ಗುರುವಂದನೆ

ಗುರುವಂದನೆ 
 
ನಮ್ಮ ವೈದ್ಯಕೀಯ ಶಿಕ್ಷಣಾರಂಭದ ೨೫ ನೇ ವರ್ಷ ತುಂಬಿದ, ಬೆಳ್ಳಿ ಹಬ್ಬದಾಚರಣೆಯ ಸಂದರ್ಭದಲ್ಲಿ ಗುರುವಂದನೆ ಹಮ್ಮಿಕೊಂಡಿದ್ದೆವು. ಆ ದಿನ ನಾನು ಮಾಡಿದ ಸ್ವಾಗತ ಭಾಷಣದ ಲೇಖನ ರೂಪ
 
(ಸೆಪ್ತೆಂಬರ್ ೫ನೇ ತಾರೀಖು ಶಿಕ್ಷಕರ ದಿನ. ಇದೇ ಸಮಯಕ್ಕೆ ಗುರುಪೂರ್ಣಿಮೆಯೂ ನಮ್ಮ ಪರಂಪರೆಯಲ್ಲಿ ಆಚರಿಸಲ್ಪಡುತ್ತದೆ. ಗುರು-ಶಿಷ್ಯ ಪರಂಪರೆ ಭಾರತೀಯ ಸಂಸ್ಕೃತಿಯ ಒಂದು ವಿಶಿಷ್ಟ ಅಂಗ. ಚೀನಾ ನಾಗರೀಕತೆಯಲ್ಲಿ ಹೊರತು ಬೇರೆಲ್ಲ  (ಪ್ರಮುಖವಾಗಿ ಯೂರೋಪದಲ್ಲಿ) ನಾಗರೀಕತೆಗಳಲ್ಲಿ ಶಿಕ್ಷಣ ಎನ್ನುವುದು ಒಂದು ವಹಿವಾಟಿನಂತೆ ಆಚರಿಸಲ್ಪಡುತ್ತಿದ್ದ ಕಾಲದಲ್ಲಿ ಹಾಗೂ ಅದಕ್ಕೆ ಬಹಳ ಹಿಂದೆ ಭಾರತದಲ್ಲಿ ವಿದ್ಯೆಯನ್ನು ವಿದ್ಯೆ ಕಲಿಸುವುದಕ್ಕಾಗಿಯೇ, ಯಾವ ಪ್ರತಿಫಲದ ಅಪೇಕ್ಷೆ ಇಲ್ಲದೆ ಕಲಿಯುವುದಕ್ಕೆ ಹಾಗೂ ಕಲಿಸುವುದಕ್ಕೆ ತಕ್ಕ ವಿದ್ಯಾರ್ಥಿ ಸಿಕ್ಕಲ್ಲಿ ಹೇಳಿಕೊಡುವ ಪರಿಪಾಠ ಇತ್ತು; ಕಡಿಮೆಯಾದರೂ ಈಗಲೂ ಇದೆ. ಗುರು ಶಿಷ್ಯ ಸಂಬಂಧಿತ ಕಥೆಗಳು ನಮ್ಮ ಪುರಾಣದಲ್ಲಿ ಸಾಕಷ್ಟಿವೆ.)
ಸಾಮಾನ್ಯವಾಗಿ ಗುರುವಂದನೆಯ ಪ್ರಾರ್ಥನೆ ಹಯಗ್ರೀವಾದಿ ಸ್ತೋತ್ರದಿಂದ ಶುರುವಾಗುತ್ತದೆ.
 
 
       ಜ್ಞ್ನಾನಾನಂದಮಯಂ ದೇವಂ ನಿರ್ಮಲ ಸ್ಫಟಿಕಾಕೃತಿಂ
ಆಧಾರಂ ಸರ್ವ ವಿದ್ಯಾನಾಂ ಹಯಗ್ರೀವ ಮುಪಾಸ್ಮಹೆ 
 
ಎಂದು ಶುರುವಾಗುವ ಈ ಸ್ತೋತ್ರ, ಹೊಳೆಯುವ ಬೆಳಕಿನ ರೂಪದಲ್ಲಿರುವ ದೇವರನ್ನು ಯಾವ ವಿಘ್ಹ್ನವೂ ಇಲ್ಲದೆ ನೆರವೇರಿಸಬೇಕೆಂದು ಕೋರುತ್ತದೆ. ಅದೇವನು ವಿಶ್ವಕ್ಸೇನನ ರೂಪದಲ್ಲಿ ಬರಲೆಂದು ಪ್ರಾರ್ಥಿಸುತ್ತದೆ.
 
ಎರಡನೇ ಚರಣ ಎಲ್ಲರಿಗೂ ಪರಿಚಿತವಾದ, 
 
ಗುರು ಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರ ಎಂಬುದು.
 
ಮೂರನೇ ಚರಣದಲ್ಲಿ ಪ್ರಮುಖ, ಆದರ್ಶಪ್ರಾಯರಾಗಿರುವ ಭಾಗವತ- ಪುರಾಣ ಪಾತ್ರಗಳನ್ನು ನೆನೆಯುತ್ತದೆ
 
        ಪ್ರಹ್ಲಾದ ನಾರದ ಪರಾಶರ ಪುಂಡರೀಕ
ವ್ಯಾಸಾಂಬರೀಶ ಶುಕ ಶೌನಕ ಭೀಷ್ಮದಾಲ್ಭ್ಯಾಂ
ರುಕ್ಮಾಂಗದಾರ್ಜುನ ವಸಿಷ್ಠ ವಿಭೀಷಣಾದೀಂ
ಪುಣ್ಯಾಮಾಂ ಪರಮಭಾಗವತಾಮ್ ಸ್ಮರಾಮಿ -ಎಂಬುದು ಮೂರನೇ ಚರಣ.
 
ಈ ಶ್ಲೋಕ ಪಠಣೆಯ ಹಿಂದೆ ಇರುವ ಕಲಿಕೆಯ ವೈಜ್ಞಾನಿಕ ಕ್ರಮ – ಆಧುನಿಕ ವಿಶ್ಲೇಷಣೆಗೆ ಅನುಸಾರವಾಗಿ- ಗಮನಿಸಬೇಕು.
ಮೊದಲನೆಯದು ಮನುಷ್ಯನನ್ನು ಮೀರಿದ ಶಕ್ತಿಯನ್ನು ಪೂಜಿಸುತ್ತಾ, ತನಗೆ ಕಲಿಯುವ ಬುದ್ಧಿಯನ್ನೂ, ಅದಕ್ಕೆ ಅನುಕೂಲವನ್ನೂ, ತಕ್ಕ ಪರಿಶ್ರಮ ಹಾಕುವ ಮನೋಭಾವನೆಯನ್ನೂ ಕೊಡು ಎಂದು ಕೇಳುತ್ತಾ ಕಲಿಯುವ ಸಂಕಲ್ಪಕ್ಕೆ ಪ್ರೇರೇಪಿಸುತ್ತದೆ. ಆಧುನಿಕ ವಾಗಿ ಇದು cognitive learning theory (ಕಾಗ್ನಿಟಿವ್ ಲರ್ನಿಂಗ್ ಥಿಯರಿ)ಯ ಸನಾತನ ರೂಪ.
 
ಎರಡನೆಯ ಚರಣ, ಮಾನವ ರೂಪದಲ್ಲಿರುವ ಗುರುವನ್ನು ತ್ರಿಮೂರ್ತಿಗಳಿಗೆ ಹೋಲಿಸಿ ಕಲಿಸಲು ಪ್ರಾಥಿಸುತ್ತದೆ. ಇದು ಅಧುನಿಕ ಪರಿಭಾಷೆಯಲ್ಲಿ behavioural learning theory (ಬಿಹೇವಿಯೊರಲ್ ಲರ್ನಿಂಗ್ ಥಿಯರಿ) ಯ ಸನಾತನ ರೂಪ
 
ಮೂರನೆಯ ಚರಣ, ಸಮಾಜದಲ್ಲಿನ ಉನ್ನತ ವ್ಯಕ್ತಿತ್ವಗಳನ್ನು ನೋಡಿ ಕಲಿಯಲು ಪ್ರೇರೇಪಿಸಿ ಅಂಥ ಆದರ್ಶಗಳನ್ನು ನೆನೆಪಿನ್ನಲ್ಲಿಡಲು ಒಂದು ಶ್ಲೋಕರೂಪವಾಗಿ ಹೆಣೆಯಲ್ಪಟ್ಟಿದೆ. ಇದು (ಸೋಷಿಯಲ್ ಥಿಯರಿ ಒಫ಼್ ಲರ್ನಿಂಗ್) social theory of learning ಎಂದೆನ್ನಬಹುದು.
 
ಹೀಗೆ ಕಲಿಸುವ -ಕಲಿಯುವ ಪ್ರಕ್ರಿಯಲ್ಲಿ ಬರುವ ಎರೆಡು ಪಾತ್ರಗಳು ಗುರು ಹಾಗೂ ಶಿಷ್ಯ. ಈ ಗುರು ಶಿಶ್ಯ ಪರಂಪರೆಯ ಹಲವಾರು ಅತ್ಯುನ್ನತ ನಿದರ್ಶನಗಳು ನಮಗೆ ಸಿಗುತ್ತವೆ
ಯಮ-ನಚಿಕೇತ
ದ್ರೋಣ- ಅರ್ಜುನ
ವಿಶ್ವಾಮಿತ್ರ- ರಾಮ
ವಲ್ಲಭಾಚರ್ಯ- ಸೂರದಾಸ
ಗೋವಿಂದ ಗುರು-ಶಿಶುನಾಳ ಶರೀಫ ,,ಹೀಗೆ ಇನ್ನೂ ಪಟ್ಟಿಮಾಡಬಹುದು
 
ಈ ಗುರು-ಶಿಷ್ಯ ಪರಮ್ಪರೆಗೆ, ಆ ಪರಿಕಲ್ಪನೆಗೆ ನಮ್ಮ ಹಿರಿಯರು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಏಕೆ ಅಂತಹ ಉನ್ನತ ಸ್ಥಾನ ನೀಡಿ ಗೌರವಿಸಿದ್ದಾರೆ ಎಂಬುದು ನಮ್ಮೆಲ್ಲರ ಅನುಭವಕ್ಕೆ ಬಂದೇ ಇರುತ್ತದೆ
 
ಎನಿತು ಜನ್ಮದಲಿ ಎನಿತು ಜೀವರಿಗೆ ಎನಿತು ನಾವು ಋಣಿಯೋ
ತಿಳಿದು ನೋಡಿದರೆ ಬಾಳು ಎಂಬುದಿದು ಋಣದ ರತ್ನ ಗಣಿಯೋ ” 
 
ಎಂದು ಮಾರ್ಮಿಕವಾಗಿ ಹೇಳಿದ್ದಾರೆ ಪೂಜ್ಯರಾದ ಜಿ.ಎಸ್.ಶಿವರುದ್ರಪ್ಪನವರು. ಹೀಗೆ ನಮ್ಮ ಬಾಳು ಒಂದು ಋಣದ ರತ್ನದ ಗಣಿ. ಹುಟ್ಟಿದಾರಭ್ಯ ನಾವು ಜನ್ಮ ಋಣ, ಅನ್ನದ ಋಣ, ಮಣ್ಣಿನ ಋಣ, ಭಾಷೆಯ ಋಣ, ಸಮಾಜದ ಋಣ ಹೀಗೆ ಋಣ ಸಂಚಯ ಮಾಡುತ್ತಲೇ ಬೆಳೆಯುತ್ತೇವೆ ಮೊದಲಿನ ೩೦-೪೦ ವರ್ಷಗಳು. ಈ ಅವಧಿಯಲ್ಲಿ ನಮ್ಮ ಜೀವನದ ಹಾದಿಗಳನ್ನು ಅರಿತು ದುಡಿದು ಆ ಋಣಗಳನ್ನು ತೀರಿಸುವ ಸಾಮರ್ಥ್ಯ ಪಡೆದಿರುತ್ತೇವೆ. ನಾವು ಈ ಸಾಮರ್ಥ್ಯವನ್ನು ಪಡೆಯುವಲ್ಲಿ ಮಹತ್ತರ ಪಾತ್ರ ವಹಿಸುವ, ಮೇಲೆ ಹೇಳಿದ ಎಲ್ಲ ಋಣಗಳ  ಜೊತೆಯಿರುವ ಬಹು ಮುಖ್ಯವಾದ ಋಣ ವಿದ್ಯಾ ಋಣ ಅದೇ ಗುರುವಿನ ಋಣ. ಗುರುವಂದನೆ ಈ ಋನ ಸಂಚಯವನ್ನು ಸಂದಾಯ ಮಾಡುವ ನಿಟ್ಟಿನಲ್ಲಿ ಒಂದು ಪುಟ್ಟ ಪ್ರಯತ್ನವೆನ್ನಬಹುದು. 
*****************
 
ಹಾಗಾದರೆ “ಗುರು” ಎಂಬ ಪದದ ಅರ್ಥವೇನು? 
ಗು- ಎಂದರೆ ಅಂಧಕಾರ/ಕತ್ತಲು; ರು- ಎಂದರೆ ಕಳೆಯುವವನು. ಅಜ್ಞ್ನಾನದ ಕತ್ತಲೆಯನ್ನು ಕಳೆದು ಜ್ಞಾನದ ಬೆಳಕನ್ನು ನೀಡಬಲ್ಲ ಪೂಜ್ಯನೀಯ ವ್ಯಕ್ತಿಯೇ ಗುರು. ಹಾಗಾಗಿಯೇ ತಮಸೋಮಾ ಜ್ಯೋತಿರ್ಗಮಯ ಎಂಬ ಉಕ್ತಿಯೂ ಇದೆ. ಅದು ಹೇಗೆ ಎನ್ನುವುದನ್ನು ನೋಡೋಣ.
 
“ಅನ್ನದಾನಂ ಪರಂ ದಾನಂ ವಿದ್ಯಾದಾನಮತ್ಃ ಪರಂ
ಅನ್ನೇನ ಕ್ಷಣಿಕಾತೃಪ್ತಿಃ ಯಾವಜ್ಜೀವಂಚ ವಿದ್ಯಯಾತ್”
 
ಎಂಬ ಶ್ಲೋಕ ಹೇಳುವಂತೆ ಜೀವನ ಪೂರ್ತಿ ನಮ್ಮನ್ನು ಪೊರೆಯಬಲ್ಲ ವಿದ್ಯೆ ಅನ್ನದಾನಕ್ಕಿಂತಲೂ ಉನ್ನತವಾದದ್ದು. ಇಂತಹ ವಿದ್ಯೆಯನ್ನು ನಮಗೆ ದಯಪಾಲಿಸಿದ ಗುರುಗಳ ಋಣ ದೊಡ್ಡದಲ್ಲದೆ ಇನ್ನೇನು?
ಹೀಗೆ ಕಲಿತ ವಿದ್ಯೆಯಿಂದಲೇ ನಾವು ಸಮಾಜದಲ್ಲಿ ಆದರಣೀಯರಾಗಿ ಇಂದು ಜೀವನ ನಡೆಸಲು ಸಾಧ್ಯವಾಗುತ್ತಿದೆ. ಗುರುಗಳು ಕಲಿಸಿದ ವಿದ್ಯೆಯಿಂದ ನಾವು ನಮ್ಮ ದೇಶದಲ್ಲಿಅ ಮಾತ್ರವಲ್ಲದೆ, ಬ್ರಿಟನ್, ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ, ಮಧ್ಯಪ್ರಾಚ್ಯ , ಪ್ರಪಂಚದ ಎಲ್ಲೆಡೆ ಹರಡಿ ಅಲ್ಲಿಯು ನಮ್ಮ ನಮ್ಮ ಚಾಪು ಮೂಡಿಸಿದ್ದೇವೆ,. ನಾವಿರುವಲ್ಲಿ, ಭಿನ್ನ ಸಂಸ್ಕೃತಿಯ ಸಮಾಜದಲ್ಲೂ ನಾವು ಗೌರವಾದರಗಳಿಗೆ ಪಾತ್ರರಾಗಿದ್ದೇವೆ. ಇದು ನಾವು ಗಳಿಸಿದ ಸಂಪತ್ತಿನ ಪರಿಣಾಮವಲ್ಲ; ಬದಲಿಗೆ ನಮ್ಮ ವಿದ್ಯೆಯ ಪರಿಣಾಮ. ಅದಕ್ಕೆಂದೇ
 
ವಿದ್ವತ್ವಂಚ ನೃಪತ್ವಂಚ ನೈವತುಲ್ಯಂ ಕದಾಚನ
ಸ್ವದೇಶೇ ಪೂಜ್ಯತೇ ರಾಜಾನ್ ವಿದ್ವಾನ್ ಸರ್ವತ್ರ ಪೂಜ್ಯತೇ”. 
 
ಎಂದಿದೆ ಇನ್ನೊಂದು ಶ್ಲೋಕ. ರಾಜನಾದವನು /ಅಧಿಕಾರಿಯಾದವನು ತನ್ನ ಜಾಗದಲ್ಲಿ ಮಾತ್ರವೇ ಗೌರವ ಪಡೆಯುತ್ತಾನೆ ಆದರೆ ವಿದ್ಯಾವಂತ ಅದನ್ನು ಜಗದೆಲ್ಲೆಡೆ ಪಡೆಯುತ್ತಾನೆ. ಹಾಗಾಗಿ ಅವರಿಬ್ಬರನ್ನೂ ಹೊಲಿಸಬೇಡ ಎಂದಿದರ ಅರ್ಥ,. ಹೊರದೇಶಗಳಲ್ಲಿ ನೆಲೆಸಿರುವ ನಮಗೆ ಇದರ ಮಹತ್ವ ಅರಿವಾಗದೇ ಇಲ್ಲ.
ಗುರುಗಳು ಪಾಥ ಮಾಡುವಾಗ ನಮಗೆ ಕೇವಲ ವಿದ್ಯೆಯನ್ನಷ್ಟೇ ಕಲಿಸುವುದಿಲ್ಲ. ಆದರ್ಶಪ್ರಾಯರಾಗಿ ನಮಗೊಂದು ಧ್ಯೇಯ, ಶಿಸ್ತು, ಬದ್ಧತೆ, ಪಾಠ ಮಾಡುವ ಕೌಶಲ್ಯ, ಬೋಧನಾ ವಿಧಾನ ಇವೆಲ್ಲವುಗಳನ್ನೂ ಕಲಿಸುತ್ತಾರೆ. ಇದರಿಂದ ನಾವು ಪ್ರೇರಿತರಾಗಿ ಮುಂದಿನ ಪೀಳಿಗೆಗೆ ಗುರುಗಳಾಗಿ ಆ ಪರಂಪರೆಯನ್ನು ಮುಂದುವರಿಸುತ್ತೇವೆ. ಮಾನ್ಯರಾದ ಜಿ.ಟಿ.ನಾರಾಯಣರಾವ್ ಅವರು ಈ ಗುರು-ಶಿಷ್ಯ ಪರಂಪರೆಯ ನಿರತಚಕ್ರವನ್ನು ಹೀಗೆ ವರ್ಣಿಸುತ್ತಾರೆ
 
ಹೊಸ ಬೆಳಕನರಸುವವ ಋಷಿ
ಋಷಿಕಂಡ ಬೆಳಕನ್ನು ಬೀರುವವನಾಚಾರ್ಯ
ಆಚಾರ್ಯ ತೋರಿಸಿದ ಪಥದಿ ನಡೆದವ ಶಿಷ್ಯ
ಶಿಷ್ಯ ಗುರುವಾಗುವುದೆ ಋಜುವಿದ್ಯೆ ಅತ್ರಿಸೂನು” 
 
ಹೀಗೆ ಶಿಷ್ಯನಾದವನು ಗುರುವಿನ ಪದಕ್ಕೆ ಏರಿದಾಗ ಅದು ನಿಜವಾದ ವಿದ್ಯೆ ಎನ್ನುತ್ತಾರೆ ಅವರ ಅತ್ರಿಸೂನು ಕಗ್ಗ ದಲ್ಲಿ. ನಮ್ಮಲ್ಲಿ ಬಹುತೇಕ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಕಲಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವುದೇ ಇದಕ್ಕೆ ಸಾಕ್ಷಿ. 
ಇಂತಹ ಭಾಗ್ಯವನ್ನು ನಮ್ಮ ಪಾಲಿಗೆ ಕೊಟ್ಟಿದ್ದರಿಂದಲೇ ನಮ್ಮ ಗುರುಗಳು ವಂದನೀಯರಾಗಿದ್ದಾರೆ.
ಕಡೆಯದಾಗಿ, ನಾವು ಗುರುಗಳಿಂದ ಪಡೆದ ವಿದ್ಯೆ ನಮ್ಮ ಸಂಗಾತಿ. ನಾವು ದುಡಿದು ಕೂಡಿಸಿಟ್ಟ ಹಣ, ಒಡವೆ, ಭೂಮಿ, ಕಾಣಿ, ಮನೆ, ಇತ್ಯಾದಿಗಳೆಲ್ಲವೂ ನಾವು ನಮ್ಮದೆಂಬ ಭ್ರಮೆ ಹುಟ್ಟಿಸುತ್ತವೆಯೆ ಹೊರತು ನಮ್ಮದಲ್ಲ. ಬದಲಾದ ರಾಜಕೀಯ ಪರಿಸ್ಥಿತಿ, ಕಳ್ಳರು ,ಕಾಕರು ಕೊನೆಗೆ ನಮ್ಮ ಬಂಧುಗಳೇ ಮೋಸಮಾಡಿ ಹೊಡೆದುಕೊಂಡು ಹೋಗಬಹುದಾದ ಸ್ವತ್ತುಗಳು. ಆದರೆ ಯಾರೂ ಕದಿಯಲಾಗದ, ಕೊಟ್ಟಷ್ಟೂ ವೃದ್ಧಿಸುವ ಸಂಪತ್ತು ವಿದ್ಯೆ ಮಾತ್ರವೇ. ಸರ್ವಜ್ಞ ಹೇಳುವಂತೆ
 
ಒಡಲಡಗಿಹ ವಿದ್ಯೆ ಒಡಗೂಡಿ ಬರುತಿರಲು
ಒಡಹುಟ್ಟಿದವರು, ಕಳ್ಳರು, ನೃಪರದನು
ಪಡೆವರೆಂತೆಂದ ಸರ್ವಜ್ಞ.
 
ಇಂತಹ ಸಂಪತ್ತನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ, ಔಪಚಾರಿಕವಾಗಿ, ಅನೌಪಚಾರಿಕವಾಗಿ, ಜೀವನದ ವಿವಿಧ ಹಂತಗಳಲ್ಲಿ ನಮಗೆ ಕಲಿಸಿ ನಮ್ಮನ್ನು ಇಂದು ಸಮಾಜಮುಖಿಗಳು, ಸತ್ಪ್ರಜೆಗಳು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಮಾನವರನ್ನಗಿ ಉಳಿಸಿದ ಹಿರಿಯ ಜೀವಗಳನ್ನು  ನೆನೆಯುತ್ತಾ ಈ ಗುರುಪೂರ್ಣಿಮೆಯ ದಿನ ವಂದಿಸೋಣ.
 
ಸುದರ್ಶನ.

ಕನ್ನಡಮ್ಮನ ಹರಕೆ kannadammana harake (KU.VEM.PU)

ಕೋಗಿಲೆ ಮತ್ತು ಸೋವಿಯಟ್‌ ರಷ್ಯಾ : ಕನ್ನಡಮ್ಮನ ಹರಕೆ

ಕನ್ನಡಕೆ ಹೋರಾಡು
ಕನ್ನಡದ ಕಂದಾ;
ಕನ್ನಡವ ಕಾಪಾಡು
ನನ್ನ ಆನಂದಾ!
ಜೋಗುಳದ ಹರಕೆಯಿದು
ಮರೆಯದಿರು, ಚಿನ್ನಾ;
ಮರೆತೆಯಾದರೆ ಅಯ್ಯೊ
ಮರೆತಂತೆ ನನ್ನ!

ಮೊಲೆಯ ಹಾಲೆಂತಂತೆ
ಸವಿಜೇನು ಬಾಯ್ಗೆ;
ತಾಯಿಯಪ್ಪುಗೆಯಂತೆ
ಬಲುಸೊಗಸು ಮೆಯ್ಗೆ;
ಗುರುವಿನೊಳ್ನುಡಿಯಂತೆ
ಶ್ರೇಯಸ್ಸು ಬಾಳ್ಗೆ;
ತಾಯ್ನುಡಿಗೆ ದುಡಿದು ಮಡಿ,
ಇಹಪರಗಳೇಳ್ಗೆ!

ರನ್ನ ಪಂಪರ ನಚ್ಚು
ಕನ್ನಡದ ಸೊಲ್ಲು;
ಬಸವದೇವನ ಮೆಚ್ಚು,
ಹರಿಹರನ ಗೆಲ್ಲು;
ನಾರಣಪ್ಪನ ಕೆಚ್ಚು
ಬತ್ತಳಿಕೆ ಬಿಲ್ಲು;
ಕನ್ನಡವ ಕೊಲುವ ಮುನ್
ಓ ನನ್ನ ಕೊಲ್ಲು!

ನೆವವು ಏನಾದರೇನ್,
ಹೊರನುಡಿಯು ಹೊರೆಯೈ;
ನಿನ್ನ ನಾಡೊಡೆಯ ನೀನ್;

ವೈರಿಯನು ತೊರೆಯೈ.
ಕನ್ನಡದ ನಾಡಿನಲಿ
ಕನ್ನಡವ ಮೆರೆಯೈ;
ತಾಯ್ಗಾಗಿ ಹೋರಾಡಿ
ತಾಯ್ನುಡಿಯ ಪೊರೆಯೈ!

ಕನ್ನಡಕೆ ಬಂದಿಳಿಕೆ
ಹಿಡಿಯುತಿಹುದಿಂದು;
ನೀ ನಿದ್ದೆ ಮಾಡಿದರೆ
ಹಾಕುವುದು ಕೊಂದು!
ಎದ್ದೇಳೊ, ಕಂದಯ್ಯ,
ಕತ್ತಿಯನು ಕೊಳ್ಳೊ!
ತಳಿರು ವೇಷದ ರೋಗ
ಬಂದಿಳಿಕೆ, ತಳ್ಳೊ!

ದಮ್ಮಯ್ಯ, ಕಂದಯ್ಯ,
ಬೇಡುವೆನು ನಿನ್ನ;
ಕನ್ನಡಮ್ಮನ ಹರಕೆ,
ಮರೆಯದಿರು, ಚಿನ್ನಾ!
ಮರೆತೆಯಾದರೆ ಅಯ್ಯೊ,
ಮರೆತಂತೆ ನನ್ನ;
ಹೋರಾಡು ಕನ್ನಡಕೆ
ಕಲಿಯಾಗಿ, ರನ್ನಾ!

೫-೭-೧೯೩೬

ಸಾಯುತಿದೆ ನಿಮ್ಮನುಡಿ, ಓ ಕನ್ನಡದ ಕಂದರಿರ! KU.VEM.PU

ಕೋಗಿಲೆ ಮತ್ತು ಸೋವಿಯಟ್‌ ರಷ್ಯಾ : ಸಾಯುತಿದೆ ನಿಮ್ಮನುಡಿ, ಓ ಕನ್ನಡದ ಕಂದರಿರ!

ಸಾಯುತಿದೆ ನಿಮ್ಮನುಡಿ, ಓ ಕನ್ನಡದ ಕಂದರಿರ,
ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ!
ರಾಜನುಡಿಯೆಂದೊಂದು, ರಾಷ್ಟ್ರನುಡಿಯೆಂದೊಂದು,
ದೇವನುಡಿಯೆಂದೊಂದು ಹತ್ತಿ ಜಗ್ಗಿ
ನಿರಿನಿಟಿಲು ನಿಟಿಲೆಂದು ಮುದಿಮೂಳೆ ಮುರಿಯುತಿದೆ,
ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ!
ಕೂಗಿಕೊಳ್ಳಲು ಕೂಡ ಬಲವಿಲ್ಲ: ಮಕ್ಕಳೇ
ಬಾಯ್ಮುಚ್ಚಿ ಹಿಡಿದಿಹರು ಕೆಲವರು ನುಗ್ಗಿ!

ಮೊಲೆವಾಲಿನೊಡಗೂಡಿ ಬಂದ ನುಡಿ ತಾಯಿನುಡಿ;
ಕೊಲೆಗೈದರಮ್ಮನನೆ ಕೊಲಿಸಿದಂತೆ!
ತಾಯ್ ಮುತ್ತು ಕೊಡುವಂದು ನಿಮ್ಮ ಕೆನ್ನೆಯ ಮೇಲೆ
ಮೆರೆಯಿತದು ಪೋಣಿಸಿದ ಮುತ್ತಿನಂತೆ:
ನಿಮ್ಮ ನಲ್ಲೆಯರೊಡನೆ ನಲ್ನುಡಿಯ ನುಡಿವಂದು
ಕನ್ನಡವೆ ಕಲಿಸುವುದು ತುಟಿಗೆ ಬಂದು:
ನಡುವಂದು ನಿಮ್ಮ ಮುದ್ದಿನ ಹಸುಳೆಗಳನೆತ್ತಿ
ಕನ್ನಡವೆ ನಿಮಗೀವುದೊಲವ ತಂದು.

ಇರುವಲ್ಪ ಶಕ್ತಿಯನು ಇರುವಲ್ಪ ದ್ರವ್ಯವನು
ಪರಭಾಷೆ ಮೋಹಕ್ಕೆ ಚೆಲ್ಲಬೇಡಿ;
ಹೂಮಾಲೆ ಸೂಡಿವೆವು ಕೊರಳಿಂಗೆ ಎಂದೆನುತೆ
ನೇಣುರುಳನೆಳೆದಯ್ಯೊ ಕೊಲ್ಲಬೇಡಿ.
ಪರಕೀಯರೆಲ್ಲರಾಶೀರ್ವಾದ ಕರವೆತ್ತಿ
ಹರಸುತ್ತ ಬರುವರೈ ಮೊದಲು ಮೊದಲು;
ಕಡೆಗದುವೆ ಕುತ್ತಿಗೆಗೆ ಕರವಾಳವಾಗುವುದು;
ನಮ್ಮ ನಾಲಗೆ ನಮಗೆ ಕೀಳುತೊದಲು!

ನಿಮ್ಮ ನುಡಿ ನಿಮ್ಮ  ಗಂಡಸುತನಕೆ ಹಿರಿಸಾಕ್ಷಿ;
ಗೆಲವಿದ್ದರದಕೆ ನಿಮಗಿಹುದು ಶಕ್ತಿ.
ನುಡಿ ಮಡಿದರೆಲ್ಲರೂ ಮೂಕ ಜಂತುಗಳಂತೆ;
ಬಾಲವಲ್ಲಾಡಿಪುದೆ ಪರಮ ಭಕ್ತಿ!
ಉತ್ತರದ ಕಾಶಿಯಲಿ ಕತ್ತೆ ಮಿಂದೈತರಲು
ದಕ್ಷಿಣದ ದೇಶಕದು ಕುದುರೆಯಹುದೆ?
ತಾಯಿತ್ತ ಮೊಲೆಹಾಲೆ ನಿಮ್ಮ ಮೈಗಾಗದಿರೆ
ಹೊತ್ತ ಹೊರೆ ಬಲಕಾರಿ ನೆತ್ತರಹುದೆ?

ಕಣ್ದೆರೆಯಿರೇಳಿ, ಓ ಕನ್ನಡದ ಮಕ್ಕಳಿರ,
ಗರ್ಜಿಸುವುದನು ಕಲಿತು ಸಿಂಹವಾಗಿ!
ನಖದಂಷ್ಟ್ರ ಕೇಸರಂಗಳ ಬೆಳೆಸಿ ಹುರಿಗೊಂಡು
ಶಿರವೆತ್ತಿ ನಿಂತು ಕುರಿತನವ ನೀಗಿ.

೩-೧೦-೧೯೩೫

ಸಂಭವಾಮಿ ಯುಗೇ ಯುಗೇ

ಸಂಭವಾಮಿ ಯುಗೇ ಯುಗೇ

ಕ್ಷೀರ ಸಾಗರದ ಮಧ್ಯದಲ್ಲಿ ಶೇಷ ಶಾಯಿಯಾಗಿ ಶ್ರೀ ಲಕ್ಷ್ಮಿಯ ಸೇವೆ ಪಡೆಯುತ್ತಿದ್ದ ಶ್ರೀಮನ್ನಾರಾಯಣನಿಗೆ ಡಿಸ್ಟರ್ಬ್ ಮಾಡುವ ಇರಾದೆ ಜಯ ವಿಜಯರಿಗೆ ಖಂಡಿತಾ ಇರಲಿಲ್ಲ. ತ್ರೇತಾ ದ್ವಾಪರ ಯುಗಗಳಲ್ಲಿ ಧರ್ಮಸಂಸ್ಥಾಪನೆಯನ್ನು ಮಾಡಿದ ನಂತರ ದೀರ್ಘ ವಿಶ್ರಾಂತಿಯಲ್ಲಿದ್ದ ಅವನು ಯಾವ ಕಿರಿ ಕಿರಿಯನ್ನೂ ನಿರೀಕ್ಷಿಸುತ್ತಿರಲಿಲ್ಲ. ಜಾಗತಿಕ ತಾಪಮಾನ ಏರುತ್ತಿರುವ ತೆರದಲ್ಲೇ ಮಾನವರ ಅನಾಚಾರಗಳೂ ಹೆಚ್ಚುತ್ತಿರುವುದು ಅವನಿಗೆ ತಿಳಿಯದ ವಿಷಯವಾಗಿರದಿದ್ದರೂ ಪ್ರಪಂಚವನ್ನು ಹಾಲು ಕಾಯಿಸಿದಂತೆ ತನ್ನಷ್ಟಕ್ಕೆ ತಾನು ಕಾಯ್ದು ಕೊಳ್ಳಲಿ, ಉಕ್ಕಿದಾಗ ನೋಡೋಣ ಎಂಬ ಎಣಿಕೆ ಅವನದು.ಅದೂ ಅಲ್ಲದೆ ದೇವಸ್ಥಾನಗಳ ಹುಂಡಿಯಲ್ಲಿ ಹಣದ ಮಹಾಪೂರವೇ ಹರಿಯುತ್ತಿರಲಾಗಿ ಧರ್ಮಕ್ಕೆ ಚ್ಯುತಿ ಬಂದಿರಲಾರದೆಂದು ಅವನ ಊಹೆ. ಇಷ್ಟಕ್ಕೂ ತಿರುಪತಿಯ ಹುಂಡಿಯಿಂದ ಕುಬೇರನ ಸಾಲಕ್ಕೆ ಹಣ ಚುಕ್ತಾ ಆಗುತ್ತಿರಲು ಒಂದು ರೀತಿಯ ನಿರಾಳವೇ ಅವನಲ್ಲಿತ್ತು.
ಆದರೆ ಅಂದು ಬೆಳ್ಳಂಬೆಳಿಗ್ಗೆಯೇ ಭೂದೇವಿ ಬಹಳ ಅಸ್ತವ್ಯಸ್ತ ವೇಷದಲ್ಲಿ ವಿಷ್ಣುದರ್ಶನಕ್ಕಾಗಿ ಬಂದಳು. ಸ್ವಾಮಿ ಇನ್ನೂ ಮಲಗಿರಬಹುದೆಂದೇ ದ್ವಾರಪಾಲಕರ ಎಣಿಕೆ. ತಾನು ತನ್ನ ಪತಿಯೊಡನೆ ಮಾತುಕತೆ ನಡೆಸಬೇಕಾಗಿದೆಯೆಂದೂ, ತುರ್ತಾಗಿ ತನಗೆ ಬಾಗಿಲು ತೆಗೆಯಬೇಕೆಂದೂ ಆಗ್ರಹಿಸಿದಳು. ಜಯ-ವಿಜಯರಿಗೆ ಧರ್ಮ ಸಂಕಟ. ಬಿಟ್ಟ್ರೂ ತೊಂದರೆ ಬಿಡದೇ ಇದ್ದರೂ ತೊಂದರೆ.’ಇತ್ತ ಹಾವು ಅತ್ತ ಹುಲಿ ’ ಎಂಬ ಪರಿಸ್ಥಿಗೆ ಸಿಲುಕಿ ಹಲುಬಿದರು. ಸನಕಾದಿ ಮುನಿಗಳ ಶಾಪಕ್ಕೆ ತುತ್ತಾಗಿ, ಭೂಭಾರ ಇಳಿಸಲು ದುಷ್ಟಾತಿ ದುಷ್ಟರಾಗಿ ಜನ್ಮ ತಾಳಿ ಹತರಾಗಿದ್ದ ನೆನಪು ಇನ್ನೂ ಮಾಸಿರಲಿಲ್ಲ. ಮುಖ ಮುಖ ನೋಡಿಕೊಂಡು ತಮ್ಮ ಹಣೆ ಬರಹವನ್ನು ಹಳಿಯುತ್ತಾ ಬಾಗಿಲು ತೆಗೆದು ಭೂದೇವಿಯನ್ನು ಒಳಗೆ ಬಿಟ್ಟರು.
ಲಕ್ಷ್ಮಿಯೊಡನೆ ನಸುನಗುತ್ತಾ ಹರಟುತ್ತಿದ್ದ ನಾರಾಯಣ ಭೂದೇವಿಯನ್ನು ಕಂಡು ಧಿಗ್ಗನೆದ್ದು ಕುಳಿತ. ಸಾವಿರಾರು ವರ್ಷಗಳ ಕೆಳಗೆ ಭೂದೇವಿಯ ಸಂಪರ್ಕಕ್ಕೆ ಬಂದಿದ್ದನಾಗಿ , ಅನಂತರದಲ್ಲಿ ಅತ್ತ ತಲೆಯನ್ನೂ ಹಾಕದ ಅಪಚಾರಕ್ಕಾಗಿ ಇನ್ನೇನು ದೋಷಾರೋಪಣೆ ಕಾದಿದೆಯೋ ಎಂಬ ಭಾವನೆಯೊಂದಿಗೆ ಅಪರಾಧೀ ಭಾವವೂ ಕಾಡದಿರಲಿಲ್ಲ. ಅವಳನ್ನು ಕಂಡು ಕರುಣೆಯೂ ಮೂಡಿತು. ನಳನಳಿಸುವ ಭೂರಮೆ ಯಾಗಿ ಅವಳು ಉಳಿದಿರಲಿಲ್ಲ. ಸ್ವಾಗತಿಸಿ ಕುಳ್ಳಿರಿಸಿ ಉಪಚರಿಸಿದ. ಲಕ್ಷ್ಮಿ, ಸವತಿ ಮಾತ್ಸರ್ಯ ತೋರಲಿಲ್ಲ!
ನಿಧಾನವಾಗಿ ನಿಟ್ಟುಸಿರು ಬಿಟ್ಟ ಭೂದೇವಿ ಆಕ್ಷೇಪಿಸುವ ದನಿಯಲ್ಲಿ ಮಹಾಸ್ವಾಮಿಯು ತನ್ನನ್ನು ಮರೆತ ಕಾರಣವಾದರೂ ಏನು? ಯಜಮಾನನಿಲ್ಲದ ಮನೆಯಂತಾಗಿರುವ ಭೂಮಿಯನ್ನು ಕಡೆಗಣಿಸಿದ್ದಾದರೂ ಏಕೆ? ಹೆತ್ತಮ್ಮನನ್ನೇ ಗೋಳು ಹುಯ್ದುಕೊಳ್ಳುವ ಮಕ್ಕಳಂತೆ ಮನುಷ್ಯರು ವರ್ತಿಸಿರುವುದನ್ನು ಕಂಡೂ ಕಾಣದಂತಿರುವುದರ ರಹಸ್ಯವಾದರೂ ಏನು? ಇದೋ ಈ ಲಕ್ಷ್ಮಿಯ ದಾಸರಾಗಿ ತನ್ನ ಒಡಲನ್ನೇ ಬಗೆಯುತ್ತಿದ್ದರೂ, ತನ್ನ ಸುಂದರ ಕೇಶರಾಶಿಗಳಾದ ಕಾಡುಗಳನ್ನು ಧ್ವಂಸಗೊಳಿಸುತ್ತಿದ್ದರೂ, ಆಳಕ್ಕೆ ಕೊಳವೆಗಳನ್ನು ತನ್ನ ಗರ್ಭಕ್ಕಿಳಿಸಿ ತನ್ನ ಜೀವರಸವನ್ನು ಹೀರುತ್ತಿದ್ದರೂ, ಕೆರೆ, ಕಟ್ಟೆ ನದಿಗಳಿಂದ ಮರಳನ್ನು ಬಗೆದು ತನ್ನ ಬಾಯಿ ಪಸೆ ಆರಿಸುತ್ತಿದ್ದರೂ, ಯಾವ ಧರ್ಮ ಕರ್ಮಗಳ ಹಂಗಿಲ್ಲದಂತೆ ಅಕ್ರಮ ಎಸಗುತ್ತಿದ್ದರೂ ದಿವ್ಯ ನಿರ್ಲಕ್ಷ್ಯ ವಹಿಸಿದ ಹಿಂದಿನ ಆಂತರ್ಯವಾದರೂ ಏನು” ಎಂದು ಮೇಘಸ್ಫೋಟದಂತಹ ಪ್ರಶ್ನೆಗಳ ಮಳೆಸುರಿಸಿದಳು.
ಪ್ರಶ್ನಾವಳಿಗಳ ಧಾಳಿಗೆ ತತ್ತರಿಸಿದ ನಾರಾಯಣ ಸಮಜಾಯಿಷಿ ಕೊಡಲು ತಡಬಡಾಯಿಸುತ್ತಿರುವುದನ್ನು ಮನಗಂಡು ಭೂದೇವಿ ತನ್ನ ಹಿಡಿತ ಬಿಗಿಗೊಳಿಸತೊಡಗಿದಳು. ಆಕ್ಷೇಪಣೆಯಲ್ಲಿ ತನ್ನ ಹೆಸರೂ ಸೇರಿದ್ದಕ್ಕೆ ಲಕ್ಷ್ಮಿಗೆ ಅಸಮಾಧಾನವಾಯ್ತು. ಅದರೆ ಸುಮ್ಮನಿದ್ದಳು.ಭೂದೇವಿ ಮುಂದುವರಿದು.,
“ದಾಮೋದರನೇ ಈ ಭೂಮಿಯ ಮೇಲಿನ ಪ್ರಾಣಿಗಳೆಲ್ಲರೂ ನನ್ನ ಮಕ್ಕಳೇ.. ಅವರು ಮಾಡುವ ಕೆಲಸ ಕೆಲವೊಮ್ಮೆ ತುಂಟಾಟ, ಕೆಲವೊಮ್ಮೆ ಪುಂಡಾಟದಂತೇ ಕಾಣುವುದು. ಆದರೆ ಈಗ ಮಿತಿ ಮೀರಿದೆ. ಮನುಷ್ಯವರ್ಗದ ಮಕ್ಕಳುಗಳು ನನ್ನ ಬೇರೆ ವರ್ಗದ ಪ್ರಾಣಿ-ಪಕ್ಷಿವರ್ಗದ ಮಕ್ಕಳನ್ನು ಉಳಿಯಗೊಡುತ್ತಿಲ್ಲ. ಸಬಲರಾದ ಇವರುಗಳು ದುರ್ಬಲರಾದ ಅವರಗಳನ್ನು ಕೀಚಕರೋಪಾದಿಯಲ್ಲಿ ಕಾಡುತ್ತಿದ್ದಾರೆ. ಹೋಗಲಿ ತಮ್ಮ ತಮ್ಮಲ್ಲೇ ಸೌಹಾರ್ದದಿಂದಿದ್ದಾರೋ ಎಂದರೆ ಅದೂ ಇಲ್ಲ. ಕಿತ್ತಾಡುತ್ತಿದ್ದಾರೆ,. ನನ್ನ ಗುಡುಗು, ಸಿಡಿಲನಂಥ ಬೈಗುಳಕ್ಕೂ ಬೆಲೆ ಇಲ್ಲ, ಭೊರ್ಗರೆದು ಪ್ರವಾಹವಾಗುವಂತೆ ಅತ್ತರೂ ಲೆಕ್ಖಕ್ಕಿಲ್ಲ. “ಹೆತ್ತಮ್ಮನನ್ನು ತಿಂದೋರು ಅತ್ತ್ಯಮ್ಮನನ್ನು ಬಿಟ್ಟಾರ್ಯೇ” ಎಂಬ ಗಾದೆಯೇ ಇಲ್ಲವೇ. ತಮ್ಮ ನಿಜ ತಾಯಿಗೇ ಮರ್ಯಾದೆ ಕೊಡುತ್ತಿಲ್ಲ ಇನ್ನು ಮಹಾತಾಯಿಯಾದ ನನಗೆಲ್ಲಿಯದು? ಅಪ್ಪನಾದ ನೀನೇ ಇಲ್ಲದ ಮೇಲೆ ನನಗೆಲ್ಲಿಯ ಮರ್ಯಾದೆ? ? ಇದಷ್ಟೇ ಆಗಿದ್ದಲ್ಲಿ ಹೋಗಲಿ ಎಂದೆನ್ನಬಹುದಿತ್ತು. ಇತ್ತೀಚೆಗೆ ಹೊಸ ಕುಚೇಷ್ಟೆ ಶುರು ಹಚ್ಚಿಕೊಂಡಿದ್ದಾರೆ. ಅದನ್ನು ಮಾತ್ರ ನನ್ನಿಂದ ಸರ್ವಥಾ ಸಹಿಸಲು ಸಾಧ್ಯವಿಲ್ಲ. ಏಳು, ಎದ್ದೇಳು, ಏನಾದರೂ ವ್ಯವಸ್ಥೆ ಮಾಡು ಎಂದು ಹೇಳುತ್ತಿರುವಷ್ಟರಲ್ಲಿ ಜಯ-ವಿಜಯರನ್ನು ಆಚೆ-ಈಛೆ ತಳ್ಳಿ ಬಾಗಿಲನ್ನು ಧಡಾರನೆ ದೂಡಿಕೊಂಡು ಬ್ರಹ್ಮ ಒಳಗೆ ಬಂದ! ಬಿದ್ದೆದ್ದ ಜಯ ವಿಜಯರು ಮೈಮೇಲಿನ ಧೂಳು ಕೊಡವಿಕೊಂಡು ಎಲಾ ಇವನಾ!! ಮೀಸೆ ಗಡ್ದ ಬಿಳಿಯಾದರೂ ಕೈ ಕಸುವಿಗೇನೂ ಕಡಿಮೆಯಿಲ್ಲ ಎಂದು ಯೋಚಿಸಿಕೊಂಡರು!
ಸೃಷ್ಟಿಕಾರ್ಯವನ್ನಷ್ಟೇ ಮಾಡಿಕೊಂಡು, ಜೀವಿಗಳೆಂಬೊ ಬೊಂಬೆಯ ಮಾಡಿ ಅವುಗಳ ಹಣೆಬರಹ ಬರೆದು, ಭೂಲೋಕಕ್ಕೆ ಸಾಗ ಹಾಕುತ್ತಿದ್ದ ಬ್ರಹ್ಮ ಸಿಟ್ಟಾದದ್ದೇ ಕಡಿಮೆ. ಅಂಥದ್ದರಲ್ಲಿ ಇಂದು ಹೀಗೆ ಬರಬೇಕಾದರೆ ….. ಎಂದು ವಿಷ್ಣು ಯೋಚಿಸುತ್ತಿರುವಾಗಲೇ, ಮುಖ ಕೆಂಪು ಮಾಡಿಕೊಂಡು, ಗಡ್ಡ ಮೀಸೆ ಕುಣಿಸುತ್ತ ಬ್ರಹ್ಮ ಹೇಳತೊಡಗಿದ,.
“ಕೇಶವಾ ಅವೇಳೆಯಲ್ಲಿ ಬಂದಿದ್ದಕ್ಕೆ ಕ್ಷಮಿಸು.ಈಗ್ಗೆ ಕೆಲವು ತಿಂಗಳುಗಳಿಂದ ನನ್ನ ಕೆಲಸ ತೀವ್ರವಾಗಿ ಏರುಪೇರಾಗಿದೆ. ಈ ರೀತಿಯ ತೊಂದರೆ ಮೊದಲು ನನ್ನ ಗಮನಕ್ಕೆ ಕೆಲವು ವರ್ಷಗಳ ಹಿಂದೆಯೇ ಬಂದಿತ್ತು. ಆದರೆ ಅದು ಎಲ್ಲೋ ನನ್ನ ಭ್ರಮೆ ಅಥವಾ ಆಯಾಸದಿಂದಾದ ಅಚಾತುರ್ಯವೆಂದು ತಳ್ಳಿ ಹಾಕಿದ್ದೇ ಸುಮ್ಮನೆ ಬಿಟ್ಟಿದ್ದೆ. ಮತ್ತೆ ಕೆಲವು ಕಾಲ ಏನೂ ಸಮಸ್ಯೆ ಇರಲಿಲ್ಲ. ಈಗ ಮತ್ತೆ ಬಹಳ ಕ್ಲಿಷ್ಟ ಸಮಸ್ಯೆಯಾಗಿ , ಪೆಡಂಭೂತವಾಗಿ ನಿಂತುಬಿಟ್ಟಿದೆ. ಇದೋ ನೋಡು, ಹುಟ್ಟು ಹಣೆ ಬರಹ ದಾಖಲಿಸುವ ಪುಸ್ತಕ. ನನಗೆ ಅರಿವೇ ಇಲ್ಲದೆ ಎಷ್ಟೊಂದು ಎಂಟ್ರಿ ಗಳು- ನೊಂದಾವಣೆ ಯಾಗಿರುವ, ಆಗುತ್ತಿರುವ ಜೀವಗಳು! ನನ್ನ ಕೆಲಸದ ಪ್ರಕಾರ ಜೀವಿಗಳ ಕರ್ಮ ಕಾಂಡ, ಪಾಪ ಪುಣ್ಯ, ಜೀವನ ಚಕ್ರದಲ್ಲಿ ತಿರುಗಿಬಂದ ಅವರ ಜನಮಗಳ ಸಂಖ್ಯೆ, ಇವನ್ನೆಲ್ಲಾ ಪರಿಗಣಿಸಿ ಮುಂದಿನ ಜನ್ಮದ ರೂಪು ರೇಷೆ (ಫ಼್ಲೋ ಚಾರ್ಟ್) ತಯಾರಿಸಿ ಅದಕ್ಕೆ ಸೂಕ್ತ ಆಕಾರ ಕೊಟ್ಟು ಹಣೆ ಬರಹ ಬರೆದು, ಜನ್ಮಕ್ಕೆ ಹೊಂದಿಕೆ ಯಾಗುವ ಆತ್ಮವನ್ನು ಚಿತ್ರಗುಪ್ತ-ಯಮಧರ್ಮರು ನಿಯೋಜಿಸಿದ ನಂತರ ಆ ಜೀವಿಯು ಭೂಮಿಯಲ್ಲಿ ತನ್ನ ಆಟ ಆಡಲು ತೆರಳುವುದು ನಿನಗೆ ಗೊತ್ತೇ ಇದೆ. ಆದರೆ ನನ್ನ ಅರಿವಿಗೆ ಬಾರದೆ ಧರೆಯಲ್ಲಿರುವ ಜೀವಿಗಳ ಸಂಖ್ಯೆ ನೋಡು, ಅವುಗಳ ಪಟ್ಟಿ ನೋಡು! ಇವು ಯಾವುದರ ಪೂರ್ವಾ ಪರವೂ ನನಗೆ ತಿಳಿಯದು. ಸರಿ ಹಣೆ ಬರಹ ಬರೆಯೋಣವೆಂದರೆ ಆಯುಸ್ಸು ಸೊನ್ನೆಯಿಂದ ಶುರು ಆಗುತ್ತಿಲ್ಲ. ಎಲ್ಲೆಲಿಂದಲೋ ಶುರು ಆಗುತ್ತಿವೆ. ಒಂದದಕ್ಕೂ ಒಂದೊಂದು ವಿಭಿನ್ನ .ಇವರುಗಳ ಆಯಸ್ಸು ನಿರ್ಧರಿಸುವುದೇ ಕಷ್ಟಕರವಾಗಿಬಿಟ್ಟಿದೆ. ನನ್ನ ಅರಿವನ್ನೂ ಮೀರಿದೆ ಇವುಗಳ ಜೀವನದ ಪಟ. ಕೆಲವರಿಗೆ ಯಾವು ಯಾವುದೋ ಖಾಯಿಲೆ ಕಸಾಲೆ,ಕೆಲವರ ಆಯುಷ್ಯ ರೇಖೆ ಮುಗಿಯುತ್ತಲೇ ಇಲ್ಲ- ಅನಂತವಾಗಿರುವಂತೆ ತೋರುತ್ತಿದೆ. ಹೇ ಅನಂತಾ, ನಿನ್ನ ಹೆಸರಿಗೇ ಸಂಚಾಕಾರ ಬರುವಂತಿದೆ! ಈ ಜೀವಿಗಳಿಗೆಲ್ಲಾ ನಿಯೋಜಿಸುವಷ್ಟು ಆತ್ಮಗಳ ದಾಸ್ತಾನು ನನ್ನಲ್ಲಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ, ನನ್ನ ಕೆಲಸಕ್ಕೇ ಸಂಚಾಕಾರ ಬಂದಿದೆ. ನಾನು ನಿರುದ್ಯೋಗಿ ಆಗಬಹುದು ಅಥವಾ, ನೀನು ಇದಕ್ಕೊಂದು ಪರಿಹಾರ ತೊರದಿದ್ದಲ್ಲಿ, ಹೈರಾಣಾಗಿ ನಾನೇ ಸ್ವಯಂ ನಿವೃತ್ತಿ ತೆಗೆದುಕೊಳ್ಳಬೇಕಾಗಬಹುದು” ಎಂದು ಅಲವತ್ತುಕೊಂಡ.
ವಿಷ್ಣು, ನೆಟ್ಟಗೆ ಕುಳಿತು, ” ಅಯ್ಯಾ ಬ್ರಹ್ಮ, ನೀನು ನನ್ನ ನಾಭಿಯಿಂದ ಜನಿಸಿ ಪದ್ಮನಾಭನೆಂಬ ಸುಂದರ ಹೆಸರು ನನಗೆ ಬರುವಂತೆ ಮಾಡಿದ್ದೀಯೆ. ನನ್ನ ಈ ಜಗನ್ನಿಯಾಮಕ ಕಾರ್ಯದಲ್ಲಿ ಸೃಷ್ಟಿಯ ವಿಭಾಗವನ್ನು ಎಷ್ಟೋ ಕಲ್ಪಗಳಿಂದ ದಕ್ಷವಾಗಿ ನಡೆಸಿಕೊಂಡು ಬರುತ್ತಿದ್ದೀಯೆ. ಆಗಾಗ ಕೆಲವು ಅಪಾತ್ರರಿಗೆ ಕೇಳಿದ ವರಗಳನ್ನು ಹಿಂದು-ಮುಂದು ನೋಡದೆ ಕರುಣಿಸಿ ಸಮಸ್ಯೆಗೆ ಸಿಕ್ಕಿದ್ದನ್ನು ಬಿಟ್ಟರೆ ನೀನು ಮಹಾ ನಿರುಪದ್ರವಿ. ನಿನ್ನಿರುವೇ ನಮಗೆ ಗೊತ್ತಿರುವುದಿಲ್ಲ; ಹಾಗಿರುತ್ತೀಯ. ನಿನಗೆ ತಿಳಿಯದೆ ನಡೆದಿರುವ, ನಿನಗೇ ಕೋಪ ತರಿಸುತ್ತಿರುವ ಈ ಪರಿಸ್ಥಿತಿಯಾದರೂ ಏನದು. ಹಿಂದೆ ರಕ್ತ ಬಿಜಾಸುರನಿಗೆ ಕೊಟ್ಟಂಥ ವರದಂತೆ ಇನ್ಯಾರಿಗೂ ಏನೂ ಕೊಟ್ಟಿಲ್ಲ ತಾನೆ? ಎಂದು ಹೊಗಳುತ್ತಲೇ ಕೆದಕಿದ.
ಇಲ್ಲವೆಂದು ತಲೆಯಾಡಿಸುತ್ತಾ..” ಅಯ್ಯಾ ಪುರುಷೋತ್ತಮ, ಅಂಥಾ ತಪಸ್ಸನ್ನು ಮಾಡಬಲ್ಲ ಯೋಗ್ಯತೆ ಇರುವ ಯಾವ ಜೀವಿಯ ಸೃಷ್ಟಿಯೂ ಇತ್ತೀಚೆಗೆ ತನ್ನಿಂದ ಅಗಿಲ್ಲ..ಇನ್ನು ವರಕೊಡುವುದೆಲ್ಲಿಂದ…”. ಎಂದು ಹೇಳುತ್ತಿರುವಾಗಲೇ ಯಮ, ಯಮದೂತರು, ಚಿತ್ರಗುಪ್ತ ಎಲ್ಲರೂ ಓಡೋಡುತ್ತಾ, ಏದುಸಿರು ಬಿಡುತ್ತಾ ಒಳಬಂದರು. ಬ್ರಹ್ಮನಿಂದ ತಳ್ಳಿಸಿಕೊಂಡಾದ ಮೇಲೆ ಯಾರನ್ನೂ ತಡೆಯುವ ಸಾಹಸ ಆ ದ್ವಾರಪಾಲಕರು ಮಾಡಲಿಲ್ಲ ಪಾಪ!.
ಇದೇನು ಹೊಸ ತಲೆನೋವು ಬಂತಪ್ಪಾ.. ನಾನು ಈಗಾಗಲೇ ಒಂಭತ್ತು ಅವತಾರಗಳನ್ನು ಎತ್ತಿ ಭೂಭಾರ ಇಳುಹಿದ್ದಾಯ್ತು. ಇನ್ನೇನು ಸ್ವಲ್ಪ ಆರಾಮವಾಗಿರೋಣ ಎಂದರೆ ಈ ದೇವ ದೇವತೆಗಳು ಒಂದಲ್ಲಾ ಒಂದು ಕಿರಿ ಕಿರಿ ತಂದಿಡುತ್ತಿದ್ದಾರೆ. ಛೇ, ಇವರಿಗೆ ಕರ್ತವ್ಯ ದಕ್ಷತೆ, ಕಾರ್ಯ ಕ್ಷಮತೆ ಒಂದೂ ಇಲ್ಲ. ಮೇಲ್ವಿಚಾರಕರಿಲ್ಲದ ಕಚೇರಿಯಂತಾಗಿದೆ ಈ ವಿಶ್ವ. ಎಷ್ಟೆಲ್ಲ ತಯಾರಿ ಕೊಟ್ಟು ಅನುಭವಸ್ಥರನ್ನಾಗಿ ಮಾಡಿದರೂ ತಮ್ಮ ಪ್ರೋಟೊಕಾಲ್ ನಿಂದ ಅಚೆಗೆ ಯೋಚಿಸುವುದೇ ಇಲ್ಲ!! ಎಲ್ಲಕ್ಕೂ ನಾನೇ ತಲೆ ಕೊಡಬೇಕಾಗಿದೆ ಎಂದು ಚಿಂತಿಸುತ್ತಲೇ ಈ ಹೊಸಬರ ಅಹವಾಲು ಕೇಳಲು ಕಿವಿಯಾಗತೊಡಗಿದ.
ಮೊದಲು ಮಾತನಾಡಿದವನು ಯಮದೂತ! ಅವನ ಫೀರ್ಯಾದು ಯಮ ಧರ್ಮನ ಮೇಲೇ ಇತ್ತು. ” ಸ್ವಾಮಿ ನಿಮಗೆ ತಿಳಿಯದ್ದೇನಿದೆ? ಜೀವಿಗಳು ಜನ್ಮ ತಾಳಿದ ತಕ್ಷಣ ಅವರ ಜೀವಿತದ ಕಾಲ, ವೇಳಾಪಟ್ಟಿ, ಬ್ರಹ್ಮದೇವರಿಂದ ನಮಗೆ ರವಾನೆಯಾಗುವುದು ನಿಜವೇ. ಆಯಾ ಕಾಲಕ್ಕೆ , ಅಯುಷ್ಯಕ್ಕೆ ಅನುಗುಣವಾಗಿ ನಾವು ಪ್ರತೀ ದಿನಾಂಕದಲ್ಲೂ ಯಾರ್ಯಾರನ್ನು ಹೊತ್ತು ತರಬೇಕೆಂಬುದು ನೋಡಿಕೊಂಡು, ಅವುಗಳು ತಮ್ಮ ಸ್ಥೂಲ ರೂಪವನ್ನು ತ್ಯಜಿಸಿದ ನಂತರ ಸೂಕ್ಷ್ಮರೂಪವನ್ನು ಎಳೆದು ತರುವುದಲ್ಲವೇ ನಮ್ಮ ಕೆಲಸ?ನಮ್ಮ ಕೆಲಸದ ಪಾಳಿಯ ಪ್ರಕಾರ ಇಂತಿಂಥಾ ದಿನ ಇಷ್ಟಿಷ್ಟೇಂದು ಸೂಕ್ಷ್ಮ ರೂಪದ ಜೀವಿಗಳನ್ನು ಎಳೆದು ತರುತ್ತಿದ್ದೆವು. ಪಾಳಿಯ ನಂತರ ನಮಗೂ ವಿಶ್ರಾಂತಿ ಬೇಡವೇ? ಇತ್ತೀಚೆಗೆ ಲೆಕ್ಖಕ್ಕೇ ಇಲ್ಲದ ಎಷ್ಟೊ ಜೀವಿಗಳು ತಮ್ಮ ಹೊರ ಶರೀರವನ್ನು ಅಕಾಲದಲ್ಲಿ ತ್ಯಜಿಸುತ್ತಿವೆ. ಇದರಿಂದ ನಮಗೆ ಹೆಚ್ಚುವರಿ ಕೆಲಸ ಬಿದ್ದಿದೆ. ಅದೂ ಅಲ್ಲದೆ ಈ ಹೊಸ ಬಗೆಯ ಸೂಕ್ಷ್ಮ ಶರೀರಿಗಳು ನಮಗೂ ನವನವೀನ. ನೋಡಲು ಬಹುತೇಕ ಮನುಷ್ಯರಂತೆ ಕಂಡರೂ ಪೂರ್ತಿ ಅವರಲ್ಲ. ಅದೂ ಅಲ್ಲದೆ ನಮ್ಮ ನಿಯಮಗಳಿಗನುಸಾರವಾಗಿ ಅವರು ನಡೆಯದೆ ಹೇಳಲಾದದಷ್ಟು ಕಷ್ಟಕೋಟಲೆ ಕೊಡುತ್ತಾರೆ. ನಮ್ಮ ಪಾಶಕ್ಕೆ ಸಿಕ್ಕದೆ ಕೋಡಂಗಿಗಳಂತೆ ತಪ್ಪಿಸಿಕೊಳ್ಳುತ್ತವೆ. ಅವುಗಳನ್ನು ಹಿಡಿದು ಹೆಡೆಮುರಿ ಕಟ್ಟಿ ತರುವಷ್ಟರಲ್ಲಿ ನಮ್ಮ ಹೆಣವೇ ಬಿದ್ದು ಹೋಗಿರುತ್ತದೆ. ಸಾವಿತ್ರಿಯ ಗಂಡ ಸತ್ಯವಾನನ ನಂತರದಲ್ಲಿ ನಾವಿಷ್ಟು ಪರಿಪಾಟಲು ಪಟ್ಟಿರಲೇ ಇಲ್ಲ. ಅದಾದರೂ ಎಂಥ ಶ್ರೇಯಸ್ಕರ ಅನುಭವವಾಗಿತ್ತು. ಉಳಿದ ಪ್ರಾಣಿಗಳಲ್ಲೂ ಆಗಾಗ ಈ ರೀತಿ ಆಗುವುದುಂಟು ;ಅದರೆ ಅವು ಇಷ್ಟೊಂದು ಹೈರಾಣ ಮಾಡುವುದಿಲ್ಲ. ಈ ಕೆಲಸ ಸಾಕೆನಿಸಿದೆ. ನಾವೆಲ್ಲ ಕೂಡಿ ರಾಜಿನಾಮೆ ಕೊಡಬೇಕೆಂದಿದ್ದೇವೆ” ಎಂದ ಒಂದೇ ಉಸಿರಿಗೆ.
ವಿಷ್ಣುವಿಗೆ ಬ್ರಹ್ಮನ ಮೇಲೆ ಅನುಮಾನ ಹೆಚ್ಚಾಯ್ತು. ಇವನೆಲ್ಲೊ ಮತ್ತೊಬ್ಬ ಹಿರಣ್ಯ ಕಶ್ಯಪುವಿಗೋ ಇಲ್ಲ ರಕ್ತಬೀಜಾಸುರನಿಗೋ ವರವಿತ್ತು ಪರಪಟ್ಟು ಮಾಡಿಕೊಂಡಿರಬೇಕೆಂದೇ ಅನುಮಾನದಿಂದ ಅವನತ್ತ ನೋದಿದ. ಬ್ರಹ್ಮನ ಮುಖದಲ್ಲಿ ದುಗುಡ ಮಡುಗಟ್ಟಿತ್ತೇ ವಿನ್ಃ ಅಪರಾಧಿ ಮನೋಭಾವ ಕಾಣಲಿಲ್ಲ.
ಸರಿ, ಯಮಧರ್ಮನ ಕಡೆಗೆ ತಿರುಗಿದ ವಿಷ್ಣು ನಿನ್ನದೇನು ಹೇಳಿಬಿಡು; ಅದೂ ಕೇಳಿ ಬಿಡುತ್ತೇನೆ ಎಂಬಂತೆ ಸನ್ನೆ ಮಾಡಿದ.
ದೊಡ್ದದೊಂದು ಉಸಿರೆಳೆದುಕೊಂಡ ಯಮಧರ್ಮ ತನ್ನನ್ನು ದೂರುವ ತೆರದಲ್ಲಿ ಫೀರ್ಯಾದು ಮಾಡಿದ ಯಮಭಟರ ಕಡೆಗೂ,ಎಲ್ಲ ತಪ್ಪೂ ಬ್ರಹ್ಮನದೇ ಎಂಬ ಅನುಮಾನದಿಂದ ಬ್ರಹ್ಮನ ಕಡೆಗೂ ನೋಡಿ ತನ್ನ ಪ್ರವರ ಶುರು ಹಚ್ಚಿಕೊಂಡ. ” ಮಹಾದೇವ, ಇವರುಗಳು ಹೇಳೀದ್ದೆಲ್ಲಾ ನೀನೇ ಕೇಳಿರುವೆ.ಇತ್ತೀಚೆಗೆ ಯಮಭಟರು ಎಲ್ಲಾ ವಿಷಯಕ್ಕೂ ನನ್ನನ್ನೇ ಕರೆಯುವ ಅಭ್ಯಾಸ ಮಾಡಿಕೊಂಡುಬಿಟ್ಟಿದ್ದಾರೆ. ಇದೇನು ಅವರ ಕಾರ್ಯಕ್ಷಮತೆ ಕಡಿಮೆಯಾಗಿರುವ ಕುರುಹೋ ಇಲ್ಲಾ ಕರ್ತವ್ಯ ದಕ್ಷತೆ ಕ್ಷೀಣಿಸುತ್ತಿರುವ ಸೂಚನೆಯೊ,ಇಲ್ಲ ನನ್ನ ನಿರ್ದೇಶನ, ನಿಭಾವಣೆಗಳು ನಿರ್ನಾಮ ಅಗುತ್ತಿರುವ ಲಕ್ಷಣವೋ, ಅಥವಾ ಈ ಜೀವಿಗಳು ನಿಜವಾಗಿಯೂ ನಮ್ಮ ಪಟ್ಟಿಗೆ ಜಗ್ಗದ ವಿಲಕ್ಷಣ ಪ್ರಭೇದವೋ ಒಂದೂ ತಿಳಿಯದಾಗಿದೆ. ಈ ಯಮ ಭಟರು ನನ್ನನ್ನು ಕರೆದಾಗ ಹೋಗಿ ಆ ವಿಲಕ್ಷಣ ಜೀವಿಗಳನ್ನು ಹಿಡಿಯುವುದು ಒಂದು ಪ್ರಯಾಸಕರವಾದ ಕೆಲಸವಾಗಿಬಿಟ್ಟಿದೆ. ಅವುಗಳನ್ನು ಕೋಳಿ, ನಾಯಿ, ಹಂದಿಗಳಂತೆ ಅಟ್ಟಾಡಿಸಿಕೊಂಡು ಹಿಡಿಯುವುದರಲ್ಲಿ ಸಾಕು ಬೇಕಾಗಿಹೋಗಿದೆ. ನಾವು ಪಡುವ ಪರಿಪಾಟಲಿಗೆ ನನಗೇ ಒಮ್ಮೊಮ್ಮೆ ನಗು ಬರುವಂತಾಗುತ್ತದೆ.ಯಾರಾದರೂ ನೋಡಿಬಿಟ್ಟಲ್ಲಿ ನಗೆಪಾಟಲಿಗೀಡಾಗಿ ನನ್ನ ಮೇಲಿನ ಭಯ ಭಕ್ತಿಗಳನ್ನು ಎಲ್ಲಿ ಕಳೆದುಕೊಳ್ಳುವುನೋ ಎಂಬ ಚಿಂತೆಯೂ ಕಾಡುತ್ತಿದೆ. ದೇವಾ, ಇವು ಬಹಳ ಕುತಂತ್ರಿ ಜೀವಿಗಳು.ಅಷ್ಟೆಲ್ಲಾ ಕಷ್ಟ ಪಟ್ಟು ಹೆಡೆಮುರಿಕಟ್ಟೀ ಹಿಡಿದು ತಂದು ವಿಚಾರಣೆಗೆ ನಿಲ್ಲಿಸಿದೆವೋ,ಈ ಚಿತ್ರಗುಪ್ತ ಕೈಕೊಡುತ್ತಾನೆ. ಅವನ ದಫ್ತರಿನ ದೊಡ್ಡ ಪುಸ್ತಕಗಳಲ್ಲಿ ಅವುಗಳ ನಮೂದೇ ಇರುವುದಿಲ್ಲ. ನಾವೇ ಕಪಿಗಳಂತೆ ಮಿಕ ಮಿಕ ನೋಡುವುದಾಗುತ್ತದೆ. ಆ ಕಟಕಟಯಲ್ಲಿ ನಿಂತು ನಮ್ಮನ್ನೇ ನೋಡಿ ಗಹಗಹಿಸಿ ನಗುತ್ತವೆ.ನಮ್ಮನ್ನೇ ಪರಿಹಾಸ್ಯ ಮಾಡುತ್ತವೆ. ಧರ್ಮಪಾಲನೆಗೆ ನಿಂತ ನಾನು ಅವುಗಳ ಮೇಲಿನ ದಾಖಲೆ ಇಲ್ಲದೆ ಅಪವಾದ ಹೊರಿಸುವುದಾದರೂ ಹೇಗೆ, ವಿಚಾರಣೆ ಮಾಡುವುದಾದರೂ ಎಲ್ಲಿಂದ. ಭೋಲೋಕದಲ್ಲಿದಾಗ ಅವು ಮಾಡಿದ ಕುಚೇಷ್ಟೆಗಳೇನು ಕಡಿಮೆಯಿಲ್ಲ. ನ್ಯಾಯಯುತ , ಸಾಮಾನ್ಯ ಜೀವಿಗಳಿಗೆ ಇವು ಕೊಡುತ್ತಿರುವ ಕೋಟಲೆಗಳು ಒಂದೆರೆಡಲ್ಲ. ಆದರೆ ನಮಗೆ ಸೂಕ್ತ ದಾಖಲೆಗಳೇ ಇಲ್ಲದೆ ನಾವು ಮುಂದುವರಿಯುವುದಾದರೂ ಹೇಗೆ. ನಮ್ಮ ನಿಜ ಮಾನವರನ್ನು ನಾವು ಕಾಯಲಾಗದಂತಾಗಿದೆ.ನನಗೆ ಬರುವ ಸಿಟ್ಟಿಗೆ ಕಾದ ಎಣ್ಣೆ ಕೊಪ್ಪರಿಗೆಯಲ್ಲಿ ಎಸೆಯುವ ಬಯಕೆ ಆಗುತ್ತಿದೆ. ಕಷ್ಟಪಟ್ಟು ಗುರುತು ಹಿಡಿದು ಅವರ ಕರ್ಮ ಕಾಂಡಗಳ ಪಟ್ಟಿ ತೆಗೆದೆವೋ,ಅದರಲ್ಲಿನ ದಿನ, ಮಾಸ, ವಾರ, ತಿಥಿ, ವೇಳೆ ಇವೆಲ್ಲ ತಾಳೆ, ಹೊಂದಾಣಿಕೆ ಅಗುವುದಿಲ್ಲ. ಎಲ್ಲ ಅಯೋಮಯ. ನಮಗೇ ತಿರುಗಿ ಸವಾಲು ಹಾಕುತ್ತವೆ. ಈ ಚಿತ್ರಗುಪ್ತನಿಗೂ ಅರುಳು ಮರುಳೆಂದು ಕಾಣುತ್ತದೆ. ಒಟ್ಟಿನಲ್ಲಿ ನಾನೇ ನರಕ ವಾಸಿಯಾಗಿಬಿಟ್ಟಿದ್ದೇನೆ ನೋಡು. ಸಾವಿತ್ರಿ, ಸತ್ಯವಾನ, ನಚಿಕೇತ, ಧರ್ಮರಾಯ,ಭೀಷ್ಮನೇ ಮೊದಲಾದ ಮಹಾನ್ ವ್ಯಕ್ತಿಗಳೊಡನೆ ವ್ಯವಹರಿಸಿದ ನಾನು ಯಕಃಶ್ಚಿತ್ “ಬೇವಾರ್ಸಿ”ಗಳಂತಿರುವ ಈ ಸೂಕ್ಷ್ಮಜೀವಿಗಳಿಂದ ಅಪಹಾಸ್ಯಕ್ಕೊಳಗಾಗುವುದೆಂದರೇನು? ಇವರುಗಳನ್ನು ನಿಯಂತ್ರಿಸಲಾಗದೆ ಲೋಕದ ಪರಿಹಾಸ್ಯಕ್ಕೆ ಗುರಿಯಗುವೆನೆಂಬುವುದೇ ನೋವಿನ ಸಂಗತಿ ” ಎಂದೆಂದು ನಿಲ್ಲಿಸಿದ. ’ಬೇವಾರ್ಸಿ’ ಅಂತೇಕೆ ಅವುಗಳನ್ನು ಕರೆದ ಎಂದು ವಿಷ್ಣು ಚಿಂತಿಸುತ್ತಿರವಲ್ಲಿ…
ತನ್ನ ಕರ್ತವ್ಯ ಪ್ರಜ್ಞೆಗೇ ಕೊಡಲಿಯೇಟು ಹಾಕಿದ ಯಮಧರ್ಮನನ್ನು ಮನದಲ್ಲೇ ನಿಂದಿಸುತ್ತಾ,, ಚಿತ್ರಗುಪ್ತ ತನ್ನ ಅಹವಾಲನ್ನೂ ಆಲಿಸಬೇಕೆಂದು ಸಣ್ನದನಿಯಲ್ಲಿ ಕೋರಿದ. ಎಂಥೆಂಥಾ ಹೇಮಾಹೇಮಿ ವ್ಯಕ್ತಿಗಳನ್ನೂ ಬಿಡದೆ ನಿರ್ದಾಕ್ಷಿಣ್ಯವಾಗಿ ಅವರುಗಳ ಧರ್ಮ-ಕರ್ಮಗಳನ್ನು ಬಯಲಿಗೆಳೆದು ಬೆತ್ತಲು ಮಾಡುತ್ತಿದ್ದ ಚಿತ್ರಗುಪ್ತ ಈಗ ತನ್ನ ಪರಿಣತಿಯನ್ನೇ ಸಂದೇಹಿಸುವ ಪರಿಸ್ಥಿತಿಯಲ್ಲಿ ಸಿಲುಕಿದ್ದ. ಈ ಲೋಕ ಸೃಷ್ಟಿಯಾಗಿ ಹಲವಾರು ಬ್ರಹ್ಮ ಕಲ್ಪಗಳು ಕಳೆದಿದ್ದರೂ, ಲೆಕ್ಖವಿಲ್ಲದಷ್ಟು ಜೀವಿಗಳ ಜೀವನದ ಲೆಕ್ಖಾಚಾರವನ್ನು ಕರಾರವಾಕಕಾಗಿ ಸೂಪರ್ ಕಂಪ್ಯೂಟರ್ನಂತೆ ದಾಖಲಿಸಿ ,ಬೇಕೆಂದಾಗ ಮಿಂಚಿನೋಪಾದಿಯಲ್ಲಿ ಹೊರಗಳೆದು ಪ್ರಸ್ತುತಪಡಿಸುತ್ತಿದ್ದ ತಾನು ಇತ್ತೀಚಿನ ಕೆಲವೇ ವರ್ಷಗಳಲ್ಲಿ ಈ ರೀತಿ ತಲೆ ಬುಡಗಳು ಹೊಂದಾಣಿಕೆಯಾಗದಂತೆ ದಾಖಲಿಸುವುದೆಂದರೇನು? ತಾನು ಎಷ್ಟೇ ಪ್ರಯತ್ನ ಪಟ್ಟರೂ ಇದರ ಮರ್ಮ ತನಗೆ ಅರ್ಥವಾಗದೆ ಹೋದದ್ದೇನು?ಮೊದಲ ಹೆಜ್ಜೆಯಲ್ಲಿ ತಪ್ಪು ಮಾಡಿದ ಗಣಿತಜ್ಞ್ನ ಕಡೆಯಲ್ಲಿ ಉತ್ತರವನ್ನು ತಪ್ಪೇ ಪಡೆಯುವಂತೆ ಬ್ರಹ್ಮ ಕೊಟ್ಟ ಲೆಕ್ಖವೇ ತಪ್ಪಿದ್ದರೆ ಅದು ತನ್ನ ದೋಷವಾಗುವುದಾರರೂ ಎಂತು? ತನ್ನ ಯಾವ ಪಾಪಕಾರ್ಯಕ್ಕೆ ತನಗೀ ಪರೀಕ್ಷೆಯನ್ನು ಈ ವಿಧಿ ತಂದೊಡ್ಡಿರಬಹುದು?ಎಂಬೆಲ್ಲಾ ಪ್ರಶ್ನೆಗಳನ್ನು ತನಗೆ ತಾನೇ ಕೇಳಿಕೊಂಡು, ಉತ್ತರ ಸಿಗದೆ ತಡಕಾಡುತ್ತಾ ತಳಮಳಗೊಳ್ಳುತ್ತಿದ್ದ.
ವಿಷ್ಣುವು ತಲೆಯಾಡಿಸಿ ನೀನೂ ಅರುಹೆನ್ನಲು,, ತನ್ನೆಲ್ಲ ಸಂದೇಹಗಳನ್ನು ವಿಷ್ಣುವಿಗೆ ವರ್ಗಾಯಿಸಿ ಇದರಲ್ಲಿ ತನ್ನ ತಪ್ಪಿಲ್ಲವೆಂದೂ,ಇದೇನೋ ಮಾಯೆಯ ಮಸಲತ್ತೇ ಇರಬೇಕೆಂದೂ,ತನ್ನ ತಲೆ ಕೆಟ್ಟು ಗೊಬ್ಬರವಾಗುವುದರೊಳಗೆ ಇದಕ್ಕೊಂದು ಪರಿಹಾರ ಸೂಚಿಸಬೇಕೆಂದೂ,ಇಲ್ಲವಾದರೆ ತನ್ನನ್ನು ವಜಾ ಮಾಡಿ ಮನೆಗೆ ಕಳಿಸಬೇಕೆಂದೂ ಕೋರಿದ.
ವಿಷ್ಣುವಿಗೆ ಪೀಕಲಾಟಕ್ಕಿಟ್ಟುಕೊಂಡಿತು.ಆಗ ಇಲ್ಲಿಯವರೆಗೂ ಸುಮ್ಮನಿದ್ದು ತನ್ನ ಸಮಸ್ಯೆಯನ್ನು ಪೂರ್ಣ ಹೇಳಿಕೊಂಡಿರದ ಭೂದೇವಿಯು “ದೇವಾ ನಾನು ಕಡೆಯಲ್ಲಿ ಹೇಳಬೇಕಾದದ್ದು ಇದೇ ಸಮಸ್ಯೆಗೆ ತಳುಕು ಹಾಕಿಕೊಂಡಿದೆ. ಈ ಹೊಸ ಬೆಳವಣಿಗೆಯು ನನಗೆ ಬಹಳ ತಳಮಳ ಉಂಟುಮಾಡಿದೆ. ಇದು ಹೀಗೇ ಮುಂದುವರಿದಲ್ಲಿ ನನ್ನನ್ನು ಕಾಡುತ್ತಿರುವ ಇವರುಗಳು ನಿಯಂತ್ರಣಕ್ಕೆ ಸಿಗದೆ ಜೀವಸಹಿತ ತಿಂದುಬಿಡುವರು.ನಿನ್ನ ಸೃಷ್ಟಿಯಲ್ಲಿಯೇ ಅತೀ ಸುಂದರಳೆಂದು ಖ್ಯಾತಿವೆತ್ತಿದ್ದ ನಾನು ಈಗ ಕುರೂಪಿಯಾಗುತ್ತ ನಡೆದಿದ್ದೇನೆ. ಅದಕ್ಕೇ ನಿನಗೆ ನನ್ನ ಮೇಲಿನ ವ್ಯಾಮೋಹ ಹೊರಟು ಹೋಯಿತೋ?” ಎಂದೆನ್ನುತ್ತಾ ಅವನ ಅಂತರಾಳಕ್ಕೆ ಕೈಹಾಕಿ ಚಿವುಟಿದಳು.
ಮುಖ ಹುಳ್ಲಗೆ ಮಾಡಿದ ವಿಷ್ಣು ಲಕ್ಷ್ಮಿಯ ಕಡೆಗೊಮ್ಮೆ ಕಳ್ಳನೋಟ ಬೀರಿದ. ಅವಳು ಸಮಸ್ಯಯಲ್ಲಿ ತಾನೂ ಕುತೂಹಲಗೊಂಡಿದ್ದು ಭೂದೇವಿಯ ಮರ್ಮಾಘಾತ ಮಾತಿಗೆ ಸವತಿ ಪ್ರತಿಕ್ರಿಯೆ ನೀಡಲಿಲ್ಲ. ನಿರಾಳವಾದ ವಿಷ್ಣುವು ಯೋಚಿಸಿದ.’ ಇವರೆಲ್ಲರ ಪರಿಪಾಟಲಿನ ಕಷ್ಟಕೋಟಲೆಗಳ ಮೂಲಕಾರಣ ಒಂದೇ ಇರಬೇಕು. ಅದನ್ನು ಕಂಡು ಹಿಡಿದರೆ ಅರ್ಧ ಕೆಲಸ ಮುಗಿದಹಾಗೆ’ ಎಂದುಕೊಂಡು ಎಲ್ಲಿಂದ ಶುರು ಮಾಡಲೀಯೆಂದು ಯೊಚಿಸತೊಡಗಿದ.
ಆದಿಶೇಷನ ಮೇಲೆ ಒರಗಿದ್ದ ವಿಷ್ಣು ಎದ್ದು ಸರಿಯಾಗಿ ಕುಳಿತು ಅವರನ್ನೆಲ್ಲ ಉದ್ದೇಶಿಸಿ ನುಡಿದ ” ನಿಮ್ಮೆಲ್ಲಾ ಸಮಸ್ಯೆಗಳ ಮೂಲ ಒಂದೇ ಸಾಮಾನ್ಯಕಾರಣದಿಂದ ಉದ್ಭವಿಸಿರಬೇಕು. ಎಲ್ಲರ ಸಮಸ್ಯೆಗಳು , ಅದರ ಕಥೆಗಳನ್ನು ಇದುವರೆಗೂ ಕೇಳಿದಿರಿ. ಅದರಿಂದ ಈಗ ನಿಮಗೇನಾದರೂ ಹೊಳೆಯಿತೋ?”.
ಬಸವಳಿದು ಹೈರಾಣವಾಗಿದ್ದ ಅವರ್ಯಾರೂ ಯೋಚಿಸುವ ಸ್ಥಿತಿಯಲ್ಲಿ ಇರಲಿಲ್ಲ.
ಎಲ್ಲರೂ ಒಕ್ಕೊರಲಿನಿಂದ ” ದೇವಾ ಜಗದೋದ್ಧಾರನೂ,ಸರ್ವಾಂತರ್ಯಾಮಿಯೂ,ಜಗನ್ನಿಯಾಮಕನೂ,ನಮ್ಮೆಲ್ಲರನ್ನು ಆಡಿಸುವ ಸೂತ್ರಧಾರಿಯೂ ಆಗಿರುವ ನೀನೇ ಇದಕ್ಕೆ ಸಮರ್ಪಕ ಪರಿಹಾರ ಕೊಡಿಸಬೇಕು. ನಾವೆಲ್ಲಾ ಅಸಹಾಯಕರು” ಎಂದು ಉದ್ಘೊಷಿಸುತ್ತಾ ಅವನ ಕಾಲಿಗೆ ಬಿದ್ದರು.
ಅಷ್ಟರಲ್ಲಿ ನಾರದರ ಆಗಮನ ಆಯ್ತು. ನಾರಾಯಣ, ಇದೇನು ಎಲ್ಲರೂ ನಿನ್ನ ವೈಕುಂಠದಲ್ಲಿ ಠಿಕಾಣಿ ಹಾಕಿಬಿಟ್ಟಿದ್ದಾರೆ? ಕೆಲಸಕಾರ್ಯಗಳಿಗೆಲ್ಲ ಇವತ್ತು ರಜೆಯೋ ಹೇಗೆ ” ಕೀಟಲೆ ಮಾಡಿದರು. ವಿಷ್ಣುವು ಅವರನ್ನು ಕುರಿತು” ನಾರದರೇ ಇವರಿಗೆ ಬಂದಿರುವ ಕಷ್ಟ ನಿಮಗೆ ತಿಳಿದೇ ಇರುತ್ತದೆ. ಇದೆಲ್ಲದರ ಕಾರಣ ನಿಮಗೆ ತಿಳಿದಿದೆಯೋ”? ಕೇಳಿದ. ನಾರದರಿಗೆ ಆಶ್ಚರ್ಯ,, ಸಂಬಂಧದಲ್ಲಿ ನಾನು ಕಿರಿಯ, ಬ್ರಹ್ಮನ ಮಗನಾದ ನಾನು ಇವನಿಗೆ ಮೊಮ್ಮಗನಾಗಬೇಕು. ಯಾವಾಗಲೂ ನೀನು, ತಾನು ಎಂದು ಏಕವಚನದಲ್ಲಿ ಕರೆಯುತ್ತಿದ್ದ ಇವತ್ತು ನೀವು, ನಿಮಗೆ ಎಂಬ ಬಹುವಚನ ಪ್ರಯೋಗ ಮಾಡುತ್ತಿದ್ದಾನಲ್ಲ!, ತಲೆ ಬಿಸಿ ಆಗಿರಲೇ ಬೇಕು ಎಂದು ಅವರಿಗೆ ಗೊತ್ತಾಯಿತು. ಕಬ್ಬಿಣ ಕಾದಿರುವಾಗಲೇ ಬಡಿಯಬೇಕೆಂದು ತಮ್ಮ ಎಂದಿನ ಧಾಟಿಯಲ್ಲಿ ಹೇಳಿದರು; ಹೇ ಭಗವಂತಾ,.. ಬ್ರಹ್ಮಾಂಡವೇ,,ಆ ದೇವನಾಡುವ ಬೊಂಬೆಯಾಟವಯ್ಯ, ಅಂಬುಜ ನಾಭನ, ಅಂತ್ಯವಿಲ್ಲದಾತನ ತುಂಬು ಮಾಯವಯ್ಯಾ… ಈ ಲೀಲೆಯು …ಎಂದು ನಾನು ನಿನ್ನನ್ನು ಯಾವತ್ತಿನಿಂದಲೂ, ಅದೆಷ್ಟು ಬಾರಿ ಸ್ತುತಿಸಿಲ್ಲ. ಈಗ ನೋಡಿದರೆ ಭೂಮಿಯಲ್ಲಿ ಬೇರೆಯೇ ಆಟ ನಡೆದಿದೆ. ಅಲ್ಲಿ, ಆ ಭೂಮಿಯಲ್ಲಿ, ನೀನು ಸೂತ್ರ ಕಟ್ಟಿರದ, ನಿನ್ನ ರಾಗದಾ ಭೋಗದಾ ಉರುಳಲ್ಲಿ ಸಿಕ್ಕಿರದ ಅದೆಷ್ಟೋ ಬೊಂಬೆಗಳು ಅವತರಿಸಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ.ಅವು ಇವರೆಲ್ಲರ ಕಾರ್ಯವಿಧಾನಕ್ಕೆ ಕೊಡಲಿ ಪೆಟ್ಟು ಕೊಡುತ್ತಿರುವುದೂ ನೋಡಿದ್ದೇನೆ. ಇದು ಹೀಗೇ ಮುಂದುವರಿದರೆ ನನ್ನ ಈ ಹಾಡಿಗೆ ಅರ್ಥವಿಲ್ಲದೆ ಹೋಗುತ್ತದೆ. ಅದರ ಸಾಹಿತ್ಯ ಬದಲಾಯಿಸಬೇಕಾಗುವುದು. ನಾನು ಕೇವಲ ಸುದ್ದಿಗಾರನಷ್ಟೇ. ನನಗೆ ಕಾರ್ಯಕಾರಣ ಸಂಬಂಧ ತಿಳಿಯದು. ಆದರೂ ಇದು ಮಾನವರು ಕಲಿತುಕೊಂಡಿರುವ ವೈದ್ಯವಿಜ್ಞ್ನಾನದ ಕರಾಮತ್ತೆಂದು ತೋರುತ್ತಿದೆ. ಯಾವುದಕ್ಕೂ ಅಶ್ವಿನೀ ದೇವತೆಗಳನ್ನು ಕರೆಸಿ ನೋಡು” ಎಂದರು. ಯಾವತ್ತಿನಂತೆ ಅಪೂರ್ಣ ಸಲಹೆ ನೀಡಿ ಮತ್ತಷ್ಟು ಮಜಾ ಪಡೆಯುವ ನಾರದರ ಬುದ್ಧಿ ಅಲ್ಲೂ ಸುಮ್ಮನಿರಲಿಲ್ಲ,. ಈ ನಾರದ ನನ್ನ ಪಾರಮ್ಯವನ್ನೇ ಪ್ರಶ್ನಿಸಬಲ್ಲ ಸನ್ನಿವೇಶದ ಮಾತಾನಾಡುತ್ತಿದ್ದಾನಲ್ಲ. ಇದೇನಿರಬಹುದು. ಸ್ವಲ್ಪ ಮೈಮರೆತಿದ್ದಕ್ಕೆ ಏನೇನೋ ನಡೆದು ಹೋಗಿದೆ ಎಂದು ಕಿರೀಟ ತೆಗೆದು, ತಲೆ ಕೆರೆದುಕೊಂಡು ಅಶ್ವಿನೀದೇವತೆಗಳನ್ನು ಕರೆಸಿದ.
ಅವರುಗಳಿಬ್ಬರೂ ಬಂದರು. ಈ ನಡುವೆ ಕೆಲಸವಿಲ್ಲದ್ದಕ್ಕೋ ಏನೋ ಒಂದು ರೀತಿಯ ಆಲಸ್ಯ ಅವರ ಮುಖದಲ್ಲಿ ಮನೆ ಮಾಡಿತ್ತು. ದೇಹವೂ ಸ್ವಲ್ಪ ಸ್ಥೂಲವಾದ್ದು ಮುರಾರಿಯ ಗಮನಕ್ಕೆ ಬಾರದಿರಲಿಲ್ಲ.
“ಏನ್ರೀ ಸಮಾಚಾರ. ಏನಾಗ್ತಿದೆ ಅಲ್ಲಿ, ಅ ಭೂಲೋಕದಲ್ಲಿ.” ಕೇಳಿದ
ಅವರು ” ದೇವಾಧಿದೇವಾ, ಮಾನವರು ಬಹಳವಾಗಿ ಮುಂದುವರಿದಿದ್ದಾರೆ. ಬಗೆ ಬಗೆಯ ಔಷಧಿಗಳನ್ನೂ, ಶಸ್ತ್ರಚಿಕಿತ್ಸಾ ವಿಧಾನಗಳನ್ನೂ ಕಂಡುಹಿಡಿದುಕೊಂಡಿದ್ದಾರೆ. ಬಹಳಷ್ಟು ಖಾಯಿಲೆಗಳಿಗೆ ಮದ್ದು ಸಿಕ್ಕಿರುವುದರ ಪರಿಣಾಮ, ಮಕ್ಕಳಿಗೆ ಖಾಯಿಲೆಯಾದಾಗ ತಾಯಂದಿರು ನಮ್ಮನ್ನು ನೆನೆಯುವುದೇ ಇಲ್ಲ. ’ಎನ್ನ ಬಿನ್ನಪ ಕೇಳೊ ಧನ್ವಂತ್ರಿ ದಯಮಾಡೊ’ ಎಂಬಿತ್ಯಾದಿ ಹಾಡುಗಳು ಅವರ ನೆನಪಿನಲ್ಲೇ ಇಲ್ಲ. ಅವರುಗಳು ಕರೆಯುತ್ತಿಲ್ಲವಾಗಿ ನಾವು ಆಕಡೆ ತಲೆ ಹಾಕದೆ ವರ್ಷಗಳೆ ಉರುಳಿಹೋದವು. ’ಬರೆಯದೆ ಓದುವನ, ಕರೆಯದೇ ಹೊಗುವನ ಬರಿಗಾಲಿನೋಲ್ ತಿರುಗುವನ ಹಿಡಿದು’ ಎಂಬ ವಚನವೇ ಇದೆಯಲ್ಲ. ನಾವಾದರೂ ಏನು ಮಾಡಬಹುದು. ಎಲ್ಲ ನಿನ್ನ ನಿಯಾಮಕವೇ ಇರಬಹುದೆಂದು ನಾವು ಸುಮ್ಮನಿದ್ದೆವು’” ಎಂದು ಹೇಳಿ ತಮ್ಮ ಬೆನ್ನ ಮೇಲಿನ ಭಾರ ಇಳಿಸಿಕೊಂಡರು.!
ಈಗ ಬಂದಿರುವ ಹೊಸ ಸಮಸ್ಯೆಯನ್ನು ಅವರಿಗೆ ವಿವರಿಸಿ,ಈಗಿಂದೀಗಲೇ ಭೂಮಿಗೆ ತೆರಳಿ ಮಾನವರೂಪದಲ್ಲಿದ್ದು,ಅವರ ಎಲ್ಲ ಕಾರ್ಯಕಲಾಪಗಳನ್ನೂ, ಈ ಎಲ್ಲ ಅಯೋಮಯವಾಗಿರುವ ಪರಿಸ್ಥಿತಿಯ ಕಾರ್ಯಕಾರಣ ಸಂಬಂಧಗಳನ್ನೂ ಕೂಲಂಕುಷವಾಗಿ ವಿಶ್ಲೇಷಿಸಿ ತಂದು ತನಗೆ ಕರಾರುವಾಕ್ ವರದಿ ಒಪ್ಪಿಸಬೇಕೆಂದು ಆಜ್ಞಾಪಿಸಿ ಕಳಿಸಿದ. ಹಿಂದೆ ಸಂಜೀವಿನಿ ವಿದ್ಯೆ ಕಲಿಯಲೆಂದು ದೈತ್ಯ ಗುರು ಶುಕ್ರಾಚಾರ್ಯನ ಬಳಿಗೆ ಹೋದ ದೇವಗುರು ಬೃಹಸ್ಪತಿಯ ಮಗ ಕಚ ಅಲ್ಲಿ ದೇವಯಾನಿಯ ಪ್ರೇಮಪಾಶದಲ್ಲಿ ಸಿಕ್ಕು , ಪ್ರೇಮ ನಿಭಾಯಿಸದೆ ಅವಳಿಂದ ದೂರವಾಗಿ, ಮತ್ತೆ ಶಾಪಕ್ಕೆ ತುತ್ತಾಗಿ ಕೈಗೆ ಬಂದದ್ದು ಬಾಯಿಗೆ ಬರದಂತೆ ಆದಹಾಗೆ ಮಾಡಿಕೊಳ್ಳಬಾರದೆಂದೂ, ಹೆಣ್ಣು ಹೊನ್ನುಗಳ ಜೇನಿನ ಜೇಡರಬಲೆಯನ್ನು ನೇಯುವುದರಲ್ಲಿ ಮನುಷ್ಯರು ದಾನವರನ್ನೂ ಮೀರಿಸುವವರಾಗಿದ್ದಾರೆಂದೂ, ಯಾವ ಅವಘಡದಲ್ಲೂ ಸಿಲುಕದಂತೆ ಜಾಗ್ರತೆಯಿಂದ ಜಾಗರೂಕರಾಗಿ ನಿಭಾಯಿಸಿಕೊಂಡು ಬರಬೇಕೆಂಬ ಎಚ್ಚರಿಕೆಯನ್ನು ಕೊಡೊವುದನ್ನು ಮರೆಯಲಿಲ್ಲ.
ಅಶ್ವಿನೀ ದೇವತೆಗಳು ಅವಳಿ -ಜವಳಿ ವಿಜ್ಞ್ನಾನಿಗಳ ರೂಪದಲ್ಲಿ ಇಳೆಗಿಳಿದು ಜೀವ ವಿಜ್ಞ್ನಾನ ಪ್ರಯೋಗಶಾಲೆಯೊಂದರಲ್ಲಿ ತಮ್ಮ ಅಪ್ರತಿಮ ಪ್ರತಿಭೆ ಪ್ರದರ್ಶಿಸಿ ಕೆಲಸಕ್ಕೆ ಸೇರಿದರು. ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಎಲ್ಲ ಒಳಮರ್ಮ ತಿಳಿದು ದಿಗ್ಭ್ರಮೆಗೊಂಡರು. ಬ್ರಹ್ಮನನ್ನು ಹೊರತು ಪಡಿಸಿದರೆ ಈ ಪ್ರಪಂಚದ ಸೃಷ್ಟಿಗೆ ಕೈಹಾಕಿದವನು ವಿಶ್ವಾಮಿತ್ರ ಮಾತ್ರನಾಗಿದ್ದ. ಅವನನ್ನು ಆ ಕೆಲಸದಿಂದ ವಿಮುಖಗೊಳಿಸಿದ ಇಂದ್ರ ತನ್ನ ಸ್ವರ್ಗಾಧಿಪತ್ಯವನ್ನು ಅನನ್ಯವಾಗಿ ಉಳಿಸಿಕೊಂಡಿದ್ದ. ಈಗ ನೋಡಿದರೆ ಒಬ್ಬಿಬ್ಬರಲ್ಲ ಎಷ್ಟೋ ಜನಗಳು ತಾವೇ ವಿಶ್ವಾಮಿತ್ರರಾಗುವ ಹವಣಿಕೆಯಲ್ಲಿದ್ದಾರೆ.! ನೇರವಾಗಿ ವೈಕುಂಠಕ್ಕೆ ನಡೆದರು.
ವಿಷ್ಣು ಲಗುಬಗೆಯಿಂದ ಬರಮಾಡಿಕೊಂಡ. ಆದಿಶೇಷ, ತನ್ನ ಬಾಲವನ್ನು ಎಳೆದು ಅವರಿಬ್ಬರಿಗೂ ಕುಳಿತುಕೊಳ್ಳಲು ಆಸನವನ್ನಾಗಿ ಮಾಡಿಕೊಟ್ಟ. ಅವರು ಕುಳಿತು ಸುಧಾರಿಸಿಕೊಂದು ಹೇಳತೊಡಗಿದರು.
“ದೇವಾಧಿದೇವಾ.. ನೀನೇಕೆ ಇಷ್ಟುದಿನ ಈ ಮನುಷ್ಯರಿಗೆ ಲಂಗು ಲಗಾಮಿಲ್ಲದೆ ಬಿಟ್ಟುಬಿಟ್ಟೆ? “ಎಂದು ಕೇಳಿದರು
ವಿಷ್ಣುವಿನ ಕೋಪ ನೆತ್ತಿಗೇರಿತು. “ಎಲ್ಲಾ ನಾನೇ ಮಾಡಿದರೆ ನಿಮಗೆಲ್ಲ ದೇವತೆಗಳ ಸ್ಥಾನ ಯಾಕೆ ಕೊಡಬೇಕ್ರಯ್ಯಾ? ನನ್ನನ್ನೇ ದೂಷಿಸುತ್ತೀರಲ್ಲ. ನೀವುಗಳು ಎಚ್ಚರಿಕೆಯಿಂದ ಗಸ್ತು ತಿರುಗಿ ವಿಷಯ ಸಂಗ್ರಹಿಸಿ ನನಗೆ ತಂದರಲ್ಲವೇ ನಾನು ಅದಕ್ಕೆ ತಕ್ಕಂತೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು. ಸಾವಿರಾರು ವರ್ಷಗಳಿಂದ ನಿಮ್ಮಗಳ ಸುಳಿವೇ ಇಲ್ಲ.ಭೂಲೋಕದ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳು ಭರದಿಂದ ನಡೆದು, ನನ್ನ ಹುಂಡಿಗಳು ತುಂಬುತ್ತಿರುವುದರಿಂದ ನಾನೂ ಧರ್ಮ ಇರಬಹುದೆಂದು ಸುಮ್ಮನೆ ದೀರ್ಘ ವಿಶ್ರಾಂತಿಯಲ್ಲಿದ್ದೆ.” ಸರಿ ಈಗ ನೀವು ತಿಳಿದುಬಂದ ವಿಷಯವೇನು ಅದನ್ನು ಮೊದಲು ಹೇಳಿ ” ಎಂದ.
ಅಶ್ವಿನಿಗಳು ಗಂಟಲು ಸರಿ ಮಾಡಿಕೊಂಡು ಹೇಳಲುಪಕ್ರಮಿಸಿದರು. “ದೇವಾ ಎಲ್ಲಿಂದ ಹೇಗೆ ಶುರು ಮಾಡಬೇಕೆಂದು ತೋರುತ್ತಿಲ್ಲ. ಸರಿ ಇಲ್ಲಿ ಕೇಳು, ಈ ಎಲ್ಲ ಅವಾಂತರದ ಮೂಲ ಮನುಷ್ಯರು ವಿಶ್ವಾಮಿತ್ರರಂತೆ ವಿಶ್ವ ಸೃಷ್ಟಿಯ ಸಾಹಸಕ್ಕೆ ಕೈಹಾಕುತ್ತಿರುವುದೇ ಆಗಿದೆ. ಇರುವ ಪ್ರಾಣಿ ಪಕ್ಷಿಗಳನ್ನು ಕೊಂದುಹಾಕುತ್ತಿದ್ದಾರೆ. ಭೂದೇವಿ ಹೇಳಿದಂತೆ ಹಣ ಐಷಾರಾಮಕ್ಕಾಗಿ ಏನೆಲ್ಲವನ್ನೂ ಮಾಡುತ್ತಿದ್ದಾರೆ. ತಾವಿದ್ದಲ್ಲಿಯೇ ಸ್ವರ್ಗ ಸೃಷ್ಟಿಯ ಹವಣಿಕೆಯಲ್ಲಿದ್ದಾರೆ. ಸತ್ತು ಹೇಳ ಹೆಸರಿಲ್ಲದಂತೆ ನಶಿಸಿ ಹೋಗಿರುವ ಜೀವಿಗಳನ್ನೂ ಭೂ ಗರ್ಭದಿಂದ ಹೊರಗೆಳೆದು ಅವುಗಳ ಪಳೆಯುಳಿಕೆಗಳಿಂದಲೇ ಮರುಸೃಷ್ಟಿಸುವ ದುಸ್ಸಾಹಸಕ್ಕೆ ಕೈಹಾಕಿದ್ದಾರೆ. ಇದೆಲ್ಲಕ್ಕೂ ಕಳಶಪ್ರಾಯವೆಂಬಂತೆ ರಕ್ತಾಬೀಜಾಸುರನ ತೆರದಲ್ಲಿ ತಾವೇ ಅಭಿವೃದ್ಧಿ ಪಡಿಸಿಕೊಂಡಿರುವ ತಾಂತ್ರಿಕ ಕೌಶಲ್ಯ
ಗಳನ್ನು ಉಪಯೋಗಿಸಿಕೊಂಡು ಜೀವಕೋಶಾಸುರರಾಗಿ ಮೆರೆಯಲು ಹೊರಟಿದ್ದಾರೆ. ಬ್ರಹ್ಮದೇವರ ವರವೋ,ಇಲ್ಲಾ ಶಂಕರನ ಅನುಗ್ರಹವೋ ತಿಳಿಯದು. ಅವರ ಈ ಕಾರ್ಯ ನೋಡಿದರೆ ನಮಗೇಕೋ ಅನುಮಾನ. ಈ ಎಲ್ಲಾ ಬ್ರಹ್ಮ ರುದ್ರಾದಿ ದೇವಾನುದೇವತೆಗಳ ಪರಿಪಾಟಲುಗಳಷ್ಟೂ ಮನುಷ್ಯರ ಈ ಕ್ರಿಯೆಯಿಂದಲೇ ಉದ್ಭವವಾಗಿರುವುದು. ಅವರನ್ನು ಹುಲುಮಾನವರೆಂದಾಗಲೀ, ನರಜಂತುಗಳೆಂದಾಗಲೀ ಕರೆಯುವುದು ಕಷ್ಟಕರವಾಗುವುದು ನೋಡು” ಎಂದಂದು ನಿಲ್ಲಿಸಿದರು.
ವಿಷ್ಣುವು ತಲೆದೂಗುತ್ತಾ,, ಅವರು ಈ ದುಸ್ಸಹಸಕ್ಕೆ ಕೈಹಾಕಿದ್ದ್ದಾದರೂ ಹೇಗೆ, ಅವರಿಗೆ ಈ ಉಪಾಯಗಲೆಲ್ಲ ಹೇಗೆ ಹೊಳೆಯಿತು,ಅವರು ಇವುಗಳನ್ನು ಸಾಧಿಸುತ್ತಿರುವ ವಿಧಿ ವಿಧಾನಗಳೇನು ವಿವರಿಸುವಂಥವನಾಗು ಎಂದು ಅಪ್ಪಣೆ ಕೊಡಿಸಿದನು.
“ಅನಿರುದ್ಧನೇ, ನಾವು ಈಗ ಹೇಳುವುದನ್ನು ಕೇಳಿ, ಯಾವುದೋ ಕಪೋಲ ಕಲ್ಪಿತ ಕಥೆ ಹೇಳುತ್ತಿದ್ದೇವೆಂದು ನಮ್ಮನ್ನು ದೂರಬೇಡ. ಊಹಿಸಲಸದಳ ರೀತಿಯಲ್ಲಿ ಅವರು ಕಾರ್ಯ ಪ್ರವೃತ್ತರಾಗಿದ್ದಾರೆ. ವಿಶ್ವಾಮಿತ್ರನಾದರೋ ತನ್ನ ತಪೋ ಬಲದಿಂದ ವರವನ್ನು ಪಡೆದಿದ್ದ. ಅವನು ಕಲಿತ ವಿದ್ಯೆ ಅವನಿಗಷ್ಟೆ ಸೀಮಿತವಾಗಿತ್ತು. ಇಲ್ಲಿ ಹಾಗಲ್ಲ.ಒಮ್ಮೆ ಕರಗತವಾದರೆ ಹಲವರು ಅದನ್ನು ಕಲಿಯಬಹುದಾಗಿದೆ.ಅವರ ಈ ಎಲ್ಲ ಕೈಂಕರ್ಯಕ್ಕೆ ತ್ರಿಮೂರ್ತಿಗಳಾದ ನೀವು ಹಾಗೂ ನಿಮ್ಮ ಪತ್ನಿಯರೇ ಪ್ರೇರಣೆಯಂತೆ. ಅವರಿಗೆ ಈ ಎಲ್ಲ ಯೋಚನೆಗಳೂ ಪುರಾಣಗಳ ಮುಲಕವೇ ಬಂದವಂತೆ. ಅವರು ನಡೆಸುತ್ತಿರುವ ಈ ಕ್ರಿಯೆಗೆ ತದ್ರೂಪುತಳಿ ಸೃಷ್ಟಿಯೆಂದು ಕರೆಯಬಹುದು- ಅಂದರೆ, ರಕ್ತಬೀಜಾಸುರನ ಪ್ರತಿ ಹನಿ ರಕ್ತಕ್ಕೂ ಅವನಂತೆಯೇ ಇದ್ದ ರಾಕ್ಷಸ ಹುಟ್ಟುವಂತೆ, ಈ ಮಾನವರು ತಮ್ಮ ದೇಹದ ಜೀವಕೋಶವೊಂದನ್ನು ತೆಗೆದು ಅದನ್ನು ಸಂಸ್ಕರಿಸಿ, ಅದರಿಂದ ತಮ್ಮಂತೆಯೇ ಇರಬಲ್ಲ ಜೀವಿಯೊಂದರ ಸೃಷ್ಟಿಮಾಡಲು ಕೈಹಾಕುತ್ತಿರುವುದೇ ಇವೆಲ್ಲಾ ಅವಗಢಗಳಿಗೆ ಕಾರಣ. ಇದಕ್ಕೆ ಅವರು ಠೀವಿಯಿಂದ ”ಕ್ಲೋನಿಂಗ್” ಎಂದು ಕರೆಯುತ್ತಿದ್ದಾರೆ. ನಿನ್ನ ನಾಭಿಯಿಂದ, ಅಂದರೆ ಅಗಾಧ ಸಾಧ್ಯತೆಗಳಿರಬಲ್ಲ ಜೀವಕೋಶಗಳನ್ನು ಹೊಂದಿರುವ ಹೊಕ್ಕುಳುಬಳ್ಳಿಯಿಂದ ಬ್ರಹ್ಮ ಹುಟ್ಟಿದ್ದೂ, ಪಾರ್ವತಿಯ ಮೈ ಮಣ್ಣಿನಿಂದ ಗಣೇಶ ಹುಟ್ಟಿದ್ದೂ, ವಿಶ್ವಾಮಿತ್ರಸೃಷ್ಟಿಯ ಸಾಧ್ಯತೆಯ ಕಥೆಯೂ, ರಕ್ತ ಬೀಜನ ಕಥೆಯೂ ಅವರಿಗೆ ಸ್ಫೂರ್ತಿಯಂತೆ. ಇದೇ ಕಾರಣಕ್ಕೆ ಬ್ರಹ್ಮನ ಲೆಕ್ಖಕ್ಕೆ ಸಿಗದ, ಯಮಧರ್ಮನ ಪಾಶಕ್ಕೆ ಮಣಿಯದ, ಚಿತ್ರಗುಪ್ತನ ಕರ್ಮಾವಳಿಯ ತಾಳ ಮೇಳ ತಪ್ಪಿಸುತ್ತಿರುವ, ಭೂ ಸಂಪತ್ತಿನ ನಾಶಕ್ಕೂ, ಭೂ ದೇವಿಯ ಕ್ಲೇಶಕ್ಕೂ ಕಾರಣವಾದ ಜೀವಿಗಳ ಸೃಷ್ಟಿಯು ಭೂ ಲೋಕದಲ್ಲಿ ಆಗುತ್ತಿದೆ. ಇದರಲ್ಲಿ ಮನುಜಮಾತ್ರರು ಪೂರ್ತಿ ಸಫಲರಾಗಿದ್ದರೆ ಎಂದಲ್ಲ. ಇದು ಇನ್ನೂ ನಿಧಾನವಾಗಿ ವಿಕಾಸಗೊಳ್ಳುತ್ತಿರುವ ತಂತ್ರ. ಹಾಗಾಗಿ ಅಲ್ಲಲ್ಲಿ ನಿಯಂತ್ರಣಕ್ಕೆ ಸಿಗದೆ ಕೆಲವು ಪೂರ್ತಿ ಸರಿಯಾಗಿ, ಕೆಲವು ಕುರೂಪಿಗಳಾಗಿ, ಕೆಲವು ವಿಕಾರಗಳಿಂದ ಕೂಡಿದವರಾಗಿ, ಹೇಗೋ-ಹೇಗೋ ಇರುವಂಥವರಾಗಿ, ಯಾವ ಯಾವುದೂ ಖಾಯಿಲೆ ಕಸಾಲೆಗಳಿಂದ ನರಳುತ್ತಿರುವವರಾಗಿ , ಕೆಲವು ದೀರ್ಘಾಯುಗಳಾಗಿ, ಕೆಲವು ಅಲ್ಪಾಯುಗಳಾಗಿ,ವಿವಿಧತೆ ವೈಶಿಷ್ಟ್ಯಗಳಿಂದ ಕೂಡಿದ ಜೀವಿಗಳೆಲ್ಲ ಉದಯವಾಗಿವೆ. ಈ ಜೀವಿಗಳೆಲ್ಲ ಬ್ರಹ್ಮನ ಕೈಯಿಂದ ಬಂದವರಲ್ಲವಾದ್ದರಿಂದ ಅವರುಗಳ ಲೆಕ್ಖಾಚಾರ ಬೇರೆಯೆ ಇದೆ. ಹೀಗಾಗಿ ತಲ್ಲಣ ಉಂಟಾಗಿದೆ ಎಂದರು.
“ಅಲ್ರಯ್ಯಾ ಹೀಗೆ ತದ್ರೂಪು ತಳಿ ಸೃಷ್ಟಿ ಅನ್ನುತ್ತೀರಾ.. ಆದರೂ ಹೀಗೆ ವಿಚಿತ್ರ ರೂಪ ಗುಣಗಳು, ಅವರ ಆಯುರಾರೋಗ್ಯಗಳಲ್ಲಿ ಅಸಮತೋಲನವೂ ಇರುವುದೂ ಏತಕ್ಕೆ.ಅವರ ಲೆಕ್ಖ ಇವರಿಗೇಕೆ ಸಿಗುತ್ತಿಲ್ಲ?’” ವಿಷ್ಣು ಕೇಳಿದ.
” ಇಲ್ಲಿ ಕೇಳು ಮಾಧವ,. ಈಗ ಒಬ್ಬ ನಲವತ್ತು ವಯಸ್ಸಿನ ಗಂಡಸು ಇದ್ದಾನೆಂದಿಟ್ಟುಕೋ. ಅವನು ತನ್ನಂಥದೇ ಜೀವಿಯನ್ನು ಹುಟ್ಟುಹಾಕಲು ಹೆಣ್ಣೊಂದನ್ನು ಅರಸಿ ಹೋಗಬೇಕಾದ್ದಿಲ್ಲ. ತನ್ನ ದೇಹದ ಜೀವಕೋಶವೊಂದನ್ನು ತೆಗೆದು, ಅದನ್ನು ಪ್ರಯೋಗಶಾಲೆಗೆ ಒಯ್ದು ಅದರಿಂದ ತನ್ನಂತೆಯೇ ಇರುವ ಜೀವಿಯೊಂದನ್ನು ಪಡೆಯಬಲ್ಲ. ಇವನಂತೆಯೇ ಜೀವತಂತುಗಳನ್ನು ಹೊಂದಿರುವ ಹೊಸ ಜೀವಿಯನ್ನು ಇವನ ಮಗ ಎನ್ನುವೆಯೋ? ಅಥವಾ, ತಮ್ಮ ಎನ್ನುವೆಯೋ? ಮಗ ಎನ್ನುವುದಾದರೆ ಅದರ ಅಮ್ಮ ಯಾರು? ತಮ್ಮ ಎನ್ನುವುದಾದರೆ, ಮೊದಲ ವ್ಯಕ್ತಿಯ ಅಮ್ಮ ಇವನಿಗೆ ಅಮ್ಮ ನಾಗುವಳೋ ಇಲ್ಲಾ ಅಜ್ಜಿಯಾಗುವಳೋ? ಇವರಪ್ಪ ಅವನಿಗೇನಾಗಬೇಕು. ಹೀಗೆ ಒಂದು ಹೆಣ್ಣು ಕೂಡಾ ಗಂಡಿನ ಹಂಗಿಲ್ಲದೆ ಮಗುವನ್ನು ತನ್ನ ದೇಹದಿಂದಲೇ ಪಡೆಯಬಹುದು. ಈ ರೀತಿ ಹುಟ್ಟಿದ ಜೀವಿಗೆ ಸೋದರಿಕೆ, ಎಲ್ಲಿಂದ ಬರಬೇಕು? ಈ ರೀತಿಯ ಜಿಜ್ಞಾಸೆಗಳು ಏಳುವುದರಿಂದ ಕುಟುಂಬದ ವ್ಯವಸ್ಥೆ ಬುಡಮೇಲಾಗುತ್ತದೆ. ’ಹಿರಿಯ ನಾಗನ ನಂಜು ಕಿರಿಯ ನಾಗನ ಪಾಲು ತಂದೆ ಮಾಡಿದ ಪಾಪ ಕುಲದ ಪಾಲು’ ಎಂಬ ಗಾದೆಗೆ ಅರ್ಥ ಸಡಿಲವಾಗುತ್ತಿದೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ನಾಣ್ಣುಡಿ ಅರ್ಥ ಕಳೆದುಕೊಳ್ಳುತ್ತಿದೆ. ಅದೂ ಅಲ್ಲದೆ ಗಂಡು ಹೆಣ್ಣುಗಳ ಭಾವಪೂರ್ಣ ಮಿಲನದ ಪರಾಕಾಷ್ಠೆಯಲ್ಲಿ ಕೈಗೂಡಬೇಕಾಗಿದ್ದ ಈ ಜೀವ ಸೃಷ್ಟಿಯ ಪ್ರಕ್ರಿಯೆ ಕಾಮನೆ ಭಾವನೆಗಳಿಲ್ಲದ ನಿರ್ಜೀವ ಪ್ರಯೋಗಶಾಲೆಯಲ್ಲಿ ಆಗುತ್ತಿದೆ. ಹೀಗೆ ಬಂದ ಜೀವಿಗಳಲ್ಲಿ ಸ್ಥಾಪನೆಯಾಗಲು ಆತ್ಮಗಳು ಒಪ್ಪುತ್ತಿಲ್ಲ. ಸನಾತನಿಗಲಾದ ಅವು, ಇಂಥಾ ಜೀವಿಗಳು ತಮ್ಮ ಕಾರ್ಯಕ್ಷೇತ್ರವಲ್ಲ ಎಂದು ಹೋಗಲು ವಿರೋಧಿಸುತ್ತಿವೆ. ಹಾಗೂ ಹೋದಂಥ ಆತ್ಮಗಳು ಸಂಪೂರ್ಣ ಭ್ರಮಾಧೀನವಾಗುತ್ತಿವೆ. ಆತ್ಮವೇ ಇರದ ಜೀವಿಗಳಲ್ಲಿ ಇನ್ನು ಆತ್ಮಸಾಕ್ಷಿ ಎಲ್ಲಿಂದ ಬಂದೀತು? ಮಾತೃ ವಾತ್ಸಲ್ಯ ಇಲ್ಲದ ತಂದೆಯ ಮಾರ್ಗದರ್ಶನ ಪಡೆಯದ ಜೀವಿಗಳು ಪ್ರಯೋಗಶಾಲೆಯಲ್ಲಿ ಹುಟ್ಟುತ್ತಿರುವುದರಿಂದ ಇವು ’ಬೇವಾರ್ಸಿ’ ಜೀವಗಳಾಗಿ ಕೇವಲ ಐಹಿಕ ಸುಖಕ್ಕಷ್ಟೆ ತಮ್ಮ ಅನುಭವ ಸೀಮಿತಗೊಳಿಸಿಕೊಂಡುಬಿಟ್ಟಿವೆ.ಇದರಿಂದ ಭೂದೇವಿಯ ಕಷ್ಟ ನೂರ್ಮಡಿಗೊಂಡಿದೆ” ಎಂದರು.
“ಇವನಮ್ಮ ಅವನಿಗೇನಾಗಬೇಕು, ಇದರಪ್ಪ ಅದಕ್ಕೇನಾಗಬೇಕು? .. ನನ್ನ ತಲೆ ತಿರುಗುತ್ತಿದೆ. ಇದೊಳ್ಳೆ ತಾಯಿ-ಮಗಳನ್ನು ಮದುವೆಯಾದ ಮಗ -ಅಪ್ಪನ ಬೇತಾಳದ ಕಥೆಯಂತಿದೆಯಲ್ರಯ್ಯಾ? ಸರಿ ಈ ಜೀವ ವೈಚಿತ್ರ್ಯದ ಕಾರಣವಾದರೂ ಏನು?” ವಿಷ್ಣು ಕೇಳಿದ.
“ಅದೋ ಹೇಳಲು ಮರೆತಿದ್ದೆವು. ಈ ನಲವತ್ತು ವಯಸ್ಸಿನ ಮನುಶ್ಯನ ಜೀವಕೋಶಕ್ಕೂ ಅಷ್ಟೇ ವಯಸ್ಸಲ್ಲವೇ. ಅದನ್ನು ದೇಹದಿಂದ ತೆಗೆದು ಸಂಸ್ಕರಿಸುವಾಗ ಏನು ಬದಲಾವಣೆಗಳಾಗುವುದೋ ಅದು ಯಾರಿಗೂ ತಿಳಿದಿಲ್ಲ- ಸ್ವತಃ ಮಾನವರಿಗೂ.ಅದರ ನಿಯಂತ್ರಣ ಸಧ್ಯಕ್ಕೆ ಯಾರ ಕೈಲೂ ಇಲ್ಲ.ಹೀಗಾಗಿ ಅ ಹೊಸ ಜೀವಿಯ ಆಯಸ್ಸು ನಲತ್ವತ್ತೋ, ಐವತ್ತೋ, ಇಲ್ಲ ಯಾವುದೋ ಋಣಾತ್ಮಕ ಸಂಖ್ಯೆಯಿಂದಲೂ ಶುರುವಾಗಬಹುದು. ಇದೆಲ್ಲವೂ ಜೀವಿಯ ಜೀವಿತಾವಧಿಯನ್ನು ನಿರ್ದೇಶಿಸುವ ಜೀವತಂತುವಿನಲ್ಲಿ ಅಂದರೆ ಜೀನ್ಸ್ ಗಳಲ್ಲಿ ಆಗಬಹುದಾದ ಬದಲಾವಣೆಗಳು. ಹೀಗೆ ಗೊತ್ತು ಗುರಿ ಇಲ್ಲದ ಜೀವಿಗಳು ಯಾವಾಗಲೆಂದರೆ ಅವಾಗ ಸಾಯುವುದರಿಂದ ಯಮದೂತರ ಕೆಲಸ ಹೆಚ್ಚಾಗಿರುವುದು. ಭಯ ಭಕ್ತಿಯ ಚೌಕಟ್ಟಿಲ್ಲದೆ ಆತ್ಮರಹಿತವಾದ ಈ ಜೀವಿಗಳ ಸೂಕ್ಷ್ಮ ಸ್ವರೂಪಗಳು ಇವರನ್ನು ಆಟ ಆಡಿಸುವವು. ಅದೇ ರೀತಿ, ಸಂಸ್ಕರಣ ಪ್ರಕ್ರಿಯೆಯಲ್ಲಿ ವರ್ಣತಂತುಗಳಲ್ಲಿ ಅಂದರೆ ಕ್ರೋಮೊಸೋಮ್ ಗಳಲ್ಲಿ ಏರುಪೇರಾದರೆ ವಿಚಿತ್ರ ಸ್ವರೂಪದ ಜೀವಿಗಳು ಹುಟ್ಟುವವು. ಹೇ, ತ್ರಿವಿಕ್ರಮ, ಉಪೇಂದ್ರ, ಇಲ್ಲಿ ಕೇಳು, ಆ ನರಜಂತುಗಳು ಈ ಬೇಡದ ನ್ಯೂನತೆಗಳನ್ನು,ಬದಲಾವಣೆಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರೋ, ಯೋಚಿಸಲೂ ನಮ್ಮ ಎದೆ ನಡುಗುತ್ತಿದೆ. ಆಗತಾನೆ ಹುಟ್ಟಿದ ಮಗುವಿನಿಂದ ಹಿಡಿದು, ಆಗಲೋ ಈಗಲೋ ಎನ್ನುವಂತಿರುವ ವೃದ್ಧರ ಜೀವಕೋಶಗಳನ್ನೂ ಹೆಕ್ಕಿ ತೆಗೆದು ತದ್ರೂಪು ತಳಿ ಸೃಷ್ಟಿಸಿ ನಿನ್ನನ್ನೇ ತಿಂದಾರು.” ಎಂದು ಹೇಳಿ ನಿಲ್ಲಿಸಿದರು.
ವಿಷ್ಣುವಿಗೆ ಎಲ್ಲವೂ ಅರ್ಥವಾಯಿತು. ಅಷ್ಟರಲ್ಲಿ ಕೈಲಾಸವಾಸಿಯಾದ ಈಶ್ವರ ಪಾರ್ವತಿಯೊಡನೆ ಅಲ್ಲಿಗೆ ಬಂದ ಅವನೂ ಆತಂಕಗೊಂಡಿದ್ದು ಎಲ್ಲರಿಗೂ ತಿಳಿಯಿತು. ಅವನೂ ಪಾರ್ವತಿಯೂ ಆದರ್ಶ ದಾಂಪತ್ಯಕ್ಕೆ ಮೂರ್ತರೂಪ ಕೊಟ್ಟ ದೇವಾಧಿದೇವತೆಗಳು. ಅವರು ಕೂಡಾ ಜಗಳವಾಡಿ ಮುನಿಸಿಕೊಂಡದ್ದು ಮೇಲುನೋಟಕ್ಕೇ ಕಂಡುಬಂತು. ವಿಷ್ಣು ಅವರನ್ನು ಬರಮಾಡಿಕೊಂಡು, ಇದುವರೆಗೂ ಆದ ಕಥೆ ಹೇಳಿ, ಬಂದ ಕಾರಣವೇನೆಂದು ಕೇಳಿದ.
ಪರಮೇಶ್ವರನು ಸಿಟ್ಟಿನಿಂದಲೇ ಹೇಳತೊಡಗಿದ. “ನೋಡು ವಿಷ್ಣು, ಸ್ಮಶಾನವಾಸಿಯಾದ ನನಗೆ,ನಿಜ ರೂಪದಲ್ಲಿ ಪೂಜೆ ಪುನಸ್ಕಾರಗಳಿಲ್ಲದೆ ಕೇವಲ ಯೋನಿ-ಲಿಂಗರೂಪದಲ್ಲಿ ಮಾತ್ರವೇ ಪೂಜೆ ಎನ್ನುವುದು ನಿನಗೆ ಗೊತ್ತೇ ಇದೆ. ಈಗ ಭೂಮಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಪರಂಪರಾಗತವಾಗಿ , ಎಲ್ಲ ಜೀವಿಗಳಲ್ಲೂ ಅಂತರ್ಗತವಾಗಿ ಬಂದಿರುವ ಸಂತಾನೋತ್ಪತ್ತಿಯ ನಿಯಮಗಳನ್ನು, ಪೀಳಿಗೆಯನ್ನು ಉಳಿಸಿ ಬೆಳೆಸುವ ಪ್ರಕ್ರಿಯೆಯನ್ನು ಗಾಳಿಗೆ ತೂರುತ್ತಿವೆ. ಗಂಡಾಗಲೀ, ಹೆಣ್ಣಾಗಲೀ, ಇನ್ನೊಂದು ಲಿಂಗದ ಸಂಪರ್ಕವಿಲ್ಲದೆ ಮಕ್ಕಳನ್ನು ಪಡೆಯುವುದು ಸಾಧ್ಯವಾಗಿದೆ. ಹೀಗಿದ್ದಾಗ ಪ್ರೀತಿ, ಪ್ರೇಮ, ಪ್ರಣಯ,ಮಮತೆ, ವಾತ್ಸಲ್ಯ,ತ್ಯಾಗ, -ಈ ಎಲ್ಲ ತಂತುಗಳಿಂದಾಗುತ್ತಿರುವ ಜೀವಸೃಷ್ಟಿ ನಶಿಸಿ,ಕೇವಲ ನಿರ್ಜೀವಕ್ರಿಯೆಯಿಂದ ಜನಿಸಿದ ಜೀವಿಗಳೇ ಜಗದಾದ್ಯಂತ ತುಂಬಿಹೋಗುವ ದಿನ ದೂರವಿಲ್ಲ. ಈ ಪಾಠಕ್ಕೆ ಪೀಠಿಕೆ ಹಾಕಿದ ಪಾರ್ವತಿಯನ್ನು ನಾನು ದೂಷಿಸಿದ್ದಕ್ಕೆ, ನಾನು ಕೊಡುತ್ತಿರುವ ಕಾರಣ ನಿಜವಾಗಿದ್ದಾಗ್ಯೂ ನನ್ನಮೇಲೆ ಸಿಟ್ಟಾಗಿದ್ದಾಳೆ. ಭೂಮಿಯ ಮೇಲಿನ ಗಂಡಂದಿರು ಕಾರಣವಿಲ್ಲದೆ ಸಿಟ್ಟಾಗುವ ಹೆಂಡಿರನ್ನು ಅದು ಹೇಗೆ ನಿಭಾಯಿಸುವರೋ ನನಗೆ ಇವತ್ತು ಅವರ ಕಷ್ಟ ಅರ್ಥವಾಯ್ತು. ಅದಿರಲಿ, ತ್ರಿಮೂರ್ತಿಗಳಲ್ಲಿ ಬ್ರಹ್ಮನಿಗೆ ಈಗಾಗಲೇ ಭೂಮಿಯ ಮೇಲೆ ಪೂಜೆಯಿಲ್ಲ. ಇನ್ನು ಯೋನಿ-ಲಿಂಗದ ಆಕಾರದಲ್ಲಿ ಪೂಜಿಸಲ್ಪಡುತ್ತಿರುವ ನನಗೂ ಅದೇ ಗತಿ ಎಂದು ಕಾಣುತ್ತದೆ” ಎಂದ.
ವಿಷ್ಣುವಿಗೆ ಪರಿಸ್ಥಿತಿಯ ಗಂಭೀರತೆ ಸಂಪೂರ್ಣವಾಗಿ ಅರಿವಿಗೆ ಬಂತು. ಪರಿಹಾರ ತುರ್ತಾಗಿ ಹುಡುಕಬೇಕಾಗಿತ್ತು. ಅವನ ಮುಂದಿದ್ದ ಆಯ್ಕೆಗಳನ್ನು ಅವಲೋಕಿಸತೊಡಗಿದ. ಒಂದು ಮಾನವರಿಗೆ ತಾವೇ ಕಂಡುಹಿಡಿದ ಈ ಸೃಷ್ಟಿಕಾರ್ಯವನ್ನು ಒಳ್ಳೆಯ ಉದ್ದೇಶಗಳಿಗೆ ಬಳಸುವಂಥ ಸದ್ಬುದ್ಧಿ ಕೊಡುವುದೋ, ಇಲ್ಲವೇ ಅವನ ಬೆರಳಿನಿಂದ ಅವನ ಕಣ್ಣನ್ನೇ ತಿವಿಸಿಬಿಡುವುದೋ, ಮೋಹಿನಿಯಂತೆ ಹೋಗಿ ಭಸ್ಮಾಸುರನನ್ನು ಸುಟ್ಟ್ಂತೆ ಸುಡುವುದೋ, ತಾನೇ ಈ ಕೆಲಸ ಮಾಡುವುದೋ ಇಲ್ಲಾ ಬೇರೆ ಯಾರನ್ನಾದರೂ ಕಳಿಸುವುದೋ, ಅಥವಾ ಇದೊಂದು ಹೊಸದೇ ರೀತಿಯ ಸಮಸ್ಯೆಯಾದ್ದರಿಂದ ಇದಕ್ಕೆ’ ಔಟ್ ಆಫ಼್ ದ ಬಾಕ್ಸ್ ’ ಯೋಚನೆಯಿಂದ ಹೊಸದೇ ಪರಿಹಾರ ಹುಡುಕಬೇಕೋ ಎಂದು ಚಿಂತೆಯಲ್ಲಿ ಮುಳುಗಿದವನನ್ನು ಕಂಡು ತಮ್ಮ ಭಾರವನ್ನು ವರ್ಗಾಯಿಸಿದ ಇತರ ದೇವತೆಗಳು ಹಗುರಾಗಿ ಹೊರನಡೆಯುವಲ್ಲಿ ’ಸಂಭವಾಮಿ ಯುಗೇ ಯುಗೇ’ ಎಂಬ ಉದ್ಘೋಷ ಅವರೆಲ್ಲರ ಕಿವಿಯಲ್ಲೂ ಮೊಳಗಿದಂತಾಯ್ತು.

ಅನಾಮಿಕ ಆತ್ಮನ ಅಂತರಾಳ (ಕಥೆ)

ಅನಾಮಿಕ ಆತ್ಮನ ಅಂತರಾಳ (ಕಥೆ)

 

ಪ್ರಿಯ ಓದುಗರೆ,
ನಾನೊಬ್ಬ ಹೆಸರಿಲ್ಲದ ಅತ್ಮ. ಅರೇ, ಇದೇನಿದು ಹೆಸರಿರುವ ಆತ್ಮಗಳೂ ಇರಬಹುದೇ, ಆತ್ಮಕ್ಕು ಹೆಸರಿಗೂ ಇದೇನಿದು ಸಂಬಂಧ ಎಂಬ ಅನುಮಾನ ಬಂತೇ? ಅದರಲ್ಲಿ ನಿಮ್ಮ ತಪ್ಪಿಲ್ಲ ಬಿಡಿ.ಆತ್ಮನೆಂದರೆ ನಿರಾಕಾರ ಎಂದಿತ್ಯಾದಿ ಓದಿರುತ್ತೀರೆಂದು ನನಗೂ ಗೊತ್ತು.ಆತ್ಮ ಎಂದರೆ ಏನೆಂದು ಬಹಳ ಜನ ಬಹು ಬಗೆಯ ಚಿಂತನೆ ನಡೆಸಿದ್ದಾರೆ.ಕಂಡವರು ಯಾರು ಕಾಣದವರಾರು ಎಂಬುದನ್ನು ನೀವ್ಯಾರೂ ಕಾಣಿರಿ. ನಾನು ಯಾರು-ಏನು ಎಂದು ತಿಳಿಯಬೇಕಾದರೆ ನಾನು ಈಗ ಹೇಳುವ ನನ್ನ ಕಥೆಯನ್ನು ಪೂರ್ತಿಯಾಗಿ ಓದಿದರೆ ಮಾತ್ರವೇ ಸಾಧ್ಯ.

ಈ ಪ್ರಪಂಚದಲ್ಲಿರುವ ಅರವತ್ತ ನಾಲ್ಕು ಕೋಟಿ ಜೀವರಾಶಿಗಳು ಜನನ-ಮರಣ ಚಕ್ರದಲ್ಲಿ ಸಿಲುಕಿ ಸುತ್ತುತ್ತಾ ಪೂರ್ವಾರ್ಜಿತ ಪಾಪ-ಪುಣ್ಯಗಳ ಫಲವಾಗಿ ಅರವತ್ತ ನಾಲ್ಕು ಜನ್ಮಗಳಲ್ಲಿ ಯಾವುದೋ ಒಂದರಲ್ಲಿ ಸಿಲುಕಿ ಮರುಜನ್ಮ ಪಡೆಯುವುದು ನಿಜವಷ್ಟೇ?ಹಾಗಾದಾಗ ಅವುಗಳು ತಳೆದ ದೇಹವೆಂಬ ಬೊಂಬೆ ಕರ್ಮ ಸವೆಸಲು ಭೂಮಿಗೆ ಬರುವಾಗ ಅವುಗಳಿಗೆ ಜೀವ ತುಂಬುವುದು ನಾನೇ.ಯಾವ ದೇಹದಲ್ಲಿ ಹೋಗಿ ಹೇಗೆ ಹೇಗೆ ವರ್ತಿಸಬೇಕೆಂದು ಬ್ರಹ್ಮನ ಬರವಣಿಗೆಗೆ ನಿಯುಕ್ತವಾಗಿ ಸಂಚಿತ ಕರ್ಮಾನುಸಾರ ನನಗೆ ಆದೇಶ ನೀಡಿ ಕಳಿಸುವುದು ಈ ಚಿತ್ರಗುಪ್ತ-ಯಮಧರ್ಮರೇ. ಚಿತ್ರಗುಪ್ತ, ಅವನ ಮೇಲಿನ ಯಮಧರ್ಮ ನನ್ನ ಮೇಲಧಿಕಾರಿಗಳು. ನನ್ನಷ್ಟಕ್ಕೆ ನಾನೇ, ಯಾವ ಜೀವಿಯ ಹಂಗೂ ಇರದಿದ್ದಾಗ ನಾನು ಪರಮಾತಮನಂತೇ ನಿರಾಕಾರ; ಅದರೆ ದೇಹದಲ್ಲಿ ಆವಾಹಿಸಿಕೊಂಡಾಗ ನಾನು ಪರಮಾತ್ಮನಿಂದ ವಿಭಿನ್ನ.!ಜೇನು ಮೇಣ ಅಥವಾ ಅರಗು ಕರಗಿದಾಗ ಎರಕದ ಆಕಾರವನ್ನೇ ಪಡೆದು ಕಾಣಿಸುವ ರೀತಿಯಲ್ಲಿ ನಾವು ಕೂಡಾ ಜೀವಾತ್ಮನ ಆಕಾರವನ್ನೇ ಪಡೆಯುತ್ತೇವೆ.ಇಲ್ಲಿಯವರೆಗೆ ಬರೀ ಇರುವೆ, ಕಪ್ಪೆ, ಇಲಿ,ಕತ್ತೆ, ಹುಳು, ಹುಪ್ಪಟೆ,ನರಿ, ತೋಳ,ಹಯೀನಾ, ಮುಂತಾದ ಕೇವಲ ಕ್ಷುದ್ರಪ್ರಾಣಿಗಳ ಆತ್ಮವಾಗಿ ಕೆಲಸ ನಿರ್ವಹಿಸಿ ಬಹಳಷ್ಟು ರೂಪಗಳನ್ನು ತಾಳಿರುತ್ತೇನೆ. ಹೇ,, ಇದೇನು ಪುರಾಣ ಕೊರೆಯುತ್ತಿದ್ದೇನೆಂದು ಅಕಳಿಸುತ್ತಿದ್ದೀರಾ?? ಸ್ವಲ್ಪ ಇರಿ ,ವಿಷಯಕ್ಕೆ ಇನ್ನೇನು ಬರತೇನೆ.ಇದು ನನ್ನ ಪರಿಚಯದ ಪೀಠಿಕೆ ಅಷ್ಟೆ.
ನಿರಾಕಾರ ಸರಿ,ಆತ್ಮ ನಿರ್ಗುಣನೋ ಎಂಬ ಪ್ರಶ್ನೆಯ ಹುಳು ಈಗ ನಿಮ್ಮ ತಲೆಯನ್ನು ಕೊರೆದು ಹೊಕ್ಕಿದ್ದು ನನ್ನ ಕಣ್ನಿಗೆ ಬಿದ್ದೇ ಬಿತ್ತು. ನಾವು ನಿರ್ಗುಣರೋ ಇಲ್ಲಾ ಸಗುಣರೋ ಎಂಬುದನ್ನು ಪರಿಸ್ಥಿತಿಗೆ ಅನುಗುಣವಾಗಿ ಅವಲೋಕಿಸಬೇಕು ಸ್ವಾಮಿ. ಯಾವ ಜೀವಿಯ ಗೊಡವೆ ಇರದಿದ್ದಾಗ ನಾವೂ ನಿರ್ಗುಣರೇ.ಆದರೆ ಜೀವಿಗಳೆಂಬೋ ಬೊಂಬೆಯ ಒಳಗಿದ್ದಾಗ ಈ ತ್ರಿಗುಣಗಳನ್ನು ಆವಾಹಿಸಿಕೊಂಡಿರುತ್ತೇವೆ. ನಾವು ಹೋಗಿ ಸೇರಿದ ಜೀವಿಗಳಲ್ಲಿ ರಾಜಸ-ತಾಮಸ-ಸಾತ್ವಿಕ ಗುಣಗಳ ರಸಮಿಶ್ರಣ ತಯಾರಿಸಿ ಅಭಿವ್ಯಕ್ತಿಗೊಳಿಸುವುದು ನಮ್ಮ ಕೆಲಸ. ಅವರವರ ಕರ್ಮಗಳಿಗೆ ಅನುಸಾರವಾಗಿ ಜೀವಿಗಳು ಜನ್ಮ ತಾಳುವುದು ನಿಜವಷ್ಟೆ? ನಾನು ಆ ಜನ್ಮಜಾತ ಜೀವಿಗಳಲ್ಲಿ ಕಾಯ ಪ್ರವೇಶ ಮಾಡಿ ಹೊಕ್ಕು ಅವರ ಕರ್ಮಾಫಲಕ್ಕೆ ಅನುಸಾರವಾಗಿ, ಚಿತ್ರಗುಪ್ತನು ಕಳಿಸಿದ ಅವರ ಕರ್ಮಾವಳಿಯ ಪಟ್ಟಿಯನ್ನು ಅವಲಂಬಿಸಿ ಆ ಮೂರು ಗುಣಗಳಿಲ್ಲವೇ- ರಜಸ್ಸು, ತಮಸ್ಸು, ಸಾತ್ವಿಕ ಗುಣಗಳು- ಅವುಗಳಲ್ಲಿ ಯಾವುದಾದರೂ ಒಂದನ್ನು ಹೆಚ್ಚು ವ್ಯಕ್ತಗೊಳಿಸಿ ಆ ಜೀವಿಯ ಗುಣಲಕ್ಷಣಗಳನ್ನು ಸಾಕಾರಗೊಳಿಸುತ್ತೇನೆ. ಈ ತ್ರಿಗುಣಗಳೆಂಬ ಸೂತ್ರಗಳನ್ನು ಪಂಚೇಂದ್ರಿಯಗಳೆಂಬ ಬೆರಳುಗಳಿಗೆ ಕಟ್ಟಿ,ಅರಿಷಡ್ವರ್ಗಗಳೆಂಬ ಬಣ್ನಗಳನ್ನು ಉಪಯೋಗಿಸಿ ಆ ಬೊಂಬೆಯನ್ನು ಆಡಿಸುವುದು ನಾವೇ. ಈ ಎಲ್ಲ ಪದಪುಂಜಗಳು ನಿಮಗೆಲ್ಲಿ ಅರ್ಥವಾಗಬೇಕು! ಈಗೆಲ್ಲ ಮೊಬೈಲ್ ಫೊನು, ,ಲ್ಯಾಪ್ಟಾಪು,ಕಂಪ್ಯೂಟರ್ ಎಂದು ತಾಂತ್ರಿಕ ಜಗತ್ತಿನಲ್ಲಿ ನೀವುಗಳು ಕುಣಿದಾಡುವುದರಿಂದ ಅದರ ಪರಿಭಾಷೆಯಲ್ಲೇ ಹೇಳುತ್ತೇನೆ ಕೇಳಿ: ಮೊಬೈಲ್,ಲ್ಯಾಪುಟಾಪು, ಫೋನ್ ಇವುಗಳ ಹೊರ ಕವಚವೇ ನಿಮ್ಮ ದೇಹ. ಆದರೆ ಅದನ್ನು ಆಡಿಸುವ ಆಪರೇಟಿಂಗ್ ಸಿಸ್ಟಂ ಸಾಫ಼್ಟುವೇರು ನಾನೇ- ಅಂದರೆ ಆತ್ಮ!
ನಮ್ಮ ಮೇಲಧಿಕಾರಿಗಳ ಆದೇಶದಂತೆ ನಮ್ಮ ಕೆಲಸ ಕಾರ್ಯ ಇದ್ದರೂ, ಕೆಲವು ಸಲ ನಮ್ಮ ಹಿಂದಿನ ಅನುಭವಗಳನ್ನು ಮುಂದಿನ ಜನ್ಮಜಾತ ಜೀವಿಗಳಲ್ಲಿ ತೋರಿಸುವುದುಂಟು. ಚೈನಾ ದಲ್ಲಿ ಹುಟ್ಟಿದ ಮಗು ಇಂಗ್ಲೀಷ್ ಭಾಷೆ ಎರಡು ವರ್ಷಕ್ಕೇ ಮಾತನಾಡಿದಂತೆ, ಕೊರಿಯಾದಲ್ಲಿ ಹುಟ್ಟಿದ ಮಗು ಅಮೇರಿಕಾದ ಯಾವುದೋ ಕಥೆ ಹೇಳಿದಂತೆ, ಪರಿಚಯವೇ ಇರದ ವ್ಯಕ್ತಿಗಳ ಗುಣ ಅವಗುಣಗಳನ್ನು ಅಭಿವ್ಯಕತಗೊಳಿಸಿದ ಕಥೆ ಗಳನ್ನು ನೀವು ಕೇಳಿಲ್ಲವೇ? ಹಾಗೆ. ಇದಕ್ಕೆಲ್ಲ ನಾವು ಸ್ಪೆಷಲ್ ಪರ್ಮಿಷನ್ ತಗೋಬೇಕು ಸ್ವಾಮಿ. ಹಾಗಾಗಿಯೇ ಇಂತಹ ಸಂಗತಿಗಳು ವಿರಳ.
ಇವನೇನು ಅನಾಮಿಕ ಆತ್ಮ ತಾನೆಂದು ಹೇಳಿಕೊಂಡು ಬೇಡದ ಬೂಸಿಯೆಲ್ಲಾ ಬಿಡುತ್ತಿದಾನೆಂದು ತಿಳಿದಿರೋ? ಹಾಗೇನಿಲ್ಲ ಬಿಡಿ. ಆ ರೀತಿ ವಿಷಯಾಂತರ ಮಾಡುವ ಆ(ತ್ಮ)ಸಾಮಿ ನಾನಲ್ಲ.
ಇಷ್ಟೆಲ್ಲಾ ಬೊಗಳೆ ಹೊಡೆಯುವ ನಾನು ಏಕೆ ಅನಾಮಿಕ ಆತ್ಮಎಂದು ನಿಮಗೆ ಸಂದೇಹ ಬಂದಿರಬಹುದು. ಬಂದೇ ಇರುತ್ತದೆ.ಕಾರಣ ಇಷ್ಟೇ, ನಾನು ಅಸ್ತಿತ್ವಕ್ಕೆ ಬಂದಾಗಿನಿಂದ ಬರೀ ಇರುವೆ, ಕಪ್ಪೆ, ಹಂದಿ, ಕೋಳಿ,ಜೇಡ, ಹುಳು ಹುಪ್ಪಟೆ,ನರಿ, ತೋಳ,ಹಾಗೂ ಗಢವಕೋತಿ ಇಂತಹ ಹೆಸರೇ ಇಡದ ಪ್ರಾಣಿಗಳ ಆತ್ಮನಾಗಿ ಕೆಲಸ ಮಾಡಿದ ಕಾರಣ ನಾಮಕರಣದ ಯೋಗ ಬಂದೇ ಇಲ್ಲ ನೋಡಿ. ಕಡೆ ಪಕ್ಷ ನಾಯಿ, ಬೆಕ್ಕು, ಹಸು, ಸಾಕು ಕುದುರೆಯಾದರೂ ಆಗಿದ್ದಲ್ಲಿ ಟಾಮಿ, ರಾಮೂ, ಲಕ್ಕಿ, ಪಕ್ಕಿ ಎಂಬ ಹೆಸರಾದರೂ ಸಿಕ್ಕಿರುತ್ತಿತ್ತು. ನನಗೇನೂ ಅದರ ಹಂಬಲ ಇರಲಿಲ್ಲ. ಮಹತ್ವಾಕಾಂಕ್ಷೆಯುಳ್ಳ ಆತ್ಮ ನಾನಾಗಿರಲಿಲ್ಲ. ಮೊನ್ನೆ ಮೊನ್ನೆ ಕೋತಿಯ ದೇಹದಲ್ಲೇ ಇದ್ದಾಗ ದೇವಸ್ಥಾನದ ಕಟ್ತೆಯ ಮೇಲೆ ಕುಳಿತು ಬಾಳೆ ಹಣ್ಣು ತಿನ್ನುತ್ತಿದ್ದೆ.ಆಗ ಅಲ್ಲೊಂದು ಹಾಡು ಕೇಳಿಸಿತು- “ಮಾನವ ಜನ್ಮ ದೊಡ್ಡದು ಅದ ಹಾಳು ಮಾಡದಿರಿ ಹುಚ್ಚಪ್ಪಗಳಿರಾ ” ಎಂದು ಇತ್ತು. ಇಂಪಾಗಿತ್ತು. ನನಗೆ ಭಾಷೆ ಹೇಗೆ ಅರ್ಥವಾಯ್ತು ಎಂದಿರೋ,, ನನ್ನ ಪಕ್ಕದಲ್ಲಿ ಕುಳಿತ ಕೋತಿಯೊಂದು ಹಿಂದಿನ ಜನ್ಮ ದಲ್ಲಿ ಮಾನವನಾಗಿತ್ತಲ್ಲ, ಅದು ಕೋತಿಯ ಭಾಷೆಯಲ್ಲೇ ಅದರ ಅರ್ಥ ನನಗೆ ತಿಳಿಸಿ ಹೇಳಿದ್ದರಿಂದ ನನಗೆ ಮಾನವ ಜನ್ಮದ ರುಚಿ ನೋಡಬೇಕೆಂಬ ಅದಮ್ಯ ಬಯಕೆ ಹುಟ್ಟಿಯೇ ಬಿಟ್ಟಿತು. ಈ ಕೋತಿಯ ದೇಹಾಂತ್ಯದವರೆಗೂ ತಡೆದಿದ್ದು ನಂತರ ಯಮಧರ್ಮ-ಚಿತ್ರಗುಪ್ತರ ಸನ್ನಿಧಾನಕ್ಕೆ ಹಾರಿದೆ.ಆ ದಿನ ಅವರಿಗೂ ಹೆಚ್ಚಿನ ಕೆಲಸವಿರಲಿಲ್ಲ ,ಸುಮ್ಮನೆ ಕುಳಿತು ಹರಟುತ್ತಿದ್ದರು. ಯಮಧರ್ಮ ತುಂಬಿದ ಕೊಡ, ಆದರೆ ಸ್ವಲ್ಪ ಹುಂಬ.ಚಿತ್ರಗುಪ್ತನೋ, ಅಹಂಕಾರಿ. ಏನು ಚಿತಾವಣೆ ಬೇಕಾದರೂ ಮಾಡಿಡುತ್ತಾನೆ. ನಾನು ಹೋಗಿ ನಿಧಾನವಾಗಿ ನನ್ನ ಮನದಿಂಗಿತ ಬಿಚ್ಚಿಟ್ಟೆ. ಯಮಧರ್ಮ ತಲೆದೂಗಿದರೂ ಈ ಚಿತ್ರಗುಪ್ತ ಮೂಗು ಮುರಿದ. ನನ್ನ ಜನ್ಮ ಜಾಲಾಡಿ ಏನೋ ದೊಡ್ಡ ಮೇಧಾವಿಯಂತೆ ನನಗಿನ್ನೂ ಆ ಪರಿಪಕ್ವತೆ ಬಂದಿಲ್ಲವೆಂದೂ,ಇನ್ನೂ ಕಾಯಬೇಕೆಂದೂ ಸೂಚಿಸಿದ. ನಾನೂ ಪಟ್ಟು ಬಿಡಲಿಲ್ಲ.ಆಗ್ರಹ ಮಾಡಿದೆ. ಯಮನಿಗೆ ಏನೆನ್ನಿಸಿತೋ,ಸರಿ ಹೋಗು ನಿನ್ನಿಷ್ಟ ಅಂದ. ತನ್ನ ಮಾತು ನಡೆಯದ್ದಕ್ಕೆ ಆ ಮುದಿಯ ಚಿತ್ರಗುಪ್ತನಿಗೆ ಅಸಮಾಧಾನವಾಯ್ತು. ಆಗಲಿ, ನನಗೇನು. ಖುಷಿಯಿಂದ ಹೊರಟೆ. ಹಿಂದಿನಿಂದ ಎಚ್ಚರಿಕೆಯ ಸಂದೇಶ ಬಂತು. ಯಮನೇ ನುಡಿದ: ಎಲವೋ ಆತ್ಮವೇ, ಮನುಷ್ಯರ ವ್ಯವಹಾರಕ್ಕೆ ಇಳಿಯುತ್ತಿದ್ದೀ. ಎಚ್ಚರಿಕೆ ಇರಲಿ. ಎಲ್ಲ ಪಶು-ಪಕ್ಷಿಗಳಿಗಿಂತ ಅವರ ನಡೆ ನುಡಿ ವಿಭಿನ್ನ. ನೀನು ಇಲ್ಲಿಯವರೆಗೆ ಅವರೊಡನೆ ಒಡನಾಡಿಲ್ಲ. ಇಷ್ಟುದಿನ ಗಂಡು ಹೆಣ್ಣುಗಳು ಸೇರಿದರೆ ಅದು ಸಂತಾನೋತ್ಪತ್ತಿಗಾಗಿ ಎಂದೇ ನಿನ್ನ ಅನುಭವ. ಹಸಿವು, ನಿದ್ರೆ ಮೈಥುನಗಳ ನಿಯಮಾವಳಿ ಅವರ ಲೋಕದಲ್ಲಿ ಬೇರೆಯೇ. ಹಸಿವಿರದಿದ್ದರೂ ತಿನ್ನುವ, ತಿನ್ನದಿದ್ದರೂ ತೇಗುವ, ಬಾಯಾರಿಲ್ಲದೆಯೂ ಕುಡಿಯುವ, ಬರೀ ಮೋಜಿಗೆ ಮೈಥುನದಲ್ಲಿ ತೊಡಗುವ ವಿಚಿತ್ರ ಸಂಕುಲ ಅದು. ಸಂತಾನಕ್ಕಾಗಿ ಅವರು ಕೂಡಿದಾಗ್ಯೂ ಅದು ಕೈಗೂಡದೆ ಇರಬಹುದು. ಅದು ಅಲ್ಲದೆ ಅಲ್ಲಿ ಎಲ್ಲವು ಸ್ಪರ್ಧಾತ್ಮಕೆ, ಪೈಪೋಟಿಕರ. ಹಲವು ಆತ್ಮಗಳು ಕಾಯುತ್ತಾ ಹೊಂಚು ಹಾಕಿ ಕುಳಿತಿರುತ್ತವೆ. ಅಲ್ಲಿ ನೋಡು, ಆ ಬಸ್ಸಿನಲ್ಲಿ ನುಗ್ಗಿ ಸೀಟು ಹಿಡಿಯುತ್ತಿಲ್ಲವೇ ಹಾಗೆ.ಯಾರು ಮುನ್ನುಗ್ಗುವರೋ ಅವರಿಗೇ ಅವಕಾಶ. ನೀನೂ ನಿನ್ನ ಚಾಲಾಕಿತನ ತೋರಿಸಬೇಕು. ಜೋಭದ್ರ-ಜಡಭರತನಂತೆ ಇರಕೂಡದು. ಒಂಭತ್ತು ತಿಂಗಳ ಕಾಲಾವಕಾಶ ನೀಡುತ್ತೇನೆ. ಅಷ್ಟರಲ್ಲಿ ಸಫಲನಾಗದಿದ್ದರೆ ವಾಪಸ್ ಎಮ್ದು ತಾಕೀತು ಮಾಡಿದ. ಅವನು ಗುಡ್-ಲಕ್ ಹೇಳುವುದನ್ನು ಮರೆಯಲಿಲ್ಲ ನನಗೆ ಥ್ಯಾಂಕ್ಸ್ ಹೇಳುವುದು ಹೊಳೆಯಲಿಲ್ಲ.
ಸರಿ ಭೂಲೋಕಕ್ಕೆ ಜರ್ರೆಂದು ಜಾರಿ ಪುಣ್ಯಭೂಮಿ ಎಂಬ ಭಾರತವನ್ನೇ ಕ್ಷೇತ್ರವಾಗಿ ಅರಿಸಿದೆ. ಜನಸಂಖ್ಯೆಯಂತೆ ಆತ್ಮಗಳ ಸಂಖ್ಯೆಯೂ ಇಲ್ಲಿ ಅಗಣಿತ. ಎಲ್ಲೆಲ್ಲೂ ಹೊಂಚುಹಾಕಿ ಕಾಯುತ್ತಿರುವವೇ. ಇಲ್ಲಿ ಪೈಪೋಟಿ ಜಾಸ್ತಿ.ಅವರೊಟ್ಟಿಗೆ ಈರ್ಶ್ಯೆಇಂದಲೂ, ಅಸಡ್ಡೆಯಿಂದಲೂ ನೋಡಿ ಇಂಗ್ಲೆಂಡಿಗೆ ಹಾರಿದೆ. ಈ ರೀತಿಯ ಪ್ರತಿಭಾ ಪಲಾಯನ ಮಾನವರಲ್ಲೂ ಇದೆಯೆಂದು ಆನಂತರ ತಿಳಿಯಿತೆನ್ನಿ.
ಇಂಗ್ಲೆಂಡಿನಲ್ಲಿ ಅಷ್ಟೊಂದು ಆತ್ಮಾಪುಲೇಷನ್ (ಆತ್ಮ ಸಂಖ್ಯೆ) ಇರಲಿಲ್ಲ.ಇದೇ ಪ್ರಶಸ್ತ ಜಾಗವೆಂದು ಸುತ್ತ ತೊಡಗಿದೆ:
ಸಮಾಜದ ಸ್ಥಿತಿ-ಗತಿ,ಕೌಟುಂಬಿಕ ಪರಿಸರ, ಸಾಮಾಜಿಕ ಸ್ತರಗಳು, ಅವರ ಯೋಚನಾಧಾಟಿ ಇವುಗಳ ಸ್ಥೂಲ ಪರಿಚಯ ನನಗಾಯ್ತು. ಸರಿ ಅತ್ತಿತ್ತ ನೋಡಲು ಒಂದು ಜೋಡಿ ಕಾಣಿಸಿತು. ಎತ್ತರದ ನಿಲುವಿನ ಆತ್ಮ ವಿಶ್ವಾಸತುಂಬಿದ ಸ್ಫುರದ್ರೂಪಿ ಗಂಡು, ಅವನೊಟ್ಟಿಗೆ ಆಕರ್ಷಕ ರೂಪದ ಹೆಣ್ಣು. ಏನು ಪ್ರೀತಿ ಅವನ ಮಾತುಗಳಲ್ಲಿ! ಅವಳ ಕೈ ಹಿಡಿಯುವುದೇನು, ಸುತ್ತಾಡುವುದೇನು, ಕಣ್ಣಲ್ಲಿ ಕಣ್ಣಿಟ್ಟು ನೋಡುವುದೇನು, ಅವಳು ಕೇಳಿದ್ದನ್ನು ಕೊಡಿಸುವುದೇನು, ಜೊತೆಯಲ್ಲಿ ಊಟ ಸವಿಯುವುದೇನು! ಅವಳಿಗೋ ಅವನದೇ ಧ್ಯಾನ. ಅವನು ಸ್ವಲ್ಪ ಭಿನ್ನ.ಸರಿ ಗಂಡು ಹೆಣ್ಣಿನ ಒಡನಾಟದ ಪರಾಕಾಷ್ಠೆಯ ಸಮಯ ಬಂದೇ ಬಂತು. ಇವರ ಮಗುವಿನ ಆತ್ಮ ನಾನಾದಲ್ಲಿ ನನಗೆ ಸಕಲ ಸೌಭಾಗ್ಯವೂ ದೊರೆಯುವುದೆಂಬ ಭಾವನೆ ಬಂತು. ನುಗ್ಗಿ ಪ್ರತಿಷ್ಠಾಪಿಸಿಕೊಂಡೆ. ವಾರಗಳು ಕಳೆದು ಆಕೆ ತನ್ನ ರಹಸ್ಯ ಬಿಚ್ಚಿದಳು. ಮಗುವಿನ ತಾಯಾಗುವುದರಿಂದ ಆತನು ಮದುವೆಯ ತಯಾರಿ ಮಾಡಬೇಕೆಂದಳು. ಅವನ ಮುಖ ಕಳೆಗುಂದಿತು. ತಾನು ಆಫ಼ೀಸರ್. ಅವಳು ಯಕಃಶ್ಚಿತ್ ಸೆಕ್ರೆಟರಿ. ಅವನಿಗೆ ಈಗಾಗಲೇ ಬೇರೆ ಮದುವೆ ನಿಶ್ಚಯವಾಗಿದೆಯಂತೆ!! ಅರೆ!! ನನಗೆ ಗೊಂದಲ. ಅವಳು ಮೊದಲು ಅತ್ತಳು.ಆದರೆ ಗಟ್ಟಿಗಿತ್ತಿ. ಬೆದರಿಸಿ ಚೆನ್ನಾಗಿ ದುಡ್ಡು ಕಿತ್ತಳು. ಅವನು ಪೀಡೆ ತೊಲಗಿದರೆ ಸಾಕೆಂದು ಕೊಟ್ಟ. ನನ್ನನ್ನು ನಿವಾರಿಸಿಕೊಂಡಳು. ನಾನು ಗೂಡಿನಿಂದ ದಬ್ಬಲ್ಪಟ್ಟ ಪಕ್ಷಿಯಂತೆ ಹೊರಬಂದು ಮತ್ತೆ ಹಾರತೊಡಗಿದೆ.
ಸರಿ ಅಲ್ಲೊಂದು ಯುವ ಜೋಡಿ ಕಣ್ಣಿಗೆ ಬಿತ್ತು. ಅರೆ ಇದೇನು ಶಾಲೆಯ ಸಮವಸ್ತ್ರ ಧರಿಸಿ ಶಾಲೆಗೇ ಹೋಗದೆ ಸುತ್ತುತ್ತಿರುವರಲ್ಲ. ಹಿಂಬಾಲಿಸಿದೆ.ಅವರು ಈ ಲೋಕದ ಯಾವುದೇ ಜಾವಾಬುದಾರಿಯನ್ನು ಹೊತ್ತಿಲ್ಲದವರಾಗಿ ಓಡಾಡಿಕೊಂಡಿದ್ದರು. ಪ್ರೀತಿ-ನೀತಿ,ಕಾಮ-ಪ್ರೇಮಗಳ ಅರಿವನ್ನಾಗಲೀ ,ಪರಿಧಿಯನ್ನಾಗಲೀ ಅರಿಯವದವರ್ರಗಿ ಕಂಡುಬಂದರು. ಕ್ಲೇಶರಹಿತರಾದ ಇವರೇ ನನಗೆ ತಾಯಿ ತಂದೆಯಾಗಲು ಯೋಗ್ಯರೆಂದು ನಿರ್ಧರಿಸಿಸ್ ಕಾಯತೊಡಗಿದೆ.ಸಮಯ ಬಂತು;ನಾನು ನುಗ್ಗಿದೆ. ಆಶ್ಚರ್ಯವೆಂದರೆ ಒಂದೂ ಪೈಪೋಟಿಕಾರ ಆತ್ಮಗಳು ಕಾಣದಿದ್ದುದು!
ಸರಿ ಹುಡುಗಿ ವಾಕರಿಸಿದಳು, ವಾಂತಿ ಮಾಡಿಕೊಂಡಳು. ತಾಯಿಗೆ ಅನುಮಾನ ಬಂತು. ಜಬರ್ದಸ್ತಿ ಮಾಡಿದಳು, ಹುಡುಗಿ ಬಾಯಿ ಬಿಟ್ಟಳು. ಅವರೋ ಕರ್ಮಠ ಸಂಪ್ರದಾಯಿಕ ಮನೆತನದವರು. ಗಂಡನಿಗೆ ಹೇಳಲು ಹೌಹಾರಿ ಹಿಂಜರಿದು, ಹುಡುಗಿಯ ಮುಂದಿನ ವಿದ್ಯಾಭ್ಯಾಸಕ್ಕೂ, ಸಮಾಜದಲ್ಲಿ ಮುಖವೆತ್ತಿ ತಿರುಗಾಡುವುದಕ್ಕೂ,ಆರೋಗ್ಯದ ದೃಷ್ಟಿಯಿಂದಲೂ ಅಳೆದು ತೂಗಿ ಗರ್ಭಪಾತವೇ ಸರಿಯಾದ ದಾರಿಯೆಂದು ನಿಶ್ಚಯಿಸಿದಳು; ಕಾರ್ಯರೂಪಕ್ಕೂ ತಂದಳು. ಎಂಟು ವಾರವಾಗಿತ್ತೇನೋ, ನಾನು ಗಂಟು ಕಟ್ಟಿ ಹೊರಗೆ ಬಿದ್ದು ಬೀದಿ ಪಾಲಾದೆ.

ಸುತ್ತುತ್ತಾ, ಹತ್ತಿರದಲ್ಲಿದ್ದ ಮನೆ ಹೊಕ್ಕೆ. ಅಕಟಕಟಾ… ಏನು ಅವ್ಯವಸ್ಥೆ, ಏನು ಅಸ್ತವ್ಯಸ್ತ. ಜೀವನ ಹೀಗೂ ಮಾಡಬಹುದೇ ಎಂಬ ಸೋಜಿಗ ನನ್ನನು ಕಾಡದಿರಲಿಲ್ಲ.ಇಬ್ಬರೂ ೨೫-೨೬ ವಯಸ್ಸಿನವರಾದರೂ ನೋಡಲು ೪೫-೪೬ ರಂತೆ ಕಾಣುತ್ತಿದ್ದರು.ಎಂಥದ್ದೋ ಕೊಳವೆಯಂಥ ಉರಿಯುವ ಕಡ್ಡಿ,ಎಂಥದ್ದೋ ಪೀಪಾಯಿಯಂಥ ಶೀಶೆ.ಒಂದನ್ನು ದಂ ಎಳೆಯುವುದು, ಇನ್ನೊಂದನ್ನು ಹೀರುವುದು, ಓಲಾಡಿ ನಲಿಯುವುದು; ಆಗಾಗ ತಿನ್ನುವುದು. ಇಬ್ಬರಿಗೂ ಕೆಲಸವಿಲ್ಲ.ಆದರೆ ಅವರಿಗೆ ಹೇಗೋ ಸಹಾಯ ದೊರೆಯುತ್ತಿತ್ತು. ರಾಮರಾಜ್ಯದ ಕನಸನ್ನು ಸಾಕಾರಗೊಳಿಸುವ ಉದ್ದೇಶದಿಂದ ಸರಕಾರ ಧನಸಹಾಯ ಕೊಡುವ ವಿಷಯ ನನಗೆ ತಿಳಿಯಿತು. ರಾಮರಾಜ್ಯದಲ್ಲಿ ಆರಾಮವಾಗಿ ರಾಮರಸವೆಂಬ ರಂ ಹೀರಿ, ಝಂ ಅಂತ ಇದ್ದು ಅಜರಾಮರರಾಗುವ ಪರಿ ನನಗೆ ಹಿಡಿಸಿತು. ಅಲ್ಲೇ ಗಸ್ತು ತಿರುಗತೊಡಗಿದೆ.
ಅವರಿಗೆ ಕೆಲಸವಿಲ್ಲದ್ದರಿಂದಲೂ, ದೇಹವೆಂಬೋ ಅಗ್ನಿಕುಂಡಕ್ಕೆ ಉದ್ದೀಪನೆಯ ಹವಿಸ್ಸು ಪ್ರದಾನವಾಗುತ್ತಿದ್ದುದರಿಂದಲೂ ನನ್ನ ಅರ್ಜಿ ಮೂರೇ ದಿನದಲ್ಲಿ ಮಂಜೂರ್. ನನ್ನ ಹೊಸಗೂಡಿನಲ್ಲಿ
ಅಮಲೇರಿಸುವ ಅನುಭವ ಆಗತೊಡಗಿ ಅನಂದ ತುಂದಿಲನಾದೆ. ಎಲ್ಲಾ ಸರಿ ಆದರೆ ಏನೋ ಸರಿಯಿಲ್ಲವೆಂದು ನನ್ನ ಮನಸ್ಸು ಹೇಳುತ್ತಿತ್ತು. ಇದೇನು ಆತ್ಮಕ್ಕೂ ಮನಸ್ಸೇ ಎಂದು ಮೂಗು ಮುರಿಯಬೇಡಿ. ನಮಗೂ ಅಂಥದ್ದೊಂದು ಇರುತ್ತೆ, ನಿಮ್ಮ ಪರಿಭಾಷೆಯಲ್ಲಿ ನೀವು ಮನಸ್ಸು ಎಂದು ಕರೆಯಬಹುದಷ್ಟೆ.
ಸರಿ ಒಂದು ಮುಂಜಾನೆ ಅವನಿಗೂ ಅವಳಿಗೂ ಜಗಳ ಹತ್ತಿ ಬಿಟ್ಟಿತು.ಮಹಾಶಯ ಎದ್ದು ತನ್ನ ಹೊಗೆ ಕಡ್ಡಿ ಹುಡುಕಿದ, ಸಿಗಲಿಲ್ಲ,ಅವಳನ್ನುಕೇಳಿದ (ಸಿಗರೇಟು ಎಂದು ಅದನ್ನು ಕರೆಯುತ್ತಾರಂತೆ). ಅವಳು ತನ್ನ ಬಳಿ ಇದ್ದರೂ ಕೊಡುವುದಿಲ್ಲ ಎನ್ನುವುದೇ.ಮಾತಿಗೆ ಮಾತು ಬೆಳೆದು ಹೊಡೆದಾಟ ಬಡಿದಾಟದ ವರೆಗೂ ಹೋಗಿ ಅವನು ಅವಳನ್ನು ಒದ್ದುಬಿಟ್ಟ.ನೋವಿನಿಂದ ಅವಳೂ, ಅವಳ ಒಳಗಡೆ ನಾನೂ ಒದ್ದಾಡಿಬಿಟ್ಟೆವು. ಆಸ್ಪತ್ರೆಗೇನೋ ಹೋದಳು. ಕಾಲ ಮಿಂಚಿತ್ತು. ನಾನು ಹೊರಗೆ ಬರಲೇ ಬೇಕಾಯ್ತು.
ಇದುವರೆಗಿನ ನನ್ನ ಅನುಭವ ಮದುವೆಯಾಗದ, ಯಾವ ಬದ್ಧತೆಗಳಿಲ್ಲದ ಜೋಡಿಗಳಿಗೆ ಸೀಮಿತವಾಗಿತ್ತು. ಸತತ ವೈಫಲ್ಯಗಳಿಂದ ಆತ್ಮದ ಆತ್ಮವಿಶ್ವಾಸವೇ ಕುಗ್ಗುತ್ತಿತ್ತು ನೋಡಿ ಸ್ವಾಮಿ. ಆದರೆ ನಾನು ಒಂದಾನೊಂದು ಕಾಲದಲ್ಲಿ ಬ್ರೂಸ್ ಎಂಬ ಸ್ಕಾಟ್ಲೆಂಡಿನ ರಾಜನಿಗೆ ತನ್ನ ಸತತ ಪರಿಶ್ರಮದಿಂದ ಬಲೆನೇಯ್ದು ಭರವಸೆ, ಉತ್ಸಾಹ ಮೂಡಿಸಿದ್ದ ಜೇಡವೊಂದರ ಆತ್ಮನಾಗಿದ್ದೆನಷ್ಟೆ! ಆ ಅನುಭವ ನನ್ನ ಕಣಕಣದಲ್ಲೂ ಇದ್ದುದರ ಕಾರಣ ಮರಳಿಯತ್ನವ ಮಾಡಲು ಮುನ್ನಡೆದೆ.
ಈ ಬಾರಿ ವೈವಾಹಿತ ಜೋಡಿಗಳನ್ನು ಮಾತ್ರವೇ ಆರಿಸಲು ನಿರ್ಧರಿಸಿದ್ದೆ.
ಆಹಾ… ಎಂತಹ ಅದ್ದೂರಿ ಮದುವೆ. ಹೇಳಿ ಮಾಡಿಸಿದಂಥ ಜೋಡಿ. ಸುಂದರ, ಸುಸಂಸ್ಕೃತರು. ಒಬ್ಬರನ್ನೊಬ್ಬರು ಒಡನಾಡಿ ಬಲ್ಲವರೆಂದು ತೋರುತ್ತಿದೆ.ಏನು ಪ್ರೀತಿ,ಏನು ವಿಶ್ವಾಸ. ಅವನಂತೂ ಅವಳನ್ನು ಕಣ್ಣಲ್ಲಿ ಕಣ್ಣಿಟ್ಟು ಜೋಪಾನ ಮಾಡುತ್ತಾನೆ.ಅವಳೂ ಅಷ್ಟೆ. ಆಹಾ ” ಆರಂಕುಶವಿಟ್ಟೊಡೇಂ, ನಾನಾಗುವೆನಮ್, ಇವರ್ ಕೂಸಿನ ಆತ್ಮನುಂ; ಅದರಾತ್ಮನಾದೊಡೆ ಪೆರತೇಮ್ ದೊರೆವುದೆಲ್ಲ ಜೀವನದ ಸುಖಂ” ಎಂದೆನ್ನುತ್ತಾ ಅವರ ನೆರಳಂತೆ ಹಿಂಬಾಲಿಸ ತೊಡಗಿದೆ. ಅಲ್ಲಲ್ಲಿ ಪೈಪೋಟಿಗೆ ಕೆಲವು ಬಂದವಾದರೂ ಅವುಗಳೆಡೆಗೆ ಕೆಕ್ಕರಿಸಿ ನೋಡಿದೆ, ಹೆದರಿಸಿದೆ. ಅವು ಹಾಗೆಯೇ ದೂರ ಸರಿದವು,. ನನಗೆ ನಾನೇ ಶಭಾಷ್ ಹೇಳಿಕೊಂಡೆ. ಮಧುಚಂದ್ರಕ್ಕೆ ಹೋದಲ್ಲೆಲ್ಲಾ ಹಿಂಬಾಲಿಸಿದೆ.ಅವರು ಬೇಗನೆ ತಮ್ಮ ಕುಟುಂಬ ಬೆಳೆಸುವ ಆಸೆಯಲ್ಲಿದ್ದರು, ನನ್ನ ಘಳಿಗೆ ಕೂಡಿಬಂತು. ನಾನು ಸುಖಾಸೀನನಾದೆ. ದಿನ ಉರುಳಿದವು. ಎಲ್ಲ ಚೆನ್ನಾಗಿ ನಡೆದಿತ್ತು. ಅವನು ಬಹಳ ಮುಚ್ಚಟೆಯಿಂದ ಕಾಳಜಿ ಮಾಡಿದ.ಅವರಿಬ್ಬರ ತಂದೆ ತಾಯಿಯರೂ ಬಂದು ನೋಡಿಕೊಂಡರು. ಏಕಾಂತದಲ್ಲಿ ಅವರಿಬ್ಬರೂ ತಮ್ಮ ಭಾವೀ ಕೂಸಿನ ಬಗೆಗೆ ಕನಸು ಕಟ್ಟುವುದಿತ್ತು.ಮಗುವಿನ ಹೆಸರು ಕುರಿತು ಚರ್ಚಿಸುವುದಿತ್ತು.ನನಗಂತೂ ಬಹಳ ಖುಷಿ. ಆಹಾ ಎಂತಹ ದಂಪತಿಗಳು. ನಾನೆ ಧನ್ಯ ಎಂದು ಬೀಗುತ್ತಲಿದ್ದೆ.ಅವರಿಗೆ ತಮ್ಮ ಮಗು ಸಾತ್ವಿಕ ಗುಣ ಪ್ರಧಾನವಾದ, ಒಳ್ಳೆಯ ಹೃದಯದ ಪ್ರೇಮಮಯಿ ಆಗಬೇಕೆಂಬ ಬಯಕೆ; ಆದರೆ ಚಿತ್ರಗುಪ್ತನ ಲೆಕ್ಖಾಚಾರದಂತೆ ಅದು ರಜೋಗುಣ ಪ್ರಧಾನವಾದ ಜೀವ ಆಗಬೇಕೆಂದಿತ್ತು.ನಾನು ನನ್ನ ಅನುಭವದ ಮೂಸೆಯಿಂದ ಬೇಕಾದ ಕಸರತ್ತುಗಳನ್ನೆಲ್ಲಾ ತೆಗೆದು ಪ್ರಯೋಗಿಸಿ ಸಾತ್ವಿಕ ಗುಣ ಹೆಚ್ಚು ಮಾಡಲು ಪ್ರಯತ್ನಿಸುತ್ತಿದ್ದೆ. ನನ್ನ ಮೇಲಧಿಕಾರಿಗಳಿಗೆ ಇರಿಸು ಮುರಿಸಾಗದಂತೆ ನನ್ನ ಈ ಕೆಲಸ ನಡೆಸುತ್ತಿದ್ದೆ. ನನಗೆ ಪ್ರೀತಿ-ಪ್ರೇಮ-ಮಮತೆ- ವಾತ್ಸಲ್ಯದ ಅನುಭವ ಚೆನ್ನಾಗಿಯೇ ಆಗುತ್ತಿತ್ತು. ಆದರೆ ಒಂದು ದಿನ ನನ್ನನ್ನು ಹೊತ್ತ ನನ್ನ ಭಾವೀ ತಾಯಿಗೆ ಉಸಿರಾಟದ ತೊಂದರೆ ಕಾಣಿಸಿತು. ವೈದ್ಯರು ಪರೀಕ್ಷಿಸಿ ಅದು ಹೃದಯ ಸಂಬಂಧೀ ಖಾಯಿಲೆಯೆಂದೂ, ಗರ್ಭ ಬೆಳೆದಂತೆಲ್ಲಾ ಅದು ಹೆಚ್ಚಾಗುವುದೆಂದೂ, ಆಕೆಯ ಜೀವಕ್ಕೇ ಅಪಾಯವೆಂದೂ ಘೋಷಿಸಿಬಿಟ್ಟರು. ಅವನು ಹೌಹಾರಿದ. ತನ್ನ ಜೀವದಂತಿರುವ ಹೆಂಡತಿಯನ್ನು ಕಳೆದುಕೊಳ್ಳಲು ಅವನು ತಯಾರಿರಲಿಲ್ಲ. ಇಂತಹ ಗಂಡಂದಿರು ಎಲ್ಲಿ ತಾನೇ ಸಿಗುವರು. ಬಹಳ ವೇದನೆಯಿಂದ ನಿರ್ಧಾರಕ್ಕೆ ಬಂದು ಗರ್ಭ ನಿವಾರಣೆ ಮಾಡಿಸಿದರು. ನಾನು ಮತ್ತೆ’ ’ಕೇರ್ ಆಫ಼್ ಫ಼ುಟ್-ಪಾತ್’ ಆದೆ. ಆಹಾ, ಇದೇನು ನಾನು ಇಂಗ್ಲೀಷ್ ಭಾಷೆ ಮಾತಾಡುತ್ತಿದ್ದೇನೆಂದು ಯೋಚಿಸಿದಿರೋ? ಇಷ್ಟು ದಿನ ಇಂಗ್ಲೆಂಡಿನಲ್ಲಿದ್ದ ಮೇಲೆ ಅವರ ಭಾಷೆ ಕಲಿಯದಿದ್ದರಾಗುವುದೇ?
ಈ ಮೊದಲು ಹೇಳಿದ ಅನುಭವ ನನ್ನಲ್ಲಿ ಸಾಕಷ್ಟು ಚಿಂತನೆಯ ತರಂಗಗಳನ್ನೆಬ್ಬಿಸಿತು.ಮಾನವ ಸಮಾಜ, ಅವರ ಜೀವನದ ಸಂಕೀರ್ಣತೆಗಳು,ಅವರ ಭಾವನೆಯ ವ್ಯಾಪ್ತಿಗಳು ನನಗೆ ಸಾಕಷ್ಟು ಅರ್ಥವಾಗಿದ್ದರೂ ಅವರ ನಿರ್ಧಾರಗಳು,ನಡತೆಗಳು ಗೊಂದಲ ಮೂಡಿಸುತ್ತಲೇ ಇದ್ದವು.ಈ ವೇಳೆಗಾಗಲೇ ನನ್ನ ಅವಧಿಯ ಆರು ತಿಂಗಳುಗಳು ಮುಗಿದೇ ಹೋಗಿದ್ದವು.ನನ್ನ ಡೆಪ್ಯೂಟೇಷನ್ ಮುಗಿಯುವ ಹಂತಕ್ಕೆ ಬರುತ್ತಿತ್ತು. ಇಷ್ಟರಲ್ಲಿ ನನ್ನ ಸಾಧನೆಗೆ ಪ್ರತಿಫಲ ಸಿಕ್ಕಿದರೆ ಸರಿ ಇಲ್ಲವಾದರೆ ಮತ್ತೆ ಕುರಿ-ಕೋಳಿಗಳ ಸಹವಾಸಕ್ಕೆ ಹೋಗಬೇಕಾಗಿತ್ತು.
ಭರದಿಂದ ಹುಡುಕಾಟಕ್ಕೆ ತೊಡಗಿದೆ. ಇಷ್ಟರಲ್ಲಿ ನನಗೆ ಆಯ್ಕೆ ಮಾಡಿಕೊಳ್ಳುವ ಅನುಭವ ಚೆನ್ನಾಗಿ ಆಗಿತ್ತು. ಬಹಳ ಮುತುವರ್ಜಿ ವಹಿಸಿ ಹುಡುಕಾಟಕ್ಕೆ ತೊಡಗಿದೆ.

ಆಹಾ,, ಕಣ್ಣಿಗೆ ಬಿದ್ದಳು. ಏನು ಮಮತಾಮಯಿ ಕಣ್ಣುಗಳು!! ಥೇಟು ನಮ್ಮ ದೇಶದ ಪಂಢರೀಬಾಯಿಯ ಹಾಗೆ!! ಸೌಮ್ಯ ಮುಖದ ತುಂಬ ಬರೀ ಮಂದಹಾಸ. ಹಣೆಯಲ್ಲಿ ಅಗಲ ಕುಂಕುಮ ಇಲ್ಲ ನೋಡಿ. ಈಕೆ ಹಿಂದೂ ಹೆಂಗಸಲ್ಲವಲ್ಲ!
ಉದ್ಯಾನವನದಲ್ಲಿ ತನ್ನ ಮೂವರು ಮಕ್ಕಳೊಂದಿಗೆ ಆಡುತ್ತಿದ್ದಾಳೆ. ಮಕ್ಕಳೂ ಮುದ್ದಾಗಿವೆ. ತಾಯಿಯೊಡನೆ ಪ್ರೀತಿಯಿಂದ ಆಡುತ್ತಿವೆ. ಎಂಟು, ಆರು ಮತ್ತು ಮೂರು ವರ್ಷದ ಗಂಡು ಮಕ್ಕಳು. ಅವರುಗಳು ಧರಿಸಿರುವ ಬಟ್ಟೆ ಚೆನ್ನಾಗಿಲ್ಲ. ಕೆಲವು ಕಡೆ ಕಿತ್ತು ಹೊಗಿದೆ. ಆದರೇನು, ಸಂತೋಷಕ್ಕೆ ಕಡಿಮೆ ಇಲ್ಲ. ಇನ್ನೂ ಹತ್ತಿರ ಹೋದೆ. ಆ ಮಕ್ಕಳ ಸಿಹಿ ಮಾತುಗಳು ಕೇಳುತ್ತಿವೆ. ಮಕ್ಕಳು ತಾಯಿಯನ್ನು ಅಪ್ಪ ಯಾವಾಗ ಬರುತ್ತಾನೆಂದು ಕೇಳುತ್ತಿವೆ. ಸಂಸಾರವನ್ನು ನಡೆಸುವ ಅಂಬಿಗನಾಗಿ ಅವನು ಪಡುವ ಕಷ್ಟಗಳನ್ನು ಆ ಮಮತಾಮಯಿ ಅವುಗಳ ಭಾಷೆಯಲ್ಲಿ ತಿಳಿಸಿ ಹೇಳುತ್ತಿದ್ದಾಳೆ. ಇಂದು ಸಂಬಳದ ದಿನವಾದ್ದರಿಂದ, ಏನಾದರೂ ವಿಶೇಷ ತಿನಿಸು ತರಬಹುದೆಂಬ ಭರವಸೆಯನ್ನೂ ನೀಡುತ್ತಿದ್ದಾಳೆ. ಅಷ್ಟರಲ್ಲಿ, ಅಗೊ ನೋಡಿ, ಅವುಗಳ ಕಣ್ಣುಗಳಲ್ಲಿ ಬೆಳಕು! ಅವರಪ್ಪ ಬರುತ್ತಿರುವ. ಮಕ್ಕಳು ಅವನೆಡೆಗೆ ಓಡುತ್ತಿವೆ. ಅವನ ಬಟ್ಟೆ ಬಹಳ ಕೊಳೆಯೆಂದು ಕಾಣುತ್ತಿದೆ, ಯಾವುದೋ ಕಾರ್ಮಿಕನಿರಬೇಕು.ಅದರ ಪರಿವೆ ಅವರ್ಯಾರಿಗೂ ಇಲ್ಲ. ಮಕ್ಕಳು ಜೋತು ಬೀಳುತ್ತಿವೆ. ಆಕೆ ಅವನಿಗೆ ಮುತ್ತಿಡುತ್ತಿದ್ದಾಳೆ. ಎಲ್ಲರ ಮುಖದಲ್ಲೂ ಸಂತಸ ನೆಮ್ಮದಿ. ಚೀಲದಲ್ಲಿರುವ ಸಿಹಿತಿನಿಸು ಮಕ್ಕಳಿಗೆ ಕೊಡುತ್ತಿದ್ದಾನೆ. ಎಲ್ಲ ತಿಂದು ಆಡುತ್ತಿದ್ದಾರೆ. ರಾತ್ರಿಯಾಗುತ್ತಾ ಬಂತು.ಮನೆಗೆ ಹೋಗುತ್ತಿದ್ದಾರೆ. ಆಹಾ ಹುಟ್ಟಿದರೆ ಈ ತಾಯಿಯ ಮಡಿಲಲ್ಲಿ ಹುಟ್ಟಬೇಕು ಎಂದು ನಾನು ನಿರ್ಧರಿಸಿ ಅವರೊಡನೆ ಮನೆಗೆ ನುಗ್ಗಿದೆ. ಊಟವಾಗಿ ಮಲಗುವ ಸಿದ್ಧತೆ ನಡೆಸಿದ್ದಾರೆ. ಆ ಗಂಡ ಹೆಂಡಿರು ತಮಗೊಂದು ಹೆಣ್ಣುಮಗು ಇದ್ದರೆ ಚೆಂದವೆಂದು ಮಾತಾಡಿಕೊಳ್ಳುತ್ತಿದ್ದಾರೆ. ಆ ಸಮಯವೂ ಬಂತು. ನಾನು ಬೇರೆಲ್ಲ ಸೋಂಬೇರಿ ಆತ್ಮಗಳಿಗಿಂತಲೂ ಜಾಗೃತನಾಗಿದ್ದು ಎಣ್ಣೆ ಬರುವಾಗ ಕಣ್ಣು ಮುಚ್ಚಿಕೊಳ್ಳಲಿಲ್ಲ. ಸಮಯಕ್ಕೆ ಸರಿಯಾಗಿ ಎಚ್ಚರದಲ್ಲಿದ್ದು ಪ್ರತಿಷ್ಠಾಪಿತನಾದೆ. ಎಲ್ಲ ಸುಸೂತ್ರವಾಗಿ ನಡೆದಿತ್ತು.ಹತ್ತು ವಾರಗಳು ಕಳೆದಿದ್ದವು. ಆಕೆಗೆ ಮನೆಗೆಲಸದ ಜೊತೆಗೆ ಮಕ್ಕಳ ಆರೈಕೆ ಕಷ್ಟವಾಗತೊಡಗಿತು. ಸಹಾಯಕ್ಕೆ ಪಾಪ ಯಾರೂ ಇಲ್ಲ. ಅವನಾದರೋ ಖರ್ಚು ತೂಗಿಸಲು ಹಗಲಿರುಳು ದುಡಿಯುತ್ತಿದ್ದಾನೆ.ತನ್ನ ಮಕ್ಕಳ ಮೇಲಿನ ತನ್ನ ನಿಗಾ ಕಡಿಮೆಯಾಗುತ್ತಿರುವುದು ಅರಿವಾಗುತ್ತಲೇ ಈ ತಾಯಿಯ ಹೃದಯ ತಳಮಳಿಸತೊಡಗಿತು. ಅಪರಾಧೀ ಮನೋಭಾವ ಕಾಡುತ್ತಿದೆ. ಅವನಿಗೂ ಹೇಳಿದಳು. ಅವನಾದರೂ ಏನು ಮಾಡುತ್ತಾನೆ? ಅಸಹಾಯಕ. ಕಡೆಗೆ ಹೀಗೇ ಮುಂದುವರಿದಲ್ಲಿ ತನ್ನ ಮಕ್ಕಳಿಗೆ ತಾನು ನ್ಯಾಯ ಒದಗಿಸಲಾಗುವುದಿಲ್ಲವೆಂಬ ಜಿಜ್ಞಾಸೆಯಲ್ಲಿ ಬೆಂದು ಗರ್ಭ ನಿವಾರಣೆಗೆ ಮೊದಲಾಗುತ್ತಾಳೆ. ತನ್ನ ಈ ಅಸಹಾಯಕ ಸ್ಥಿತಿಗೆ ಮರುಗುತ್ತಾ , ಅಳುತ್ತಾ ಆಸ್ಪತ್ರೆಗೆ ನಡೆಯುತ್ತಾಳೆ. ವೈದ್ಯರು ನಿರ್ವಿಕಾರ ಮನೋಭಾವದಿಂದ ತಮ್ಮ ಕೆಲಸ ಮಾಡಿದ್ದಲ್ಲದೆ ನನ್ನನ್ನೂ ಉಚ್ಛಾಟಿಸುವಲ್ಲಿ ಯಶಸ್ವಿಯಾಗುತ್ತಾರೆ. ಅಲ್ಲಿಗೆ ನನ್ನ ಅವಧಿ ಮುಗಿಯುತ್ತಾ ಬಂದಿತ್ತು. ನನಗೂ ಈ ಮನುಷ್ಯ ಜೀವನದ ಗೊತ್ತುವಳಿ ಇಲ್ಲದ ಗುರಿಗಳು, ಗುರಿಗಳೇ ಇಲ್ಲದ ನಿರ್ಧಾರಗಳು,ಪ್ರೀತಿ ಪ್ರೇಮದ ಹೊರತಾಗಿಯೂ ಉಳಿದ ಅಂಶಗಳು ಅವರ ಜೀವನವನ್ನು ನಿರ್ದೇಶಿಸುವ ಪರಿ,ಅವರ ಭಾವನೆಗಳು ಹರಿಯುವ ಲಹರಿ, ಬದುಕಿನ ಅನುಭವಗಳನ್ನು ಬೇಗನೆ ಪಡೆಯುವ ತರಾತುರಿ,ಅದರ ನಿಟ್ಟಿನಲ್ಲಿ ಅನುಭವಿಸುವ ಕಿರಿ ಕಿರಿ “ಬಿಸಿಲಿಗಾರದ ಕೋತಿ ಬಂಡೆ ಮೇಲ್ ಕುಳಿತಂತೆ” ಎನ್ನುವ ಹಾಗೆ ನನ್ನನ್ನು ಹೈರಾಣ ಮಾಡಿದ್ದವು. ಸರಳತೆಯು ವಿರಳವಾಗಿ, ಸಂಕೀರ್ಣತೆಯು ಸಂಪೂರ್ಣವಾಗಿ ಆವರಿಸಿದ್ದ ಈ ಮನುಷ್ಯರ ಜೀವನ ನನ್ನಲ್ಲಿ ಭರವಸೆಯ ಆಶಾಕಿರಣಗಳನ್ನು ಉಳಿಸಿರಲಿಲ್ಲ ಅಷ್ಟೇಅಲ್ಲ, ಭ್ರಮನಿರಸನಗೊಳಿಸಿದ್ದವು.ಪ್ರಾಣಿಗಳೇ ವಾಸಿ.ನಿಷ್ಕಾಮ ಕರ್ಮವನ್ನು ಅದರ ಅರಿವಿಲ್ಲದೆಯೂ ಬಹುಮಟ್ಟಿಗೆ ಮನುಷ್ಯನ ವ್ಯಾಖ್ಯೆಗೆ ಮೀರಿ ಆಚರಿಸುತ್ತವೆ. ಈ ಅರಿವು ನನಗಾಗುತ್ತಿದ್ದಂತೆ ನಾನು ಪುನ್ಃ ಯಮಧರ್ಮನ ಆಸ್ಥಾನದ ಕಡೆಗೆ ಧಾವಿಸಿದೆ. ಯಮ ಆಸಕ್ತಿಯಿಂದ ಸ್ವಾಗತಿಸಿದ. ಚಿತ್ರಗುಪ್ತ ತನ್ನ ಬಿಳಿ ಮೀಸೆಯಡಿಯಲ್ಲಿ ಕುಹಕ ನಗೆ ಬೀರುತ್ತಿದ್ದುದು ನನ್ನರಿವಿಗೆ ಬಾರದೆ ಇರಲಿಲ್ಲ. ನನ್ನೀ ಅನುಭವದ ಹಿಂದೆ ಇವನ ಕುಟಿಲ ಕೈವಾಡವಿರಬಹುದೋ ಎಂಬ ಸಂದೇಹ ನನ್ನಲ್ಲಿ ಮೂಡದೆ ಇರಲಿಲ್ಲ. ಪುರಂದರ ದಾಸರ ಮಾನವ ಜನ್ಮ ದೊಡ್ಡದು ಎಂಬ ಹಾಡಿನಿಂದ ಪ್ರಾರಂಭವಾದ ನನ್ನೀ ಅನ್ವೇಷಣೆ “ಆದದ್ದೆಲ್ಲಾ ಒಳಿತೇ ಆಯಿತು” ಎಂಬ ಅವರ ಹಾಡಿನಿಂದಲೇ ಮುಕ್ತಾಯ ಸ್ವಾಮಿ.
ನನ್ನ ಅಂತರಾಳವನ್ನು ನಿಮ್ಮ ಮುಂದೆ ತೆರೆದಿಟ್ಟೆ. ನಿಮಗೇನಾದರೂ ಆತ್ಮನ ಬಗ್ಗೆ ತಿಳಿಯಿತೋ? ಸರಿ. ಇನ್ನೂ ತಿಳಿದಿಲ್ಲವಾದರೆ ಅಥವಾ ಮೊದಲೇ ಕಲಸಿದ್ದ ಮನಸಿಗೆ ಇದೊಂದು ಮೇಲೋಗರವಾಗಿದ್ದರೆ ನಿಮ್ಮ ಕ್ಷಮೆ ಇರಲಿ. ನಿಮ್ಮನ್ನು ನಾನು ಅರಿಯಲಾಗಲಿಲ್ಲ ಹಾಗೇ ನನ್ನನ್ನು ನೀವು!!!.

ಸುದರ್ಶನ ಗುರುರಾಜರಾವ್.