Nanna Parichaya

ಸುದರ್ಶನ ಗುರುರಾಜರಾವ್ ನನ್ನ ಹೆಸರು. ವೃತ್ತಿಯಿಂದ ವೈದ್ಯಅರಿವಳಿಕೆ ತಜ್ಞ.

ಕರ್ನಾಟಕದ ಬಳ್ಳಾರಿ,ಶಿವಮೊಗ್ಗ,ತುಮಕೂರು, ಬೆಂಗಳೂರು ಜಿಲ್ಲೆಗಳ ಹಳ್ಳಿಗಳಲ್ಲಿ ಪ್ರಾಥಮಿಕ, ಮಧ್ಯಮ ಹಾಗು ಪ್ರೌಢ ಶಿಕ್ಷಣ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರು ವೈದ್ಯಕೀಯ ವಿದ್ಯಾಲಯದಲ್ಲಿ ವೈದ್ಯಕೀಯ ತರಬೇತಿ ಮುಗಿಸಿ ಚಂಡೀಗಢದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ಇಂಗ್ಲೆಂಡಿನಲ್ಲಿ ಅರಿವಳಿಕೆ ತಜ್ಞನಾಗಿ ಕೆಲಸ ಮಾಡುತ್ತಿದ್ದೇನೆ.

ಪ್ರವೃತ್ತಿಗಳು ಹಲವು. ಸಾಹಿತ್ಯ, ಲಘು ಸಂಗೀತ, ವಿಜ್ಞಾನ, ಗಣಿತ,ಕುರಿತ ವಿಷಯಗಳನ್ನು ಕುರಿತು ಓದುವುದು. ಕಲಿಕಾಕ್ರಮ ಹಾಗು ಬೋಧನೆ,ಭಾರತೀಯ ಸಂಸ್ಕೃತಿ, ತತ್ವಶಾಸ್ತ್ರ, ಪುರಾಣಗಳಲ್ಲಿ ನನಗೆ ಆಸಕ್ತಿ ಉಂಟು. ನನಗೆ ದಾಸ ಸಾಹಿತ್ಯ ಬಹಳ ಇಷ್ಟ. ಅಲ್ಲಮನ ವಚನಗಳನ್ನು ಕುರಿತು ಅಭ್ಯಾಸ ಮಾಡುವ ಅಭಿಲಾಷೆ ಇದೆ.

ಇತ್ತೀಚೆಗೆ ಸ್ನೇಹಿತರ ಪ್ರೋತ್ಸಾಹದಿಂದ ಕಥೆ, ಕವನ, ಹರಟೆ ಮೊದಲಾದ ಲೇಖನಗಳನ್ನು ಬರೆಯುತ್ತಿದ್ದೇನೆ.

ಎಸ್.ಎಲ್.ಭೈರಪ್ಪ ನನ್ನ ಅತಿ ಮೆಚ್ಚಿನ ಲೇಖಕರು. ಡಿ.ವಿ.ಜಿ, ಎ.ಆರ್. ಕೃಷ್ಣಶಾಸ್ತ್ರಿ, ಪಂಜೆ ಮಂಗೇಶರಾಯರು ನನ್ನ ಮೆಚ್ಚಿನ ಲೇಖಕರು. ಕು.ವೆಂ.ಪು ಅವರ ಕವನಗಳು ಮತ್ತು ಲಯ ನನಗೆ ಇಷ್ಟವಾದ ಪ್ರಾಕಾರ.ಕುಂ.ವೀರಭದ್ರಪ್ಪ ಮತ್ತು ಕೆ.ಎನ್.ಗಣೇಶಯ್ಯ ಹೊಸ ತಲೆಮಾರಿನ ಲೇಖಕರಲ್ಲಿ ನನಗೆ ಇಷ್ಟವಾದವರು.

ಪಿ.ಬಿ.ಶ್ರೀನಿವಾಸ್ ನನ್ನ ಮೆಚ್ಚಿನ ಗಾಯಕ ಹಾಗು ಎಸ್. ಜಾನಕಿ ನನ್ನ ಮೆಚ್ಚಿನ ಗಾಯಕಿ. ಕನ್ನಡ ಹಳೆಯ ಹಾಡುಗಳು ನನ್ನ ಗುಂಗು.

ಇಂಗ್ಲಿಷಿನ ವಿಷಯಕ್ಕೆ ಬಂದರೆ, ಅಯ್ನ್ ರ್ಯಾಂಡ್ ನನ್ನ ಮೆಚ್ಚಿನ ಲೇಖಕಿ.

ತನು ಕನ್ನಡ ಮನ ಕನ್ನಡ ನುಡಿ ಕನ್ನಡ ಎನ್ನವು!!!

ಹುಡುಗ ಮತ್ತು ಮರ

 

ಹುಡುಗ ಮತ್ತು ಮರ

ಬೆಟ್ಟದಾ ತಪ್ಪಲಲಿ ಸುಂದರ ಬಯಲೊಂದು

ಬಯಲ ಮಧ್ಯದಲಿತ್ತು ಒಂದು ಮರವು

ಕೂಗಳತೆ ದೂರದಲಿ ಪುಟ್ಟದೊಂದು ಮನೆಯು

ಮನೆಯ ಕಣ್ಮಣಿಯಾಗಿ ಗಂಡು ಮಗುವು

ತಂದೆ ತಾಯಿಯರೆಂದು ಹೊಲದಲ್ಲಿ ದುಡಿದಿರಲು

ದುಡಿಯುವಾ ಸಮಯದಲಿ ಪುಟ್ಟ ಮಗುವು

ಮರದ ಬಳಿಯಲಿ ಬಂದು ಆಟವಾಡುತಲಿರಲು

ಆಟ ಪಾಠವ ಕಂಡು ನಲಿದು ಮರವು

ತನ್ನ ಮೌನವ ಮುರಿದು ಮಾತುಗಳನಾಡುತಲಿ

ಮಾತು ಬಾರದ ಕಂದಗದನು ಕಲಿಸಿ

ಹಸಿವಿಂದ ಮಗುವೆಂದು ಬಳಲಿದರೆ ಅದ ಕಂಡು

ಬಳಲಿಕೆಯ ಮರೆಸುಸುವುದು ಹಣ್ಣ ತಿನಿಸಿ

ದಿನಮಾಸ ಉರುಳಿರಲು ಮಗುವು ತಾ ಬೆಳೆದಿರಲು

ಬೆಳೆವ ಮಗುವನು ಕಂಡು ಮರವು ನಲಿದು

ಮಗುವಿಗೀಯುತ ನೆರಳು ಹಣ್ಣು ಬಲು ರುಚಿಯಿರಲು

ಬೆಳೆಸಿತ್ತು ತನ್ನೆದೆಯ ಸಾರ ಬಸಿದು

ಬೆಳೆದ ಬಾಲಕನಾಗಿ ಮರದ ಬಳಿ ಬಂದೊಂದು

ದಿನ ಮುಖವ ಬಾಡಿಸುತ ಕುಳಿತು ಕೊಳಲು

ದುಗುಡ ತಾಳಿದ ಮರವು ಬಾಲಕನ ಬೇಸರಕೆ

ಕಾರಣವು ಏನೆಂದು ತಾ ಕೇಳಲು

ಹಣ್ಣುಗಳು ಸಾಕಾಯ್ತು ತಿಂದು ಬೇಸರವಾಯ್ತು

ಬರಿಮಾತು ನಿನ್ನೊಡನೆ ದಿನವೆಲ್ಲವೂ

ದಿನ ದಿನಕು ಹೊಸ ಆಟ ಪಾಠಗಳು ಬೇಕೆಂದು

ಪರಿತಪಿಸಿ ಕಾಡುತಿದೆ ನನ್ನ ಮನವು

ಬಾಲಕನ ಅಭಿಲಾಷೆಯನ್ನು ಮರ ಅರಿಯುತಲಿ

ಅರಿಕೆ ಮಾಡಿತು ಅವಗೆ ಪ್ರೀತಿಯಿಂದ

ನನ್ನ ಕೊಂಬೆಗೆ ಗಟ್ಟಿ ಹಗ್ಗವನು ನೀ ಕಟ್ಟಿ

ಆಡುತಿರು ಉಯ್ಯಾಲೆ ಹರುಷದಿಂದ

ಮರದ ತ್ಯಾಗದ ಅರಿವಿ ಇಲ್ಲದೆಯೆ ಬಾಲಕನು

ಸುಖಕಾಗಿ ವೃಕ್ಷದಾ ತೋಳನ್ನು ಬಳಸಿ

ಉಯ್ಯಾಲೆಯಲಿ ಕುಳಿತು ಆಡಿದನು ತೂಗಿದನು

ದೇಹ ಮನಸುಗಳನ್ನು ಏರಿಸುತ ಇಳಿಸಿ

ರೆಂಬೆ ಕೊಂಬೆಗಳೆಲ್ಲ ಜಗ್ಗಿ ಮೈ ನೋವಾಗಿ

ನಲುಗಿತದು ಮರ ತಾನು ದಿನರಾತ್ರಿಯು

ಮರದ ಪರಿವೆಯೆ ಇರದ ಬಾಲಕನು ಅನುದಿನವು

ಆಡುತಲಿ ನಲಿದಿದ್ದ ಪ್ರತಿಬಾರಿಯು

ಋತು ಚಕ್ರಗಳು ಉರುಳಿ ಕುಡಿ ಮೀಸೆಯದು ಚಿಗುರಿ

ಬಾಲಕನು ಬೆಳೆದಾದ ನವತರುಣನು

ಆಟ ಪಾಠಗಳವಗೆ ರುಚಿಸದಿರೆ ಮರದೊಡನೆ

ಆಗ್ರಹದಿ ಹಣಕಾಗಿ ಕೇಳುತಿಹನು

ನನ್ನ ಬಳಿ ಬಹಳಿರುವ ಹಣ್ಣುಗಳ ನೀ ಕೊಯ್ದು

ಪಟ್ಟಣಕೆ ಕೊಂಡೊಯ್ದು ವಿಕ್ರಯಿಸಲು

ಸಿಗಬಹುದು ಬಹಳ ಹಣ ನೀ ಒಂದು ಕೈ ನೋಡು

ಎಂದು ಆ ಮರಹೇಳಿ ಸಂಭ್ರಮಿಸಲು

ಹಣ್ಣುಗಳ ಕೊಯ್ಯುತಲಿ ಯುವಕ ತಾ ತವಕದಲಿ

ಕೊಂಡೊಯ್ದ ಪಟ್ಟಣಕೆ ಮಾರಿ ಬರಲು

ಹಣಗಳಿಸಿ ಮರಳಿದನು ಸಿಹಿತಿನಿಸು ತಿನ್ನುತಲಿ

ಮರಕೇನು ಬೇಕೆಂದು ಕೇಳದಿರಲು

ತನಗೇನು ಬೇಕಿಲ್ಲ ಭೂ ತಾಯಿ ಪೊರೆದಿಹಳು

ನೀನು ಸಂತಸ ಪಡಲು ನನಗೆ ಸಾಕು

ಗೆಳೆಯನಾ ಸುಖವೆನ್ನ ಸುಖದಂತೆ ಸಂಭ್ರಮಿಸಿ

ಮರಗಳಿಸಿ ಪುಣ್ಯವನು ಇಹಕು ಪರಕು

ಯುವಕಗಾಯಿತು ಮದುವೆ ಮುಂದೆ ಮಕ್ಕಳುಗಳು

ಸಂಸಾರ ಬೆಳೆದಿತ್ತು ದೊಡ್ಡದಾಗಿ

ಮನೆ ಚಿಕ್ಕದೆನಿಸಿರಲು ವಿಸ್ತರಿಸೆ ಮನೆಯನ್ನು

ಕೇಳಿದನು ಮರದ ಬಳಿ ಹಲಗೆಗಾಗಿ

ಕೆಳಗಿನಾ ಕೊಂಬೆಗಳು ಅಗಲ ಇರುವವು ಬಹಳ

ನೀ ಕಡಿಯೆ ಸಿಗುವವು ಬಹಳ ಹಲಗೆ

ಮನೆ ದೊಡ್ಡದಾದಂತೆ ಮನಸು ಮುದುಡುವುದೆಂಬ

ಮಾತನ್ನು ಮರೆಯಬೇಡೆಂದು ಕೊನೆಗೆ

ವಾರ ಮಾಸಗಳಾಗಿ ಯುವಕನಾ ಕುರುಹಿರದೆ

ಒಂದು ದಿನ ಕುಳಿತನವ ಮರದೆಡೆಗೆ ಬಂದು

ಜೋಲು ಮೋರೆಯ ಕಂಡು ಮರವು ತಾ ಬಲು ನೊಂದು

ಕೇಳಿರಲು ಅವನ ಕ್ಲೇಶವದೇನೆಂದು

ಖರ್ಚು ಬೆಳೆಯುತಲಿಹುದು ನಿನ್ನ ಹಣ್ಣುಗಳಿಂದ

ನೀಸದಾಗದು ನನ್ನ ಸಂಸಾರವನ್ನು

ಕೊಡು ನಿನ್ನ ಬೊಡ್ಡೆಯನು ನಾ ಕಟ್ಟಿ ಹಡಗನ್ನು

ದುಡಿಯುತಲಿ ಮಾಡುವೆನು ವ್ಯಾಪಾರವನ್ನು

ಇಷ್ಟು ಮಾಡಿದ ನಾನು ಅಷ್ಟನ್ನೂ ಮಾಡದಿರೆ

ನಮ್ಮ ಸ್ನೇಹಕೆ ಇರುವ ಅರ್ಥವೇನು

ಕಡಿದು ನೀ ನನ್ನನ್ನು ಕಟ್ಟು ಕನಸಿನ ಹಡಗು

ದುಡಿದು ನೀ ಅನುಭವಿಸು ಸಿರಿತನವನು

ವರ್ಷಗಳು ಉರುಳಿದವು ಯುವಕ ಮರಳಿದ

ಮನೆಗೆ ಗಳಿಸುತ್ತ ಅಪಾರ ಧನರಾಶಿಯ

ಸಂಸಾರದೊಡಗೂಡಿ ಅನುಭವಿಸಿ ಸಿರಿತನವ

ಮರೆತಿರಲು ತ್ಯಾಗಮಯಿ ಮರದ ಇರುವ

ವೃಧ್ಧಾಪ್ಯ ಆವರಿಸಿ ದೇಹ ತಾ ಹಣ್ಣಾಗಿ

ಹೆಂಡತಿಯು ತ್ಯಜಿಸಿರಲು ಇಹಲೋಕವ

ಮಕ್ಕಳೆಲ್ಲರು ತಮ್ಮ ವ್ಯವಹಾರದಲಿ ಮುಳುಗಿ

ಕೆಡೆಗಣಿಸಿರಲು ಈ ಮುದುಕನಿರುವ

ಒಂಟಿತನವದು ಕಾಡಿ ಮನಸು ಮುದುಡುತಲಿರಲು

ಆಗಾಯ್ತು ಅವನಿಗಾ ಮರದ ನೆನಪು

ಮನದಲ್ಲಿ ಬೆಳಕೊಂದು ಹೊಳೆದಂತೆ ನಡೆದಿರಲು

ಹೆಜ್ಜೆಗಳಿಗಂದಿತ್ತು ಹೊಸದೆ ಹುರುಪು

ಕತ್ತರೈಸಿದಾ ಬೊಡ್ಡೆ ಹಾಗೆಯೇ ಉಳಿದಿತ್ತು

ಕುಳಿತುಕೊಳ್ಳಲು ಕಲ್ಲು ಹಾಸಿನಂತೆ

ಮುದುಕನನು ಕಂಡಾಗ ನಸು ನಗುತ

ಸ್ವಾಗತಿಸಿ ಹೇಳಿತ್ತು ತನಮೇಲೆ ಕುಳ್ಳುವಂತೆ

ಕೊಡುವುದನು ಕಲಿಯದಲೆ ಬರಿದೆ ಕೇಳುತ ತನ್ನ

ಜೀವನವನ್ನೆಲ್ಲ ಬಸಿದ ಮುದುಕ

ಒಂದು ಘಳಿಗೆಯು ತನ್ನ ಮನದಲ್ಲಿ ಸಂತೋಷ

ಅನುಭವಿಸದೆಯೆ ಕಳೆದ ತನ್ನ ಬದುಕ

ಪರರ ಬೇಡಿಕೆಗಳಿಗೆಂದು ಸ್ಪಂದಿಸುತ ತನ್ನ

ತಾನೇ ಅವಗೆ ಧಾರೆ ಎರೆದು

ಮರತಾನು ಬದುಕಿತ್ತು ಬೊಡ್ಡೆಯಾ ಸ್ಥಿತಿಯಲ್ಲಿ

ಜಗದೆಲ್ಲ ಸಂತೋಷ ಸೂರೆ ಹೊಡೆದು.!!

ಡಾ. ಸುದರ್ಶನ ಗುರುರಾಜರಾವ್

ಚಂದ್ರ ವಂಶ

ಚಂದ್ರ ವಂಶ
ಮಹಾಭಾರತದ ಕಥೆ ಬಹಳ ಸುಂದರ, ಸಂಕೀರ್ಣ ಹಾಗೂ ಆಸಕ್ತಿಕರ. ಸಾಮಾನ್ಯವಾಗಿ ಶಂತನುವಿನಿಂದ ಕಥೆ ಹೇಳುತ್ತಾರೆ. ಮಹಭಾರತದ ತಿರುಳು ಅಲ್ಲಿಯೇ ಇದ್ದರೂ ವಂಶಪಾರಂಪರ್ಯವಾಗಿ ಆದ ತಪ್ಪುಗಳು ಕೆಲವು ಸಾರಿ ಮುಂದಿನ ತಲೆಮಾರುಗಳ ಕಷ್ಟ ಕೋಟಲೆಗಳಿಗೆ ಕಾರಣವಾಗುವುದು ಅನುಭವವೇದ್ಯ. ಮಹಾಭಾರತ ಕಥೆಯ ಮೂಲ ಪುರುಷ ಚಂದ್ರ. ಗುರುಪತ್ನಿಯನ್ನೇ ಕಾಮಿಸಿದ ಇವನು ಮುಂದಿನ ಬಹಳಷ್ಟು ಅನರ್ಥಗಳಿಗೆ ಮುನ್ನುಡಿಯನ್ನೆ ಬರೆದ. ಲಭ್ಯವಿರುವ ವಿವರಗಳಿಂದ ಎಲ್ಲ ಪೂರ್ವಜರ ಹೆಸರುಗಳನ್ನು ಸೇರಿಸಿ ಈ ಚಂದ್ರವಂಶಾವಳಿಯನ್ನು ಕವಿತೆಯ ರೂಪದಲ್ಲಿ ರಚಿಸಿದ್ದೇನೆ. ನನಗೆ ಸಿಕ್ಕ ವಿವರಗಳಲ್ಲಿ ಕೆಲವು ಅಪೂರ್ಣವಿರಬಹುದು ಅಥವಾ ತಪ್ಪುಗಳು ಇರಬಹುದು. ಈ ನಿಟ್ಟಿನಲ್ಲಿ ಮುಂದೆ ವಿವರಗಳು ಸಿಕ್ಕಲ್ಲಿ ಸೂಕ್ತ ಬದಲಾವಣೆಗಲನ್ನು ಮಾಡುವ ಅಭಿಲಾಷೆ ನನ್ನದು.

ಆದಿಯಲಿ ವಿಷ್ಣು ಹಾಲ್ಗಡಲಿನಲ್ಲಿರಲು
ಅವನ್ ಹೊಕ್ಕುಳ ಬಳ್ಳಿ ಬೆಳೆದು ಅರಳಿರಲು
ಕಮಲಾಸನನಾಗಿ ಬ್ರಹ್ಮ ಉದಯಿಸಲು
ಸೃಷ್ಟಿ ಕಾರ್ಯಕೆ ಬ್ರಹ್ಮ ಮೊದಲು ಮಾಡಿರಲು

ಮೊದಲು ಮೂವರು ಮಾನಸ ಪುತ್ರರುದಿಸಿದರು
ಸ್ವಯಂಭು ಮೊದಲಾಗಿ ದಕ್ಷ ಅತ್ರಿಯರು
ದೇವ ದಾನವ ಮರ್ತ್ಯ ಲೋಕಗಳು ಮೂರು
ಪ್ರತಿಯೊಂದು ಲೋಕದಲಿ ಒಬ್ಬಬ್ಬರು

ಸ್ವಯಂಭುವಿನ ಪುತ್ರ ಪ್ರಿಯಂವರ್ತನು
ಊರ್ಜಸ್ವತಿಯ ತಾ ವರಿಸಿರ್ದನು
ದಾಂಪತ್ಯದಾ ಫಲವು ನೀಡೆ ಸುತನನ್ನು
ಶುಕ್ರಚಾರ್ಯನೆಂದವನು ಹೆಸರಾದನು

ಎರಡನೆಯ ಮಾನಸ ಪುತ್ರ ದಕ್ಷ
ಇವನಿರುವ ಜಗವೆಲ್ಲ ಅಂತರಿಕ್ಷ
ದೇವಗಣದವರೆಲ್ಲರು ಇವನ ಪಕ್ಷ
ಸೂರ್ಯವಂಶಕೆ ಇವನೆ ಮೂಲವೃಕ್ಷ

ದಕ್ಷ ಅದಿತಿಯರಲ್ಲಿ ಎರಡು ಸುತರು
ಆದಿತ್ಯ- ಕಶ್ಯಪರ ಹೆಸರಿನವರು
ಆದಿತ್ಯನಿಂದಾಗಿ ಸೂರ್ಯವಂಶ
ಕಶ್ಯಪನ ಸಂತತಿಯೆ ಪ್ರತ್ಯೇಕ ಅಂಶ

ಅತ್ರಿ ಎಂಬುವ ಕಡೆಯ ಬ್ರಹ್ಮ ಮಾನಸ ಪುತ್ರ
ಚಂದ್ರ ವಂಶದ ನದಿಯ ಮೂಲ ಪಾತ್ರ
ಪತಿವ್ರತೆಯರಲ್ಲೆಲ್ಲ ಏಕಮಾತ್ರ
ಅನಸೂಯೆಯಾ ಪಡೆದ ಪುಣ್ಯ ಪಾತ್ರ

ಅತ್ರಿಯಾ ಮಗನಾಗಿ ಚಂದ್ರ ಉದಯಿಸಲು
ಚೆಲುವ ಚನ್ನಿಗನಾಗಿ ಮೆರೆದು ಆಡಿರಲು
ದೇವರ್ಷಿ ಬೃಹಸ್ಪತಿಯ ಶಿಶ್ಯನಾಗಿರುತ
ಗುರುಪತ್ನಿ ತಾರೆಯನು ಮರುಳು ಮಾಡಿರುತ

ತಾರೆಯೊಂದಿಗೆ ಕೂಡಿ ಗುರುದ್ರೋಹವೆಸಗಿ
ಬುಧನೆಂಬ ಪುತ್ರನಿಗೆ ತಂದೆ ತಾಯಾಗಿ
ಸ್ತ್ರೀ ಮೋಹ ಲಾಲಸೆಗೆ ಅನ್ವರ್ಥವಾಗಿ
ಪೀಠಿಕೆಯ ಬರೆದಂಥ ಸ್ವಾರ್ಥಿ ತಾನಾಗಿ

ಚಂದ್ರನಾ ನಂತರದಿ ಬುಧನು ತಾ ಬಂದು
ಇಳೆಯೆಂಬ ಸುಂದರಿಯ ತಾ ವರಿಸಿ ನಿಂದು
ಪುರೂರವನೆಂಬುವ ಸುತನ ಪಡೆದಂದು
ಚಂದ್ರವಂಶದ ಮೊದಲ ದೇವಬಂಧು

ಸೂರ್ಯ ಚಂದ್ರರ ವಂಶ ವಾಹಿಗಳು ಸೇರೆ
ಸುದ್ಯುಮ್ನ ಇಳೆಯಾದ ಕಥೆಯಿಹುದು ನೀರೆ
ಸುದ್ಯುಮ್ನ ಪಾರ್ವತಿಯ ನಿಷೇಧವ ಮೀರೆ
ಶಾಪಕೊಟ್ಟಳು ಅವನ ಲಿಂಗ ಬದಲಿಸಿ ಬೇರೆ

ತಿಳಿಯದೆಯೆ ತಪ್ಪಾಗಿ ಸುದ್ಯುಮ್ನ ಕೊರಗಿ
ಪಾರ್ವತಿಯು ಅವನನ್ನು ಕಂಡು ತಾ ಮರುಗಿ
ಒಂದು ಮಾಸಕೆ ಒಂದು ಲಿಂಗದಂತೆ
ಸುದ್ಯುಮ್ನ ಇಳೆಯಾಗಿ ಬದಲಾದನಂತೆ

ದೇವತೆಗಳೊಡಗೂಡಿ ದಾನವರ ಗೆಲಿದು
ಪುರೂರವ ತಾನಾದ ದೇವಗಣ ಬಂಧು
ದೇವಲೋಕದಿ ಒಮ್ಮೆ ಊರ್ವಶಿಯ ಕಂಡು
ಮರುಳಾದ ಮರೆಯುತಲಿ ತನ್ನೆ ತಾನಂದು

ಊರ್ವಶಿಯ ಪ್ರೇಮಕ್ಕೆ ಅಂದು ಮರುಳಾಗಿ
ಅವಳಿಟ್ಟ ಕಟ್ಟಳೆಗೆ ತನ್ನ ತಲೆದೂಗಿ
ಸುಖ ದುಃಖ ಮಿಲನ ವಿರಹಾದಿ ಸಮನಾಗಿ
ಆರು ಜನ ಜನಿಸಿದರು ಮಕ್ಕಳಾಗಿ

ಆಯುಸ್ಸು ಪೌರವನ ಮೊದಲ ಮಗನು
ಇಂದುಮತಿಯಲಿ ಪಡೆದ ನಹುಷನನ್ನು
ಗುಣದಲ್ಲಿ ಮೀರಿಸುತ ದೇವೇಂದ್ರನನ್ನು
ಇಂದ್ರಪದವಿಗೆ ಸ್ವತಃ ಏರಿದವನನ್ನು

ಇಂದ್ರಪದವಿಯ ಭೋಗ ಇವನ ತಲೆಗೇರಿ
ಶಚಿದೇವಿಯಲ್ಲಿ ತನ್ನನುರಾಗ ಕೋರಿ
ಧರ್ಮ-ಕರ್ಮದ ಚೌಕಟ್ಟು ತಾಮೀರಿ
ಶಾಪದಿಂ ಹಾವಾಗಿ ಧರೆಯನ್ನು ಸೇರಿ

ಇಂದ್ರಪದವಿಗೆ ತಾನೇರುವಾ ಮುನ್ನ
ನಹುಷ ತಾನಾಗಿದ್ದ ಸದ್ಗುಣ ಸಂಪನ್ನ
ಕೈ ಹಿಡಿದು ಅಶೋಕ ಸುಂದರಿಯೆಂಬುವಳನ್ನ
ಪಡೆದಿದ್ದ ತಾ ಪುತ್ರ ಯಯಾತಿಯನ್ನ

ಯಯಾತಿಯಾ ಕಥೆಯು ಬಹಳವೇ ಹಿರಿದು
ದೇವಯಾನಿಯ ಕೂಪದಿಂದೆತ್ತಿ ಕೈ ಹಿಡಿದು
ದಾಸಿಯಾಗುತ ಬಂದ ಶರ್ಮಿಷ್ಠೆಯನು ಕಂಡು
ವರಿಸಿದನು ಗುಟ್ಟಿನಲಿ ತಿಳಿಯರು ಯಾರೆಂದು

ದೇವಯಾನಿಯಲೆರೆಡು ಮಕ್ಕಳು ಜನಿಸಿ
ತುರ್ವಸು- ಯದು ಎಂಬ ಹೆಸರವರಿಗಿರಿಸಿ
ಪುರು ಅನುದೃಹು ದೃಹ್ಯು ಮೂವರಾಗಿ
ಜನಿಸಿದರು ಶರ್ಮಿಷ್ಠೆ ಸುತರು ತಾವಾಗಿ

ಯಯಾತಿಯಾ ಗುಟ್ಟು ದೇವಯಾನಿಯ ಸಿಟ್ಟು
ದೈತ್ಯ ಗುರು ಶುಕ್ರನಿಗೆ ತಿಳಿದುಬಿಟ್ಟು
ಯೌವನವು ಕಳೆಯುವಾ ಶಾಪವನು ತಾ ಕೊಟ್ಟು
ಯಯಾತಿಗರುಹಿದರು ಆಸೆಯನು ಮೆಟ್ಟು

ಶರ್ಮಿಷ್ಠೆಯಾ ಸೆಳೆತ ಕಾಮ ದಾಹದ ತುಡಿತ
ತಾಳಲಾರದೆ ದೊರೆಯು ಭಿಕ್ಷೆ ಯಾಚಿಸುತ
ಬೇಡಿದನು ಪುತ್ರರಲಿ ಯೌವ್ವನದ ದಾನ
ಮರೆಯುತಲಿ ತನ್ನ ನಿಜ ಸ್ಥಾನ ಮಾನ

ಪುತ್ರರತ್ನಗಳೈದು ಯಯಾತಿಗಿರಲು
ಆಯು ದಾನವ ನೀಡೆ ಯಾರು ಬರದಿರಲು
ಬೇಡಿದನು ಯಯಾತಿ ಕೊನೆಯ ಮಗನನ್ನು
ಪಿತೃ ಪೂಜಕ ಪುತ್ರ ವೀರ ಪುರುವನ್ನು

ತಂದೆಯಾಸೆಗೆ ಅಂದು ಸ್ಪಂದಿಸಿದ ಸುತನು
ಸಂತಸದಿ ನೀಡಿದನು ಅರ್ಧಾಯುವನ್ನು
ಯಯಾತಿ ಗರ್ವದಲಿ ಅಪ್ಪಿ ಮಗನನ್ನು
ನಿಯತಿ ಮಾಡಿದನವಗೆ ತನ ರಾಜ್ಯವನ್ನು

ಯದುವಿನಾ ಸಂತತಿಯೆ ಮುಂದೆ ಯಾದವರು
ಧರ್ಮ ರಕ್ಷಕ ದೇವ ಕೃಷ್ಣ ಕುಲದವರು
ತುರ್ವಸುವಿನಿಂ ಯವನ ದೃಹ್ಯು ನಿಂ ತ್ವಿಪ್ರರು
ಅನುದೃಹುವಿನಿಂದಾಗಿ ಮ್ಲೇಚ್ಚ್ಹರುದಿಸಿದರು.

ಚಂದ್ರವಂಶದ ರಾಜ ತಾನಾಗಿ ಪುರುವು
ಪಡೆಯುತಲಿ ಕೌಶಲ್ಯಳೆಂಬಾಕೆ ಒಲವು
ಮನುಸ್ಯು ಎಂದೆಂಬ ಮಗನನ್ನು ಹಡೆದು
ರಾಜ್ಯವನು ಒಪ್ಪಿಸುತ ಅರಣ್ಯಕ್ಕೆ ನಡೆದು

ಹಲವು ರಾಣಿಯರಿಂದ ಬಲು ಮಕ್ಕಳ ಪಡೆದು
ರಾಜ್ಯವಾಳಿದ ತಾನು ಮನುಸ್ಯು ಮೆರೆದು
ತನ್ನ ಶೋಡಶ ಪುತ್ರ ನಿಲೀಲಗೆಂದು
ಪಟ್ಟವನು ಕಟ್ಟಿ ತಾ ತೆರೆಮರೆಗೆ ನಿಂದು

ನಿಲೀಲನಾ ಪತ್ನಿ ರತಾಂಧರಿಯೆಂದು
ಇವರ ಪುತ್ರನೆ ಮುಂದೆ ದುಶ್ಯಂತನೆಂದು
ವನ ವಿಹಾರದೊಳಿರಲು ಶಕುಂತಲೆಯ ಕಂಡು
ವರಿಸಿದನು ರೂಪಕ್ಕೆ ಮರುಳಾಗಿ ನಿಂದು

ಇವರೀರ್ವರಾ ಕಥೆಯ ತಿಳಿಯದವರಾರು
ಕಾಳಿದಾಸನ ಕಾವ್ಯ ಪಾತ್ರಧಾರಕರು
ಇವರ ಪುತ್ರನೆ ಮುಂದೆ ಭರತನೆಂದೆಂದು
ಭರತವರ್ಷಕೆ ನಾಂದಿ ಹಾಡಿದನು ಬಂದು

ಭರತನಾ ಶೌರ್ಯ ಸಾಹಸಗಳಸಮ
ಸರ್ವದಮನ ಎಂಬುದೆ ಇವನುಪನಾಮ
ಆಸೇತುವಿನಿಂದಾದಿ ಹಿಮಾಲಯದವರೆಗೆ
ಭರತಖಂಡವ ತಂದ ತನ್ನಧಿಪತ್ಯದೊಳಗೆ

ಸರ್ವಸೇನನ ಪುತ್ರಿ ಸುನಂದೆಯಿಂದ
ಭರತನಾ ಮಗನಾಗಿ ಭೂಮನ್ಯು ಬಂದ
ಸುವರ್ಣಳೆಂದೆಂಬ ತರುಣಿಯನು ವರಿಸಿ
ಸುಹೋತ್ರನೆಂದೆಂಬ ಕುಮಾರನು ಜನಿಸಿ

ಜಯಂತಿಯನು ವರಿಸಿ ಸುಹೋತ್ರ ಮುಂದೆ
ತಾನಾದ ಹಸ್ತಿ ಎಂಬೀ ಕುಮಾರನ ತಂದೆ
ಹಸ್ತಿನಾಪುರವೆಂಬ ನಗರವನು ಇವ ಕಟ್ಟಿ
ಚಕ್ರಾಧಿಪತ್ಯವನು ಮೆರೆಸಿದನು ಮೆಟ್ಟಿ

ವಿಕ್ರಾಂಜ ಹಸ್ತಿಯಾ ಮಗನಾಗಿ ಬರಲು
ಅಜಮೀಢನೆಂದೆಂಬ ಪುತ್ರ ಇವಗಿರಲು
ಅಜಮೀಢ ಹಲವಾರು ರಾಣಿಯರ ಗಂಡ
ಎರಡು ಸಾವಿರ ಪುತ್ರ ರತ್ನಗಳ ತಂದ

ಎರಡು ಸಾವಿರ ರಾಜ ಕುವರರಾ ನಡುವೆ
ಇರುಷನೆಂಬೊಬ್ಬಾತ ಶೌರ್ಯವನು ಮೆರೆಯೆ
ಸಂವರಣ ಇವನ ಮಗ ಮುಂದಿನ ದೊರೆಯೆ
ಕುರುವಂಶದುದಯಕ್ಕೆ ಮುನ್ನುಡಿಯ ಬರೆಯೆ

ಸೂರ್ಯನಿಗೆ ಛಾಯೆಯಲಿ ಜನಿಸಿದಾ ಮಗಳು
ತಪತಿ ಎಂದೆಂಬ ಚೆಲು ಹೆಸರಿನವಳು
ಸಂವರಣನೊಡಗೂಡಿ ಬಾಳ್ವೆ ನಡೆಸಿದಳು
ಕುರು ಎಂಬೊ ಧೀಮಂತ ಮಗನ ಹಡೆದವಳು

ಕುರುವಿನಾ ವಂಶವನು ಮುಂದಕುದ್ಧರಿಸೆ
ವಿದುರಥ ಎಂದೆಂಬ ಕುವರನವತರಿಸೆ
ಅಮೃತ ಎಂದೆಂಬ ತರುಣಿಯನು ವರಿಸಿ
ಚಂದ್ರ- ಕುರು ವಂಶವನು ತಾ ಮುಂದುವರಿಸಿ

ವಿದುರಥನ ಮುಂದೆರೆಡು ತಲೆಮಾರು ಕಳೆದು
ಪ್ರತೀಪನೆಂಬುವನು ಅಧಿಕಾರ ಪಡೆದು
ಸುನಂದೆ ಎನ್ನುವಾ ಸಾಧ್ವಿಯಾ ಕೈಹಿಡಿದು
ದೇವಾಪಿ, ಬ್ಬಾಹ್ಲೀಕ, ಶಂತನುವ ಹಡೆದು

ದೇವಾಪಿ ಎಂಬುವನು ಹಿರಿಯ ಮಗನಾಗೆ
ವೇದ ವಿದ್ಯಾಭ್ಯಾಸದಲಿ ಹಗಲಿರುಳು ಮುಳುಗೆ
ರಾಜನಾಗುವ ಎಲ್ಲ ಅರ್ಹತೆಗಳಿರಲು
ಕುಷ್ಠ ರೋಗದಿ ನೊಂದು ಕಾಡಸೇರಿರಲು

ತನ್ನ ತಾಯಿಯ ಪಿತನ ಆಪೇಕ್ಷೆಯಂತೆ
ಬಾಹ್ಲೀಕ ತೆರಳಿದನವರ ದತ್ತು ಮಗನಂತೆ
ಬಾಹ್ಲೀಕ ದೇಶಕ್ಕೆ ರಾಜ ತಾನಾಗಿ
ದೂರದಲಿ ತಾನುಳಿದ ತಟಸ್ಠನಾಗಿ

ಮೂರು ಮಕ್ಕಳ ನಡುವೆ ಒಬ್ಬನುಳಿದವನು
ಶಂತನು ತಾನೆಂಬ ಹೆಸರಿಗನ್ವರ್ಥಕನು
ಶೌರ್ಯ ಸಾಹಸ ಶಾಂತಿ ಮೇಳೈಸಿದವನು
ಸ್ತ್ರೀ ವ್ಯಾಮೊಹದಲಿ ಮತಿಗೇಡಿಯಾದವನು

ಗಮ್ಗೆಯನು ಕಂಡಲ್ಲಿ ವ್ಯಾಮೋಹಗೊಂಡು
ಅವಳ ಕಟ್ಟಳೆಗಳಿಗೆ ತನ್ನೊಡ್ಡಿಕೊಂಡು
ಶಿಶುಹತ್ಯ ಸಹಿಸದೆಯೆ ವ್ಯಾಕುಲದಿ ತಾನೊಂದು
ಗಾಂಗೇಯನೊಬ್ಬನನೆ ಕೊನೆಗುಳಿಸಿಕೊಂಡು

ಗಂಗೆಯಾ ವಿರಹದಲಿ ತಾನೊಂದು ಬೆಂದು
ಕೊನೆಗೊಮ್ಮೆ ಯಮುನೆಯಲಿ ಸತ್ಯವತಿಯನೆ ಕಂಡು
ರೂಪ ಲಾವಣ್ಯಕ್ಕೆ ಬಲುಮೋಹಗೊಂಡು
ದಾಯಾದಿ ಕಲಹಕೆ ಬರೆದ ಮುನ್ನುಡಿಯಂದು

ಭರತ ಕಟ್ಟಿದ ಮಹಾಭಾರತದ ಕದನ
ಅರ್ಹತೆಯ ಕಡೆಗಣನೆಯಿಂದಾಗೊ ಪತನ
ಮತಿಗೇಡಿ ನಿರ್ಧಾರದಿಂದಾಗೊ ವ್ಯಸನ
ತಿಳಿಯುವುದು ಮಾಡಿದರೆ ಭಾರತದ ಪಠಣ

ಹಿರಿಯ ನಾಗನ ನಂಜು ಕಿರಿಯ ನಾಗನ ಪಾಲು
ತಂದೆ ಮಾಡಿದ ಪಾಪ ಕುಲದ ಪಾಲು
ವೇದವಾಣಿಯ ಸಮಕೆ ಗಾದೆ ನುಡಿ ಇಲ್ಲಿಹುದು
ಶಂತನು ಕಥೆಯೊಡನೆ ಕವಿತೆ ಮುಗಿಯುವುದು.

ಡಾ.ಸುದರ್ಶನ ಗುರುರಾಜರಾವ್

ಗುಂಗು

ಗುಂಗು

ಗುಂಗಿನ ಹಂಗದು ನಿನಗಿರೆ ಗೆಳೆಯ
ಬೇಸರವಿಲ್ಲದೆ ಕಳೆವುದು ಸಮಯ
ಜೀವನಕೊಂದು ಸಿಗುವುದು ಧ್ಯೇಯ
ಬದುಕಿದ ಬಾಳಿಗೆ ದೊರೆವುದು ನ್ಯಾಯ

ಪಿತೃ ವಾಕ್ಯವೆ ರಾಮನ ಗುಂಗು
ಭ್ರಾತೃ ಪ್ರೇಮವೆ ಭರತನ ಗುಂಗು
ಸೀತಾಪತಿ ಜಪ ಮಾರುತಿ ಗುಂಗು
ನೀತಿ ನಿಯಮಗಳ ಸಾರುವ ಗುಂಗು

ಸರ್ವ ಶ್ರೇಷ್ಠತೆಗೆ ಪಾರ್ಥನ ಗುಂಗು
ಧರ್ಮ ಸ್ಥಾಪನೆಗೆ ಕೃಷ್ಣನ ಗುಂಗು
ಧರ್ಮರಾಯನ ನೀತಿಯ ಗುಂಗು
ಕರ್ಮದ ಮರ್ಮವನರಿಯುವ ಗುಂಗು

ಪರಮ ಶಿವನ ಜಪ ಪಾರ್ವತಿ ಗುಂಗು
ಮುರಳಿಯ ಧ್ಯಾನವೆ ರಾಧೆಯ ಗುಂಗು
ಮುರಾರಿಯ ಸೇವೆಗೆ ರುಕ್ಮಿಣಿ ಗುಂಗು
ಕಿರೀಟಿ ಒಲುಮೆಗೆ ದ್ರೌಪದಿ ಗುಂಗು

ದ್ರುಪದನ ಮಣಿಸಲು ದ್ರೋಣನ ಗುಂಗು
ದ್ರೋಣನ ಹಣಿಯಲು ದ್ರುಪದನ ಗುಂಗು
ಭೀಷ್ಮನ ಸೆಣೆಯುವ ಶಕುನಿಯ ಗುಂಗು
ಕಷ್ಮಲ ಮನಸಿನ ಕನಸಿನ ರಂಗು

ಕೃಷ್ಣೆಯ ಕಾಮಿಪ ಕೀಚಕ ಗುಂಗು
ಕ್ರೋಧ ಮತ್ಸರದ ಕೌರವ ಗುಂಗು
ಲೋಭ ಮೋಹ ಮದ ಪಾಶದ ರಂಗು
ಬೇಡೆಮೆಗರಿಷಡ್ವರ್ಗದ hanಗು

ಬಾಲ್ಯದಿ ವಿದ್ಯಾಭ್ಯಾಸದ ಗುಂಗು
ಧರ್ಮದಿ ಅರ್ಥವ ಗಳಿಸುವ ಗುಂಗು
ವಾನಪ್ರಸ್ಥದಿ ಆಧ್ಯಾತ್ಮದ ಗುಂಗು
ಮೋಕ್ಷಾರ್ಜನೆ ಸನ್ಯಾಸದ ಗುಂಗು

ಗಾಯಕನಿಗೆ ಶೃತಿ ಲಯಗಳ ಗುಂಗು
ನಾಯಕನಿಗೆ ಆದರ್ಶದ ಗುಂಗು
ಕಾಯಕವೇ ಶಿವ ಶರಣರ ಗುಂಗು
ಸಾಯುಜ್ಯಕೆ ಹರಿ ದಾಸರ ಗುಂಗು

ನಿನಗಿರೆ ಕನ್ನಡ ಮಣ್ಣಿನ ಹಂಗು
ಪುಟಿಯಲಿ ಋಣವನು ತೀರಿಸೊ ಗುಂಗು
ಜಗದೆಲ್ಲೆಡೆಯಲಿ ಕನ್ನಡ ರಂಗು
ಹರಡುತ ಭಾಷೆಯ ಬೆಳೆಸುವ ಗುಂಗು

ಅಂತರಾತ್ಮನ ಬಯಕೆಯೆ ಗುಂಗು
ಗುಂಗಿಗಿರಲಿ ಸು-ನೀತಿಯ ಹಂಗು
ಗುಂಗಿರೆ ಜೀವನದೆಲ್ಲೆಡೆ ರಂಗು
ಇರದಿರೆ ಬದುಕದು ಹಿಡಿವುದು ಜಂಗು!!

ಡಾ.ಸುದರ್ಶನ ಗುರುರಾಜರಾವ್

ಹೋಳಿ ಹಬ್ಬ

ಹೋಳಿ ಹಬ್ಬ
ಮಾಘ -ಫಾಲ್ಗುಣ ಮಾಸಗಳ ಶಶಿರ ಋತು ಮುಗಿದು ಚೈತ್ರ ಮಾಸ ಆರಂಭವಾಗುವ ಸಂಧಿ ಕಾಲದಲ್ಲಿ ಜನಪದವು ಸಂಭ್ರಮದಿಂದ ಆಚರಿಸುವ ಹಬ್ಬವೇ ಹೋಳಿ ಹುಣ್ಣಿಮೆ. ಇದನ್ನು ಕಾಮನ ಹಬ್ಬ, ಕಾಮದಹನದ ಹಬ್ಬ ಅಥವಾ ಕಾಮನ ಹುಣ್ಣಿಮೆ ಎಂದೂ ಆಚರಿಸುತ್ತಾರೆ. ಭಾರತದಲ್ಲಿ ಹಬ್ಬಗಳಿಗೆ ಬರವೇನಿಲ್ಲ ಆದರೆ ಪ್ರತಿ ಹಬ್ಬಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ.
ಹಬ್ಬಗಳ ಪ್ರಾಮುಖ್ಯತೆಯನ್ನು ಪೌರಾಣಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ತಾತ್ವಿಕ ದೃಷ್ಟಿಕೋನಗಳಿಂದ ನೋಡಬಹುದು. ಹೋಳೀ ಹಬ್ಬವನ್ನು ಈ ಆಯಾಮಗಳಿಂದ ನೋಡಿದಾಗ ನಮಗೆ ಕೆಲವು ಕಥೆಗಳು ತಿಳಿದು ಬರುತ್ತವೆ. ’ ಹೋಳಿ ’ ಎಂದರೆ ಸಂಸ್ಕೃತದಲ್ಲಿ ’ಸುಡು’ ಎಂದರ್ಥ. ಹಾಗಾದರೆ ಏನನ್ನು ಸುಡುವುದು?
ಹಿರಣ್ಯಕಶ್ಯಪುವಿನ ಮಗ ಪ್ರಹಲ್ಲಾದನ ಕಥೆ ಎಲ್ಲರಿಗೂ ಗೊತ್ತಿದ್ದೆ. ನಾನು ಎಂಬ ಅಹಂಕಾರದಲ್ಲಿ ಮುಳುಗಿ, ಹರಿ ದ್ವೇಷಿಯಾಗಿ ಸರ್ವ ಶಕ್ತ ತಾನೇ ಆದ್ದರಿಂದ ಎಲ್ಲರೂ ತನ್ನನ್ನೇ ಪೂಜಿಸಬೇಕೆಂದು ಆಗ್ರಹಮಾಡಿದ್ದಲ್ಲದೆ ಮಾಡದವರನ್ನು ಶಿಕ್ಷೆಗೆ ಒಳಪಡಿಸುತ್ತಿದ್ದ. ಅವನ ಮಗ ಮಹಾ ಹರಿ ಭಕ್ತ. ಮಗನೆಂಬ ಮಮಕಾರವನ್ನು ತೊರೆದು ಅವನನ್ನು ಕೊಲ್ಲಿಸಲು ನಾನಾ ಪ್ರಯತ್ನಗಳನ್ನು ಮಾಡಿದ. ಅವುಗಳಲ್ಲಿ ಒಂದು ಅವನನ್ನು ಸುಡುವುದು! ಯಾವ ಶಕ್ತಿಯೂ ಅವನ ಸಹಾಯಕ್ಕೆ ಬರಬಾರದೆಂದು ತನ್ನ ತಂಗಿ ಹೋಳಿಕಾಳನ್ನೇ ಜೊತೆಮಾಡಿ ಪ್ರಹಲ್ಲಾದನನ್ನು ಬೆಂಕಿಯಲ್ಲಿ ಕೂಡಿಸುತ್ತಾನೆ. ಹೋಲಿಕಾ ಬಳಿ ಬೆಂಕಿ ತಾಕದಂತಿರುವ ಮೇಲುವಸ್ತ್ರ ಇರುತ್ತದೆ. ಆಕೆ ಅದನ್ನು ಹೊದೆದು ಪ್ರಹಲ್ಲಾದನನ್ನು ಹಿಡಿದು ಕೂಡಿಸಿಕೊಳ್ಳುತ್ತಾಳೆ. ಆದರೆ ದೈವ ನಿಯಮ ಬೇರೆಯೇ ಇರುತ್ತದೆ. ಆ ಮೇಲುವಸ್ತ್ರ ಗಾಳಿಗೆ ಹಾರಿ ಪ್ರಹಲ್ಲದನ ಮೇಲೆ ಬಿದ್ದು ಅವನನ್ನು ರಕ್ಷಿಸುತ್ತದೆ ಹಾಗೂ ಹೋಲಿಕಾ ಉರಿದು ಬೂದಿಯಾಗುತ್ತಾಳೆ.
ಮಾನವ ಶಕ್ತಿಗೆ ಮೀರಿದ ಬೇರೊಂದು ಪರಮಶಕ್ತಿ ಇರುವುದರ ಸಂಕೇತ ಈ ಕಥೆ. ದುಷ್ಟ ಕಾರ್ಯದಲ್ಲಿ ಭಾಗಿಯಾದಾಗ,ನಾವು ನಂಬಿದ ರಕ್ಷಣೆಗಳು ರಕ್ಷಿಸುವುದಿಲ್ಲ ಎಂಬುದು ಇಲ್ಲಿನ ಮತ್ತೊಂದು ಸಂದೇಶ. ಧರ್ಮಕ್ಕೆ ಜಯ ಎಂಬ ನೀತಿಯ ಬೋಧನೆ ಸಮಾಜಕ್ಕೂ ,ವ್ಯಕ್ತಿಗಳಿಗೂ ಈ ಕಥೆಯಲ್ಲಿ ಅಡಕವಾಗಿದೆ. ಈ ಕಾರಣಕ್ಕೆ ಈ ಹಬ್ಬವನ್ನು ’ಹೋಳಿ’ ಅಥವಾ ’ಹೋಲಿ’ ಎಂದು ಕರೆಯುತ್ತಾರೆ. ಬಾಲ್ಯದಲ್ಲಿ ಧರ್ಮವ ಕುರಿತು ಅಚಲ ನಂಬಿಕೆ ವಿಶ್ವಾಸಗಳು ಮಕ್ಕಳಲ್ಲಿ ಬೆಳೆಯಲೆಂಬುದು ಈ ಕಥೆಯ ಆಶಯ.
ಎರಡೆನೆಯ ಕಥೆ ಮನ್ಮಥ ಅಥವಾ ಕಾಮದಹನಕ್ಕೆ ಸಂಬಂಧಿಸಿದ್ದು. ಕೈಲಾಸವಾಸಿಯಾದ ಶಿವನು ನಿರಾಭರಣ.ಅವನನ್ನು ಮೆಚ್ಚಿ ದಾಕ್ಷಾಯಿಣಿ ಅಥವಾ ಸತಿದೇವಿ ಮದುವೆಯಾಗುತ್ತಾಳೆ. ಅವಳ ತಂದೆ ದಕ್ಷಬ್ರಹ್ಮನಿಗೆ ಈ ಮದುವೆ ಇಷ್ಟವಿರುವುದಿಲ್ಲ. ಶಿವ ಬೈರಾಗಿ, ಬಡವ ಎಂದವನ ಮೂದಲಿಕೆ. ಒಮ್ಮೆ ಅವನು ವಿಶ್ವ ಯಜ್ಞವನ್ನು ಮಾಡಿದಾಗ ಅಲ್ಲಿಗೆ ಹೋದ ತನ್ನ ಮಗಳನ್ನೇ ಮೂದಲಿಸಿದ. ಅಪಮಾನ ತಡೆಯದೆ, ಪುನಃ ಮರಳಿ ಕೈಲಾಸಕೂ ಹೋಗಲಾಗದೆ ಸತಿ ದೇವಿ ಆ ಯಜ್ಞಕುಂಡದಲ್ಲಿ ಬಿದ್ದು ತನ್ನ ಪ್ರಾಣ ಕಳೆದುಕೊಳ್ಳುತ್ತಾಳೆ. ವೀರಭದ್ರನನ್ನು ಕಳಿಸಿ ದಕ್ಷನಿಗೆ ಶಾಸ್ತಿ ಮಾಡಿ ಪರಮಶಿವನು ತಪದಲ್ಲಿ ನಿರತನಾಗುತ್ತಾನೆ. ಇತ್ತ ತಾರಕಾಸುರನ ಕಾಟ ತಾಳಲಾರದೆ ದೇವರುಗಳು ತೊಳಲಾಡುತ್ತ ಶಿವನನ್ನು ಒಲಿಸಿ ಅವನು ಪಾರ್ವತಿಯನ್ನು ಮದುವೆಯಾಗಿ ಮಗನನ್ನು ಪಡೆದು ತಾರಕ ಸಂಹಾರ ಮಾಡಿಸಬೇಕೆಂದು ಬೇಡಿಕೊಳ್ಳುತ್ತಾರೆ. ಶಿವನು ಜಗ್ಗುವುದಿಲ್ಲ. ಆಗ ಕಾಮದೇವನನ್ನು ಕಳಿಸುತ್ತಾರೆ. ಗಿಣಿಯ ಮೇಲೆ ಕುಳಿತು,ಕಬ್ಬಿನ ಬಿಲ್ಲು ಹಿಡಿದು,ಮಲ್ಲಿಗೆ, ಸಂಪಿಗೆ,ಮುಂತಾದ ಹೂಬಾಣಗಳಿಂದ ಶಿವನ ತಪಸ್ಸನ್ನು ಕಷ್ಟಪಟ್ಟು ಭಂಗ ಮಾಡುತ್ತಾನೆ. ಆಗ ಅವನ ಕ್ರೋಧಾಗ್ನಿಗೆ ತುತ್ತಾಗಿ ಬೂದಿಯಾಗುತ್ತಾನೆ. ಮನ್ಮಥನ ಹೆಂಡತಿ ರತಿಯು ರೋದಿಸಿ ಬೇಡಿಕೊಳ್ಳಲು, ಅವನನ್ನು ಬದುಕಿಸಿ ಕೊಡುತ್ತಾನೆ ಆದರೆ ಅನಂಗನಾಗಿ, ಯಾರ ಕಣ್ಣಿಗೂ ಕಾಣದಂತೆ ಉಳಿಸುತ್ತಾನೆ. ಹಾಗಾಗಿ ಇಂದು ಕಾಮ ದೇವ ಕೇವಲ ಮಾನಸ ಪ್ರತಿಮೆ. ಪ್ರತಿಯೊಬ್ಬರ ಮನದಲ್ಲೂ ಆಕಾರ ಅವರವರ ಮನೋಭಿರುಚಿಗೆ ಅನುವಾಗಿ ಇರುತ್ತಾನೆ.
ಶಿವನ ತಪಸ್ಸು ಜೀವನಕ್ಕೆ ಬೇಕಾದ ಏಕಾಗ್ರತೆ, ಗುರಿ ಸಾಧನೆಗೆ ಅವಶ್ಯಕವಾದ ಚಿತ್ತ ಸಂಕಲ್ಪ ಪ್ರತಿನಿಧಿಉತ್ತದೆ. ಕಾಮದೇವ ನಮ್ಮ ಸುತ್ತಲಿನ , ನಮ್ಮ ಉದ್ದೇಶದಿಂದ ದೂರ ಸೆಳೆಯಬಹುದಾದ ವಿದ್ಯಮಾನಗಳನ್ನು ಪ್ರತಿನಿಧಿಸುತ್ತದೆ. ಯೌವನದಲ್ಲಿ ನಮಗಾಗುವ ಚಿತ್ತ ಚಂಚಲೆನೆಗೂ, ಅದನ್ನು ಪ್ರತಿರೋಧಿಸಬೇಕಾದ ಮನೋನಿಗ್ರಹಕ್ಕೂ ಈ ಕಥೆ ಉದಾಹರಣೆ.
ಈ ವಸಂತ ಋತುವಿನ ಅಗಮನದೊಂದಿಗೆ ಜೀವಸಂಕುಲ ನಳನಳಿಸುತ್ತಿರುವಾಗ ಚಿತ್ತ ಚಂಚಲವಾಗುವುದು ಸಹಜ. ಅದನ್ನು ’ಸುಡು’ ಎಂಬುದೇ ಈ ಆಚರಣೆಯ ಹಿಂದಿನ ಸಂದೇಶ.
ಚಳಿಗಾಲ ಕಳೆದು ವಸಂತಋತು ಕಾಲಿಡುವಾಗ ಹೊಸಚಿಗುರು ಮೂಡಿ, ಹೂ ಅರಳಿ ಸಕಲ ಜೀವರಾಶಿ ಬಣ್ಣಗಳಿಂದ ಕೂಡಿ ನಲಿಯುವಾಗ ಮಾನವ ಮಾತ್ರ ಹಾಗೆ ಇರಬೇಕೆ. ಈ ಸಂತೋಷದಲ್ಲಿ ಭಾಗಿಗಳಾಗಲು ನಾವೂ ಕೂಡ ರಂಗಿನಾಟದಲ್ಲಿ ತೊಡಗುವುದು. ನಮ್ಮ ಜೀವನವನ್ನು ನಿಯಂತ್ರಿಸುತ್ತವೆ ಎಂದು ನಂಬಲಾದ ಗ್ರಹಗಳಿಗೂ ತಮ್ಮ ತಮ್ಮ ಬಣ್ಣಗಳಿದ್ದು, ಈ ಬಣ್ಣಗಳನ್ನು ನಮ್ಮ ಮೇಲೆ ಆರೋಪಿಸಿಕೊಂಡು ಅವುಗಳನ್ನು ಸಂತೃಪ್ತಿಗೊಳಿಸುವುದು ಈ ಹಬ್ಬದ ಇನ್ನೊಂದು ಆಶಯ. ಈ ಸಂದರ್ಭದಲ್ಲಿ ಎಲ್ಲರೂ ತಂತಮ್ಮ ಭೇದ ಭಾವಗಳನ್ನು ಮರೆತು ಒಂದಾಗಿ ಆನಂದಿಸುವುದು ಸಾಮಾಜಿಕ ಆಶಯ. ಲೋಕೋ ವಿಭಿನ್ನ ರುಚಿಃ. ಮನೋಭಾವಗಳಲ್ಲಿ ಭೇದ ಸಹಜ; ಇದು ಜೀವನದ ಅನಿವಾರ್ಯ ಸತ್ಯ. ವಿವಿಧ ಬಣ್ಣಗಳು ಈ ಭೇದವನ್ನೇ ಪ್ರತಿನಿಧಿಸುವುದು. ಎಲ್ಲ ಬಣ್ಣಗಳನ್ನು ಎಲ್ಲರೂ ಎರಚುವುದು ಸಹಿಷ್ಣತೆಯ ಸಂಕೇತ. ಎಲ್ಲ ಬಣ್ಣ ಸೇರಿ ಬಿಳಿಯ ಬಣ್ಣವಾಗುವಂತೆ ಎಲ್ಲ ಭೇದ ಮರೆತು ಶುದ್ಧ ಮನಸ್ಸಿನಿಂದ ಹಬ್ಬವನ್ನು ಆಚರಿಸಿ
ಸಂಭ್ರಮಿಸುವುದು ಆ ಮೂಲಕ ಸಾಮಾಜಿಕ ಒಗ್ಗಟ್ಟಿಗೆ ನಾಂದಿ ಹಾಡುವುದು ಈ ಹಬ್ಬದ ಉನ್ನತ ಆಶಯಗಳಲ್ಲಿ ಒಂದು.

ಹೋಳಿ ಹಬ್ಬ (ಕವನ)

ಶಶಿರನು ತೆರಳಿ ವಸಂತನು ತಾ
ಮೂಡುತ ಬರುವಲ್ಲಿ
ಬಿದಿಗೆಯ ಶಶಿ ತಾ ದಿನವೂ
ಬೆಳೆಯುತ ಪೂರ್ಣನಾಗುವಲ್ಲಿ
ಜಗದೆಲ್ಲೆಡೆಯಲು ಜೀವ ಜಾಲ ತಾ
ನಗುತ ನಲಿಯುವಲ್ಲಿ
ಹೋಳಿಯ ಹಬ್ಬವು ಬರುತಿದೆ
ಗೆಳೆಯ ರಂಗನು ತಾ ಚೆಲ್ಲಿ

ಬಾಲಕ ಪ್ರಹ್ಲಾದನು ತಾ ಅಗ್ನಿಯ
ತಾಪದೆ ಪಾರಾಗಿ
ಅವನನು ಸುಡಲು ಹೋದ
ಹೋಲಿಕಾ ಸುಟ್ಟು ಬೂದಿಯಾಗಿ
ದೈವ ಕರುಣೆ ತನ ಭಕ್ತರ
ಪೊರೆವುದು ಎಂದು ಎಲ್ಲ ಕೂಗಿ
ಆಚರಿಸಿದ ದಿನ ಇದುವೇ
ಗೆಳೆಯ ನಮಿಸು ನೀನು ಬಾಗಿ

ಲೋಕದ ಬಾಧ್ಯತೆ ತೊರೆಯುತ ಶಿವ
ತಾ ತಪವನು ಆಚರಿಸೆ
ಸುಮಬಾಣಗಳನು ಹೂಡುತ ಮದನ
ತಪವನು ತಾ ಕೆಡಿಸೆ
ಕ್ರೋಧಾಗ್ನಿಯದು ಕಾಮನ ದೇಹವ
ಸುಟ್ಟು ಬೂದಿಮಾಡಿ
ಪತಿಯ ವಿರಹದಲಿ ರತಿಯು
ಅಳುತಲಿ ಶಿವನ ಕಾಡೆ ಬೇಡಿ

ಕರಗಿದ ಈಶ್ವರ ಮನ್ಮಥನಿಗೆ ತಾ
ನೀಡಿದ ಜೀವವನು
ದೇಹವಿರದ ಬರಿ ಭಾವ ರೂಪಿ
ಕಾಮ ಅನಂಗನನು
ಕಾಮ ದಹನವ ಮಾಡಿ ಈ ದಿನವ
ಎಲ್ಲರು ನೆನೆಯುವರು
ಕಾಮ ನಿಗ್ರಹದ ಅರ್ಥವ ತಿಳಿಯುತ
ಬದುಕನು ನಡೆಸುವರು

ಎಳೆಬಿಸಿಲಿಗೆ ಟಿಸಿಲೊಡೆದು ಮೂಡುತಿಹ
ಜೀವ ಜಾಲ ನೋಡು
ಪ್ರಕೃತಿ ಮಡಿಲಿನ ಜೀವಸಂಕುಲವು
ಬಹು ವಿಧ ಬಣ್ಣದ ಗೂಡು
ರಂಗಿನ ಓಕುಳಿ ನಾವಾಡುವ ಬಾ
ಪ್ರಕೃತಿ ಮಡಿಲಿನಲಿ
ಏಕತೆಯನು ನಾವ್ ಕಾಣುತ
ನಮ್ಮೀ ವೈವಿಧ್ಯತೆಯಲ್ಲಿ

ನಿನ್ನ ಬಣ್ಣವ ನಾ ತಳೆಯುವೆನು
ನನ್ನ ಬಣ್ಣ ನೀ ತಳೆಯೊ
ನಿನ್ನ ಮನವ ನಾ ಅರಿಯುವೆ ಗೆಳೆಯ
ನನ್ನ ಮನವ ನೀ ಅರಿಯೋ
ಏಳು ಬಣ್ಣಗಳು ಸೇರಿ ಶುದ್ಧ
ಬಿಳಿ ಬಣ್ಣವಾಗುವಂತೆ
ನಮ್ಮ ಭೇದಗಳ ಮರೆತರೆ ನಾವು
ಎಲ್ಲ ಒಂದೆ ಅಂತೆ.

ಡಾ. ಸುದರ್ಶನ ಗುರುರಾಜರಾವ್

ವೈರುಧ್ಯ (vairudhya)

ವೈರುಧ್ಯ (vairudhya)

ಹಿರಿಯ ಕವಿಗಳ ವಾಣಿಯಿಂದ ಎರವಲು ಪಡೆದ ಸಾಲುಗಳನ್ನು ಬಳಸಿ ಕನ್ನಡ ನಾಡಿನ ಜನಗಳ ವೈರುಧ್ಯಮಯ ಜೀವನವನ್ನು ಸಾಕಾರಗೊಳಿಸುವ ಪ್ರಯತ್ನ ಮಾಡಿದ್ದೇನೆ. ಕನ್ನಡ ಶಾಲೆಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಕನ್ನಡ ಉಳಿಸುವ ಯಾವ ಪ್ರಯತ್ನವೂ ಸರ್ಕಾರದಿಂದಾಗಲೀ ಜನಗಳಿಂದಾಗಲೀ ಆಗುತ್ತಿಲ್ಲ ಎಂಬುದು ಕಳವಳಕಾರೀ ಸಂಗತಿ. ಭಾಷೆಯ ಅವನತಿಯೊಂದಿಗೆ ಸಾವಿರಾರು ವರ್ಷಗಳಿಂದ ಬೆಳೆದುಬಂದ ಸಾಹಿತ್ಯ ಅಳಿಯುವುದಲ್ಲದೆ ಜನಪದ, ಅನುಭವ, ಜೀವನ ಮೌಲ್ಯಗಳು,ಜೀವನದಲ್ಲಿ ಬೇಕಾಗಬಹುದಾದ ಬುದ್ಧಿವಂತಿಕೆ,ಹಾಡುಗಳು,ಗಾದೆಗಳು ಎಲ್ಲವೂ ಅವನತಿ ಹೊಂದುವುದು ಅನಿವಾರ್ಯವಾಗುತ್ತದೆ. ದೂರದೃಷ್ಟಿಯಾಗಲೀ ಅಭಿಮಾನವಾಗಲೀ ಇರದ ಆಳುವವರು, ಸರಕಾರೀ ಶಾಲೆಗಳ ದುಸ್ಥಿತಿಯ ಲಾಭ ಪಡೆಯುವ ಖಾಸಗೀ ವಲಯ, ಬದ್ಧತೆ ಇಲ್ಲದ ಶಿಕ್ಷಕರು, ಮೌಲ್ಯ ವಿರದ ಪಠ್ಯಕ್ರಮ, ಇವೆಲ್ಲದರ ನಡುವೆ ಕಳೆದುಹೋದ, ಮತಿಭ್ರಮಣೆಗೊಳಗಾದ ಪೋಷಕರು, ಅಲ್ಲಿಯೂ ಸಲ್ಲದೆ ಇಲ್ಲಿಯೂ ಸಲ್ಲದಂತಾಗಿರುವ ಮಕ್ಕಳು ಎಲ್ಲರಿಂದ ಕನ್ನಡ ಇಂದು ನಲುಗಿ ಹೋಗುತ್ತಿದೆ. ದೂರದೇಷದಲ್ಲಿರುವ ನಾವು ಕವಿತೆ ಬರೆಯುವುದರ ಹೊರತು ಏನುಮಾಡಬಹುದು ಎಂಬುದು ನನ್ನನ್ನು ಕಾಡುತ್ತಿರುವ ಪ್ರಶ್ನೆ.

ವೈರುಧ್ಯ

ಕನ್ನಡ ದಿಂಡಿಮ ಬಾರಿಸು ಎನ್ನುವ
ಕವಿ ವಾಣಿಯ ಕರೆ ಕೇಳಿದರು
ತಮಟೆಗೆ ಕಂಗ್ಲೀಷ್ ಕೋಲಲಿ ಬಡಿದು
ಚಮರ ಗೀತೆಯನು ನುಡಿಸಿದರು

ಕನ್ನಡ ಭಾಷೆಗೆ ಹೋರಾಡೆನ್ನುತ
ಜೋಗುಳ ಹಾಡಿದ ತಾಯಿಯರು
ಮುದದಲಿ ತಮ್ಮಯ ಮಕ್ಕಳ ಇಂಗ್ಲಿಷ್
ಶಾಲೆಗೆ ಓದಲು ಕಳಿಸಿದರು

ಇಂಗ್ಲಿಷ್ ಶಾಲೆಯ ಕಂಗ್ಲಿಷ ಕಲಿತ
ಮುಂದಿನ ಪೀಳಿಗೆ ತಾಯಿಯರು
ಜೋಗುಳ ಹಾಡನು ಹಾಡದೆ ತಮ್ಮಯ
ಮಕ್ಕಳ ಪೀಳಿಗೆ ಬೆಳೆಸಿದರು

ಜೋಗುಳ ಕೇಳದ ಮಕ್ಕಳು ಕನ್ನಡ
ಮಾತನೆ ಆಡದೆ ಬೆಳೆದಿರಲು
ಮನದಲು -ಮನೆಯಲು ಕನ್ನಡ ಭಾಷೆಯ
ಕುರುಹಗಳೆಲ್ಲವು ಅಳಿದಿರಲು

ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು
ಕನ್ನಡಕಲಿಯದ ಇಂದಿನ ಪೀಳಿಗೆ
ಕನ್ನಡ ಎನೆ ಮೂಗ್ ಮುರಿಯುವುದು

ಕನ್ನಡ ಗೋವಿನ ಮುದ್ದಿನ ಕರುಗಳು
ಕನ್ನಡದಕ್ಷರ ಕಲಿಯಲೆ ಇಲ್ಲ
ಕನ್ನಡ ಗೋವಿನ ಹಾಲನು ಕುಡಿದು
ಕಂಗ್ಲೀಷ್ ಒದರುತಲಿಹರಲ್ಲ

ಕನ್ನಡದಲ್ಲಿಯೆ ಬಿನ್ನಹ ಗೈಯುತ
ಹರನನು ವರಗಳ ಕೇಳಿಲ್ಲ
ಕಂಗ್ಲೀಷ್ ಇಂಗ್ಲೀಷ್ ಎನ್ನುತ
ಎಲ್ಲೆಡೆ ಭಿಕ್ಷೆಯ ಬೇಡುತಲಿಹೆವಲ್ಲ

ಎಂದೆಂದಿಗು ನೀ ಕನ್ನಡವಾಗಿರು
ಎನ್ನುವ ಸತ್ಯದ ಅರಿವಿಲ್ಲ
ಕನ್ನಡ ಪದಸಿರಿ ಬಳಸದೆ ನಿತ್ಯವು
ಕನ್ನಡ ಕೊಲ್ಲುತಲಿಹೆವಲ್ಲ

ಕನ್ನಡಕಾಗಿ ಕೈಯೆತ್ತುತ ದಿನ
ಕಲ್ಪವೃಕ್ಷವ ಬೆಳೆಸಿಲ್ಲ
ಕಂಗ್ಲೀಷ್ ಕೊಡಲಿಯ ಏಟನು
ಹಾಕುತ ವೃಕ್ಷವ ಉರುಳಿಸುತಿಹೆವಲ್ಲ

ಕನ್ನಡದೊಳಗಿಹ ಕಂಪನು ಅರಿಯದೆ
ಬೇರೆಡೆ ಹುಡುಕುತಲಿಹೆವಲ್ಲ
ಸಂಸ್ಕೃತಿಯರಿಯದೆ ಕೀಳರಿಮೆಯಲಿ
ಮಿಡುಕುತ ನೋಡುತಲಿಹೆವಲ್ಲ

ರಾಮಾಯಣದ ರಾಮನ ನೀತಿಯ
ಗಾಳಿಗೆ ತೂರಿದ ಜನರಂತೆ
ಋಷಿ ವಾಲ್ಮೀಕಿಯ ಹೆಸರಲಿ ನಿರತ
ಬೇಳೆಯ ಬೇಯಿಸಿಕೊಳುವಂತೆ

ತಾಯ್ನುಡಿಗಾಗಿ ನುಡಿಯೊಳಗಾಗಿ
ನೆಡೆಯದೆ ಇಂದಿನ ಜನಪದವು
ವೈರುಧ್ಯವೆ ಮೈವೆತ್ತಿದ ತೆರದಲಿ
ಬಾಳುತಲಿಹೆವು ಅನುದಿನವು

ಡಾ. ಸುದರ್ಶನ ಗುರುರಾಜರಾವ್.

ಅಂತರಾಗ್ನಿ

ಅಂತರಾಗ್ನಿ

ಸಾಧನೆಯ ಅಂತರಾಗ್ನಿಯದು
ಬೇಕೆಂದು ಬದುಕಿಗೆ
ಸಾಧನೆಯೆ ಇಲ್ಲದಿಹುದೆಂಥ ಬದುಕು
ಸುತ್ತಲಿನ ಪರಿಸರದಿ ಸ್ಫೂರ್ತಿಯನು
ಪಡೆಯುತಲಿ ನೀ ಶ್ರಮಿಸು
ಪರಿಹರಿಸೆ ಅದರ ಹುಳುಕು

ಅದಿಕವಿ ಪಂಪ ತಾ ಭಾರತವ
ಬರೆದಾಗ ಕನ್ನಡದಿ
ಭಾರತದ ಕಾವ್ಯವಿರಲಿಲ್ಲ
ಸ್ಫೂರ್ತಿಯನು ತಾ ಪಡೆದು
ರಚಿಸಿರಲು ಕಾವ್ಯವನು
ಅದಿಕವಿ ತಾನಾಗಿ ಮೆರೆಯದಿರಲಿಲ್ಲ

ಪಂಪನಾ ಕಾವ್ಯವದು ಒರತೆಯಾಗುತ
ಹರಿದು ಮುಂದೆಲ್ಲ
ಹಲವಾರು ಕಾವ್ಯಗಳ ಕೂಡಿ
ಕಾಲನಾ ಹರಿವಿನಲಿ ಹಲವು
ಕಾವ್ಯಗಳೆಂಬ ಝರಿಗಳನು
ಸೇರುತಲಿ ನದಿಯಾಗಿ ಓಡಿ

ರನ್ನ ಜನ್ನರ ಪೊನ್ನ ಹರಿಹರರ
ಕಾವ್ಯಗಳು ಕನ್ನಡದ
ಸಾಹಿತ್ಯ ನದಿಗೆ ಸೇರುತಿರೆ
ಭಾರತಾಂಬೆಯಖಂಡ ಸಾಹಿತ್ಯ
ಸಾಗರದ ಮಡಿಲನ್ನು
ತಾವೆಂದು ತುಂಬಿ ಹರಿಸುತಿರೆ

ಭಾಷೆ ಹಲವಾರಿರಲು ಭರತ
ಖಂಡದ ತುಂಬ ನೀತಿ
ನಿಯಮಗಳೊಂದು ಹೊಂದಿ ಸೇರದಿರೆ
ಪಾಣಿನಿಯು ಇದಕಂಡು ವ್ಯಾಕರಣ
ರಚಿಸಿರಲು ಏಕತೆಯು
ವಿವಿಧತೆಯ ನಡುವೆ ಮೂಡುತಿರೆ

ಬಾಣಂತಿ ಜ್ವರದಿಂದ ಮಾತೆಯರು
ಅಸುನೀಗಿ ಹಸುಗೂಸುಗಳು
ಆಗೆ ತಬ್ಬಲಿಗಳು
ಇಗ್ನಾಜು ಫಿಲಿಪ ಸಮಲ್ವೈಸ
ಇದಕಂಡು ಮರುಗುತಲಿ
ದುಡಿದು ತಾ ಹಗಲು ಇರುಳು

ಸಂಕಲ್ಪವನು ತೊಟ್ಟು ನಿದ್ರೆ
ಊಟವ ಬಿಟ್ಟು ದುಡಿದಿರಲು
ಜ್ವರಕೆ ತಾ ಕಾರಣವನರಸಿ
ಕೈ ತೊಳೆದು ರೋಗಿಗಳ ಮುಟ್ಟುವುದೆ
ಇದಕೆಂದು ಪರಿಹಾರ
ಎಂಬಂಥ ಬೆಳಕು ಹರಿಸಿ

ಕತೃತ್ವ ಶಕ್ತಿಯದು ಪ್ರತಿಯೊಂದು
ಜೀವಿಯಲು ಅಡಗಿಹುದು
ಕಾಣದೆಯೆ ಸುಪ್ತವಾಗಿ
ಅಂತರಾಗ್ನಿಯ ಕಾವು ಸೋಕಿರಲು
ತಾ ಕರಗಿ ಹರಿಯುವುದು
ಹೊರಗಡೆಗೆ ವ್ಯಕ್ತವಾಗಿ

ನಿನ್ನೊಳಗೆ ಅದಗಿರುವ ಪ್ರತಿಭೆಗಳೆ
ಎಂದೆಂದು ಸಾಧನೆಗೆ
ಬೇಕಿರುವ ಪರಿಕರಗಳು
ಗುರು-ಮಿತ್ರ ತಂದೆ ತಾಯಿಯರು
ಪರಿಸರವು ನಿನ್ನ ಸಾಧನೆಗೆ
ವೇಗ ವರ್ಧಕಗಳು

ಮೈಕೊಡವಿ ಎದ್ದೇಳು ಭಯವನ್ನು
ಕೈಬಿಟ್ಟು ಉದ್ದೀಪಿಸು
ನಿನ್ನ ಅಂತರಾಗ್ನಿಯನ್ನು
ಉರಿವ ಹಣತೆಯ ತೆರದಿ ತೋರು ನೀ
ಬೆಳಕನ್ನು ವ್ಯರ್ಥ ಗೊಳಿಸದೆ
ನಿನ್ನ ಈ ಜೀವನವನು.

ಡಾ.ಸುದರ್ಶನ ಗುರುರಾಜರಾವ್

ಸಂವಾದ

ಸಂವಾದ

ಎಲೆ ಜಲವೆ ನೀನೇಕೆ ಹರಿದು ಹೊರಟಿರುವೆ
ಉಷ್ಣ ಶಕ್ತಿಯೆ ನೀನು ಏಕೆ ಪಸರಿಸುವೆ
ಓ ಬೆಳಕೆ ಕತ್ತಲೆಯ ಕಡೆ ಏಕೆ ಓಡಿರುವೆ
ನಿಮ್ಮ ಪಾಡಿಗೆ ನೀವಿರದೇಕೀ ಗೊಡವೆ?

ಓ ಮನುಜ ಪ್ರಕೃತಿಯ ಮಕ್ಕಳು ನಾವು
ನಮ್ಮೊಳಿರುವುದ ಹಂಚಲೆಂದೆ ಹೊರಟಿಹೆವು
ಸರ್ವ ಸಮಾನತೆಗಾಗಿ ಈ ತುಡಿವು
ನಿನಗಿಲ್ಲ ನಮ್ಮ ಈ ಸಂಸ್ಕೃತಿಯ ಅರಿವು!

ಬಲ್ಲೆ ಬಲ್ಲೆನು ನಾನು ನಿಮ್ಮ ನಾಟಕವ
ಪ್ರತಿರೋಧ ಇಲ್ಲದಿರುವೆಡೆಯಲ್ಲಿ ಹರಿವ
ಉಳಿಸುತಲಿ ನಿಮ್ಮೆಲ್ಲ ಶಕ್ತಿ ಸಂಚಯವೆ
ಕೊಡುವಲ್ಲಿ ನಡೆಸುವಿರು ಬಲು ಮೋಸವ!

ಇರುವ ಕಡೆಯೊಳಗಿಂದ ಇರದಿರುವ ಕಡೆಗೆ
ಹರಿವ ನಮ್ಮಲ್ಲೇಕೆ ಮೋಸದಾ ನಡಿಗೆ
ಉಳಿಸಿದಾ ಶಕ್ತಿಯದು ಎಲ್ಲರಿಗು ಕೊಡುಗೆ
ಮೋಸ ವಂಚನೆ ಜಾಲ ನಿಮ್ಮದಡಿಗಡಿಗೆ!!

ಗುಡ್ಡಗಳು ಅಡ್ಡಬರೆ ಜಲವೆ ನೀ ದಾಟಲಾರೆ
ವಾಹಕವು ಇರದಿರಲು ಬಿಸಿಯೆ ಪಸರಿಸಲಾರೆ
ಅಪಾರದರ್ಶಕವು ತಾನಾಗೆ ವಸ್ತು
ಬೆಳಕೆ ನಿನಗಿರದಾಯ್ತು ದಾಟುವಾ ತಾಕತ್ತು!!

ಗುಡ್ಡ ಬೆಟ್ಟಗಳನ್ನು ಮೀರಿ ಹರಿಯುವೆನು
ಸಾಧ್ಯವಿರುವಲ್ಲೆಲ್ಲ ಕೊರಕು ಕೊರೆಯುವೆನು
ಎದುರಾಳಿ ಬಲವರಿತು ತಾಳ್ಮೆ ತೋರುವೆನು
ತಾಳಿದವ ಬಾಳಿಯಾನೆಂದು ಸಾರುವೆನು

ಕೊಟ್ಟದ್ದು ತನಗೆಂದು ತಿಳಿಯೆ ನೀ ಮನುಜ
ಲೋಭ ಮೋಹಗಳೆಂದು ನಿನಗೆ ಬಲು ಸಹಜ!
ಶಾಖವನು ಹರಿಗೊಟ್ಟು ವಾಹಕವು ಉಳಿದು
ಹರಿಯಗೊಡದಿಹ ವಸ್ತು ಬೂದಿಯಾಗುವುದುರಿದು!

“ನಾನು” ಎನ್ನುವ ಭಾವ ನಿನ್ನಲ್ಲಿ ಬರಲು
ಸುತ್ತಲೂ ಗೋಡೆಯನು ನೀ ಕಟ್ಟಿಕೊಳಲು
ಯಾವ ಬುದ್ಧಿಯ ಬೆಳಕು ನಿನ್ನೆಡೆಗೆ ಬರದು
ಬಂದ ಬೆಳಕೆಲ್ಲವೂ ಹಿಂತಿರುಗುತಿಹುದು

ಎಲೆ ಮನುಜ ನಿನಗೊಂದು ಸಂದೇಶ ಬೀರೆ
ತೋರುವೆವು ನಾವ್ ನಿನಗೆ ಈ ಓರೆ ಕೋರೆ
ಸಂದೇಶ ಸ್ವೀಕರಿಸೆ ಕಾಣುವೆ ಯೊ ಬೆಳಕು
ಇಲ್ಲದಿರೆ ನಿನ ಬಾಳು ಬರೀ ಹುಳುಕುಳುಕು

ಯಾವ ಪ್ರಾಣಿಗು ಇರದ ದುರಾಸೆಯ ಚಿಂತೆ
ಪಂಚ ಭೂತಗಳಿಂದಾದ ನನಗೇಕೆ ಅಂತೆ
ನನ್ನ ಬಾಳಾಯ್ತಲ್ಲ ಬರಿ ಮೋಸದಾ ಕಂತೆ
ಉಳಿದ ಜೀವಿತವನ್ನು ಬದುಕುವೆನು ನಿಮ್ಮಂತೆ!!

ಡಾ.ಸುದರ್ಶನ ಗುರುರಾಜರಾವ್

 

ಪಿ ಬಿ ಶ್ರೀನಿವಾಸ್- ಚೈತ್ರದ ಕೋಗಿಲೆ

ಪಿ ಬಿ ಶ್ರೀನಿವಾಸ್- ಚೈತ್ರದ ಕೋಗಿಲೆ

 

ಕಾಕಿನಾಡ ಕೋಗಿಲೆ ನೀ
ಪಿ ಬಿ ಶ್ರೀನಿವಾಸ
ನೀನು ಹಾಡಿದಂಥ ಯುಗದ
ತುಂಬ ಚೈತ್ರ ಮಾಸ

ಭಾವ ಪೂರ್ಣ ಜೇನುಧಾರೆ
ನಿನ್ನ ಗಾನ ವಿಶೇಷ
ಕಲ್ಲಿನೆದೆಯು ಕರಗಿ ಹರಿಯುವಂಥ
ಧ್ವನಿಯ ಪಾಶ

ಜಾತಕ ಫಲವೆಂಬ ಚಿತ್ರದಲ್ಲಿ
ಮೊದಲು ಹಾಡಿ
ಗೀತೆಗಳಲಿ ತುಂಬಿ ನಿನ್ನ
ಮಾಧುರ್ಯದ ಮೋಡಿ

ಚಿತ್ರಗೀತೆ ಜಾತಕವನೆ ಮುಂದೆ
ಬದಲು ಮಾಡಿ
ಹೊಸ ಆಯಾಮವೆ ಕೊಟ್ಟೆ ನೀನು
ಸಿರಿ ಗಂಧವ ತೀಡಿ

ಬಾಡಿ ಹೋದ ಬಳ್ಳಿಯಲ್ಲು
ಹೂ ಅರಳಿಸ ಬಲ್ಲ
ಶಕ್ತಿ ನಿನ್ನ ಕಂಠಕಿಹುದು
ನಿನಗೆ ಸಾಟಿ ಇಲ್ಲ

ನೀನು ಹಾಡುತಿರಲು ಅರಿತು
ಪದಗಳರ್ಥ ವ್ಯಾಪ್ತಿ
ರಸಿಕರೆದೆಯು ಅರಳುತಿತ್ತು
ಪಡೆದು ಭಾವ ಪ್ರಾಪ್ತಿ

ಜೇನುದುಂಬಿಯೆಂಬ ಕಾವ್ಯ
ನಾಮ ನಿನ್ನದಿಹುದು
ನಿನ್ನ ದನಿಯ ಅನುಕರಿಸಲು
ಕಷ್ಟಸಾಧ್ಯವಹುದು

ಕನ್ನಡದ ಹಿರಿತನವನು ನೀನು
ಹಾಡೆ ಹೊಗಳಿ
ಮೂಡಿ ಬರುವುದಭಿಮಾನದ
ಹೂವು ಎದೆಯಲರಳಿ

ತಾಯಿಯನ್ನು ಕುರಿತು ನೀನು
ಅಮ್ಮ ಎಂದು ಕರೆಯೆ
ಮಾತೃಪ್ರೇಮ ದನಿಯಲ್ಲಿಯೆ
ಜೇನು ಧಾರೆ ಸುರಿಯೆ

ತೂಕಡಿಸಿ ಬೀಳದಿರಿ ಎಂದು
ಬೀಸಿ ಚಾಟಿ
ಸಾವಿರಾರು ಹೃದಯವೀಣೆ
ಮಿಡಿದೆ ತಂತಿ ಮೀಟಿ

ಹತ್ತೆಂಟು ಭಾಷೆಗಳಲಿ
ಪಾಂಡಿತ್ಯವ ಗಳಿಸಿ
ಲಕ್ಷಕಿಂತ ಹೆಚ್ಚುವರಿಯ
ಗೀತೆಗಳನೆ ರಚಿಸಿ

ಸರಸ್ವತಿಯ ಪುತ್ರನಾಗಿ
ವೇದ ನದಿಯ ತೆರದಿ
ಗುಪ್ತಗಾಮಿನಿಯಾಗಿ ಉಳಿದೆ
ನೀ ಕಾಲಾಂತರದಿ

ಮೂಲ ಒರತೆ ಬತ್ತುತಿರಲು
ಹರಿದ ನದಿಯ ಪಾತ್ರ
ನೀರ ಪಸೆಯೆ ಆರಿ ಹೋಗಿ
ಉಳಿದುದುಸುಕು ಮಾತ್ರ

ಸಾಹಿಯ್ತಕ ಚೆಲುವೆಲ್ಲವು
ಅವಿಯಾದ ಜಲವು
ಸಂಗೀತದ ರಸಧಾರೆಗೆ
ಇರದಾಯಿತು ಒಲವು

ಒಲವು ಇರದ ಲತೆಯೊಳಿಂದು
ಅರಳದಂಥ ಹೂವು
ಅರಳದಂಥ ಹಾಡು ಹೂವಿಗಿಲ್ಲ
ಅಂದ ಚಂದವು

ಗಂಧವಿರದ ಅರಳಲಾರದಂಥ
ಹಾಡು ಹೂವು
ಹೂವಿನೊಡಲಿನಲ್ಲಿ ಇಂದು
ಬರಿದೆ ಕಹಿ ಬೇವು

ನೀನು ಹಾಡಿ ಬಿಟ್ಟು ಹೋದ
ಗೀತೆಗಳ ಮಾಲೆ
ರಸಿಕರೆದೆಯ ನದಿಗೆ ನಿರತ
ಸುರಿವ ಜೀವ ಸೆಲೆ

ಗೂಢವಾಗಿ ಹರಿದು ಭಾವ
ತರಂಗಗಳ ಮಿಡಿಸಿ
ಅಂತರಂಗದಲ್ಲಿ ಒಂದು
ಸ್ವರ್ಗವನ್ನೆ ಸೃಜಿಸಿ

ಸಜ್ಜನಿಕೆಯೆ ಮೂರ್ತಿವೆತ್ತ
ಗಾನ ಸುಧೆಯ ದೊರೆ
ನಡೆದೆ ನೀನು ಗಮ್ಯದೆಡೆಗೆ
ತೊರೆದು ನಮ್ಮ ಧರೆ

ಕಿವಿಗಳಲ್ಲಿ ದುಂಬಿ ನಿನ್ನ
ದನಿ ಅನುರಣಿಸುತಿರೆ
ಸಹೃದಯರೆದೆಯಂಬರದಿ
ನೀನೆ ಭಾಗ್ಯತಾರೆ.

ಡಾ.ಸುದರ್ಶನ ಗುರುರಾಜರಾವ್

ಅಮ್ಮನ ಅಂತರಾಳ

ಅಮ್ಮನ ಅಂತರಾಳ

ಓ ಕಂದ ಈ ಜಗದಿ ನೀ ಒಂಟಿಯಲ್ಲ
ನಿನ್ನ ತಾಯಿಯು ಸತತ ನಿನಗಿರುವಳಲ್ಲ

ನಿನ್ನ ಪಾಲನೆಗೆಂದು ಮನೆಯಲಾರಿಲ್ಲ
ನೆರಳಲ್ಲಿ ನಿನ ಬಿಡುವ ಭಾಗ್ಯ ನನಗಿಲ್ಲ

ನಿನ್ನ ಹಣೆಯಲಿ ಒಂದು ದೃಷ್ಟಿ ಬೊಟ್ಟಿಟ್ಟು
ಬಂದಿರುವೆ ಕೆಲಸಕ್ಕೆ ಸೊಂಟದಲಿ ಹೊತ್ತು

ಬಿಸಿಲೇನು ಚಳಿಯೇನು ಮಳೆ ಗಾಳಿಯೇನು
ನಿನಗಾಗಿ ಏನೊಂದು ಲೆಕ್ಕಿಸೆನು ನಾನು

ನಾನೆಷ್ಟು ದುಡಿ ದುಡಿದು ದಣಿವಾದರೇನು
ನಿನ್ನ ನಗು ನಿನ್ನ ಮುಖ ಕಂಡು ಮರೆಯುವೆನು

ಓ ಕಂದ ನಿನಗಾಗಿ ಈ ಮಣ್ಣು ಕಲ್ಲು
ನಾ ಹೊರುವೆ ಹೆದರೆದೆಯೆ ದಿನ ರಾತ್ರಿಯಲ್ಲು

ನೀನುಟ್ಟ ಬಟ್ಟೆಯದು ಮಾಸಿದ್ದರೇನು
ಮೈ ಕೈಗೆ ಮಣ ಧೂಳು ಮೆತ್ತಿದ್ದರೇನು

ಜಗದೆಲ್ಲ ಮಕ್ಕಳೊಳು ಸುಂದರನು ನೀನು
ಮಹರಾಜ ನಿನ್ನಬ್ಬೆ ಕಂಗಳಿಗೆ ನೀನು

ಊಟ ಬಟ್ಟೆಗೆ ಹಣಕೆ ಕೊರತೆಯಿರಬಹುದು
ನನ್ನೆದೆಯ ಪ್ರೀತಿಯಿದೋ ತುಂಬಿ ಹರಿದಿಹುದು

ನಿನ್ನ ಬಾಳಿನ ಹಣತೆಯಾ ಬತ್ತಿ ನಾನು
ನನ್ನ ಬೆವರಿನ ತೈಲ ಅದಕೆ ಸುರಿಯುವೆನು

ನಿನ್ನ ಆಸೆಯ ದೀಪ ನಂದದಿರುವಂತೆ
ಕಾಯುವೆನು ಕಣ್ಣೆವೆಯ ನಾ ಮುಚ್ಚದಂತೆ

ನಿನಗಾಗಿ ಕನಸಿಹುದು ನನ್ನ ಎದೆಯಲ್ಲು
ಆ ಶಿಖರದೆತ್ತರಕೆ ನೀ ಬೆಳೆದು ನಿಲ್ಲು!!

ಡಾ. ಸುದರ್ಶನ ಗುರುರಾಜರಾವ್

ಕವನದ ಕವನ

ಕವನದ ಕವನ

ನೋಡಲಾರದ ಗೋಡೆ ಆರುಮೊಳವಿದ್ದಂತೆ
ಕುಡಿಯಲಾರದ ಪೇಯ ಕೊಳಗ ತುಂಬಿರುವಂತೆ
ಓಡಲಾಗದ ಹಾದಿಗಂತ್ಯವೇ ಇರದಂತೆ
ಹಾಡಲಾರದ ಹಾಡು ಇಲ್ಲಿಹುದು ನೋಡು

ರಾಗ-ತಾಳಗಳಿಲ್ಲ ಶೃತಿಲಯದ ಹೆಸರಿಲ್ಲ
ಆಳದಲಿ ಭಾಷೆಯಾ ಪದಗಳರಿವಿಲ್ಲ
ಥಳುಕು ಬಳುಕಿನ ನವ್ಯ ಕಾವ್ಯಗಳ ಹೆಸರಿನಲಿ
ಬಳಸಿರುವ ಪದ ಪುಂಜ ಇಲ್ಲಿ ಇಹುದಲ್ಲ

ಆದಿಪ್ರಾಸಗಳಿಲ್ಲ ಅಂತ್ಯ ಪ್ರಾಸಗಳಿಲ್ಲ
ಹದವರಿತು ಪದಗಳನು ಇಲ್ಲಿ ಬಳಸಿಲ್ಲ
ಮುದದಿಂದ ಭಾಷೆಯ ಸೇವೆಯನೆ ಮಾಡಿಲ್ಲ
ಪದಗಳ ಪದರಿನಲಿ ಹೊಂದಿಕೆಯೆ ಇಲ್ಲ

ಹಾವ ಭಾವದ ಗಂಧ ಗಾಳಿಗಳು ಇಲ್ಲಿಲ್ಲ
ನೋವ ಮರೆಸುತ ತಣಿಸೊ ಗುಣಗಳಿದಕಿಲ್ಲ
ದೇವ ಭಾಷೆಯ ಸೊಬಗು ಸೊಗಸುಗಳು ಇದಕಿಲ್ಲ
ಯಾವ ಪುರುಷಾರ್ಥವೂ ಇದಕೆ ಸೊಂಕಿಲ್ಲ

ಗದ್ಯವೊಂದರ ಸಾಲು ಸಾಲುಗಳ ತುಂಡರಿಸಿ
ಪದ್ಯದಾ ರೂಪದಲಿ ಜೋದಿಸಿಡಲು
ವೇದ್ಯವಾಯಿತು ನನಗೆ ನವ್ಯ ಕಾವ್ಯದ ಶೈಲಿ
ಗದ್ಯವನೆ ಪದ್ಯದಂತೋದುತಿರಲು

ನಮ್ಮ ಭಾಷೆಯ ಕಾವ್ಯ ಲಕ್ಷಣವ ಅರಿತಿರದೆ
ಅನ್ಯ ಭಾಷೆಯ ಕವನ ತರ್ಜುಮೆಯ ಮಾಡಿ
ಕನ್ನಡದ ಸೊಬಗನ್ನು ಸೊಗಡನ್ನು ಬೆರೆಸದೆಯೆ
ಗೀಚಿದಂತಹ ಚಿತ್ರ ಬರೆದಿರುವೆ ನೋಡಿ

ಪಂಪ, ಹರಿಹರ, ಶರಣ ದಾಸರಲಿ ಮೈವೆತ್ತು
ಇಂಪು ಕಂಪುಗಳ ತಾ ಹೀರಿ ಬೆಳೆದಿತ್ತು
ತಂಪು ಹೊತ್ತಿನಲಿ ವಾಚಿಸುವ ಭಾರತದ
ಸೊಂಪು ತಾ ಕನ್ನಡದ ಅಂಗವಾಗಿತ್ತು

ಗೋವಿಂದ ಪೈ ಯಿಂದ ಕುವೆಂಪು ವರೆಗೆ
ಪಂಜೆ ಮಂಗೇಶರಿಂದ ಎಚ್ಹೆಸ್ವಿ ಎದೆಗೆ
ಹೊನಲಾಗಿ ಹರಿದಂಥ ಕನ್ನಡದ ಕಾವ್ಯ
ಮಂಗನಾ ಕೈ ಸಿಕ್ಕ ಮಾಣಿಕ್ಯವಯ್ಯ

ಬರಹ ಕಲಿತಾಕ್ಷಣಕೆ ಕವಿಯಾದೆನಲ್ಲ
ಮರೆಯುತಲಿ ಕನ್ನಡದ ಕಾವ್ಯ ಗುಣವೆಲ್ಲ
ಮೆರೆಯುವಾ ಹಂಬಲವು ಮನೆಯ ಮಾಡಿಹುದಲ್ಲ
ತೊರೆಸುತಲಿ ಗದ್ಯ ಪದ್ಯಗಳ ಭೇದವೆಲ್ಲ.

ಡಾ. ಸುದರ್ಶನ ಗುರುರಾಜರಾವ್.

ಲೋಹದ ಹಕ್ಕಿ

ಲೋಹದ ಹಕ್ಕಿ

ಹಾರುತಿದೆ ನೋಡಲ್ಲಿ ಲೋಹದಾ ಹಕ್ಕಿ
ದೂರದೂರಕೆ ಸರಿದು ತಾನಾಯ್ತು ಚುಕ್ಕಿ

ಹಕ್ಕಿ ಪಕ್ಷಿಗಳಂತೆ ಗರಿಪುಕ್ಕ ಇದಕಿಲ್ಲ
ಕೊಕ್ಕಿನಲಿ ಹುಳು ಕಡ್ಡಿ ಹಿಡಿಯುವುದೆ ಇಲ್ಲ
ಅಕ್ಕಿ-ಕಾಳುಗಳನ್ನು ಹೆಕ್ಕಿ ತಿನ್ನುವುದಿಲ್ಲ
ಸೊಕ್ಕಿನಲಿ ಘರ್ಜಿಸುತ ಹಾರುತಿಹುದಲ್ಲ

ಮುಂಜಾವಿನಲಿ ಮುದದಿ ಕಲರವವ ಮಾಡದಿದು
ಸಂಜೆಯಾಗಲು ಗೂಡು ಸೇರಿಕೊಳದು
ಕುಂಜರವ ಮೀರಿಸುವ ಗಾತ್ರದೊಳು ಮೆರೆದಿಹುದು
ಅಂಜಿಸುತ ಘರ್ಜನೆಯ ಮಾಡುತೇರುವುದು

ಮೊಟ್ಟೆ ಹಾಕುವುದಿಲ್ಲ ಕಾವು ನೀಡುವುದಿಲ್ಲ
ಕಟ್ಟಿ ಗೂಡನು ಅಲ್ಲಿ ವಾಸಿಸುವುದಿಲ್ಲ
ಚಿಟ್ಟೆಯಾ ತೆರದಲ್ಲಿ ಬಣ್ಣ ಬಣ್ಣದ ಚಿತ್ರ
ಒಟ್ಟು ದೇಹದ ತುಂಬ ತುಂಬಿರುವುದಲ್ಲ

ಖಗ ಜೀವಿಗಳ ತೆರದಿ ಹಗೆ ಗಳಾರಿದಕಿಲ್ಲ
ಗಗನ ಸಖಿಯರು ಇದರ ಒಡಲೊಳಿಹರಲ್ಲ
ನಗುಮೊಗದಿ ಪಯಣಿಗರ ಸ್ವಾಗತಿಸಿ ಸತ್ಕರಿಸಿ
ಆಗಾಗ ಕುಶಲವನು ಕೇಳುತಿಹರಲ್ಲ

ಒಡಲಿನಾ ತುಂಬೆಲ್ಲ ಜನಗಳೇ ತುಂಬಿರಲು
ಕಡಲ ಮೇಲಿನ ಹಾದಿ ಹಾರಿ ಶ್ರಮಿಸಿ
ನಡುನಡುವೆ ಇಳಿಯುತಲೋ ಇಲ್ಲದೇ ಹಾರುತಲೊ
ನೋಡಲ್ಲಿ ಹಾರುತಿದೆ ದೇಶಗಳ ಕ್ರಮಿಸಿ

ಹಾರಲಾಗದೆ ಸಹಜ ರೆಕ್ಕೆ ಇಲ್ಲದ ಮನುಜ
ಮಾರು ಹೋಗುತ ಈ ಖಗ ಜಗದ ಸುಖಕೆ
ನೂರಾರು ತಲೆಮಾರುಗಳಂತರದಿ ಕಟ್ಟಿದನು
ಹಾರು ಹಕ್ಕಿಯ ತಣಿಸೆ ತನ್ನ ಬಯಕೆ.

ಡಾ.ಸುದರ್ಶನ ಗುರುರಾಜರಾವ್.

ಜೇನುದುಂಬಿ ಪಿ.ಬಿ.ಶ್ರೀನಿವಾಸ್

ನಾನು ನನ್ನ ಕಾಲದ ಎಲ್ಲ ಹುಡುಗರಂತೆ ರೇಡಿಯೊ ಹಾದುಗಳನ್ನು ಕೇಳುತ್ತ ಬೆಳೆದವನು. ಪ್ರತಿ ದಿನ ಪ್ರಸಾರವಾಗುತ್ತಿದ್ದ ಹಲವಾರು ಹಾಡುಗಳೆಲ್ಲ ಚೆನ್ನಾಗಿರುತ್ತಿದ್ದರೂ ನನ್ನ ಗಮನ ಸೆಳೆದು ಪರವಶಗೊಳಿಸುತ್ತಿದ್ದುದು ಪಿ.ಬಿ ಶ್ರೀನಿವಾಸರ ಹಾಡುಗಳೆ. ಕೆಲವೊಮ್ಮೆ ದಿನ ಪೂರ್ತಿ ಅವರ ಹಾಡೊಂದನ್ನು ಗುನುಗುಡುತ್ತಿದ್ದುದು ಅಪರೂಪವೇನಾಗಿರಲಿಲ್ಲ. ಜೀವನದಲ್ಲಿ ಪ್ರತಿಭೆಯೊಂದಿಗೆ ಅದೃಷ್ಟ ಇರಬೇಕು ಎಂಬುದಕ್ಕೆ ಪಿ.ಬಿ ಅವರ ವೃತ್ತಿ ಜೀವನ ಸಾಕ್ಷಿಯಾಗಿ ನಿಲ್ಲುತ್ತದೆ. ಇನ್ನೂ ಹಾಡುವ ಕಸುವು ಇದ್ದಾಗಲೇ ಅವಕಾಶ ವಂಚಿತರಾಗಿ ನೇಪಥ್ಯಕ್ಕೆ ಸರಿದಿದ್ದು ಚಿತ್ರಗೀತೆಗಳಿಗಾದ ಅನ್ಯಾಯವೆ ಸರಿ. ಒಂದೊಮ್ಮೆ ಆಕಾಶವಾಣಿಯ ಸಂದರ್ಶನದಲ್ಲಿ ನಿಮ್ಮ ಮಕ್ಕಳಿಗೆ ನಿಮ್ಮಂತೆ ಹಾದಲು ಬರುತ್ತದೆಯೆ ಎಂದು ಕೇಳಿದಾಗ ಅವರು ಬಹಳ ಮಾರ್ಮಿಕವಾಗಿ ಉತ್ತರಿಸಿದರು. ನನ್ನ ಮಕ್ಕಳೂ ಕೂಡ ನನ್ನಷ್ಟೇ ಚೆನ್ನಗಿ ಹಾಡಬಲ್ಲರು ಆದರೆ ನಮ್ಮ ವೃತ್ತಿಯಲ್ಲಿ ನಿಶ್ಚಿತತೆ ಇಲ್ಲ. ಹಾಗಾಗಿ ಅವರಾರೂ ಗಾಯನವನ್ನು ವೃತ್ತಿಯಾಗಿ ತೆಗೆದುಕೊಳ್ಳಲಿಲ್ಲ. ಸ್ವಾಭಾವಿಕವಾಗಿ ಅವರ ತಂದೆಯ ಕಳವಳವನ್ನು ಅವರೆಲ್ಲರೂ ಅನುಭವಿಸಿರಲೂ ಸಾಕು. ೪೫ -೪೬ ನೇ ವಯಸ್ಸಿಗೆ ಪಿ.ಬಿ ಹಾಡುವುದು ಬಹಳ ಅಪರೂಪವಾಗಿದ್ದು ಜೀವನ ಕಷ್ಟಕರವಾಗಿದ್ದಿರಬಹುದು.ಅವರ ಜೀವನದ ಈ ಮುಖವನ್ನು ನಾವು ಕಂಡರಿಯೆವು. ಈ ನಿಟ್ಟಿನಲ್ಲಿ ಅವರ ಮೇಲೆ ಬರಹಗಳು ಬರಬೇಕಿದೆ. ಈ ಗಾನಕೊಗಿಲೆಯನ್ನು ಸಂಧಿಸುವ ನನ್ನ ಬಯಕೆ ಅಪೂರ್ಣವಾಗಿಯೇ ಉಳಿಯಿತು.
ಜೇನುದುಂಬಿ ಪಿ.ಬಿ.ಎಸ್ ರ ಕಾವ್ಯನಾಮ. ಆವರನ್ನು ಅದೇ ಹೆಸರಲ್ಲಿ ಉಲ್ಲೇಖಿಸಿ ಅವರ ನೆನಪಿಗಾಗಿ ಈ ಕವನ ರಚಿಸಿದ್ದೇನೆ. ಕಾನದ ಆದರೆ ಬರೀ ಕೇಳಿದ ಗುರುವಿಗೆ ನನ್ನ ಗುರುನಮನ.

ಜೇನುದುಂಬಿ ಪಿ.ಬಿ.ಶ್ರೀನಿವಾಸ್

ಹಿನ್ನೆಲೆ ಗಾಯನವ ಮುನ್ನೆಲೆಗೆ ತಂದೆ ನೀ
ನಿನ್ನ ಹಾಡಲಿ ಜಗಕೆ ಮೋಡಿಯನು ಮಾಡಿ
ಮಾಧುರ್ಯವೆನ್ನುವ ಶಬ್ದಕ್ಕೆ ಅರ್ಥವನು
ನಿನ್ನ ಕಂಠದಿ ಸತತ ರಸಿಕರಿಗೆ ನೀಡಿ

ನುಡಿಗಳಾ ತೋಟದಲಿ ಬೆಡಗಿನಲಿ ಬೆಳೆದಿರಲು
ತಡೆಯಿರದೆ ಹಾಡುಗಳ ತರು-ಲತೆಗಳು
ಸಂಗೀತ ದೇವತೆಯು ಮನದುಂಬಿ ವಿಹರಿಸಲು
ಚೆಲುವ ಪುಶ್ಪಗಲಲ್ಲಿ ಮೈತಳೆದವು

ಗುನುಗುಣಿಸಿ ನೀ ಬಂದೆ ಜೇನುದುಂಬಿಯ ತೆರದಿ
ಹೀರಿ ಮಧುವನು ಜಗಕೆ ಉಣಬಡಿಸಲು
ತಂಗಾಳಿ ಬೀಸಿದೊಲು ತಂಪುಮಳೆಗರೆದವೊಲು
ಇಂಪು-ಕಂಪೆರೆಡು ಹದದಿ ಸೇರಿದವೊಲು

ಜೇನಿನಾ ಸಿಹಿಯಂತೆ ಜೇನಿನಾ ಜಿಗುಟಂತೆ
ಜೇನಿನಾ ಧಾರೆಯೊಲು ಕೊನೆಯೆ ಇರದಂತೆ
ಹಾಡುತಿರೆ ನೀನಂದು ಕೇಳಿ ಕುಣಿಯಿತು ಜಗವು
ಮಧುರ ವಾಣಿಯ ನಾದ ಅನುರಣಿಸಿದಂತೆ

ವಿವಿಧ ತೋಟಗಳ ಹಲವಾರು ಬಳ್ಳಿಗಳ
ಹಲವು ಹೂವುಗಳಿಂದ ಜೇನು ನೀತಂದೆ
ತುಂಬಿದೆ ಸಹೃದಯರೆದೆಯೆಂಬ ಗೂಡನ್ನು
ನಿನ್ನ ಹಾಡಿನ ಮಧುರ ಮಧುವಿನಿಂದೆ

ಕಾಲವುರುಳಿತು ಜನಮಾನ ಬದಲಾಯ್ತು
ತೋಟಗಳ ಗಿಡ ಬಳ್ಳಿ ಹೊಸದಾಗಲು
ಅಬ್ಬರದ ಆರ್ಭಟವು ಹೂದೋಟದೊಳು ನಡೆಯೆ
ನಿನ್ನ ಕೆಲಸಕೆ ಸಿಗದೆ ಹೊಸ ಹೂಗಳು

ಹಳೆ ತೋಟಿಗಳು ತೆರಳಿ ಹೊಸ ತೋಟಿಗಳು ಬರಲು
ಬಳ್ಳಿ ಬಳ್ಳಿಯಲಿ ಬರಿದೆ ಕಾಗದದ ಹೂವು
ಹೂ ತೋಟ ತಂತಿ ಬೇಲಿಯಾ ಒಳಗಾಯ್ತು ಜೇನು
ದುಂಬಿಯ ಮನದ ತುಂಬೆಲ್ಲ ನೋವು

ಮಧುಕರನ ಜೊತೆಯಿರದ ವಾಸನೆಯ ಸೊಂಕಿರದ
ಕಾಗದದ ಹೂವುಗಳ ರಾಶಿಯಿಂದು
ಕೊಳೆಯುತ್ತ ಕೊಳೆಸುತ್ತ ಕುಣಿಸುತ್ತ ಬರುತಿರಲು
ಸೊಗಡಿರದೆ ಸೊರಗಿಹುದು ಭಾಷೆಯಿಂದು

ವ್ಯವಹಾರ ಮೊದಲಾಗಿ ವ್ಯವಧಾನ ಮರೆಯಾಗಿ
ತೆರೆ ಮರೆಗೆ ಸರಿದಿರಲು ಜೇನುದುಂಬಿ
ನಿನ್ನ ಸುಮಧುರ ಗಾನ ಸಹೃದಯರೆದೆಗಳಿಗೆ
ನಿರತ ಕೊಡುತಿದೆ ಸುಧೆಯ ತುಂಬಿ ತುಂಬಿ
ಡಾ. ಸುದರ್ಶನ ಗುರುರಾಜರಾವ್

ತೋಳ -ಕುರಿ ನ್ಯಾಯ

ತೋಳ -ಕುರಿ ನ್ಯಾಯ

ಕುರಿಯು ಒಂದು ನೀರು ಕುಡಿಯಲೆಂದು
ತೊರೆಯ ಬಳಿಗೆ ಬಂದು
ಹರಿವ ತೊರೆಯ ನೀರಿನಲ್ಲಿ ಬಾಯಿಯಿಟ್ಟಿತು

ಹೊಟ್ತೆ ತುಂಬಿದಂಥ ಕುರಿಯ
ದಾಹ ತಣಿಸುವಂಥ ತೊರೆಯ
ನೀರು ಕುಡಿಯೆ ಸ್ವರ್ಗ ಅಲ್ಲೆ ಸಿಕ್ಕಿಬಿಟ್ಟಿತು

ಅಷ್ಟರಲ್ಲೆ ಅಲ್ಲಿಗೊಂದು
ದುಷ್ಟತೋಳವೊಂದು ಬಂದು
ದೃಷ್ಟಿಯನ್ನು ಅತ್ತ ಇತ್ತ ಹಾಯ ಬಿಟ್ಟಿತು

ಉಂಡು ದುಂಡಗಿತ್ತು ಕುರಿಯು
ಕಂಡು ಕೆರಳಿ ಹೊಟ್ಟೆ ಉರಿಯು
ಭಂಡ ತೋಳ ತಿನ್ನಲದನು ಹೊಂಚು ಹಾಕಿತು

ಇಂದು ಕುರಿಯ ಮೇಲೆ ಹಾರಿ
ಕೊಂದು ರಕ್ತವನ್ನು ಹೀರಿ
ತಿಂದುಬಿಡಲು ಧೂರ್ತನೆಂದು ಹೆಸರು ಕೆಡುವುದು

ಹೆಸರು ನನ್ನದುಳಿಯಬೇಕು
ಕೆಸರು ಕುರಿಗೆ ಬಳಿಯಬೇಕು
ಹಸಿವು ನನಗೆ ಕಳೆಯ ಬೇಕು ಏನು ಮಾಳ್ಪುದು

ಅಲ್ಲೆ ಒಂದು ಹೊಂಚು ಹೊಸೆದು
ಕಾಲು ಕೆರೆದು ಜಗಳ ತೆಗೆದು
ಮೂಲ ದೋಷ ಕುರಿಯ ಮೇಲೆ ಹೇರ ತೊಡಗಿತು

ಎಲವೋ ಅಹಂಕಾರಿ ಕುರಿಯೆ
ನೆಲೆಯು ನಿನ್ನದೇನು ಅರಿಯೆ
ಜಲವನೆಲ್ಲ ಎಂಜಲೇಕೆ ಮಾಡುತಿರುವೆಯೊ?

ಕುರಿಯು ಹೆಜ್ಜೆ ಹಿಂದೆ ಹೋಗಿ
ಹಿರಿಯ ವೃಕಕೆ ತಲೆಯ ಬಾಗಿ
ಅರಿಕೆಯನ್ನು ವಿನಯದಿಂದ ತಾನು ಮಾಡಿತು

ದೈವ ಕರುಣೆ ಹರಿವ ನೀರು
ತಾವು ಅದನು ಕೇಳಲ್ಯಾರು
ನೀವು ನನ್ನ ಪಾಡಿಗೆನ್ನ ಬಿಡಿರಿ ಎಂದಿತು

ಇಷ್ಟು ತಿಳಿಯದೇನೊ ಕುರಿಯೆ
ಎಷ್ಟು ಸೊಕ್ಕು ನಿನಗೆ ಸರಿಯೆ
ಅಷ್ಟು ನೀರು ಎಂಜಲಾಗಿ ನನಗೆ ಬಂದಿದೆ

ನಿನ್ನ ಎಂಜಲುಣುವ ಜೀವಿ
ನಾನು ಅಲ್ಲ ಎನುವ ಠೀವಿ
ನಿನಗೆ ತಿಳಿಸಲೇನು ಎಂದು ಹುಯಿಲು ಮಾಡಿತು

ಕುರಿಯು ಕುಡಿದ ನೀರು ಮುಂದೆ
ಹರಿದು ಹೋಯಿತೆನ್ನ ತಂದೆ
ಹರಿದು ಈಗ ಬರುವ ಜಲವ ಕುಡಿಯಿರೆನ್ನಲು

ಕುರಿಯು ಬಾಯಿ ಇಟ್ಟರಾಯ್ತು
ನೀರು ಮಲಿನವಾಗಿ ಹೋಯ್ತು
ಹರಿದು ಕೆಳಗೆ ಬರುವ ನೀರ ಕುಡಿಯಲಾಗದು

ಭಂಡವಾದ ಹೂಡಿ ತೋಳ
ಮೊಂಡು ಹಟವ ಮಾಡಿ ಕೊರಳ
ಖಂಡಗಳನು ಉಬ್ಬಿಸುತ್ತ ಕೂಗಿ ಮೊರೆಯಿತು

ಕಾಲ ಮಿಂಚಿ ತಪ್ಪು ಆಯ್ತು
ಮೇಲಕೇರಿ ಕುಡಿದರಾಯ್ತು
ನೀವು ಕುಡಿದು ಬಿಟ್ಟ ನೀರ ನಾವು ಕುಡಿವೆವು

ನಿನ್ನದೊಂದೆ ಎಂಜಲಲ್ಲ
ನಿನ್ನ ತಂದೆ ತಾತರೆಲ್ಲ
ಮುನ್ನ ತೊರೆಯ ತುಂಬ ಎಂಜಲಾಗಿಸಿರುವರು

ನಿಮ್ಮ ವಾದ ಬಹಳ ಜಟಿಲ
ಮೂಲಧ್ಯೇಯವಂತು ಕುಟಿಲ
ಜಲವನರಸಿ ತೊರೆಗೆ ಮುಂದೆ ಬಾರೆನೆನ್ನಲು

ಅನ್ನಕಾಗಿ ಹಸಿದ ತೋಳ
ತಿನ್ನಲೆಂದು ರಸದ ಕವಳ
ಇನ್ನು ರೋಷದಿಂದ ಜೋರು ಮಾಡಿ ಕೂಗಿತು

ಭಿಕ್ಷೆ ಏನು ಬೇಡ ನನಗೆ
ಶಿಕ್ಷೆಯಾಗಬೇಕು ನಿನಗೆ
ವಕ್ಷವನ್ನು ಸೀಳಿ ನಿನಗೆ ಪಾಠ ಕಲಿಸುವೆ

ಕುರಿಯ ಮೇಲೆ ಹೊರಿಸಿ ಲೋಪ
ದುರುಳತನಕೆ ಸುಳ್ಳ ಲೇಪ
ಮರುಳುಗೊಳಿಸಿ ಲೋಕಕೆಲ್ಲ ಮಂಕು ಎರಚುವೆ

ನನ್ನ ಆಗ ಎಲ್ಲ ಹೊಗಳಿ
ಕುನ್ನಿ ಕುರಿಯ ಬುದ್ಢಿ ತೆಗಳಿ
ಎನ್ನ ಘನತೆ ಲೋಕದಲ್ಲಿ ವೃದ್ದ್ಧಿಗೊಳಿಸುವೆ

ಮಿಂಚಿನ್ಂತೆ ಮೇಲೆ ನೆಗೆದು
ಹೊಂಚಿ ಕುರಿಯ ಪ್ರಾಣ ತೆಗೆದು
ಕಂಚು ಕಂಠದಿಂದ ಜಗಕೆ ಕೂಗಿ ಹೇಳಿತು

ಹಾಳು ಕುರಿಯೆ ದುಷ್ಟ ದುರುಳ
ತೋಳ ನೀನು ಬಹಳ ಸರಳ
ಕೊಳಕು ತೊಳೆದ ನ್ಯಾಯ ವಾದಿ ನೀನೆ ಎನ್ನುತ

ಅಂಧರಂತೆ ಲೋಕವೆಲ್ಲ್ಲ
ತೋಳ ಸ್ತುತಿಯ ಮಾಡಿತಲ್ಲ
ಒಳಗೆ ಮೆರೆದು ಮದಿಸುತಿತ್ತು ತೋಳ ಹಿಗ್ಗುತ

ಶಕ್ತರೆಂದು ಲೋಕದಲ್ಲಿ
ಯುಕ್ತ ಮಂಕು ಬೂದಿಚೆಲ್ಲಿ
ಮುಕ್ತವಾಗಿ ತಮ್ಮ ಬೇಳೆ ಬೇಯ್ಸಿಕೊಳುತಿರೆ

ದೀನರೆಲ್ಲ ಕುರಿಗಳಾಗಿ
ಕಾಯ್ವ ಜನರು ತೋಳವಾಗಿ
ನೀತಿ ನಿಯಮ ತೋಳಕಾಗಿ ಜಗವು ನಡೆದಿರೆ!!!

ಡಾ. ಸುದರ್ಶನ ಗುರುರಾಜರಾವ್.

ಪತ್ರ ರೂಪಾಂತರ

ಪತ್ರ ರೂಪಾಂತರ

ಬಲುದಿನದಿ ಮಿತ್ರನಿಗೆ ಪತ್ರವನೆ ಬರೆದಿಲ್ಲ
ಬರೆಯಲೆ ನಾನು ಬೇಗ
ತಾಳೆಗರಿಯೊಂದೆಳೆದು ಕುಳಿತಿರುವೆ ಯೋಚಿಸುತ
ಏನನ್ನು ಬರೆಯಲೀಗ

ಉಭಯಕುಶಲೋಪರಿಯ ಎರಡು ಸಾಲುಗಳನ್ನು
ಬರೆದಿರುವೆ ಲೇಖನಿಯಲಿ
ಮದ್ಯಾಹ್ನದೂಟಕ್ಕೆ ಆಲಸ್ಯವದು ಸೇರಿ ನಿದ್ದೆ
ಮೂಡಿತು ಕಣ್ಣುಗಳಲಿ

ನಿದ್ರೆಯಿಂದೆದ್ದು ಮುಂದೆ ಬರೆಯುವೆನೆಂದು
ನಾ ಅಲ್ಲಿ ವಿಶ್ರಮಿಸಲು
ಎದ್ದು ನೋಡಲು ತಾಳೆ ಗರಿ ಬದಲಾಗಿ
ತೊಗಲಿನಾ ಪತ್ರವಿರಲು

ತೊಗಲಿನಾ ಹಾಳೆಯಲಿ ನಾ ಪತ್ರ ಉದ್ಧರಿಸೆ
ಮತ್ತೆರೆದು ಸಾಲು ಬರೆದು
ಮುಂದಿನಾ ವಿಷಯಗಳ ಬರೆಯುವೆನು ನಂತರದಿ
ಎಂದಂದು ಒಳಗೆ ಸರಿದು

ಸಂಜೆಯಾಯಿತು ಸಂಧ್ಯ ವಂದನೆಯ ನಾ ಮುಗಿಸಿ
ಬಂದಿರಲು ಪತ್ರ ಬರೆಯೆ
ತೊಗಲು ಹಾಳೆಯ ಬದಲು ಅಲ್ಲಿತ್ತು ಸುಂದರ
ಬಟ್ಟೆಯ ಓಲೆ ಗರಿಯೆ

ನನ್ನ ಉರಿನ ವಿಷಯ ಅರುಹುತ್ತ ಕೇಳಿದೆನು
ಆತನ ಸುದ್ದಿಯೆಂತು
ಆಷ್ಟಕ್ಕೆ ಅಡಿಗೆಯಾ ಮನೆಯಿಂದ ನನಗೊಂದು
ಊಟಕ್ಕೆ ಕರೆಯು ಬಂತು

ಪತ್ರವನು ಬದಿಗಿಟ್ಟು ರುಚಿಯೂಟ ಸವಿಯಲಿಕೆ
ನಾನಂದು ಹೋದೆ ಒಳಗೆ
ಬಟ್ಟೆಯಾ ಓಲೆಯದು ಕಾಗದದ ಪತ್ರವಾಗಿತ್ತು
ತಾ ಅಷ್ಟರೊಳಗೆ!!

ಕಾಗದದ ಮೇಲೆರೆಡು ಸಾಲು ಗೀಚಿರಲಿಲ್ಲ
ಅಷ್ಟರಲೆ ಮಗನು ಬಂದು
ನಮ್ಮ ಜೊತೆಯಲಿ ನೀನು ಆಟವಾಡುವುದಿಲ್ಲ
ದೂಷಿಸುತ ಕರೆದನಂದು

ಎಲವೊ ಮಿತ್ರನೆ ನಿನಗೆ ಪತ್ರ ಬರೆಯುವ ಕೆಲಸ
ಎಳೆಯುತಿದೆ ದೀರ್ಘವಾಗಿ
ಎಂದು ಮರುಗುತ ಹೊರಟೆ ಮಗನೊಡನೆ ಆಡಲಿಕೆ
ಅವನ ಮನ ಶಾಂತಿಗಾಗಿ

ಬಂದು ಪತ್ರವ ಮುಗಿಸಿ ಮಡಿಸಿ ಲಕೋಟೆಗೆ
ಹಾಕಬೇಕೆಂದು ನೆನೆದು
ಮೇಲೊಂದು ಮರೆಯದೆಯೆ ಅಂಚೆ ಚೀಟಿಯನೆಂದು
ಮೆತ್ತಬೇಕೆಂದು ಬಗೆದು

ಮಗನಲ್ಲಿ ಮಲಗಿದನು ಇನ್ನು ತೊಂದರೆಯಿಲ್ಲ
ಪತ್ರವನು ನಾ ಮುಗಿಸಲು
ಭರದಿಂದ ಬಂದಿರಲು ಕಾಣದೆಯೆ ಕಾಗದವ
ಸುತ್ತಲೂ ಹುಡುಕುತಿರಲು

ಅಲ್ಲಿತ್ತು ಗಣಕಯಂತ್ರದ ಪರದೆ ಪರದೆಯಲಿ
ನನ ಒಕ್ಕಣೆಗಳು
ಮುಂದೆ ಬರೆಯುವುದಕೆ ಲೇಖಣಿಯೆ ಬೇಕಿಲ್ಲ
ಬೆರಳಚ್ಚು ಗುಂಡಿಗಳಿರಲು

ಪಟಪಟನೆ ನಾ ಬಡಿಯೆ ಮೂಡಿರಲು ಪರದೆಯಲಿ
ನನ್ನೆಲ್ಲ ಮನದ ಮಾತು
ಸಂಗ್ರಹಿಸಿ ಪರದೆಯಲಿ ಶೇಖರಿಸಿ ಕಳುಹಿಸಿರೆ
ಕ್ಷಣದಲ್ಲಿ ಹಾರಿಹೋಯ್ತು

ಪತ್ರಗಳ ವಿನಿಮಯಕೆ ಬೇಕಿತ್ತು ಹಿಂದೆಲ್ಲ
ದಿನ ವಾರ ಮಾಸ ಕಾಲ
ಕಣ್ಣೆವೆಯ ಬಡಿವಲ್ಲಿ ಹೊತ್ತೊಯ್ದು ತಲುಪಿಸಿದೆ
ಮಾಯೆಯಾ ಅಂತರ್ಜಾಲ

ಏನಿದಚ್ಚರಿ ದೇವ ಪ್ರತಿಸಲಕು ಪಡೆಯುತಿದೆ
ನನ ಪತ್ರ ರೂಪಾಂತರ
ಸಂದೇಶದ ಮಣ್ಣ ಕಲಸಿ ರೂಪಾಂತರವ
ನೀಡಿರೆ ಕಾಲ- ಕುಂಬಾರ

ಕಾಲನಾ ಹರಿವಿನಲಿ ಕುಳಿತು ನಾ ದೋಣಿಯಲಿ
ಅನುಭವಿಸಿ ಅಚ್ಚರಿಯನು
ಕನಸೊ ನನಸೊ ಎಂದು ತಿಳಿಯದಲೆ ಬೆಚ್ಚುತಲಿ
ಬಿಟ್ಟಿರಲು ನನ ಕಣ್ಣನು

ನಿಮ್ಮ ಬಡಬಡಿಕೆಯಲಿ ನನಗೆ ನಿದ್ರೆಯದಿಲ್ಲ
ದೂರುತಲಿ ನನ ಹೆಂಡತಿ
ಪತ್ರ ಬರೆಯುವುದೆಂದು ನಿಮ್ಮ ಹಣೆಯಲ್ಲಿಲ್ಲ
ಎಂದೆನುತ ತಿವಿದು ಮೂತಿ

ಮಗ್ಗುಲಿಗೆ ಹೊರಳಿದಳು ಕೊಡುತಲಿ ಎಚ್ಚರಿಕೆ
ಹೊಡೆದಳು ತಾನು ಗೊರಕೆ
ನಿದ್ರೆ ಬಾರದೆ ನಾನು ಮನದ ಕಸವನು ಗುಡಿಸೆ
ಹಿಡೆದೆ ಮರೆವಿನ ಪೊರಕೆ.

ಡಾ. ಸುದರ್ಶನ ಗುರುರಾಜರಾವ್.

 

 

 

 

 

 

ಆನೆ ಮತ್ತು ಇಲಿ

ಆನೆ ಮತ್ತು ಇಲಿ

ಆನೆಯೊಂದು ಕಾಡಲಿತ್ತು
ಗಂಭೀರ ಭಾವ ಹೊತ್ತು
ಕಾಡಿನೆಲ್ಲ ಪ್ರಾಣಿಗಳು ಅದನು ಬಲ್ಲವು
ತಾನು ತನ್ನ ಕೆಲಸವಾಯ್ತು
ಶ್ರದ್ಧೆಯಿಂದ ದುಡಿದರಾಯ್ತು
ಎಂದು ನಂಬಿದಾನೆಯನ್ನು ಹೊಗಳುತಿದ್ದವು

ಹಿಗ್ಗದಂತೆ ಹೊಗಳಿಕೆಗೆ
ಕುಗ್ಗದಂತೆ ತೆಗಳಿಕೆಗೆ
ಕೆಲಸದಲ್ಲೆ ದೇವರನ್ನು ಆನೆ ಕಾಣಲು
ಅಲ್ಲೆ ಇದ್ದ ಇಲಿಯು ಒಂದು
ತನ್ನ ಸ್ಥಾನ ಏನು ಎಂದು
ತಿಳಿಯದಲೆ ಜಾನನಂತೆ ಮದಿಸಿ ಮೆರೆಯಲು

ಯೋಗ್ಯತೆಯ ಮೇರೆ ಮೀರಿ
ಎಲ್ಲರಲ್ಲು ಮೂಗು ತೂರಿ
ಬಿಟ್ಟಿ ಸಲಹೆ ಸೂತ್ರಗಳನು ನೀಡುತಿದ್ದಿತು

ದಾರಿಯಲ್ಲಿ ಆನೆ ಸಿಗಲು
ನಡೆಯಲಾಗದಂಥ ಇಲಿಯು
ಬೆನ್ನಮೇಲೆ ಕೂಡಲೇನು ಎಂದು ಕೇಳಿತು
ಮತನಾಡದಂತೆ ಗಜವು
ಗೋಣುಹಾಕಿ ಆಯಿತೆನಲು
ಠಣ್ಣನೆಂದು ಬೆನ್ನನೇರಿ ಇಲಿಯು ಕುಳಿತಿತು

ಬಾಯಿಬಡುಕ ಮೂರ್ಖ ಇಲಿ
ದಾರಿ ಪೂರ ಬಡಬಡಿಸುತಲಿ
ಆನೆ ತಲೆಯ ಚಿಟ್ಟುಹಿಡಿಸುವಂತೆ ಮಾಡಿತು
ಸ್ಥಿತಪ್ರಜ್ಞ ಆನೆ ತಾನು
ಆಡದಂತೆ ಮಾತನೇನು
ಇಲಿಯ ಮಾತ ಕೇಳಿ -ಕೇಳದಂತೆ ನಡೆಯಿತು

ದಾರಿಯಲ್ಲಿ ಹೋಳೆಯು ಸಿಗಲು
ನೀರುತುಂಬಿ ಹರಿಯುತಿರಲು
ಇಲಿಯು ಸಲಹೆ ಕೊಡಲು ತಾನು ಮೊದಲು ಮಾಡಿತು

ನೀರು ಬಹಳ ಆನೆಯಣ್ಣ
ಸೆಳವು ಬಹಳ ಇರುವುದಣ್ಣ
ಸೌಖ್ಯವಾಗಿ ದಾಟಲಿಕ್ಕೆ ಇರಲಿ ಎಚ್ಚರ
ಕಾಲು ಜಾರಿ ಬೀಳಬಹುದು
ಸೆಳವಿನಲ್ಲಿ ಸಿಲುಕಬಹುದು
ನನ್ನ ಮಾತ ಕೆಲದಿರಲು ಉಳಿವು ದುಸ್ತರ

ಮನಸಿನಲ್ಲೆ ಆನೆ ನಗುತ
ಭೀತಿ ಇರದೆ ಹೆಜ್ಜೆ ಇಡುತ
ಸೆಳತಕಿನಿತು ನಲುಗದಂತೆ ನದಿಯ ದಾಟಲು
ಹರುಷದಿಂದ ಇಲಿಯು ನಲಿದು
ವಿಜಯ ತನ್ನದೆಂದೆ ಬಗೆದು
ಕಾಡಿನಲ್ಲಿ ಸ್ವಪ್ರಶಂಸೆ ಕೊಚ್ಚಿಕೊಳ್ಳಲು

ಮುಂದೆ ಹೌದು ಎಂದು ನುಡಿದು
ಹಿಂದೆ ತಮ್ಮ ಮೂಗು ಮುರಿದು
ಇಲಿಯ ಮಾತಿಗೆಲ್ಲ ಬಿದ್ದು ಬಿದ್ದು ನಕ್ಕರು

ದುಡಿವ ಶಕ್ತಿ ಆನೆಯಂತೆ
ಬರಿಯ ಮಾತು ಇಲಿಯ ಸಂತೆ
ನಮ್ಮ ಸ್ಥಾನ ಮಾನ ಜಗದಿ ನಾವೆ ಪಡೆವೆವು
ಅಹಂಕಾರವೆಂಬ ಇಲಿಗೆ
ಅಧಿಕಾರವ ಕೊಡಲು ಕೊನೆಗೆ
ನಮಗೆ ನಾವೆ ವೈರಿಯಾಗಿ ಮುಳುಗಿಬಿಡುವೆವು.

ಡಾ.ಸುದರ್ಶನ ಗುರುರಾಜರಾವ್

ಪಿ.ಬಿ.ಶ್ರೀನಿವಾಸ್: ಭಾವ ಪೂರ್ಣಗಾಯಕನೊಂದಿಗೆ ಒಂದು ಭಾವಯಾನ.

ಪಿ.ಬಿ.ಶ್ರೀನಿವಾಸ್: ಭಾವ ಪೂರ್ಣಗಾಯಕನೊಂದಿಗೆ ಒಂದು ಭಾವಯಾನ.

ಪಿ.ಬಿ.ಎಸ್ ಎನೆ ಕುಣಿದಾಡುವುದೆನ್ನೆದೆ
ಪಿ.ಬಿ.ಎಸ್ ಎನೆ ಕಿವಿ ನಿಮಿರಿವುದು
ಕರಿ ಮುಗಿಲನ್ನು ಕಾಣುವ ನವಿಲೊಲು
ಫ್ಹಕ್ಕನೆ ಮನ ಮೈ ಮರೆಯುವುದು (ಕು.ವೆಂ.ಪು ಅವರ ಕ್ಷಮೆ ಕೋರಿ)

ಈ ಮಾತುಗಳು ಸುಮ್ಮನೆ ಹೇಳಿದ್ದಲ್ಲ. ಎದೆಯಾಂತರಾಳದಲಿ ಪುಟಿವ ಕಾರಂಜಿಯಲಿ, ಹೃದಯ ವೀಣೆ ಮಿಡಿದು ಸಿಡಿದ ಮಾತುಗಳು – ನನ್ನ ಮಟ್ಟಿಗೆ; ನನ್ನಂಥ ಸಾವಿರಾರು ಪಿ.ಬಿ.ಎಸ್ ಅಭಿಮಾನಿಗಳ ಮಟ್ಟಿಗೆ.

ಪಿ.ಬಿ.ಎಸ್ ನಮ್ಮನ್ನು ಅಗಲಿ ಒಂದು ವರ್ಷ ಕಳೆಯುತ್ತಿದೆ. ಕಳೆದ ವರ್ಷ ಅಮೇರಿಕದ ಹಲವು ಕನ್ನಡಪರ ಸಂಘಟನೆಗಳು ಅವರಿಗೆ ಭಾವಪೂರ್ಣ ಶ್ರಧ್ಧಾಂಜಲಿ ಅರ್ಪಿಸಿದವು. ಆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗಾಯಕನನ್ನು ನೆನಪಿಸಿಕೊಂಡ ಪರಿ ಹೃದಯ ತುಂಬಿಸುವಂಥ ಕೆಲಸ. ಈ ವರ್ಷ ಕೂಡ ಹಾಗೆ ನಡೆಯಲೆಂದು ಆಶಿಸುತ್ತೇನೆ.
ಪ್ರತಿವಾದಿ ಭಯಂಕರ ಎಂಬುದು ಅವರ ಹೆಸರಿನ ಜೊತೆಗಿದ್ದರೂ ರೂಪ, ಗುಣ,ನಡತೆ,ಹಾಗು ಗಾಯನದಲ್ಲಿ ಸೌಜನ್ಯ ಸಜ್ಜನಿಕೆಗಳನ್ನು ಗಾಢವಾಗಿ ಪ್ರತಿಫಲಿಸಿದಂತಹ ವ್ಯಕ್ತಿತ್ವ ಪಿ.ಬಿ.ಎಸ್ ಅವರದ್ದು. ಭಯಂಕರ ಎನ್ನುವ ಶಬ್ದಕ್ಕೆ ಭಯಂಕರನೆನ್ನಿಸುವಂತಿತ್ತು ಅವರ ನಡವಳಿಕೆ. ಪಿ.ಬಿ.ಎಸ್ ಎಂದರೆ ಪ್ರೇಯರ್ ಬಿಲೇವರ್ ಶ್ರೀನಿವಾಸ್ ಅಥವ ಪ್ಲೇ ಬ್ಯಾಕ್ ಸಿಂಗರ್ ಶ್ರೀನಿವಾಸ್ ಎಂದೂ ಅನ್ವರ್ಥಕವಾಗಿ ಅವರನ್ನು ಉದ್ಧರಿಸುವುದುಂಟು. ಪಿ.ಬಿ.ಎಸ್ ಹಾಡಿದ ಶ್ಲೋಕಗಳನ್ನು ಕೇಳಿದವರಿಗೆ ಈ ಮಾತು ೧೦೦ ಕ್ಕೆ ನೂರು ಸತ್ಯ ಎನ್ನಿಸದಿರದು.
ಪಿ.ಬಿ.ಎಸ್ ಜೊತೆಗಿನ ನನ್ನ ಭಾವಯಾನ”ಪ್ರೇಮದ ಕಾಣಿಕೆ’ ಚಿತ್ರದಿಂದ ಪ್ರಾರಂಭವಾಯ್ತೆಂದು ನನ್ನ ಭಾವನೆ. ನನಗಾಗ ೬ ಅಥವ ೭ ವರ್ಷ ಇರಬಹುದು. ನನ್ನ ತಾಯಿ ಜೊತೆಗೆ ನೋಡಿದ ಆ ಸಿನಿಮಾದಲ್ಲಿ ‘ಚಿನ್ನ ಎಂದು ನಗುತಿರು‘ ಒಂದು ಹಾಡನ್ನು ಪಿ.ಬಿ.ಎಸ್ ಹಾಡಿ ಉಳಿದೆಲ್ಲವನ್ನು ಡಾ. ರಾಜ್ ಹಾಡಿದ್ದರು. ಎಲ್ಲ ಚೆನ್ನಗಿದ್ದರೂ ನಾನು ಗುನುಗುತ್ತಿದ್ದುದು ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು ಎಂಬ ಪಿ.ಬಿ.ಎಸ್ ಹಾಡೆ. ನನ್ನ ತಾಯಿ ಅದನ್ನು ಗಮನಿಸಿದಳೆಂದು ಕಾಣುತ್ತದೆ. ಅದಾದ ಕೆಲ ದಿನಗಳಾ ನಂತರ ಆಕಾಶವಾಣಿಯಲ್ಲಿ ಆ ಹಾಡು ಮತ್ತೆ ಬಂದಾಗ ಕರೆದು ಕೇಳಿಸಿ ಅದು ಪಿ.ಬಿ.ಎಸ್ ಅವರ ಧ್ವನಿ ಎಂದು ಪರಿಚಯಿಸಿದಳು. ನಾನು ಒಪ್ಪದೆ ಅದು ರಾಜ್ಕುಮಾರ್ ಎಂದೇ ವಾದಿಸಿದೆ. ಆಗ ಎಸ್.ಪಿ. ಬಾಲು ಹಾಗು ಜೇಸುದಾಸರ ಹಾಡುಗಳನ್ನು ಕೇಳಿಸಿ ಹಿನ್ನೆಲೆ ಗಾಯನ ಎಂದರೆ ಏನು, ಆ ಎಲ್ಲ ಧ್ವನಿ ಗಳಲ್ಲಿ ಇರುವ ವ್ಯತ್ಯಾಸ, ರಾಜ್ ಹಾಗೂ ಪಿ.ಬಿ.ಎಸ್ ಹಾಡುವಾಗ ಪದಗಳನ್ನು ಬಳಸುವ ಪರಿ ಹಾಗು ಭಾವಗಳನ್ನು ತುಂಬುವುದರಲ್ಲಿನ ಅಂತರಗಳನ್ನು ತಿಳಿಸಿದಳು. ಅಲ್ಲಿ ನನ್ನ ಭಾವತಂತಿ ಮೀಟಬಲ್ಲ ಧ್ವನಿಯನ್ನು ಆಯ್ಕೆ ಮಾಡಿಕೊಂಡೆ. ಅದು ಪಿ.ಬಿ.ಎಸ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆ. ನನ್ನ ತಾಯಿ ನನಗೆ ಕೊಟ್ಟ ಪ್ರೇಮದ ಕಾಣಿಕೆ ಪಿ.ಬಿ.ಎಸ್. ನನ್ನ ತಾಯಿ ಕೂಡ ಅವರ ಅಭಿಮಾನಿಯೆಂದು ಆನಂತರದಲ್ಲಿ ತಿಳಿಯಿತು.
ಅಲ್ಲಿಂದ ಮುಂದೆ ಪಿ.ಬಿ.ಎಸ್ ಅವರ ಹಾಡುಗಳನ್ನು ತಲ್ಲೀನನಾಗಿ ಕೇಳುವುದು, ಅವಕ್ಕಾಗಿ ಹುಡುಕುವುದು ನನಗೆ ಹವ್ಯಾಸವಾಯಿತು. ಅದು ಒಂದು ಗುಂಗಿನ ರೂಪದಲ್ಲಿ ಇಂದಿಗೂ ನನ್ನ ಸಂಗಾತಿ.
ನಾನು ಪಿ.ಬಿ.ಎಸ್ ಅವರ ಅಭಿಮಾನಿಯಾಗಿ ರೂಪುಗೊಳ್ಳುವ ಸಮಯಕ್ಕೆ (೧೯೭೭-೭೮) ಅವರು ಹಾಡುವುದು ಕಡಿಮೆಯಾಗುತ್ತಿತ್ತು. ಡಾ. ರಾಜ್ ತಾವೇ ಹಾಡಲು ಪ್ರಾರಂಭಿಸಿದ್ದರು. ಆದರೂ ಅವರ ಹಳೆಯ ಹಾಡುಗಳು ರೇಡಿಯೋ ದಲ್ಲಿ ಪ್ರಸಾರವಾಗುತ್ತಿದ್ದವು. ಓಮ್ಮೆ ತ್ರಿಮೂರ್ತಿ ಚಿತ್ರಕ್ಕೆ ಹೋಗಿದ್ದಾಗ ಅದರಲ್ಲಿ ಪಿ.ಬಿ.ಎಸ್ ಅವರ ಯಾವ ಹಾಡೂ ಇಲ್ಲದ್ದು ನೋಡಿ ಕಸಿವಿಸಿಯಾಗಿ ನಮ್ಮಮ್ಮನನ್ನು ಕೇಳಿದೆ. ಪಿ.ಬಿ.ಎಸ್ ಅವರ ಬೇಡಿಕೆ ರಾಜ್ ಅವರ ಹಾಡುಗಳಿಲ್ಲದೆ ಕುಸಿದಿದೆಯೆಂದೂ, ಅವರ ಕಂಠದಲ್ಲಿ ಮುಂಚಿನ ಬಿಗಿ ಇಲ್ಲವೆಂಬ ವದಂತಿ ಇದೆಯೆಂದೂ ಹೇಳಿದಳು. ಆಗ ನನಗಾದ ಖೇದ ಅಷ್ಟಿಷ್ಟಲ್ಲ. ಮುಂದೆ ಬೆಟ್ಟದ ಹೂವು, ಮರೆಯದ ಹಾಡು, ಪಡುವಾರಹಳ್ಳಿ ಪಾಂಡವರು, ಕೆರಳಿದಸಿಂಹ, ಹೇಮಾವತಿ, ಇತ್ಯಾದಿ ಚಿತ್ರಗಳಲ್ಲಿ ಅದ್ಭುತವಾಗಿಯೇ ಹಾಡಿದ್ದರು. ಇನ್ನೂ ತುಂಬು ಕಂಠದಲ್ಲಿ ಹಾಡುವಾಗ ಧ್ವನಿ ಹೇಗೆ ಬಿಗಿಯಿಲ್ಲದಿರಲು ಸಾಧ್ಯ ಎಂಬ ಪ್ರಶ್ನೆ ನನ್ನಮನದಲ್ಲಿ ಹಲವು ಬಾರಿ ಎದ್ದದ್ದುಂಟು. ವದಂತಿ, ಪುಕಾರು, ದೋಷಾರೋಪಣೆಗಳು ಲೀಲಾಜಾಲವಾಗಿ ಹರಿಯುವ ಗಾಂಧಿನಗರದಲ್ಲಿ ಸಜ್ಜನ ಶ್ರೀನಿವಾಸ ಕೊಚ್ಚಿಹೋದದ್ದರಲ್ಲಿ ಆಶ್ಚರ್ಯವಿಲ್ಲವೆಂದು ಈಗ ಅನಿಸುವುದು.

೧೯೫೦ ರ ಮಧ್ಯದಲ್ಲಿ ಹಾಡಲು ಪ್ರಾರಂಭಿಸಿದ ಪಿ.ಬಿ.ಎಸ್ ಅವರ ಮಧುರ ಕಂಠಕ್ಕೆ ಅನುಗುಣವಾಗಿ ರಾಗಸಂಯೋಜಿಸುವ ಗೀತನಿರ್ದೇಶಕರು ಸಿಕ್ಕದ್ದು ನಮ್ಮೆಲ್ಲರ ಅದೃಷ್ಟ. ಸಾಹಿತ್ಯದಲ್ಲೂ ಸಂಗೀತದಲ್ಲೂ ಶ್ರೀಮಂತವಾದ ಹಾಡುಗಳು ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಮೂಡಿಬಂದವು. ಅದರಲ್ಲಿ ಕನ್ನಡ ಮತ್ತು ತಮಿಳಿನಲ್ಲಿ ಹೆಚ್ಚು.ಅವರ ರಾಗಗಳಿಗೆ ಧ್ವನಿಯಾಗಿ,ಕವಿತೆಗಳಿಗೆ ಭಾವವಾಗಿ, ಜೀವತುಂಬಿ ಮಾಧುರ್ಯ ಎನ್ನುವ ಪದಕ್ಕೆ ಸಾತ್ವಿಕ ಅರ್ಥವನ್ನು ನೀಡಿದ ಕಂಠ ಪಿ.ಬಿ.ಎಸ್ ಅವರದ್ದು. ಭಕ್ತಿ ಗೀತೆ,ಶ್ಲೋಕಮಾಲೆ,ದೇಶಭಕ್ತಿ ಗೀತೆ, ಕನ್ನಡವ ಕುರಿತದ್ದು,ತಾಯಿಯ,ಅಮ್ಮನ ಕುರಿತಾದ ಹಾಡುಗಳು ಉಳಿದೆಲ್ಲ ನವರಸಗಳ ಅಭಿವ್ಯಕ್ತಿ ಇವರ ಕಂಠದಿಂದ ಹೊರಹೊಮ್ಮಿ ರಸಿಕರನ್ನು ಮಂತ್ರಮುಗ್ಧಗೊಳಿಸಿದ್ದು ಇತಿಹಾಸ. ಬರೀ ಸಂಗೀತಕ್ಕಷ್ಟೆ ಸೀಮಿತಗೊಳಿಸದೆ, ಹಾಡುಗಳಿಗೆ ಧಾರ್ಮಿಕ, ಸಾತ್ವಿಕ,ಸಾಂಸ್ಕೃತಿಕ, ತಾತ್ವಿಕ ಮೆರುಗನ್ನು ನೀಡಿ ಕಾಲಾತೀತವಾದ ಸುಂದರ ಹಾಡುಗಳ ಸರದಾರನಾಗಿದ್ದು ನಮ್ಮೆಲ್ಲರ ಭಾಗ್ಯವೇ ಸರಿ.
ಎಲ್ಲ ನಾಯಕ ನಟರಿಗೆ ಹಾಡಿದರೂ, ರಾಜ್ ಹಾಗೂ ಜೆಮಿನಿ ಗಣೆಶನ್ ಅವರ ಶಾರೀರವೆಂದೇ ಗುರುತಿಸಿಕೊಂಡರು ಪಿ.ಬಿ.ಎಸ್. ಈ ಮೇರು ನಟರ ಶಾರೀರವಾದದ್ದು ಒಂದು ವರವೂ ಶಾಪವೂ ಆದದ್ದು ವಿಪರ್ಯಾಸ.ತಮಿಳಿನ ಕಥೆ ನನಗೆ ತಿಳಿಯದು ಆದರೆ ಕನ್ನಡಿಗರ ಮಟ್ಟಿಗೆ ಹೇಳುವುದಾದರೆ ಇವರ ಹಾಡುಗಳನ್ನು ರಾಜ್ ಅವರೇ ಹಾಡಿರುವುದೆಂದು ನಂಬಿದವರು ಬಹಳ. ನನ್ನ ಹೆಂಡತಿ ಕೂಡ ಈ ಗುಂಪಿನವಳೆ. ಡಾ. ರಾಜ್ ರಂತೆ ಶಕ್ತಿಯುತವಲ್ಲ,ಎಸ್.ಪಿ.ಬಾಲು ವಿನಂತೆ ಬಹುರೂಪಿ ಕಂಠವಲ್ಲ,ಜೇಸುದಾಸರಂತೆ ಸಂಗೀತದ ಆಳಕ್ಕಿಳಿದು ಪಳಗಿದ ಕಂಠವಲ್ಲ. ಆದರೂ ಪದಗಳ ಅರ್ಥವ್ಯಾಪ್ತಿ ಅರಿತು,ಸಾಂದರ್ಭಿಕ ಹಾಗೂ ಸಾಹಿತ್ಯಿಕ ಭಾವನೆಗಳ ಆಳಕ್ಕಿಳಿದು ಮೈಗೂಡಿಸಿಕೊಂಡು ಅವುಗಳನ್ನು ತಮ್ಮ ಸುಂದರ ಕಂಠದಿಂದ ಹೊರಹೊಮ್ಮಿಸಿದ್ದು ಅಪ್ರತಿಮ,ಅದ್ವಿತೀಯ. ಇದೇ ಕಾರಣಕ್ಕೆ,ಇಂದಿಗೂ ಪಿ.ಬಿ.ಎಸ್ ಅವರನ್ನು ಅನುಕರಿಸಬಲ್ಲ ಹಾಡುಗಾರರು ವಿರಳ ಅಥವ ಇಲ್ಲವೆ ಇಲ್ಲ. ಅವರಿಗೆ ಅವರೇ ಸಾಟಿ. ತಮಿಳಿನ ಒಂದು ಪ್ರಸಾರವಾಹಿನಿಯ ಸನ್ಮಾನ ಸಮಾರಂಭದಲ್ಲಿ ಈ ಮಾತನ್ನು ಹೇಳಲಾಯಿತು. ಎಲ್ಲ ಮೇರು ಗಾಯಕರನ್ನು ಅನುಕರಿಸಬಹುದು ಆದರೆ ಪಿ.ಬಿ.ಎಸ್ ಅವರ ಅನುಕರಣೆ ಅಸಾಧ್ಯ ಎಂದು.
ನಾನು ಕೂಡಾ ಅವರ ಹಾಡುಗಳನ್ನು ಹಾಡಲು ಹೋಗಿ ಸೋತಿದ್ದೇ ಹೆಚ್ಚು. ಸ್ಪರ್ಧೆಗಳಲ್ಲಿ ಅಂತಾಕ್ಷರಿಗಳಲ್ಲಿ ಅವರ ಹಾಡುಗಳನ್ನೇ ಹಾಡಲು ಹೋಗಿ, ತಪ್ಪಾಗಿ ಸೋತಿದ್ದುಂಟು.ಆಗೆಲ್ಲ ಬಹುಮಾನ ಬರದ ಬಗ್ಗೆ ಬೇಸರ ಅಗುತ್ತಿರಲಿಲ್ಲ.ಪಿ.ಬಿ.ಎಸ್ ಅವರ ಇನ್ನಷ್ಟು ಹಾಡುಗಳನ್ನು ಸಭಿಕರೆದುರಿಗೆ ಹಾಡಲಾಗಲಿಲ್ಲವೆಂದೇ ನನಗೆ ಖೇದವೆನಿಸುತಿತ್ತು.
ಧ್ವನಿ ಮುದ್ರಣದ ತಾಂತ್ರಿಕ ಮಟ್ಟ ಉತ್ತಮವಾಗಿರದಿದ್ದ ಕಾಲದಲ್ಲಿ ಹಾಡಿದ ಅವರ ಹಲವು ಗೀತೆಗಳು ಇಂದು ನಷ್ಟವಾಗಿವೆ ಇಲ್ಲವೆ ಚೆನ್ನಾಗಿ ಕೇಳಿಸವು. ಇದೂ ಕೂಡ ಅವರ ಪ್ರತಿಭೆಗೆ ಆದ ಅನ್ಯಾಯ. ಅದರಲ್ಲಿ ಚೆನ್ನಾಗಿ ಉಳಿದಿರುವಂಥ ಹಾಡುಗಳನ್ನು ಕೇಳುವುದು ಒಂದು ಅವಿಸ್ಮರಣೀಯ ಅನುಭವ. ಎರಡು ಕನಸು,ಗಂಧದ ಗುಡಿ,ಕಸ್ತೂರಿ ನಿವಾಸ,ದಾರಿ ತಪ್ಪಿದ ಮಗ, ರಾಜಾ ನನ್ನ ರಾಜ, ಕುಲಗೌರವ,ಭಕ್ತ ಕುಂಬಾರ, ಹೇಮಾವತಿ, ಶರಪಂಜರ, ಬೆಳ್ಳಿಮೋಡ,ದೇವರ ದುಡ್ಡು,ದೇವರು ಕೊಟ್ಟ ತಂಗಿ, ಭಾಗ್ಯ ಜ್ಯೋತಿ,ಕಳ್ಳ ಕುಳ್ಳ, ಭೂತಯ್ಯನ ಮಗ ಅಯ್ಯು,ಭಲೆ ಭಾಸ್ಕರ್,ಮನ ಮೆಚ್ಚಿದ ಮಡದಿ, ಹೃದಯ ಸಂಗಮ ಹೀಗೆ ಹಲವು ಚಿತ್ರಗಳನ್ನು ಹೆಸರಿಸಬಹುದು.ಪಿ.ಬಿ.ಎಸ್ ಅವರಿಗೆ ಅವಕಾಶಗಳ ಬಾಗಿಲನ್ನು ತೆರೆದ ಭಕ್ತ ಕನಕದಾಸ ದ ಹಾಡುಗಳು ಮರೆತವರಿಲ್ಲ ಆದರೆ ಧ್ವನಿ ಮುದ್ರಣದ ಗುಣಮಟ್ಟ ಕುಂದಿರುವುದು ವಿಷಾದಕರ.೮೦ ರ ದಶಕದಲ್ಲಿಯೂ ಹಲವು ಬಾರಿ ಅವಕಾಶ ಸಿಕ್ಕರೆ ಈಗಲೂ ಹಾಡಬಲ್ಲೆ ಎಂದು ಹೇಳಿದ್ದೂ ಕೂಡ ಯಾರ ಕಿವಿಗೂ ಬೀಳಲಿಲ್ಲ. ಧ್ವನಿ ಮುದ್ರಣದ ಗುಣಮಟ್ಟ,ತಾಂತ್ರಿಕ ಸೌಲಭ್ಯ ಗಟ್ಟಿಯಾಗುತ್ತಿದ್ದ ಸಮಯದಲ್ಲಿ ಅವರ ಅವಕಾಶಗಳು ಬತ್ತಿದ್ದು ಒಂದು ಖೇದಕರ ಸಂಗತಿ. ಒಬ್ಬ ಅಪ್ರತಿಮ ಗಾಯಕನ ಪ್ರತಿಭೆ ದುಡಿಸಿಕೊಳ್ಳುವಲ್ಲಿ ಚಿತ್ರರಂಗ, ಅದರಲ್ಲೂ ಕನ್ನಡ ಚಿತ್ರರಂಗ ಸೋತಿತು.
ಎಲ್ಲ ಬಗೆಯ ಹಾಡುಗಳನ್ನು ಸೇರಿಸಿದರೆ ಪಿ.ಬಿ.ಎಸ್ ಒಟ್ಟು ೩೦೦೦ ಹಾಡುಗಳನ್ನು ಹಾಡಿರಬಹುದೆಂದು ಅಂದಾಜು. ಉಳಿದ ಗಾಯಕರಿಗೆ ಹೋಲಿಸಿದರೆ ಇದು ಕಡಿಮೆಯೆ. ಆದರೆ ‘ಮಾಸ್‘ ಅಲ್ಲದಿದ್ದರೂ ‘ಕ್ಲಾಸ್‘ ಹಾಡುಗಳ ಒಡೆಯ ನಮ್ಮ ಪಿ.ಬಿ.ಎಸ್ . ಅವರ ಬಹುತೇಕ ಹಾಡುಗಳು ಇಂದಿಗೂ ಜನಪ್ರಿಯ ಹಾಗೂ ಬಹುಶ್ರುತ. ಇವರ ಹಲವಾರು ಚಂದಾದ ಹಾಡುಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಒಂದೇ ರೂಪ ಒಂದೇ ಗುಣ ದ ‘ಯಾರ ಎದೆಯ ತಂತಿ ಮೀಟಿ ಯಾರ ಸೋಲಿಸಿ‘, ಅಳಿಯ ಗಿಳೆಯ ದ ಮಣ್ಣಿಂದ ಕಾಯ ಮಣ್ನಿಂದ, ಕನ್ನಿಕ ಪರಮೆಶ್ವರಿ ಯ ‘ನಗೆ ಮೊಗದೆ ನಲಿವ ನಲ್ಲೆ ನಿನಗೆಣೆಯ ಕಾಣೆನಲ್ಲೆ‘ (ಎಸ್.ಕೆ.ಕರೀಂಖಾನ್ ರಚನೆ), ಇನ್ನೂ ಹತ್ತು ಹಲವು ಹಾಡುಗಳು ಇಂದು ಕೇಳುತ್ತಿಲ್ಲ.ಅವುಗಳನ್ನು ಶೋಧಿಸಿ,ಸಂಸ್ಕರಿಸಿ ಸಹೃದಯರಿಗೆ,ಮುಂದಿನ ಪೀಳಿಗೆಗೆ ಪುನರ್ದತ್ತ ಗೊಳಿಸುವ ಹೊಣೆ ನಮ್ಮದಿದೆ.ಈ ನಿಟ್ಟಿನಲ್ಲಿ ಕೈಜೋಡಿಸಲು ನಾನು ಸದಾ ಸಿದ್ಧ.
ವೃತ್ತ ಪತ್ರಿಕೆಗಳಲ್ಲಿ, ಆಕಾಶವಾಣಿಯಲ್ಲಿ ಅವರ ಸಂದರ್ಶನಗಳು,ಲೇಖನಗಳು ಬಂದಾಗ ತಪ್ಪದೆ ಓದುವುದು ಅವುಗಳನ್ನು ಶೇಖರಿಸುವುದು ನನ್ನ ಕೆಲಸವಾಗಿತ್ತು. ಆದರೆ ಪ್ರತಿಬಾರಿಯು ಅದೇ ಚರ್ವಿತ ಚರ್ವಣ. ಹೊಸದೇನೂ ಇರುತ್ತಿರಲಿಲ್ಲ. ೧೯೩೧ ರಲ್ಲಿ ಜನಿಸಿ, ಐವತ್ತರ ದಶಕದಲ್ಲಿ ಹಾಡಲು ಪ್ರಾರಂಭಿಸಿದ ಪಿ.ಬಿ.ಎಸ್, ೧೯೭೫-೭೬ ರ ನಂತರದಲ್ಲಿ ಅವಕಾಶಗಳಿಂದ ವಂಚಿತರಾದಾಗ ಅವರಿಗೆ ೪೫-೪೬ ವಯಸ್ಸಿರಬಹುದು. ಇನ್ನೂ ಹಾಡುವ ಕಸುವು, ಅಭಿಲಾಷೆ ಇದ್ದಾಗ್ಯೂ ಅವಕಾಶ ಇಲ್ಲದಾದಾಗ ಅವರು ಪರಿಸ್ಥಿತಿಯನ್ನು ನಿಭಾಯಿಸಿದ ಬಗೆ, ಅವರನ್ನು ಕಾಡಿದ ಸಮಸ್ಯೆಗಳು, ಅರ್ಥಿಕವಾಗಿ, ಬೌದ್ಧಿಕವಾಗಿ, ಸಂಸಾರವನ್ನು ನಡೆಸಿದ ರೀತಿ,ಅವರಿಗೆ ಸಿಕ್ಕ ಸಹಕಾರ, ಅಸಹಕಾರ,ಪುರಸ್ಕಾರ,ತಿರಸ್ಕಾರಗಳು, ಅವುಗಳನ್ನು ಸ್ವೀಕರಿಸಿದ ಬಗೆ ಇವುಗಳ ಬಗೆಗೆ ಲೇಖನಗಳು ಬರಬೇಕಾಗಿದೆ.ಪಿ.ಬಿ.ಎಸ್ ರಂಥ ಸಾತ್ವಿಕ ಜೀವ ಬದುಕಿನ ಜಂಝಡಗಳನ್ನು ಎದುರಿಸಿದ ರೀತಿ ಮುಂಬರುವ ಕಲಾವಿದರಿಗೆ,ಕಲಾರಸಿಕರಿಗೆ ದಾರಿದೀವಿಗೆಯಾಗುವುದರಲ್ಲಿ ಸಂಶಯವಿಲ್ಲ. ಬರೀ ಚರ್ವಿತ ಚರ್ವಣ ವಿಷಯಗಳನ್ನೇ ಬರೆದು ಓದಿದರೆ ಯಾವ ನ್ಯಾಯ ಒದಗಿಸಿದಂತಾಯಿತು?
ನೂರಾರು ಗೀತೆಗಳನ್ನು ಅದ್ಭ್ಹುತವಾಗಿ ಹಾಡಿದ್ದರೂ, ಜನಪ್ರಿಯತೆಯ ಉತ್ತುಂಗದಲ್ಲಿದ್ದರೂ ಅವರಿಗೆ ಉನ್ನತ ಪ್ರಶಸ್ತಿಗಳು ಬರಲೇ ಇಲ್ಲ. ಸುಮಾರು ಒಂದುವರೆ ದಶಕಗಳ ಕಾಲ ಕನ್ನಡದ ಹಿನ್ನೆಲೆಗಾಯನವನ್ನು ಆಳಿದ ಪಿ.ಬಿ.ಎಸ್ ಗೆ ಕರ್ನಾಟಕ ಸರ್ಕಾರದಿಂದ ಸನ್ಮಾನ ದೊರೆಯಲಿಲ್ಲ. ಥಳುಕು ಬಳುಕಿಗೆ,ವಶೀಲಿ ವರ್ಚಸ್ಸಿಗೆ,ಅಬ್ಬರ ಆರ್ಭಟಗಳಿಗೆ ಮಣೆಹಾಕುವ ಸಂಸ್ಕೃತಿಯ ನಡುವೆ ಪಿ.ಬಿ.ಎಸ್ ಕಳೆದುಹೋದರು.
ನಾನು ವೈದ್ಯಕೀಯ ತರಬೇತಿಯ ಕಡೆ ವರ್ಷದಲ್ಲಿದ್ದೆ. ಒಂದು ಸಂಜೆ ಪಿ.ಬಿ.ಎಸ್ ಅವರ ಸಂದರ್ಶನ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿತ್ತು. ಸಂದರ್ಶನಕಾರ ಕಡೆಯಲ್ಲಿ ಕೇಳಿದ: ನಿಮ್ಮ ಮಕ್ಕಳೂ ನಿಮ್ಮಂತೆ ಹಾಡಬಲ್ಲರೇ? ಪಿ.ಬಿ.ಎಸ್ ಮಾರ್ಮಿಕವಾಗಿ ಹೇಳಿದರು.“ ಹೌದು, ನನ್ನ ಮಕ್ಕಳು ನನ್ನಂತೆ ಹಾಡಬಲ್ಲರು; ಅದರೆ ನಮ್ಮ ವೃತ್ತಿಯಲ್ಲಿ ನಿಶ್ಚಿತತೆ ಇಲ್ಲ ಹಾಗಾಗಿ ಅವರೆಲ್ಲ ಬೇರೆಯೇ ವೃತ್ತಿಯಲ್ಲಿ ತೊಡಗಿದ್ದಾರೆ. ಪ್ರತಿಭೆಯೊಂದೇ ಮಾನದಂಡವಾಗುವ ಕಾಲ ಇದಲ್ಲ“ ಎಂದು. ಪ್ರತಿಭೆಯಿದ್ದೂ ಪುರಸ್ಕಾರಕ್ಕೆ ಬಾಧ್ಯರಾಗದ ನೋವು ಅದರಲ್ಲಿ ಅಡಗಿತ್ತೆಂದು ನನಗಾಗ ಅನಿಸಿತು.
ಸಾಹಿತ್ಯ -ಸಂಗೀತ ಬದುಕಿನ ಬಂಡಿಯ ಗಾಲಿಗಳು,ಬಾಳ ನಾವೆಯ ಹುಟ್ಟುಗಳು,ಜೀವನ ಪಥದಿಕ್ಕೆಲಗಳಲ್ಲಿರುವ ದಾರಿದೀಪಗಳಾದರೆ ಅದರಲ್ಲಿ ಸಂಗೀತದ ಸ್ಥಾನ ನನ್ನ ಪಾಲಿಗೆ ಪಿ.ಬಿ.ಎಸ್ ಗೆ ಮೀಸಲು. ನನ್ನ ವ್ಯಕ್ತಿತ್ವದ ರೂಪಣೆಯಲ್ಲಿ ಅವರ ಪಾತ್ರ ಹಿರಿದು. ನಾನು ಮುಖತಃ ಅವರನ್ನು ಸಂಧಿಸಲು ಸಾಧ್ಯವಾಗಲಿಲ್ಲ ಹೀಗಾಗಿ ನನ್ನದು ಅವರೊಂದಿಗೆ ಭಾವಯಾನವಾಗಿಯೆ ಉಳಿಯಿತು. ಅವರಿಗಿರುವ ’ಕ್ಲಾಸ್’ ಅಭಿಮಾನಿ ಬಳಗದಲ್ಲಿ ನಾನಿದ್ದೇನೆ ಎಂಬುದು ನನಗೆ ಬಹಳ ಸಂತೃಪ್ತಿ ತರುವ ವಿಚಾರ.
ಈ ನುಡಿನಮನದ ಕುರುಹಾಗಿ ಅವರಿಗಾಗಿ ನನ್ನ ಒಂದು ಕವಿತೆಯನ್ನು ಇಲ್ಲಿ ದಾಖಲಿಸುತ್ತಿದ್ದೇನೆ.

ಪಿ.ಬಿ.ಶ್ರೀನಿವಾಸ್
ಆಂಧ್ರದೇಶದ ಕಾಕಿನಾಡದಲಿ ಜನಿಸಿದನು
ಪ್ರತಿವಾದಿ ಭಯಂಕರ ಶ್ರೀನಿವಾಸ
ಭಯಂಕರ ಇವನಲ್ಲ ಪ್ರೇಮ ಮೂರುತಿ ಇವನು
ಇವನಹುದು ಕಲ್ಲು ಕರಗಿಸುವಂಥ ಧ್ವನಿಯ ಕೋಶ

ಕೆಂಪು ನಾಮದ ಜೊತೆಗೆ ಉಣ್ಣೆ ಟೋಪಿಯ ಇಟ್ಟ
ಮುಖದ ತುಂಬೆಲ್ಲ ಕಿರು ಮಂದಹಾಸ
ರಾಗ ತಾಳವನರಿತು ಭಾವವನು ನೀ ತುಂಬಿ
ಹಾಡಿದೊಲು ಅಲ್ಲಿಲ್ಲ ರಸಾಭಾಸ

ಭಕ್ತಿ ಭಾವಗಳಿರಲಿ ಸ್ಫೂರ್ತಿ ಗೀತೆಗಳಿರಲಿ
ಇರಬಹುದು ಪ್ರೇಮಿಗಳ ವಿರಹ ಗೀತೆ
ನಿನ್ನ ಕೊರಲಳಿನ ಕೊಳಲು ಮಾಡಿರಲು ಇಂಪುದನಿ
ಮೈ ಮರೆತರೆಲ್ಲ ಗೋಪಿಕೆಯರಂತೆ

ಬರಿಯ ಹಾಡುಗನು ನೀನಲ್ಲ ಕವಿತೆಕಾರನು ಹೌದು
ನಿನಗಿತ್ತು ಎಂಟು ಭಾಷೆಗಳ ಅರಿವು
ತೆಲುಗು ಕನ್ನಡ ತಮಿಳು ಮಲೆಯಾಳ ಸಂಸ್ಕೃತ
ಹಿಂದಿ ಉರ್ದೂ ಭಾಷೆಗಳ ಒಲವು

ತೆರೆಯ ಮೇಲಿನ ಎಲ್ಲ ನಾಯಕರ ಶರೀರಕೆ
ಶಾರೀರ ನೀನಾಗಿ ಹಾಡುಗಳ ಹಾಡಿ
ಸಾಹಿತ್ಯ ಕ್ಷೀರದಲಿ ಸಂಗೀತ ಮಧು ಬೆರೆಸಿ
ನೀನು ಹಾಡಿದೆ ಜಗಕೆ ಮೋಡಿಯನು ಮಾಡಿ

ಬಾಗಿಲನು ತೆರೆದು ಸೇವೆಯನು ಕೊಡುಎಂದು
ನೀನು ಹಾಡಲು ಕೃಷ್ಣ ತಾನೆ ತಿರುಗಿದನು
ದೀನ ನಾ ಬಂದಿರುವೆನೆಂದು ನೀನರುಹಿದೊಡೆ
ಗುರು ತಾನು ಕರಗುತಲಿ ನಿನಗೆ ಕಲಿಸಿದನು

ಇಳಿದು ಬಾ ತಾಯಿ ಎಂದೊಡನೆ ಧುಮು ಧುಮುಕಿ
ಹರಿದು ಬಂದಳು ಗಂಗೆ ಮಾತೆ
ವೈದೇಹಿ ಏನಾದಳೆಂದು ನೀ ಪರಿತಪಿಸೆ
ಕನಲುತಲಿ ಬಳಲಿದಳು ದೂರದಲಿ ಸೀತೆ

ಬಾ ತಾಯಿ ಭಾರತಿಯೆ ಭಾವ ಭಾಗೀರತಿಯೆ
ಎಂಬ ಹಾಡಲಿ ನೀನು ಭಾವಗಳ ತುಂಬಿ
ಹಾಡಿರಲು ಕೇಳುಗರ ಎದೆಯಾಯ್ತು ಬಿರಿದ ಹೂ
ಮತ್ತೊಮ್ಮೆ ಹುಟ್ಟಿ ಬಾ ನೀ ಜೇನುದುಂಬಿ

ನಿನ್ನ ಗಾನವ ನಾನು ಕೇಳುತ್ತ ಬೆಳೆದವನು
ನಿನ್ನ ದನಿ ಕೇಳದಿರೆ ನನಗೆ ನಲಿವಿಲ್ಲ
ಬಾರದಿಹ ಲೋಕಕ್ಕೆ ಹೋಗಿರುವೆ ನೀ ನಿಂದು
ನಿನ್ನ ಭೇಟಿಯು ನನಗೆ ಸಿಗಲೆ ಇಲ್ಲ.

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ
ಎಂದೆಂಬ ಶರಣರ ವಾಣಿಯಂತೆ
ನೀನು ಮರೆಯಾದರೂ ನಿನ್ನ ಗಾನದ ಹೊನಲು
ನಮ್ಮೊಂದಿಗಿಹುದು ಸುರ ಗಂಗೆಯಂತೆ.

ಡಾ. ಸುದರ್ಶನ ಗುರುರಾಜರಾವ್.

ಐ-ವರಾತ

ಅಮೆರಿಕದ ಆಪಲ್ ಎಂಬ ಚರ ದೂರವಾಣಿ ಕಾರ್ಯಸಾಧನ ತಯಾರಿಕಾ ಸಂಸ್ಥೆ ಏನೇ ಮಾಡಿದರೂ ಅದು ಜಾಗತಿಕ ವಿದ್ಯಮಾನದ ರೂಪ ಪಡೆಯುವುದು ಇತ್ತೀಚಿನ ಬೆಳವಣಿಗೆ. ತಮ್ಮ ಹೊಸ ಸಾಧನೆ ಬಿಡುಗಡೆಗೆ ಕೆಲವು ತಿಂಗಳಿಗೆ ಮುಂಚೆ ಸ್ವಲ್ಪ ಸ್ವಲ್ಪವಾಗಿ ಅದರ ಮಾಹಿತಿ ಸೋರಿಕೆಯನ್ನು ಜಾಣತನದಿಂದ ನಿಭಾಯಿಸಿ ಜನಮಾನಸದಲ್ಲಿ ಒಂದು ಬಗೆಯ ಕುತೂಹಲ ಮೂಡಿಸಿ ಕಾವು ಏರಿಸುವುದು ಇವರ ಕಾರ್ಯ ವೈಖರಿ. ನಿಧಾನವಾಗಿ ಕಾದ ಹಾಲು ಕೊನೆಗೊಮ್ಮೆ ಉಕ್ಕುವಂತೆ ಐ-ಫೋನು ಅಥವ ಐ-ಪ್ಯಾಡು ಬಿಡುಗಡೆಗೊಂಡು ಜನರಲ್ಲಿ ಹುಚ್ಚೆಬ್ಬಿಸಿ ಹುಯಿಲು ನಡೆಸಿ ತಣ್ಣಗಾಗುವುದು ಒಂದು ಸೋಜಿಗವೆ ಸರಿ.
ಇತ್ತೀಚೆಗೆ ಈ ಕಂಪನಿ ಬಿಡುಗಡೆ ಮಾಡಿದ ಐ ಫೋನ್ ೫ ನೆ ಅವೃತ್ತಿಯ ಕಾರ್ಯಸಾಧನ ತನ್ನ ತುಂಟತನದಿಂದ ಬಹಳ ಸುದ್ದಿಮಾಡಿತ್ತು. ಈಗ್ಗೆ ಕೆಲವು ವರ್ಷಗಳಿಂದ ನಂಬಲರ್ಹ ಸೇವೆ ಕೊಡುತ್ತ ಎಲ್ಲರ ಪ್ರೀತಿಗೆ ಪಾತ್ರನಾಗಿ ಎಲ್ಲ ಫೋನುಗಳಲ್ಲೂ ಎಲ್ಲ ಗಣಕಗಳಲ್ಲೂ ಸರ್ವಾನ್ತರ್ಯಾಮಿಯ ತೆರದಲ್ಲಿ ವಿರಾಜಮಾನವಾಗಿದ್ದ ಗೂಗಲ್ ಕಂಪನಿಯ ನಕ್ಷೆ ಹಾಗೂ ಮಾರ್ಗದರ್ಶಿ ಸೇವೆಯನ್ನು ಕಿತ್ತೆಸೆದು ತನ್ನದೇ ಪ್ರತಿಷ್ಠೆಯ ಐ- ಮ್ಯಾಪ್ ಅನ್ನು ಅನಾವರಣಗೊಲಳಿಸಲು ಈ ಆಪಲ್ ಕಂಪನಿ ದುಸ್ಸಾಹಸ ಮಾಡಹೊರಟಿದ್ದು ಬಹಳ ಜನಕ್ಕೆ ತಿಳಿದಿರಬಹುದು. ಇದುವರೆಗೂ ಈ ಸಂಸ್ಥೆಯ ಸಾಧನಗಳು ತಮ್ಮ ಮನಸೆಳೆವ ಕಾರ್ಯಕ್ಷಮತೆಯಿಂದ ಗ್ರಾಹಕರ ಮನಸ್ಸನ್ನು ಗೆದ್ದಿದ್ದೆನೋ ನಿಜ. ಅದೇ ರೀತಿ ಈ ಸಾರಿಯೂ ಫೋನೂ ಅದರ ಮ್ಯಾಪೂ್ ಎಲ್ಲರ ಮೂಗಿನ ಮೇಲೂ ಬೆರಳಿಡಿಸಬಹುದೆಂದು ಎಲ್ಲರೂ ಎಣಿಸಿದ್ದರು. ಆದರೆ ವಿಧಿ ಲಿಖಿತ ಬೇರೆಯೇ ಇತ್ತೆಂದು ಈ ಕಂಪನಿಗೆ ತಿಳಿದಿರಲಿಲ್ಲ. ಕಾಕತಾಳೀಯವೋ ಎಂಬಂತೆ ಈ ಫೋನಿನ ಆಪರೇಟಿಂಗ್ ಸಿಸ್ಟ್ಂ ಐಓ-೬ ಎಂಬುದೇ ಆಗಿತ್ತು. ಈ ಐ ಮ್ಯಾಪು ಉಪಯೊಗಕ್ಕೆಂದು ಬಿಡುಗಡೆಯಾದ ಮೇಲೆ ಬಹಳ ಮಂದಿ ತರಾತುರಿಯಿಂದ ಫೋನ್ ಖರೀದಿಸಿ, ನಕ್ಷೆಯ ಮಾರ್ಗದರ್ಶಿ ಸೂಚ್ನೆಯಂತೆ ನಡೆದು ದಾರಿ ತಪ್ಪಿಸಿಕೊಂಡದ್ದೆ ಕೊಂಡದ್ದು. ತಿಳಿಯದೆ ಆದ ತಂತ್ರಾಂಶದ ತಪ್ಪಿನಿಂದಾಗಿ ಹಲವಾರು ಜನ ಹಲವು ತೊಂದರೆ ಅನುಭವಿಸಬೇಕಾಯ್ತು. ಎಷ್ಟೇ ಆಗಲಿ ಆದಿಫಲ ಈ ಸೇಬು ಹಣ್ಣು ಆಡಮ್ ಮತ್ತು ಈವ್ ಕಾಲದಿಂದ ದಾರಿತಪ್ಪಿಸುವ ಕೆಲಸ ಮಾಡಿಲ್ಲವೇ!!??. ಆಧುನಿಕ ಕಾಲದಲ್ಲೂ ಪುರುಷ-ಸ್ತ್ರೀ ಯರ ದಾರಿತಪ್ಪಿಸಿ ಒಂದು ರೀತಿಯ ಸುನಾಮಿಯನ್ನೆ ಜನಮಾನಸದ ಸಾಗರದಲ್ಲಿ ಎಬ್ಬಿಸಿ ಕೋಲಾಹಲವನ್ನೂ,ತಲ್ಲಣವನ್ನೂ ಮತ್ತು ಹಾಹಾಕಾರವನ್ನೂ ಸೃಷ್ಟಿಸಿ ಮೊದಲ ಸಾರಿ ಆಪಲ್ ಕಂಪನಿ ದೇವಸೃಷ್ಟಿ ಅಲ್ಲ; ಯಕಃಶ್ಚಿತ್ ಮಾನವ ಸೃಷ್ಟಿಯೇ ಎಂಬುದನ್ನು ಸಾಬೀತುಗೊಳಿಸಿತು.
ನಮ್ಮ ಜೀವನಕ್ಕೂ ಈ ವಿದ್ಯಮಾನ ಅನ್ವಯಿಸಬುಹುದೆನೋ!!
ನಮ್ಮ ದೇಹವೇ ಫೋನ್ ಆಗಿ, ನಮ್ಮ ಜೀವನವೆ ನಕ್ಷೆಯಾಗಿರೆ, ನಾವು ಓಡಾಡುವ ಕಾರೇ ನಮ್ಮ ಜೀವನದ ಆಕಾಂಕ್ಷೆಗಳು.ಇವುಗಳನ್ನು ಅನುಭಾವಗೊಳಿಸುವ ಕೆಲಸವನ್ನು ಇಂದ್ರಿಯಗಳು ಮಾಡಿದರೆ ಅರಿಷಡ್ವರ್ಗಗಳು ಇವುಗಳೆಲ್ಲವನ್ನು ನಿರ್ದೇಶಿಸುತ್ತವೆ. ಜೀವನದಲ್ಲಿ ನಾವು ತೆಗೆದುಕೊಳ್ಳುವ ಅನೇಕ ನಿರ್ಧಾರಗಳು,ತಿರುವುಗಳು ಆ ಕ್ಷಣಕ್ಕೆ ಸರಿಯಾಗಿಯೇ ತೋರಬಹುದು. ಆದರೆ ಗುರಿ ಮುಟ್ಟಿದ ಮೇಲೇ ನಮ್ಮ ನಿರ್ಧಾರದ ನಿರ್ಣಯ ಆಗುವುದು.
ಹೀಗೆ, ಪಂಚೇಂದ್ರಿಯಗಳನ್ನು ಪ್ರತಿನಿಧಿಸುವ ಐ ಫೋನ್ ೫ ರ ದೇಹ ಅದನ್ನು ಆಡಿಸುವ, ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಐಒ-೬, ಕಾಲನ ಪರೀಕ್ಷೆಯಲ್ಲಿ ಗೆದ್ದ ಸಮಾಜದ ಮೌಲ್ಯಗಳನ್ನು ಪ್ರತಿನಿಧಿಸುವ ಗೂಗಲ್ ಮ್ಯಾಪು ಹಾಗೂ ಇಂದಿನ ಮೌಲ್ಯರಹಿತ ಬದುಕನ್ನು ಪ್ರತಿನಿಧಿಸುವ ಐ-ಮ್ಯಾಪುಗಳ ನಡುವಿನ ತಾಕಲಾಟದಲ್ಲಿ ಮನುಷ್ಯನ ಜೀವನ ನಡೆಯುವುದಾದರೂ ಹೇಗೆ ಎಂಬ ಪ್ರಶ್ನೆ ನನ್ನ ಮನದಲ್ಲಿ ಅಂಕುರಿಸುತ್ತ ಇತ್ತು.
ಒಂದು ದಿನ ಬೆಳಿಗ್ಗೆ ೫ ಘಂಟೆಗೆ ಎದ್ದು ರೈಲಿಗೆ ಕಾಯುತ್ತ ಕುಳಿತಿದ್ದಾಗ ನನ್ನ ಸ್ನೇಹಿತನೊಬ್ಬ ಹೀಗೆ ಐ ಫ಼ೋನ್ ೫ ಹಾಗೂ ಐ ಆಪರೇಟಿಂಗ್ ಸಿಸ್ಟಂ ಸೂತ್ರಾಧಾರಿತ ಐ ಮ್ಯಾಪಿನಿಂದ ದಾರಿತಪ್ಪಿ ಫ಼ೇಸ್ ಬುಕ್ ನಲ್ಲಿ ಗೋಳಾಡಿದ್ದ. ನಗು ಬಂತು ಹಾಗೇ ಸೂರ್ಯೋದಯದ ಜತೆಗೆ ಈ ಕವಿತೆಯ ಉದಯವೂ ಆಯ್ತು.
ಪ್ರಾತಃ ಸ್ಮರಣೀಯರಾದ ದಿ. ಜಿ.ಪಿ.ರಾಜರತ್ನ್ಂ ಅವರ ಬಣ್ಣದ ತಗಡಿನ ತುತ್ತೂರಿ ಪದ್ಯದ ಜಾಡನ್ನು ಹಿಡಿದು ಬರೆದಿದ್ದೇನೆ. ಅದಕ್ಕಾಗಿ ಅವರ ಕ್ಷಮೆ ಇರಲಿ.

ಐ-ವರಾತ

 

ಹಾಲಿನ ಬಣ್ಣದ ಐ ಫ಼ೋನು
ನಲಿಯುತ ಕೊಂಡನು ವಿಜಯೀಂದ್ರನು

ಡಬ್ಬವ ತಿರುಗಿಸಿ ನೋಡುತಲಿ
ಮನದಲೆ ಹಿರಿ ಹಿರಿ ಹಿಗ್ಗುತಲಿ
ಮನೆಕಡೆ ಓಡಿದ ಭರದಿಂದ
ಫ಼ೋನನು ತೆಗೆಯುತೆ ಮುದದಿಂದ

ಸಿಂ ಕಾರ್ಡ್ ಅನ್ನು ಹಾಕಿದನು
ಬ್ಯಾಟರಿ ಛಾರ್ಜನು ಮಾಡಿದನು
ವಿಜಯನು ಗರ್ವದಿ ಬೀಗುತಲಿ
ಫ಼ೋನ್ ಆನ್ ಮಾಡಿದ ಹೆಮ್ಮೆಯಲಿ

ಬೆಳಕದು ಮೂಡಿತು ಪರದೆಯಲಿ
ಅರಳುವ ಹೂವಿನ ರೀತಿಯಲಿ
ಬಣ್ಣದ ಚಿತ್ರವು ಮೂಡುತಿರೆ
ವಿಜಯನು ಬುರ್ರನೆ ಉಬ್ಬುತಿರೆ

ಹೆಮ್ಮೆಯು ಕಣ್ಣನು ತುಂಬಿದೊಡೆ
ವಿಜಯನು ನೋಡಿದ ಮಡದಿಯೆಡೆ
ಈ ವಿಜಯೋತ್ಸವವನು ಆಚರಿಸೆ
ಹೆಂಡತಿ ಮೆಲ್ಲನೆ ಕನವರಿಸೆ

ವಿಜಯನು ಒಪ್ಪಿದ ತಲೆದೂಗಿ
ಹೇಳಿದ ಹೊರಡಲು ಅನುವಾಗಿ

ಫ಼ೊನಲಿ ಅಡಗಿಹ ಅಕ್ಕ” ಸಿರಿ”
ಆಕೆಯೆ ಅವನ ಸೆಕ್ರೆಟರಿ
ಊರಿಗೆ ಹೋಗುವ ದಾರಿಯನು
ತೋರಲು ಆಗ್ಜ್ನೆಯ ಮಾಡಿದನು

ಊರಿನ ಪೋಸ್ಟ್ ಕೋಡ್ ಹಾಕಿರಲು
ನಕ್ಷೆಯ ಕಕ್ಷೆಯು ಮೂಡಿರಲು
ಹಿಗ್ಗುತ ವಿಜಯನು ಕಾರಿನೊಳು
ನುಗ್ಗುತ ಬಾಗಿಲ ಮುಚ್ಚಿರಲು

ಲಲನೆಯು ನುಡಿದಳು ಮುದದಿಂದ
ಈಗಲೆ ಹೊರಟರೆ ಬಲು ಚಂದ
ರಸ್ತೆಯು ತಿರುವೂ ಬರುತಿರಲು
ಫ಼ೋನದು ದಾರಿಯ ತೋರಿರಲು

ನಕ್ಷೆಯ ತಪ್ಪಿನ ಅರಿವಿಲ್ಲ
ಸುತ್ತಿದ, ಊರದು ಸಿಗಲಿಲ್ಲ
ತಿನ್ನಲು-ಕುಡಿಯಲು ಏನಿಲ್ಲ
ಬಸವಳಿದರು ಆ ದಿನವೆಲ್ಲ

ನಿರ್ಜನ ಬಯಲಿಗೆ ತಂದಿತ್ತು
ನಿನ್ನೂರ್ ಬಂದಿತು ಇಳಿಯಂತು
ದಾರಿಯ ತಪ್ಪಿದ ಮಗನಾಗಿ
ಸುತ್ತಲು ನೋಡಿದ ಬೆರಗಾಗಿ

ಹೆಂಡತಿ ಮಕ್ಕಳು ಜೊತೆ ಸೇರಿ
ಹಾಕಿದರವನಿಗೆ ಛೀಮಾರಿ
ಸಾಕೀ ನಿಮ್ಮ ಸಹವಾಸ
ಐ ಫ಼ೋನ್ ಜೊತೆಗಿನ ವನವಾಸ

ಹಳ್ಳಕೆ ಬಿದ್ದ ವೃಕನಾಗಿ
ವಿಜಯನು ಮರುಗಿದ ತನಗಾಗಿ

ಆದಿಫಲ ಈ ಆಪಲ್ಲು
ದಾರಿಯ ತಪ್ಪಿಸೊ ಸ್ಯಾಂಪಲ್ಲು
ಆಪಲ್ ಮ್ಯಪನು ನಂಬದಿರು
ಗೂಗಲ್ ಸ್ನೇಹವ ತೊರೆಯದಿರು.

ಡಾ.ಸುದರ್ಶನ ಗುರುರಾಜರಾವ್

ನುಡಿಪರ್ವ

ನುಡಿಪರ್ವ

ಕತ್ತಲಾದ ಬಾಳಿಗೆ
ಅಕ್ಷರಗಳ ದೀವಿಗೆ
ಹಿಡಿದು ಬೆಳಕ ಕೊಡುವೆ ತಾಯಿ
ನೀನೆ ನಮ್ಮ ಪಾಲಿಗೆ

ಮುದ್ದು ಸುರಿವ ಅಕ್ಷರ
ಮುತ್ತು ಪೋಣಿಸಿಟ್ಟ ಹಾರ
ಕೇಳುತಿರಲು ಇಂಪು ನುಡಿಯ
ಉಳಿದುದೆಲ್ಲ ನಶ್ವರ

ಮಧುರಲಯದ ಪದ್ಯವು
ಬಹುವಿಧಗಳ ಗದ್ಯವು
ನಿಜದಿ ನಿನ್ನ ಸೇವೆಗಾಗಿ
ಪದತಲದಲಿ ನೈವೇದ್ಯವು

ಭಾಷೆಯಿಂದ ಸಂಸ್ಕೃತಿ
ನಾತ್ಯ ಗೀತದುತ್ಕೃತಿ
ಬೆರಕೆ ಇರದ ಭಾಷೆಇರಲು
ಪರಂಪರೆಗೆ ಸುಸ್ಠಿತಿ

ತುತ್ತಲೊಂದು ಕಲ್ಲು ಸಿಗಲು
ಉಗಿಯಬಹುದು್ ದೂರಕೆ
ತುತ್ತ ತುಂಬ ಕಲ್ಲೆ ಇರಲು
ಒಗ್ಗಲಹುದೆ ದೇಹಕೆ

ಕಲ್ಲು ತುಂಬಿದನ್ನದಂತೆ
ಬೆರಕೆಯಾದ ಭಾಷೆಯು
ಕೀಳರಿಮೆಗೆ ಆಲಸ್ಯವು
ಸೇರಿ ಬೆಳೆದ ಕ್ಲೀಷೆಯು

ಅರಿಯದಾಗಿ ನುಡಿಯ ಸಿರಿ
ಬೆರೆಕೆ ಮಾಡಿ ಬಳಸದಿರಿ
ಬೆರಕೆಯಾದ ಭಾಷೆ ಎಂದು
ಬೇರು ಸತ್ತ ಮರವೆ ಸರಿ

ಹೊಸ ಚಿಗುರಿಗೆ ಹಳೆ ಬೇರು
ಕೂಡಿದಾಗ ಮರವು ಸೊಗಸು
ಪರಂಪರೆಯ ಮರೆತು ನಡೆಯೆ
ನನಸಾಗದು ಕನಸು

ನಮ್ಮ ನಾಡು ನಮ್ಮ ನುಡಿಯ
ಬಗೆಗೆ ಬೆಳೆಯೆ ತಾತ್ಸಾರ
ನಮ್ಮ ನುಡಿಯ ನಾವೆ ಮರೆಯೆ
ಭಾಷೆಯುಳಿವು ದುಸ್ತರ

ಮನೆಯ ಗೆದ್ದು ಮಾರು ಗೆದೆ
ಎಂಬ ಗಾದೆ ಮಾತಿದೆ
ಕನ್ನಡವನು ಕಲಿತು ಉಳಿದ
ಭಾಷೆ ಕಲಿಯಬಾರದೆ

ಮಾಸಕೊಮ್ಮೆ ದೊರೆವ ಹಣವೆ
ಆಂಗ್ಲ ಭಾಷೆ ಪ್ರಕೃತಿ
ಜೀವ ವಿಮೆಯ ಶ್ರೀರಕ್ಷೆಯು
ಕನ್ನಡದ ಸುಸಂಸ್ಕೃತಿ

ಕನ್ನಡವನೆ ನುಡಿಯಿರಿ
ಬಳಸಿ ಅದರ ಪದಸಿರಿ
ಶುದ್ಧವಾದ ಭಾಷೆಯಿಂದ
ಪರಂಪರೆಯ ಉಳಿಸಿರಿ

ಸರ್ವ ಶಕ್ತ ನಮ್ಮ ಭಾಷೆ
ನಮಗೆ ಇರಲಿ ಗರ್ವವು
ಕನ್ನಡವನೆ ಬಳಸಿ ಗೆಲ್ಲು
ಉದಯಿಸಲಿ ಹೊಸ ಪರ್ವವು

ಡಾ.ಸುದರ್ಶನ ಗುರುರಾಜರಾವ್

ಮೊಸಳೆ ಮತ್ತು ಕೋತಿ

ಮೊಸಳೆ ಮತ್ತು ಕೋತಿ

ನದಿಯೊಂದು ಹರಿದಿತ್ತು್ ಮರವೋಂದು ಬದಿಗಿತ್ತು
ಅದರ ಮೇಲಿತ್ತೊಂದು ಕೋತಿ
ಮೊಸಳೆಯಾ ಸಂಸಾರವೊಂದಿತ್ತು ನದಿಯಲ್ಲಿ
ಗಂಡ ಹೆಂಡಿರ ನಡುವೆ ಬಹಳ ಪ್ರೀತಿ

ಗಂಡು ಮೊಸಳೆಯು ಒಮ್ಮೆ ಕೋತಿಯನು ತಾ ಕಂಡು
ಮುಗುಳು ನಗೆಯನು ನಗಲು ಸ್ನೇಹದಿಂದ
ಕೈ ಬೀಸಿ ಹಣ್ಣೆಸೆದು ಕೋತಿಯದು ಸ್ಪಂದಿಸಿತು
ಸಹಜೀವಿಗಳಿಗಿರುವ ಪ್ರೇಮದಿಂದ

ದಿನವಾರ ಮಾಸಗಳು ಕಳೆದಿರಲು ಜೀವಿಗಳ
ಸ್ನೇಹವದು ಬೆಳೆದಿತ್ತು ಗಾಢವಾಗಿ
ಹಣ್ಣುಗಳ ಹೊತ್ತೊಯ್ದು ಹೆಂಡತಿಗೆ ಕೊಡುತಿರಲು
ಅವಳದರ ರುಚಿ ಸವಿಗೆ ಮಾರು ಹೋಗಿ

ಹೆಣ್ಣು ಮೊಸಳೆಗೆ ಒಮ್ಮೆ ಅತಿಯಾಸೆ ಅಂಕುರಿಸಿ
ಮನದಲ್ಲಿ ಮೂಡಿರಲು ಕೆಟ್ಟ ಬಯಕೆ
ಇಷ್ಟು ರುಚಿ ಹಣ್ಣುಗಳ ದಿನದಿನವೂ ತಿನುತಿರುವ
ಕೋತಿ ಮಾಂಸದ ರುಚಿಯ ಸವಿವ ತುಡಿಕೆ

ಮನದಲ್ಲೆ ಹೊಸದೊಂದು ಯೋಜನೆಯ ತಾ ಹೊಸೆದು
ಗಂಡು ಮೊಸಳೆಯ ಮುಂದೆ ಬಯಕೆ ಇಡಲು
ಹೌಹಾರಿ ಮೊಸಳೆಯು ಹೆಂಡತಿಗೆ ತಿಳಿಹೇಳಿ
ಬೇಡಿಕೊಂಡಿತು ತನ್ನ ಆಸೆ ಬಿಡಲು

ಆಸೆಯಾ ಸುಳಿಯಲ್ಲಿ ಸಿಲುಕಿದ್ದ ಹೆಂಡತಿಯು
ಬಯಕೆಯನು ಬಿಡೆನೆಂದು ಹಠವ ಮಾಡಿ
ಕೋತಿ ಮಾಂಸವು ತನಗೆ ಸಿಗದಿರಲು ಈ ಜಗವೆ
ತೊರೆವೆನೆಂದಿತು ಕೆಟ್ಟ ಶಪಥ ಹೂಡಿ

ಹೆಂಡತಿಯ ಬಿಡಲಾರ ಸ್ನೇಹಿತನ ಕೊಲಲಾರ
ಗಂಡು ಮೊಸಳೆಯು ದಿನವು ತೊಳಲಿ ಬಳಲಿ
ಕೊನೆಗೆಂದು ನಿರ್ಧಾರ ಹೆಂಡತಿಯ ಪರವಾಗೆ
ಕೋತಿಯನು ಕರೆತರಲು ಹೊರಟಿತಲ್ಲಿ

ಅಂತರ್ರತ್ಮವು ಚುಚ್ಚಿ ಮನವು ನೋವಾಗುತಿರೆ
ಇದಕೇನು ಕಾರಣವ ಕೊಡುವೆನೆಂದು
ಹೆಂಡತಿಗೆ ನಾನಿಹೆನು ನನಗೆ ಹೆಂಡತಿ ಇಹಳು
ಕೋತಿ ಜೊತೆ ಯಾರಿಲ್ಲ ಅಳಲು ಬಂದು

ಮನವನ್ನು ತಣಿಸುತ್ತ ಆತ್ಮವನು ಒಲಿಸುತ್ತ
ಕೋತಿಯಿರುವಾ ಮರದ ಕಡೆಗೆ ನಡೆಯೆ
ದಿನದಂತೆ ಕೋತಿಯದು ಹಣ್ಣುಗಳ ನೀಡಿರಲು
ಮೊಸಳೆಯದು ಔತಣಕೆ ತಾನು ಕರೆಯೆ

ಮುಗ್ಧ ಕೋತಿಯು ನಂಬಿ ಒಪ್ಪಿ ಅಣಿಯಾಗುತಲಿ
ಮೊಸಳೆ ಬೆನ್ನಿನ ಮೇಲೆ ಕುಳಿತುಕೊಳಲು
ಅರ್ಧ ನದಿಯನು ದಾಟಿ ಮಧ್ಯ ಭಾಗದೊಳಿರಲು
ಮೊಸಳೆಯು ನಿಜವನ್ನು ಬಾಯಿ ಬಿಡಲು

ನಿನ್ನ ಹಣ್ಣನು ತಿಂದು ನಿನ್ನ ಹೃದಯವ ಸವಿಯೆ
ನನ್ನ ಹೆಂದತಿ ಆಸೆ ಪಟ್ಟಿರುವಳೆನಲು
ಒಡನೆಯೆ ಕೋತಿಯದು ಸಂತಸವ ತೋರಿಸುತ
ನಿನ್ನ ಸ್ನೇಹಕೆ ಪ್ರಾಣ ಕೊಡುವೆನೆನಲು

ಮೊಸಳೆ ತೂಗಿತು ತಲೆಯ ಕೇಳಿ ಕೋತಿಯ
ಅಭಯ ಕಪಿರಾಯ ನುಡಿದಿತ್ತು ಬೇಸರದಲಿ
ಹೊರಡುವಾ ಭರದಲ್ಲಿ ಹೃದಯವನು ಮರದಲ್ಲೆ
ಬಿಟ್ಟು ಬಂದಿಹೆ ನಾನು ನಿಂಜೊತೆಯಲಿ

ನೀಯೆನ್ನ ಹಿಂದಕ್ಕೆ ಕರೆದೊಯ್ಯೆ ನಾನದನು
ಹೊತ್ತು ಬರುವೆನು ನಿನ್ನ ಮನ ತಣಿಸಲು
ಮೊಸಳೆಯದು ಸಂತಸದಿ ಕೋತಿಯನು ಮರದೆಡೆಗೆ
ಬೆನ್ನ ಮೇಲೆಯೆ ಹೊತ್ತು ಕರೆದೊಯ್ಯಲು

ದಡದಲ್ಲಿ ಮರ ಬರಲು ಮಂಗ ಠಣ್ಣನೆ ಜಿಗಿದು
ಮರದ ಮೇಲಿನ ಕೊಂಬೆಗೇರಿ ಕುಳಿತು
ಕಣ್ಣು ಬಿಡುತಲಿ ಮೂರ್ಖ ಮೊಸಳೆಯದು ನೋಡುತಿರೆ
ಕೂಗಿ ಹೇಳಿತು ಅದರ ನಡತೆ ಕುರಿತು

ಎಲವೋ ಮೊಸಳೆಯೆ ನೀನು ಮೂರ್ಖ ಜೀವಿಯೆ
ಹೌದು ಸ್ನೇಹಕ್ಕೆ ನೀನೆಂದು ಅರ್ಹನಲ್ಲ
ಮೋಹ ಪಾಶದಿ ಸಿಲುಕಿ ಪಾಪ ಪುಣ್ಯದ ತುಲನೆ
ಮಾಡದಿರೆ ದುಃಖದಿಂ ಮುಕ್ತಿಯಿಲ್ಲ!!

ಡಾ.ಸುದರ್ಶನ ಗುರುರಾಜರಾವ್.

ಮೇಘ ಸಂದೇಶ (mEgha sandesha)

ಮೇಘ ಸಂದೇಶ

ಭೂಮಿಗೂ ಬಾನಿಗೂ ಇರುತಿಹುದು ಬಲುನಂಟು
ಗಂಡಹೆಂಡಿರಿಗಿರುವ ನಂಟಿನಂತೆ
ಆಗಸದ ಬಿಸಿಲಿಗೆ ಭೂಮಿ ತಾ ನೀಡುತಿರೆ
ನೀರಿನಾವಿಯ ಸತತ ಪ್ರೀತಿಯಂತೆ

ಪ್ರೀತಿಪ್ರೇಮಗಳ ಸವಿವಿನಿಮಯದ ಫಲವಾಗಿ
ಉದಿಸಿರಲು ಮೋಡಗಳು ಮಕ್ಕಳಂತೆ
ಕ್ಷಣ ಕ್ಷಣಕು ಬದಲು ಮಾಡುತಲಿ ರೂಪಗಳ
ಹೋಲುತಿರೆ ಬೆಳೆಯುತಿಹ ಶಿಶುಗಳಂತೆ

ಆಗಸದಿ ಓಡುತಲಿ,ಏಳುತಲಿ ಬೀಳುತಲಿ
ಮೋಡಗಳು ಆಡಿರಲು ಮಕ್ಕಳಂತೆ
ಮಳೆಯ ಹನಿಗಳ ಸುರಿಸಿ ಭುವಿಗೆ ತಂಪೆರೆಯುವವು
ಅಳುತ ಮುದವನು ನೀಳ್ವ ಕಂದರಂತೆ

ಬಾಲ್ಯದಾವಸ್ಠೆಯಲಿ ಮಕ್ಕಳಾಟವು ಮನಕೆ
ತಂಪನೆರೆದಿರೆ ಬೇಸಿಗೆ ಮಳೆಯ ತೆರದಿ
ಬೆಂಡಾದ ಬಾಳ ಬೆಂಗಾಡಿನಲಿ ಸಂತಸದ
ಚಿಗುರನೊಡೆಸುತ ಸೋಜಿಗವ ಮುದದಿ

ಕಳೆದಿರಲು ಬಾಲ್ಯವದು ಮುಗ್ಢತೆಯು ಮರೆಯಾಗಿ
ಮೂಡುತಿರೆ ಮನದಲ್ಲಿ ಸ್ವಾರ್ಥದುರಿಯು
ಆಸೆಗಳಬೆನ್ನೇರಿ ಸಾಗುತಿರೆ ಜೀವನದಿ ಬೇಕುಗಳ
ಹಗ್ಗವನು ಹೊಸೆದು ದಿನವೂ

ಜೀವನದಿ ಪಾತ್ರಗಳು ಬದಲಾಗಿ ಹೋಗುತಿರೆ
ತಂದೆ ತಾಯಿಗಳಾಗಿ ಭುವಿಯ ಜಲವು
ಮನಕೆ ಮುದವನು ನೀಳ್ವ ಮೋಡಗಳೆ ಇಲ್ಲದಿಹ
ಬಿಸಿಲಿನಾಗಸವಾಗೆ ಮಕ್ಕಳಿರುವು

ಕಾಲಸರಿಯುತಲಿರಲು,ರೆಕ್ಕೆಗಳು ಬಲಿತಿರಲು
ಹಕ್ಕಿಗಳು ತಾವಾಗಿ ಹೊರಗೆ ಹಾರಿ
ಹೊಸ ಬಾಳು ಹೊಸಹಾದಿ ಬಯಸಿ ದೂರದಎಲೆಲ್ಲೋ
ಗೂಡು ಮಾಡಿರೆ ತಮ್ಮ ಜೊತೆಯ ಸೇರಿ

ಮೋಡಗಳು ಚೆದುರಿದಾ ಆಕಾಶದಂತಾಯ್ತು
ಗಂಡ ಹೆಂಡಿರುಗಳಾ ಮನೆಯು- ಮನವು
ಮೇಘಗಳ ಬರುವಿಕೆಗೆ ಇರುವಿಕೆಗೆ ಕಾದಿರುವ
ಧರೆಯಂತೆ ಪರಿತಪಿಸಿ ಅವರು ದಿನವೂ

ಮೇಘಗಳೆ ಬಾರದಿಹ ಹನಿಗಳೇ ಸುರಿಯದಿಹ
ಬಾಳಿನಲಿ ನೆನಪುಗಳೆ ಮೋಡವಾಗಿ
ಮಳೆನಿಂದ ಬಳಿಕವೂ ಮರದಿಂದ ತೊಟಿಯುತಿಹ
ಹನಿಯಂತೆ ತಂಪೆರೆದು ಗೂಢವಾಗಿ!!

ಡಾ.ಸುದರ್ಶನ ಗುರುರಾಜರಾವ್.

ಹುಡುಗ ಮತ್ತು ಮರ (Huduga mattu mara)

ಹುಡುಗ ಮತ್ತು ಮರ

ಬೆಟ್ಟದಾ ತಪ್ಪಲಲಿ ಸುಂದರ ಬಯಲೊಂದು
ಬಯಲ ಮಧ್ಯದಲಿತ್ತು ಒಂದು ಮರವು
ಕೂಗಳತೆ ದೂರದಲಿ ಪುಟ್ಟದೊಂದು ಮನೆಯು
ಮನೆಯ ಕಣ್ಮಣಿಯಾಗಿ ಗಂಡು ಮಗುವು

ತಂದೆ ತಾಯಿಯರೆಂದು ಹೊಲದಲ್ಲಿ ದುಡಿದಿರಲು
ದುಡಿಯುವಾ ಸಮಯದಲಿ ಪುಟ್ಟ ಮಗುವು
ಮರದ ಬಳಿಯಲಿ ಬಂದು ಆಟವಾಡುತಲಿರಲು
ಆಟ ಪಾಠವ ಕಂಡು ನಲಿದು ಮರವು

ತನ್ನ ಮೌನವ ಮುರಿದು ಮಾತುಗಳನಾಡುತಲಿ
ಮಾತು ಬಾರದ ಕಂದಗದನು ಕಲಿಸಿ
ಹಸಿವಿಂದ ಮಗುವೆಂದು ಬಳಲಿದರೆ ಅದ ಕಂಡು
ಬಳಲಿಕೆಯ ಮರೆಸುಸುವುದು ಹಣ್ಣ ತಿನಿಸಿ

ದಿನಮಾಸ ಉರುಳಿರಲು ಮಗುವು ತಾ ಬೆಳೆದಿರಲು
ಬೆಳೆವ ಮಗುವನು ಕಂಡು ಮರವು ನಲಿದು
ಮಗುವಿಗೀಯುತ ನೆರಳು ಹಣ್ಣು ಬಲು ರುಚಿಯಿರಲು
ಬೆಳೆಸಿತ್ತು ತನ್ನೆದೆಯ ಸಾರ ಬಸಿದು

ಬೆಳೆದ ಬಾಲಕನಾಗಿ ಮರದ ಬಳಿ ಬಂದೊಂದು
ದಿನ ಮುಖವ ಬಾಡಿಸುತ ಕುಳಿತು ಕೊಳಲು
ದುಗುಡ ತಾಳಿದ ಮರವು ಬಾಲಕನ ಬೇಸರಕೆ
ಕಾರಣವು ಏನೆಂದು ತಾ ಕೇಳಲು

ಹಣ್ಣುಗಳು ಸಾಕಾಯ್ತು ತಿಂದು ಬೇಸರವಾಯ್ತು
ಬರಿಮಾತು ನಿನ್ನೊಡನೆ ದಿನವೆಲ್ಲವೂ
ದಿನ ದಿನಕು ಹೊಸ ಆಟ ಪಾಠಗಳು ಬೇಕೆಂದು
ಪರಿತಪಿಸಿ ಕಾಡುತಿದೆ ನನ್ನ ಮನವು

ಬಾಲಕನ ಅಭಿಲಾಷೆಯನ್ನು ಮರ ಅರಿಯುತಲಿ
ಅರಿಕೆ ಮಾಡಿತು ಅವಗೆ ಪ್ರೀತಿಯಿಂದ
ನನ್ನ ಕೊಂಬೆಗೆ ಗಟ್ಟಿ ಹಗ್ಗವನು ನೀ ಕಟ್ಟಿ
ಆಡುತಿರು ಉಯ್ಯಾಲೆ ಹರುಷದಿಂದ

ಮರದ ತ್ಯಾಗದ ಅರಿವಿ ಇಲ್ಲದೆಯೆ ಬಾಲಕನು
ಸುಖಕಾಗಿ ವೃಕ್ಷದಾ ತೋಳನ್ನು ಬಳಸಿ
ಉಯ್ಯಾಲೆಯಲಿ ಕುಳಿತು ಆಡಿದನು ತೂಗಿದನು
ದೇಹ ಮನಸುಗಳನ್ನು ಏರಿಸುತ ಇಳಿಸಿ

ರೆಂಬೆ ಕೊಂಬೆಗಳೆಲ್ಲ ಜಗ್ಗಿ ಮೈ ನೋವಾಗಿ
ನಲುಗಿತದು ಮರ ತಾನು ದಿನರಾತ್ರಿಯು
ಮರದ ಪರಿವೆಯೆ ಇರದ ಬಾಲಕನು ಅನುದಿನವು
ಆಡುತಲಿ ನಲಿದಿದ್ದ ಪ್ರತಿಬಾರಿಯು

ಋತು ಚಕ್ರಗಳು ಉರುಳಿ ಕುಡಿ ಮೀಸೆಯದು ಚಿಗುರಿ
ಬಾಲಕನು ಬೆಳೆದಾದ ನವತರುಣನು
ಆಟ ಪಾಠಗಳವಗೆ ರುಚಿಸದಿರೆ ಮರದೊಡನೆ
ಆಗ್ರಹದಿ ಹಣಕಾಗಿ ಕೇಳುತಿಹನು

ನನ್ನ ಬಳಿ ಬಹಳಿರುವ ಹಣ್ಣುಗಳ ನೀ ಕೊಯ್ದು
ಪಟ್ಟಣಕೆ ಕೊಂಡೊಯ್ದು ವಿಕ್ರಯಿಸಲು
ಸಿಗಬಹುದು ಬಹಳ ಹಣ ನೀ ಒಂದು ಕೈ ನೋಡು
ಎಂದು ಆ ಮರಹೇಳಿ ಸಂಭ್ರಮಿಸಲು

ಹಣ್ಣುಗಳ ಕೊಯ್ಯುತಲಿ ಯುವಕ ತಾ ತವಕದಲಿ
ಕೊಂಡೊಯ್ದ ಪಟ್ಟಣಕೆ ಮಾರಿ ಬರಲು
ಹಣಗಳಿಸಿ ಮರಳಿದನು ಸಿಹಿತಿನಿಸು ತಿನ್ನುತಲಿ
ಮರಕೇನು ಬೇಕೆಂದು ಕೇಳದಿರಲು

ತನಗೇನು ಬೇಕಿಲ್ಲ ಭೂ ತಾಯಿ ಪೊರೆದಿಹಳು
ನೀನು ಸಂತಸ ಪಡಲು ನನಗೆ ಸಾಕು
ಗೆಳೆಯನಾ ಸುಖವೆನ್ನ ಸುಖದಂತೆ ಸಂಭ್ರಮಿಸಿ
ಮರಗಳಿಸಿ ಪುಣ್ಯವನು ಇಹಕು ಪರಕು

ಯುವಕಗಾಯಿತು ಮದುವೆ ಮುಂದೆ ಮಕ್ಕಳುಗಳು
ಸಂಸಾರ ಬೆಳೆದಿತ್ತು ದೊಡ್ಡದಾಗಿ
ಮನೆ ಚಿಕ್ಕದೆನಿಸಿರಲು ವಿಸ್ತರಿಸೆ ಮನೆಯನ್ನು
ಕೇಳಿದನು ಮರದ ಬಳಿ ಹಲಗೆಗಾಗಿ

ಕೆಳಗಿನಾ ಕೊಂಬೆಗಳು ಅಗಲ ಇರುವವು ಬಹಳ
ನೀ ಕಡಿಯೆ ಸಿಗುವವು ಬಹಳ ಹಲಗೆ
ಮನೆ ದೊಡ್ಡದಾದಂತೆ ಮನಸು ಮುದುಡುವುದೆಂಬ
ಮಾತನ್ನು ಮರೆಯಬೇಡೆಂದು ಕೊನೆಗೆ

ವಾರ ಮಾಸಗಳಾಗಿ ಯುವಕನಾ ಕುರುಹಿರದೆ
ಒಂದು ದಿನ ಕುಳಿತನವ ಮರದೆಡೆಗೆ ಬಂದು
ಜೋಲು ಮೋರೆಯ ಕಂಡು ಮರವು ತಾ ಬಲು ನೊಂದು
ಕೇಳಿರಲು ಅವನ ಕ್ಲೇಶವದೇನೆಂದು

ಖರ್ಚು ಬೆಳೆಯುತಲಿಹುದು ನಿನ್ನ ಹಣ್ಣುಗಳಿಂದ
ನೀಸದಾಗದು ನನ್ನ ಸಂಸಾರವನ್ನು
ಕೊಡು ನಿನ್ನ ಬೊಡ್ಡೆಯನು ನಾ ಕಟ್ಟಿ ಹಡಗನ್ನು
ದುಡಿಯುತಲಿ ಮಾಡುವೆನು ವ್ಯಾಪಾರವನ್ನು

ಇಷ್ಟು ಮಾಡಿದ ನಾನು ಅಷ್ಟನ್ನೂ ಮಾಡದಿರೆ
ನಮ್ಮ ಸ್ನೇಹಕೆ ಇರುವ ಅರ್ಥವೇನು
ಕಡಿದು ನೀ ನನ್ನನ್ನು ಕಟ್ಟು ಕನಸಿನ ಹಡಗು
ದುಡಿದು ನೀ ಅನುಭವಿಸು ಸಿರಿತನವನು

ವರ್ಷಗಳು ಉರುಳಿದವು ಯುವಕ ಮರಳಿದ
ಮನೆಗೆ ಗಳಿಸುತ್ತ ಅಪಾರ ಧನರಾಶಿಯ
ಸಂಸಾರದೊಡಗೂಡಿ ಅನುಭವಿಸಿ ಸಿರಿತನವ
ಮರೆತಿರಲು ತ್ಯಾಗಮಯಿ ಮರದ ಇರುವ

ವೃಧ್ಧಾಪ್ಯ ಆವರಿಸಿ ದೇಹ ತಾ ಹಣ್ಣಾಗಿ
ಹೆಂಡತಿಯು ತ್ಯಜಿಸಿರಲು ಇಹಲೋಕವ
ಮಕ್ಕಳೆಲ್ಲರು ತಮ್ಮ ವ್ಯವಹಾರದಲಿ ಮುಳುಗಿ
ಕೆಡೆಗಣಿಸಿರಲು ಈ ಮುದುಕನಿರುವ

ಒಂಟಿತನವದು ಕಾಡಿ ಮನಸು ಮುದುಡುತಲಿರಲು
ಆಗಾಯ್ತು ಅವನಿಗಾ ಮರದ ನೆನಪು
ಮನದಲ್ಲಿ ಬೆಳಕೊಂದು ಹೊಳೆದಂತೆ ನಡೆದಿರಲು
ಹೆಜ್ಜೆಗಳಿಗಂದಿತ್ತು ಹೊಸದೆ ಹುರುಪು

ಕತ್ತರೈಸಿದಾ ಬೊಡ್ಡೆ ಹಾಗೆಯೇ ಉಳಿದಿತ್ತು
ಕುಳಿತುಕೊಳ್ಳಲು ಕಲ್ಲು ಹಾಸಿನಂತೆ
ಮುದುಕನನು ಕಂಡಾಗ ನಸು ನಗುತ
ಸ್ವಾಗತಿಸಿ ಹೇಳಿತ್ತು ತನಮೇಲೆ ಕುಳ್ಳುವಂತೆ

ಕೊಡುವುದನು ಕಲಿಯದಲೆ ಬರಿದೆ ಕೇಳುತ ತನ್ನ
ಜೀವನವನ್ನೆಲ್ಲ ಬಸಿದ ಮುದುಕ
ಒಂದು ಘಳಿಗೆಯು ತನ್ನ ಮನದಲ್ಲಿ ಸಂತೋಷ
ಅನುಭವಿಸದೆಯೆ ಕಳೆದ ತನ್ನ ಬದುಕ

ಪರರ ಬೇಡಿಕೆಗಳಿಗೆಂದು ಸ್ಪಂದಿಸುತ ತನ್ನ
ತಾನೇ ಅವಗೆ ಧಾರೆ ಎರೆದು
ಮರತಾನು ಬದುಕಿತ್ತು ಬೊಡ್ಡೆಯಾ ಸ್ಥಿತಿಯಲ್ಲಿ
ಜಗದೆಲ್ಲ ಸಂತೋಷ ಸೂರೆ ಹೊಡೆದು.!!

ಡಾ. ಸುದರ್ಶನ ಗುರುರಾಜರಾವ್

 

ಅಂತರಾಗ್ನಿ (Antaraagni)

ಅಂತರಾಗ್ನಿ

ಸಾಧನೆಯ ಅಂತರಾಗ್ನಿಯದು
ಬೇಕೆಂದು ಬದುಕಿಗೆ
ಸಾಧನೆಯೆ ಇಲ್ಲದಿಹುದೆಂಥ ಬದುಕು
ಸುತ್ತಲಿನ ಪರಿಸರದಿ ಸ್ಫೂರ್ತಿಯನು
ಪಡೆಯುತಲಿ ನೀ ಶ್ರಮಿಸು
ಪರಿಹರಿಸೆ ಅದರ ಹುಳುಕು

ಅದಿಕವಿ ಪಂಪ ತಾ ಭಾರತವ
ಬರೆದಾಗ ಕನ್ನಡದಿ
ಭಾರತದ ಕಾವ್ಯವಿರಲಿಲ್ಲ
ಸ್ಫೂರ್ತಿಯನು ತಾ ಪಡೆದು
ರಚಿಸಿರಲು ಕಾವ್ಯವನು
ಅದಿಕವಿ ತಾನಾಗಿ ಮೆರೆಯದಿರಲಿಲ್ಲ

ಪಂಪನಾ ಕಾವ್ಯವದು ಒರತೆಯಾಗುತ
ಹರಿದು ಮುಂದೆಲ್ಲ
ಹಲವಾರು ಕಾವ್ಯಗಳ ಕೂಡಿ
ಕಾಲನಾ ಹರಿವಿನಲಿ ಹಲವು
ಕಾವ್ಯಗಳೆಂಬ ಝರಿಗಳನು
ಸೇರುತಲಿ ನದಿಯಾಗಿ ಓಡಿ

ರನ್ನ ಜನ್ನರ ಪೊನ್ನ ಹರಿಹರರ
ಕಾವ್ಯಗಳು ಕನ್ನಡದ
ಸಾಹಿತ್ಯ ನದಿಗೆ ಸೇರುತಿರೆ
ಭಾರತಾಂಬೆಯಖಂಡ ಸಾಹಿತ್ಯ
ಸಾಗರದ ಮಡಿಲನ್ನು
ತಾವೆಂದು ತುಂಬಿ ಹರಿಸುತಿರೆ

ಭಾಷೆ ಹಲವಾರಿರಲು ಭರತ
ಖಂಡದ ತುಂಬ ನೀತಿ
ನಿಯಮಗಳೊಂದು ಹೊಂದಿ ಸೇರದಿರೆ
ಪಾಣಿನಿಯು ಇದಕಂಡು ವ್ಯಾಕರಣ
ರಚಿಸಿರಲು ಏಕತೆಯು
ವಿವಿಧತೆಯ ನಡುವೆ ಮೂಡುತಿರೆ

ಬಾಣಂತಿ ಜ್ವರದಿಂದ ಮಾತೆಯರು
ಅಸುನೀಗಿ ಹಸುಗೂಸುಗಳು
ಆಗೆ ತಬ್ಬಲಿಗಳು
ಇಗ್ನಾಜು ಫಿಲಿಪ ಸಮಲ್ವೈಸ
ಇದಕಂಡು ಮರುಗುತಲಿ
ದುಡಿದು ತಾ ಹಗಲು ಇರುಳು

ಸಂಕಲ್ಪವನು ತೊಟ್ಟು ನಿದ್ರೆ
ಊಟವ ಬಿಟ್ಟು ದುಡಿದಿರಲು
ಜ್ವರಕೆ ತಾ ಕಾರಣವನರಸಿ
ಕೈ ತೊಳೆದು ರೋಗಿಗಳ ಮುಟ್ಟುವುದೆ
ಇದಕೆಂದು ಪರಿಹಾರ
ಎಂಬಂಥ ಬೆಳಕು ಹರಿಸಿ

ಕತೃತ್ವ ಶಕ್ತಿಯದು ಪ್ರತಿಯೊಂದು
ಜೀವಿಯಲು ಅಡಗಿಹುದು
ಕಾಣದೆಯೆ ಸುಪ್ತವಾಗಿ
ಅಂತರಾಗ್ನಿಯ ಕಾವು ಸೋಕಿರಲು
ತಾ ಕರಗಿ ಹರಿಯುವುದು
ಹೊರಗಡೆಗೆ ವ್ಯಕ್ತವಾಗಿ

ನಿನ್ನೊಳಗೆ ಅದಗಿರುವ ಪ್ರತಿಭೆಗಳೆ
ಎಂದೆಂದು ಸಾಧನೆಗೆ
ಬೇಕಿರುವ ಪರಿಕರಗಳು
ಗುರು-ಮಿತ್ರ ತಂದೆ ತಾಯಿಯರು
ಪರಿಸರವು ನಿನ್ನ ಸಾಧನೆಗೆ
ವೇಗ ವರ್ಧಕಗಳು

ಮೈಕೊಡವಿ ಎದ್ದೇಳು ಭಯವನ್ನು
ಕೈಬಿಟ್ಟು ಉದ್ದೀಪಿಸು
ನಿನ್ನ ಅಂತರಾಗ್ನಿಯನ್ನು
ಉರಿವ ಹಣತೆಯ ತೆರದಿ ತೋರು ನೀ
ಬೆಳಕನ್ನು ವ್ಯರ್ಥ ಗೊಳಿಸದೆ
ನಿನ್ನ ಈ ಜೀವನವನು.

ಡಾ.ಸುದರ್ಶನ ಗುರುರಾಜರಾವ್