ಕಳೆ- ಕಳೆ

ಕಳೆ- ಕಳೆ

ಜನಪದವು ವ್ಯವಹರಿಸೆ ಬೇಕೊಂದು ಭಾಷೆಯು
ಆ ಭಾಷೆ ಬೆಳೆಯಲು ಬೇಕು ಜನಪದದೊಲವು
ಜನಪದದ ನುಡಿತೋಟ ಕಥೆ ಕಾವ್ಯ ತರು ಲತೆಯು
ನಳ ನಳಿಸೆ ಇರಬೇಕು ಅಭಿಮಾನ ಅರಿವು

ಒಟ್ಟು ಸಾವಿರದೊಂದು ಭಾಷೆಗಳ ನಡುವಿನಲಿ
ಪುಟ್ಟ ಉದ್ಯಾನದೊಳ್ ಇರುವ ಕನ್ನಡದ ನುಡಿಯ
ನೆಟ್ಟ ಗಿದ ಮರ ಬಳ್ಳಿ ಫಲ ಪುಷ್ಪ ನೀಡಲು
ತೋಟ ಮಾಲಿಯು ಅದಕೆ ನೀನಾಗು ಗೆಳೆಯ

ಪಂಪ ಕಟ್ಟಿದ ತೋಟ ರನ್ನ ಬೆಳೆಸಿದ ತೋಟ
ಜನ್ನ ಹರಿಹರ ಪೊನ್ನ ರಾಘವಾಂಕರ ತೋಟ
ಗದುಗಿನಾ ನಾರಣನು ನೀರನೆರೆದಿಹ ತೋಟ
ಮುದ್ದಣ ಮನೋರಮೆಯರ್ ವಿಹರಿಸಿದ ತೋಟ

ಶರಣರರಸಿದ ತೋಟ ದಾಸರೊಲುಮೆಯ ತೋಟ
ಗೊರವ ಜಂಗಮ ಜೋಗಿ ಜಾನ ಪದಗಳ ತೋಟ
ಸರಸ್ವತಿಯ ವರತೋಟ ವರಕವಿಗಳಾ ತೋಟ
ಮೇರು ಕೃತಿಗಳು ಮೆರೆವ ಮನಸೆಳೆವ ತೋಟ

ಕಬ್ಬಿಗರ ಕೈತೋಟ ಅಬ್ಬರವಿರದಾ ತೋಟ
ಕಬ್ಬ ಕಾವ್ಯಗಳ ಹಗ್ಗದುಯ್ಯಾಲೆ ತೋಟ
ಇಬ್ಬನಿಯ ತಂಪೆರೆವ ಸಹೃದಯರಾ ತೋಟ
ಹಬ್ಬದೂಟವ ದಿನವು ಬಡಿಸುತಿಹ ತೋಟ

ಕಬ್ಬಿನಾ ಸಿಹಿರಸವು ಕಬ್ಬಗಳಲ್ಲಿಹ ತೋಟ
ತಬ್ಬಿದರೆ ಮನದೆಲ್ಲ ಮಬ್ಬು ಕಳೆಯುವ ತೋಟ
ನಿಬ್ಬೆರೆಗು ಮಾಡುವಂತಿರುವ ಸುಂದರ ತೋಟ
ಅಬ್ಬೆಯರು ಮಮತೆಯಲಿ ಲಾಲಿ ಹಾಡಿದ ತೋಟ

ತಲ್ಲಣಿಸಿದಾ ಮನವು ತಾಯಿಯನು ಹುಡುಕೊವೊಲು
ಎಲ್ಲು ಸಿಗದಿಹ ಒಲುಮೆ ಅವಳ ಮಡಿಲಿನೊಳಿರಲು
ಅಲ್ಲಿ ತಲೆಯನ್ನಿಟ್ಟು ನೋವ ನೀ ಮರೆಯುವೊಲು
ಬಲ್ಲವನೆ ಬಲ್ಲನೋ ಕನ್ನಡದ ಜೇನ್ಹೊನಲು

ಮನೆಯೊಳಾಡುವ ಭಾಷೆ ಮನವನಾಳುವ ಭಾಷೆ
ಕನ್ನಡದ ನಲ್ನುಡಿಯು ಚೆಲುವು ಮರೆದಿಹ ಭಾಷೆ
ಅನ್ನ ನೀಡದಿದೆಂದು ತೊರೆಯದಿರು ನಿನ ಭಾಷೆ
ನಿನ್ನ ನೀನರಿತರೆ ಮೂಡದಾ ಕ್ಲೀಷೆ

ಜೀವನದ ಓಟದಲಿ ಬೇಕುಗಳ ಬೆನ್ಹಿಡಿದು
ಬೇಕುಗಳ ಕಣ್ಪಟ್ಟಿ ಕಟ್ಟಿ ಓಡುತ ನವೆದು
ಜೀಕುತಲಿ ನೋಡದಲೆ ಕನ್ನಡದ ತೋಟ
ಸಾಗಿದರೆ ಕಾಣದೆಲೊ ವಿಹಂಗಮ ನೋಟ

ತೋಟದಂಚಿನಲೆಲ್ಲೊ ಬೆಳೆದಿದ್ದ ಕಳೆ ಹುಲ್ಲು
ನೋಟವನು ತಪ್ಪಿಸುತ ಒಳನುಗ್ಗುತಿಹುದಲ್ಲೊ
ದಿಟವಾಗಿ ಕಿತ್ತೆಸೆದು ತೊಡೆಯದಿರೆ ನೀನು
ಕಾಟಕ್ಕೆ ಗಿಡ-ಬಳ್ಳಿ ಸೊರಗದಿಹವೇನು?

ಆಂಗ್ಲ ಭಾಷೆಯ ಕಳೆಯು ಕನ್ನಡದಿ ಬೆರೆತಿರಲು
ಆಮ್ಗ್ಲೆ ಪದಗಳೆ ನಮ್ಮ್ಮ ಮಾತೆಲ್ಲ ತುಂಬಿರಲು
ಕಳೆ ಬೆಳೆದ ತೋಟದಂತೆಮ್ಮ ನುಡಿ ಸೊರಗಿರಲು
ಗೆಳೆಯ ಬಾ ನೀ ಜೊತೆಗೆ ಕಳೆಯ ಕಿತ್ತೆಸೆಯಲು

ಕನ್ನಡವ ನುಡಿವಲ್ಲಿ ಶುದ್ಧ ಕನ್ನಡ ನುಡಿದು
ಕನ್ನಡದ ಪದಸಿರಿಯ ಮನದಾಳದಿಂದಗೆದು
ಕನ್ನಡವ ಕನ್ನಡಗ ಸೊಗಡಿನಲೆ ಬಳಸಿದರೆ
ಕನ್ನಡದ ತೋಟದೊಳ್ ಹರಿಯದೇ ಶುಭ್ರತೊರೆ?

ಕನ್ನಡದ ನುಡಿತೋಟ ನಿನ ಸೇವೆ ಬೇಡುತಿದೆ
ಮನ್ನಿಸು ಈ ನನ್ನ ಕೋರಿಕೆಯ ಗೆಳೆಯ
ನಿನ್ನ ಮನೆಯಲಿ ಎಂದು ನೀನಾಡೊ ಮಾತಿನಲಿ
ಕನ್ನಡದ ಪದಗಳನೆ ಬಿಡದೆ ಬಳಸುವೆಯಾ?

ಡಾ. ಸುದರ್ಶನ ಗುರುರಾಜರಾವ್