ಹಸಿವು (ಕವನ)
ಓ ಮಾತೆ ನೀನೇಕೆ ಬೇಡುತಿಹೆ ಭಿಕ್ಷೆ
ಎಲ್ಲಿ ಹೋಯಿತು ನಿನ್ನ ಮನೆ ಮಂದಿ ರಕ್ಷೆ
ಬಾಡಿ ನಲುಗಿಹುದಲ್ಲ ಈ ನಿನ್ನ ವದನ
ಏನಾಯ್ತು ಆ ನಿನ್ನ ಬಹು ಭವ್ಯ ಸದನ
ಓ ಮಗುವೆ ಮನೆಯಿದ್ದು ಪರದೇಶಿ ನಾನು
ದಿನವು ನಾ ಅರೆ ಹೊಟ್ಟೆ ನೀ ತಿಳಿಯೆಯೇನು?
ನನ್ನ ಕೋರಿಕೆಗಿನಿತು ಕೊಡದೆ ಬೆಲೆಯನ್ನು
ಬೇಯಿಸುತ ಬಡಿಸಿಹರು ಕಲಬೆರಕೆಯನ್ನು
ಹಸಿವೆಯಿಂ ತತ್ತರಿಸಿ ದೇಹ ಸೊರಗಿಹುದು
ಭಿಕ್ಷೆ ಬೇಡಲು ನಡೆಯೆ ಕಾಲು ಸೋತಿಹುದು
ಕಲಬೆರಕೆ-ಅರೆಹೊಟ್ಟೆ ಸೌಖ್ಯವೆನಗಿಲ್ಲ
ನಾ ಪೊರೆದ ಮಕ್ಕಳಿಂ ಏನು ಸುಖವಿಲ್ಲ
ಹೆತ್ತ ಕರುಳಿನ ಹಸಿವ ತೀರಿಸದ ನಾನು
ಎಲ್ಲ ಭೋಗವ ಪಡೆದು ಬದುಕಿದ್ದರೇನು
ನಿನಗೇನು ಬೇಕೆಂದು ಅರುಹು ನೀ ನನಗೆ
ಮೂ ಲೋಕ ನಾ ಸುತ್ತಿ ತರುವೆ ಪದದಡಿಗೆ
ಅಕ್ಷರದ ಕಣಜದಿಂ ಪದಗಳಕ್ಕಿಯನಳೆದು
ಕಲಬೆರಕೆ ಕಲ್ಲುಗಳನದರಿಂದ ಸೆಳೆದು
ವ್ಯಾಕರಣದುದಕದಿಂ ಅಕ್ಕಿಯನು ತೊಳೆದು
ಬೇಯಿಸಲು ಅದು ನನ್ನ ಹಸಿವ ಕಳೆಯುವುದು
ಹೃದಯದಾ ಪಾತ್ರೆಯಲಿ ಅಕ್ಕಿಯನು ಇಟ್ಟು
ನಿನ್ನೆದೆಯ ಕುಲುಮೆಗೆ ಬೆಂಕಿಯನು ಒಟ್ಟು
ನಿನ್ನುಸಿರ ಬಿಸಿಗಾಳಿ ಊದುತಲಿ ನಿರತ
ನೀಡುವೆಯ ನೀ ಎನಗೆ ಭಿಕ್ಷೆ ಅನವರತ
ನಿನ್ನ ಮಣ್ಣಿನ ಋಣವು ನನ್ನ ಮೇಲಿರಲು
ನಿನ್ನ ಅನ್ನವನುಂಡು ನಾನು ಬೆಳೆದಿರಲು
ಭಿಕ್ಷೆಯನು ನೀಡೆಂದು ಬೇಡದಿರು ತಾಯೆ
ನನ್ನ ಸೇವೆಯನುಂಡು ಪ್ರೇಮದಲಿ ಪೊರೆಯೆ
ದೀಕ್ಷೆಯಾ ಕುಲುಮೆಗೆ ಸಂಕಲ್ಪದಿಟ್ಟಿಗೆ
ಉರಿವ ಬೆಂಕಿಗೆ ನನ್ನ ಕೈಗಳೇ ಕಟ್ಟಿಗೆ
ಬೇಯಿಸುವೆ ಅನ್ನವನು ನಾನಿನ್ನ ಹೊಟ್ಟೆಗೆ
ಅನುದಿನವು ಇರು ತಾಯೆ ನೀ ನನ್ನ ಒಟ್ಟಿಗೆ
ಕನ್ನಡದ ಕ್ಷೀರಾನ್ನ ಬಡಿಸಿದರೆ ದಿನವೂ
ಹಿಗ್ಗಿ ಕುಣಿಯುವುದಮ್ಮ ಈ ನನ್ನ ಮನವು
ಅರಳಲಿ ಮತ್ತೊಮ್ಮೆ ನಿನ್ನ ಚೆಲು ಮೊಗವು
ತುಂಬಿರಲಿ ಮನೆಯೆಲ್ಲ ನಿನ್ನ ಕಿರು ನಗುವು
ನಾ ನಿನ್ನ ಮಗನಾಗಿ ಬದುಕಿರುವವರೆಗೂ
ಪರದೇಶಿ ನೀನಲ್ಲ ಬಿಡು ನಿನ್ನ ಕೊರಗು
ದುಡಿದು ನಾ ಮರಳಿಸುವೆ ನಿನಗೆ ವೈಭವವ
ಭುವನೇಶ್ವರಿ ನೀ ಆಳು ಮತ್ತೆ ಈ ಜಗವ.
ಡಾ. ಸುದರ್ಶನ ಗುರುರಾಜರಾವ್