ಅನಾಮಿಕ ಆತ್ಮನ ಅಂತರಾಳ (ಕಥೆ)

ಅನಾಮಿಕ ಆತ್ಮನ ಅಂತರಾಳ (ಕಥೆ)

 

ಪ್ರಿಯ ಓದುಗರೆ,
ನಾನೊಬ್ಬ ಹೆಸರಿಲ್ಲದ ಅತ್ಮ. ಅರೇ, ಇದೇನಿದು ಹೆಸರಿರುವ ಆತ್ಮಗಳೂ ಇರಬಹುದೇ, ಆತ್ಮಕ್ಕು ಹೆಸರಿಗೂ ಇದೇನಿದು ಸಂಬಂಧ ಎಂಬ ಅನುಮಾನ ಬಂತೇ? ಅದರಲ್ಲಿ ನಿಮ್ಮ ತಪ್ಪಿಲ್ಲ ಬಿಡಿ.ಆತ್ಮನೆಂದರೆ ನಿರಾಕಾರ ಎಂದಿತ್ಯಾದಿ ಓದಿರುತ್ತೀರೆಂದು ನನಗೂ ಗೊತ್ತು.ಆತ್ಮ ಎಂದರೆ ಏನೆಂದು ಬಹಳ ಜನ ಬಹು ಬಗೆಯ ಚಿಂತನೆ ನಡೆಸಿದ್ದಾರೆ.ಕಂಡವರು ಯಾರು ಕಾಣದವರಾರು ಎಂಬುದನ್ನು ನೀವ್ಯಾರೂ ಕಾಣಿರಿ. ನಾನು ಯಾರು-ಏನು ಎಂದು ತಿಳಿಯಬೇಕಾದರೆ ನಾನು ಈಗ ಹೇಳುವ ನನ್ನ ಕಥೆಯನ್ನು ಪೂರ್ತಿಯಾಗಿ ಓದಿದರೆ ಮಾತ್ರವೇ ಸಾಧ್ಯ.

ಈ ಪ್ರಪಂಚದಲ್ಲಿರುವ ಅರವತ್ತ ನಾಲ್ಕು ಕೋಟಿ ಜೀವರಾಶಿಗಳು ಜನನ-ಮರಣ ಚಕ್ರದಲ್ಲಿ ಸಿಲುಕಿ ಸುತ್ತುತ್ತಾ ಪೂರ್ವಾರ್ಜಿತ ಪಾಪ-ಪುಣ್ಯಗಳ ಫಲವಾಗಿ ಅರವತ್ತ ನಾಲ್ಕು ಜನ್ಮಗಳಲ್ಲಿ ಯಾವುದೋ ಒಂದರಲ್ಲಿ ಸಿಲುಕಿ ಮರುಜನ್ಮ ಪಡೆಯುವುದು ನಿಜವಷ್ಟೇ?ಹಾಗಾದಾಗ ಅವುಗಳು ತಳೆದ ದೇಹವೆಂಬ ಬೊಂಬೆ ಕರ್ಮ ಸವೆಸಲು ಭೂಮಿಗೆ ಬರುವಾಗ ಅವುಗಳಿಗೆ ಜೀವ ತುಂಬುವುದು ನಾನೇ.ಯಾವ ದೇಹದಲ್ಲಿ ಹೋಗಿ ಹೇಗೆ ಹೇಗೆ ವರ್ತಿಸಬೇಕೆಂದು ಬ್ರಹ್ಮನ ಬರವಣಿಗೆಗೆ ನಿಯುಕ್ತವಾಗಿ ಸಂಚಿತ ಕರ್ಮಾನುಸಾರ ನನಗೆ ಆದೇಶ ನೀಡಿ ಕಳಿಸುವುದು ಈ ಚಿತ್ರಗುಪ್ತ-ಯಮಧರ್ಮರೇ. ಚಿತ್ರಗುಪ್ತ, ಅವನ ಮೇಲಿನ ಯಮಧರ್ಮ ನನ್ನ ಮೇಲಧಿಕಾರಿಗಳು. ನನ್ನಷ್ಟಕ್ಕೆ ನಾನೇ, ಯಾವ ಜೀವಿಯ ಹಂಗೂ ಇರದಿದ್ದಾಗ ನಾನು ಪರಮಾತಮನಂತೇ ನಿರಾಕಾರ; ಅದರೆ ದೇಹದಲ್ಲಿ ಆವಾಹಿಸಿಕೊಂಡಾಗ ನಾನು ಪರಮಾತ್ಮನಿಂದ ವಿಭಿನ್ನ.!ಜೇನು ಮೇಣ ಅಥವಾ ಅರಗು ಕರಗಿದಾಗ ಎರಕದ ಆಕಾರವನ್ನೇ ಪಡೆದು ಕಾಣಿಸುವ ರೀತಿಯಲ್ಲಿ ನಾವು ಕೂಡಾ ಜೀವಾತ್ಮನ ಆಕಾರವನ್ನೇ ಪಡೆಯುತ್ತೇವೆ.ಇಲ್ಲಿಯವರೆಗೆ ಬರೀ ಇರುವೆ, ಕಪ್ಪೆ, ಇಲಿ,ಕತ್ತೆ, ಹುಳು, ಹುಪ್ಪಟೆ,ನರಿ, ತೋಳ,ಹಯೀನಾ, ಮುಂತಾದ ಕೇವಲ ಕ್ಷುದ್ರಪ್ರಾಣಿಗಳ ಆತ್ಮವಾಗಿ ಕೆಲಸ ನಿರ್ವಹಿಸಿ ಬಹಳಷ್ಟು ರೂಪಗಳನ್ನು ತಾಳಿರುತ್ತೇನೆ. ಹೇ,, ಇದೇನು ಪುರಾಣ ಕೊರೆಯುತ್ತಿದ್ದೇನೆಂದು ಅಕಳಿಸುತ್ತಿದ್ದೀರಾ?? ಸ್ವಲ್ಪ ಇರಿ ,ವಿಷಯಕ್ಕೆ ಇನ್ನೇನು ಬರತೇನೆ.ಇದು ನನ್ನ ಪರಿಚಯದ ಪೀಠಿಕೆ ಅಷ್ಟೆ.
ನಿರಾಕಾರ ಸರಿ,ಆತ್ಮ ನಿರ್ಗುಣನೋ ಎಂಬ ಪ್ರಶ್ನೆಯ ಹುಳು ಈಗ ನಿಮ್ಮ ತಲೆಯನ್ನು ಕೊರೆದು ಹೊಕ್ಕಿದ್ದು ನನ್ನ ಕಣ್ನಿಗೆ ಬಿದ್ದೇ ಬಿತ್ತು. ನಾವು ನಿರ್ಗುಣರೋ ಇಲ್ಲಾ ಸಗುಣರೋ ಎಂಬುದನ್ನು ಪರಿಸ್ಥಿತಿಗೆ ಅನುಗುಣವಾಗಿ ಅವಲೋಕಿಸಬೇಕು ಸ್ವಾಮಿ. ಯಾವ ಜೀವಿಯ ಗೊಡವೆ ಇರದಿದ್ದಾಗ ನಾವೂ ನಿರ್ಗುಣರೇ.ಆದರೆ ಜೀವಿಗಳೆಂಬೋ ಬೊಂಬೆಯ ಒಳಗಿದ್ದಾಗ ಈ ತ್ರಿಗುಣಗಳನ್ನು ಆವಾಹಿಸಿಕೊಂಡಿರುತ್ತೇವೆ. ನಾವು ಹೋಗಿ ಸೇರಿದ ಜೀವಿಗಳಲ್ಲಿ ರಾಜಸ-ತಾಮಸ-ಸಾತ್ವಿಕ ಗುಣಗಳ ರಸಮಿಶ್ರಣ ತಯಾರಿಸಿ ಅಭಿವ್ಯಕ್ತಿಗೊಳಿಸುವುದು ನಮ್ಮ ಕೆಲಸ. ಅವರವರ ಕರ್ಮಗಳಿಗೆ ಅನುಸಾರವಾಗಿ ಜೀವಿಗಳು ಜನ್ಮ ತಾಳುವುದು ನಿಜವಷ್ಟೆ? ನಾನು ಆ ಜನ್ಮಜಾತ ಜೀವಿಗಳಲ್ಲಿ ಕಾಯ ಪ್ರವೇಶ ಮಾಡಿ ಹೊಕ್ಕು ಅವರ ಕರ್ಮಾಫಲಕ್ಕೆ ಅನುಸಾರವಾಗಿ, ಚಿತ್ರಗುಪ್ತನು ಕಳಿಸಿದ ಅವರ ಕರ್ಮಾವಳಿಯ ಪಟ್ಟಿಯನ್ನು ಅವಲಂಬಿಸಿ ಆ ಮೂರು ಗುಣಗಳಿಲ್ಲವೇ- ರಜಸ್ಸು, ತಮಸ್ಸು, ಸಾತ್ವಿಕ ಗುಣಗಳು- ಅವುಗಳಲ್ಲಿ ಯಾವುದಾದರೂ ಒಂದನ್ನು ಹೆಚ್ಚು ವ್ಯಕ್ತಗೊಳಿಸಿ ಆ ಜೀವಿಯ ಗುಣಲಕ್ಷಣಗಳನ್ನು ಸಾಕಾರಗೊಳಿಸುತ್ತೇನೆ. ಈ ತ್ರಿಗುಣಗಳೆಂಬ ಸೂತ್ರಗಳನ್ನು ಪಂಚೇಂದ್ರಿಯಗಳೆಂಬ ಬೆರಳುಗಳಿಗೆ ಕಟ್ಟಿ,ಅರಿಷಡ್ವರ್ಗಗಳೆಂಬ ಬಣ್ನಗಳನ್ನು ಉಪಯೋಗಿಸಿ ಆ ಬೊಂಬೆಯನ್ನು ಆಡಿಸುವುದು ನಾವೇ. ಈ ಎಲ್ಲ ಪದಪುಂಜಗಳು ನಿಮಗೆಲ್ಲಿ ಅರ್ಥವಾಗಬೇಕು! ಈಗೆಲ್ಲ ಮೊಬೈಲ್ ಫೊನು, ,ಲ್ಯಾಪ್ಟಾಪು,ಕಂಪ್ಯೂಟರ್ ಎಂದು ತಾಂತ್ರಿಕ ಜಗತ್ತಿನಲ್ಲಿ ನೀವುಗಳು ಕುಣಿದಾಡುವುದರಿಂದ ಅದರ ಪರಿಭಾಷೆಯಲ್ಲೇ ಹೇಳುತ್ತೇನೆ ಕೇಳಿ: ಮೊಬೈಲ್,ಲ್ಯಾಪುಟಾಪು, ಫೋನ್ ಇವುಗಳ ಹೊರ ಕವಚವೇ ನಿಮ್ಮ ದೇಹ. ಆದರೆ ಅದನ್ನು ಆಡಿಸುವ ಆಪರೇಟಿಂಗ್ ಸಿಸ್ಟಂ ಸಾಫ಼್ಟುವೇರು ನಾನೇ- ಅಂದರೆ ಆತ್ಮ!
ನಮ್ಮ ಮೇಲಧಿಕಾರಿಗಳ ಆದೇಶದಂತೆ ನಮ್ಮ ಕೆಲಸ ಕಾರ್ಯ ಇದ್ದರೂ, ಕೆಲವು ಸಲ ನಮ್ಮ ಹಿಂದಿನ ಅನುಭವಗಳನ್ನು ಮುಂದಿನ ಜನ್ಮಜಾತ ಜೀವಿಗಳಲ್ಲಿ ತೋರಿಸುವುದುಂಟು. ಚೈನಾ ದಲ್ಲಿ ಹುಟ್ಟಿದ ಮಗು ಇಂಗ್ಲೀಷ್ ಭಾಷೆ ಎರಡು ವರ್ಷಕ್ಕೇ ಮಾತನಾಡಿದಂತೆ, ಕೊರಿಯಾದಲ್ಲಿ ಹುಟ್ಟಿದ ಮಗು ಅಮೇರಿಕಾದ ಯಾವುದೋ ಕಥೆ ಹೇಳಿದಂತೆ, ಪರಿಚಯವೇ ಇರದ ವ್ಯಕ್ತಿಗಳ ಗುಣ ಅವಗುಣಗಳನ್ನು ಅಭಿವ್ಯಕತಗೊಳಿಸಿದ ಕಥೆ ಗಳನ್ನು ನೀವು ಕೇಳಿಲ್ಲವೇ? ಹಾಗೆ. ಇದಕ್ಕೆಲ್ಲ ನಾವು ಸ್ಪೆಷಲ್ ಪರ್ಮಿಷನ್ ತಗೋಬೇಕು ಸ್ವಾಮಿ. ಹಾಗಾಗಿಯೇ ಇಂತಹ ಸಂಗತಿಗಳು ವಿರಳ.
ಇವನೇನು ಅನಾಮಿಕ ಆತ್ಮ ತಾನೆಂದು ಹೇಳಿಕೊಂಡು ಬೇಡದ ಬೂಸಿಯೆಲ್ಲಾ ಬಿಡುತ್ತಿದಾನೆಂದು ತಿಳಿದಿರೋ? ಹಾಗೇನಿಲ್ಲ ಬಿಡಿ. ಆ ರೀತಿ ವಿಷಯಾಂತರ ಮಾಡುವ ಆ(ತ್ಮ)ಸಾಮಿ ನಾನಲ್ಲ.
ಇಷ್ಟೆಲ್ಲಾ ಬೊಗಳೆ ಹೊಡೆಯುವ ನಾನು ಏಕೆ ಅನಾಮಿಕ ಆತ್ಮಎಂದು ನಿಮಗೆ ಸಂದೇಹ ಬಂದಿರಬಹುದು. ಬಂದೇ ಇರುತ್ತದೆ.ಕಾರಣ ಇಷ್ಟೇ, ನಾನು ಅಸ್ತಿತ್ವಕ್ಕೆ ಬಂದಾಗಿನಿಂದ ಬರೀ ಇರುವೆ, ಕಪ್ಪೆ, ಹಂದಿ, ಕೋಳಿ,ಜೇಡ, ಹುಳು ಹುಪ್ಪಟೆ,ನರಿ, ತೋಳ,ಹಾಗೂ ಗಢವಕೋತಿ ಇಂತಹ ಹೆಸರೇ ಇಡದ ಪ್ರಾಣಿಗಳ ಆತ್ಮನಾಗಿ ಕೆಲಸ ಮಾಡಿದ ಕಾರಣ ನಾಮಕರಣದ ಯೋಗ ಬಂದೇ ಇಲ್ಲ ನೋಡಿ. ಕಡೆ ಪಕ್ಷ ನಾಯಿ, ಬೆಕ್ಕು, ಹಸು, ಸಾಕು ಕುದುರೆಯಾದರೂ ಆಗಿದ್ದಲ್ಲಿ ಟಾಮಿ, ರಾಮೂ, ಲಕ್ಕಿ, ಪಕ್ಕಿ ಎಂಬ ಹೆಸರಾದರೂ ಸಿಕ್ಕಿರುತ್ತಿತ್ತು. ನನಗೇನೂ ಅದರ ಹಂಬಲ ಇರಲಿಲ್ಲ. ಮಹತ್ವಾಕಾಂಕ್ಷೆಯುಳ್ಳ ಆತ್ಮ ನಾನಾಗಿರಲಿಲ್ಲ. ಮೊನ್ನೆ ಮೊನ್ನೆ ಕೋತಿಯ ದೇಹದಲ್ಲೇ ಇದ್ದಾಗ ದೇವಸ್ಥಾನದ ಕಟ್ತೆಯ ಮೇಲೆ ಕುಳಿತು ಬಾಳೆ ಹಣ್ಣು ತಿನ್ನುತ್ತಿದ್ದೆ.ಆಗ ಅಲ್ಲೊಂದು ಹಾಡು ಕೇಳಿಸಿತು- “ಮಾನವ ಜನ್ಮ ದೊಡ್ಡದು ಅದ ಹಾಳು ಮಾಡದಿರಿ ಹುಚ್ಚಪ್ಪಗಳಿರಾ ” ಎಂದು ಇತ್ತು. ಇಂಪಾಗಿತ್ತು. ನನಗೆ ಭಾಷೆ ಹೇಗೆ ಅರ್ಥವಾಯ್ತು ಎಂದಿರೋ,, ನನ್ನ ಪಕ್ಕದಲ್ಲಿ ಕುಳಿತ ಕೋತಿಯೊಂದು ಹಿಂದಿನ ಜನ್ಮ ದಲ್ಲಿ ಮಾನವನಾಗಿತ್ತಲ್ಲ, ಅದು ಕೋತಿಯ ಭಾಷೆಯಲ್ಲೇ ಅದರ ಅರ್ಥ ನನಗೆ ತಿಳಿಸಿ ಹೇಳಿದ್ದರಿಂದ ನನಗೆ ಮಾನವ ಜನ್ಮದ ರುಚಿ ನೋಡಬೇಕೆಂಬ ಅದಮ್ಯ ಬಯಕೆ ಹುಟ್ಟಿಯೇ ಬಿಟ್ಟಿತು. ಈ ಕೋತಿಯ ದೇಹಾಂತ್ಯದವರೆಗೂ ತಡೆದಿದ್ದು ನಂತರ ಯಮಧರ್ಮ-ಚಿತ್ರಗುಪ್ತರ ಸನ್ನಿಧಾನಕ್ಕೆ ಹಾರಿದೆ.ಆ ದಿನ ಅವರಿಗೂ ಹೆಚ್ಚಿನ ಕೆಲಸವಿರಲಿಲ್ಲ ,ಸುಮ್ಮನೆ ಕುಳಿತು ಹರಟುತ್ತಿದ್ದರು. ಯಮಧರ್ಮ ತುಂಬಿದ ಕೊಡ, ಆದರೆ ಸ್ವಲ್ಪ ಹುಂಬ.ಚಿತ್ರಗುಪ್ತನೋ, ಅಹಂಕಾರಿ. ಏನು ಚಿತಾವಣೆ ಬೇಕಾದರೂ ಮಾಡಿಡುತ್ತಾನೆ. ನಾನು ಹೋಗಿ ನಿಧಾನವಾಗಿ ನನ್ನ ಮನದಿಂಗಿತ ಬಿಚ್ಚಿಟ್ಟೆ. ಯಮಧರ್ಮ ತಲೆದೂಗಿದರೂ ಈ ಚಿತ್ರಗುಪ್ತ ಮೂಗು ಮುರಿದ. ನನ್ನ ಜನ್ಮ ಜಾಲಾಡಿ ಏನೋ ದೊಡ್ಡ ಮೇಧಾವಿಯಂತೆ ನನಗಿನ್ನೂ ಆ ಪರಿಪಕ್ವತೆ ಬಂದಿಲ್ಲವೆಂದೂ,ಇನ್ನೂ ಕಾಯಬೇಕೆಂದೂ ಸೂಚಿಸಿದ. ನಾನೂ ಪಟ್ಟು ಬಿಡಲಿಲ್ಲ.ಆಗ್ರಹ ಮಾಡಿದೆ. ಯಮನಿಗೆ ಏನೆನ್ನಿಸಿತೋ,ಸರಿ ಹೋಗು ನಿನ್ನಿಷ್ಟ ಅಂದ. ತನ್ನ ಮಾತು ನಡೆಯದ್ದಕ್ಕೆ ಆ ಮುದಿಯ ಚಿತ್ರಗುಪ್ತನಿಗೆ ಅಸಮಾಧಾನವಾಯ್ತು. ಆಗಲಿ, ನನಗೇನು. ಖುಷಿಯಿಂದ ಹೊರಟೆ. ಹಿಂದಿನಿಂದ ಎಚ್ಚರಿಕೆಯ ಸಂದೇಶ ಬಂತು. ಯಮನೇ ನುಡಿದ: ಎಲವೋ ಆತ್ಮವೇ, ಮನುಷ್ಯರ ವ್ಯವಹಾರಕ್ಕೆ ಇಳಿಯುತ್ತಿದ್ದೀ. ಎಚ್ಚರಿಕೆ ಇರಲಿ. ಎಲ್ಲ ಪಶು-ಪಕ್ಷಿಗಳಿಗಿಂತ ಅವರ ನಡೆ ನುಡಿ ವಿಭಿನ್ನ. ನೀನು ಇಲ್ಲಿಯವರೆಗೆ ಅವರೊಡನೆ ಒಡನಾಡಿಲ್ಲ. ಇಷ್ಟುದಿನ ಗಂಡು ಹೆಣ್ಣುಗಳು ಸೇರಿದರೆ ಅದು ಸಂತಾನೋತ್ಪತ್ತಿಗಾಗಿ ಎಂದೇ ನಿನ್ನ ಅನುಭವ. ಹಸಿವು, ನಿದ್ರೆ ಮೈಥುನಗಳ ನಿಯಮಾವಳಿ ಅವರ ಲೋಕದಲ್ಲಿ ಬೇರೆಯೇ. ಹಸಿವಿರದಿದ್ದರೂ ತಿನ್ನುವ, ತಿನ್ನದಿದ್ದರೂ ತೇಗುವ, ಬಾಯಾರಿಲ್ಲದೆಯೂ ಕುಡಿಯುವ, ಬರೀ ಮೋಜಿಗೆ ಮೈಥುನದಲ್ಲಿ ತೊಡಗುವ ವಿಚಿತ್ರ ಸಂಕುಲ ಅದು. ಸಂತಾನಕ್ಕಾಗಿ ಅವರು ಕೂಡಿದಾಗ್ಯೂ ಅದು ಕೈಗೂಡದೆ ಇರಬಹುದು. ಅದು ಅಲ್ಲದೆ ಅಲ್ಲಿ ಎಲ್ಲವು ಸ್ಪರ್ಧಾತ್ಮಕೆ, ಪೈಪೋಟಿಕರ. ಹಲವು ಆತ್ಮಗಳು ಕಾಯುತ್ತಾ ಹೊಂಚು ಹಾಕಿ ಕುಳಿತಿರುತ್ತವೆ. ಅಲ್ಲಿ ನೋಡು, ಆ ಬಸ್ಸಿನಲ್ಲಿ ನುಗ್ಗಿ ಸೀಟು ಹಿಡಿಯುತ್ತಿಲ್ಲವೇ ಹಾಗೆ.ಯಾರು ಮುನ್ನುಗ್ಗುವರೋ ಅವರಿಗೇ ಅವಕಾಶ. ನೀನೂ ನಿನ್ನ ಚಾಲಾಕಿತನ ತೋರಿಸಬೇಕು. ಜೋಭದ್ರ-ಜಡಭರತನಂತೆ ಇರಕೂಡದು. ಒಂಭತ್ತು ತಿಂಗಳ ಕಾಲಾವಕಾಶ ನೀಡುತ್ತೇನೆ. ಅಷ್ಟರಲ್ಲಿ ಸಫಲನಾಗದಿದ್ದರೆ ವಾಪಸ್ ಎಮ್ದು ತಾಕೀತು ಮಾಡಿದ. ಅವನು ಗುಡ್-ಲಕ್ ಹೇಳುವುದನ್ನು ಮರೆಯಲಿಲ್ಲ ನನಗೆ ಥ್ಯಾಂಕ್ಸ್ ಹೇಳುವುದು ಹೊಳೆಯಲಿಲ್ಲ.
ಸರಿ ಭೂಲೋಕಕ್ಕೆ ಜರ್ರೆಂದು ಜಾರಿ ಪುಣ್ಯಭೂಮಿ ಎಂಬ ಭಾರತವನ್ನೇ ಕ್ಷೇತ್ರವಾಗಿ ಅರಿಸಿದೆ. ಜನಸಂಖ್ಯೆಯಂತೆ ಆತ್ಮಗಳ ಸಂಖ್ಯೆಯೂ ಇಲ್ಲಿ ಅಗಣಿತ. ಎಲ್ಲೆಲ್ಲೂ ಹೊಂಚುಹಾಕಿ ಕಾಯುತ್ತಿರುವವೇ. ಇಲ್ಲಿ ಪೈಪೋಟಿ ಜಾಸ್ತಿ.ಅವರೊಟ್ಟಿಗೆ ಈರ್ಶ್ಯೆಇಂದಲೂ, ಅಸಡ್ಡೆಯಿಂದಲೂ ನೋಡಿ ಇಂಗ್ಲೆಂಡಿಗೆ ಹಾರಿದೆ. ಈ ರೀತಿಯ ಪ್ರತಿಭಾ ಪಲಾಯನ ಮಾನವರಲ್ಲೂ ಇದೆಯೆಂದು ಆನಂತರ ತಿಳಿಯಿತೆನ್ನಿ.
ಇಂಗ್ಲೆಂಡಿನಲ್ಲಿ ಅಷ್ಟೊಂದು ಆತ್ಮಾಪುಲೇಷನ್ (ಆತ್ಮ ಸಂಖ್ಯೆ) ಇರಲಿಲ್ಲ.ಇದೇ ಪ್ರಶಸ್ತ ಜಾಗವೆಂದು ಸುತ್ತ ತೊಡಗಿದೆ:
ಸಮಾಜದ ಸ್ಥಿತಿ-ಗತಿ,ಕೌಟುಂಬಿಕ ಪರಿಸರ, ಸಾಮಾಜಿಕ ಸ್ತರಗಳು, ಅವರ ಯೋಚನಾಧಾಟಿ ಇವುಗಳ ಸ್ಥೂಲ ಪರಿಚಯ ನನಗಾಯ್ತು. ಸರಿ ಅತ್ತಿತ್ತ ನೋಡಲು ಒಂದು ಜೋಡಿ ಕಾಣಿಸಿತು. ಎತ್ತರದ ನಿಲುವಿನ ಆತ್ಮ ವಿಶ್ವಾಸತುಂಬಿದ ಸ್ಫುರದ್ರೂಪಿ ಗಂಡು, ಅವನೊಟ್ಟಿಗೆ ಆಕರ್ಷಕ ರೂಪದ ಹೆಣ್ಣು. ಏನು ಪ್ರೀತಿ ಅವನ ಮಾತುಗಳಲ್ಲಿ! ಅವಳ ಕೈ ಹಿಡಿಯುವುದೇನು, ಸುತ್ತಾಡುವುದೇನು, ಕಣ್ಣಲ್ಲಿ ಕಣ್ಣಿಟ್ಟು ನೋಡುವುದೇನು, ಅವಳು ಕೇಳಿದ್ದನ್ನು ಕೊಡಿಸುವುದೇನು, ಜೊತೆಯಲ್ಲಿ ಊಟ ಸವಿಯುವುದೇನು! ಅವಳಿಗೋ ಅವನದೇ ಧ್ಯಾನ. ಅವನು ಸ್ವಲ್ಪ ಭಿನ್ನ.ಸರಿ ಗಂಡು ಹೆಣ್ಣಿನ ಒಡನಾಟದ ಪರಾಕಾಷ್ಠೆಯ ಸಮಯ ಬಂದೇ ಬಂತು. ಇವರ ಮಗುವಿನ ಆತ್ಮ ನಾನಾದಲ್ಲಿ ನನಗೆ ಸಕಲ ಸೌಭಾಗ್ಯವೂ ದೊರೆಯುವುದೆಂಬ ಭಾವನೆ ಬಂತು. ನುಗ್ಗಿ ಪ್ರತಿಷ್ಠಾಪಿಸಿಕೊಂಡೆ. ವಾರಗಳು ಕಳೆದು ಆಕೆ ತನ್ನ ರಹಸ್ಯ ಬಿಚ್ಚಿದಳು. ಮಗುವಿನ ತಾಯಾಗುವುದರಿಂದ ಆತನು ಮದುವೆಯ ತಯಾರಿ ಮಾಡಬೇಕೆಂದಳು. ಅವನ ಮುಖ ಕಳೆಗುಂದಿತು. ತಾನು ಆಫ಼ೀಸರ್. ಅವಳು ಯಕಃಶ್ಚಿತ್ ಸೆಕ್ರೆಟರಿ. ಅವನಿಗೆ ಈಗಾಗಲೇ ಬೇರೆ ಮದುವೆ ನಿಶ್ಚಯವಾಗಿದೆಯಂತೆ!! ಅರೆ!! ನನಗೆ ಗೊಂದಲ. ಅವಳು ಮೊದಲು ಅತ್ತಳು.ಆದರೆ ಗಟ್ಟಿಗಿತ್ತಿ. ಬೆದರಿಸಿ ಚೆನ್ನಾಗಿ ದುಡ್ಡು ಕಿತ್ತಳು. ಅವನು ಪೀಡೆ ತೊಲಗಿದರೆ ಸಾಕೆಂದು ಕೊಟ್ಟ. ನನ್ನನ್ನು ನಿವಾರಿಸಿಕೊಂಡಳು. ನಾನು ಗೂಡಿನಿಂದ ದಬ್ಬಲ್ಪಟ್ಟ ಪಕ್ಷಿಯಂತೆ ಹೊರಬಂದು ಮತ್ತೆ ಹಾರತೊಡಗಿದೆ.
ಸರಿ ಅಲ್ಲೊಂದು ಯುವ ಜೋಡಿ ಕಣ್ಣಿಗೆ ಬಿತ್ತು. ಅರೆ ಇದೇನು ಶಾಲೆಯ ಸಮವಸ್ತ್ರ ಧರಿಸಿ ಶಾಲೆಗೇ ಹೋಗದೆ ಸುತ್ತುತ್ತಿರುವರಲ್ಲ. ಹಿಂಬಾಲಿಸಿದೆ.ಅವರು ಈ ಲೋಕದ ಯಾವುದೇ ಜಾವಾಬುದಾರಿಯನ್ನು ಹೊತ್ತಿಲ್ಲದವರಾಗಿ ಓಡಾಡಿಕೊಂಡಿದ್ದರು. ಪ್ರೀತಿ-ನೀತಿ,ಕಾಮ-ಪ್ರೇಮಗಳ ಅರಿವನ್ನಾಗಲೀ ,ಪರಿಧಿಯನ್ನಾಗಲೀ ಅರಿಯವದವರ್ರಗಿ ಕಂಡುಬಂದರು. ಕ್ಲೇಶರಹಿತರಾದ ಇವರೇ ನನಗೆ ತಾಯಿ ತಂದೆಯಾಗಲು ಯೋಗ್ಯರೆಂದು ನಿರ್ಧರಿಸಿಸ್ ಕಾಯತೊಡಗಿದೆ.ಸಮಯ ಬಂತು;ನಾನು ನುಗ್ಗಿದೆ. ಆಶ್ಚರ್ಯವೆಂದರೆ ಒಂದೂ ಪೈಪೋಟಿಕಾರ ಆತ್ಮಗಳು ಕಾಣದಿದ್ದುದು!
ಸರಿ ಹುಡುಗಿ ವಾಕರಿಸಿದಳು, ವಾಂತಿ ಮಾಡಿಕೊಂಡಳು. ತಾಯಿಗೆ ಅನುಮಾನ ಬಂತು. ಜಬರ್ದಸ್ತಿ ಮಾಡಿದಳು, ಹುಡುಗಿ ಬಾಯಿ ಬಿಟ್ಟಳು. ಅವರೋ ಕರ್ಮಠ ಸಂಪ್ರದಾಯಿಕ ಮನೆತನದವರು. ಗಂಡನಿಗೆ ಹೇಳಲು ಹೌಹಾರಿ ಹಿಂಜರಿದು, ಹುಡುಗಿಯ ಮುಂದಿನ ವಿದ್ಯಾಭ್ಯಾಸಕ್ಕೂ, ಸಮಾಜದಲ್ಲಿ ಮುಖವೆತ್ತಿ ತಿರುಗಾಡುವುದಕ್ಕೂ,ಆರೋಗ್ಯದ ದೃಷ್ಟಿಯಿಂದಲೂ ಅಳೆದು ತೂಗಿ ಗರ್ಭಪಾತವೇ ಸರಿಯಾದ ದಾರಿಯೆಂದು ನಿಶ್ಚಯಿಸಿದಳು; ಕಾರ್ಯರೂಪಕ್ಕೂ ತಂದಳು. ಎಂಟು ವಾರವಾಗಿತ್ತೇನೋ, ನಾನು ಗಂಟು ಕಟ್ಟಿ ಹೊರಗೆ ಬಿದ್ದು ಬೀದಿ ಪಾಲಾದೆ.

ಸುತ್ತುತ್ತಾ, ಹತ್ತಿರದಲ್ಲಿದ್ದ ಮನೆ ಹೊಕ್ಕೆ. ಅಕಟಕಟಾ… ಏನು ಅವ್ಯವಸ್ಥೆ, ಏನು ಅಸ್ತವ್ಯಸ್ತ. ಜೀವನ ಹೀಗೂ ಮಾಡಬಹುದೇ ಎಂಬ ಸೋಜಿಗ ನನ್ನನು ಕಾಡದಿರಲಿಲ್ಲ.ಇಬ್ಬರೂ ೨೫-೨೬ ವಯಸ್ಸಿನವರಾದರೂ ನೋಡಲು ೪೫-೪೬ ರಂತೆ ಕಾಣುತ್ತಿದ್ದರು.ಎಂಥದ್ದೋ ಕೊಳವೆಯಂಥ ಉರಿಯುವ ಕಡ್ಡಿ,ಎಂಥದ್ದೋ ಪೀಪಾಯಿಯಂಥ ಶೀಶೆ.ಒಂದನ್ನು ದಂ ಎಳೆಯುವುದು, ಇನ್ನೊಂದನ್ನು ಹೀರುವುದು, ಓಲಾಡಿ ನಲಿಯುವುದು; ಆಗಾಗ ತಿನ್ನುವುದು. ಇಬ್ಬರಿಗೂ ಕೆಲಸವಿಲ್ಲ.ಆದರೆ ಅವರಿಗೆ ಹೇಗೋ ಸಹಾಯ ದೊರೆಯುತ್ತಿತ್ತು. ರಾಮರಾಜ್ಯದ ಕನಸನ್ನು ಸಾಕಾರಗೊಳಿಸುವ ಉದ್ದೇಶದಿಂದ ಸರಕಾರ ಧನಸಹಾಯ ಕೊಡುವ ವಿಷಯ ನನಗೆ ತಿಳಿಯಿತು. ರಾಮರಾಜ್ಯದಲ್ಲಿ ಆರಾಮವಾಗಿ ರಾಮರಸವೆಂಬ ರಂ ಹೀರಿ, ಝಂ ಅಂತ ಇದ್ದು ಅಜರಾಮರರಾಗುವ ಪರಿ ನನಗೆ ಹಿಡಿಸಿತು. ಅಲ್ಲೇ ಗಸ್ತು ತಿರುಗತೊಡಗಿದೆ.
ಅವರಿಗೆ ಕೆಲಸವಿಲ್ಲದ್ದರಿಂದಲೂ, ದೇಹವೆಂಬೋ ಅಗ್ನಿಕುಂಡಕ್ಕೆ ಉದ್ದೀಪನೆಯ ಹವಿಸ್ಸು ಪ್ರದಾನವಾಗುತ್ತಿದ್ದುದರಿಂದಲೂ ನನ್ನ ಅರ್ಜಿ ಮೂರೇ ದಿನದಲ್ಲಿ ಮಂಜೂರ್. ನನ್ನ ಹೊಸಗೂಡಿನಲ್ಲಿ
ಅಮಲೇರಿಸುವ ಅನುಭವ ಆಗತೊಡಗಿ ಅನಂದ ತುಂದಿಲನಾದೆ. ಎಲ್ಲಾ ಸರಿ ಆದರೆ ಏನೋ ಸರಿಯಿಲ್ಲವೆಂದು ನನ್ನ ಮನಸ್ಸು ಹೇಳುತ್ತಿತ್ತು. ಇದೇನು ಆತ್ಮಕ್ಕೂ ಮನಸ್ಸೇ ಎಂದು ಮೂಗು ಮುರಿಯಬೇಡಿ. ನಮಗೂ ಅಂಥದ್ದೊಂದು ಇರುತ್ತೆ, ನಿಮ್ಮ ಪರಿಭಾಷೆಯಲ್ಲಿ ನೀವು ಮನಸ್ಸು ಎಂದು ಕರೆಯಬಹುದಷ್ಟೆ.
ಸರಿ ಒಂದು ಮುಂಜಾನೆ ಅವನಿಗೂ ಅವಳಿಗೂ ಜಗಳ ಹತ್ತಿ ಬಿಟ್ಟಿತು.ಮಹಾಶಯ ಎದ್ದು ತನ್ನ ಹೊಗೆ ಕಡ್ಡಿ ಹುಡುಕಿದ, ಸಿಗಲಿಲ್ಲ,ಅವಳನ್ನುಕೇಳಿದ (ಸಿಗರೇಟು ಎಂದು ಅದನ್ನು ಕರೆಯುತ್ತಾರಂತೆ). ಅವಳು ತನ್ನ ಬಳಿ ಇದ್ದರೂ ಕೊಡುವುದಿಲ್ಲ ಎನ್ನುವುದೇ.ಮಾತಿಗೆ ಮಾತು ಬೆಳೆದು ಹೊಡೆದಾಟ ಬಡಿದಾಟದ ವರೆಗೂ ಹೋಗಿ ಅವನು ಅವಳನ್ನು ಒದ್ದುಬಿಟ್ಟ.ನೋವಿನಿಂದ ಅವಳೂ, ಅವಳ ಒಳಗಡೆ ನಾನೂ ಒದ್ದಾಡಿಬಿಟ್ಟೆವು. ಆಸ್ಪತ್ರೆಗೇನೋ ಹೋದಳು. ಕಾಲ ಮಿಂಚಿತ್ತು. ನಾನು ಹೊರಗೆ ಬರಲೇ ಬೇಕಾಯ್ತು.
ಇದುವರೆಗಿನ ನನ್ನ ಅನುಭವ ಮದುವೆಯಾಗದ, ಯಾವ ಬದ್ಧತೆಗಳಿಲ್ಲದ ಜೋಡಿಗಳಿಗೆ ಸೀಮಿತವಾಗಿತ್ತು. ಸತತ ವೈಫಲ್ಯಗಳಿಂದ ಆತ್ಮದ ಆತ್ಮವಿಶ್ವಾಸವೇ ಕುಗ್ಗುತ್ತಿತ್ತು ನೋಡಿ ಸ್ವಾಮಿ. ಆದರೆ ನಾನು ಒಂದಾನೊಂದು ಕಾಲದಲ್ಲಿ ಬ್ರೂಸ್ ಎಂಬ ಸ್ಕಾಟ್ಲೆಂಡಿನ ರಾಜನಿಗೆ ತನ್ನ ಸತತ ಪರಿಶ್ರಮದಿಂದ ಬಲೆನೇಯ್ದು ಭರವಸೆ, ಉತ್ಸಾಹ ಮೂಡಿಸಿದ್ದ ಜೇಡವೊಂದರ ಆತ್ಮನಾಗಿದ್ದೆನಷ್ಟೆ! ಆ ಅನುಭವ ನನ್ನ ಕಣಕಣದಲ್ಲೂ ಇದ್ದುದರ ಕಾರಣ ಮರಳಿಯತ್ನವ ಮಾಡಲು ಮುನ್ನಡೆದೆ.
ಈ ಬಾರಿ ವೈವಾಹಿತ ಜೋಡಿಗಳನ್ನು ಮಾತ್ರವೇ ಆರಿಸಲು ನಿರ್ಧರಿಸಿದ್ದೆ.
ಆಹಾ… ಎಂತಹ ಅದ್ದೂರಿ ಮದುವೆ. ಹೇಳಿ ಮಾಡಿಸಿದಂಥ ಜೋಡಿ. ಸುಂದರ, ಸುಸಂಸ್ಕೃತರು. ಒಬ್ಬರನ್ನೊಬ್ಬರು ಒಡನಾಡಿ ಬಲ್ಲವರೆಂದು ತೋರುತ್ತಿದೆ.ಏನು ಪ್ರೀತಿ,ಏನು ವಿಶ್ವಾಸ. ಅವನಂತೂ ಅವಳನ್ನು ಕಣ್ಣಲ್ಲಿ ಕಣ್ಣಿಟ್ಟು ಜೋಪಾನ ಮಾಡುತ್ತಾನೆ.ಅವಳೂ ಅಷ್ಟೆ. ಆಹಾ ” ಆರಂಕುಶವಿಟ್ಟೊಡೇಂ, ನಾನಾಗುವೆನಮ್, ಇವರ್ ಕೂಸಿನ ಆತ್ಮನುಂ; ಅದರಾತ್ಮನಾದೊಡೆ ಪೆರತೇಮ್ ದೊರೆವುದೆಲ್ಲ ಜೀವನದ ಸುಖಂ” ಎಂದೆನ್ನುತ್ತಾ ಅವರ ನೆರಳಂತೆ ಹಿಂಬಾಲಿಸ ತೊಡಗಿದೆ. ಅಲ್ಲಲ್ಲಿ ಪೈಪೋಟಿಗೆ ಕೆಲವು ಬಂದವಾದರೂ ಅವುಗಳೆಡೆಗೆ ಕೆಕ್ಕರಿಸಿ ನೋಡಿದೆ, ಹೆದರಿಸಿದೆ. ಅವು ಹಾಗೆಯೇ ದೂರ ಸರಿದವು,. ನನಗೆ ನಾನೇ ಶಭಾಷ್ ಹೇಳಿಕೊಂಡೆ. ಮಧುಚಂದ್ರಕ್ಕೆ ಹೋದಲ್ಲೆಲ್ಲಾ ಹಿಂಬಾಲಿಸಿದೆ.ಅವರು ಬೇಗನೆ ತಮ್ಮ ಕುಟುಂಬ ಬೆಳೆಸುವ ಆಸೆಯಲ್ಲಿದ್ದರು, ನನ್ನ ಘಳಿಗೆ ಕೂಡಿಬಂತು. ನಾನು ಸುಖಾಸೀನನಾದೆ. ದಿನ ಉರುಳಿದವು. ಎಲ್ಲ ಚೆನ್ನಾಗಿ ನಡೆದಿತ್ತು. ಅವನು ಬಹಳ ಮುಚ್ಚಟೆಯಿಂದ ಕಾಳಜಿ ಮಾಡಿದ.ಅವರಿಬ್ಬರ ತಂದೆ ತಾಯಿಯರೂ ಬಂದು ನೋಡಿಕೊಂಡರು. ಏಕಾಂತದಲ್ಲಿ ಅವರಿಬ್ಬರೂ ತಮ್ಮ ಭಾವೀ ಕೂಸಿನ ಬಗೆಗೆ ಕನಸು ಕಟ್ಟುವುದಿತ್ತು.ಮಗುವಿನ ಹೆಸರು ಕುರಿತು ಚರ್ಚಿಸುವುದಿತ್ತು.ನನಗಂತೂ ಬಹಳ ಖುಷಿ. ಆಹಾ ಎಂತಹ ದಂಪತಿಗಳು. ನಾನೆ ಧನ್ಯ ಎಂದು ಬೀಗುತ್ತಲಿದ್ದೆ.ಅವರಿಗೆ ತಮ್ಮ ಮಗು ಸಾತ್ವಿಕ ಗುಣ ಪ್ರಧಾನವಾದ, ಒಳ್ಳೆಯ ಹೃದಯದ ಪ್ರೇಮಮಯಿ ಆಗಬೇಕೆಂಬ ಬಯಕೆ; ಆದರೆ ಚಿತ್ರಗುಪ್ತನ ಲೆಕ್ಖಾಚಾರದಂತೆ ಅದು ರಜೋಗುಣ ಪ್ರಧಾನವಾದ ಜೀವ ಆಗಬೇಕೆಂದಿತ್ತು.ನಾನು ನನ್ನ ಅನುಭವದ ಮೂಸೆಯಿಂದ ಬೇಕಾದ ಕಸರತ್ತುಗಳನ್ನೆಲ್ಲಾ ತೆಗೆದು ಪ್ರಯೋಗಿಸಿ ಸಾತ್ವಿಕ ಗುಣ ಹೆಚ್ಚು ಮಾಡಲು ಪ್ರಯತ್ನಿಸುತ್ತಿದ್ದೆ. ನನ್ನ ಮೇಲಧಿಕಾರಿಗಳಿಗೆ ಇರಿಸು ಮುರಿಸಾಗದಂತೆ ನನ್ನ ಈ ಕೆಲಸ ನಡೆಸುತ್ತಿದ್ದೆ. ನನಗೆ ಪ್ರೀತಿ-ಪ್ರೇಮ-ಮಮತೆ- ವಾತ್ಸಲ್ಯದ ಅನುಭವ ಚೆನ್ನಾಗಿಯೇ ಆಗುತ್ತಿತ್ತು. ಆದರೆ ಒಂದು ದಿನ ನನ್ನನ್ನು ಹೊತ್ತ ನನ್ನ ಭಾವೀ ತಾಯಿಗೆ ಉಸಿರಾಟದ ತೊಂದರೆ ಕಾಣಿಸಿತು. ವೈದ್ಯರು ಪರೀಕ್ಷಿಸಿ ಅದು ಹೃದಯ ಸಂಬಂಧೀ ಖಾಯಿಲೆಯೆಂದೂ, ಗರ್ಭ ಬೆಳೆದಂತೆಲ್ಲಾ ಅದು ಹೆಚ್ಚಾಗುವುದೆಂದೂ, ಆಕೆಯ ಜೀವಕ್ಕೇ ಅಪಾಯವೆಂದೂ ಘೋಷಿಸಿಬಿಟ್ಟರು. ಅವನು ಹೌಹಾರಿದ. ತನ್ನ ಜೀವದಂತಿರುವ ಹೆಂಡತಿಯನ್ನು ಕಳೆದುಕೊಳ್ಳಲು ಅವನು ತಯಾರಿರಲಿಲ್ಲ. ಇಂತಹ ಗಂಡಂದಿರು ಎಲ್ಲಿ ತಾನೇ ಸಿಗುವರು. ಬಹಳ ವೇದನೆಯಿಂದ ನಿರ್ಧಾರಕ್ಕೆ ಬಂದು ಗರ್ಭ ನಿವಾರಣೆ ಮಾಡಿಸಿದರು. ನಾನು ಮತ್ತೆ’ ’ಕೇರ್ ಆಫ಼್ ಫ಼ುಟ್-ಪಾತ್’ ಆದೆ. ಆಹಾ, ಇದೇನು ನಾನು ಇಂಗ್ಲೀಷ್ ಭಾಷೆ ಮಾತಾಡುತ್ತಿದ್ದೇನೆಂದು ಯೋಚಿಸಿದಿರೋ? ಇಷ್ಟು ದಿನ ಇಂಗ್ಲೆಂಡಿನಲ್ಲಿದ್ದ ಮೇಲೆ ಅವರ ಭಾಷೆ ಕಲಿಯದಿದ್ದರಾಗುವುದೇ?
ಈ ಮೊದಲು ಹೇಳಿದ ಅನುಭವ ನನ್ನಲ್ಲಿ ಸಾಕಷ್ಟು ಚಿಂತನೆಯ ತರಂಗಗಳನ್ನೆಬ್ಬಿಸಿತು.ಮಾನವ ಸಮಾಜ, ಅವರ ಜೀವನದ ಸಂಕೀರ್ಣತೆಗಳು,ಅವರ ಭಾವನೆಯ ವ್ಯಾಪ್ತಿಗಳು ನನಗೆ ಸಾಕಷ್ಟು ಅರ್ಥವಾಗಿದ್ದರೂ ಅವರ ನಿರ್ಧಾರಗಳು,ನಡತೆಗಳು ಗೊಂದಲ ಮೂಡಿಸುತ್ತಲೇ ಇದ್ದವು.ಈ ವೇಳೆಗಾಗಲೇ ನನ್ನ ಅವಧಿಯ ಆರು ತಿಂಗಳುಗಳು ಮುಗಿದೇ ಹೋಗಿದ್ದವು.ನನ್ನ ಡೆಪ್ಯೂಟೇಷನ್ ಮುಗಿಯುವ ಹಂತಕ್ಕೆ ಬರುತ್ತಿತ್ತು. ಇಷ್ಟರಲ್ಲಿ ನನ್ನ ಸಾಧನೆಗೆ ಪ್ರತಿಫಲ ಸಿಕ್ಕಿದರೆ ಸರಿ ಇಲ್ಲವಾದರೆ ಮತ್ತೆ ಕುರಿ-ಕೋಳಿಗಳ ಸಹವಾಸಕ್ಕೆ ಹೋಗಬೇಕಾಗಿತ್ತು.
ಭರದಿಂದ ಹುಡುಕಾಟಕ್ಕೆ ತೊಡಗಿದೆ. ಇಷ್ಟರಲ್ಲಿ ನನಗೆ ಆಯ್ಕೆ ಮಾಡಿಕೊಳ್ಳುವ ಅನುಭವ ಚೆನ್ನಾಗಿ ಆಗಿತ್ತು. ಬಹಳ ಮುತುವರ್ಜಿ ವಹಿಸಿ ಹುಡುಕಾಟಕ್ಕೆ ತೊಡಗಿದೆ.

ಆಹಾ,, ಕಣ್ಣಿಗೆ ಬಿದ್ದಳು. ಏನು ಮಮತಾಮಯಿ ಕಣ್ಣುಗಳು!! ಥೇಟು ನಮ್ಮ ದೇಶದ ಪಂಢರೀಬಾಯಿಯ ಹಾಗೆ!! ಸೌಮ್ಯ ಮುಖದ ತುಂಬ ಬರೀ ಮಂದಹಾಸ. ಹಣೆಯಲ್ಲಿ ಅಗಲ ಕುಂಕುಮ ಇಲ್ಲ ನೋಡಿ. ಈಕೆ ಹಿಂದೂ ಹೆಂಗಸಲ್ಲವಲ್ಲ!
ಉದ್ಯಾನವನದಲ್ಲಿ ತನ್ನ ಮೂವರು ಮಕ್ಕಳೊಂದಿಗೆ ಆಡುತ್ತಿದ್ದಾಳೆ. ಮಕ್ಕಳೂ ಮುದ್ದಾಗಿವೆ. ತಾಯಿಯೊಡನೆ ಪ್ರೀತಿಯಿಂದ ಆಡುತ್ತಿವೆ. ಎಂಟು, ಆರು ಮತ್ತು ಮೂರು ವರ್ಷದ ಗಂಡು ಮಕ್ಕಳು. ಅವರುಗಳು ಧರಿಸಿರುವ ಬಟ್ಟೆ ಚೆನ್ನಾಗಿಲ್ಲ. ಕೆಲವು ಕಡೆ ಕಿತ್ತು ಹೊಗಿದೆ. ಆದರೇನು, ಸಂತೋಷಕ್ಕೆ ಕಡಿಮೆ ಇಲ್ಲ. ಇನ್ನೂ ಹತ್ತಿರ ಹೋದೆ. ಆ ಮಕ್ಕಳ ಸಿಹಿ ಮಾತುಗಳು ಕೇಳುತ್ತಿವೆ. ಮಕ್ಕಳು ತಾಯಿಯನ್ನು ಅಪ್ಪ ಯಾವಾಗ ಬರುತ್ತಾನೆಂದು ಕೇಳುತ್ತಿವೆ. ಸಂಸಾರವನ್ನು ನಡೆಸುವ ಅಂಬಿಗನಾಗಿ ಅವನು ಪಡುವ ಕಷ್ಟಗಳನ್ನು ಆ ಮಮತಾಮಯಿ ಅವುಗಳ ಭಾಷೆಯಲ್ಲಿ ತಿಳಿಸಿ ಹೇಳುತ್ತಿದ್ದಾಳೆ. ಇಂದು ಸಂಬಳದ ದಿನವಾದ್ದರಿಂದ, ಏನಾದರೂ ವಿಶೇಷ ತಿನಿಸು ತರಬಹುದೆಂಬ ಭರವಸೆಯನ್ನೂ ನೀಡುತ್ತಿದ್ದಾಳೆ. ಅಷ್ಟರಲ್ಲಿ, ಅಗೊ ನೋಡಿ, ಅವುಗಳ ಕಣ್ಣುಗಳಲ್ಲಿ ಬೆಳಕು! ಅವರಪ್ಪ ಬರುತ್ತಿರುವ. ಮಕ್ಕಳು ಅವನೆಡೆಗೆ ಓಡುತ್ತಿವೆ. ಅವನ ಬಟ್ಟೆ ಬಹಳ ಕೊಳೆಯೆಂದು ಕಾಣುತ್ತಿದೆ, ಯಾವುದೋ ಕಾರ್ಮಿಕನಿರಬೇಕು.ಅದರ ಪರಿವೆ ಅವರ್ಯಾರಿಗೂ ಇಲ್ಲ. ಮಕ್ಕಳು ಜೋತು ಬೀಳುತ್ತಿವೆ. ಆಕೆ ಅವನಿಗೆ ಮುತ್ತಿಡುತ್ತಿದ್ದಾಳೆ. ಎಲ್ಲರ ಮುಖದಲ್ಲೂ ಸಂತಸ ನೆಮ್ಮದಿ. ಚೀಲದಲ್ಲಿರುವ ಸಿಹಿತಿನಿಸು ಮಕ್ಕಳಿಗೆ ಕೊಡುತ್ತಿದ್ದಾನೆ. ಎಲ್ಲ ತಿಂದು ಆಡುತ್ತಿದ್ದಾರೆ. ರಾತ್ರಿಯಾಗುತ್ತಾ ಬಂತು.ಮನೆಗೆ ಹೋಗುತ್ತಿದ್ದಾರೆ. ಆಹಾ ಹುಟ್ಟಿದರೆ ಈ ತಾಯಿಯ ಮಡಿಲಲ್ಲಿ ಹುಟ್ಟಬೇಕು ಎಂದು ನಾನು ನಿರ್ಧರಿಸಿ ಅವರೊಡನೆ ಮನೆಗೆ ನುಗ್ಗಿದೆ. ಊಟವಾಗಿ ಮಲಗುವ ಸಿದ್ಧತೆ ನಡೆಸಿದ್ದಾರೆ. ಆ ಗಂಡ ಹೆಂಡಿರು ತಮಗೊಂದು ಹೆಣ್ಣುಮಗು ಇದ್ದರೆ ಚೆಂದವೆಂದು ಮಾತಾಡಿಕೊಳ್ಳುತ್ತಿದ್ದಾರೆ. ಆ ಸಮಯವೂ ಬಂತು. ನಾನು ಬೇರೆಲ್ಲ ಸೋಂಬೇರಿ ಆತ್ಮಗಳಿಗಿಂತಲೂ ಜಾಗೃತನಾಗಿದ್ದು ಎಣ್ಣೆ ಬರುವಾಗ ಕಣ್ಣು ಮುಚ್ಚಿಕೊಳ್ಳಲಿಲ್ಲ. ಸಮಯಕ್ಕೆ ಸರಿಯಾಗಿ ಎಚ್ಚರದಲ್ಲಿದ್ದು ಪ್ರತಿಷ್ಠಾಪಿತನಾದೆ. ಎಲ್ಲ ಸುಸೂತ್ರವಾಗಿ ನಡೆದಿತ್ತು.ಹತ್ತು ವಾರಗಳು ಕಳೆದಿದ್ದವು. ಆಕೆಗೆ ಮನೆಗೆಲಸದ ಜೊತೆಗೆ ಮಕ್ಕಳ ಆರೈಕೆ ಕಷ್ಟವಾಗತೊಡಗಿತು. ಸಹಾಯಕ್ಕೆ ಪಾಪ ಯಾರೂ ಇಲ್ಲ. ಅವನಾದರೋ ಖರ್ಚು ತೂಗಿಸಲು ಹಗಲಿರುಳು ದುಡಿಯುತ್ತಿದ್ದಾನೆ.ತನ್ನ ಮಕ್ಕಳ ಮೇಲಿನ ತನ್ನ ನಿಗಾ ಕಡಿಮೆಯಾಗುತ್ತಿರುವುದು ಅರಿವಾಗುತ್ತಲೇ ಈ ತಾಯಿಯ ಹೃದಯ ತಳಮಳಿಸತೊಡಗಿತು. ಅಪರಾಧೀ ಮನೋಭಾವ ಕಾಡುತ್ತಿದೆ. ಅವನಿಗೂ ಹೇಳಿದಳು. ಅವನಾದರೂ ಏನು ಮಾಡುತ್ತಾನೆ? ಅಸಹಾಯಕ. ಕಡೆಗೆ ಹೀಗೇ ಮುಂದುವರಿದಲ್ಲಿ ತನ್ನ ಮಕ್ಕಳಿಗೆ ತಾನು ನ್ಯಾಯ ಒದಗಿಸಲಾಗುವುದಿಲ್ಲವೆಂಬ ಜಿಜ್ಞಾಸೆಯಲ್ಲಿ ಬೆಂದು ಗರ್ಭ ನಿವಾರಣೆಗೆ ಮೊದಲಾಗುತ್ತಾಳೆ. ತನ್ನ ಈ ಅಸಹಾಯಕ ಸ್ಥಿತಿಗೆ ಮರುಗುತ್ತಾ , ಅಳುತ್ತಾ ಆಸ್ಪತ್ರೆಗೆ ನಡೆಯುತ್ತಾಳೆ. ವೈದ್ಯರು ನಿರ್ವಿಕಾರ ಮನೋಭಾವದಿಂದ ತಮ್ಮ ಕೆಲಸ ಮಾಡಿದ್ದಲ್ಲದೆ ನನ್ನನ್ನೂ ಉಚ್ಛಾಟಿಸುವಲ್ಲಿ ಯಶಸ್ವಿಯಾಗುತ್ತಾರೆ. ಅಲ್ಲಿಗೆ ನನ್ನ ಅವಧಿ ಮುಗಿಯುತ್ತಾ ಬಂದಿತ್ತು. ನನಗೂ ಈ ಮನುಷ್ಯ ಜೀವನದ ಗೊತ್ತುವಳಿ ಇಲ್ಲದ ಗುರಿಗಳು, ಗುರಿಗಳೇ ಇಲ್ಲದ ನಿರ್ಧಾರಗಳು,ಪ್ರೀತಿ ಪ್ರೇಮದ ಹೊರತಾಗಿಯೂ ಉಳಿದ ಅಂಶಗಳು ಅವರ ಜೀವನವನ್ನು ನಿರ್ದೇಶಿಸುವ ಪರಿ,ಅವರ ಭಾವನೆಗಳು ಹರಿಯುವ ಲಹರಿ, ಬದುಕಿನ ಅನುಭವಗಳನ್ನು ಬೇಗನೆ ಪಡೆಯುವ ತರಾತುರಿ,ಅದರ ನಿಟ್ಟಿನಲ್ಲಿ ಅನುಭವಿಸುವ ಕಿರಿ ಕಿರಿ “ಬಿಸಿಲಿಗಾರದ ಕೋತಿ ಬಂಡೆ ಮೇಲ್ ಕುಳಿತಂತೆ” ಎನ್ನುವ ಹಾಗೆ ನನ್ನನ್ನು ಹೈರಾಣ ಮಾಡಿದ್ದವು. ಸರಳತೆಯು ವಿರಳವಾಗಿ, ಸಂಕೀರ್ಣತೆಯು ಸಂಪೂರ್ಣವಾಗಿ ಆವರಿಸಿದ್ದ ಈ ಮನುಷ್ಯರ ಜೀವನ ನನ್ನಲ್ಲಿ ಭರವಸೆಯ ಆಶಾಕಿರಣಗಳನ್ನು ಉಳಿಸಿರಲಿಲ್ಲ ಅಷ್ಟೇಅಲ್ಲ, ಭ್ರಮನಿರಸನಗೊಳಿಸಿದ್ದವು.ಪ್ರಾಣಿಗಳೇ ವಾಸಿ.ನಿಷ್ಕಾಮ ಕರ್ಮವನ್ನು ಅದರ ಅರಿವಿಲ್ಲದೆಯೂ ಬಹುಮಟ್ಟಿಗೆ ಮನುಷ್ಯನ ವ್ಯಾಖ್ಯೆಗೆ ಮೀರಿ ಆಚರಿಸುತ್ತವೆ. ಈ ಅರಿವು ನನಗಾಗುತ್ತಿದ್ದಂತೆ ನಾನು ಪುನ್ಃ ಯಮಧರ್ಮನ ಆಸ್ಥಾನದ ಕಡೆಗೆ ಧಾವಿಸಿದೆ. ಯಮ ಆಸಕ್ತಿಯಿಂದ ಸ್ವಾಗತಿಸಿದ. ಚಿತ್ರಗುಪ್ತ ತನ್ನ ಬಿಳಿ ಮೀಸೆಯಡಿಯಲ್ಲಿ ಕುಹಕ ನಗೆ ಬೀರುತ್ತಿದ್ದುದು ನನ್ನರಿವಿಗೆ ಬಾರದೆ ಇರಲಿಲ್ಲ. ನನ್ನೀ ಅನುಭವದ ಹಿಂದೆ ಇವನ ಕುಟಿಲ ಕೈವಾಡವಿರಬಹುದೋ ಎಂಬ ಸಂದೇಹ ನನ್ನಲ್ಲಿ ಮೂಡದೆ ಇರಲಿಲ್ಲ. ಪುರಂದರ ದಾಸರ ಮಾನವ ಜನ್ಮ ದೊಡ್ಡದು ಎಂಬ ಹಾಡಿನಿಂದ ಪ್ರಾರಂಭವಾದ ನನ್ನೀ ಅನ್ವೇಷಣೆ “ಆದದ್ದೆಲ್ಲಾ ಒಳಿತೇ ಆಯಿತು” ಎಂಬ ಅವರ ಹಾಡಿನಿಂದಲೇ ಮುಕ್ತಾಯ ಸ್ವಾಮಿ.
ನನ್ನ ಅಂತರಾಳವನ್ನು ನಿಮ್ಮ ಮುಂದೆ ತೆರೆದಿಟ್ಟೆ. ನಿಮಗೇನಾದರೂ ಆತ್ಮನ ಬಗ್ಗೆ ತಿಳಿಯಿತೋ? ಸರಿ. ಇನ್ನೂ ತಿಳಿದಿಲ್ಲವಾದರೆ ಅಥವಾ ಮೊದಲೇ ಕಲಸಿದ್ದ ಮನಸಿಗೆ ಇದೊಂದು ಮೇಲೋಗರವಾಗಿದ್ದರೆ ನಿಮ್ಮ ಕ್ಷಮೆ ಇರಲಿ. ನಿಮ್ಮನ್ನು ನಾನು ಅರಿಯಲಾಗಲಿಲ್ಲ ಹಾಗೇ ನನ್ನನ್ನು ನೀವು!!!.

ಸುದರ್ಶನ ಗುರುರಾಜರಾವ್.

Leave a comment