲವೇ ಎಂಬ ಗಾಳಿಸುದ್ದಿಯ ಮೇಲೆ ಯಾರೊಂದಿಗೆ ವ್ಯವಹರಿಸುವುದೆಂಬ ಕಾರ್ಯಕಾರಿ ನಿರ್ಣಯ ಕೈಗೊಳ್ಳಲಾಗುತ್ತಿತ್ತು.  ಇನ್ನು ಮುಂದಿನ ಕ್ಲಾಸಿನ ವಿದ್ಯಾರ್ಥಿ ಹುಡುಗಿಯಾಗಿದ್ದರೆ ಅವರನ್ನು ನೇರವಾಗಿ ಮಾತುಕತೆಗೆ ಎಳೆಯಲು ಆಗದ ನಾವು ಅವರುಗಳ ಅಣ್ಣಂದಿರ ಮೂಲಕ ವ್ಯವಹಾರ ಕುದುರಿಸಿಕೊಳುತ್ತಿದ್ದೆವು.  ಪುಸ್ತಕ ಬೇಟೆಯ ದಂಡಿಗೆ ಕೊರತೆಯಿಲ್ಲದಿದ್ದರೂ ಗಿರಾಕಿಗಳಿಗೂ ಒಂದು ಸ್ಥಾನ ಮಾನ ಇರುತ್ತಿತ್ತು. ಮಾತುಕತೆಗೆ ಮುಂಚೆಯೇ ಹಣ ತೋರಿಸಬಲ್ಲ , ಪುಸ್ತಕಕ್ಕೆ ತಕ್ಷಣ ಹಣ ಪಾವತಿಸಬಲ್ಲ, ಒಂದೆರೆಡು ದಿನಗಳಲ್ಲಿ ಕೊಡಬಲ್ಲ, ಒಂದೆರೆಡು ಕಂತುಗಳಲ್ಲಿ ಕೊಡಬಲ್ಲ, ಪುಸ್ತಕ ಕೊಂಡುಹೋಗಿ ಹಣ ಕೊಡಲಾಗದೆ ಪುನಃ ಜಪ್ತಿ ಮಾಡಿಸಿಕೊಂಡ ಇತಿಹಾಸವುಳ್ಳ ಇತ್ಯಾದಿ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಈ ಕೊಡು ಕೊಳ್ಳುವ ವ್ಯವಹಾರ ನಡೆಯುತ್ತಿತ್ತು. ಶಾಲೆಗಳು ಪ್ರಾರಂಭವಾಗಿ ೩-೪ ತಿಂಗಳು ಕಳೆದರೂ ಕೆಲವೊಮ್ಮೆ ಕೆಲವು ವಿಷಯಗಳ ಪಠ್ಯ  ಪುಸ್ತಕಗಳು ಸಿಗುತ್ತಲೇ ಇರಲಿಲ್ಲ !! ಬೆಂಗಳೂರಿನಿಂದ ಹರದಾರಿ ದೂರದಲ್ಲಿದ್ದ ಕೊಂಪೆಗಳಲ್ಲಿದ್ದ ನಮಗೆ ಎಷ್ಟೋ ಬಾರಿ ಪುಸ್ತಕಗಳು ಅಂಗಡಿಗಳಿಗೆ ಬಂದು ಖರ್ಚಾಗಿ ಹೋಗುತ್ತಿದ್ದುದೂ  ತಿಳಿಯುತ್ತಿರಲಿಲ್ಲ. ಈಗಿನಂತೆ ಜೆರಾಕ್ಸ್ ಸೌಲಭ್ಯವೂ ಸುಲಭವೂ , ಅಗ್ಗವೂ ಆಗಿ ದೊರಯದ ಕಾರಣ ಈ ಬಳಸಲ್ಪಟ್ಟ ಪುಸ್ತಕಗಳಿಗೆ ಎಲ್ಲಿಲ್ಲದ ಬೇಡಿಕೆ ಇತ್ತು. ಅಷ್ಟಕ್ಕೂ ಉತ್ತಮವಾಗಿ ಕಾಯ್ದುಕೊಂಡ ಅವೇ ಪುಸ್ತಕಗಳು ಕಡಿಮೆ ಬೆಲೆಗೆ ಸಿಕ್ಕಿ ಒಂದೆರೆಡು ರೂಪಾಯಿ ಉಳಿದರೆ ಅದೂ  ಸಂತೋಷಕರವೇ ! ಐದು ಹತ್ತು ಪೈಸೆಗಳಿಗೂ ತತ್ವಾರ ಆಗಿದ್ದ ಅ ದಿನಗಳಲ್ಲಿ Tesco  ದ ಧ್ಯೇಯವಾಕ್ಯವಾದ every little helps ಎಂಬುದು ನಮ್ಮ ಅಳಿವು ಉಳಿವಿನ ವೇದವಾಕ್ಯವಾಗಿ ತ್ತೆನ್ನಿ. ಇಷ್ಟಾಗಿಯೂ ಆರು ಏಳನೇ ತರಗತಿಯಲ್ಲಿ ಸಮಾಜ ಮತ್ತು ಕನ್ನಡದ ಪಠ್ಯಗಳು ಸಿಗದೇ ೨೦೦ ಹಾಳೆಯ ಲೇಖಕ್ ಪುಸ್ತಕವೊಂದರಲ್ಲಿ ಅದರ ನಕಲು ಮಾಡಿಕೊಂಡಿದ್ದೆ.

ಇಂತಿಪ್ಪ ಈ ಸೀನಿಯರ್ ವಿದ್ಯಾರ್ಥಿಗಳೊಂದಿಗಿನ ನಮ್ಮ ಈ  ಚೌಕಾಸಿಯೊಂದಿಗೆ  ಬೇಸಿಗೆ ರಜೆಯ ಆಚರಣೆಗೆ ಶ್ರೀಕಾರ ಹಾಡಲಾಗುತ್ತಿತ್ತು.

ನನ್ನ ಮುಂದಿನ ತರಗತಿಯಲ್ಲಿದ್ದ ವಿರುಪಿ, ಪಾಂಡಿ, ಸತೀಶ, ಹೋಟ್ಲು ಮಂಜ, ಉಜಿನಪ್ಪ, ಗೋವಿಂದ ,ಬಾಬು, ದೇವರಾಜಪ್ಪ, ತಿಪ್ಪೇಸ್ವಾಮಿಯೇ ಮೊದಲಾದವರ ಬಳಿ ಮಾತಾಡಿ ಅವರ ಮನೆಗಳಿಗೆ ಎಡತಾಕಿ, ಅಳೆದು ಸುರಿದು, ಹಗ್ಗ ಜಗ್ಗಾಟ ನಡೆಸಿ, ಅವರುಗಳಿಂದ ‘ ಕೊಡುವುದಿಲ್ಲ ಹೋಗೆಂ’ಬ ಧಮಕಿಗಳಿಗೆ ಒಳಗಾಗಿ ಕೆಲವೊಮ್ಮೆ ಗೆದ್ದು, ಕೆಲವೊಮ್ಮೆ ಸೋತು,ಅಷ್ಟಿಷ್ಟು  ಕೆಲವೊಮ್ಮೆ ಮೋಸಹೋಗಿ, ಮತ್ತೆ ಕೆಲವೊಮ್ಮೆ ಮರುಳು ಮಾಡಿ, ಬೇರೆ ಯಾವುದೋ ಆಸೆ ತೋರಿಸಿ ವ್ಯವಹಾರ ಮುಗಿಸಿ ಎಲ್ಲ ಪುಸ್ತಕಗಳೊಂದಿಗೆ ಮನೆ ಸೇರಿದರೆ ಅಲ್ಲಿಗೆ ಪಾಂಡವ ಅಶ್ವಮೇಧವೂ ನಮ್ಮ ವಿಜಯೋತ್ಸವಕ್ಕೆ ಸಮವಿರುತ್ತಿರಲಿಲ್ಲ. ವರುಷ ಪೂರ್ತಿ ನಾನು ಕೂಡಿಟ್ಟುಕೊಂಡ ಹಣಕ್ಕೆ ವರುಷದ ಕೊನೆಗೆ ನಮ್ಮ ತಾಯಿ ಕೊಡುತ್ತಿದ್ದ ೫ ರೂಪಾಯಿ ಸೇರಿ ಸ್ವಲ್ಪ ಬಂಡವಾಳ ಇಟ್ಟುಕೊಂಡು ಹೋಗುತ್ತಿದ್ದ ನನಗೆ ಸ್ವಲ್ಪ ಆದ್ಯತೆ ಇತ್ತು ಎಂದೇ ಹೇಳಬೇಕು. ಮಾರುವವರಿಗೂ ಹಣ ಸಿಕ್ಕರೆ ಅವರ ಪುಸ್ತಕಗಳಿಗೂ ದಾರಿಯಾದೀತೆಂಬ ಯೋಚನೆ ಅವರಿಗೆ!

 

ನಗರಗಳಲ್ಲಿದ್ದ ನಮ್ಮ ಕೆಲವು ನೆಂಟರ ಮಕ್ಕಳಿಗೆ ಈ ಗೋಜಲು-ಪರಿಪಾಟಲುಗಳು ಇರಲಿಲ್ಲ. ಖಾಸಗೀ ಶಾಲೆಯಾದ ಕಾರಣ ಅವರಿಗೆ ಹೇಗೋ ಪುಸ್ತಕಗಳು ಹೊಂದಿಕೆಯಾಗಿಬಿಡುತ್ತಿದ್ದವು. ಆಂಗ್ಲಮಾಧ್ಯಮವೂ ಸಹ!

ನೋಟು ಪುಸ್ತಕಗಳು ಕೂಡಾ ಅವರಿಗೆ ಸಲೀಸಾಗಿ ಸಿಗುತ್ತಿದ್ದವು. ನಾವು ಅವರುಗಳ ಮನೆಗೆ ಹೋದಾಗ ಅವರ ಹಿಂದಿನ ಕ್ಲಾಸಿನ ಪುಸ್ತಕಗಳನ್ನು ಪಡೆದು ಬರೆಯದ ಹಾಳೆಗಳನ್ನು ಜೋಪಾನವಾಗಿ ಹರಿದು ಸೇರಿಸಿ ದಪ್ಪ ದಾರ ದಬ್ಬಳಗಳಿಂದ ಅವುಗಳನ್ನು ಹೊಲಿದು ತರುತ್ತಿದ್ದೆವು. ಅವರೂ ಅವುಗಳನ್ನು ಕೊಡುವಷ್ಟು ಧರಾಳಿಗಳಾಗಿದ್ದರು.

ಈಗ ಕಾಲ ಬದಲಾಗಿದೆ. ಮೊದಲ ಹಂತವೆಂಬಮತೆ ಎಲ್ಲ ಸರಕಾರೀ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಕಾಲ ಕಾಲಕ್ಕೆ ತಲುಪದ ವಿಳಂಬ ನೀತಿ ಇಂದಿಗೂ ಒಂದು ಜಾಡ್ಯವೇ ಆದರೂ ಪುಸ್ತಕ ಸಿಗುವುದರ ಭರವಸೆಯಂತೂ ಇದೆ. ಆದರೆ ಹೊರಗಡೆಯ ಮಾರಾಟವನ್ನು ನಿಷೇಧಿಸಿರುವ ಕಾರಣ ಕಾಸುಕೊಟ್ಟರೂ ನಿಮಗೆ ಪುಸ್ತಕಗಳು ಸಿಗಲಾರವು.

ಎರಡನೆ ಹಂತದಲ್ಲಿ ಈ ಪಠ್ಯಗಳನ್ನು ಅಂತರ್ಜಾಲದಲ್ಲಿ ಏರಿಸುತ್ತೇವೆಂದು ಕಳೆದ ಐದು ವರುಷಗಳಲ್ಲಿ ಹೇಳುತ್ತಾ ಮೂಗಿಗೆ ತುಪ್ಪ ಹಚ್ಚಿ ಕೂಡಿಸಿದ್ದ ಕರ್ನಾಟಕ  ಘನವೆತ್ತ ಸರಕಾರ ಕೊನೆಗೂ ಆ ಕೆಲಸ ಮಾಡಿದೆ. ಕರ್ನಾಟಕದಲ್ಲಿ ಕಲಿಸಲ್ಪಡುವ ಎಲ್ಲ ಭಾಷಾ ಮಾಧ್ಯಮಗಳ ಎಲ್ಲ ವಿಷಯಗಳ ಪಠ್ಯ ಪುಸ್ತಕಗಳನ್ನು “ನೆಟ್ಟಿ” ಗೆ ಏರಿಸಿದೆ.  ಕನ್ನಡ ಮಾಧ್ಯಮದ ಪುಸ್ತಕಗಳು ಈಗ ಸಮಗ್ರವಾಗಿ ಒಂದು ಕಡೆ ಲಭ್ಯವಾಗಿವೆ. ಕನ್ನಡಮಟ್ಟಿಗೆ ಇದೊಂದು ಸಕಾರಾತ್ಮಕವಾದ, ಧನಾತ್ಮಕವಾದ ಬೆಳವಣಿಗೆ. ಹಾಗೆಂದು ಕನ್ನಡ ಪಠ್ಯಗಳನ್ನು ಅಂತರ್ಜಾಲದಲ್ಲಿ ದೊರೆಯುವಂತೆ ಮಾಡುವ ಕೆಲವು ಪ್ರಯತ್ನಗಳು ಹಿಂದೆ ನಡೆದಿದ್ದವು. ಅಮೇರಿಕಾದ ಕನ್ನಡಕ್ಕೆ ಮಿಡಿಯುವ ಕೆಲವು ಜೀವಗಳು ಸ್ಕ್ಯಾನ್ ಮಾಡಿದ ಕೆಲವು ಪುಸ್ತಕಗಳ , ಬಿಡಿ ಹಾಳೆಗಳನ್ನು ಒಂದೆಡೆ ಸೇರಿಸಿ ಆಸಕ್ತರಿಗೆ ಕೊಡಮಾಡುವ ಕೆಲಸ ಮಾಡಿದ್ದರು. ಸರಳತೆಯ, ಸಮಗ್ರತೆಯ ನಿಟ್ತಿನಿಂದ ಇವು ಹೆಚ್ಚು ಪ್ರಯೋಜನಕಾರಿಯಾಗುವಲ್ಲಿ ಸೋತವು. ನಾನು ಸಹಾ ಭಾರತದಲ್ಲಿ ಪುಸ್ತಕಗಳಿಗಾಗಿ ಹಲವಾರು ಬಾರಿ ಪ್ರಯತ್ನಿಸಿ ಸೋತಿದ್ದೆ . ಇನ್ನು ಆ ಚಿಂತೆ ಇಲ್ಲ.

 

ತಮಿಳುನಾಡು ಸರಕಾರದ ಶಿಕ್ಷಣ ಪ್ರಾಧಿಕಾರವು ಕನ್ನಡ ಪುಸ್ತಕಗಳನ್ನುಅಂತರ್ಜಾಲದಲ್ಲಿ  ಬಿಡುಗಡೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾದ  ಸಂಸ್ಥೆ. ಬಣ್ಣದ ಚಿತ್ರ, ಸರಳತೆ , ವಿಷಯ ವಿಸ್ತಾರ,ನಿರೂಪಣೆಯಿಂದ ಗುಣಮಟ್ಟದ ಪಠ್ಯಗಳನ್ನು ಕೊಡಮಾಡಿದೆ. ಒಂದನೇ ತರಗತಿಯಿಂದ ೧೨ ನೇ ತರಗತಿಯವರೆಗೆ ಎಲ್ಲಾ ವಿಷಯಗಳ ಪುಸ್ತಕಗಳು ಕನ್ನಡ ,ತೆಲುಗು, ಮಲೆಯಾಳಂ ಹಾಗೂ ತಮಿಳು ಮಾಧ್ಯಮದಲ್ಲಿ ದೊರೆಯುತ್ತವೆ. ಮೊದಲು ವರ್ಷದ ಪೂರ್ಣ ಪಠ್ಯ ಲಭ್ಯವಿತ್ತು . ಈಗ ಸೆಮಿಸ್ಟರ್ ಪದ್ಧತಿಯಲ್ಲಿ ಎರೆದು ಮೂರು ಭಾಗಗಳಾಗಿ ವಿಂಗಡಿಸಿ ವಿಭಜಿಸಿದ ಕಾರಣ ಸ್ವಲ್ಪ ಅವ್ಯವಸ್ಥೆ ಅನಿಸುತ್ತದೆ.  ಮೊದಲು ಕನ್ನಡ ಭಾಷಾ ಭಾರತಿ ಪಠ್ಯ ವೂ ಇತ್ತು. ಈಗ ಭಾಷಾ ಭಾರತಿ ಆರನೆ ತರಗತಿಯಿಂದ ಮಾತ್ರ ಲಭ್ಯ. ಇದೂ ಸಹಾ ಒಂದು ಕೊರತೆ! ಆದಾಗ್ಯೂ ಇದೊಂದು ಬಲು ಉಪಯೋಗಿಯಾದ ಪ್ರಯತ್ನ. ನನ್ನ ಮಕ್ಕಳಿಗೆ ಕನ್ನಡವನ್ನು ಇದರ ಸಹಾಯದಿಂದ ಕಲಿಸುತ್ತಿದ್ದೇನೆ. ೧೨ನೇ ತರಗತಿಯ ಕನ್ನಡ ಪುಸ್ತಕದಲ್ಲಿ ಪೂರ್ಣಚಂದ್ರ ತೇಜಸ್ವಿಯವರ “ಕೃಷ್ಣೇಗೌಡನ ಆನೆ” ಕಥೆ ಇದೆ. ಧರೆಗಿಳಿಸಿಕೊಂಡು ಓದಿ.

NCERT ಅವರ ಜಾಲತಾನದಲ್ಲಿಯೂ ಪಠ್ಯಗಳಿವೆ. ಹಿಂದೀ, ಇಂಗ್ಲೀಶು, ಉರ್ದು ಮಾಧ್ಯಮದ ಈ ಪಠ್ಯಗಳು ಕನ್ನಡ ಕಲಿಕೆಗೆ ಸಹಕಾರಿಯಾಗಿಲ್ಲ.  ೬-೮ ವರುಶಗಳಿಂದ ಇದು ಚಾಲ್ತಿಯಲ್ಲಿದ್ದರೂ ಪ್ರಾಂತೀಯ ಭಾಷೆಗಳನ್ನು ಕಡೆಗಣಿಸಲಾಗಿತ್ತು.  ಭಾರತದ ಅಧಿಕೃತ ಭಾಷೆಗಳಲ್ಲಿ ಕಲಿಕಾಸಾಮಗ್ರಿಗಳು ದೊರೆಯುವಂತೆ ಮಾಡಲು ಕೇಂದ್ರಸರಕಾರದ “ಭಾರತವಾಣಿ “ ಎಂಬ ಮಹತ್ವಾಕಾಂಕ್ಷಿ  ಯೋಜನೆಯ ಸಹಯೋಗದಲ್ಲಿ ಕನ್ನಡ ಪುಸ್ತಕಗಳು ಕರ್ನಾಟಕದಿಂದ ಕಡೆಗೂ  ಬೆಳಕು ಕಂಡಿವೆ ಹಾಗೂ ಇದನ್ನು ಬಹಳ ಅಚ್ಚುಕಟ್ಟಾಗಿ ಮಾಡಲಾಗಿದೆ. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಎಲ್ಲ ವಿಷಯದ ಪುಸ್ತಕಗಳು ಇವೆ. ಕನ್ನಡಿಗರಾದ ಬೇಳೂರು ಸುದರ್ಶನ ಅವರ ತಂಡವು ಶ್ರದ್ಧೆ ಪ್ರೀತಿಗಳಿಂದ ನಮಗೆ ಕೊಡಮಾಡಿದ್ದಾರೆ.

ಇಲ್ಲಿ ಎಲ್ಲ ಪುಸ್ತಕಗಳನ್ನು PDF ಆವೃತ್ತಿಯಲ್ಲಿ ನೋಡಬಹುದು , ಅಮ್ಗೈಲಿನ ಸ್ಲೇಟುಗಳಲ್ಲಿ, ಮಡಿಲಲ್ಲಿ ಮಗುವಾಗಿ ಮಾಡಿಸಿಕೊಂಡು ಮಲಗುವ, ಬಿಚ್ಚಿಕೊಂಡು ಆಡುವ ಗಣಕ ಯಂತ್ರಗಳಲ್ಲಿ ಧರೆಗಿಳೀಸಿಕೊಂಡು ಶೇಖರಿಸಿಡಬಹುದು, ಓದಬಹುದು, ಕಲಿಯಬಹುದು, ಕಲಿಸಬಹುದು!!

ಕರ್ನಾಟಕದ ಈ ಪುಸ್ತಕಗಳನ್ನು ಕರ್ನಾಟಕದ “ಕಣಜ” ದಲ್ಲೂ ಇವುಗಳನ್ನು ಪಡೆಯಬಹುದಾಗಿದೆ. ಆದರೆ, not for  copy  ಎಂಬ ನೀರಿನ ಕಲೆ ಕಡುಕಪ್ಪಾಗಿ ಕಾಣುವ ಕಾರಣದಿಂದ ಕಿರಿಕಿರಿ ಯಾಗುತ್ತದೆ. ಭಾರತವಾಣಿಯಲ್ಲಿ ಈ ತೊಂದರೆಯಿಲ್ಲ.  ಭಾರತವಾಣಿ ಎಂಬ ದೂರದೃಷ್ಟಿಪೂರ್ಣ, ಬಹುತ್ವಾಕಾಂಕ್ಷಿ  ಯೋಜನೆಯ ಒಳಹೊಕ್ಕು ಒಮ್ಮೆ ನೋದಿಬನ್ನಿ. ಇಡೀ ಭಾರತದ ಭಾಷೆಗಳಲ್ಲಿರುವ ಜ್ಞಾನ ಗಂಗೆಯನ್ನು ಒಂದೆಡೆ ಸೇರಿಸುವ ಸಾಗರದೋಪಾದಿ ಯೋಜನೆ. ನಿಘಂಟು, ಪಠ್ಯಗಳು, ಜೊತೆಗೆ ಕನ್ನಡದ ವಿಶ್ವಕೋಶ ಸಹಾ ಇಲ್ಲಿ ಲಭ್ಯ! ಮಹಾರಾಷ್ಟ್ರ ಸರಕಾರದ ಕನ್ನಡದ ಪಠ್ಯಗಳು ಸಹ ಇಲ್ಲಿ ಲಭ್ಯ  ಇವೆ. ಎಲ್ಲ ತರಗತಿಯ ಎಲ್ಲ ಪುಸ್ತಕಗಳು ಇನ್ನೂ ಇಲ್ಲ. ಆದರೆ ಗುಣಮಟ್ಟದ ದೃಷ್ಟಿಯಿಂದ ತಮಿಳುನಾಡಿನ ಪುಸ್ತಕಗಳಿಗಿಂತ ಉತ್ತಮವಾದುವು. ಭಾರತವಾಣಿ ಬೆಳೆಯುತ್ತಾ ಹೋದಂತೆ ನಮ್ಮ ಆಯ್ಕೆಯ ಸಾಧ್ಯತೆಗಳು ವಿಸ್ತಾರವಾಗುತ್ತವೆ. ಬಹು ಮಾಧ್ಯಮ ಜ್ಞಾನವಾಹಿನಿಯೂ ಅಭಿವ್ರುದ್ಧಿಗೊಳ್ಳುತ್ತಿದೆ ಎಂದು ಕೇಳಿ ಬಲ್ಲೆ. ಕನ್ನಡದ ಉಳಿವು ಬೆಳವಣಿಗೆಗೆ ಆದ ಸಹಾ ಸಹಾಯಕವಾಗಬಹುದು, ಕಾಯಬೇಕು.

 

ಕನ್ನಡದ ಮೊದಲ ರಾಷ್ಟ್ರಕವಿ ಹೀಮೆಯ ಶ್ರೀ ಗೋವಿಂದಪೈ ಅವರ  ‘ ತಾಯೆ ಬಾರಾ ಮೊಗವ ತೋರ ಕನ್ನಡಿಗರ ಮಾತೆಯೇ’ ಎಂಬ ಹಾಡಿನಲ್ಲಿ

ಎನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ

ಮೃಗದ  ಸೇಡು  ನಮ್ಮ ಪಾಡು ಪರರ ನುಡಿಗೆ ಮಿಡುಕುವ

ಕನ್ನಡ ಕಸ್ತೂರಿಯನ್ನ ಹೊಸತು ಸಿರಿಂ ತೀಡದೆನ್ನ

ಸುರಭಿ ಎಲ್ಲಿ? ನಿನದನ್ನ ನವಶಕ್ತಿಯನೆಬ್ಬಿಸು

ಹೊಸ ಸುಗಂಧದೊಸಗೆಯಿಂದ  ಜಗದಿ ಹೆಸರ ಹಬ್ಬಿಸು

ಎನ್ನುವ  ಮಾತುಗಳಿವೆ.

ಸರಳ, ಸುಂದರ, ಸಶಕ್ತವಾದ ಕನ್ನಡ ಭಾಷೆ ತನ್ನ ಜನರಿಂದಲೇ ಅವಗಣನೆಗೆ ಒಳಗಾಗಿ ಅಳಿವು ಉಳಿವಿನ ಹೋರಾಟದಲ್ಲಿ ನಲುಗುತ್ತಿರುವಾಗ ಇದೊಂದು ಆಶಾದಾಯಕವಾದ  ಬೆಳವಣಿಗೆ. ತಾಂತ್ರಿಕ ಯುಗದ ಪಾಶ್ಚಾತ್ಯೀಕರಣದ ಹೊಡೆತಕ್ಕೆ ಸಿಕ್ಕಿ ಬಳಲಿರುವ ಭಾಷೆಗೆ ಇದು ಒಂದು ತಾತ್ಕಾಲಿಕವಾದ ಶಕ್ತಿ ನೀಡುವ ಸೂಜಿಮದ್ದು.

ಉಪಸಂಹಾರ:

ಇಲ್ಲಿಗೆ ಎರಡು ವರುಷಗಳ ಹಿಂದೆ ನನ್ನ ಪ್ರೌಢಶಾಲಾ ಶಿಕ್ಷಕರೊಬ್ಬರ ಭೇಟಿ ಮಾಡಿದ್ದೆ. ನಾವು ಮಕ್ಕಳಾಗಿ, ವಿದ್ಯಾರ್ಥಿಗಳಾಗಿ ಅಂದು ನಾವು ಪಡುತ್ತಿದ್ದ ಪರಿಪಾಟಲುಗಳನ್ನು  ಅವರು ಮೆಲುಕುಹಾಕಿದರು.’’ ಅಂದು ನಿಮಗೆ ಕಲಿಯುವ ಆಸೆಯಿತ್ತು, ಜ್ಞಾನದ ಹಸಿವಿತ್ತು. ನಿಮ್ಮ ಆ ಅವಶ್ಯಕತೆಗಳನ್ನು ಪೂರೈಸುವ ಸೌಲಭ್ಯವಾಗಲಿ, ಆರ್ಥಿಕ ಶಕ್ತಿಯಾಗಲೀ ನಮಗಿರಲಿಲ್ಲ. ಇಂದಿನ ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್ನು, ಪೆನ್ಸಿಲ್ ಸೈಕಲ್ ,ಊಟ, ಬಟ್ಟೆ ಎಲ್ಲವೂ ಉಚಿತವಾಗಿ  ದೊರೆಯುತ್ತದೆ. ಆದರೆ ಕಲಿಯುವಂತ ಹಸಿವೆ ಅವರಲ್ಲಿ ನಮಗೆ ಕಾಣುವುದಿಲ್ಲ’’.

ಅವರಾಗ ಹೇಳಿದ ಎರಡು ಮಾತುಗಳು ಆಗಾಗ  ನನ್ನ ಮನಃ ಪಟಲದಲ್ಲಿ ಹಾಯ್ದುಹೋಗುತ್ತಿರುತ್ತವೆ.

ಕನ್ನಡಕ್ಕೆ ಕುರಿತಾದ ಈ ಹೊಸ ಬೆಳವಣಿಗೆಯೂ ಹಸಿವಿಲ್ಲದವನಿಗೆ ಬಡಿಸಿದ ಮೃಷ್ಠಾನ್ನವಾಗದಿದ್ದರೆ ಸಾಕು. ಅಂಗೈಯಲ್ಲಿ ಅರಮನೆಯಿದ್ದರೇನು ಭಾಗ್ಯ? ಕನ್ನಡದ ಮಕ್ಕಳು ಅನುಭವಿಸುವ ಅದೃಷ್ಟವಿಲ್ಲದ  ಭೋಗ ಅಭಾಗ್ಯರಾಗದಿದ್ದರೆ ಸಾಕು..

ನೇರವಾಗಿ ‘’ನೆಟ್ಟಿ’’ ಗೆ ಏರಿದ ಕನ್ನಡ , ತನ್ನ ಮಣ್ಣಿನ ಋಣವಿರುವ ಕನ್ನಡ ಕೂಸುಗಳ ನೆತ್ತಿಗೇರುವುದೇ ಎಂಬುದು ಯಕ್ಷ ಪ್ರಶ್ನೆ

ಗೋವಿಂದ ಪೈ ಗಳ ಈ ಸಾಲುಗಳೊಮಡಿಗೆ, ಕನ್ನಡದ ವೈಭವಕ್ಕೆ ಹಾತೊರೆಯುತ್ತಾ,,,

‘’ಕುಗ್ಗದಂತೆ ಹಿಗ್ಗಿಪಂತೆ ನಿನ್ನ ಹೆಸರ ಟೆಕ್ಕೆಯಂ

ನೀಗದಂತೆ  ಸಾಗಿಪಂತೆ ನಿನ್ನ ನುಡಿಯ ಢಕ್ಕೆಯಂ

ನಮ್ಮೆದೆಯಂ ತಾಯೆ ಬಲಿಸು

ಎಲ್ಲರ ಬಾಯಲ್ಲಿ ನೆಲೆಸು

ನಮ್ಮ ಮನನೊಂದೆ ಕಲಸು

ಇದನೊಂದನೆ ಕೋರುವೆ

ನಿನ್ನ ಮೂರ್ತಿ ಜಗತ್ಕೀರ್ತಿ ಎಂದಿಗೆಮಗೆ ತೋರುವೆ? ‘’

——————————————————–

‘’ನೆಟ್ಟಿ’’ಗೇರ್ದ ನುಡಿಯು ನೆತ್ತಿಗೇರಲದು ಅಸಾಧ್ಯವೇ ?

ಕನ್ನಡದ ಕಲಿಗಳಾಗಿ ಆಂಗ್ಲವನ್ನು ಮಣಿಸಿ- ಖಾಸಗಿ ಶಾಲೆಗಳ ಕಡೆಗಣಿಸಿ.

ಕನ್ನಡದ ಕಲಿಗಳಾಗಿ ಆಂಗ್ಲವನ್ನು ಮಣಿಸಿ-

ಖಾಸಗಿ ಶಾಲೆಗಳ ಕಡೆಗಣಿಸಿ.

ಕನ್ನಡ ಮಾಧ್ಯಮದಲ್ಲಿದ್ದು ಇಂಗ್ಲಿಷ್ ಕಲಿಯಲು/ಕಲಿಸಲು ಸುಲಭ ವಿಧಾನ

೧.ಪರಿಚಯ

೨.ಕಲಿಕೆಯ ಕ್ರಮ (ಸ್ಥೂಲ ರೂಪು ರೇಷೆ )

೩. ಇಂಗ್ಲಿಷ್ ಭಾಷೆಯ ವ್ಯವಸ್ಥಿತ ಅಭ್ಯಾಸ ಮತ್ತು ಇಂಗ್ಲಿಷ್ ಕಲಿಕೆಯ ಪರಿಕರಗಳು- ಭಾಷಾಂತರ ಪಾಠಮಾಲೆ

೪.ಉಪಸಂಹಾರ ಮತ್ತು ಪರಿಸಮಾಪ್ತಿ.

ಪರಿಚಯ :

ಕನ್ನಡದಲ್ಲಿ ಕಲಿತರೆ ಭವಿಷ್ಯವಿಲ್ಲ, ಇಂಗ್ಲೀಷ್  ಮಾಧ್ಯಮ ಎಂದರೆ ಮಾತ್ರವೇ ಯಶಸ್ಸಿನ ಮಂತ್ರ ಎಎಂಬೊಂದು ನಂಬಿಕೆಯನ್ನು ಜನಮಾನಸದಲ್ಲಿ ಬಲವಾಗಿ ಬಿತ್ತಿ ಕಾಲಕ್ರಮದಲ್ಲಿ ನೀರೆರೆರ್ದು ಪೋಷಿಸಿಕೊಂಡು ಬಂದ ಖಾಸಗಿ ವ್ಯವಸ್ಥಾಪಕರು, ಅವರೊಡನೆ ಕೈಜೋಡಿಸಿ ತಮ್ಮ ನೆಲ-ಜಲ- ಭಾಷೆ ಸಂಸ್ಕೃತಿಗೆ ಚೂರಿ ಹಾಕಿದ ಭ್ರಷ್ಟ ರಾಜಕಾರಿಣಿಗಳು, ಧೃತರಾಷ್ಟ್ರನಂತೆ ತಿಳಿದು ಸುಮ್ಮನಿದ್ದ ಸರಕಾರವು ಜನರನ್ನು ಸುಲಿದು ಹಣದ ಹೊಳೆಯನ್ನು ತಮ್ಮಕಡೆಗೆ ಹರಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿವೆ. ಕ್ಲಿಷ್ಟ ಸಮಸ್ಯೆಗಳಿಗೆ ಪರಿಹಾರ ಬಹಳಷ್ಟು ಬಾರಿ ಸರಳವೇ ಇರುತ್ತದೆ. ಅದನ್ನು ಗುರುತಿಸಿ ಅಳವಡಿಸಿಕೊಳ್ಳುವ ಭಾರ ಪ್ರಜ್ಞಾವಂತ ಸಮಾಜದ್ದಾಗಿರಬೇಕು. ಅಂತಹ ಸರಳೋಪಾಯಗಳನ್ನು ಹುಡುಕಿಸಿ ಪಸರಿಸುವ ಕೆಲಸ ಶಿಕ್ಷಣ ಮತ್ತು ಸಾಹಿತ್ಯ-ಸಂಸ್ಕೃತಿ ಇಲಾಖೆಗಳದ್ದಾಗಿರಬೇಕು. ಆದರೆ ಎಲ್ಲರೂ ಕಳ್ಳರೇ ! ಗೊಂದಲವನ್ನು ಹಬ್ಬಿಸಿ ಅದರ ಲಾಭ ಪಡೆಯಲು ನಿಂತ ಬೇಲಿಯೇ ಎದ್ದು ಹೊಲ ಮೇಯ್ದ ಪರಿಣಾಮವಾಗಿ ಇಂದು ಕನ್ನಡ ಶಾಲೆಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಖಾಸಗಿಗೆ ಪೈಪೋಟಿ ಕೊಡುವಲ್ಲಿ ಸೋಲುತ್ತಿವೆ. ಅವುಗಳಲ್ಲಿ ಕೆಲವನ್ನು ನೋಡೋಣ

 

೧. ನಗರ ಭಾಗಗಳಲ್ಲಿ ಕನ್ನಡ ಶಾಲೆಗೆ ಹೋಗುವ ಬಹುತೇಕರು ಬಡತನದ ರೇಖೆಗಿಂತ ಕೆಳಗಿನವರು- ಮನೆಯಲ್ಲಿ ಯಾವ ಮಾರ್ಗದರ್ಶನ ಇವುಗಳಿಗೆ ದೊರೆಯುವುದು ಅಪರೂಪ

೨. ಗ್ರಾಮಾಂತರ ಶಾಲೆಗಳಲ್ಲಿ ಹಾಗೂ ಕುಗ್ರಾಮಗಳಲ್ಲಿ ಇದೆ ಬಡತನದ ಸಮಸ್ಯೆ ಜೊತೆಗೆ ಶಿಕ್ಷಕರ ಅಭಾವ, ಅಧೋಗತಿಯ ಕಟ್ಟಡಗಳು ಇತ್ಯಾದಿ.

೩. ಶಿಕ್ಷಕರಿಗೆ ಕಲಿಸುವುದೊಂದನ್ನು ಬಿಟ್ಟು ಬೇರೆಲ್ಲವನ್ನೂ ತಲೆಗೆ ಕಟ್ಟಿ ಅವರ ಬದುಕನ್ನು ಮೂರಾಬಟ್ಟೆ ಮಾಡಿರುವ ಸರಕಾರ ಮಕ್ಕಳ ಅಧೋಗತಿಗೆ ತಾನು ಕೈಜೋಡಿಸಿದೆ.

೪..ಖಾಸಗಿ ಶಾಲೆಯ ಗೀಲಿಟುಗಳನ್ನು ತೋರಿಸಲಾಗದ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ನವರಂಗಿ ದುನಿಯಾದಲ್ಲಿ ಆಕರ್ಷಣೆ ಕಳೆದು ಕೊಳ್ಳುತ್ತಿವೆ. ಸಮವಸ್ತ್ರ ಧರಿಸಿ, ಹೊರೆ ಬ್ಯಾಗು ಹೊತ್ತು ಬೂಟು ಹಾಕಿ ಕುತ್ತಿಗೆ ಕೌಪೀನವನ್ನು ಕಟ್ಟಿ ಶಾಲೆಗೆ ಹೊರಟರೆ ತಮ್ಮ ಮಕ್ಕಳು ಮುಂದೆ ಬಂದರು ಎಂದು ಭ್ರಮಿಸುವ ತಂದೆ ತಾಯಿಯರಿಗೂ ಕಡಿಮೆ ಏನು ಇಲ್ಲ.

 

ಉತ್ತಮ ಹಿನ್ನೆಲೆ/ಮನೆಯಲ್ಲಿ ಸಿಗುವ ಪ್ರೋತ್ಸಾಹ/ಹೆಚ್ಚುವರಿ ಪಾಠದ ಅನುಕೂಲ /ಸೌಲಭ್ಯಗಳಿಂದ ಮುಂದೆ ಬಂದ ವಿದ್ಯಾರ್ಥಿಗಳ ಜಾಹಿರಾತುಗಳನ್ನು ದೊಡ್ಡದಾಗಿ ತಂದೆತಾಯಿಯರು ಸುರಿದ ಹಣದಿಂದಲೇ ಕೊಟ್ಟು ಮತ್ತಷ್ಟು ಹಣ ಮಾಡಿಕೊಳ್ಳುವ ಖಾಸಗಿ ಶಹಳೆಗಳಿಗೆ/ಇಂಗ್ಲಿಷ್ ಮಾಧ್ಯಮಗಳ ಶಾಲೆಗಳಿಗೆ ಸರಕಾರಿ ಶಾಲೆಗಳು ಯಾವ ಸ್ಪರ್ಧೆಯನ್ನು ಒಡ್ಡಲಾರವು. ಸಾಮಾಜಿಕ ಸಮಾನತೆಯನ್ನು ಮೀಸಲಾತಿಯ ಮೂಲಕ ತರಲು ಶ್ರಮಿಸುವ ಸರಕಾರ, ಸಮಾನತೆಯ ಮೂಲಭೂತ ಅಂಶವಾದ ಶಿಕ್ಷಣ ಕ್ಷೇತ್ರವನ್ನು ಅಸಮಾನತೆಯ ಆಡುಂಬೊಲವಾಗಿ ಪರಿವರ್ತಿಸಿರುವುದೊಂದು ಈ ಶತಮಾನದ ಬಹುದೊಡ್ಡ ವಿಪರ್ಯಾಸ.

ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಕಲಿತವರೆಲ್ಲರೂ ಯಶಸ್ಸಿನ ಹಾದಿ ಹಿಡಿದವರೇನಲ್ಲ. ಸಾಧಾರಣದಿಂದ ಹಿಡಿದು ಅಸಾಧಾರಣ ಸಾಧನೆ ಮಾಡಿದವರಂತೆಯೇ ಸಾಕಷ್ಟು ಪ್ರಮಾಣದ ಸಂಖ್ಯೆಯಲ್ಲಿ ಎಲ್ಲಿಯೂ ಸಲ್ಲದ ಪ್ರಜೆಗಳೂ ಇದ್ದಾರಾದರು ಅವರುಗಳ ಪರಿಚಯ ಸಮಾಜಕ್ಕೆ ಇರುವುದೇ ಇಲ್ಲ.ಹಾಗೂ ಅದನ್ನು ಹಾಗೆಯೇ ಇರುವಂತೆ ನೋಡಿಕೊಳ್ಳಲಾಗುತ್ತದೆ. ಅದೇ ರೀತಿ ಕನ್ನಡ ಶಾಲೆಯಲ್ಲಿಯೇ ಓದಿ ಸಾಧನೆ ಮಾಡಿದವರ ವಿವರಗಳು ವ್ಯವಸ್ಥಿತವಾಗಿ ಪ್ರಚಾರಗೊಳ್ಳುವುದಿಲ್ಲ. ಹಾಗಾಗಿ ಇದೊಂದು ರೀತಿಯ ಭ್ರಮೆಯನ್ನು ಜನಮಾನಸದಲ್ಲಿ ಹುಟ್ಟು ಹಾಕುತ್ತದೆ. ಇಂತಹ ದುಬಾರಿ ಶಾಲೆಯ ಮಕ್ಕಳು ಕಲಿಯುವೆ ಠುಸ್ಸ್-ಪುಸ್ ಇಂಗ್ಲೀಷು ಬಹುತೇಕ ವ್ಯವಸ್ಥಿತವಾಗಿ ವ್ಯಾಕರಣಬದ್ಧವಾಗಿ ಕಲಿತ ಇಂಗ್ಲಿಷ್ ಆಗಿರುವುದಿಲ್ಲ. ನನ್ನ ಸಂಬಂಧಿಕರ ಮಾಕ್ಲು ಪ್ರತಿಷ್ಠಿತವಾದ ದುಬಾರಿ ಶಾಲೆಗೆ ಹೋಗುತ್ತಾರಾದರು ಅವರ ಜ್ಞಾನದ ಹರವು, ತಿಳುವಳಿಕೆಯ ಮಟ್ಟ ಅತ್ಯುತ್ತಮ ಎಂದೇನೂ ನನಗೆ ಅನ್ನಿಸಿಲ್ಲ. ಸ್ಪೆಲ್ಲಿಂಗ ನ ತಪ್ಪುಗಳನ್ನು ಅವರು ಮಾಡುತ್ತಾರೆ. ನನ್ನ ತಂಗಿಯ ಮಗಳು ಸಹ ಬಸವನ ಗುಡಿಯ ಪ್ರತಿಷ್ಠಿತ ಶಾಲೆಗೆ ಹೋಗುತ್ತಿದ್ದರೂ, ಇಂಗ್ಲೀಷು ಮಾಧಯಮದಲ್ಲಿ ಓದುತ್ತಿದ್ದರು, ಇಂಗ್ಲೀಷಿನಲ್ಲಿದ್ದ ಗಣಿತ ಹಾಗೂ ವಿಜ್ಞಾನವನ್ನು ಸರಿಯಾಗಿ ಕಲಿತಿರಲೇ ಇಲ್ಲ!!. ನಾನು ಭಾರತಕ್ಕೆ ಬಂದಾಗ, ಸತತವಾಗಿ ದೂರವಾಣಿಯ ಮೂಲಕ ಪಾಠ ಪ್ರವಚನಗಳನ್ನು ಮಾಡಿ ಆಕೆಯನ್ನು ಸುಧಾರಿಸಬೇಕಾಯಿತು. ಒಂದು ಸಾರಿ ಕಲಿಕೆಯ ವಿಧಾನ , ಮನನ ಮಾಡುವ ಕಲೆ ಅವಳಿಗೆ ತಿಳಿದ ನಂತರ ತನ್ನ ಕಲಿಕೆಯನ್ನು ತಾನೇ ಮುಂದುವರಿಸಿಕೊಂಡು ಇಂದು ಯಶಸ್ಸನ್ನು ಕಂಡುಕೊಂಡಿದ್ದಾಳೆ. ಇಂತಹ ಹಲವಾರು ಅನುಭವಗಳು ನನಗಾದ ಕಾರಣ, ಕನ್ನಡ ಮಾಧ್ಯಮದಲ್ಲೇ  ನಾನು ಕಲಿತ ಕಾರಣ, ನನ್ನ ಸುತ್ತಲಿನ ಹಲವಾರು ಜನರು ಲಕ್ಷಅಂತರ ಸುರಿದು ಮಕ್ಕಳನ್ನು ಓಡಿಸಲು ಪಡುತ್ತಿರುವ ಪರಿಪಾಟಲುಗಳನ್ನು ನೋಡಿರುವ ಕಾರಣಕ್ಕಾಗಿ, ಈ ಲೇಖನ ಬರೆಯಿಟ್ಟಿದ್ದೇನೆ. ಶಿಕ್ಷಣ ಅನ್ನುವುದು ಯಾವತ್ತೂ ದುಬಾರಿಯಾಗಬಾರದು ಸ್ವಸ್ಥ ಸಮಾಜಕ್ಕೆ ಅದು ತಳಹದಿಯಾಗಬೇಕು. ಹಾಗೆಯೇ ಶಿಕ್ಷಣ ಮತ್ತು ಕಲಿಕೆಗಳು ಕಬ್ಬಿಣದ ಕಡಲೆಯು ಆಗಬಾಬಾರದು. ಅದನ್ನು ಸರಳೀಕರಿಸಿ ಕಲಿಸುವ ಸಾಧ್ಯತೆಗಳನ್ನು ಸತತವಾಗಿ ನಾವು ಅನ್ವೇಷಿಸುತ್ತಿರಬೇಕು. ಕಲಿಕೆಗೆ ಬೇಕಾದ ಒಂದು ಪ್ರಮುಖ ಅಂಶವೆಂದರೆ ಶ್ರದ್ಧೆ ಮತ್ತು ಸತತ ಪರಿಶ್ರಮ. ಇವುಗಳನ್ನು ಬಿಟ್ಟು ಕಲಿಯುವುದು ಅಸಾಧ್ಯ. ಇಂಗ್ಲೀಷು ಸಹ ಇದಕ್ಕೆ ಹೊರತಲ್ಲ.

ಇಂಗ್ಲಿಷನ್ನು ಕಲಿಯಲು ಹಲವಾರು ಮಾರ್ಗಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯ. ಸಾವಿರಾರು ಪುಸ್ತಕಗಳು, ಸಾವಿರಾರು ರೂಪಾಯಿ ಶುಲ್ಕದ ಧಿಢೀರ್ ಕೋರ್ಸುಗಳು, ರ್ಯಾಪಿಡೆಕ್ಸ್ ಇಂಗ್ಲಿಷ್ ಪುಸ್ತಕಗಳು ಇತ್ಯಾದಿ ಇತ್ಯಾದಿ. ಅವುಗಳಿಗೆ ಹೋಗಿ ಇಂಗ್ಲಿಷಿನಲ್ಲಿ ಪರಿಣಿತರಾದವರನ್ನು ನಾನು ಕಾಣೆ. ಇದ್ದರು ಇರಬಹುದು. ಆದರೆ ಅವುಗಳು ವಯಸ್ಕರಿಗೆ ಹೇಳಿಮಾಡಿಸಿದ್ದಂತಹವು. ಮಕ್ಕಳಿಗೆ ಮೊದಲಿನಿಂದಲೇ ಕನ್ನಡದ ಜೊತೆ ಜೊತೆಗೆ ಇಂಗ್ಲಿಷ್ ಕಲಿಸುವ ಸುಲಭ ಸಾಧ್ಯ ವಿಧಾನವನ್ನು ನಾನು ಇಲ್ಲಿ ಚರ್ಚಿಸುತ್ತೇನೆ. ಕನ್ನಡ ಮಾಧ್ಯಮದಲ್ಲಿ ಕಲಿತರೆ ಭಾಷೆಯಷ್ಟೇ ಅಲ್ಲ ನಮ್ಮ ಇತಿಹಾಸ ಸಂಸ್ಕೃತಿ ಸಾಹಿತ್ಯ ಜೀವನ ಮೌಲ್ಯಗಳ ಅಪೂರ್ವ ಭಂಡಾರ ಮಕ್ಕಳದ್ದಾಗುತ್ತದೆ. ಜೊತೆಗೆ ಇಂಗ್ಲೀಷು ಒಂದು ಭಾಷೆಯಾಯಾಗಿ ಕಲಿತರೆ ಮುಂದಿನ ವಿದ್ಯಾಭ್ಯಾಸದಲ್ಲಿ ಅದು ಉಪಯೋಗಕ್ಕೂ ಬರುತ್ತದೆ. ಸಂತೆಯ ಹೊತ್ತಿಗೆ ಮೂರು ಮೊಳ ನೇಯ್ದು ಬಿಸುಡುವ ಖಾಸಗಿ ಸಂಸ್ಥೆಗಳಿಗೆ ಅಮೂಲಾಗ್ರ ಕಲಿಕೆಯ ಕಡೆ ಗಮನ ಇರುವುದಿಲ್ಲ. ವಾಣಿಜ್ಯಿಕ ಉದ್ದೇಶಕ್ಕೆ ನಿಂತ ಅವುಗಳಿಗೆ  ದೇಶ  ಭಾಷೆಯ ಸೊಗಡನ್ನು ತಿಳಿಸುವುದಾಗಲಿ, ಸಂಸ್ಕೃತಿಯನ್ನು ಬೆಳೆಸುವುದಾಗಲೀ , ದೇಶಪ್ರೇಮವನ್ನು ಬಿತ್ತುವುದಾಗಲಿ, ಸಾಹಿತ್ಯ-ಸಂಗೀತಗಳ ಬಗೆಗೆ ಆಸಕ್ತಿಯನ್ನು ಕೆರಳಿಸುವುದಾಗಲಿ ಮಾಡುವುದರಲ್ಲಿ ಯಾವುದೇ ಆಸ್ಥೆಯನ್ನು ವಹಿಸಲಾರವು. ವಿದ್ಯೆಯನ್ನು ತಪಸ್ಸೆಂದು, ಗುರುಗಳನ್ನು ದೇವರೆಂದು ಭಾವಿಸಿ ಪೂಜಿಸಿದ ದೇಶದಲ್ಲಿ ಈ ಬೆಳವಣಿಗೆಗಗಳು ಭಾವನಾರಹಿತವಾದ, ಅಂಕಿ ಸಂಖ್ಯೆಗಳೊಂದಿಗೆ ಆಡಬಲ್ಲ ಜೈವಿಕ ರೊಬೋಟುಗಳನ್ನು ತಯಾರಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಸಾಮಾಜಿಕ-ಸಾಂಸ್ಕೃತಿಕ ಪಲ್ಲಟಗಳು, ಮೌಲ್ಯಗಳಲ್ಲಿ ಆಗುತ್ತಿರುವ ಬದಲಾವಣೆಗಳು, ವಿಭಕ್ತ ಕುಟುಂಬಗಳು ಹೆಚ್ಚಾಗಿ, ಅವಿಭಕ್ತ ಕುಟುಂಬಗಳಲ್ಲಿ ಹಿರಿಯರು ಮೂಲೆಗುಂಪಾಗಿ,  ಕಾರ್ಟ್ಯೂನುಗಳೇ ಜೀವನವೆಂದು, ಜೀವನ ಎಂಬುವುದು ವಿಡಿಯೋ ಗೇಮು ಆಡಿದಂತೆ ಎಂದು ತಿಳಿದಿರುವ ಮಕ್ಕಳ ಪೀಳಿಗೆಯನ್ನು ಬೆಳೆಸುತ್ತಿದ್ದೇವೆ ಹಾಯಾಗು ಅದಕ್ಕಾಗಿ ಹಗಲು ಇರುಳು ದುಡಿದು ಆ ಹಣವನ್ನು ಖಾಸಗಿ ಶಾಲೆಗಳ ಎರಡನೇ ದರ್ಜೆ ಶಿಕ್ಷಣಕ್ಕೆ ಸುರಿಯುತ್ತಿದ್ದೇವೆ. ಮೇಲೆ ಹೇಳಿದ ಬದಲಾವಣೆಗಳು ಉಳ್ಳವರ ಸ್ತರದಲ್ಲಿ ಹೆಚ್ಚಾಗಿ ಕಂಡುಬಂದರೂ, ಮಧ್ಯಮ ಹಾಗೂ ಕೆಳ ಮಧ್ಯಮ ಸ್ತರದಲ್ಲೂ ಇದೊಂದು ಪಿಡುಗಾಗಿ ಪರಿಣಮಿಸಿದೆ. ಇಂಗ್ಲಿಷ್ ಶಾಲೆಗಳಿಂದ ಮಕ್ಕಳ ಸಮಗ್ರ ಬೆಳವಣಿಗೆ ಆಗುತ್ತದೆ ಎಂಬ ಭ್ರಮೆ ಇವರಲ್ಲಿ ಯುಎಂಬಿವೆ. ಆದರೆ ಭ್ರಮೆಯೇ ವಾಸ್ತವ ಅಲ್ಲವಷ್ಟೆ. ಕಾನನದ ಎಂಬ ತಾಯ್ನುಡಿಯಲ್ಲಿ ಕಲಿತು ಸಾಹಿತ್ಯ-ಸಂಸ್ಕೃತಿ-ಭಾವ ಬಂಧನಗಳ ಮಧ್ಯೆ ಬೆಳೆದ ಮಗುವಿನ ವ್ಯಕ್ತಿತ್ವ ಗಟ್ಟಿಯಾದದ್ದು. ಮುಂದೆ ಜೀವನದಲ್ಲಿ ಕಂಡು-ಕಾಣದೆ ಬಂದೆರಗುವ ಸವಾಲುಗಳನ್ನು ಮೆಟ್ಟಿ ನಿಂತು ಎದುರಿಸುವ ಎದೆಗಾರಿಕೆಯನ್ನು ಬೆಳೆಸುವ ವಿದ್ಯಾಭ್ಯಾಸವನ್ನು ಕೊಡುವತ್ತ ಆಸಕ್ತಿ ಇರುವ ಆದರೆ ಗೊಂದಲದಲ್ಲಿ ಬಿದ್ದಿರುವ ಬಿದ್ದಿರುವ ಪೋಷಕರಿಗಾಗಿ ನಾನು ಈ ಲೇಖನವನ್ನು ಬರೆಯುತ್ತಿದ್ದೇನೆ. ಇದು ನನ್ನ ಸ್ವಂತ ಅನುಭವವು ಹೌದು. ಠಸ್ ಪುಸ್ ಎಂದು ಇಂಗ್ಲಿಷಿನಲ್ಲಿ ಮಾತನಾಡಿದಾಕ್ಷಣ ಕ್ಲಿಷ್ಟ ವಿಷಯಗಳಾದ ಗಣಿತ ವಿಜ್ಞಾನಗಲಾಗಲಿ, ಸಮಾಜ ಶಾಸ್ತ್ರ-ಇಂಗ್ಲಿಷ್ ವ್ಯಾಕರಣವಾಗಲೀ  ಅನಾಯಾಸವಾಗಿ ತಲೆಗೇರುವುದಿಲ್ಲ.ಹಾಗೆಯೇ ಕನ್ನಡ ಮಾಧ್ಯಮದಲ್ಲಿ ಕಲಿತು ಇಂಗ್ಲಿಷನ್ನು ಒಂದು ಭಾಷೆಯಾಗಿ ಮಾತ್ರವೇ ಕಲಿತ ಮಕ್ಕಳಿಗೆ ಅವು ಕಬ್ಬಿಣದ ಕಡಲೆಗಳಾಗಬೇಕಾಗಿಯೂ ಇಲ್ಲ. ವಾಸ್ತವವಾಗಿ ಗಣಿತ ವಿಜ್ಞಾನಗಳನ್ನು ಅರ್ಥೈಸಿಕೊಳ್ಳಲು ಆಳವಾದ ಇಂಗ್ಲೀಷ ಜ್ಞಾನ ಬೇಕಾಗಿಯೇ ಇಲ್ಲ. ಸಾಧಾರಣವಾದ ಹಿಡಿತದ ಜೊತೆಗೆ, ಮೂಲಭೂತ ವೈಜ್ಞಾನಿಕ, ಗನೀತಿಕ ಪರಿಕಲ್ಪನೆಗಳು ಭದ್ರವಾಗಿದ್ದರೆ ಸಾಕು. ಇದನ್ನು ಮಕ್ಕಳಲ್ಲಿ ಮೊದಲಿನಿಂದಲೇ (ಯಾವ ಮಾಧ್ಯಮದಲ್ಲಿ ಕಲಿತರೂ ) ಬೆಳೆಸಬೇಕು. ತರ್ಕಬದ್ಧವಾಗಿ ಯೋಚಿಸುವ ಹಾಗೂ ವ್ಯವಸ್ಥಿತವಾಗಿ, ನಿಯಂಮಿತವಾಗಿ ಅಭ್ಯಾಸ ಮಾಡುವ ಪ್ರವೃತ್ತಿ ಇದ್ದರೆ ಸಾಕು.

ಕಲಿಕೆಯ ಕ್ರಮ (ಸ್ಥೂಲ ರೂಪು ರೇಷೆ )

ಯಾವುದೇ ವಿಷಯವನ್ನು ಕಲಿಯುವಾಗ ಆ ಕಲಿಕೆಯು ಹಂತ ಹಂತವಾಗಿ ಬೆಳೆಯುತ್ತದೆ. ಎಲ್ಲಕ್ಕೂ ಮೂಲವಾದದ್ದು ಅಕ್ಷರ ಜ್ಞಾನ. ಅಕ್ಷರಗಳನ್ನು ಸೇರಿಸಿ ಪದ ಸಮೂಹವಾಗುತ್ತದೆ. ಪದಗಳನ್ನು ವ್ಯವಸ್ಥಿತವಾಗಿ ಜೋಡಿಸಿ ಬಳಸಿದಾಗ ವಾಕ್ಯವಾಗುತ್ತದೆ. ಕನ್ನಡವಾಗಲಿ ,ಇಂಗ್ಲಿಷಾಗಲಿ ಇದೆ ರೀತಿ ಕಲಿಯುವುದು. ಮೊದಲು ಮಾತನಾಡಿ ಅಭ್ಯಾಸವಾದ ಭಾಷೆಯನ್ನು ಓದುವುದರ ಮೂಲಕ , ಹೊಸ ಪದಗಳನ್ನು ಕಲಿತು ಅವುಗಳ ಉಪಯೋಗವನ್ನು ಮಾಡಿಕೊಳ್ಳುವುದರ ಮೂಲಕ ಮಗುವಿನ ಭಾಷಾ ಸಾಮರ್ಥ್ಯ ಬೆಳೆಯುತ್ತಾ ಹೋಗುತ್ತದೆ. ಪದಸಂಪತ್ತಿನ ವ್ಯಾಪ್ತಿ ಕ್ರಮೇಣವಾಗಿ ವೈಜ್ಞಾನಿಕ , ಗನೀತಿಕ, ಸಾಮಾಜಯಿಕ ಶಾಸ್ತ್ರದ ವಿಷಯಗಳಿಗೂ ಬೆಳೆದು ಪ್ರತಿ ಶಬ್ದದ ಅರ್ಥ ಹಾಯಾಗು ಅನ್ವಯವನ್ನು ಮಗುವಿನಲ್ಲಿ ಬೆಳೆಸಲಾಗುತ್ತದೆ. ಇದು ಹಲವು ಹಂತಗಳ್ಲಲಿ ಆಗುತ್ತದೆ- ಕೆಲವೊಮ್ಮೆ ಪ್ರತ್ಯಕ್ಷವಾಗಿ, ಕೆಲವೊಮ್ಮೆ ಪರೋಕ್ಷವಾಗಿ, ಕೆಲವೊಮ್ಮೆ ತಾನೇ ತಾನಾಗಿ ನಮ್ಮ ಅರಿವಿಗೆ ಬರದಂತೆ ಆದರೂ ಇವುಗಳನ್ನು ಸ್ಥೂಲವಾಗಿ

ಶ್ರವಣ-ಮನನ-ಪಠಣ-ಮನನ-ನಿಧಿಧ್ಯಾಸನ ಎಂಬ ಪ್ರಕ್ರಿಯೆಗಳಿಂದಲೂ, ಅದು ಮುಂದುವರಿದು ಮೇಲಿನ ತರಗತಿಗಳಲ್ಲಿ, ಪ್ರಬುದ್ಧಾವಸ್ಥೆಗೆ ಬರುವಾಗ

ಅಧ್ಯಯನ- ಮನನ- ಪಠಣ- ಮನನ-ನಿಧಿಧ್ಯಾಸನ ಎಂಬ ಹಂತಗಳನ್ನು ಒಳಗೊಳ್ಳುತ್ತದೆ. ಇದರಲ್ಲಿ ಪಾಠ-ಪ್ರವಚನ ಕೇಳುವುದು, ನಮ್ಮ ನಮ್ಮಲ್ಲಿ ಚರ್ಚಿಸಿ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದು ಸೇರುತ್ತದೆ.

ನಿಧಿಧ್ಯಾಸನಕ್ಕೆ ಹೋಗುವ ಮೊದಲು ಕಲಿಯುವ ಪಾಠಗಳನ್ನು ಒಂದಲ್ಲಾ ಒಂದು ರೀತಿಯಲ್ಲಿ ಬಾಯಿಪಾಠ ಮಾಡಿರಲೇ ಬೇಕು. ಕೆಲವರು ಅದರ ಅರ್ಥವನ್ನು ಅರಿತು, ಕೆಲವರು ಪೂರ್ತಿ ಅರಿಯದೆಯೇ ಬಾಯಿ ಪಾಠ ಮಾಡುತ್ತಾರೆ. ಅದರಲ್ಲಿ ತಪ್ಪಿಲ್ಲ. ಆದರೆ ನಿಧಿಧ್ಯಾಸನ ಎಂಬ ಹಂತವನ್ನು (ಅಂದರೆ ನಾವು ಓದಿ-ಕೇಳಿ ತಿಳಿದ ವಿಚಾರವನ್ನು ಒರೆಗೆ ಹಚ್ಚಿ ನಮ್ಮ ಸ್ವಂತ  ಪದಗಳಲ್ಲಿ ಅದರ ಪರಿಕಲ್ಪನೆಯನ್ನು ವಿವರಿಸಲು ಸಾಧ್ಯ ಮಾಡಿಕೊಳ್ಳುವವರೆಗೂ) ಆ ಪಾಠವನ್ನು ಕಲಿತಿದ್ದೇನೆ ಎಂದೆನ್ನಲಾಗದು.

ಮೇಲೆ ವಿವರಿಸಿದ ಭಾರತೀಯವಾದ ಕಲಿಕೆಯ ಪರಿಕಲ್ಪನೆ ನಿಮಗೆ ಅರ್ಥವಾಗದಿದ್ದರೆ ಈ ಕೆಳಗಿನ learning  pyramid  ಅನ್ನು ನೋಡಿ. ಬೆಂಜಮಿನ್ ಬ್ಲೂಮ್ ಎಂಬ ತಜ್ಞ ಇದನ್ನು ಪ್ರಸ್ತುತ ಪಡಿಸಿದ್ದು.

ಇಂಗ್ಲಿಷ್ ಭಾಷೆಗೆ ಸಂಬಂಧಿಸಿದಂತೆ ಪ್ರಾಥಮಿಕ ಜ್ಞಾನ ಅಕ್ಷರಗಳು-ಪದಗಳು-ಪದಸಮೂಹಗಳು. ಯಾವುದೇ ಭಾಷೆಯ ಮೇಲೆ ಪ್ರಭುತ್ವಕ್ಕೆ ಇವು ಮೂಲ ಸಲಕರಣೆಗಳು. ಪದಗಳ ಜ್ಞಾನ ಇದ್ದರೆ ೪೦% ಭಾಗ ಭಾಷೆ ಬಂದಂತೆಯೇ. ಉಳಿದ ಕೆಲಸ ಅವುಗಳನ್ನು ಕೂಡಿಸಿ  ಸೂಕ್ತವಾದ ಪುರುಷ, ಕಾಲ, ಇತ್ಯಾದಿಗಳನ್ನು ಸೇರಿಸಿ ಓದುವ, ಬರೆಯುವ ಮಾತನಾಡುವ ವಿಧಾನ ಅಷ್ಟೇ.

ಈ ಪದ ಸಂಪತ್ತನ್ನು ಬೆಳೆಸಲು ಮಗುವಿಗೆ ಕನ್ನಡ ಹಾಗೂ ಇಂಗ್ಲಿಷ್ ವರ್ಣಮಾಲೆಯ ಪರಿಚಯ ಇರಲೇ ಬೇಕು ಹಾಗೂ ಅದು ಇಂದಿನ ಬಹುತೇಕ ಮಕ್ಕಳು ೫ ವರ್ಷದೊಳಗೆ ಚನ್ನಾಗಿಯೇ ಕಲಿತಿರುತ್ತವೆ.ಮನೆಯಲ್ಲಿ ಆಡುವ ಕನ್ನಡ ಭಾಷೆಗೆ (ಅಥವಾ ಕೆಲವು ಕುಟುಂಬಗಳಲ್ಲಿ ಇಂಗ್ಲೀಷೇ ಸಂವಹನದ ಭಾಷೆಯಾಗಿದ್ದಲ್ಲಿ ಕನ್ನಡದ ಪರ್ಯಾಯ ಪದಗಳನ್ನು ಪರಿಚಯಿಸುವುದು) ಪರ್ಯಾಯವಾದ ಇಂಗ್ಲಿಷ್ ಪದಗಳನ್ನು ಪರಿಚಯಿಸುತ್ತಾ ಹೋಗಬೇಕು. ಕುಳಿತುಕೋ ಎಂಬುದಕ್ಕೆ sit ,ತಿನ್ನು ಎನ್ನುವುದಕ್ಕೆ eat ಎಂಬಂತಹ ಸರಳ ಪದಗಳಿಂದ ಹಿಡಿದು ಸಂಕೀರ್ಣ ಪದಪರಿಚಯವನ್ನು ಹಂತ ಹಂತವಾಗಿ ಬೆಳೆಸುತ್ತಾ ಹೋಗ್ಗಬೇಕು.

ತಂದೆ ತಾಯಿಯರಿಗೆ ಇದಕ್ಕಾಗಿ ಸ್ವಲ್ಪ ಪರಿಶ್ರಮ ಹಾಕಬೇಕಾಗುತ್ತದೆ. ಮಾನಸಿಕ ಹಾಗೂ ಬೌದ್ಧಿಕ ಪೂರ್ವ ತಯಾರಿ ಅವಶ್ಯಕ ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ.

ಮಗುವು ಮುಂದೆ ಕಲಿಯುತ್ತಾ ಹೋದಂತೆ ಗಣಿತ ವಿಜ್ಞಾನ ವಿಷಯಗಳು ಸಹ ಪಠ್ಯಕ್ರಮದಲ್ಲಿ ಸೇರಿಕೊಳ್ಳುತ್ತವೆ. ಆಗ ಕನ್ನಡದಲ್ಲಿ (ಅಥವಾ ಇಂಗ್ಲಿಷಿನಲ್ಲಿ ) ಬರುವ ವೈಜ್ಞಾನಿಕ ಪದಗಳಿಗೆ ಪರ್ಯಾಯವಾದ ಇಂಗ್ಲಿಷ್ (ಅಥವಾ ಕನ್ನಡ) ಪದಗಳನ್ನು ಪರಿಚಯಿಸುವುದಲ್ಲದೆ ಅವುಗಳನ್ನು ಬಾಯಿಪಾಠ ಮಾಡಿಸಬೇಕು. ಉದಾಹರಣೆಗೆ: velOcity ವೇಗ ,acceleration ವೇಗೋತ್ಕರ್ಷ, ratio  ಅನುಪಾತ, square ವರ್ಗ, parallel ಸಮಾನಯಂತರ, calculus ಕಲನ  ಶಾಸ್ತ್ರ ಇತ್ಯಾದಿ. ಹೀಗೆ ಜೀವಶಾಸ್ತ್ರ, ರಸಾಯನ ಶಾಸ್ತ್ರಗಳಲ್ಲೂ ಬರುವ ಪಾರಿಭಾಷಿಕ ಪದಗಳನ್ನು ಕಲಿಸುತ್ತಾ ಹೋದರೆ, ಅರ್ಧ ಭಾಷೆ ಕಲಿತಂತೆಯೇ.

ಪ್ರತಿಯೊಂದರ definition ಗಳನ್ನು ಕನ್ನಡದಲ್ಲಿ ವಿವರಿಸಿ ಹೇಳಿದರೆ ಅದು ನೆನಪಿನಲ್ಲಿ ಉಳಿಯುವುದು ಅಲ್ಲದೆ ಕಲಿಕೆಯು ಸರಾಗವು, ಸುಲಭವೂ, ಜ್ಞಾಪಕ ಇಡಲು ಅನುಕೂಲವು ಆಗುವುದು. ಪದಗಳು ಪ್ರತಿನಿಧಿಸುವ ವೈಜ್ಞಾನಿಕ ಅಥವಾ ಗಣಿತೀಯ ಪರಿಕಲ್ಪನೆಯ ಚಿತ್ರ ಮಗುವಿನ ಮನಃಪಟಲದಲ್ಲಿ ಮೂಡಿದರೆ ಸಾಕು, ಭಾಷೆಯನ್ನು ಮೀರಿದ ಅರ್ಥವ್ಯಾಪ್ತಿ ಅದಕ್ಕೆ ತಿಳಿಯುವುದಲ್ಲದೆ ಮುಂದೆ ಅದೇ ವಿಚಾರಗಳನ್ನು ಕಾಲೇಜುಗಳಲ್ಲಿ ಇಂಗ್ಲಿಷಿನಲ್ಲಿ ಓದುವಾಗ ಅರ್ಥೈಸಿಕೊಳ್ಳಲು ಕಷ್ಟಕರವಾಗಲಾರದು.

ಈ ಕೆಲಸವನ್ನು ಮನೆಯಲ್ಲಿ ಪೋಷಕರು, ಶಾಲೆಯಲ್ಲಿ ಶಿಕ್ಷಕರೂ ಮಾಡಿದರೆ ಇಂಗ್ಲಿಷಿನ ವ್ಯಾಮೋಹ ಹರಿಯುವುದಲ್ಲದೆ ಕನ್ನಡದ ಉಳಿವಿಗೂ ಸಹಕಾರಿಯಾಗುತ್ತದೆ.

ಇದು ಕನ್ನಡದ ಜೊತೆಗೆ ಇಂಗ್ಲಿಷಿನ ವಿಷಯಗಳಿಗೆ ಸಂಬಂಧಿಸಿದಂತೆ ಸಮಾನಾಂತರ ಕಲಿಕೆ ಹೇಗೆ ಸಾಧ್ಯ ಎಂಬುದನ್ನು ಪರೀಕ್ಷಿಸುವ ಒಂದು  ವಿಧಾನದ ಪಕ್ಷಿ ನೋಟ.

ಇದರ ಜೊತೆಗೆ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ವ್ಯವಸ್ಥಿತವಾಗಿ ಹೇಗೆ ಕಲಿಯಬಹುದು ಎಂಬುದನ್ನು ನೋಡೋಣ.

ಇಂಗ್ಲಿಷ್ ಭಾಷೆಯ ವ್ಯವಸ್ಥಿತ ಅಭ್ಯಾಸ ಮತ್ತು ಇಂಗ್ಲಿಷ್ ಕಲಿಕೆಯ ಪರಿಕರಗಳು-

ಭಾಷಾಂತರ ಪಾಠಮಾಲೆ.

ವ್ಯವಸ್ಥಿತವಾಗಿ ಇಂಗ್ಲಿಷ್ ಭಾಷೆಯ ಕಲಿಕೆಯನ್ನು ಭಾಷಾಂತರ ಮಾಡುವ ವಿಧಾನದ ಮೂಲಕ ಕಲಿಸುವುದು ಪರಿಣಾಮಕಾರಿಯಾದ ವಿಧಾನ ಎಂದು ನನ್ನ ಭಾವನೆ. ಈ ಪ್ರಕ್ರಿಯೆಗೆ ಮೊದಲು ಒಂದು ( ಇಲ್ಲಿ ಕನ್ನಡ) ಭಾಷೆಯ ಮೇಲೆ ಸಾಧಾರಣದಿಂದ ಉತ್ತಮ ಎನ್ನುವಷ್ಟು ಹಿಡಿತ ಮಗುವಿಗೆ ಬಂದಿರಬೇಕು. ಅಂದರೆ ಕನ್ನಡವನ್ನು ಸರಾಗ ವಾಗಿ ಓದಿ ಬರೆಯುವಷ್ಟು ಮತ್ತು ಓದಿದ ವಾಕ್ಯಗಳನ್ನು ಅರ್ಥೈಸುವಷ್ಟು ಹಿಡಿತ ಬಂದಿರಬೇಕು. ಅಷ್ಟುಮಟ್ಟಿಗಿನ  ಭಾಷಾ ಪ್ರಭುತ್ವ ಸಾಮಾನ್ಯವಾಗಿ ೪ ಅಥವಾ ಐದನೇ ತರಗತಿಗೆ ಬರಬಹುದೆಂದು ನನ್ನ ಭಾವನೆ,. ಮಗುವು ಚುರುಕಾಗಿದ್ದು ಕಲಿಕೆಯ ಸಾಮರ್ಥ್ಯವನ್ನು ತೋರಿಸಿದರೆ ಬಹುಷಃ ೩ ನೇ ತರಗತಿಗೆ ವ್ಯವಸ್ಥಿತ ಇಂಗ್ಲಿಷ್ -ಕನ್ನಡ ಭಾಷಾಂತರ ಪಾಠಮಾಲೆಯನ್ನು ೩ನೇ ತರಗತಿಯಿಂದ ಕಳಿಸಿದರೆ ೭ನೇ ತರಗತಿಗೆ ಬರುವ ವೇಳೆಗೆ ಈ ಪಥ್ಯಮಾಲೆಯ ೩ ಪುಸ್ತಕಗಳನ್ನು ಮುಗಿಸಬಹುದು. ಅಷ್ಟರಲ್ಲಿ ನಿಮ್ಮ್ ನಿರೀಕ್ಷೆಗೂ ಮೀರಿದ ಇಂಗ್ಲಿಷ್ ಭಾಷೆಯ ಹಿಡಿತ ಮಗುವಿಗೆ ಬಂದಿರುವುದನ್ನು ಕಾಣುವಿರಿ.

ಖಾಸಗಿ ಶಾಲೆಯ ಮಕ್ಕಳಿಗೆ ಬೇಕಾದ್ದು-ಬೇಡಾದ್ದು ಎಲ್ಲವೂ ಸೇರಿ, ಇದರ ಜೊತೆಗೆ ಹೊಂವರ್ಕ್ ಎನ್ನುವ ಯಾಂತ್ರಿಕ  ಯಮಯಾತನೆಯನ್ನು ಹೇರಿ ಕಲಿಸುವ ಕಾರಣ ಮಕ್ಕಳು ಆಸಕ್ತಿದಾಯಕವಾಗಿ, ಕಲಿಕೆಯನ್ನು ಒಂದು ಸಂತೋಷದ ಚಟುವಟಿಕೆಯೇನೆಂದು ನೋಡುವುದನ್ನೇ ಮರೆಯುತ್ತವೆ.ಸರಕಾರಿ ಶಾಲೆಗಳಲ್ಲಿ ಈ ಹೊರೆ ಇರುವುದಿಲ್ಲ ಹಾಗೂ ಅವುಗಳು ಕಲಿಯುವ ವಿಷಯಗಳು ಸಹಾ ಮಕ್ಕಳ ಸಾಮರ್ಥ್ಯವನ್ನು ಅವಲಂಬಿಸಿಯೇ ಸಿದ್ಧಪಡಿಸುವುದರಿಂದ ಈ ಬಗೆಯ ಸೃಜನಾತ್ಮಕ, ಧನಾತ್ಮಕ, ಸಧೃಢ ಬೆಳವಣಿಗೆಗೆ ಸಮಯ ವ್ಯಯಿಸಲು ಸಾಕಷ್ಟು ಅವಕಾಶ ಇರುತ್ತದೆ. ಇದು ಬೇಡುವುದು ನಿಮ್ಮ ಸಮಯವನ್ನು ಹಾಗೂ ಬದ್ಧತೆಯನ್ನು ಮಾತ್ರವೇ.

ಇಂಗ್ಲಿಷನ್ನು ಓದುವುದು, ಬರೆಯುವುದು ಮತ್ತು ಅರ್ಥೈಸಿಕೊಳ್ಳುವುದು ಈ ಪುಸ್ತಕಗಳ ಅಭ್ಯಾಸದಿಂದ ಸಾಧ್ಯವಾಗುತ್ತದೆ. ಪೋಷಕರಿಗೆ ಇಂಗ್ಲೀಷು ಚೆನ್ನಾಗಿ ಬರುವುದಿದ್ದರೆ, ಮಾತನಾಡುವುದನ್ನು ಜೊತೆ ಜೊತೆಗೆ ಸ್ವಲ್ಪ ಸ್ವಲ್ಪವಾಗಿ ಕಳಿಸಬಹುದು. ಪದ ಪರಿಚಯವನ್ನು ಮೊದಲಿನಿಂದಲೇ ಆರಂಭಿಸಿರದಿದ್ದರೂ , ಈ ಪಾಠಮಾಲೆಯ ಪುಸ್ತಕಗಳನ್ನು ಕ್ರಮವಾಗಿ ಮುಗಿಸುವಷ್ಟರಲ್ಲಿ ಸಾಕಷ್ಟು ಪದಭಂಡಾರ ಬೆಳೆದೆ ಇರುತ್ತದೆ. ಇದರ ಜೊತೆಗೆ ವೈಜ್ಞಾನಿಕ, ಗಣಿತೀಕವಾದ ಪದಗಳನ್ನು ,ಅವುಗಳ ಅರ್ಥವನ್ನು ಆಗಾಗ, ಸೂಕ್ತಸಮಯಗಳಲ್ಲಿ ಪರಿಚಯಿಸಿ,ವಿವರಿಸಿ, ಮನನ ಮಾಡಿಸಿ, ಬಾಯಿಪಾಠ ಮಾಡಿಸಿಬಿಟ್ಟರೆ ಸಾಕು. ಮೊದ ಮೊದಲು ಪ್ರತಿಯೊಂದು ಹಂತವನ್ನು ದಾಟುವಾಗಲು ಹೆಚ್ಚು ಸಮಯ ಹಿಡಿದರೂ, ಕ್ರಮೇಣ ಮಕ್ಕಳು ಸ್ವಾಧ್ಯಾಯ ಮಾಡುವಸ್ಜ್ತು ಬೆಳೆದರೆ ಮಾರ್ಗದರ್ಶಕರಿಗೆ ಹೆಚ್ಚಿನ ಹೊರೆ ಬೀಳದು. ಮಾತನಾಡುವುದನ್ನು YOUTUBE ವಿಡಿಯೋ ಹಾಗೂ BBC ವಾರ್ತೆ,ಹಾಗೂ ಮತ್ತೆ ಕೆಲವು ಇಂಗ್ಲಿಷ್ ಕಾರ್ಯಕ್ರಮಗಳನ್ನು ಕೇಳಿ ಅಭ್ಯಾಸ ಮಾಡಿಕೊಳ್ಳಬಹುದು.

ಹೀಗೆ ಸತತ ಪರಿಶ್ರಮದಿಂದ  ಸುಲಭ, ಸಧೃಢ ಹಾಗೂ ಸಮರ್ಥವಾಗಿ ಕನ್ನಡ -ಇಂಗ್ಲಿಷ್ ಭಾಷೆಗಳನ್ನು ಕಲಿತು, ನಮ್ಮ ಕನ್ನಡವನ್ನು ಕಲಿತು ಉಳಿಸಿ ಬೆಳೆಸುವುದಾರೆ ಈ ಲಕ್ಷಅಂತರಗಳನ್ನೇಕೆ ಖರ್ಚು ಮಾಡಬೇಕು ಎಂಬುದನ್ನು ಯೋಚಿಸಿರಿ. ಸರಕಾರಿ ಶಾಲೆಗಳಲ್ಲಿ ಎಲ್ಲವೂ  ಉಚಿತ.  ಮನೆಯಲ್ಲಿ ಕುಳಿತು ಸ್ವಲ್ಪ ನಾವು ಅಭ್ಯಾಸ ಮಾಡಿ ಮಕ್ಕಳಿಗೂ ಮಾರ್ಗದರ್ಶನ ಮಾಡಿದರೆ ಕೌಟುಂಬಿಕ ಅನುಬಂಧವು ಬೆಳೆಯುವುದಲ್ಲದೆ ಕಲಿಕೆಯು ಶಕ್ತಿಯುತವಾಗಿರುತ್ತದೆ,.. ಹಾವು ಕೊಂದು  ಹದ್ದಿಗೆ ಹಾಕಿದರೆ ನಮಗುಳಿಯುವುದು ಕೊಂದ ಪಾಪವೆ ಹೊರತು ಮತ್ತೇನಿಲ್ಲ. ಜೊತೆಗೆ ಕಥೆ, ದೃಷ್ಟಾಂತ ಸ್ವಾನುಭವಗಳನ್ನು ಮಕ್ಕಳ ಜೊತೆಗೆ ಹಂಚಿಕೊಳ್ಳುವ ಅಪೂರ್ವ ಅವಕಾಶವೂ ನಮಗೆ ದೊರೆಯುತ್ತದೆ.

ಉಪಸಂಹಾರ ಮತ್ತು ಪರಿಸಮಾಪ್ತಿ:

ಒಟ್ಟು ಮೂರು ಪುಸ್ತಕಗಳ ಬೆಲೆ ೧೫೦ ರೂಪಾಯಿ ದಾಟಲಾರದು. ಒಟ್ಟು ಮೂರು ಪುಸ್ತಕಗಳಲ್ಲಿರುವ ಪುಟಗಳ ಸಂಖ್ಯೆ  (೧೪೦X ೩= ೪೨೦) ಪುಟಗಳು. ಅದರಲ್ಲಿಯೂ ಮೊದಲ ಪುಸ್ತಕ ಬಹಳ ಚಿಕ್ಕದು. ಎರೆಡೆರೆಡು ದಿನಕ್ಕೊಂದರಂತೆ ಪಾಠ ಮುಗುಸಿದರು ಮೊದಲ ಪುಸ್ತಕವನ್ನು ೬-೭ ತಿಂಗಳಲ್ಲಿ ಮುಗಿಸಿ ಬಿಡಬಹುದು. ಆ ವೇಳೆಗೆ ಮಗುವಿಗೆ ಸಾಕಷ್ಟು ಕನ್ನಡ ಹಾಗೂ ಇಂಗ್ಲಿಷ್ ವಾಕ್ಯ ರಚನೆಯ ಬಗ್ಗೆ ಅರಿವು ಮೂಡಿರುತ್ತದೆ. ನಾನು ಮೂರನೇ ಪುಸ್ತಕವನ್ನು ಮಾಡಲಿಲ್ಲ. ಏಳನೇ ತರಗತಿ ಮುಗಿಯುವ ಹೊತ್ತಿಗೆ ಎರಡನೇ ಪುಸ್ತಕವನ್ನು ಮುಗಿಸಿದ್ದೆ ಅಷ್ಟೇ. PUC ಯಲ್ಲಿ ನನಗೆ ಯಾವ ತೊಂದರೆಯು ಆಂಗ್ಲ ಮಾಧ್ಯಮದಿಂದ ಬರಲಿಲ್ಲ. ಇಂಗ್ಲೀಷಿನಲ್ಲಿ  ನನಗೆ ೮೯ ಅಂಕಗಳು ಬಂದಿದ್ದವು

ಇಂದಿಗೂ ಉತ್ತರ ಕರ್ನಾಟಕ , ಧಾರವಾಡದ ಕಡೆಯ ಮಕ್ಕಳು ಇದನ್ನು ಕಲಿತು ಸಾಧನೆ ಮಾಡಿದ್ದಾರೆ/ಮಾಡುತ್ತಿದ್ದಾರೆ.

ಇದು ಬೇಡುವುದು ನಿಯಮಿತವಾದ ಅಭ್ಯಾಸ, ಪ್ರೋತ್ಸ್ಸಾಹ ಹಾಗೂ ಮೋಡ ಮೊದಲು ಹೆಚ್ಚಿನ ಮಾರ್ಗದರ್ಶನ. ಈಗಂತೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ, ದೂರದರ್ಶನಗಳಲ್ಲಿ ಬರುವ ಸಾಕಷ್ಟು ಇಂಗ್ಲಿಷ್ ಕಾರ್ಯಕ್ರಮಗಳು ಕಲಿಕೆಗೆ ಪೂರಕವಾಗಿ ಸಹಾಯ ಮಾಡಬಲ್ಲವು. ಯಾವ ಖಾಸಗೀ ಶಾಲೆಯೂ ಕೊಡಲಾಗದ ಅಪೂರ್ವ ಕಾಣಿಕೆಯನ್ನು ನಿಮ್ಮ ಮಗುವಿಗೆ ( ಶಾಲೆಯ ಮಕ್ಕಳಿಗೆ) ನೀವು ಈ ಮೂಲಕ ಕೊಡಬಹುದು. ಅವುಗಳ ಬಾಯಿಗೆ ಸುರಿಯುವ ಲಕ್ಷಅಂತರ ಹಣವನ್ನು ನಿಮ್ಮ ಮಗುವಿನ ಭವಿಷ್ಯನಿಧಿಯಾಗಿ ಇಡಬಹುದು. ಆಯ್ಕೆ ನಿಮ್ಮದು.

 

ಖಾಸಗಿ ಕಾಲೇಜಿನ ಕಲಿಕೆ- ಬರೀ ಗಿಲೀಟಿನ ಬುಡುಬುಡಿಕೆ

ಖಾಸಗಿ ಕಾಲೇಜಿನ ಕಲಿಕೆ- ಬರೀ ಗಿಲೀಟಿನ ಬುಡುಬುಡಿಕೆ

ಶ್ರದ್ಧಾಹಿ ಪರಮಾಗತಿಃ-

 • ನನ್ನ ಆಟೋ ಮಾರಿದರು ಮಗಳಿಗೆ ಪ್ರವೇಶ ದೊರೆಯಲಿಲ್ಲ
 • ೯೫% ಅಂಕ ಪಡೆದರೂ ಕಾಲೇಜಿನಲ್ಲಿ ಸೀಟಿಲ್ಲ
 • ಹಿಂದೂ ಧರ್ಮದ ಮಕ್ಕಳಿಗೆ ಪ್ರವೇಶವಿಲ್ಲ; ನಮ್ಮ ಕೋಮಿನ ಮಕ್ಕಳಿಗೆ ಆದ್ಯತೆ
 • ಪೋಷಕರು ಭರಿಸಲಾಗದಷ್ಟು ಕಾಲೇಜುಗಳು ದುಬಾರಿ
 • ದುಬಾರಿ ಕಾಲೇಜಿಗೆ ಸೇರಿಸಿದರೂ ಟ್ಯೂಷಣ್ ಹೇಳಿಸಲೇ ಬೇಕು – ಸಾವಿರಾರು ರೂಪಾಯಿಗಳ ಧಂಧೆ
 • ದುಬಾರಿ ಕಾಲೇಜಿಗೆ ಸೇರಿಸುವ ಕುಟುಂಬಗಳಲ್ಲಿ ಆದಾಯದ ಬಹು ಭಾಗ ಶುಲ್ಕಕ್ಕೆ ಹೋಗುವ ಕಾರಣ ಜೀವನದ ಹಲವು ಅಗತ್ಯತೆಗಳನ್ನು ಕಡಿತಗೊಳಿಸಿಕೊಂಡು ಮನೆಯ /ಮನಸ್ಸಿನ/ದೇಹದ ಆರೋಗ್ಯಕ್ಕೆ ಸಂಚಾಕಾರ ತ್ತಮ್ದುಕೊಳ್ಳುವ ಸಾಧ್ಯತೆ ಹೆಚ್ಚು.
 • ಇಷ್ಟೆಲ್ಲಾ ಕಷ್ಟ ಪಡುವ ತಾಯಿತಂದೆಯರಿಂದ ಅಥ್ವಾ ಮಗುವೇ ಸಂವೇದನಾಶೀಲನಾಗಿದ್ದರೆ ಅದಕ್ಕೆ ಕಷ್ಟಗಳು ತಿಳಿದು ನೇರ ಅಥವಾ ಪರೋಕ್ಷ ಒತ್ತಡಕ್ಕೆ ಒಳಗಾಗಿ ವಿದ್ಯಾಭ್ಯಾಸಕ್ಕೆ ಆಡ್ದಿಯಾಗಬಹುದು.
 • ಇದು ಒಂದು ಆರೋಗ್ಯಕರ ಬೆಳವಣಿಗೆ ಅಲ್ಲ.
 • ಕ್ರಿಶ್ಚಿಯನ್ ಅಥವಾ ಮುಸಲ್ಮಾನರ ವಿದ್ಯಾ ಸಂಸ್ಥೆಗಳಿಗೆ ಸೇರಿ ಅಲ್ಲಿ ಹೂವು ಮುದಿಯುವಂತಿಲ್ಲ, ಹಣೇ ಕುಂಕುಮ ಇಡುವಂತಿಲ್ಲ, ಸೀರೆ ಉಡುವಂತಿಲ್ಲ, ಬಳೆ ತೊಡುವಂತಿಲ್ಲ ಎಂಬ ತಲೆಹರಟೆ ಅಸಹಿಷ್ಣತೆಯ ಪರಮಾವಧಿಯ ನಿಷೇಧಗಳನ್ನು ಅನುಭವಿಸಬೇಕು. ಇನ್ನು ಲವ್ ಜಿಹಾದು/ ಪ್ರೇಮಕ್ಕೆ ಒತ್ತಡ ಹಾಕುವುದು  ಇತ್ಯಾದಿ ಸಮಸ್ಯೆಗಳು ಸೇರಿ ‘’ಕಾಸು ಹಾಳು ತಲೆಯು ಬೋಳು ‘’ ಎಂಬ ಗಾದೆಯಂತೆ ಆಗುವುದೊಂದು ಅಭಾಸ.

ಈ ಸಮಸ್ಯೆಗಳು ಎಂದಿಗೂ ಇದ್ದಂತಹವೇ.ಆದರೆ ಇತ್ತೀಚೆಗೆ ಅದರ ವ್ಯಾಪ್ತಿ , ಗಹನತೆ ಹೆಚ್ಚಾಗಿದೆ

ಇಷ್ಟೆಲ್ಲಾ ಪರಿಪಾಟಲು ಪಟ್ಟರೂ ಕೊನೆಗೆ ಭ್ರಷ್ಟರ ಸಂತೆಯಲ್ಲಿ ಪ್ರಶ್ನೆ ಪತ್ರಿಕೆಗಳು ಸೋರಿ ಅಯೋಗ್ಯರಿಗೆ ಆದ್ಯತೆ ಸಿಗುವಂಥ ಪರಿಸ್ಥಿತಿಯಲ್ಲಿ ಅಷ್ಟೆಲ್ಲಾ ಖರ್ಚುಮಾಡಿ ಪದವಿ ಪೂರ್ವ ಖಾಸಗಿ ವಿದ್ಯಾಲಯಗಳಿಗೆ ಕಳಿಸಲೇ ಬೇಕೆ? ಇದಕ್ಕೆ ಬೇರೆ ದಾರಿಯೇ ಇಲ್ಲವೇ? ಕಲಿಯಲು ಇರುವ ಬೇರೆ ದಾರಿಗಳು ಯಾವುವು?ಅದರ ಸಾಧಕ ಬಾಧಕಗಳೇನು? ವ್ಯವಧಾನ ಇದ್ದರೆ ಒಮ್ಮೆ ಓದಿ.

ಹತ್ತನೇ ತರಗತಿಯ ಫಲಿತಾಂಶಗಳು ಹೊರಬಿದ್ದು ಕಾಲೇಜಿಗೆ ಸೇರಲು ವಿದ್ಯಾರ್ಥಿ ಪೋಷಕರ ನೂಕು ನುಗ್ಗಲು ಪ್ರಾರಮ್ಭವಾಗಿದೆಯಷ್ಟೇ . ಓದುವ ಸಮಸ್ಯೆ ಹಿಂದೆ ಬಿದ್ದು ಪ್ರವೇಶ ಪಡೆಯುವ ಸ್ಪರ್ಧೆ ಶುರುವಾಗಿದೆ. ಸಮಸ್ಯೆಗಳ , ಎಡವುಗಲ್ಲುಗಳ ಮುಳ್ಳಹಾದಿಯೇ  ಈಗ ಅನಾವರಣಗೊಳ್ಳುತ್ತಾ ಹೋಗುತ್ತಿದೆ.ಪರೀಕ್ಷೆಗಳೇ ಸುಲಭವೋ, ಪಠ್ಯಗಳೇ ಸುಲಭವೋ, ಮೌಲ್ಯಮಾಪಕರೇ ಧಾರಾಳವೋ ಇಲ್ಲಾ ಬೋಧನೆಯೇ ಚುರುಕಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದರೋ ಯಾರಿಗೆ ಗೊತ್ತು? ನಿಜ ಸ್ವರೂಪವನ್ನು ಬಗೆದು ನೋಡಲು ವ್ಯವಧಾನವಿಲ್ಲದ ಪ್ರಪಂಚದಲ್ಲಿ ೮೫% ಮೀರಿ ಅಂಕ ಗಳಿಸುವವರ ಸಂಖ್ಯೆ ಹೆಚ್ಚಾಗಿ ಎಲ್ಲಾ ಹೆಸರಿರುವ ಕಾಲೇಜುಗಳಲ್ಲಿ ನೂಕು ನುಗ್ಗಲು. ಇಂತಹ ಪರಿಸ್ಥಿತಿಯಲ್ಲಿ ಅಂಕಗಳಷ್ಟೇ  ಅಲ್ಲದೆ ಹಣ ಚೆಲ್ಲಬಲ್ಲ ಶಕ್ತಿ, ಜಾತಿ, ಮತ, ಕೋಮು, ಇತ್ಯಾದಿಗಳು ಸಹಾ ಪರಿಗಣಿಸಲ್ಪಟ್ಟು ನಿಜ ಪ್ರತಿಭೆಗಳಿಗೆ, ಸಮಾಜದಲ್ಲಿ ನಿಜವಾದ ಬೆಂಬಲ ಬೇಕಿರುವ ಮಕ್ಕಳಿಗೆ ಪ್ರವೇಶವನ್ನು ನಿರಾಕರೈಸಲಾಗುತ್ತಿದೆ. ತಮ್ಮ ಮಕ್ಕಳಿಗೆ ಬೇಕಾದ ಕಾಲೇಜುಗಳಲ್ಲಿ ಪ್ರವೇಶ ದೊರಕಿಸಲು ವಿಫಲರಾಗಿ ತಂದೆ ತಾಯಿಯರು, ಇಷ್ಟು ಕಷ್ಟ ಪಟ್ಟು ಓದಿಯೂ ಸಲ್ಲದ ಮಕ್ಕಳು ಒಂದು ಬಗೆಯ ನಿರಾಶೆ, ಹತಾಶೆ, ಕ್ರೋಧ, ಅಸಹಾಯತೆಗಳ ಕೂಪದಲ್ಲಿ ಬೀಳುತ್ತಿದ್ದರೂ ಅವರಿಗೆ ಕೇಳಲು ಸರಕಾರವೂ ಇಲ್ಲ ಸಂಘ ಸಂಸ್ಥೆಗಳೂ  ಇಲ್ಲ.

ಹೀಗಾಗಿ ಇರುವ  ಇದ್ದಂತೆಯೇ ಗ್ರಹಿಸಿ ಪರ್ಯಾಯ ಆಲೋಚನೆಗಳನ್ನು ಹಂಚಿಕೊಳ್ಳುವುದನ್ನು ಈ ಲೇಖನದ ಮೂಲಕ ವಿಚಾರ ಮಾಡಿ ನೋಡೋಣ

ಬಯಸಿದ ಕಾಲೇಜಿನಲ್ಲಿ ಸೀಟು ಸಿಕ್ಕದ ಮಾತ್ರಕ್ಕೆ ಎಲ್ಲವೂ ಮುಗಿದು ಹೋಯಿತೆಂದು ಹತಾಶರಾಗಬೇಕಿಲ್ಲ. ಸಾಧಿಸಲು ಸಾಧಕನ ಮನಸ್ಥೈರ್ಯ ಮತ್ತು ಬದ್ಧತೆಗಳು ಮುಖ್ಯವೇ ಹೊರತು ಕಾಲೇಜುಗಲಲ್ಲ. ನಾನು ಸಾಗಿಬಂದ ದಾರಿಯ ಪರಿಚಯ ಮಾಡಿಕೊಡುತ್ತಾ ಬಡ ಹಾಗೂ ಕೆಲ ಮಧ್ಯಮ ವರ್ಗದ ಮಕ್ಕಳ ಸಾಧನೆಗೆ ಬೇಕಾಗಿರುವ ಅಂಶಗಳ ಒಳನೋಟಗಳನ್ನು ನೀಡುತ್ತೇನೆ. ಇದನ್ನು ಆತ್ಮರತಿ ಎಂದಾಗಲೀ, ಅತೀ ಅತ್ಮಪ್ರಶಂಸೆ ಎಂದಾಗಲಿ ಭಾವಿಸಬಾರದು. ಸ್ವಾನುಭವ ಲೇಖನದ ನೈಜತೆಯನ್ನು ಹೆಚ್ಚಿಸುವುದು ಎಂಬ ಕಾರಣಕ್ಕೆ ಅದನ್ನಿಲ್ಲಿ ಸೇರಿಸುತ್ತಿದ್ದೇನೆ. ಜೀವನದ ಈ  ಹಂತದಲ್ಲಿ ನನಗೆ ಹೊಗಳಿಕೆ ತೆಗಳಿಕೆಗಳ ಅವಶ್ಯಕತೆ ಇಲ್ಲ ಎಂಬುದನ್ನು ಒತ್ತಿ ಹೇಳಲು ಬಯಸುತ್ತೇನೆ.

ನಾನು ಹತ್ತನೇ ತರಗತಿ ಉತ್ತೀರ್ಣನಾಗಿದ್ದು ೧೯೮೬ ರಲ್ಲಿ. ಬರಗೂರು ಎಂಬ ಹಳ್ಳಿ ಕೊಂಪೆಯಲ್ಲಿ. ಅಲ್ಲಿ ಇದ್ದ ಸರಕ್ಕಾರಿ ಅನುದಾನಿತ ಪ್ರೌಢಶಾಲೆ ಚೆನ್ನಾಗಿಯೇ ಇತ್ತು. ಕನ್ನಡ ಪ್ರಥಮ ಭಾಸೆಯಾಗಿ, ಕನ್ನಡ ಮಾಧ್ಯಮದಲ್ಲಿಯೇ ಓದಿ, ರಾಜ್ಯಕ್ಕೆ ೨೦ ನೆ ರ್ಯಾಂಕ್ ಅನ್ನು ಕೇವಲ ಎರಡು ಅಂಕಗಳಿಂದ ತಪ್ಪಿಸಿಕೊಂಡರು ತುಮಕೂರು ಜಿಲ್ಲೆಗೆ ಮೊದಲನೆಯವನಾಗಿ ಪಾಸಾಗಿದ್ದೆ! ಶಾಲೆಗೆ, ಊರಿಗೆ ಹೆಮ್ಮೆಯ ವಿಷ್ಯ ಅದು. ಆದರೆ ಜಿಲ್ಲಾ  ಕೇಂದ್ರದ  ಸಂಘಗಳಿಗೆ ಈ ಮಾಹಿತಿ ಇರಲಿಲ್ಲ. ತುಮಕೂರಿನ , ನನಗಿಂತ  ಕಡಿಮೆ ಅಂಕ ತೆಗೆದ ಇನ್ನಿಬ್ಬರಿಗೆ ಮೊದಲನೆಯ ಹಾಗೂ ಎರಡನೆಯ ಬಹುಮಾನ ಘೋಷಿಸಿ ಸನ್ಮಾನ ಮಾಡಿಬಿಟ್ಟರು. ನಮ್ಮ ಮುಖ್ಯೋಪಾಧ್ಯಾಯರು ಅನಂತರ ಅವರೊಡನೆ ಜಗಳ ಮಾಡಿ ನನಗೂ ಒಂದು ಪ್ರಶಸ್ತಿ ಕೊಡಿಸಿದರು!! ಅದು ಬೇರೆ ವಿಷಯ.

ಕಾಲೇಜಿಗೆಂದು  ತುಮಕೂರಿಗೆ ಬಂದಾಗ ಅಲ್ಲಿನ ಪ್ರಸಿದ್ಧ ಸರ್ವೋದಯ ಕಾಲೇಜಿಗೆ ಸೇರಲು ಬಯಸಿ ಅರ್ಜಿ ಹಾಕಿ ಪರೀಕ್ಷೆಯೊಂದನ್ನು ಬರೆದದ್ದಾಯಿತು. ಪರೀಕ್ಷೆಯೊಂದು ನೆಪ ಮಾತ್ರ. ಪ್ರವೇಶಕ್ಕಾಗಿ ೩೦೦೦ ರೂಪಾಯಿ ಕೊಡಬೇಕೆಂದರು!! ನನ್ನ ಬಳಿ ಅಷ್ಟು ಹಣ ಎಲ್ಲಿರಬೇಕು. ನಮ್ಮ ಪರಿಸ್ಥಿತಿ ವಿವರಿಸಿದರೂ, ನಾನು ಜಿಲ್ಲೆಗೆ ಪ್ರಥಮವಾಗಿ ಹಳ್ಳಿಯೊಂದರಿಂದ ಪಾಸಾಗಿ ಬಂದಿದ್ದರೂ ಅದಾವುದರ ಗಣನೆ ಅವರಿಗಿರಲಿಲ್ಲ. ಬೇಕಾದ್ದು ಹಣ.

ಸರಿ, ತಿಳಿಯದ ನಮಗೆ ಸಿದ್ಧಗಂಗಾ ಕಿರಿಯ ಕಾಲೇಜಿನಲ್ಲಿ ಸೇರಲು ಸಲಹೆ ಕೊಡಲಾಗಿ ನಾನು ಅಲ್ಲಿಗೇ ಸೇರಿದೆ. ಅಲ್ಲಿ ಫೀಸು ಕೇವಲ ಮುನ್ನೂರು ರೂಪಾಯಿ ಇರಬೇಕು. ಸೇರಿದೆ. ಪಾಠ ಪ್ರವಚನಗಳು ಸಾಧಾರಣ ಮಟ್ಟದ್ದವಾದರೂ ನಿಯಮಿತವಾಗಿ ನಡೆಯುತ್ತಿದ್ದವು. ನಾನು ಯಾವ ಹೆಚ್ಚುವರಿ ಪಾಠಕ್ಕೂ ಹೋಗಲಿಲ್ಲ. ನಮ್ಮ ದಾಯಾದಿ ಅಣ್ಣನ, ಇನ್ನೂ ನಿರ್ಮಾಣದ ಹಂತದಲ್ಲಿದ್ದ ಮನೆಯಲ್ಲಿಯೇ , ಮನೆಯ ಕ್ಯೂರಿಂಗ್ ಇತ್ಯಾದಿ ಮಾಡಿಕೊಂಡು ಅದರ ಒಂದು ಕೋಣೆಯಲ್ಲಿಯೇ ಇದ್ದುಕೊಂಡು ಪ್ರಥಮ ವರ್ಷ ಮುಗಿಸಿದೆ. ಎರಡನೆ ವರ್ಷದಲ್ಲಿ ನಮ್ಮದೇ ಮನೆಯಲ್ಲಿ ಓದಿದೆನಾದರೂ ಹೆಚ್ಚುವರಿ ಪಾಠಕ್ಕೆ ಹೋಗಲಿಲ್ಲ. ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಮೂರನೆಯವನಾಗಿ ಪಾಸಾದದ್ದೂ ಅಲ್ಲದೆ ಪ್ರವೇಶ ಪರೀಕ್ಷೆಗಳಲ್ಲಿಯೂ ಒಳ್ಳೆಯ ರ್ಯಾಂಕ್ ಪಡೆದು ಬೆಂಗಳೂರು ಮೆಡಿಕಲ್ ಕಾಲೇಜು ಸೇರಿದೆ. ಜಿಲ್ಲೆ ಗೆ ಪ್ರಥಮ ಸ್ಥಾನ  ಪಡೆದವನು,ನಾನೂ ಅಲ್ಲಿ ಸಹಪಾಠಿಗಳಾದೆವು ಹಾಗೂ ಇಂದಿಗೂ ಜೀವದ ಗೆಳೆಯರಾಗಿ ಉಳಿದಿದ್ದೇವೆ. ಅವನು ಸರ್ವೋದಯ ಕಾಲೇಜಿನ ವಿದ್ಯಾರ್ಥಿ. ಪಿ ಯು ಸಿ ಯಲ್ಲಿ  ನನಗೂ ಅವನಿಗೂ ೧೮ ಅಂಕಗಳ ವ್ಯತ್ಯಾಸ ಇತ್ತು!

ಸರ್ವೋದಯ ಕಾಲೇಜಿಗೆ ಸೇರದೆಯೂ ಸಾಧನೆ ಮಾಡುವ ಛಲವೊಂದು ನನ್ನಲ್ಲಿತ್ತು. ಕನ್ನಡ ಮಾಧ್ಯಮದ ತೊಂದರೆ, ಮನೆಯಲ್ಲಿ ಸೌಲಭ್ಯಗಳ ಕೊರತೆ, ಹೊಸ ಪುಸ್ತಕಗಳನ್ನು ಕೊಳ್ಳಲಾಗದೆ ಹಾದಿ ಬೀದಿ ಬದಿಯಲ್ಲಿ ಮಾರುತ್ತಿದ್ದ ಹಳೇ ಪುಸ್ತಕಗಲ್ಲ್ಲಿಯೇ ನನಗೆ ಬೇಕಾದ ಪಾಠಗಳನ್ನು ಕುರಿತು ಓದಿ, ಅದರ ಪರಿಕಲ್ಪನೆಯನ್ನು ಮನದಲ್ಲಿ ಮನನ ಮಾಡಿಕೊಂಡು , ಹೆಚ್ಚುವರಿ ಮಾರ್ಗದರ್ಶಕರಿಲ್ಲದೆಯೂ ಉತ್ತಮ ಅಂಕಗಳನ್ನು ಪಡೆಯಬಹುದಾದರೆ ಇಂದಿನ ದಿನಗಳಲ್ಲಿ ಅದು ಏಕೆ ಸಾಧ್ಯವಾಗುವುದಿಲ್ಲ ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು. ಸ್ನೇಹಿತರೂ ಆಗಾಗ ಅವರ ಪುಸ್ತಕಗಳನ್ನು ಎರವಲು ಕೊಡುತ್ತಿದ್ದರು. ನನಗೆ ತಿಳಿದದ್ದನ್ನು ಅವರಿಗೆ ನಿಸ್ವಾರ್ಥತೆಯಿಂದ ಕಲಿಸುತ್ತಲೂ  ಇದ್ದೆ.

ಹೀಗೆ ಒಳ್ಳೆಯ ಕಾಲೇಜಿನಲ್ಲಿ ಓದಿರಬಹುದಾದ, ಉತ್ತಮ ಆರ್ಥಿಕ ಹಿನ್ನೆಲೆಯಿಂದ ಬಂದ ಉಳಿದ ಮಕ್ಕಳಿಗೆ ಹೋಲಿಸಿದರೆ ನಾನು ಕಳೆದುಕೊಂಡದ್ದೇನು? ನನ್ನ ಬಳಿ ಆಟವಾಡಲು ಸಮಯ ಇರಲಿಲ್ಲ. ಸಿನಿಮಾ ಹೋಟೆಲು ಎಂದು ಮಾಡಲು ಹಣವೂ ಇರಲಿಲ್ಲ. ನನ್ನ ಸಮಕಾಲೀನ ಕೆಲವು ಮಕ್ಕಳು ಓದು- ಹದಿ ಹರೆಯದ ಮೋಜು ಎರಡನ್ನೂ ಸಮಾನಾಂತರವಾಗಿ ಮಾಡಿರಬಹುದು.ಈ ಸಾಧನೆಯ ಹಾದಿಯಲ್ಲಿ ನಾನದನ್ನು ಬಲಿ ಕೊಟ್ಟೆ ಎನ್ನ ಬಹುದಾದ್ರೂ ‘ ವಿದ್ಯಾತುರಾಣಾಂ ನಾ ನಿದ್ರಾ ನಾ ಸುಖಾಃ ‘’ ಎಂಬ ಉಕ್ತಿಗೆ ಅನುಗುಣವಾಗಿಯೇ ನಾನು ನಡೆದ ಬಗ್ಗೆ ಹೆಮ್ಮೆಯಿದೆ.

ಆಗ ಅಂತರ್ಜಾಲವಾಗಲೀ, ಇತರ ರೀತಿಯ ಸೌಲಭ್ಯಗಲಾಗಲೀ ಇರದ ಕಾರಣ ಕಾಲೇಜಿನಲ್ಲಿ ಬೋಧಿಸುವುದು , ಅವರಿಂದ ತಿಳಿಯುವುದು ಮಹತ್ವಪೂರ್ಣವಾಗಿತ್ತು. ಇಂದು ಅಂತರ್ಜಾಲದಲ್ಲಿ ಮಾಹಿತಿ,ವಿಷಯಗಳ ಕುರಿತಾದ ಆಕರಗಳು ಹೇರಳವಾಗಿವೆ. ಗುಣಮಟ್ಟದ ಪಾಠ ಪ್ರವಚನಗಳು ಸುಲಭವಾಗಿ, ಉಚಿತವಾಗಿ ಸಿಗುತ್ತವೆ. ಪುಸ್ತಕದಲ್ಲಿರುವ ಪಾಠಗಳಿಗೆ ಪೂರಕವಾದ ವಿಚಾರ ವಿಶ್ಲೇಷಣೆ, ಪರಿಕಲ್ಪನೆಗಳ ವಿವರಣೆ ಸಿಗುತ್ತದೆ. ಎರಡನೇ ದರ್ಜೆಯ ಅಧ್ಯಾಪಕರುಗಳ ಬಡಬಡಿಕೆ ಕೇಳಬೇಕಾಗಿಲ್ಲ. ಆದರೆ, ಕಲಿಕೆಯ ಯಾವುದೇ ಹಂತದಲ್ಲಿ ಉತ್ತಮ ಅಧ್ಯಾಪಕರುಗಳು ಸಿಕ್ಕಿದರೆ ಅದೊಂದು ಅಪೂರ್ವ ಅನುಭವ-ಅದೃಷ್ಟ ಎಂಬುವುದರಲ್ಲಿ ಎರಡು ಮಾತಿಲ್ಲ. ಆದರೆ ಇದು ಅಪರೂಪದ ಸಂಗತಿ . ನನ್ನ ಇಡೀ ಇಲ್ಲಿಯ ವರೆಗಿನ ಅನುಭವದಲ್ಲಿ ೨೦% ಅಧ್ಯಾಪಕರುಗಳು  ಉತ್ತಮ ಎಂಬ ವರ್ಗಕ್ಕೆ ಸೇರಿದವರು. ಬಹುತೇಕ ಖಾಸಗೀ ಕಾಲೇಜುಗಳ ಅಧ್ಯಾಪಕರುಗಳು ಅಸಾಮಾನ್ಯರೇನೂ ಅಲ್ಲ.

ಅಂತರ್ಜಾಲದಲ್ಲಿ PHYSICS ,CHEMISTRY ,MATHEMATICS ಮತ್ತು BIOLOGY ಗೆ ಸಂಬಂಧಿಸಿದ ಸಾಕಷ್ತು ಪುಸ್ತಕಗಳು PDF ಆವೃತ್ತಿಯಲ್ಲಿ ಲಭ್ಯ. ಕಾಲೇಜಿಗೆ ಸುರಿಯುವ ಹಣದಲ್ಲಿ ಒಂದೊಳ್ಳೆ TABLET COMPUTER ಕೊಂಡು ಅದರಲ್ಲಿ DOWNLOAD ಮಾಡಿಕೊಂಡು ಓದಬಹುದು. ಕೆಲವಿ ಅಮೇರಿಕಾದ ಅಧ್ಯಾಪಕರುಗಳು ವೀಡಿಯೊ ಪಾಠಗಳನ್ನೂ ಮಾಡಿದ್ದಾರೆ YOUTUBE ಹಾಗೂ ಇತರ ಆಕರಗಳಲ್ಲಿ ನಿಮಗೆ ಬೇಕಾದ ವಿಷಯಕ್ಕೆ ಕುರಿತಂತೆ ಹಲವಾರು  ಬಗೆಯ ಪಾಠಗಳು ಲಭ್ಯವಿವೆ. ಏಕಾಗ್ರತೆಯಿಂದ ಇವುಗಳನ್ನು ಕೇಳಿ ಮನನ ಮಾಡಿಕೊಂಡರೆ ಯಾವ ಹಂಗಿಲ್ಲದೆ ಕಲಿಕೆ, ಗ್ರಹಿಕೆ ಸಾಧ್ಯ. ಇದಕ್ಕೆ ಮೂಲಭೂತವಾದ ಆಲೋಚನಾಶಕ್ತಿ, ಕುತೂಹಲ, ಕಲಿಕೆಯ ಹಸಿವು ಇದ್ದರೆ ಸಾಕು. ನಿಮಗೆ ಇಷ್ಟವಾಗುವ ವೀಡಿಯೊ ಗಳನ್ನೂ ಗುರುತಿಸಿಟ್ಟುಕೊಳ್ಳಿ, ಕೆಲವು ಜಾಲತಾಣಗಳಿಗೆ ಸದಸ್ಯರಾಗಿ., ಒಂದಲ್ಲ ಹಲವು ಸಾರಿ ಕೇಳಿ , ಮನಸ್ಸಿನಲ್ಲಿ ಮಥಿಸಿ, ಸ್ವಂತ ಪರಿಶ್ರಮದಿಂದ ಪಠಣ- ಶ್ರವಣ-ಮನನ-ನಿಧಿಧ್ಯಾಸನ ಹಂತಗಳಲ್ಲಿ ಅರ್ಥ ಮಾಡಿಕೊಂಡರೆ ಅದರ ನೆನಪೂ ಚನ್ನಾಗಿ ಉಳಿಯುತ್ತದೆ, ಅನ್ವಯಿಕ (applied ) ಪ್ರಶ್ನೆಗಳನ್ನು ಚನ್ನಾಗಿ ಉತ್ತರಿಸಬಹುದು.ಆತ್ಮವಿಶ್ವಾಸವು ವೃದ್ಧಿಸುತ್ತದೆ. ಈಗಲೂ ನಾನು  ವೃತ್ತಿಯಿಂದ ವೈದ್ಯನಾದರೂ, ಭೌತಶಾಸ್ತ್ರ , ಗಣಿತ ಕುರಿತ ಪುಸ್ತಕಗಳನ್ನು ಓದುತ್ತಲೇ ಇರುತ್ತೇನೆ!!

ಈಗ ನನ್ನ ಬಳಿ ಹೀಗೆ ಶೇಖರಿಸಿಕೊಂಡ  ಹಲವಾರು ಪುಸ್ತಕಗಳಿವೆ. ಬೇಕಾದರೆ ಸಂಪರ್ಕಿಸಬಹುದು.

ಕುರಿಮಂದೆಯಂತೆ ಜನಮರುಳೋ ಜಾತ್ರೆ ಮರುಳೋ ಎಂಬ ಹುಚ್ಚರ ಸಂತೆಯಲ್ಲಿ ನೀವೂ ಒಬ್ಬರಾಗಿ ನುಗ್ಗಿ ಹಣ, ನೆಮ್ಮದಿ ಹಾಳು ಮಾಡಿಕೊಳ್ಳುವ ಬದಲು ಒಂದು ಹೆಜ್ಜೆ ಹಿಂದೆ ಹೋಗಿ ಒಮ್ಮೆ ಸಾಧಕ ಬಾಧಕಗಳನ್ನು ಪರಿಗಣಿಸಿ ಹೆಜ್ಜೆಯಿಡಿ. ನಿಮ್ಮ ಮೇಲೆ ನೀವಿಟ್ಟುಕೊಳ್ಳುವ, ನಿಮ್ಮ ಮಕ್ಕಳಿಗೆ ನೀವು ಕೊಡುವ ಆತ್ಮಸ್ಥೈರ್ಯ, ಪ್ರೋತ್ಸಾಹ, ಧೃಢ ನಿಶ್ಚಯ, ತಪಸ್ಸಿನೋಪಾದಿಯಲ್ಲಿ ನಡೆಸುವ ಅಧ್ಯಯನ ನಿಮ್ಮನ್ನು ಗುರಿ ಮುಟ್ಟಿಸಿಯೇ ತೀರುತ್ತದೆ.

ಒಳ್ಳೆಯ ಕಾಲೇಜು, ಉತ್ತಮ ಬೋಧನೆ, ಮಾರ್ಗದರ್ಶನ, ಪುಸ್ತಕ , ಹೆಚ್ಚುವರಿ ಕೋಚಿಂಗ್ ಇತ್ಯಾದಿ ಸಿಕ್ಕಿದ್ದರೆ ಬಹುಶ್ಃ ನನ್ನ ಕನಸಿನಂತೆ ನಾನು ಐ ಐ ಟಿ ಯಲ್ಲಿ  ಪ್ರವೇಶ ಗಿಟ್ಟಿಸುತ್ತಿದ್ದೆನೇನೋ? ಯಾರಿಗೆ ಗೊತ್ತು. ಅಂದು ನನ್ನ ಶಕ್ತಿಯ ಪರಿಮಿತಿಯಲ್ಲಿ ಮಾಡಬಹುದಾದ್ದನ್ನು ಸಾಧಿಸಿದೆನೆಂಬ ತೃಪ್ತಿ ನನಗಿದೆ.ಜೊತೆಗೆ ನನ್ನ ಭಾಷೆ, ನೆಲ, ನೀರು, ಸಾಹಿತ್ಯ, ಸಂಸ್ಕೃತಿಗಳ ಕುರಿತಾದ ಅಭಿಮಾನವೂ ಇದೆ.ಕೇವಲ ಲೌಕಿಕ ಸಾಧನೆಗಳ ಕೂಪದಲ್ಲಿ ಬೀಳದೆ ಆಧ್ಯಾತ್ಮಿಕ ಆಯಾಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಸ್ಕಾರ ನನಗೆ ನನ್ನ ಅನುಭವ ಕಲಿಸಿದೆ. ಖಾಸಗೀ ಕಾಲೇಜುಗಳ ಗಿಲೀಟು ವಾತಾವರಣದಲ್ಲಿ ಇವೆಲ್ಲವೂ ದಕ್ಕುತ್ತಿತ್ತೋ ಇಲ್ಲವೋ ಎಂಬ ಜಿಜ್ಞಾಸೆ ನನ್ನ ಕೆಲವು ಸಹಪಾಠಿಗಳನ್ನು ನೋಡಿದಾಗ ನನಗೆ ಕಾಡುತ್ತದೆ.

 ಉಪಸಂಹಾರ:

ಪಿ.ಯು ಸಿ ಯಲ್ಲಿ ಅಷ್ಟೇನೂ ತೊಂದರೆಯೆನಿಸದ ಇಂಗ್ಲೀಷ್   ಮೆಡಿಕಲ್ ಸೇರಿದಾಗ ಸಾಕಷ್ಟು ಕಾಡಿತು. ಬೆಂಗಳೂರು ಹುಡುಗರ ಭರಾಟೆಗೆ ನಾನು ಸ್ವಲ್ಪ ಹೆದರಿಡ್ಡೇನೋ ನಿಜ. ಪಠ್ಯಗಳನ್ನು ಅರ್ಥೈಸಿಕೊಳ್ಳುವುದರಲ್ಲೂ ಬಹಳವೇ ತೊಂದರೆಯೆನಿಸಿತು. ಮೊದಲ ಕಿರು ಪರೀಕ್ಷೆಯಲ್ಲಿ ಫ಼ೇಲಾಗಿದ್ದೆ ಸಹ.ಅದರೂ, ಸಾಧಿಸಬಹುದೆಂಬ ನಂಬಿಕೆ, ಸತತ ಪರಿಶ್ರಮದಿಂದ distinction ನಲ್ಲಿಯೇ ಪಾಸಾಗುತ್ತ ಕೊನೆಗೆ ಬೆಂಗಳೂರು ವಿಶ್ವ ವಿದ್ಯಾಲಯಕ್ಕೆ ಹತ್ತನೆ ರ್ಯಾಂಕ್ ಕೂಡ ಪಡೆದೆ. ಬೆಂಗಳೂರು , ಇತರ ನಗರಗಳ, ಉತ್ತಮ ಹಿನ್ನೆಲೆಯ ಬಹುತೇಕ ವಿದ್ಯಾರ್ಥಿಗಳನ್ನು ಮೀರಿಸಿದ ಸಾಧನೆ ನನ್ನಂತಹವನೊಬ್ಬ ಮಾಡಬಹುದಾದರೆ ಅಂತರಿಕವಾಗಿ ಇನ್ನೂ ಪ್ರತಿಭಾನ್ವಿತ ಹುಡುಗರದೆಷ್ಟು ಸಾಧನೆ ಮಾಡಬಲ್ಲರು. ನಿಮ್ಮ ಶಕ್ತಿಯ ಅಂದಾಜು ನಿಮಗಿದ್ದರೆ ಖಾಸಗಿ ಕಾಲೇಜುಗಳ ಮುಲಾಜು ನಿಮಗೆ ಬೇಡವೇ ಬೇಡ. ಮುಂದೆ ರಾಷ್ಟ್ರಮಟ್ಟದ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯಲ್ಲಿ ಇಡಿ ದೇಶದ ೬೦೦೦ ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಬರೆಯುವ ಪರೀಕ್ಷೆಯಲ್ಲಿ ೩೩ ನೇ ರ್ಯಾಂಕ್ ಪಡೆದಿದ್ದೆ. ಮುಂದೆಯೂ ಹಲವಾರು ಪರೀಕ್ಷೆಗಳನ್ನು ಎದುರಿಸಿದ್ದೇನೆ, ಉತ್ತಮ ಅಂಕಗಳೊಂದಿಗೆ ತೇರ್ಗಡೆಯೂ ಆಗಿದ್ದೇನೆ. ವಿಷಯದ ಆಳಕ್ಕೆ ಹೋಗಿ ಅರ್ಥೈಸಿಕೊಳ್ಳುವ ನನ್ನ ಅಭ್ಯಾಸದಿಂದ ಕಿರಿಯ ವೈದ್ಯರ ನೆಚ್ಚಿನ ಅಧ್ಯಾಪಕನೂ ಆಗಿದ್ದೇನೆ. ನನ್ನ ಈ ಸಾಧನೆಯಲ್ಲಿ ಹಲವಾರು ಸಹೃದಯರ ಪಾತ್ರವಿದೆ,.. ಕಾಲ ಕಾಲಕ್ಕೆ ಕೈಹಿಡಿದವರ ಔದಾರ್ಯವಿದೆ. ಆದರೆ ಮನಸ್ಸಿನ ಹಸಿವು ಅಂತಹ ಸಹಾಯಗಳನ್ನು ಹೇಗೋ ಒದಗಿಸುತ್ತದೆ. ಧೃತಿಗೆಡದೆ , ಖಾಸಗಿ ಕಾಲೇಜುಗಳಿಗೆ ಸೆಡ್ಡು ಹೊಡೆದು ಓದಿ. ಅಲ್ಲಿ ಚೆಲ್ಲುವ ಹಣವನ್ನು ಪುಸ್ತಕ ಪರಿಕರ ಕೊಳ್ಳುವುದಕ್ಕೆ ಬಳಸಿ. ನಿಮ್ಮ ಪರಿಶ್ರಮವೇ ನಿಮಗೆ ಶ್ರೀರಕ್ಷೆ ಎಂಬುದು ನೆನಪಿರಲಿ- ಸಾಕು.

ಸುದರ್ಶನ ಗುರುರಾಜರಾವ್

ಭೈರಪ್ಪನವರ “ಯಾನ”ದ ಕಿಟಕಿಯಿಂದೊಂದು ಇಣುಕು ನೋಟ :

ಯಾನದ ಕಿಟಕಿಯಿಂದೊಂದು ಇಣುಕು ನೋಟ :

ಭೈರಪ್ಪನವರ ಕಾದಂಬರಿಗಳು ವಸ್ತು ವಿಷಯದಿಂದಲೂ, ಕಥೆಯ ಗಂಭೀರ ಹಂದರದಿಂದಲೂ ಇತರರಿಗಿಂತ ಭಿನ್ನವಾಗಿರುವ ವಿಚಾರ ತಿಳಿಯದ್ದೇನಲ್ಲ. ಈ ಸರಣಿಗೆ ಮತ್ತೊಂದು ಸೇರ್ಪಡೆ ‘ಯಾನ’. _____________________________________________________________

ಯಾನದಲ್ಲಿ ಬರುವ ಪ್ರಮುಖ ಪಾತ್ರಗಳಾದ ಉತ್ತರಾ (ಹೆಣ್ಣು) ಹಾಗೂ ಸುದರ್ಶನ  (ಗಂಡು) ಎರಡೂ ನನಗೆ ಆತ್ಮೀಯವಾದ ಹೆಸರುಗಳೇ. ಉತ್ತರಾ ನನ್ನ ಜನ್ಮ ನಕ್ಷತ್ರದ ಹೆಸರಾದರೆ ಸುದರ್ಶನ ನನ್ನ ಹೆಸರೇ ಆಗಿದೆ. ಸ್ವನಾಮ ಪ್ರೇಮ, ಸ್ವನಾಮಾನುಕಂಪ ಹಾಗೂ ಪಕ್ಷಪಾತಗಳು ತಿಳಿಯದ್ದೇನಲ್ಲ. ಈ ಹಿನ್ನೆಲೆಯಲ್ಲಿ ಈ ಕಾದಂಬರಿಯ ಪಾತ್ರಗಳನ್ನು ನಿರೂಪಣೆಯನ್ನು ಹಾಗೂ ಕಥಾವಸ್ತುವನ್ನು ಅದಷ್ಟು ವಸ್ತುನಿಷ್ಠ ವಾಗಿ ಮಾಡಲು ಪ್ರಯತ್ನಿಸಿದ್ದೇನೆಂದು ಮೊದಲೇ ಘೋಷಿಸಿಬಿಡುತ್ತೇನೆ.

‘’ಯಾನ’’ ಭೂಮಿಯಿಂದ ಬೇರೊಂದು ಸೌರವ್ಯೂಹವನ್ನೇ ಹೊಕ್ಕು ಅಲ್ಲಿ ಜೀವಸಂಕುಲವನ್ನು ಬೆಳೆಸಬಲ್ಲ, ಪೋಷಿಸಬಲ್ಲ ಗ್ರಹವೊಂದನ್ನು ಹುಡುಕುವ ಮಾನವನ ಮಹದೋದ್ದೇಶದ ಪ್ರಯಾಣಕಥನ., ಪ್ರಯಾಣವೊಂದು ಧಿಢೀರ್ ಎಂದು ಪ್ರಾರಂಭವಾಗುವುದಿಲ್ಲವಷ್ಟೆ ; ಅದಕ್ಕೆ ತಯಾರಿ ಬೇಕು. ಆ ತಯಾರಿಯ ಹಂತದಲ್ಲಿ ಪಾತ್ರ ಪರಿಚಯಗಳಗ್ಗುವುದಲ್ಲದೆಅವರ ಜೀವನದ, ಆ ದೇಶ ಕಾಲಗಳ ವಿದ್ಯಮಾನಗಳ ಭೂಮಿಕೆ ಕಾದಂಬರಿಯಲ್ಲಿ  ಸಿದ್ದಹವಾಗುತ್ತದೆ. ಕಥೆಯು ಭೂತ ವರ್ತಮಾನಗಳ ಮಧ್ಯೆ ತುಯ್ದಾಡುತ್ತಾ,ಪಾತ್ರಗಳ ಮನೋವ್ಯಾಪಾರವನ್ನು ಅವರು ನಂಬಿದ ತತ್ವಗಳ /ಮಾನಸಿಕ ಮಸೂರದ ಮೂಲಕ ಹಾಗೂ ಅವರುಗಳು ಇರುವ ದೇಶ ಕಾಲ ಧರ್ಮ ನಂಬಿಕೆಗಳ ಚೌಕಟ್ಟಿನಲ್ಲಿ ತಿಳಿಸುತ್ತಾ ಸಾಗುತ್ತದೆ. ಇಲ್ಲಿ ಅರಿವು ಮತ್ತು ನಂಬಿಕೆಗಳ ನಡುವಿನ ವ್ಯತ್ಯಾಸ ಗಮನಿಸಬೇಕು.ನಂಬಿಕೆ ಮತ್ತು ಆಯ್ಕೆಗಳ ನಡುವಿನ ತಾಕಲಟಗಳೂ ಬರುತ್ತವೆ. ಮಾನವನ ಜೀವನದ ವಿದ್ಯಮಾನಗಳು ಮತ್ತು ಅಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಸರಳ ರೇಖಾತ್ಮಕವಾಗಿರದೆ ಎಡ ಬಲ ಊರ್ಧ್ವ ಹಾಗೂ ಅಧೋಮುಖಗಳಿಂದ ಬಂದು ಬಡಿಯುವ ಹಲಾವಾರು ಘಟನೆ,ಒತ್ತಡಗಳ ಸಂಕೀರ್ಣ ಉತ್ಪತ್ತಿ ಎಂಬುದು ಭೈರಪ್ಪನವರ ಎಲ್ಲ ಕಾದಂಬರಿಗಳಂತೆ ಇಲ್ಲಿಯೂ ಹಾಸು ಹೊಕ್ಕಾಗಿರುವ ಅಂಶ ;ಆದರೆ ಆಯಾಮ ಮಾತ್ರ ಬೇರೆ.

ಮೊದಲಿಗೆ ಪಾತ್ರಗಳನ್ನೂ ಕುರಿತು ನೋಡೋಣ.

ಉತ್ತರಾ:

ಉತ್ತರಾ ಒಬ್ಬಳು ಒಬ್ಬಳು ಚೆಲುವು, ಛಲ ,ವಿದ್ಯೆ,ಬುದ್ಧಿ,ಆತ್ಮವಿಶ್ವಾಸ ,ಯಾರೂ ಬಯಬಯಸಬಹುದಾದ ಸಾಮಾಜಿಕ ಹಾಗೂ ಕೌಟುಂಬಿಕ ಹಿನ್ನೆಲೆಯಿಂದ ಬಂದ ಹೆಣ್ಣು. ತಾನು ಬಯಸಿದ್ದನ್ನು ಹೋರಾಡಿ ಪಡೆಯಬಲ್ಲ ಮನೋಸ್ಥೈರ್ಯ ಇರುವಂತಹವಳು್. ಹೊಸ ಅನುಭವ ಸಾಹಸಗಳಿಗೆ ತನ್ನನು ತಾನು ಒಡ್ಡಿಕೊಳ್ಳಬಲ್ಲ ಆಧುನಿಕ ಮನೋಭಾವದವಳಾದರೂ ತನ್ನ ತಾಯಿ ತಂದೆಯರಿಂದ ಭಾರತೀಯ ಧರ್ಮ ನಂಬಿಕೆಗಳ ಅರಿವನ್ನು ಇಟ್ಟುಕೊಂಡು ಬೆಳೆದಿರುವವಳು.. ಪೈಲಟ್ ವ್ರುತ್ತಿಯಿಂದ ಹೊರಬಂದು ವ್ಯೋಮಯಾನದ ಪ್ರಯೋಗಾತ್ಮಕ ಕ್ರಿಯೆಗೆ ಸ್ವ ಇಚ್ಚೆಯಿಂದಲೇ ಹೋಗಿ ಆಯ್ಕೆಯಾಗುತಾಳೆ. ಅಲ್ಲಿ ಯಾದವನೊಂದಿಗೆ ಪ್ರೇಮಾಕುರವೂ ಆಗಿ ಬಾಹ್ಯಾಕಾಶದಲ್ಲಿ ದೇಹಸಂಪರ್ಕ ಮಾಡುವ ಮುನ್ನ ಗಂಧರ್ವ ರೀತಿಯಲ್ಲಿ ವಿವಾಹವನ್ನು ಮಾಡಿಕೊಳ್ಳುತಾಳೆ. ಆ ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ಹೆಸರನ್ನೂ ಗಳಿಸುತ್ತಾಳೆ. ತನಗಿದ್ದ ಸಂಸ್ಕಾರದ ಫಲವಾಗಿ ಆ ಎಲ್ಲ ಹಣ, ಹೆಸರು ಪ್ರತಿಷ್ಠೆಗಳು ತರಬಹುದಾದ ಅವಘಢ ಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತಾಳೆ. ಮುಂದಿನ ಹಂತದ ಯೋಜನೆಗೆ ಅವಳ ಪ್ರಿಯಕರ  /ಗಂಡನಾದ ಯಾದವನು ಉತ್ಸಾಹ ತೋರದಿದ್ದಾಗ ತಾನು ಹೊರಟು ನಿಲ್ಲುತ್ತಾಳೆ. ಮನೆಯ/ ಮನೆಯವರ ಜವಾಬುದಾರಿಯ ಕಾರಣ ಅವನು ಬರುತ್ತಿಲ್ಲವೆಂದು ತಿಳಿದಿದ್ದರೂ ತನ್ನ ನಿರ್ಧಾರ ಬದಲಾಯಿಸದವಳಾಗುತ್ತಾಳೆ. ಸ್ವತಂತ್ರ ಮನೋಭಾವದ ಉತ್ತರಾ, ಯಾದವನ ಭೂಮಿಯ ಮೇಲಿನ ಕೌಟುಂಬಿಕ ಅನಿವಾರ್ಯತೆಗಳಿಗೆ ಸ್ಪಂದಿಸುವುದಿಲ್ಲ. ಕೀರ್ತಿ, ಹೊಸ ಅನುಭವ, ದೇಶಪ್ರೇಮ ದೇಶಸೇವೆ ಇವುಗಳ ನಡುವಿನ ಗೊಂದಲ ಒಂದು ಕಡೆ ,ಯಾದವನ ಮೇಲಿನ ಪ್ರೀತಿ,ಸೆಳೆತ,ತನ್ನದೇ ಸಂತತಿಯನ್ನು ಬೆಳೆಸುವ ಆಕಾಂಕ್ಷೆ ಇನ್ನೊಂದೆಡೆ. ಯಾದವ ಅವಳ ಒತ್ತಡಕ್ಕೆ ಒಪ್ಪದೇ ಹೋದಾಗ ತನ್ನ ಅಂತರಾತ್ಮಕ್ಕೆ ವಿರುದ್ಧ ಯಾನಕ್ಕೆ ಹೊರಟೆ ಬಿಡುತ್ತಾಳೆ. ಅಲ್ಲಿಂದ ಮುಂದೆ ಅವಳ ಉತ್ಸಾಹ, ಕಾರ್ಯ ತತ್ಪರತೆ ತನ್ನ ತತ್ವಗಳ ಮೇಲಿನ ನಂಬಿಕೆ ಇತ್ಯಾದಿಗಳು ಅವಳ ಜೀವನದಲ್ಲಿ ಮಸುಕಾಗುತ್ತಾ ಹೋಗುತ್ತವೆ. ತನ್ನ ಅಯೋಮಯ ಹೊಯ್ದಾಟದಲ್ಲಿ ಸಹಯಾತ್ರಿ ಸುದರ್ಶನ ನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ಅವನನ್ನು ವಿರೋಧಿಸಿ, ಆ ಮೂಲಕ ದಾಂಪತ್ಯ ಜೀವನ ಶುರುಮಾಡುವಲ್ಲಿ ವಿಳಂಬಿಸಿ ಅವನನ್ನು ಮಾನಸಿಕವಾಗಿಯೂ ,ದೈಹಿಕವಾಗಿಯೂ ಕಳೆದುಕೊಳ್ಳುತ್ತಾಳೆ. ಕೃತಕ ಗರ್ಭಧಾರೆಣೆಯ ಮೂಲಕ ಒಂದು ಗಂಡು, ಒಂದು ಹೆಣ್ಣು ಮಕ್ಕಳನ್ನು ಪಡೆದು, ಅವರ ಆರೈಕೆ ಪಾಲನೆ ಮಾಡಿದಾಗ್ಯು ಅವಳ ಹಾಗೂ ಸುದರ್ಶನನ ಮಧ್ಯೆ ಮಾನಸಿಕೆ ಸಾಹಚರ್ಯ ಸೌಹಾರ್ದತೆ ಬೆಳೆಯುವುದೇ ಇಲ್ಲ. ಒಳ್ಳೆಯ ತಾಯಿಯಾಗುವ ಉತ್ತರಾ ತನ್ನ  ನಡವಳಿಕೆ ನಿರ್ಧಾರಗಳಿಂದ ಹಲವು ಉತ್ತರಗಳಿಲ್ಲದ ಪ್ರಶ್ನೆಗಳನ್ನು ಹುಟ್ಟಿ ಹಾಕುತ್ತಾಳೆ.

ಒಂದು ಪಾತ್ರ ಓದುಗರು ಕಟ್ಟಿಕೊಂಡ ನಿರೀಕ್ಷೆ ಅಥವಾ ಆದರ್ಶದ ಪ್ರಕಾರ ಸಾಗಬೇಕೇ ಬೇಡವೇ ಎಂಬುದು ಇಲ್ಲಿನ ಚರ್ಚೆಯ ವಿಷಯ.

ಮಹಿಳಾವಾದಿಗಳ ಪ್ರಕಾರ ಉತ್ತರಾ ಪಾತ್ರ ಪೂರ್ಣ ಪ್ರಮಾಣದಲ್ಲಿ ಮೂಡಿ ಬಂದಿಲ್ಲ ಎಂದೆನ್ನಬಹುದು. ಅಷ್ಟೆಲ್ಲಾ ಪ್ರತಿಭೆಯಿದ್ದವಳನ್ನು  ಕಡೆಗೆ ಯಾವುದನ್ನೂ ವೃದ್ಧಿಗೊಳಿಸಿಕೊಳ್ಳದೆ ಇಡೀ ಯಾನದ ಕಾಲಮಾನದಲ್ಲಿ ತೋಟದಲ್ಲಿ ಕಾಲ ಕಳೆಯುವ, ಮಕ್ಕಳಿಗೆ ತಾಯಿಯಾಗುವ,ಹಾಗೂ ಆಗೀಗ ಅಡುಗೆ ಮಾಡುವ ಗೃಹೀತ ಕೆಲಸಕ್ಕೆ ಸೀಮಿತಗೊಳಿಸಿ ಕಾದಂಬರಿಕಾರರು ಈ ಪಾತ್ರಕ್ಕೆ ಅನ್ಯಾಯ ಮಾಡಿದ್ದಾರೆ; ಮಹಿಳಾ ಸಬಲತೆಯನ್ನು ಎತ್ತಿ ಹಿಡಿದಿಲ್ಲ ,ಮತ್ತೆ ಅದೇ ದಮನೀಯ ಮನೋಧರ್ಮವನ್ನು ಒಬ್ಬ ಆಧುನಿಕ ಮಹಿಳೆಗೆ ಆರೋಪಿಸಿ ಪ್ರ್ಗಗತಿವಿರೋಧಿಯಾಗಿ ಬಿಂಬಿಸಿಕೊಂಡಿದ್ದಾರೆ ಎನ್ನುವ ಟೀಕೆಗಳು ಬರಬಹುದಾದ ಸನ್ನಿವೇಶ ತಂದುಕೊಂಡಿದ್ದಾರೆ .

ಸೈದ್ಧಾಂತಿಕ ನೆಲೆಗಟ್ಟಿನಿಂದ ನೋಡಿದರೆ ಇದು ಸರಿ ಎಂದೆನ್ನಿಸಬಹುದು. ಆ ಪಾತ್ರವನ್ನು ಆದರ್ಶೀಕರಣಗೊಳಿಸಿ ನೌಕಾಯಾನದ ಯಶೋಗಾಥೆಯಲ್ಲಿ ಅವಳ ಸಾಹಸ, ತಾಂತ್ರಿಕ ಪರಿಣತಿಗಳನ್ನು ಒರೆಗಿಟ್ಟು ಪಾತ್ರವನ್ನು ಸಶಕ್ತಗೊಳಿಸಬಹುದಿತ್ತು . ಆದರೆ ಅದು ಕೇವಲ ಸೈದ್ಧಾಂತಿಕ  ನೆಲೆಗಟ್ಟು.

ವೈಚಾರಿಕ ಹಾಗು ವಾಸ್ತವಿಕ ನೆಲೆಗಟ್ಟಿನಿಂದ ನೋಡಿದಾಗ ಹಲಾವಾರು ಹೆಣ್ಣುಗಳು ತಮ್ಮ ಸಾಧನೆಯಾ ಹಾದಿಯಿಂದ ಸರಕ್ಕನೆ ಹೊರಳಿ ತಮ್ಮ ಪಾರಂಪರಿಕವಾದ ,ಜೀವ ವಿಕಾಸದ ಮೂಲಭೂತ ಕೆಲಸವಾದ ಕುಟುಂಬದ ಲಾಲನೆ ಪಾಲನೆಯಲ್ಲಿ ತೊಡಗುವುದು ಅಪರುಪವೂ ಅಲ್ಲ, ಅಸಾಧುವೂ ಅಲ್ಲ,ಅಸಾಧ್ಯವೂ ಅಲ್ಲ. ಅಷ್ಟಕ್ಕೂ ತನ್ನ ಪ್ರೇಮವೈಫಲ್ಯವನ್ನು ಅನುಭವಿಸಿದ ಉತ್ತರೆಯಲ್ಲಿ ಆ ರೀತಿಯ ನಿರಾಸಕ್ತಿ ಮೂಡುವುದು ಹಲವಾರು ಮನೋವ್ಯಾಪಾರಗಳ ಸಾಧ್ಯಾ ಸಾಧ್ಯತೆಗಳ ಪಟ್ಟಿಯಲ್ಲಿ ಪ್ರಮುಖವಾದ ಅಂಶವೇ ಅಗಿದೆ್‌. ಹಾಗಾಗಿ ಭೈರಪ್ಪನವರು ತಮಗೆ ಬೇಕಾದ ಒಂದನ್ನು, ಹಂದರಕ್ಕೆ ಹೊಂದುವಹಾಗೆ ವಾಸ್ತವಿಕ ನೆಲೆಗಟ್ಟಿನಲ್ಲಿ ಅರಿಸಿಕೊಂಡದ್ದು ಅಕ್ಷಮ್ಯವೆಂತೇನೂ ಅನಿಸಲಿಲ್ಲ. ಇಷ್ಟಕ್ಕೂ ಜೀವನ ನಿರ್ವಹಣೆ ಹಾಗೂ ಭದ್ರತೆಯ ದೃಷ್ಟಿಯಿಂದ ಯಾವ ಕೊರತೆಯೂ ಇರದ ಪರಿಸ್ಥಿತಿಯಲ್ಲಿ ಮಾನವ ಜೀವಿಯೊಂದು ಇರುವಾಗ ದೇಹ – ಮನಸ್ಸುಗಳಿಗೆ ಕಡಿಮೆ ಜಗ್ಗಾಟ ಮಾಡಿಸುವ ಹಾದಿ ಹಿಡಿಯುವುದು ಮೂರರಲ್ಲಿ ಎರಡರಷ್ಟು ಜನ ಆಯ್ದುಕೊಳ್ಳುವ ಆಯ್ಕೆ!!.

ಯಾದವ :

ಕೆಳ ಮಧ್ಯಮ ವರ್ಗದ ಸಾಂಪ್ರದಾಯಿಕ ಕುಟುಂಬದಿಂದ ಬಂದ, ತನ್ನವರ,ತನ್ನ ಮನೆಯವರ ಮೇಲೆ ಪ್ರೀತಿ ಜವಾಬ್ದಾರಿಗಳು ಇರುವ ಯುವಕನೊಬ್ಬನ ಮನೋವ್ಯಾಪಾರಗಳನ್ನು ಪ್ರತಿನಿಧಿಸುವ ಪಾತ್ರ. ಸಾಧಾರಣಕ್ಕಿಂತ ಹೆಚ್ಚಿನ ಬುದ್ಧಿಮತ್ತೆಯಿದ್ದರೂ ಯಾದವ ದೈಹಿಕವಾದ ಚಟ್ಟುವಟಿಕೆಗಳಲ್ಲಿ ಹೆಚ್ಚು ಒಲವಿರುವ ಮನಸ್ಸುಳ್ಳವ;ಸೈದ್ಧಾಂತಿಕ ವಿಜ್ಞಾನ ಹಾಗೂ ಅದರ ಪರಿಕಲ್ಪನೆಗಳು ಅವನಿಗೆ ಹಿಡಿಸವು. ಹೀಗಾಗಿ ಈ ಗ್ಗಾಗಲೇ ವೈಜ್ಞಾನಿಕವಾಗಿ ,ಪ್ರಾಯೋಗಿಕವಾಗಿ ಭದ್ರ  ನೆಲೆಯ ಮೇಲೆ ನಿಂತಿರುವ ಬಾಹ್ಯಾಕಾಶಯಾನ ಅವನಿಗೆ ಸುಲಭ ಸಾಧ್ಯ. ಇಲ್ಲಿ ಅಮೂರ್ತ (ಅಬ್ಸ್ಟ್ರ್ಯಾಕ್ಟ್) ಆಲೋಚನೆಗಳ ವ್ಯಾಪ್ತಿ ಬಹಳ ಕಡಿಮೆ. ಆದರೆ ಇನ್ನೊಂದು ಸೌರವ್ಯೂಹಕ್ಕೆ ಹೋಗುವ ಸೋಲಾರಿಸ್ನಲ್ಲಿ ಅವನ ಬುದ್ಧಿಮತ್ತೆಗೆ ಹೆಚ್ಚಿನ ಸವಾಲು ಎದುರಾಗುತ್ತಿತ್ತು. ಅವನ ಮನಸ್ಥಿತಿ ಅದರ ಮಟ್ಟಕ್ಕೆ ಏರಿಸುವಷ್ಟಿರಲಿಲ್ಲ. ತಂಗಿಯರ ಮದುವೆ ಹಾಗೂ ತಂದೆ ತಾಯಿಯರ ಆರೈಕೆ ಪಾಲನೆಗಳನ್ನು ಪ್ರಧಾನ ಜೀವನ ಧ್ಯೇಯವನ್ನಾಗಿ ಪರಿಗಣಿಸುವ ಅವನಿಗೆ ( ಅಥವಾ ಅವನಮ್ತಿರುವ ಇನ್ಯಾರಿಗಾದರೂ) ಈ ಹೊಸಬಗೆಯ ಸಾಹಸಕ್ಕೆ ಕೈ ಹಾಕಿ ಅವರೆಲ್ಲರಿಂದ ದೂರ ಉಳಿಯುವ ಮನೋಧಾರ್ಢ್ಯತೆ ಇರುವುದಿಲ್ಲ. ಹಾಗಾಗಿಯೇ ಹೊಸ ಸವಾಲಿಗೆ ಒಡ್ಡಿಕೊಳ್ಳುವ ಉತ್ತರೆಯ ಹಂಬಲದಿಂದ ದೂರ ಸರಿಯುತ್ತಾನೆ. ಉತ್ತರಾ ಕೂಡಾ ಅವನ ಕೋರಿಕೆಯನ್ನು ತಿರಸ್ಕರಿಸಿ ಹೊರಟು ನಿಲ್ಲುತಾಳೆ. ಹಾಗೆಂದು ಅವನಿಗೆ ಊತ್ತರೆಯ ನೆನಪು ಮಾಸುವುದಿಲ್ಲ; ತನ್ನ ಹೆಂಡತಿ ರಾಜನಿಗೆ ಅದನ್ನು ತಿಳಿಸಿರುವುದು ಇಲ್ಲ. ರಾಷ್ತ್ರೀಯ ಭದ್ರತೆ, ರಹಸ್ಯದ ಕಾರಣದ ಜೊತೆಗೆ ಪತಿ ಪತ್ನಿಯರ ನಡುವೆ ಬೇರೊಂದು ಹೆಣ್ಣಿನ ವಿಚಾರವಾಗಿ ಇರಬಲ್ಲ ಆತಂಕ, ಸಂಕೋಚ ಎರಡೂ ಕಾರಣ. ಅದು ತಿಳಿದು ಬಿಟ್ಟಾಗ ರಜನಿಯ ಪ್ರತಿಕ್ರಿಯೆಯೂ, ಯಾದವನ ನಡವಳಿಕೆಯೂ ಯಾವ ಆದರ್ಶಗಳ ಚೌಕಟ್ಟಿಗೆ ಮಣಿಯದೆ ಸಾಮಾನ್ಯ ಮನುಷ್ಯರ ಪ್ರಾತಿನಿಧಿಕ ಪ್ರತಿಕ್ರಿಯೆಯಾಗಿಯೇ ಚಿತ್ರಣಗೊಂಡಿದೆ. ಭೈರಪ್ಪನವರ ಕಥಾನಿರೂಪಣೆ ಇದೇ ಕಾರಣಕ್ಕೆ ಸಾರ್ವಕಾಲಿಕ ಕೃತಿಯಾಗಿ ನಿಲ್ಲುವ ಶಕ್ತಿ ಪಡೆದಿರುತ್ತದೆ. ಆದರ್ಶಗಳ ಚೌಕಟ್ಟಿನಲ್ಲಿ ಇಬ್ಬರೂ ಅಥವಾ ಇಬ್ಬರಲ್ಲಿ ಒಬ್ಬರು ಪ್ರಬುದ್ಧ ನಡವಳಿಕೆ ತೋರಬಹುದಿತ್ತು. ಇದು ಅಪರೂಪ.  ಆದರೆ ಇತಿಹಾಸ ಗಮನಿಸಿದಾಗ  ಸಾಂದರ್ಭಿಕ ಅನಿವಾರ್ಯತೆಯನ್ನು ಲೆಕ್ಕಿಸದೆ ಪ್ರತಿಭಟನೆ, ಜಗಳ ದೂಷಣೆ, ಆರೋಪ ಪ್ರತ್ಯಾರೋಪ ಇತ್ಯಾದಿಗಳೇ ಹೆಚ್ಚು ನಡೆಯುವ ಕಾರಣ ವಾಸ್ತವಿಕ ನೆಲೆಗಟ್ಟಿನ ಚಿತ್ರಣ. ಮನೋವ್ಯಾಧಿಗೆ ತುತ್ತಾಗುವುದು ಇದರ ಇನ್ನೊಂದು ಲಕ್ಷಣ. ಅವನೊಬ್ಬ ಸಾಮಾನ್ಯ ವ್ಯಕ್ತಿಯಾಗಿ ತನ್ನ ಸಾಮರ್ಥ್ಯದ ಚೌಕಟ್ಟಿನಲ್ಲಿ ಆದಷ್ಟು ಪ್ರಾಮಾಣಿಕವಾಗಿ ಇರಬಯಸುವ ವ್ಯಕ್ತಿ. ವ್ಯಕ್ತಿಕೇಂದ್ರಿತ ಆಸೆ ಆಕಾಂಕ್ಷೆಗಳು ಹಾಗೂ ಕುಟುಂಬ ಅಥವಾ ಸಮುದಾಯ ಕೇಂದ್ರಿತ ನಿರೀಕ್ಷೆಗಳ ತಾಕಲಾಟದಲ್ಲಿ ಯಾದವನ ಮನಸ್ಸು ಎರಡನೆಯ ಕಡೆಗೆ ವಾಲಿದುದು ಅನಿರೀಕ್ಷಿತವೇನಲ್ಲ. ಅದು ಸಂಸ್ಕಾರ ಸಂಸ್ಕೃತಿಗಳು ರೂಪಿಸುವ ಒಂದು ವ್ಯಕ್ತಿತ್ವ.ವೈಯಕ್ತಿಕ ಆಕಾಂಕ್ಷೆ, ಉತ್ತರಾಳ ಆಗ್ರಹ ಹಾಗೂ ತನ್ನ ಕುಟುಂಬ ಇಟ್ಟಿರುವ ನಿರೀಕ್ಷೆ ಇವು ಮೂರರ ತಾಕಲಾಟದಲ್ಲಿ ,ಹಗ್ಗ ಜಗ್ಗಾಟದಲ್ಲಿ ಸಮನ್ವಯ ಸಾಧಿಸುವ ಸಾಧ್ಯತೆ ಇಲ್ಲದೇ ಹೋದಾಗ  ಅಸಹಾಯಕವಾದ, ಬಲಹೀನವಾದ ಹಾಗೂ ವ್ಯತಿರಿಕ್ತ ಪರಿಣಾಮಗಳಿಗೆ ಹಲವು ಜೀವಗಳು ತುತ್ತಾಗುವ ಸಾಧ್ಯತೆ ಮನಗಂಡು ತನ್ನ ಹಾಗೂ ಉತ್ತರಾಳ ಸಂಬಂಧವನ್ನು ತೊರೆಯುವ ಕಷ್ಟ ಸಾಧ್ಯ ಆದರೆ   ಕಾರ್ಯಸಾಧುವಾದ  ನಿರ್ಧಾರ ತೆಗೆದುಕೊಳ್ಳುತ್ತಾನೆ.ವ್ಯಕ್ತಿಗತ ಹಿತಾಸಕ್ತಿಗಾಗಿ ಇನ್ನೊಬ್ಬರ ಹಿತವನ್ನು ಮೆಟ್ಟಲು ಸಧೃಢ ಮನಸ್ಸು ಬೇಕಾಗಿಲ್ಲ.ಹೀಗಾಗಿ ಅವನು ದುರ್ಬಲ ಮನಸ್ಸಿನ ವ್ಯಕ್ತಿಯೆಂದು ನನಗನ್ನಿಸುವುದಿಲ್ಲ.

ಸುದರ್ಶನ

ಮೂರನೆಯ ಪಾತ್ರವಾಗಿ ಮೂಡಿಬರುವ ಸುದರ್ಶನನ ವ್ಯಕ್ತಿತ್ವ ಸ್ವಲ್ಪ ವಿಭಿನ್ನ ಸ್ವರೋಪದ್ದು. ಇವನು ಅಸಾಧಾರಣ ಬುದ್ಧಿವಂತ ಹಾಗೂ ಒಂದು ಚೌಕಟ್ಟಿಗೆ ಒಳಪಟ್ಟ ವ್ಯಕ್ತಿತ್ವದವನಲ್ಲ. ಇವನ ಬಾಲ್ಯ ಯೌವ್ವನಗಳನ್ನು ಹೆಚ್ಚು ಕಟ್ಟಿ ಕೊಟ್ಟಿಲ್ಲವಾದ್ದರಿಂದ ತಂದೆ ತಾಯಿಯರ ಪರಿಪೂರ್ಣ ಆರೈಕೆ ಇವನಿಗೆ ಸಿಕ್ಕಿಲ್ಲ ಹಾಗೂ ಅಕ್ಕನ ಆರೈಕೆಯಲ್ಲಿ ಬೆಳೆದವನೆಂದು ಊಹಿಸಿಕೊಳ್ಳಬಹೌದು. ಇಂತಹ ಸನ್ನಿವೇಶಗಳಲ್ಲಿ ಆಗುವ ಬಹುತೇಕ ಮನಬೆಳವಣಿಗೆಗಳಂತೆ ಇವನಿಗೆ ಸಾಮಾಜಿಕ ಬಂಧನ ವಾತ್ಸಲ್ಯಗಳ ಸೆಳೆತ ಅಷ್ಟಕ್ಕಷ್ಟೆ. ಹಾಗೆಂದು ಮೌಲ್ಯಗಳೇ ಇಲ್ಲವೆನ್ನುವಂತಿಲ್ಲ. ಹೊರದೇಶಗಳಲ್ಲಿ ಇದ್ದ ಕಾರಣಕ್ಕೂ,ಯಾನಕ್ಕೆ ಮುಂಚೆಯೇ ದೇಹ ಸಂಪರ್ಕದ ಅನುಭವ ಇದ್ದುದಕ್ಕೂ, ಮದುವೆಯಾಗದೆ ಉಳಿದವನಾದುದಕ್ಕೂ ಹೆಚ್ಚಿನ ತಾಕಲಾಟಗಳು ಇವನಲ್ಲಿ ಕಂಡುಬರುವುದಿಲ್ಲ.ಯಾನದಲ್ಲಿ ಉತ್ತರೆಯ ನಡವಳಿಕೆಗಳು ಇವನಲ್ಲ್ಲಿ ಎಬ್ಬಿಸಿದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಅಂತರ್ಮುಖಿಯಾಗುವ ಮೂಲಕ ಅವನ ಪಾತ್ರ ಹಾಗೂ ವ್ಯಕ್ತಿತ್ವ ಬೆಳೆಯುತ್ತಾ ಹೋಗುತ್ತದೆ. ಧ್ಯಾನಸ್ಥಿತಿಯಲ್ಲಿ ಇಳಿಯುತ್ತಾ ವಿಶ್ವರಹಸ್ಯದ ಉತ್ತರಗಳನ್ನು ತತ್ವಮೀಮಾಂಸೆಯಲ್ಲಿ ಹುಡುಕುತ್ತಾ ಹೋಗುವ ಅವನ ವೈಚಾರಿಕ ಲಹರಿ ಕಾದಂಬರಿಯ ಮೂಲ ತಿರುಳು ಎಂದೆನ್ನಬಹುದು.ಈ ಮೂಲ ತಿರುಳಿನ ಸುತ್ತಲೇ ಇರುವ ಸಿಪ್ಪೆ, ಬೀಜಗಳಂತೆ ಉಳಿದ ಪಾತ್ರಗಳು ನನಗೆ ಭಾಸವಾಗುತ್ತವೆ.

ಬೆಳಕು- ಕತ್ತಲು,ಸೂರ್ಯ ,ಗುರುತ್ವ, ಕೃಷ್ಣ ಗುಹ್ವರ ಇತ್ಯಾದಿಗಳ ತಾತ್ವಿಕ ಸಂವಾದ ಇಲ್ಲಿನ ಹೈಲೈಟ್ . ಸಮಕಾಲೀನ ಜಗತ್ತಿನ ಎಡ-ಬಲ ರಂಗಗಳ ಸೈಧ್ಧಾಂತಿಕ ಭಿನ್ನಾಭಿಪ್ರಾಯಗಳು , ಜಾಹಿರಾತು ಮಾರುಕಟ್ಟೆ ಹಣ ಪ್ರಚಾರಗಳ  ಜೇಡರ ಬಲೆ,ಹಿಮಾಲಯದ ತಪ್ಪಲು ,ಅಲ್ಲಿ ನಡೆಯುತ್ತಿರುವ ವಿಧ್ವಂಸಕ ಬೆಳವಣಿಗೆಗಳು , ಜನರ ಮನೋಭಾವ ಮೌಲ್ಯಗಳಲ್ಲಾಗುತ್ತಿರುವ ಅಧಃ ಪತನಗಳು ಎಲ್ಲವನ್ನು ವಿವರಿಸುವಲ್ಲಿ ಕಥೆ ನಡೆಯುವ ಕಾಲಮಾನದ ಚಾರಿತ್ರಿಕ ಚೌಕಟ್ಟನ್ನು ಕಟ್ಟಿಕೊಡುತ್ತವೆ,. ಹಾಗಾಗಿ ಈ ಕಾದಂಬರಿಯನ್ನು ಇನ್ನೂ ಐವತ್ತು ವರ್ಷ ಕಳೆದು ಓದಿದರೂ ಅದರ ಪ್ರಸ್ತುತಿ ಸ್ವೀಕರಣೀಯವೆಂದು ನನ್ನ ಭಾವನೆ. ಅಕ್ಕನ ನಿರಪೇಕ್ಷ ಅಂತಃ ಕರಣ, ಭಾವನ,ಅವರ ಮಕ್ಕಳ  ಪ್ರೀತಿ, ಧ್ಯೇಯಸಾಧನೆಗೆ ಮುಖಮಾಡಿದವನಿಗೆ ಅಸ್ತಿ ಪಾಸ್ತಿಯ ಮೇಲಿನ ನಿರಾಸಕ್ತಿಯಂಥ ಸಾರ್ವಕಾಲಿಕ  ಸತ್ಯಗಳು ಕೂಡಾ ಕಥೆಯಲ್ಲಿ ಬಂದು ಹೋಗುತ್ತವೆ. ಭೂಮಿಯಲ್ಲಿ ಲೋಭ ಮೋಹಗಳನ್ನು ಗೆಲ್ಲಬಲ್ಲ ಮನೋಭೂಮಿಕೆ ರೂಪುಗೊಂಡು ಉತ್ತರೆಯೋಂದಿಗೆ ಸೋಲ್ಯಾರಿಸ್ ನಲ್ಲಿ  ಕಾಮವನ್ನು ಗೆಲ್ಲಬಲ್ಲ ,ಕ್ರೋಧವನ್ನು  ಮಣಿಸಬಲ್ಲ ಮನೋಸ್ಥಿತಿ ಮೂಡುವುದರ ಮುನ್ನುಡಿ ಸುಪ್ತವಾಗಿ ವ್ಯಕ್ತಪ ಡಿಸುತ್ತಾರೆ ಭೈರಪ್ಪನವರು. ಏಕಾಂತದಲ್ಲಿ ಕಾಮವನ್ನು ಗೆಲ್ಲುವುದು ಕಷ್ಟಕರ. ಇಲ್ಲಿ ಅವನು ಉತ್ತರೆಯೊಡನೆ ಹೊಂದಾಣಿಕೆ ಮಾಡಿಕೊಂಡು ಉಳಿದ ಸಾಧನೆಗಳ ಶಿಖರ ಏರಬಹುದಿತ್ತೇ ಇಲ್ಲವೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಹಾಗಿದ್ದರೆ ಕಥೆಯ ಓಟಕ್ಕೆ ಚ್ಯುತಿ ಬರುತ್ತಿತ್ತೇ ಇಲ್ಲವೇ ಎಂದು ಹೇಳುವುದು ಕಷ್ಟ.  ಅವರಿಬ್ಬರಲ್ಲಿ ಮೂಡುವ ಬಿರುಕು ಹಾಗೂ ಸಮರಸವಿಲ್ಲದ ಜೀವನ ಓದುಗನಲ್ಲಿ ಒಂದುಬಗೆಯ ಹತಾಶೆ ಮೂಡಿಸುವುದಂತೂ ನಿಜ.ಯಾನದ ನೌಕೆಯ ಒಳಗೂ, ಹೊರಗೂ ಇರುವ ನಿರ್ವಾತವನ್ನು, ಏಕತಾನತೆಯನ್ನು ಇದು ಪ್ರತಿನಿಧಿಸುತ್ತದೆಯೇನೋ ನನಗೆ ತಿಳಿಯದು. ಎರಡು ವಿಭಿನ್ನ ನೌಕೆಗಳಲ್ಲಿ ಎರಡು ವಿಭಿನ್ನ ಪರಸ್ಪರ ಸಂಬಂಧವಿರುವ ಜೋಡಿಗಳ ಕಥಾ ಹಂದರ ಇದ್ದಲ್ಲಿ ಕಥೆಯ ವ್ಯಾಪ್ತಿ ಸಮಗ್ರವಾಗುತ್ತಿತ್ತೇನೋ.

ಉಳಿದ ಮುಖ್ಯಪಾತ್ರಗಳಾದ ಆಕಾಶ್ ಹಾಗೂ ಮೇದಿನಿ ಅವರ ಚಿತ್ರಣ ಕಥಾ ಕ್ರಿಯೆಯ ಮೂಲ ಪರಿಕರಗಳಾಗದೆ ಕೇವಲ ವೇಗವರ್ಧಕಗಳಂತೆ ಮೂಡಿಬರುತ್ತವೆ.

ಕಥಾನಿರೂಪಣೆ:

ವೈಜ್ಞಾನಿಕ ಹಂದರದ ಮೇಲೆ ಕಟ್ಟಿಕೊಟ್ಟ ವೈಚಾರಿಕ ಕಥೆಯಾದ್ದರಿಂದ ಇಲ್ಲಿ ಯಾವ ರೋಚಕ ಸನ್ನಿವೇಶಗಳು ಮೂಡುವುದಿಲ್ಲ. ಬಾಲಿವುಡ್ ಅಥವಾ ಹಾಲಿವುಡ್ ನ ಸಾಹಸ ಇಲ್ಲಿಲ್ಲ ಅಲ್ಲಲ್ಲಿ ಸ್ವಲ್ಪ ನಿಧಾನವಾಗಿ ಹೋಗುತ್ತಿದೆ ಎಂದೆ ನ್ನಿಸಿದರೂ, ಓದಿಸಿಕೊಂಡು ಹೋಗುವುದರಲ್ಲಿ ಕಾದಂಬರಿ ಸೋಲುವುದೆಂದು ನನಗನ್ನಿಸಲಿಲ್ಲ.ಭೈರಪ್ಪನವರ ಕಥೆಗಳಲ್ಲಿ ಬರುವ ಕಾಮ ಇಲ್ಲಿಯೂ ಸಾಕಷ್ಟು ಇದೆ. ಅಲ್ಲಲ್ಲಿ ವೈಜ್ಞಾನಿಕ ವಿವರಣೆಗಲಿದ್ದರೂ, ಓದುಗನ ಗಮನ ಆ ಕಡೆಗೆ ಅಷ್ಟು ಹರಿಯದು- ಕಾರಣ ಇದು ಮೂಲಭೂತವಾಗಿ ವೈಚಾರಿಕ ಕಾದಂಬರಿ.  ಹಾಗಾಗಿ ಇದನ್ನು ವೈಜ್ಞಾನಿಕ ಕಾದಂಬರಿ ಎಂದೆನ್ನಲಾಗದು.

ಕಥಾವಸ್ತು:

ಕಾದಂಬರಿ ಬರೆಯುವುದು ಮತ್ತು ಓದುವುದು ಏಕೆ ಎಂದು ಕೇಳಿಕೊಂಡರೆ ಹಲವರಿಂದ ಹಲವು ಉತ್ತರಗಳನ್ನು ನಿರೀಕ್ಷಿಸಬಹುದು. ಮಕ್ಕಳಿಗೆ ಕಥೆಗಳನ್ನು ಹೇಳುವುದರ ಮೂಲ ಧ್ಯೇಯ ಅವು ಪುರಾಣ, ಇತಿಹಾಸ, ದೃಷ್ಟಾಂತಗಳ ಮೂಲಕ ಪ್ರಪಂಚದ ಗುಣ ಸ್ವರೂಪಗಳನ್ನು , ಒಳ್ಳೆಯದು-ಕೆಟ್ಟದ್ದು  ಸ್ವೀಕೃತ -ಅಸ್ವಿಕೃಉತ ನಡವಳಿಕೆಗಳ ನಡುವಿನ ವ್ಯತ್ಯಾಸ ಗ್ರಹಿಸಿ ವ್ಯಕ್ತಿತ್ವವನ್ನು ರೂಪುಗೊಳಿಸಲಿಕ್ಕೆ ಹಾಗೂ ಮನರಂಜನೆಗೆ ಎಂದು ವ್ಯಾಖ್ಯಾನಿಸಬಹುದು.

ಆದರೆ ಪ್ರೌಢರು ಈ ಕಾದಂಬರಿಗಳಿಂದ  ಏನನ್ನು ತೆಗೆದುಕೊಳ್ಳಬೇಕು? ಕನಸುಗಳನ್ನೇ ,ಆದರ್ಶಗಳನ್ನೇ,ಕಟುವಾಸ್ತವಗಳನ್ನೇ, ಅಥವಾ ಕ್ರಾಂತಿಕಾರಿ ಮನೋಭಾವಎಗಳನ್ನೇ, ವೈಚಾರಿಕತೆಯನ್ನೇ ಹೇಳುವುದು ಕಷ್ಟ. ಮೇಲಿನ ಎಲ್ಲ ನಿರೀಕ್ಷೆಗಳನ್ನು,  ವಾಸ್ತವಿಕ, ಪ್ರಾಯೋಗಿಕ ಅಥವಾ ಕಾಲ್ಪನಿಕ ಆಯಾಮಗಳ ನಡುವೆ  ಯಾವುದರಲ್ಲಿ ಭಾವಿಸಿಕೊಳ್ಳಬೇಕು ಎಂದಾಗ ಪ್ರಶ್ನೆ ಇನ್ನೂ ಜಟಿಲವಾಗುತ್ತದೆ. ಯಾರಿಗೆ ಯಾವುದು ಬೇಕು ಎನ್ನುವುದು ಅವರವರ ಭಾವ ಭಕುತಿ ಸಂಸ್ಕೃತಿ ಸಂಸ್ಕಾರಗಳನ್ನು , ಮನೋಧರ್ಮ ಮನೋವಾಂಛೆಗಳನ್ನು ಅವಲಂಬಿಸಿರುತ್ತದೆ.

ನನ್ನ ಮಟ್ಟಿಗೆ ಹೇಳುವುದಾದರೆ ಒಂದು ಸಾಹಿತ್ಯ ಕೃತಿ ವೈಚಾರಿಕತೆಯನ್ನು ಪ್ರಚೋದಿಸಬೇಕು. ಪರಂಪರೆ ತಳಹದಿಯ ಮೇಲೆ ನಮ್ಮ ಮನಸ್ಸಿನ ಗಡಿಯನ್ನು ವಿಸ್ತರಿಸುವಂತಿರಬೇಕು. ಹಳೆ ಬೇರಿನ ಮರಕ್ಕೆ ಹೊಸಚಿಗುರನ್ನು ಟಿಸಿಲೊಡೆಸಬೇಕು- ಬರೀ ಎಲೆಗಳನ್ನಲ್ಲ- ರೆಂಬೆ ಕೊಂಬೆಗಳ ಸಮೇತವಾಗಿ.  ನಮ್ಮ ನಡುವಿನ ತಾಕಲಾಟಗಳಿಗೆ ನಮ್ಮ ಮನೋಧರ್ಮ ,ಮಾನವನ ಮೂಲಗುಣಗಳು ಕಾರಣವೇ ಹೊರತು ಅವುಗಳನ್ನು ಮೀರಿನಿಂತ  ಧರ್ಮ ಅಲ್ಲ ಎಂಬ ಸತ್ಯವನ್ನು ಸಾರುವಂತಿರಬೇಕು. ಈ ಕಡೆಯ ಅಂಶ ಕೆಲವರಿಗೆ ಒಪ್ಪಿಗೆಯಾಗದೇ ಇರಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಾವು ಒಂದು ಸಮುದಾಯವಾಗಿ ಸಧೃಉಢವಾಗಿ ಮುನ್ನಡೆಯಬೇಕಾದರೆ ನಮ್ಮ ಮೂಲ ಹಾಗೂ ದೇಶೀ ಪರಂಪರೆಯ ಬಗೆಗೆ ವೈಜ್ಞಾನಿಕ ಅರಿವು, ಚಿಕಿತ್ಸಕ ಹೆಮ್ಮೆ ಇರುವುದು ಬಹಳ ಮುಖ್ಯ. ನಮ್ಮ ಸಂಸ್ಕೃತಿಯ ಅರಿವು ನಮಗೆ ಗಹನವಾಗಿ ಇದ್ದಲ್ಲಿ ಮಾತ್ರ ವಿಧ್ವಂಸಕ ಶಕ್ತಿಗಳು ಕೀಳಾಗಿ ಕಾಣುವುದಾಗಲೀ, ಕೀಳರಿಮೆ ಮೂಡಿಸುವುದಾಗಲೀ ಮಾಡಲಾರವು. ಒಡೆಯಲಾರವು.

ಇದೇ ಕಾರಣಕ್ಕೆ ಭೈರಪ್ಪನವರ ಯಾನ ನನಗೆ ಪ್ರಸ್ತುತವಾಗಿಯೂ, ಆಪ್ತವಾಗಿಯೂ ಕಾಣುತ್ತದೆ.. ದೇಶೀ ಭಾವನೆಗಳು ಹಾಗೂ ಚಿಂತನೆಗಳನ್ನು ಒರೆಗಿಟ್ಟು  ಹೊಸ ಯುಗದ  ವೈಜ್ಞಾನಿಕತೆಗೆ ಪೂರಕವಾಗಿ ತಾತ್ವಿಕ ಅಂಶಗಳ ಸಮನ್ವಯ ಸಾಧಿಸುತ್ತಾ ಹೋಗುತ್ತಾರೆ. ಪಾತ್ರಗಳನ್ನೂ ಯಾವ ಆದರ್ಶಗಳ ಚೌಕಟ್ಟಿಗೂ ಬಂಧಿಸದೆ ಅವರವರ ನಿರ್ಧಾರಗಳಿಗೆ ಪಕ್ಕಾಗಿಸುತ್ತಾರೆ ಹಾಗೂ ಆ  ನಿರ್ಧಾರಗಳಿಗಳ  ಪರಿಣಾಮಗಳನ್ನು ತೋರಿಸಿ ಅವಕ್ಕೆ ಹೊಣೆಯಾಗಿಸುತ್ತಾರೆ.

ಪರ್ವ, ಸಾರ್ಥ, ನೆಲೆ ಕಾದಂಬರಿಗಳಷ್ಟು ತೀವ್ರವಾಗಿಲ್ಲದಿದ್ದರೂ ಯಾನ ನಮ್ಮ ಮನೋ ವಿಮಾನವನ್ನು ಅರಿವಿನ ಪರಿಧಿಯ ಹೊರಗೆ ಉಡಾಯಿಸುವುದರಲ್ಲಿ ಯಶಸ್ವಿಯಾಗಿದೆ ಎಂದೆನ್ನಲು ಅಡ್ಡಿಯಿಲ್ಲ.

ಸುದರ್ಶನ ಗುರುರಾಜರಾವ್.

Daffodils ಕವಿತೆಯನ್ನು ಕನ್ನಡಕ್ಕೆ ಭಾವಾನುವಾದ ಮಾಡಿದ್ದೇನೆ. ಕನ್ನಡ ಭಾಷೆಯ ಸೌಂದರ್ಯ ಮತ್ತು ಅಭಿವ್ಯಕ್ತಿಗಳ ಶಕ್ತಿ ಕೂಡಾ ಅನುಪಮವಾದದ್ದೇ.

Daffodils

ಗಿರಿಶಿಖರ ಕಂದರಗಳಾ ಮೇಲೆ ನಾನೊಮ್ಮೆ

ಒಂಟಿ ಮೋಡದ ತೆರದಿ ಅಲೆಯುತಿರುವಲ್ಲಿ

ಸ್ವರ್ಣ ವರ್ಣದ ಹೂವ ಕಂಬಳಿಯ ಹಾಸನ್ನು

ಕಂಡು ಅಚ್ಚರಿಗೊಂಡು ನಿಂದೆ ನಾನಲ್ಲಿ

 

ಕೊಳದ ಬದಿಯಲಿ ನಿಂತ ಸಾಲುಮರಗಳ ಕೆಳಗೆ

ನಲಿವ ಹೂಗಳು ಕರೆಯೆ ಕೈಬೀಸಿ ಬಳಿಗೆ

ಕ್ಷಣವೊಮ್ಮೆ ನಾನಿಂತು ಹರಿಸಿದೆನು ಚಿತ್ತ

ನೋಡುತಲಿ ಕಣಿವೆಯಾ ಸುತ್ತ ಮುತ್ತ.

 

ಆಕಾಶಗಂಗೆಯಲಿ ರಾತ್ರಿಯಾಗಸದಲ್ಲಿ

ಎಣೆಯಿರದೆ ಮಿನುಗುವಾತಾರೆಗಳ ತೆರದಿ

ಕೊಳದ ದಂಡೆಯ ಉದ್ದ ಅಗಲಕ್ಕೂ ಮೈಚಾಚಿ

ಕಣ್ಣ ತುಂಬಿವೆ ಇಲ್ಲಿ ಕಾಣಿಸದೆ, ಪರಿಧಿ!

 

ಹತ್ತಲ್ಲ ನೂರಲ್ಲ ಹತ್ತು ಸಾವಿರವಲ್ಲ

ಲಕ್ಷಕ್ಕೂ ಮಿಗಿಲಾಗಿ ನಗುತಿರುವುವಲ್ಲಿ

ಬಳುಬಳುಕಿ ನಸುನಗುತ ತಲೆದೂಗಿ ಆಡಿಹವು

ತಂಗಾಳಿ ಮೃದುವಾಗಿ ಬೀಸುತಿರುವಲ್ಲಿ

 

ಕೊಳದೊಳಗೆ ಜಲದಲೆಯು ಎದ್ದು ಕುಣಿದಿರಲೇನು

ನಮ್ಮ ನಾಟ್ಯದ ಸಮಕೆ ಅವುಗಳಿಲ್ಲೆಂದು

ಹೆಮ್ಮೆ -ಬಿಮ್ಮುಗಳಿಂದ ಹರುಷದೊನ್ನಲಿವಿಂದ

ಸುಮರಾಜಿ ನರ್ತಿಸಿವೆ ನೋಡು ನೀಬಂದು

 

ಪುಷ್ಪಹಾಸಿನ ಚೆಲುವು ನನ್ನ ಮನ ತುಂಬಿರಲು

ನನ್ನ ಮೇಲೆಯೇ ನಾನು ಮೋಹಗೊಂಡು

ಕಣ್ಣು ಮನ ತುಂಬಿರುವ ಈ ಸಿರಿಯ ಭಾಗ್ಯವನು

ನಂಬಲಾರದೆ ನಂಬಿ ನಿಂದೆನಿಂದು

 

ಮನೆಗೆ ಮರಳುತ ಒಂಟಿ ಭಾವದಲಿ ಪವಡಿಸಿದೆ

ನಾ ಎನ್ನ ತಲ್ಪದಾ ಮೇಲೆ ತಲೆಯಿಟ್ಟು

ಏಕಾಂತ ನೀಡಿದಾ ಸುಖದ ಸ್ಪರ್ಶಕೆ ಚೆಲುವ

ಹೂವುಗಳ ಸಾಂಗತ್ಯ ಮನದೊಳಿಟ್ಟು

 

ಹೃನ್ಮನ ತುಂಬಿದಾ ಹೂವೆ ನಿನ್ನ ಹೆಸರೇನೆ?

‘ಡಾಫುಡಿಲ್ಸ್’ ಎಂಬ ನೆಲ ನೈದಿಲೆಯು ತಾನೆ!!

ಸಹಿಷ್ಣುತೆ-ಅಸಹಿಷ್ಣುತೆ

ಸಹಿಷ್ಣುತೆ-ಅಸಹಿಷ್ಣುತೆ

ಅದೊಂದು ಅನಿವಾಸಿ ಭಾರತೀಯರ ಚಿಕ್ಕದೊಂದು ಸಂಘ. ಹತ್ತಾರು ವರ್ಷಗಳಿಂದ, ಎಲ್ಲ ಸಂಘಗಳು ಕಾಣುವ ಏಳು ಬೀಳುಗಳನ್ನು, ಒಳಿತು ಕೆಡಿಕುಗಳನ್ನು, ಸಂಘಟನೆ-ವಿಘಟನೆಗಳನ್ನು ಕಾಲ ಕಾಲಕ್ಕೆ ಅನುಭವಿಸಿಯೂ ಕ್ರಿಯಾತ್ಮಕವಾಗಿದ್ದ ಒಂದು ಚಿಕ್ಕ ಊ ರಿನ ಚಿಕ್ಕ ಸಮ್ಘಟನೆ.ನೆಲ ಜಾಲಗಳನ್ನು ಬಿಟ್ಟು ಬಂದಿಳಿದ ಭಾರತೀಯರನ್ನು ಒಂದು ಚಾವಣಿಯಡಿ ತಂದು, ವರುಷ ಕ್ಕಿಷ್ಟು  ಕಾರ್ಯಕ್ರಮಗಳನ್ನು ಆಯೋಜಿಸಿ ತನ್ನ ಕೈಲಾದಷ್ಟು ಚಾರಿಟಿಗಳನ್ನು ಮಾಡುತ್ತಿದ್ದ ಒಂದು ಸಂಸ್ಥೆ. ದೀಪಾವಳಿ, ಹೋಳಿ ಹಬ್ಬ, ,ಆಹಾರ ಮೇಳ, ಹೊಸವರ್ಷಾಚರಣೆ ಗಳು ಅದರ ಪ್ರಮುಖ ಕಾರ್ಯಕ್ರಮಗಳಾಗಿದ್ದವು.

ಭಾರತೀಯರೆಂದಮೇಲೆ ವೈವಿಧ್ಯತೆ ಸ್ವಾಭಾವಿಕವಷ್ಟೇ. ಹಲವು ಭಾಷೆ, ವೇಷ, ಆಚಾರ ವಿಚಾರ, ಧರ್ಮ ಪಂಗಡಗಳ ಗೂಡು ಎಂಬುದನ್ನು ಹೇಳಬೇಕಿಲ್ಲ. ಬಹುತೇಕರು ಹಿಂದೂ ಧರಮದವರಾಗಿದ್ದು ಮೊದಲಿಗೆ ಎರಡು ಮುಸ್ಲಿಂ ಹಾಗೂ ಎರೆಡು ಕ್ರಿಸ್ಚಿಯನ್ ಪಂಗಡಗಳು ಇದರಲ್ಲಿದ್ದವು. ಕ್ರಿಶ್ಚಿಯನ್ ಪಂಗಡಗಳವರು ಕ್ಯಠೋಲಿಕ್   ಅನುಯಾಯಿಗಳಗಿದ್ದು ಹೊಸವರ್ಷಾಚರಣೆ ಹೊರತು ಪಡಿಸಿ ಉಳಿದ ಹಬ್ಬಾಚರಣೆಯಲ್ಲಿ ಪಾಲ್ಗೊಂಡಿದ್ದು ನಾನು ನೋಡಿರಲಿಲ್ಲ. ಮುಸ್ಲಿಂ ಕುಟುಂಬಗಳಲ್ಲಿ ಒಂದು, ಅವರೇ ಹೇಳಿಕೊಂಡಂತೆ ‘ಅಹ್ಮದೀಯ’ ಎಂಬ ಶಾಖೆಗೆ ಸೇರಿದ ಜನ. ಇನ್ನೊಂದು, ನನಗೆ ತಿಳಿಯದು, ನಾನೂ ಕೇಳಿಲ್ಲ, ಅವರೂ ಹೇಳಿಲ್ಲ.

ಯಾವ  ಭೇದಭಾವವೂ ಇಲ್ಲದೆ ಎಲ್ಲರೂ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆವು. ಬಾಲಿವುಡ್ ಹಾಡುಗಳು, ಕಿರು ಪೌರಾಣಿಕ ಪ್ರಸಂಗಗಳು, ಶಾಸ್ತ್ರೀಯ ಸಂಗೀತ ಹಾಗೂ ನೃತ್ಯರೂಪಕಗಳು  ಕಾರ್ಯಕ್ರಮದ ಭಾಗಗಳಾಗಿದ್ದವು. ನಮ್ಮ ಭರತನಾಟ್ಯದ ಶಿಕ್ಷಕಿಗೆ ಅವಕಾಶ ಸಿಕ್ಕಾಗ, ಕೆಲವು ಸೂಫಿ ಸಂತರ ಹಾಡುಗಳಿಗೂ ಮಕ್ಕಳಿಂದ ಹೆಜ್ಜೆ ಹಾಕಿಸುತ್ತಿದ್ದಳು. ಸದಸ್ಯರ ಕುಟುಂಬಗಳು ಉತ್ಸಾಹದಿಂದಲೇ ಭಾಗವಹಿಸುತ್ತಿದ್ದವು.

ಬದಲಾವಣೆ ಯುಗದ ಧರ್ಮ.,ಕಾಲಕ್ರಮದಲ್ಲಿ ಮಂಗಳೂರು, ಹೈದರಾಬಾದು, ಉತ್ತರ ಪ್ರದೇಶ ಹಾಗೂ ಬಿಹಾರಗಳ ಮುಸ್ಲಿಮ್ ಕುಟುಂಬಗಳು ಊರಿಗೆ ಸೇರ್ಪಡೆಯಾದವು,. ನಾವು ಸಹ ಸಂಘದ ಸದಸ್ಯತ್ವಕ್ಕೆ ಅವರನ್ನು ಆಹ್ವಾನಿಸಿ ಸೆರಿಸಿಕೊಂಡೆವು.. ಮೊದಲವರ್ಷ ಏನೂ ತೊಂದರೆ ಯಿರಲಿಲ್ಲ. ಎರಡನೇ ವರ್ಷದ ದೀಪಾವಳಿ ಸಮಯಕ್ಕೆ ಈದ್ ಹಬ್ಬವೂ ಬರುವ ಕಾರಣ ದೀಪಾವಳಿ-ಈದ್ ಎಂಬ ಯುಗಳ ಹಬ್ಬವಾಗಿ ಕಾರ್ಯಕ್ರಮ ನಡೆಸಬೇಕೆಂಬ ಕೋರಿಕೆ ಬಂತು. ಸಮಿತಿ ಸರ್ವಾನುಮತದಿಂದ ಅಂಗಿಕರಿಸಿ, ಅದಕ್ಕೆಂದೇ ಹೊಸ ಭಿತ್ತಿ ಪಟವನ್ನು ಬರೆಸಲಾಯಿತು. ಏಕತೆ- ಸಮಗ್ರತೆಯ ನಡೆಯೆಂದು ಎಲ್ಲರೂ ಸಂತೋಷಿಸಿದರು!

ಆದರನಂತರ ಹೋಳಿ ಹಬ್ಬಅತಿ ಧಾರ್ಮಿಕ ಆಚರಣೆಯೆಂದೂ, ಸಮುದಾಯದ ಎಲ್ಲರ ಆಶಯಕ್ಕೆ ಅನುಗುಣವಾಗಿಲ್ಲವೆಂದೂ, ಅದನ್ನು ಸೆಕ್ಯುಲರ್ ಅದ ಅಚರಣೇಯಾಗಿ ಬದಲಾಯಿಸಬೇಕೆಂಬ ಕೋರಿಕೆ ಬಂತು. ಹೋಳಿ ಹಬ್ಬ ಎಂಬುದನ್ನು ವಸಂತೋತ್ಸವ ಎಂಬ ಹೆಸರಿನಿಂದ ಕರೆಯಲಾಯಿತು. ಬಣ್ಣದ ಬದಲಿಗೆ ಹೂವಿನ ಪಕಳೆಗಳನ್ನು ಚಿಮ್ಮಲಾಯಿತು. ಕೆಲವರು ಗೊಣಗುಟ್ಟಿದರೂ ಬದಲಾವಣೆಯನ್ನು ಒಪ್ಪಿಕೊಂಡರು. ಆದರೆ ಬಣ್ಣದ ಎರಚಾಟವಿಲ್ಲದೆ ಮಕ್ಕಳು ನಿರಾಶರಾಗಿದ್ದು ಸುಳ್ಳಲ್ಲ.

ಮತ್ತೊಂದು ವರುಷ ಕಳೆದು ಆ ವರುಷದ ದೀಪಾವಳಿ ಕಾರ್ಯಕ್ರಮದ ಮುಸ್ಲಿಂ ಸಮುದಾಯದ ಮಕ್ಕಳು ವಿಷ್ಣುವಿನ ದಶಾವತಾರದ ನೃತ್ಯರೂಪಕವೊಂದರಲ್ಲಿ ಪಾಲ್ಗೊಳ್ಳಲಿಲ್ಲ.! ನಮ್ಮ ನೃತ್ಯ ಶಿಕ್ಷಕಿ ಅವರಿಗಾಗಿ ಮತ್ತೊಂದು ಹಾಡೊಂದಕ್ಕೆ ತರಬೇತಿ ಕೊಡಬೇಕಾಗಿ ಬಂತು. ಕೆಲಸದೊತ್ತಡದಲ್ಲಿ ಅವಳು ನಲುಗಿದ್ದಂತೂ ನಿಜ. ಆದರೆ ಮೊದಲು ಹೇಳಿದ ಅಹ್ಮದೀಯ ಕುಟುಂಬ ಇದಕ್ಕೆ ಹೊರತು. ಎಲ್ಲ ಕಾರ್ಯಕ್ರಮಗಳಲ್ಲಿ ಅವರು ಭಾಗಿಗಳಾಗಿದ್ದರು.

ನಂತರದ ವರ್ಷದಲ್ಲಿ ಹಬ್ಬಾಚರಣೆಗಳು ಎಲ್ಲರ ಧಾರ್ಮಿಕ  ನಂಬಿಕೆಗಳಿಗೆ ಅನುಗುಣವಾಗಿರದ ಕಾರಣ ದೀಪಾವಳಿ ಅಡಿಯಲ್ಲಿ ಲಕ್ಷ್ಮಿ ಪೂಜೆ ಕೂದದೆಂದೂ, ದೀಪವನ್ನು ಬೆಳಗಿ ಕಾರ್ಯಕ್ರಮ ಉದ್ಘಾಟಿಸುವುದು ‘’ಸೆಕ್ಯುಲರ್’’ ಅಲ್ಲವೆಂದು ಆಕ್ಷೇಪಣೆ ಬಂತು. ಸಮಿತಿಯ ಸಭೆಯಲ್ಲಿ ಕೆಲವರು ಸಮಾನತೆಯ ಮನೋಭಾವದ ಗುಂಗಿನಲ್ಲಿ ಅನುಮೋದಿಸಿದರು, ಕೆಲವರು ಸುಮ್ಮನಿದ್ದರು ಮತ್ತೆ ಕೆಲವರು ಮುಖ ಮುಖ ನೋಡಿಕೊಂಡರು- ತಮ್ಮ ಅಸಮ್ಮತಿಯನ್ನು ಹೊರಹಾಕಲು ಹಿಂಜರಿದರು. ನಾನು ಶಾಂತವಾಗಿ ಪ್ರತಿಭಟಿಸಿದೆ. ನಮ್ಮದು ಭಾರತೀಯ ಪರಂಪರೆಯನ್ನು ಬಿಂಬಿಸುವ ಸಂಘಟನೆಯಾಗಿದ್ದಲ್ಲಿ, ಭಾರತಿಯ ಸಂಸ್ಕೃತಿಯನ್ನು  ಅಭಿವ್ಯಕ್ತಗೊಳಿಸುವ ಆಚರಣೆಗಳನ್ನು ಅನುಸರಿಸಲು ಹಿಂದೆ ಮುಂದೆ ನೋಡಬೇಕಾದ ಪ್ರಮೆಯವಿಲ್ಲ. ಭಾರತವೆಂದರೆ ಬಾಲಿವುಡ್ ಅಲ್ಲ, ಅದನ್ನು ಮೀರಿದ ಒಂದು ವಿಶಿಷ್ಟ ವ್ಯವಸ್ಥೆ,. ಅದನ್ನು ಬಿಟ್ಟು ಕಾರ್ಯಕ್ರಮ ರೂಪಿಸುವುದಾದರೆ ಅದಕ್ಕಿಂತ ದೊಡ್ಡ ಅಭಾಸ ಅಸಂಬದ್ಧತೆ ಇರಲಾರದು. ಭಾರತಿಯ ಪರಮ್ಪರೆಯ ವೈಶಿಷ್ಟ್ಯವೆಂದರೆ ಮನುಷ್ಯನ ಜೀವನದೆಲ್ಲ ಕೋನಗಳಲ್ಲಿ ತಾತ್ತ್ವಿಕ  ಧಾರ್ಮಿಕ, ಲೌಕಿಕ,ಪಾರಮಾರ್ಥಿಕ ಸಮಗ್ರತೆಯ ಆಯಾಮಗಳು ಹಾಸುಹೊಕ್ಕಾಗಿವೆ. ಇದು ಕಲಾ ಪ್ರಾಕಾರಗಳಲ್ಲಿ ವ್ಯಕ್ತಗೊಂಡಿದೆ. ಅದು ಸಂಗೀತ, ಸಾಹಿತ್ಯ, ನೃತ್ಯ, ಶಿಲ್ಪ ,ಚಿತ್ರಕಲೆಗಳಿರಬಹುದು- ಅದು ಆಧ್ಯಾತ್ಮ ಪುರಾಣಗಳ ಜತೆಗೆ ಹ್ಹಾಸುಹೊಕ್ಕಾಗಿ ಹೊಸೆದುಕೊಂದಿರುವ ಒಂದು ಅಪರೂಪದ ಜೀವನ ದರ್ಶನ. ಅದರ ಹಿಂದಿನ ಆಶಯಗಳನ್ನು ಗುರಿತಿಸಿ ಗೌರವಿಸಬೇಕೇ ವಿನ್ಃ ಭೇದ ಎಣಿಸಬಾರ್ದೆಂದು ವಾದಿಸಿದೆ. ಈ ತತ್ವಗಳನ್ನು ಮುಂದಿನಪೀಳಿಗೆಗೆ ದಾಟಿಸುವ ಹೊಣೆ ನಮ್ಮ ಮೇಲಿದ್ದಲ್ಲಿ , ಈ ಸಂಘಟನೆಗೂ ಒಂದು ಅರ್ಥವಿದೆ, ಹಬ್ಬಾಚರಣೆಗೂ ಒಂದು ಅರ್ಥವಿದೆ. ಇಲ್ಲವಾದಲ್ಲಿ ದೀಪಾವಳಿ ಹೆಸರಿನಲ್ಲಿ ನವೆಂಬರ್ ತಿಂಗಳ ಈ ಕಾರ್ಯಕ್ರಮಕ್ಕೆ ಯಾವುದೇ ಅರ್ಥವಿಲ್ಲ , ನಾನು ಒಪ್ಪಲಾರೆ ಎಂದೆ.

ನನ್ನ ವಾದ ತೀವ್ರವಾದವೆಂದೂ, ಅದು ಸೆಕ್ಯುಲರ್ ಅಲ್ಲವೆಂದೂ, ನಮ್ಮ ನಂಬಿಕೆಯನ್ನು ಇತರರ ಮೇಲೆ ಹೇರುವ ಹುನ್ನಾರವೆಂದು ಆಕ್ಷೇಪಣೆ ಬಂತು. ನೀವು ಒಪ್ಪದ ಆಚರಣೆಗಳನ್ನು ಕೈಬಿಡಲು ಒತ್ತಡ ಹಾಕುತ್ತಿರುವಿರಾದರೆ ನಿಮ್ಮದು ಸೆಕ್ಯುಲರ್ ಹೇಗಾಯಿತು? ಸಹಿಷ್ಣುತೆ ನಿಮ್ಮ ನಡೆಯಲ್ಲಿ ಎಲ್ಲಿದೆ ಎಂಬ  ಪ್ರಶ್ನೆಗೆ, ನಾವು ನಮ್ಮ ಆಚರಣೆಗಳನ್ನು ವೇದಿಕೆಯ ಮೇಲೆ ತರುವುದಿಲ್ಲ ಹಾಗಾಗಿ ನೀವೂ ಸಹ ತರಬಾರದೆಂಬ ವಾದ ಬಂತು!!

ಅಲ್ಲಿಗೆ, ನಾನು ಸೆಕ್ಯುಲರ್ ಎಂಬುದರ ಅರ್ಥವನ್ನು ಅಲ್ಲಿರುವ ಸದಸ್ಯರು ಹೇಗೆ ಅರ್ಥೈಸಿಕೊಂಡಿದಾರೆಂಬ ಪ್ರಶ್ನೆ ಮಾಡಿದಾಗ ಯಾರಲ್ಲೂ ಸ್ಪಷ್ಟ ಉತ್ತರವಿರಲಿಲ್ಲ. ಧಾರ್ಮಿಕ ಆಚರಣೆಗಳನ್ನು ಇನ್ನೊಬ್ಬರು ಒಪ್ಪದಿದ್ದಾಗ ಕೈಬಿಡುವುದೇ ಸೆಕ್ಯುಲರ್ ಎಂಬ, ಇತರರ ಆಚರಣೆ ನಂಬಿಕೆಗಳನ್ನು ಸಹಿಸಿಕೊಳ್ಳುವ ಮನೋಭಾವವೆಂದೂ ಗೊಂದಲಮಯ  definition  ಕೊಟ್ಟರು.

ನನ್ನ ಪ್ರಕಾರ ಸೆಕ್ಯುಲರ್ ಎಂಬುದು ಆಂತರ್ಯದಲ್ಲಿ ಗೌರವ ಎಂಬ ಹೂರಣವನ್ನು ಇಟ್ಟುಕೊಂಡ  ಮನಸ್ಥಿತಿ ಎಂದೂ, ಅದು ಕೇವಲ ಸಹಿಸಿಕೊಳ್ಳುವ ಸ್ಥಿತಿ ಅಲ್ಲ. ಸಹಿಸಿಕೊಳ್ಳುವವ ಅಸಹಿಷ್ಣು ಆಗಬಹುದು ಆದರೆ ಗೌರವ ಭಾವ ಒಂದು absolute ಸ್ಥಿತಿ. ಪರಸ್ಪರರ ಆಚರಣೆಗಳಿಗೆ ಗೌರವ ಕೊಟ್ಟು ಬೆಳೆಸುವ ಸ್ಥಿತಿಯೇ ಸೆಕ್ಯುಲರ್-ಸಹಿಷ್ಣುತೆ ಎಂಬ ಪ್ರತಿವಾದ ಹೂಡಿದೆ. ನಿಮ್ಮಲ್ಲಿ ಸಾಂಸ್ಕೃತಿಕವಾದ ಸರಕಿದ್ದರೆ ಅದನ್ನು ವೇದಿಕೆಗೆ ತನ್ನಿ. ಸಂತೋಷವಾಗಿ ಅಚರಿಸೋಣ. ಇಲ್ಲದಿದ್ದಲ್ಲಿ ಉಳಿದವರದ್ದು ನೋಡಿ ಸಂತೋಷಿಸಿ. ನಾವೂ ಮಾಡೆವು ನಿಮಗೂ ಬಿಡೆವು ಎಂಬ ಧೋರಣೆ ಆರೊಗ್ಯಕರವಲ್ಲ. ನಿರ್ಧಿಷ್ಟ ಗುರಿಗಳಿಲ್ಲದಿದ್ದರೆ ನಮ್ಮದು ಅರ್ಥಹೀನ ಸಂಘಟನೆಯಾಗುತ್ತದೆ ಎಂಬ ವಾದವನ್ನು ಮುಂದಿಟ್ಟೆ. ಕೆಲವರು ಈಗ ನನ್ನನ್ನು ಬೆಂಬಲಿಸಿದರು. ಕಾರ್ಯಕ್ರಮಗಳು ಯಥಾ ಪ್ರಕಾರ ನಡೆದವು. ಧರ್ಮ ಬಾಹಿರವಾದ ಅಂಶಗಳಿದ್ದ ಕಾರಣ ದೇಶಬಾಂಧವರು ಊಟದ ಹೊತ್ತಿಗೆ ಆಗಮಿಸಿ ತಿಂದುಂಡು ನಡೆದರು. ನಂತರದ ವರ್ಷಗಳಲ್ಲಿ ಮೊದಲಿದ್ದ ಎರೆಡು ಕುಟುಂಬಗಳನ್ನು ಹೊರತು ಪಡಿಸಿ ಉಳಿದ ಮುಸ್ಲಿಂ ಕುಟುಂಬಗಳು ಕಾರ್ಯಕ್ರಮಕ್ಕೆ ಬರುವುದನ್ನ್ನು ನಿಲ್ಲಿಸಿಯೇ ಬಿಟ್ಟರು.

ಮೊದಲು ಹೇಳಿದಂತೆ, ಕ್ರಿಶ್ಚಿಯನ್ ಕುಟುಂಬಗಳು ಮೊದಲಿನಿಂದಲೂ ಈ ಹಬ್ಬಾಚರಣೆಯಲ್ಲಿ ಪಾಲ್ಗೊಂದೇ ಇರಲಿಲ್ಲ. ನಮ್ಮೂರಿನ ಸಕಲ ( ನನ್ನನ್ನು ಹೊರತು ಪಡಿಸಿ) ಹಿಂದೂಗಳ ಮನೆಯಲ್ಲಿ ಕ್ರಿಸ್ಮಸ್ ಮರವನ್ನು, ಈಸ್ತರ್ ಮೊಟ್ಟೆ-ಮೊಲಗಳನ್ನು ಕಂಡಿದ್ದೇನೆ ಆದರೆ ಇತರರ ಮನೆಗಳಲ್ಲಿ ನಮ್ಮ ದೀಪಾವಳಿಯನ್ನೋ, ಗಣೇಶ ಚತುರ್ಥಿಯನ್ನೋ ಆಚರಿಸುವುದು ನೋಡಿಲ್ಲ.

ಇದು, ಒಂದು ಸಂಘಟನೆಯ ಕಾರ್ಯದರ್ಶಿಯಾಗಿ ನಾನು ಕಂಡುಂಡ  ಅನುಭವ. ವೈಯಕ್ತಿಕವಾಗಿ ನಾನು ಹಿಂದು (ಸನಾತನ) ಧರ್ಮದ ಅನುಯಾಯಿ-ಅಭಿಮಾನಿಯಾಗಿದ್ದರೂ ಇತರ ಧರ್ಮಾಚರಣೆಗಳನ್ನು ಅವಿರುವಂತೆಯೇ ಗೌರವಿಸಿದವನು.ಈ ಪರಸ್ಪರ ಗೌರವ ಆದರಗಳ ಗೆರೆ ಮೀರಿದ ಪರಿಸ್ಥಿತಿಯಲ್ಲಿ ನಮ್ಮ ತತ್ವಗಳನ್ನು, ಆದರ್ಶ ನಂಬಿಕೆಗಳನ್ನು ನಿರ್ಭೀತಿಯಿಂದ ಪ್ರತಿಪಾದಿಸಿದವನು. ಇದಕ್ಕಾಗಿ ವೈಯಕ್ತಿಕವಾಗಿ ಸಂಬಂಧಗಳು ಹಳಸಿದರೂ, ಅದನ್ನು ಅನುಭವಿಸಿದವನು. ನನ್ನ ಈ ನಡೆಯನ್ನು ಅಸಹಿಷ್ಣುತೆ ಎಂಬ ಹಣೆಪಟ್ಟಿಯನ್ನು ಕಟ್ಟಿದವರನ್ನೂ ಸಹ ಕಂಡಿದ್ದೇನೆ.

ಇತರ ಧರ್ಮಗಳ/ನಂಬಿಕೆಗಳನ್ನು ಅಂಗೀಕರಿಸುವ ನಮ್ಮ ಮನಸ್ಥಿತಿ ಬೇರೆಯಾದ ಅವರಿಗೇಕೆ ಬರಲಿಲ್ಲ ಎಂಬುದು ಒಂದು ಮೂಲಭೂತವಾದ ಪ್ರಶ್ನೆ. ಕಾರಣ ಇಷ್ಟೆ: ಮಧ್ಯಪ್ರಾಚ್ಯದಲ್ಲಿ ಹುಟ್ಟಿ ಬೆಳೆದ ಈ ಸೆಮೆಟಿಕ್ ರಿಲಿಜನ್ ಗಳು( ಅಬ್ರಹಾಮಿಕ್ ರಿಲಿಜನ್) ಗಳು ಏಕ ದೇವ, ಏಕ ತತ್ವ,ಏಕ ಮಾರ್ಗ ಪ್ರತಿಪಾದಕ ರಿಲಿಜನ್ ಗಳು. ಇವುಗಳನ್ನು ನಮ್ಮ ಅರ್ಥದಲ್ಲಿ  ಧರ್ಮ ಎನ್ನಲಾಗದು. ಅವು ಮತಗಳು. ಇರುವುದೊಂದೇ ಪುಸ್ತಕ. ಅದನ್ನು ಓದಿಕೊಂಡ ಅನುಯಾಯಿಗಳು ನಂಬುವುದು, ನಮ್ಮ ಮಾರ್ಗವೊಂದೆ ಸತ್ಯ. ಉಳಿದವು  ಪಾಪಿಗಳದ್ದು.ಹಾಗಾಗಿ ಅವುಗಳನ್ನು ನಿರ್ಮೂಲನೆ ಮಾಡು ಎಂಬ ಬೋಧನೆ ನೀಡುವ ಧರ್ಮ ಗ್ರಂಥಗಳು ಇಲ್ಲವೇ ಅದರ interpretation ಗಳು. ಹಾಗಾಗಿ ಕ್ರೈಸ್ತ ಧರ್ಮದವರು ಆಮಿಷ ಒತ್ತಡಗಳ ಮೂಲಕ ಮತಪರಿವರ್ತನೆಗೆಲೆಸಿದರೆ, ಇಸ್ಲಾಂ ಭಯ, ಬಲಾತ್ಕಾರ, ಬಳಪ್ರಯೋಗಗಳ ಮಾರ್ಗದಲ್ಲಿ ತಮ್ಮ ಮತವನ್ನು ಹರಡಲು ಪ್ರಚೋದಿಸುತ್ತದೆ. ತಮ್ಮದು ಹೊರತಾಗಿ ಉಳಿದೆಲ್ಲವೂ ಹರಾಮ್ ಆದ ಕಾರಣ ಒಪ್ಪಿಕೊಳ್ಳುವ ಮನೋಭಾವವೇ ಅಲ್ಲಿ ಇರಲಾರದು. ಇದ್ದಗ್ಯೂ ಅದು exception to the rule. ಅಷ್ಟೆ. ಇತ್ತೀಚಿನ ದಿನಗಳಲ್ಲಿ ಇದರ ಪ್ರಖರತೆ ಹೆಚ್ಚಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಈ ಒಪ್ಪಿಕೊಳ್ಳದ ಮನೋಭಾವವನ್ನು ಬಲಾಧ್ಯ ಪೋರ್ಚುಗೀಸರು ಗೋವಾ ಮತ್ತಿತರ ಜಾಗಗಳಲ್ಲಿ ನಡೆಸಿದ ವಿಧ್ವಂಸಕತೆಯಲ್ಲಿ ಕಾಣಬಹುದು, ಘೋರಿ ಮಹಮ್ಮದನಲ್ಲಿ ಕಾಣಬಹುದು, ವಿಜಯನಗರದ ಬೀದಿಗಳಲ್ಲಿ ಕಾಣಬಹುದು,,ಕಾಶ್ಮೀರಿ ಪಂಡಿತರ ಮಾರಣಹೋಮದಲ್ಲಿ ಕಾಣಬಹುದು, ಇಂದಿಗೂ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ಹಿಂದುಗಳ ಮೇಲೆ ಕ್ರಿಶ್ಚಿಯನ್ ಪಂಗಡಗಳು ನಡೆಸುತ್ತಿರುವ ದೌರ್ಜನ್ಯದಲ್ಲಿ ಕಾಣಬಹುದು. ಕೇರಳದಲ್ಲಿ ನಡೆಯುತ್ತಿರುವ ದೌರ್ಜನ್ಯದಲ್ಲಿ ಕಾಣಬಹುದು. ಆಂಧ್ರಪ್ರದೇಶದ ಕರಾವಳಿಯಲ್ಲಿ ನಡೆದಿರುವ ಮತಪರಿವರ್ತನಾ ಅಭಿಯಾನದಲ್ಲಿ ಕಾಣಬಹುದು. ಈ ಎಲ್ಲ ಹುನ್ನಾರಗಳ ಹಿಂದಿನ ವಿಸ್ತೃತ ಹಾಗೂ ಆಧುನಿಕ ರೂಪವೇ ಇಂದು ಚರ್ಚೆಗೊಳಗಾಗಿರುವ ಅಸಹಿಷ್ಣುತೆಯ ಕೂಗು.

ಈ ಕೂಗಿನ ಹಿಂದಿನ ರಾಜಕೀಯ ಷದ್ಯಂತ್ರಗಳು, ಸಮಾಜ ವಿರೋಧಿ ಹುನ್ನಾರಗಳು, ಓಲೈಕೆ ರಾಜಕಾರಣ, ಮತಬ್ಯಾಂಕ್ ನ ಹಪಾಹಪಿ, ಇದರ ಹಿಂದಿರುವ ಬುದ್ಧಿಜೀವಿಗಳು, ರಾಜಕಾರಿಣಿಗಳು, ಸಾಹಿತಿಗಳು ಇವರುಗಳ ಬದ್ಧತೆ, ಬಂಡವಾಳಗಲನ್ನು ಗಮನಕ್ಕೆ ತೆಗೆದುಕೊಂಡರೆ ಇವರ ಈ hue & cry ಹಿಂದಿರುವ ಪ್ರಾಮಾಣಿಕತೆ ಬಯಲಾಗುತ್ತದೆ. ಇಷ್ಟುದಿನ ಕೇಳಿಬರದ ಈ ವಿದ್ಯಮಾನ ಇದ್ದಕ್ಕಿದ್ದಂತೆ ಮಾರ್ಮೊಳಗುತ್ತಿರುವುದರ ರಹಸ್ಯ ಎಲ್ಲರಿಗೂ ಉತ್ತರ  ಗೊತ್ತಿರುವ  ಪ್ರಶ್ನೆಯೇ.

ಸರಕಾರ, ಮಾಧ್ಯಮಗಳು ಸಂಘ ಸಂಸ್ಥೆಗಳು ಎಲ್ಲವೂ ತಮ್ಮ ಹಿಡಿತದಲ್ಲಿದ್ದಾಗ ತಮಗೆ ಅನುಕೂಲವಾಗುವ ವಾತಾವರಣ ಇದ್ದಾಗ ಕೇಲಿಬರದ ಈ ಕೂಗು ಇಂದು ಕೇಳುತ್ತಿರುವ ಕಾರಣ, ಪಟ್ಟಭದ್ರರ ಅಡಿ ಅಲುಗುತ್ತಿರುವುದಷ್ತೆ. ತಿರುಚಿದ ಇತಿಹಾಸವನ್ನು ಪ್ರಶ್ನಿಸಿದಾಗ ರೋಮಿಲಾ ಥಾಪರ್ ಅಸಹಿಷ್ಣುತೆಯ ಕೂಗು ಹಾಕುತ್ತಾಳೆ, ಯಾಕೂಬ್ ಮೆಮನ್ ನನ್ನು ಗಲ್ಲಿಗೇರಿಸಿದಾಗ ದೇಶದೆಲ್ಲ ಬುದ್ಧಿಜೀವಿಗಳು ಒಕ್ಕೊರಲಿನಿಂದ ಪ್ರತಿಭಟಿಸುತ್ತಾರೆ, ನಕ್ಸಲರನ್ನು ಮಟ್ಟಹಾಕಿದರೆ ಮಾನವ ಹಕ್ಕುಗಳ ಪ್ರಶೆ ಏಳುತ್ತದೆ, ಯಾವುದೊ ಒಂದು ಮುಸ್ಲಿಮನ ಕೊಲೆಯಾದರೆ ದೇಶಾದ್ಯಂತ ಅಲ್ಲೋಲ ಕಲ್ಲೋಲವಾಗುತ್ತದೆ, ವಿವೇಕಾನಂದ ಜನ್ಮದಿನಾಚರಣೆ ಕೋಮುವಾದಿಯಾಗುತ್ತದೆ, ದಲಿತನಲ್ಲದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಬ್ರಾಹ್ಮಣ ಪುರೋಹಿತಶಾಹಿಯನ್ನು ಎಳೇದುತರಲಾಗುತ್ತದೆ. ಅಕಬರ್ -ಬಾಬರ್ ಇತ್ಯಾದಿಗಳಿಗೆ ಒಂದೊಂದು ಪಾಠ ಮುಡಿಪಾಗಿತ್ತು ಇಡಿ ವಿಜಯನಗರ ಇತಿಹಾಸವನ್ನು ಒಂದು ಪುಟಕ್ಕೆ ಸೀಮಿತವಾಗಿದ್ದನ್ನು ಪ್ರಶ್ನಿಸಿದರೆ ಕೋಮುವಾದ ಭುಗಿಲೇಳುತ್ತಿದೆ ಎಂಬುದಾಗಿ ಕೂಗಲಾಗುತ್ತದೆ. ಇಂದಿಗೆ ಅಸತ್ಯವೆಂದು ಸಾಬೀತಾಗಿರುವ ಆರ್ಯ ದ್ರಾವಿಡ ಇತಿಹಾಸವನ್ನೇ ಇನ್ನು ಬಂಡವಾಳ ಮಾಡಿಕೊಂಡು ದೇಶ ವಿಭಜನೆಗೆ ಪ್ರಯತ್ನಿಸಲಾಗುತ್ತದೆ, ಅದನ್ನು ವಿರೋಧಿಸಿದರೆ ಅಸಹಿಶ್ನುತೆಯ ಪಟ್ಟ ಕಟ್ಟಲಾಗುತ್ತದೆ,.

ರಾಮಾಯಣದ ರಾಮ ವ್ಯಭಿಚಾರಿಯೆಂದೂ, ಅವನು ಕಬ್ಬಿಣ ತರಲು ಕಾಡಿಗೆ, ಶ್ರೀಲಂಕಾಕ್ಕೆ ಹೋದನೆಂದೂ ಹೇಳಿದವನಿಗೆ ಪ್ರೊಫೆಸ್ಸರ್ ಗಿರಿ ನೀಡಲಾಗುತ್ತದೆ. ಭಗವದ್ಗೀತೆ ಹಿಂಸಾ ಪ್ರಚೋದಕೆವೆಂದು ಬಡಬಡಿಸುವ ಭಗವಾನನಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸಾವಿರಾರು ರೈತರು ಸತ್ತಾಗ ಇರಲಾಗದ ಹಣ , ಕಕ್ಕುಲತೆ, ಟಿಪ್ಪೂ ಸುಲ್ತಾನನ ಜನ್ಮದಿನ ಆಚರಣೆಗೆ ಬಿಡುಗಡೆಯಾಗುತ್ತದೆ. ಅದರ ಔಚಿಯ್ತವನ್ನು ಪ್ರಶ್ನಿಸಿ ವಿರೋಧಿಸಿದಾಗ ಅಸಹಿಷ್ಣುತೆಯ ಹೋಗೆ ದೇಶದ ತುಂಬ ವ್ಯಾಪಿಸುತ್ತದೆ.

ಕಂಬಳದ ಕೋಣ ಓಟದ ಸ್ಪರ್ಧೆ, ಜಲ್ಲಿಕಟ್ಟು ಆಚರಣೆಗಳು ಪ್ರಾಣಿಹಿಂಸೆಯ ಪ್ರತೀಕವಾದರೆ, ಬಕೄದಿನ ಕುರಿ, ಒಂಟೆಗಳ ಮಾರಣಹೋಮ ಪ್ರಾಣಿದಯಾ ಸಂಘದ, ಬುದ್ಧಿಜೀವಿಗಳ ಕಣ್ಣಿಗೆ ಕಾಣದೆ ಹೋಗುತ್ತದೆ.

ಇಂದಿನ  ಸಹಿಷ್ಣುತೆ ಅಸಹಿಷ್ಣುತೆಗಳ ಚರ್ಚೆ ಧಾರ್ಮಿಕ ವೆನ್ನಿಸಬಹುದಾದ ಹೊದಿಕೆ ಹೊದ್ದಿದ್ದರೂ ಸಹ ಅದರ ಮೂಲವಿರುವುದು ನಮ್ಮ ಇಡಿ ದೇಶದ ಒಂದು ಪಂಗಡ ಇಬ್ಬಂದಿತನದ ವೈಚಾರಿಕ ಪೊಳ್ಳುತನದಲ್ಲಿ. ಪ್ರಾಮಾಣಿಕತೆಯ ದಿವಾಳಿತನದಲಯ್ಲಿ. ಭಿನ್ನತೆ ಜಗದ ನಿಯಮ,. ಪ್ರಕೃತಿಯಲ್ಲಿ ಏಕರೂಪತೆ ಅಸಾಧ್ಯ. ಅದು ರೂಪ ಗುಣಗಳಿರಬಹುದು, ಚಿಂತನೆಯಿರಬಹುದು,ನಂಬಿಕೆ ಆಚರಣೆಗಳಿರಬಹುದು. ಆದರೆ ಪ್ರಾಮಾಣಿಕತೆ ಎಂಬುದು ಸಾಧ್ಯ. ಸಮಸ್ಯೆತ್ಯ ಮೂಲ ಇರುವುದು ಇಲ್ಲಿಯೇ. ಮೊದಲು ಹೇಳಿದ ಸೆಮೆಟಿಕ್ ರಿಲಿಜನ್ ಗಳು ‘’ಆನೋ ಭದ್ರಾ ಕ್ರತುವೋ ಎಂತು ವಿಶ್ವತಃ “ ಎಂಬ ತೆರೆದ ಹಾದಿಯ ಮತಗಳಲ್ಲ.ನಮ್ಮದೇ ಸರಿ. ಉಳಿದವರು heathen ಅಥವಾ ಹರಾಮ್ ಎನ್ನುವ ಮನೋಭಾವದ ಜನ, ನಮ್ಮವರೇ ಬುದ್ಧಿಜೀವಿಗಳ ಮೂಲಕ ಅಸಹಿಷ್ಣುತೆಯ ಆರೋಪವನ್ನು ಸಹಿಷ್ಣುಗಳ ಮೇಲೆ ಹೊರಿಸುತ್ತಿರುವುದು ಒಂದು ವಿಪರ್ಯಾಸಕರ ಬೆಳವಣಿಗೆ. ಈ ಸಂಘರ್ಷ ಇರಬಾರದು ಎಂದು ಆಶಿಸುವುದು ಒಂದು ಹಗಲುಗನಸು ಅಷ್ಟೇ. ವಾಸ್ತವ ಭಿನ್ನವಾದದ್ದು. ಇಸ್ಲಾಮಿನ ಸುನ್ನಿಗಳು ಶಿಯಾ, ಅಹ್ಮದೀಯ ಪಂಗಡಗಳನ್ನು ಸಹಾ ಒಪ್ಪುವ ಸ್ಥಿತಿಯಲ್ಲಿ ಇಲ್ಲದ್ದು ನಾವು ಕಾಣುತ್ತಿದ್ದೇವೆ. ಬಹುಸಂಖ್ಯಾತ ಮುಸ್ಲಿಮರು ಬಾಂಗ್ಲಾ, ಪಾಕಿಸ್ತಾನ, ಕಾಷ್ಮೀರಗಳಲ್ಲಿ ಹಿಂದೂಗಳ ಮಾರಣಹೋಮ ನಡೆಸಿರುವುದನ್ನು ಕಂಡಿದ್ದೇವೆ. ಶಾಂತಿಮಂತ್ರ ಅಲ್ಲಿ ಕೆಲಸಕ್ಕೆ ಬಂದಿಲ್ಲದ್ದನ್ನೂ ನೋಡಿದ್ದೇವೆ. ಮಾನವರನ್ನು ಮಾನವನಾಗಿ ಕಾನು ಎಂಬುದು ಬೃಉಹದಾಶಯವೇ ಸರಿ. ಆದರೆ ಎದುರುಗಿರುವ ಮಾನ ದಾನವ ಪ್ರವೃತ್ತಿಯವನೆಂದಾದಾಗ ನಮ್ಮ ನಿಲುವು ಏನಿರಬೇಕೆಂಬುದು ನಮಗೆ ಸ್ಪಷ್ಟವಾಗಿರಬೇಕು ಅಷ್ಟೇ.

ಭಾರತ ಇಂದು ಭಾರತವಾಗಿ ಉಳಿದಿರುವುದರ ಹಿಂದೆ ದೇಶಪ್ರೇಮಿಗಳ ಧರ್ಮಾಧಕರ ಬೆವರಿದೆ. ಶಿವಾಜಿಯಂಥ  ಹೋರಾಟಗಾರರ ಛಲವಿದೆ. ಧರ್ಮದ-ಸಂಸ್ಕೃತಿಯ  ಮೇಲಿನ ಒಲವಿದೆ ಭಕ್ತಿಯಿದೆ, ಅಭಿಮಾನವಿದೆ. ಅವನ ತಾಯಿಯಂತಹ ಮಹಿಳೆಯರ ಆದರ್ಶವಿದೆ.ಸಾಮಾಜಿಕವಾಗಿ ಆಚರಿಸಿದ ಧಾರ್ಮಿಕ  ಕಾರ್ಯಕ್ರಮಗಳ ಪರಿಣಾಮವಿದೆ. ಮನೆಮನೆಗಳಲ್ಲಿ ಇಟ್ಟು ಪೂಜಿಸಿದ ದೇವ ದೇವರ ಮೇಲಿನ ಶ್ರದ್ಧೆಯಿದೆ.ಕಟ್ಟುವ ಮನಸ್ಸುಗಳಲ್ಲಿ ಸಾಮಾನ್ಯವಾಗಿ ಕಾಣುವ ಗುಣಗಳಿವು.

ಹಿಂದಿನ ವಿಚಾರಗಳನ್ನು ಕೆದಕಬಾರದು ಎನ್ನುವವರು ತಿಳಿಯಬೇಕಾದ ಒಂದು ವಿಚಾರ ‘’ ಅಸತ್ಯ-ಅಪ್ರಾಮಾಣಿಕತೆಯ ವೈಚಾರಿಕ ಪೊಳ್ಳುತನ ಓಲೈಕೆಯಿಂದ ಸಹಿಷ್ಣು ಸಮಾಜ ಕಟ್ಟಲು ಸಾಧ್ಯವಿಲ್ಲ.” ಜಾತಿ ವ್ಯವಸ್ಥೆಗೆ ಬ್ರಾಹ್ಮಣರನ್ನು,ಆರ್ಯರನ್ನು  ದೂರುವ ಸಹಿಷ್ಣುಗಳು  ಇತಿಹಾಸದಲ್ಲಿ ಚೆನ್ನಾಗಿಯೇ ದಾಖಲಾಗಿರುವ ಹಿಂದೂಗಳ ಮೇಲಿನ ಮುಸ್ಲಿಂ ದಾಳಿಕೋರರ , ರಾಜ ರಾಜರುಗಳ ದಬ್ಬಾಳಿಕೆಯನ್ನು ಪ್ರಾಮಾಣಿಕವಾಗಿ, ಮುಕ್ತವಾಗಿ ಚರ್ಚಿಸಬೇಕು.ಅದನ್ನು ಆ ಸಮುದಾಯ ಒಪ್ಪಿಕೊಳ್ಳುವಂತೆಯೂ ಉತ್ತೇಜಿಸಬೇಕು. ಕಸವನ್ನು ಚಾಪೆಯ ಕೆಳಗೆ ತಳ್ಳಿದರೆ ಅದೇನು ಇಲ್ಲವಾಗುವುದಿಲ್ಲ. ಹುಳಗಳನ್ನು ಬೆಳೆಸುವ ತಿಪ್ಪೆಯಾಗಿ ಮಾರ್ಪಡಬಹುದಷ್ಟೇ.

ಎಲ್ಲರೂ ಒಂದೇ ನಮ್ಮಲ್ಲಿ ವೈಷಮ್ಯ ಬೇಡ, happy ever after  ಎಂದು ಆಶಿಸುವ ಹಿಂದೂ ಮನಸ್ಸುಗಳು ಕೇಳಿಕೊಳ್ಳಬಹುದಾದ ಪ್ರಶ್ನೆಯಿದು:

ತೋಳವೊಂದು ಕುರಿಯ ಬಳಿಗೆ ಬಂದು ನಾವಿಬ್ಬರೂ ಒಂದೇ ಭೂಮಿಯ ಮಣ್ಣಿನಿಂದ ಆದವರು. ನನಗೂ ನಿನಗೂ ವ್ಯತ್ಯಾಸವಿಲ್ಲ. ನಾನೀಗ ನಿನ್ನನ್ನು ತಿಂದುಬಿಡುವೆ. ನೀನು ನನ್ನಲ್ಲಿಯೇ ಸೇರಿಹೋಗಿಬಿಡುತ್ತೀಯ.ಹಾಗಾಗಿ ನಿನ್ನದೇನು ನಷ್ಟವಾಗುವುದಿಲ್ಲ ಎಂದಾಗ ಕುರಿ ಏನು ಹೇಳಬೇಕು? ಅಥವಾ ಬುದ್ಧಿ ಜೀವಿಯಾಗಿ ಕುರಿಗೆ ನೀವೇನು ಹೇಳುತ್ತೀರಿ ಎಂಬುದು ಕೇಳಿಕೊಳ್ಳಬೇಕು.

ಗುರುವಂದನೆ

ಗುರುವಂದನೆ 
 
ನಮ್ಮ ವೈದ್ಯಕೀಯ ಶಿಕ್ಷಣಾರಂಭದ ೨೫ ನೇ ವರ್ಷ ತುಂಬಿದ, ಬೆಳ್ಳಿ ಹಬ್ಬದಾಚರಣೆಯ ಸಂದರ್ಭದಲ್ಲಿ ಗುರುವಂದನೆ ಹಮ್ಮಿಕೊಂಡಿದ್ದೆವು. ಆ ದಿನ ನಾನು ಮಾಡಿದ ಸ್ವಾಗತ ಭಾಷಣದ ಲೇಖನ ರೂಪ
 
(ಸೆಪ್ತೆಂಬರ್ ೫ನೇ ತಾರೀಖು ಶಿಕ್ಷಕರ ದಿನ. ಇದೇ ಸಮಯಕ್ಕೆ ಗುರುಪೂರ್ಣಿಮೆಯೂ ನಮ್ಮ ಪರಂಪರೆಯಲ್ಲಿ ಆಚರಿಸಲ್ಪಡುತ್ತದೆ. ಗುರು-ಶಿಷ್ಯ ಪರಂಪರೆ ಭಾರತೀಯ ಸಂಸ್ಕೃತಿಯ ಒಂದು ವಿಶಿಷ್ಟ ಅಂಗ. ಚೀನಾ ನಾಗರೀಕತೆಯಲ್ಲಿ ಹೊರತು ಬೇರೆಲ್ಲ  (ಪ್ರಮುಖವಾಗಿ ಯೂರೋಪದಲ್ಲಿ) ನಾಗರೀಕತೆಗಳಲ್ಲಿ ಶಿಕ್ಷಣ ಎನ್ನುವುದು ಒಂದು ವಹಿವಾಟಿನಂತೆ ಆಚರಿಸಲ್ಪಡುತ್ತಿದ್ದ ಕಾಲದಲ್ಲಿ ಹಾಗೂ ಅದಕ್ಕೆ ಬಹಳ ಹಿಂದೆ ಭಾರತದಲ್ಲಿ ವಿದ್ಯೆಯನ್ನು ವಿದ್ಯೆ ಕಲಿಸುವುದಕ್ಕಾಗಿಯೇ, ಯಾವ ಪ್ರತಿಫಲದ ಅಪೇಕ್ಷೆ ಇಲ್ಲದೆ ಕಲಿಯುವುದಕ್ಕೆ ಹಾಗೂ ಕಲಿಸುವುದಕ್ಕೆ ತಕ್ಕ ವಿದ್ಯಾರ್ಥಿ ಸಿಕ್ಕಲ್ಲಿ ಹೇಳಿಕೊಡುವ ಪರಿಪಾಠ ಇತ್ತು; ಕಡಿಮೆಯಾದರೂ ಈಗಲೂ ಇದೆ. ಗುರು ಶಿಷ್ಯ ಸಂಬಂಧಿತ ಕಥೆಗಳು ನಮ್ಮ ಪುರಾಣದಲ್ಲಿ ಸಾಕಷ್ಟಿವೆ.)
ಸಾಮಾನ್ಯವಾಗಿ ಗುರುವಂದನೆಯ ಪ್ರಾರ್ಥನೆ ಹಯಗ್ರೀವಾದಿ ಸ್ತೋತ್ರದಿಂದ ಶುರುವಾಗುತ್ತದೆ.
 
 
       ಜ್ಞ್ನಾನಾನಂದಮಯಂ ದೇವಂ ನಿರ್ಮಲ ಸ್ಫಟಿಕಾಕೃತಿಂ
ಆಧಾರಂ ಸರ್ವ ವಿದ್ಯಾನಾಂ ಹಯಗ್ರೀವ ಮುಪಾಸ್ಮಹೆ 
 
ಎಂದು ಶುರುವಾಗುವ ಈ ಸ್ತೋತ್ರ, ಹೊಳೆಯುವ ಬೆಳಕಿನ ರೂಪದಲ್ಲಿರುವ ದೇವರನ್ನು ಯಾವ ವಿಘ್ಹ್ನವೂ ಇಲ್ಲದೆ ನೆರವೇರಿಸಬೇಕೆಂದು ಕೋರುತ್ತದೆ. ಅದೇವನು ವಿಶ್ವಕ್ಸೇನನ ರೂಪದಲ್ಲಿ ಬರಲೆಂದು ಪ್ರಾರ್ಥಿಸುತ್ತದೆ.
 
ಎರಡನೇ ಚರಣ ಎಲ್ಲರಿಗೂ ಪರಿಚಿತವಾದ, 
 
ಗುರು ಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರ ಎಂಬುದು.
 
ಮೂರನೇ ಚರಣದಲ್ಲಿ ಪ್ರಮುಖ, ಆದರ್ಶಪ್ರಾಯರಾಗಿರುವ ಭಾಗವತ- ಪುರಾಣ ಪಾತ್ರಗಳನ್ನು ನೆನೆಯುತ್ತದೆ
 
        ಪ್ರಹ್ಲಾದ ನಾರದ ಪರಾಶರ ಪುಂಡರೀಕ
ವ್ಯಾಸಾಂಬರೀಶ ಶುಕ ಶೌನಕ ಭೀಷ್ಮದಾಲ್ಭ್ಯಾಂ
ರುಕ್ಮಾಂಗದಾರ್ಜುನ ವಸಿಷ್ಠ ವಿಭೀಷಣಾದೀಂ
ಪುಣ್ಯಾಮಾಂ ಪರಮಭಾಗವತಾಮ್ ಸ್ಮರಾಮಿ -ಎಂಬುದು ಮೂರನೇ ಚರಣ.
 
ಈ ಶ್ಲೋಕ ಪಠಣೆಯ ಹಿಂದೆ ಇರುವ ಕಲಿಕೆಯ ವೈಜ್ಞಾನಿಕ ಕ್ರಮ – ಆಧುನಿಕ ವಿಶ್ಲೇಷಣೆಗೆ ಅನುಸಾರವಾಗಿ- ಗಮನಿಸಬೇಕು.
ಮೊದಲನೆಯದು ಮನುಷ್ಯನನ್ನು ಮೀರಿದ ಶಕ್ತಿಯನ್ನು ಪೂಜಿಸುತ್ತಾ, ತನಗೆ ಕಲಿಯುವ ಬುದ್ಧಿಯನ್ನೂ, ಅದಕ್ಕೆ ಅನುಕೂಲವನ್ನೂ, ತಕ್ಕ ಪರಿಶ್ರಮ ಹಾಕುವ ಮನೋಭಾವನೆಯನ್ನೂ ಕೊಡು ಎಂದು ಕೇಳುತ್ತಾ ಕಲಿಯುವ ಸಂಕಲ್ಪಕ್ಕೆ ಪ್ರೇರೇಪಿಸುತ್ತದೆ. ಆಧುನಿಕ ವಾಗಿ ಇದು cognitive learning theory (ಕಾಗ್ನಿಟಿವ್ ಲರ್ನಿಂಗ್ ಥಿಯರಿ)ಯ ಸನಾತನ ರೂಪ.
 
ಎರಡನೆಯ ಚರಣ, ಮಾನವ ರೂಪದಲ್ಲಿರುವ ಗುರುವನ್ನು ತ್ರಿಮೂರ್ತಿಗಳಿಗೆ ಹೋಲಿಸಿ ಕಲಿಸಲು ಪ್ರಾಥಿಸುತ್ತದೆ. ಇದು ಅಧುನಿಕ ಪರಿಭಾಷೆಯಲ್ಲಿ behavioural learning theory (ಬಿಹೇವಿಯೊರಲ್ ಲರ್ನಿಂಗ್ ಥಿಯರಿ) ಯ ಸನಾತನ ರೂಪ
 
ಮೂರನೆಯ ಚರಣ, ಸಮಾಜದಲ್ಲಿನ ಉನ್ನತ ವ್ಯಕ್ತಿತ್ವಗಳನ್ನು ನೋಡಿ ಕಲಿಯಲು ಪ್ರೇರೇಪಿಸಿ ಅಂಥ ಆದರ್ಶಗಳನ್ನು ನೆನೆಪಿನ್ನಲ್ಲಿಡಲು ಒಂದು ಶ್ಲೋಕರೂಪವಾಗಿ ಹೆಣೆಯಲ್ಪಟ್ಟಿದೆ. ಇದು (ಸೋಷಿಯಲ್ ಥಿಯರಿ ಒಫ಼್ ಲರ್ನಿಂಗ್) social theory of learning ಎಂದೆನ್ನಬಹುದು.
 
ಹೀಗೆ ಕಲಿಸುವ -ಕಲಿಯುವ ಪ್ರಕ್ರಿಯಲ್ಲಿ ಬರುವ ಎರೆಡು ಪಾತ್ರಗಳು ಗುರು ಹಾಗೂ ಶಿಷ್ಯ. ಈ ಗುರು ಶಿಶ್ಯ ಪರಂಪರೆಯ ಹಲವಾರು ಅತ್ಯುನ್ನತ ನಿದರ್ಶನಗಳು ನಮಗೆ ಸಿಗುತ್ತವೆ
ಯಮ-ನಚಿಕೇತ
ದ್ರೋಣ- ಅರ್ಜುನ
ವಿಶ್ವಾಮಿತ್ರ- ರಾಮ
ವಲ್ಲಭಾಚರ್ಯ- ಸೂರದಾಸ
ಗೋವಿಂದ ಗುರು-ಶಿಶುನಾಳ ಶರೀಫ ,,ಹೀಗೆ ಇನ್ನೂ ಪಟ್ಟಿಮಾಡಬಹುದು
 
ಈ ಗುರು-ಶಿಷ್ಯ ಪರಮ್ಪರೆಗೆ, ಆ ಪರಿಕಲ್ಪನೆಗೆ ನಮ್ಮ ಹಿರಿಯರು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಏಕೆ ಅಂತಹ ಉನ್ನತ ಸ್ಥಾನ ನೀಡಿ ಗೌರವಿಸಿದ್ದಾರೆ ಎಂಬುದು ನಮ್ಮೆಲ್ಲರ ಅನುಭವಕ್ಕೆ ಬಂದೇ ಇರುತ್ತದೆ
 
ಎನಿತು ಜನ್ಮದಲಿ ಎನಿತು ಜೀವರಿಗೆ ಎನಿತು ನಾವು ಋಣಿಯೋ
ತಿಳಿದು ನೋಡಿದರೆ ಬಾಳು ಎಂಬುದಿದು ಋಣದ ರತ್ನ ಗಣಿಯೋ ” 
 
ಎಂದು ಮಾರ್ಮಿಕವಾಗಿ ಹೇಳಿದ್ದಾರೆ ಪೂಜ್ಯರಾದ ಜಿ.ಎಸ್.ಶಿವರುದ್ರಪ್ಪನವರು. ಹೀಗೆ ನಮ್ಮ ಬಾಳು ಒಂದು ಋಣದ ರತ್ನದ ಗಣಿ. ಹುಟ್ಟಿದಾರಭ್ಯ ನಾವು ಜನ್ಮ ಋಣ, ಅನ್ನದ ಋಣ, ಮಣ್ಣಿನ ಋಣ, ಭಾಷೆಯ ಋಣ, ಸಮಾಜದ ಋಣ ಹೀಗೆ ಋಣ ಸಂಚಯ ಮಾಡುತ್ತಲೇ ಬೆಳೆಯುತ್ತೇವೆ ಮೊದಲಿನ ೩೦-೪೦ ವರ್ಷಗಳು. ಈ ಅವಧಿಯಲ್ಲಿ ನಮ್ಮ ಜೀವನದ ಹಾದಿಗಳನ್ನು ಅರಿತು ದುಡಿದು ಆ ಋಣಗಳನ್ನು ತೀರಿಸುವ ಸಾಮರ್ಥ್ಯ ಪಡೆದಿರುತ್ತೇವೆ. ನಾವು ಈ ಸಾಮರ್ಥ್ಯವನ್ನು ಪಡೆಯುವಲ್ಲಿ ಮಹತ್ತರ ಪಾತ್ರ ವಹಿಸುವ, ಮೇಲೆ ಹೇಳಿದ ಎಲ್ಲ ಋಣಗಳ  ಜೊತೆಯಿರುವ ಬಹು ಮುಖ್ಯವಾದ ಋಣ ವಿದ್ಯಾ ಋಣ ಅದೇ ಗುರುವಿನ ಋಣ. ಗುರುವಂದನೆ ಈ ಋನ ಸಂಚಯವನ್ನು ಸಂದಾಯ ಮಾಡುವ ನಿಟ್ಟಿನಲ್ಲಿ ಒಂದು ಪುಟ್ಟ ಪ್ರಯತ್ನವೆನ್ನಬಹುದು. 
*****************
 
ಹಾಗಾದರೆ “ಗುರು” ಎಂಬ ಪದದ ಅರ್ಥವೇನು? 
ಗು- ಎಂದರೆ ಅಂಧಕಾರ/ಕತ್ತಲು; ರು- ಎಂದರೆ ಕಳೆಯುವವನು. ಅಜ್ಞ್ನಾನದ ಕತ್ತಲೆಯನ್ನು ಕಳೆದು ಜ್ಞಾನದ ಬೆಳಕನ್ನು ನೀಡಬಲ್ಲ ಪೂಜ್ಯನೀಯ ವ್ಯಕ್ತಿಯೇ ಗುರು. ಹಾಗಾಗಿಯೇ ತಮಸೋಮಾ ಜ್ಯೋತಿರ್ಗಮಯ ಎಂಬ ಉಕ್ತಿಯೂ ಇದೆ. ಅದು ಹೇಗೆ ಎನ್ನುವುದನ್ನು ನೋಡೋಣ.
 
“ಅನ್ನದಾನಂ ಪರಂ ದಾನಂ ವಿದ್ಯಾದಾನಮತ್ಃ ಪರಂ
ಅನ್ನೇನ ಕ್ಷಣಿಕಾತೃಪ್ತಿಃ ಯಾವಜ್ಜೀವಂಚ ವಿದ್ಯಯಾತ್”
 
ಎಂಬ ಶ್ಲೋಕ ಹೇಳುವಂತೆ ಜೀವನ ಪೂರ್ತಿ ನಮ್ಮನ್ನು ಪೊರೆಯಬಲ್ಲ ವಿದ್ಯೆ ಅನ್ನದಾನಕ್ಕಿಂತಲೂ ಉನ್ನತವಾದದ್ದು. ಇಂತಹ ವಿದ್ಯೆಯನ್ನು ನಮಗೆ ದಯಪಾಲಿಸಿದ ಗುರುಗಳ ಋಣ ದೊಡ್ಡದಲ್ಲದೆ ಇನ್ನೇನು?
ಹೀಗೆ ಕಲಿತ ವಿದ್ಯೆಯಿಂದಲೇ ನಾವು ಸಮಾಜದಲ್ಲಿ ಆದರಣೀಯರಾಗಿ ಇಂದು ಜೀವನ ನಡೆಸಲು ಸಾಧ್ಯವಾಗುತ್ತಿದೆ. ಗುರುಗಳು ಕಲಿಸಿದ ವಿದ್ಯೆಯಿಂದ ನಾವು ನಮ್ಮ ದೇಶದಲ್ಲಿಅ ಮಾತ್ರವಲ್ಲದೆ, ಬ್ರಿಟನ್, ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ, ಮಧ್ಯಪ್ರಾಚ್ಯ , ಪ್ರಪಂಚದ ಎಲ್ಲೆಡೆ ಹರಡಿ ಅಲ್ಲಿಯು ನಮ್ಮ ನಮ್ಮ ಚಾಪು ಮೂಡಿಸಿದ್ದೇವೆ,. ನಾವಿರುವಲ್ಲಿ, ಭಿನ್ನ ಸಂಸ್ಕೃತಿಯ ಸಮಾಜದಲ್ಲೂ ನಾವು ಗೌರವಾದರಗಳಿಗೆ ಪಾತ್ರರಾಗಿದ್ದೇವೆ. ಇದು ನಾವು ಗಳಿಸಿದ ಸಂಪತ್ತಿನ ಪರಿಣಾಮವಲ್ಲ; ಬದಲಿಗೆ ನಮ್ಮ ವಿದ್ಯೆಯ ಪರಿಣಾಮ. ಅದಕ್ಕೆಂದೇ
 
ವಿದ್ವತ್ವಂಚ ನೃಪತ್ವಂಚ ನೈವತುಲ್ಯಂ ಕದಾಚನ
ಸ್ವದೇಶೇ ಪೂಜ್ಯತೇ ರಾಜಾನ್ ವಿದ್ವಾನ್ ಸರ್ವತ್ರ ಪೂಜ್ಯತೇ”. 
 
ಎಂದಿದೆ ಇನ್ನೊಂದು ಶ್ಲೋಕ. ರಾಜನಾದವನು /ಅಧಿಕಾರಿಯಾದವನು ತನ್ನ ಜಾಗದಲ್ಲಿ ಮಾತ್ರವೇ ಗೌರವ ಪಡೆಯುತ್ತಾನೆ ಆದರೆ ವಿದ್ಯಾವಂತ ಅದನ್ನು ಜಗದೆಲ್ಲೆಡೆ ಪಡೆಯುತ್ತಾನೆ. ಹಾಗಾಗಿ ಅವರಿಬ್ಬರನ್ನೂ ಹೊಲಿಸಬೇಡ ಎಂದಿದರ ಅರ್ಥ,. ಹೊರದೇಶಗಳಲ್ಲಿ ನೆಲೆಸಿರುವ ನಮಗೆ ಇದರ ಮಹತ್ವ ಅರಿವಾಗದೇ ಇಲ್ಲ.
ಗುರುಗಳು ಪಾಥ ಮಾಡುವಾಗ ನಮಗೆ ಕೇವಲ ವಿದ್ಯೆಯನ್ನಷ್ಟೇ ಕಲಿಸುವುದಿಲ್ಲ. ಆದರ್ಶಪ್ರಾಯರಾಗಿ ನಮಗೊಂದು ಧ್ಯೇಯ, ಶಿಸ್ತು, ಬದ್ಧತೆ, ಪಾಠ ಮಾಡುವ ಕೌಶಲ್ಯ, ಬೋಧನಾ ವಿಧಾನ ಇವೆಲ್ಲವುಗಳನ್ನೂ ಕಲಿಸುತ್ತಾರೆ. ಇದರಿಂದ ನಾವು ಪ್ರೇರಿತರಾಗಿ ಮುಂದಿನ ಪೀಳಿಗೆಗೆ ಗುರುಗಳಾಗಿ ಆ ಪರಂಪರೆಯನ್ನು ಮುಂದುವರಿಸುತ್ತೇವೆ. ಮಾನ್ಯರಾದ ಜಿ.ಟಿ.ನಾರಾಯಣರಾವ್ ಅವರು ಈ ಗುರು-ಶಿಷ್ಯ ಪರಂಪರೆಯ ನಿರತಚಕ್ರವನ್ನು ಹೀಗೆ ವರ್ಣಿಸುತ್ತಾರೆ
 
ಹೊಸ ಬೆಳಕನರಸುವವ ಋಷಿ
ಋಷಿಕಂಡ ಬೆಳಕನ್ನು ಬೀರುವವನಾಚಾರ್ಯ
ಆಚಾರ್ಯ ತೋರಿಸಿದ ಪಥದಿ ನಡೆದವ ಶಿಷ್ಯ
ಶಿಷ್ಯ ಗುರುವಾಗುವುದೆ ಋಜುವಿದ್ಯೆ ಅತ್ರಿಸೂನು” 
 
ಹೀಗೆ ಶಿಷ್ಯನಾದವನು ಗುರುವಿನ ಪದಕ್ಕೆ ಏರಿದಾಗ ಅದು ನಿಜವಾದ ವಿದ್ಯೆ ಎನ್ನುತ್ತಾರೆ ಅವರ ಅತ್ರಿಸೂನು ಕಗ್ಗ ದಲ್ಲಿ. ನಮ್ಮಲ್ಲಿ ಬಹುತೇಕ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಕಲಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವುದೇ ಇದಕ್ಕೆ ಸಾಕ್ಷಿ. 
ಇಂತಹ ಭಾಗ್ಯವನ್ನು ನಮ್ಮ ಪಾಲಿಗೆ ಕೊಟ್ಟಿದ್ದರಿಂದಲೇ ನಮ್ಮ ಗುರುಗಳು ವಂದನೀಯರಾಗಿದ್ದಾರೆ.
ಕಡೆಯದಾಗಿ, ನಾವು ಗುರುಗಳಿಂದ ಪಡೆದ ವಿದ್ಯೆ ನಮ್ಮ ಸಂಗಾತಿ. ನಾವು ದುಡಿದು ಕೂಡಿಸಿಟ್ಟ ಹಣ, ಒಡವೆ, ಭೂಮಿ, ಕಾಣಿ, ಮನೆ, ಇತ್ಯಾದಿಗಳೆಲ್ಲವೂ ನಾವು ನಮ್ಮದೆಂಬ ಭ್ರಮೆ ಹುಟ್ಟಿಸುತ್ತವೆಯೆ ಹೊರತು ನಮ್ಮದಲ್ಲ. ಬದಲಾದ ರಾಜಕೀಯ ಪರಿಸ್ಥಿತಿ, ಕಳ್ಳರು ,ಕಾಕರು ಕೊನೆಗೆ ನಮ್ಮ ಬಂಧುಗಳೇ ಮೋಸಮಾಡಿ ಹೊಡೆದುಕೊಂಡು ಹೋಗಬಹುದಾದ ಸ್ವತ್ತುಗಳು. ಆದರೆ ಯಾರೂ ಕದಿಯಲಾಗದ, ಕೊಟ್ಟಷ್ಟೂ ವೃದ್ಧಿಸುವ ಸಂಪತ್ತು ವಿದ್ಯೆ ಮಾತ್ರವೇ. ಸರ್ವಜ್ಞ ಹೇಳುವಂತೆ
 
ಒಡಲಡಗಿಹ ವಿದ್ಯೆ ಒಡಗೂಡಿ ಬರುತಿರಲು
ಒಡಹುಟ್ಟಿದವರು, ಕಳ್ಳರು, ನೃಪರದನು
ಪಡೆವರೆಂತೆಂದ ಸರ್ವಜ್ಞ.
 
ಇಂತಹ ಸಂಪತ್ತನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ, ಔಪಚಾರಿಕವಾಗಿ, ಅನೌಪಚಾರಿಕವಾಗಿ, ಜೀವನದ ವಿವಿಧ ಹಂತಗಳಲ್ಲಿ ನಮಗೆ ಕಲಿಸಿ ನಮ್ಮನ್ನು ಇಂದು ಸಮಾಜಮುಖಿಗಳು, ಸತ್ಪ್ರಜೆಗಳು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಮಾನವರನ್ನಗಿ ಉಳಿಸಿದ ಹಿರಿಯ ಜೀವಗಳನ್ನು  ನೆನೆಯುತ್ತಾ ಈ ಗುರುಪೂರ್ಣಿಮೆಯ ದಿನ ವಂದಿಸೋಣ.
 
ಸುದರ್ಶನ.

ಕನ್ನಡಮ್ಮನ ಹರಕೆ kannadammana harake (KU.VEM.PU)

ಕೋಗಿಲೆ ಮತ್ತು ಸೋವಿಯಟ್‌ ರಷ್ಯಾ : ಕನ್ನಡಮ್ಮನ ಹರಕೆ

ಕನ್ನಡಕೆ ಹೋರಾಡು
ಕನ್ನಡದ ಕಂದಾ;
ಕನ್ನಡವ ಕಾಪಾಡು
ನನ್ನ ಆನಂದಾ!
ಜೋಗುಳದ ಹರಕೆಯಿದು
ಮರೆಯದಿರು, ಚಿನ್ನಾ;
ಮರೆತೆಯಾದರೆ ಅಯ್ಯೊ
ಮರೆತಂತೆ ನನ್ನ!

ಮೊಲೆಯ ಹಾಲೆಂತಂತೆ
ಸವಿಜೇನು ಬಾಯ್ಗೆ;
ತಾಯಿಯಪ್ಪುಗೆಯಂತೆ
ಬಲುಸೊಗಸು ಮೆಯ್ಗೆ;
ಗುರುವಿನೊಳ್ನುಡಿಯಂತೆ
ಶ್ರೇಯಸ್ಸು ಬಾಳ್ಗೆ;
ತಾಯ್ನುಡಿಗೆ ದುಡಿದು ಮಡಿ,
ಇಹಪರಗಳೇಳ್ಗೆ!

ರನ್ನ ಪಂಪರ ನಚ್ಚು
ಕನ್ನಡದ ಸೊಲ್ಲು;
ಬಸವದೇವನ ಮೆಚ್ಚು,
ಹರಿಹರನ ಗೆಲ್ಲು;
ನಾರಣಪ್ಪನ ಕೆಚ್ಚು
ಬತ್ತಳಿಕೆ ಬಿಲ್ಲು;
ಕನ್ನಡವ ಕೊಲುವ ಮುನ್
ಓ ನನ್ನ ಕೊಲ್ಲು!

ನೆವವು ಏನಾದರೇನ್,
ಹೊರನುಡಿಯು ಹೊರೆಯೈ;
ನಿನ್ನ ನಾಡೊಡೆಯ ನೀನ್;

ವೈರಿಯನು ತೊರೆಯೈ.
ಕನ್ನಡದ ನಾಡಿನಲಿ
ಕನ್ನಡವ ಮೆರೆಯೈ;
ತಾಯ್ಗಾಗಿ ಹೋರಾಡಿ
ತಾಯ್ನುಡಿಯ ಪೊರೆಯೈ!

ಕನ್ನಡಕೆ ಬಂದಿಳಿಕೆ
ಹಿಡಿಯುತಿಹುದಿಂದು;
ನೀ ನಿದ್ದೆ ಮಾಡಿದರೆ
ಹಾಕುವುದು ಕೊಂದು!
ಎದ್ದೇಳೊ, ಕಂದಯ್ಯ,
ಕತ್ತಿಯನು ಕೊಳ್ಳೊ!
ತಳಿರು ವೇಷದ ರೋಗ
ಬಂದಿಳಿಕೆ, ತಳ್ಳೊ!

ದಮ್ಮಯ್ಯ, ಕಂದಯ್ಯ,
ಬೇಡುವೆನು ನಿನ್ನ;
ಕನ್ನಡಮ್ಮನ ಹರಕೆ,
ಮರೆಯದಿರು, ಚಿನ್ನಾ!
ಮರೆತೆಯಾದರೆ ಅಯ್ಯೊ,
ಮರೆತಂತೆ ನನ್ನ;
ಹೋರಾಡು ಕನ್ನಡಕೆ
ಕಲಿಯಾಗಿ, ರನ್ನಾ!

೫-೭-೧೯೩೬

ಸಾಯುತಿದೆ ನಿಮ್ಮನುಡಿ, ಓ ಕನ್ನಡದ ಕಂದರಿರ! KU.VEM.PU

ಕೋಗಿಲೆ ಮತ್ತು ಸೋವಿಯಟ್‌ ರಷ್ಯಾ : ಸಾಯುತಿದೆ ನಿಮ್ಮನುಡಿ, ಓ ಕನ್ನಡದ ಕಂದರಿರ!

ಸಾಯುತಿದೆ ನಿಮ್ಮನುಡಿ, ಓ ಕನ್ನಡದ ಕಂದರಿರ,
ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ!
ರಾಜನುಡಿಯೆಂದೊಂದು, ರಾಷ್ಟ್ರನುಡಿಯೆಂದೊಂದು,
ದೇವನುಡಿಯೆಂದೊಂದು ಹತ್ತಿ ಜಗ್ಗಿ
ನಿರಿನಿಟಿಲು ನಿಟಿಲೆಂದು ಮುದಿಮೂಳೆ ಮುರಿಯುತಿದೆ,
ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ!
ಕೂಗಿಕೊಳ್ಳಲು ಕೂಡ ಬಲವಿಲ್ಲ: ಮಕ್ಕಳೇ
ಬಾಯ್ಮುಚ್ಚಿ ಹಿಡಿದಿಹರು ಕೆಲವರು ನುಗ್ಗಿ!

ಮೊಲೆವಾಲಿನೊಡಗೂಡಿ ಬಂದ ನುಡಿ ತಾಯಿನುಡಿ;
ಕೊಲೆಗೈದರಮ್ಮನನೆ ಕೊಲಿಸಿದಂತೆ!
ತಾಯ್ ಮುತ್ತು ಕೊಡುವಂದು ನಿಮ್ಮ ಕೆನ್ನೆಯ ಮೇಲೆ
ಮೆರೆಯಿತದು ಪೋಣಿಸಿದ ಮುತ್ತಿನಂತೆ:
ನಿಮ್ಮ ನಲ್ಲೆಯರೊಡನೆ ನಲ್ನುಡಿಯ ನುಡಿವಂದು
ಕನ್ನಡವೆ ಕಲಿಸುವುದು ತುಟಿಗೆ ಬಂದು:
ನಡುವಂದು ನಿಮ್ಮ ಮುದ್ದಿನ ಹಸುಳೆಗಳನೆತ್ತಿ
ಕನ್ನಡವೆ ನಿಮಗೀವುದೊಲವ ತಂದು.

ಇರುವಲ್ಪ ಶಕ್ತಿಯನು ಇರುವಲ್ಪ ದ್ರವ್ಯವನು
ಪರಭಾಷೆ ಮೋಹಕ್ಕೆ ಚೆಲ್ಲಬೇಡಿ;
ಹೂಮಾಲೆ ಸೂಡಿವೆವು ಕೊರಳಿಂಗೆ ಎಂದೆನುತೆ
ನೇಣುರುಳನೆಳೆದಯ್ಯೊ ಕೊಲ್ಲಬೇಡಿ.
ಪರಕೀಯರೆಲ್ಲರಾಶೀರ್ವಾದ ಕರವೆತ್ತಿ
ಹರಸುತ್ತ ಬರುವರೈ ಮೊದಲು ಮೊದಲು;
ಕಡೆಗದುವೆ ಕುತ್ತಿಗೆಗೆ ಕರವಾಳವಾಗುವುದು;
ನಮ್ಮ ನಾಲಗೆ ನಮಗೆ ಕೀಳುತೊದಲು!

ನಿಮ್ಮ ನುಡಿ ನಿಮ್ಮ  ಗಂಡಸುತನಕೆ ಹಿರಿಸಾಕ್ಷಿ;
ಗೆಲವಿದ್ದರದಕೆ ನಿಮಗಿಹುದು ಶಕ್ತಿ.
ನುಡಿ ಮಡಿದರೆಲ್ಲರೂ ಮೂಕ ಜಂತುಗಳಂತೆ;
ಬಾಲವಲ್ಲಾಡಿಪುದೆ ಪರಮ ಭಕ್ತಿ!
ಉತ್ತರದ ಕಾಶಿಯಲಿ ಕತ್ತೆ ಮಿಂದೈತರಲು
ದಕ್ಷಿಣದ ದೇಶಕದು ಕುದುರೆಯಹುದೆ?
ತಾಯಿತ್ತ ಮೊಲೆಹಾಲೆ ನಿಮ್ಮ ಮೈಗಾಗದಿರೆ
ಹೊತ್ತ ಹೊರೆ ಬಲಕಾರಿ ನೆತ್ತರಹುದೆ?

ಕಣ್ದೆರೆಯಿರೇಳಿ, ಓ ಕನ್ನಡದ ಮಕ್ಕಳಿರ,
ಗರ್ಜಿಸುವುದನು ಕಲಿತು ಸಿಂಹವಾಗಿ!
ನಖದಂಷ್ಟ್ರ ಕೇಸರಂಗಳ ಬೆಳೆಸಿ ಹುರಿಗೊಂಡು
ಶಿರವೆತ್ತಿ ನಿಂತು ಕುರಿತನವ ನೀಗಿ.

೩-೧೦-೧೯೩೫

ಸಂಭವಾಮಿ ಯುಗೇ ಯುಗೇ

ಸಂಭವಾಮಿ ಯುಗೇ ಯುಗೇ

ಕ್ಷೀರ ಸಾಗರದ ಮಧ್ಯದಲ್ಲಿ ಶೇಷ ಶಾಯಿಯಾಗಿ ಶ್ರೀ ಲಕ್ಷ್ಮಿಯ ಸೇವೆ ಪಡೆಯುತ್ತಿದ್ದ ಶ್ರೀಮನ್ನಾರಾಯಣನಿಗೆ ಡಿಸ್ಟರ್ಬ್ ಮಾಡುವ ಇರಾದೆ ಜಯ ವಿಜಯರಿಗೆ ಖಂಡಿತಾ ಇರಲಿಲ್ಲ. ತ್ರೇತಾ ದ್ವಾಪರ ಯುಗಗಳಲ್ಲಿ ಧರ್ಮಸಂಸ್ಥಾಪನೆಯನ್ನು ಮಾಡಿದ ನಂತರ ದೀರ್ಘ ವಿಶ್ರಾಂತಿಯಲ್ಲಿದ್ದ ಅವನು ಯಾವ ಕಿರಿ ಕಿರಿಯನ್ನೂ ನಿರೀಕ್ಷಿಸುತ್ತಿರಲಿಲ್ಲ. ಜಾಗತಿಕ ತಾಪಮಾನ ಏರುತ್ತಿರುವ ತೆರದಲ್ಲೇ ಮಾನವರ ಅನಾಚಾರಗಳೂ ಹೆಚ್ಚುತ್ತಿರುವುದು ಅವನಿಗೆ ತಿಳಿಯದ ವಿಷಯವಾಗಿರದಿದ್ದರೂ ಪ್ರಪಂಚವನ್ನು ಹಾಲು ಕಾಯಿಸಿದಂತೆ ತನ್ನಷ್ಟಕ್ಕೆ ತಾನು ಕಾಯ್ದು ಕೊಳ್ಳಲಿ, ಉಕ್ಕಿದಾಗ ನೋಡೋಣ ಎಂಬ ಎಣಿಕೆ ಅವನದು.ಅದೂ ಅಲ್ಲದೆ ದೇವಸ್ಥಾನಗಳ ಹುಂಡಿಯಲ್ಲಿ ಹಣದ ಮಹಾಪೂರವೇ ಹರಿಯುತ್ತಿರಲಾಗಿ ಧರ್ಮಕ್ಕೆ ಚ್ಯುತಿ ಬಂದಿರಲಾರದೆಂದು ಅವನ ಊಹೆ. ಇಷ್ಟಕ್ಕೂ ತಿರುಪತಿಯ ಹುಂಡಿಯಿಂದ ಕುಬೇರನ ಸಾಲಕ್ಕೆ ಹಣ ಚುಕ್ತಾ ಆಗುತ್ತಿರಲು ಒಂದು ರೀತಿಯ ನಿರಾಳವೇ ಅವನಲ್ಲಿತ್ತು.
ಆದರೆ ಅಂದು ಬೆಳ್ಳಂಬೆಳಿಗ್ಗೆಯೇ ಭೂದೇವಿ ಬಹಳ ಅಸ್ತವ್ಯಸ್ತ ವೇಷದಲ್ಲಿ ವಿಷ್ಣುದರ್ಶನಕ್ಕಾಗಿ ಬಂದಳು. ಸ್ವಾಮಿ ಇನ್ನೂ ಮಲಗಿರಬಹುದೆಂದೇ ದ್ವಾರಪಾಲಕರ ಎಣಿಕೆ. ತಾನು ತನ್ನ ಪತಿಯೊಡನೆ ಮಾತುಕತೆ ನಡೆಸಬೇಕಾಗಿದೆಯೆಂದೂ, ತುರ್ತಾಗಿ ತನಗೆ ಬಾಗಿಲು ತೆಗೆಯಬೇಕೆಂದೂ ಆಗ್ರಹಿಸಿದಳು. ಜಯ-ವಿಜಯರಿಗೆ ಧರ್ಮ ಸಂಕಟ. ಬಿಟ್ಟ್ರೂ ತೊಂದರೆ ಬಿಡದೇ ಇದ್ದರೂ ತೊಂದರೆ.’ಇತ್ತ ಹಾವು ಅತ್ತ ಹುಲಿ ’ ಎಂಬ ಪರಿಸ್ಥಿಗೆ ಸಿಲುಕಿ ಹಲುಬಿದರು. ಸನಕಾದಿ ಮುನಿಗಳ ಶಾಪಕ್ಕೆ ತುತ್ತಾಗಿ, ಭೂಭಾರ ಇಳಿಸಲು ದುಷ್ಟಾತಿ ದುಷ್ಟರಾಗಿ ಜನ್ಮ ತಾಳಿ ಹತರಾಗಿದ್ದ ನೆನಪು ಇನ್ನೂ ಮಾಸಿರಲಿಲ್ಲ. ಮುಖ ಮುಖ ನೋಡಿಕೊಂಡು ತಮ್ಮ ಹಣೆ ಬರಹವನ್ನು ಹಳಿಯುತ್ತಾ ಬಾಗಿಲು ತೆಗೆದು ಭೂದೇವಿಯನ್ನು ಒಳಗೆ ಬಿಟ್ಟರು.
ಲಕ್ಷ್ಮಿಯೊಡನೆ ನಸುನಗುತ್ತಾ ಹರಟುತ್ತಿದ್ದ ನಾರಾಯಣ ಭೂದೇವಿಯನ್ನು ಕಂಡು ಧಿಗ್ಗನೆದ್ದು ಕುಳಿತ. ಸಾವಿರಾರು ವರ್ಷಗಳ ಕೆಳಗೆ ಭೂದೇವಿಯ ಸಂಪರ್ಕಕ್ಕೆ ಬಂದಿದ್ದನಾಗಿ , ಅನಂತರದಲ್ಲಿ ಅತ್ತ ತಲೆಯನ್ನೂ ಹಾಕದ ಅಪಚಾರಕ್ಕಾಗಿ ಇನ್ನೇನು ದೋಷಾರೋಪಣೆ ಕಾದಿದೆಯೋ ಎಂಬ ಭಾವನೆಯೊಂದಿಗೆ ಅಪರಾಧೀ ಭಾವವೂ ಕಾಡದಿರಲಿಲ್ಲ. ಅವಳನ್ನು ಕಂಡು ಕರುಣೆಯೂ ಮೂಡಿತು. ನಳನಳಿಸುವ ಭೂರಮೆ ಯಾಗಿ ಅವಳು ಉಳಿದಿರಲಿಲ್ಲ. ಸ್ವಾಗತಿಸಿ ಕುಳ್ಳಿರಿಸಿ ಉಪಚರಿಸಿದ. ಲಕ್ಷ್ಮಿ, ಸವತಿ ಮಾತ್ಸರ್ಯ ತೋರಲಿಲ್ಲ!
ನಿಧಾನವಾಗಿ ನಿಟ್ಟುಸಿರು ಬಿಟ್ಟ ಭೂದೇವಿ ಆಕ್ಷೇಪಿಸುವ ದನಿಯಲ್ಲಿ ಮಹಾಸ್ವಾಮಿಯು ತನ್ನನ್ನು ಮರೆತ ಕಾರಣವಾದರೂ ಏನು? ಯಜಮಾನನಿಲ್ಲದ ಮನೆಯಂತಾಗಿರುವ ಭೂಮಿಯನ್ನು ಕಡೆಗಣಿಸಿದ್ದಾದರೂ ಏಕೆ? ಹೆತ್ತಮ್ಮನನ್ನೇ ಗೋಳು ಹುಯ್ದುಕೊಳ್ಳುವ ಮಕ್ಕಳಂತೆ ಮನುಷ್ಯರು ವರ್ತಿಸಿರುವುದನ್ನು ಕಂಡೂ ಕಾಣದಂತಿರುವುದರ ರಹಸ್ಯವಾದರೂ ಏನು? ಇದೋ ಈ ಲಕ್ಷ್ಮಿಯ ದಾಸರಾಗಿ ತನ್ನ ಒಡಲನ್ನೇ ಬಗೆಯುತ್ತಿದ್ದರೂ, ತನ್ನ ಸುಂದರ ಕೇಶರಾಶಿಗಳಾದ ಕಾಡುಗಳನ್ನು ಧ್ವಂಸಗೊಳಿಸುತ್ತಿದ್ದರೂ, ಆಳಕ್ಕೆ ಕೊಳವೆಗಳನ್ನು ತನ್ನ ಗರ್ಭಕ್ಕಿಳಿಸಿ ತನ್ನ ಜೀವರಸವನ್ನು ಹೀರುತ್ತಿದ್ದರೂ, ಕೆರೆ, ಕಟ್ಟೆ ನದಿಗಳಿಂದ ಮರಳನ್ನು ಬಗೆದು ತನ್ನ ಬಾಯಿ ಪಸೆ ಆರಿಸುತ್ತಿದ್ದರೂ, ಯಾವ ಧರ್ಮ ಕರ್ಮಗಳ ಹಂಗಿಲ್ಲದಂತೆ ಅಕ್ರಮ ಎಸಗುತ್ತಿದ್ದರೂ ದಿವ್ಯ ನಿರ್ಲಕ್ಷ್ಯ ವಹಿಸಿದ ಹಿಂದಿನ ಆಂತರ್ಯವಾದರೂ ಏನು” ಎಂದು ಮೇಘಸ್ಫೋಟದಂತಹ ಪ್ರಶ್ನೆಗಳ ಮಳೆಸುರಿಸಿದಳು.
ಪ್ರಶ್ನಾವಳಿಗಳ ಧಾಳಿಗೆ ತತ್ತರಿಸಿದ ನಾರಾಯಣ ಸಮಜಾಯಿಷಿ ಕೊಡಲು ತಡಬಡಾಯಿಸುತ್ತಿರುವುದನ್ನು ಮನಗಂಡು ಭೂದೇವಿ ತನ್ನ ಹಿಡಿತ ಬಿಗಿಗೊಳಿಸತೊಡಗಿದಳು. ಆಕ್ಷೇಪಣೆಯಲ್ಲಿ ತನ್ನ ಹೆಸರೂ ಸೇರಿದ್ದಕ್ಕೆ ಲಕ್ಷ್ಮಿಗೆ ಅಸಮಾಧಾನವಾಯ್ತು. ಅದರೆ ಸುಮ್ಮನಿದ್ದಳು.ಭೂದೇವಿ ಮುಂದುವರಿದು.,
“ದಾಮೋದರನೇ ಈ ಭೂಮಿಯ ಮೇಲಿನ ಪ್ರಾಣಿಗಳೆಲ್ಲರೂ ನನ್ನ ಮಕ್ಕಳೇ.. ಅವರು ಮಾಡುವ ಕೆಲಸ ಕೆಲವೊಮ್ಮೆ ತುಂಟಾಟ, ಕೆಲವೊಮ್ಮೆ ಪುಂಡಾಟದಂತೇ ಕಾಣುವುದು. ಆದರೆ ಈಗ ಮಿತಿ ಮೀರಿದೆ. ಮನುಷ್ಯವರ್ಗದ ಮಕ್ಕಳುಗಳು ನನ್ನ ಬೇರೆ ವರ್ಗದ ಪ್ರಾಣಿ-ಪಕ್ಷಿವರ್ಗದ ಮಕ್ಕಳನ್ನು ಉಳಿಯಗೊಡುತ್ತಿಲ್ಲ. ಸಬಲರಾದ ಇವರುಗಳು ದುರ್ಬಲರಾದ ಅವರಗಳನ್ನು ಕೀಚಕರೋಪಾದಿಯಲ್ಲಿ ಕಾಡುತ್ತಿದ್ದಾರೆ. ಹೋಗಲಿ ತಮ್ಮ ತಮ್ಮಲ್ಲೇ ಸೌಹಾರ್ದದಿಂದಿದ್ದಾರೋ ಎಂದರೆ ಅದೂ ಇಲ್ಲ. ಕಿತ್ತಾಡುತ್ತಿದ್ದಾರೆ,. ನನ್ನ ಗುಡುಗು, ಸಿಡಿಲನಂಥ ಬೈಗುಳಕ್ಕೂ ಬೆಲೆ ಇಲ್ಲ, ಭೊರ್ಗರೆದು ಪ್ರವಾಹವಾಗುವಂತೆ ಅತ್ತರೂ ಲೆಕ್ಖಕ್ಕಿಲ್ಲ. “ಹೆತ್ತಮ್ಮನನ್ನು ತಿಂದೋರು ಅತ್ತ್ಯಮ್ಮನನ್ನು ಬಿಟ್ಟಾರ್ಯೇ” ಎಂಬ ಗಾದೆಯೇ ಇಲ್ಲವೇ. ತಮ್ಮ ನಿಜ ತಾಯಿಗೇ ಮರ್ಯಾದೆ ಕೊಡುತ್ತಿಲ್ಲ ಇನ್ನು ಮಹಾತಾಯಿಯಾದ ನನಗೆಲ್ಲಿಯದು? ಅಪ್ಪನಾದ ನೀನೇ ಇಲ್ಲದ ಮೇಲೆ ನನಗೆಲ್ಲಿಯ ಮರ್ಯಾದೆ? ? ಇದಷ್ಟೇ ಆಗಿದ್ದಲ್ಲಿ ಹೋಗಲಿ ಎಂದೆನ್ನಬಹುದಿತ್ತು. ಇತ್ತೀಚೆಗೆ ಹೊಸ ಕುಚೇಷ್ಟೆ ಶುರು ಹಚ್ಚಿಕೊಂಡಿದ್ದಾರೆ. ಅದನ್ನು ಮಾತ್ರ ನನ್ನಿಂದ ಸರ್ವಥಾ ಸಹಿಸಲು ಸಾಧ್ಯವಿಲ್ಲ. ಏಳು, ಎದ್ದೇಳು, ಏನಾದರೂ ವ್ಯವಸ್ಥೆ ಮಾಡು ಎಂದು ಹೇಳುತ್ತಿರುವಷ್ಟರಲ್ಲಿ ಜಯ-ವಿಜಯರನ್ನು ಆಚೆ-ಈಛೆ ತಳ್ಳಿ ಬಾಗಿಲನ್ನು ಧಡಾರನೆ ದೂಡಿಕೊಂಡು ಬ್ರಹ್ಮ ಒಳಗೆ ಬಂದ! ಬಿದ್ದೆದ್ದ ಜಯ ವಿಜಯರು ಮೈಮೇಲಿನ ಧೂಳು ಕೊಡವಿಕೊಂಡು ಎಲಾ ಇವನಾ!! ಮೀಸೆ ಗಡ್ದ ಬಿಳಿಯಾದರೂ ಕೈ ಕಸುವಿಗೇನೂ ಕಡಿಮೆಯಿಲ್ಲ ಎಂದು ಯೋಚಿಸಿಕೊಂಡರು!
ಸೃಷ್ಟಿಕಾರ್ಯವನ್ನಷ್ಟೇ ಮಾಡಿಕೊಂಡು, ಜೀವಿಗಳೆಂಬೊ ಬೊಂಬೆಯ ಮಾಡಿ ಅವುಗಳ ಹಣೆಬರಹ ಬರೆದು, ಭೂಲೋಕಕ್ಕೆ ಸಾಗ ಹಾಕುತ್ತಿದ್ದ ಬ್ರಹ್ಮ ಸಿಟ್ಟಾದದ್ದೇ ಕಡಿಮೆ. ಅಂಥದ್ದರಲ್ಲಿ ಇಂದು ಹೀಗೆ ಬರಬೇಕಾದರೆ ….. ಎಂದು ವಿಷ್ಣು ಯೋಚಿಸುತ್ತಿರುವಾಗಲೇ, ಮುಖ ಕೆಂಪು ಮಾಡಿಕೊಂಡು, ಗಡ್ಡ ಮೀಸೆ ಕುಣಿಸುತ್ತ ಬ್ರಹ್ಮ ಹೇಳತೊಡಗಿದ,.
“ಕೇಶವಾ ಅವೇಳೆಯಲ್ಲಿ ಬಂದಿದ್ದಕ್ಕೆ ಕ್ಷಮಿಸು.ಈಗ್ಗೆ ಕೆಲವು ತಿಂಗಳುಗಳಿಂದ ನನ್ನ ಕೆಲಸ ತೀವ್ರವಾಗಿ ಏರುಪೇರಾಗಿದೆ. ಈ ರೀತಿಯ ತೊಂದರೆ ಮೊದಲು ನನ್ನ ಗಮನಕ್ಕೆ ಕೆಲವು ವರ್ಷಗಳ ಹಿಂದೆಯೇ ಬಂದಿತ್ತು. ಆದರೆ ಅದು ಎಲ್ಲೋ ನನ್ನ ಭ್ರಮೆ ಅಥವಾ ಆಯಾಸದಿಂದಾದ ಅಚಾತುರ್ಯವೆಂದು ತಳ್ಳಿ ಹಾಕಿದ್ದೇ ಸುಮ್ಮನೆ ಬಿಟ್ಟಿದ್ದೆ. ಮತ್ತೆ ಕೆಲವು ಕಾಲ ಏನೂ ಸಮಸ್ಯೆ ಇರಲಿಲ್ಲ. ಈಗ ಮತ್ತೆ ಬಹಳ ಕ್ಲಿಷ್ಟ ಸಮಸ್ಯೆಯಾಗಿ , ಪೆಡಂಭೂತವಾಗಿ ನಿಂತುಬಿಟ್ಟಿದೆ. ಇದೋ ನೋಡು, ಹುಟ್ಟು ಹಣೆ ಬರಹ ದಾಖಲಿಸುವ ಪುಸ್ತಕ. ನನಗೆ ಅರಿವೇ ಇಲ್ಲದೆ ಎಷ್ಟೊಂದು ಎಂಟ್ರಿ ಗಳು- ನೊಂದಾವಣೆ ಯಾಗಿರುವ, ಆಗುತ್ತಿರುವ ಜೀವಗಳು! ನನ್ನ ಕೆಲಸದ ಪ್ರಕಾರ ಜೀವಿಗಳ ಕರ್ಮ ಕಾಂಡ, ಪಾಪ ಪುಣ್ಯ, ಜೀವನ ಚಕ್ರದಲ್ಲಿ ತಿರುಗಿಬಂದ ಅವರ ಜನಮಗಳ ಸಂಖ್ಯೆ, ಇವನ್ನೆಲ್ಲಾ ಪರಿಗಣಿಸಿ ಮುಂದಿನ ಜನ್ಮದ ರೂಪು ರೇಷೆ (ಫ಼್ಲೋ ಚಾರ್ಟ್) ತಯಾರಿಸಿ ಅದಕ್ಕೆ ಸೂಕ್ತ ಆಕಾರ ಕೊಟ್ಟು ಹಣೆ ಬರಹ ಬರೆದು, ಜನ್ಮಕ್ಕೆ ಹೊಂದಿಕೆ ಯಾಗುವ ಆತ್ಮವನ್ನು ಚಿತ್ರಗುಪ್ತ-ಯಮಧರ್ಮರು ನಿಯೋಜಿಸಿದ ನಂತರ ಆ ಜೀವಿಯು ಭೂಮಿಯಲ್ಲಿ ತನ್ನ ಆಟ ಆಡಲು ತೆರಳುವುದು ನಿನಗೆ ಗೊತ್ತೇ ಇದೆ. ಆದರೆ ನನ್ನ ಅರಿವಿಗೆ ಬಾರದೆ ಧರೆಯಲ್ಲಿರುವ ಜೀವಿಗಳ ಸಂಖ್ಯೆ ನೋಡು, ಅವುಗಳ ಪಟ್ಟಿ ನೋಡು! ಇವು ಯಾವುದರ ಪೂರ್ವಾ ಪರವೂ ನನಗೆ ತಿಳಿಯದು. ಸರಿ ಹಣೆ ಬರಹ ಬರೆಯೋಣವೆಂದರೆ ಆಯುಸ್ಸು ಸೊನ್ನೆಯಿಂದ ಶುರು ಆಗುತ್ತಿಲ್ಲ. ಎಲ್ಲೆಲಿಂದಲೋ ಶುರು ಆಗುತ್ತಿವೆ. ಒಂದದಕ್ಕೂ ಒಂದೊಂದು ವಿಭಿನ್ನ .ಇವರುಗಳ ಆಯಸ್ಸು ನಿರ್ಧರಿಸುವುದೇ ಕಷ್ಟಕರವಾಗಿಬಿಟ್ಟಿದೆ. ನನ್ನ ಅರಿವನ್ನೂ ಮೀರಿದೆ ಇವುಗಳ ಜೀವನದ ಪಟ. ಕೆಲವರಿಗೆ ಯಾವು ಯಾವುದೋ ಖಾಯಿಲೆ ಕಸಾಲೆ,ಕೆಲವರ ಆಯುಷ್ಯ ರೇಖೆ ಮುಗಿಯುತ್ತಲೇ ಇಲ್ಲ- ಅನಂತವಾಗಿರುವಂತೆ ತೋರುತ್ತಿದೆ. ಹೇ ಅನಂತಾ, ನಿನ್ನ ಹೆಸರಿಗೇ ಸಂಚಾಕಾರ ಬರುವಂತಿದೆ! ಈ ಜೀವಿಗಳಿಗೆಲ್ಲಾ ನಿಯೋಜಿಸುವಷ್ಟು ಆತ್ಮಗಳ ದಾಸ್ತಾನು ನನ್ನಲ್ಲಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ, ನನ್ನ ಕೆಲಸಕ್ಕೇ ಸಂಚಾಕಾರ ಬಂದಿದೆ. ನಾನು ನಿರುದ್ಯೋಗಿ ಆಗಬಹುದು ಅಥವಾ, ನೀನು ಇದಕ್ಕೊಂದು ಪರಿಹಾರ ತೊರದಿದ್ದಲ್ಲಿ, ಹೈರಾಣಾಗಿ ನಾನೇ ಸ್ವಯಂ ನಿವೃತ್ತಿ ತೆಗೆದುಕೊಳ್ಳಬೇಕಾಗಬಹುದು” ಎಂದು ಅಲವತ್ತುಕೊಂಡ.
ವಿಷ್ಣು, ನೆಟ್ಟಗೆ ಕುಳಿತು, ” ಅಯ್ಯಾ ಬ್ರಹ್ಮ, ನೀನು ನನ್ನ ನಾಭಿಯಿಂದ ಜನಿಸಿ ಪದ್ಮನಾಭನೆಂಬ ಸುಂದರ ಹೆಸರು ನನಗೆ ಬರುವಂತೆ ಮಾಡಿದ್ದೀಯೆ. ನನ್ನ ಈ ಜಗನ್ನಿಯಾಮಕ ಕಾರ್ಯದಲ್ಲಿ ಸೃಷ್ಟಿಯ ವಿಭಾಗವನ್ನು ಎಷ್ಟೋ ಕಲ್ಪಗಳಿಂದ ದಕ್ಷವಾಗಿ ನಡೆಸಿಕೊಂಡು ಬರುತ್ತಿದ್ದೀಯೆ. ಆಗಾಗ ಕೆಲವು ಅಪಾತ್ರರಿಗೆ ಕೇಳಿದ ವರಗಳನ್ನು ಹಿಂದು-ಮುಂದು ನೋಡದೆ ಕರುಣಿಸಿ ಸಮಸ್ಯೆಗೆ ಸಿಕ್ಕಿದ್ದನ್ನು ಬಿಟ್ಟರೆ ನೀನು ಮಹಾ ನಿರುಪದ್ರವಿ. ನಿನ್ನಿರುವೇ ನಮಗೆ ಗೊತ್ತಿರುವುದಿಲ್ಲ; ಹಾಗಿರುತ್ತೀಯ. ನಿನಗೆ ತಿಳಿಯದೆ ನಡೆದಿರುವ, ನಿನಗೇ ಕೋಪ ತರಿಸುತ್ತಿರುವ ಈ ಪರಿಸ್ಥಿತಿಯಾದರೂ ಏನದು. ಹಿಂದೆ ರಕ್ತ ಬಿಜಾಸುರನಿಗೆ ಕೊಟ್ಟಂಥ ವರದಂತೆ ಇನ್ಯಾರಿಗೂ ಏನೂ ಕೊಟ್ಟಿಲ್ಲ ತಾನೆ? ಎಂದು ಹೊಗಳುತ್ತಲೇ ಕೆದಕಿದ.
ಇಲ್ಲವೆಂದು ತಲೆಯಾಡಿಸುತ್ತಾ..” ಅಯ್ಯಾ ಪುರುಷೋತ್ತಮ, ಅಂಥಾ ತಪಸ್ಸನ್ನು ಮಾಡಬಲ್ಲ ಯೋಗ್ಯತೆ ಇರುವ ಯಾವ ಜೀವಿಯ ಸೃಷ್ಟಿಯೂ ಇತ್ತೀಚೆಗೆ ತನ್ನಿಂದ ಅಗಿಲ್ಲ..ಇನ್ನು ವರಕೊಡುವುದೆಲ್ಲಿಂದ…”. ಎಂದು ಹೇಳುತ್ತಿರುವಾಗಲೇ ಯಮ, ಯಮದೂತರು, ಚಿತ್ರಗುಪ್ತ ಎಲ್ಲರೂ ಓಡೋಡುತ್ತಾ, ಏದುಸಿರು ಬಿಡುತ್ತಾ ಒಳಬಂದರು. ಬ್ರಹ್ಮನಿಂದ ತಳ್ಳಿಸಿಕೊಂಡಾದ ಮೇಲೆ ಯಾರನ್ನೂ ತಡೆಯುವ ಸಾಹಸ ಆ ದ್ವಾರಪಾಲಕರು ಮಾಡಲಿಲ್ಲ ಪಾಪ!.
ಇದೇನು ಹೊಸ ತಲೆನೋವು ಬಂತಪ್ಪಾ.. ನಾನು ಈಗಾಗಲೇ ಒಂಭತ್ತು ಅವತಾರಗಳನ್ನು ಎತ್ತಿ ಭೂಭಾರ ಇಳುಹಿದ್ದಾಯ್ತು. ಇನ್ನೇನು ಸ್ವಲ್ಪ ಆರಾಮವಾಗಿರೋಣ ಎಂದರೆ ಈ ದೇವ ದೇವತೆಗಳು ಒಂದಲ್ಲಾ ಒಂದು ಕಿರಿ ಕಿರಿ ತಂದಿಡುತ್ತಿದ್ದಾರೆ. ಛೇ, ಇವರಿಗೆ ಕರ್ತವ್ಯ ದಕ್ಷತೆ, ಕಾರ್ಯ ಕ್ಷಮತೆ ಒಂದೂ ಇಲ್ಲ. ಮೇಲ್ವಿಚಾರಕರಿಲ್ಲದ ಕಚೇರಿಯಂತಾಗಿದೆ ಈ ವಿಶ್ವ. ಎಷ್ಟೆಲ್ಲ ತಯಾರಿ ಕೊಟ್ಟು ಅನುಭವಸ್ಥರನ್ನಾಗಿ ಮಾಡಿದರೂ ತಮ್ಮ ಪ್ರೋಟೊಕಾಲ್ ನಿಂದ ಅಚೆಗೆ ಯೋಚಿಸುವುದೇ ಇಲ್ಲ!! ಎಲ್ಲಕ್ಕೂ ನಾನೇ ತಲೆ ಕೊಡಬೇಕಾಗಿದೆ ಎಂದು ಚಿಂತಿಸುತ್ತಲೇ ಈ ಹೊಸಬರ ಅಹವಾಲು ಕೇಳಲು ಕಿವಿಯಾಗತೊಡಗಿದ.
ಮೊದಲು ಮಾತನಾಡಿದವನು ಯಮದೂತ! ಅವನ ಫೀರ್ಯಾದು ಯಮ ಧರ್ಮನ ಮೇಲೇ ಇತ್ತು. ” ಸ್ವಾಮಿ ನಿಮಗೆ ತಿಳಿಯದ್ದೇನಿದೆ? ಜೀವಿಗಳು ಜನ್ಮ ತಾಳಿದ ತಕ್ಷಣ ಅವರ ಜೀವಿತದ ಕಾಲ, ವೇಳಾಪಟ್ಟಿ, ಬ್ರಹ್ಮದೇವರಿಂದ ನಮಗೆ ರವಾನೆಯಾಗುವುದು ನಿಜವೇ. ಆಯಾ ಕಾಲಕ್ಕೆ , ಅಯುಷ್ಯಕ್ಕೆ ಅನುಗುಣವಾಗಿ ನಾವು ಪ್ರತೀ ದಿನಾಂಕದಲ್ಲೂ ಯಾರ್ಯಾರನ್ನು ಹೊತ್ತು ತರಬೇಕೆಂಬುದು ನೋಡಿಕೊಂಡು, ಅವುಗಳು ತಮ್ಮ ಸ್ಥೂಲ ರೂಪವನ್ನು ತ್ಯಜಿಸಿದ ನಂತರ ಸೂಕ್ಷ್ಮರೂಪವನ್ನು ಎಳೆದು ತರುವುದಲ್ಲವೇ ನಮ್ಮ ಕೆಲಸ?ನಮ್ಮ ಕೆಲಸದ ಪಾಳಿಯ ಪ್ರಕಾರ ಇಂತಿಂಥಾ ದಿನ ಇಷ್ಟಿಷ್ಟೇಂದು ಸೂಕ್ಷ್ಮ ರೂಪದ ಜೀವಿಗಳನ್ನು ಎಳೆದು ತರುತ್ತಿದ್ದೆವು. ಪಾಳಿಯ ನಂತರ ನಮಗೂ ವಿಶ್ರಾಂತಿ ಬೇಡವೇ? ಇತ್ತೀಚೆಗೆ ಲೆಕ್ಖಕ್ಕೇ ಇಲ್ಲದ ಎಷ್ಟೊ ಜೀವಿಗಳು ತಮ್ಮ ಹೊರ ಶರೀರವನ್ನು ಅಕಾಲದಲ್ಲಿ ತ್ಯಜಿಸುತ್ತಿವೆ. ಇದರಿಂದ ನಮಗೆ ಹೆಚ್ಚುವರಿ ಕೆಲಸ ಬಿದ್ದಿದೆ. ಅದೂ ಅಲ್ಲದೆ ಈ ಹೊಸ ಬಗೆಯ ಸೂಕ್ಷ್ಮ ಶರೀರಿಗಳು ನಮಗೂ ನವನವೀನ. ನೋಡಲು ಬಹುತೇಕ ಮನುಷ್ಯರಂತೆ ಕಂಡರೂ ಪೂರ್ತಿ ಅವರಲ್ಲ. ಅದೂ ಅಲ್ಲದೆ ನಮ್ಮ ನಿಯಮಗಳಿಗನುಸಾರವಾಗಿ ಅವರು ನಡೆಯದೆ ಹೇಳಲಾದದಷ್ಟು ಕಷ್ಟಕೋಟಲೆ ಕೊಡುತ್ತಾರೆ. ನಮ್ಮ ಪಾಶಕ್ಕೆ ಸಿಕ್ಕದೆ ಕೋಡಂಗಿಗಳಂತೆ ತಪ್ಪಿಸಿಕೊಳ್ಳುತ್ತವೆ. ಅವುಗಳನ್ನು ಹಿಡಿದು ಹೆಡೆಮುರಿ ಕಟ್ಟಿ ತರುವಷ್ಟರಲ್ಲಿ ನಮ್ಮ ಹೆಣವೇ ಬಿದ್ದು ಹೋಗಿರುತ್ತದೆ. ಸಾವಿತ್ರಿಯ ಗಂಡ ಸತ್ಯವಾನನ ನಂತರದಲ್ಲಿ ನಾವಿಷ್ಟು ಪರಿಪಾಟಲು ಪಟ್ಟಿರಲೇ ಇಲ್ಲ. ಅದಾದರೂ ಎಂಥ ಶ್ರೇಯಸ್ಕರ ಅನುಭವವಾಗಿತ್ತು. ಉಳಿದ ಪ್ರಾಣಿಗಳಲ್ಲೂ ಆಗಾಗ ಈ ರೀತಿ ಆಗುವುದುಂಟು ;ಅದರೆ ಅವು ಇಷ್ಟೊಂದು ಹೈರಾಣ ಮಾಡುವುದಿಲ್ಲ. ಈ ಕೆಲಸ ಸಾಕೆನಿಸಿದೆ. ನಾವೆಲ್ಲ ಕೂಡಿ ರಾಜಿನಾಮೆ ಕೊಡಬೇಕೆಂದಿದ್ದೇವೆ” ಎಂದ ಒಂದೇ ಉಸಿರಿಗೆ.
ವಿಷ್ಣುವಿಗೆ ಬ್ರಹ್ಮನ ಮೇಲೆ ಅನುಮಾನ ಹೆಚ್ಚಾಯ್ತು. ಇವನೆಲ್ಲೊ ಮತ್ತೊಬ್ಬ ಹಿರಣ್ಯ ಕಶ್ಯಪುವಿಗೋ ಇಲ್ಲ ರಕ್ತಬೀಜಾಸುರನಿಗೋ ವರವಿತ್ತು ಪರಪಟ್ಟು ಮಾಡಿಕೊಂಡಿರಬೇಕೆಂದೇ ಅನುಮಾನದಿಂದ ಅವನತ್ತ ನೋದಿದ. ಬ್ರಹ್ಮನ ಮುಖದಲ್ಲಿ ದುಗುಡ ಮಡುಗಟ್ಟಿತ್ತೇ ವಿನ್ಃ ಅಪರಾಧಿ ಮನೋಭಾವ ಕಾಣಲಿಲ್ಲ.
ಸರಿ, ಯಮಧರ್ಮನ ಕಡೆಗೆ ತಿರುಗಿದ ವಿಷ್ಣು ನಿನ್ನದೇನು ಹೇಳಿಬಿಡು; ಅದೂ ಕೇಳಿ ಬಿಡುತ್ತೇನೆ ಎಂಬಂತೆ ಸನ್ನೆ ಮಾಡಿದ.
ದೊಡ್ದದೊಂದು ಉಸಿರೆಳೆದುಕೊಂಡ ಯಮಧರ್ಮ ತನ್ನನ್ನು ದೂರುವ ತೆರದಲ್ಲಿ ಫೀರ್ಯಾದು ಮಾಡಿದ ಯಮಭಟರ ಕಡೆಗೂ,ಎಲ್ಲ ತಪ್ಪೂ ಬ್ರಹ್ಮನದೇ ಎಂಬ ಅನುಮಾನದಿಂದ ಬ್ರಹ್ಮನ ಕಡೆಗೂ ನೋಡಿ ತನ್ನ ಪ್ರವರ ಶುರು ಹಚ್ಚಿಕೊಂಡ. ” ಮಹಾದೇವ, ಇವರುಗಳು ಹೇಳೀದ್ದೆಲ್ಲಾ ನೀನೇ ಕೇಳಿರುವೆ.ಇತ್ತೀಚೆಗೆ ಯಮಭಟರು ಎಲ್ಲಾ ವಿಷಯಕ್ಕೂ ನನ್ನನ್ನೇ ಕರೆಯುವ ಅಭ್ಯಾಸ ಮಾಡಿಕೊಂಡುಬಿಟ್ಟಿದ್ದಾರೆ. ಇದೇನು ಅವರ ಕಾರ್ಯಕ್ಷಮತೆ ಕಡಿಮೆಯಾಗಿರುವ ಕುರುಹೋ ಇಲ್ಲಾ ಕರ್ತವ್ಯ ದಕ್ಷತೆ ಕ್ಷೀಣಿಸುತ್ತಿರುವ ಸೂಚನೆಯೊ,ಇಲ್ಲ ನನ್ನ ನಿರ್ದೇಶನ, ನಿಭಾವಣೆಗಳು ನಿರ್ನಾಮ ಅಗುತ್ತಿರುವ ಲಕ್ಷಣವೋ, ಅಥವಾ ಈ ಜೀವಿಗಳು ನಿಜವಾಗಿಯೂ ನಮ್ಮ ಪಟ್ಟಿಗೆ ಜಗ್ಗದ ವಿಲಕ್ಷಣ ಪ್ರಭೇದವೋ ಒಂದೂ ತಿಳಿಯದಾಗಿದೆ. ಈ ಯಮ ಭಟರು ನನ್ನನ್ನು ಕರೆದಾಗ ಹೋಗಿ ಆ ವಿಲಕ್ಷಣ ಜೀವಿಗಳನ್ನು ಹಿಡಿಯುವುದು ಒಂದು ಪ್ರಯಾಸಕರವಾದ ಕೆಲಸವಾಗಿಬಿಟ್ಟಿದೆ. ಅವುಗಳನ್ನು ಕೋಳಿ, ನಾಯಿ, ಹಂದಿಗಳಂತೆ ಅಟ್ಟಾಡಿಸಿಕೊಂಡು ಹಿಡಿಯುವುದರಲ್ಲಿ ಸಾಕು ಬೇಕಾಗಿಹೋಗಿದೆ. ನಾವು ಪಡುವ ಪರಿಪಾಟಲಿಗೆ ನನಗೇ ಒಮ್ಮೊಮ್ಮೆ ನಗು ಬರುವಂತಾಗುತ್ತದೆ.ಯಾರಾದರೂ ನೋಡಿಬಿಟ್ಟಲ್ಲಿ ನಗೆಪಾಟಲಿಗೀಡಾಗಿ ನನ್ನ ಮೇಲಿನ ಭಯ ಭಕ್ತಿಗಳನ್ನು ಎಲ್ಲಿ ಕಳೆದುಕೊಳ್ಳುವುನೋ ಎಂಬ ಚಿಂತೆಯೂ ಕಾಡುತ್ತಿದೆ. ದೇವಾ, ಇವು ಬಹಳ ಕುತಂತ್ರಿ ಜೀವಿಗಳು.ಅಷ್ಟೆಲ್ಲಾ ಕಷ್ಟ ಪಟ್ಟು ಹೆಡೆಮುರಿಕಟ್ಟೀ ಹಿಡಿದು ತಂದು ವಿಚಾರಣೆಗೆ ನಿಲ್ಲಿಸಿದೆವೋ,ಈ ಚಿತ್ರಗುಪ್ತ ಕೈಕೊಡುತ್ತಾನೆ. ಅವನ ದಫ್ತರಿನ ದೊಡ್ಡ ಪುಸ್ತಕಗಳಲ್ಲಿ ಅವುಗಳ ನಮೂದೇ ಇರುವುದಿಲ್ಲ. ನಾವೇ ಕಪಿಗಳಂತೆ ಮಿಕ ಮಿಕ ನೋಡುವುದಾಗುತ್ತದೆ. ಆ ಕಟಕಟಯಲ್ಲಿ ನಿಂತು ನಮ್ಮನ್ನೇ ನೋಡಿ ಗಹಗಹಿಸಿ ನಗುತ್ತವೆ.ನಮ್ಮನ್ನೇ ಪರಿಹಾಸ್ಯ ಮಾಡುತ್ತವೆ. ಧರ್ಮಪಾಲನೆಗೆ ನಿಂತ ನಾನು ಅವುಗಳ ಮೇಲಿನ ದಾಖಲೆ ಇಲ್ಲದೆ ಅಪವಾದ ಹೊರಿಸುವುದಾದರೂ ಹೇಗೆ, ವಿಚಾರಣೆ ಮಾಡುವುದಾದರೂ ಎಲ್ಲಿಂದ. ಭೋಲೋಕದಲ್ಲಿದಾಗ ಅವು ಮಾಡಿದ ಕುಚೇಷ್ಟೆಗಳೇನು ಕಡಿಮೆಯಿಲ್ಲ. ನ್ಯಾಯಯುತ , ಸಾಮಾನ್ಯ ಜೀವಿಗಳಿಗೆ ಇವು ಕೊಡುತ್ತಿರುವ ಕೋಟಲೆಗಳು ಒಂದೆರೆಡಲ್ಲ. ಆದರೆ ನಮಗೆ ಸೂಕ್ತ ದಾಖಲೆಗಳೇ ಇಲ್ಲದೆ ನಾವು ಮುಂದುವರಿಯುವುದಾದರೂ ಹೇಗೆ. ನಮ್ಮ ನಿಜ ಮಾನವರನ್ನು ನಾವು ಕಾಯಲಾಗದಂತಾಗಿದೆ.ನನಗೆ ಬರುವ ಸಿಟ್ಟಿಗೆ ಕಾದ ಎಣ್ಣೆ ಕೊಪ್ಪರಿಗೆಯಲ್ಲಿ ಎಸೆಯುವ ಬಯಕೆ ಆಗುತ್ತಿದೆ. ಕಷ್ಟಪಟ್ಟು ಗುರುತು ಹಿಡಿದು ಅವರ ಕರ್ಮ ಕಾಂಡಗಳ ಪಟ್ಟಿ ತೆಗೆದೆವೋ,ಅದರಲ್ಲಿನ ದಿನ, ಮಾಸ, ವಾರ, ತಿಥಿ, ವೇಳೆ ಇವೆಲ್ಲ ತಾಳೆ, ಹೊಂದಾಣಿಕೆ ಅಗುವುದಿಲ್ಲ. ಎಲ್ಲ ಅಯೋಮಯ. ನಮಗೇ ತಿರುಗಿ ಸವಾಲು ಹಾಕುತ್ತವೆ. ಈ ಚಿತ್ರಗುಪ್ತನಿಗೂ ಅರುಳು ಮರುಳೆಂದು ಕಾಣುತ್ತದೆ. ಒಟ್ಟಿನಲ್ಲಿ ನಾನೇ ನರಕ ವಾಸಿಯಾಗಿಬಿಟ್ಟಿದ್ದೇನೆ ನೋಡು. ಸಾವಿತ್ರಿ, ಸತ್ಯವಾನ, ನಚಿಕೇತ, ಧರ್ಮರಾಯ,ಭೀಷ್ಮನೇ ಮೊದಲಾದ ಮಹಾನ್ ವ್ಯಕ್ತಿಗಳೊಡನೆ ವ್ಯವಹರಿಸಿದ ನಾನು ಯಕಃಶ್ಚಿತ್ “ಬೇವಾರ್ಸಿ”ಗಳಂತಿರುವ ಈ ಸೂಕ್ಷ್ಮಜೀವಿಗಳಿಂದ ಅಪಹಾಸ್ಯಕ್ಕೊಳಗಾಗುವುದೆಂದರೇನು? ಇವರುಗಳನ್ನು ನಿಯಂತ್ರಿಸಲಾಗದೆ ಲೋಕದ ಪರಿಹಾಸ್ಯಕ್ಕೆ ಗುರಿಯಗುವೆನೆಂಬುವುದೇ ನೋವಿನ ಸಂಗತಿ ” ಎಂದೆಂದು ನಿಲ್ಲಿಸಿದ. ’ಬೇವಾರ್ಸಿ’ ಅಂತೇಕೆ ಅವುಗಳನ್ನು ಕರೆದ ಎಂದು ವಿಷ್ಣು ಚಿಂತಿಸುತ್ತಿರವಲ್ಲಿ…
ತನ್ನ ಕರ್ತವ್ಯ ಪ್ರಜ್ಞೆಗೇ ಕೊಡಲಿಯೇಟು ಹಾಕಿದ ಯಮಧರ್ಮನನ್ನು ಮನದಲ್ಲೇ ನಿಂದಿಸುತ್ತಾ,, ಚಿತ್ರಗುಪ್ತ ತನ್ನ ಅಹವಾಲನ್ನೂ ಆಲಿಸಬೇಕೆಂದು ಸಣ್ನದನಿಯಲ್ಲಿ ಕೋರಿದ. ಎಂಥೆಂಥಾ ಹೇಮಾಹೇಮಿ ವ್ಯಕ್ತಿಗಳನ್ನೂ ಬಿಡದೆ ನಿರ್ದಾಕ್ಷಿಣ್ಯವಾಗಿ ಅವರುಗಳ ಧರ್ಮ-ಕರ್ಮಗಳನ್ನು ಬಯಲಿಗೆಳೆದು ಬೆತ್ತಲು ಮಾಡುತ್ತಿದ್ದ ಚಿತ್ರಗುಪ್ತ ಈಗ ತನ್ನ ಪರಿಣತಿಯನ್ನೇ ಸಂದೇಹಿಸುವ ಪರಿಸ್ಥಿತಿಯಲ್ಲಿ ಸಿಲುಕಿದ್ದ. ಈ ಲೋಕ ಸೃಷ್ಟಿಯಾಗಿ ಹಲವಾರು ಬ್ರಹ್ಮ ಕಲ್ಪಗಳು ಕಳೆದಿದ್ದರೂ, ಲೆಕ್ಖವಿಲ್ಲದಷ್ಟು ಜೀವಿಗಳ ಜೀವನದ ಲೆಕ್ಖಾಚಾರವನ್ನು ಕರಾರವಾಕಕಾಗಿ ಸೂಪರ್ ಕಂಪ್ಯೂಟರ್ನಂತೆ ದಾಖಲಿಸಿ ,ಬೇಕೆಂದಾಗ ಮಿಂಚಿನೋಪಾದಿಯಲ್ಲಿ ಹೊರಗಳೆದು ಪ್ರಸ್ತುತಪಡಿಸುತ್ತಿದ್ದ ತಾನು ಇತ್ತೀಚಿನ ಕೆಲವೇ ವರ್ಷಗಳಲ್ಲಿ ಈ ರೀತಿ ತಲೆ ಬುಡಗಳು ಹೊಂದಾಣಿಕೆಯಾಗದಂತೆ ದಾಖಲಿಸುವುದೆಂದರೇನು? ತಾನು ಎಷ್ಟೇ ಪ್ರಯತ್ನ ಪಟ್ಟರೂ ಇದರ ಮರ್ಮ ತನಗೆ ಅರ್ಥವಾಗದೆ ಹೋದದ್ದೇನು?ಮೊದಲ ಹೆಜ್ಜೆಯಲ್ಲಿ ತಪ್ಪು ಮಾಡಿದ ಗಣಿತಜ್ಞ್ನ ಕಡೆಯಲ್ಲಿ ಉತ್ತರವನ್ನು ತಪ್ಪೇ ಪಡೆಯುವಂತೆ ಬ್ರಹ್ಮ ಕೊಟ್ಟ ಲೆಕ್ಖವೇ ತಪ್ಪಿದ್ದರೆ ಅದು ತನ್ನ ದೋಷವಾಗುವುದಾರರೂ ಎಂತು? ತನ್ನ ಯಾವ ಪಾಪಕಾರ್ಯಕ್ಕೆ ತನಗೀ ಪರೀಕ್ಷೆಯನ್ನು ಈ ವಿಧಿ ತಂದೊಡ್ಡಿರಬಹುದು?ಎಂಬೆಲ್ಲಾ ಪ್ರಶ್ನೆಗಳನ್ನು ತನಗೆ ತಾನೇ ಕೇಳಿಕೊಂಡು, ಉತ್ತರ ಸಿಗದೆ ತಡಕಾಡುತ್ತಾ ತಳಮಳಗೊಳ್ಳುತ್ತಿದ್ದ.
ವಿಷ್ಣುವು ತಲೆಯಾಡಿಸಿ ನೀನೂ ಅರುಹೆನ್ನಲು,, ತನ್ನೆಲ್ಲ ಸಂದೇಹಗಳನ್ನು ವಿಷ್ಣುವಿಗೆ ವರ್ಗಾಯಿಸಿ ಇದರಲ್ಲಿ ತನ್ನ ತಪ್ಪಿಲ್ಲವೆಂದೂ,ಇದೇನೋ ಮಾಯೆಯ ಮಸಲತ್ತೇ ಇರಬೇಕೆಂದೂ,ತನ್ನ ತಲೆ ಕೆಟ್ಟು ಗೊಬ್ಬರವಾಗುವುದರೊಳಗೆ ಇದಕ್ಕೊಂದು ಪರಿಹಾರ ಸೂಚಿಸಬೇಕೆಂದೂ,ಇಲ್ಲವಾದರೆ ತನ್ನನ್ನು ವಜಾ ಮಾಡಿ ಮನೆಗೆ ಕಳಿಸಬೇಕೆಂದೂ ಕೋರಿದ.
ವಿಷ್ಣುವಿಗೆ ಪೀಕಲಾಟಕ್ಕಿಟ್ಟುಕೊಂಡಿತು.ಆಗ ಇಲ್ಲಿಯವರೆಗೂ ಸುಮ್ಮನಿದ್ದು ತನ್ನ ಸಮಸ್ಯೆಯನ್ನು ಪೂರ್ಣ ಹೇಳಿಕೊಂಡಿರದ ಭೂದೇವಿಯು “ದೇವಾ ನಾನು ಕಡೆಯಲ್ಲಿ ಹೇಳಬೇಕಾದದ್ದು ಇದೇ ಸಮಸ್ಯೆಗೆ ತಳುಕು ಹಾಕಿಕೊಂಡಿದೆ. ಈ ಹೊಸ ಬೆಳವಣಿಗೆಯು ನನಗೆ ಬಹಳ ತಳಮಳ ಉಂಟುಮಾಡಿದೆ. ಇದು ಹೀಗೇ ಮುಂದುವರಿದಲ್ಲಿ ನನ್ನನ್ನು ಕಾಡುತ್ತಿರುವ ಇವರುಗಳು ನಿಯಂತ್ರಣಕ್ಕೆ ಸಿಗದೆ ಜೀವಸಹಿತ ತಿಂದುಬಿಡುವರು.ನಿನ್ನ ಸೃಷ್ಟಿಯಲ್ಲಿಯೇ ಅತೀ ಸುಂದರಳೆಂದು ಖ್ಯಾತಿವೆತ್ತಿದ್ದ ನಾನು ಈಗ ಕುರೂಪಿಯಾಗುತ್ತ ನಡೆದಿದ್ದೇನೆ. ಅದಕ್ಕೇ ನಿನಗೆ ನನ್ನ ಮೇಲಿನ ವ್ಯಾಮೋಹ ಹೊರಟು ಹೋಯಿತೋ?” ಎಂದೆನ್ನುತ್ತಾ ಅವನ ಅಂತರಾಳಕ್ಕೆ ಕೈಹಾಕಿ ಚಿವುಟಿದಳು.
ಮುಖ ಹುಳ್ಲಗೆ ಮಾಡಿದ ವಿಷ್ಣು ಲಕ್ಷ್ಮಿಯ ಕಡೆಗೊಮ್ಮೆ ಕಳ್ಳನೋಟ ಬೀರಿದ. ಅವಳು ಸಮಸ್ಯಯಲ್ಲಿ ತಾನೂ ಕುತೂಹಲಗೊಂಡಿದ್ದು ಭೂದೇವಿಯ ಮರ್ಮಾಘಾತ ಮಾತಿಗೆ ಸವತಿ ಪ್ರತಿಕ್ರಿಯೆ ನೀಡಲಿಲ್ಲ. ನಿರಾಳವಾದ ವಿಷ್ಣುವು ಯೋಚಿಸಿದ.’ ಇವರೆಲ್ಲರ ಪರಿಪಾಟಲಿನ ಕಷ್ಟಕೋಟಲೆಗಳ ಮೂಲಕಾರಣ ಒಂದೇ ಇರಬೇಕು. ಅದನ್ನು ಕಂಡು ಹಿಡಿದರೆ ಅರ್ಧ ಕೆಲಸ ಮುಗಿದಹಾಗೆ’ ಎಂದುಕೊಂಡು ಎಲ್ಲಿಂದ ಶುರು ಮಾಡಲೀಯೆಂದು ಯೊಚಿಸತೊಡಗಿದ.
ಆದಿಶೇಷನ ಮೇಲೆ ಒರಗಿದ್ದ ವಿಷ್ಣು ಎದ್ದು ಸರಿಯಾಗಿ ಕುಳಿತು ಅವರನ್ನೆಲ್ಲ ಉದ್ದೇಶಿಸಿ ನುಡಿದ ” ನಿಮ್ಮೆಲ್ಲಾ ಸಮಸ್ಯೆಗಳ ಮೂಲ ಒಂದೇ ಸಾಮಾನ್ಯಕಾರಣದಿಂದ ಉದ್ಭವಿಸಿರಬೇಕು. ಎಲ್ಲರ ಸಮಸ್ಯೆಗಳು , ಅದರ ಕಥೆಗಳನ್ನು ಇದುವರೆಗೂ ಕೇಳಿದಿರಿ. ಅದರಿಂದ ಈಗ ನಿಮಗೇನಾದರೂ ಹೊಳೆಯಿತೋ?”.
ಬಸವಳಿದು ಹೈರಾಣವಾಗಿದ್ದ ಅವರ್ಯಾರೂ ಯೋಚಿಸುವ ಸ್ಥಿತಿಯಲ್ಲಿ ಇರಲಿಲ್ಲ.
ಎಲ್ಲರೂ ಒಕ್ಕೊರಲಿನಿಂದ ” ದೇವಾ ಜಗದೋದ್ಧಾರನೂ,ಸರ್ವಾಂತರ್ಯಾಮಿಯೂ,ಜಗನ್ನಿಯಾಮಕನೂ,ನಮ್ಮೆಲ್ಲರನ್ನು ಆಡಿಸುವ ಸೂತ್ರಧಾರಿಯೂ ಆಗಿರುವ ನೀನೇ ಇದಕ್ಕೆ ಸಮರ್ಪಕ ಪರಿಹಾರ ಕೊಡಿಸಬೇಕು. ನಾವೆಲ್ಲಾ ಅಸಹಾಯಕರು” ಎಂದು ಉದ್ಘೊಷಿಸುತ್ತಾ ಅವನ ಕಾಲಿಗೆ ಬಿದ್ದರು.
ಅಷ್ಟರಲ್ಲಿ ನಾರದರ ಆಗಮನ ಆಯ್ತು. ನಾರಾಯಣ, ಇದೇನು ಎಲ್ಲರೂ ನಿನ್ನ ವೈಕುಂಠದಲ್ಲಿ ಠಿಕಾಣಿ ಹಾಕಿಬಿಟ್ಟಿದ್ದಾರೆ? ಕೆಲಸಕಾರ್ಯಗಳಿಗೆಲ್ಲ ಇವತ್ತು ರಜೆಯೋ ಹೇಗೆ ” ಕೀಟಲೆ ಮಾಡಿದರು. ವಿಷ್ಣುವು ಅವರನ್ನು ಕುರಿತು” ನಾರದರೇ ಇವರಿಗೆ ಬಂದಿರುವ ಕಷ್ಟ ನಿಮಗೆ ತಿಳಿದೇ ಇರುತ್ತದೆ. ಇದೆಲ್ಲದರ ಕಾರಣ ನಿಮಗೆ ತಿಳಿದಿದೆಯೋ”? ಕೇಳಿದ. ನಾರದರಿಗೆ ಆಶ್ಚರ್ಯ,, ಸಂಬಂಧದಲ್ಲಿ ನಾನು ಕಿರಿಯ, ಬ್ರಹ್ಮನ ಮಗನಾದ ನಾನು ಇವನಿಗೆ ಮೊಮ್ಮಗನಾಗಬೇಕು. ಯಾವಾಗಲೂ ನೀನು, ತಾನು ಎಂದು ಏಕವಚನದಲ್ಲಿ ಕರೆಯುತ್ತಿದ್ದ ಇವತ್ತು ನೀವು, ನಿಮಗೆ ಎಂಬ ಬಹುವಚನ ಪ್ರಯೋಗ ಮಾಡುತ್ತಿದ್ದಾನಲ್ಲ!, ತಲೆ ಬಿಸಿ ಆಗಿರಲೇ ಬೇಕು ಎಂದು ಅವರಿಗೆ ಗೊತ್ತಾಯಿತು. ಕಬ್ಬಿಣ ಕಾದಿರುವಾಗಲೇ ಬಡಿಯಬೇಕೆಂದು ತಮ್ಮ ಎಂದಿನ ಧಾಟಿಯಲ್ಲಿ ಹೇಳಿದರು; ಹೇ ಭಗವಂತಾ,.. ಬ್ರಹ್ಮಾಂಡವೇ,,ಆ ದೇವನಾಡುವ ಬೊಂಬೆಯಾಟವಯ್ಯ, ಅಂಬುಜ ನಾಭನ, ಅಂತ್ಯವಿಲ್ಲದಾತನ ತುಂಬು ಮಾಯವಯ್ಯಾ… ಈ ಲೀಲೆಯು …ಎಂದು ನಾನು ನಿನ್ನನ್ನು ಯಾವತ್ತಿನಿಂದಲೂ, ಅದೆಷ್ಟು ಬಾರಿ ಸ್ತುತಿಸಿಲ್ಲ. ಈಗ ನೋಡಿದರೆ ಭೂಮಿಯಲ್ಲಿ ಬೇರೆಯೇ ಆಟ ನಡೆದಿದೆ. ಅಲ್ಲಿ, ಆ ಭೂಮಿಯಲ್ಲಿ, ನೀನು ಸೂತ್ರ ಕಟ್ಟಿರದ, ನಿನ್ನ ರಾಗದಾ ಭೋಗದಾ ಉರುಳಲ್ಲಿ ಸಿಕ್ಕಿರದ ಅದೆಷ್ಟೋ ಬೊಂಬೆಗಳು ಅವತರಿಸಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ.ಅವು ಇವರೆಲ್ಲರ ಕಾರ್ಯವಿಧಾನಕ್ಕೆ ಕೊಡಲಿ ಪೆಟ್ಟು ಕೊಡುತ್ತಿರುವುದೂ ನೋಡಿದ್ದೇನೆ. ಇದು ಹೀಗೇ ಮುಂದುವರಿದರೆ ನನ್ನ ಈ ಹಾಡಿಗೆ ಅರ್ಥವಿಲ್ಲದೆ ಹೋಗುತ್ತದೆ. ಅದರ ಸಾಹಿತ್ಯ ಬದಲಾಯಿಸಬೇಕಾಗುವುದು. ನಾನು ಕೇವಲ ಸುದ್ದಿಗಾರನಷ್ಟೇ. ನನಗೆ ಕಾರ್ಯಕಾರಣ ಸಂಬಂಧ ತಿಳಿಯದು. ಆದರೂ ಇದು ಮಾನವರು ಕಲಿತುಕೊಂಡಿರುವ ವೈದ್ಯವಿಜ್ಞ್ನಾನದ ಕರಾಮತ್ತೆಂದು ತೋರುತ್ತಿದೆ. ಯಾವುದಕ್ಕೂ ಅಶ್ವಿನೀ ದೇವತೆಗಳನ್ನು ಕರೆಸಿ ನೋಡು” ಎಂದರು. ಯಾವತ್ತಿನಂತೆ ಅಪೂರ್ಣ ಸಲಹೆ ನೀಡಿ ಮತ್ತಷ್ಟು ಮಜಾ ಪಡೆಯುವ ನಾರದರ ಬುದ್ಧಿ ಅಲ್ಲೂ ಸುಮ್ಮನಿರಲಿಲ್ಲ,. ಈ ನಾರದ ನನ್ನ ಪಾರಮ್ಯವನ್ನೇ ಪ್ರಶ್ನಿಸಬಲ್ಲ ಸನ್ನಿವೇಶದ ಮಾತಾನಾಡುತ್ತಿದ್ದಾನಲ್ಲ. ಇದೇನಿರಬಹುದು. ಸ್ವಲ್ಪ ಮೈಮರೆತಿದ್ದಕ್ಕೆ ಏನೇನೋ ನಡೆದು ಹೋಗಿದೆ ಎಂದು ಕಿರೀಟ ತೆಗೆದು, ತಲೆ ಕೆರೆದುಕೊಂಡು ಅಶ್ವಿನೀದೇವತೆಗಳನ್ನು ಕರೆಸಿದ.
ಅವರುಗಳಿಬ್ಬರೂ ಬಂದರು. ಈ ನಡುವೆ ಕೆಲಸವಿಲ್ಲದ್ದಕ್ಕೋ ಏನೋ ಒಂದು ರೀತಿಯ ಆಲಸ್ಯ ಅವರ ಮುಖದಲ್ಲಿ ಮನೆ ಮಾಡಿತ್ತು. ದೇಹವೂ ಸ್ವಲ್ಪ ಸ್ಥೂಲವಾದ್ದು ಮುರಾರಿಯ ಗಮನಕ್ಕೆ ಬಾರದಿರಲಿಲ್ಲ.
“ಏನ್ರೀ ಸಮಾಚಾರ. ಏನಾಗ್ತಿದೆ ಅಲ್ಲಿ, ಅ ಭೂಲೋಕದಲ್ಲಿ.” ಕೇಳಿದ
ಅವರು ” ದೇವಾಧಿದೇವಾ, ಮಾನವರು ಬಹಳವಾಗಿ ಮುಂದುವರಿದಿದ್ದಾರೆ. ಬಗೆ ಬಗೆಯ ಔಷಧಿಗಳನ್ನೂ, ಶಸ್ತ್ರಚಿಕಿತ್ಸಾ ವಿಧಾನಗಳನ್ನೂ ಕಂಡುಹಿಡಿದುಕೊಂಡಿದ್ದಾರೆ. ಬಹಳಷ್ಟು ಖಾಯಿಲೆಗಳಿಗೆ ಮದ್ದು ಸಿಕ್ಕಿರುವುದರ ಪರಿಣಾಮ, ಮಕ್ಕಳಿಗೆ ಖಾಯಿಲೆಯಾದಾಗ ತಾಯಂದಿರು ನಮ್ಮನ್ನು ನೆನೆಯುವುದೇ ಇಲ್ಲ. ’ಎನ್ನ ಬಿನ್ನಪ ಕೇಳೊ ಧನ್ವಂತ್ರಿ ದಯಮಾಡೊ’ ಎಂಬಿತ್ಯಾದಿ ಹಾಡುಗಳು ಅವರ ನೆನಪಿನಲ್ಲೇ ಇಲ್ಲ. ಅವರುಗಳು ಕರೆಯುತ್ತಿಲ್ಲವಾಗಿ ನಾವು ಆಕಡೆ ತಲೆ ಹಾಕದೆ ವರ್ಷಗಳೆ ಉರುಳಿಹೋದವು. ’ಬರೆಯದೆ ಓದುವನ, ಕರೆಯದೇ ಹೊಗುವನ ಬರಿಗಾಲಿನೋಲ್ ತಿರುಗುವನ ಹಿಡಿದು’ ಎಂಬ ವಚನವೇ ಇದೆಯಲ್ಲ. ನಾವಾದರೂ ಏನು ಮಾಡಬಹುದು. ಎಲ್ಲ ನಿನ್ನ ನಿಯಾಮಕವೇ ಇರಬಹುದೆಂದು ನಾವು ಸುಮ್ಮನಿದ್ದೆವು’” ಎಂದು ಹೇಳಿ ತಮ್ಮ ಬೆನ್ನ ಮೇಲಿನ ಭಾರ ಇಳಿಸಿಕೊಂಡರು.!
ಈಗ ಬಂದಿರುವ ಹೊಸ ಸಮಸ್ಯೆಯನ್ನು ಅವರಿಗೆ ವಿವರಿಸಿ,ಈಗಿಂದೀಗಲೇ ಭೂಮಿಗೆ ತೆರಳಿ ಮಾನವರೂಪದಲ್ಲಿದ್ದು,ಅವರ ಎಲ್ಲ ಕಾರ್ಯಕಲಾಪಗಳನ್ನೂ, ಈ ಎಲ್ಲ ಅಯೋಮಯವಾಗಿರುವ ಪರಿಸ್ಥಿತಿಯ ಕಾರ್ಯಕಾರಣ ಸಂಬಂಧಗಳನ್ನೂ ಕೂಲಂಕುಷವಾಗಿ ವಿಶ್ಲೇಷಿಸಿ ತಂದು ತನಗೆ ಕರಾರುವಾಕ್ ವರದಿ ಒಪ್ಪಿಸಬೇಕೆಂದು ಆಜ್ಞಾಪಿಸಿ ಕಳಿಸಿದ. ಹಿಂದೆ ಸಂಜೀವಿನಿ ವಿದ್ಯೆ ಕಲಿಯಲೆಂದು ದೈತ್ಯ ಗುರು ಶುಕ್ರಾಚಾರ್ಯನ ಬಳಿಗೆ ಹೋದ ದೇವಗುರು ಬೃಹಸ್ಪತಿಯ ಮಗ ಕಚ ಅಲ್ಲಿ ದೇವಯಾನಿಯ ಪ್ರೇಮಪಾಶದಲ್ಲಿ ಸಿಕ್ಕು , ಪ್ರೇಮ ನಿಭಾಯಿಸದೆ ಅವಳಿಂದ ದೂರವಾಗಿ, ಮತ್ತೆ ಶಾಪಕ್ಕೆ ತುತ್ತಾಗಿ ಕೈಗೆ ಬಂದದ್ದು ಬಾಯಿಗೆ ಬರದಂತೆ ಆದಹಾಗೆ ಮಾಡಿಕೊಳ್ಳಬಾರದೆಂದೂ, ಹೆಣ್ಣು ಹೊನ್ನುಗಳ ಜೇನಿನ ಜೇಡರಬಲೆಯನ್ನು ನೇಯುವುದರಲ್ಲಿ ಮನುಷ್ಯರು ದಾನವರನ್ನೂ ಮೀರಿಸುವವರಾಗಿದ್ದಾರೆಂದೂ, ಯಾವ ಅವಘಡದಲ್ಲೂ ಸಿಲುಕದಂತೆ ಜಾಗ್ರತೆಯಿಂದ ಜಾಗರೂಕರಾಗಿ ನಿಭಾಯಿಸಿಕೊಂಡು ಬರಬೇಕೆಂಬ ಎಚ್ಚರಿಕೆಯನ್ನು ಕೊಡೊವುದನ್ನು ಮರೆಯಲಿಲ್ಲ.
ಅಶ್ವಿನೀ ದೇವತೆಗಳು ಅವಳಿ -ಜವಳಿ ವಿಜ್ಞ್ನಾನಿಗಳ ರೂಪದಲ್ಲಿ ಇಳೆಗಿಳಿದು ಜೀವ ವಿಜ್ಞ್ನಾನ ಪ್ರಯೋಗಶಾಲೆಯೊಂದರಲ್ಲಿ ತಮ್ಮ ಅಪ್ರತಿಮ ಪ್ರತಿಭೆ ಪ್ರದರ್ಶಿಸಿ ಕೆಲಸಕ್ಕೆ ಸೇರಿದರು. ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಎಲ್ಲ ಒಳಮರ್ಮ ತಿಳಿದು ದಿಗ್ಭ್ರಮೆಗೊಂಡರು. ಬ್ರಹ್ಮನನ್ನು ಹೊರತು ಪಡಿಸಿದರೆ ಈ ಪ್ರಪಂಚದ ಸೃಷ್ಟಿಗೆ ಕೈಹಾಕಿದವನು ವಿಶ್ವಾಮಿತ್ರ ಮಾತ್ರನಾಗಿದ್ದ. ಅವನನ್ನು ಆ ಕೆಲಸದಿಂದ ವಿಮುಖಗೊಳಿಸಿದ ಇಂದ್ರ ತನ್ನ ಸ್ವರ್ಗಾಧಿಪತ್ಯವನ್ನು ಅನನ್ಯವಾಗಿ ಉಳಿಸಿಕೊಂಡಿದ್ದ. ಈಗ ನೋಡಿದರೆ ಒಬ್ಬಿಬ್ಬರಲ್ಲ ಎಷ್ಟೋ ಜನಗಳು ತಾವೇ ವಿಶ್ವಾಮಿತ್ರರಾಗುವ ಹವಣಿಕೆಯಲ್ಲಿದ್ದಾರೆ.! ನೇರವಾಗಿ ವೈಕುಂಠಕ್ಕೆ ನಡೆದರು.
ವಿಷ್ಣು ಲಗುಬಗೆಯಿಂದ ಬರಮಾಡಿಕೊಂಡ. ಆದಿಶೇಷ, ತನ್ನ ಬಾಲವನ್ನು ಎಳೆದು ಅವರಿಬ್ಬರಿಗೂ ಕುಳಿತುಕೊಳ್ಳಲು ಆಸನವನ್ನಾಗಿ ಮಾಡಿಕೊಟ್ಟ. ಅವರು ಕುಳಿತು ಸುಧಾರಿಸಿಕೊಂದು ಹೇಳತೊಡಗಿದರು.
“ದೇವಾಧಿದೇವಾ.. ನೀನೇಕೆ ಇಷ್ಟುದಿನ ಈ ಮನುಷ್ಯರಿಗೆ ಲಂಗು ಲಗಾಮಿಲ್ಲದೆ ಬಿಟ್ಟುಬಿಟ್ಟೆ? “ಎಂದು ಕೇಳಿದರು
ವಿಷ್ಣುವಿನ ಕೋಪ ನೆತ್ತಿಗೇರಿತು. “ಎಲ್ಲಾ ನಾನೇ ಮಾಡಿದರೆ ನಿಮಗೆಲ್ಲ ದೇವತೆಗಳ ಸ್ಥಾನ ಯಾಕೆ ಕೊಡಬೇಕ್ರಯ್ಯಾ? ನನ್ನನ್ನೇ ದೂಷಿಸುತ್ತೀರಲ್ಲ. ನೀವುಗಳು ಎಚ್ಚರಿಕೆಯಿಂದ ಗಸ್ತು ತಿರುಗಿ ವಿಷಯ ಸಂಗ್ರಹಿಸಿ ನನಗೆ ತಂದರಲ್ಲವೇ ನಾನು ಅದಕ್ಕೆ ತಕ್ಕಂತೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು. ಸಾವಿರಾರು ವರ್ಷಗಳಿಂದ ನಿಮ್ಮಗಳ ಸುಳಿವೇ ಇಲ್ಲ.ಭೂಲೋಕದ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳು ಭರದಿಂದ ನಡೆದು, ನನ್ನ ಹುಂಡಿಗಳು ತುಂಬುತ್ತಿರುವುದರಿಂದ ನಾನೂ ಧರ್ಮ ಇರಬಹುದೆಂದು ಸುಮ್ಮನೆ ದೀರ್ಘ ವಿಶ್ರಾಂತಿಯಲ್ಲಿದ್ದೆ.” ಸರಿ ಈಗ ನೀವು ತಿಳಿದುಬಂದ ವಿಷಯವೇನು ಅದನ್ನು ಮೊದಲು ಹೇಳಿ ” ಎಂದ.
ಅಶ್ವಿನಿಗಳು ಗಂಟಲು ಸರಿ ಮಾಡಿಕೊಂಡು ಹೇಳಲುಪಕ್ರಮಿಸಿದರು. “ದೇವಾ ಎಲ್ಲಿಂದ ಹೇಗೆ ಶುರು ಮಾಡಬೇಕೆಂದು ತೋರುತ್ತಿಲ್ಲ. ಸರಿ ಇಲ್ಲಿ ಕೇಳು, ಈ ಎಲ್ಲ ಅವಾಂತರದ ಮೂಲ ಮನುಷ್ಯರು ವಿಶ್ವಾಮಿತ್ರರಂತೆ ವಿಶ್ವ ಸೃಷ್ಟಿಯ ಸಾಹಸಕ್ಕೆ ಕೈಹಾಕುತ್ತಿರುವುದೇ ಆಗಿದೆ. ಇರುವ ಪ್ರಾಣಿ ಪಕ್ಷಿಗಳನ್ನು ಕೊಂದುಹಾಕುತ್ತಿದ್ದಾರೆ. ಭೂದೇವಿ ಹೇಳಿದಂತೆ ಹಣ ಐಷಾರಾಮಕ್ಕಾಗಿ ಏನೆಲ್ಲವನ್ನೂ ಮಾಡುತ್ತಿದ್ದಾರೆ. ತಾವಿದ್ದಲ್ಲಿಯೇ ಸ್ವರ್ಗ ಸೃಷ್ಟಿಯ ಹವಣಿಕೆಯಲ್ಲಿದ್ದಾರೆ. ಸತ್ತು ಹೇಳ ಹೆಸರಿಲ್ಲದಂತೆ ನಶಿಸಿ ಹೋಗಿರುವ ಜೀವಿಗಳನ್ನೂ ಭೂ ಗರ್ಭದಿಂದ ಹೊರಗೆಳೆದು ಅವುಗಳ ಪಳೆಯುಳಿಕೆಗಳಿಂದಲೇ ಮರುಸೃಷ್ಟಿಸುವ ದುಸ್ಸಾಹಸಕ್ಕೆ ಕೈಹಾಕಿದ್ದಾರೆ. ಇದೆಲ್ಲಕ್ಕೂ ಕಳಶಪ್ರಾಯವೆಂಬಂತೆ ರಕ್ತಾಬೀಜಾಸುರನ ತೆರದಲ್ಲಿ ತಾವೇ ಅಭಿವೃದ್ಧಿ ಪಡಿಸಿಕೊಂಡಿರುವ ತಾಂತ್ರಿಕ ಕೌಶಲ್ಯ
ಗಳನ್ನು ಉಪಯೋಗಿಸಿಕೊಂಡು ಜೀವಕೋಶಾಸುರರಾಗಿ ಮೆರೆಯಲು ಹೊರಟಿದ್ದಾರೆ. ಬ್ರಹ್ಮದೇವರ ವರವೋ,ಇಲ್ಲಾ ಶಂಕರನ ಅನುಗ್ರಹವೋ ತಿಳಿಯದು. ಅವರ ಈ ಕಾರ್ಯ ನೋಡಿದರೆ ನಮಗೇಕೋ ಅನುಮಾನ. ಈ ಎಲ್ಲಾ ಬ್ರಹ್ಮ ರುದ್ರಾದಿ ದೇವಾನುದೇವತೆಗಳ ಪರಿಪಾಟಲುಗಳಷ್ಟೂ ಮನುಷ್ಯರ ಈ ಕ್ರಿಯೆಯಿಂದಲೇ ಉದ್ಭವವಾಗಿರುವುದು. ಅವರನ್ನು ಹುಲುಮಾನವರೆಂದಾಗಲೀ, ನರಜಂತುಗಳೆಂದಾಗಲೀ ಕರೆಯುವುದು ಕಷ್ಟಕರವಾಗುವುದು ನೋಡು” ಎಂದಂದು ನಿಲ್ಲಿಸಿದರು.
ವಿಷ್ಣುವು ತಲೆದೂಗುತ್ತಾ,, ಅವರು ಈ ದುಸ್ಸಹಸಕ್ಕೆ ಕೈಹಾಕಿದ್ದ್ದಾದರೂ ಹೇಗೆ, ಅವರಿಗೆ ಈ ಉಪಾಯಗಲೆಲ್ಲ ಹೇಗೆ ಹೊಳೆಯಿತು,ಅವರು ಇವುಗಳನ್ನು ಸಾಧಿಸುತ್ತಿರುವ ವಿಧಿ ವಿಧಾನಗಳೇನು ವಿವರಿಸುವಂಥವನಾಗು ಎಂದು ಅಪ್ಪಣೆ ಕೊಡಿಸಿದನು.
“ಅನಿರುದ್ಧನೇ, ನಾವು ಈಗ ಹೇಳುವುದನ್ನು ಕೇಳಿ, ಯಾವುದೋ ಕಪೋಲ ಕಲ್ಪಿತ ಕಥೆ ಹೇಳುತ್ತಿದ್ದೇವೆಂದು ನಮ್ಮನ್ನು ದೂರಬೇಡ. ಊಹಿಸಲಸದಳ ರೀತಿಯಲ್ಲಿ ಅವರು ಕಾರ್ಯ ಪ್ರವೃತ್ತರಾಗಿದ್ದಾರೆ. ವಿಶ್ವಾಮಿತ್ರನಾದರೋ ತನ್ನ ತಪೋ ಬಲದಿಂದ ವರವನ್ನು ಪಡೆದಿದ್ದ. ಅವನು ಕಲಿತ ವಿದ್ಯೆ ಅವನಿಗಷ್ಟೆ ಸೀಮಿತವಾಗಿತ್ತು. ಇಲ್ಲಿ ಹಾಗಲ್ಲ.ಒಮ್ಮೆ ಕರಗತವಾದರೆ ಹಲವರು ಅದನ್ನು ಕಲಿಯಬಹುದಾಗಿದೆ.ಅವರ ಈ ಎಲ್ಲ ಕೈಂಕರ್ಯಕ್ಕೆ ತ್ರಿಮೂರ್ತಿಗಳಾದ ನೀವು ಹಾಗೂ ನಿಮ್ಮ ಪತ್ನಿಯರೇ ಪ್ರೇರಣೆಯಂತೆ. ಅವರಿಗೆ ಈ ಎಲ್ಲ ಯೋಚನೆಗಳೂ ಪುರಾಣಗಳ ಮುಲಕವೇ ಬಂದವಂತೆ. ಅವರು ನಡೆಸುತ್ತಿರುವ ಈ ಕ್ರಿಯೆಗೆ ತದ್ರೂಪುತಳಿ ಸೃಷ್ಟಿಯೆಂದು ಕರೆಯಬಹುದು- ಅಂದರೆ, ರಕ್ತಬೀಜಾಸುರನ ಪ್ರತಿ ಹನಿ ರಕ್ತಕ್ಕೂ ಅವನಂತೆಯೇ ಇದ್ದ ರಾಕ್ಷಸ ಹುಟ್ಟುವಂತೆ, ಈ ಮಾನವರು ತಮ್ಮ ದೇಹದ ಜೀವಕೋಶವೊಂದನ್ನು ತೆಗೆದು ಅದನ್ನು ಸಂಸ್ಕರಿಸಿ, ಅದರಿಂದ ತಮ್ಮಂತೆಯೇ ಇರಬಲ್ಲ ಜೀವಿಯೊಂದರ ಸೃಷ್ಟಿಮಾಡಲು ಕೈಹಾಕುತ್ತಿರುವುದೇ ಇವೆಲ್ಲಾ ಅವಗಢಗಳಿಗೆ ಕಾರಣ. ಇದಕ್ಕೆ ಅವರು ಠೀವಿಯಿಂದ ”ಕ್ಲೋನಿಂಗ್” ಎಂದು ಕರೆಯುತ್ತಿದ್ದಾರೆ. ನಿನ್ನ ನಾಭಿಯಿಂದ, ಅಂದರೆ ಅಗಾಧ ಸಾಧ್ಯತೆಗಳಿರಬಲ್ಲ ಜೀವಕೋಶಗಳನ್ನು ಹೊಂದಿರುವ ಹೊಕ್ಕುಳುಬಳ್ಳಿಯಿಂದ ಬ್ರಹ್ಮ ಹುಟ್ಟಿದ್ದೂ, ಪಾರ್ವತಿಯ ಮೈ ಮಣ್ಣಿನಿಂದ ಗಣೇಶ ಹುಟ್ಟಿದ್ದೂ, ವಿಶ್ವಾಮಿತ್ರಸೃಷ್ಟಿಯ ಸಾಧ್ಯತೆಯ ಕಥೆಯೂ, ರಕ್ತ ಬೀಜನ ಕಥೆಯೂ ಅವರಿಗೆ ಸ್ಫೂರ್ತಿಯಂತೆ. ಇದೇ ಕಾರಣಕ್ಕೆ ಬ್ರಹ್ಮನ ಲೆಕ್ಖಕ್ಕೆ ಸಿಗದ, ಯಮಧರ್ಮನ ಪಾಶಕ್ಕೆ ಮಣಿಯದ, ಚಿತ್ರಗುಪ್ತನ ಕರ್ಮಾವಳಿಯ ತಾಳ ಮೇಳ ತಪ್ಪಿಸುತ್ತಿರುವ, ಭೂ ಸಂಪತ್ತಿನ ನಾಶಕ್ಕೂ, ಭೂ ದೇವಿಯ ಕ್ಲೇಶಕ್ಕೂ ಕಾರಣವಾದ ಜೀವಿಗಳ ಸೃಷ್ಟಿಯು ಭೂ ಲೋಕದಲ್ಲಿ ಆಗುತ್ತಿದೆ. ಇದರಲ್ಲಿ ಮನುಜಮಾತ್ರರು ಪೂರ್ತಿ ಸಫಲರಾಗಿದ್ದರೆ ಎಂದಲ್ಲ. ಇದು ಇನ್ನೂ ನಿಧಾನವಾಗಿ ವಿಕಾಸಗೊಳ್ಳುತ್ತಿರುವ ತಂತ್ರ. ಹಾಗಾಗಿ ಅಲ್ಲಲ್ಲಿ ನಿಯಂತ್ರಣಕ್ಕೆ ಸಿಗದೆ ಕೆಲವು ಪೂರ್ತಿ ಸರಿಯಾಗಿ, ಕೆಲವು ಕುರೂಪಿಗಳಾಗಿ, ಕೆಲವು ವಿಕಾರಗಳಿಂದ ಕೂಡಿದವರಾಗಿ, ಹೇಗೋ-ಹೇಗೋ ಇರುವಂಥವರಾಗಿ, ಯಾವ ಯಾವುದೂ ಖಾಯಿಲೆ ಕಸಾಲೆಗಳಿಂದ ನರಳುತ್ತಿರುವವರಾಗಿ , ಕೆಲವು ದೀರ್ಘಾಯುಗಳಾಗಿ, ಕೆಲವು ಅಲ್ಪಾಯುಗಳಾಗಿ,ವಿವಿಧತೆ ವೈಶಿಷ್ಟ್ಯಗಳಿಂದ ಕೂಡಿದ ಜೀವಿಗಳೆಲ್ಲ ಉದಯವಾಗಿವೆ. ಈ ಜೀವಿಗಳೆಲ್ಲ ಬ್ರಹ್ಮನ ಕೈಯಿಂದ ಬಂದವರಲ್ಲವಾದ್ದರಿಂದ ಅವರುಗಳ ಲೆಕ್ಖಾಚಾರ ಬೇರೆಯೆ ಇದೆ. ಹೀಗಾಗಿ ತಲ್ಲಣ ಉಂಟಾಗಿದೆ ಎಂದರು.
“ಅಲ್ರಯ್ಯಾ ಹೀಗೆ ತದ್ರೂಪು ತಳಿ ಸೃಷ್ಟಿ ಅನ್ನುತ್ತೀರಾ.. ಆದರೂ ಹೀಗೆ ವಿಚಿತ್ರ ರೂಪ ಗುಣಗಳು, ಅವರ ಆಯುರಾರೋಗ್ಯಗಳಲ್ಲಿ ಅಸಮತೋಲನವೂ ಇರುವುದೂ ಏತಕ್ಕೆ.ಅವರ ಲೆಕ್ಖ ಇವರಿಗೇಕೆ ಸಿಗುತ್ತಿಲ್ಲ?’” ವಿಷ್ಣು ಕೇಳಿದ.
” ಇಲ್ಲಿ ಕೇಳು ಮಾಧವ,. ಈಗ ಒಬ್ಬ ನಲವತ್ತು ವಯಸ್ಸಿನ ಗಂಡಸು ಇದ್ದಾನೆಂದಿಟ್ಟುಕೋ. ಅವನು ತನ್ನಂಥದೇ ಜೀವಿಯನ್ನು ಹುಟ್ಟುಹಾಕಲು ಹೆಣ್ಣೊಂದನ್ನು ಅರಸಿ ಹೋಗಬೇಕಾದ್ದಿಲ್ಲ. ತನ್ನ ದೇಹದ ಜೀವಕೋಶವೊಂದನ್ನು ತೆಗೆದು, ಅದನ್ನು ಪ್ರಯೋಗಶಾಲೆಗೆ ಒಯ್ದು ಅದರಿಂದ ತನ್ನಂತೆಯೇ ಇರುವ ಜೀವಿಯೊಂದನ್ನು ಪಡೆಯಬಲ್ಲ. ಇವನಂತೆಯೇ ಜೀವತಂತುಗಳನ್ನು ಹೊಂದಿರುವ ಹೊಸ ಜೀವಿಯನ್ನು ಇವನ ಮಗ ಎನ್ನುವೆಯೋ? ಅಥವಾ, ತಮ್ಮ ಎನ್ನುವೆಯೋ? ಮಗ ಎನ್ನುವುದಾದರೆ ಅದರ ಅಮ್ಮ ಯಾರು? ತಮ್ಮ ಎನ್ನುವುದಾದರೆ, ಮೊದಲ ವ್ಯಕ್ತಿಯ ಅಮ್ಮ ಇವನಿಗೆ ಅಮ್ಮ ನಾಗುವಳೋ ಇಲ್ಲಾ ಅಜ್ಜಿಯಾಗುವಳೋ? ಇವರಪ್ಪ ಅವನಿಗೇನಾಗಬೇಕು. ಹೀಗೆ ಒಂದು ಹೆಣ್ಣು ಕೂಡಾ ಗಂಡಿನ ಹಂಗಿಲ್ಲದೆ ಮಗುವನ್ನು ತನ್ನ ದೇಹದಿಂದಲೇ ಪಡೆಯಬಹುದು. ಈ ರೀತಿ ಹುಟ್ಟಿದ ಜೀವಿಗೆ ಸೋದರಿಕೆ, ಎಲ್ಲಿಂದ ಬರಬೇಕು? ಈ ರೀತಿಯ ಜಿಜ್ಞಾಸೆಗಳು ಏಳುವುದರಿಂದ ಕುಟುಂಬದ ವ್ಯವಸ್ಥೆ ಬುಡಮೇಲಾಗುತ್ತದೆ. ’ಹಿರಿಯ ನಾಗನ ನಂಜು ಕಿರಿಯ ನಾಗನ ಪಾಲು ತಂದೆ ಮಾಡಿದ ಪಾಪ ಕುಲದ ಪಾಲು’ ಎಂಬ ಗಾದೆಗೆ ಅರ್ಥ ಸಡಿಲವಾಗುತ್ತಿದೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ನಾಣ್ಣುಡಿ ಅರ್ಥ ಕಳೆದುಕೊಳ್ಳುತ್ತಿದೆ. ಅದೂ ಅಲ್ಲದೆ ಗಂಡು ಹೆಣ್ಣುಗಳ ಭಾವಪೂರ್ಣ ಮಿಲನದ ಪರಾಕಾಷ್ಠೆಯಲ್ಲಿ ಕೈಗೂಡಬೇಕಾಗಿದ್ದ ಈ ಜೀವ ಸೃಷ್ಟಿಯ ಪ್ರಕ್ರಿಯೆ ಕಾಮನೆ ಭಾವನೆಗಳಿಲ್ಲದ ನಿರ್ಜೀವ ಪ್ರಯೋಗಶಾಲೆಯಲ್ಲಿ ಆಗುತ್ತಿದೆ. ಹೀಗೆ ಬಂದ ಜೀವಿಗಳಲ್ಲಿ ಸ್ಥಾಪನೆಯಾಗಲು ಆತ್ಮಗಳು ಒಪ್ಪುತ್ತಿಲ್ಲ. ಸನಾತನಿಗಲಾದ ಅವು, ಇಂಥಾ ಜೀವಿಗಳು ತಮ್ಮ ಕಾರ್ಯಕ್ಷೇತ್ರವಲ್ಲ ಎಂದು ಹೋಗಲು ವಿರೋಧಿಸುತ್ತಿವೆ. ಹಾಗೂ ಹೋದಂಥ ಆತ್ಮಗಳು ಸಂಪೂರ್ಣ ಭ್ರಮಾಧೀನವಾಗುತ್ತಿವೆ. ಆತ್ಮವೇ ಇರದ ಜೀವಿಗಳಲ್ಲಿ ಇನ್ನು ಆತ್ಮಸಾಕ್ಷಿ ಎಲ್ಲಿಂದ ಬಂದೀತು? ಮಾತೃ ವಾತ್ಸಲ್ಯ ಇಲ್ಲದ ತಂದೆಯ ಮಾರ್ಗದರ್ಶನ ಪಡೆಯದ ಜೀವಿಗಳು ಪ್ರಯೋಗಶಾಲೆಯಲ್ಲಿ ಹುಟ್ಟುತ್ತಿರುವುದರಿಂದ ಇವು ’ಬೇವಾರ್ಸಿ’ ಜೀವಗಳಾಗಿ ಕೇವಲ ಐಹಿಕ ಸುಖಕ್ಕಷ್ಟೆ ತಮ್ಮ ಅನುಭವ ಸೀಮಿತಗೊಳಿಸಿಕೊಂಡುಬಿಟ್ಟಿವೆ.ಇದರಿಂದ ಭೂದೇವಿಯ ಕಷ್ಟ ನೂರ್ಮಡಿಗೊಂಡಿದೆ” ಎಂದರು.
“ಇವನಮ್ಮ ಅವನಿಗೇನಾಗಬೇಕು, ಇದರಪ್ಪ ಅದಕ್ಕೇನಾಗಬೇಕು? .. ನನ್ನ ತಲೆ ತಿರುಗುತ್ತಿದೆ. ಇದೊಳ್ಳೆ ತಾಯಿ-ಮಗಳನ್ನು ಮದುವೆಯಾದ ಮಗ -ಅಪ್ಪನ ಬೇತಾಳದ ಕಥೆಯಂತಿದೆಯಲ್ರಯ್ಯಾ? ಸರಿ ಈ ಜೀವ ವೈಚಿತ್ರ್ಯದ ಕಾರಣವಾದರೂ ಏನು?” ವಿಷ್ಣು ಕೇಳಿದ.
“ಅದೋ ಹೇಳಲು ಮರೆತಿದ್ದೆವು. ಈ ನಲವತ್ತು ವಯಸ್ಸಿನ ಮನುಶ್ಯನ ಜೀವಕೋಶಕ್ಕೂ ಅಷ್ಟೇ ವಯಸ್ಸಲ್ಲವೇ. ಅದನ್ನು ದೇಹದಿಂದ ತೆಗೆದು ಸಂಸ್ಕರಿಸುವಾಗ ಏನು ಬದಲಾವಣೆಗಳಾಗುವುದೋ ಅದು ಯಾರಿಗೂ ತಿಳಿದಿಲ್ಲ- ಸ್ವತಃ ಮಾನವರಿಗೂ.ಅದರ ನಿಯಂತ್ರಣ ಸಧ್ಯಕ್ಕೆ ಯಾರ ಕೈಲೂ ಇಲ್ಲ.ಹೀಗಾಗಿ ಅ ಹೊಸ ಜೀವಿಯ ಆಯಸ್ಸು ನಲತ್ವತ್ತೋ, ಐವತ್ತೋ, ಇಲ್ಲ ಯಾವುದೋ ಋಣಾತ್ಮಕ ಸಂಖ್ಯೆಯಿಂದಲೂ ಶುರುವಾಗಬಹುದು. ಇದೆಲ್ಲವೂ ಜೀವಿಯ ಜೀವಿತಾವಧಿಯನ್ನು ನಿರ್ದೇಶಿಸುವ ಜೀವತಂತುವಿನಲ್ಲಿ ಅಂದರೆ ಜೀನ್ಸ್ ಗಳಲ್ಲಿ ಆಗಬಹುದಾದ ಬದಲಾವಣೆಗಳು. ಹೀಗೆ ಗೊತ್ತು ಗುರಿ ಇಲ್ಲದ ಜೀವಿಗಳು ಯಾವಾಗಲೆಂದರೆ ಅವಾಗ ಸಾಯುವುದರಿಂದ ಯಮದೂತರ ಕೆಲಸ ಹೆಚ್ಚಾಗಿರುವುದು. ಭಯ ಭಕ್ತಿಯ ಚೌಕಟ್ಟಿಲ್ಲದೆ ಆತ್ಮರಹಿತವಾದ ಈ ಜೀವಿಗಳ ಸೂಕ್ಷ್ಮ ಸ್ವರೂಪಗಳು ಇವರನ್ನು ಆಟ ಆಡಿಸುವವು. ಅದೇ ರೀತಿ, ಸಂಸ್ಕರಣ ಪ್ರಕ್ರಿಯೆಯಲ್ಲಿ ವರ್ಣತಂತುಗಳಲ್ಲಿ ಅಂದರೆ ಕ್ರೋಮೊಸೋಮ್ ಗಳಲ್ಲಿ ಏರುಪೇರಾದರೆ ವಿಚಿತ್ರ ಸ್ವರೂಪದ ಜೀವಿಗಳು ಹುಟ್ಟುವವು. ಹೇ, ತ್ರಿವಿಕ್ರಮ, ಉಪೇಂದ್ರ, ಇಲ್ಲಿ ಕೇಳು, ಆ ನರಜಂತುಗಳು ಈ ಬೇಡದ ನ್ಯೂನತೆಗಳನ್ನು,ಬದಲಾವಣೆಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರೋ, ಯೋಚಿಸಲೂ ನಮ್ಮ ಎದೆ ನಡುಗುತ್ತಿದೆ. ಆಗತಾನೆ ಹುಟ್ಟಿದ ಮಗುವಿನಿಂದ ಹಿಡಿದು, ಆಗಲೋ ಈಗಲೋ ಎನ್ನುವಂತಿರುವ ವೃದ್ಧರ ಜೀವಕೋಶಗಳನ್ನೂ ಹೆಕ್ಕಿ ತೆಗೆದು ತದ್ರೂಪು ತಳಿ ಸೃಷ್ಟಿಸಿ ನಿನ್ನನ್ನೇ ತಿಂದಾರು.” ಎಂದು ಹೇಳಿ ನಿಲ್ಲಿಸಿದರು.
ವಿಷ್ಣುವಿಗೆ ಎಲ್ಲವೂ ಅರ್ಥವಾಯಿತು. ಅಷ್ಟರಲ್ಲಿ ಕೈಲಾಸವಾಸಿಯಾದ ಈಶ್ವರ ಪಾರ್ವತಿಯೊಡನೆ ಅಲ್ಲಿಗೆ ಬಂದ ಅವನೂ ಆತಂಕಗೊಂಡಿದ್ದು ಎಲ್ಲರಿಗೂ ತಿಳಿಯಿತು. ಅವನೂ ಪಾರ್ವತಿಯೂ ಆದರ್ಶ ದಾಂಪತ್ಯಕ್ಕೆ ಮೂರ್ತರೂಪ ಕೊಟ್ಟ ದೇವಾಧಿದೇವತೆಗಳು. ಅವರು ಕೂಡಾ ಜಗಳವಾಡಿ ಮುನಿಸಿಕೊಂಡದ್ದು ಮೇಲುನೋಟಕ್ಕೇ ಕಂಡುಬಂತು. ವಿಷ್ಣು ಅವರನ್ನು ಬರಮಾಡಿಕೊಂಡು, ಇದುವರೆಗೂ ಆದ ಕಥೆ ಹೇಳಿ, ಬಂದ ಕಾರಣವೇನೆಂದು ಕೇಳಿದ.
ಪರಮೇಶ್ವರನು ಸಿಟ್ಟಿನಿಂದಲೇ ಹೇಳತೊಡಗಿದ. “ನೋಡು ವಿಷ್ಣು, ಸ್ಮಶಾನವಾಸಿಯಾದ ನನಗೆ,ನಿಜ ರೂಪದಲ್ಲಿ ಪೂಜೆ ಪುನಸ್ಕಾರಗಳಿಲ್ಲದೆ ಕೇವಲ ಯೋನಿ-ಲಿಂಗರೂಪದಲ್ಲಿ ಮಾತ್ರವೇ ಪೂಜೆ ಎನ್ನುವುದು ನಿನಗೆ ಗೊತ್ತೇ ಇದೆ. ಈಗ ಭೂಮಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಪರಂಪರಾಗತವಾಗಿ , ಎಲ್ಲ ಜೀವಿಗಳಲ್ಲೂ ಅಂತರ್ಗತವಾಗಿ ಬಂದಿರುವ ಸಂತಾನೋತ್ಪತ್ತಿಯ ನಿಯಮಗಳನ್ನು, ಪೀಳಿಗೆಯನ್ನು ಉಳಿಸಿ ಬೆಳೆಸುವ ಪ್ರಕ್ರಿಯೆಯನ್ನು ಗಾಳಿಗೆ ತೂರುತ್ತಿವೆ. ಗಂಡಾಗಲೀ, ಹೆಣ್ಣಾಗಲೀ, ಇನ್ನೊಂದು ಲಿಂಗದ ಸಂಪರ್ಕವಿಲ್ಲದೆ ಮಕ್ಕಳನ್ನು ಪಡೆಯುವುದು ಸಾಧ್ಯವಾಗಿದೆ. ಹೀಗಿದ್ದಾಗ ಪ್ರೀತಿ, ಪ್ರೇಮ, ಪ್ರಣಯ,ಮಮತೆ, ವಾತ್ಸಲ್ಯ,ತ್ಯಾಗ, -ಈ ಎಲ್ಲ ತಂತುಗಳಿಂದಾಗುತ್ತಿರುವ ಜೀವಸೃಷ್ಟಿ ನಶಿಸಿ,ಕೇವಲ ನಿರ್ಜೀವಕ್ರಿಯೆಯಿಂದ ಜನಿಸಿದ ಜೀವಿಗಳೇ ಜಗದಾದ್ಯಂತ ತುಂಬಿಹೋಗುವ ದಿನ ದೂರವಿಲ್ಲ. ಈ ಪಾಠಕ್ಕೆ ಪೀಠಿಕೆ ಹಾಕಿದ ಪಾರ್ವತಿಯನ್ನು ನಾನು ದೂಷಿಸಿದ್ದಕ್ಕೆ, ನಾನು ಕೊಡುತ್ತಿರುವ ಕಾರಣ ನಿಜವಾಗಿದ್ದಾಗ್ಯೂ ನನ್ನಮೇಲೆ ಸಿಟ್ಟಾಗಿದ್ದಾಳೆ. ಭೂಮಿಯ ಮೇಲಿನ ಗಂಡಂದಿರು ಕಾರಣವಿಲ್ಲದೆ ಸಿಟ್ಟಾಗುವ ಹೆಂಡಿರನ್ನು ಅದು ಹೇಗೆ ನಿಭಾಯಿಸುವರೋ ನನಗೆ ಇವತ್ತು ಅವರ ಕಷ್ಟ ಅರ್ಥವಾಯ್ತು. ಅದಿರಲಿ, ತ್ರಿಮೂರ್ತಿಗಳಲ್ಲಿ ಬ್ರಹ್ಮನಿಗೆ ಈಗಾಗಲೇ ಭೂಮಿಯ ಮೇಲೆ ಪೂಜೆಯಿಲ್ಲ. ಇನ್ನು ಯೋನಿ-ಲಿಂಗದ ಆಕಾರದಲ್ಲಿ ಪೂಜಿಸಲ್ಪಡುತ್ತಿರುವ ನನಗೂ ಅದೇ ಗತಿ ಎಂದು ಕಾಣುತ್ತದೆ” ಎಂದ.
ವಿಷ್ಣುವಿಗೆ ಪರಿಸ್ಥಿತಿಯ ಗಂಭೀರತೆ ಸಂಪೂರ್ಣವಾಗಿ ಅರಿವಿಗೆ ಬಂತು. ಪರಿಹಾರ ತುರ್ತಾಗಿ ಹುಡುಕಬೇಕಾಗಿತ್ತು. ಅವನ ಮುಂದಿದ್ದ ಆಯ್ಕೆಗಳನ್ನು ಅವಲೋಕಿಸತೊಡಗಿದ. ಒಂದು ಮಾನವರಿಗೆ ತಾವೇ ಕಂಡುಹಿಡಿದ ಈ ಸೃಷ್ಟಿಕಾರ್ಯವನ್ನು ಒಳ್ಳೆಯ ಉದ್ದೇಶಗಳಿಗೆ ಬಳಸುವಂಥ ಸದ್ಬುದ್ಧಿ ಕೊಡುವುದೋ, ಇಲ್ಲವೇ ಅವನ ಬೆರಳಿನಿಂದ ಅವನ ಕಣ್ಣನ್ನೇ ತಿವಿಸಿಬಿಡುವುದೋ, ಮೋಹಿನಿಯಂತೆ ಹೋಗಿ ಭಸ್ಮಾಸುರನನ್ನು ಸುಟ್ಟ್ಂತೆ ಸುಡುವುದೋ, ತಾನೇ ಈ ಕೆಲಸ ಮಾಡುವುದೋ ಇಲ್ಲಾ ಬೇರೆ ಯಾರನ್ನಾದರೂ ಕಳಿಸುವುದೋ, ಅಥವಾ ಇದೊಂದು ಹೊಸದೇ ರೀತಿಯ ಸಮಸ್ಯೆಯಾದ್ದರಿಂದ ಇದಕ್ಕೆ’ ಔಟ್ ಆಫ಼್ ದ ಬಾಕ್ಸ್ ’ ಯೋಚನೆಯಿಂದ ಹೊಸದೇ ಪರಿಹಾರ ಹುಡುಕಬೇಕೋ ಎಂದು ಚಿಂತೆಯಲ್ಲಿ ಮುಳುಗಿದವನನ್ನು ಕಂಡು ತಮ್ಮ ಭಾರವನ್ನು ವರ್ಗಾಯಿಸಿದ ಇತರ ದೇವತೆಗಳು ಹಗುರಾಗಿ ಹೊರನಡೆಯುವಲ್ಲಿ ’ಸಂಭವಾಮಿ ಯುಗೇ ಯುಗೇ’ ಎಂಬ ಉದ್ಘೋಷ ಅವರೆಲ್ಲರ ಕಿವಿಯಲ್ಲೂ ಮೊಳಗಿದಂತಾಯ್ತು.

ಅನಾಮಿಕ ಆತ್ಮನ ಅಂತರಾಳ (ಕಥೆ)

ಅನಾಮಿಕ ಆತ್ಮನ ಅಂತರಾಳ (ಕಥೆ)

 

ಪ್ರಿಯ ಓದುಗರೆ,
ನಾನೊಬ್ಬ ಹೆಸರಿಲ್ಲದ ಅತ್ಮ. ಅರೇ, ಇದೇನಿದು ಹೆಸರಿರುವ ಆತ್ಮಗಳೂ ಇರಬಹುದೇ, ಆತ್ಮಕ್ಕು ಹೆಸರಿಗೂ ಇದೇನಿದು ಸಂಬಂಧ ಎಂಬ ಅನುಮಾನ ಬಂತೇ? ಅದರಲ್ಲಿ ನಿಮ್ಮ ತಪ್ಪಿಲ್ಲ ಬಿಡಿ.ಆತ್ಮನೆಂದರೆ ನಿರಾಕಾರ ಎಂದಿತ್ಯಾದಿ ಓದಿರುತ್ತೀರೆಂದು ನನಗೂ ಗೊತ್ತು.ಆತ್ಮ ಎಂದರೆ ಏನೆಂದು ಬಹಳ ಜನ ಬಹು ಬಗೆಯ ಚಿಂತನೆ ನಡೆಸಿದ್ದಾರೆ.ಕಂಡವರು ಯಾರು ಕಾಣದವರಾರು ಎಂಬುದನ್ನು ನೀವ್ಯಾರೂ ಕಾಣಿರಿ. ನಾನು ಯಾರು-ಏನು ಎಂದು ತಿಳಿಯಬೇಕಾದರೆ ನಾನು ಈಗ ಹೇಳುವ ನನ್ನ ಕಥೆಯನ್ನು ಪೂರ್ತಿಯಾಗಿ ಓದಿದರೆ ಮಾತ್ರವೇ ಸಾಧ್ಯ.

ಈ ಪ್ರಪಂಚದಲ್ಲಿರುವ ಅರವತ್ತ ನಾಲ್ಕು ಕೋಟಿ ಜೀವರಾಶಿಗಳು ಜನನ-ಮರಣ ಚಕ್ರದಲ್ಲಿ ಸಿಲುಕಿ ಸುತ್ತುತ್ತಾ ಪೂರ್ವಾರ್ಜಿತ ಪಾಪ-ಪುಣ್ಯಗಳ ಫಲವಾಗಿ ಅರವತ್ತ ನಾಲ್ಕು ಜನ್ಮಗಳಲ್ಲಿ ಯಾವುದೋ ಒಂದರಲ್ಲಿ ಸಿಲುಕಿ ಮರುಜನ್ಮ ಪಡೆಯುವುದು ನಿಜವಷ್ಟೇ?ಹಾಗಾದಾಗ ಅವುಗಳು ತಳೆದ ದೇಹವೆಂಬ ಬೊಂಬೆ ಕರ್ಮ ಸವೆಸಲು ಭೂಮಿಗೆ ಬರುವಾಗ ಅವುಗಳಿಗೆ ಜೀವ ತುಂಬುವುದು ನಾನೇ.ಯಾವ ದೇಹದಲ್ಲಿ ಹೋಗಿ ಹೇಗೆ ಹೇಗೆ ವರ್ತಿಸಬೇಕೆಂದು ಬ್ರಹ್ಮನ ಬರವಣಿಗೆಗೆ ನಿಯುಕ್ತವಾಗಿ ಸಂಚಿತ ಕರ್ಮಾನುಸಾರ ನನಗೆ ಆದೇಶ ನೀಡಿ ಕಳಿಸುವುದು ಈ ಚಿತ್ರಗುಪ್ತ-ಯಮಧರ್ಮರೇ. ಚಿತ್ರಗುಪ್ತ, ಅವನ ಮೇಲಿನ ಯಮಧರ್ಮ ನನ್ನ ಮೇಲಧಿಕಾರಿಗಳು. ನನ್ನಷ್ಟಕ್ಕೆ ನಾನೇ, ಯಾವ ಜೀವಿಯ ಹಂಗೂ ಇರದಿದ್ದಾಗ ನಾನು ಪರಮಾತಮನಂತೇ ನಿರಾಕಾರ; ಅದರೆ ದೇಹದಲ್ಲಿ ಆವಾಹಿಸಿಕೊಂಡಾಗ ನಾನು ಪರಮಾತ್ಮನಿಂದ ವಿಭಿನ್ನ.!ಜೇನು ಮೇಣ ಅಥವಾ ಅರಗು ಕರಗಿದಾಗ ಎರಕದ ಆಕಾರವನ್ನೇ ಪಡೆದು ಕಾಣಿಸುವ ರೀತಿಯಲ್ಲಿ ನಾವು ಕೂಡಾ ಜೀವಾತ್ಮನ ಆಕಾರವನ್ನೇ ಪಡೆಯುತ್ತೇವೆ.ಇಲ್ಲಿಯವರೆಗೆ ಬರೀ ಇರುವೆ, ಕಪ್ಪೆ, ಇಲಿ,ಕತ್ತೆ, ಹುಳು, ಹುಪ್ಪಟೆ,ನರಿ, ತೋಳ,ಹಯೀನಾ, ಮುಂತಾದ ಕೇವಲ ಕ್ಷುದ್ರಪ್ರಾಣಿಗಳ ಆತ್ಮವಾಗಿ ಕೆಲಸ ನಿರ್ವಹಿಸಿ ಬಹಳಷ್ಟು ರೂಪಗಳನ್ನು ತಾಳಿರುತ್ತೇನೆ. ಹೇ,, ಇದೇನು ಪುರಾಣ ಕೊರೆಯುತ್ತಿದ್ದೇನೆಂದು ಅಕಳಿಸುತ್ತಿದ್ದೀರಾ?? ಸ್ವಲ್ಪ ಇರಿ ,ವಿಷಯಕ್ಕೆ ಇನ್ನೇನು ಬರತೇನೆ.ಇದು ನನ್ನ ಪರಿಚಯದ ಪೀಠಿಕೆ ಅಷ್ಟೆ.
ನಿರಾಕಾರ ಸರಿ,ಆತ್ಮ ನಿರ್ಗುಣನೋ ಎಂಬ ಪ್ರಶ್ನೆಯ ಹುಳು ಈಗ ನಿಮ್ಮ ತಲೆಯನ್ನು ಕೊರೆದು ಹೊಕ್ಕಿದ್ದು ನನ್ನ ಕಣ್ನಿಗೆ ಬಿದ್ದೇ ಬಿತ್ತು. ನಾವು ನಿರ್ಗುಣರೋ ಇಲ್ಲಾ ಸಗುಣರೋ ಎಂಬುದನ್ನು ಪರಿಸ್ಥಿತಿಗೆ ಅನುಗುಣವಾಗಿ ಅವಲೋಕಿಸಬೇಕು ಸ್ವಾಮಿ. ಯಾವ ಜೀವಿಯ ಗೊಡವೆ ಇರದಿದ್ದಾಗ ನಾವೂ ನಿರ್ಗುಣರೇ.ಆದರೆ ಜೀವಿಗಳೆಂಬೋ ಬೊಂಬೆಯ ಒಳಗಿದ್ದಾಗ ಈ ತ್ರಿಗುಣಗಳನ್ನು ಆವಾಹಿಸಿಕೊಂಡಿರುತ್ತೇವೆ. ನಾವು ಹೋಗಿ ಸೇರಿದ ಜೀವಿಗಳಲ್ಲಿ ರಾಜಸ-ತಾಮಸ-ಸಾತ್ವಿಕ ಗುಣಗಳ ರಸಮಿಶ್ರಣ ತಯಾರಿಸಿ ಅಭಿವ್ಯಕ್ತಿಗೊಳಿಸುವುದು ನಮ್ಮ ಕೆಲಸ. ಅವರವರ ಕರ್ಮಗಳಿಗೆ ಅನುಸಾರವಾಗಿ ಜೀವಿಗಳು ಜನ್ಮ ತಾಳುವುದು ನಿಜವಷ್ಟೆ? ನಾನು ಆ ಜನ್ಮಜಾತ ಜೀವಿಗಳಲ್ಲಿ ಕಾಯ ಪ್ರವೇಶ ಮಾಡಿ ಹೊಕ್ಕು ಅವರ ಕರ್ಮಾಫಲಕ್ಕೆ ಅನುಸಾರವಾಗಿ, ಚಿತ್ರಗುಪ್ತನು ಕಳಿಸಿದ ಅವರ ಕರ್ಮಾವಳಿಯ ಪಟ್ಟಿಯನ್ನು ಅವಲಂಬಿಸಿ ಆ ಮೂರು ಗುಣಗಳಿಲ್ಲವೇ- ರಜಸ್ಸು, ತಮಸ್ಸು, ಸಾತ್ವಿಕ ಗುಣಗಳು- ಅವುಗಳಲ್ಲಿ ಯಾವುದಾದರೂ ಒಂದನ್ನು ಹೆಚ್ಚು ವ್ಯಕ್ತಗೊಳಿಸಿ ಆ ಜೀವಿಯ ಗುಣಲಕ್ಷಣಗಳನ್ನು ಸಾಕಾರಗೊಳಿಸುತ್ತೇನೆ. ಈ ತ್ರಿಗುಣಗಳೆಂಬ ಸೂತ್ರಗಳನ್ನು ಪಂಚೇಂದ್ರಿಯಗಳೆಂಬ ಬೆರಳುಗಳಿಗೆ ಕಟ್ಟಿ,ಅರಿಷಡ್ವರ್ಗಗಳೆಂಬ ಬಣ್ನಗಳನ್ನು ಉಪಯೋಗಿಸಿ ಆ ಬೊಂಬೆಯನ್ನು ಆಡಿಸುವುದು ನಾವೇ. ಈ ಎಲ್ಲ ಪದಪುಂಜಗಳು ನಿಮಗೆಲ್ಲಿ ಅರ್ಥವಾಗಬೇಕು! ಈಗೆಲ್ಲ ಮೊಬೈಲ್ ಫೊನು, ,ಲ್ಯಾಪ್ಟಾಪು,ಕಂಪ್ಯೂಟರ್ ಎಂದು ತಾಂತ್ರಿಕ ಜಗತ್ತಿನಲ್ಲಿ ನೀವುಗಳು ಕುಣಿದಾಡುವುದರಿಂದ ಅದರ ಪರಿಭಾಷೆಯಲ್ಲೇ ಹೇಳುತ್ತೇನೆ ಕೇಳಿ: ಮೊಬೈಲ್,ಲ್ಯಾಪುಟಾಪು, ಫೋನ್ ಇವುಗಳ ಹೊರ ಕವಚವೇ ನಿಮ್ಮ ದೇಹ. ಆದರೆ ಅದನ್ನು ಆಡಿಸುವ ಆಪರೇಟಿಂಗ್ ಸಿಸ್ಟಂ ಸಾಫ಼್ಟುವೇರು ನಾನೇ- ಅಂದರೆ ಆತ್ಮ!
ನಮ್ಮ ಮೇಲಧಿಕಾರಿಗಳ ಆದೇಶದಂತೆ ನಮ್ಮ ಕೆಲಸ ಕಾರ್ಯ ಇದ್ದರೂ, ಕೆಲವು ಸಲ ನಮ್ಮ ಹಿಂದಿನ ಅನುಭವಗಳನ್ನು ಮುಂದಿನ ಜನ್ಮಜಾತ ಜೀವಿಗಳಲ್ಲಿ ತೋರಿಸುವುದುಂಟು. ಚೈನಾ ದಲ್ಲಿ ಹುಟ್ಟಿದ ಮಗು ಇಂಗ್ಲೀಷ್ ಭಾಷೆ ಎರಡು ವರ್ಷಕ್ಕೇ ಮಾತನಾಡಿದಂತೆ, ಕೊರಿಯಾದಲ್ಲಿ ಹುಟ್ಟಿದ ಮಗು ಅಮೇರಿಕಾದ ಯಾವುದೋ ಕಥೆ ಹೇಳಿದಂತೆ, ಪರಿಚಯವೇ ಇರದ ವ್ಯಕ್ತಿಗಳ ಗುಣ ಅವಗುಣಗಳನ್ನು ಅಭಿವ್ಯಕತಗೊಳಿಸಿದ ಕಥೆ ಗಳನ್ನು ನೀವು ಕೇಳಿಲ್ಲವೇ? ಹಾಗೆ. ಇದಕ್ಕೆಲ್ಲ ನಾವು ಸ್ಪೆಷಲ್ ಪರ್ಮಿಷನ್ ತಗೋಬೇಕು ಸ್ವಾಮಿ. ಹಾಗಾಗಿಯೇ ಇಂತಹ ಸಂಗತಿಗಳು ವಿರಳ.
ಇವನೇನು ಅನಾಮಿಕ ಆತ್ಮ ತಾನೆಂದು ಹೇಳಿಕೊಂಡು ಬೇಡದ ಬೂಸಿಯೆಲ್ಲಾ ಬಿಡುತ್ತಿದಾನೆಂದು ತಿಳಿದಿರೋ? ಹಾಗೇನಿಲ್ಲ ಬಿಡಿ. ಆ ರೀತಿ ವಿಷಯಾಂತರ ಮಾಡುವ ಆ(ತ್ಮ)ಸಾಮಿ ನಾನಲ್ಲ.
ಇಷ್ಟೆಲ್ಲಾ ಬೊಗಳೆ ಹೊಡೆಯುವ ನಾನು ಏಕೆ ಅನಾಮಿಕ ಆತ್ಮಎಂದು ನಿಮಗೆ ಸಂದೇಹ ಬಂದಿರಬಹುದು. ಬಂದೇ ಇರುತ್ತದೆ.ಕಾರಣ ಇಷ್ಟೇ, ನಾನು ಅಸ್ತಿತ್ವಕ್ಕೆ ಬಂದಾಗಿನಿಂದ ಬರೀ ಇರುವೆ, ಕಪ್ಪೆ, ಹಂದಿ, ಕೋಳಿ,ಜೇಡ, ಹುಳು ಹುಪ್ಪಟೆ,ನರಿ, ತೋಳ,ಹಾಗೂ ಗಢವಕೋತಿ ಇಂತಹ ಹೆಸರೇ ಇಡದ ಪ್ರಾಣಿಗಳ ಆತ್ಮನಾಗಿ ಕೆಲಸ ಮಾಡಿದ ಕಾರಣ ನಾಮಕರಣದ ಯೋಗ ಬಂದೇ ಇಲ್ಲ ನೋಡಿ. ಕಡೆ ಪಕ್ಷ ನಾಯಿ, ಬೆಕ್ಕು, ಹಸು, ಸಾಕು ಕುದುರೆಯಾದರೂ ಆಗಿದ್ದಲ್ಲಿ ಟಾಮಿ, ರಾಮೂ, ಲಕ್ಕಿ, ಪಕ್ಕಿ ಎಂಬ ಹೆಸರಾದರೂ ಸಿಕ್ಕಿರುತ್ತಿತ್ತು. ನನಗೇನೂ ಅದರ ಹಂಬಲ ಇರಲಿಲ್ಲ. ಮಹತ್ವಾಕಾಂಕ್ಷೆಯುಳ್ಳ ಆತ್ಮ ನಾನಾಗಿರಲಿಲ್ಲ. ಮೊನ್ನೆ ಮೊನ್ನೆ ಕೋತಿಯ ದೇಹದಲ್ಲೇ ಇದ್ದಾಗ ದೇವಸ್ಥಾನದ ಕಟ್ತೆಯ ಮೇಲೆ ಕುಳಿತು ಬಾಳೆ ಹಣ್ಣು ತಿನ್ನುತ್ತಿದ್ದೆ.ಆಗ ಅಲ್ಲೊಂದು ಹಾಡು ಕೇಳಿಸಿತು- “ಮಾನವ ಜನ್ಮ ದೊಡ್ಡದು ಅದ ಹಾಳು ಮಾಡದಿರಿ ಹುಚ್ಚಪ್ಪಗಳಿರಾ ” ಎಂದು ಇತ್ತು. ಇಂಪಾಗಿತ್ತು. ನನಗೆ ಭಾಷೆ ಹೇಗೆ ಅರ್ಥವಾಯ್ತು ಎಂದಿರೋ,, ನನ್ನ ಪಕ್ಕದಲ್ಲಿ ಕುಳಿತ ಕೋತಿಯೊಂದು ಹಿಂದಿನ ಜನ್ಮ ದಲ್ಲಿ ಮಾನವನಾಗಿತ್ತಲ್ಲ, ಅದು ಕೋತಿಯ ಭಾಷೆಯಲ್ಲೇ ಅದರ ಅರ್ಥ ನನಗೆ ತಿಳಿಸಿ ಹೇಳಿದ್ದರಿಂದ ನನಗೆ ಮಾನವ ಜನ್ಮದ ರುಚಿ ನೋಡಬೇಕೆಂಬ ಅದಮ್ಯ ಬಯಕೆ ಹುಟ್ಟಿಯೇ ಬಿಟ್ಟಿತು. ಈ ಕೋತಿಯ ದೇಹಾಂತ್ಯದವರೆಗೂ ತಡೆದಿದ್ದು ನಂತರ ಯಮಧರ್ಮ-ಚಿತ್ರಗುಪ್ತರ ಸನ್ನಿಧಾನಕ್ಕೆ ಹಾರಿದೆ.ಆ ದಿನ ಅವರಿಗೂ ಹೆಚ್ಚಿನ ಕೆಲಸವಿರಲಿಲ್ಲ ,ಸುಮ್ಮನೆ ಕುಳಿತು ಹರಟುತ್ತಿದ್ದರು. ಯಮಧರ್ಮ ತುಂಬಿದ ಕೊಡ, ಆದರೆ ಸ್ವಲ್ಪ ಹುಂಬ.ಚಿತ್ರಗುಪ್ತನೋ, ಅಹಂಕಾರಿ. ಏನು ಚಿತಾವಣೆ ಬೇಕಾದರೂ ಮಾಡಿಡುತ್ತಾನೆ. ನಾನು ಹೋಗಿ ನಿಧಾನವಾಗಿ ನನ್ನ ಮನದಿಂಗಿತ ಬಿಚ್ಚಿಟ್ಟೆ. ಯಮಧರ್ಮ ತಲೆದೂಗಿದರೂ ಈ ಚಿತ್ರಗುಪ್ತ ಮೂಗು ಮುರಿದ. ನನ್ನ ಜನ್ಮ ಜಾಲಾಡಿ ಏನೋ ದೊಡ್ಡ ಮೇಧಾವಿಯಂತೆ ನನಗಿನ್ನೂ ಆ ಪರಿಪಕ್ವತೆ ಬಂದಿಲ್ಲವೆಂದೂ,ಇನ್ನೂ ಕಾಯಬೇಕೆಂದೂ ಸೂಚಿಸಿದ. ನಾನೂ ಪಟ್ಟು ಬಿಡಲಿಲ್ಲ.ಆಗ್ರಹ ಮಾಡಿದೆ. ಯಮನಿಗೆ ಏನೆನ್ನಿಸಿತೋ,ಸರಿ ಹೋಗು ನಿನ್ನಿಷ್ಟ ಅಂದ. ತನ್ನ ಮಾತು ನಡೆಯದ್ದಕ್ಕೆ ಆ ಮುದಿಯ ಚಿತ್ರಗುಪ್ತನಿಗೆ ಅಸಮಾಧಾನವಾಯ್ತು. ಆಗಲಿ, ನನಗೇನು. ಖುಷಿಯಿಂದ ಹೊರಟೆ. ಹಿಂದಿನಿಂದ ಎಚ್ಚರಿಕೆಯ ಸಂದೇಶ ಬಂತು. ಯಮನೇ ನುಡಿದ: ಎಲವೋ ಆತ್ಮವೇ, ಮನುಷ್ಯರ ವ್ಯವಹಾರಕ್ಕೆ ಇಳಿಯುತ್ತಿದ್ದೀ. ಎಚ್ಚರಿಕೆ ಇರಲಿ. ಎಲ್ಲ ಪಶು-ಪಕ್ಷಿಗಳಿಗಿಂತ ಅವರ ನಡೆ ನುಡಿ ವಿಭಿನ್ನ. ನೀನು ಇಲ್ಲಿಯವರೆಗೆ ಅವರೊಡನೆ ಒಡನಾಡಿಲ್ಲ. ಇಷ್ಟುದಿನ ಗಂಡು ಹೆಣ್ಣುಗಳು ಸೇರಿದರೆ ಅದು ಸಂತಾನೋತ್ಪತ್ತಿಗಾಗಿ ಎಂದೇ ನಿನ್ನ ಅನುಭವ. ಹಸಿವು, ನಿದ್ರೆ ಮೈಥುನಗಳ ನಿಯಮಾವಳಿ ಅವರ ಲೋಕದಲ್ಲಿ ಬೇರೆಯೇ. ಹಸಿವಿರದಿದ್ದರೂ ತಿನ್ನುವ, ತಿನ್ನದಿದ್ದರೂ ತೇಗುವ, ಬಾಯಾರಿಲ್ಲದೆಯೂ ಕುಡಿಯುವ, ಬರೀ ಮೋಜಿಗೆ ಮೈಥುನದಲ್ಲಿ ತೊಡಗುವ ವಿಚಿತ್ರ ಸಂಕುಲ ಅದು. ಸಂತಾನಕ್ಕಾಗಿ ಅವರು ಕೂಡಿದಾಗ್ಯೂ ಅದು ಕೈಗೂಡದೆ ಇರಬಹುದು. ಅದು ಅಲ್ಲದೆ ಅಲ್ಲಿ ಎಲ್ಲವು ಸ್ಪರ್ಧಾತ್ಮಕೆ, ಪೈಪೋಟಿಕರ. ಹಲವು ಆತ್ಮಗಳು ಕಾಯುತ್ತಾ ಹೊಂಚು ಹಾಕಿ ಕುಳಿತಿರುತ್ತವೆ. ಅಲ್ಲಿ ನೋಡು, ಆ ಬಸ್ಸಿನಲ್ಲಿ ನುಗ್ಗಿ ಸೀಟು ಹಿಡಿಯುತ್ತಿಲ್ಲವೇ ಹಾಗೆ.ಯಾರು ಮುನ್ನುಗ್ಗುವರೋ ಅವರಿಗೇ ಅವಕಾಶ. ನೀನೂ ನಿನ್ನ ಚಾಲಾಕಿತನ ತೋರಿಸಬೇಕು. ಜೋಭದ್ರ-ಜಡಭರತನಂತೆ ಇರಕೂಡದು. ಒಂಭತ್ತು ತಿಂಗಳ ಕಾಲಾವಕಾಶ ನೀಡುತ್ತೇನೆ. ಅಷ್ಟರಲ್ಲಿ ಸಫಲನಾಗದಿದ್ದರೆ ವಾಪಸ್ ಎಮ್ದು ತಾಕೀತು ಮಾಡಿದ. ಅವನು ಗುಡ್-ಲಕ್ ಹೇಳುವುದನ್ನು ಮರೆಯಲಿಲ್ಲ ನನಗೆ ಥ್ಯಾಂಕ್ಸ್ ಹೇಳುವುದು ಹೊಳೆಯಲಿಲ್ಲ.
ಸರಿ ಭೂಲೋಕಕ್ಕೆ ಜರ್ರೆಂದು ಜಾರಿ ಪುಣ್ಯಭೂಮಿ ಎಂಬ ಭಾರತವನ್ನೇ ಕ್ಷೇತ್ರವಾಗಿ ಅರಿಸಿದೆ. ಜನಸಂಖ್ಯೆಯಂತೆ ಆತ್ಮಗಳ ಸಂಖ್ಯೆಯೂ ಇಲ್ಲಿ ಅಗಣಿತ. ಎಲ್ಲೆಲ್ಲೂ ಹೊಂಚುಹಾಕಿ ಕಾಯುತ್ತಿರುವವೇ. ಇಲ್ಲಿ ಪೈಪೋಟಿ ಜಾಸ್ತಿ.ಅವರೊಟ್ಟಿಗೆ ಈರ್ಶ್ಯೆಇಂದಲೂ, ಅಸಡ್ಡೆಯಿಂದಲೂ ನೋಡಿ ಇಂಗ್ಲೆಂಡಿಗೆ ಹಾರಿದೆ. ಈ ರೀತಿಯ ಪ್ರತಿಭಾ ಪಲಾಯನ ಮಾನವರಲ್ಲೂ ಇದೆಯೆಂದು ಆನಂತರ ತಿಳಿಯಿತೆನ್ನಿ.
ಇಂಗ್ಲೆಂಡಿನಲ್ಲಿ ಅಷ್ಟೊಂದು ಆತ್ಮಾಪುಲೇಷನ್ (ಆತ್ಮ ಸಂಖ್ಯೆ) ಇರಲಿಲ್ಲ.ಇದೇ ಪ್ರಶಸ್ತ ಜಾಗವೆಂದು ಸುತ್ತ ತೊಡಗಿದೆ:
ಸಮಾಜದ ಸ್ಥಿತಿ-ಗತಿ,ಕೌಟುಂಬಿಕ ಪರಿಸರ, ಸಾಮಾಜಿಕ ಸ್ತರಗಳು, ಅವರ ಯೋಚನಾಧಾಟಿ ಇವುಗಳ ಸ್ಥೂಲ ಪರಿಚಯ ನನಗಾಯ್ತು. ಸರಿ ಅತ್ತಿತ್ತ ನೋಡಲು ಒಂದು ಜೋಡಿ ಕಾಣಿಸಿತು. ಎತ್ತರದ ನಿಲುವಿನ ಆತ್ಮ ವಿಶ್ವಾಸತುಂಬಿದ ಸ್ಫುರದ್ರೂಪಿ ಗಂಡು, ಅವನೊಟ್ಟಿಗೆ ಆಕರ್ಷಕ ರೂಪದ ಹೆಣ್ಣು. ಏನು ಪ್ರೀತಿ ಅವನ ಮಾತುಗಳಲ್ಲಿ! ಅವಳ ಕೈ ಹಿಡಿಯುವುದೇನು, ಸುತ್ತಾಡುವುದೇನು, ಕಣ್ಣಲ್ಲಿ ಕಣ್ಣಿಟ್ಟು ನೋಡುವುದೇನು, ಅವಳು ಕೇಳಿದ್ದನ್ನು ಕೊಡಿಸುವುದೇನು, ಜೊತೆಯಲ್ಲಿ ಊಟ ಸವಿಯುವುದೇನು! ಅವಳಿಗೋ ಅವನದೇ ಧ್ಯಾನ. ಅವನು ಸ್ವಲ್ಪ ಭಿನ್ನ.ಸರಿ ಗಂಡು ಹೆಣ್ಣಿನ ಒಡನಾಟದ ಪರಾಕಾಷ್ಠೆಯ ಸಮಯ ಬಂದೇ ಬಂತು. ಇವರ ಮಗುವಿನ ಆತ್ಮ ನಾನಾದಲ್ಲಿ ನನಗೆ ಸಕಲ ಸೌಭಾಗ್ಯವೂ ದೊರೆಯುವುದೆಂಬ ಭಾವನೆ ಬಂತು. ನುಗ್ಗಿ ಪ್ರತಿಷ್ಠಾಪಿಸಿಕೊಂಡೆ. ವಾರಗಳು ಕಳೆದು ಆಕೆ ತನ್ನ ರಹಸ್ಯ ಬಿಚ್ಚಿದಳು. ಮಗುವಿನ ತಾಯಾಗುವುದರಿಂದ ಆತನು ಮದುವೆಯ ತಯಾರಿ ಮಾಡಬೇಕೆಂದಳು. ಅವನ ಮುಖ ಕಳೆಗುಂದಿತು. ತಾನು ಆಫ಼ೀಸರ್. ಅವಳು ಯಕಃಶ್ಚಿತ್ ಸೆಕ್ರೆಟರಿ. ಅವನಿಗೆ ಈಗಾಗಲೇ ಬೇರೆ ಮದುವೆ ನಿಶ್ಚಯವಾಗಿದೆಯಂತೆ!! ಅರೆ!! ನನಗೆ ಗೊಂದಲ. ಅವಳು ಮೊದಲು ಅತ್ತಳು.ಆದರೆ ಗಟ್ಟಿಗಿತ್ತಿ. ಬೆದರಿಸಿ ಚೆನ್ನಾಗಿ ದುಡ್ಡು ಕಿತ್ತಳು. ಅವನು ಪೀಡೆ ತೊಲಗಿದರೆ ಸಾಕೆಂದು ಕೊಟ್ಟ. ನನ್ನನ್ನು ನಿವಾರಿಸಿಕೊಂಡಳು. ನಾನು ಗೂಡಿನಿಂದ ದಬ್ಬಲ್ಪಟ್ಟ ಪಕ್ಷಿಯಂತೆ ಹೊರಬಂದು ಮತ್ತೆ ಹಾರತೊಡಗಿದೆ.
ಸರಿ ಅಲ್ಲೊಂದು ಯುವ ಜೋಡಿ ಕಣ್ಣಿಗೆ ಬಿತ್ತು. ಅರೆ ಇದೇನು ಶಾಲೆಯ ಸಮವಸ್ತ್ರ ಧರಿಸಿ ಶಾಲೆಗೇ ಹೋಗದೆ ಸುತ್ತುತ್ತಿರುವರಲ್ಲ. ಹಿಂಬಾಲಿಸಿದೆ.ಅವರು ಈ ಲೋಕದ ಯಾವುದೇ ಜಾವಾಬುದಾರಿಯನ್ನು ಹೊತ್ತಿಲ್ಲದವರಾಗಿ ಓಡಾಡಿಕೊಂಡಿದ್ದರು. ಪ್ರೀತಿ-ನೀತಿ,ಕಾಮ-ಪ್ರೇಮಗಳ ಅರಿವನ್ನಾಗಲೀ ,ಪರಿಧಿಯನ್ನಾಗಲೀ ಅರಿಯವದವರ್ರಗಿ ಕಂಡುಬಂದರು. ಕ್ಲೇಶರಹಿತರಾದ ಇವರೇ ನನಗೆ ತಾಯಿ ತಂದೆಯಾಗಲು ಯೋಗ್ಯರೆಂದು ನಿರ್ಧರಿಸಿಸ್ ಕಾಯತೊಡಗಿದೆ.ಸಮಯ ಬಂತು;ನಾನು ನುಗ್ಗಿದೆ. ಆಶ್ಚರ್ಯವೆಂದರೆ ಒಂದೂ ಪೈಪೋಟಿಕಾರ ಆತ್ಮಗಳು ಕಾಣದಿದ್ದುದು!
ಸರಿ ಹುಡುಗಿ ವಾಕರಿಸಿದಳು, ವಾಂತಿ ಮಾಡಿಕೊಂಡಳು. ತಾಯಿಗೆ ಅನುಮಾನ ಬಂತು. ಜಬರ್ದಸ್ತಿ ಮಾಡಿದಳು, ಹುಡುಗಿ ಬಾಯಿ ಬಿಟ್ಟಳು. ಅವರೋ ಕರ್ಮಠ ಸಂಪ್ರದಾಯಿಕ ಮನೆತನದವರು. ಗಂಡನಿಗೆ ಹೇಳಲು ಹೌಹಾರಿ ಹಿಂಜರಿದು, ಹುಡುಗಿಯ ಮುಂದಿನ ವಿದ್ಯಾಭ್ಯಾಸಕ್ಕೂ, ಸಮಾಜದಲ್ಲಿ ಮುಖವೆತ್ತಿ ತಿರುಗಾಡುವುದಕ್ಕೂ,ಆರೋಗ್ಯದ ದೃಷ್ಟಿಯಿಂದಲೂ ಅಳೆದು ತೂಗಿ ಗರ್ಭಪಾತವೇ ಸರಿಯಾದ ದಾರಿಯೆಂದು ನಿಶ್ಚಯಿಸಿದಳು; ಕಾರ್ಯರೂಪಕ್ಕೂ ತಂದಳು. ಎಂಟು ವಾರವಾಗಿತ್ತೇನೋ, ನಾನು ಗಂಟು ಕಟ್ಟಿ ಹೊರಗೆ ಬಿದ್ದು ಬೀದಿ ಪಾಲಾದೆ.

ಸುತ್ತುತ್ತಾ, ಹತ್ತಿರದಲ್ಲಿದ್ದ ಮನೆ ಹೊಕ್ಕೆ. ಅಕಟಕಟಾ… ಏನು ಅವ್ಯವಸ್ಥೆ, ಏನು ಅಸ್ತವ್ಯಸ್ತ. ಜೀವನ ಹೀಗೂ ಮಾಡಬಹುದೇ ಎಂಬ ಸೋಜಿಗ ನನ್ನನು ಕಾಡದಿರಲಿಲ್ಲ.ಇಬ್ಬರೂ ೨೫-೨೬ ವಯಸ್ಸಿನವರಾದರೂ ನೋಡಲು ೪೫-೪೬ ರಂತೆ ಕಾಣುತ್ತಿದ್ದರು.ಎಂಥದ್ದೋ ಕೊಳವೆಯಂಥ ಉರಿಯುವ ಕಡ್ಡಿ,ಎಂಥದ್ದೋ ಪೀಪಾಯಿಯಂಥ ಶೀಶೆ.ಒಂದನ್ನು ದಂ ಎಳೆಯುವುದು, ಇನ್ನೊಂದನ್ನು ಹೀರುವುದು, ಓಲಾಡಿ ನಲಿಯುವುದು; ಆಗಾಗ ತಿನ್ನುವುದು. ಇಬ್ಬರಿಗೂ ಕೆಲಸವಿಲ್ಲ.ಆದರೆ ಅವರಿಗೆ ಹೇಗೋ ಸಹಾಯ ದೊರೆಯುತ್ತಿತ್ತು. ರಾಮರಾಜ್ಯದ ಕನಸನ್ನು ಸಾಕಾರಗೊಳಿಸುವ ಉದ್ದೇಶದಿಂದ ಸರಕಾರ ಧನಸಹಾಯ ಕೊಡುವ ವಿಷಯ ನನಗೆ ತಿಳಿಯಿತು. ರಾಮರಾಜ್ಯದಲ್ಲಿ ಆರಾಮವಾಗಿ ರಾಮರಸವೆಂಬ ರಂ ಹೀರಿ, ಝಂ ಅಂತ ಇದ್ದು ಅಜರಾಮರರಾಗುವ ಪರಿ ನನಗೆ ಹಿಡಿಸಿತು. ಅಲ್ಲೇ ಗಸ್ತು ತಿರುಗತೊಡಗಿದೆ.
ಅವರಿಗೆ ಕೆಲಸವಿಲ್ಲದ್ದರಿಂದಲೂ, ದೇಹವೆಂಬೋ ಅಗ್ನಿಕುಂಡಕ್ಕೆ ಉದ್ದೀಪನೆಯ ಹವಿಸ್ಸು ಪ್ರದಾನವಾಗುತ್ತಿದ್ದುದರಿಂದಲೂ ನನ್ನ ಅರ್ಜಿ ಮೂರೇ ದಿನದಲ್ಲಿ ಮಂಜೂರ್. ನನ್ನ ಹೊಸಗೂಡಿನಲ್ಲಿ
ಅಮಲೇರಿಸುವ ಅನುಭವ ಆಗತೊಡಗಿ ಅನಂದ ತುಂದಿಲನಾದೆ. ಎಲ್ಲಾ ಸರಿ ಆದರೆ ಏನೋ ಸರಿಯಿಲ್ಲವೆಂದು ನನ್ನ ಮನಸ್ಸು ಹೇಳುತ್ತಿತ್ತು. ಇದೇನು ಆತ್ಮಕ್ಕೂ ಮನಸ್ಸೇ ಎಂದು ಮೂಗು ಮುರಿಯಬೇಡಿ. ನಮಗೂ ಅಂಥದ್ದೊಂದು ಇರುತ್ತೆ, ನಿಮ್ಮ ಪರಿಭಾಷೆಯಲ್ಲಿ ನೀವು ಮನಸ್ಸು ಎಂದು ಕರೆಯಬಹುದಷ್ಟೆ.
ಸರಿ ಒಂದು ಮುಂಜಾನೆ ಅವನಿಗೂ ಅವಳಿಗೂ ಜಗಳ ಹತ್ತಿ ಬಿಟ್ಟಿತು.ಮಹಾಶಯ ಎದ್ದು ತನ್ನ ಹೊಗೆ ಕಡ್ಡಿ ಹುಡುಕಿದ, ಸಿಗಲಿಲ್ಲ,ಅವಳನ್ನುಕೇಳಿದ (ಸಿಗರೇಟು ಎಂದು ಅದನ್ನು ಕರೆಯುತ್ತಾರಂತೆ). ಅವಳು ತನ್ನ ಬಳಿ ಇದ್ದರೂ ಕೊಡುವುದಿಲ್ಲ ಎನ್ನುವುದೇ.ಮಾತಿಗೆ ಮಾತು ಬೆಳೆದು ಹೊಡೆದಾಟ ಬಡಿದಾಟದ ವರೆಗೂ ಹೋಗಿ ಅವನು ಅವಳನ್ನು ಒದ್ದುಬಿಟ್ಟ.ನೋವಿನಿಂದ ಅವಳೂ, ಅವಳ ಒಳಗಡೆ ನಾನೂ ಒದ್ದಾಡಿಬಿಟ್ಟೆವು. ಆಸ್ಪತ್ರೆಗೇನೋ ಹೋದಳು. ಕಾಲ ಮಿಂಚಿತ್ತು. ನಾನು ಹೊರಗೆ ಬರಲೇ ಬೇಕಾಯ್ತು.
ಇದುವರೆಗಿನ ನನ್ನ ಅನುಭವ ಮದುವೆಯಾಗದ, ಯಾವ ಬದ್ಧತೆಗಳಿಲ್ಲದ ಜೋಡಿಗಳಿಗೆ ಸೀಮಿತವಾಗಿತ್ತು. ಸತತ ವೈಫಲ್ಯಗಳಿಂದ ಆತ್ಮದ ಆತ್ಮವಿಶ್ವಾಸವೇ ಕುಗ್ಗುತ್ತಿತ್ತು ನೋಡಿ ಸ್ವಾಮಿ. ಆದರೆ ನಾನು ಒಂದಾನೊಂದು ಕಾಲದಲ್ಲಿ ಬ್ರೂಸ್ ಎಂಬ ಸ್ಕಾಟ್ಲೆಂಡಿನ ರಾಜನಿಗೆ ತನ್ನ ಸತತ ಪರಿಶ್ರಮದಿಂದ ಬಲೆನೇಯ್ದು ಭರವಸೆ, ಉತ್ಸಾಹ ಮೂಡಿಸಿದ್ದ ಜೇಡವೊಂದರ ಆತ್ಮನಾಗಿದ್ದೆನಷ್ಟೆ! ಆ ಅನುಭವ ನನ್ನ ಕಣಕಣದಲ್ಲೂ ಇದ್ದುದರ ಕಾರಣ ಮರಳಿಯತ್ನವ ಮಾಡಲು ಮುನ್ನಡೆದೆ.
ಈ ಬಾರಿ ವೈವಾಹಿತ ಜೋಡಿಗಳನ್ನು ಮಾತ್ರವೇ ಆರಿಸಲು ನಿರ್ಧರಿಸಿದ್ದೆ.
ಆಹಾ… ಎಂತಹ ಅದ್ದೂರಿ ಮದುವೆ. ಹೇಳಿ ಮಾಡಿಸಿದಂಥ ಜೋಡಿ. ಸುಂದರ, ಸುಸಂಸ್ಕೃತರು. ಒಬ್ಬರನ್ನೊಬ್ಬರು ಒಡನಾಡಿ ಬಲ್ಲವರೆಂದು ತೋರುತ್ತಿದೆ.ಏನು ಪ್ರೀತಿ,ಏನು ವಿಶ್ವಾಸ. ಅವನಂತೂ ಅವಳನ್ನು ಕಣ್ಣಲ್ಲಿ ಕಣ್ಣಿಟ್ಟು ಜೋಪಾನ ಮಾಡುತ್ತಾನೆ.ಅವಳೂ ಅಷ್ಟೆ. ಆಹಾ ” ಆರಂಕುಶವಿಟ್ಟೊಡೇಂ, ನಾನಾಗುವೆನಮ್, ಇವರ್ ಕೂಸಿನ ಆತ್ಮನುಂ; ಅದರಾತ್ಮನಾದೊಡೆ ಪೆರತೇಮ್ ದೊರೆವುದೆಲ್ಲ ಜೀವನದ ಸುಖಂ” ಎಂದೆನ್ನುತ್ತಾ ಅವರ ನೆರಳಂತೆ ಹಿಂಬಾಲಿಸ ತೊಡಗಿದೆ. ಅಲ್ಲಲ್ಲಿ ಪೈಪೋಟಿಗೆ ಕೆಲವು ಬಂದವಾದರೂ ಅವುಗಳೆಡೆಗೆ ಕೆಕ್ಕರಿಸಿ ನೋಡಿದೆ, ಹೆದರಿಸಿದೆ. ಅವು ಹಾಗೆಯೇ ದೂರ ಸರಿದವು,. ನನಗೆ ನಾನೇ ಶಭಾಷ್ ಹೇಳಿಕೊಂಡೆ. ಮಧುಚಂದ್ರಕ್ಕೆ ಹೋದಲ್ಲೆಲ್ಲಾ ಹಿಂಬಾಲಿಸಿದೆ.ಅವರು ಬೇಗನೆ ತಮ್ಮ ಕುಟುಂಬ ಬೆಳೆಸುವ ಆಸೆಯಲ್ಲಿದ್ದರು, ನನ್ನ ಘಳಿಗೆ ಕೂಡಿಬಂತು. ನಾನು ಸುಖಾಸೀನನಾದೆ. ದಿನ ಉರುಳಿದವು. ಎಲ್ಲ ಚೆನ್ನಾಗಿ ನಡೆದಿತ್ತು. ಅವನು ಬಹಳ ಮುಚ್ಚಟೆಯಿಂದ ಕಾಳಜಿ ಮಾಡಿದ.ಅವರಿಬ್ಬರ ತಂದೆ ತಾಯಿಯರೂ ಬಂದು ನೋಡಿಕೊಂಡರು. ಏಕಾಂತದಲ್ಲಿ ಅವರಿಬ್ಬರೂ ತಮ್ಮ ಭಾವೀ ಕೂಸಿನ ಬಗೆಗೆ ಕನಸು ಕಟ್ಟುವುದಿತ್ತು.ಮಗುವಿನ ಹೆಸರು ಕುರಿತು ಚರ್ಚಿಸುವುದಿತ್ತು.ನನಗಂತೂ ಬಹಳ ಖುಷಿ. ಆಹಾ ಎಂತಹ ದಂಪತಿಗಳು. ನಾನೆ ಧನ್ಯ ಎಂದು ಬೀಗುತ್ತಲಿದ್ದೆ.ಅವರಿಗೆ ತಮ್ಮ ಮಗು ಸಾತ್ವಿಕ ಗುಣ ಪ್ರಧಾನವಾದ, ಒಳ್ಳೆಯ ಹೃದಯದ ಪ್ರೇಮಮಯಿ ಆಗಬೇಕೆಂಬ ಬಯಕೆ; ಆದರೆ ಚಿತ್ರಗುಪ್ತನ ಲೆಕ್ಖಾಚಾರದಂತೆ ಅದು ರಜೋಗುಣ ಪ್ರಧಾನವಾದ ಜೀವ ಆಗಬೇಕೆಂದಿತ್ತು.ನಾನು ನನ್ನ ಅನುಭವದ ಮೂಸೆಯಿಂದ ಬೇಕಾದ ಕಸರತ್ತುಗಳನ್ನೆಲ್ಲಾ ತೆಗೆದು ಪ್ರಯೋಗಿಸಿ ಸಾತ್ವಿಕ ಗುಣ ಹೆಚ್ಚು ಮಾಡಲು ಪ್ರಯತ್ನಿಸುತ್ತಿದ್ದೆ. ನನ್ನ ಮೇಲಧಿಕಾರಿಗಳಿಗೆ ಇರಿಸು ಮುರಿಸಾಗದಂತೆ ನನ್ನ ಈ ಕೆಲಸ ನಡೆಸುತ್ತಿದ್ದೆ. ನನಗೆ ಪ್ರೀತಿ-ಪ್ರೇಮ-ಮಮತೆ- ವಾತ್ಸಲ್ಯದ ಅನುಭವ ಚೆನ್ನಾಗಿಯೇ ಆಗುತ್ತಿತ್ತು. ಆದರೆ ಒಂದು ದಿನ ನನ್ನನ್ನು ಹೊತ್ತ ನನ್ನ ಭಾವೀ ತಾಯಿಗೆ ಉಸಿರಾಟದ ತೊಂದರೆ ಕಾಣಿಸಿತು. ವೈದ್ಯರು ಪರೀಕ್ಷಿಸಿ ಅದು ಹೃದಯ ಸಂಬಂಧೀ ಖಾಯಿಲೆಯೆಂದೂ, ಗರ್ಭ ಬೆಳೆದಂತೆಲ್ಲಾ ಅದು ಹೆಚ್ಚಾಗುವುದೆಂದೂ, ಆಕೆಯ ಜೀವಕ್ಕೇ ಅಪಾಯವೆಂದೂ ಘೋಷಿಸಿಬಿಟ್ಟರು. ಅವನು ಹೌಹಾರಿದ. ತನ್ನ ಜೀವದಂತಿರುವ ಹೆಂಡತಿಯನ್ನು ಕಳೆದುಕೊಳ್ಳಲು ಅವನು ತಯಾರಿರಲಿಲ್ಲ. ಇಂತಹ ಗಂಡಂದಿರು ಎಲ್ಲಿ ತಾನೇ ಸಿಗುವರು. ಬಹಳ ವೇದನೆಯಿಂದ ನಿರ್ಧಾರಕ್ಕೆ ಬಂದು ಗರ್ಭ ನಿವಾರಣೆ ಮಾಡಿಸಿದರು. ನಾನು ಮತ್ತೆ’ ’ಕೇರ್ ಆಫ಼್ ಫ಼ುಟ್-ಪಾತ್’ ಆದೆ. ಆಹಾ, ಇದೇನು ನಾನು ಇಂಗ್ಲೀಷ್ ಭಾಷೆ ಮಾತಾಡುತ್ತಿದ್ದೇನೆಂದು ಯೋಚಿಸಿದಿರೋ? ಇಷ್ಟು ದಿನ ಇಂಗ್ಲೆಂಡಿನಲ್ಲಿದ್ದ ಮೇಲೆ ಅವರ ಭಾಷೆ ಕಲಿಯದಿದ್ದರಾಗುವುದೇ?
ಈ ಮೊದಲು ಹೇಳಿದ ಅನುಭವ ನನ್ನಲ್ಲಿ ಸಾಕಷ್ಟು ಚಿಂತನೆಯ ತರಂಗಗಳನ್ನೆಬ್ಬಿಸಿತು.ಮಾನವ ಸಮಾಜ, ಅವರ ಜೀವನದ ಸಂಕೀರ್ಣತೆಗಳು,ಅವರ ಭಾವನೆಯ ವ್ಯಾಪ್ತಿಗಳು ನನಗೆ ಸಾಕಷ್ಟು ಅರ್ಥವಾಗಿದ್ದರೂ ಅವರ ನಿರ್ಧಾರಗಳು,ನಡತೆಗಳು ಗೊಂದಲ ಮೂಡಿಸುತ್ತಲೇ ಇದ್ದವು.ಈ ವೇಳೆಗಾಗಲೇ ನನ್ನ ಅವಧಿಯ ಆರು ತಿಂಗಳುಗಳು ಮುಗಿದೇ ಹೋಗಿದ್ದವು.ನನ್ನ ಡೆಪ್ಯೂಟೇಷನ್ ಮುಗಿಯುವ ಹಂತಕ್ಕೆ ಬರುತ್ತಿತ್ತು. ಇಷ್ಟರಲ್ಲಿ ನನ್ನ ಸಾಧನೆಗೆ ಪ್ರತಿಫಲ ಸಿಕ್ಕಿದರೆ ಸರಿ ಇಲ್ಲವಾದರೆ ಮತ್ತೆ ಕುರಿ-ಕೋಳಿಗಳ ಸಹವಾಸಕ್ಕೆ ಹೋಗಬೇಕಾಗಿತ್ತು.
ಭರದಿಂದ ಹುಡುಕಾಟಕ್ಕೆ ತೊಡಗಿದೆ. ಇಷ್ಟರಲ್ಲಿ ನನಗೆ ಆಯ್ಕೆ ಮಾಡಿಕೊಳ್ಳುವ ಅನುಭವ ಚೆನ್ನಾಗಿ ಆಗಿತ್ತು. ಬಹಳ ಮುತುವರ್ಜಿ ವಹಿಸಿ ಹುಡುಕಾಟಕ್ಕೆ ತೊಡಗಿದೆ.

ಆಹಾ,, ಕಣ್ಣಿಗೆ ಬಿದ್ದಳು. ಏನು ಮಮತಾಮಯಿ ಕಣ್ಣುಗಳು!! ಥೇಟು ನಮ್ಮ ದೇಶದ ಪಂಢರೀಬಾಯಿಯ ಹಾಗೆ!! ಸೌಮ್ಯ ಮುಖದ ತುಂಬ ಬರೀ ಮಂದಹಾಸ. ಹಣೆಯಲ್ಲಿ ಅಗಲ ಕುಂಕುಮ ಇಲ್ಲ ನೋಡಿ. ಈಕೆ ಹಿಂದೂ ಹೆಂಗಸಲ್ಲವಲ್ಲ!
ಉದ್ಯಾನವನದಲ್ಲಿ ತನ್ನ ಮೂವರು ಮಕ್ಕಳೊಂದಿಗೆ ಆಡುತ್ತಿದ್ದಾಳೆ. ಮಕ್ಕಳೂ ಮುದ್ದಾಗಿವೆ. ತಾಯಿಯೊಡನೆ ಪ್ರೀತಿಯಿಂದ ಆಡುತ್ತಿವೆ. ಎಂಟು, ಆರು ಮತ್ತು ಮೂರು ವರ್ಷದ ಗಂಡು ಮಕ್ಕಳು. ಅವರುಗಳು ಧರಿಸಿರುವ ಬಟ್ಟೆ ಚೆನ್ನಾಗಿಲ್ಲ. ಕೆಲವು ಕಡೆ ಕಿತ್ತು ಹೊಗಿದೆ. ಆದರೇನು, ಸಂತೋಷಕ್ಕೆ ಕಡಿಮೆ ಇಲ್ಲ. ಇನ್ನೂ ಹತ್ತಿರ ಹೋದೆ. ಆ ಮಕ್ಕಳ ಸಿಹಿ ಮಾತುಗಳು ಕೇಳುತ್ತಿವೆ. ಮಕ್ಕಳು ತಾಯಿಯನ್ನು ಅಪ್ಪ ಯಾವಾಗ ಬರುತ್ತಾನೆಂದು ಕೇಳುತ್ತಿವೆ. ಸಂಸಾರವನ್ನು ನಡೆಸುವ ಅಂಬಿಗನಾಗಿ ಅವನು ಪಡುವ ಕಷ್ಟಗಳನ್ನು ಆ ಮಮತಾಮಯಿ ಅವುಗಳ ಭಾಷೆಯಲ್ಲಿ ತಿಳಿಸಿ ಹೇಳುತ್ತಿದ್ದಾಳೆ. ಇಂದು ಸಂಬಳದ ದಿನವಾದ್ದರಿಂದ, ಏನಾದರೂ ವಿಶೇಷ ತಿನಿಸು ತರಬಹುದೆಂಬ ಭರವಸೆಯನ್ನೂ ನೀಡುತ್ತಿದ್ದಾಳೆ. ಅಷ್ಟರಲ್ಲಿ, ಅಗೊ ನೋಡಿ, ಅವುಗಳ ಕಣ್ಣುಗಳಲ್ಲಿ ಬೆಳಕು! ಅವರಪ್ಪ ಬರುತ್ತಿರುವ. ಮಕ್ಕಳು ಅವನೆಡೆಗೆ ಓಡುತ್ತಿವೆ. ಅವನ ಬಟ್ಟೆ ಬಹಳ ಕೊಳೆಯೆಂದು ಕಾಣುತ್ತಿದೆ, ಯಾವುದೋ ಕಾರ್ಮಿಕನಿರಬೇಕು.ಅದರ ಪರಿವೆ ಅವರ್ಯಾರಿಗೂ ಇಲ್ಲ. ಮಕ್ಕಳು ಜೋತು ಬೀಳುತ್ತಿವೆ. ಆಕೆ ಅವನಿಗೆ ಮುತ್ತಿಡುತ್ತಿದ್ದಾಳೆ. ಎಲ್ಲರ ಮುಖದಲ್ಲೂ ಸಂತಸ ನೆಮ್ಮದಿ. ಚೀಲದಲ್ಲಿರುವ ಸಿಹಿತಿನಿಸು ಮಕ್ಕಳಿಗೆ ಕೊಡುತ್ತಿದ್ದಾನೆ. ಎಲ್ಲ ತಿಂದು ಆಡುತ್ತಿದ್ದಾರೆ. ರಾತ್ರಿಯಾಗುತ್ತಾ ಬಂತು.ಮನೆಗೆ ಹೋಗುತ್ತಿದ್ದಾರೆ. ಆಹಾ ಹುಟ್ಟಿದರೆ ಈ ತಾಯಿಯ ಮಡಿಲಲ್ಲಿ ಹುಟ್ಟಬೇಕು ಎಂದು ನಾನು ನಿರ್ಧರಿಸಿ ಅವರೊಡನೆ ಮನೆಗೆ ನುಗ್ಗಿದೆ. ಊಟವಾಗಿ ಮಲಗುವ ಸಿದ್ಧತೆ ನಡೆಸಿದ್ದಾರೆ. ಆ ಗಂಡ ಹೆಂಡಿರು ತಮಗೊಂದು ಹೆಣ್ಣುಮಗು ಇದ್ದರೆ ಚೆಂದವೆಂದು ಮಾತಾಡಿಕೊಳ್ಳುತ್ತಿದ್ದಾರೆ. ಆ ಸಮಯವೂ ಬಂತು. ನಾನು ಬೇರೆಲ್ಲ ಸೋಂಬೇರಿ ಆತ್ಮಗಳಿಗಿಂತಲೂ ಜಾಗೃತನಾಗಿದ್ದು ಎಣ್ಣೆ ಬರುವಾಗ ಕಣ್ಣು ಮುಚ್ಚಿಕೊಳ್ಳಲಿಲ್ಲ. ಸಮಯಕ್ಕೆ ಸರಿಯಾಗಿ ಎಚ್ಚರದಲ್ಲಿದ್ದು ಪ್ರತಿಷ್ಠಾಪಿತನಾದೆ. ಎಲ್ಲ ಸುಸೂತ್ರವಾಗಿ ನಡೆದಿತ್ತು.ಹತ್ತು ವಾರಗಳು ಕಳೆದಿದ್ದವು. ಆಕೆಗೆ ಮನೆಗೆಲಸದ ಜೊತೆಗೆ ಮಕ್ಕಳ ಆರೈಕೆ ಕಷ್ಟವಾಗತೊಡಗಿತು. ಸಹಾಯಕ್ಕೆ ಪಾಪ ಯಾರೂ ಇಲ್ಲ. ಅವನಾದರೋ ಖರ್ಚು ತೂಗಿಸಲು ಹಗಲಿರುಳು ದುಡಿಯುತ್ತಿದ್ದಾನೆ.ತನ್ನ ಮಕ್ಕಳ ಮೇಲಿನ ತನ್ನ ನಿಗಾ ಕಡಿಮೆಯಾಗುತ್ತಿರುವುದು ಅರಿವಾಗುತ್ತಲೇ ಈ ತಾಯಿಯ ಹೃದಯ ತಳಮಳಿಸತೊಡಗಿತು. ಅಪರಾಧೀ ಮನೋಭಾವ ಕಾಡುತ್ತಿದೆ. ಅವನಿಗೂ ಹೇಳಿದಳು. ಅವನಾದರೂ ಏನು ಮಾಡುತ್ತಾನೆ? ಅಸಹಾಯಕ. ಕಡೆಗೆ ಹೀಗೇ ಮುಂದುವರಿದಲ್ಲಿ ತನ್ನ ಮಕ್ಕಳಿಗೆ ತಾನು ನ್ಯಾಯ ಒದಗಿಸಲಾಗುವುದಿಲ್ಲವೆಂಬ ಜಿಜ್ಞಾಸೆಯಲ್ಲಿ ಬೆಂದು ಗರ್ಭ ನಿವಾರಣೆಗೆ ಮೊದಲಾಗುತ್ತಾಳೆ. ತನ್ನ ಈ ಅಸಹಾಯಕ ಸ್ಥಿತಿಗೆ ಮರುಗುತ್ತಾ , ಅಳುತ್ತಾ ಆಸ್ಪತ್ರೆಗೆ ನಡೆಯುತ್ತಾಳೆ. ವೈದ್ಯರು ನಿರ್ವಿಕಾರ ಮನೋಭಾವದಿಂದ ತಮ್ಮ ಕೆಲಸ ಮಾಡಿದ್ದಲ್ಲದೆ ನನ್ನನ್ನೂ ಉಚ್ಛಾಟಿಸುವಲ್ಲಿ ಯಶಸ್ವಿಯಾಗುತ್ತಾರೆ. ಅಲ್ಲಿಗೆ ನನ್ನ ಅವಧಿ ಮುಗಿಯುತ್ತಾ ಬಂದಿತ್ತು. ನನಗೂ ಈ ಮನುಷ್ಯ ಜೀವನದ ಗೊತ್ತುವಳಿ ಇಲ್ಲದ ಗುರಿಗಳು, ಗುರಿಗಳೇ ಇಲ್ಲದ ನಿರ್ಧಾರಗಳು,ಪ್ರೀತಿ ಪ್ರೇಮದ ಹೊರತಾಗಿಯೂ ಉಳಿದ ಅಂಶಗಳು ಅವರ ಜೀವನವನ್ನು ನಿರ್ದೇಶಿಸುವ ಪರಿ,ಅವರ ಭಾವನೆಗಳು ಹರಿಯುವ ಲಹರಿ, ಬದುಕಿನ ಅನುಭವಗಳನ್ನು ಬೇಗನೆ ಪಡೆಯುವ ತರಾತುರಿ,ಅದರ ನಿಟ್ಟಿನಲ್ಲಿ ಅನುಭವಿಸುವ ಕಿರಿ ಕಿರಿ “ಬಿಸಿಲಿಗಾರದ ಕೋತಿ ಬಂಡೆ ಮೇಲ್ ಕುಳಿತಂತೆ” ಎನ್ನುವ ಹಾಗೆ ನನ್ನನ್ನು ಹೈರಾಣ ಮಾಡಿದ್ದವು. ಸರಳತೆಯು ವಿರಳವಾಗಿ, ಸಂಕೀರ್ಣತೆಯು ಸಂಪೂರ್ಣವಾಗಿ ಆವರಿಸಿದ್ದ ಈ ಮನುಷ್ಯರ ಜೀವನ ನನ್ನಲ್ಲಿ ಭರವಸೆಯ ಆಶಾಕಿರಣಗಳನ್ನು ಉಳಿಸಿರಲಿಲ್ಲ ಅಷ್ಟೇಅಲ್ಲ, ಭ್ರಮನಿರಸನಗೊಳಿಸಿದ್ದವು.ಪ್ರಾಣಿಗಳೇ ವಾಸಿ.ನಿಷ್ಕಾಮ ಕರ್ಮವನ್ನು ಅದರ ಅರಿವಿಲ್ಲದೆಯೂ ಬಹುಮಟ್ಟಿಗೆ ಮನುಷ್ಯನ ವ್ಯಾಖ್ಯೆಗೆ ಮೀರಿ ಆಚರಿಸುತ್ತವೆ. ಈ ಅರಿವು ನನಗಾಗುತ್ತಿದ್ದಂತೆ ನಾನು ಪುನ್ಃ ಯಮಧರ್ಮನ ಆಸ್ಥಾನದ ಕಡೆಗೆ ಧಾವಿಸಿದೆ. ಯಮ ಆಸಕ್ತಿಯಿಂದ ಸ್ವಾಗತಿಸಿದ. ಚಿತ್ರಗುಪ್ತ ತನ್ನ ಬಿಳಿ ಮೀಸೆಯಡಿಯಲ್ಲಿ ಕುಹಕ ನಗೆ ಬೀರುತ್ತಿದ್ದುದು ನನ್ನರಿವಿಗೆ ಬಾರದೆ ಇರಲಿಲ್ಲ. ನನ್ನೀ ಅನುಭವದ ಹಿಂದೆ ಇವನ ಕುಟಿಲ ಕೈವಾಡವಿರಬಹುದೋ ಎಂಬ ಸಂದೇಹ ನನ್ನಲ್ಲಿ ಮೂಡದೆ ಇರಲಿಲ್ಲ. ಪುರಂದರ ದಾಸರ ಮಾನವ ಜನ್ಮ ದೊಡ್ಡದು ಎಂಬ ಹಾಡಿನಿಂದ ಪ್ರಾರಂಭವಾದ ನನ್ನೀ ಅನ್ವೇಷಣೆ “ಆದದ್ದೆಲ್ಲಾ ಒಳಿತೇ ಆಯಿತು” ಎಂಬ ಅವರ ಹಾಡಿನಿಂದಲೇ ಮುಕ್ತಾಯ ಸ್ವಾಮಿ.
ನನ್ನ ಅಂತರಾಳವನ್ನು ನಿಮ್ಮ ಮುಂದೆ ತೆರೆದಿಟ್ಟೆ. ನಿಮಗೇನಾದರೂ ಆತ್ಮನ ಬಗ್ಗೆ ತಿಳಿಯಿತೋ? ಸರಿ. ಇನ್ನೂ ತಿಳಿದಿಲ್ಲವಾದರೆ ಅಥವಾ ಮೊದಲೇ ಕಲಸಿದ್ದ ಮನಸಿಗೆ ಇದೊಂದು ಮೇಲೋಗರವಾಗಿದ್ದರೆ ನಿಮ್ಮ ಕ್ಷಮೆ ಇರಲಿ. ನಿಮ್ಮನ್ನು ನಾನು ಅರಿಯಲಾಗಲಿಲ್ಲ ಹಾಗೇ ನನ್ನನ್ನು ನೀವು!!!.

ಸುದರ್ಶನ ಗುರುರಾಜರಾವ್.

ಭಾರತ ದೇಶ -ಕನ್ನಡ ನಾಡು – ಕನ್ನಡ ಭಾಷೆ ಕುರಿತ ಪಿ.ಬಿ.ಶ್ರೀನಿವಾಸರ ಹಾಡುಗಳು

ಭಾರತ ದೇಶ -ಕನ್ನಡ ನಾಡು –  ಕನ್ನಡ ಭಾಷೆ  ಕುರಿತ ಪಿ.ಬಿ.ಶ್ರೀನಿವಾಸರ ಹಾಡುಗಳು

 

Map of Karnataka

ಸಾಹಿತ್ಯ ಹಾಗೂ ಸಂಗೀತ ಎರಡರಲ್ಲೂ ಶ್ರೀಮಂತವಾದ ಹಾಡುಗಳನ್ನು ಮಧುರವಾಗಿ ಹಾಡಿ ನಮಗಾಗಿ ಬಿಟ್ಟು ಹೋಗಿದ್ದಾರೆ ಜೇನುದುಂಬಿ, ಗಾನ ಗಾರುಡಿಗ, ಕಾಕಿನಾಡ ಕೋಗಿಲೆ,  ಎಂದು ಹೆಸರಾದ ಮಧುರ ಕಂಠದ ಗಾಯಕ ನಮ್ಮ ಪಿ.ಬಿ.ಶ್ರೀನಿವಾಸ್..

ಅವರು ಹಾಡಿದ ಹಾಡುಗಳು ನಮ್ಮ ಜೀವನದ ಪ್ರತಿಯೊಂದು ಪ್ರಸಂಗಕ್ಕೂ ಹಲವಾರು ಇವೆ. ೫೦ ವರ್ಷ ಗಳಷ್ಟು ಹಳೆಯದಾದರೂ ಇನ್ನೂ ಅನುರಣಿಸಿ ನಮ್ಮ ಭಾಷೆಯ ಸೌಂದರ್ಯವನ್ನು ಜೀವಂತವಾಗಿಟ್ಟಿವೆ.ಅಂತರ್ಗತ ಭಾವನೆಗಳಿಗೆ, ಶ್ರುತಿ ಲಯಗಳಿಗೆ ಒತ್ತುಕೊಟ್ಟು ಹಾಡಿದ್ದು ಇವರ ವಿಶೇಷತೆ. ತಾಯಿಯ ಹಾಡುಗಳಿಂದ ಪ್ರಭಾವಿತರಾಗಿ,ಯಾವ ಗುರುಮುಖದಿಂದಲೂ ಅಧಿಕೃತವಾಗಿ ಸಂಗೀತ ಕಲಿಯದಿದ್ದರೂ ಸಂಗೀತ ಸರಸ್ವತಿಯನ್ನು ತಮ್ಮ ಸತತ ಪರಿಶ್ರಮದಿಂದ ಒಲಿಸಿಕೊಂಡು ಗಾಯನ ಶಿಖರದ ಉತ್ತುಂಗವನ್ನು ತಲುಪಿದ್ದು ಈಗ ಇತಿಹಾಸ.

ಕರ್ನಾಟಕ ಸಂಗೀತ ರುಚಿಸದೆ ಉತ್ತರ ಭಾರತದ ಹಿಂದೂಸ್ತಾನಿ ಶೈಲಿಯಲ್ಲಿ ಆಗಿನ ಗಾಯಕರುಗಳ ಹಾಡುಗಳನ್ನು ಶ್ರದ್ಧೆಯಿಂದ ಆಲಿಸಿ -ಅನುಕರಿಸಿ ಕಲಿತಿದ್ದರೆಂದರೆ ಇವರು  ಒಂದು ಬಗೆಯ ಆಧುನಿಕ ಏಕಲವ್ಯರೆನ್ನಬಹುದು.  .

ಅವುಗಳಲ್ಲಿ ಕನ್ನಡ ಭಾಷೆ- ನಾಡು -ಸಾಹಿತ್ಯ ಕುರಿತಾಗಿ ಅವರ ಕೆಲವು ಹಾಡುಗಳ ಪಟ್ಟಿ ಇಲ್ಲಿದೆ. ಹಾಡುಗಳನ್ನು ಕುರಿತಾದ ಸಂಕ್ಷಿಪ್ತ ಟಿಪ್ಪಣಿ ಸೇರಿಸಿದ್ದೇನೆ (ನನಗೆ ತಿಳಿದಷ್ಟು) ನಿಮ್ಮ ಅವಗಾಹನೆಗಾಗಿ.

 

 • ಅಪಾರ ಕೀರ್ತಿ ಗಳಿಸಿ ಮೆರೆದ ಭವ್ಯ ನಾಡಿದು : ವಿಜಯನಗರದ ವೀರಪುತ್ರ  ನಾಯಕ ನಟ ಸುದರ್ಶನ ಅವರಿಗಾಗಿ ಹಾಡಿದ್ದು. ಅಧಿಕೃತವಾಗಿ ಕನ್ನಡದಲ್ಲಿ ಅವರ ಪಾದಾರ್ಪಣೆ
 • ಕನ್ನಡವೇ ತಾಯ್ನುಡಿಯು ಕರುನಾಡು ತಾಯ್ನಾಡು : ಅನ್ನಪೂರ್ಣ ಚಿತ್ರದಲ್ಲಿ ಹಿನ್ನೆಲೆ ಗಾಯಕನಾದ ನಟನಿಗೆ ಪಿ.ಬಿ.ಎಸ್ ಹಾಡಿದ ಹಿನ್ನೆಲೆ ಗಾಯನ!
 • ಬಾ ತಾಯೆ ಭಾರತಿಯೇ  ಭಾವ ಭಾಗೀರಥಿಯೆ; ತಾಯಿ ಕರುಳು ಚಿತ್ರದ ಈ ಸುಂದರ ಹಾಡಿನ ನಿಜವಾದ ಕತೃ  ಬಹುಮುಖ ಪ್ರತಿಭೆಯ ನಟ ಟಿ.ಎನ್.ಬಾಲಕ್ರಿಶ್ಣ ಅವರು. ಎಲ್ಲಾ ದಾಖಲೆಗಳಲ್ಲಿ  ಜಿ ವಿ  ಅಯ್ಯರ್ ಇ ಹಾಡಿನ ರಚನೆಕಾರರೆಂದು ನಮೂದಿಸಿದೆ. ಆದರೆ ತಮ್ಮ ಎರಡನೆಯ ಮಗಳು ಭಾರತಿ ಹುಟ್ಟಿದಾಗ ಆ ಮಗುವಿನ ಆಗಮನದ ಸಂಭಮದಲ್ಲಿ ರಚಿಸಿದ ಅನನ್ಯ ಗೀತೆ.
 • ಕನ್ನಡತಿ ನಮ್ಮೊಡತೀ ಕಣ್ಣು ತೆರೆದು ನೋಡು : ಪುನರ್ಜನ್ಮ, 
 • ಕಲಿಯಿರೊಂದು ಪಾಠವನು ಕನ್ನಡತಾಯ್ ಮಕ್ಕಳೇ : ಮಂತ್ರಾಲಯ ಮಹಾತ್ಮೆ ಚಿತ್ರದಲ್ಲಿ ರಾಘವೇಂದ್ರ ಸ್ವಾಮಿಗಳ ಪಾತ್ರದಲ್ಲಿ ರಾಜಕುಮಾರ್ ಅವರು  ತಮ್ಮ ಪೂರ್ವಾಶ್ರಮದಲ್ಲಿ ಮಕ್ಕಳಿಗೆ ಕಲಿಸುವ ಗೀತೆ
 • ನಮ್ಮ ತಾಯಿ ಭಾರತಿ ನಮ್ಮ ನಾಡು ಭಾರತ: ನಾಂದಿ ಚಿತ್ರದಲ್ಲಿ ಶಿಕ್ಷಕ ಪಾತ್ರದ   ರಾಜಕುಮಾರರಿಗಾಗಿ ಹಾಡಿದ ಹಾಡು.
 • ಮೈಸೂರು ದಸರಾ ಎಷ್ಟೊಂದು ಸುಂದರಾ : ಕರುಳಿನ ಕರೆ ಚಿತ್ರದಲ್ಲಿ ರಾಜಕುಮಾರ್-ಸುದರ್ಶನ  ಅವರ ನಟನೆಗೆ ಹಾಡಿದ ಹಾಡು
 • ಒಲವಿನಾ ಪ್ರಿಯಲತೆ ಅವಳದೇ ಚಿಂತೆ: ಜಿ.ಕೆ.ವೆಂಕಟೇಶ್ ಅವರ ಸಂಗೀತ ಇರುವ ಈ ಭಾವಪೂರ್ಣ ಗೀತೆ ಸಂಪೂರ್ಣ ಕನ್ನಡ ನಾಡಿನ ಕುರಿತಲ್ಲದಿದ್ದರೂ  ಕನ್ನಡ ನಾಡಿನ ಸಂಸ್ಕೃತಿಯಲ್ಲಿ ಅರಳಿದ   ಪ್ರಿಯ ಸತಿಯರ ಗುಣಲಕ್ಷಣಗಳನ್ನು  ಬಣ್ಣಿಸುತ್ತದೆ. ಇದನ್ನು ಪಿ.ಬಿ.ಎಸ್ ರ ಕಂಠದಲ್ಲಿ ಕೇಳಿಯೇ ಅನುಭವಿಸಬೇಕು.
 • ದೇವನೊಬ್ಬ ನಾಮ ಹಲವು ಭಕುತರೆನಿತೋ ಭುವಿಯಲಿ : ನಮ್ಮ ಊರ ದೇವರು ಚಿತ್ರದಲ್ಲಿ ರಾಜೇಶ್ ಅವರಿಗಾಗಿ  ಹಾಡಿದ್ದು. ಕನ್ನಡ ಮಾತೆಯನ್ನು ಭಾರತಮಾತೆಯ ಮಗಳಾಗಿ ಸಾಮರಸ್ಯ ಬೆಸೆಯುವ ಗೀತೆ.
 • ಕಣ್ಣಾರೆ ನೀ ನೋಡು ಕನ್ನಡ ಸೀಮೆ ಮನಸಾರೆ ಕೊಂಡಾಡು ಈ ನಾಡ ಹಿರಿಮೆ: ‘ಚಿರಂಜೀವಿ’ ಎಂಬ ಕನ್ನಡದಲ್ಲಿ  ಮೂಡಿಬಂದ ಒಂದು ಅಮೋಘ ಚಿತ್ರದ ಈ ಹಾಡು ಕನ್ನಡ ಭಾಷೆ, ಸಾಹಿತ್ಯ , ನಾಡು, ವೈಭವ, ಇತಿಹಾಸ, ಎಲ್ಲವನ್ನೂ ಸಮಗ್ರವಾಗಿ ಚಿತ್ರಿಸುವ ಪರಿಪೂರ್ಣ ಗೀತೆ. ಈ ಚಿತ್ರದ ಪ್ರತಿಯೊಂದು ಹಾಡೂ ಒಂದೊಂದು ರತ್ನವೇ ಸರಿ. ವಿಜಯ ನಾರಸಿಂಹ ಅವರ ಸಾಹಿಯ್ತ, ವಿಜಯಭಾಸ್ಕರ್ ಸಂಗೀತ ಕಳಶಪ್ರಾಯವಾಗಿದೆ. ಮಗುವೊಂದು ಕ್ಯಾನ್ಸರ್ ಖಾಯಿಲೆಗೆ ತುತ್ತಾದಾಗ  ಅದರ ಪರಿವಾರದಲ್ಲಿ ಆಗುವ ತವಕ-ತಲ್ಲಣಗಳನ್ನು, ನೋವಿನಲ್ಲೂ ತ್ಯಾಗಮಯಿಯಾಗಬಹುದಾದ ಸಾಮಾಜಿಕ, ಮಾನವೀಯ ಕಾಳಜಿಯನ್ನು ಮನದಲ್ಲಿ ಮೂಡಿಸುವ ಅದ್ಭುತ ಚಿತ್ರ.
 • ಒಂದೇ ನಾಡು ಒಂದೇ ಕುಲವು ಒಂದೇ ದೈವವೂ: ನಾಡ ಭಕ್ತಿ ಗೀತೆ ಎಂದೆನ್ನಬಹುದು. ಮೇಯರ್ ಮ್ಮುತ್ತಣ್ಣ ಚಿತ್ರದ್ದು.
 • ನಮ್ಮ ತಾಯಿ ಭಾರತಿ ಪಡೆದ ಪುನಿತ ಸಂಸ್ಕೃತಿ ವಿಶ್ವ ದಯಾ ಕೀರುತಿ ನಡೆಸುವ ವರ್ಧಂತಿ : ಚಿತ್ರ ನನಗೆ ತಿಳಿಯದು.
 • ಕನ್ನಡ ನಾಡಿನ ವೀರ ರಮಣೀಯ: ನಾಗರಹಾವು ಚಿತ್ರದಲ್ಲಿ ಒನಕೆ ಓಬವ್ವ ಪಾತ್ರ -ಕಥೆಯನ್ನು ಬಿಂಬಿಸುವ ಹಾಡು- ವಿಷ್ಣುವರ್ಧನರಿಗಾಗಿ ಹಾಡಿದ್ದು.
 • ಈ ದಿನ ಮಜಾ ಕಂಡೆನು ನಿಜ ಆದೆನು  ರಾಜ: ದೇವರ ಮಕ್ಕಳು ಚಿತ್ರದ ಹಾಡು. ಸೆರೆಯಿಂದ ಬಿಡುಗಡೆಯಾಗಿ ಬರುವ ರಾಜಕುಮಾರರ ಪಾತ್ರಕ್ಕೆ ಹಿನ್ನೆಲೆ ಗಾಯನ.
 • ಆಗದು ಎಂದಿ ಕೈಕಟ್ಟಿ ಕುಳಿತರೆ : ಬಂಗಾರದ ಮನುಷ್ಯಾ ಚಿತ್ರದಲ್ಲಿ ಭಾಷೆ, ನಟನೆ,ಸಾಹಿತ್ಯ ಸಂಗೀತ, ಸ್ಫೂರ್ತಿಯ ಸಂದೇಶ ತುಂಬಿದ ಬದುಕಿನ  ಬಂಗಾರವನ್ನು ಎಲ್ಲ ರೀತಿಯಲ್ಲಿ ಎಲ್ಲ ಜನರಿಗೆ ಮುಟ್ಟಿಸಿದ ಚಿತ್ರ ಹಾಗೂ ಕಲಶಪ್ರಾಯವಾದ ಗೀತೆ.    
 • ನಾವಾಡುವ ನುಡಿಯೇ ಕನ್ನಡ ನುಡಿ: ಗಂಧದ ಗುಡಿ ಚಿತ್ರದ ಅತಿ ಜನಪ್ರಿಯ ಗೀತೆ. ಈ  ಮಾಧುರ್ಯ ಪಿ.ಬಿ.ಎಸ್ ಅಲ್ಲದೆ ಇನ್ನೊಬ್ಬರು ಹೇಳಿದ್ದರೆ ಹೇಗಿರುತ್ತಿತ್ತೋ ತಿಳಿಯದು. ಅನುಕರಿಸಿದವರೆಲ್ಲರೂ ತಮ್ಮ ಪರಿಮಿತಿಯನ್ನು ಮೀರಲಾಗದೇ ಸೋತಿದ್ದಾರೆ.
 • ಬೆಳೆದಿದೆ ನೋಡಾ ಬೆಂಗಳೂರು ನಗರ ಸಂಸ್ಕೃತಿ ಕಲೆಗಳ ಹೆಮ್ಮೆಯ ನಗರ: ಮನೆ ಕಟ್ಟಿ ನೋಡು ಚಿತ್ರದ ಆರಂಭ ಗೀತೆ .  ಸಿ.ವಿ ಶಿವಶಂಕರ ಅವರ ರಚನೆ.
 • ನಾ ನೋಡಿ  ನಲಿಯುವ ಕಾರವಾರ ಓ ಕಾರವಾರ ಕಡಲಿನ ತೀರ ನಾ ನೋಡಿ  ನಲಿಯುವ ಕಾರವಾರ: ಮಹಡಿ ಮನೆ ಚಿತ್ರದಲ್ಲಿ ಸಿ.ವಿ ಶಿವಶಂಕರ್ ಅವರ ಹಾಡಿಗೆ ದನಿಯಾಗಿಹರು. ಅಪರೂಪದ ಗೀತೆ.
 • ಕೊಡಗಿನ ಕಾವೇರಿ- ಕಾವೇರಿ ನೀ ಬೆಡಗಿನ ವಯ್ಯಾರಿ: ಶರಪಂಜರ ಚಿತ್ರದ ಈ ಅದ್ಭುತ ಗೀತೆ ತನ್ನ ಸಾಹಿತ್ಯ ಸಂಗೀತಕ್ಕಷ್ಟೇ ಅಲ್ಲದೆ ಚಿತ್ರೀಕರಣದ ದೃಶ್ಯ ಸೌಂದರ್ಯಕ್ಕೂ ಹೆಸರಾಗಿದೆ. ಕಾವೇರಿ ನದಿಯ ನೆಪದಲ್ಲಿ ಕನ್ನಡ ನಾಡನ್ನು ವರ್ಣಿಸುವ ಶ್ರೀಮಂತ ಗೀತೆ.
 • ನೀಡಿ ಬನ್ನಿ ಪ್ರಾಣದಾನ ಉಳಿಸ ಬನ್ನಿ ಮಾನ ಹರಿಸ ಬನ್ನಿ ದೇವಗಂಗೆ : ತೂಗುದೀಪ ಚಿತ್ರದ ಹಾಡು. ನಮ್ಮ ಚಿ ಉದಯಶಂಕರ ಅವರ ತಂದೆ ಚಿ.ಸದಾಶಿವಯ್ಯ ನವರ ರಚನೆ.
 • ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ ; ಪರೋಪಕಾರಿ ಚಿತ್ರದ  ಗೀತೆ. ;
 • ಜನ್ಮ ಜನ್ಮದಾ ಅನುಬಂಧ ಹೃದಯ ಹೃದಯ ಗಳ ಪ್ರೇಮಾನುಬಂಧ: ಸಾಕ್ಷಾತ್ಕಾರ ಚಿತ್ರಕ್ಕೆ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಪಾಂಡಿತ್ಯ ಪೂರ್ಣ ಗೀತೆ. ರಂಗರಾವ್ ಅವರ ಸಂಗೀತದಲ್ಲಿ ಮೂಡಿಬಂದ ಹಾಡಿನ ಮೊದಲಲ್ಲಿರುವ ಆಲಾಪದಲ್ಲಿ ಪಿ.ಬಿ.ಎಸ್ ತುಂಬಿದ ಭಾವ ಹೃದಯಂಗಮ.
 • ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ ಭಿಕ್ಷುಕನಾದರೂ ಕನ್ನಡ ನಾಡಲ್ಲೇ ಮಡಿವೆ: ಇದೂ ಕೂಡಾ ಕನ್ನಡ ನಾಡಿನ ವೈಭವವನ್ನು ಸಮಗ್ರವಾಗಿ ವಿವರಿಸುವ ಗೀತೆ. ಎಸ್. ಜಾನಕಿ ಅವರೊಡನೆ ಪಿ.ಬಿ.ಎಸ್ ಹಾಡಿದ್ದಾರೆ.
 • ಜಯ ಭಾರತ ಜನನಿ ಯ ತನುಜಾತೆ ಜಯಹೇ ಕರ್ನಾಟಕ ಮಾತೆ. : ಕು.ವೆಂ.ಪು ಅವರ ನಾಡಗೀತೆಯನ್ನು ಮೊದಲು ಹಾಡಿದ್ದು ಪಿ.ಬಿ.ಎಸ್.
 • ಯಾರು ಏನು ಮಾಡುವರು ನನಗೇನು ಕೇಡು ಮಾಡುವರು : ಕ್ರಾಂತಿ ವೀರ
 • ಕನ್ನಡದ ಕುಲದೇವಿ ಕಾಪಾಡು ಬಾ ತಾಯಿ : ಪೋಸ್ಟ್ ಮಾಸ್ಟರ್ ಚಿತ್ರದ ಈ ಗೀತೆ ಪಿ.ಬಿ.ಎಸ್ ರ ಭಾವ ಪೂರ್ಣ ಧ್ವನಿಯನ್ನು ಸಂಪೂರ್ಣವಾಗಿ ಬಳಸಿಕೊಂಡ ಮಧುರ ಹಾಡು.  

 

ಇನ್ನೂ ಕೆಲವು ಇದೆಯೆಂದು ನನಗೆ ಅನಿಸುತ್ತಿದೆ. ತಿಳಿದವರು ಸೇರಿಸಿ ಈ ಪಟ್ಟಿಯನ್ನು ಇನ್ನು ಹೆಚ್ಚು ಸಂಪದ್ಭರಿತಗೊಳಿಸಬಹುದು.

 

 

ಸುದರ್ಶನ ಗುರುರಾಜರಾವ್ .

 

ಅನಂತಮೂರ್ತಿ ಉಚ್ಚೆಯೂ ಕಲುಬುರ್ಗಿಯ ಕಾಕ ರಚ್ಚೆಯೂ

ಅನಂತಮೂರ್ತಿ ಉಚ್ಚೆಯೂ ಕಲುಬುರ್ಗಿಯ ಕಾಕ ರಚ್ಚೆಯೂ

ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷೀನೋ , ಇಲ್ಲಾ… ಓತಿಕ್ಯಾಥಕ್ಕೆ ಬೇಲಿ ಸಾಕ್ಷೀನೋ ? ಇವೆರೆಡರಲ್ಲಿ ಅನಂತಮುರ್ತಿ ಮತ್ತು ಎಂ.ಎಂ. ಕಲುಬುರ್ಗಿ ಇಬ್ಬರ ಕಾಂಬಿನೇಷನ್ಗೆ ಚೆನ್ನಾಗಿ ಹೊಂದಿಕೆಯಾಗುವ ಗಾದೆ ಯಾವುದೆಂದು ವಿಜಯ ಕೇಳ್ದ. ಕಾಫಿ ಕುಡಿಯೋಣ ಬನ್ರೋ ಅಂತ ಕರೆದು, ಈಗ ನೋಡಿದ್ರೆ ತಲೆ ಕೆರಕೊಳ್ಳೋ ಪ್ರಶ್ನೆ ಕೇಳ್ತಾನಲ್ಲಾ ಅಂತ ಸೀನ,ಕಿಟ್ಟ, ಜಗ್ಗು,ಪುಟ್ಟ ಮತ್ತು ಸಂಜಯರಿಗೆ ಅನ್ನಿಸದೇ ಇರಲಿಲ್ಲ. ಇದೇನೋ ಮಸಲತ್ತು ಮಾಡ್ತಾ, ಯಾವ್ದೋ ಪ್ರಶ್ನೆ ಕೇಳಿ ಕಾಫಿ ದುಡ್ಡನ್ನು ಯಾರ್ದಾದ್ರೂ ತಲೆಗೆ ಕಟ್ಟೋ ಹುನ್ನಾರ ಮಾಡುತ್ತಿದಾನೆಂದು ಅವರಿಗೆ ಸಂಶಯವಾಯ್ತು. ಕೇಳೇ ಬಿಟ್ರು. “ಅದೆಲ್ಲಾ ಏನಿಲ್ಲ. ಇವತ್ತು ಕಾಫೀ ಖರ್ಚು ನನ್ನದೇ” ಅಂದ ವಿಜಯ.

ಉದ್ಧಾಮ ಸಾಹಿತಿ ಅನ್ನಿಸಿಕೊಂಡ ಯು.ಆರ್. ಅನಂತಮೂರ್ತಿ ಬಾಲ್ಯದಲ್ಲೋ,ತಾರುಣ್ಯದಲ್ಲೋ ದೇವರ ಇರುವನ್ನು ಅಲ್ಲಗಳೆಯಲು, ತನಗೆ ತಾನೇ ಸತ್ಯದ ಸಾಕ್ಷಾತ್ಕಾರಕ್ಕೆ ದೇವರ ಮೂರ್ಥಿಯ ಮೇಲೆ ಉಚ್ಚೆ ಮಾಡಿದ್ದು ಹಾಗೂ ಸಂಶೋಧಕ, ಪ್ರಾಧ್ಯಾಪಕ ಅನ್ನಿಸಿಕೊಂಡ ಕಲುಬುರ್ಗಿ ಅದನ್ನು ಜಗಜ್ಜಾಹೀರು ಮಾಡಿದ್ದು,ಇದರಿಂದ ಹಿಂದೂ ಅಸ್ತೀಕವರ್ಗ ಕ್ರೋಧಗೊಂಡಿದ್ದು, ನಾಸ್ತೀಕ ವರ್ಗ ಪುಳಕಿತಗೊಂದಿದ್ದು, ಸಮಾಜದಲ್ಲಿ ಕೋಲಾಹಲ ಮೂಡಿದ್ದು,,ಪತ್ರಿಕೆಗಳಲ್ಲಿ ಚರ್ಚೆಗೆ ಗ್ರಾಸವಾಗಿ ಪರಸ್ಪರರ ಮೇಲೆ ಕೆಸರೆರೆಚಾತ ನಡೆದಿದ್ದು ಅವರಿಗೆ ಗೊತ್ತಿಲ್ಲದ್ದೇನಾಗಿರಲಿಲ್ಲ. ಇದನ್ನು ಚರ್ಚೆಗೆ ಎಳೆಯಲು ವಿಜಯ ಸಂಚು ನಡೆಸಿದ್ದ.
ಚರ್ಚೆಗೆ ವೇದಿಕೆ ಸಿದ್ಧಮಾಡಲು ವಿಜಯ ವಿಷಯದ ಪರಿಚಯ ಮಾಡಿದ: ಈಗ ಏನಪ್ಪಾ ಅಂದ್ರೆ,,,,
“ಅನಂತಮೂರ್ಥಿ ಹುಡುಗನಾಗಿದ್ದಾಗ,ಅವರ ಮನೆಯಲ್ಲಿ ಬಹಳ ಸಂಪ್ರದಾಯ ಮಾಡುತ್ತಿದ್ದರಂತೆ. ದೇವರು-ದಿಂಡಿರು ಅಂದ್ರೆ ಭಯ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರಂತೆ. ಅನಮ್ತಮುರ್ತಿಗೂ ಒಳ್ಳೆ ಹುಡುಗ ಆಗೂ ಅಂತ ಹೇಳ್ತಿದ್ರಂತೆ. ಬುದ್ಧಿವಂತನಾದ್ರೂ , ಸ್ವಭಾವತಃ ಸೋಮಾರಿಯಾದ ಹುಡುಗ ಮಡಿ-ಪಡಿ,ಪೂಜೆ-ಪುನಸ್ಕಾರ ಅಂತ ಮಾಡಕ್ಕೆ ಬೇಜಾರು ಮಾಡ್ಕೊಂಡು ಉದ್ಧಟನಾಗಿ ದೇವ್ರು ಇಲ್ಲ ಅಂತ ವಾದ ಮಾಡಿಡ್ಡು ಅಲ್ದೆ, ರಾತ್ರೋ ರಾತ್ರಿ ಊರಿನಲ್ಲಿದ್ದ ವಿಗ್ರಹದ ಮೆಲೆ ಉಛ್ಚೆ ಹುಯ್ದು ಪರೀಕ್ಷೆ ಮಾಡಿದ್ನಂತೆ. ಮೂರು ದಿನ ಅದ್ರೂ ಏನೂ ಆಗ್ದೆ ಇದ್ಮೇಲೆ, ಅದನ್ನ ತನ್ನ ಸ್ನೇಹಿತ ಕಲುಬುರ್ಗಿಗೆ ಹೇಳಿಬಿಟ್ಟನಂತೆ. ತುತ್ತೂರಿಗೆ ಮುತ್ತು ಕೊಟ್ರೆ ಅದು ’ಪೀಮ್’ ಅಂತ ಶಬ್ದ ಮಾಡೊಥರ, ಕಲುಬುರ್ಗಿ ಅದ್ನ್ನ ಜಗಜ್ಜಾಹೀರು ಮಾಡಿ ’ಸಮೂಹ ಸನ್ನಿ’ ಉಂಟು ಮಾಡಿದ್ನಂತೆ. ಇದು ವಿಚಾರ. ಇದ್ರ ಬಗ್ಗೆ ಚರ್ಚೆ ಆಗ್ಬೇಕು ಹಾಗೂ ಸಮಂಜಸ ಗಾದೆ ನ ಆರಿಸಬೇಕು” ಅಂತ ತಾಕೀತು ಮಾಡಿದ ವಿಜಯ.

ಕೂತಿದ್ದ ಸೀನ ಕೇಳ್ದ; ”ಅದ್ರಲ್ಲೇನು ತಪ್ಪು ಇದೂ ಒಂದು ಪ್ರಯೋಗಾತ್ಮಕ ಕೆಲಸ.ಸಾಹಿತ್ಯ ಕ್ಷೇತ್ರದಲ್ಲಿ ಮುಂದೆ ಅನಂತಮೂರ್ತಿ ತರಬಹುದಾದ ಪ್ರಯೋಗಗಗಳಿಗೆ ಇದೊಂದು ಮುನ್ನುಡಿ ಬರೆದಂಥ ಕಾರ್ಯ.ಬೆಳೆಯುವ ಪೈರು ಮೊಳಕೆಯಲ್ಲಿ ಎಂಬ ಗಾದೆಗೆ ಅನುಸಾರವಾಗಿಯೇ ಇದೆ.ಬಹಳ ಶ್ಲಾಘನೀಯ” ಎಂದ.
ಕಿಟ್ಟಿ ಸಿಟ್ಟು ನೆತ್ತಿಗೇರಿತು. ಜೋರು ದನಿಯಲ್ಲಿ ಹೇಳಿದ ” ಅಲ್ವೋ ಸೀನ, ದೇವ್ರು ಇದಾನೋ ಇಲ್ವೋ ನೋಡಕ್ಕೆ ಕೆಟ್ಟ ದಾರಿ ಹಿಡಿದು ಮೂರ್ತಿ ಮೇಲೆ ಉಛ್ಛೆ ಹುಯ್ಬೇಕಾ? ಒಳ್ಳೇ ದಾರೀಲಿ ತಪಸ್ಸು ಮಾಡ್ಕೊಂಡು, ಧ್ಯಾನ ಮತ್ತೊಂದು ಮಾಡಿ, ಆಗ್ಲೂ ದೇವ್ರು ಬರ್ಲಿಲ್ಲಾ ಅಂದ್ರೆ, ಆಗ ಪ್ರಪಂಚಕ್ಕೆ ಕೂಗಿ ಹೇಳ್ಬೇಕಾಗಿತ್ತು. ದರ್ದಿದ್ದೋರು ಆ ಕೆಲ್ಸ ಮಾಡ್ಬೇಕು; ಅದನ್ನ ಬಿಟ್ಟೂ…..”
ಅಂತ ಅಂದ.
ಅದಕ್ಕೆ ಪುಟ್ಟ ಬಾಯಿ ಹಾಕಿ,.. ” ಅಲ್ವಲೇ, ಅನಂತಮೂರ್ತಿ ಮೊದ್ಲೇ ಸೋಮಾರಿ ಹುಡುಗ. ಹೆಚ್ಚು ಕಷ್ಟ ಪಡದೇ ತನಗೆ ಬೇಕಾದ್ದು ಹೊಡ್ಕೊಳ್ಳೊ ಬುದ್ಧಿವಂತ. ಇನ್ನು ತಪಸ್ಸು ಮಾಡೋ ಪರಿಪಾಠ ಎಲ್ಲಿಂದ ಬರಬೇಕು,.ನೀನೇ ನೋಡಿಲ್ವೆ??? ಬೆಳೆಯುವ ಪೈರು ಮೊಳಕೇಲಿ .. ಗಟ್ಟೀ ಸಾಹಿತ್ಯ ಸೃಷ್ಟಿ ಮಾಡ್ದೇ ಇದ್ರೂ ದೊಡ್ಡ ಸಾಹಿತಿ ಅಂತ ಜೈಕಾರ ಹಾಕಿಸ್ಕೊಂಡಿಲ್ವೆ, ಪ್ರಶಸ್ತಿ ಗಿಟ್ಟಿಸ್ಕೊಂಡಿಲ್ವೆ,? ತಪಸ್ಸು, ಪರಿಶ್ರಮ, ಸಾಕ್ಷಾತ್ಕಾರ ಇವೆಲ್ಲ ಆವಯ್ಯನ ಡಿಕ್ಷನರೀಲಿ ಇಲ್ಲ.ಅದುಕ್ಕೆ ಆವಯ್ಯನ ಪುಸ್ತಕ ವ್ಯಾಪಾರನೇ ಆಗಲ್ಲ ಅಂತೀನಿ”…. ಅಂದ.

ಕಿಟ್ಟ ತನ್ನ ವಾದಕ್ಕೆ ಪುಷ್ಟಿ ಸಿಕ್ಕಿದ್ದಕ್ಕೆ ತಲೆದೂಗಿದ. ಸೀನ ಬಿದ್ರೂ ಮೀಸೆ ಮಣ್ಣಾಗ್ಲಿಲ್ಲ ಅಂತ ಹೇಳ್ದ..”ಲೋ .. ಗಾಂಪ ನನ್ನ ಮಕ್ಳ.. ಭಾರತೀಯ ತತ್ವ ಶಾಸ್ತ್ರದಲ್ಲಿ ಚಾರ್ವಾಕ ವಾದ ಅನ್ನೋ ನಾಸ್ಥಿಕವಾದಾನೇ ಇದೆ. ದೇವರಿಲ್ಲ ಅಂತ ಹೇಳೋ ಆ ಭೌತಿಕ ವಾದಕ್ಕೆ ದರ್ಶನಗಳ ಸ್ಥಾನ ಕೊಟ್ಟು ಗೌರವಿಸಿದ್ದಾರೆ ನಮ್ಮ ಹಿರಿಯರು.”ಇಲ್ಲೆ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳು.. ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು’ ಅಂತಾನೆ ಅವರ ಹೇಳಿರೋದು. ಅದನ್ನೇ ಅನಂತ ಮೂರ್ತಿ ಸಾಕ್ಷಾತ್ಕಾರ ಮಾಡಿಕೊಂಡಿರೋದು. ಅವರು ಮಾಡಿದ್ರಲ್ಲಿ ಏನ್ ತಪ್ಪು? ”ಸವಾಲು ಎಸೆದ.
ಅದಕ್ಕೆ ಕಿಟ್ಟ, “ಒಂದು ಚಾರ್ವಾಕವಾದದ ಎದುರು ಉಳಿದ ಅಷ್ಟಾದಶ ದರ್ಶನಗಳಿಲ್ವ. ಆವುಗಳಲ್ಲಿ ಆಸ್ತಿಕತೆ ಹೇಳಿಲ್ವ. ದೇವರಿದ್ದಾನೆ ಎಂದು ಅವು ಸಾರುತ್ತಿರುವಾಗ , ಒಂದೇ ಒಂದು ಪಂಥದಿಂದ ಅವರನ್ನೆಲ್ಲ ನೀವಾಳಿಸೊಖ್ಖಾಗುತ್ತ. ನಿನ್ನ ಮೂಗಿನ ನೇರಕ್ಕೆ ಮಾತಾಡ್ಬೇಡ” ದನಿ ಯೇರಿಸಿದ.
ಮತ್ತೆ ಅದೇ ಮೂರ್ಖರ ಸಾವಾಸ ಆಯ್ತು ನೋಡು!! ಅದುಕ್ಕೇ ಸರ್ವಜ್ಞ್ನ ಮೂರ್ಖಂಗೆ ಬುದ್ಧಿಯನು ಅಂತ ಹೇಳಿದ್ದು. ಬೌದ್ಧ ಜೈನ ದರ್ಶನಗಳು ದೇವರ ಅಸ್ತಿತ್ವ ನಿರಾಕರಿಸಿದ ದರ್ಶನಗಳೇ. ಚಾರ್ವಾಕ ವಾದದ ಜೊತೆಗೆ ಅವೂ ಇವೆ” ಶೀನ ಖಂಡಿಸಿದ.
ಇವರೆಲ್ಲರ ತಲೆಯೊಳಗೆ ಹುಳ ಬಿಟ್ಟ ವಿಜಯ ಕಾಫೀ ಖರ್ಚಿನ ಮಜ ಪಡೆಯುತ್ತಿದ್ದ!!!
ಹಾಗಾದ್ರೆ ಹೋಗಿ ನೋಡು!! ಬೌದ್ಧರೂ ಜೈನರೂ ತಂತಮ್ಮ ಮತಗಳಿ ದೇವಾಲಯಗಳನ್ನು ಕಟ್ಟಿದ್ದಾರೋ ಇಲ್ಲವೋ ಅಂತ. ಅವರಲ್ಲೂ ಈಗ ಹಿಂದೂ ಧರ್ಮದಂತೆಯೆ ದೇವರಗಳಿದ್ದಾರೆ. ಬೌದ್ಧರು ಪಗೋಡಾಗಳನ್ನೂ, ಜೈನರು ಬಸದಿಗಳನ್ನೂ ಕಟ್ಟೀ, ಶಿಲ್ಪಕಲೆ ಬೆಳೆಸಿದ್ದಲ್ಲದೆ ಮೂರ್ತಿ ರೂಪದಲ್ಲಿ ಪೂಜಿಸಿ ಧನ್ಯತೆ ಕಾಣುತ್ತಿದ್ದಾರೆ. ನಾವಲ್ಲ ಮೂರ್ಖರು ,ನೀನು!!! ಪುಟ್ಟ ವಾದಿಸಿದ.

ವಿಷಯಾಂತರ ಆದರೆ ತನಗೆ ಸಿಗುವ ಮಜಾ ಕಡಿಮೆಯಾಗುವುದೆಂದು ಮಧ್ಯ ಬಂದ ವಿಜಯ, “ಅಲ್ಲ,, ವೇದಗಳಲ್ಲೂ ಮೂರ್ತಿ ಪೂಜೆ ಹೇಳಿಲ್ವಂತೆ. ಇದು ಹೇಗೆ ಶುರು ಆಯ್ತು? ವೇದಗಳು ದೇವರ ಬಾಯಿಯ ಮೂಲಕವೇ ಬಂದಿದ್ದರಿಂದ, ಮೂರ್ತಿ ಪೂಜೆ ಬಗ್ಗೆ ಅಲ್ಲಿ ಹೇಳಿಲ್ಲದ್ದರಿಂದ ಅನಮ್ತಮೂರ್ತಿ, ದೇವರ ಮೂರ್ತಿಯ ಮೇಲೆ ಉಚ್ಚೆ ಮಾಡಿ ವೇದಗಳ ಪಾರಮ್ಯವನ್ನು ಸಾರಿರಬಹುದೇ???? ಕಿಚಾಯಿಸಿದ!!

ಚರ್ಚೆಯ ವಿಷಯ ವಿಷಮಸ್ಥಿತಿಗೆ ಹೋಗುತ್ತಿರುವುದನ್ನು ಗಮನಿಸಿದ, ಅಲ್ಲಿಯವರೆಗೂ ಸುಮ್ಮನೆ ಕುಳಿತಿದ್ದ ಸಂಜಯ ತನ್ನ ಮೌನಮುರಿದು ಮಾತನಾಡಿದ. ಯಾವಾಗಲೂ ,ಅಳೆದೂ-ಸುರಿದೂ, ತೂಕದ ಮಾತನಾಡುವ ಸಂಜಯನೆಂದರೆ ಆ ಗುಂಪಿನಲ್ಲಿ ಆದರ, ಪ್ರೀತಿ ಎಲ್ಲಾ ಇದ್ದವು. ತಕ್ಷಣವೇ ತಮ್ಮ ವಾದಗಳನ್ನು ನಿಲ್ಲಿಸಿ ಅವನೆಡೆಗೆ ತಿರುಗಿದರು.

ಸಂಜಯ ಹೇಳಿದ ” ನೋಡಿ, ನೀವೆಲ್ಲಾ ವಿಷ್ಯಾಂತರ ಮಾಡುತ್ತಿದ್ದೀರಿ. ಅನಂತಮೂರ್ತಿ ಮಾಡಿದ ಮೂತ್ರ, ಅದರ ಬಹಿರಂಗ ಪ್ರಚಾರದ ಔಚಿತ್ಯ ಕುರಿತು ಚರ್ಚೆ ನಡೆಯುತ್ತಿರುವುದು. ಅದನ್ನು ಬಿಟ್ಟು ನಿಮ್ಮ ವಾದ ವಿವಾದ ಎಲ್ಲೆಲ್ಲೋ ಹೋಗುತ್ತಿದೆ. ಆದ್ರೂ ಅದನ್ನೂ ಪರಿಗಣಿಸಿ ನನಗೆ ತಿಳಿದಿದ್ದು ಹೇಳ್ತೀನಿ ಪರವಾಗಿಲ್ವಾ?? ಕೇಳಿದ.

ಹೇಳೂ…. ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ
ರಸಿಕನಲ್ಲದನ ಬರಿಮಾತು ಕಿವಿಯೊಳಗೆ
ಕೂರ್ದಸಿಯ ಬಡಿದಂತೆ ಸರ್ವಜ್ಞ್ನ …. ಅಂತಲೇ ಇದೆಯಲ್ಲ. ಇವರುಗಳ ಒಣ ಮಾತಿಗಿಂತ ಕೂರ್ದಸಿ ಬೇಕಾಗಿಯೇ ಇಲ್ಲ,,… ಕಿಟ್ಟು ಹೇಳಿದ.

ಸಂಜಯ ಶುರು ಮಾಡಿದ,,”ಮೂರ್ತಿ ಪೂಜೆ ಹಿಂದೂ ಧರ್ಮದಲ್ಲಿ ಮಾತ್ರವಲ್ಲ, ಗ್ರೀಕ್ ಮತದಲ್ಲೂ, ದಕ್ಷಿಣ ಅಮೇರಿಕಾದ ಬುಡಕಟ್ಟುಗಲಲ್ಲೂ, ಈಜಿಪ್ಟಿನ ನಾಗರೀಕತೆಯಲ್ಲೂ ಇತ್ತು. ಅವುಗಳಿಗಿಂತ ಹಳೆಯದಾಗಿರಬಹುದಾದ ಹಿಂದೂ ಧರ್ಮವೊಂದೇ ಈಗ ಉಳಿದಿರುವುದು. ಕಾಲಾಮ್ತರದಲ್ಲಿ ಅವುಗಳೆಲ್ಲಾ ಉಳಿದ ಧರ್ಮಗಳ ಆಕ್ರಮಣದಿಂಮ್ದಲೋ, ಧರ್ಮಶ್ರದ್ಧೆ ನಶಿಸಿದ್ದರಿಂದಲೋ, ರಾಜಕೀಯ, ನೈಸರ್ಗಿಕ, ಕಾರಣಗಳಿಂದಲೋ ಅಳಿದು ಹೋಗಿವೆ. ಕಾಲಕ್ಕೂ ಹೊರಗಿನವರ ದೌರ್ಜನ್ಯ, ಅಕ್ರಮ, ಆಕ್ರಮಣ ಎದುರಿಸಿದರೂ, ಸಮರ್ಥವಾಗಿ ತನ್ನ ಅಸ್ತಿತ್ವ ಉಳಿಸಿಕೊಂದು ಬಂದಿರುವ ಹಿಂದೂ ಧರ್ಮದ ಬಗೆಗೆ , ಅದರ ಪರಂಪರೆಯ ಬಗೆಗೆ, ಮತ್ತೆ ಮತ್ತೆ ಪುಟಿದೆದ್ದು ವಿಶಾಲ ಭಾರತದ ಜನಸ್ತೋಮವನ್ನು ಒಂದು ನಂಬಿಕೆ,ಆಚರಣೆ, ಭಾವನಾತ್ಮಕವಾಗಿ ಒಗ್ಗೂಡಿಸಿಟ್ಟಿರುವುದರ ಬಗೆಗೆ ನಮಗೆ ಹೆಮ್ಮೆ ಇರಬೇಕು. ಇದು ನಮ್ಮ ಮೊದಲ ಆದ್ಯತೆಯಾಗಬೇಕು. ಇಂದು ಕನ್ಯಾಕುಮಾರಿಯಿಂದ ಕಾಶ್ಮೀರದಲ್ಲಿ, ಗುಜರಾತಿನಿಂದ, ಮಣಿಪುರ, ತ್ರಿಪುರಾಗಳಂಥ, ದೂರದ ರಾಜ್ಯಗಳಲ್ಲಿ ಜನರು ಅದೇ ದೇವರುಗಳನ್ನು, ನಂಬಿ ಪೂಜಿಸುತ್ತಿದ್ದಾರೆ. ಇದು ಅವರವರ ಭಾವ-ಭಕ್ತಿಗೆ ಅನುಸಾರವಾಗಿ ನಡೆದರೂ, ಅಂತರ್ಗಾಮಿಯಾಗಿರುವ ಈ ಭಾವನೆಗಳನ್ನು ಒಣ ವೈಚಾರಿಕತೆಯ ಮೂಲಕ ಭೇದಿಸಿ ಘಾಸಿಗೊಳಿಸಬಾರದೆಂದು ನನ್ನ ನಂಬಿಕೆ;ನಿಮಗೆ ಬೇಕಾದಂತೆ ನೀವು ತಿಳಿದುಕೊಳ್ಳಬಹುದು” ಎಂದಂದು, ಅವ್ರುಗಳ ಮುಖ ನೋಡಿದ. ಆಸಕ್ತಿಯಿಂದ ಕೇಳುತ್ತಿದ್ದರು.

ಇನ್ನು ಹಿಂದೂ ಧರ್ಮದಲ್ಲಿ ಮೂರ್ತಿಪೂಜೆ ಹೇಗೆ, ಯಾವಾಗ ಬಂತೆಂದು ಯಾರಿಗೂ ತಿಳಿಯದು,. ನಮಗೆ ಈಗ ಸಿಕ್ಕಿರುವ ವೇದಗಳು ಪೂರ್ಣಪ್ರಮಾಣದಲ್ಲಿದೆಯೆಂದು ನಮ್ಮ ನಂಬಿಕೆ. ಶೃತಿ-ಸ್ಮೃತಿಗಳ ಮೂಲಕ ಸಾವಿರಾರು ವರ್ಷಗಳಿಂದ ಬಂದಿರುವ ಇವುಗಳಲ್ಲಿ ಎಲ್ಲಿ ಹೇಗೆ ಬದಲಾವಣೆಗಳಾಗಿರಬಹುದೆಂಬುದು ನಮಗೆ ತಿಳಿಯದಾದರೂ, ವೇದಗಳು ವಿಶಿಷ್ಟ ಲಯ, ಚಮ್ದಸ್ಸು, ವ್ಯಾಕರನಗಳ ನಿಯಮಗಳ ಮೇಲೆ ಇರುವುದರಿಂದ ಅವು ಬದಲಾಗದೆ ಉಳಿದುಬಂದ ನಿಗಮ ಪಾಠಗಲೆನಿಸಿಕೊಂಡಿವೆ. ಅಮೂರ್ತ, ಶಕ್ತಿ-ದೇವ ದೇವತೆಗಳ ಮಂತ್ರಗಳು, ಪೂಜಾವಿಧಾನಗಳು ಇಲ್ಲಿವೆ. ಅವುಗಳಲ್ಲಿ ಆಯಾ ದೇವರುಗಳ ವರ್ಣನೆಯೂ ಇರಬಹುದು; ಅದನ್ನು ಅನುಸರಿಸಿ ಶಿಲ್ಪಕಲೆ ಬೆಳೆದಿರಬಹುದಾದರೂ, ಇದಕ್ಕೆ ಮಾನವನ ಪರಿಮಿತಿಯಲ್ಲಿ ಅನಧಿಕೃತ ವಿಶ್ಲೇಷಣೆ ನೀಡಿ ಅದನ್ನೇ ಸತ್ಯವೆಂದು ಸಾಧಿಸುವುದು ಸಾಧುವಲ್ಲ. ಮೂರ್ತಿಪೂಜೆಯ ಪ್ರಕ್ರಿಯೆ, ನಮಗೆ ತಿಳಿದಂತೆ ಸಾವಿರಾರು ವರ್ಷಗಳಿಂದ ನಡೆದುಬಂದಿದೆ. ವೇದಗಳ ಕಾಲದಲ್ಲೂ ಇದ್ದಿರಬಹುದು. ಜನರ, ಸಮಾಜದ,ಸಂಸ್ಕೃತಿಯ ಪ್ರತೀಕವಾಗಿ ಉಳಿದೂ ಬಂದಿದೆ. ಈ ಆಚರಣೆ ಕಾಲನ ಪರೀಕ್ಷೆಯನ್ನು ಗೆದ್ದು ಬಂದಿದೆ ಹಾಗೂ ಜನರಿಂದ ಮನ್ನಣೆ ದೊರೆತಿದೆ. ಹಾಗಾಗಿ ಪ್ರಜಾಪ್ರಭ್ತ್ವದ ದೃಷ್ಟಿಯಲ್ಲಿ ನೋಡಿದರೂ, ಬಹುಮತದ ಪ್ರಕಾರ ಗೌರವಿಸಬೇಕಾದ ಆಚರಣೆ. ಈ ಮೂರ್ತಿಗಳ ಕೆತ್ತನೆ ಯ ಕಲೆ ಇಂದು ನಮ್ಮ ಸಂಸ್ಕೃತಿಗೆ ಮೆರುಗೂ ತಂದು ಕೊಟ್ಟಿದೆ.ಈ ಅದ್ಭುತ ಸಾಹಿತ್ಯಿಕ ಹಾಗೂ ಮನೋವೈಚಾರಿಕ, ಕೃತಿಗಳ ಹಿಂದಿನ ಆಶಯ, ಭವ್ಯತೆಯನ್ನು ಪರಿಗಣಿಸಿದರೆ ಅವುಗಳ ಮಹತ್ವ ಅರಿವಾಗುತ್ತದೆ. ಒಂದು ದೇವತಾ ವಿಗ್ರಹದ ಮೇಲೆ ಮೂತ್ರ ಮಾಡಿದರೆ ಶಿಲ್ಪಿಯಿಂದ ಮೊದಲುಗೊಂಡು ಆಗಮಕರ್ತರ ಅವಮಾನ, ಅವಹೇಳನ ಮಾಡಿದಂತೆ. ಇದು ದೇವರ ಕುರಿತ ನಂಬಿಕೆಯ ಸತ್ಯಾಸತ್ಯತೆ ಪ್ರಶ್ನಿಸುವ ಕೇವಲ ಸಾಂಕೇತಿಕ ಕಾರ್ಯವಲ್ಲ; ಇದರ ವ್ಯಾಪ್ತಿ ದೊಡ್ಡದು’’ ಎಂದು ಹೇಳಿದ. ಈ ಮೂರ್ತಿಗಳ ಗುಣ ಲಕ್ಷಣಗಳ ಬಣ್ಣನೆ ಆಗಮಗಳಲ್ಲಿ- ಅದರಲ್ಲೂ “ಪಂಚರಾತ್ರ” ಆಗಮಗಳಲ್ಲಿ ಅತಿ ಸೂಕ್ಷ್ಮ, ದೀರ್ಘ ಹಾಗೂ ಸವಿವರವಾಗಿ ಹೇಳಲ್ಪಟ್ಟಿದೆ. ಇದನ್ನು ದೇವರು ಐದು ರಾತ್ರಿಗಳಲ್ಲಿ ವಿವರಿಸಿದ ಎಂದು ನಂಬಲಾಗಿದೆ.ಈ ಮೂರ್ತಿ ಪೂಜೆಯ ಪ್ರಕ್ರಿಯೆಯು ಆಗಮಗಳ ರೂಪದಲ್ಲಿ ವಿವರಿಸಲ್ಪಟ್ಟು, ಯಜ್ಞಪ್ರಧಾನ ವೈದಿಕ (ವೇದ) ಆಚರಣೆಗೆ ಭಿನ್ನವಾಗಿ ಮೊದಲು ಅವೈದಿಕ ಸಂಪ್ರದಾಯದಂತೆ ಪ್ರಾರಂಭವಾದರೂ ಕಾಲಾಂತರದಲ್ಲಿ ವೈದಿಕ ಆಚರಣೆಗೆ ವಿಲೀನವಾಗಿದೆ ಎಂದೂ ನಂಬಲಾಗಿದೆ. ಅದೇನೇ ಇದ್ದರೂ ಕೋಟ್ಯಾಂತರ ಭಾರತೀಯ ಮನಸ್ಸುಗಳು ದೇವರ ,ಶಾಂತಿಯ ಸಾಕ್ಷಾತ್ಕಾರವನ್ನು ಮೂರ್ತರೂಪದಲ್ಲಿ ಪಡೆಯಲು ಮನಃಪೂರ್ವಕವಾಗಿ ಅಂಗೀಕರಿದ್ದರಿಂದಲೇ ಇದು ಇನ್ನೂ ಮುಂದುವರಿದಿದೆ ಎಂದು ನನ್ನ ಭಾವನೆ. ಇದಕ್ಕೆ ಸೌಜನ್ಯದಿಂದ ಗೌರವಕೊಟ್ಟರೆ ನಮ್ಮನ್ನು ಸಜ್ಜನ ಎಂದೆನ್ನಬಹುದು” ಎಂದು ದೀರ್ಘವಾಗಿ ಉಸಿರೆಳೆದ. ಉಳಿದವರು ನಿಶ್ಯಬ್ದವಾಗಿ ಆಲಿಸುತ್ತಿದ್ದರು.
ಮೂರ್ತಿ ಪೂಜೆ ಧಿಕ್ಕರಿಸಿದ ಜೈನ ಮತಗಳು, ಬೌದ್ಧ ಮತಗಳು ಕಾಲಾಂತರದಲ್ಲಿ ಅದನ್ನು ಅಂಗಿಕರಿಸಿ, ಬಸದಿಗಳನ್ನು, ಪಗೋಡಾಗಳನ್ನು ನಿರ್ಮಿಸಿ ಪೂಜೆ ಕೈ ಕೊಂಡಿವೆ.ಭಾರತೀಯ ಧರ್ಮಗಳೇ ಅದ ಇವುಗಳು ಮೊದಲಲ್ಲಿ ಮೂರ್ತಿಪೂಜೆ/ವೇದಗಳನ್ನು ನಿರಾಕರಿಸಿ ಉದಯಿಸಿದರೂ, ಮೂರ್ತಿಪೂಜೆಯನ್ನು ಅಳವಡಿಸ್ಕೊಂಡದ್ದು, ಮೂರ್ತಿ ಪೂಜೆಯನ್ನು ಕುರಿತಾಗಿ ಭಾರತೀಯರ ಮನದಲ್ಲಿನ ಭಾವನಾತ್ಮಕ ಬೆಸುಗೆಯನ್ನು ತಿಳಿಸುತ್ತದೆ.
‘ಮೂರ್ತಿ ಪೂಜೆಯ ಹೆಸರಿನಲ್ಲಿ ಸಲಿಗೆ, ಮೂಢನಂಬಿಕೆ,ಆ ಮೂಲಕ ಶೋಷಣೆ ಇತ್ಯಾದಿಗಳು ತಪ್ಪಲವೋ?’ ಶೀನ ಕೇಳಿದ.

‘ಹೌದು, ಅದು ತಪ್ಪು ಎನ್ನುವುದು ನಿರ್ವಿವಾದ.ಇದು ಮಾನವನ ದುರಾಸೆಯ, ಸುಲಭ ಮಾರ್ಗದಲ್ಲಿ ಸಂಪತ್ತು ಗಳಿಸುವ ಮನೋಪ್ರವೃತ್ತಿಯ ಫಲವೇ ಹೊರತು, ಮೂರ್ತಿಪೂಜೆಯದ್ದಲ್ಲ. ಈ ಇಲ್ಲದಿದ್ದರೆ ಬೇರೊಂದು ನೆಪದಲ್ಲಿ ಅದು ಸಾಕಾರವಾಗುತ್ತದೆಯಷ್ಟೇ. ಮೂರ್ತಿಪೂಜೆ ಮಾಡದ ಸಂಸ್ಕೃತಿಯಲ್ಲೂ, ದೇವರ, ಧರ್ಮದ, ರಾಜಕೀಯ, ವರ್ಗ,ಸಾಮಾಜಿಕ, ನೈತಿಕ ಕಾರಣಗಳನ್ನು ಕೊಡುತ್ತಾ ಒಂದು ವರ್ಗ ಇನ್ನೊಂದನ್ನು ಶೋಷಿಸುತ್ತಲೇ ಬರುತ್ತಿದೆ. ಮಾನವರಲ್ಲಿ ಬಲಿಷ್ಟ ಹಾಗೂ ದುರ್ಬಲ ವರ್ಗಗಳು ಎಲ್ಲಾ ಕಾಲದಲ್ಲೂ ಇದ್ದೇ ಇರುತ್ತವೆ. ಶಕ್ತಿ ಇರುವವವ್ರು ಇಲ್ಲದವರನ್ನು ತುಳಿಯುವುದೇ ಮೂಲ ಕಾರಣ.. ದೇವಾಲಯಗಳು, ಧಾರ್ಮಿಕಾಚರಣೆಗಳು ಜನಪದವನ್ನು ಭಾವನಾತ್ಮಕವಾಗಿ ಸೇರಿಸುವ, ಸಾಮೂಹಿಕ ವೈಭವಾಚರಣೆಗಳ ಮೂಲಕ ಸಾಂಸ್ಕೃತಿಕವಾಗಿ ಬೆಸೆಯುವ ಮೂಲ ಆಶಯವನ್ನೇ ಹೊಂದಿವೆ .. ಶಿಲ್ಪ ಕಲೆ, ಸಾಹಿತ್ಯ, ಸಂಗೀತ ಎಲ್ಲವುಗಳಲ್ಲಿ ಬರುವ ದೇವರ ವರ್ಣನೆಯನ್ನು ಸಾಕ್ಷಾತ್ಕರಿಸುವುದೇ ಈ ಪರಂಪರೆಯ ಉದ್ದೇಶ. ಇದಿಲ್ಲದಿದ್ದರೆ, ಕರ್ನಾಟಕ ಸಂಗೀತದ ಯಾವ ಹಾಡೂ ಜನರಿಗೆ ಸಾಕ್ಷಾತ್ಕಾರ ಒದಗಿಸದು.ನಮ್ಮ ಅಖಂಡ ಭಾರತವು ಭಾವನಾತ್ಮಕವಾಗಿ ಒಂದೇ ಸತ್ತೆಯ ಕೆಳಗೆ ಇಂದು ಇರುವುದೂ ಈ ಕಾರಣಕ್ಕಾಗಿಯೇ ‘

‘ಈ ದೇವಾಲಯಗಳು ದೇವದಾಸಿ ಪರಂಪರೆಯನ್ನು ಬೆಳೆಸಲಿಲ್ಲವೋ?’ ಶೀನ ಮತ್ತೆ ಸವಾಲೆಸೆದ.
‘ ಜಗತ್ತಿನ ಅತಿ ಪುರಾತನವಾದ ವೃತ್ತಿಯೇ ವೇಶ್ಯಾವಾಟಿಕೆ ಎಂದು ಬಹಳಷ್ಟು ಸಂಶೋಧನೆಗಳು ಹೇಳುತ್ತವೆ. ಇದು ಮಾನವನ ವಿಕೃತ ಮನಸ್ಸಿನ ಸೃಷ್ಟಿಯೇ ಹೊರತು ದೇವಾಲಯಗಳ ತಪ್ಪಲ್ಲ’.
ಸಂಜಯ ಮತ್ತೆ ಮುಂದುವರಿಸಿದ.
‘ನೀವೆಲ್ಲಾ ಆರು ಜನ ಕುರುಡರು ಒಂದು ಆನೆಯನ್ನು ಮುಟ್ಟಿ ಅದರ ಸ್ವರೂಪದ ವ್ಯಾಖ್ಯಾನ ಮಾಡಿದ್ದು ಕೇಳೇ ಇರುತ್ತೀರಿ ಹೌದೇ?’ ಎಂದ.

‘ಅದೇನು ಇನ್ನೂ ಒಂದ್ಸಾರಿ ಹೇಳಿ ಬಿಡು. ಈ ಗುಗ್ಗು ನನ್ಮಕ್ಕಳಿಗೆ ಎನ್ಗೊತ್ತೋ ಏನಿಲ್ಲವೋ ಯಾವೋನಿಗ್ಗೊತ್ತು ‘ ಅಂತ ಕಿಟ್ಟು ಹೇಳಿದ. ಶೀನ, ಪುಟ್ಟ, ವಿಜಯ ಎಲ್ಲರೂ ಅವನನ್ನು ದುರುಗುಟ್ಟಿಕೊಂಡು ನೋಡಿದರು. ಸಂಜಯ ನಕ್ಕ.

ಒಂದೂರಿನಲ್ಲಿ ಆರು ಜನ ಕುರುಡು ಸ್ನೇಹಿತರಿರುತ್ತಾರೆ. ಆನೆಯ ಹೆಸರು ಕೇಳಿರುತ್ತಾರೆಯೇ ವಿನಃ ಅದರ ನೈಜ ಅರಿವು ಅವರಿಗಿರುವುದಿಲ್ಲ. ಒಮ್ಮೆ ಅವರ ಊರಿಗೆ ಅನೆಯೊಂದು ಬರುತ್ತದೆ. ಎಲ್ಲರೂ ತರಾತುರಿಯ್ಂದ ಅದರ ಸ್ಪರ್ಶಾನುಭವ ಪಡೆಯಲು ಹೋಗ್ತ್ತಾರೆ. ಸೊಂಡಿಲನ್ನು ಮುಟ್ಟಿದವ ಅದನ್ನು ಹಾವಿನಂತೆಯೆಂದೂ, ಕಿವಿಯನ್ನು ಮುಟ್ಟಿದವ, ಬಾಳೆ ಎಲೆ ದಂತೆಯೆಂದೂ, ಕಾಲನ್ನು ಮುಟ್ಟಿದವ ಕಂಬದಂತಿರುವುದೆಂದೂ, ಹೊಟ್ಟೆಯನ್ನು ಮುಟ್ಟಿದವನಿದೆ ಅದು ಗೋಡೆಯೆಂದೂ, ಬಾಲವನ್ನು ಮುಟ್ಟಿ ಹಗವೆಂದೂ ಹೇಳುತ್ತಾರೆ. ಅವರಾರಿಗೂ ಅದರ ನಿಜದ ಸ್ವರೂಪ ತಿಳಿಯುವುದೇ ಇಲ್ಲ. ಹೇಳಿದ್ದ ಮಾತನ್ನೂ ಕೇಳದೆ ತಮ್ಮ ತಮ್ಮಲೇ ಕಿತ್ತಾಡುತ್ತಾರೆ. ಇದೂ ಹಾಗೆಯೇ ;ದೇವರು, ಧರ್ಮ ನಂಬಿಕೆಗಳು ಅವರವರ ಭಾವಕ್ಕೆ, ಭಕುತಿಗೆ, ಸಂಸ್ಕಾರಕ್ಕೆ, ಪರಿಸರಕ್ಕೆ, ಅನುಗುಣವಾಗಿರುತ್ತವೆ. ಈ ಕಥೆಯಲ್ಲಿನ ಆರು ಜನ ಕುರುಡರು, ಪೂರ್ವ ಮತ್ತು ಉತ್ತರ ಮೀಮಾಂಸಾ ದರ್ಶನದಲ್ಲಿ ಜ್ಞ್ನಾನದ ಸಾಕ್ಷಾತ್ಕಾರಕ್ಕೆ ವಿವರಿಸುವ ಆರು ಪರೀಕ್ಷಕ ಗುಣಗಳ ಪ್ರತಿನಿಧಿಗಳು. ಪ್ರತಿ ಪರೀಕ್ಷಕ ಗುಣವೂ ತನ್ನಿಂತಾನೇ ಅಪೂರ್ಣ. ಯಾವುದೇ ವಿಚಾರವನ್ನು ಈ ಆರೂ ಪರೀಕ್ಷೆಗಳ ಮೂಲಕ ಸಮಗ್ರವಾಗಿ ವಿಶ್ಲೇಷಿಸಿದರಷ್ಟೇ ಸತ್ಯದ ಅರಿವಾಗುವುದು.ಹೀಗೆ ಪರೀಕ್ಷೆಗೊಳಪಟ್ಟು ಸಿದ್ಧವಾದ ಸತ್ಯವನ್ನು ”ಪ್ರಮಾಣ” ಎನ್ನುವರು. ಪ್ರತ್ಯಕ್ಷ, ಅನುಮಾನ,ಉಪಮಾನ,ಶಬ್ದ,ಅರ್ಥಾಪತ್ತಿ,ಮತ್ತು ಅನುಪಲಬ್ಧಿ ಎಂಬ ಈ ಆರೂ ಪ್ರಮಾಣಗಳನ್ನು ಬಳಸಿ ಸತ್ಯ್ಯಾರ್ಥ ಶೋಧನೆ ನಡೆಸಬೇಕು.(ಭ್ರಮೆ ಎಂಬ ಪದಕ್ಕೆ ವಿರುದ್ಧಾರ್ಥ ಪ್ರಮೆ ಎಂಬುದು, ಇದು ಪ್ರಮಾಣ ಎನ್ನುವ ಪದದ ಮೂಲ). ಇದ್ಯಾವುದನ್ನು ಮಾಡದೆ ಇತರರು ನಂಬಿದ್ದೆಲ್ಲಾ ಸುಳ್ಳು ಎಂದು ಧಿಕ್ಕರಿಸಿ ಉದ್ಧಟತನ ತೋರಿದರೆ ಅದು ವಿತಂಡವಾದವೇ ಹೊರತು ವೈಜ್ಞಾನಿಕ ವಾದವಲ್ಲ. ತಮ್ಮ ವೈಯಕ್ತಿಕ ಮನೋಧೋರಣೆಯನ್ನು ಸಮಾಜದ ಮೇಲೆ ಆರೋಪಿಸಿ ಒಂದು ವರ್ಗದ ಮನ ನೋಯಿಸಿದರೆ ಅದು ಸರ್ವ ಹಿತಕಾರಿ ಕೆಲಸ ಅಲ್ಲ. ಇಂತಹ ಕಾರ್ಯಗಳು ಒಂದು ಬಗೆಯಾ ಬೌದ್ಧಿಕ ಭಯೋತ್ಪಾದನೆ ಎಂದೆನ್ನಲ್ಲಡ್ಡಿಯಿಲ್ಲ.
ಇದು ಸಮಾಜದಲ್ಲಿ ಕೋಲಾಹಲ ಮೂಡಿಸಿ ವರ್ಗಗಳ ನಡುವೆ ವೈಷಮ್ಯದ ಬೀಜ ಬಿತ್ತುವುದಲ್ಲದೆ ತಾರತಮ್ಯ ಭಾವವನ್ನೂ ಉಂಟುಮಾಡುತ್ತದೆ. ದೇವರ ಕಲ್ಪನೆಯ ಮೂಲಕ ’ಸರಕಾರೀ ಕೆಲಸ ದೇವರ ಕೆಲಸ’ ಎಂದೆನ್ನುತ್ತೇವೆ. ಹಾಗಾದರೆ ವಿಧಾನ ಸೌಧದ ನಡುವೆ ಉಚ್ಚೆ ಮಾಡಲಾಗುವುದೇ?”ದೇಹವೇ ದೇಗುಲ’ ಎಂದು ಕರೆಯುತ್ತೇವೆ ಹಾಗೆಂದು ನಮ್ಮ ಮೇಲೆ ನಾವೇ ಉಚ್ಚೆ ಮಾಡಿ ಕೊಳ್ಳಬಹುದೇ?
ಸಮಾಜಕ್ಕೆ, ಅದರ ಮೂಲಕ ವ್ಯಕ್ತಿಗಳಿಗೆ, ಭಾವನಾತ್ಮಕ, ಧಾರ್ಮಿಕ, ಸಾಂಸ್ಕೃತಿಕ,ನೈತಿಕ, ಕೌಟುಂಬಿಕ, ಸಂವೇದನಾಶೀಲ ಚೌಕಟ್ಟು ಅತೀ ಅವಶ್ಯಕ. ಏಕೆಂದರೆ ಎಲ್ಲರ ಮನೋರುಚಿ, ಮನೋನಿಗ್ರಹ, ಬೌದ್ಧಿಕ ಮತ್ತ ಒಂದೇರೀತಿ ಇರುವುದಿಲ್ಲ . ಎಲ್ಲರೂ ವಿಚಾರವಾದಿಗಳಾಗಿ ಆದರ್ಶ ಪರರಾಗಿ ಯೋಚಿಸುವುದಿಲ್ಲ. ಸಾಮಾನ್ಯವಾಗಿ ಒಪ್ಪುವಂತಹ , ಅಂಗೀಕರಿಸಿದಂತಹ ನಿಯಮಗಳಿಂದಲೇ ಸಮಾಜಕ್ಕೆ ಸುಸ್ಥಿ ತಿ ಇರುತ್ತದೆ. ಇದನ್ನು ಕಲಕುವ ಮುನ್ನ ಯೋಚನೆ ಮಾಡಬೇಕು. ವಿದ್ಯಾರ್ಥಿಗಳು ಒಂದೇ ಮಾದರಿಯಲ್ಲಿ ಕಲಿಯುವುದಿಲ್ಲ. ಅವರ ಕಲಿಕೆಯ ವಿಧಾನದಲ್ಲಿ ವೈವಿಧ್ಯತೆ ಸಹಜ. ಸಮಾಜವು ಹಾಗೆಯೇ ನಂಬಿಕೆಗಳ ವೈವಿಧ್ಯತೆಗಳ ಗೂಡು. ಇದು ಪ್ರಾಧ್ಯಾಪಕರಾದ ಇಬ್ಬರಿಗೂ ಗೊತ್ತಿರಬೇಕಾಗಿತ್ತು. ಆದರೆ ಅದನ್ನು ಅವರು ಮರೆತರು. ಕತ್ತೆ ಉಚ್ಚೆ ಹುಯ್ದಂತೆ ಗೋತ್ತು ಗುರಿ ಇಲ್ಲದೆ ಮಾತನಾಡಿದರು’ ಎಂದ.

’ಹಾಗಾದರೆ ಬದಲಾವಣೆಗೆ ನಿನ್ನ ವಿರೋಧವೋ ” ವಿಜಯ ಕೇಳಿದ
’ಹಾಗೇನಿಲ್ಲ. ಬದಲಾವಣೆ ಕೆಲವೊಮ್ಮೆ ಧಿಢೀರ್ ಎಂತಲೂ, ಕೆಲವೊಮ್ಮೆ ಸಾವಧಾನವಾಗಿಯೂ ತರಬೇಕಾಗುತದೆ. ಯಾವುದು ಎಂಬುವುದು ಸಮಸ್ಯೆಯಾ ಗಹನತೆ, ಪ್ರಾಮುಖ್ಯತೆಯನ್ನು ಅವಲಂಬಿಸಿರುತ್ತದೆ. ಧನಾತ್ಮಕ ಪ್ರಕ್ರಿಯೆಗಳ ಮೂಲಕ ತರುವ ಬದಲಾವಣೆಗಳು ದೀರ್ಘಕಾಲಿಕ ಹಾಗೂ ಸಾರ್ವತ್ರಿಕ ಹಟ ಉಂಟುಮಾಡುತ್ತವೆ. ಋಣಾತ್ಮಕ ಕ್ರಿಯೆಗಳು ಅಪೇಕ್ಷಿಸಿದ ಬದಲಾವಣೆಯ ಬದಲು ವಿಧ್ವಂಸಕ ಪರಿಣಾಮಗಳನ್ನು ತರಬಹುದು’’.
‘’ಸತ್ಯಂ ಬ್ರೂಯಾತ, ಪ್ರಿಯಂಬ್ರೂ ಯಾತ್ ’’ ಎಂದು ಸಂಸ್ಕೃತದಲ್ಲೂ, ’ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂದೂ ಬಸವಣ್ಣನವರು ಹೇಳಿದ್ದಾರೆ. ಅದನ್ನು ಬಿಟ್ಟು ‘ನುಡಿದರೆ ಕೊಚ್ಚೆಯ ಗಟಾರದಂತಿರ’ ಬಾರದು !! ನುಡಿಯೊಳಗಾಗಿ ನಡೆಯದ ಅನಂತಮೂರ್ತಿಯವರೂ , ಅದನ್ನು ಜಗಜ್ಜಾಹೀರು ಮಾಡಿದ ಕಲುಬುರ್ಗಿಯವರೂ ‘’ಸಾಹಿತಿ’’ಗಳ ಮೂಲಭೂತ ಕರ್ತವ್ಯವನ್ನೇ ಮರೆತರು. ಭಾಷೆಯ ಮಾಧ್ಯಮದ ಮೂಲಕ ಸಾರ್ವತ್ರಿಕ ಹಿತದ ಪರಿಕಲ್ಪನೆಯೇ ಸಾಹಿತ್ಯ. ಇಬ್ಬರೂ ವಯೋ ವೃದ್ಧರಾದರೂ ಬುದ್ಧಿತಿಳಿದು ವರ್ತಿಸಲಿಲ್ಲವೆಂಬುದೇ ಖೇದದ ವಿಷಯ’ ಎಂದು ಹೇಳಿ ನಿಲ್ಲಿಸಿದ.

‘’ಸರಿ ಬಿಡ್ರಪ್ಪ, ಸಮಾಜದಲ್ಲಿ ಹುಳಿಹಿಂಡಿದ್ದರಿಂದ ಹಾಗೂ ವಯಸ್ಸಾದರೂ ಬುದ್ಧಿ ಬರಲಿಲ್ಲವಾದ್ದರಿಂದ ‘’ಹುಣಿಸೆಕಾಯಿಗೆ ನಲ್ಲಿಕಾಯಿ ಸಾಕ್ಷಿ ‘’ ಮತ್ತು ‘’ಹುಣಿಸೆ ಮುಪ್ಪಾದರೂ ಹುಳಿಗೆ ಮುಪ್ಪಿಲ್ಲ’’ ಎಂಬ ಗಾದೆಗಳನ್ನು ಅಂಗೀಕರಿಸೋಣ ಏನಂತೀರಾ” ಎಂದ ವಿಜಯನ “ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು” ಮಾತಿಗೆ ಎಲ್ಲರೂ ತಲೆದೂಗಿ ಜಾಗ ಖಾಲಿ ಮಾಡಿದರು.

——————————–==========++++++++++++++++================—————————————————————————

ಇಲ್ಲಿ ವ್ಯಕ್ತ ಪಡಿಸಿದ ಅಭಿಪ್ರಾಯಗಳು ಲೇಖಕನದು,

ಆಕರ ಗ್ರಂಥಗಳು:
ಭಾರತೀಯ ತತ್ವಶಾಸ್ತ್ರದ ಪ್ರವೇಶ- ಪ್ರಭಾಕರ ಜೋಶಿ
ಭಾರತೀಯ ತತ್ವಶಾಸ್ತ್ರದ ರೂಪು ರೇಷೆಗಳು- ಹಿರಿಯಣ್ಣ ಮತ್ತು ಪ್ರಭುಶಂಕರ

i- ಪದಗಳು

i- ಪದಗಳು

 

ಐ-ಪಾಡ್,ಐ-ಫೋನ್,ಐ-ಪ್ಯಾಡ್ ಅಂದ್ರೆ

ಎಲ್ಲಾರ್ಗೂನು ಪ್ರಾಣ

ಐ-ಪ್ಯಾಡ್ ಕೈಯಲ್ಲಿತ್ತೂಂತಂದ್ರೆ

ಮೈಮೇಲಿರಲ್ಲ ಜ್ಞಾನ

 

ಬೆಳ್ಗಾಗೆದ್ದು ಐ-ಪ್ಯಾಡ್ ಹಿಡ್ಕಂಡ್

ಟಾಯ್ಲೆಟ್ಗೆ ಹೋದಾಂತನ್ನು

ಬ್ರಹ್ಮ ಶೌಚ ಮಾಡ್ಕೋಡ್ ಕುಂತು

ಮರ್ತು ಬೇರೇವ್ರನ್ನು

 

ಒಂದೇ ಒಂದು ಬಚ್ಲು ಟಾಯ್ಲೆಟ್

ಮನೇಲಿತ್ತೂಂತಂದ್ರೆ

ಕೇಳ್ಲೇ ಬೇಡ ಕಾಯ್ತಿರೋರ್ಗೆ

ಹೊಟ್ಟೇಗಾಗೋ ತೊಂದ್ರೆ

 

ಪರ್ದೇ ಮೇಲೆ ಕೂತಿರ್ತಾವೆ

‘’ಆಪ್” ಗಳೆಂಬೋ ಕೋತಿ

ಥಕ್ ಥಕ್ ಅಂತಾ ತೆಕ್ಕೋಂತಾವೆ

ತಿವುದ್ರೆ ಅವ್ಗುಳ್ ಮೂತಿ

 

ಆಂಗ್ರೀ ಬರ್ಡು, ಕ್ಯಾಂಡೀ ಕ್ರಶ್ಶು

ಫ಼ೇಸ್ಬುಕ್ ಇನ್ನೂ ಏನೇನೇನೋ

ಕೋತಿ ಕೂಣ್ಸೋಕ್ ಹೋದೋರ್ಗೆಲ್ಲ

ಕಣ್ಣಿಗ್ ಬೀಳ್ತಾವ್ ಕಾಣೋ

 

ಮೊದ್ ಮೊದ್ಲೆಲ್ಲಾ ತಾವೇ ಕುಣ್ದು

ಮದ ತಲೆಗೇರ್ಸಿ

ಆಮೇಲಿಂದ ನಿನ್ನೇ ಕೋತಿ

ಕುಣುಸ್ತಾವೆ ಆಡ್ಸಿ

 

ಸಫ಼ಾರಿ ಅನ್ನೋ ಆನೇ ಮೇಲೆ

ಕೂತ್ಕೊಂಡ್ ಹೋದ್ರೆ ಸವಾರಿ

ಅಂತರ್ಜಾಲದ್ ಕಾಡ್ನಲ್ ದಾರಿ

ತಪ್ಪಿ ಕಳೆದೋಗ್ತೀರಿ

 

ಕೆಲ್ಸ ಕಾರ್ಯ ಎಲ್ಲ ಇಟ್ಕೊಂಡ್

ಸೋಫ಼ಾ ಮೇಲೆ ಕುಂಡಿ

ಊರ್ಕೊಂಡ್ ಐ-ಪ್ಯಾಡ್ ನೋಡ್ತಾ ಇದ್ರೆ

ಹೆಂಡ್ತಿ ಆಗ್ತಾಳ್ ಚಂಡಿ

 

ಅಯ್ಯ ನಿಂತ್ಕೊಂಡ್ ಉಚ್ಛೆ ಹುಯ್ದ್ರೆ

ಮಕ್ಳು ತಾವೇನ್ ಕಮ್ಮಿ

ಅಂತಾ ಓಡಾಡ್ ಹುಯ್ದಾಕ್ತಾವೆ

ಅನ್ನೋದ್ ಗಾದೆ ಸ್ವಾಮಿ

 

ಅಪ್ಪ ಅಮ್ಮ ಅಜ್ಜಿ ತಾತ

ಎಲ್ಲಾ ಜೊತೆಗೆ ಸೇರಿ

ನಕ್ಕು ನಲ್ದು ಬೆರ್ತು ಬಾಳಿ

ತೋರ್ಸಿ ಜೀವ್ನದ್ ದಾರಿ

 

ಮಾತೇ ಇಲ್ದೆ ಐ-ಪ್ಯಾಡ್ ಹಿಡ್ಕೊಂಡ್

ಇದ್ರೆ ಗುಮ್ಮನ್ ಹಂಗೆ

ಪ್ರೀತಿ ಮಮ್ತೆ ತೋರ್ದೆ ಹೋದ್ರೆ

ಮಕ್ಳು ಬೆಳ್ಯೋದ್ ಹೆಂಗೆ!!??

 

ಸುದರ್ಶನ ಗುರುರಾಜರಾವ್.

ಓಬಿರಾಯನಿಂದ ಓಬಾಮವರೆಗೆ (ಲಘು ಹರಟೆ)

ಓಬಿರಾಯನಿಂದ ಓಬಾಮವರೆಗೆ (ಲಘು ಹರಟೆ)
ಏನ್ ಮಾಮ ಯಾವಾಗ್ಬಂದೆ, ಶಾಲೆಯಿಂದ ಬಂದ ಮೂರೂ ಮಕ್ಕಳು ತಮ್ಮ ಪಾಟೀ ಚೀಲವನ್ನು ರೋಂಯ್ಯನೆ ಎಸೆದು ಕಣ್ಣಗಲಿಸಿ, ಮುಖ ಅರಳಿಸಿಕೊಂಡು ಕೇಳಿದವು. ಕುಂಟ್ನಳ್ಳಿಯಿಂದ ಮೊದ್ಲು ಬಂಡೀಲಿ ಆಮೇಲೆ ರೈಲಲ್ಲಿ ಕೂತು ಬೆಂಗ್ಳೂರೆಂಬೋ ಬೆಂಗ್ಳೂರ್ಗೆ ಬಂದಿದ್ದ ವಿಜಿಮಾಮ ತಲೆಯೆತ್ತಿ ತನ್ನ ಅಕ್ಕನ ಮೂರೂ ಮಕ್ಳನ್ನ ನೋಡ್ದ. ಸುಧೀರ, ಸಮೀರ ಮತ್ತೆ ಸುಮಿ ನೋಡಿ ಅವನ್ಗೂ ಖುಶಿ ಆಯ್ತು. ಅವರ ಬಟ್ಟೆಗಳೇನು, ಕಟ್ಟಿದ್ದ ಕುತ್ತಿಗೆ ಕೌಪೀನವೇನು (ಟೈ), ಕಾಲ್ಗೆ ಹಾಕಿದ್ದ ಬೂಟುಗಳೇನು, ತಿದ್ದಿ ತೀಡಿದ್ದ ಕ್ರಾಪೇನು,ಆನಂದ ತುಂದಿಲನಾದ.ಹೆಣ್ಮಗು ಸುಮಿ ಬಾಬ್ಕಟ್ ಮಾಡಿಸ್ಕೊಂಡು ತಲೆ ಮೇಲೆ ಇದ್ದಿದ್ ಕೂದ್ಳಿಗೆ ಅವ್ರಮ್ಮ ರಬ್ಬರ್ ಬ್ಯಾಂಡ್ ಹಾಕಿ ಜುಟ್ಟು ಕಟ್ಟಿದ್ಲು. ಅದು ಪುಟಿಯೋ ಕಾರಂಜಿ ಥರ ತಲೆ ಮೇಲೆ ನಿಂತಿತ್ತು! ಅದನ್ ಕಂಡು ವಿಜಿ ಮಾಮನಿಗೆ ನಗು ತಡ್ಯೋಕಾಗ್ಲಿಲ್ಲ. ನಗುತ್ತಾ, ಏನೇ ಸುಮಿ, ನಿನ್ ತಲೇಲಿರೋ ಬುದ್ಧಿಯೆಲ್ಲಾ ಕಾರಂಜಿ ಥರ ಹೊರಗಡೆಗೆ ಜುಟ್ನಲ್ಲಿ ನುಗ್ತಾ ಇದ್ಯಲ್ಲೇ ಅಂದ. ಅದಕ್ಕೆ ಕರಟಕ ದಮನಕರಂತಿದ್ದ ಅವಳ ಅಣ್ಣಂದಿರು ಅದನ್ನು ಹಿಡಿದೆಳೆದು ತಮಾಷೆ ಮಾಡಿದ್ರು.ಸುಮಿ ಕೊಂಯ್ಯ್ ಅಂತ ರಾಗ ತೆಗೆದ್ಲು. ಏನ್ರೋ ಎಲ್ಲ ಎಷ್ಟೊಂದು ಬೆಳೆದ್ಬಿಟ್ಟಿದೀರಾ ಅಂತ ಕೇಳಿದ್ದಕ್ಕೆ, ವಿಜಿಮಾಮಾ ನಿನ್ ಜುಟ್ಟು ಮಾತ್ರಾ ಬೆಳೀಭೌದು ನಾವ್ ಮಾತ್ರಾ ಬೆಳೀ ಬಾರ್ದಾ ಅಂತ ಅವನ್ ಜುಟ್ಟು ಹಿಡಿದು ಅಲ್ಲಡಿಸಿದ್ವು. ಅಷ್ಟ್ರಲ್ಲೆ ವಿಜಯನ ಅಕ್ಕ ಬಂದು ಮಕ್ಕಳನ್ನು ಗದರಿಸಿ ಬಟ್ಟೆ ಬದಲಾಯ್ಸಿ ಹಾಲು ಕುಡಿ ಬರ್ರೋ ಅಂತ ಎಳೆಕೊಂಡು ಹೋದ್ಲು.

ವಿಜಯನ ಅಕ್ಕ ಭಾವ ಮುಂಚೆ ಮೈಸೂರಲ್ಲಿ ಇದ್ರು. ಅಲ್ಲಿಂದ ಎರೆಡು ವರ್ಷದ ಹಿಂದೆ ಅಮೇರಿಕಾಗೆ ಹೋಗಿದ್ರು. ಅಮೇಲೆ ಬಂದು ಬೆಂಗ್ಳೂರನಲ್ಲೇ ಮನೆ ಮಾಡಿ ಅಲ್ಲೇ ಸ್ಕೂಲಿಗೆ ಹಾಕಿದ್ರು. ಚಿಕ್ಕಂದಿನಲ್ಲೇ ಶಾಲೆ ಬಿಟ್ಟ ವಿಜಯ ಅವನೂರಲ್ಲೇ ಜಮೀನು ನೋಡ್ಕೊಂಡು, ದೇವಸ್ಥಾನದ ಪೂಜೆ ಮಾಡ್ಕೊಂಡು ತಣ್ಣಗೆ ಇದ್ದ್ಬುಟ್ತಿದ್ದ. ಬೆಂಗ್ಳೂರ್ ನೋಡಿ ದಂಗ್ ಹೊಡ್ದೊಗಿದ್ದ!! ಮೂರು ವರ್ಷದಿಂದ ಅಕ್ಕನ ಮಕ್ಕಳನ್ನು ನೋಡೆ ಇರ್ಲಿಲ್ಲ. ಅವು ಬೆಳೆದಿದ್ವು ಆದ್ರೂ ಇವನ್ ಕಣ್ಣಿಗೆ ಇನ್ನು ಚಿಕ್ಕೋರ್ ಥರನೇ ಕಾಣ್ತಿದ್ವು.

ಮಕ್ಕಳು ಹಾಲು ಕುಡಿದು ಬಂದ್ವು. ಅಷ್ಟ್ರಲ್ಲಿ ಆ ಮಕ್ಕಳನ್ನು ಆಟಕ್ಕೆ ಕರ್ಯೋಕೆ ಇನ್ನೊಂದ್ ಕಪಿ ಸೈನ್ಯ ಬಂತು. ಅವ್ರೆಲ್ಲ ಠಸ್ಸ್-ಪುಸ್ಸ್ ಅಂತ ಇಂಗ್ಲೀಷಿನಲ್ಲೇ ಮಾತಾಡ್ಕೊಂಡ್ರು. ಜುಟ್ಟು ಬಿಟ್ಟಿದ್ದ ವಿಜಿ ಮಾಮಾನ ಯಾವ್ದೋ ’ಝೂ’ ಯಿಂದ ಬಂದ ಪ್ರಾಣಿ ಅನ್ನೋಹಂಗೆ ತಿರ್ಗಿ ತಿರ್ಗಿ ನೋಡ್ಕೊಂಡ್ ಹೋದ್ವು.
ಇವ್ನು ಅಕ್ಕನ ಜೊತೆಗೆ ಮಾತಾಡ್ತಾ ಕನ್ನಡ ಪ್ರಭ ಪತ್ರಿಕೆ ಓದ್ತ ಕೂತ. ಏನೇ ಅಕ್ಕ ಮಕ್ಳು ಚೆನ್ನಾಗಿ ಕನ್ನಡ ಮಾತಾಡ್ತವೆ ಇಲ್ದಿದ್ರೆ ನಂಗೆ ಅವರ್ಜೊತೆ ಮಾತಾಡಕ್ಕೆ ಆಗ್ತಿರ್ಲಿಲ್ಲ ನೋಡು ಅಂತ ಮೆಚ್ಚುಗೆ ಸೂಚಿಸಿದ. ಹೂಂ ಅವಕ್ಕೇನು ಮಾತು ಹುರೀತವೆ ಅಂದ್ಲು ಅವರ್ಗಳ ಅಮ್ಮ.

ಆಡಕ್ಕೆ ಹೋಗಿದ್ದ ಮಕ್ಳು ವಾಪಸ್ ಬಂದ್ವು. ಕೈಕಾಲು ತೊಳ್ಕೊಂಡು ದೇವ್ರಿಗೆ ನಮಸ್ಕಾರ ಮಾಡಿದ್ವು. ವಿಜಯನಿಗೆ ಮಕ್ಕಳ ಮೇಲೆ ಅಭಿಮಾನ ಇನ್ನೂ ಜಾಸ್ತಿ ಆಯ್ತು. ಎಲ್ಲ ಮುಂಚಿನ್ ಥರಾನೆ ಇವೆ. ಅಮೇರಿಕಾಗೆ ಹೋಗಿದ್ರು ಬದ್ಲಾಯ್ಸಿಲ್ಲ ಭಲೆ ಅಂದ್ಕೊಂಡ. ಮಕ್ಳಿಗೂ ವಿಜಿಮಾಮ ಅಂದ್ರೆ ಭಾಳಾ ಅಚ್ಚು ಮೆಚ್ಚು.

ಇವನ್ ಹತ್ರ ಬಂದ ಮಕ್ಕಳು ಇವನ್ಮುಂದೆ ಕೂತ್ವು. ಯಾಕ್ರೋ ಓದೋದ್ ಬರ್ಯೋದ್ ಇಲ್ಲ್ವಾ ಅಂದ. ಮಾಮಾ ನಾಳೆ ಶನಿವಾರ. ಹಾಲಿಡೇ ಅಂದ್ವು.
ಯಾಕ್ರೋ ಶನಿವಾರ ಹಾಲಿಡ್ತೀರಾ. ದಿವ್ಸಾ ದೇವ್ರಿಗೆ ಇಡಲ್ವಾ.ಸೋಮವಾರ ಆದ್ರೆ ನಾಗಪ್ಪಂಗೆ ಹಾಲಿಟ್ಟು ಪೂಜೆ ಮಾಡ್ಬೇಕು ಅಂದ. ಮಕ್ಕಳೆಲ್ಲ ಗೊಳ್ ಅಮ್ತ ನಕ್ವು. ಮಾಮ ಹಾಲಿಡೆ ಅಂದ್ರೆ ಹಾಲಿಡದಲ್ಲ. ರಜಾ ಅಂತ ಅಂದ್ವು. ನಮ್ಮೂರಲ್ಲಿ ಶನಿವಾರನೂ ಶಾಲೆ ಇರುತ್ತಲ್ರೋ ಅಂದಿದ್ದಕ್ಕೆ, ಮಾಮಾ ಇದು ಬೆಂಗ್ಳೂರು ಅದು ನಿಮ್ಮೂರು ಅಂತ ಅಂದ್ವು.
ಆಮೇಲೆ ಸುಮಿ ಮಾಮಾನ್ ತೊಡೆ ಮೇಲೆ ಕೂತ್ಕೊಂಡು ಮಾಮಾ ಒಂದು ಕಥೆ ಹೇಳು ಅಂದ್ಲು. ಸರಿ ಅಂತ ವಿಜಯ ತನ್ಗೆ ಗೊತ್ತಿದ್ದನ್ನ ಹೇಳಕ್ಕೆ ಶುರು ಮಾಡ್ದ.
ಜರ್ಗನ್ ಹಳ್ಳಿ ಅಂತ ಊರ್ನಲ್ಲಿ ಬಸ್ಯಾ ಅಂತ ಒಬ್ಬ ಇದ್ದ. ಅವ್ನಿಗೆ ಬೀರ ಮತ್ತೆ ಚಿಕ್ಕ ಅಂತ ಗೆಳೆಯರಿದ್ರು. ಅವ್ರು ದಿನಾ ಬಂಡಿ ಹೊಡ್ಕೊಂಡು ಅವರ ಹೊಲಕ್ಕೆ ಹೋಗ್ತಾ ಯಿದ್ರು. ಹೆಗಲ್ ಮೇಲೆ ನೇಗ್ಲು ಹಿಡ್ಕೊಂಡ್ ಹೋಗ್ತಿದ್ರು. ಅಲ್ಲಿ ಕೆಲ್ಸ ಮುಗಿದ್ಮೇಲೆ ಚಿನ್ನಿ ದಾಂಡು ಆಡ್ತಿದ್ರು ಆಮೇಲೆ ದೇವ್ರುಗಳ್ನ ,ಹಿರಿಯರನ್ನ ನೆನೆಸ್ಕೊಂಡು, ರೊಟ್ಟಿ ಚಟ್ನಿ …. ಅಂತ ಹೇಳ್ತಾ ಇದ್ದ. ಗಂಡು ಹುಡುಗ್ರು ಆಕಳ್ಸಿ ಹೊಸ್ಕಾಡಕ್ಕೆ ಶುರು ಮಾಡಿದ್ರು. ಸರಿ ಇವ್ರಿಗ್ಯಾಕೋ ಸರಿ ಹೋಗ್ಲಿಲ್ಲ ಅಂತ ಯಾಕ್ರೋ ಇಷ್ಟ ಆಗ್ಲಿಲ್ಲ್ವಾ ಅಂದ. ಅದಕ್ಕೆ ಮಕ್ಳು, ಅಲ್ಲಾ ಮಾಮಾ, ಯಾವ್ದೋ ಓಬಿರಾಯನ್ ಕಾಲದ್ ಕಥೆ ಹೇಳ್ತೀಯಾ ನೀನು. ಓಬೀರಾಯ ಹೋಗಿ ಈಗ ಓಬಾಮ ಬಂದಿದಾನೆ….. ರಾಗ ಎಳೆದ್ವು. ಸರಿ ನೀವೇ ಹೇಳ್ರೋ ಅದೇನ್ ಓಬಾಮನ್ ಕಾಲದ್ದು… ವಿಜಯ ಸವಾಲೆಸೆದ.
ಸಮೀರ ಹೇಳ್ದ ” ಮಾಮಾ,,, ನಿಮ್ ಜರ್ಗನ್ ಹಳ್ಳಿ ಬಸ್ಯಾನ ಜಾರ್ಜ್ ಬುಶ್ ಮಾಡು, ಅವನ್ ಸ್ನೇಹಿತ ಬೋರನ್ನ ಬ್ಲೇರ್ ಮಾಡು, ಚಿಕ್ಕ ಅನ್ನೊನ್ ಚಿರಾಕ್ ಆಗ್ಲಿ. ಅವ್ರೆಲ್ಲಾ ಬಂಡೀಲಿ ಹೋಗೋಲ್ಲ; ಬಗ್ಗಿ ಅನ್ನೋ ಮೋಟಾರ್ನಲ್ಲಿ ಹೋಗೋದು ಎಲ್ಗೇ ಅಂತೀಯಾ, ಹೊಲಕ್ಕಲ್ಲ ಗಾಲ್ಫ್ ಕೋರ್ಸ್ ಅಂತ ಮೈದಾನಕ್ಕೆ. ದುಡ್ಯೋದ್ ಗಿಡ್ಯೋದ್ ಎಲ್ಲಾ ಸುಳ್ಳು. ಅವ್ರ ಕೈಲಿ ನೇಗ್ಲು ಪಾಗ್ಲು ಅಂತ ಇರಲ್ಲ ;ಚಿನ್ನಿ ದಾಂಡೂ ಆಡಲ್ಲ. ಗಾಲ್ಫ್ ಆಡೋ ಕಡ್ಡಿ ಇರುತ್ತೆ. ಅದನ್ನ ಎತ್ಕೊಂಡು ಓಡಾಡ್ತಾ ಇರ್ತಾರೆ. ಒಂದು ಚೆಂಡಿರುತ್ತೆ. ಅದ್ನ ನಮ್ಮ ಬಚ್ಚಲ್ ಮನೇಲಿ ಟಾಯ್ಲೆಟ್ ಸೀಟ್ ಇದ್ಯಲ್ಲ ಅಂಥದ್ದೇ ಚಿಕ್ಕುದ್ ಪೀಠದ್ ಮೇಲೆ ಕೂಡ್ಸಿ ಆ ಚೆಂಡಿನ ಕುಂಡಿಗೆ ಬಲವಾಗಿ ಬಾರಿಸ್ತಾರೆ. ಅದು ಯೆಲ್ಲೋ ಹೋಗಿ ಬೀಳುತ್ತೆ. ಅದುನ್ನ ಹುಡ್ಕೊಂಡು ಎಲ್ಲಾ ನಡ್ಕೊಂಡು, ಹೋಗ್ತಾ ,ಯಾರ್ಯಾರ್ ಮನೆ ಹೆಂಗ್ ಹೆಂಗೆ ಹಾಳ್ಮಾಡ್ಬೇಕೂ ಅಂತ ಮಾತಾಡ್ತಾರೆ. ಆ ಕುಂಡೀಗ್ ಗುದ್ದಿಸ್ಕೊಂಡ ಚಂಡು ಇವರ್ಗೆ ಸಿಕ್ಕೊ ಹೊತ್ಗೆ ಇವ್ರುಗಳಿಗೆ ಮನೆ ಹಾಳ್ಮಾಡೋ ಉಪಾಯನೂ ಹೊಳೆದಿರುತ್ತೆ ಅಂದ್ವು.

ಎಲ್ಲಾ ಮನೆಹಾಳ್ ಕಥೆ ಹೇಳ್ತೀರಲ್ಲೊ. ಅಂತ ವಿಜಯ ಅವನ ಅಕ್ಕನ ಕಡೆ ನೋಡ್ದ. ಎಲ್ಲಾ ಆ ಮನೆ ಹಾಳ್ ಟೀವಿ ನೋಡಿ ತಿಳ್ಕೊಂಡಿವೆ ಅಂತಂದ್ಲು.
ಸುಮಿ ಪಾಪ ಇನ್ನು ಚಿಕ್ಕವಳು; ಅದುಕ್ಕೆ ಈ ಓಬಾಮ ಕಾಲದ್ ಕಥೆ ತಿಳೀಲಿಲ್ಲ. ಮಾಮ ಒಂದು ಹಾಡ್ ಹೇಳ್ಕೊಡು ಅಂದ್ಲು. ಸರಿ ತಾನು ಎರಡ್ನೇ ತರಗತೀಲಿ ಕಲಿತಿದ್ದ ಒಂದು ಎರಡು ಹಾಡು ಗೊತ್ತೇನಮ್ಮ ಅಂದ. ಅದು ಇಲ್ಲ ಅಂತ ತಲೆ ಆಡಿಸ್ತು. ಸರಿ ಹೇಳಾಣಾ ಅಂತ ಶುರು ಮಾಡಿ
ಒಂದು ಎರಡು ಬಾಳೆಲೆ ಹರಡು
ಮೂರು ನಾಕು ಅನ್ನಾ ಹಾಕು
ಐದು ಆರು ಬೇಳೆ ಸಾರು
ಏಳು ಎಂಟು ಪಲ್ಯಕೆ ದಂಟು
ಒಂಭತ್ತು ಹತ್ತು ಎಲೆ ಮುದುರೆತ್ತು
ಊಟದ ಆಟಾ ಮುಗಿದಿತ್ತು. ಅಂದು ಆ ಇಬ್ರೂ ಫಟಿಂಗರ ಕಡೆ ನೋಡ್ದ. ಅವು ಬಿದ್ದೂ-ಬಿದ್ದೂ ನಕ್ವು. ಮತ್ತೆ ಓಬಿರಾಯನ್ ಹಾಡೇ ಹೇಳ್ತೀಯಲ್ಲ ಮಾವ ಅಂತ ಹಾಸ್ಯ ಮಾಡಿದ್ವು. ಯಾಕ್ರೋ ಇದು ತುಂಬಾ ಹೆಸ್ರುವಾಸಿ ಹಾಡು ಕಣ್ರೋ ಅಂದ. ಅಯ್ಯೋ ಮಾವ ಈಗ ಹರಡಕ್ಕೆ ಬಾಳೆ ಎಲೆ ಎಲ್ಲಾ ಸಿಗಲ್ಲ. ಎಲ್ಲಾ ಪ್ಲಾಸ್ಟಿಕ್ ತಟ್ಟೇನೆ. ಅದ್ರಲ್ಲಿ ಅನ್ನಾ ಸಾರು ಯಾರೂ ಬಡಿಸೋಲ್ಲ. ಎಲ್ಲ್ರಿಗೂ ಅದ್ನ್ನ ಮಾಡಕ್ಕೂ ಬರಲ್ಲ, ತಿನ್ನಕ್ಕೂ ಬರಲ್ಲ. ಮೈಮೇಲೆಲ್ಲಾ ಸೋರಿಸ್ಕೋತಾರೆ. ಸಾರು ಅಂದ್ರೆ ಭಾಳಾ ಬೋರು ಅಂದ್ವು. ಮತ್ತೇನ್ ತಿಂತಾರೆ ಹೊಟ್ಟೇಗೆ ವಿಜಯ ಪ್ರಶ್ನೆ ಮಾಡ್ದ.

ಈಗೆಲ್ಲಾ ಓಬಾಮಾ ದೇಶದ್ ಮೇಕ್ ಡೊನಾಲ್ಡ್ ತಿನ್ನೊದು ಅಂದ್ವು. ಏನ್ರೋ ಮೇಕೆ ಡೋಕೆ ಅಂತೀರಾ. ನಿಮ್ಮಪ್ಪ ಅಮ್ಮ ನಿಮ್ಗೆ ಮೇಕೆ ಮಾಂಸ ಮಡ್ದಿ ತಿನ್ನಿಸ್ಬಿಟ್ರೇನೋ ?ಏನೇ ಅಕ್ಕಾ ಈ ಮಕ್ಳು ಕುಲಾ ಎಲ್ಲಾ ಕೆಡಿಸ್ಬಿಟ್ಟಿದ್ದೀಯಲ್ಲೇ ಅಂದ.ಅದಕ್ಕೆ ಮಕ್ಳು ಇನ್ನೂ ಬಿದ್ದು ಬಿದ್ದು ನಕ್ವು. ಅವರಕ್ಕನೂ ನಕ್ಳು.
ವಿಜಯ ಕಣ್ ಕಣ್ ಬಿಟ್ಕೊಂಡು ನೋಡ್ತಿದ್ದಾಗ ಮಕ್ಳು ಮಕ್ ಡೊನಾಲ್ಡ್ ಚಿನ್ಹೆ m ತೋರ್ಸಿ ಇದೇ ಮ್ಯಕ್ ಡೊನಾಲ್ಡ್ ಅಂದ್ವು. ಇದೇನ್ರೋ ಬರೀ ಲ ಅಕ್ಷರದ್ ಒತ್ತಕ್ಷರ ಮಾತ್ರ ಇದೆ. ಮುಖ್ಯ ಅಕ್ಷರ ಇಲ್ಲಾ ಅಂದ. ಹೇ ಮಾಮ, ಇದು ಇಂಗ್ಲೀಷಿನ ’ಎಂ’ ಅನ್ನೋ ಅಕ್ಷರ. ಈಗೆಲ್ಲಾ ಜನ ಇಲ್ಲೇ ತಿನ್ನೋದ್ರಿಂದ ಇದ್ರ ಹಾಡೇ ಎಲ್ಲಾ ಹೇಳೋದು ಅಂತ ಅಂದ್ವು.
ಸರಿ ಓಬಾಮಾ ಕಾಲದ್ ಹಾಡು ನೀವೇ ಹೇಳ್ರಪ್ಪ ಕೇಳಾಣ ಅಂದ. ಶುರು ಮಾಡಿದ್ವು.
ಒಂದು ಎರಡು ಮ್ಯಾಕ್ ಡೊನಾಲ್ಡ್ ಗೆ ಹೊರಡು
ಮೂರು ನಾಕು ಕೋಕು, ಮಿಲ್ಕ್ ಶೇಕು
ಐದು ಆರು ಚೀಸ್ ಬರ್ಗರ್ರು
ಏಳು ಎಂಟು ಫ಼್ರೆಂಚ್ ಫ಼್ರೈಸ್ ಉಂಟು
ಒಂಭತ್ತು ಹತ್ತು ಹೊಟ್ಟೆ ತುಂಬ್ತು
ಕುತ್ಗೇ ತಂಕ ತಿಂದಾಯ್ತು
ಢರ್ರನೆ ತೇಗು ಬಂದ್ಹೋಯ್ತು.

ಅಂತ ಹೇಳಿದ್ವು……  ಯಾಕೇ… ಎಲೆ ಮುದುರಿ ಎತ್ತಲ್ವಾ ಅಂದಿದ್ದಕ್ಕೆ, ಮಕ್ಳು ನಕ್ಕು ಅಲ್ಲಾ ಮಾಮಾ ಅಷ್ಟೆಲ್ಲಾ ತಿಂದ್ ಮೇಲೆ ಅಲ್ಲಾಡಕ್ಕೂ ಅಗಲ್ಲ. ಎಲೇ ಮುದ್ರೋದೆಲ್ಲಿಂದ ಬಂತು. ಯಾರಾದ್ರೂ ಬಂದು ಎಲ್ಲಾ ಎತ್ಕೊಂಡ್ ಹೋಗ್ತಾರೆ ಅಂದ್ವು. ಯಾರ್ನಾ??? ತಟ್ಟೇನಾ ಇಲ್ಲಾ ತಿಂದೋರ್ನಾ? ಅಂತ ಕೇಳಿದ್ ವಿಜಯ ಸುಸ್ತೋ ಸುಸ್ತು. ಅಷ್ಟ್ ಹೊತ್ಗೆ ಆ ಮಕ್ಕಳ ಅಪ್ಪ ಬಂದ್ರು. ಏನ್ ಭಾವಾ ಚನ್ನಾಗಿದ್ದೀರಾ ಅಂತ ವಿಜಯ ಕೇಳೋದ್ರೊಳ್ಗೆ ಮಕ್ಳು ಬೆಕ್ಕಿನ್ ಕಂಡ್ ಇಲೀ ಥರ ಬಿಲದಲ್ಲಿ ಸೇರ್ಕೊಳ್ಳಕ್ಕೆ ಓಡ್ಹೋದ್ವು.

ಸುದರ್ಶನ ಗುರುರಾಜರಾವ್.

ಬೆಡಗಿನ ಕನ್ನಡ ವರ್ಣಮಾಲೆ

ಬೆಡಗಿನ ಕನ್ನಡ ವರ್ಣಮಾಲೆ
”ಅ,ಆ ಇ,ಈ ಕನ್ನಡದಾ ಅಕ್ಷರಮಾಲೆ ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ” ಈ ಹಾಡನ್ನು ಕೇಳದ ಕನ್ನಡಿಗರಿಲ್ಲ. ಈ ಸುಂದರ ಗೀತೆ ಸ್ವರಗಳ ಸ್ತರದಲ್ಲಿ ಯೋಗವಾಹಗಳಾದ ಅಂ ಅಃ ಗಳೊಂದಿಗೆ ಮುಗಿಯುತ್ತದೆ. ಕರುಳಿನ ಕರೆ ಚಿತ್ರಕ್ಕಾಗಿ ಶ್ರಿ ಆರ್.ಎನ್. ಜಯಗೋಪಾಲ್ ಅವರು ರಚಿಸಿದ ಕನ್ನಡದ ಈ ಅನನ್ಯ ಗೀತೆ ಪ್ರತಿಯೊಂದು ಸ್ವರಕ್ಕೂ ಜೀವನದ ವಿವಿಧ ಹಂತ (ಸ್ತರ) ಗಳಲ್ಲಿ ಇರಬಹುದಾದ ಪ್ರಾಮುಖ್ಯತೆ ಯನ್ನು ತೊರುತ್ತದೆ. ’ಅ’ ಇಂದ ಅಮ್ಮಾ ಎನ್ನುವ ಮೊದಲ ಮಾತು ಶಿಶುವಾಗಿದ್ದಾಗ, ಆಟ ಊಟ ಓಟ ಗಳು ಬಾಲಕನಾಗಿದ್ದಾಗ,ಇನ್ನೂ ಬೆಳೆದ ನಂತರ ಮಾನವೀಯ ಮೌಲ್ಯಗಳ ಕಲಿಕೆ- ಇದ್ದವರು ಇಲ್ಲದವರಿಗೆ ನೀಡುವುದು, ಈಶ್ವರನಲ್ಲಿ ಭಕ್ತಿ ಇಡುವುದು ಮುಖ್ಯವಾಗುತ್ತದೆ;ಅಂದರೆ, “ನಾನು” ಎನ್ನುವ ಭಾವ ತೊಡೆಯುವುದು. ತರುಣರಾಗಿದ್ದಾಗ ಕಲಿಯುವ ಬಹು ಮುಖ್ಯ ನೀತಿ ಉಪ್ಪು ತಿಂದ ಮನೆಗೆ ಎರ್ಡ ಬಗೆಯದಿರುವ ಮನೋಭಾವ, ಸ್ವಾರ್ಥ ಸಾಧನೆಗಾಗಿ ಊರಿಗೆ ದ್ರೋಹ ಮಾಡದಿರುವ ( ವ್ಯಕ್ತಿಗತ ಹಿತಕ್ಕಿಂತ ಸಾಮಾಜಿಕ ಹಿತವನ್ನು ಪರಿಗಣಿಸುವ ಮನೋಭಾವನೆ) ವ್ಯಕ್ತಿತ್ವದ ಬೆಳವಣಿಗೆ, ಆನಂತರದಲ್ಲಿ ಓದು ಮುಗಿದು ಮಾಗಿದ ತಾರುಣ್ಯದ ವಯಸ್ಸಿನಲ್ಲಿ ದೇಶಸೇವೆ ಈಶ ಸೇವೆ ಎಂದು ಮಾಡಿದಾಗ ಜೀವನ ಆಹಾ ಆಃ ಆಃ ಎನ್ನುವಂತಿರುತ್ತದೆ ಎಂದು ಸುಂದರವಾಗಿ ಹೆಣೆದಿದ್ದಾರೆ.  ಕನ್ನಡದ ಮುಂದಿನ ವರ್ಣಮಾಲೆಯಲ್ಲಿ ಬರುವ ವ್ಯಂಜನಗಳಿಗೂ ಅವುಗಳದ್ದೆ ಆದ ವೈಶಿಷ್ಟ್ಯ ಇದ್ದು ಇದು ಬಹಳ ಜನಕ್ಕೆ ತಿಳಿಯದು. ವ್ಯಂಜನಗಳಲ್ಲಿ ವರ್ಗೀಯ,ಅವರ್ಗೀಯ, ಅಲ್ಪಪ್ರಾಣ,ಮಹಪ್ರಾಣ ಹಾಗು ಅನುನಾಸಿಕಗಳೆಂಬ ಬಗೆಗಳಿವೆ ಇದು ಎಲ್ಲರಿಗೂ ತಿಳಿದ ವಿಚಾರ. ವರ್ಣಮಾಲೆಯ ಪ್ರತಿಯೊಂದು ಗುಂಪಿನ ಎಲ್ಲ ಸದಸ್ಯರು ನಮ್ಮ ಶ್ವಾಸ ಪ್ರಕ್ರಿಯೆಯ ವಿವಿಧ ಹಂತಗಳಿಂದ ಕ್ರಮವಾಗಿ ಮೂಡಿಬರುತ್ತವೆ.   ಸ್ವರಗಳಿಂದ ಆರಂಭವಾಗುವ ಧ್ವನಿಗಳು ಹಂತ ಹಂತವಾಗಿ ಗಂಟಲಿನಿಂದ ಮೇಲೇರಿ ತುಟಿಯ ವರೆಗೂ ಬರುತ್ತವೆ. ಉದಾಹರಣೆಗೆ, ಅ,ಆ ಅಂದು ನೋಡಿ, ನಾಲಿಗೆಯ ಹಿಂದಿನ ಗಂಟಲ ಭಾಗದಿಂದ ಶಬ್ದ ಹೊರಡುತ್ತದೆ. ಕ,ಖ,ಗ ಗಳು ಅಲ್ಲಿಂದ ಮುಂದಕ್ಕೆ ಸರಿದು ನಾಲಿಗೆ ಮತ್ತು ಕಿರಿನಾಲಿಗೆಯ ಚಲನೆಯಿಂದ ಬರುತ್ತವೆ. ಹೀಗೆ ಪ.ಫ ಬ ದಲ್ಲಿ ಎರಡು ತುಟಿಗಳು ತಗುಲಿದಾಗ ಮಾತ್ರವೆ ಶಬ್ದ ಹೊರಡುವುದು. ಇಷ್ಟು ಸುಂದರವಾಗಿ, ವ್ಯವಸ್ಥಿತವಾಗಿ ಸಂಸ್ಕೃತದಿಂದ ಪ್ರೇರಿತವಾದ ಭಾರತದ ಭಾಷೆಗಳಲ್ಲದೆ ಬೇರೆ ಭಾಷೆಯಲ್ಲಿದೆಯೆಂದು ನನಗನಿಸದು. ಅದರಲ್ಲೂ, ಎಲ್ಲಾ ವರ್ಣಗಳಿಂದ ಸಮೃದ್ಧವಾದ ಕನ್ನಡ ಭಾಷೆಯಲ್ಲಿ  ಈ ಬೆಡಗನ್ನು ಕಾಣಬಹುದು. ಈ ಭಾಷಾ ಸೌಂದರ್ಯವನ್ನು ಕವಿತೆಯಲ್ಲಿ ಹಿಡಿದಿಡುವ,ಅಭಿವ್ಯಕ್ತಗೊಳಿಸುವ ಅಭಿಲಾಷೆ ನನ್ನದು.

ಆಅ,ಇ,ಈ ಉ,ಊ ಕನ್ನಡ ಅಕ್ಷರಮಾಲೆ
ಕಲಿಯಲು ಸುಲಭ ನಡೆಸುವ ನಾವು
ಮನೆಯಲಿ ಕನ್ನಡ ಶಾಲೆ

ಅ,ಆ,ಇ,ಈ,ಉ,ಊ ಜೊತೆಯಲಿ 
ಋ ೠ ಎ ಏ ಐ
ಒ,ಓ ಔ ಸ್ವರಗಳು ಅಂ ಅಃ 
ಯೋಗವಾಹಕವೆ ಸೈ

ಹ್ರಸ್ವವೆ ಮೊದಲು ದೀರ್ಘ್ಹ ಅನಂತರ
ಸ್ವರಗಳು ಕ್ರಮವಾಗಿ
ಸ್ವರಗಳು ಮುಗಿದಿರೆ ವ್ಯಂಜನ 
ವರ್ಣವು ಬರುವವು ಮೊದಲಾಗಿ

ವ್ಯಂಜನ ವರ್ಣದಿ ಅಣ್ಣ ತಮ್ಮರು 
ಅಲ್ಪ- ಮಹಾಪ್ರಾಣ
ಅನುನಾಸಿಕಗಳು ನಿನಗೊಲಿದರೆ 
ಮಗು ನೀನೆ ಬಲು ಜಾಣ

ಕನ್ನಡ ಭಾಷೆಯ ಅಕ್ಷರ ಮಾಲೆ 
ಸುಂದರ ಬಲು ಸರಳ
ಕಲಿತರೆ ಭಾಷೆಯ ಬೆಳಕದು 
ಕಳೆವುದು ಬಾಳಿನ ಕಾರಿರುಳ

ಬರೆಯಲು ಕನ್ನಡ ಲಿಪಿಯದು 
ಸುಂದರ ನುಡಿಯಲು ಅತಿ ಮಧುರ
ಅಕ್ಷರ ಮಾಲೆಯ ವರ್ಗೀಕರಣ 
ಜಾಣ್ಮೆಯ ಕೆನೆಪದರ

ಸ್ವರಗಳು ಹರಿದಿವೆ ನಾಲಿಗೆ ಹಿಂದಿನ
ಗಂಟಲ ಒಳಗಿಂದ
ವ್ಯಂಜನಗಳ ಕೊನೆ ಸಾಲಿದು 
ಸಿಡಿಯಿತು ತುಟಿಗಳ ಮುತ್ತಿಂದ

’ಅ’ ಎನ್ನುವ ಎದೆಯಾಳದ ಸ್ವರವಿದೆ 
ಅಕ್ಷರಮಾಲೆಯ ಮೊದಲಿನಲಿ
’ಮ’ ಎಂಬುವ ಅನುನಾಸಿಕವಿರುವುದು
ವರ್ಗೀಯ ವ್ಯಂಜನದೆಣೆಯಲ್ಲಿ

’ಅ’ಜೊತೆಯಲಿ  ’ಮ’ ಸೇರಿಸಿ ಒತ್ತಲು
’ಅಮ್ಮಾ’ ಎನ್ನುವ ಪದವಿಹುದು
ಅಂತರಾಳದ ಒಳಗಡೆಯಿಂದ ಪ್ರೀತಿಯ 
ಒಸರಿಸಿ  ಮೂಡುವುದು

’ಅಮ್ಮಾ’ ಎನ್ನುವ ಪದದೊಳಗಡಗಿದೆ
ಅಕ್ಷರಮಾಲೆಯ ಹಿರಿವ್ಯಾಪ್ತಿ
ತಾಯಿನುಡಿ ನಮ್ಮ ಕನ್ನಡ ಕಲಿತರೆ
ಬಾಳಿಗೆ ಜೇನಿನ ಸಿಹಿ ಪ್ರಾಪ್ತಿ

ಅ,ಆ ಎಂದು ಹಾಡುತ ಶಬ್ದವ ನೀವೇ 
ಮಾಡುತ ನೋಡಿ
ಗಂಟಲ ಗಾಳಿಯ ಕಂಪನದಿಂದ 
ಮೂಡುವ ಸುಂದರ ಮೋಡಿ

ನಾಲಿಗೆ ಹಿಂದಿನ ಜಾಗದೊಳಿಂದ
ಬರುವವು ಸ್ವರಗಳು ಮೂಡಿ
ಕಲಿಯುತ ನಲಿಯುತ ಕುಣಿಯುತ 
ಹಾಡಿರಿ ನೀವುಗಳೆಲ್ಲರು ಕೂಡಿ

ಅಕ್ಷರ ಮಾಲೆಯ ಮುಂದಿನ ಸಾಲಿನ
ವರ್ಣಗಳೆಲ್ಲವು ವ್ಯಂಜನವು
ಕ,ಖ ಗ,ಘ, ನಂತರ ಕಡೆಯಲಿ 
ಙ ಎನ್ನುವ ಅನುನಾಸಿಕವು

ಕಿರುನಾಲಿಗೆಯದು ಬಂದರೆ ಜಿಹ್ವೆಗೆ
ಮುತ್ತನು ತಾ ಕೊಡಲು
ಕ ಖ ಗ ಘ  ವ್ಯಂಜನ ಮಾಲೆಯು
ಸೇರ್ವುದು ನಿನ್ನಯ ಮಡಿಲು

ಮುಂದಿನ ಅಕ್ಷರ ಮಾಲೆಯ ಸಾಲು
ಚ,ಛ ಜ ಝ ಎಂದು
ನುಡಿಯದು ಮೂಡಲು ಅಂಗುಳ 
ಮುಟ್ಟಿಸು ನೀ ನಾಲಿಗೆಯನು ತಂದು

ಕ ಖ ಸಾಲಿನ ಮುಂದಕೆ ಸರಿದಿದೆ
ಚ,ಛ ಅಕ್ಷರ ಮಾಲೆ
ಕಲಿಯುತ ನಲಿಯಿರಿ ಮಕ್ಕಳೆ 
ವರ್ಣಗಳೀ ಚಂದದ ಲೀಲೆ

ಚ ಛ ಜ ಝ ಆಯಿತು ಮುಂದಿನ 
ವ್ಯಂಜನ ಯಾವುದೋ ಜಾಣ
ಟ ಠ ಡ ಢ ಎನ್ನುತ ಸೇರಿಸು ಣ 
ಅನುನಾಸಿಕ ವರ್ಣ

ದಂತದ ಹಿಂದಿನ ಭಾಗವು ಜಿಹ್ವೆಗೆ
ತಗುಲಿರೆ ಕೇಳುತಿದೆ
ಟ,ಠ ಡ ಢ ವರ್ಣದ ಬಣ್ಣನೆಯಲ್ಲಿಯೆ
ಸೊಗಸು ಇದೆ

ಮುಂದಿನ ಸಾಲಿಗೆ ಸರಿಯಿರಿ ಎಲ್ಲರು 
ನಾಲಿಗೆ ಆಡಿಸುತ
ಇಕ್ಕಳದಂತಿಹ ಹಲ್ಲಿನ ಮಧ್ಯಕೆ
ನಾಲಿಗೆ ತೂರಿಸುತ

ತ ಥ ದ ಧ ಹೇಳುತ ಕುಣಿಯಿರಿ 
ಎಲ್ಲರು ಕೈಹಿಡಿದು
ಹಾಡಿನ ಜೊತೆಯಲಿ ತಾಳವ 
ಹಾಕುತ ತನನನನ ಎಂದು

ದಂತದ ಮುಂದಿನ ಭಾಗವೆ ಬಾಯಿಯ
ಚಂದದ ಅಧರಗಳು
ಪ ಫ ಬ ಭ ಮ ಗಳೆ ಇಲ್ಲಿನ 
ವ್ಯಂಜನ ಪದರುಗಳು

ಮೇಲ್ದುಟಿ ಕೆಳಗಿನ ತುಟಿಗಿಡುತಿರೆ ತಾ
ಸುಂದರ ಮುತ್ತೊಂದು
ಪ ಫ ಬ ಭ ಮುಗಿಯಲು  ಉಳಿವುದು
ಕೊನೆಗಿಹ ಸಾಲೊಂದು

ಕಟ್ಟಿರಿ ಮಕ್ಕಳೆ ಗುಂಪಿಗೆ ಸೇರದ ಈ 
ವ್ಯಂಜನಗಳ ಕಂತೆ
ವೈವಿಧ್ಯತೆಯಲಿ ಏಕತೆ ತೋರುವ
ಭಾರತ ಜನಪದದಂತೆ

ಯ ರ ಲ ವ ಶ ಷ ಜೊತೆಯಲಿ
ಸ ಹ ಳ ಕ್ಷ ತ್ರ ಜ್ಞ
ದಿಕ್ಷೆಯ ತೊಡುತಲಿ ನಡೆಸುವ 
ನಾವು ಕನ್ನಡ ಉಳಿಸುವ ಯಜ್ಞ

ಡಾ. ಸುದರ್ಶನ ಗುರುರಾಜರಾವ್

ಹಸಿವು (ಕವನ)

ಹಸಿವು (ಕವನ)

ಓ ಮಾತೆ ನೀನೇಕೆ ಬೇಡುತಿಹೆ ಭಿಕ್ಷೆ
ಎಲ್ಲಿ ಹೋಯಿತು ನಿನ್ನ ಮನೆ ಮಂದಿ ರಕ್ಷೆ
ಬಾಡಿ ನಲುಗಿಹುದಲ್ಲ ಈ ನಿನ್ನ ವದನ
ಏನಾಯ್ತು ಆ ನಿನ್ನ ಬಹು ಭವ್ಯ ಸದನ

ಓ ಮಗುವೆ ಮನೆಯಿದ್ದು ಪರದೇಶಿ ನಾನು
ದಿನವು ನಾ ಅರೆ ಹೊಟ್ಟೆ ನೀ ತಿಳಿಯೆಯೇನು?
ನನ್ನ ಕೋರಿಕೆಗಿನಿತು ಕೊಡದೆ ಬೆಲೆಯನ್ನು
ಬೇಯಿಸುತ ಬಡಿಸಿಹರು ಕಲಬೆರಕೆಯನ್ನು

ಹಸಿವೆಯಿಂ ತತ್ತರಿಸಿ ದೇಹ ಸೊರಗಿಹುದು
ಭಿಕ್ಷೆ ಬೇಡಲು ನಡೆಯೆ ಕಾಲು ಸೋತಿಹುದು
ಕಲಬೆರಕೆ-ಅರೆಹೊಟ್ಟೆ ಸೌಖ್ಯವೆನಗಿಲ್ಲ
ನಾ ಪೊರೆದ ಮಕ್ಕಳಿಂ ಏನು ಸುಖವಿಲ್ಲ

ಹೆತ್ತ ಕರುಳಿನ ಹಸಿವ ತೀರಿಸದ ನಾನು
ಎಲ್ಲ ಭೋಗವ ಪಡೆದು ಬದುಕಿದ್ದರೇನು
ನಿನಗೇನು ಬೇಕೆಂದು ಅರುಹು ನೀ ನನಗೆ
ಮೂ ಲೋಕ ನಾ ಸುತ್ತಿ ತರುವೆ ಪದದಡಿಗೆ

ಅಕ್ಷರದ ಕಣಜದಿಂ ಪದಗಳಕ್ಕಿಯನಳೆದು
ಕಲಬೆರಕೆ ಕಲ್ಲುಗಳನದರಿಂದ ಸೆಳೆದು
ವ್ಯಾಕರಣದುದಕದಿಂ ಅಕ್ಕಿಯನು ತೊಳೆದು
ಬೇಯಿಸಲು ಅದು ನನ್ನ ಹಸಿವ ಕಳೆಯುವುದು

ಹೃದಯದಾ ಪಾತ್ರೆಯಲಿ ಅಕ್ಕಿಯನು ಇಟ್ಟು
ನಿನ್ನೆದೆಯ ಕುಲುಮೆಗೆ ಬೆಂಕಿಯನು ಒಟ್ಟು
ನಿನ್ನುಸಿರ ಬಿಸಿಗಾಳಿ ಊದುತಲಿ ನಿರತ
ನೀಡುವೆಯ ನೀ ಎನಗೆ ಭಿಕ್ಷೆ ಅನವರತ

ನಿನ್ನ ಮಣ್ಣಿನ ಋಣವು ನನ್ನ ಮೇಲಿರಲು
ನಿನ್ನ ಅನ್ನವನುಂಡು ನಾನು ಬೆಳೆದಿರಲು
ಭಿಕ್ಷೆಯನು ನೀಡೆಂದು ಬೇಡದಿರು ತಾಯೆ
ನನ್ನ ಸೇವೆಯನುಂಡು ಪ್ರೇಮದಲಿ ಪೊರೆಯೆ

ದೀಕ್ಷೆಯಾ ಕುಲುಮೆಗೆ ಸಂಕಲ್ಪದಿಟ್ಟಿಗೆ
ಉರಿವ ಬೆಂಕಿಗೆ ನನ್ನ ಕೈಗಳೇ ಕಟ್ಟಿಗೆ
ಬೇಯಿಸುವೆ ಅನ್ನವನು ನಾನಿನ್ನ ಹೊಟ್ಟೆಗೆ
ಅನುದಿನವು ಇರು ತಾಯೆ ನೀ ನನ್ನ ಒಟ್ಟಿಗೆ

ಕನ್ನಡದ ಕ್ಷೀರಾನ್ನ ಬಡಿಸಿದರೆ ದಿನವೂ
ಹಿಗ್ಗಿ ಕುಣಿಯುವುದಮ್ಮ ಈ ನನ್ನ ಮನವು
ಅರಳಲಿ ಮತ್ತೊಮ್ಮೆ ನಿನ್ನ ಚೆಲು ಮೊಗವು
ತುಂಬಿರಲಿ ಮನೆಯೆಲ್ಲ ನಿನ್ನ ಕಿರು ನಗುವು

ನಾ ನಿನ್ನ ಮಗನಾಗಿ ಬದುಕಿರುವವರೆಗೂ
ಪರದೇಶಿ ನೀನಲ್ಲ ಬಿಡು ನಿನ್ನ ಕೊರಗು
ದುಡಿದು ನಾ ಮರಳಿಸುವೆ ನಿನಗೆ ವೈಭವವ
ಭುವನೇಶ್ವರಿ ನೀ ಆಳು ಮತ್ತೆ ಈ ಜಗವ.

ಡಾ. ಸುದರ್ಶನ ಗುರುರಾಜರಾವ್

ತೀರ್ಪು ( ನೀಳ್ಗತೆ)

ತೀರ್ಪು ( ನೀಳ್ಗತೆ)

 

ಫೊನ್ ಕರೆ ೧: *******೭೮೬೭: ನೀವು ಕರೆ ಮಾಡಿದ ಸಂಖ್ಯೆ ಚಾಲನೆಯಲ್ಲಿಲ್ಲ-”…..”
ಫೋನ್ ಕರೆ ೨:*******೬೫೪೭: ನೀವು ಕರೆ ಮಾಡಿದ ಚಂದಾದಾರರು ಯಾವುದೇ ಕರೆಗಳನ್ನು ಸ್ವೀಕರಿಸುತ್ತಿಲ್ಲ– .”……..ಥತ್”
ಫ಼ೋನ್ ಕರೆ ೩: *******೩೪೫೨:ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗಡೆ ಇದ್ದಾರೆ–.”…..ಥತ್ತೇರಿ, ದರಿದ್ರ”
ಫೋನ್ ಕರೆ ೪: ******೫೪೭೮: ಚಂದಾದಾರರು ಬೇರೊಂದು ಸಂಭಾಷಣೆಯಲ್ಲಿ ನಿರತಾರಗಿದ್ದಾರೆ. ದಯವಿಟ್ಟು- “ಥತ್, ಇವನಜ್ಜಿ”
ಫೋನ್ ಕರೆ ೫:*********೮೭೩೪: ಟ್ರಿಣ್..ಟ್ರಿಣ್… ಸಂಬಂಧ ಕಡಿಯಿತು— ”ಇವನ್ಮನೆ ಕಾಯ್ವಾಗ”
ಫೋನ್ ಕರೆ ೬:*******೭೭೮೮ : ಟ್ರಿಣ್–ಟ್ರಿಣ್.. ಹಲೋ .. ಅಬ್ಬ.. ಸಧ್ಯ.. ಈಗಾದರೂ ಸಿಕ್ಕಿತಲ್ಲ. ಸಮಾಧಾನದ ನಿಟ್ಟುಸಿರು ಬಿಟ್ಟು ಯೋಗೀಶ ಆ ಕಡೆಯಿಂದ ಬರುವ ಪ್ರತಿಕ್ರಿಯೆಗಾಗಿ ಕಾದ.
” ಹಲೋ, ಮಾದಕ ಆದರೆ ಇಂಪಾದ ಕಂಠವೊಂದು ಆ ಕಡೆಯಿಂದ ಉಲಿಯಿತು.
ಹಲೋ.. ನಾನು ಯೋಗೀಶ ಅಂತ… ಅ…
ಹೇಳಿ
ನಿಮ್ಮ ಹೆಸರು ಸುಶೀಲಾ ರಾಣಿ ತಾನೆ? ..ಅ…
ಹೌದು ಹೇಳಿ
ಈ ದಿನ ರಾತ್ರಿ ನೀವು ಫ್ರೀಯಾಗಿದ್ದೀರ?…ಅ…
ಹೌದು ಎಂದರೆ ಹೌದು, ಇಲ್ಲ ಎಂದರೆ ಇಲ್ಲ
ಹಾಗೆಂದರೆ? ….
ನೋಡೀ ಸಾರ್, ನೀವ್ಯಾರೋ ನನಗ್ಗೊತ್ತಿಲ್ಲ. ನನ್ನ ಕೆಲಸ ನಿಮಗೆ ಗೊತ್ತು. ನಿಮ್ಮ ಚೌಕಾಸಿಯ ಮೇಲೆ ನನ್ನ ನಿರ್ಧಾರ
ನೋಡಿ, ನನಗೆ ಈ ರಾತ್ರಿ ನಿಮ್ಮ ಸಂಗ ಬೇಕೇ ಬೇಕು. ನಿಮ್ಮ ಚಾರ್ಜ್ ಎಷ್ಟು ತಿಳಿಸಿ.
ಸಾವಿರ ರೂಪಾಯಿ, ಆಗಬಹುದೇ. ನಾನು ಯಾವಾಗ ಬೇಕಾದರೂ ಹೊರಟು ಹೋಗುವುದಕ್ಕೆ ನೀವು ಒಪ್ಪಿಕೊಳ್ಳಬೇಕು.
ಸಾವಿರ ರೂಪಾಯಿ ಸರಿ. ಆದರೆ ಇನ್ನೊಂದು ಶರತ್ತು ಯಾಕೆ?
ನನಗೆ ಬೇಕೆನಿಸಿದರೆ ಇರಬಲ್ಲೆ. ಇಲ್ಲವಾದರೆ ನಿಮ್ಮ ಕೆಲಸದ ನಂತರ ಹೊರಟು ಹೋಗುವ ಸ್ವಾತಂತ್ರ್ಯ ನನಗೆ ಬೇಕು.
ಹಾಗಾದರೆ ಸರಿ
ಮುಂಗಡ ಮುನ್ನೂರೈವತ್ತು ಕೊಡಬೇಕು
ಈಗಲೇ?!! ಏಕೆ
ನೋಡಿ ನಿಮ್ಮನ್ನು ನಂಬಿ ನನ್ನ ಈಗಿರುವ ಅನ್ನಕ್ಕೆ ಕಲ್ಲು ಹಾಕಿಕೊಳ್ಳಲಾರೆ. ನಿಮ್ಮ ಬಳಿಇರುವ ಕಂಪ್ಯೂಟರ್ನಿಂದ ದುಡ್ಡು ವರ್ಗಾಯಿಸಿ ತಿಳಿಸಿ ನಂತರ ಉಳಿದ ವಿಷಯ.
ನನ್ನ ಬಳಿ ಏನಿದೆ, ಏನಿಲ್ಲವೆಂದು ನಿಮಗೆ ಹೇಗೆ ತಿಳಿಯಿತು
ಸ್ವಾಮಿ, ನಾನು ನನ್ನ ಕಸುಬಿನಲ್ಲಿ ಪಳಗಿದವಳು. ಅದಿರಲಿ ಮೊದಲು ನನಗೆ ಹಣ ವರ್ಗಾವಣೆ ಮಾಡಿ.
ನಿಮ್ಮನ್ನು ನಾನು ಹೇಗೆ ನಂಬಲಿ
ಫೋನು ಮಾಡಿದ್ದು ನೀವು. ನನ್ನ ಅವಶ್ಯಕತೆ ಇರುವುದು ನಿಮಗೆ.ಬೇಕಾದರೆ ಮಾಡಿ. ನನಗೀಗಾಗಲೇ ಒಂದು ಬುಕಿಂಗ್ ಇದೆ.
ನೀವು….. ಹೇಗಿದ್ದೀರೋ….???
ಹಾಗೋ.., ನಿಮ್ಮ ನಂಬರಿಗೆ ನನ್ನ ಫೋಟೊ ಕಳಿಸುವೆ. ನೋಡಿ, ನಂತರ ವರ್ಗಾಯಿಸಿ.. ನಿಮಗೆ ಬೇಕಾದರೆ
ಸರಿ..

ಆಧುನಿಕ ವಿದ್ಯುನ್ಮಾನ ಯುಗದ ಅನುಕೂಲತೆಗಳ ಪ್ರಮುಖ ಪ್ರತಿನಿಧಿಯಾದ ಈ ಮೊಬೈಲ್ ಫೋನ್ ಎಂಬ ಮಾಯಿಲ್ ಮರಾಠಿ ಮಂತ್ರವಾದಿಯ ಮಾಯಾಗನ್ನಡಿಯಲ್ಲಿ ಆ ಸಿಹಿಕಂಠದ ಒಡತಿಯ ಭಾವಚಿತ್ರವೊಂದು ಠಣ್ಣನೆ ಪ್ರತ್ಯಕ್ಷವಾಯ್ತು. ಪರವಾಗಿಲ್ಲ ಎಂದುಕೊಂಡ ಯೋಗೀಶ ಬೇಗನೆ ಹಣ ಸಂದಾಯ ಮಾಡಿ ಅವಳಿಗೆ ಕರೆ ಮಾಡಿ ತಿಳಿಸಿ, ಭೇಟಿಯಾಗುವ ಜಾಗವೆಲ್ಲಿಯೆಂದು ಖಾತ್ರಿ ಪಡಿಸಿಕೊಂಡು ತನ್ನ ಕಾರನ್ನೇರಿ ರೊಂಯ್ಯನೆ ಹೊರಟ.
ಸರಿಯಾಗಿ ಏಳು ಮುಕ್ಖಾಲು ಗಂಟೆಗೆ ಹೇಳಿದ ಜಾಗಕ್ಕೆ ಅವನು ಬರುವ ಮೊದಲೇ ಆಕೆ ಬಂದು ನಿಂತಿದ್ದಳು. ಯಾವುದೋ ಸಂಚಿಕೆಯನ್ನು ಮುಖದ ಮುಂದೆ ಹಿಡಿದಿದ್ದಳಾಗಿ ಅದು ಮರೆಯಾಗಿದ್ದರೂ, ಉಟ್ಟ ಬಟ್ಟೆಯ ಮೇಲೆ ಗುರುತು ಹಿಡಿದ ಯೋಗೀಶ ಕಾರು ನಿಲ್ಲಿಸಿ ಅವಳೆಡೆಗೆ ನಡೆದು ಬಂದ.
ಹಲೋ.. ನಾನು ಯೋಗೀಶ .. ಪರಿಚಯಿಸಿಕೊಂಡ
ಹಲೋ ,, ಮುಖದ ಮುಂದಿನ ಪುಸ್ತಕ ತೆಗೆದು ಆಕೆಯೂ ಪ್ರತಿಕ್ರಿಸಿದಳು
ತಾನು ಫೋಟೋದಲ್ಲಿ ಕಂಡ ಮುಖಕ್ಕೂ , ಇಲ್ಲಿದ್ದುದಕ್ಕೂ ವ್ಯತ್ಯಾಸವಿತ್ತು. ಕಣ್ಣು , ಮೂಗು, ಬಾಯಿ, ಹಣೆ, ಎಲ್ಲ ಅದೇ ರೀತಿ ಇದ್ದರೂ, ಅದಷ್ಟೂ ಒಟ್ಟಿಗೆ ಸೇರಿಸಿನೋಡಿದಾಗ ಅಲ್ಲಿಯಷ್ಟು ಸುಂದರವಾಗಿರಲಿಲ್ಲ. ಕಲ್ಪನಾಕಾವ್ಯವನ್ನು ಕಟ್ಟುತ್ತ ಬಂದಿದ್ದ ಯೋಗೀಶನ ಉತ್ಸಾಹ ಜರ್ರನೆ ಇಳಿಯಿತು.
ನೀವು ನಾನು ಮಾತನಾಡಿದ್ದ ಸುಶೀಲಾರಾಣಿ ಅಲ್ಲ. ನನಗೆ ನೀವು ಮೋಸ ಮಾಡಿದ್ದೀರಾ.. ಎಂದ
ಆಕೆ ಸರಕ್ಕನೆ ತಿರುಗಿ.. ನೋಡೀ ಸಾರ್, ನಾನೇ ಸುಶೀಲಾರಾಣಿ.ಧ್ವನಿ, ಹಾವ ಭಾವ ಗೊತ್ತಾಗಲಿಲ್ಲವೇ. ಸುಮ್ಮನೆ ಗಲಾಟೆ ಮಾಡಬೇಡಿ. ನಡೆಯಿರಿ, ನನಗೂ ಬೇರೆ ಕೆಲಸ ಇವೆ. ಜೋರು ಮಾಡಿದಳು
ಇಲ್ಲಿ ನೋಡ್ರೀ, ನೀವೇ ಕಳಿಸಿದ ಫೋಟೊ.ಇಲ್ಲಿಯಷ್ಟು ಸುಂದರವಾಗಿಲ್ಲ.ಆದ್ದರಿಂದ ನೀವು ನನಗೆ ಬೇಡ; ನನ್ನ ಹಣ ನನಗೆ ವಾಪಸ್ ಕೊಡಿ. ಗಲಾಟೆ ಮಾಡಿದ
ಸ್ವಾಮೀ.. , ನಿಮ್ಮಂಥವರನ್ನು ನಾವು ದಿನಾ ನೋಡುತ್ತಲೇ ಇರುತ್ತೇವೆ. ಬಹಳ ಜನ ಕೆಲಸ ಮುಗಿದ ಮೇಲೆ ತಕರಾರು ತೆಗೆಯುತ್ತಾರೆ, ನೀವು ನೋಡಿದರೆ ಮುಂಚೆಯೇ ಮಾಡುತ್ತಿದ್ದೀರ. ಉಳಿದ ಹಣ ಕೊಡಬೇಡಿ. ನೀವು ಬೇಕೆನಿಸಿದರೆ ಬರಬಹುದು. ಇಲ್ಲವಾದರೆ ನಿಮ್ಮ ದಾರಿ ನಿಮಗೆ,ನನ್ನ ದಾರಿ ನನಗೆ. ಸೇರಿಗೆ ಸವ್ವಾ ಸೇರು ಮಾತು ಹುರಿದಳು.
ಇದೇನ್ರೀ, ಧರ್ಮಕ್ಕೆ ಕೊಟ್ಟಹಾಗೆ ಮಾತಾಡ್ತೀರಲ್ಲ. ನಿಮ್ಮನ್ನು ಮುಟ್ಟಿಕೂಡಾ ಇಲ್ಲ.ಮುಂಗಡ ಹಣ ಕೊಡ್ರೀ.ಇಲ್ಲವಾದರೆ ಪೋಲಿಸ್ ಕಂಪ್ಲೇಂಟ್ ಕೊಡ್ತೇನೆ
ಪೋಲೀಸರು ನಾವು ಕಂಡಿರದ ಮೇಯಿಸದ ಪೋಲೀ ದನಗಳೇನಲ್ಲ. ಹೇಳ್ಕೋ ಹೋಗ್ರೀ…
ಕೋರ್ಟಿಗೆ ಹೋಗ್ತೇನೆ
ಅವರಪ್ಪನ ಮನೆಗೂ ಹೋಗ್ರೀ ಬೇಕಾದ್ರೆ. ಸರ ಸರನೆ ಹೊರಟುಬಿಟ್ಟಳು.
ಬೇಡ ನೋಡ್ರೀ,ನನ್ನ ಹಣ ಕೊಡ್ರೀ,ನಾನು ಖಡಕ್ಕಾದ ಮನುಷ್ಯ… ನ್ಯಾಯ ನ್ಯಾಯವೇ…. ಬನ್ರೀ ,,.ರೀ……
ಅವಳು ಹೊರಟೇ ಹೋದಳು
ನಖ ಶಿಖಾಂತ ಕುದಿಯುತ್ತ ಯೋಗೀಶ ತನ್ನ ಫ್ಲ್ಯಾಟಿಗೆ ಮರಳಿದ.
******* *********
ನಗರದ ಪ್ರತಿಷ್ಟಿತ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯೋಗೀಶ ಸ್ವಭಾವತಃ ಒಳ್ಳೆಯ ಯುವಕನೇ. ಸಾಹಿತ್ಯ ಸಂಗೀತ ಕಲೆ ಧರ್ಮಗಳಲ್ಲಿ ಬಹಳೆ ಆಸಕ್ತಿಯುಳ್ಳವನಾಗಿದ್ದ್ದು ಸಂಸ್ಕೃತದಲ್ಲೂ ಸಾಕಷ್ಟು ಪಾಂಡಿತ್ಯ ಪಡೆದಿದ್ದ. ತಂದೆ ತಾಯಿ ಇಲ್ಲದೆ ಅಜ್ಜಿಯ ಅಶ್ರಯದಲ್ಲಿ ಬೆಳೆದಿದ್ದ ಅವನು ಓದಿಗೆಂದು ಮಠದವರು ನಡೆಸುವ ಶಾಲೆ ಸೇರಿ ಅಲ್ಲಿಯೇ ತನ್ನ ಸ್ವಪ್ರಯತ್ನದಿಂದ ಓದಿ ಮುಂದೆ ಬಂದಿದ್ದ. ಧಾರ್ಮಿಕ ಪರಿಸರದಲ್ಲಿ ಬೆಳೆದ ಅವನಿಗೆ ಸಂಸ್ಕೃತ ಕಥೆ ಕಾವ್ಯಗಳನ್ನು ಓದುವ ಗೀಳು ಇತ್ತು.ನ್ಯಾಯ-ನಿಷ್ಠೆಯಲ್ಲಿ ಅಚಲವಾದ ನಿಲುವು. ಕೆಲವು ಸಲ ಸಣ್ಣ ಸಣ್ಣ ವಿಷಯಗಳಲ್ಲೂ ನ್ಯಾಯಾನ್ಯಾಯದ ವಿಶ್ಲೇಷಣೆ ಮಾಡುತ್ತಾ ವಾದಿಸುವುದು, ಯಾರಿಗೇ,ಯಾವುದೇ ಸಂದರ್ಭದಲ್ಲಿ ಅನ್ಯಾಯ ಆಗಿದೆಯೆಂದು ತನಗನಿಸಿದರೆ ಆ ವಿಚಾರ ತನಗೆ ನೇರ ಸಂಬಂಧಿಸಿಲ್ಲದಿದ್ದರೂ ಅಲ್ಲಿ ಜಗಳ ಆಡುವುದು ಮಾಡುತ್ತಿದ್ದ ಹಾಗೂ ತೊಂದರೆಗೂ ಸಿಕ್ಕಿಹಾಕಿಕೋಳ್ಳುತ್ತಿದ್ದ. ಮದುವೆ ಇನ್ನೂ ಆಗಿರಲಿಲ್ಲ. ಅವನದೆನ್ನುವವರು ಈಗ ಯಾರೂ ಇರಲೂ ಇಲ್ಲ. ಹಾಗೆಂದು ಈ ಕಾಲದ ಫ್ಯಾಷನ್ ಆದ ಲಿವಿಂಗ್ ಇನ್ ಸಂಬಂಧ ಮುಂತಾದುವುಗಳಿಗೂ ಪಕ್ಕಾಗಿರಲಿಲ್ಲ. ಹೆಚ್ಚು ಜನ ಗೆಳಯರು ಇರದ ಕಾರಣ ತನ್ನ ಕೆಲಸ ಮುಗಿದರೆ ಸ್ವಲ್ಪ ಅಡ್ಡಾಡುವುದು, ಅಡಿಗೆ, ಓದು, ಅವನ ದಿನಚರಿಗಳಾಗಿದ್ದವು. ಹೀಗಿರುವಲ್ಲಿ ಒಮ್ಮೆ ಕಾಳಿದಾಸನ ಕುಮಾರಸಂಭವ ಓದಲು ಮೊದಲು ಮಾಡಿದ. ಶುಕ್ರವಾರ ರಾತ್ರಿಯಿಂದ ಸತತ ಓದುತ್ತಿದ್ದವನು ಅದರಲ್ಲಿ ಬರುವ ಶಿವ ಪಾರ್ವತಿಯರ ಪ್ರಣಯವಿಲಾಸದ ವರ್ಣನೆ ಓದುತ್ತಿದ್ದ. ಆ ವಿಲಾಸದ ಸೂಕ್ಷಾತಿಸೂಕ್ಷ್ಮ ಬಣ್ಣನೆ ಓದುತ್ತ-ಓದುತ್ತ ಕಲ್ಪನಾಲೋಕಕ್ಕೆ ಜಾರಿದ ಅವನಿಗೆ ತಕ್ಷಣ ಹೆಣ್ಣಿನ ಸಂಗ ಬೇಕೆಂಬ ಅದಮ್ಯ ಬಯಕೆ ಉಂಟಾಯಿತು. ಮನಸ್ಸಿನಿಂದ ದೂರ ತಳ್ಳಲು ಪ್ರಯತ್ನಿಸಿದಷ್ಟೂ ಮತ್ತೆ ಮತ್ತೆ ನುಗ್ಗಿ ಬರುತ್ತಿತ್ತು. ಹೀಗಾಗಿ ಪ್ರಕೃತಿದತ್ತ ವಾಂಛೆ ಅವನನ್ನು ವೇಶ್ಯೆಯ ಸಂಪರ್ಕಕ್ಕೆ ಬರಲು ಪ್ರೇರೇಪಿಸಿತ್ತು.
ತರಾತುರಿಯಿಂದ ಬಟ್ಟೆ ಹಾಕಿಕೊಂಡು, ಸುಗಂಧ ಪೂಸಿಕೊಂಡು ಕಾರು ತೆಗೆದುಕೊಂಡು ಹೊರತಿದ್ದ. ಅಲ್ಲಿ ಹೋಗಿ ಅವಳನ್ನು ಕಂಡು ಭ್ರಮನಿರಸನಗೊಂಡು ಕುದಿಯುತ್ತಾ ಹಿಂದಿರುಗಿದ್ದ.
***** ******
ಹೆಲ್ಲೊ… ಇದು ಪೋಲೀಸ್ ಸ್ಟೇಷನ್ನಾ…?
ಹೌದು.. ಹೇಳಿ ಏನಾಗ್ಬೇಕು? ಮಹಿಳಾ ಪೇದೆ ಅಲಮೇಲು ಮಾತನಾಡಿದಳು
ಕಂಪ್ಲೇಂಟ್ ಕೊಡಬೇಕು
ಏನು ವಿಚಾರ
ಯೋಗೀಶ ತನ್ನ ಅಹವಾಲು ಹೇಳಿದ; ಅಲಮೇಲು ತಬ್ಬಿಬ್ಬಾದಳು. ಆದರೂ ಸುಧಾರಿಸಿಕೊಂಡು ಸ್ವಲ್ಪ ಜೋರು ದನಿ ಮಾಡಿ ” ಇದೂ ಒಂದು ಕಂಪ್ಲೇಂಟ್ ಕೊಡೋ ವಿಚಾರ ಏನ್ರೀ… ವೇಶ್ಯಾವಾಟಿಕೆಗೆ ಕೈ ಹಾಕಿದ್ದಲ್ಲದೆ ಅವಳ ಮೇಲೆ ದೂರು ಕೊಡುತ್ತೀರಲ್ಲ?! ನಿಮ್ಮನ್ನೇ ಅರೆಸ್ಟ್ ಮಾಡಬಹುದು
ನೋಡಿ ಮೇಡಂ, ಇವಳು ಅಧಿಕೃತವಾಗಿ ನೋಂದಾಯಿಸಿಕೊಂಡಿರುವ ಕಸುಬಿನವಳು. ಇದರಲ್ಲಿ ಕಾನೂನಿನ ಮಿತಿ ನಾನು ಮೀರಿಲ್ಲ.ಅಷ್ಟಕ್ಕೂ ನನ್ನನ್ನು ಅರೆಸ್ಟ್ ಮಾಡಬೇಕೆಂದರೆ ಮಾಡಿ. ಆದರೆ ಇದು ನ್ಯಾಯ ಅನ್ಯಾಯದ ವಿಷಯ. ನನಗೆ ಅನ್ಯಾಯ ಆಗಿರುವುದರಿಂದ ಈ ಕಂಪ್ಲೇಂಟ್. ಅದಕ್ಕೇ ದೂರು ದಾಖ್ಲು ಮಾಡಬೇಕಾಗಿದೆ.ನನ್ನ ಹಣ ನನಗೆ ವಾಪಸ್ ಬೇಕು.
ಇವನು ಯಾರೋ ಬಡಪೆಟ್ಟಿಗೆ ಬಗ್ಗುವ ಅಸಾಮಿಯಲ್ಲ ಎಂದೆಣಿಸಿದ ಅವಳು ” ರೀ ಬರೀ ಮುನ್ನೂರು ರುಪಾಯಿಗೆ ರಾದ್ಧಾಂತ ಮಾಡ್ತೀರೇನ್ರೀ,, ಹೆಣ್ಣೆಂಗುಸು ಹೋಗ್ಲೀ ಬಿಡ್ರೀ.ಈ ಕೆಲಸಕ್ಕೆ ಬಾರದ ಕಂಪ್ಲೇಂಟ್ನಿಂದ ಎಲ್ಲರ ಸಮಯ ಹಾಳು.ಊಟ ಮಾಡಿ ಮಲಿಕ್ಕಳ್ರೀ”
”ಮುನ್ನೂರಲ್ಲ ಮೇಡಂ. ಮುನ್ನೂರೈವತ್ತು!. ಅವಳು ಮೋಸ ಮಾಡಿಲ್ದಿದ್ರೆ ಹಣಕ್ಕೆ ಕೇರ್ ಮಾಡ್ತಿರ್ಲಿಲ್ಲ. ಇದು ಮೋಸದ ವ್ಯವಹಾರ.ನನ್ನ ಹಾಗೆ ಇನ್ನೂ ಬೇರೆಯವ್ರು ಮೋಸ ಹೋಗಬಹುದು. ಅದಕ್ಕೇ ಕಂಪ್ಲೇಂಟ್ ಮಾಡ್ತಿರೋದು.
ಇವನೆಲ್ಲಿ ಗಂಟು ಬಿದ್ದ್ನಪ್ಪಾ ಮಹಾಶಯ.ಶನಿವಾರ ರಾತ್ರಿ ಸ್ವಲ್ಪ ಆರಾಮಾಗಿರೋಣ ಅಂದ್ರೆ … ಎಂದು ಗೊಣಗಿಕೊಳ್ಳುತ್ತಾ,, ತಾನಾದರೂ ಯಾಕಾಗಿ ಈ ಫೋನ್ ಎತ್ತಿಕೊಂಡೆನೋ ಎಂದು ಸಿಟ್ಟು ಬರದಿರಲಿಲ್ಲ ಅವಳಿಗೆ. ತನ್ನ ಎದುರಲ್ಲೇ ಬೀಡಿ ಸೇದುತ್ತ ಕುಳಿತಿದ್ದ ಕಾಳಯ್ಯನ ಮೇಲೆ ಅಸಾಧ್ಯ ಸಿಟ್ಟು ಬಂತು ಅವಳಿಗೆ.ಭಡವ ತಾನು ಫೋನೆತ್ತದೇ ಈಗ ವ್ಯಂಗ್ಯ ನಗು ನಗುತ್ತಿದ್ದಾನೆ.ಅದಕ್ಕೂ ಹೆಚ್ಚಾಗಿ ಈ ರೀತಿಯ ದೂರು ಅವಳಿಗೂ ಹೊಸದು. ಇನ್ಸ್ ಪೆಕ್ಟರ್ ಗೆ ಫೋನ್ ಮಾಡಿ ಕೇಳೋಣವೆಂದರೆ ಮುಜುಗರ. ಈ ದೂರು ದಾಖಲಿಸಿದರೂ, ದಾಖಲಿಸದಿದ್ದರೂ ತನಗೆ ಮಂಗಳಾರತಿ ಗ್ಯಾರಂಟಿ ಎಂದು ಅವಳಿಗೆ ಅನಿಸದಿರಲಿಲ್ಲ. ತನಗಿಂತ ಕೇವಲ ಎರಡು ವರ್ಷ ಸೀನಿಯರ್ ಆಗಿದ್ದರೂ ದೊಣ್ಣೆನಾಯಕನಂತೆ ಆಡುವ ಕಾಳಯ್ಯನ ಮೇಲೆ ಅವಳ ಎಲ್ಲಾ ಕೋಪ ತಿರುಗತೊಡಗಿತು. ಸರಿ, ಏನಾದರಾಗಲಿ. ದೂರು ದಾಖಲಿಸಿ ನೋಡುವ, ನಾಳೆ ಕಳೆಯುವುದರಲ್ಲಿ ಅವನು ತಣ್ಣಗಾಗಿ ಈ ವಿಷಯ ಮರೆತುಬಿಡಬಹುದೆಂದು ಅವನ ವಿವರಗಳನ್ನು ಬರೆದುಕೊಳ್ಳಲು ಪುಸ್ತಕ ತರಲೆಂದು ಧುಮು-ಧುಮು ಗುಡುತ್ತಾ, ಕಾಳಯ್ಯ್ಯನನ್ನು ಕೆಕ್ಕರಿಸಿ ನೋಡುತ್ತ ಹೋದವಳು ಕುರ್ಚಿಯಲ್ಲಿ ಕುಕ್ಕರಿಸಿ, ಬರೆದುಕೊಂಡು ಯೋಗೀಶನಿಗೆ ರೆಫ಼ೆರೆನ್ಸ್ ನಂಬರನ್ನು ಕೊಟ್ಟು ಫೋನು ಕುಕ್ಕಿದಳು. ಕಾಳಯ್ಯ ಮೀಸೆಯಡಿಯಲ್ಲಿ ಕುತ್ಸಿತ ನಗೆ ಬೀರುತ್ತಲೇ ಇದ್ದ. ತನ್ನ ಮೀಸೆಯಂಚಿನಲ್ಲಿ.
**** ***
ಮರುದಿನ ಇನ್ಸ್ ಪೆಕ್ಟರ್ ಸಿದ್ಧಯ್ಯ ಕಛೇರಿಗೆ ಬಂದು ಕಣ್ಣಾಡಿಸಿದಾಗ ಈ ದೂರನ್ನು ಕಂಡು ಅವಾಕ್ಕಾದರು. ಈ ಪ್ರಪಂಚ ಹೀಗೂ ಬದಲಾಯ್ತೇ.. ಎಂದು ಅವರಿಗೆ ಸೋಜಿಗವಾಗದೆ ಇರಲಿಲ್ಲ. ಇದು ಮೋಸದ ಕಾಲಮಿನಡಿ ಬರುತ್ತದೆಯೋ ಅಥವಾ ಗ್ರಾಹಕ ರಕ್ಷಣ ಕಾಯಿದೆಯ ಕಾಲಮಿನಡಿ ಬರುತ್ತದೆಯೋ ಎಂಬ ಗೊಂದಲದಲ್ಲಿ ಬಿದ್ದರು. ತಕ್ಷಣ ಗ್ರಾಹಕ ರಕ್ಷಣಾ ನ್ಯಾಯಾಲಯದ ಮುಖ್ಯಸ್ಥ ಚಿದಂಬರ ಮೂರ್ತಿಗೆ ಫೋನಾಯಿಸಿದರು. ಅ ಕಡೆಯಿಂದ ಚಿದಂಬರ ಮೂರ್ತಿ ಆಗ ತಾನೇ ಈ ದೂರು ದಾಖಲು ಮಾಡಿಕೊಂಡು ಎಲ್ಲಿಂದ ಇದರ ವಿಶ್ಲೇಷಣೆ ಶುರು ಮಾಡಬೇಕೆಂದು ಯೋಚಿಸುತ್ತಿದ್ದರು. ಸಿದ್ಧಯ್ಯನ ಫೋನ್ ಬಂದಿದ್ದು ಅವರಿಗೂ ಸಂತೋಷತಂದಿತು. ಬಹಳ ದಿನಗಳಿಂದ ಭೇಟಿಯಾಗದೇ ಇದ್ದುದರಿಂದಲೂ, ಈ ವಿಚಾರ ತಾವು ನಿಭಾಯಿಸುವ ಇತರ ದೂರುಗಳಿಗಿಂತ ಭಿನ್ನವಾಗಿದ್ದುದರಿಂದಲೂ, ಕಾನೂನಿನಲ್ಲಿ ಈ ವಿಚಾರವಾಗಿ ಇರಬಹುದಾದ ಮಾರ್ಗದರ್ಶನ ಅರಿಯುವ ಕುತೂಹಲದಿಂದಲೂ ಭೇಟಿಯಾಗಿ ಮಾತನಾಡಲು ನಿರ್ಧರಿಸಿದರು. ಸಿದ್ಧಯ್ಯ ತಮ್ಮ ಜೀಪಿನಲ್ಲಿಯೇ ಚಿದಂಬರಮೂರ್ತಿಯ ಕಾರ್ಯಾಲಯಕ್ಕೆ ಧಾವಿಸಿದರು.
ಉಭಯ ಕುಶಲೋಪರಿ- ಕಾಫಿಗಳಾದನಂತರ ಅವರ ಸಂಭಾಷಣೆ ಯೋಗೀಶನ ವಿಚಾರದಲ್ಲಿ ಹೊರಳಿತು. ಈ ಬಗ್ಗೆ ಕಾನೂನಿನಲ್ಲಿ ನಿಖರವಾದ ಸೂಚನೆ ಮಾರ್ಗದರ್ಶನಗಳು ಇರಲಿಲ್ಲ. ಟಿ.ವಿ, ಟೇಪ್ ರೆಕಾರ್ಡೆರ್, ಚಪ್ಪಲಿ, ಫೋನು, ಬಟ್ಟೆ, ಹೀಗೆ ಗ್ರಾಹಕರು ಬಳಸುವ ನಿರ್ಜೀವ ವಸ್ತುಗಳ ಗುಣಮಟ್ಟ,ಕಂಪನಿಗಳ ಗ್ರಾಹಕ ಸೇವೆ ಕುರಿತಾದ ಭಿನ್ನಭಿಪ್ರಾಯಗಳು, ದುಃಖ, ದುಮ್ಮಾನಗಳು ದಾಖಲಾಗಿ ವಿಚಾರಣೆಗೊಳಪಡುತ್ತಿದ್ದವೇ ವಿನಃ ಒಂದು ಜೀವಿಯ ಅದರಲ್ಲೂ ಒಬ್ಬ ವೃತ್ತಿಪರ ವೇಶ್ಯೆಯ ಅಂದ-ಚೆಂದಗಳನ್ನು ಕುರಿತಾದ ಹಾಗೂ ವ್ಯಕ್ತಿನಿಷ್ಠ (ಸಬ್ಜೆಕ್ಟಿವ್) ಅಭಿಪ್ರಾಯಗಳಿಂದ ಬಣ್ಣ ಪಡೆದಿರಬಹುದಾದ ದೂರು ಅವರ ಅನುಭವದಲ್ಲಿ ಇದೇ ಮೊದಲು. ಅಂದ ಚಂದಗಳು ನೋಡುಗರ ಮನಸ್ಥಿತಿ, ಅಭಿರುಚಿ ಮೊದಲಾದ ಅಳೆಯಲಾಗದ ಅಂಶಗಳನ್ನು ಒಳಗೊಂಡಿರುವುದರಿಂದ ಈ ವಿಚಾರದಲ್ಲಿ ಹೇಗೆ ಮುಂದುವರಿಯಬೇಕೆಂಬ ಗೊಂದಲ ಅವರಿಬ್ಬರಿಗೂ. ಯೋಗೀಶನನ್ನು ಕರೆಸಿ ಬೆದರಿಸಿ ಬಲವಂತವಾಗಿ ದುರನ್ನು ಬರಾಖಾಸ್ತು ಗೊಳಿಸುವ ಯೋಚನೆ ಅವರಿಗೆ ಬಂತಾದರೂ ಸಿದ್ಧಯ್ಯ ಆ ರೀತಿಯ ಅಪ್ರಮಾಣಿಕ , ಅಸಡ್ದೆಯಯ ವ್ಯಕ್ತಿ ಅಲ್ಲ. ಚಿದಂಬರ ಮೂರ್ತಿ ಕೂಡಾ ಈ ದೂರು ಪಡೆದುಕೊಳ್ಳಬಹುದಾದ ಹೊಸ ರೂಪಾಂತರಗಳನ್ನೂ,ಭವಿಷ್ಯದಲ್ಲಿ ರೂಪಿಸಬಹುದಾದ ಸಮಾಜಿಕ ಅಯಾಮಗಳ ಸಾಧ್ಯತೆಗಳನ್ನೂ ಕುರಿತು ಕುತೂಹಲಗೊಂಡಿದ್ದರು. ತಾವು ಇದನ್ನು ಬಲವಂತವಾಗಿ ಬರ್ಖಾಸ್ತು ಗೊಳಿಸುವ ಪ್ರಯತ್ನ ಮಾಡಿದರೆ ಯೋಗೀಶ ಹುಟ್ಟಿಸಬಹುದಾದ ಅವಾಂತರಗಳ ಸಾಧ್ಯತೆಯನ್ನು ಅವರು ಪರಿಗಣಿಸದೆ ಇರಲಿಲ್ಲ.
ಸಿದ್ಧಯ್ಯ ಚಿದಂಬರ ಮೂರ್ತಿಯನ್ನು ಕುರಿತು ಹೇಳಿದರು ” ಚಿದಂಬರ, ಈ ಕೇಸು ನೀನೇ ನಿಭಾಯಿಸು;ನಿನಗೆ ಬೇಕಾದ ಸಹಕಾರ, ಸಹಾಯ ನಾನು ಕೊಡುತ್ತೇನೆ”
ಚಿದಂಬರ ಮೂರ್ತಿ ತಲೆಯಾಡಿಸಿದರು; ಸಿದ್ಧಯ್ಯ ಅಲ್ಲಿಂದ ಹೊರಬಿದ್ದರು.
****** ******** *********
ಕೋರ್ಟು ಕಾರ್ಯಾಚರಣೆಗೆ ತಯಾರಾಗಿತ್ತು. ಯೋಗೀಶ ಬಂದಿದ್ದ. ಅವನ ಜೊತೆಗೆ ಯಾರಿರಲಿಲ್ಲ- ಅವನ ಮೊಬೈಲ್ ಫೋನ್ ಹೊರತು. ತಾನು ಹಣ ವರ್ಗಾಯಿಸಿದ್ದ ವಿವರಗಳ ಕಾಗದದ ಪ್ರತಿಗಳನ್ನು ತಂದಿದ್ದ.
ಸುಶೀಲಾರಾಣಿ ಕೂಡಾ ಬಂದಿದ್ದಳು.
ಸಿದ್ಧ್ಯಯ್ಯ, ಮಹಿಳಾ ಪೇದೆ ಅಲಮೇಲು ತಮ್ಮ ಕಂಪ್ಲೇಂಟ್ ಪುಸ್ತಕದ ಸಮೇತ ಬಂದಿದ್ದರು.
ಚಿದಂಬರ ಮೂರ್ತಿ ಬಂದು ತಮ್ಮ ಪೀಠದಲ್ಲಿ ಆಸೀನರಾದರು. ಎಲ್ಲರೂ ಎದ್ದುನಿಂತು ಗೌರವ ಸಲ್ಲಿಸಿ ಕುಳಿತುಕೊಂಡರು.
ಯೋಗೀಶ ತನ್ನ ಪ್ರವರವನ್ನು ಹೇಳಿಕೊಂಡು ಈ ಪ್ರಹಸನದ ವಿವರಗಳನ್ನು ಕೊಟ್ಟು ತನಗಾದ ಅನ್ಯಾಯವನ್ನು ಸರಿಪಡಿಸುವಂತೆ ವಿನಂತಿಸಿಕೊಂಡ. ಭಾವಚಿತ್ರದಲ್ಲಿ ಕಂಡ ಸುಶೀಲಾರಾಣಿ ಜೀವಚಿತ್ರದಲ್ಲಿ ಬೇರೆಯೇ ಆಗಿರುವ ಕಾರಣ ತನಗೆ ಬರೀ ಹಣದ ಮೋಸವಷ್ಟೇ ಅಲ್ಲ, ಭಾವ ಪ್ರಾಪ್ತಿ, ಆ ಉತ್ಕಟ ಮನೋಸ್ಥಿತಿ, ಭ್ರಮನಿರಸನ ಎಲ್ಲ ನಷ್ಟವೇ ಆಗಿರುವುದರಿಂದ ಒಟ್ಟು ಅನ್ಯಾಯದ ಪರಿಮಾಣ ಹೆಚ್ಚ್ಹೇ ಆದರೂ ತಾನು ಮಾನವೀಯ ದೃಷ್ಟಿಯಿಂದ ಬರೀ ತನ್ನ ಹಣದ ಮೊತ್ತವನ್ನು ಮಾತ್ರವಷ್ಟೇ ವಾಪಸ್ ಕೇಳುತ್ತಿದ್ದೇನೆಂದೂ ವಿವರಿಸಿದ. ಅವನ ವಿಚಾರ ಸರಣಿಗೆ, ವಾಗ್ವೈಖರಿಗೆ ನ್ಯಾಯಾಧೀಶರು ತಲೆದೂಗಿದರು. ಅವನ ವಿದ್ವತ್ತು, ಭಾಷೆಯ ಮೇಲಿನ ಹಿಡಿತ, ತಾನಾಡುತ್ತಿರುವ ಮಾತಿನಮೇಲಿನ ನಂಬಿಕೆ ವಿಶ್ವ್ವಸಗಳು ಅವನ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು.
ಸುಶೀಲಾರಾಣಿಯನ್ನು ಕಟಕಟೆಗೆ ಕರೆಯಲಾಯ್ತು.ಬಂದು ನಿಂತುಕೊಂಡಳು. ಅವಳನ್ನು ಅಪಾದಮಸ್ತಕ ದಿಟ್ಟಿಸಿದ ಚಿದಂಬರ ಮೂರ್ತಿಗಳಿಗೆ ಯೋಗೀಶ ಹೇಳಿದ್ದರಲ್ಲಿ ಯಾವ ಉತ್ಪ್ರೇಕ್ಷೆಯೂ ಕಾಣಲಿಲ್ಲ. ಬಹಳ ಸಾಧಾರಣ ರೂಪ ಆದರೆ ಒಳ್ಳೆಯ ಮೈಕಟ್ಟು. ವೇಶ್ಯೆಯರಿಗಿರಬಹುದಾದ ಚೆಲ್ಲು ಚೆಲ್ಲು ಹಾವ ಭಾವ ಅವಳಲ್ಲಿರಲಿಲ್ಲ.ಒಂದು ಬಗೆಯ ಗಾಂಭೀರ್ಯ ಅವಳ ವ್ಯಕ್ತಿತ್ವದಲ್ಲಿ ಕಂಡು ಬರುತ್ತಿತ್ತು. ನಿನ್ನ ಅಹವಾಲು ಏನು ಎಂಬುದಾಗಿ ಅವಳನ್ನು ಪ್ರಶ್ನಿಸಿದರು.
ಗಂಟಲು ಸರಿಪಡಿಸಿಕೊಂಡ ಸುಶೀಲಾರಾಣಿ ಹೇಳಿದಳು. ನೋಡಿ ಸ್ವಾಮಿ,ಈ ವ್ಯಕ್ತಿ ನನಗೆ ಕರೆ ಮಾಡಿದಾಗ ನಾನು ಆಗಲೇ ಒಂದು ಒಪ್ಪಂದ ಮಾಡಿಕೊಂಡಿದ್ದೆ. ಇವರು ತಮ್ಮ ಫೋನಿನಲ್ಲಿ ತಮ್ಮ ಕಷ್ಟಗಳನ್ನು ಹೇಳಿಕೊಂಡರು. ತಾವು ಕಾವ್ಯವೊಂದನ್ನು ಓದಿದ್ದಾಗಿಯೂ,ಅದರಿಂದಾಗಿ ಬಹಳ ಉತ್ಕಟವಾದ ವಾಂಛೆಯಲ್ಲಿ ಸಿಲುಕಿರುವುದಾಗಿಯೂ, ಆ ಕ್ಷಣದಲ್ಲಿ ಹೆಣ್ಣಿನ ಸಹವಾಸಕ್ಕೆ ಹಾತೊರೆಯುತ್ತಿರುವುದಾಗಿಯೂ, ಇದೇ ಅವರ ಮೊದಲ ಅನುಭವವಾಗಲಿರುವುದೆಂದೂ ಹೇಳಿ ಪ್ರಲಾಪಿಸಿಕೊಂಡಾಗ ಇವರ ಮೇಲಿನ ಒಂದು ಬಗೆಯ ಕನಿಕರಕ್ಕೆ ಪಕ್ಕಾಗಿ ನಾನು ಆ ಮೊದಲೇ ನಿಗದಿ ಮಾಡಿದ್ದ ಗ್ರಾಹಕರಿಗೆ ಕರೆ ಮಾಡಿ ಬರುವುದಾಗುವುದಿಲ್ಲ ಎಂದು ಹೇಳಿ ಬಿಟ್ಟೆ. ಅವರಿನ್ನೂ ತಮ್ಮ ಮುಂಗಡ ಹಣ ಸಂದಾಯ ಮಾಡಿರಲಿಲ್ಲವಾದ ಕಾರಣ ಆ ರೀತಿ ಹೇಳುವ ನನ್ನ ಹಕ್ಕನ್ನು ನಾನು ಚಲಾಯಿಸಿ ಇವರಿಗೆ ಒಪ್ಪಿಕೊಂಡದ್ದು. ಆತನೇನೂ ನನ್ನ ಭಾವಚಿತ್ರ ಮಣ್ಣು ಮಸಿ ಕೇಳಿರಲಿಲ್ಲ. ಇವರಿಗೆ ಅದನ್ನೂ ಕಳಿಸಿದ್ದೆ. ಎಲ್ಲ ನೋಡಿ,ನಿರ್ಧರಿಸಿ ಬಂದು ಕಡೆಯಲ್ಲಿ ಕ್ಯಾತೆ ತೆಗೆದರೆ ನಮ್ಮ ಹೊಟ್ಟೆಯ ಪಾಡೇನು ಸಾರ್. ಅಷ್ಟಕ್ಕೂ ನನಗೆ ಸಾವಿರ ರೂಪಾಯಿಯ ನಷ್ಟವೇ ಆಗಿದೆ. ಏನೋ ಈತನಲ್ಲಿ ಇರುವ ಮುಗ್ಧತೆಗೆ ನಾನು ರಿಯಾಯಿತಿ ತೋರಿಸಿ ಅವರು ಕೊಟ್ಟ ಮುಂಗಡ ಹಣ ಮಾತ್ರ ಹಿಡಿದುಕೊಂಡಿದ್ದೇನೆ.ನಮ್ಮ ಸಮಯಕ್ಕೂ ಬೆಲೆ ಇಲ್ಲವೇ ?ಬರೀ ದೇಹಕ್ಕೆ ಮಾತ್ರ ಬೆಲೆಯೋ? ಈ ಗಂಡಸು ಜಾತಿಗೆ ತಮ್ಮ ಸ್ವಾರ್ಥದ ಪರಿಧಿಯ ಒಳಗೆ ಮಾತ್ರವೇ ಯೋಚಿಸಲು ಬರುತ್ತದೆ. ಅದರಾಚೆಗಿನ ಜೀವಿಗಳ ಪರಿವೆಯೇ ಇಲ್ಲ”” ಎಂದು ಅಲವತ್ತುಕೊಂಡಳು.
ಚಿದಂಬರ ಮೂರ್ತಿ ಗೊಂದಲದಲ್ಲಿ ಬಿದ್ದರು.ಇಬ್ಬರ ವಾದವೂ ಅವರವರ ದೃಷ್ಟಿಯಲ್ಲಿ ಸರಿಯೇ. ಇಲ್ಲಿ ನ್ಯಾಯ ಅನ್ಯಾಯಗಳ ನಿಷ್ಕರ್ಷೆ ಕಠಿಣ.ಅದನ್ನು ಮೀರಿದ ಆಯಾಮಗಳಲ್ಲಿ ಇದರ ಪರಿಶೀಲನೆ ಅವಲೋಕನೆ ಆಗಬೇಕೆಂದು ಯೋಚಿಸಿದರು.
ಇಲ್ಲಿ ಇರುವುದು ಭಾವಚಿತ್ರ ಹಾಗೂ ಜೀವಚಿತ್ರಗಳಲ್ಲಿನ ಸಾಮ್ಯತೆಗೆ ಸಂಬಂಧಿಸಿದ ಭಿನ್ನಾಭಿಪ್ರಾಯ. ಇದನ್ನು ಮೊದಲು ಬಗೆ ಹರಿಸಿದರೆ ಹಣದ ಸಂಬಂಧಿ ವ್ಯಾಜ್ಯವನ್ನು ಇತ್ಯರ್ಥಗೊಳಿಸಬಹುದೆಂದು ಯೋಚಿಸಿ ಅದರಂತೆ ಅವರಿಬ್ಬರಿಗೂ ತಮ್ಮ ತಮ್ಮ ಬಳಿಯಿರುವ ಹಾಗೂ ಈ ಭಿನ್ನಾಭಿಪ್ರಾಯಕ್ಕೆ ಮೂಲಕಾರಣವಾಗಿರುವ ಚಿತ್ರಗಳನ್ನು ತಮ್ಮ ಪರಿವೀಕ್ಷಣೆಗೆ ಒಪ್ಪಿಸಬೇಕೆಂದು ಸೂಚಿಸಿದರು.
ಎಲ್ಲ ತಯಾರಿ ಮಾಡಿಕೊಂಡು ಬಂದಿದ್ದ ಯೋಗೀಶ ತನ್ನ ಬಳಿಯಿದ್ದ ಭಾವಚಿತ್ರದ ಪ್ರತಿಯನ್ನು ಕೊಟ್ಟ. ಸುಶೀಲಾರಾಣಿ ತಾನು ತನ್ನ ಫೋನಿನಲ್ಲಿ ತಾನೇ ತೆಗೆದಿದ್ದ ಫೋಟೋವನ್ನು ಪರದೆಯ ಮೇಲೆ ತರಿಸಿ ಅವರ ಪರಾಮರ್ಶೆಗೆ ಒಪ್ಪಿಸಿದಳು.
ಏನಾಶ್ಚರ್ಯ!!! ಎರಡೂ ಭಾವಚಿತ್ರಗಳು ಒಂದನ್ನೊಂದು ಹೋಲುತ್ತಿದ್ದವು. ಇಬ್ಬರೂ ಸುಳ್ಳು ಹೇಳುತ್ತಿಲ್ಲ!! ಕತ್ತೆತ್ತಿ ಸುಶೀಲಳನ್ನು ನೋಡಿದರು. ಅವಳು ಆ ದಿನ ಹೇಗಿದ್ದಳೋ ಅದೇ ರೀತಿ ಸಿಂಗರಿಸಿಕೊಂಡು, ಅದೇ ಬಟ್ಟೆಗಳನ್ನು ತೊಟ್ಟು ಬಂದಿದ್ದಳು. ಕಣ್ಣು ಕಿವಿ, ಮೂಗು, ಬಾಯಿ, ಕೇಶ ವಿನ್ಯಾಸ ಎಲ್ಲವು ಅದೇ ಆದರೆ ಫೋಟೋದಲ್ಲಿದ್ದಷ್ಟು ಮುಖ ಸುಂದರವಾಗಿಲ್ಲ. ಅರೇ ಇದು ಹೇಗೆ ಸಾಧ್ಯ? ಅವರಿಗೆ ಅನುಮಾನ ಮೂಡಿತು. ಸುಶೀಲಾ ಏನೋ ಮಸಲತ್ತು ಮಾಡುತ್ತಿರಬಹುದೆಂದು ಅವರಿಗೆ ಅನ್ನಿಸಿತು. ತನ್ನದಲ್ಲದ ಫೋಟೊ ಕಳಿಸಿ ಜನರಿಗೆ ಮರುಳು ಮಾಡುತ್ತಿರಬಹುದೆಂಬ ಸಂದೇಹ ಮೂಡಿತು. ಹೇಳಿದರು,..
” ಸುಶೀಲಾ, ನಿಮ್ಮ ಭಾವಚಿತ್ರಕ್ಕೂ ,ನಿಜರೂಪಕ್ಕೂ ಇರುವ ವ್ಯತ್ಯಾಸ ಖಚಿತವಾಗಿದೆ. ಇದು ನೀವು ಉದ್ದೇಶಪೂರ್ವಕವಾಗಿ ಗ್ರಾಹಕರಿಗೆ ಮರುಳುಮಾಡುವ ಸಂಚಿನಂತೆ ನನಗೆ ಭಾಸವಾಗುತ್ತಿದೆ.ನಿನ್ನಂತೆ ಮೈಕಟ್ಟಿರುವ ಬೇರೆ ಯಾವುದೋ ಫೋಟೊವನ್ನು ತೋರಿಸಿ ಗ್ರಾಹಕರನ್ನು ಆಕರ್ಷಿಸಿ ಅನಂತರ ಅವರಿಂದ ಸುಲಿಗೆ ಮಾಡುವ ಹುನ್ನಾರದಂತೆ ನನಗೆ ಅನಿಸುತ್ತಿದೆ. ಇದಕ್ಕ್ಕೆ ನೀನೇನಾದರೂ ಹೇಳುವುದಿದೆಯೋ?? ಕೇಳಿದರು.
ಸುಶೀಲೆಯ ಕಣ್ಣುಗಳಲ್ಲಿ ನೀರುತುಂಬಿತು. ಗದ್ಗದವಾದ ಕಂಠವನ್ನು ಸರಿಮಾಡಿಕೊಂಡು, ಧೈರ್ಯದಿಂದಲೇ ಹೇಳಿದಳು” ನ್ಯಾಯಾಧೀಶರೇ, ಈ ಪ್ರಪಂಚದಲ್ಲಿ ಯಾವಾಗಲೂ ದುರ್ಬಲ, ನಿರಾಯುಧ, ದೀನ ಹಾಗೂ ಅಸಹಾಯಕರಿಗೆ ಅನ್ಯಾಯವಾಗುವುದೇ ಹೊರತು ಸಶಕ್ತರಿಗಲ್ಲ. ಅದರಲ್ಲೂ ಹೆಣ್ಣು,ವೃತ್ತಿಯಿಂದ ವೇಶ್ಯೆಯಾಗಿರುವ ನನ್ನಂಥವರನ್ನು ಅನುಮಾನಿಸಲು, ದೂರಲು, ಗೂಬೆ ಕೂರಿಸಲು ಪ್ರಪಂಚ ಹೆಚ್ಚು ಕಷ್ಟಪಡಬೇಕಾದ್ದಿಲ್ಲ. ನದಿ ಪ್ರವಾಹದಲ್ಲಿ ದುರ್ಬಲರ ಕಟ್ಟಡಗಳು ಕೊಚ್ಚಿಹೋಗುವಂತೆ, ಕಾಲನ ಪ್ರವಾಹದಲ್ಲಿ ನಾವುಗಳು, ನಮಗಾಗಿರುವ ಅನ್ಯಾಯಗಳು ಜಗತ್ತಿನ ಸ್ಮೃತಿಪಟಲದಿಂದ ಕೊಚ್ಚಿಹೋಗುತ್ತವೆ.ದುರ್ಬಲರಿಗೆ ನ್ಯಾಯಾನ್ಯಾಗಳನ್ನು ಅಧಿಕಾರಯುತವಾಗಿ ಆಗ್ರಹಿಸುವ ಹಕ್ಕನ್ನು ಸಮಾಜ ಯಾವತ್ತಿಗೂ ಕೊಟ್ಟಿಲ್ಲ. ನಾವುಗಳು ಅದನ್ನು ಯಾಚಿಸಬಹುದಷ್ಟೇ. ಸಮಾಜದ ಆತ್ಮಸಾಕ್ಷಿ ನಮಗಾಗಿ ಎಂದೂ ಮಿಡಿದಿಲ್ಲ. ಅದು ಬರೀ ಕಥೆ ಪುರಾಣಗಳ ಆದರ್ಶಗಳಲ್ಲಿ ಮಾತ್ರ. ಸಮಾಜದ ಸೇವೆ ನಾವು ಮಾಡಿದಾಗ್ಯೂ,ಜನರ ವಿಕೃತ ವಾಂಛೆಗಳನ್ನು ಪೂರೈಸಿದ್ದಾಗ್ಯೂ,ನಮಗೆ ತಿರಸ್ಕಾರ ನಿಂದನೆ ದೂಷಣೆಗಳು ಬಳುವಳಿಯೇ ಹೊರತು ಪುರಸ್ಕಾರ, ಆದರ ಪೋಷಣೆಗಳಲ್ಲ.ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಉದ್ದೇಶಪೂರ್ವಕವಾಗಿ ಯಾವ ಅಪಚಾರ ಮಾಡಿಲ್ಲ. ಈತ ಕೇಳಿದ ತಕ್ಷಣ ಆ ಫೋಟೊ ತೆಗೆದು ಕಳಿಸಿದ್ದೇನೆ. ಬೇಕಾದರೆ ಅದರ ಅಡಿಯಲ್ಲಿರುವ ದಿನಾಂಕ ಮತ್ತು ಸಮಯಗಳನ್ನು ಗಮನಿಸಿ. ಕೇವಲ ಎರಡು ನಿಮಿಷಗಳ ಅಂತರ ಇರಬಹುದಷ್ಟೇ. ಅಷ್ಟರಲ್ಲಿ ನಾನು ಪವಾಡ ಸೃಷ್ಟಿಸಲು ಸಾಧ್ಯವಿಲ್ಲ.ಅಂತಹ ಕುಕೃತ್ಯದ ಅವಶ್ಯಕತೆಯೂ ನನಗಿಲ್ಲ.ನನಗಿಲ್ಲಿ ನ್ಯಾಯ ಸಿಗದಿದ್ದರೆ ಮೇಲಿನ ಕೋರ್ಟಿಗೂ ಹೋಗುತ್ತೇನೆ,ಫೀರ್ಯಾದು ಮಾಡುತ್ತೇನೆ ” ಎಂದಳು
ಅವಳ ವಾಗ್ಸರಣಿ,ಯೋಚನಾಲಹರಿ, ದಿಟ್ಟತನ,ತನ್ನಲ್ಲಿ ತಾನು ನಂಬಿಕೆಯಿಟ್ಟು ಮಾತನಾಡಿದ ಪರಿ ಚಿದಂಬರ ಮೂರ್ತಿಯನ್ನು ಮೂಕವಿಸ್ಮಿತರನ್ನಾಗಿಸಿದವು. ಸಿದ್ಧಯ್ಯ ತಲೆದೂಗಿದರು. ತಲೆದೂಗಿದ ಚಿದಂಬರ ಮೂರ್ತಿ ಅವಳು ಹೇಳಿದಂತೆ ಫೋಟೊ ತೆಗೆದ ಸಮಯ ದಿನಾಂಕ ಇತ್ಯಾದಿ ಪರಿಶೀಲಿಸಿದರು.ಯೋಗೀಶ ನೀಡಿದ್ದ ಫೋಟೊ ಕೆಳಗಿನ ವಿವರಗಳಿಗೆ ತಾಳೆ ನೋಡಿದರು.ಯೋಗೀಶನ ಫೋನ್ ಸಂಭಾಷಣೆ ಮುಗಿದ ಸಮಯಕ್ಕೂ, ಸುಶೀಲಾ ಫೋಟೊ ತೆಗೆದ ಸಮಯಕ್ಕೂ ನಲವತ್ತು ಸೆಕೆಂಡುಗಳ ಅಂತರವಿದ್ದು ಅವನ ಮೊಬೈಲಿಗೆ ಫೋಟೊ ಬಂದ ಕ್ಷಣಕ್ಕೆ ಒಂದು ನಿಮಿಷದ ಅಂತರವಿತ್ತು.ಅಂದರೆ ಕೇವಲ ಎರಡು ನಿಮಿಷಗಳ ಒಳಗೆ ಎಲ್ಲ ಪ್ರಕ್ರಿಯೆಗಳು ನಡೆದಿರಬೇಕು.ಅದರೊಳಗೆ ಮೋಸ ನಡೆದಿರಬಹುದಾದ ಸಾಧ್ಯತೆಗಳು ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ಹಾಗಾದರೆ ಈ ಗೋಜಲು ಬಿಡಿಸುವುದು ಹೇಗೆ?
ಸಿದ್ಧ್ಯಯ್ಯನವರ ಕಡೆಗೆ ನೋಡಿದರು. ಮಧ್ಯಂತರ ವಿಶ್ರಾಂತಿ ಬೇಕೆಂದೂ, ಎಲ್ಲರೂ ಊಟಕ್ಕೆ ಹೋಗಬಹುದೆಂದೂ, ನಂತರ ಉಳಿದ ವಿಚಾರಣೆ ನಡೆಸುವುದಾಗಿಯೂ ಹೇಳಿ ಎದ್ದರು. ಯೋಗೀಶ ಸುಶೀಲಳನ್ನು ಕೆಕ್ಕರಿಸಿ ನೋಡುತ್ತಾ ಧಢ ಧಢನೆ ಇಳಿದು ಹೋದ. ಸುಶೀಲ ಗಂಭೀರವಾಗಿ ತಲೆ ತಗ್ಗಿಸಿ ನಡೆದು ಹೋದಳು.
******* *********
ವಿಚಾರಿಸಿದಷ್ಟೂ ಸಂಕೀರ್ಣವಾಗುತ್ತಿದ್ದ ಈ ಕೇಸಿನ ವೈಚಿತ್ರತೆಯನ್ನು ಚಿಂತಿಸುತ್ತಾ ಇಬ್ಬರೂ ಸ್ನೇಹಿತರು ಊಟ ಮಾಡುತ್ತಿದ್ದರು. ತನಿಖೆ ನಡೆಸುವುದರಲ್ಲಿ ಪಳಗಿದ ಸಿದ್ಧಯ್ಯನವರ ಪೋಲೀಸ್ ತಲೆ ಈ ಘಟನೆಯಲ್ಲಿ ಬಂದಿರುವ ಪಾತ್ರಗಳನ್ನು ಮೆಲುಕು ಹಾಕುತ್ತ ಮೌನವಾಗಿ ಊಟ ಮಾಡುತ್ತಿದ್ದರು. ಚಿದಂಬರ ಮೂರ್ತಿ ಅನ್ಯಮನಸ್ಕರಾಗಿದ್ದರು. ಸುಶೀಲಳ, ಸಮಾಜದ ಸೋಗಲಾಡಿತನವನ್ನು ಬೆತ್ತಲೆಗೊಳಿಸುವಂತಿದ್ದ ಮಾತುಗಳು ಅವರ ತಲೆಯಲ್ಲಿ ಅನುರಣಿಸುತ್ತಿದ್ದವು. ಹೃದಯಾಂತರಾಳದಿಂದ ಬಂದಿದ್ದ ಅವಳ ಮಾತುಗಳ ಹಿನ್ನೆಲೆಯಲ್ಲಿ, ಅವಳಲ್ಲಿ ನಡೆದಿರಬಹುದಾದ ತಾಕಲಾಟಗಳನ್ನು ಊಹಿಸಿಕೊಂಡ ಅವರ ಅಂತರಂಗ ಕಲಕದಿರಲಿಲ್ಲ. ಸಹಾನುಭೂತಿ ಅವಳ ಕಡೆಗಿದ್ದರೂ ನ್ಯಾಯಾಧೀಶರಾಗಿ ಅವರ ಕರ್ತವ್ಯ ಅವರು ಮಾಡಲೇ ಬೇಕಾಗಿತ್ತು. ಇಷ್ಟಕ್ಕೂ ಯೋಗೀಶನದ್ದೇನೂ ತಪ್ಪಿರಲಿಲ್ಲ. ದಾರಿ ಅವರಿಗೆ ಕಾಣಿಸುತ್ತಿರಲಿಲ್ಲ.
ಸಿದ್ಧಯ್ಯನವರ ಪೋಲಿಸ್ ತಲೆ ಕೆಲಸ ಮಾಡಿತು. ತಲೆಯೆತ್ತಿ ”ಚಿದಂಬರ ” ಎಂದರು.
”ಹೇಳು ಸಿದ್ಧ,. ನಿನಗೇನಾದ್ರೂ ಬೆಳಕು ಕಂಡಿತೋ””
” ನೋಡು ಚಿದಂಬರ, ಈಗ ಅವರಿಬ್ಬರ ಹೇಳಿಕೆಗಳಲ್ಲಿ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತಿಲ್ಲ.ಇಬ್ಬರೂ ಅವರವರ ಅಭಿಪ್ರಾಯಗಳಿಗೆ ಬದ್ಧರು ಹಾಗೂ ಸತ್ಯವನ್ನೇ ಹೇಳುತ್ತಿದ್ದಾರೆ. ಆದರೆ ಇಲ್ಲಿ ಮೂಡಿರುವ ಭಿನ್ನಭಿಪ್ರಾಯ ಫೋಟೋಗೆ ಕುರಿತದ್ದು.ಫೋಟೊಗಳಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ ಆದರೆ ಫೋಟೊ ಹಾಗೂ ಅದರ ಮೂಲ ವ್ಯಕ್ತಿಯರ ಸಾಮ್ಯತೆಯಲ್ಲಿ ವ್ಯತ್ಯಾಸ ಗೋಚರಿಸುತ್ತಿದೆ.ಈ ಎರಡು ಅಂಶಗಳ ಮಧ್ಯದ ಪಾತ್ರವೆಂದರೆ ಕ್ಯಾಮೆರಾ. ಕ್ಯಾಮರಾ ಇರುವುದು ಮೊಬೈಲ್ ಫೋನಿನಲ್ಲಿ. ಬೇರೆ ಎಲ್ಲವನ್ನು ಪಕ್ಕಕ್ಕೆ ಸರಿಸಿ ನೋಡಿದಾಗ ಇಲ್ಲಿ ಇನ್ನಷ್ಟು ಕೆದಕಬೇಕಾದ ಅವಶ್ಯಕತೆ ಇದೆ. ಈ ಹಂತದಲ್ಲಿ ಇನ್ನಷ್ಟು ವಿಚಾರಣೆ ನಡೆಸಬೇಕಾಗಿದೆ.ಫೋಟೋಗಳನ್ನು ಬದಲು ಮಾಡುವ ತಂತ್ರಾಂಶಗಳು, ಸಾಫ್ಟ್ ವೇರ್ಗಳು ಇರುವುದು ನಿನಗೂ ತಿಳಿದ ವಿಷಯ. ಅದನ್ನು ಸ್ವಲ್ಪ ಪರೀಕ್ಷಿಸಿ ಬಿಡುವ ಏನಂತೀಯ? ಎಂದರು.
”ಅಂದರೆ ನಿನಗೆ ಸುಶೀಲಳ ಮೇಲೆ ಇನ್ನೂ ಸಂದೇಹವೇ??” ಚಿದಂಬರ ಕೇಳಿದರು.
”ಹಾಗಲ್ಲ. ಯಾವುದನ್ನೂ ಊಹೆಗೆ ಬಿಡಬಾರದೆಂದು ನನ್ನ ಪ್ರಾಮಾಣಿಕ ಅನಿಸಿಕೆ” ಸಿದ್ಧಯ್ಯ ನುಡಿದರು
ಚಿದಂಬರ ತಮ್ಮ ಸ್ನೇಹಿತನ ಕೆಡೆಗೆ ಮೆಚ್ಚುಗೆಯಿಂದ ನೋಡಿದರು.ಇಬ್ಬರು ಊಟ ಮುಗಿಸಿ ವಿಚಾರಣೆಗೆ ಮರಳಿದರು.
ಮತ್ತೆ ಪೀಠಿಕೆ ಹಾಕುತ್ತಾ ಚಿದಂಬರ ಸುಶೀಲಾಳಿಗೆ ಅವಳ ಫೋನು ಕೊಡಲು ಹೇಳಿದರು. ಸಿದ್ಧಯ್ಯನವರಿಗೆ ಅದನ್ನು ಕೊಡುತ್ತಾ ಆಕೆಯ ಫೋಟೋ ತೆಗೆಯಲು ಕೋರಿದರು. ಸುಶೀಲೆಯ ಅನುಮತಿ ಪಡೆದು ಸಿದ್ಧಯ್ಯ ತಾವೆ ಮುತುವರ್ಜಿ ವಹಿಸಿ ಅವಳ ಭಾವಚಿತ್ರವನ್ನು ಫೋನಿನ ಕ್ಯಾಮೆರಾವನ್ನು ಉಪಯೊಗಿಸಿ ತೆಗೆದು ನೋಡಿ ಅವಕ್ಕಾದರು. ಮತ್ತೆ ಅದೇ ರೀತಿಯ ಸುಂದರ ಫೋಟೊ.ಎದುರಿಗಿದ್ದ ಸುಶೀಲಳಿಗಿಂತ ಅತೀ ಸುಂದರ, ಮೊದಲಿನ ಫೋಟೊದಲ್ಲಿದ್ದಂತೆ!! ಚಿದಂಬರಮೂರ್ತಿಗೆ ತೋರಿಸಿದರು. ಈಗ ಅವಾಕ್ಕಾಗುವ ಸರದಿ ಅವರದಾಗಿತ್ತು. ಮತ್ತೊಮ್ಮೆ ತೆಗೆದು ನೋಡಿದರು. ಏನೂ ಬದಲಾವಣೆ ಇರಲಿಲ್ಲ.
ಕೋರ್ಟಿನ ಕ್ಯಾಮೆರಾ ತಂದು ಅದರಲ್ಲಿ ಚಿತ್ರಗಳನ್ನು ತೆಗೆಯಲಾಯಿತು. ಮತ್ತೆ ಅವಾಕ್ಕಾದರು.ಅದರಲ್ಲಿ ಎದುರಿಗಿದ್ದ ಸುಶೀಲಳ ಯಥಾವತ್ ಚಿತ್ರ ಮೂಡಿ ಬಂದಿತ್ತು. ಅಂದರೆ ಈ ಕ್ಯಾಮೆರಾಗಳಲ್ಲಿ ಏನೋ ವ್ಯತ್ಯಾಸ ಇರುವುದು ಸ್ಪಷ್ಟವಾಯಿತು.ಮತ್ತೆ ಪರೀಕ್ಷಿಸಿದರು. ಏನೂ ಹೊಸ ವ್ಯತ್ಯಾಸ ಕಾಣಲಿಲ್ಲ.
ಯೋಗೀಶನ ಚಿತ್ರ ತೆಗೆದರು. ಸುಶೀಲಳ ಕ್ಯಾಮೆರಾದಲ್ಲಿ ಅವನು ಇನ್ನೂ ಸ್ಫುರದ್ರೂಪಿಯಾಗಿ ಕಳೆಯಿಂದ ಕಾಣುತ್ತಿದ್ದ- ಮುಖ ಊದಿಸಿಕೊಂಡಿದ್ದರೂ! ಕೋರ್ಟಿನ ಕ್ಯಾಮೆರಾದಲ್ಲಿ ಮಾಮೂಲಿಯಾಗೆ ಕಂಡುಬಂದ. ಇನ್ನಷ್ಟು ಗೋಜಲಾಯಿತು.
ಸುಶೀಲಳ ಅನುಮತಿ ಪಡೆದು ಅವಳ ಕ್ಯಾಮೆರಾವನ್ನು ತಮ್ಮ ಸುಪರ್ದಿನಲ್ಲಿ ಇಟ್ಟುಕೊಂಡರು.ಅದಕ್ಕೆ ಪ್ರತಿಯಾಗಿ ಆಕೆಗೆ ಉಪಯೋಗಿಸಲು ಬೇರೊಂದು ಫೋನ್ ಕೊಡಮಾಡಿಸಿದರು.ತಮ್ಮ ವಿಶೇಷ ಅಧಿಕಾರವನ್ನು ಬಳಸಿ ಆಕೆಗೆ ಮೂರು ದಿನಗಳ ಭತ್ಯೆಯನ್ನೂ ಕೊಡಮಾಡಿಸಿದರು.ಯೊಗೀಶನ ಮೊಬೈಲ್ ಅನ್ನೂ ತಮ್ಮ ವಶಕ್ಕೆ ತೆಗೆದುಕೊಂಡರು.ಅವನು ತನಗೆ ಯಾವುದೇ ಭತ್ಯೆ ಇತ್ಯಾದಿ ಬೇಡವೆಂದ. ಎರಡು ದಿನ ಕಳೆದು ವಿಚಾರಣೆ ನಡೆಸುವುದಾಗಿ ಹೇಳಿ ಅಂದಿನ ಕಲಾಪ ಮುಗಿಸಿದರು.
ತಲೆ ಬಿಸಿಯಾಗಿತ್ತು. ಡಬಲ್ ಕಾಫಿ ಕುಡಿಯೋಣವೆಂದು ಇಬ್ಬರೂ ಹತ್ತಿರದ ಉಡ್ ಲ್ಯಾಂಡ್ ಹೋಟೆಲ್ಲಿಗೆ ಹೋಗಿ ಒಂದು ಮೂಲೆ ಹಿಡಿದು ಕೂತರು. ಕಾಫಿ ಬರುವವರೆಗೆ ಸುಶೀಲಳ ಮೊಬೈಲ್ ಅನ್ನೂ,ಯೋಗೀಶನದ್ದನ್ನೂ, ತಮ್ಮದನ್ನೂ ಮೇಜಿನ ಮೇಲಿಟ್ಟು ದಿಟ್ಟಿಸತೊಡಗಿದರು.
ಸುಶೀಲಳ ಮಾತು ಕತೆ ನಡತೆಯಲ್ಲಿ ಅವರಿಗೆ ಯಾವ ಮೋಸದ ಕುರುಹುಗಳೂ ಕಂಡುಬರಲಿಲ್ಲ. ಮೊಬೈಲನ್ನು ದಿಟ್ಟಿಸುತ್ತಿದ್ದ ಅವರಿಗೆ ಅದು ಉಳಿದ ಮೊಬೈಲುಗಳಿಗಿಂತ ಭಿನ್ನವಾಗಿದ್ದು ಗಮನಕ್ಕೆ ಬಂತು.ಬರೀ ಚಿತ್ರಗಳನ್ನು ಗಮನಿಸುತ್ತಾ ಉಪಕರಣವನ್ನು ಇಲ್ಲಿಯವರೆಗೆ ಗಮನಿಸಿರಲಿಲ್ಲ. ಅದಕ್ಕೊಂದು ತಯಾರಕ ಕಂಪನಿಯ ಹೆಸರೂ ಇರಲಿಲ್ಲ. ಅಚ್ಚುಕಟ್ಟಾಗಿ ಇದ್ದರೂ ಅದೊಂದು ಕಂಪನಿಯ ಉತ್ಪನ್ನದಂತೆ ಇರದೇ ಇದ್ದುದು ಸಿದ್ಧಯ್ಯನವರ ಅರಿವಿಗೆ ಬಂತು. ಇದನ್ನು ಯಾರೋ ವಿಶೇಷವಾಗಿ ತಯಾರಿಸಿರಬೇಕು ಎಂದೆನ್ನಿಸಿ ತಮ್ಮ ಮಿತ್ರನಿಗೆ ಹೇಳಿದರು. ಅವರೂ ಅನುಮೋದಿಸಿದರು.
ಅಷ್ಟರಲ್ಲಿ ಅಲ್ಲಿಗೊಂದು ಜೋಡಿ ಬಂತು ಹಾಗೂ ಅವರ ಜೊತೆಯಲ್ಲಿ ಒಂದು ನಾಯಿಯೂ ಇತ್ತು. ಸಿದ್ಧಯ್ಯನವರು ಪ್ರಾಣಿಯ ಚಿತ್ರ ಇದರಲ್ಲಿ ಹೇಗೆ ಬರಬಹುದೆಂದು ನೋಡಲು ಅದರ ಕಡೆಗೆ ಕ್ಯಾಮೆರಾ ತಿರುಗಿಸಿ ಕ್ಲಿಕ್ ಮಾಡಿ ಲಗುಬಗೆಯಿಂದ ಪರೀಕ್ಷಿಸಿದರು. ಮತ್ತೊಂದು ಆಶ್ಚರ್ಯ ಅವರಿಗೆ ಕಾದಿತ್ತು. ನಾಯಿಯ ಜೊತೆಯಲ್ಲಿ ಆ ಜೋಡಿಯ ಚಿತ್ರವೂ ಇದ್ದು ನಾಯಿ ಯಥಾವತ್ ಇದ್ದರೂ ಆ ಜೋಡಿಯ ಚಿತ್ರ ಭಿನ್ನವಾಗಿತ್ತು. ಎದುರಿನಿಂದ ನೋಡಲು ಸಭ್ಯ ಸುಂದರಾಗಿದ್ದರೂ ಆ ಕ್ಯಾಮೆರಾದಲ್ಲಿ ಅವರು ಕುರೂಪಿಗಳಾಗಿ ಕಂಡುಬಂದರು!
ನಾಯಿಯ ನೆವ ಇಟ್ಟುಕೊಂಡು ಮತ್ತೆರೆಡು ಫೋಟೋಗಳನ್ನು ಹತ್ತಿರದಿಂದಲೇ ತೆಗೆದರು. ಅವೆರೆಡೂ ಕುರೂಪ ಮನುಷ್ಯರ ಚಿತ್ರಗಳನ್ನೇ ತೋರಿಸಿದವು. ಚಿದಂಬರ ತಮ್ಮ ಕ್ಯಾಮೆರಾದಿಂದ ನಾಯಿಯ ಜೊತೆಗೆ ಅವರ ಫೋಟೊಗಳನ್ನು ತೆಗೆದುಕೊಂಡು ಮತ್ತೆ ತಮ್ಮ ಟೇಬಲ್ಲಿಗೆ ಬಂದು ಕುಳಿತು ಪರೀಕ್ಷಿಸತೊಡಗಿದರು. ಚಿದಂಬರರ ಕ್ಯಾಮೆರಾದಲ್ಲಿ ಆ ಜೋಡಿಯೂ ನಾಯಿಯೂ ಯಾವುದೇ ಬದಲಾವಣೆ ತೋರಿಸಿರಲಿಲ್ಲ. ಇವರಿಬ್ಬರೂ ಗಹನ ಚರ್ಚೆಯಲ್ಲಿರುವುದನ್ನೂ, ಸಿದ್ಧಯ್ಯನವರ ಪೋಲೀಸ್ ದಿರಿಸನ್ನೂ ಗಮನಿಸಿದ ಆ ಜೋಡಿ ಇರುಸು ಮುರುಸು ಮಾಡಿಕೊಂಡು ಹೊರಡಲು ಅನುವಾಗುತ್ತಿದ್ದಂತೆಯೇ ಸಿದ್ಧಯ್ಯನವರ ಪೋಲೀಸ್ ತಲೆ ಮತ್ತೆ ಕೆಲಸ ಮಾಡಿತು. ತಕ್ಷಣ ಅವರಿದ್ದಲ್ಲಿಗೆ ಹೋಗಿ,ಅವರಿಂದ ಸಹಾಯ ಬೇಕಿದೆಯೆಂದೂ, ತಮ್ಮ ಅನುಮತಿಯಿಲ್ಲದೆ ಹೋಗಕೂಡದೆಂದೂ ತಾಕೀತು ಮಾಡಿ ವಾಪಸ್ ಬಂದು ”ಚಿದಂಬರ ಇದೊಂದು ಅಸಾಧಾರಣವಾದ ಉಪಕರಣ.ಆ ಇಬ್ಬರನ್ನು ಈಗ ಠಾಣೆಗೆ ಕರೆದೊಯ್ದು ವಿಚಾರಿಸಿದರೆ ಇದರ ಮಹತ್ವ ತಿಳಿಯುವುದು ನಡಿ ಹೋಗೋಣ ” ಎಂದು ಕಾಫಿಯೆಲ್ಲವನ್ನೂ ಒಂದೇ ಗುಟುಕಿಗೆ ಮುಗಿಸಿ, ಆ ಜೋಡಿಯನ್ನು ಕರೆದುಕೊಂಡು ಹೊರಟರು. ಗಲಿಬಿಲಿಗೊಂಡ ಆ ಜೋಡಿ ಗಾಭರಿ ಆತಂಕಗಳಿಗೆ ಒಳಗಾಗಿದ್ದನ್ನು ಇಬ್ಬರೂ ಗಮನಿಸದಿರಲಿಲ್ಲ.
ಠಾಣೆಯಲ್ಲಿ ಕೂಡಿಸಿ ವಿಚಾರಿಸಿದಾಗ ಅವರು ಏನೋ ಮುಚ್ಚು ಮರೆ ಮಾಡುತ್ತಿರುವುದು ತಿಳಿದು ಜೋರು ಮಾಡಿ ದಬಾಯಿಸಿದರು.ಶಿಕ್ಷೆಯ ಭಯವನ್ನೂ ಮೂಡಿಸಿದಾಗ ಅವರಿಬ್ಬರೂ ಕೂಡಿ ಆ ಹೆಂಗಸಿನ ಗಂಡನನ್ನು ಮುಗಿಸುವ ಸಂಚು ರೂಪಿಸುತ್ತಿದ್ದಾರೆಂದು ತಿಳಿದು ದಿಗ್ಭ್ರಮೆಗೊಂಡರು- ಅವರ ಅಪರಾಧಕ್ಕಲ್ಲ- ಕ್ಯಾಮೆರಾ ಅದನ್ನು ಕಾಣಿಸಿದ್ದಕ್ಕೆ!!!. ಅವರ ದಾಖಲೆಗಳನ್ನು ತೆಗೆದುಕೊಂಡು ಎಚ್ಚರಿಕೆ ನೀಡಿ, ಏನಾದರೂ ಪ್ರಮಾದ ನಡೆದರೆ ಜೈಲು ಕಂಬಿ ಎಣಿಸುವ ಗ್ಯಾರಂಟಿ ನೀಡಿ ಅವರನ್ನು ಕಳಿಸಿದರು.
ಈಗ ಈ ಸುಶೀಲಳ ಬಳಿಯಿದ್ದ ಫೋನು ಅಸಾಧಾರಣವೆಂದು ಸಾಬೀತಾಗಿತ್ತು. ತಮ್ಮ ಫೋಟೋಗಳನ್ನು ತೆಗೆದು ನೋಡಿಕೊಳ್ಳಲು ಇಬ್ಬರಿಗೂ ಭಯವಾಯಿತು. ಅದನ್ನು ಜೋಪಾನವಾಗಿಟ್ಟು ತಂತಮ್ಮ ಮನೆಗಳಿಗೆ ನಡೆದರು. ತಮ್ಮ ಮನೆಯವರೆಲ್ಲ ರ ಫೋಟೊ ತೆಗೆದು ಅವರ ಒಳಮರ್ಮ ಅರಿಯುವ ಮನಸ್ಸಾಗದೇ ಇರಲಿಲ್ಲ!! ಆದರೆ ಅದು ತೆರೆಯ ಬಹುದಾದ ಕರಾಳ ಜಗತ್ತು ಇವರಿಗೆ ನಿಭಾಯಿಸಲಸಾಧ್ಯವಾಗುವ ಸಾಧ್ಯತೆ ಮನಗಂಡು ಅ ದುಸ್ಸಾಹಸಕ್ಕೆ ಇಬ್ಬರೂ ಕೈಹಾಕಲಿಲ್ಲ!!.
******** ******
ಎರಡು ದಿನಗಳಲ್ಲಿ ಸಿದ್ಧ್ಹಯ್ಯ ತಮ್ಮ ಪರಿಚಯದ ಹಾಗೂ ಅಪರಾಧ ವಿಭಾಗದ ತಂತ್ರಜ್ಞರ ಭೇಟಿಮಾಡಿ ಸಲಹೆ ಸೂತ್ರಗಳನ್ನು ಕ್ರೋಢೀಕರಿಸಿದರು. ಇತ್ತೀಚಿನ ತಂತ್ರಜ್ಞಾನದ ಬೆಳವಣಿಗೆಗಳು, ತಂತ್ರಾಂಶಗಳ ಕಾರ್ಯ ವೈಖರಿಯ ವಿಧಿ ವಿಧಾನಗಳನ್ನು ಚರ್ಚಿಸಿದರು. ಟಿಪ್ಪಣಿ ಮಾಡಿಕೊಂಡರು. ತಮ್ಮ ಬಳಿ ಇದ್ದ ಫೋನಿನ ಸುಳಿವು ಮಾತ್ರ ಯಾರಿಗೂ ಬಿಟ್ಟುಕೊಡಲಿಲ್ಲ. ತಮ್ಮ ಕಾರ್ಯ ಕಲಾಪಗಳಿಗೆ ಆಸರೆಯಾಗಿರಲೆಂದು ಈ ವಿಷಯದ ಬಗ್ಗೆ ಕಲಿಯುತ್ತಿದ್ದೇನೆಂದಷ್ಟೆ ಅವರು ತಮ್ಮ ಸಂಪರ್ಕಕ್ಕೆ ಬಂದವರಿಗೆ ಮನವರಿಕೆ ಮಾಡಿಕೊಟ್ಟರು. ಹೊಸ ಮಾಹಿತಿಯೊಂದಿಗೆ ತಮ್ಮ ಇಲ್ಲಿಯವರೆಗಿನ ಅನುಭವಗಳನ್ನು ಮಿಳಿತಗೊಳಿಸಿ ಒಂದು ವಿವರಣಾತ್ಮಕ ವರದಿ ಸಿದ್ಧಪಡಿಸಿ ಚಿದಂಬರ ಮೂರ್ತಿಯೊಂದಿಗೆ ಚರ್ಚಿಸಿದರು ಅನಂತರದಲ್ಲಿ ಅವರಿಬ್ಬರೂ ಮುಂದಿನ ಅನ್ವೇಷಣೆಯ ರೂಪು ರೇಷೆ ತಯಾರಿಸಿ ಮರುದಿನಕ್ಕೆ ಮಾನಸಿಕವಾಗಿ ತಯಾರಾದರು. ಇಬ್ಬರಲ್ಲೂ ಆತ್ಮವಿಶ್ವಾಸ ಮೂಡಿತ್ತು,.!!

******* ******
ವಿಚಾರಣೆ ಪುನರಾರಂಭವಾಯ್ತು. ಎಲ್ಲರೂ ತಂತಮ್ಮ ಜಾಗಗಳಲ್ಲಿ ಬಂದು ಕುಳಿತರು. ಮೊದಲು ಸುಶೀಲಳನ್ನು ಕರೆಸಲಾಯ್ತು.ಅವಳನ್ನು ಉದ್ದೇಶಿಸಿ,
ಆ ತನ್ನ ಮೊಬೈಲ್ ಅವಳ ಬಳಿ ಹೇಗೆ ಬಂತು? ಆಕೆ ಅದನ್ನು ಕೊಂಡದ್ದೆಲ್ಲಿ? ಅದನ್ನು ಆಕೆಗೆ ಮಾರಿದವರ್ಯಾರು? ಕೊಂಡುಕೊಂಡ ತದನಂತರದಲ್ಲಿ ಅದರಲ್ಲಿ ಮಾಡಲ್ಪಟ್ಟ ಬದಲಾವಣೆಗಳೇನು? ಅದನ್ನು ಎಷ್ಟು ದಿನದಿಂದ ಉಪಯೋಗಿಸುತ್ತಿದ್ದಾಳೆ? ಅದರಲ್ಲಿ ತೆಗೆದಿರುವ ಫೋಟೊಗಳು ಯಾವುವು? ಎಲ್ಲ ವಿವರಗಳನ್ನು ಕೂಲಂಕುಶವಾಗಿ ವಿವರಿಸಲು ಸೂಚಿಸಿದರು.
ಸುಶೀಲಳಿಗೆ ಆ ಫೋನು ಎಂಟು ತಿಂಗಳ ಹಿಂದೆ ಸಿಕ್ಕಿತೆಂದೂ.ಅದನ್ನು ಅವಳು ಕೊಳ್ಳಲಿಲ್ಲವೆಂದೂ,ಅವಳ ಬಳಿಗೆ ಸತ್ಯವಾನ ಎಂಬ ವ್ಯಕ್ತಿ ಆಗಾಗ್ಗೆ ಬರುತ್ತಿದ್ದನೆಂದೂ,ಬಹಳ ಸೂಕ್ಷ್ಮ ಮತಿ ಹಾಗೂ ಸಹೃದಯಿ ಎಂದೂ, ಮೃದುಸ್ವಭಾವದ ಅವನಿಗೆ ಸಂಬಂಧಿಕರಿದ್ದ ಬಗ್ಗೆ ತನ್ನ ಬಳಿ ಏನೂ ಹೇಳಿರಲಿಲ್ಲವೆಂದೂ,ಬಹಳ ಅಪ್ಯಾಯಮಾನ್ವಾಗಿ ತನ್ನ ಬಳಿ ವ್ಯವಹರಿಸುತ್ತಿದ್ದನೆಂದೂ, ತಮ್ಮನ್ನು ಬರೀ ಭೋಗವಸ್ತುಗಳಾಗಿ ನೋಡುವ ಈ ಜಗತ್ತಿನಲ್ಲಿ ತನಗೂ ಒಂದು ಅಸ್ತಿತ್ವವನ್ನು ಕೊಡುತ್ತಿದ್ದ ಉದಾರ ಮನೋಭಾವಿಯೆಂದೂ,ಎಲ್ಲ ಗುಣವಂತರನ್ನು ಭಗವಂತ ಬೇಗ ಕರೆಸಿಕೊಳ್ಳುವಂತೆ ಅವನೂ ಬೇಗನೆ ತೀರಿಕೊಂಡನೆಂದೂ,ವಾಸ್ತವವಾಗಿ ಈ ಮೊಬೈಲ್ ಫೋನು ಅವನಿಗೇ ಸೇರಿದ್ದೆಂದೂ ಹೇಳಿದಳು.ಕಣ್ಣಲ್ಲಿ ನೀರು ತುಂಬಿ ಬಂದು ಒರೆಸಿಕೊಂಡಳು.
ಸಮಸ್ಯೆ ಇನ್ನೊಂದು ತಿರುವು ಪಡೆದುಕೊಂಡಿತು!!
ಮೊಬೈಲಿಗೆ ಸಂಬಂಧಿಸಿದಂತೆ ಅವನ ವಿಚಾರ ಏನಾದರೂ ಇದೆಯೋ? ಕೇಳಿದರು
ತಲೆದೂಗಿದ ಸುಶೀಲೆ ” ಸತ್ಯವಾನ ಯಾವುದೂ ಗಹನ ವಿಚಾರದಲ್ಲಿ ಮುಳುಗಿದ್ದ. ಅವನು ಇರುವ ಕೆಲಸ ಬಿಟ್ಟು ಯಾವುದೋ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ. ತನ್ನ ಖರ್ಚು ವೆಚ್ಚಗಳ ನಿಭಾವಣೆಗೆ ಅಗಾಗ್ಗೆ ಅರೆಕಾಲಿಕ ಕೆಲಸಗಳನ್ನು ಮಾಡುತ್ತಿದ್ದ. ತನ್ನ ಸಾಧನೆ ಕೈಗೂಡಿದಲ್ಲಿ ಈ ಜಗತ್ತಿನಲ್ಲೇ ಒಂದು ಕ್ರಾಂತಿಕಾರಕ ಬದಲಾವಣೆ ಕಾಣಲಿದೆಯೆಂಬ ಆಶಾಭಾವನೆ ಇಟ್ಟುಕೊಂಡಿದ್ದ. ಅದರಲ್ಲಿ ಯಶಸ್ಸು ಕಂಡಾಕ್ಷಣ ತನ್ನನು ಈ ವೇಶ್ಯಾವೃತ್ತಿಯಿಂದ ಬಿಡಿಸಿ ನನಗೆ ಒಂದು ಬದುಕು ಕಟ್ಟಿಕೊಡುವುದಾಗಿ ಭರವಸೆ ಕೊಟ್ಟಿದ್ದ. ಕೆಲವು ದಿನ ಬಂದಾಗ ಈ ಮೊಬೈಲ್ ಫೋನು ತಂದಿರುತ್ತಿದ್ದಾಗಿಯೂ, ತನ್ನ ಕನಸುಗಳನ್ನು ಸಾಕಾರಗೊಳಿಸುವ ಮಂತ್ರದಂಡ ಅದೆಂದೂ, ತನ್ನಾಸೆ ಕೈಗೂಡುವ ಸಮಯ ದೂರವಿಲ್ಲವೆಂದೂ ಹೇಳಿ, ತನ್ನದೊಂದು ಫೋಟೋ ತೆಗೆದು ತೋರಿಸಿ ತನ್ನನ್ನು ಮುದ್ದಾಡಿದ್ದಾಗಿಯೂ, ಅಂದು ಹೋಗುವ ಅವಸರದಲ್ಲಿ ಮರೆತು ಹೋದವನು ದಾರಿಯ ಅಪಘಾತದಲ್ಲಿ ಅಕಸ್ಮಾತ್ತಾಗಿ ಮೃತನಾದದ್ದಾಗಿಯೂ ಹೇಳಿ ಕಂಬನಿ ಒರೆಸಿಕೊಂಡಳು. ಅವನ ನೆನಪಿಗಾಗಿ ಅದನ್ನು ಕಣ್ಣಿನಲ್ಲಿ ಕಣ್ಣಿಟ್ಟು ಜೋಪಾನ ಮಾಡುತ್ತಿರುವುದಾಗಿ ಹೇಳಿದಳು. ಆ ಫೋನಿನ ಕ್ಯಾಮೆರಾದಲ್ಲಿ ತನ್ನ ಎರಡು ಚಿತ್ರಗಳಲ್ಲದೆ ಇತ್ತೀಚೆಗೆ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿ ಅನಾಥಾಶ್ರಮದಲ್ಲಿ ಬೆಳೆಯುತ್ತಿರುವ ತನ್ನ ಗೆಳತಿಯ ಮಗುವಿನ ಫೋಟೋವೊಂದನ್ನು ತೆಗೆದಿರುವುದಾಗಿಯೂ ಹೇಳಿದಳು.
ಹಳೆಯ ಸುಶೀಲಳ ಹಾಗು ಆ ಮಗುವಿನ ಭಾವಚಿತ್ರವನ್ನು ಪರೀಕ್ಷಿಸಲಾಗಿ, ಸುಶೀಲ ತನ್ನ ಸಾತ್ವಿಕ ಸೌಂದರ್ಯದಿಂದ ಕಂಗೊಳಿಸಿದರೆ, ಮಗುವು ಎಲ್ಲ ಮಕ್ಕಳಂತೆ ಮುದ್ದಾಗಿತ್ತು!!
ಯೋಗೀಶನನ್ನು ಉದ್ದೇಶಿಸಿ ಏನಾದರೂ ಹೇಳುವುದಿದೆಯೇ ಕೇಳಿದರು, ಇಲ್ಲವೆಂದು ತಲೆ ಅಲ್ಲಾಡಿಸಿದ.
ಮಧ್ಯಂತರ ವಿರಾಮ ಘೋಷಿಸಿ, ಒಂದು ಗಂಟೆಯ ನಂತರ ಮತ್ತೆ ಸೇರಬೇಕೆಂದು ಸೂಚಿಸಿದರು.
ಚಿದಂಬರ -ಸಿದ್ಧಯ್ಯ ಒಳಗೆ ನಡೆದರು. ಸುಶೀಲ ಎಂದಿನಂತೆ ಗಂಭೀರವಾಗಿ ತಲೆತಗ್ಗಿಸಿ ಹೊರನಡೆದಳು. ಯೋಗೀಶ ಸ್ವಲ್ಪ ಮೆತ್ತಗಾದಂತೆ ಇದ್ದ.
ವಿಚಾರ ವಿನಿಮಯದ ಬಳಿಕ ಒಂದು ನಿರ್ಧಾರಕ್ಕೆ ಬಂದ ಸಿದ್ಧಯ್ಯ -ಚಿದಂಬರರು ಒಂದು ರೀತಿಯ ನೆಮ್ಮದಿಯ ನಿಟ್ಟುಸಿರು ಬಿಟ್ಟರು.ಅಂದಿನ ಊಟ ಅವರಿಗೆ ಹೊಸ ರುಚಿಯ ಅನುಭವ ನೀಡಿತು.
ಎಲ್ಲರೂ ತಿರುಗಿ ಬಂದ ನಂತರ ಚಿದಂಬರ ಮೂರ್ತಿ ಸುಶೀಲೆಯನ್ನು ಉದ್ದೇಶಿಸಿ,.ಸತ್ಯವಾನನ ಸಾವಿನಿಂದ ಸುಶೀಲೆಗಾದ ದುಃಖಕ್ಕೆ ಸಂತಾಪ ವ್ಯಕ್ತಪಡಿಸಿ ಆತ ಆಕೆಯ ಬಳಿ ಬೇರೆ ಏನನ್ನದರೂ ಉಳಿಸಿ ಹೋಗಿದ್ದಾನೆಯೇ ಎಂದು ಕೇಳಿದರು.
ಹೌದೆಂದು ತಲೆ ಆಡಿಸಿದ ಅವಳು ಕೆಲವು ಕಾಗದದ ಹಾಳೆ ಗಳನ್ನೂ, ಒಂದು ನೋಟ್ ಪುಸ್ತಕವನ್ನೂ ಇಟ್ಟಿದ್ದಿದ್ದಾಗಿಯೂ, ಅವುಗಳ ಅಂಕಿ- ಸಂಖ್ಯೆಗಳು, ರೇಖಾಚಿತ್ರಗಳೂ, ಸಾಂಕೇತಿಕ ಚಿನ್ಹೆಗಳು ತನಗೆ ಅರ್ಥವಾಗಲಿಲ್ಲವೆಂದೂ, ಅವನ ಮರಣಾನಂತರ, ಎಸೆಯಲು ಮನಸ್ಸಾಗದೆ ಅಟ್ಟದ ಮೇಲೆ ಇಟ್ಟಿರುವುದಾಗಿಯೂ ಹೇಳಿದಳು.
ಅದನ್ನು ತಂದು ಕೊಡುವುದು ಸಾಧ್ಯವೋ? ಕೇಳಿದರು
ಅಗಬಹುದೆಂದು ಅವಳು ನುಡಿದ ನಂತರ ಸಿದ್ಧಯ್ಯನವರೇ ತಮ್ಮ ಜೀಪಿನಲ್ಲಿ ಕರೆದೊಯ್ದು ನೋಡಿದಾಗ ಕೆಲವು ಜೀರ್ಣವಾಗಿ, ಮಳೆಯ ನೀರಿನಲ್ಲಿ ತೊಪ್ಪೆಯಾಗಿ, ಇನ್ನಷ್ಟು ಹರಿದು ಹೋಗಿ, ಅಕ್ಷರಗಳು ಚಿತ್ರಗಳು ಅಳಿಸಿ ಹೋಗಿದ್ದವು.
ಕೋರ್ಟಿನ ಸಮಕ್ಷಮದಲ್ಲಿ ಪರೀಕ್ಷಿಸಿದ ಚಿದಂಬರ ಸಿದ್ಧಯ್ಯ ಇಬ್ಬರೂ ನಿಟ್ಟುಸಿರು ಬಿಟ್ಟರು.
******* ******* ******
ತೀರ್ಪು ನೀಡುವ ಸಮಯ. ಕೋರ್ಟಿನ ಅವರಣದಲ್ಲಿ ಗದ್ದಲ ಗುಸು-ಗುಸು ಪ್ರಾರಂಭವಾಯ್ತು. ನಿಮಿಷದಿಂದ ನಿಮಿಷಕ್ಕೆ ಹೆಚ್ಚುತ್ತಲೇ ಹೋಯ್ತು. ಗಲಾಟೆ ನಿಲ್ಲಿಸಲು ನ್ಯಾಯಾಧೀಶರ ಸುತ್ತಿಗೆ ಮೇಜನ್ನು ಬಡಿಯುವಾಗ ಕೆಳಗೆ ಸಿಕ್ಕ ಸುಶೀಲಳ ಫೋನು ಪುಡಿ ಪುಡಿಯಾಯ್ತು.ಚಿದಂಬರ ಕುಟ್ಟುತ್ತಲೇ ಇದ್ದರು. ಗಲಾಟೆ ಕಡಿಮೆಯಾಯ್ತು.
ತೀರ್ಪಿಗೆ ಎಲ್ಲರೂ ಕಿವಿ ನಿಮಿರಿಸಿದರು. ತೀರ್ಪು ಸುಶೀಲಳ ಪರವಾಗಿ ಬಿತ್ತು. ಚಿದಂಬರ, ಯೋಗೀಶನನ್ನೇ ಗಮನಿಸುತ್ತ ,ಸುಶೀಲ ತನ್ನ ಸಾಮರ್ಥ್ಯದ ಪರಿಮಿತಿಯಲ್ಲಿ ಪ್ರಾಮಾಣಿಕವಾಗಿ ವ್ಯವಹರಿಸಿದ ಕಾರಣ ಇದರಲ್ಲಿ ಅವಳ ತಪ್ಪು ಸಾಬೀತಾಗುವುದಿಲ್ಲವೆಂದೂ, ಈ ವ್ಯವಹಾರದಲ್ಲಿ ಸಾಂದರ್ಭಿಕ ಕಾರಣಗಳಿಂದ ಹೊಂದಾಣಿಕೆಯಾಗದೆ ಯೋಗೀಶನ ಉದ್ದೇಶ ಸಾಧನೆ ಆಗದೆ ರಸಾಭಾಸ ಅನುಭವಿಸಿದ್ದಕ್ಕಾಗಿ ತಮ್ಮ ಮನಃಪೂರ್ವಕ ಸಹಾನುಭೂತಿ ಇದೆಯೆಂದೂ, ಈ ರೀತಿಯ ಕಟ್ಟಳೆ ತಮಗೆ ಹೊಸ ಅನುಭವವೆಂದೂ, ಇದಕ್ಕೆ ಸಂಬಂಧಿಸಿದಂತೆ ಕಾನೂನು ಮೌನಿಯೆಂದೂ, ಮಾನವೀಯತೆಯನ್ನು ಪ್ರಮುಖ ಅಧಾರವಾಗಿಟ್ಟುಕೊಂಡು ತಮ್ಮ ತೀರ್ಪನ್ನು ನೀಡಿದ್ದಾಗಿಯೂ ವಿವರಿಸಿ ಈ ಕಲಾಪದ ನಂತರ ಇಬ್ಬರೂ ಬಂದು ತಮ್ಮನ್ನು ಭೇಟಿಯಾಗಬೇಕೆಂದು ಸೂಚಿಸಿ ಒಳನಡೆದರು.
ಸಿದ್ಧಯ್ಯ ತಾವೇ ಖುದ್ದಾಗಿ ಯೋಗೀಶ ಸುಶೀಲರನ್ನು ನ್ಯಾಯಾಧೀಶರ ಖಾಸಗೀ ಕೋಣೆಗೆ ಕರೆದೊಯ್ದರು. ಅವರನ್ನು ಸ್ವಾಗತಿಸಿ ಕಾಫೀ ತಿಂಡಿಗಳಿಂದ ಸತ್ಕರಿಸಿದ ಚಿದಂಬರ ಮೂರ್ತಿ ಬಲು ಅಪ್ಯಾಯತೆಯಿಂದ ಅವರ ಕುಶಲ ವಿಚಾರಿಸಿದರು. ಖಟ್ಲೆಯಲ್ಲಿ ಸೋತ ಯೋಗೀಶನ ನಡತೆಯಲ್ಲಿ ಮುಖ ಭಾವದಲ್ಲಿ ಯಾವ ಅಸಮಾಧಾನವೂ ಇರಲಿಲ್ಲ. ಆದರೆ, ಸುಶೀಲೆಯಿಂದ ದೂರಸರಿದು ಕುಳಿತ ಅವನು ಅವಳೊಡನೆ ಯಾವುದೇ ಮಾತುಕತೆಯಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ.
ಚಿದಂಬರ ಮೂರ್ತಿಗಳು ವಿಷಯಕ್ಕೆ ಬಂದರು. ಸುಶೀಲಳ ಬಳಿಯಿದ್ದ ಕ್ಯಾಮೆರಾ ವಿಶೇಷವಾದ ಕ್ಯಾಮೆರಾ ಎಂದೂ ಅದು ಕಣ್ಣಿನ ಮೂಲಕ ತಾನು ಚಿತ್ರ ತೆಗೆಯುವ ಮನುಷ್ಯನ ಆ ಕ್ಷಣದ ಅಂತರಂಗವನ್ನು ಭೇದಿಸಿ ಅದನ್ನು ಮುಖಚಹರೆಯೊಂದಿಗೆ ಮಿಳಿತಗೊಳಿಸಿ ಪರದೆಯ ಮೇಲೆ ಮೂಡಿಸಬಲ್ಲ ಅನೂಹ್ಯ ಸಾಧನವಾಗಿತ್ತೆಂದೂ ತಮ್ಮ ಪ್ರಾಯೋಗಿಕ ಸಂಶೋಧನೆಗಳಿಂದ ಅದು ಧೃಢಪಟ್ಟು ಅದರಿಂದುಂಟಾಗಬಹುದಾದ ಅಲ್ಲೋಲ ಕಲ್ಲೋಲಗಳನ್ನು ತಪ್ಪಿಸಲು ಕೋರ್ಟಿನಲ್ಲಿ, ಎಲ್ಲರ ಸಮಕ್ಷಮದಲ್ಲಿ ಅದನ್ನು ತಾವೇ ಕೈಯ್ಯಾರ ಕುಟ್ಟಿ ಪುಡಿ ಮಾಡಿದೆಯೆಂದೂ, ಅದಕ್ಕಾಗಿ ಸಿದ್ಧಯ್ಯ ಗದ್ದಲ ನಡೆಯುವ ವ್ಯವಸ್ಥೆ ಮಾಡಿದರೆಂದೂ ಹೇಳಿದರು.
ಇವರಿಬ್ಬರಿಗೂ ನಂಬಲಾಗಲಿಲ್ಲ!!
ಸಿದ್ಧಯ್ಯ ತಾವು ಫೋನನ್ನು ಪರೀಕ್ಷಿಸಿದ್ದು, ಹೋಟೆಲಿನಲ್ಲಿ ಆದ ನಾಯಿಯ ಪ್ರಹಸನ,ಅದರ ಮಾಲಿಕರನ್ನು ವಿಚಾರಣೆಗೆ ಒಳಪಡಿಸಿದಾಗ ಹೊರಬಿದ್ದ ಸತ್ಯ, ಅದರಿಂದ ತಾವು ಫೋನು, ಅದರಲ್ಲಿರುವ ಕ್ಯಾಮೆರಾದ ಜಗದಾಶ್ಚರ್ಯಕರವಾದ ಶಕ್ತಿ,ಅದರ ಸಾರ್ವತ್ರಿಕ ಉಪಯೋಗದಿಂದ ಆಗುವ ಪರಿಣಾಮಗಳ ಸಾಧ್ಯತೆ ಬಾಧ್ಯತೆಗಳ ವಿಚಾರ,ತಾವಿಬ್ಬರೂ ನಿದ್ದೆಗೆಟ್ಟು ಮಾಡಿದ ಕೆಲಸಗಳು, ಯೋಚನೆಗಳು, ವಿಚಾರ ವಿನಿಮಯಗಳು ಎಲ್ಲವನ್ನು ತಿಳಿಸಿದರು.
ವೃತ್ತಿಯಿಂದ ತಂತ್ರಜ್ಞನಾದ ಯೋಗೀಶನ ಕುತೂಹಲ ಕೆರಳಿತು. ”ಈ ರೀತಿಯ ಸಾಧನದಿಂದ ಮನುಷ್ಯ ಮನುಷ್ಯನನ್ನು ಅರಿಯಲು ಬಹಳ ಸಹಕಾರಿಯಲ್ಲವೇ ಸಾರ್. ಅದನ್ನು ಹಾಳುಗೆಡವಿ ನೀವು ಅನ್ಯಾಯ ಮಾಡಿದಿರಿ, ಅದ್ಭುತ ಆವಿಷ್ಕಾರವನ್ನು ನಿರ್ನಾಮ ಮಾಡಿದಿರಿ.ಭಿನ್ನಾಭಿಪ್ರಾಯಗಳನ್ನು,ಸಂಬಂಧಗಳನ್ನು ಮುರಿಯುವ ಸಂದರ್ಭಗಳನ್ನು ಸುಲಭವಾಗಿ ನಿವಾರಿಸಬಹುದಿತ್ತು. ಎಂತಹ ಅಕಾರ್ಯ”” ಯೋಗೀಶ ಹಲುಬಿದ.
ಸಿದ್ಧಯ್ಯ ನಿಧಾನವಾಗಿ ಹೇಳಿದರು. ” ನೋಡು ಯೋಗೀಶ್,ಎಲ್ಲರೂ ನಿನ್ನಂತೆ ನ್ಯಾಯಾನ್ಯಾಯಗಳ ವಿವೇಚನೆ ಇರುವ ಜೀವಿಗಳಾಗಿದ್ದರೆ ಸರಿ. ಆದರೆ ಈ ಪ್ರಪಂಚ ಹಾಗಲ್ಲ. ಈ ಉಪಕರಣ ಸಿಕ್ಕಿದರೆ ಕೋತಿಗೆ ಕಳ್ಳು ಕುಡಿಸಿದಂತೆ. ಮನುಷ್ಯನಿಗೆ ಮನುಷ್ಯನ ಮೇಲಿನ ನಂಬಿಕೆ ಕುಸಿಯುತ್ತದೆ.ಸರಿಯೋ ತಪ್ಪೋ ಈ ಜಗತ್ತು ನಡೆಯುವುದೇ ನಂಬಿಕೆ ಮೇಲೆ. ಇದರ ಜೊತೆಗೆ ಸಮಾಜದಲ್ಲಿ ಸ್ವಲ್ಪ ಮಟ್ಟಿಗಾದರೂ ನೀತಿ ನಿಯಮಗಳ ಚೌಕಟ್ಟು ಇರುವುದರಿಂದ ಅನ್ಯಾಯ ಅಕ್ರಮಗಳು ಹದ್ದುಬಸ್ತಿನಲ್ಲೇ ಇರುತ್ತವೆ. ಅವು ಮಿತಿ ಮೀರಿದಾಗ ಸಮಾಜ ಒಂದು ಬಗೆಯ ಯುಗ ಪಲ್ಲಟಕ್ಕೊಳಗಾಗಿ ಮತ್ತೆ ಹೊಸ ಸಮತೋಲನ ಪಡೆಯುತ್ತದೆ. ಇದೆಲ್ಲವೂ ತನ್ನಿಂತಾನೆ,ತನ್ನೊಳಗಿನಿಂದ ಮೂಡುವ, ನಡೆಯುವ, ಆಗುವ ಪ್ರಕ್ರಿಯೆಯಾದರೇ ಸರಿ. ಲಾಭ ನಷ್ಟ ಸಾವು ನೋವು ಆಯಾ ಸಂದರ್ಭಕ್ಕೆ ತಕ್ಕಂತೆ ಆಗುತ್ತವೆ. ಇಷ್ಟಕ್ಕೂ ಈ ಸಾಧನ ಅನುಮಾನಗಳನ್ನು ಬಲಗೊಳಿಸುವುದೇ ವಿನಃ ತೊಡೆದು ಹಾಕುವ ಸಾಧನವಾಗಲಾರದು.ಒಬ್ಬರ ಮೇಲೆ ಇನ್ನೊಬ್ಬರಿಗಿರಲಿ,ವ್ಯಕ್ತಿ ತನ್ನನ್ನು ತಾನೇ ನಂಬದಂತಾಗುವ ಹಾಗಾಗಿ ಮಾನಸಿಕ ಕ್ಷೋಭೆಗೆ ತುತ್ತಾಗಿ ಸಮಾಜದಲ್ಲಿ ಸಮೂಹ ಸನ್ನಿಯ ಸುನಾಮಿ ಏಳುವುದು ನಿಸ್ಸಂದೇಹವಾಗಿ ಸಾಧ್ಯ. ಆದ್ದರಿಂದಲೇ ನಾವೀ ಈ ಕಷ್ಟಸಾಧ್ಯ ನಿರ್ಧಾರಕ್ಕೆ ಬಂದೆವು ಎಂದರು.
“”ಇನ್ನೂ ಸ್ವಲ್ಪ ವಿವರಿಸುವಿರಾ”” ಸುಶೀಲ ಕೇಳಿದಳು
”ಏಕಿಲ್ಲ” ಎಂದ ಸಿದ್ಧಯ್ಯ ಹೇಳಿದರು. ”ಎದುರಲ್ಲಿ ನಿಂತ ನಿನಗೂ,ಈ ಫೋನಿನಲ್ಲಿ ಮೂಡಿದ ಫೋಟೊ ಗೂ ಸಾಮ್ಯತೆ ಇಲ್ಲದಿದ್ದಾಗ ಇಲ್ಲಿ ಎಲ್ಲವೂ ಸರಳ ವಾಗಿಲ್ಲವೆಂಬ ಅನುಮಾನ ಬಂತು. ಈ ಅನುಮಾನಗಳನ್ನು ಪರಿಹರಿಸಿಕೊಳುವ ವ್ಯವಸ್ಥಿತ ಯೋಜನೆಯೊಂದನ್ನು ನಾವು ರೂಪಿಸಿಕೊಂಡೆವು. ಇದರಲ್ಲಿ ನೀವಿಬ್ಬರೂ ಸುಳ್ಳು ಹೇಳದ ಪ್ರಾಮಾಣಿಕರೆಂದು ನಮಗಾಗಲೇ ಮನವರಿಕೆಯೂ ಆಗಿತ್ತು. ಒಂದೊಂದೇ ಕೊಂಡಿಗಳನ್ನು ಜೋಡಿಸುತ್ತ ಬಂದಾಗ ನಿನ್ನ ಯಥಾರೂಪ,ಕ್ಯಾಮೆರಾ,ಯೋಗೀಶನ ಬಳಿ ಇದ್ದ ಚಿತ್ರ ಹಾಗೂ ಅವುಗಳ ಭಿನ್ನತೆ ಮತ್ತು ಈ ವಿಷಯಗಳ ಅರ್ಥ ಕಲ್ಪಿಸುವ ಕೊಂಡಿ ನಮಗೆ ಸಿಗದ ಕಾರಣ ನಿನ್ನ ಕ್ಯಾಮೆರಾವನ್ನು ಪರೀಕ್ಷೆಗೆ ಒಳಪಡಿಸುವ ನಿರ್ಧಾರ ಮಾಡಿದೆವು. ಇದು ಒಂದು ವಿಶೇಷ ಮಸೂರದ ಮೂಲಕ ಕಣ್ಣಿನ, ಮುಖದ ಸ್ನಾಯುಗಳ ವಿದ್ಯುತ್ತರಂಗಗಳನ್ನು ಸೆರೆಹಿಡಿದು ತನ್ನೊಳಗಿರುವ ತಂತ್ರಾಂಶಕ್ಕೆ ರವಾನಿಸುತ್ತದೆ.ಅದು ತನ್ನ ಪ್ರೊಟೋಕಾಲ್ಗೆ ಅನುಸಾರವಾಗಿ ವ್ಯಕ್ತಿಯ ಮನಸ್ಥಿತಿಯನ್ನು ವ್ಯಕ್ತಿತ್ವವನ್ನು ಗೊತ್ತು ಹಿಡಿದು ಅದನ್ನು ಮುಖಚಹರೆಗೆ ಆರೋಪಿಸಿ ಅದರನುಸಾರವಾಗಿ ರೂಪುಗೊಂಡ ಆ ವ್ಯಕ್ತಿಯ ಚಿತ್ರವನ್ನು ಪರದೆಗೆ ರವಾನಿಸುತ್ತದೆ. ನೀನು ಸದಾ ನಿರ್ಮಲ ಚಿತ್ತಳಾಗಿರುವ ಕಾರಣ ನಿನ್ನ ಸೌಂದರ್ಯ ಆ ಫೋಟೋದಲ್ಲಿ ವೃದ್ಧಿಸಿತ್ತು. ಯೋಗೀಶ ಕೂಡಾ ಸ್ಫುರದ್ರೂಪಿಯೇ ಆಗಿದ್ದ. ನಿಷ್ಕಲ್ಮಷ ಮನಸ್ಸಿನ ಮಗು ಮುದ್ದಾಗಿ ಕಂಗೊಳಿಸಿತ್ತು. ಆದರೆ ತಾವು ಪರೀಕ್ಷಾತ್ಮಕವಾಗಿ ತೆಗೆದ ಹಲವಾರು ಇತರರ ಚಿತ್ರಗಳು ಅವರ ಮನಸ್ಥಿತಿಗೆ ,ಆಲೋಚನೆಗೆ ಹೊಂದಾಣಿಕೆ ತೋರಿಸಿ ಕೆಲವರನ್ನೂ ಕುರೂಪಿಗಳಾಗಿಯೂ ತೋರಿಸಿತು!. ಅದರಿಂದ ನಮ್ಮ ಸಂಶೋಧನೆಗಳ ಮೇಲಿನ ನಂಬಿಕೆ ಬಲಗೊಂಡು ನಿನ್ನಿಂದ ಹಲವು ವಿವರಗಳನ್ನು ಪಡೆದೆವು.ಅನಂತರದಲ್ಲಿ ಸಾಧಕ ಬಾಧಕಗಳನ್ನು ತರ್ಕಿಸಿದೆವು. ಮೂಲಭೂತವಾಗಿ ಇದು ” ಹೃದಯಕೆ ಕಣ್ಣೇ ಸಾಕ್ಷಿ” ಅಥವಾ ’ಫೇಸ್ ಈಸ್ ದ ಇಂಡೆಕ್ಸ್ ಆಫ್ ಮೈಂಡ್” ಎಂಬ ದಾರ್ಶನಿಕರ ಹೇಳಿಕೆಯನ್ನು ಸಾಕಾರಗೊಳಿಸುವ ಅಭೂತಪೂರ್ವ ಆವಿಷ್ಕಾರ. ಆದರೆ ಸತ್ಯ ಯಾವಾಗಲೂ ಸಹ್ಯವಲ್ಲ. ಅದು ಅಲ್ಲದೆ ಎಲ್ಲರೂ ಎಲ್ಲಾ ಸಮಯದಲ್ಲೂ ಸತ್ಯ ನುಡಿಯಲಾರರು.ಹಲವಾರು ಸಂದರ್ಭಗಳಲ್ಲಿ ಸುಳ್ಳುಹೇಳುವುದು ಅನಿವಾರ್ಯವಾಗುತ್ತದೆ. ಜಗತ್ತಿನಲ್ಲಿ ಎಷ್ಟೋ ಬಗೆಯ ಜನಗಳು ಇರುತ್ತಾರೆ. ಒಬ್ಬಬ್ಬರ ಮನೋವ್ಯಾಪಾರವೂ ವಿಭಿನ್ನ. ಈ ವೈವಿಧ್ಯತೆಯಲ್ಲಿ ಏಕತೆ ಮೂಡಿ ಜೀವಿಗಳ ನಡುವಿನ ವ್ಯಾಪಾರ ನಡೆಯುವುದು ನಂಬಿಕೆಯಿಂದ. ಈ ನಂಬಿಕೆ ಗಳು ಬೆಳೆಯಬೆಕಾದರೆ ಏನು ಮಾಡಬೇಕು -ಏನು ಮಾಡಬಾರದು ಎಂಬುದು ನಿಮ್ಮ ಅನುಭವಕ್ಕೆ ಬಂದೇ ಇರುತ್ತದೆ.ಈ ರೀತಿಯ ಕ್ಯಾಮೆರಾ ಸರ್ವವ್ಯಾಪಿಯಾಗಿ ಬಳಕೆಗೆ ಬಂದರೆ ಏನಾಗಬಹುದು ನೀವೇ ಯೋಚಿಸಿ. ಜನಗಳು ಮಾತುಕೇಳಿಸಿಕೊಳ್ಳದೆ ಕ್ಯಾಮೆರಾ ನಿಮ್ಮ ಮುಖಕ್ಕೆ ಹಿಡಿದು ಕೂಡಬಹುದು; ಕೋತಿಗೆ ಮಾಣಿಕ್ಯ ಕೊಟ್ಟಂತಾಗುತ್ತದೆ ಪರಿಸ್ಥಿತಿ. ಹಿಟ್ಲರ್ ಅಥವಾ ಸ್ಟಾಲಿನ್ ರಂತಹ ನರಹಂತಕರ ಕೈಗೆ ಸಿಕ್ಕಿದರೆ, ದುರ್ಮಾರ್ಗಿಗಳ ವಶವಾದರೆ ಆಗಬಹುದಾದ ಅನಾಹುತ ಊಹಿಸಿಕೊಳ್ಳಿ. ನಮ್ಮ ಸುತ್ತಲೂ ಇರುವ ಧೂರ್ತರ ಸಂತೆ ನೋಡಿಯೇ ನಾವು ಈ ವಿಷಯವನ್ನು ಯಾವುದೇ ಕಾರಣಕ್ಕೆ ಬಹಿರಂಗ ಗೊಳಿಸದಂತೆ ಗುಟ್ಟು ಕಾಯ್ದುಕೊಂಡೆವು.ಈ ಉಪಕರಣ ಯಾರ ಅರಿವಿಗೂ ಬಾರದಂತೆ ಮರೆಯಾದರೆ ಒಳಿತು ಎಂಬ ನಮ್ಮ ಮನಸ್ಸಾಕ್ಷಿಯ ತೀರ್ಪಿಗೆ ಅನುಗುಣವಾಗಿ ನಡೆದೆವು. ಇದಕ್ಕೆ ನಿಮ್ಮ ಕ್ಷಮೆ ಇರಲಿ ಎಂದು ಹೇಳಿ ನಿಲ್ಲಿಸಿದರು.
ಯೋಗೀಶ ಸುಶೀಲಳ ಮುಖ ನೋಡಿದ. ಹೊಸ ಕ್ಯಾಮೆರಾದಂತಾದ ಅವನ ಕಣ್ಣಿಗೆ ಅವಳು ಅಪ್ರತಿಮ ಸುಂದರಿಯಾಗಿ ಕಾಣಿಸಿದಳು. ಮೆಟ್ಟಿಲುಗಳನ್ನಿಳಿದು ಜೊತೆಗೆ ಹೋಗುವಾಗ ಅವನ ಅಂತರಾತ್ಮನ ತೀರ್ಪಿಗೆ ಬದ್ಧನಾಗಿ ಅವಳ ಕೈಹಿಡಿದ. ಸುಶೀಲ ಆಕ್ಷೇಪಿಸಲಿಲ್ಲ.

*******************************************************************
ಸುದರ್ಶನ ಗುರುರಾಜರಾವ್.

 

 

 

 

 

ಶಕುಂತಲಾ

ಶಕುಂತಲಾ
ಬೆಂಗಳೂರಿನ ಗೌಜು ಗದ್ದಲಗಳಿಂದ ಮುಕ್ತರಾಗಿ ಪ್ರಶಾಂತವಾದ ವಾತಾವರಣದಲ್ಲಿ ತಮ್ಮ ನಿವೃತ್ತ ಜೀವನವನ್ನು ಕಳೆಯುವುದು ಸುಧಾಕರ ಹಾಗೂ ರಮ್ಯಾ ದಂಪತಿಗಳ ಕನಸು.ಅದರಂತೆಯೇ ನಿವೃತ್ತಿಯಾದಾಗ ಬಂದ ಹಣವನ್ನು ಒಟ್ಟುಗೂಡಿಸಿ, ತಮ್ಮಲ್ಲಿದ್ದ ಎರಡು ನಿವೇಶನಗಳನ್ನು ಮಾರಿ ಬಂದ ಹಣದಲ್ಲಿ ಮೈಸೂರಿನಲ್ಲಿ ಅನುಕೂಲಕರವಾದ ಮನೆಯೊಂದನ್ನು ಖರೀದಿಸಿದ್ದರು. ಎರಡು ಅಂತಸ್ತಿನ ಮನೆಗೆ ಒಳಗಡೆಯಿಂದಲೇ ಮೆಟ್ಟಿಲುಗಳಿದ್ದು ಮೇಲಿನ ಮಜಲಿನಲ್ಲಿದ್ದ ಕೋಣೆಗಳನ್ನು ಮಲಗಲು ಉಪಯೋಗಿಸುತ್ತಿದ್ದರು. ರಮ್ಯಾ ಸುಧಾಕರನಿಗಿಂತ ಮೂರು ವರ್ಷ ಚಿಕ್ಕವರಾಗಿದ್ದರೂ ಸ್ವಯಮ್ ಪ್ರೇರಣೆಯಿಂದ ನಿವೃತ್ತಿ ತೆಗೆದುಕೊಂಡಿದ್ದರು. ಇದ್ದ ಒಬ್ಬಳೆ ಮಗಳು ಶಕುಂತಲ ಡಾಕ್ಟರಾಗಿ ಸ್ನಾತಕೋತ್ತರ ಪದವಿ ಪಡೆದು ಮೈಸೂರಿನಲ್ಲೇ ಪ್ರತಿಷ್ಟಿತ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಮಹಡಿಯ ಮೇಲಿನ ಕೋಣೆಯಲ್ಲಿ ಅಂದು ಕುಳಿತು ಶಕುಂತಲೆಯ ಬಗೆಗೇ ಮಾತುಕತೆ ನಡೆಸುತ್ತಿದ್ದರು.
ಎಲ್ಲ ತಂದೆ ತಾಯಿಗಳಂತೆ ಬೆಳೆದ ಮಗಳಿಗೆ ಮದುವೆ ಮಾಡಿ ಕಳಿಸುವ ಯೋಚನೆ ಇವರಿಗೂ ಇತ್ತು. ಓದಿದ, ಲಕ್ಷಣವಾಗಿರುವ, ಬುದ್ಧಿವಂತ,ಚುರುಕು ಬುದ್ಧಿಯ ಹಾಗೂ ಗೌರವಾನ್ವಿತ,ಸ್ಥಿತಿವಂತ ತಂದೆ ತಾಯಿಯರಿರುವ ಅವಳಿಗೆ ಗಂಡು ಸಿಗುವುದೇನೂ ಕಷ್ಟದಾಯಕವಾದ ಕೆಲವಾಗಿರಲಿಲ್ಲ. ಅದೂ ಉತ್ತಮ ಸಂಸ್ಕೃತಿ, ಹಿನ್ನೆಲೆ ಇರುವ ಹೆಣ್ಣುಗಳಿಗೇ ಬರ ಬಂದಿರುವ ಈಗಿನ ಕಾಲದಲ್ಲಿ!. ಆದರೆ ಅವರ ಮುಂದಿದ್ದ ಸಮಸ್ಯೆಯೇ ಬೇರೆ. ಶಕುಂತಲಾಳ ಜನ್ಮ ರಹಸ್ಯ.
****
ಸುಧಾಕರ ಮತ್ತು ರಮ್ಯ ಮದುವೆಯಾಗಿ ಹನ್ನೆರೆಡು ವರ್ಷ ಕಳೆದಿದ್ದರೂ ಅವರಿಗೆ ಮಕ್ಕಳಾಗಿರಲಿಲ್ಲ. ಅನುರೂಪ ದಂಪತಿಗಳಾದ ಅವರು ಮಕ್ಕಳಗಾಗಿ ಮಾಡದ ಪ್ರಯತ್ನವೇ ಇರಲಿಲ್ಲ.ವ್ರತ, ನೇಮ ನಿಷ್ಠೆ, ತೀರ್ಥಯಾತ್ರೆ, ವೈದ್ಯಕೀಯ ತಪಾಸಣೆ ಹೀಗೆ ಲೌಕಿಕ, ಪಾರಮಾರ್ಥಿಕವಾದ ಎಲ್ಲ ಪ್ರಯತ್ನಗಳನ್ನೂ ಮಾಡಿದ್ದರು.ದತ್ತು ಪಡೆಯೋನ ಎಂದರೆ ಇನ್ನೂ ವಯಸ್ಸು ಮೀರಿರಲಿಲ್ಲ.ಹಣ ಹೀಗೆ ಖರ್ಚು ಮಾಡಿದ್ದರೂ ಸ್ವಭಾವತಃ ವ್ಯವಹಾರ ಚತುರನಾದ ಸುಧಾಕರನ ಹೂಡಿಕೆಗಳು ಫಲ ಕೊಟ್ಟು ಇಂದು ಅವರು ಸ್ಥಿತಿವಂತರಾಗಿರಲು ಕಾರಣವಾಗಿತ್ತು. ಕಡೆಯ ಪ್ರಯತ್ನವಾಗಿ ಮಾಡಿದ ಕೃತಕ ಗರ್ಭಧಾರಣೆ ಫಲವಾವಿ ರಮ್ಯಾ ಕಡೆಗೂ ತನ್ನ ಬಸಿರಲ್ಲಿ ಮಗುವನ್ನು ಹೊತ್ತು ಬೆಳೆಸತೊಡಗಿದ್ದಳು. ಎಲ್ಲ್ಲಾ ಸುಸೂತ್ರವಾಗಿಯೇ ನಡೆದಿತ್ತು.ಹೆರಿಗೆಯ ದಿನಗಳು ಸಮೀಪಿಸುತ್ತಾ ರಕ್ತದೊತ್ತಡದಲ್ಲಿ ಏರು-ಪೇರುಗಳು ಕಾಣಿಸಿಕೊಂಡು ಪ್ಲಾಸೆಂಟಲ್ ಅಬ್ರುಪ್ಷನ್ ಎಂಬ ಪರಿಸ್ಥಿತಿ ಉದ್ಭವಿಸಿ ರಮ್ಯಾ ಪರಿಸ್ಥಿತಿ ಗಂಭೀರವಾಗಿತ್ತು. ಮಗುವಿಗೆ ತೀವ್ರ ತೊಂದರೆಯುಂಟಾಗಿ ಹುಟ್ಟುವಾಗಲೇ ಸಾವನ್ನಪ್ಪಿತ್ತು.ರಮ್ಯಾ ಉಳಿದದ್ದೇ ಒಂದು ಪವಾಡವಾಗಿತ್ತು.
ತುಂಬಿದ ಬಸಿರಿನ ಪರಿಣಾಮಗಳು ರಮ್ಯಾ ಮೈಮೇಲೆ ಆಗದೇ ಇರಲಿಲ್ಲ. ಮಗುವಿಲ್ಲದಿದ್ದರೂ ಎದೆ ಹಾಲು ಉಕ್ಕುತ್ತಿತ್ತು. ಮಗುವಿಲ್ಲದ ನೋವು ಮನಸ್ಸನ್ನು ಘಾಸಿಗೊಳಿಸಿತ್ತು. ಹೀಗಿರುವಲ್ಲಿ ಮೈ ಮನಗಳ ನೋವನ್ನು ಶಮನಗೊಳಿಸಲು ಬಂದ ಮಗುವೇ ಶಕುಂತಲ. ಅಗೆಲ್ಲಾ ಕಾನೂನಿನ ಕಟ್ಟಳೆಗಳು, ಔಪಚಾರಿಕತೆಯ ಕಬಂಧ ಬಾಹುಗಳು,ಮಾನವೀಯತೆಯ ತುಡಿತಗಳನ್ನು ಹಿಡಿತದಲ್ಲಿಟ್ಟು ಕರುಣೆಯ ಕೊರಳ್ನ್ನು ಹಿಸುಕಿ ಉಸಿರು ಕಟ್ಟಿಸುವ ಕಾಲವಾಗಿರಲಿಲ್ಲ. ಅನಾಥವಾಗಲಿದ್ದ ಮಗುವನ್ನು ತಮ್ಮದಾಗಿಸಿಕೊಳ್ಲಲು ಅವರಿಗೆ ಯಾವ ಅಡ್ಡಿ ಅತಂಕಗಳೂ ಎದುರಾಗಲಿಲ್ಲ. ಆಸ್ಪತ್ರೆಯ ಹಿರಿಯ ವೈದ್ಯರು ಹಾಗು ಹಿರಿಯ ಶಶ್ರೂಶಕಿಯರ ಸಹಕಾರ -ಸಹಮತದೊಂದಿಗೆ ಮಗುವನ್ನು ಕರೆದೊಯ್ದು ಸಾಕಿಕೊಂಡರು. ಹಸಿ ಬಾಣಂತಿಯ ಸ್ಥಿತಿಯಲ್ಲೇ ಮಗುವಿನ ಸಾನ್ನಿಧ್ಯ ದೊರೆತದ್ದಕ್ಕೂ, ಎದೆಹಾಲು ಉಣಿಸುವ ಬಾಂಧವ್ಯಕ್ಕೂ ಪಕ್ಕಾಗಿ ರಮ್ಯಾಳಿಗೆ ಈ ಮಗು ತನ್ನದಲ್ಲವೆಂಬ ಭಾವ ಬರಲೇ ಇಲ್ಲ. ಸುಧಾಕರನಲ್ಲಿ ಆ ಬದಲಾವಣೆ ಬರಲು ಸ್ವಲ್ಪ ಕಾಲ ಹಿಡಿಯಿತು. ಎಷ್ಟೆ ಅಂದರೂ ಗಂಡಸಲ್ಲವೇ! ತನ್ನ ಜೀವತಂತು ಹೊತ್ತು ಬಂದಿರದ ಮಗುವನ್ನು ಮುಕ್ತ ಮನಸ್ಸಿನಿಂದ ಅಂಗೀಕರಿಸಲು ಸ್ವಲ್ಪ ಹಿಂಜರಿಕೆಯಾದರೂ, ಸ್ವಭಾವತಃ ವಿಶಾಲ ಹೃದಯಿಯಾದ ಅವರಿಗೆ ಅದೇನೂ ಅಸಾಧ್ಯವಾಗಲಿಲ್ಲ. ಇತ್ತ ಹೆಂಡತಿ ಅರೋಗ್ಯವಾಗಿ ಸಂತೋಷದಿಂದ ಇದ್ದುದು ಅವರಿಗೆ ನೆಮ್ಮದಿಯನ್ನು ತಂದಿತ್ತು. ಮಗುವಿನ ಜಾತಕ ಇತ್ಯಾದಿಗಳಲ್ಲಿ ತಮ್ಮದೇ ಕುಲ, ಗೋತ್ರ ದಾಖಲಿಸಿದ್ದರು.ವ್ಯವಹಾರ ಹಾಗು ಆಡಳಿತಕ್ಕೆ ಸಂಬಂಧಿಇದ ದಾಖಲೆಗಳಲ್ಲೂ ಶಕುಂತಲಾ ಹೆಸರನ್ನೇ ವಾರಸುದಾರಳನ್ನಾಗಿ ನಮೂದಿಸಿದ್ದರು. ಆದರೆ ಸತ್ಯ ಸತ್ಯವೇ. ಸತ್ಯವನ್ನು ಬಚ್ಚಿಡುವುದೋ ಅಥವಾ ಬಿಚ್ಚಿಡುವುದೋ? ಬಿಚ್ಚುವುದಾದರೆ ಹೇಗೆ ಬಿಚ್ಚುವುದು? ಇದರಿಂದ ಆಗಬಹುದಾದ ಸಾಧಕ ಬಾಧಕಗಳೇನು? ಬಚ್ಚಿಡುವುದರಿಂದಾಗುವ ಅನುಕೂಲಗಳೇನು?ಎನೇ ಮಾಡಿದರೂ ಅದರಿಂದೊದಗಬಹುದಾದ ಮುಂಪರಿಣಾಮಗಳಿಗೆ ಹೇಗೆ ತಯಾರಾಗುವುದು? ಮೂಡಬಹುದಾದ ಪ್ರಶ್ನೆಗಳೇನು?ಅವುಗಳಿಗೆ ತಮ್ಮಲ್ಲಿ ಉತ್ತರವಿದೆಯೇ? ಸತ್ಯ ತಿಳಿದು ಶಕುಂತಲ ತಮ್ಮನ್ನು ತೊರೆಯುವ ನಿರ್ಧಾರಕ್ಕೆ ಬಂದರೆ ಏನು ಮಾಡುವುದು? ಅವಳು ತಮ್ಮನ್ನು ದ್ವೇಷಿಸಿದರೆ ಹೇಗೆ ಸ್ವೀಕರಿಸುವುದು? ಸತ್ಯ ತಿಳಿದು ವಿಚಲಿತಳಾಗಿ ಜೀವನದ ಮುಂದಿನ ನಿರ್ಧಾರಗಳನ್ನು ದುಡುಕಿ ತೆಗೆದುಕೊಂಡರೆಏನು ಮಾಡುವುದು?ಅವಳ ನಿರ್ಧಾರಗಳು ಸರಿಕಾಣದೆ ಹೋದರೆ ತಿಳಿಹೇಳಲು ತಮಗೆ ನೈತಿಕ ಹಕ್ಕು ಇರುವುದೇ? ತಾವೇ ಬೆಳೆಸಿದ ಬಳ್ಳಿ ತಮ್ಮ ಕಣ್ಮುಂದೆಯೇ ಬಾಡುವಂತಾದರೆ ನೋಡಿಕೊಂಡು ಸುಮ್ಮನಿರಲಾದೀತೆ? ಹೀಗೆ ನಾನಾ ಯೋಚನೆಗಳು, ಜಿಜ್ಞಾಸೆಗಳು ಅವರ ಮನದಲ್ಲಿ ಪುಟಿದೇಳುತ್ತಿದ್ದವು. ದಿನವೂ ಸುಧಾಕರನ ಮನದಲ್ಲಿ ಕೊರೆಯುತ್ತಿದ್ದ ವಿಚಾರಗಳವು. ಅದಕ್ಕಾಗಿಯೇ ಈ ದಿನ ಧೃಢನಿರ್ಧಾರ ಮಾಡಿಕೊಂಡು ತಮ್ಮ ಈ ಸಮಸ್ಯೆಗಳ ಸಾಧಕ ಬಾಧಕ ಚರ್ಚಿಸಲು ಕುಳಿತಿದ್ದರು. ಸುಧಾಕರ ಒಂದು ಪೆನ್ನು- ಪೇಪರು ತೆಗೆದುಕೊಂಡು ರಮ್ಯಾಳನ್ನೂ ಕುಳ್ಳಿರಿಸಿಕೊಂಡು ತಮ್ಮ ಮನದಲ್ಲಿ ಮೂಡಿದ ಭಾವನೆಗಳಿಗೆ ಒಂದು ಮೂರ್ತರೂಪ ಕೊಡಲು ಪಟ್ಟಿ ಮಾಡುತ್ತ ವಿಶ್ಲೇಷಿಸುತ್ತಾ ಬರೆದಿಡುತ್ತಿದ್ದರು. ರಮ್ಯಾ ನಡು ನಡುವೆ ಮಾತೃ ಸಹಜವಾದ, ಸ್ತ್ರೀ ಸಹಜವಾದ ಭಾವಾತಿರೇಕಕ್ಕೆ ಒಳ್ಗಾಗಿ ಅಳುವುದೂ,ಬಿಕ್ಕಳಿಸುವುದೂ ನಡೆಸಿದ್ದರೂ ಅವಳನ್ನು ಸಮಾಧಾನಗೊಳಿಸುತ್ತ,ತಿಳಿಹೇಳುತ್ತ ಈ ಸೂಕ್ಷ್ಮವಾದ ವಿಚಾರದಲ್ಲಿ ಆದಷ್ಟೂ ವಸ್ತುನಿಷ್ಠವಾಗಿ ಆಲೋಚಿಸಲು ಉತ್ತೇಜಿಸುತ್ತದ್ದರು. ಎರಡು ಮೂರು ಗಂಟೆಗಳ ಕಾಲ ವಿಚಾರ ವಿನಿಮಯ ಮಾಡಿ ಬಳಲಿದ ಜೀವಗಳು ಹಾಗೆಯೇ ನಿದ್ರೆ ಹೋದರು.
ಅಂದು ಶಕುಂತಲಾ ನಾಲ್ಕು ಗಂಟೆಗೇ ಕೆಲಸ ಮುಗಿಸಿ ಮನೆಗೆ ಬಂದಳು. ತಾಯಿಗಾಗಿ ಅವಳ ಇಷ್ಟದ ಧಾರವಾಹಿಗಳ ಡಿ.ವಿ.ಡಿ ಗಳನ್ನೂ, ತಂದೆಗಾಗಿ ಒಂದು ಟ್ಯಾಬ್ಲೆಟ್ ಕಂಪ್ಯೂಟರನ್ನೂ ಕೊಂಡು ತಂದವಳು ಅಚ್ಚರಿಯ ಉಡುಗೊರೆಯಾಗಿ ಅವರಿಗೆ ಕೊಡಲೆಂದು ಸದ್ದಿಲ್ಲದೆ ಒಳಗೆ ಬಂದಾಗ ಅವರಿಬ್ಬರೂ ಗಾಢ ನಿದ್ರೆಯಲ್ಲಿದ್ದರು. ಅವರವರ ಉಡುಗೊರೆಗಳನ್ನು ಅವರವರ ಪಕ್ಕದಲ್ಲಿಟ್ಟು ಅಲ್ಲಿದ್ದ ಕಾಗದಗಳನ್ನು ಕಂಡು ತನ್ನ ಮದುವೆಗೆ ತಯಾರಿ ನಡೆಸಿರಬಹುದೆಂದು ಯೋಚಿಸಿ ಹೊರಳಿದವಳ ಕಣ್ಣಿಗೆ ಸಾಧ್ಯತೆ-ಬಾಧ್ಯತೆ ಎಂಬ ಒಕ್ಕಣೆಯೂ,ತನ್ನ ಹೆಸರೂ ಅಲ್ಲಲ್ಲಿ ಇಣುಕಿರುವುದೂ ನೋಡಿದಳು. ಒಂದಕ್ಕೊಂದು ಸಂಬಂಧ ಇದೆಯೋ ಇಲ್ಲವೋ ಎಂಬಂತ್ತಿದ್ದ ಒಕ್ಕಣೆಗಳು ಅವಳಿಗೆ ನೇರವಾಗಿ ಅರ್ಥ ಆಗಲಿಲ್ಲ. ಕುತೂಹಲ ಮೂಡಿದರೂ, ಇದುವರೆಗೆ ಬರೀ ವಾತ್ಸಲ್ಯವನ್ನೇ ಸುರಿದಿದ್ದ ತಂದೆ ತಾಯಿಗಳನ್ನು ಸಂಶಯಿಸಲು ಅವಳಿಗೆ ಯಾವ ಕಾರಣಗಳೂ ಇರಲಿಲ್ಲ. ಕಾಗದ ಅಲ್ಲಿಯೇ ಬಿಟ್ಟು ಮುಖತೊಳೆದು ಬಟ್ಟೆ ಬದಲಾಯಿಸಿ ಕೆಳಗೆ ಹೋದಳು.
ಸಂಜೆ ಐದೂವರೆ ವೇಳೆಗೆ ಗಡಿಬಿಡಿಯಿಂದೆದ್ದ ರಮ್ಯಾ-ಸುಧಾಕರ ತಮ್ಮ ಪಕ್ಕದಲ್ಲಿದ್ದ ಉಡುಗೊರೆಯ ಡಬ್ಬಿಗಳನ್ನು ಕಂಡು ಆಶ್ಚರ್ಯ ಆತಂಕ ಗಳಿಂದ ಮುಖ ಮುಖ ನೋಡಿಕೊಂಡರು. ಮೇಜಿನ ಮೇಲಿನ ಹಾಳೆಗಳು ಹಾಗೇ ಇದ್ದವು. ಶಕುಂತಲಾ ಬಂದಿರುವುದು ಸ್ಪಷ್ಟ; ಈ ಬರಹಗಳನ್ನು ನೋಡಿರುವಳೋ ಇಲ್ಲವೋ ಅಸ್ಪಷ್ಟ;ಆಕೆಯ ಮನಸ್ಥಿತಿ ಅನೂಹ್ಯ! ಎಲ್ಲಿಂದ ಹೇಗೆ ಪ್ರಾರಂಭಿಸುವುದು -ಅನಿರ್ಧರಿತ. ಹೀಗೆ ನಾನಾ ಭಾವನೆಗಳು ಅವರ ಮನವನ್ನಾಳಲು ಉಪಕ್ರಮಿಸಿದವು. ಒಬ್ಬರ ಮನಸ್ಸನ್ನು ಒಬ್ಬರು ಓದಿದವರಂತೆ ನಿಟ್ಟುಸಿರು ಬಿಟ್ಟು ಮುಖ ತೊಳೆದು ಕೆಳಕ್ಕೆ ನಡೆದರು.
ಸೋಫ಼್ಹಾ ಮೇಲೆ ಕುಳಿತು ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದ ಶಕುಂತಲಾ ಇವರನ್ನು ಕಂಡು ಛಂಗನೆದ್ದು ಅಮ್ಮನನ್ನು ಆಲಂಗಿಸಿಯೂ, ಅಪ್ಪನಿಗೆ ಜೋತು ಬೀಳುತ್ತಲೂ ಎಂದಿನಂತೆ ವ್ಯವಹರಿಸಿದಳು. ರಮ್ಯಾ ಕಾಫಿ ಮಾಡಲು ತೆರಳಿದರೆ ಅಪ್ಪ ಮಗಳು ಲೋಕಾಭಿರಾಮ ಹರಟೆಗೆ ತೊಡಗಿದರು. ಆದರೂ ಸುಧಾಕರನಿಗೆ ಸ್ವಲ್ಪ ಕಸಿವಿಸಿ.
ಕಾಫಿ ಬಂತು. ಕುಡಿಯುತ್ತಾ ಶಕುಂತಲ ” ಏನೋ ಗಂಡ ಹೆಂಡತಿ ನನ್ನ ಮದುವೆಯ ಬಗ್ಗೆ ಮಸಲತ್ತು ನಡೆಸಿದಂತಿದೆ ” ಮಾತು ತೆಗೆದಳು. ರಮ್ಯಾ ಕೆಮ್ಮಿದಳು ಸುಧಾಕರ ಸ್ವಲ್ಪ ಕಾಫಿ ಮೈಮೇಲೆ ಚೆಲ್ಲಿಕೊಂಡರು. ನಕ್ಕರು ಎಲ್ಲರೂ. ನಂತರದಲ್ಲಿ ಸುಧಾಕರ ಎದ್ದು, ಮುಂದಿನ ಬಾಗಿಲ ಚಿಲಕ ಭದ್ರಪಡಿಸಿ ಬಂದು, ನಡೆಯಿರಿ ಎಲ್ಲರೂ ಮೇಲೆ ಹೋಗಿ ಮಾತನಾಡುವ ಎಂದು ನಡೆದರು. ಇನ್ನು ಎಳೆದಾಡುವುದರಲ್ಲಿ ಅರ್ಥವಿಲ್ಲ ಎಂದೆನಿಸಿತವರಿಗೆ.
ಹಾಸಿಗೆಯ ಮೇಲೆ ಕುಳಿತು ಮಗಳನ್ನು ಪಕ್ಕದಲ್ಲೇ ಕರೆದು ಕುಳ್ಳಿರಿಸಿಕೊಂಡ ಸುಧಾಕರ, ಹಾಳೆಯ ಮೇಲೆ ಕಣ್ಣಾಡಿಸಿದಂತೆ ಮಾಡಿ ಮಗಳೆ ಮುಖ ನೋಡುತ್ತಾ ಹೇಳತೊಡಗಿದರು.
”ನೋಡು ಶಕುಂತಲ ಇದುವರೆಗೆ ನಿನಗೆ ತಿಳಿಯದೇ ಇರುವ ವಿಷಯವೊಂದನ್ನು ಹೇಳಲು ಬಯಸುತ್ತೇವೆ. ಈ ವಿಚಾರವಾಗಿ ನಾನೂ ನಿನ್ನ ತಾಯಿಯೂ ಈ ಮದ್ಯಾಹ್ನ ಚರ್ಚಿಸುತ್ತಿದ್ದೆವು. ನಿನಗೆ ಇಷ್ಟರಲ್ಲೇ ಮದುವೆ ಮಾಡುವುದು ಸರಿಯಷ್ಟೇ? ಆನಂತರದಲ್ಲಿ ನೀನು, ನಿನ್ನ ಸಂಸಾರ, ಮಗು, ಮಕ್ಕಳು ಹೀಗೆ ನಿನ್ನ ಜೀವನದ ನದಿಯ ಪಾತ್ರ ಬೇರೆಡೆಗೆ ಹೊರಳುತ್ತದೆ. ನಾವು ಕೂಡಾ ಇನ್ನೆಷ್ಟುದಿನ ಇರಬಲ್ಲೆವು? ಮನುಷ್ಯನಿಗೆ ಸಂಬಂಧಗಳು ದೈಹಿಕವಾಗಿಯೂ,ಭಾವನಾತ್ಮಕವಾಗಿಯೂ, ದೈವೀಕ ಪ್ರೇರಣೆಯಿಂದಲೂ ಕೂಡಿ ಬರುತ್ತವೆ. ಕೆಲವು ಸಂಬಂಧಗಳು ಗಟ್ಟಿಯಾದರೆ ಮತ್ತೆ ಕೆಲವು ಜೊಳ್ಳು. ಪ್ರತಿಯೊಂದು ಸಂಬಂಧವನ್ನೂ ಸತ್ಯದ ಒರೆಗೆ ಹಚ್ಚಿ ಸತ್ಯದ ತಳಹದಿಯ ಮೇಲೇ ನಿಲ್ಲಿಸುವುದು ಜೀವನಕ್ಕೆ ಅತ್ಯಗತ್ಯ. ಸುಳ್ಳಿನ ಬುನಾದಿಯ ಮೇಲೆ ಕಟ್ಟಿದ ಸಂಬಂಧದ ಸೌಧಗಳು ಬಲಹೀನವಾಗಿದ್ದು ಬಿದ್ದುಹೋಗುತ್ತವೆ. ಸಂಬಂಧಗಳಿಗೆ ಸತ್ಯದ ಪ್ರಮಾಣ ಕೊಡಲು ಕಾಲ ಪ್ರಶಸ್ತವಾಗಿರಬೇಕಷ್ಟೆ. ಈ ದಿನ ನಮಗೆ-ನಿನಗೆ ಆ ಘಳಿಗೆ ಕೂಡಿಬಂದಿರುವುದರಿಂದಲೇ ನಾವೀಗ ಇಲ್ಲಿ ಕುಳಿತು ಮಾತನಾಡುತ್ತಿರುವುದು ಎಂದು ಹೇಳಿ ಕ್ಷಣ ಕಾಲ ಸುಮ್ಮನಾದರು.
ಯಾವತ್ತೂ ತಾತ್ತ್ವಿಕ ನೆಲೆಯಲ್ಲಿ ಚಿಂತಿಸಿ ಸಾತ್ವಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ತನ್ನ ತಂದೆಯ ಈ ಪೀಠಿಕೆಯಿಂದ ಶಕುಂತಲೆಗೇನೂ ಆಶ್ಚರ್ಯವಾಗಲಿಲ್ಲ. ಆದರೂ ಅವರು ಉಲ್ಲೇಖಿಸುತ್ತಿರುವ ಈ ”ಸತ್ಯ” ಏನೆಂಬುದು ಅವಳಿಗೆ ಸ್ಪಷ್ಟವಾಗಲಿಲ್ಲ. ಸುಮ್ಮನೆ ತಲೆಯಾಡಿಸಿದಳು.
ಮುಂದುವರಿದು ಸುಧಾಕರ ಹೇಳಿದರು..
”ನೀನು ಹುಟ್ಟಿದಾಗಲಿಂದ ನಮ್ಮ ಆರೈಕೆ ಯಲ್ಲಿಯೇ ಬೆಳೆದು ನಿಮ್ಮ ತಾಯಿಯ ಹಾಲನ್ನೇ ಕುಡಿದು ದೊಡ್ಡವಳಾಗಿದ್ದರೂ ಜೀವಶಾಸ್ತ್ರದ ನಿಯಮಗಳ ಪ್ರಕಾರ ನಮ್ಮ ಮಗಳಲ್ಲ; ಅದರೆ ಭಾವಶಾಸ್ತ್ರದ ತತ್ವಗಳ ಅನ್ವಯ ನಮ್ಮ ಮಗಳೆ. ನಮ್ಮ ಜೀವತಂತುಗಳು ನಿನ್ನಲ್ಲಿ ಇಲ್ಲದೇ ಇರಬಹುದು ಅದರೆ ನಮ್ಮ ಭಾವತಂತುಗಳು ನಿನಗಾಗಿಯೂ ನಿನ್ನ ಭಾವತಂತುಗಳು ನಮಗಾಗಿಯೂ ಮಿಡಿಯುತ್ತವೆ- ಸಂಶಯವಿಲ್ಲ. ಇದನ್ನು ನೀನು ಕೂಡಾ ಅನುಮೋದಿಸುವಿಯೆಂದು ಭಾವಿಸುತ್ತೇನೆ ” ಎಂದೆಂದು ಮಗಳ ಮುಖ ನೋಡಿದರು. ಅವಳ ಕಣ್ಣಾಲಿಗಳು ತುಂಬಿದ್ದವು. ರಮ್ಯಾ ಮುಖವನ್ನು ಬೇರೆಡೆಗೆ ತಿರುಗಿಸಿಕೊಂಡಿದ್ದಳು.
ಸುಧಾಕರ ಮೌನ ಮುರಿದು ಹೇಳಿದರು…
ಅಸ್ಪತ್ರೆಯಲ್ಲಿ ಹೆರಿಗೆ ಸಮ್ಯದಲ್ಲಿ ನಡೆದ ಘಟನೆಗಳು, ರಮ್ಯಾಳ ಸಂಕಷ್ಟಗಳು,ರಮ್ಯಾಳ ಜೀವಕ್ಕೆ ಒದಗಿದ್ದ ಅಪಾಯ,ತಮ್ಮದೇ ಮಗು ಉಳಿಯದೇ ಇದ್ದದ್ದು,ಶಕುಂತಲಾ ಹೇಗೆ ಅ ಸಮಯದಲ್ಲಿ ಒದಗಿ ಬಂದದ್ದು ತಮ್ಮ ಬಾಳಿಗೆ ಬೆಳಕನ್ನು ತಂದದ್ದು ಎಲ್ಲವನ್ನು ವಿವರಿಸಿದರು.ಶಕುಂತಲಾ ತನ್ನ ಕಣ್ಣುಗಳನ್ನು ಒರೆಸಿಕೊಂಡು ಅವರಮ್ಮನ ಬಳಿಸರಿದು ಅವಳ ಭುಜ ಹಿಡಿದು ನೀರು ತುಂಬಿದ್ದ ಅವಳ ಕಣ್ಣಿನಲ್ಲಿ ಕಣ್ಣಿಟ್ಟು ಹೇಳಿದಳು.
” ನೀವು ಸತ್ಯ ಹೇಳಿದರೂ ಹೇಳದಿದ್ದರೂ ನಾನು ನಿಮ್ಮ ಮಗಳೇ ಆಗಿರುತ್ತೇನೆ. ಅದರಲ್ಲೂ ಸತ್ಯದ ವೀನೆಯ ಮೇಲಿನ ಭಾವನಾತ್ಮಕ ತಂತುಗಳು ಮಿಡಿಯುವ ಸ್ವರ ಎಂದೂ ಅಪಸ್ವರವಾಗಿರಲಾರದು. ನೀವು ನನ್ನನ್ನು ಹುರಿದುಂಬಿಸಿ ವೈದ್ಯ ಶಾಸ್ತ್ರ ಓದಿಸಿದ ಅರಿವು ಇಂದು ನನಗಾಯಿತು. ನಾನು ಬೇರೆ ಏನೋ ಆಗಿದ್ದರೆ ಈ ವಿಚಾರವನ್ನು ಹೇಗೆ ಸ್ವೀಕರಿಸುತ್ತಿದ್ದೆನೋ ತಿಳಿಯದು. ಆದರೆ ಈ ಹಿನ್ನೆಲೆಯಿಂದ ಯೋಚಿಸಿದಾಗ ನನಗೆ ಯಾವ ಖೇದವೂ ಇಲ್ಲ. ಭಾವನೆಗಳಿಲ್ಲದೆ ಬರೀ ಜೀವತಂತುಗಳಿಂದ ಹೊಮ್ಮುವ ಶಬ್ದ ಶಬ್ದವಾಗುವುದೇ ವಿನ್ಃ ನಾದವಾಗುವುದಿಲ್ಲ.ಅದರ ಅರಿವೂ ಇಂದು ನನಗೆ ಸಾಕಾರವಾಯಿತು. ನಿಮಗೆ ನನ್ನ ಮೇಲಿನ ಅಧಿಕಾರವಾಗಲೀ ,ಹಕ್ಕುಗಳಾಗಲಿ ಯಾವತ್ತೂ ತಂದೆ ತಾಯಿಗಳಾಗಿ ನಿಮ್ಮದೇ. ನಿಮ್ಮ ಅಭಿಲಾಷೆ ಮೀರಿ ನಾನೇನೂ ಮಾಡಲಾರೆ.ಇಷ್ಟು ದಿನದ ನಿಮ್ಮ ಕನಸುಗಳಿಗೆ,ಅಕಾಂಕ್ಷೆಗಳಿಗೆ ಮಣ್ಣೆರೆಚಲಾರೆ. ನೀವು ಹೇಗೆ ಎಲ್ಲ ಪ್ರೀತಿಯನ್ನು ನಿಸ್ವಾರ್ಥದಿಂದ ನನಗೆ ಧಾರೆಯೆರೆದಿದ್ದೀರೋ ಹಾಗೆ ನಾನು ಕೂಡಾ ನಿಮ್ಮ ಮುದ್ದಿನ ಮಗಳಾಗಿಯೇ ಇರುತ್ತೇನೆ ಎಂದಳು- ಹೃದಯ ತುಂಬಿ.
ವಾಸ್ತವತೆಯ ಕಲ್ಲೊಂದು ಅವರ ಮನಗಳ ಕೊಳದಲ್ಲಿ ಮುಳುಗಿ ತರಂಗಗಳನ್ನೆಬ್ಬಿಸಿ ತಳ ಸೇರುವವರೆಗೆ ಅಲ್ಲಿ ಮೌನ ಆವರಿಸಿತ್ತು. ಶಕುಂತಲೆಯೇ ಮೌನ ಮುರಿದು ಮಾತನಾಡಿದಳು.
ಅಪ್ಪಾಜಿ ನಿಮ್ಮ ಕೈಗೆ ನಾನು ಯಾರಿಂದ ಹೇಗೆ ಬಂದೆನೆಂಬ ವಿಚಾರ ನನಗೆ ಹೇಳಲಿಲ್ಲ? ಎಂದಳು.
ಸುಧಾಕರ ತಲೆಯಾಡಿಸುತ್ತಾ,” ಹೌದು ಈ ವಿಚಾರ ನಾನು ನಿನಗಷ್ಟೇ ಅಲ್ಲ ನಿನ್ನ ಅಮ್ಮನಿಗೂ ಕೂಡಾ ಇಲ್ಲಿಯವರೆಗೆ ಹೇಳಿಲ್ಲ. ನೀನು ಸಿಕ್ಕ ಸಂಭ್ರಮದಲ್ಲಿ ಅವಳೂ ಕೂಡಾ ಇಲ್ಲಿಯವರೆಗೆ ಕೇಳೇ ಇಲ್ಲ” ಎಂದರು ಮಡದಿಯೆಡೆಗೆ ಅಭಿಮಾನದಿಂದ ನೋಡುತ್ತಾ.
ಈ ದಿನ ಆ ವಿಚಾರವನ್ನೂ ಅನಾವರಣ ಮಾಡಿ ನನ್ನ ಮನಸ್ಸನ್ನೂ ಹಗುರು ಮಾಡಿಕೊಳ್ಳುತ್ತೇನೆ -ಎಂದಂದು ಹೇಳಲು ಪ್ರಾರಂಭಿಸಿದರು.
ನಿನ್ನಮ್ಮನಿಗೆ ಹೆರಿಗೆಯ ದಿನಗಳು ಹತ್ತಿರ ಬರುತ್ತಿದ್ದವು. ಆಗ ನಾವು ಬೆಂಗಳೂರಿನಲ್ಲೇ ಇದ್ದೆವು.ರಕ್ತದೊತ್ತಡ ಜಾಸ್ಥಿಯಾದರಿಂದ ನಾನು ಅವಳನ್ನು ಆಸ್ಪತ್ರೆಗೆ ಕರೆದೊಯ್ದೆ. ಅಲ್ಲಿಂದ ಮುಂದೆ ಆದ ಕಥೆ ನಿನಗೆ ಗೊತ್ತೇ ಇದೆ. ಮಗುವನ್ನು ಕಳೆದುಕೊಂಡು ನಾವಿಬ್ಬರೂ ಖಿನ್ನರಾಗಿದ್ದೆವು. ಅಷ್ಟರಲ್ಲಿ ಪಕ್ಕದ ವಾರ್ಡಿನಲ್ಲಿ ಗಲಿಬಿಲಿ ಗಲಾಟೆ ಆಯ್ತು. ರಮ್ಯಾ ಮಲಗಿದ್ದಳು. ನಾನು ಹೋಗಿ ಗಲಾಟೆ ಆಗುವಲ್ಲಿ ನಿಂತೆ. ಯಾರೋ ಶ್ರೀಮಂತರಂತೆ.ಅವರ ಮಗಳು ಅಲ್ಲಿದ್ದಳಂತೆ.ಹಸುಗೂಸನ್ನು ಅಲ್ಲಿಯೇ ಬಿಟ್ಟು ತನ್ನ ತಂದೆ ತಾಯಿಯರೊಡನೆ ಹೊರಟು ಹೋಗಿದ್ದಳಂತೆ. ಮಗುವಿಗೆ ಬೇಕಾದ ಎಲ್ಲ ಸಾಮಾನು ಸರಂಜಾಮುಗಳನ್ನೂ ಅಲ್ಲಿ ಒಪ್ಪವಾಗಿ ಇಟ್ಟಿದ್ದರಂತೆ. ಅವರ್ಯಾರ ಸುಳಿವೂ ಇರಲಿಲ್ಲ. ಆಗೆಲ್ಲ ಈಗಿನಷ್ಟು ಕಂಪ್ಯುಟರ್ ದಾಖಲೆ ಮುಂತಾದ ವ್ಯವಸ್ಥೆ ಇರಲಿಲ್ಲ. ವಿಳಾಸ ಇತ್ಯಾದಿಗಾಗಿ ಹೆಚ್ಚು ತಲೆಕೆಡಿಸಿಕೊಳ್ಳುತ್ತಲೂ ಇರಲಿಲ್ಲ. ಬಹುತೇಕ ನಂಬಿಕೆಯ ಮೇಲೆ ವ್ಯವಹಾರ ನಡೆಯುತ್ತಿದ್ದ ದಿನಗಳವು.ಅವರು ಹೇಳಿದ್ದು ಇವರು ಬರೆದುಕೊಂಡಿದ್ದು. ಆ ಶ್ರೀಮಂತರು ತಮ್ಮ ಎಲ್ಲ ವಿವರಗಳನ್ನು ತಪ್ಪಾಗಿ ಕೊಟ್ಟಿದ್ದರು ಆದರೆ ಅಸ್ಪತ್ರೆಗೆ ಕಟ್ಟಬೇಕಾದ ಹಣ ಸರಿಯಾಗಿ ಸಂದಾಯ ಮಾಡಿದ್ದರು. ಇದೆಲ್ಲಾ ಗಮನಿಸಿದಾಗ ಅವರು ಎಚ್ಚರಿಕೆಯಿಂದಲೇ ಮಗುವನ್ನು ತೊರೆಯುವ ಯೋಚನೆ ಹಾಕಿದ್ದರೆಂದು ಕಾಣುತ್ತದೆ. ಏಕೆ ಹಾಗೆ ಮಾಡಿದರೆಂದು ಅಲ್ಲಿದ್ದ ಯಾವ ವೈದ್ಯರಿಗೂ ಮತ್ಯಾರಿಗೂ ಗೊತ್ತಿರಲಿಲ್ಲ.ಹೀಗಾಗಿ ಗಲಿಬಿಲಿ ನಡೆದಿತ್ತು. ಆಗ ನೀನು ಎರಡು ದಿನದ ಮಗುವಿರಬೇಕು. ಅಳಲು ಮೊದಲು ಮಾಡಿದೆ. ಅಲ್ಲಿದ್ದ ನರ್ಸ್ ನಿನ್ನನ್ನು ತಂದು ರಮ್ಯಾಳಿಗೆ ಕೊಟ್ಟಳು. ನಿನ್ನಮ್ಮನಿಗೆ ಎದೆಹಾಲಿನ ಭಾರ ಇಳಿಯಬೇಕಿತ್ತು.ಅವಳ ಹಾಲು ಕುಡಿದ ಮೊದಲ ಮಗು ನೀನೆ.ಅಷ್ಟರಲ್ಲಿ ಸುಮಾರು ನಲತ್ತು ವಯಸ್ಸಿನ ಹೆಂಗಸೊಬ್ಬಳು ಅಲ್ಲಿಗೆ ಬಂದಳು. ಅವರ ಮನೆಯ ಕೆಲಸದವಳೆಂದು ಪರಿಚಯಿಸಿಕೊಂಡಳು.ಪರಿಸ್ಥಿತಿ ಅವಳಿಗೂ ಅನಿರೀಕ್ಷಿತವಾಗಿತ್ತು. ಸುಮಾರು ಎರಡು ತಿಂಗಳಿಂದ ಅವರ ಮನೆಯಲ್ಲಿ ಇದ್ದಳೆಂದೂ,ಆ ಮನೆಗೆ ಈಗ ಬೀಗ ಹಾಕಿತ್ತೆಂದೂ, ಅವರು ಊರು ಬಿಟ್ಟು ಹೊರಟುಹೋಗಿರಬೇಕೆಂದೂ ಹೇಳಿದಳು. ಕೆಲಸದವಳಾದ ಕಾರಣ ಅವರ ಪೂರ್ವಾಪರ ಅವಳಿಗೂ ಸರಿಯಾಗಿ ತಿಳಿದಿರಲಿಲ್ಲ. ಆದರೂ ಅವರು ಬಹಳ ಸ್ಥಿತಿವಂತರಿದ್ದರೆಂದೂ ಬಹಳ ಗೌಪ್ಯತೆ ಕಾಪಾಡುತ್ತಿದ್ದರೆಂದೂ ,ತಂದೆ ತಾಯಿ, ಮಗಳನ್ನು ಹೊರತು ಪಡಿಸಿ ಅಪರೂಪಕ್ಕೆಂಬಂತೆ ಅವಳ ವಾರಿಗೆಯ ಇನ್ನೊಬ್ಬ ಯುವತಿ ಬರುತ್ತಿದ್ದಳೆಂದು ಹೇಳಿದಳು. ಉಳಿದಂತೆ ಬೇರೆ ಜನ ಬಂದು ಹೋದದ್ದನ್ನು ತಾನು ಕಾಣಲಿಲ್ಲವೆಂದೂ ಸೇರಿಸಿದಳು. ಸಂಜೆಯಾದರೂ ಇನ್ನು ಯಾರ ಸುಳಿವೂ ಇರದಿದ್ದ ಕಾರಣ ಅವರ್ಯಾರೂ ಬರದೆ ಇದ್ದದ್ದು ಬಹುತೇಕ ಖಾತ್ರಿಯಾಯಿತು. ಹಿರಿಯ ವೈದ್ಯರು ನನ್ನನ್ನು ಕರೆದು ಈ ಮಗುವನ್ನು ನೀವು ಸಾಕಿಕೊಳ್ಳಬಲ್ಲಿರಾ? ಎಂದು ಕೇಳಿದರು. ನಾವೂ ಸಂತೋಷದಿಂದ ಒಪ್ಪಿದೆವು. ಆದರೂ ಇನ್ನೂ ನಾಲ್ಕಾರು ದಿನ ಆಸ್ಪತ್ರೆಯಲ್ಲೇ ಇರಿ. ಅಕಸ್ಮಾತಾಗಿ ಅವರು ಬಂದು ಇಲ್ಲದ ರಗಳೆಯಾಗುವುದು ಬೇಡ, ಹಾಗೆಯೇ ಈ ಮಗುವಿನ ಬಗೆಗೆ ಸಾಕಷ್ಟು ಮಾಹಿತಿ ಕಲೆ ಹಾಕಿ ಉಳಿದ ಪರೀಕ್ಷೆಗಳೇನಾದರೂ ಬಾಕಿಯಿದ್ದಲ್ಲಿ ಅವನ್ನು ಮುಗಿಸಿ ಆರೋಗ್ಯಪೂರ್ಣವಾಗಿರುವುದನ್ನು ಖಚಿತಪಡಿಸಿಕೊಂಡೇ ಮನೆಗೆ ತೆರಳಬಹುದೆಂದು ಸಲಹೆ ಮಾಡಿದರು. ಹೀಗಾಗಿ ನೀನು ನಮ್ಮ ಮಡಿಲಿಗೆ ಬಂದೆ ಎಂದಂದು ನಿಲ್ಲಿಸಿದರು.
”ಆಸ್ಪತ್ರೆಯವರು ಪೋಲಿಸ್ ಕಂಪ್ಲೇಂಟ್ ಕೊಡಲಿಲ್ಲವೋ?” ಶಕುಂತಲ ಕೇಳಿದಳು.
ಅದನ್ನೂ ವಿವೇಚಿಸಲಾಯ್ತು. ಆದರೆ ಯಾವ ಪೂರ್ವಾಪರಗಳ ಸರಿಯಾದ ಆಧಾರವಿಲ್ಲದೆ ದೂರು ಯಾರ ಮೇಲೆ ಕೊಡುವುದು? ಅದೂ ಅಲ್ಲದೆ ಅದರಿಂದ ಉಂಟಾಗಬಹುದಾದ ಕೋಲಾಹಲ, ಕಾನೂನು ರಗಳೆಯಿಂದ ನಿನಗೆ ತೊಂದರೆಯಾಗುತ್ತಿತ್ತೇ ವಿನಃ ಯಾವುದೆ ಉಪಕಾರ ಆಗುತ್ತಿರಲಿಲ್ಲ. ನಿನಗೆ ಮಡಿಲಿನ ನಮಗೆ ಮಗುವಿನ ಅವಶ್ಯಕೆತೆ ಇತ್ತು.ಇದನ್ನು ಮನಗಂಡೇ ಡಾ. ಹೆಗಡೆಯವರು ಆ ದಿಶೆಯತ್ತ ಒಲವು ತೋರಲಿಲ್ಲ ಎಂದು ಹೇಳಿದರು.
”ಎಂಥ ವಿಚಿತ್ರ!! ಹಸುಗೂಸನ್ನು ತೊರೆದ ಆ ಹೆಂಗಸಿನ ಬಗೆಗೆ ಏನೂ ತಿಳಿಯಲಿಲ್ಲವೋ?” ಶಕುಂತಲ ಕೇಳಿದಳು. ಹೆಂಗಸು ಎಂದು ಸಂಬೋಧಿಸಿದಳೇ ವಿನಃ ನಮ್ಮಮ್ಮ ಎಂದು ಅನ್ನದಿದ್ದುದು ರಮ್ಯಾಳಿಗೆ ಒಂದು ಬಗೆಯ ಅವ್ಯಕ್ತ ಆನಂದ ತಂದದ್ದಲ್ಲದೆ ಅವಳ ಮೇಲಿನ ಮಮತೆ ಇನ್ನೂ ಹೆಚ್ಚ್ಹಾಯಿತು. ಶಕುಂತಲೆಗೆ ಅದು ತಿಳಿಯದಿರಲಿಲ್ಲ.
ಸುಧಾಕರ ತಲೆದೂಗುತ್ತಾ,” ನಿಧಾನವಾಗಿ ಕೆಲವು ವಿಷಯಗಳು ತಿಳಿದವು ಹಿರಿಯ ವೈದ್ಯರಾದ ಹೆಗಡೆಯವರು ನಾನು ನನ್ನ ಜೀವನದಲ್ಲಿ ಕಂಡ ಕೆಲವೇ ಕೆಲವು ಪ್ರಾತಃ ಸ್ಮರಣೀಯರಲ್ಲಿ ಒಬ್ಬರು. ಅವರ ಮಾನವೀಯ ಕಾಳಜಿ, ದೂರದೃಷ್ಟಿ,ಕಳಕಳಿ ಬಹಳ ಅಪರೂಪ. ನೀನು ನಮ್ಮ ಮಡಿಲಿಗೆ ಬರುವುದು ಖಚಿತವಾದ ನಂತರ ಅವರು ನಿನ್ನ ಹುಟ್ಟಿಗೆ ಕಾರಣರಾದ ತಂದೆ ತಾಯಿಯರ ಬಗೆಗೆ ಸಾಧ್ಯವಾದಷ್ಟು ಮಾಹಿತಿ ಕಲೆ ಹಾಕುವ ಬಗೆಗೆ ಯೋಚಿಸತೊಡಗಿದರು. ನನ್ನನ್ನು ಕರೆದು ತಮ್ಮ ಕಾರ್ಯಯೋಜನೆ ತಿಳಿಸಿದರು. ಮಗುವಿಗೆ ಭದ್ರ ನೆಲೆ ಸಿಕ್ಕಿದ್ದು ಅವರಿಗೆ ನೆಮ್ಮದಿ ತಂದಿದೆಯೆಂದೂ ಆದರೆ ಪಾಲಕ ಪೋಷಕರಾಗಿ ಎಷ್ಟುಸಾಧ್ಯವೋ ಅಷ್ಟೂ ವಿವರಗಳು ಮಗುವಿನ ಬಗ್ಗೆ ತಿಳಿದಿದ್ದರೆ ಉತ್ತಮವೆಂದೂ ಮುಂದೆ ಏನಾದರೂ ಖಾಯಿಲೆ ಕಸಾಲೆಗಳು ಬಂದಲ್ಲಿ ಆ ವಿಚಾರಗಳು ಸಹಾಯಕರವಾಗಬಹುದೆಂದೂ ತಿಳಿಸಿದರು. ಹಾಗಾಗಿ ಇನ್ನೂ ಕೆಲವು ದಿನ ಆಸ್ಪತ್ರೆಯಲ್ಲೇ ಉಳಿದರೆ ಅನುಕೂಲವೆಂದು ಕೇಳಿಕೊಂಡರು. ಆ ದಿನವೇ ನಿನ್ನನ್ನು ಬಿಟ್ಟುಹೋಗಿದ್ದ ರೂಂ ಅನ್ನು ಖಾಲಿಮಾಡಲಾಯ್ತು. ಅಲ್ಲೊಂದು ಚಿಕ್ಕ ಫ಼ೈಲ್ ಕಂಡು ಬಂತು. ಅದರಲ್ಲಿ ಆ ಹೆಂಗಸು ಗರ್ಭಿಣಿಯಾದಾಗಿನಿಂದ ನಿಯಮಿತ ತಪಾಸಣೆಗೊಳಪಟ್ಟ ದಾಖಲೆಗಳು ಲಭ್ಯವಾದವು. ತಿಂಗಳಿಗೊಮ್ಮೆ ವೈದ್ಯರು ಪರೀಕ್ಷಿಸಿ ಬರೆದಿದ್ದರು. ಅದರಲ್ಲಿ ವೃಂದಾ ಎಂಬ ಹೆಸರಿತ್ತು ಆದರೆ ನೀನು ಹುಟ್ಟಿದ ಆಸ್ಪತ್ರೆಯಲ್ಲಿ ಸಿಂಧೂ ಎಂಬ ಹೆಸರಿನಿಂದ ದಾಖಲಿಸಿದ್ದರು. ಬೇಕಾಗಿಯೇ ನಿಜ ನಾಮಧೇಯ ಮರೆಮಾಚಿದ್ದು ಸ್ಪಷ್ಟವಾಗಿತ್ತು. ಉಳಿದಂತೆ ವಯಸ್ಸು, ಎತ್ತರ, ಗಾತ್ರ, ತೂಕ ಮುಂತಾದುವು ಸರಿಯಾಗಿಯೇ ತಾಳೆಯಾಗಿದ್ದವು.
ಆಕೆಯನ್ನು ಕ್ರಮವಾಗಿ ನೋಡಿಕೊಂಡ ವೈದ್ಯರ ವಿಳಾಸ ಅದರಿಲ್ಲತ್ತಷ್ಟೇ, ನನ್ನನೂ ಕರೆದುಕೊಂಡು ಹೆಗಡೆಯವರು ಆ ಪ್ರಸೂತಿ ತಜ್ಞೆಯ ಬಳಿಗೆ ಹೋದರು. ವಿಷಯ ವಿವರಿಸಿ, ನನ್ನನ್ನೂ ಪರಿಚಯಿಸಿ ನಾವು ಅಲ್ಲಿಗೆ ಹೋದ ಉದ್ದೇಶ ಹೇಳಿ ಸಾಧ್ಯವಾದಷ್ಟೂ ಮಾಹಿತಿ ನೀಡಲು ಕೋರಿಕೊಂಡರು. ಆಕೆಯೂ ಅದಕ್ಕೆ ಸ್ಪಂದಿಸಿ ಒಪ್ಪಿದಳು. ನಮಗೂ ಕಾಫ್ಹಿ ತರಿಸಿಕೊಟ್ಟು ಹೇಳಲು ಪ್ರಾರಂಭಿಸಿದಳು.
ವೃಂದಾ ಯೆಂಬ ಆ ಯುವತಿ ತನ್ನ ಬಳಿಗೆ ಸುಮಾರು ಆರು ತಿಂಗಳಿನಿಂದ ಬರುತ್ತಿದ್ದಳೆಂದೂ,ಕೆಲವೊಮ್ಮೆ ತಂದೆ ತಾಯಿಯರ ಜೊತೆಗೆ ಬಂದರೆ ಮತ್ತೆ ಕೆಲವು ಸಾರಿ ಆಕೆಯ ಗೆಳತಿ ಇರುತ್ತಿದ್ದಳೆಂದೂ, ಅವರೆಲ್ಲ ಯಾವುದೋ ಒಂದು ಅಸ್ಪಷ್ಟ ಒತ್ತಡಕ್ಕೆ ಸಿಕ್ಕಿದ್ದವರಂತೆ ಕಾಣುತ್ತಿದ್ದರೆಂದೂ ಹೇಳಿದರು. ಒಮ್ಮೆ ತಾಯಿಯೂ, ವೃಂದಾ ಗೆಳತಿಯೂ ಜೊತೆಗೆ ಬಂದಿದ್ದಾಗ, ವೃಂದಾಳನ್ನು ರಕ್ತ ಪರೀಕ್ಷೆಗೆಂದು ಕಳಿಸಿ ಆಕೆಯ ತಾಯಿಯ ಬಳಿ ಮಾತನಾಡತೊಡಗಿದೆ. ಆಕೆಗೂ ತನ್ನ ಮನಸ್ಸಿನ ಭಾರ ಇಳಿಸಿಕೊಳ್ಳಬೇಕಿತ್ತೆಂದು ತೋರುತ್ತದೆ , ಹೇಳಿದಳು ” ವೃಂದಾ, ಶ್ರೀಮಂತ ಮನೆತನದಲ್ಲಿ ಜನಿಸಿದ ಹೆಮ್ಮೆಯ ಕೂಸು. ಮಹತ್ವಾಕಾಂಕ್ಷಿ ತಂದೆಯ ಮಾರ್ಗದರ್ಶನದಲ್ಲಿ ತಾನೂ ಮಹತ್ವಾಕಾಂಕ್ಷಿಯಾಗೇ ಬೆಳೆದಳು.ಗಂಡು ಮಕ್ಕಳಿಲ್ಲದ ಅವರು ಅವಳನ್ನು ವ್ಯವಹಾರದಲ್ಲೂ ಪಳಗಿಸಿದರು. ರೂಪ, ಬುದ್ಧಿ ಎರಡೂ ಚುರುಕು. ಸದಾ ಏನನ್ನಾದರೂ ಸಾಧಿಸುವ ತುಡಿತ ಅವಳಿಗೆ. ಕೆಲವುಸಾರಿ ವಿಚಿತ್ರವೆನ್ನುವಂತೆ ನಡೆದುಕೊಳ್ಳುತ್ತಿದಳು. ಯೌವ್ವನ ಸಹಜ ಅಸೆ ಆಕಾಂಕ್ಷೆಗಳನ್ನು ತೋರಿಸುತ್ತಿದ್ದುದು ಅಪರೂಪವಾದರೂ ಆಗಾಗ ಒಪ್ಪವಾಗಿ ಸಿಂಗರಿಸಿಕೊಳ್ಲುತ್ತಿದ್ದಳು,ಓಡಾಡುತ್ತಿದ್ದಳು. ತಾಯಿಯಾಗಿ ತಾನು ಆ ರೀತಿ ಅವಳಿರಲೆಂದು ಎಷ್ಟು ಬಯಸಿಲ್ಲ?! ಆದರೆ ಈ ಬದಲಾವಣೆ ತಾತ್ಕಾಲಿಕವಾಗಿರುತ್ತಿತ್ತು. ಮತ್ತೆ ತನ್ನ ಓದು, ದುಡಿತ, ವ್ಯವಹಾರ ಹೀಗೆ ಕಳೆದು ಹೋಗುತ್ತಿದ್ದಳು. ಇವಳೇನು ಹೆಂಗಸೋ ಇಲ್ಲ ಹೆಂಗಸಿನ ರೂಪದಲ್ಲಿರುವ ಗಂಡಸೋ ಎನ್ನುವಂತಿತ್ತು ಅವಳ ನಡವಳಿಕೆ. ಹೀಗಿರುವಲ್ಲಿ ಇಂಜಿನಿಯರಿಂಗ್ ಮುಗಿಸಿ ಎಮ್.ಬಿ.ಎ ಓದುತ್ತೇನೆಂದು ಹೇಳಿದಾಗ ಅವರಪ್ಪನಿಗೆ ಬಹಳೆ ಹೆಮ್ಮೆ. ಕಳಿಸಿದರು. ಅಲ್ಲಿಯೇ ಅವಳಿಗೆ ವಿಶ್ವನಾಥನಂತೆ, ಅವಳ ಸಹಪಾಠಿಯಾದವನ ಪರಿಚಯವಾಯ್ತಂತೆ. ನಾವೇನೂ ಅವನನ್ನು ಒಮ್ಮೆಯೂ ಕಾಣಲಿಲ್ಲ ಅವಳೂ ಅವನನ್ನು ಮನೆಗೆ ಕರೆತರಲಿಲ್ಲ ಒಂದೆರೆಡು ಬಾರಿ ಅವಳಲ್ಲಿ ಸ್ತ್ರೀ ಸಹಜ ಬದಲಾಣೆ ಬಂದಿದ್ದಾಗ ನನ್ನಲ್ಲಿ ಹೇಳಿಕೊಂಡಿದ್ದಳು. ಬಡತನದ ಹಿನ್ನೆಲೆಯಿಂದ ಬಂದವನೆಂದೂ, ಅಸಾಧಾರಣ ಬುದ್ಧಿವಂತನೆಂದೂ ಹೇಳಿದ್ದಳು. ಪ್ರೀತಿ, ಪ್ರೇಮ, ಮದುವೆ ಇಂಥದ್ದೆನಾದರೂ ಯೋಚಿಸಿದ್ದೀರಾ ಎಂದದ್ದಕ್ಕೆ ಅದೇನೂ ಇಲ್ಲವೆಂದವಳು ಮೂರು ತಿಂಗಳು ಕಳೆದಾಗ ನನ್ನ ಬಳಿ ಬಂದು ಹೇಳಿದಳು. ದಿಗ್ಭ್ರಮೆಗೊಂಡ ನಾನು ಮುಂದೇನು ಮಾಡಬೇಕೆಂದಿದ್ದೀರಾ ಎಂದರೆ ಉದಾಸೀನ ತೋರಿದಳು. ವೈದ್ಯರಲ್ಲಿಗೆ ನಾನೇ ಕರೆದೊಯ್ದರೆ ಅವರು ಹದಿನಾಲ್ಕು ವಾರ ಕಳೆದಿರುವುದರಿಂದ ಈಗ ಏನೂ ಮಾಡಲು ಬರುವುದಿಲ್ಲವೆಂದು ಕೈಚೆಲ್ಲಿದರು. ವೃಂದಾ ಅಷ್ಟೇನೂ ವಿಚಲಿತಳಾಗಿರಲಿಲ್ಲ. ಕೇಳಿದರೆ ಇದೊಂದು ಜೈವಿಕ ಬದಲಾವಣೆ ಅಷ್ಟೇ ಅದಕ್ಕೇಕೆ ತಲೆ ಕೆಡಿಸಿಕೊಳ್ಳಬೇಕು ಎಂದು ಸಲೀಸಾಗಿ ನಿರ್ವಿಕಾರವಾಗಿ ಹೇಳಿಬಿಟ್ಟಳು. ಇನ್ನು ಅವರಪ್ಪನಿಗೆ ತಿಳಿಸಲೇ ಬೇಕಾಯಿತು. ಒಂದು ರಾತ್ರಿ ಕೂತು ಮಾತುಕತೆ ನಡೆಸಿದೆವು. ವಿಶ್ವನಾಥನ ಬಗೆಗೆ ಕೇಳಿದರು. ಅವನು ಮದುವೆಯ ವಿಚಾರದಲ್ಲಿ ಸ್ಪಂದಿಸುವುದಿಲ್ಲವೆಂದೂ,ಸಂಬಂಧಗಳ ವಿಷಯದಲ್ಲಿ ಅಯೊಮಯವಾಗಿ ವರ್ತಿಸುತ್ತಾನೆಂದೂ, ಒಂದು ಸಂದರ್ಭದಲ್ಲಿ ಭಾವಾವೇಷಕ್ಕೆ ಒಳಗಾಗಿ ಈ ಸ್ಥಿತಿ ಬಂದಿದೆಯೆಂದು ಹೇಳಿದಳು. ತನಗೂ ಮದುವೆಯ ಜಂಜಾಟ ಬೇಡವೆಂದಳು. ಅದಕ್ಕಾಗಿ ನಾವು ತಾತ್ಕಾಲಿಕವಾಗಿ ಬೆಂಗಳೂರಿಗೆ ಬಂದಿದ್ದೇವೆ. ಹೆರಿಗೆಯ ನಂತರ ಇನ್ನೆರೆಡು ತಿಂಗಳಿದ್ದು ಅನಂತರ ವಾಪಸ್ ಹೋಗಲಿದ್ದೇವೆ ಎಂದಷ್ಟೇ ಹೇಳಿದ್ದಳು. ಮಗುವನ್ನು ತೊರೆಯುವ ಯೋಜನೆ ಹೊಸೆದಿದ್ದರೆಂದು ತಮ್ಮ ಗಮನಕ್ಕೆ ಬರದಿದ್ದುದಕ್ಕೆ ಕ್ಷಮೆ ಕೇಳಿದರು.

ಬಹಳ ವಿಚಿತ್ರವಾದ ಕೇಸು ಇದು. ಹೆಂಗಸರು ಹೀಗೂ ಇರಬಹುದೇ? ಡಾ.ಹೆಗಡೆ ತಮ್ಮ ಕೌತುಕ ಹೊರಹಾಕಿದರು. ತಲೆದೂಗುತ್ತಾ ಆ ಲೇಡಿ ಡಾಕ್ಟರು ತಮ್ಮ ಅನುಭವದಲ್ಲೂ ಇಂತಹ ಕೇಸನ್ನು ಮೊದಲ ಬಾರಿಗೆ ನೋಡಿದ್ದಂತೆ. ವೃಂದಾ ಏನೂ ಆಗಿಯೇ ಇಲ್ಲವೆಂಬಂತೆ ಇರುತ್ತಿದ್ದಳಂತೆ. ತನ್ನ ಹೊಟ್ಟೆಯಲ್ಲ್ಲಿ ಬೆಳೆಯುತ್ತಿದ್ದ ಮಗುವಿನ ಬಗೆಗೆ ಕೌತುಕ, ನವಿರು ಭಾವನೆಗಳು, ಕನಸುಗಳು, ಕಾಳಜಿ ಏನೂ ತೊರಿಸುತ್ತಿರಲಿಲ್ಲವಂತೆ. ಈ ರೀತಿ ಸ್ಪಂದನೆಯೇ ತೋರಿಸದ, ಉಳಿದಂತೆ ನಾರ್ಮಲ್ ಆಗಿ ಇರುವಂಥ ಗರ್ಭಿಣಿ ಹೆಂಗಸನ್ನು ಕಂಡಿದ್ದಿಲ್ಲವಂತೆ ಅವರ ಅನುಭವದಲ್ಲು. ನಿಸರ್ಗ ಸಾಮಾನ್ಯವಾಗಿ ಮಗುವನ್ನು ಹೆತ್ತು ಹೊತ್ತು, ಪಾಲಿಸಿ ಪೋಷಿಸುವ ,ಆ ಮೂಲಕ ಪೀಳಿಗೆಯನ್ನು ಉಳಿಸಿ ಬೆಳೆಸುವ ಸಾಮರ್ಥ್ಯ ಹಾಗು ಅದಕ್ಕೆ ಬೇಕಾದ ದೈಹಿಕ ಹಾಗೂ ಮಾನಸಿಕ ಧಾರ್ಢ್ಯತೆಯನ್ನು ಹೆಣ್ಣಿಗೆ ದಯಪಾಲಿಸಿರುತ್ತದೆ.ಇದಕ್ಕೆ ಹೊರತಾದ ಉದಾಹರಣೆ ಎಂದರೆ ಸಮುದ್ರ ಕುದುರೆ. ಅಲ್ಲಿ ಗಂಡು ಪ್ರಾಣಿ ಮಗುವನ್ನು ಹೆರುವುದು ಮತ್ತು ಹೊರುವುದು. ಹಾಗೆಯೇ ಈ ಮಹತ್ಕಾರ್ಯದಲ್ಲಿ ಸಹಕಾರವಾಗುವಂತೆ ಮಗುವನ್ನು ತನ್ನ ಪ್ರಾಣದಂತೆ ಪ್ರೀತಿಸುವ ಸುಮಧುರ ಶಕ್ತಿಯನ್ನು ಕೂಡಾ ತಾಯಿಯಲ್ಲಿ-ಹೆಣ್ಣಿನಲ್ಲಿ ತುಂಬಿರುತ್ತದೆ. ಮಗುವನ್ನು ಕಂಡಾಗ ಮನ ಮಿಡಿದು ಹಾರ್ಮೋನುಗಳು ಸ್ರಾವವಾಗಿ ಆ ಮೂಲಕ ನರಮಂಡಲದಲ್ಲಿ ಆಗುವ ಬದಲಾವಣೆಗಳೇ ಈ ಪ್ರೀತಿಯ ಅಭಿವ್ಯಕ್ತಿಗೆ ಮೂಲಕಾರಣ.ನಿರ್ವ್ಯಾಜ ಪ್ರೀತಿಯನ್ನು ತೋರಬಲ್ಲ ಈ ಕಾರಣಕ್ಕಾಗಿಯೇ ತಾಯಿಗೆ ದೇವರ ಸ್ಥಾನವನ್ನು ಪ್ರಪಂಚದ ಎಲ್ಲ ಧರ್ಮಗಳೂ ಕೊಟ್ಟಿರುವುದು. ಎಲ್ಲ ನಿಯಮಗಳಿಗೂ ಅಪವಾದವಿರುತ್ತದೆ ಹಾಗೂ ಎಲ್ಲ ಗುಣಗಳಲ್ಲೂ ಒಂದು ಬಗೆಯ ಸ್ಪೆಕ್ಟ್ರಂ ಪ್ರಕೃತಿಯಲ್ಲಿ ಇರುತ್ತದೆ. ಕಡುಗಪ್ಪು ಬಣ್ಣದಿಂದ ಕಡುಕೆಂಪು ಬಣ್ಣದ ಮನುಷ್ಯರಿಲ್ಲವೇ ಹಾಗೆ; ಬೆಳಕಿನಲ್ಲಿ ಒಂದು ತುದಿಯಿಂದ ಮತ್ತೊಂದಕ್ಕೆ ಬಣ್ಣಗಳು ಕ್ರಮೇಣ ಬದಲಾಗುವುದಿಲ್ಲವೇ ಹಾಗೆ. ಆದರ್ಶ ತಾಯಿಯರು ಒಂದು ತುದಿಯಲ್ಲಿದ್ದರೆ ಭಾವನಾ ರಹಿತ ತಾಯಂದಿರು ಇನ್ನೊಂದು ತುದಿಯಲ್ಲಿರುವುದು ಸಾಧ್ಯ ಆದರೆ ಇದು ಅಪರೂಪ.ಗಂಡಸರಂತೆ ಯೋಚಿಸುವ, ವ್ಯವಹರಿಸುವ ತಾಯಂದಿರೂ ಇರುವುದು ಸಾಧ್ಯ ;ವೃಂದಾ ಪ್ರಾಯಶಃ ಈ ಗುಂಪಿಗೆ ಸೇರಿರಬಹುದು. ಇಂತಹವರು ಮಕ್ಕಳನ್ನು ಕುರಿತು ಯೋಚಿಸುವುದಿಲ್ಲ. ವೈಜ್ಞಾನಿಕವಾಗಿ ,ತರ್ಕಬದ್ಧವಾಗಿ ಪರಿಸ್ಥಿತಿಯನ್ನು ವಿಶ್ಲೇಷಿಸಿದರೂ ಕೂಡಾ ಒಂದೇ ವ್ಯಕ್ತಿಯಲ್ಲಿ ಸರತಿಯಂತೆ ಈ ಎರಡೂ ಬಗೆಯ ಗುಣಗಳು ಮೇಳೈಸಿರುವುದು, ವ್ಯಕ್ತಗೊಳ್ಳುವ ಪರಿ ಅವರೂ ಮೊದಲು ನೋಡಿದ್ದು. ಈ ರೀತಿಯ ಉದಾಹರಣೆಗಳು ವೈದ್ಯಕೀಯ ಸಾಹಿತ್ಯದಲ್ಲೂ ಅವರಿಗೆ ಕಂಡು ಬಂದಿಲ್ಲವಂತೆ. ಅದು ಏನೇ ಇದ್ದರೂ ಇಂತಹವರ ಆರೈಕೆಯಲ್ಲಿ ಮಕ್ಕಳ ಸಮಗ್ರ ಬೆಳವಣಿಗೆ ಅಸಂಭವ ಅಥವಾ ಕಷ್ಟ. ಹಾಗಾಗಿ ಈ ಮಗುವನ್ನು ಅವರು ತೊರೆದದ್ದು ಒಂದು ಬಗೆಯಲ್ಲಿ ಒಳ್ಳೆಯದೇ ಆಯಿತು. ಇದು ದೇವರು ಕೊಟ್ಟ ವರ ಎಂದೇ ತಿಳಿಯಿರಿ ಎಂದು ಆಕೆ ನುಡಿದ್ದಲ್ಲದೆ ಅವರು ಕೊಟ್ಟಿರುವ ವಿವರಗಳು ಬಹುತೇಕ ನಿಜವಾದರೂ ಅವರ ಹೆಸರು ,ವಿಳಾಸಗಳನ್ನು ಉದ್ದೇಶಪೂರ್ವಕವಾಗಿ ಮರೆ ಮಾಚಿದ್ದಾರೆ. ದಿನ ಪೂರ್ತಿ ನೂರಾರು ರೋಗಿಗಳನ್ನು ನೋಡುವ ನಮಗೆ ಈ ವಿವರಗಳ ಸತ್ಯಾಸತ್ಯತೆ ಕೆದಕುವ ಗೊಡವೆಯಾಗಲೀ , ಸಮಯವಾಗಲೀ ಇರುವುದಿಲ್ಲ. ನಂಬಿಕೆಯ ಮೇಲೆ ವ್ಯವಹಾರ ನಡೆಯುತ್ತಿರುತ್ತದೆ. ಆದರೆ, ’ಆದದ್ದೆಲ್ಲಾ ಒಳಿತೇ ಆಯಿತು’ ಎಂದುಕೊಂಡು ಮುಂದುವರಿಯಿರಿ. ಆಕೆ ತನ್ನ ಹೆಸರು ಊರು ಬದಲಾಯಿಸಿಕೊಂಡು ಮತ್ತೇನೋ ಸಾಧನೆಯಲ್ಲಿ ತೊಡಗಿರಬಹುದು. ಮಗುವಿಗೂ ,ಅದರ ನೂತನ ತಂದೆ-ತಾಯಿಗಳಿಗೂ ಶುಭವಾಗಲಿ ಎಂದು ಹಾರೈಸಿದ್ದಲ್ಲದೆ ಉಳಿದಂತೆ ಯಾವ ಖಾಯಿಲೆ ಕಸಾಲೆಗಳೇನೂ ವೃಂದಾಳಲ್ಲಿ ಕಾಣಿಸದ್ದರಿಂದ ಎಲ್ಲಾ ಒಳ್ಳೆಯದಾಗುವುದೆಂಬ ಭರವಸೆ ನೀಡಿ ನಮ್ಮನ್ನು ಬೀಳ್ಕೊಟ್ಟರು. ಇಷ್ಟು ಹೇಳಿ ಸುಧಾಕರ ತಮ್ಮ ಮಾತು ನಿಲ್ಲಿಸಿದರು.
ಎಲ್ಲರೂ ಮೌನದಿಂದಿದ್ದರು. ರಮ್ಯಾ ತಲೆ ತಗ್ಗಿಸಿಕೊಂಡೇ ಮಾತುಗಳನ್ನು ಕೇಳುತ್ತಿದ್ದರು.ಶಕುಂತಲಾ ತಲೆಯೆತ್ತಿ ನೋಡಿದರೂ ಏನೂ ಮಾತನಾಡದೆ ಸುಮ್ಮನೆ ಕುಳಿತಿದ್ದಳು.ಎಲ್ಲ ವಿಚಾರಗಳು ಮನದಾಳಕ್ಕೆ ಇಳಿಯುವವರೆಗೆ ಸುಮ್ಮನೆ ಕುಳಿತಿದ್ದು ಸುಧಾಕರ ಮುಂದುವರಿದು ” ನೋಡು ಮಗೂ ಮನಸ್ಸೊಂದು ಹಾಲಿನ ಕಡಲು. ಸಮಸ್ಯೆ ಎಂಬ ಮಂದಾರ ಪರ್ವತವನ್ನು ಚಿಂತನೆ ಅಥವಾ ಜಿಜ್ಞಾಸೆಯೆಂಬ ಹಾವಿನಿಂದ ಸುತ್ತಿ ಸತ್ಯ-ಮಿಥ್ಯ, ವಾಸ್ತವ -ಕಾಲ್ಪನಿಕ ಎಂಬುವ ದೇವ ದಾನವರುಗಳಿಂದ ಮಂಥನ ನಡೆಸಿದಾಗ ಮೊದಲು ಬರುವುದು ಕಹಿಯಾದ ವಿಷವೇ. ಅದನ್ನು ನೀಲಕಂಠನಂತೆ ಗಂಟಲಲ್ಲಿ ಇಳಿಸಿಕೊಂಡು, ಸಂಭಾಳಿಸಿಕೊಂಡು ಮುನ್ನಡೆದಾಗಲೇ ಅಮೃತದ ದರ್ಶನ ಆಗುವುದು. ಆದ್ದರಿಂದಲೇ ಇಂದು ಸಮಯ ಪ್ರಶಸ್ತವೆಂದು ಬಗೆದು ಈ ವಿಚಾರವನ್ನೆಲ್ಲ ಬಿಚ್ಚಿಟ್ಟೆ ಅಷ್ಟೇ” ಎಂದರು.
ತಲೆದೂಗಿದ ಶಕುಂತಲೆ,”ಅಪ್ಪಾಜಿ ಈ ಚಿಂತನ ಮಂಥನದಲ್ಲಿ ನನಗೆ ವಿಷಯ ಸಿಕ್ಕಿತೇ ವಿನಃ ಯಾವ ವಿಷದ ದರ್ಶನವೂ ನನಗಾಗಲಿಲ್ಲ. ನಿಮ್ಮಿಬ್ಬರ ವಾತ್ಸಲ್ಯದ ಅಮೃತ ನನ್ನ ಬಳಿ ಇರುವಾಗ ಬೇರೆ ಯಾವುದರ ಹಂಗೂ ನನಗೆ ಬೇಕಾಗಿಯೇ ಇಲ್ಲ. ಆ ವಿಶ್ವಾಮಿತ್ರ-ಮೇನಕೆಯರ ಮಗಳಲ್ಲ ಈ ಶಕುಂತಲ. ಅಂದಿಗೂ, ಇಂದಿಗೂ ಇನ್ನೆಂದಿಗೂ ನಿಮ್ಮಿಬ್ಬರ ಮುದ್ದಿನ ಮಗಳೇ ಎಂದು ರಮ್ಯ-ಸುಧಾಕರರನ್ನು ಅಪ್ಪಿದಾಗ ಆನಂದಾಶ್ರುಗಳು ತುಂಬಿದ ಅವರ ಕಣ್ಣುಗಳಿಗೆ ಪ್ರೀತಿಯ ಅನುಭವದ ಹೊರತು ಬೇರೇನೂ ಕಾಣಿಸುತ್ತಿರಲಿಲ್ಲ.

ಡಾ.ಸುದರ್ಶನ ಗುರುರಾಜರಾವ್.

ತಾಜಾ ಮಹಲ್

ತಾಜಾ ಮಹಲ್

ತಾಜಾ ಮಹಲ್

ದಿನ ರಾತ್ರಿಯು ಸ್ವಪ್ನದಲ್ಲಿ
ಮಮತಾಜಳು ನಗೆಯ ಚೆಲ್ಲಿ
ತಾಜಮಹಲು ಬಳಿಗೆ ನೀನು ಬಾರೊ ಎನ್ನುತ
ಆಗ್ರಹವನು ಮಾಡಲಾಗಿ
ನಿಗ್ರಹವನು ವಿಜಯ ನೀಗಿ
ಒಂದು ದಿನ ಹೊರಡಲೆಂದು ಸಿದ್ಧನಾಗುತ

ಮಡದಿಗದನು ಹೇಳದಂತೆ
ಹೆಜ್ಜೆ ಕಳ್ಳ ಬೆಕ್ಕಿನಂತೆ
ಇಡುತ ತನ್ನ ಗಂಟು ಮೂಟೆ ಕಟ್ಟತೊಡಗಿದ

ವಿಜಯನ ನಡವಳಿಕೆ ಕಂಡು
ಮಡದಿ ಅನುಮಾನಗೊಂಡು
ಅವನ ಬೆನ್ನ ಬಿಡದೆ ಹಿಂದೆ ಸುತ್ತ ತೊಡಗಲು
ಇರಿಸು ಮುರಿಸು ಮಾಡಿಕೊಂಡು
ಗುಟ್ಟು ಜತನ ಕಾಯ್ದುಕೊಂಡು
ಸಮಜಾಯಿಶಿ ವಿಜಯ ಮನದೆ ಹೊಸೆದುಕೊಳ್ಳಲು

ಎಲ್ಲಿಗೀಗ ತಮ್ಮ ಪಯಣ
ಎನ್ನ ನಯನದಲ್ಲಿ ನಯನ
ಇಟ್ಟು ನಿಜವ ನುಡಿಯಿರೆಂದು ಜೋರು ಮಾಡಲು

ಕಛೇರಿ ಕೆಲಸ ನನಗೆ ಉಂಟು
ದೂರದೂರಿಗೆಂದು ಗಂಟು
ಕಟ್ಟುತಿರುವೆ ಬರಲು ವಾರ ಬೇಕು ಎನ್ನುತ
ಹೊರಟು ನಿಂತ ವಿಜಯ ಅಂದೆ
ಕರೆದೊಯ್ಯುವೆ ನಿನ್ನ ಮುಂದೆ
ಎನುತ ರಮಿಸಿ ಮಡದಿಯನ್ನು ಬೀಳುಕೊಳ್ಳುತ

ದೂರದಲ್ಲಿ ತಾಜಮಹಲು
ಕಣ್ಣಳತೆಗೆ ಕಾಣುತಿರಲು
ವಿಜಯ ತಾನೆ ಶಹಜಹಾನನಂತೆ ಬೀಗುತ
ಅಂಗಿಹೋಗಿ ಕುರ್ತವಾಯ್ತು
ತಲೆಗೆ ಗರಿಯ ಪೇಠ ಬಂತು
ಕೈಯ್ಯಲೊಂದು ಚೆಂಗುಲಾಬಿ ಹೂವು ಹಿಡಿಯುತ

ಕೊಟ್ಟ ಭಾಷೆ ಮೀರದಂತೆ
ಬಂದೆ ನಿನ್ನ ಅಣತಿಯಂತೆ
ನಿನ್ನ ಒಲವು ನನಗೆ ಈಗ ಬೇಕು ಎನ್ನುತ

ಮಮತಾಜಳ ಬಳ್ಳಿ ನಡುವ
ಬಳಸೆ ಕೈಯ್ಯ ಚಾಚಿದನವ
ಪಕ್ಕದಿ ಮಲಗಿದ್ದ ಸೀತೆ ಮುಖಕೆ ತಾಕಲು
ನಿದ್ರೆಯಲ್ಲಿ ಮಾತ ಕೇಳಿ
ಬಳಿಕ ಮುಖಕೆ ಹಸ್ತ ತಗುಲಿ
ಮಗ್ಗುಲು ಬದಲಿಸಿದ ಸೀತೆ ಎಚ್ಚರಾಗಲು

ಸ್ಲೋ ಮೋಷನ್ ಮೂವಿಯಂತೆ
ಗಾಳಿಯಲ್ಲಿ ತೇಲುವಂತೆ
ಕಾಲು ಕೈಯ್ಯನಾಡಿಸುತ್ತ ಮಡದಿಗೊದೆಯಲು
ಮೊದಲು ಮಾತು ಕೇಳುತಿತ್ತು
ಇದೇನಿಂಥ ಒದೆತ ಬಿತ್ತು
ಎಂದು ಸೀತೆ ನಿದ್ರೆಯಿಂದ ಎದ್ದು ನೋಡಲು

ಹಾವ ಭಾವ ಮಾಡಿಕೊಂಡು
ಜೊ.. ವಾ..ದಾ ಕಿ.ಯಾ ಎಂದು
ಕನಸು ಕಾಣುತಿದ್ದ ವಿಜಯ ತನಗೆ ಕಾಣಲು
ಮಮತಾಜಳ ಹೆಸರು ಕೇಳಿ
ಕೆಟ್ಟ ಕುತೂಹಲವು ಕೆರಳಿ
ಕನಸಿನಾಟವನ್ನು ಸೀತೆ ಗಮನಿಸುತಿರಲು

ಸಿಟ್ಟು ಪಿತ್ತ ನೆತ್ತಿಗೇರಿ
ಸದ್ದು ಮಾಡದೊಳಗೆ ಸೇರಿ
ಚೊಂಬಿನಲ್ಲಿ ನೀರ ತಂದು ಮೇಲೆ ಸುರಿಯಲು
ಕೋಪ ತಣ್ಣಗಾಗದಿರಲು
ಮತ್ಸರವದು ಎದೆಯ ಸುಡಲು
ಖಾಲಿ ಚೊಂಬಿನಿಂದ ತಲೆಗೆ ಹಾಕಿ ಕುಕ್ಕಲು

ಕನಸೆ ನಿಜವು ಎಂದುಕೊಂಡು
ರಸದನುಭವ ಮನದಿ ಉಂಡು
ನಲಿಯುತಿದ್ದ ವಿಜಯ ಧಿಗ್ಗನೆದ್ದು ಕೂಡಲು
ನಿಶೆಯು ಜರ್ರನೆಂದು ಇಳಿದು
ವಾಸ್ತವತೆಯು ಮನದಿ ಸುಳಿದು
ಕಣ್ಣನುಜ್ಜಿಕೊಂಡು ತಲೆಯನೆತ್ತಿ ನೋಡಲು

ಮಮತಾಜಳ ಜಾಗದಲ್ಲಿ
ಮಡದಿ ಮುಖವು ಕಂಡಿತಲ್ಲಿ
ಕೆಂಡದಂಥ ಕಣ್ಣ ದೃಷ್ಟಿ ಕಂಡು ನಲುಗುತ
ಮೂತಿಯನ್ನು ತಿವಿಸಿಕೊಂಡು
ಮಂಗ ಮುಖವ ಮಾಡಿಕೊಂಡು
ತಡಬಡಾಯಿಸಿ ಮಾತನಾಡೆ ತಾನು ತೊದಲುತ

ಕದ್ದು ಹಾಲು ಕುಡಿದ ಬೆಕ್ಕು
ಮನೆಯಾಕೆಯ ಕೈಗೆ ಸಿಕ್ಕು
ಥಳಿಸಿಕೊಂಡು ನೀರ ಮೇಲೆ ಸುರಿಸಿಕೊಂಡೊಲು
ಕನಸಿನ ಸವಿ ಮಂಡಿಗೆ
ನನಸಿನ ಬಿಸಿ ತುಪ್ಪವಾಗೆ
ಬಾಯಿ ಸುಟ್ಟ ಬೆಕ್ಕಿನಂತೆ ಮೂತಿಮಾಡಲು

ಮಂಚದಿಂದ ಇಳಿಯಿರೆಂದು
ಹರುಕು ಚಾಪೆಯೊಂದ ತಂದು
ಕಲ್ಲಿನಂಥ ದಿಂಬು ಕೊಡುತ ಹೊರಗೆ ನೂಕಲು
ಜಗುಲಿ ಮೇಲೆ ವಿಜಯ ಮಲಗಿ
ಚಳಿಗೆ ದೇಹ ನಡುಗಿ ನಲುಗಿ
ಹರುಷಗೊಂಡ ಸೊಳ್ಳೆ ಅಲ್ಲಿ-ಇಲ್ಲಿ ಕಚ್ಚಲು

ಉರಿತ ಕೆರೆತ ತಾಳದಾಗಿ
ಕೊರೆವ ಚಳಿಯ ಸಹಿಸದಾಗಿ
ಜಗುಲಿಮೇಲೆ ತಕತಕನೆ ವಿಜಯ ಕುಣಿಯಲು
ಕರೆಯಿರಿ ಮಮತಾಜಳನ್ನು
ಓಡಿಸಲಿ ಸೊಳ್ಳೆಗಳನು
ಕಾಯುತಿರುವೆ ನಿಮ್ಮ ಸರಸ ನೋಡಿ ತಣಿಯಲು!!

ಇರುವ ಸುಖವ ಬಿಟ್ಟುಕೊಟ್ಟು
ಸಿಗದ ರಾಣಿಗಾಸೆಪಟ್ಟು
ಮರುಳು ಹಿಡಿದ ತನ್ನ ಬುದ್ಧಿ ಶಪಿಸಿಕೊಳ್ಳುತ
ಮಮತಾಜಳ ಮುಖವೆ ಕಾಣೆ
ಸೀತೆ ನೀನೆ ನನ್ನ ಜಾಣೆ
ಬಾಗಿಲನ್ನು ತೆಗಿಸೆ ರಮಿಸಿ ತಾಜಾ ಮಾಡುತ

ಬಾಗಿಲನ್ನು ಬಿಡದೆ ಬಡಿದ
ಕಿಟಕಿಯಲ್ಲಿ ಕೈಯ್ಯ ಮುಗಿದ
ಮಹಲಿನೊಳಗೆ ಬಿಟ್ಟುಕೊಳಲು ಕಾಡಿ ಬೇಡಿದ
ಅಷ್ಟರಲ್ಲಿ ಬೆಳಕು ಹರಿದು
ಸೀತೆ ಕೋಪ ತಾಪ ಇಳಿದು
ಗಂಡ ಹೆಂಡಿರವರ ಜಗಳ ಸೂರ್ಯ ಮುಗಿಸಿದ.

ಡಾ.ಸುದರ್ಶನ ಗುರುರಾಜರಾವ್

 

ಕಳೆ- ಕಳೆ

ಕಳೆ- ಕಳೆ

ಜನಪದವು ವ್ಯವಹರಿಸೆ ಬೇಕೊಂದು ಭಾಷೆಯು
ಆ ಭಾಷೆ ಬೆಳೆಯಲು ಬೇಕು ಜನಪದದೊಲವು
ಜನಪದದ ನುಡಿತೋಟ ಕಥೆ ಕಾವ್ಯ ತರು ಲತೆಯು
ನಳ ನಳಿಸೆ ಇರಬೇಕು ಅಭಿಮಾನ ಅರಿವು

ಒಟ್ಟು ಸಾವಿರದೊಂದು ಭಾಷೆಗಳ ನಡುವಿನಲಿ
ಪುಟ್ಟ ಉದ್ಯಾನದೊಳ್ ಇರುವ ಕನ್ನಡದ ನುಡಿಯ
ನೆಟ್ಟ ಗಿದ ಮರ ಬಳ್ಳಿ ಫಲ ಪುಷ್ಪ ನೀಡಲು
ತೋಟ ಮಾಲಿಯು ಅದಕೆ ನೀನಾಗು ಗೆಳೆಯ

ಪಂಪ ಕಟ್ಟಿದ ತೋಟ ರನ್ನ ಬೆಳೆಸಿದ ತೋಟ
ಜನ್ನ ಹರಿಹರ ಪೊನ್ನ ರಾಘವಾಂಕರ ತೋಟ
ಗದುಗಿನಾ ನಾರಣನು ನೀರನೆರೆದಿಹ ತೋಟ
ಮುದ್ದಣ ಮನೋರಮೆಯರ್ ವಿಹರಿಸಿದ ತೋಟ

ಶರಣರರಸಿದ ತೋಟ ದಾಸರೊಲುಮೆಯ ತೋಟ
ಗೊರವ ಜಂಗಮ ಜೋಗಿ ಜಾನ ಪದಗಳ ತೋಟ
ಸರಸ್ವತಿಯ ವರತೋಟ ವರಕವಿಗಳಾ ತೋಟ
ಮೇರು ಕೃತಿಗಳು ಮೆರೆವ ಮನಸೆಳೆವ ತೋಟ

ಕಬ್ಬಿಗರ ಕೈತೋಟ ಅಬ್ಬರವಿರದಾ ತೋಟ
ಕಬ್ಬ ಕಾವ್ಯಗಳ ಹಗ್ಗದುಯ್ಯಾಲೆ ತೋಟ
ಇಬ್ಬನಿಯ ತಂಪೆರೆವ ಸಹೃದಯರಾ ತೋಟ
ಹಬ್ಬದೂಟವ ದಿನವು ಬಡಿಸುತಿಹ ತೋಟ

ಕಬ್ಬಿನಾ ಸಿಹಿರಸವು ಕಬ್ಬಗಳಲ್ಲಿಹ ತೋಟ
ತಬ್ಬಿದರೆ ಮನದೆಲ್ಲ ಮಬ್ಬು ಕಳೆಯುವ ತೋಟ
ನಿಬ್ಬೆರೆಗು ಮಾಡುವಂತಿರುವ ಸುಂದರ ತೋಟ
ಅಬ್ಬೆಯರು ಮಮತೆಯಲಿ ಲಾಲಿ ಹಾಡಿದ ತೋಟ

ತಲ್ಲಣಿಸಿದಾ ಮನವು ತಾಯಿಯನು ಹುಡುಕೊವೊಲು
ಎಲ್ಲು ಸಿಗದಿಹ ಒಲುಮೆ ಅವಳ ಮಡಿಲಿನೊಳಿರಲು
ಅಲ್ಲಿ ತಲೆಯನ್ನಿಟ್ಟು ನೋವ ನೀ ಮರೆಯುವೊಲು
ಬಲ್ಲವನೆ ಬಲ್ಲನೋ ಕನ್ನಡದ ಜೇನ್ಹೊನಲು

ಮನೆಯೊಳಾಡುವ ಭಾಷೆ ಮನವನಾಳುವ ಭಾಷೆ
ಕನ್ನಡದ ನಲ್ನುಡಿಯು ಚೆಲುವು ಮರೆದಿಹ ಭಾಷೆ
ಅನ್ನ ನೀಡದಿದೆಂದು ತೊರೆಯದಿರು ನಿನ ಭಾಷೆ
ನಿನ್ನ ನೀನರಿತರೆ ಮೂಡದಾ ಕ್ಲೀಷೆ

ಜೀವನದ ಓಟದಲಿ ಬೇಕುಗಳ ಬೆನ್ಹಿಡಿದು
ಬೇಕುಗಳ ಕಣ್ಪಟ್ಟಿ ಕಟ್ಟಿ ಓಡುತ ನವೆದು
ಜೀಕುತಲಿ ನೋಡದಲೆ ಕನ್ನಡದ ತೋಟ
ಸಾಗಿದರೆ ಕಾಣದೆಲೊ ವಿಹಂಗಮ ನೋಟ

ತೋಟದಂಚಿನಲೆಲ್ಲೊ ಬೆಳೆದಿದ್ದ ಕಳೆ ಹುಲ್ಲು
ನೋಟವನು ತಪ್ಪಿಸುತ ಒಳನುಗ್ಗುತಿಹುದಲ್ಲೊ
ದಿಟವಾಗಿ ಕಿತ್ತೆಸೆದು ತೊಡೆಯದಿರೆ ನೀನು
ಕಾಟಕ್ಕೆ ಗಿಡ-ಬಳ್ಳಿ ಸೊರಗದಿಹವೇನು?

ಆಂಗ್ಲ ಭಾಷೆಯ ಕಳೆಯು ಕನ್ನಡದಿ ಬೆರೆತಿರಲು
ಆಮ್ಗ್ಲೆ ಪದಗಳೆ ನಮ್ಮ್ಮ ಮಾತೆಲ್ಲ ತುಂಬಿರಲು
ಕಳೆ ಬೆಳೆದ ತೋಟದಂತೆಮ್ಮ ನುಡಿ ಸೊರಗಿರಲು
ಗೆಳೆಯ ಬಾ ನೀ ಜೊತೆಗೆ ಕಳೆಯ ಕಿತ್ತೆಸೆಯಲು

ಕನ್ನಡವ ನುಡಿವಲ್ಲಿ ಶುದ್ಧ ಕನ್ನಡ ನುಡಿದು
ಕನ್ನಡದ ಪದಸಿರಿಯ ಮನದಾಳದಿಂದಗೆದು
ಕನ್ನಡವ ಕನ್ನಡಗ ಸೊಗಡಿನಲೆ ಬಳಸಿದರೆ
ಕನ್ನಡದ ತೋಟದೊಳ್ ಹರಿಯದೇ ಶುಭ್ರತೊರೆ?

ಕನ್ನಡದ ನುಡಿತೋಟ ನಿನ ಸೇವೆ ಬೇಡುತಿದೆ
ಮನ್ನಿಸು ಈ ನನ್ನ ಕೋರಿಕೆಯ ಗೆಳೆಯ
ನಿನ್ನ ಮನೆಯಲಿ ಎಂದು ನೀನಾಡೊ ಮಾತಿನಲಿ
ಕನ್ನಡದ ಪದಗಳನೆ ಬಿಡದೆ ಬಳಸುವೆಯಾ?

ಡಾ. ಸುದರ್ಶನ ಗುರುರಾಜರಾವ್

Nanna Parichaya

ಸುದರ್ಶನ ಗುರುರಾಜರಾವ್ ನನ್ನ ಹೆಸರು. ವೃತ್ತಿಯಿಂದ ವೈದ್ಯಅರಿವಳಿಕೆ ತಜ್ಞ.

ಕರ್ನಾಟಕದ ಬಳ್ಳಾರಿ,ಶಿವಮೊಗ್ಗ,ತುಮಕೂರು, ಬೆಂಗಳೂರು ಜಿಲ್ಲೆಗಳ ಹಳ್ಳಿಗಳಲ್ಲಿ ಪ್ರಾಥಮಿಕ, ಮಧ್ಯಮ ಹಾಗು ಪ್ರೌಢ ಶಿಕ್ಷಣ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರು ವೈದ್ಯಕೀಯ ವಿದ್ಯಾಲಯದಲ್ಲಿ ವೈದ್ಯಕೀಯ ತರಬೇತಿ ಮುಗಿಸಿ ಚಂಡೀಗಢದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ಇಂಗ್ಲೆಂಡಿನಲ್ಲಿ ಅರಿವಳಿಕೆ ತಜ್ಞನಾಗಿ ಕೆಲಸ ಮಾಡುತ್ತಿದ್ದೇನೆ.

ಪ್ರವೃತ್ತಿಗಳು ಹಲವು. ಸಾಹಿತ್ಯ, ಲಘು ಸಂಗೀತ, ವಿಜ್ಞಾನ, ಗಣಿತ,ಕುರಿತ ವಿಷಯಗಳನ್ನು ಕುರಿತು ಓದುವುದು. ಕಲಿಕಾಕ್ರಮ ಹಾಗು ಬೋಧನೆ,ಭಾರತೀಯ ಸಂಸ್ಕೃತಿ, ತತ್ವಶಾಸ್ತ್ರ, ಪುರಾಣಗಳಲ್ಲಿ ನನಗೆ ಆಸಕ್ತಿ ಉಂಟು. ನನಗೆ ದಾಸ ಸಾಹಿತ್ಯ ಬಹಳ ಇಷ್ಟ. ಅಲ್ಲಮನ ವಚನಗಳನ್ನು ಕುರಿತು ಅಭ್ಯಾಸ ಮಾಡುವ ಅಭಿಲಾಷೆ ಇದೆ.

ಇತ್ತೀಚೆಗೆ ಸ್ನೇಹಿತರ ಪ್ರೋತ್ಸಾಹದಿಂದ ಕಥೆ, ಕವನ, ಹರಟೆ ಮೊದಲಾದ ಲೇಖನಗಳನ್ನು ಬರೆಯುತ್ತಿದ್ದೇನೆ.

ಎಸ್.ಎಲ್.ಭೈರಪ್ಪ ನನ್ನ ಅತಿ ಮೆಚ್ಚಿನ ಲೇಖಕರು. ಡಿ.ವಿ.ಜಿ, ಎ.ಆರ್. ಕೃಷ್ಣಶಾಸ್ತ್ರಿ, ಪಂಜೆ ಮಂಗೇಶರಾಯರು ನನ್ನ ಮೆಚ್ಚಿನ ಲೇಖಕರು. ಕು.ವೆಂ.ಪು ಅವರ ಕವನಗಳು ಮತ್ತು ಲಯ ನನಗೆ ಇಷ್ಟವಾದ ಪ್ರಾಕಾರ.ಕುಂ.ವೀರಭದ್ರಪ್ಪ ಮತ್ತು ಕೆ.ಎನ್.ಗಣೇಶಯ್ಯ ಹೊಸ ತಲೆಮಾರಿನ ಲೇಖಕರಲ್ಲಿ ನನಗೆ ಇಷ್ಟವಾದವರು.

ಪಿ.ಬಿ.ಶ್ರೀನಿವಾಸ್ ನನ್ನ ಮೆಚ್ಚಿನ ಗಾಯಕ ಹಾಗು ಎಸ್. ಜಾನಕಿ ನನ್ನ ಮೆಚ್ಚಿನ ಗಾಯಕಿ. ಕನ್ನಡ ಹಳೆಯ ಹಾಡುಗಳು ನನ್ನ ಗುಂಗು.

ಇಂಗ್ಲಿಷಿನ ವಿಷಯಕ್ಕೆ ಬಂದರೆ, ಅಯ್ನ್ ರ್ಯಾಂಡ್ ನನ್ನ ಮೆಚ್ಚಿನ ಲೇಖಕಿ.

ತನು ಕನ್ನಡ ಮನ ಕನ್ನಡ ನುಡಿ ಕನ್ನಡ ಎನ್ನವು!!!

ಹುಡುಗ ಮತ್ತು ಮರ

 

ಹುಡುಗ ಮತ್ತು ಮರ

ಬೆಟ್ಟದಾ ತಪ್ಪಲಲಿ ಸುಂದರ ಬಯಲೊಂದು

ಬಯಲ ಮಧ್ಯದಲಿತ್ತು ಒಂದು ಮರವು

ಕೂಗಳತೆ ದೂರದಲಿ ಪುಟ್ಟದೊಂದು ಮನೆಯು

ಮನೆಯ ಕಣ್ಮಣಿಯಾಗಿ ಗಂಡು ಮಗುವು

ತಂದೆ ತಾಯಿಯರೆಂದು ಹೊಲದಲ್ಲಿ ದುಡಿದಿರಲು

ದುಡಿಯುವಾ ಸಮಯದಲಿ ಪುಟ್ಟ ಮಗುವು

ಮರದ ಬಳಿಯಲಿ ಬಂದು ಆಟವಾಡುತಲಿರಲು

ಆಟ ಪಾಠವ ಕಂಡು ನಲಿದು ಮರವು

ತನ್ನ ಮೌನವ ಮುರಿದು ಮಾತುಗಳನಾಡುತಲಿ

ಮಾತು ಬಾರದ ಕಂದಗದನು ಕಲಿಸಿ

ಹಸಿವಿಂದ ಮಗುವೆಂದು ಬಳಲಿದರೆ ಅದ ಕಂಡು

ಬಳಲಿಕೆಯ ಮರೆಸುಸುವುದು ಹಣ್ಣ ತಿನಿಸಿ

ದಿನಮಾಸ ಉರುಳಿರಲು ಮಗುವು ತಾ ಬೆಳೆದಿರಲು

ಬೆಳೆವ ಮಗುವನು ಕಂಡು ಮರವು ನಲಿದು

ಮಗುವಿಗೀಯುತ ನೆರಳು ಹಣ್ಣು ಬಲು ರುಚಿಯಿರಲು

ಬೆಳೆಸಿತ್ತು ತನ್ನೆದೆಯ ಸಾರ ಬಸಿದು

ಬೆಳೆದ ಬಾಲಕನಾಗಿ ಮರದ ಬಳಿ ಬಂದೊಂದು

ದಿನ ಮುಖವ ಬಾಡಿಸುತ ಕುಳಿತು ಕೊಳಲು

ದುಗುಡ ತಾಳಿದ ಮರವು ಬಾಲಕನ ಬೇಸರಕೆ

ಕಾರಣವು ಏನೆಂದು ತಾ ಕೇಳಲು

ಹಣ್ಣುಗಳು ಸಾಕಾಯ್ತು ತಿಂದು ಬೇಸರವಾಯ್ತು

ಬರಿಮಾತು ನಿನ್ನೊಡನೆ ದಿನವೆಲ್ಲವೂ

ದಿನ ದಿನಕು ಹೊಸ ಆಟ ಪಾಠಗಳು ಬೇಕೆಂದು

ಪರಿತಪಿಸಿ ಕಾಡುತಿದೆ ನನ್ನ ಮನವು

ಬಾಲಕನ ಅಭಿಲಾಷೆಯನ್ನು ಮರ ಅರಿಯುತಲಿ

ಅರಿಕೆ ಮಾಡಿತು ಅವಗೆ ಪ್ರೀತಿಯಿಂದ

ನನ್ನ ಕೊಂಬೆಗೆ ಗಟ್ಟಿ ಹಗ್ಗವನು ನೀ ಕಟ್ಟಿ

ಆಡುತಿರು ಉಯ್ಯಾಲೆ ಹರುಷದಿಂದ

ಮರದ ತ್ಯಾಗದ ಅರಿವಿ ಇಲ್ಲದೆಯೆ ಬಾಲಕನು

ಸುಖಕಾಗಿ ವೃಕ್ಷದಾ ತೋಳನ್ನು ಬಳಸಿ

ಉಯ್ಯಾಲೆಯಲಿ ಕುಳಿತು ಆಡಿದನು ತೂಗಿದನು

ದೇಹ ಮನಸುಗಳನ್ನು ಏರಿಸುತ ಇಳಿಸಿ

ರೆಂಬೆ ಕೊಂಬೆಗಳೆಲ್ಲ ಜಗ್ಗಿ ಮೈ ನೋವಾಗಿ

ನಲುಗಿತದು ಮರ ತಾನು ದಿನರಾತ್ರಿಯು

ಮರದ ಪರಿವೆಯೆ ಇರದ ಬಾಲಕನು ಅನುದಿನವು

ಆಡುತಲಿ ನಲಿದಿದ್ದ ಪ್ರತಿಬಾರಿಯು

ಋತು ಚಕ್ರಗಳು ಉರುಳಿ ಕುಡಿ ಮೀಸೆಯದು ಚಿಗುರಿ

ಬಾಲಕನು ಬೆಳೆದಾದ ನವತರುಣನು

ಆಟ ಪಾಠಗಳವಗೆ ರುಚಿಸದಿರೆ ಮರದೊಡನೆ

ಆಗ್ರಹದಿ ಹಣಕಾಗಿ ಕೇಳುತಿಹನು

ನನ್ನ ಬಳಿ ಬಹಳಿರುವ ಹಣ್ಣುಗಳ ನೀ ಕೊಯ್ದು

ಪಟ್ಟಣಕೆ ಕೊಂಡೊಯ್ದು ವಿಕ್ರಯಿಸಲು

ಸಿಗಬಹುದು ಬಹಳ ಹಣ ನೀ ಒಂದು ಕೈ ನೋಡು

ಎಂದು ಆ ಮರಹೇಳಿ ಸಂಭ್ರಮಿಸಲು

ಹಣ್ಣುಗಳ ಕೊಯ್ಯುತಲಿ ಯುವಕ ತಾ ತವಕದಲಿ

ಕೊಂಡೊಯ್ದ ಪಟ್ಟಣಕೆ ಮಾರಿ ಬರಲು

ಹಣಗಳಿಸಿ ಮರಳಿದನು ಸಿಹಿತಿನಿಸು ತಿನ್ನುತಲಿ

ಮರಕೇನು ಬೇಕೆಂದು ಕೇಳದಿರಲು

ತನಗೇನು ಬೇಕಿಲ್ಲ ಭೂ ತಾಯಿ ಪೊರೆದಿಹಳು

ನೀನು ಸಂತಸ ಪಡಲು ನನಗೆ ಸಾಕು

ಗೆಳೆಯನಾ ಸುಖವೆನ್ನ ಸುಖದಂತೆ ಸಂಭ್ರಮಿಸಿ

ಮರಗಳಿಸಿ ಪುಣ್ಯವನು ಇಹಕು ಪರಕು

ಯುವಕಗಾಯಿತು ಮದುವೆ ಮುಂದೆ ಮಕ್ಕಳುಗಳು

ಸಂಸಾರ ಬೆಳೆದಿತ್ತು ದೊಡ್ಡದಾಗಿ

ಮನೆ ಚಿಕ್ಕದೆನಿಸಿರಲು ವಿಸ್ತರಿಸೆ ಮನೆಯನ್ನು

ಕೇಳಿದನು ಮರದ ಬಳಿ ಹಲಗೆಗಾಗಿ

ಕೆಳಗಿನಾ ಕೊಂಬೆಗಳು ಅಗಲ ಇರುವವು ಬಹಳ

ನೀ ಕಡಿಯೆ ಸಿಗುವವು ಬಹಳ ಹಲಗೆ

ಮನೆ ದೊಡ್ಡದಾದಂತೆ ಮನಸು ಮುದುಡುವುದೆಂಬ

ಮಾತನ್ನು ಮರೆಯಬೇಡೆಂದು ಕೊನೆಗೆ

ವಾರ ಮಾಸಗಳಾಗಿ ಯುವಕನಾ ಕುರುಹಿರದೆ

ಒಂದು ದಿನ ಕುಳಿತನವ ಮರದೆಡೆಗೆ ಬಂದು

ಜೋಲು ಮೋರೆಯ ಕಂಡು ಮರವು ತಾ ಬಲು ನೊಂದು

ಕೇಳಿರಲು ಅವನ ಕ್ಲೇಶವದೇನೆಂದು

ಖರ್ಚು ಬೆಳೆಯುತಲಿಹುದು ನಿನ್ನ ಹಣ್ಣುಗಳಿಂದ

ನೀಸದಾಗದು ನನ್ನ ಸಂಸಾರವನ್ನು

ಕೊಡು ನಿನ್ನ ಬೊಡ್ಡೆಯನು ನಾ ಕಟ್ಟಿ ಹಡಗನ್ನು

ದುಡಿಯುತಲಿ ಮಾಡುವೆನು ವ್ಯಾಪಾರವನ್ನು

ಇಷ್ಟು ಮಾಡಿದ ನಾನು ಅಷ್ಟನ್ನೂ ಮಾಡದಿರೆ

ನಮ್ಮ ಸ್ನೇಹಕೆ ಇರುವ ಅರ್ಥವೇನು

ಕಡಿದು ನೀ ನನ್ನನ್ನು ಕಟ್ಟು ಕನಸಿನ ಹಡಗು

ದುಡಿದು ನೀ ಅನುಭವಿಸು ಸಿರಿತನವನು

ವರ್ಷಗಳು ಉರುಳಿದವು ಯುವಕ ಮರಳಿದ

ಮನೆಗೆ ಗಳಿಸುತ್ತ ಅಪಾರ ಧನರಾಶಿಯ

ಸಂಸಾರದೊಡಗೂಡಿ ಅನುಭವಿಸಿ ಸಿರಿತನವ

ಮರೆತಿರಲು ತ್ಯಾಗಮಯಿ ಮರದ ಇರುವ

ವೃಧ್ಧಾಪ್ಯ ಆವರಿಸಿ ದೇಹ ತಾ ಹಣ್ಣಾಗಿ

ಹೆಂಡತಿಯು ತ್ಯಜಿಸಿರಲು ಇಹಲೋಕವ

ಮಕ್ಕಳೆಲ್ಲರು ತಮ್ಮ ವ್ಯವಹಾರದಲಿ ಮುಳುಗಿ

ಕೆಡೆಗಣಿಸಿರಲು ಈ ಮುದುಕನಿರುವ

ಒಂಟಿತನವದು ಕಾಡಿ ಮನಸು ಮುದುಡುತಲಿರಲು

ಆಗಾಯ್ತು ಅವನಿಗಾ ಮರದ ನೆನಪು

ಮನದಲ್ಲಿ ಬೆಳಕೊಂದು ಹೊಳೆದಂತೆ ನಡೆದಿರಲು

ಹೆಜ್ಜೆಗಳಿಗಂದಿತ್ತು ಹೊಸದೆ ಹುರುಪು

ಕತ್ತರೈಸಿದಾ ಬೊಡ್ಡೆ ಹಾಗೆಯೇ ಉಳಿದಿತ್ತು

ಕುಳಿತುಕೊಳ್ಳಲು ಕಲ್ಲು ಹಾಸಿನಂತೆ

ಮುದುಕನನು ಕಂಡಾಗ ನಸು ನಗುತ

ಸ್ವಾಗತಿಸಿ ಹೇಳಿತ್ತು ತನಮೇಲೆ ಕುಳ್ಳುವಂತೆ

ಕೊಡುವುದನು ಕಲಿಯದಲೆ ಬರಿದೆ ಕೇಳುತ ತನ್ನ

ಜೀವನವನ್ನೆಲ್ಲ ಬಸಿದ ಮುದುಕ

ಒಂದು ಘಳಿಗೆಯು ತನ್ನ ಮನದಲ್ಲಿ ಸಂತೋಷ

ಅನುಭವಿಸದೆಯೆ ಕಳೆದ ತನ್ನ ಬದುಕ

ಪರರ ಬೇಡಿಕೆಗಳಿಗೆಂದು ಸ್ಪಂದಿಸುತ ತನ್ನ

ತಾನೇ ಅವಗೆ ಧಾರೆ ಎರೆದು

ಮರತಾನು ಬದುಕಿತ್ತು ಬೊಡ್ಡೆಯಾ ಸ್ಥಿತಿಯಲ್ಲಿ

ಜಗದೆಲ್ಲ ಸಂತೋಷ ಸೂರೆ ಹೊಡೆದು.!!

ಡಾ. ಸುದರ್ಶನ ಗುರುರಾಜರಾವ್

ಚಂದ್ರ ವಂಶ

ಚಂದ್ರ ವಂಶ
ಮಹಾಭಾರತದ ಕಥೆ ಬಹಳ ಸುಂದರ, ಸಂಕೀರ್ಣ ಹಾಗೂ ಆಸಕ್ತಿಕರ. ಸಾಮಾನ್ಯವಾಗಿ ಶಂತನುವಿನಿಂದ ಕಥೆ ಹೇಳುತ್ತಾರೆ. ಮಹಭಾರತದ ತಿರುಳು ಅಲ್ಲಿಯೇ ಇದ್ದರೂ ವಂಶಪಾರಂಪರ್ಯವಾಗಿ ಆದ ತಪ್ಪುಗಳು ಕೆಲವು ಸಾರಿ ಮುಂದಿನ ತಲೆಮಾರುಗಳ ಕಷ್ಟ ಕೋಟಲೆಗಳಿಗೆ ಕಾರಣವಾಗುವುದು ಅನುಭವವೇದ್ಯ. ಮಹಾಭಾರತ ಕಥೆಯ ಮೂಲ ಪುರುಷ ಚಂದ್ರ. ಗುರುಪತ್ನಿಯನ್ನೇ ಕಾಮಿಸಿದ ಇವನು ಮುಂದಿನ ಬಹಳಷ್ಟು ಅನರ್ಥಗಳಿಗೆ ಮುನ್ನುಡಿಯನ್ನೆ ಬರೆದ. ಲಭ್ಯವಿರುವ ವಿವರಗಳಿಂದ ಎಲ್ಲ ಪೂರ್ವಜರ ಹೆಸರುಗಳನ್ನು ಸೇರಿಸಿ ಈ ಚಂದ್ರವಂಶಾವಳಿಯನ್ನು ಕವಿತೆಯ ರೂಪದಲ್ಲಿ ರಚಿಸಿದ್ದೇನೆ. ನನಗೆ ಸಿಕ್ಕ ವಿವರಗಳಲ್ಲಿ ಕೆಲವು ಅಪೂರ್ಣವಿರಬಹುದು ಅಥವಾ ತಪ್ಪುಗಳು ಇರಬಹುದು. ಈ ನಿಟ್ಟಿನಲ್ಲಿ ಮುಂದೆ ವಿವರಗಳು ಸಿಕ್ಕಲ್ಲಿ ಸೂಕ್ತ ಬದಲಾವಣೆಗಲನ್ನು ಮಾಡುವ ಅಭಿಲಾಷೆ ನನ್ನದು.

ಆದಿಯಲಿ ವಿಷ್ಣು ಹಾಲ್ಗಡಲಿನಲ್ಲಿರಲು
ಅವನ್ ಹೊಕ್ಕುಳ ಬಳ್ಳಿ ಬೆಳೆದು ಅರಳಿರಲು
ಕಮಲಾಸನನಾಗಿ ಬ್ರಹ್ಮ ಉದಯಿಸಲು
ಸೃಷ್ಟಿ ಕಾರ್ಯಕೆ ಬ್ರಹ್ಮ ಮೊದಲು ಮಾಡಿರಲು

ಮೊದಲು ಮೂವರು ಮಾನಸ ಪುತ್ರರುದಿಸಿದರು
ಸ್ವಯಂಭು ಮೊದಲಾಗಿ ದಕ್ಷ ಅತ್ರಿಯರು
ದೇವ ದಾನವ ಮರ್ತ್ಯ ಲೋಕಗಳು ಮೂರು
ಪ್ರತಿಯೊಂದು ಲೋಕದಲಿ ಒಬ್ಬಬ್ಬರು

ಸ್ವಯಂಭುವಿನ ಪುತ್ರ ಪ್ರಿಯಂವರ್ತನು
ಊರ್ಜಸ್ವತಿಯ ತಾ ವರಿಸಿರ್ದನು
ದಾಂಪತ್ಯದಾ ಫಲವು ನೀಡೆ ಸುತನನ್ನು
ಶುಕ್ರಚಾರ್ಯನೆಂದವನು ಹೆಸರಾದನು

ಎರಡನೆಯ ಮಾನಸ ಪುತ್ರ ದಕ್ಷ
ಇವನಿರುವ ಜಗವೆಲ್ಲ ಅಂತರಿಕ್ಷ
ದೇವಗಣದವರೆಲ್ಲರು ಇವನ ಪಕ್ಷ
ಸೂರ್ಯವಂಶಕೆ ಇವನೆ ಮೂಲವೃಕ್ಷ

ದಕ್ಷ ಅದಿತಿಯರಲ್ಲಿ ಎರಡು ಸುತರು
ಆದಿತ್ಯ- ಕಶ್ಯಪರ ಹೆಸರಿನವರು
ಆದಿತ್ಯನಿಂದಾಗಿ ಸೂರ್ಯವಂಶ
ಕಶ್ಯಪನ ಸಂತತಿಯೆ ಪ್ರತ್ಯೇಕ ಅಂಶ

ಅತ್ರಿ ಎಂಬುವ ಕಡೆಯ ಬ್ರಹ್ಮ ಮಾನಸ ಪುತ್ರ
ಚಂದ್ರ ವಂಶದ ನದಿಯ ಮೂಲ ಪಾತ್ರ
ಪತಿವ್ರತೆಯರಲ್ಲೆಲ್ಲ ಏಕಮಾತ್ರ
ಅನಸೂಯೆಯಾ ಪಡೆದ ಪುಣ್ಯ ಪಾತ್ರ

ಅತ್ರಿಯಾ ಮಗನಾಗಿ ಚಂದ್ರ ಉದಯಿಸಲು
ಚೆಲುವ ಚನ್ನಿಗನಾಗಿ ಮೆರೆದು ಆಡಿರಲು
ದೇವರ್ಷಿ ಬೃಹಸ್ಪತಿಯ ಶಿಶ್ಯನಾಗಿರುತ
ಗುರುಪತ್ನಿ ತಾರೆಯನು ಮರುಳು ಮಾಡಿರುತ

ತಾರೆಯೊಂದಿಗೆ ಕೂಡಿ ಗುರುದ್ರೋಹವೆಸಗಿ
ಬುಧನೆಂಬ ಪುತ್ರನಿಗೆ ತಂದೆ ತಾಯಾಗಿ
ಸ್ತ್ರೀ ಮೋಹ ಲಾಲಸೆಗೆ ಅನ್ವರ್ಥವಾಗಿ
ಪೀಠಿಕೆಯ ಬರೆದಂಥ ಸ್ವಾರ್ಥಿ ತಾನಾಗಿ

ಚಂದ್ರನಾ ನಂತರದಿ ಬುಧನು ತಾ ಬಂದು
ಇಳೆಯೆಂಬ ಸುಂದರಿಯ ತಾ ವರಿಸಿ ನಿಂದು
ಪುರೂರವನೆಂಬುವ ಸುತನ ಪಡೆದಂದು
ಚಂದ್ರವಂಶದ ಮೊದಲ ದೇವಬಂಧು

ಸೂರ್ಯ ಚಂದ್ರರ ವಂಶ ವಾಹಿಗಳು ಸೇರೆ
ಸುದ್ಯುಮ್ನ ಇಳೆಯಾದ ಕಥೆಯಿಹುದು ನೀರೆ
ಸುದ್ಯುಮ್ನ ಪಾರ್ವತಿಯ ನಿಷೇಧವ ಮೀರೆ
ಶಾಪಕೊಟ್ಟಳು ಅವನ ಲಿಂಗ ಬದಲಿಸಿ ಬೇರೆ

ತಿಳಿಯದೆಯೆ ತಪ್ಪಾಗಿ ಸುದ್ಯುಮ್ನ ಕೊರಗಿ
ಪಾರ್ವತಿಯು ಅವನನ್ನು ಕಂಡು ತಾ ಮರುಗಿ
ಒಂದು ಮಾಸಕೆ ಒಂದು ಲಿಂಗದಂತೆ
ಸುದ್ಯುಮ್ನ ಇಳೆಯಾಗಿ ಬದಲಾದನಂತೆ

ದೇವತೆಗಳೊಡಗೂಡಿ ದಾನವರ ಗೆಲಿದು
ಪುರೂರವ ತಾನಾದ ದೇವಗಣ ಬಂಧು
ದೇವಲೋಕದಿ ಒಮ್ಮೆ ಊರ್ವಶಿಯ ಕಂಡು
ಮರುಳಾದ ಮರೆಯುತಲಿ ತನ್ನೆ ತಾನಂದು

ಊರ್ವಶಿಯ ಪ್ರೇಮಕ್ಕೆ ಅಂದು ಮರುಳಾಗಿ
ಅವಳಿಟ್ಟ ಕಟ್ಟಳೆಗೆ ತನ್ನ ತಲೆದೂಗಿ
ಸುಖ ದುಃಖ ಮಿಲನ ವಿರಹಾದಿ ಸಮನಾಗಿ
ಆರು ಜನ ಜನಿಸಿದರು ಮಕ್ಕಳಾಗಿ

ಆಯುಸ್ಸು ಪೌರವನ ಮೊದಲ ಮಗನು
ಇಂದುಮತಿಯಲಿ ಪಡೆದ ನಹುಷನನ್ನು
ಗುಣದಲ್ಲಿ ಮೀರಿಸುತ ದೇವೇಂದ್ರನನ್ನು
ಇಂದ್ರಪದವಿಗೆ ಸ್ವತಃ ಏರಿದವನನ್ನು

ಇಂದ್ರಪದವಿಯ ಭೋಗ ಇವನ ತಲೆಗೇರಿ
ಶಚಿದೇವಿಯಲ್ಲಿ ತನ್ನನುರಾಗ ಕೋರಿ
ಧರ್ಮ-ಕರ್ಮದ ಚೌಕಟ್ಟು ತಾಮೀರಿ
ಶಾಪದಿಂ ಹಾವಾಗಿ ಧರೆಯನ್ನು ಸೇರಿ

ಇಂದ್ರಪದವಿಗೆ ತಾನೇರುವಾ ಮುನ್ನ
ನಹುಷ ತಾನಾಗಿದ್ದ ಸದ್ಗುಣ ಸಂಪನ್ನ
ಕೈ ಹಿಡಿದು ಅಶೋಕ ಸುಂದರಿಯೆಂಬುವಳನ್ನ
ಪಡೆದಿದ್ದ ತಾ ಪುತ್ರ ಯಯಾತಿಯನ್ನ

ಯಯಾತಿಯಾ ಕಥೆಯು ಬಹಳವೇ ಹಿರಿದು
ದೇವಯಾನಿಯ ಕೂಪದಿಂದೆತ್ತಿ ಕೈ ಹಿಡಿದು
ದಾಸಿಯಾಗುತ ಬಂದ ಶರ್ಮಿಷ್ಠೆಯನು ಕಂಡು
ವರಿಸಿದನು ಗುಟ್ಟಿನಲಿ ತಿಳಿಯರು ಯಾರೆಂದು

ದೇವಯಾನಿಯಲೆರೆಡು ಮಕ್ಕಳು ಜನಿಸಿ
ತುರ್ವಸು- ಯದು ಎಂಬ ಹೆಸರವರಿಗಿರಿಸಿ
ಪುರು ಅನುದೃಹು ದೃಹ್ಯು ಮೂವರಾಗಿ
ಜನಿಸಿದರು ಶರ್ಮಿಷ್ಠೆ ಸುತರು ತಾವಾಗಿ

ಯಯಾತಿಯಾ ಗುಟ್ಟು ದೇವಯಾನಿಯ ಸಿಟ್ಟು
ದೈತ್ಯ ಗುರು ಶುಕ್ರನಿಗೆ ತಿಳಿದುಬಿಟ್ಟು
ಯೌವನವು ಕಳೆಯುವಾ ಶಾಪವನು ತಾ ಕೊಟ್ಟು
ಯಯಾತಿಗರುಹಿದರು ಆಸೆಯನು ಮೆಟ್ಟು

ಶರ್ಮಿಷ್ಠೆಯಾ ಸೆಳೆತ ಕಾಮ ದಾಹದ ತುಡಿತ
ತಾಳಲಾರದೆ ದೊರೆಯು ಭಿಕ್ಷೆ ಯಾಚಿಸುತ
ಬೇಡಿದನು ಪುತ್ರರಲಿ ಯೌವ್ವನದ ದಾನ
ಮರೆಯುತಲಿ ತನ್ನ ನಿಜ ಸ್ಥಾನ ಮಾನ

ಪುತ್ರರತ್ನಗಳೈದು ಯಯಾತಿಗಿರಲು
ಆಯು ದಾನವ ನೀಡೆ ಯಾರು ಬರದಿರಲು
ಬೇಡಿದನು ಯಯಾತಿ ಕೊನೆಯ ಮಗನನ್ನು
ಪಿತೃ ಪೂಜಕ ಪುತ್ರ ವೀರ ಪುರುವನ್ನು

ತಂದೆಯಾಸೆಗೆ ಅಂದು ಸ್ಪಂದಿಸಿದ ಸುತನು
ಸಂತಸದಿ ನೀಡಿದನು ಅರ್ಧಾಯುವನ್ನು
ಯಯಾತಿ ಗರ್ವದಲಿ ಅಪ್ಪಿ ಮಗನನ್ನು
ನಿಯತಿ ಮಾಡಿದನವಗೆ ತನ ರಾಜ್ಯವನ್ನು

ಯದುವಿನಾ ಸಂತತಿಯೆ ಮುಂದೆ ಯಾದವರು
ಧರ್ಮ ರಕ್ಷಕ ದೇವ ಕೃಷ್ಣ ಕುಲದವರು
ತುರ್ವಸುವಿನಿಂ ಯವನ ದೃಹ್ಯು ನಿಂ ತ್ವಿಪ್ರರು
ಅನುದೃಹುವಿನಿಂದಾಗಿ ಮ್ಲೇಚ್ಚ್ಹರುದಿಸಿದರು.

ಚಂದ್ರವಂಶದ ರಾಜ ತಾನಾಗಿ ಪುರುವು
ಪಡೆಯುತಲಿ ಕೌಶಲ್ಯಳೆಂಬಾಕೆ ಒಲವು
ಮನುಸ್ಯು ಎಂದೆಂಬ ಮಗನನ್ನು ಹಡೆದು
ರಾಜ್ಯವನು ಒಪ್ಪಿಸುತ ಅರಣ್ಯಕ್ಕೆ ನಡೆದು

ಹಲವು ರಾಣಿಯರಿಂದ ಬಲು ಮಕ್ಕಳ ಪಡೆದು
ರಾಜ್ಯವಾಳಿದ ತಾನು ಮನುಸ್ಯು ಮೆರೆದು
ತನ್ನ ಶೋಡಶ ಪುತ್ರ ನಿಲೀಲಗೆಂದು
ಪಟ್ಟವನು ಕಟ್ಟಿ ತಾ ತೆರೆಮರೆಗೆ ನಿಂದು

ನಿಲೀಲನಾ ಪತ್ನಿ ರತಾಂಧರಿಯೆಂದು
ಇವರ ಪುತ್ರನೆ ಮುಂದೆ ದುಶ್ಯಂತನೆಂದು
ವನ ವಿಹಾರದೊಳಿರಲು ಶಕುಂತಲೆಯ ಕಂಡು
ವರಿಸಿದನು ರೂಪಕ್ಕೆ ಮರುಳಾಗಿ ನಿಂದು

ಇವರೀರ್ವರಾ ಕಥೆಯ ತಿಳಿಯದವರಾರು
ಕಾಳಿದಾಸನ ಕಾವ್ಯ ಪಾತ್ರಧಾರಕರು
ಇವರ ಪುತ್ರನೆ ಮುಂದೆ ಭರತನೆಂದೆಂದು
ಭರತವರ್ಷಕೆ ನಾಂದಿ ಹಾಡಿದನು ಬಂದು

ಭರತನಾ ಶೌರ್ಯ ಸಾಹಸಗಳಸಮ
ಸರ್ವದಮನ ಎಂಬುದೆ ಇವನುಪನಾಮ
ಆಸೇತುವಿನಿಂದಾದಿ ಹಿಮಾಲಯದವರೆಗೆ
ಭರತಖಂಡವ ತಂದ ತನ್ನಧಿಪತ್ಯದೊಳಗೆ

ಸರ್ವಸೇನನ ಪುತ್ರಿ ಸುನಂದೆಯಿಂದ
ಭರತನಾ ಮಗನಾಗಿ ಭೂಮನ್ಯು ಬಂದ
ಸುವರ್ಣಳೆಂದೆಂಬ ತರುಣಿಯನು ವರಿಸಿ
ಸುಹೋತ್ರನೆಂದೆಂಬ ಕುಮಾರನು ಜನಿಸಿ

ಜಯಂತಿಯನು ವರಿಸಿ ಸುಹೋತ್ರ ಮುಂದೆ
ತಾನಾದ ಹಸ್ತಿ ಎಂಬೀ ಕುಮಾರನ ತಂದೆ
ಹಸ್ತಿನಾಪುರವೆಂಬ ನಗರವನು ಇವ ಕಟ್ಟಿ
ಚಕ್ರಾಧಿಪತ್ಯವನು ಮೆರೆಸಿದನು ಮೆಟ್ಟಿ

ವಿಕ್ರಾಂಜ ಹಸ್ತಿಯಾ ಮಗನಾಗಿ ಬರಲು
ಅಜಮೀಢನೆಂದೆಂಬ ಪುತ್ರ ಇವಗಿರಲು
ಅಜಮೀಢ ಹಲವಾರು ರಾಣಿಯರ ಗಂಡ
ಎರಡು ಸಾವಿರ ಪುತ್ರ ರತ್ನಗಳ ತಂದ

ಎರಡು ಸಾವಿರ ರಾಜ ಕುವರರಾ ನಡುವೆ
ಇರುಷನೆಂಬೊಬ್ಬಾತ ಶೌರ್ಯವನು ಮೆರೆಯೆ
ಸಂವರಣ ಇವನ ಮಗ ಮುಂದಿನ ದೊರೆಯೆ
ಕುರುವಂಶದುದಯಕ್ಕೆ ಮುನ್ನುಡಿಯ ಬರೆಯೆ

ಸೂರ್ಯನಿಗೆ ಛಾಯೆಯಲಿ ಜನಿಸಿದಾ ಮಗಳು
ತಪತಿ ಎಂದೆಂಬ ಚೆಲು ಹೆಸರಿನವಳು
ಸಂವರಣನೊಡಗೂಡಿ ಬಾಳ್ವೆ ನಡೆಸಿದಳು
ಕುರು ಎಂಬೊ ಧೀಮಂತ ಮಗನ ಹಡೆದವಳು

ಕುರುವಿನಾ ವಂಶವನು ಮುಂದಕುದ್ಧರಿಸೆ
ವಿದುರಥ ಎಂದೆಂಬ ಕುವರನವತರಿಸೆ
ಅಮೃತ ಎಂದೆಂಬ ತರುಣಿಯನು ವರಿಸಿ
ಚಂದ್ರ- ಕುರು ವಂಶವನು ತಾ ಮುಂದುವರಿಸಿ

ವಿದುರಥನ ಮುಂದೆರೆಡು ತಲೆಮಾರು ಕಳೆದು
ಪ್ರತೀಪನೆಂಬುವನು ಅಧಿಕಾರ ಪಡೆದು
ಸುನಂದೆ ಎನ್ನುವಾ ಸಾಧ್ವಿಯಾ ಕೈಹಿಡಿದು
ದೇವಾಪಿ, ಬ್ಬಾಹ್ಲೀಕ, ಶಂತನುವ ಹಡೆದು

ದೇವಾಪಿ ಎಂಬುವನು ಹಿರಿಯ ಮಗನಾಗೆ
ವೇದ ವಿದ್ಯಾಭ್ಯಾಸದಲಿ ಹಗಲಿರುಳು ಮುಳುಗೆ
ರಾಜನಾಗುವ ಎಲ್ಲ ಅರ್ಹತೆಗಳಿರಲು
ಕುಷ್ಠ ರೋಗದಿ ನೊಂದು ಕಾಡಸೇರಿರಲು

ತನ್ನ ತಾಯಿಯ ಪಿತನ ಆಪೇಕ್ಷೆಯಂತೆ
ಬಾಹ್ಲೀಕ ತೆರಳಿದನವರ ದತ್ತು ಮಗನಂತೆ
ಬಾಹ್ಲೀಕ ದೇಶಕ್ಕೆ ರಾಜ ತಾನಾಗಿ
ದೂರದಲಿ ತಾನುಳಿದ ತಟಸ್ಠನಾಗಿ

ಮೂರು ಮಕ್ಕಳ ನಡುವೆ ಒಬ್ಬನುಳಿದವನು
ಶಂತನು ತಾನೆಂಬ ಹೆಸರಿಗನ್ವರ್ಥಕನು
ಶೌರ್ಯ ಸಾಹಸ ಶಾಂತಿ ಮೇಳೈಸಿದವನು
ಸ್ತ್ರೀ ವ್ಯಾಮೊಹದಲಿ ಮತಿಗೇಡಿಯಾದವನು

ಗಮ್ಗೆಯನು ಕಂಡಲ್ಲಿ ವ್ಯಾಮೋಹಗೊಂಡು
ಅವಳ ಕಟ್ಟಳೆಗಳಿಗೆ ತನ್ನೊಡ್ಡಿಕೊಂಡು
ಶಿಶುಹತ್ಯ ಸಹಿಸದೆಯೆ ವ್ಯಾಕುಲದಿ ತಾನೊಂದು
ಗಾಂಗೇಯನೊಬ್ಬನನೆ ಕೊನೆಗುಳಿಸಿಕೊಂಡು

ಗಂಗೆಯಾ ವಿರಹದಲಿ ತಾನೊಂದು ಬೆಂದು
ಕೊನೆಗೊಮ್ಮೆ ಯಮುನೆಯಲಿ ಸತ್ಯವತಿಯನೆ ಕಂಡು
ರೂಪ ಲಾವಣ್ಯಕ್ಕೆ ಬಲುಮೋಹಗೊಂಡು
ದಾಯಾದಿ ಕಲಹಕೆ ಬರೆದ ಮುನ್ನುಡಿಯಂದು

ಭರತ ಕಟ್ಟಿದ ಮಹಾಭಾರತದ ಕದನ
ಅರ್ಹತೆಯ ಕಡೆಗಣನೆಯಿಂದಾಗೊ ಪತನ
ಮತಿಗೇಡಿ ನಿರ್ಧಾರದಿಂದಾಗೊ ವ್ಯಸನ
ತಿಳಿಯುವುದು ಮಾಡಿದರೆ ಭಾರತದ ಪಠಣ

ಹಿರಿಯ ನಾಗನ ನಂಜು ಕಿರಿಯ ನಾಗನ ಪಾಲು
ತಂದೆ ಮಾಡಿದ ಪಾಪ ಕುಲದ ಪಾಲು
ವೇದವಾಣಿಯ ಸಮಕೆ ಗಾದೆ ನುಡಿ ಇಲ್ಲಿಹುದು
ಶಂತನು ಕಥೆಯೊಡನೆ ಕವಿತೆ ಮುಗಿಯುವುದು.

ಡಾ.ಸುದರ್ಶನ ಗುರುರಾಜರಾವ್

ಗುಂಗು

ಗುಂಗು

ಗುಂಗಿನ ಹಂಗದು ನಿನಗಿರೆ ಗೆಳೆಯ
ಬೇಸರವಿಲ್ಲದೆ ಕಳೆವುದು ಸಮಯ
ಜೀವನಕೊಂದು ಸಿಗುವುದು ಧ್ಯೇಯ
ಬದುಕಿದ ಬಾಳಿಗೆ ದೊರೆವುದು ನ್ಯಾಯ

ಪಿತೃ ವಾಕ್ಯವೆ ರಾಮನ ಗುಂಗು
ಭ್ರಾತೃ ಪ್ರೇಮವೆ ಭರತನ ಗುಂಗು
ಸೀತಾಪತಿ ಜಪ ಮಾರುತಿ ಗುಂಗು
ನೀತಿ ನಿಯಮಗಳ ಸಾರುವ ಗುಂಗು

ಸರ್ವ ಶ್ರೇಷ್ಠತೆಗೆ ಪಾರ್ಥನ ಗುಂಗು
ಧರ್ಮ ಸ್ಥಾಪನೆಗೆ ಕೃಷ್ಣನ ಗುಂಗು
ಧರ್ಮರಾಯನ ನೀತಿಯ ಗುಂಗು
ಕರ್ಮದ ಮರ್ಮವನರಿಯುವ ಗುಂಗು

ಪರಮ ಶಿವನ ಜಪ ಪಾರ್ವತಿ ಗುಂಗು
ಮುರಳಿಯ ಧ್ಯಾನವೆ ರಾಧೆಯ ಗುಂಗು
ಮುರಾರಿಯ ಸೇವೆಗೆ ರುಕ್ಮಿಣಿ ಗುಂಗು
ಕಿರೀಟಿ ಒಲುಮೆಗೆ ದ್ರೌಪದಿ ಗುಂಗು

ದ್ರುಪದನ ಮಣಿಸಲು ದ್ರೋಣನ ಗುಂಗು
ದ್ರೋಣನ ಹಣಿಯಲು ದ್ರುಪದನ ಗುಂಗು
ಭೀಷ್ಮನ ಸೆಣೆಯುವ ಶಕುನಿಯ ಗುಂಗು
ಕಷ್ಮಲ ಮನಸಿನ ಕನಸಿನ ರಂಗು

ಕೃಷ್ಣೆಯ ಕಾಮಿಪ ಕೀಚಕ ಗುಂಗು
ಕ್ರೋಧ ಮತ್ಸರದ ಕೌರವ ಗುಂಗು
ಲೋಭ ಮೋಹ ಮದ ಪಾಶದ ರಂಗು
ಬೇಡೆಮೆಗರಿಷಡ್ವರ್ಗದ hanಗು

ಬಾಲ್ಯದಿ ವಿದ್ಯಾಭ್ಯಾಸದ ಗುಂಗು
ಧರ್ಮದಿ ಅರ್ಥವ ಗಳಿಸುವ ಗುಂಗು
ವಾನಪ್ರಸ್ಥದಿ ಆಧ್ಯಾತ್ಮದ ಗುಂಗು
ಮೋಕ್ಷಾರ್ಜನೆ ಸನ್ಯಾಸದ ಗುಂಗು

ಗಾಯಕನಿಗೆ ಶೃತಿ ಲಯಗಳ ಗುಂಗು
ನಾಯಕನಿಗೆ ಆದರ್ಶದ ಗುಂಗು
ಕಾಯಕವೇ ಶಿವ ಶರಣರ ಗುಂಗು
ಸಾಯುಜ್ಯಕೆ ಹರಿ ದಾಸರ ಗುಂಗು

ನಿನಗಿರೆ ಕನ್ನಡ ಮಣ್ಣಿನ ಹಂಗು
ಪುಟಿಯಲಿ ಋಣವನು ತೀರಿಸೊ ಗುಂಗು
ಜಗದೆಲ್ಲೆಡೆಯಲಿ ಕನ್ನಡ ರಂಗು
ಹರಡುತ ಭಾಷೆಯ ಬೆಳೆಸುವ ಗುಂಗು

ಅಂತರಾತ್ಮನ ಬಯಕೆಯೆ ಗುಂಗು
ಗುಂಗಿಗಿರಲಿ ಸು-ನೀತಿಯ ಹಂಗು
ಗುಂಗಿರೆ ಜೀವನದೆಲ್ಲೆಡೆ ರಂಗು
ಇರದಿರೆ ಬದುಕದು ಹಿಡಿವುದು ಜಂಗು!!

ಡಾ.ಸುದರ್ಶನ ಗುರುರಾಜರಾವ್