ಪಿ.ಬಿ.ಶ್ರೀನಿವಾಸ್: ಭಾವ ಪೂರ್ಣಗಾಯಕನೊಂದಿಗೆ ಒಂದು ಭಾವಯಾನ.
ಪಿ.ಬಿ.ಎಸ್ ಎನೆ ಕುಣಿದಾಡುವುದೆನ್ನೆದೆ
ಪಿ.ಬಿ.ಎಸ್ ಎನೆ ಕಿವಿ ನಿಮಿರಿವುದು
ಕರಿ ಮುಗಿಲನ್ನು ಕಾಣುವ ನವಿಲೊಲು
ಫ್ಹಕ್ಕನೆ ಮನ ಮೈ ಮರೆಯುವುದು (ಕು.ವೆಂ.ಪು ಅವರ ಕ್ಷಮೆ ಕೋರಿ)
ಈ ಮಾತುಗಳು ಸುಮ್ಮನೆ ಹೇಳಿದ್ದಲ್ಲ. ಎದೆಯಾಂತರಾಳದಲಿ ಪುಟಿವ ಕಾರಂಜಿಯಲಿ, ಹೃದಯ ವೀಣೆ ಮಿಡಿದು ಸಿಡಿದ ಮಾತುಗಳು – ನನ್ನ ಮಟ್ಟಿಗೆ; ನನ್ನಂಥ ಸಾವಿರಾರು ಪಿ.ಬಿ.ಎಸ್ ಅಭಿಮಾನಿಗಳ ಮಟ್ಟಿಗೆ.
ಪಿ.ಬಿ.ಎಸ್ ನಮ್ಮನ್ನು ಅಗಲಿ ಒಂದು ವರ್ಷ ಕಳೆಯುತ್ತಿದೆ. ಕಳೆದ ವರ್ಷ ಅಮೇರಿಕದ ಹಲವು ಕನ್ನಡಪರ ಸಂಘಟನೆಗಳು ಅವರಿಗೆ ಭಾವಪೂರ್ಣ ಶ್ರಧ್ಧಾಂಜಲಿ ಅರ್ಪಿಸಿದವು. ಆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗಾಯಕನನ್ನು ನೆನಪಿಸಿಕೊಂಡ ಪರಿ ಹೃದಯ ತುಂಬಿಸುವಂಥ ಕೆಲಸ. ಈ ವರ್ಷ ಕೂಡ ಹಾಗೆ ನಡೆಯಲೆಂದು ಆಶಿಸುತ್ತೇನೆ.
ಪ್ರತಿವಾದಿ ಭಯಂಕರ ಎಂಬುದು ಅವರ ಹೆಸರಿನ ಜೊತೆಗಿದ್ದರೂ ರೂಪ, ಗುಣ,ನಡತೆ,ಹಾಗು ಗಾಯನದಲ್ಲಿ ಸೌಜನ್ಯ ಸಜ್ಜನಿಕೆಗಳನ್ನು ಗಾಢವಾಗಿ ಪ್ರತಿಫಲಿಸಿದಂತಹ ವ್ಯಕ್ತಿತ್ವ ಪಿ.ಬಿ.ಎಸ್ ಅವರದ್ದು. ಭಯಂಕರ ಎನ್ನುವ ಶಬ್ದಕ್ಕೆ ಭಯಂಕರನೆನ್ನಿಸುವಂತಿತ್ತು ಅವರ ನಡವಳಿಕೆ. ಪಿ.ಬಿ.ಎಸ್ ಎಂದರೆ ಪ್ರೇಯರ್ ಬಿಲೇವರ್ ಶ್ರೀನಿವಾಸ್ ಅಥವ ಪ್ಲೇ ಬ್ಯಾಕ್ ಸಿಂಗರ್ ಶ್ರೀನಿವಾಸ್ ಎಂದೂ ಅನ್ವರ್ಥಕವಾಗಿ ಅವರನ್ನು ಉದ್ಧರಿಸುವುದುಂಟು. ಪಿ.ಬಿ.ಎಸ್ ಹಾಡಿದ ಶ್ಲೋಕಗಳನ್ನು ಕೇಳಿದವರಿಗೆ ಈ ಮಾತು ೧೦೦ ಕ್ಕೆ ನೂರು ಸತ್ಯ ಎನ್ನಿಸದಿರದು.
ಪಿ.ಬಿ.ಎಸ್ ಜೊತೆಗಿನ ನನ್ನ ಭಾವಯಾನ”ಪ್ರೇಮದ ಕಾಣಿಕೆ’ ಚಿತ್ರದಿಂದ ಪ್ರಾರಂಭವಾಯ್ತೆಂದು ನನ್ನ ಭಾವನೆ. ನನಗಾಗ ೬ ಅಥವ ೭ ವರ್ಷ ಇರಬಹುದು. ನನ್ನ ತಾಯಿ ಜೊತೆಗೆ ನೋಡಿದ ಆ ಸಿನಿಮಾದಲ್ಲಿ ‘ಚಿನ್ನ ಎಂದು ನಗುತಿರು‘ ಒಂದು ಹಾಡನ್ನು ಪಿ.ಬಿ.ಎಸ್ ಹಾಡಿ ಉಳಿದೆಲ್ಲವನ್ನು ಡಾ. ರಾಜ್ ಹಾಡಿದ್ದರು. ಎಲ್ಲ ಚೆನ್ನಗಿದ್ದರೂ ನಾನು ಗುನುಗುತ್ತಿದ್ದುದು ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು ಎಂಬ ಪಿ.ಬಿ.ಎಸ್ ಹಾಡೆ. ನನ್ನ ತಾಯಿ ಅದನ್ನು ಗಮನಿಸಿದಳೆಂದು ಕಾಣುತ್ತದೆ. ಅದಾದ ಕೆಲ ದಿನಗಳಾ ನಂತರ ಆಕಾಶವಾಣಿಯಲ್ಲಿ ಆ ಹಾಡು ಮತ್ತೆ ಬಂದಾಗ ಕರೆದು ಕೇಳಿಸಿ ಅದು ಪಿ.ಬಿ.ಎಸ್ ಅವರ ಧ್ವನಿ ಎಂದು ಪರಿಚಯಿಸಿದಳು. ನಾನು ಒಪ್ಪದೆ ಅದು ರಾಜ್ಕುಮಾರ್ ಎಂದೇ ವಾದಿಸಿದೆ. ಆಗ ಎಸ್.ಪಿ. ಬಾಲು ಹಾಗು ಜೇಸುದಾಸರ ಹಾಡುಗಳನ್ನು ಕೇಳಿಸಿ ಹಿನ್ನೆಲೆ ಗಾಯನ ಎಂದರೆ ಏನು, ಆ ಎಲ್ಲ ಧ್ವನಿ ಗಳಲ್ಲಿ ಇರುವ ವ್ಯತ್ಯಾಸ, ರಾಜ್ ಹಾಗೂ ಪಿ.ಬಿ.ಎಸ್ ಹಾಡುವಾಗ ಪದಗಳನ್ನು ಬಳಸುವ ಪರಿ ಹಾಗು ಭಾವಗಳನ್ನು ತುಂಬುವುದರಲ್ಲಿನ ಅಂತರಗಳನ್ನು ತಿಳಿಸಿದಳು. ಅಲ್ಲಿ ನನ್ನ ಭಾವತಂತಿ ಮೀಟಬಲ್ಲ ಧ್ವನಿಯನ್ನು ಆಯ್ಕೆ ಮಾಡಿಕೊಂಡೆ. ಅದು ಪಿ.ಬಿ.ಎಸ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆ. ನನ್ನ ತಾಯಿ ನನಗೆ ಕೊಟ್ಟ ಪ್ರೇಮದ ಕಾಣಿಕೆ ಪಿ.ಬಿ.ಎಸ್. ನನ್ನ ತಾಯಿ ಕೂಡ ಅವರ ಅಭಿಮಾನಿಯೆಂದು ಆನಂತರದಲ್ಲಿ ತಿಳಿಯಿತು.
ಅಲ್ಲಿಂದ ಮುಂದೆ ಪಿ.ಬಿ.ಎಸ್ ಅವರ ಹಾಡುಗಳನ್ನು ತಲ್ಲೀನನಾಗಿ ಕೇಳುವುದು, ಅವಕ್ಕಾಗಿ ಹುಡುಕುವುದು ನನಗೆ ಹವ್ಯಾಸವಾಯಿತು. ಅದು ಒಂದು ಗುಂಗಿನ ರೂಪದಲ್ಲಿ ಇಂದಿಗೂ ನನ್ನ ಸಂಗಾತಿ.
ನಾನು ಪಿ.ಬಿ.ಎಸ್ ಅವರ ಅಭಿಮಾನಿಯಾಗಿ ರೂಪುಗೊಳ್ಳುವ ಸಮಯಕ್ಕೆ (೧೯೭೭-೭೮) ಅವರು ಹಾಡುವುದು ಕಡಿಮೆಯಾಗುತ್ತಿತ್ತು. ಡಾ. ರಾಜ್ ತಾವೇ ಹಾಡಲು ಪ್ರಾರಂಭಿಸಿದ್ದರು. ಆದರೂ ಅವರ ಹಳೆಯ ಹಾಡುಗಳು ರೇಡಿಯೋ ದಲ್ಲಿ ಪ್ರಸಾರವಾಗುತ್ತಿದ್ದವು. ಓಮ್ಮೆ ತ್ರಿಮೂರ್ತಿ ಚಿತ್ರಕ್ಕೆ ಹೋಗಿದ್ದಾಗ ಅದರಲ್ಲಿ ಪಿ.ಬಿ.ಎಸ್ ಅವರ ಯಾವ ಹಾಡೂ ಇಲ್ಲದ್ದು ನೋಡಿ ಕಸಿವಿಸಿಯಾಗಿ ನಮ್ಮಮ್ಮನನ್ನು ಕೇಳಿದೆ. ಪಿ.ಬಿ.ಎಸ್ ಅವರ ಬೇಡಿಕೆ ರಾಜ್ ಅವರ ಹಾಡುಗಳಿಲ್ಲದೆ ಕುಸಿದಿದೆಯೆಂದೂ, ಅವರ ಕಂಠದಲ್ಲಿ ಮುಂಚಿನ ಬಿಗಿ ಇಲ್ಲವೆಂಬ ವದಂತಿ ಇದೆಯೆಂದೂ ಹೇಳಿದಳು. ಆಗ ನನಗಾದ ಖೇದ ಅಷ್ಟಿಷ್ಟಲ್ಲ. ಮುಂದೆ ಬೆಟ್ಟದ ಹೂವು, ಮರೆಯದ ಹಾಡು, ಪಡುವಾರಹಳ್ಳಿ ಪಾಂಡವರು, ಕೆರಳಿದಸಿಂಹ, ಹೇಮಾವತಿ, ಇತ್ಯಾದಿ ಚಿತ್ರಗಳಲ್ಲಿ ಅದ್ಭುತವಾಗಿಯೇ ಹಾಡಿದ್ದರು. ಇನ್ನೂ ತುಂಬು ಕಂಠದಲ್ಲಿ ಹಾಡುವಾಗ ಧ್ವನಿ ಹೇಗೆ ಬಿಗಿಯಿಲ್ಲದಿರಲು ಸಾಧ್ಯ ಎಂಬ ಪ್ರಶ್ನೆ ನನ್ನಮನದಲ್ಲಿ ಹಲವು ಬಾರಿ ಎದ್ದದ್ದುಂಟು. ವದಂತಿ, ಪುಕಾರು, ದೋಷಾರೋಪಣೆಗಳು ಲೀಲಾಜಾಲವಾಗಿ ಹರಿಯುವ ಗಾಂಧಿನಗರದಲ್ಲಿ ಸಜ್ಜನ ಶ್ರೀನಿವಾಸ ಕೊಚ್ಚಿಹೋದದ್ದರಲ್ಲಿ ಆಶ್ಚರ್ಯವಿಲ್ಲವೆಂದು ಈಗ ಅನಿಸುವುದು.
೧೯೫೦ ರ ಮಧ್ಯದಲ್ಲಿ ಹಾಡಲು ಪ್ರಾರಂಭಿಸಿದ ಪಿ.ಬಿ.ಎಸ್ ಅವರ ಮಧುರ ಕಂಠಕ್ಕೆ ಅನುಗುಣವಾಗಿ ರಾಗಸಂಯೋಜಿಸುವ ಗೀತನಿರ್ದೇಶಕರು ಸಿಕ್ಕದ್ದು ನಮ್ಮೆಲ್ಲರ ಅದೃಷ್ಟ. ಸಾಹಿತ್ಯದಲ್ಲೂ ಸಂಗೀತದಲ್ಲೂ ಶ್ರೀಮಂತವಾದ ಹಾಡುಗಳು ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಮೂಡಿಬಂದವು. ಅದರಲ್ಲಿ ಕನ್ನಡ ಮತ್ತು ತಮಿಳಿನಲ್ಲಿ ಹೆಚ್ಚು.ಅವರ ರಾಗಗಳಿಗೆ ಧ್ವನಿಯಾಗಿ,ಕವಿತೆಗಳಿಗೆ ಭಾವವಾಗಿ, ಜೀವತುಂಬಿ ಮಾಧುರ್ಯ ಎನ್ನುವ ಪದಕ್ಕೆ ಸಾತ್ವಿಕ ಅರ್ಥವನ್ನು ನೀಡಿದ ಕಂಠ ಪಿ.ಬಿ.ಎಸ್ ಅವರದ್ದು. ಭಕ್ತಿ ಗೀತೆ,ಶ್ಲೋಕಮಾಲೆ,ದೇಶಭಕ್ತಿ ಗೀತೆ, ಕನ್ನಡವ ಕುರಿತದ್ದು,ತಾಯಿಯ,ಅಮ್ಮನ ಕುರಿತಾದ ಹಾಡುಗಳು ಉಳಿದೆಲ್ಲ ನವರಸಗಳ ಅಭಿವ್ಯಕ್ತಿ ಇವರ ಕಂಠದಿಂದ ಹೊರಹೊಮ್ಮಿ ರಸಿಕರನ್ನು ಮಂತ್ರಮುಗ್ಧಗೊಳಿಸಿದ್ದು ಇತಿಹಾಸ. ಬರೀ ಸಂಗೀತಕ್ಕಷ್ಟೆ ಸೀಮಿತಗೊಳಿಸದೆ, ಹಾಡುಗಳಿಗೆ ಧಾರ್ಮಿಕ, ಸಾತ್ವಿಕ,ಸಾಂಸ್ಕೃತಿಕ, ತಾತ್ವಿಕ ಮೆರುಗನ್ನು ನೀಡಿ ಕಾಲಾತೀತವಾದ ಸುಂದರ ಹಾಡುಗಳ ಸರದಾರನಾಗಿದ್ದು ನಮ್ಮೆಲ್ಲರ ಭಾಗ್ಯವೇ ಸರಿ.
ಎಲ್ಲ ನಾಯಕ ನಟರಿಗೆ ಹಾಡಿದರೂ, ರಾಜ್ ಹಾಗೂ ಜೆಮಿನಿ ಗಣೆಶನ್ ಅವರ ಶಾರೀರವೆಂದೇ ಗುರುತಿಸಿಕೊಂಡರು ಪಿ.ಬಿ.ಎಸ್. ಈ ಮೇರು ನಟರ ಶಾರೀರವಾದದ್ದು ಒಂದು ವರವೂ ಶಾಪವೂ ಆದದ್ದು ವಿಪರ್ಯಾಸ.ತಮಿಳಿನ ಕಥೆ ನನಗೆ ತಿಳಿಯದು ಆದರೆ ಕನ್ನಡಿಗರ ಮಟ್ಟಿಗೆ ಹೇಳುವುದಾದರೆ ಇವರ ಹಾಡುಗಳನ್ನು ರಾಜ್ ಅವರೇ ಹಾಡಿರುವುದೆಂದು ನಂಬಿದವರು ಬಹಳ. ನನ್ನ ಹೆಂಡತಿ ಕೂಡ ಈ ಗುಂಪಿನವಳೆ. ಡಾ. ರಾಜ್ ರಂತೆ ಶಕ್ತಿಯುತವಲ್ಲ,ಎಸ್.ಪಿ.ಬಾಲು ವಿನಂತೆ ಬಹುರೂಪಿ ಕಂಠವಲ್ಲ,ಜೇಸುದಾಸರಂತೆ ಸಂಗೀತದ ಆಳಕ್ಕಿಳಿದು ಪಳಗಿದ ಕಂಠವಲ್ಲ. ಆದರೂ ಪದಗಳ ಅರ್ಥವ್ಯಾಪ್ತಿ ಅರಿತು,ಸಾಂದರ್ಭಿಕ ಹಾಗೂ ಸಾಹಿತ್ಯಿಕ ಭಾವನೆಗಳ ಆಳಕ್ಕಿಳಿದು ಮೈಗೂಡಿಸಿಕೊಂಡು ಅವುಗಳನ್ನು ತಮ್ಮ ಸುಂದರ ಕಂಠದಿಂದ ಹೊರಹೊಮ್ಮಿಸಿದ್ದು ಅಪ್ರತಿಮ,ಅದ್ವಿತೀಯ. ಇದೇ ಕಾರಣಕ್ಕೆ,ಇಂದಿಗೂ ಪಿ.ಬಿ.ಎಸ್ ಅವರನ್ನು ಅನುಕರಿಸಬಲ್ಲ ಹಾಡುಗಾರರು ವಿರಳ ಅಥವ ಇಲ್ಲವೆ ಇಲ್ಲ. ಅವರಿಗೆ ಅವರೇ ಸಾಟಿ. ತಮಿಳಿನ ಒಂದು ಪ್ರಸಾರವಾಹಿನಿಯ ಸನ್ಮಾನ ಸಮಾರಂಭದಲ್ಲಿ ಈ ಮಾತನ್ನು ಹೇಳಲಾಯಿತು. ಎಲ್ಲ ಮೇರು ಗಾಯಕರನ್ನು ಅನುಕರಿಸಬಹುದು ಆದರೆ ಪಿ.ಬಿ.ಎಸ್ ಅವರ ಅನುಕರಣೆ ಅಸಾಧ್ಯ ಎಂದು.
ನಾನು ಕೂಡಾ ಅವರ ಹಾಡುಗಳನ್ನು ಹಾಡಲು ಹೋಗಿ ಸೋತಿದ್ದೇ ಹೆಚ್ಚು. ಸ್ಪರ್ಧೆಗಳಲ್ಲಿ ಅಂತಾಕ್ಷರಿಗಳಲ್ಲಿ ಅವರ ಹಾಡುಗಳನ್ನೇ ಹಾಡಲು ಹೋಗಿ, ತಪ್ಪಾಗಿ ಸೋತಿದ್ದುಂಟು.ಆಗೆಲ್ಲ ಬಹುಮಾನ ಬರದ ಬಗ್ಗೆ ಬೇಸರ ಅಗುತ್ತಿರಲಿಲ್ಲ.ಪಿ.ಬಿ.ಎಸ್ ಅವರ ಇನ್ನಷ್ಟು ಹಾಡುಗಳನ್ನು ಸಭಿಕರೆದುರಿಗೆ ಹಾಡಲಾಗಲಿಲ್ಲವೆಂದೇ ನನಗೆ ಖೇದವೆನಿಸುತಿತ್ತು.
ಧ್ವನಿ ಮುದ್ರಣದ ತಾಂತ್ರಿಕ ಮಟ್ಟ ಉತ್ತಮವಾಗಿರದಿದ್ದ ಕಾಲದಲ್ಲಿ ಹಾಡಿದ ಅವರ ಹಲವು ಗೀತೆಗಳು ಇಂದು ನಷ್ಟವಾಗಿವೆ ಇಲ್ಲವೆ ಚೆನ್ನಾಗಿ ಕೇಳಿಸವು. ಇದೂ ಕೂಡ ಅವರ ಪ್ರತಿಭೆಗೆ ಆದ ಅನ್ಯಾಯ. ಅದರಲ್ಲಿ ಚೆನ್ನಾಗಿ ಉಳಿದಿರುವಂಥ ಹಾಡುಗಳನ್ನು ಕೇಳುವುದು ಒಂದು ಅವಿಸ್ಮರಣೀಯ ಅನುಭವ. ಎರಡು ಕನಸು,ಗಂಧದ ಗುಡಿ,ಕಸ್ತೂರಿ ನಿವಾಸ,ದಾರಿ ತಪ್ಪಿದ ಮಗ, ರಾಜಾ ನನ್ನ ರಾಜ, ಕುಲಗೌರವ,ಭಕ್ತ ಕುಂಬಾರ, ಹೇಮಾವತಿ, ಶರಪಂಜರ, ಬೆಳ್ಳಿಮೋಡ,ದೇವರ ದುಡ್ಡು,ದೇವರು ಕೊಟ್ಟ ತಂಗಿ, ಭಾಗ್ಯ ಜ್ಯೋತಿ,ಕಳ್ಳ ಕುಳ್ಳ, ಭೂತಯ್ಯನ ಮಗ ಅಯ್ಯು,ಭಲೆ ಭಾಸ್ಕರ್,ಮನ ಮೆಚ್ಚಿದ ಮಡದಿ, ಹೃದಯ ಸಂಗಮ ಹೀಗೆ ಹಲವು ಚಿತ್ರಗಳನ್ನು ಹೆಸರಿಸಬಹುದು.ಪಿ.ಬಿ.ಎಸ್ ಅವರಿಗೆ ಅವಕಾಶಗಳ ಬಾಗಿಲನ್ನು ತೆರೆದ ಭಕ್ತ ಕನಕದಾಸ ದ ಹಾಡುಗಳು ಮರೆತವರಿಲ್ಲ ಆದರೆ ಧ್ವನಿ ಮುದ್ರಣದ ಗುಣಮಟ್ಟ ಕುಂದಿರುವುದು ವಿಷಾದಕರ.೮೦ ರ ದಶಕದಲ್ಲಿಯೂ ಹಲವು ಬಾರಿ ಅವಕಾಶ ಸಿಕ್ಕರೆ ಈಗಲೂ ಹಾಡಬಲ್ಲೆ ಎಂದು ಹೇಳಿದ್ದೂ ಕೂಡ ಯಾರ ಕಿವಿಗೂ ಬೀಳಲಿಲ್ಲ. ಧ್ವನಿ ಮುದ್ರಣದ ಗುಣಮಟ್ಟ,ತಾಂತ್ರಿಕ ಸೌಲಭ್ಯ ಗಟ್ಟಿಯಾಗುತ್ತಿದ್ದ ಸಮಯದಲ್ಲಿ ಅವರ ಅವಕಾಶಗಳು ಬತ್ತಿದ್ದು ಒಂದು ಖೇದಕರ ಸಂಗತಿ. ಒಬ್ಬ ಅಪ್ರತಿಮ ಗಾಯಕನ ಪ್ರತಿಭೆ ದುಡಿಸಿಕೊಳ್ಳುವಲ್ಲಿ ಚಿತ್ರರಂಗ, ಅದರಲ್ಲೂ ಕನ್ನಡ ಚಿತ್ರರಂಗ ಸೋತಿತು.
ಎಲ್ಲ ಬಗೆಯ ಹಾಡುಗಳನ್ನು ಸೇರಿಸಿದರೆ ಪಿ.ಬಿ.ಎಸ್ ಒಟ್ಟು ೩೦೦೦ ಹಾಡುಗಳನ್ನು ಹಾಡಿರಬಹುದೆಂದು ಅಂದಾಜು. ಉಳಿದ ಗಾಯಕರಿಗೆ ಹೋಲಿಸಿದರೆ ಇದು ಕಡಿಮೆಯೆ. ಆದರೆ ‘ಮಾಸ್‘ ಅಲ್ಲದಿದ್ದರೂ ‘ಕ್ಲಾಸ್‘ ಹಾಡುಗಳ ಒಡೆಯ ನಮ್ಮ ಪಿ.ಬಿ.ಎಸ್ . ಅವರ ಬಹುತೇಕ ಹಾಡುಗಳು ಇಂದಿಗೂ ಜನಪ್ರಿಯ ಹಾಗೂ ಬಹುಶ್ರುತ. ಇವರ ಹಲವಾರು ಚಂದಾದ ಹಾಡುಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಒಂದೇ ರೂಪ ಒಂದೇ ಗುಣ ದ ‘ಯಾರ ಎದೆಯ ತಂತಿ ಮೀಟಿ ಯಾರ ಸೋಲಿಸಿ‘, ಅಳಿಯ ಗಿಳೆಯ ದ ಮಣ್ಣಿಂದ ಕಾಯ ಮಣ್ನಿಂದ, ಕನ್ನಿಕ ಪರಮೆಶ್ವರಿ ಯ ‘ನಗೆ ಮೊಗದೆ ನಲಿವ ನಲ್ಲೆ ನಿನಗೆಣೆಯ ಕಾಣೆನಲ್ಲೆ‘ (ಎಸ್.ಕೆ.ಕರೀಂಖಾನ್ ರಚನೆ), ಇನ್ನೂ ಹತ್ತು ಹಲವು ಹಾಡುಗಳು ಇಂದು ಕೇಳುತ್ತಿಲ್ಲ.ಅವುಗಳನ್ನು ಶೋಧಿಸಿ,ಸಂಸ್ಕರಿಸಿ ಸಹೃದಯರಿಗೆ,ಮುಂದಿನ ಪೀಳಿಗೆಗೆ ಪುನರ್ದತ್ತ ಗೊಳಿಸುವ ಹೊಣೆ ನಮ್ಮದಿದೆ.ಈ ನಿಟ್ಟಿನಲ್ಲಿ ಕೈಜೋಡಿಸಲು ನಾನು ಸದಾ ಸಿದ್ಧ.
ವೃತ್ತ ಪತ್ರಿಕೆಗಳಲ್ಲಿ, ಆಕಾಶವಾಣಿಯಲ್ಲಿ ಅವರ ಸಂದರ್ಶನಗಳು,ಲೇಖನಗಳು ಬಂದಾಗ ತಪ್ಪದೆ ಓದುವುದು ಅವುಗಳನ್ನು ಶೇಖರಿಸುವುದು ನನ್ನ ಕೆಲಸವಾಗಿತ್ತು. ಆದರೆ ಪ್ರತಿಬಾರಿಯು ಅದೇ ಚರ್ವಿತ ಚರ್ವಣ. ಹೊಸದೇನೂ ಇರುತ್ತಿರಲಿಲ್ಲ. ೧೯೩೧ ರಲ್ಲಿ ಜನಿಸಿ, ಐವತ್ತರ ದಶಕದಲ್ಲಿ ಹಾಡಲು ಪ್ರಾರಂಭಿಸಿದ ಪಿ.ಬಿ.ಎಸ್, ೧೯೭೫-೭೬ ರ ನಂತರದಲ್ಲಿ ಅವಕಾಶಗಳಿಂದ ವಂಚಿತರಾದಾಗ ಅವರಿಗೆ ೪೫-೪೬ ವಯಸ್ಸಿರಬಹುದು. ಇನ್ನೂ ಹಾಡುವ ಕಸುವು, ಅಭಿಲಾಷೆ ಇದ್ದಾಗ್ಯೂ ಅವಕಾಶ ಇಲ್ಲದಾದಾಗ ಅವರು ಪರಿಸ್ಥಿತಿಯನ್ನು ನಿಭಾಯಿಸಿದ ಬಗೆ, ಅವರನ್ನು ಕಾಡಿದ ಸಮಸ್ಯೆಗಳು, ಅರ್ಥಿಕವಾಗಿ, ಬೌದ್ಧಿಕವಾಗಿ, ಸಂಸಾರವನ್ನು ನಡೆಸಿದ ರೀತಿ,ಅವರಿಗೆ ಸಿಕ್ಕ ಸಹಕಾರ, ಅಸಹಕಾರ,ಪುರಸ್ಕಾರ,ತಿರಸ್ಕಾರಗಳು, ಅವುಗಳನ್ನು ಸ್ವೀಕರಿಸಿದ ಬಗೆ ಇವುಗಳ ಬಗೆಗೆ ಲೇಖನಗಳು ಬರಬೇಕಾಗಿದೆ.ಪಿ.ಬಿ.ಎಸ್ ರಂಥ ಸಾತ್ವಿಕ ಜೀವ ಬದುಕಿನ ಜಂಝಡಗಳನ್ನು ಎದುರಿಸಿದ ರೀತಿ ಮುಂಬರುವ ಕಲಾವಿದರಿಗೆ,ಕಲಾರಸಿಕರಿಗೆ ದಾರಿದೀವಿಗೆಯಾಗುವುದರಲ್ಲಿ ಸಂಶಯವಿಲ್ಲ. ಬರೀ ಚರ್ವಿತ ಚರ್ವಣ ವಿಷಯಗಳನ್ನೇ ಬರೆದು ಓದಿದರೆ ಯಾವ ನ್ಯಾಯ ಒದಗಿಸಿದಂತಾಯಿತು?
ನೂರಾರು ಗೀತೆಗಳನ್ನು ಅದ್ಭ್ಹುತವಾಗಿ ಹಾಡಿದ್ದರೂ, ಜನಪ್ರಿಯತೆಯ ಉತ್ತುಂಗದಲ್ಲಿದ್ದರೂ ಅವರಿಗೆ ಉನ್ನತ ಪ್ರಶಸ್ತಿಗಳು ಬರಲೇ ಇಲ್ಲ. ಸುಮಾರು ಒಂದುವರೆ ದಶಕಗಳ ಕಾಲ ಕನ್ನಡದ ಹಿನ್ನೆಲೆಗಾಯನವನ್ನು ಆಳಿದ ಪಿ.ಬಿ.ಎಸ್ ಗೆ ಕರ್ನಾಟಕ ಸರ್ಕಾರದಿಂದ ಸನ್ಮಾನ ದೊರೆಯಲಿಲ್ಲ. ಥಳುಕು ಬಳುಕಿಗೆ,ವಶೀಲಿ ವರ್ಚಸ್ಸಿಗೆ,ಅಬ್ಬರ ಆರ್ಭಟಗಳಿಗೆ ಮಣೆಹಾಕುವ ಸಂಸ್ಕೃತಿಯ ನಡುವೆ ಪಿ.ಬಿ.ಎಸ್ ಕಳೆದುಹೋದರು.
ನಾನು ವೈದ್ಯಕೀಯ ತರಬೇತಿಯ ಕಡೆ ವರ್ಷದಲ್ಲಿದ್ದೆ. ಒಂದು ಸಂಜೆ ಪಿ.ಬಿ.ಎಸ್ ಅವರ ಸಂದರ್ಶನ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿತ್ತು. ಸಂದರ್ಶನಕಾರ ಕಡೆಯಲ್ಲಿ ಕೇಳಿದ: ನಿಮ್ಮ ಮಕ್ಕಳೂ ನಿಮ್ಮಂತೆ ಹಾಡಬಲ್ಲರೇ? ಪಿ.ಬಿ.ಎಸ್ ಮಾರ್ಮಿಕವಾಗಿ ಹೇಳಿದರು.“ ಹೌದು, ನನ್ನ ಮಕ್ಕಳು ನನ್ನಂತೆ ಹಾಡಬಲ್ಲರು; ಅದರೆ ನಮ್ಮ ವೃತ್ತಿಯಲ್ಲಿ ನಿಶ್ಚಿತತೆ ಇಲ್ಲ ಹಾಗಾಗಿ ಅವರೆಲ್ಲ ಬೇರೆಯೇ ವೃತ್ತಿಯಲ್ಲಿ ತೊಡಗಿದ್ದಾರೆ. ಪ್ರತಿಭೆಯೊಂದೇ ಮಾನದಂಡವಾಗುವ ಕಾಲ ಇದಲ್ಲ“ ಎಂದು. ಪ್ರತಿಭೆಯಿದ್ದೂ ಪುರಸ್ಕಾರಕ್ಕೆ ಬಾಧ್ಯರಾಗದ ನೋವು ಅದರಲ್ಲಿ ಅಡಗಿತ್ತೆಂದು ನನಗಾಗ ಅನಿಸಿತು.
ಸಾಹಿತ್ಯ -ಸಂಗೀತ ಬದುಕಿನ ಬಂಡಿಯ ಗಾಲಿಗಳು,ಬಾಳ ನಾವೆಯ ಹುಟ್ಟುಗಳು,ಜೀವನ ಪಥದಿಕ್ಕೆಲಗಳಲ್ಲಿರುವ ದಾರಿದೀಪಗಳಾದರೆ ಅದರಲ್ಲಿ ಸಂಗೀತದ ಸ್ಥಾನ ನನ್ನ ಪಾಲಿಗೆ ಪಿ.ಬಿ.ಎಸ್ ಗೆ ಮೀಸಲು. ನನ್ನ ವ್ಯಕ್ತಿತ್ವದ ರೂಪಣೆಯಲ್ಲಿ ಅವರ ಪಾತ್ರ ಹಿರಿದು. ನಾನು ಮುಖತಃ ಅವರನ್ನು ಸಂಧಿಸಲು ಸಾಧ್ಯವಾಗಲಿಲ್ಲ ಹೀಗಾಗಿ ನನ್ನದು ಅವರೊಂದಿಗೆ ಭಾವಯಾನವಾಗಿಯೆ ಉಳಿಯಿತು. ಅವರಿಗಿರುವ ’ಕ್ಲಾಸ್’ ಅಭಿಮಾನಿ ಬಳಗದಲ್ಲಿ ನಾನಿದ್ದೇನೆ ಎಂಬುದು ನನಗೆ ಬಹಳ ಸಂತೃಪ್ತಿ ತರುವ ವಿಚಾರ.
ಈ ನುಡಿನಮನದ ಕುರುಹಾಗಿ ಅವರಿಗಾಗಿ ನನ್ನ ಒಂದು ಕವಿತೆಯನ್ನು ಇಲ್ಲಿ ದಾಖಲಿಸುತ್ತಿದ್ದೇನೆ.
ಪಿ.ಬಿ.ಶ್ರೀನಿವಾಸ್
ಆಂಧ್ರದೇಶದ ಕಾಕಿನಾಡದಲಿ ಜನಿಸಿದನು
ಪ್ರತಿವಾದಿ ಭಯಂಕರ ಶ್ರೀನಿವಾಸ
ಭಯಂಕರ ಇವನಲ್ಲ ಪ್ರೇಮ ಮೂರುತಿ ಇವನು
ಇವನಹುದು ಕಲ್ಲು ಕರಗಿಸುವಂಥ ಧ್ವನಿಯ ಕೋಶ
ಕೆಂಪು ನಾಮದ ಜೊತೆಗೆ ಉಣ್ಣೆ ಟೋಪಿಯ ಇಟ್ಟ
ಮುಖದ ತುಂಬೆಲ್ಲ ಕಿರು ಮಂದಹಾಸ
ರಾಗ ತಾಳವನರಿತು ಭಾವವನು ನೀ ತುಂಬಿ
ಹಾಡಿದೊಲು ಅಲ್ಲಿಲ್ಲ ರಸಾಭಾಸ
ಭಕ್ತಿ ಭಾವಗಳಿರಲಿ ಸ್ಫೂರ್ತಿ ಗೀತೆಗಳಿರಲಿ
ಇರಬಹುದು ಪ್ರೇಮಿಗಳ ವಿರಹ ಗೀತೆ
ನಿನ್ನ ಕೊರಲಳಿನ ಕೊಳಲು ಮಾಡಿರಲು ಇಂಪುದನಿ
ಮೈ ಮರೆತರೆಲ್ಲ ಗೋಪಿಕೆಯರಂತೆ
ಬರಿಯ ಹಾಡುಗನು ನೀನಲ್ಲ ಕವಿತೆಕಾರನು ಹೌದು
ನಿನಗಿತ್ತು ಎಂಟು ಭಾಷೆಗಳ ಅರಿವು
ತೆಲುಗು ಕನ್ನಡ ತಮಿಳು ಮಲೆಯಾಳ ಸಂಸ್ಕೃತ
ಹಿಂದಿ ಉರ್ದೂ ಭಾಷೆಗಳ ಒಲವು
ತೆರೆಯ ಮೇಲಿನ ಎಲ್ಲ ನಾಯಕರ ಶರೀರಕೆ
ಶಾರೀರ ನೀನಾಗಿ ಹಾಡುಗಳ ಹಾಡಿ
ಸಾಹಿತ್ಯ ಕ್ಷೀರದಲಿ ಸಂಗೀತ ಮಧು ಬೆರೆಸಿ
ನೀನು ಹಾಡಿದೆ ಜಗಕೆ ಮೋಡಿಯನು ಮಾಡಿ
ಬಾಗಿಲನು ತೆರೆದು ಸೇವೆಯನು ಕೊಡುಎಂದು
ನೀನು ಹಾಡಲು ಕೃಷ್ಣ ತಾನೆ ತಿರುಗಿದನು
ದೀನ ನಾ ಬಂದಿರುವೆನೆಂದು ನೀನರುಹಿದೊಡೆ
ಗುರು ತಾನು ಕರಗುತಲಿ ನಿನಗೆ ಕಲಿಸಿದನು
ಇಳಿದು ಬಾ ತಾಯಿ ಎಂದೊಡನೆ ಧುಮು ಧುಮುಕಿ
ಹರಿದು ಬಂದಳು ಗಂಗೆ ಮಾತೆ
ವೈದೇಹಿ ಏನಾದಳೆಂದು ನೀ ಪರಿತಪಿಸೆ
ಕನಲುತಲಿ ಬಳಲಿದಳು ದೂರದಲಿ ಸೀತೆ
ಬಾ ತಾಯಿ ಭಾರತಿಯೆ ಭಾವ ಭಾಗೀರತಿಯೆ
ಎಂಬ ಹಾಡಲಿ ನೀನು ಭಾವಗಳ ತುಂಬಿ
ಹಾಡಿರಲು ಕೇಳುಗರ ಎದೆಯಾಯ್ತು ಬಿರಿದ ಹೂ
ಮತ್ತೊಮ್ಮೆ ಹುಟ್ಟಿ ಬಾ ನೀ ಜೇನುದುಂಬಿ
ನಿನ್ನ ಗಾನವ ನಾನು ಕೇಳುತ್ತ ಬೆಳೆದವನು
ನಿನ್ನ ದನಿ ಕೇಳದಿರೆ ನನಗೆ ನಲಿವಿಲ್ಲ
ಬಾರದಿಹ ಲೋಕಕ್ಕೆ ಹೋಗಿರುವೆ ನೀ ನಿಂದು
ನಿನ್ನ ಭೇಟಿಯು ನನಗೆ ಸಿಗಲೆ ಇಲ್ಲ.
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ
ಎಂದೆಂಬ ಶರಣರ ವಾಣಿಯಂತೆ
ನೀನು ಮರೆಯಾದರೂ ನಿನ್ನ ಗಾನದ ಹೊನಲು
ನಮ್ಮೊಂದಿಗಿಹುದು ಸುರ ಗಂಗೆಯಂತೆ.
ಡಾ. ಸುದರ್ಶನ ಗುರುರಾಜರಾವ್.