ಮಂಗ(ಗ)ಳ ಯಾನ- ಸುದರ್ಶನ ಗುರುರಾಜರಾವ್

ಮಂಗ(ಗ)ಳ  ಯಾನ

ವಿಶ್ವದಲ್ಲೇ ಪ್ರಥಮಬಾರಿಗೆ ಪ್ರಥಮ ಪ್ರಯತ್ನದಲ್ಲೇ ಪ್ರತಿಷ್ಠಿತ ಇಸ್ರೋ ಸಂಸ್ಥೆಯ ವಿಜ್ಞಾನಿಗಳು ಮಂಗಳನ ಅಂಗಳಕ್ಕೆ ಉಪಗ್ರಹವೋಂದನ್ನು ಇಳಿಸಿದ್ದು ವಿಜಯಾ ಮತ್ತೆ  ಅವನ ದಂಡಿಗೆ  ಭಾರೀ ಉನ್ಮಾದನಾನ್ನೂ, ದೇಶಪ್ರೇಮವನ್ನೂ,ಹುರುಪನ್ನು ಮೂಡಿಸಿಬಿಟ್ಟಿತು. ದೇಶದ ಸಮಸ್ತ ಜನಸ್ತೋಮದ ಜೊತೆಜೊತೆಗೆ ತಾವೂ ಈ ಸಾಧನೆಯನ್ನು ಸಂಭ್ರಮಿಸಿ ಪರಸ್ಪರ ಭಾರತೀಯರಾಗಿ ಅಭಿನಂದಿಸಿಕೊಂಡರು. ಅದೇ ಖುಷಿಯಲ್ಲಿ ತಾವು ಭಾರತೀಯರಾಗಿ ಈ ಭೂಮಿಯಲ್ಲಿ ಜನ್ಮ ತಾಳಿದ್ದಕ್ಕೆ ಸಾರ್ಥಕಭಾವವನ್ನು ಅನುಭವಿಸಿದರು. ತಮಗೆ ಕೆಲಸ ಸಿಗುವ ಮುನ್ನ, ಪೋಲಿಗಳಾಗಿ ಅಲೆಯುತ್ತಿದ್ದಾಗ ದಿನವೂ ಪೈಸೆ ಪೈಸೆಗೆ ಲೆಕ್ಖ ಕೇಳುತ್ತಿದ್ದ ತಂದೆತಾಯಿಯರನ್ನು ದಿನವೂ ಶಪಿಸುತ್ತಿದ್ದ, ತಮ್ಮನ್ನು ಈ ಭೂಮಿಗೆ ತಂದ ತಪ್ಪಿಗೆ ಅವರನ್ನೇ ನಿಂದಿಸುತ್ತಿದ್ದ ಅವರುಗಳಿಗೆಲ್ಲ ತಮ್ಮ ಮಾತಾ ಪಿತೃಗಳು ದೈವೀ ಸಮಾನರಾಗಿ ಗೋಚರಿಸಿದರು. ಅವರಿಗೆ ವಂದಿಸಿ ಹೆಚ್ಚು ಹುರುಪಿನಿಂದ ತಮ್ಮ ಕೆಲಸಕ್ಕೆ ನಡೆದರು.

ಅದಾದ ಒಂದು ತಿಂಗಳು ವಿಜಯನ ಸುದ್ದಿಯೇ ಇರಲಿಲ್ಲ,. ಯಾವ ಫೋನಿಗೂ ಈ-ಮೇಲಿಗೂ ಸಿಗಲಿಲ್ಲ. ಎಲ್ಲಿ ಹೋದ ಇವನು ಎಂದು ಎಲ್ಲರೂ ತಲೆ ಕೆರೆದು ಕೊಳ್ಳುತ್ತಿರುವಾಗಲೇ ಅವನು ಪ್ರತ್ಯಕ್ಷನಾದ. ಎಲ್ಲಿ ಹಾಳಾಗಿ ಹೋಗಿದ್ಯೋ ದರ್ಬೇಶಿ  ಈ -ಮೇಲು ಕಳಿಸಿದರು ಉತ್ತರ ಇಲ್ಲ ಎಂದು ಅವರು ಕೇಳಲಾಗಿ,  ನಾನು ಹಾರುತ ದೂರಾ ದೂರಾ, ಫೀ ಮೇಲು ಜೊತೆ ಹೋಗಿರುವಾಗ ನಿಮ್ಮ ಮೇಲು ಗಳಿಗೆ ನನ್ನ ಜೀವನದಲ್ಲಿ ಪಾಲಿಲ್ಲ ಎಂದು ಅಸಂಬದ್ಧವಾಗಿ ನುಡಿದ. ಅದೇನು ಸರಿಯಾಗಿ ಹೇಳೋ ಅಂದಿದ್ದಕ್ಕೆ, ನಾನು ಮಾರ್ಸು,ಆರ್ಬಿಟ್ ಎಲ್ಲ ಸೊನಾಲಿ ಜೊತೆ ಸುತ್ತುಹಾಕಿಕೊಂಡು ಬಂದೆನಮ್ಮ. ಬೇಕಾದ್ರೆ ನೀವೂ ಮಾರ್ಸ್ ನೋಡ್ಬೋದು. ಅಷ್ಟ್ಯಾಕೆ, ಗ್ಯಾಲಾಕ್ಸೀನೆ ಭೇದಿಸಬಹುದು. ಡೀಟೈಲಾಗಿ ಕೇಳ್ಬೇಕಾದ್ರೆ ಸಾಯಂಕಾಲ ನಮ್ಮ ಮಾಮೂಲು ಜಾಗಕ್ಕೆ ಬನ್ನಿ. ಕಾಫೀ ತಿಂಡಿ ಜೊತೆ ಹೇಳ್ತೀನಿ ಈಗ ಟೈಮಿಲ್ಲಮ್ಮ ಅಂತ ತನ್ನ “ಆಪಲ್ ವಾಚು” ನೋಡಿಕೊಂಡು ಹೊರಟು ಹೋದ.

 

ಎಲಾ ಇವನ. ಇದೇನಪ್ಪ ಇವನ ಹೊಸ ವರಸೆ, ಎರಡು ಗೇಣು ಉದ್ದ ಇಲ್ಲ ಮಾರು ಗಟ್ಲೆ ಮಾತಾಡ್ತಾನಲ್ಲ. ಮನೆ ಮುಂದಿನ ಅಂಗಳಕ್ಕೆ ಹೊಟ್ಟೆ ಬಿಟ್ಕೊಂಡು ಮೂರು ಮಾರು ಹಾರಕ್ಕೆ ಆಗದವನು ಮಾರ್ಸ್ ಗೆ ಹಾರುವುದೆಂದರೇನು? ಅದರ ಅರ್ಬಿಟ್, ಅಂದರೆ ಕಕ್ಷೆಯನ್ನು ಸೇರುವುದೆಂದರೇನು?ಕೋಟಿ ಮೈಲು ದೂರದಲ್ಲಿರುವ ಆ ಮಾರ್ಸ್, ಮಂಗಳನ ಅಂಗಳಕ್ಕೆ ಒಂದೇ ತಿಂಗಳಲ್ಲಿ ಹೋಗಿಬರುವುದೆಂದರೇನು? ಅದೂ ಅಲ್ಲದೆ ನಮಗೇ ಬರೀ ಮಾರ್ಸ್, ಮಂಗಳನೇ ಅಲ್ಲ, ಗ್ಯಲಾಕ್ಸಿಯನ್ನೇ ತೋರಿಸುತ್ತಾನೆಂದರೇನು? ತುಂಗೆ ನದಿಯನ್ನೇ ಕಾಣದ ಇವನು ಆಕಾಶಗಂಗೆಯನ್ನು ಕಂಡಿದ್ದಾನೆಂದರೆ  ನಂಬುವುದಾದರೂ ಹೇಗೆ? ಅರ್ಧ ಟೀ ಕುಡಿಸಿದ ಖರ್ಚಿಗೆ ನಮ್ಮಿಂದ ಎರಡರಷ್ಟು ಕೆಲಸ ತೆಗೆಯುವ ಇವನು ಕೋಟ್ಯಾನು ಕೋಟಿ ಖರ್ಚಿನ ಬಾಬತ್ತಿಗೆ ಕೈ ಹಾಕಿದಾದರೂ ಹೇಗೆ. ತಮ್ಮ ಮನೆಯ ಅಂಗಳವನ್ನೇ ಸರಿಯಾಗಿ ನೋಡದ ಇವನು ಮಂಗಳನ ಅಂಗಳವನ್ನು ಹೊಕ್ಕು ಬರುವುದೆಂದರೇನು, ಇಷ್ಟಕ್ಕೂ ನಮ್ಮ ಕಡೆಗೆ ಕಣ್ಣೆತ್ತಿಯೂ ನೋಡದ ಆ ಚಿನ್ನಾಲಿ, ಸೊನಾಲಿ ಇವನ ಜೊತೆ ಹಾರುತ್ತಾ ಹೋಗಿದ್ದಳೆಂ ದರೆ, ಅಬ್ಬಬ್ಬಾ !!! ಹೇಗೆ ಸಾಧ್ಯ ? ಎಂದುಕೊಂಡರೂ  ಕೆಟ್ಟ ಕುತೂಹಲ ಅವರನ್ನು ಕೆಣಕದೆ ಬಿಡಲಿಲ್ಲ. ಆ ಚಿನ್ನಾಲಿಯೊಡಾನೆ ಇವನು ಏನೇನು ಚಿನ್ನಾಟವಾಡಿರಬಹುದೆಂಬ ಅವರ ಕಸಿವಿಸಿ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದ್ದು ಸಾಯಂಕಾಲ ಅವಧಿಗೆ ಮೊದಲೇ ಜಮಾಯಿಸಿದರು.

ವಿಜಯ ಬೇಗನೆ ಬರಲಿಲ್ಲ. ಕಾದೂ, ಕಾದೂ ಎರೆಡೆರೆಡು ಬೈಟು ಟೀ  ಕುಡಿದರು. ಸಿಟ್ಟು ಪಾದರಸದಂತೆ ಏರುತ್ತ ಹೋಯ್ತು. ಏನೋ ಹುನ್ನಾರ ಮಾಡಿದ್ದಾನೆ. ಒಂದು, ಎಲ್ಲೋ ಇವನಿಗೆ ದೇಶ ಪ್ರೇಮ ಹುಚ್ಚೆದ್ದು ಭ್ರಾಂತು ಬಡಿದುಕೊಂಡಿರಬೇಕು ಅದಕ್ಕೇ ಏನೇನೋ ಬಡಬಡಿಸುತ್ತಿದ್ದಾನೆ. ಇಲ್ಲವೇ ನಮ್ಮನ್ನು ಮತ್ತೆ ಬೇಸ್ತು ಬೀಳಿಸಲು ಸಂಚು ಮಾಡಿರಬೇಕು. ಬರಲಿ, ಇವತ್ತು ಮಂಗಳನಾದಿಯಾಗಿ ಗ್ರಹಚಾರ ಬಿಡಿಸುವ; ರಾಹು ಕೇತು, ಶನಿ ಎಲ್ಲಾ ಇವತ್ತು ಈ ನನ್ಮಗನ ಒಂಭತ್ತನೇ ಮನೆಯಲ್ಲಿ ಸೇರಿಕೊಂಡಿರಬೇಕು.. ಕರಾರುವಾಕ್ ಸಮಯಪಾಲನೆಯ  ಕುರುಹು ಗೊತ್ತಿಲ್ಲ್ಲದ ಇವನು ಮಂಗಳನ ಮುಖ ನೋಡಿರುವುದು ಅಷ್ಟರಲ್ಲೇ ಇದೆ ಮಂಗ ನನ್ನ ಮಗ ಎಂದೆಲ್ಲಾ ಬೈದಾಡಿಕೊಂಡರು.

ಕಡೆಗೂ ವಿಜಯನ ಆಕೃತಿ ಕಣ್ಣಿಗೆ ಗೋಚರಿಸಿತು. ಹತ್ತಿರ ಬಂದ. ಬರುತ್ತಲೇ  ತನ್ನ ಮುಖದಿಂದ ಮುಗುಳು ನಗೆಯ ಬೆಳಕ ಬೀರಿ, ಕಂಗಳಲ್ಲೇ ಒಲವ ತೋರಿ .. ‘ಮಂಗಳದ ಈ ಸುದಿನ ಮಧುರವಾಗಲಿ’ ಎಲ್ಲರಿಗೂ ಅಂದ. ಅದು ಅವರಿಗೆ  “ಮಂಗಗಳ ಈ ಸುದಿನ “ ಅಂದಂತೆ ಕೇಳಿ ಸಿಟ್ಟು ಇನ್ನೂ ಕೆರಳಿತು. ಪುಟ್ಟ ಹೇಳಿದ “ ಲೋ ಸೋಂಬೇರಿ ನನ್ಮಗನೇ, ಮೂರು  ಮಾರು ದೂರ ಇರುವ ನಿಮ್ಮ ಮನೆಯಿಂದ ಬರುವುದೇ ನಿನಗಾಗಲ್ಲ, ಇನ್ನು ಮಾರ್ಸ್ ಮೇಲೆ ಮಜಾ ಮಾಡಿಬಂದೆ ಅಂತ ಪಟ್ಟಿ ಕುಯ್ತೀಯ ನಿನ್ನ ನಂಬ್ತೀವಲ್ಲ ನಮಗೆ ಮೆಟ್ಟಿನಲ್ಲಿ ಹೊಡ್ಕೋಬೇಕು. ಆ ಮಾರಮ್ಮಂಗೆ  ಕೋಣನ್  ಬದ್ಲು ನಿನ್ನೆ ಬಲಿಹಾಕಬೇಕು ಮಗನೆ ಅಂದ.”

ವಿಜಯ “ ಶಾಂತಿ, ಶಾಂತಿ ಪುಟ್ಟ. ನಾನಿನ್ನೂ ತಿದಿನೇ ಒತ್ತಿಲ್ಲ ಆಗಲೇ ಭುಸು ಗುಟ್ಟ್ತಾಇದೀಯ. ನೀನೊಂಥರ ಪಾಕಿಸ್ತಾನದಲ್ಲಿರೋ ಕ್ಷಿಪಣಿ ಥರ ನೋಡು. ಕುಂಡಿನಲ್ಲಿ ಯಾವಾಗಲೂ ಬೆಂಕಿ ಹತ್ಕೊಂಢಂಗೆ ಆಡ್ತೀಯ. ಸ್ವಲ್ಪ ಇರ್ರಪ್ಪಾ ಹೇಳ್ತೀನಿ” ಅಂದ

‘ಅದೇನ್ ಹೇಳ್ತೀಯೋ ನಾವೇನೇನ್ ಕೇಳ್ಬೇಕೋ,..  ನೋಡು ನಾವಾಗಲೇ ಟಿ ಎರೆಡೆರೆಡು ಸಾರಿ ಕುಡಿದಿದ್ದೀವಿ. ಈಗ ತಿನ್ನಕ್ಕೆ ಚುರುಮುರಿ ಆರ್ಡರ್ ಮಾಡು ಅಮೇಲೆ ಕಾಫೀನೂ ನೀನೇ ಕೊಡಿಸಬೇಕು’ ಅಂತ ಓಂಕಾರಿ ಮತ್ತೆ ಉಗ್ರಪ್ಪ ಇಬ್ಬರೂ ಆಗ್ರಹ ಮಾಡಿದರು.

‘ಹಂಗೇ ಆಗಲಿ ಬಿಡ್ರೋ. ನಿಮ್ಗೂ ಶಕ್ತಿ ಬೇಕಲ್ಲ. ಈಗ್ಲೇ ತಿನ್ಕೊಂಡು ಬಿಡ್ರಿ, ಆಮೇಲೆ ಕಷ್ಟ ಆಗ್ಬಹುದು’ ಅಂತ ಹೇಳಿ ಆರ್ಡರ್ ಕೊಟ್ಟ. ಅಡಿಗೆ ಭಟ್ಟ  ಗುಡಿಬಂಡೆ ಫುಲ್ ಖುಷ್ ಆಗಿ ಚುರುಮುರಿ ಬೆರೆಸಲು ಮೆಣಸಿನಕಾಯಿಗಳನ್ನು ಕಚಕಚನೆ ಕೊಚ್ಚತೊಡಗಿದ.

‘ಸರಿ ಈಗ ಅದೇನ್ ಪಿಟೀಲ್ ಕುಯ್ತೀಯೋ ಕುಯ್ಯಿ. ಆಮೇಲೆ ಏನಾದ್ರೂ ನಾನ್ಸೆನ್ಸ್ ಹೇಳಿದ್ರೆ ನೋಡ್ತಾ ಇರು ..’ ಜಗ್ಗು ಎಚ್ಚರಿಕೆ ಕೊಟ್ಟ.

‘ನೋಡ್ರಪ್ಪಾ ನಾನೇನು ಇಲ್ಲ ಸಲ್ಲದ್ದೆಲ್ಲಾ ಹೇಳ್ತಿಲ್ಲಾ. ನೀವಿ ಹೇಳಿಕೊಂಡ ಹಾಗೆ ಇದೇನು ಕನಸು ಅಲ್ಲ. ನಿಮಗೆ ಬೇಕಾದ್ರೆ ಸುಬ್ಬನ್ನೂ , ದಮ್ಮಿದ್ರೆ ಸೋನಾಲಿನೂ ಕೇಳ್ಕೊಳೀ. ಅವಳು ಹೆಂಗೂ ನಂಜೊತೆಲೇ ಬಂದಿದ್ಲಲ್ಲ…’ ಮೆಣಸಿನ ಕಾಯಿ ಕಿವುಚಿದ. ಕೇಳಿ ಅವರೆಲ್ಲರ ತಲೆ ಗಿರ್ರಂತು, ಹೊಟ್ಟೆ ಕಿರ್ರೆಂತು, ಅಂಡು  ಚುರ್ರಂತು.  ಈ  ಮೂರು ಗೇಣುದ್ದ ಇರುವ ನನ್ಮಗ ಅವಳ ಜೊತೆ ಹೆಂಗೆ ಸೆಟ್ ಅಪ್ ಮಾಡ್ಕೊಂಡ? ಅದಕ್ಕೇ ಇರಬೇಕು love is blind ಅಂತ ಅಂದಿರಬೇಕು. ಮಂಗಳಯಾನ ಅಂತ ಹಾಗೇ ಶುಭಮಂಗಳ ಮಾಡ್ಕೊಂಡು ಬಿಟ್ಟಿದ್ರೆ ಹೆಂಗಪ್ಪಾ..  ಎಂಬ  ಚಿದಂಬರ ರಹಸ್ಯವನ್ನು ಭೇದಿಸಲು ಪುಟ್ಟ ಕೇಳಿಯೇ ಬಿಟ್ಟ.

“ಮಂಗಳಯಾನಕ್ಖೋಗಿ, ಶುಭಮಂಗಳ ಮಾಡ್ಕೊಂಡು ಹಂಗೇ ವಾಪಸ ಬರ್ತಾ ಚಂದ್ರಯಾನದಲ್ಲಿ ಮಧುಚಂದ್ರನೂ ಮುಗಿಸಿಕೊಂಡು ಬಂದಿರೋ ಹಂಗಿದೆ ಯಜಮಾನ್ರು” ಉರ್ಕೊಂಡ.

ನಸುನಕ್ಕ ವಿಜಯ ತಲೆದೂಗುತ್ತಲೂ ಹುಸಿ ನಾಚಿಕೆಯನ್ನು ತೋರುತ್ತಲೂ ಎಲ್ಲರಿಗೂ ಅವರವರ ತಿಂಡಿ ಪ್ಲೇಟುಗಳನ್ನು ತಾನೇ ಆಸ್ಥೆಯಿಂದ ಕೊಡುತ್ತಾ ಜೊತೆಗೆ ಅವರ್ಗಳು ಕೇಳದೇ ಇದ್ದರೂ ಮೈಸೂರುಪಾಕನ್ನೂ ಇಡಿಸಿದ್ದ. ಅದನ್ನು ನೋಡಿದ ಅವರ ತಳಮಳ ಇನ್ನೂ ಹೆಚ್ಚಾಯ್ತು. ಈ ನನ್ಮಗ ಆ ಸೊಟ್ಟ ಮೂತಿ ಸುಬ್ಬು ಸಾಕ್ಷಿಯಲ್ಲಿ ಅ ಚಿನಾಲಿ ಕೈಹಿಡಿದು ರಿಜಿಸ್ಟರ್ ಮಾಡುವೆ ಮಾದ್ಕೊಂಡಿರಬೇಕು ,ಅದಕ್ಕೇ ಅವರ ಅಪ್ಪ ಅಮ್ಮಂಗೂ ಇವನ ಅಡ್ರೆಸ್ ಗೊತ್ತಿರಲಿಲ್ಲ. ಒಳಗೇ ಮಸಲತ್ ಮಾಡಿದ್ದಾನೆ ಮಿತ್ರದ್ರೋಹಿ ಅಂತ ಮನದಲ್ಲೇ ಬೈದುಕೊಂಡರು.

ವಿಜಯ ಶುರು ಮಾಡ್ದ .” ನೋಡ್ರಪ್ಪಾ ನಾನು ಒಂದು ವರ್ಷದಿಂದ ಆಗಾಗ ರಜಾಹಾಕಿ ಹೋಗ್ತಾ ಇದ್ದಿದ್ದು ನಿಮಗೆ ಗೊತ್ತು. ಅವಾಗೆಲ್ಲ ನಾನು ಸೊನಾಲಿ ಟ್ರೈನಿಂಗ್ ಜೊತೆನೇ ಹೋಗ್ತಾ ಇದ್ದಿದ್ದು. ಆ ಪ್ರಾಜೆಕ್ಟು ಬಹಳ ರಹಸ್ಯ. ಭೈರಪ್ಪನವರ ಯಾನದಲ್ಲ್ಲಿತ್ತಲ್ಲಾ ಆ ಥರ ಅಂದ್ಕೊಳ್ಳಿ . ನಮಗೆ ಟ್ರೇನಿಂಗ – ತರಬೇತಿ ಅಂತ ಅದೆಲ್ಲಾ, ಕಡೆಗೆ ಅದು ಯಶಸ್ವಿಯಾಗಿದ್ದಕ್ಕೆ  ನಾವು ಮಾರ್ಸ್ ಆರ್ಬಿಟಲ್ಗೇ ಹೋಗಿ  ಹಂಗೇ ಸುತ್ತಾಡಿಕೊಂಡು ಬಂದ್ವಿ” ಅಂದ

‘ಅಲ್ಲಾ..ಹಂಗೇ ಸುತ್ತಾಕ್ಕಂಡು ಬರಕ್ಕೆ ಅದೇನು ಬುಡೇನ್ ಸಾಬಿ ಬಾಡಿಗೆ ಸೈಕಲ್ನಲ್ಲಿ ಸೀಗೇಹಳ್ಳಿಗೆ ಹೋಗಿ ಬಂದಂಗಾ .. ನನ್ಮಗನೇ.. ಮಾರ್ಸ್ ಆರ್ಬಿಟಲ್ ಗೆ ರಾಕೆಟ್ ನಲ್ಲಿ ಕೂತ್ಕೊಂಡು   ಹೋಗದಲ್ವಾ..’ ಓಂಕಾರಿ ಹೂಮ್ಕಾರ ಮಾಡಿದ .

‘ಮತ್ತಿನ್ನೇನು, ಕಂಬಿ ಇಲ್ದೇ ರೈಲು ಓಡ್ಸೋದು ಇವನಿಗೆ ಹೇಳ್ಕೊಡ್ಬೇಕಾ ..’ ಜಗ್ಗು ಅನುಮೋದಿಸಿದ.

‘ನೋಡ್ರೋ ನೀವು ನಂಬಿದ್ರೆ ನಂಬಿ ಬಿಟ್ರೆ ಬಿಡಿ, ನಾವಂತೂ ರೋವರ್  ನಲ್ಲಿ ಕೂತು, ಮಾರ್ಸ್ ಆರ್ಬಿಟಲ್ ಗೆ ಹೋಗಿ ಸುತ್ತಾಕೊಂಡ್ ಬಂದ್ವಿ. ಸೊನಾಲಿ ನನ್ನ ಪಕ್ಕನೆ ಕೂತಿದ್ಲು. ನಾನು ಹೇಳಿದ ಜೋಕ್ ಗೆಲ್ಲ  ನಕ್ಕಳು.’ ಕಿಚಾಯಿಸಿದ. ಅವರೆಲ್ಲರ ಹೊಟ್ಟೆ ಯೋಗ ಗುರು ರಾಮ್ ದೇವ್ ಹೊಟ್ಟೆ ಥರ ಗುರ್ ಗುರಾ ಅಂತ ಅಲ್ಲಾಡ್ತು.

ಅದೇನ್ ಸರಿಯಾಗಿ ಬೊಗಳಿ ಪುಣ್ಯ ಕಟ್ಕೋ , ಆರ್ಬಿಟಲ್ ನಲ್ಲಿ ಎಷ್ಟು ಸುತ್ತು  ಹಾಕಿದ್ರಿ ? ಉಗ್ರಿ ವ್ಯಗ್ರನಾಗಿ ಕೇಳಿದ.

“ ಆರ್ಬಿಟಲ್ ಅಂದ್ರೆ ಏನೂ ಅಂತ ಮೊದಲು ತಿಳ್ಕೋ ಬೇಕು. ಅದೊಂದು ಮುಗಿಯದೆ ಇರುವ ಜಗಿತ. ನೀವೆಷ್ಟೇ ಜಗಿದರೂ ಮುಗಿಯುವುದೇ ಇಲ್ಲ ಹೌದೋ ಅಲ್ವೋ ?” ಕೇಳಿದ

ಉಗ್ರಿಗೆ ಅವನು ಜಗಿತ ಅಂದದ್ದು ಜಿಗಿತ ಅನ್ನೋಥರ ಕೇಳಿಸಿ  ತಲೆದೂಗುತ್ತಾ, “ಹೌದು ಹೌದು, ಆರ್ಬಿಟ್ ದೀರ್ಘವೃತ್ತಾಕಾರದ ಕಕ್ಷೆ. ವೃತ್ತಕ್ಕೆ ಎಲ್ಲಾದರೂ ಆದಿ  ಅಂತ್ಯಗಳಿರುವುದುಂಟೇ ,. ನಮ್ಮ ಬೆಂಗಳೂರಿನ ರಿಂಗ್ ರೋಡ್ ಥರ” ಸಮರ್ಥನೆ ಕೊಟ್ಟ.

“ಒರ್ಬಿಟ್ ನ ಜಗಿದು ಜಗಿದು ಬೇಜಾರಾದ್ರೆ ನೀವು ಮಾರ್ಸ್ ಗೆ ಹೋಗಬೇಕು. ಅದು ಕಂದು  ಬಣ್ಣ ಇರುತ್ತೆ,. ಮೇಲ್ಮೈ ಎಲ್ಲಾ ಒರಟು, ಸಪಾಟಾಗಿ ನೈಸಾಗಿ ಇರಲ್ಲ ; ಆದರೆ ಮಾತ್ರ ಒಳಗೆ ಮೆದು” ವಿಜಯ ಹೇಳಿದ

ಜಗ್ಗು ಅನುಮೋದಿಸುತ್ತಾ,, ಹೌದಪ್ಪಾ , ಎಲ್ಲ್ಲಾ ಫೋಟೋದಲ್ಲೂ ತೋರ್ಸಲ್ವಾ,. ಗುಡ್ಡಗಳು ಕಣಿವೆಗಳು ಇವೆ. “

“ಇಲ್ಲ,ಅದೆಲ್ಲಾ ತಪ್ಪು. ಮಾರ್ಸ್ ಮೇಲೆ ದೊಡ್ಡ ಗುಡ್ಡಗಳಿಲ್ಲ. ಬರೀ ಮೋಟು ದಿಣ್ಣೆಗಳಷ್ಟೇ. ಕಣಿವೆಗಳಂತು ಇಲ್ಲವೇ ಇಲ್ಲ”. ವಿಜಯ ಒತ್ತಿ ಹೇಳಿದ, ಅವನ ಮೀಸೆಯ ಕೆಳಗಿನ ನಗು ಮಬ್ಬುಗತ್ತಲಲ್ಲಿ ಅವರಿಗೆ ಕಾಣಲಿಲ್ಲ.   

ಸರಿ ಆಮೇಲೆ, ಕಿಟ್ಟು ಬಾಯಿ ಬಿಟ್ಟ.

“ ಸರಿ ನಮಗೆ ಆರ್ಬಿಟ್ ಜಗಿದು ಜಗಿದು ಬೇಜಾರಾಗಿ ಕಡೆಗೆ ಮಾರ್ಸ್ ಕಡೆ ನಡೆದೆವು. ಆರ್ಬಿಟ್ ಅನ್ನು ತೊರೆದು ಮಾರ್ಸ್ ಒಳಗೆ ಇಳಿಸಿದೆವು. ಅಂದ .

ಮಾರ್ಸ್ ಮೇಲಲ್ವಾ ಎಲ್ಲಾರೂ ಇಳಿಯೋದು ? ಒಳಗೆ ಇಳಿಯೋದು ಅಂದ್ರೆ ಏನು? ಕಿಟ್ಟು ಮತ್ತೆ ಕೇಳಿದ

‘ಇಲ್ಲ, ಇಲ್ಲಾ, ಮಾರ್ಸ್ ಇರೋದೇ ಒಳಗೆ ಇಳಿಯಕ್ಕೆ. ಅದು ಬಹಳ ಚೆನ್ನಾಗಿರುತ್ತೆ. ಮರಳು ಮರಳಾಗಿ, ಸ್ವಲ್ಪ ಜಿಗುಟು, ಕಚ್ಚಿಕೊಂಡು ಬಿಡುತ್ತೆ’ ಅಂದ.

‘ಹಾಗೋ., ಅಂದ್ರೆ ನೆಲ ಮೆತ್ತಗಿರುತ್ತೋ? ಕಚ್ಚಿಕೊಂಡು ಬಿಡೋಕೆ ಅಲ್ಲೇನು ನೀರಿರುತ್ತಾ?’ ಓಂಕಾರಿ ಕೇಳಿದ.

‘ಲೋ,.. ಮಂಕು ಮುಂಡೇದೆ,ನೀನು ಭೂಗೋಲದಲ್ಲಿ ಓದಿಲ್ವಾ ,. ಭೂಮಿಗೆ ಬಹಳ ಹೋಲುವ ಗ್ರಹ ಮಂಗಳ- ಅದೇ ನಮ್ಮ ಮಾರ್ಸ್. ನೀರಿರೋದು ಈಗ ಸಾಬೀತಾಯ್ತಲ್ಲ,.’ ಉಗ್ರಿ ಬಾಯಿ ಹಾಕಿದ.

‘ಹೌದು, ಚೆನ್ನಾಗಿ ಜಗಿದಷ್ಟೂ ನೀರು ಜಾಸ್ತೀನೆ , ಬಲವಾಗಿ ತಳ್ಳಿದರೆ ಒಳಗೂ ಹೋಗುತ್ತೆ.’ ಅಂತ ತಡೆಯಲಾಗದೆ ಜೋರಾಗಿ ನಕ್ಕ. ಜಗ್ಗುವಿನ ಅನುಮಾನ ಜಾಸ್ತಿ ಆಯಿತು. ಅಷ್ಟರಲ್ಲಿ ಸುಬ್ಬನ ಆಗಮನ ಆಯ್ತು.

ತಂಗಳನ್ನ ತಿನ್ನುವ ಕಂಗಾಳಿ ಹಂಗಿರುವ ಇವನನ್ನು ಆ  ಮಂಗಳನ ಅಂಗಳಕ್ಕೆ ಯಾವ   ಮಂಗ ನನ್ನ ಮಗ ಕಳಿಸಿರಬಹುದು  ಎಂದುಕೊಳ್ಳುತ್ತಾ ಅವನನ್ನೇ

‘ಏನೋ ಸುಬ್ಬು ಈ ವಿಜಯ ನೀನು ಮತ್ತೆ ಸೊನಾಲಿ ಮಾರ್ಸ್ ಆರ್ಬಿಟಲ್ ಗೆಲ್ಲಾ ಹೋಗಿ ಬಂದ್ರೇನೋ’ ಒಕ್ಕೊರಲಿನಿಂದ ಕೇಳಿದರು.

ಹಿಂದು ಮುಂದು ಗೊತ್ತಿಲ್ಲದ ಸುಬ್ಬು ಹೇಳಿದ ‘ಹೌದು ಆ ಮಾರಯ್ಯನ ಕಾಫೀ ಕ್ಲಬ್ ಇರಲಿಲ್ಲವಾ., ಅಲ್ಲೆಲ್ಲಾ ಕ್ಲಾಸಿಗೆ  ಚಕ್ಕರ್ ಹೊಡೆದು ಸೂರ್ಯನ ಸುತ್ತಾ ತಿರುಗೋ ಗ್ರಹಗಳ ಹಾಗೆ ತಿರುಗೋ ಕಾಲೇಜು ಹುಡುಗೀರು ಹುಡುಗರು ಸುತ್ತಾಕ್ತಾ ಇರಲ್ವಾ, ಅದೇ ಕಾಫೀ ಕ್ಲಬ್ ಮಾರಯ್ಯ ಮೊನ್ನೆ ಮಂಗಳಯಾನ ಯಶಸ್ವೀ ಆಗಿದ್ದಕ್ಕೆ,ಆ  ಖುಷಿಗೆ ತನ್ನ ಅಂಗಡೀನ ಮಾರ್ಸ್ ಆರ್ಬಿಟಲ್ ಅಂತ ಬದಲಾಯಿಸಿಕೊಂಡಿದಾನೆ. ಈ ನನ್ಮಗ ವಿಜಯ ಅವತ್ತು ಆ ಸುಂದ್ರಿ ಸೊನಾಲಿ ಜೊತೆ ‘ಹಾರುತ ದೂರಾ ದೂರಾ’ ಅಂತ ನಡ್ಯೋದ ಬಿಟ್ಟು ತೇಲಾಡ್ ಕೊಂಡು ವಯ್ಯಾರ ಮಾಡ್ ಕೊಂಡು ಹೋಗ್ತಾ ಇದ್ದ. ಅಲ್ಲಿ ನಾನು ಇದ್ರೂ ನನ್ನ ನೋಡದ  ಹಾಗೇ ಕಣ್ಣು ಹೊರಳಿಸಿ , ಮುಖ ತಿರುಗಿಸಿಕೊಂಡು ಹೋಗ್ತಾ ಇದ್ದ. ಸೊನಾಲಿ ಮುಂಚೆ ನನ್ನ ಜೊತೆ ಕೆಲಸ ಮಾಡಿದ್ಳಲ್ಲ ಅವಳೇ ಹಾಯ್ ಅಂದ ಬಿಟ್ಳು.ಈ ಲೋಫರ್ನ ಮುಖ ನೋಡ್ಬೇಕಾಗಿತ್ತು. ಕೇಸರೀಭಾತ್ ನಲ್ಲಿ ಜಿರಳೆ  ಸಿಕ್ಕೋರ್ ಥರ ಮಾಡ್ದ. ಕೊನೆಗೆ ಕಾಟಾಚಾರಕ್ಕೆ ನನ್ನನ್ನೂ  ಕರೆದ. ಇವಂದು ಜಟಕಾ ಗಾಡಿ ಥರ ಇದ್ಯಲ್ಲಾ, ಆ ಕಿತ್ತೋಗಿರೋ ರೋವರ್ ಕಾರು, ಅದರಲ್ಲೇ ಆ ಮಾರಯ್ಯನ ಕಾಫಿ ಕ್ಲಬ್ ಗೆ ಕರ್ಕೊಂಡ್ ಹೋದ. ಈ ನನ್ಮಗನ ಡೌಲು ನೋಡ್ಬೇಕಾಗಿತ್ತು. ಇಂದ್ರನ ಐರಾವತ ಓಡ್ಸೋ ಥರ. ಆ ಮಾರ್ಸ್ ಅರ್ಬಿಟಲ್ ಅಂತ ಹೆಸರು ಬದಲಾಯಿಸಿ ಬೋರ್ಡ್ ಅವತ್ತೇ ಹಾಕಿದ್ದಕ್ಕೆ ಅಲ್ಲಿ ಕಾಫಿ ತಿಂಡಿ ತಗೊಂಡ್ರೆ ಮಾರ್ಸ್ ಚಾಕಲೇಟು ಬಾರು , ಆರ್ಬಿಟ್ ಚ್ಯೂಯಿಂಗ್ ಗಮ್ ಪ್ಫ್ರೀ ಆಗಿ ಕೊಟ್ಟರು . ಈ ಮೀರ್ ಸಾದಿಕ್ ನನ್ಮಗ ಅವಳ ಹತ್ರ ಲಲ್ಲೆ ಹೊಡೆದದ್ದೇನು? ಸೊಟ್ಟ  ಮೂತಿ ಮಾಡ್ಕೊಂಡು ರಜನೀಕಾಂತ್ ಸ್ಟೈಲ್ ನಲ್ಲಿ ಆ ಆರ್ಬಿಟ್ ಜಗಿದಿದ್ದೇನು, ಅವಳು ಆ ಮಾರ್ಸ್ ಚಾಕಲೇಟ್ ಬಾರ್ ನ ಒಂಥರಾ ಮಾದಕವಾಗಿ ಬಾಯಿಗಿಟ್ಟುಕೊಂಡು ಕಚ್ಚಿದರೆ ಈ ನನ್ಮಗ ಕೂತಲ್ಲೇ ನಲೀತಿದ್ದ,. ನನ್ನ ಒಂದೂ ಮಾತಾಡ್ಸಿದ್ರೆ ಕೇಳು!

ಕೊನೆಗೆ ಬೋರಾಗಿ ನಾನು ಲೇಟಾಯ್ತು ಹೊರಡ್ತೀನಿ ಅಂದ್ರೆ ಮೆತ್ತಗೆ ಎದ್ಬಂದು ಪರಸ್ ಮರೆತು ಬಂದೆ ‘ಬಿಲ್ಲು’ ಕೊಡು ಅಂತ ನನಗೇ  ಮೋಸದ್ ಬಾಣ ಹೊಡೀತಾನೆ ಭಡವ. ನಾನೇನಾದ್ರೂ ಅಲ್ಲಿ ಸಿಕ್ಕಿಲ್ಲಾಂ ದಿದ್ರೆ ಎನ್ಮಾಡ್ತಿದ್ದ ಅಂತೀನಿ….” ಅಂತ ವಿಷಯವನ್ನೇ ತನ್ನ ವಿಷದ ರೀತಿಯಲ್ಲಿ ಕಕ್ಕಿದ. ‘ಇಲ್ಲಿ ನಿಮಗೆ ಏನು ಬತ್ತಿ ಇಟ್ಟಿದ್ದಾನೆ ?’ ಅಂತಲೂ ಕೇಳಿದ.

ಇಂಗು ತಿಂಗ ಮಂಗಳಂತಾದ  ಅವರ ಮೂತಿ ನೋಡಿದ ವಿಜಯನಿಗೆ ನಗು ತಡೆಯಲೇ ಆಗಲಿಲ್ಲ. ತಾಳು ನನ್ನ ಮಗನೆ ಇವತ್ತು ನಾವೆಲ್ಲಾ ಸೇರಿ ಒದ್ದು ನಿನ್ನ  ಈ ಮಾರ್ಸ್ ಯಾಕೆ ಆ ಗ್ಯಾಲಾಕ್ಸಿಯಿಂದಲೇ ಗಡಿ ಪಾರು ಮಾಡಿಬಿಡುತ್ತೇವೆ’ ಎಂದು ಎದ್ದ ಅವರಿಂದ ತಪ್ಪಿಸಿಕೊಳ್ಳಲು ಚಂಗನೆ ನೆಗೆದು ವಿಜಯ ಓಡುವಲ್ಲಿ  ಗ್ಯಾಲಾಕ್ಸಿ ನಾಮಧೇಯ ಹೊತ್ತ ಕವಚ ಖಚಿತ ಚಾಕಲೇಟಿನ ದೊಡ್ಡ ಬಿಲ್ಲೆಯೊಂದು ಅವನ ಜೇಬಿನಿಂದ ಎಗರಿ ಅವರ ಮುಂದೆ ಬಿತ್ತು. !!!

_______________________________________________________

ಋಣ: ಫೇಸ್ ಬುಕ್ ನ ಗೋಡೆಗಳ ಮೇಲೆ ಬಂದ ಕೆಲವು ಕಾಮೆಂಟ್ (ಟೀಕೆ-ಟಿಪ್ಪಣಿ) ಗಳಿಂದ  ಸ್ಫೂರ್ತಿ ಪಡೆದು ರಚಿಸಿದ ಲೇಖನ.

ಕೃತಜ್ಞತೆಗಳು : ಶ್ರೀವತ್ಸ ಜೋಶಿ ಮತ್ತು ಅವರ ಗೆಳೆಯರ ಬಳಗ  

ಸುದರ್ಶನ ಗುರುರಾಜರಾವ್ ಅವರ ಬರಹ