ಚಂದ್ರ ವಂಶ

ಚಂದ್ರ ವಂಶ
ಮಹಾಭಾರತದ ಕಥೆ ಬಹಳ ಸುಂದರ, ಸಂಕೀರ್ಣ ಹಾಗೂ ಆಸಕ್ತಿಕರ. ಸಾಮಾನ್ಯವಾಗಿ ಶಂತನುವಿನಿಂದ ಕಥೆ ಹೇಳುತ್ತಾರೆ. ಮಹಭಾರತದ ತಿರುಳು ಅಲ್ಲಿಯೇ ಇದ್ದರೂ ವಂಶಪಾರಂಪರ್ಯವಾಗಿ ಆದ ತಪ್ಪುಗಳು ಕೆಲವು ಸಾರಿ ಮುಂದಿನ ತಲೆಮಾರುಗಳ ಕಷ್ಟ ಕೋಟಲೆಗಳಿಗೆ ಕಾರಣವಾಗುವುದು ಅನುಭವವೇದ್ಯ. ಮಹಾಭಾರತ ಕಥೆಯ ಮೂಲ ಪುರುಷ ಚಂದ್ರ. ಗುರುಪತ್ನಿಯನ್ನೇ ಕಾಮಿಸಿದ ಇವನು ಮುಂದಿನ ಬಹಳಷ್ಟು ಅನರ್ಥಗಳಿಗೆ ಮುನ್ನುಡಿಯನ್ನೆ ಬರೆದ. ಲಭ್ಯವಿರುವ ವಿವರಗಳಿಂದ ಎಲ್ಲ ಪೂರ್ವಜರ ಹೆಸರುಗಳನ್ನು ಸೇರಿಸಿ ಈ ಚಂದ್ರವಂಶಾವಳಿಯನ್ನು ಕವಿತೆಯ ರೂಪದಲ್ಲಿ ರಚಿಸಿದ್ದೇನೆ. ನನಗೆ ಸಿಕ್ಕ ವಿವರಗಳಲ್ಲಿ ಕೆಲವು ಅಪೂರ್ಣವಿರಬಹುದು ಅಥವಾ ತಪ್ಪುಗಳು ಇರಬಹುದು. ಈ ನಿಟ್ಟಿನಲ್ಲಿ ಮುಂದೆ ವಿವರಗಳು ಸಿಕ್ಕಲ್ಲಿ ಸೂಕ್ತ ಬದಲಾವಣೆಗಲನ್ನು ಮಾಡುವ ಅಭಿಲಾಷೆ ನನ್ನದು.

ಆದಿಯಲಿ ವಿಷ್ಣು ಹಾಲ್ಗಡಲಿನಲ್ಲಿರಲು
ಅವನ್ ಹೊಕ್ಕುಳ ಬಳ್ಳಿ ಬೆಳೆದು ಅರಳಿರಲು
ಕಮಲಾಸನನಾಗಿ ಬ್ರಹ್ಮ ಉದಯಿಸಲು
ಸೃಷ್ಟಿ ಕಾರ್ಯಕೆ ಬ್ರಹ್ಮ ಮೊದಲು ಮಾಡಿರಲು

ಮೊದಲು ಮೂವರು ಮಾನಸ ಪುತ್ರರುದಿಸಿದರು
ಸ್ವಯಂಭು ಮೊದಲಾಗಿ ದಕ್ಷ ಅತ್ರಿಯರು
ದೇವ ದಾನವ ಮರ್ತ್ಯ ಲೋಕಗಳು ಮೂರು
ಪ್ರತಿಯೊಂದು ಲೋಕದಲಿ ಒಬ್ಬಬ್ಬರು

ಸ್ವಯಂಭುವಿನ ಪುತ್ರ ಪ್ರಿಯಂವರ್ತನು
ಊರ್ಜಸ್ವತಿಯ ತಾ ವರಿಸಿರ್ದನು
ದಾಂಪತ್ಯದಾ ಫಲವು ನೀಡೆ ಸುತನನ್ನು
ಶುಕ್ರಚಾರ್ಯನೆಂದವನು ಹೆಸರಾದನು

ಎರಡನೆಯ ಮಾನಸ ಪುತ್ರ ದಕ್ಷ
ಇವನಿರುವ ಜಗವೆಲ್ಲ ಅಂತರಿಕ್ಷ
ದೇವಗಣದವರೆಲ್ಲರು ಇವನ ಪಕ್ಷ
ಸೂರ್ಯವಂಶಕೆ ಇವನೆ ಮೂಲವೃಕ್ಷ

ದಕ್ಷ ಅದಿತಿಯರಲ್ಲಿ ಎರಡು ಸುತರು
ಆದಿತ್ಯ- ಕಶ್ಯಪರ ಹೆಸರಿನವರು
ಆದಿತ್ಯನಿಂದಾಗಿ ಸೂರ್ಯವಂಶ
ಕಶ್ಯಪನ ಸಂತತಿಯೆ ಪ್ರತ್ಯೇಕ ಅಂಶ

ಅತ್ರಿ ಎಂಬುವ ಕಡೆಯ ಬ್ರಹ್ಮ ಮಾನಸ ಪುತ್ರ
ಚಂದ್ರ ವಂಶದ ನದಿಯ ಮೂಲ ಪಾತ್ರ
ಪತಿವ್ರತೆಯರಲ್ಲೆಲ್ಲ ಏಕಮಾತ್ರ
ಅನಸೂಯೆಯಾ ಪಡೆದ ಪುಣ್ಯ ಪಾತ್ರ

ಅತ್ರಿಯಾ ಮಗನಾಗಿ ಚಂದ್ರ ಉದಯಿಸಲು
ಚೆಲುವ ಚನ್ನಿಗನಾಗಿ ಮೆರೆದು ಆಡಿರಲು
ದೇವರ್ಷಿ ಬೃಹಸ್ಪತಿಯ ಶಿಶ್ಯನಾಗಿರುತ
ಗುರುಪತ್ನಿ ತಾರೆಯನು ಮರುಳು ಮಾಡಿರುತ

ತಾರೆಯೊಂದಿಗೆ ಕೂಡಿ ಗುರುದ್ರೋಹವೆಸಗಿ
ಬುಧನೆಂಬ ಪುತ್ರನಿಗೆ ತಂದೆ ತಾಯಾಗಿ
ಸ್ತ್ರೀ ಮೋಹ ಲಾಲಸೆಗೆ ಅನ್ವರ್ಥವಾಗಿ
ಪೀಠಿಕೆಯ ಬರೆದಂಥ ಸ್ವಾರ್ಥಿ ತಾನಾಗಿ

ಚಂದ್ರನಾ ನಂತರದಿ ಬುಧನು ತಾ ಬಂದು
ಇಳೆಯೆಂಬ ಸುಂದರಿಯ ತಾ ವರಿಸಿ ನಿಂದು
ಪುರೂರವನೆಂಬುವ ಸುತನ ಪಡೆದಂದು
ಚಂದ್ರವಂಶದ ಮೊದಲ ದೇವಬಂಧು

ಸೂರ್ಯ ಚಂದ್ರರ ವಂಶ ವಾಹಿಗಳು ಸೇರೆ
ಸುದ್ಯುಮ್ನ ಇಳೆಯಾದ ಕಥೆಯಿಹುದು ನೀರೆ
ಸುದ್ಯುಮ್ನ ಪಾರ್ವತಿಯ ನಿಷೇಧವ ಮೀರೆ
ಶಾಪಕೊಟ್ಟಳು ಅವನ ಲಿಂಗ ಬದಲಿಸಿ ಬೇರೆ

ತಿಳಿಯದೆಯೆ ತಪ್ಪಾಗಿ ಸುದ್ಯುಮ್ನ ಕೊರಗಿ
ಪಾರ್ವತಿಯು ಅವನನ್ನು ಕಂಡು ತಾ ಮರುಗಿ
ಒಂದು ಮಾಸಕೆ ಒಂದು ಲಿಂಗದಂತೆ
ಸುದ್ಯುಮ್ನ ಇಳೆಯಾಗಿ ಬದಲಾದನಂತೆ

ದೇವತೆಗಳೊಡಗೂಡಿ ದಾನವರ ಗೆಲಿದು
ಪುರೂರವ ತಾನಾದ ದೇವಗಣ ಬಂಧು
ದೇವಲೋಕದಿ ಒಮ್ಮೆ ಊರ್ವಶಿಯ ಕಂಡು
ಮರುಳಾದ ಮರೆಯುತಲಿ ತನ್ನೆ ತಾನಂದು

ಊರ್ವಶಿಯ ಪ್ರೇಮಕ್ಕೆ ಅಂದು ಮರುಳಾಗಿ
ಅವಳಿಟ್ಟ ಕಟ್ಟಳೆಗೆ ತನ್ನ ತಲೆದೂಗಿ
ಸುಖ ದುಃಖ ಮಿಲನ ವಿರಹಾದಿ ಸಮನಾಗಿ
ಆರು ಜನ ಜನಿಸಿದರು ಮಕ್ಕಳಾಗಿ

ಆಯುಸ್ಸು ಪೌರವನ ಮೊದಲ ಮಗನು
ಇಂದುಮತಿಯಲಿ ಪಡೆದ ನಹುಷನನ್ನು
ಗುಣದಲ್ಲಿ ಮೀರಿಸುತ ದೇವೇಂದ್ರನನ್ನು
ಇಂದ್ರಪದವಿಗೆ ಸ್ವತಃ ಏರಿದವನನ್ನು

ಇಂದ್ರಪದವಿಯ ಭೋಗ ಇವನ ತಲೆಗೇರಿ
ಶಚಿದೇವಿಯಲ್ಲಿ ತನ್ನನುರಾಗ ಕೋರಿ
ಧರ್ಮ-ಕರ್ಮದ ಚೌಕಟ್ಟು ತಾಮೀರಿ
ಶಾಪದಿಂ ಹಾವಾಗಿ ಧರೆಯನ್ನು ಸೇರಿ

ಇಂದ್ರಪದವಿಗೆ ತಾನೇರುವಾ ಮುನ್ನ
ನಹುಷ ತಾನಾಗಿದ್ದ ಸದ್ಗುಣ ಸಂಪನ್ನ
ಕೈ ಹಿಡಿದು ಅಶೋಕ ಸುಂದರಿಯೆಂಬುವಳನ್ನ
ಪಡೆದಿದ್ದ ತಾ ಪುತ್ರ ಯಯಾತಿಯನ್ನ

ಯಯಾತಿಯಾ ಕಥೆಯು ಬಹಳವೇ ಹಿರಿದು
ದೇವಯಾನಿಯ ಕೂಪದಿಂದೆತ್ತಿ ಕೈ ಹಿಡಿದು
ದಾಸಿಯಾಗುತ ಬಂದ ಶರ್ಮಿಷ್ಠೆಯನು ಕಂಡು
ವರಿಸಿದನು ಗುಟ್ಟಿನಲಿ ತಿಳಿಯರು ಯಾರೆಂದು

ದೇವಯಾನಿಯಲೆರೆಡು ಮಕ್ಕಳು ಜನಿಸಿ
ತುರ್ವಸು- ಯದು ಎಂಬ ಹೆಸರವರಿಗಿರಿಸಿ
ಪುರು ಅನುದೃಹು ದೃಹ್ಯು ಮೂವರಾಗಿ
ಜನಿಸಿದರು ಶರ್ಮಿಷ್ಠೆ ಸುತರು ತಾವಾಗಿ

ಯಯಾತಿಯಾ ಗುಟ್ಟು ದೇವಯಾನಿಯ ಸಿಟ್ಟು
ದೈತ್ಯ ಗುರು ಶುಕ್ರನಿಗೆ ತಿಳಿದುಬಿಟ್ಟು
ಯೌವನವು ಕಳೆಯುವಾ ಶಾಪವನು ತಾ ಕೊಟ್ಟು
ಯಯಾತಿಗರುಹಿದರು ಆಸೆಯನು ಮೆಟ್ಟು

ಶರ್ಮಿಷ್ಠೆಯಾ ಸೆಳೆತ ಕಾಮ ದಾಹದ ತುಡಿತ
ತಾಳಲಾರದೆ ದೊರೆಯು ಭಿಕ್ಷೆ ಯಾಚಿಸುತ
ಬೇಡಿದನು ಪುತ್ರರಲಿ ಯೌವ್ವನದ ದಾನ
ಮರೆಯುತಲಿ ತನ್ನ ನಿಜ ಸ್ಥಾನ ಮಾನ

ಪುತ್ರರತ್ನಗಳೈದು ಯಯಾತಿಗಿರಲು
ಆಯು ದಾನವ ನೀಡೆ ಯಾರು ಬರದಿರಲು
ಬೇಡಿದನು ಯಯಾತಿ ಕೊನೆಯ ಮಗನನ್ನು
ಪಿತೃ ಪೂಜಕ ಪುತ್ರ ವೀರ ಪುರುವನ್ನು

ತಂದೆಯಾಸೆಗೆ ಅಂದು ಸ್ಪಂದಿಸಿದ ಸುತನು
ಸಂತಸದಿ ನೀಡಿದನು ಅರ್ಧಾಯುವನ್ನು
ಯಯಾತಿ ಗರ್ವದಲಿ ಅಪ್ಪಿ ಮಗನನ್ನು
ನಿಯತಿ ಮಾಡಿದನವಗೆ ತನ ರಾಜ್ಯವನ್ನು

ಯದುವಿನಾ ಸಂತತಿಯೆ ಮುಂದೆ ಯಾದವರು
ಧರ್ಮ ರಕ್ಷಕ ದೇವ ಕೃಷ್ಣ ಕುಲದವರು
ತುರ್ವಸುವಿನಿಂ ಯವನ ದೃಹ್ಯು ನಿಂ ತ್ವಿಪ್ರರು
ಅನುದೃಹುವಿನಿಂದಾಗಿ ಮ್ಲೇಚ್ಚ್ಹರುದಿಸಿದರು.

ಚಂದ್ರವಂಶದ ರಾಜ ತಾನಾಗಿ ಪುರುವು
ಪಡೆಯುತಲಿ ಕೌಶಲ್ಯಳೆಂಬಾಕೆ ಒಲವು
ಮನುಸ್ಯು ಎಂದೆಂಬ ಮಗನನ್ನು ಹಡೆದು
ರಾಜ್ಯವನು ಒಪ್ಪಿಸುತ ಅರಣ್ಯಕ್ಕೆ ನಡೆದು

ಹಲವು ರಾಣಿಯರಿಂದ ಬಲು ಮಕ್ಕಳ ಪಡೆದು
ರಾಜ್ಯವಾಳಿದ ತಾನು ಮನುಸ್ಯು ಮೆರೆದು
ತನ್ನ ಶೋಡಶ ಪುತ್ರ ನಿಲೀಲಗೆಂದು
ಪಟ್ಟವನು ಕಟ್ಟಿ ತಾ ತೆರೆಮರೆಗೆ ನಿಂದು

ನಿಲೀಲನಾ ಪತ್ನಿ ರತಾಂಧರಿಯೆಂದು
ಇವರ ಪುತ್ರನೆ ಮುಂದೆ ದುಶ್ಯಂತನೆಂದು
ವನ ವಿಹಾರದೊಳಿರಲು ಶಕುಂತಲೆಯ ಕಂಡು
ವರಿಸಿದನು ರೂಪಕ್ಕೆ ಮರುಳಾಗಿ ನಿಂದು

ಇವರೀರ್ವರಾ ಕಥೆಯ ತಿಳಿಯದವರಾರು
ಕಾಳಿದಾಸನ ಕಾವ್ಯ ಪಾತ್ರಧಾರಕರು
ಇವರ ಪುತ್ರನೆ ಮುಂದೆ ಭರತನೆಂದೆಂದು
ಭರತವರ್ಷಕೆ ನಾಂದಿ ಹಾಡಿದನು ಬಂದು

ಭರತನಾ ಶೌರ್ಯ ಸಾಹಸಗಳಸಮ
ಸರ್ವದಮನ ಎಂಬುದೆ ಇವನುಪನಾಮ
ಆಸೇತುವಿನಿಂದಾದಿ ಹಿಮಾಲಯದವರೆಗೆ
ಭರತಖಂಡವ ತಂದ ತನ್ನಧಿಪತ್ಯದೊಳಗೆ

ಸರ್ವಸೇನನ ಪುತ್ರಿ ಸುನಂದೆಯಿಂದ
ಭರತನಾ ಮಗನಾಗಿ ಭೂಮನ್ಯು ಬಂದ
ಸುವರ್ಣಳೆಂದೆಂಬ ತರುಣಿಯನು ವರಿಸಿ
ಸುಹೋತ್ರನೆಂದೆಂಬ ಕುಮಾರನು ಜನಿಸಿ

ಜಯಂತಿಯನು ವರಿಸಿ ಸುಹೋತ್ರ ಮುಂದೆ
ತಾನಾದ ಹಸ್ತಿ ಎಂಬೀ ಕುಮಾರನ ತಂದೆ
ಹಸ್ತಿನಾಪುರವೆಂಬ ನಗರವನು ಇವ ಕಟ್ಟಿ
ಚಕ್ರಾಧಿಪತ್ಯವನು ಮೆರೆಸಿದನು ಮೆಟ್ಟಿ

ವಿಕ್ರಾಂಜ ಹಸ್ತಿಯಾ ಮಗನಾಗಿ ಬರಲು
ಅಜಮೀಢನೆಂದೆಂಬ ಪುತ್ರ ಇವಗಿರಲು
ಅಜಮೀಢ ಹಲವಾರು ರಾಣಿಯರ ಗಂಡ
ಎರಡು ಸಾವಿರ ಪುತ್ರ ರತ್ನಗಳ ತಂದ

ಎರಡು ಸಾವಿರ ರಾಜ ಕುವರರಾ ನಡುವೆ
ಇರುಷನೆಂಬೊಬ್ಬಾತ ಶೌರ್ಯವನು ಮೆರೆಯೆ
ಸಂವರಣ ಇವನ ಮಗ ಮುಂದಿನ ದೊರೆಯೆ
ಕುರುವಂಶದುದಯಕ್ಕೆ ಮುನ್ನುಡಿಯ ಬರೆಯೆ

ಸೂರ್ಯನಿಗೆ ಛಾಯೆಯಲಿ ಜನಿಸಿದಾ ಮಗಳು
ತಪತಿ ಎಂದೆಂಬ ಚೆಲು ಹೆಸರಿನವಳು
ಸಂವರಣನೊಡಗೂಡಿ ಬಾಳ್ವೆ ನಡೆಸಿದಳು
ಕುರು ಎಂಬೊ ಧೀಮಂತ ಮಗನ ಹಡೆದವಳು

ಕುರುವಿನಾ ವಂಶವನು ಮುಂದಕುದ್ಧರಿಸೆ
ವಿದುರಥ ಎಂದೆಂಬ ಕುವರನವತರಿಸೆ
ಅಮೃತ ಎಂದೆಂಬ ತರುಣಿಯನು ವರಿಸಿ
ಚಂದ್ರ- ಕುರು ವಂಶವನು ತಾ ಮುಂದುವರಿಸಿ

ವಿದುರಥನ ಮುಂದೆರೆಡು ತಲೆಮಾರು ಕಳೆದು
ಪ್ರತೀಪನೆಂಬುವನು ಅಧಿಕಾರ ಪಡೆದು
ಸುನಂದೆ ಎನ್ನುವಾ ಸಾಧ್ವಿಯಾ ಕೈಹಿಡಿದು
ದೇವಾಪಿ, ಬ್ಬಾಹ್ಲೀಕ, ಶಂತನುವ ಹಡೆದು

ದೇವಾಪಿ ಎಂಬುವನು ಹಿರಿಯ ಮಗನಾಗೆ
ವೇದ ವಿದ್ಯಾಭ್ಯಾಸದಲಿ ಹಗಲಿರುಳು ಮುಳುಗೆ
ರಾಜನಾಗುವ ಎಲ್ಲ ಅರ್ಹತೆಗಳಿರಲು
ಕುಷ್ಠ ರೋಗದಿ ನೊಂದು ಕಾಡಸೇರಿರಲು

ತನ್ನ ತಾಯಿಯ ಪಿತನ ಆಪೇಕ್ಷೆಯಂತೆ
ಬಾಹ್ಲೀಕ ತೆರಳಿದನವರ ದತ್ತು ಮಗನಂತೆ
ಬಾಹ್ಲೀಕ ದೇಶಕ್ಕೆ ರಾಜ ತಾನಾಗಿ
ದೂರದಲಿ ತಾನುಳಿದ ತಟಸ್ಠನಾಗಿ

ಮೂರು ಮಕ್ಕಳ ನಡುವೆ ಒಬ್ಬನುಳಿದವನು
ಶಂತನು ತಾನೆಂಬ ಹೆಸರಿಗನ್ವರ್ಥಕನು
ಶೌರ್ಯ ಸಾಹಸ ಶಾಂತಿ ಮೇಳೈಸಿದವನು
ಸ್ತ್ರೀ ವ್ಯಾಮೊಹದಲಿ ಮತಿಗೇಡಿಯಾದವನು

ಗಮ್ಗೆಯನು ಕಂಡಲ್ಲಿ ವ್ಯಾಮೋಹಗೊಂಡು
ಅವಳ ಕಟ್ಟಳೆಗಳಿಗೆ ತನ್ನೊಡ್ಡಿಕೊಂಡು
ಶಿಶುಹತ್ಯ ಸಹಿಸದೆಯೆ ವ್ಯಾಕುಲದಿ ತಾನೊಂದು
ಗಾಂಗೇಯನೊಬ್ಬನನೆ ಕೊನೆಗುಳಿಸಿಕೊಂಡು

ಗಂಗೆಯಾ ವಿರಹದಲಿ ತಾನೊಂದು ಬೆಂದು
ಕೊನೆಗೊಮ್ಮೆ ಯಮುನೆಯಲಿ ಸತ್ಯವತಿಯನೆ ಕಂಡು
ರೂಪ ಲಾವಣ್ಯಕ್ಕೆ ಬಲುಮೋಹಗೊಂಡು
ದಾಯಾದಿ ಕಲಹಕೆ ಬರೆದ ಮುನ್ನುಡಿಯಂದು

ಭರತ ಕಟ್ಟಿದ ಮಹಾಭಾರತದ ಕದನ
ಅರ್ಹತೆಯ ಕಡೆಗಣನೆಯಿಂದಾಗೊ ಪತನ
ಮತಿಗೇಡಿ ನಿರ್ಧಾರದಿಂದಾಗೊ ವ್ಯಸನ
ತಿಳಿಯುವುದು ಮಾಡಿದರೆ ಭಾರತದ ಪಠಣ

ಹಿರಿಯ ನಾಗನ ನಂಜು ಕಿರಿಯ ನಾಗನ ಪಾಲು
ತಂದೆ ಮಾಡಿದ ಪಾಪ ಕುಲದ ಪಾಲು
ವೇದವಾಣಿಯ ಸಮಕೆ ಗಾದೆ ನುಡಿ ಇಲ್ಲಿಹುದು
ಶಂತನು ಕಥೆಯೊಡನೆ ಕವಿತೆ ಮುಗಿಯುವುದು.

ಡಾ.ಸುದರ್ಶನ ಗುರುರಾಜರಾವ್

2 thoughts on “ಚಂದ್ರ ವಂಶ

Leave a comment