ತೀರ್ಪು ( ನೀಳ್ಗತೆ)

ತೀರ್ಪು ( ನೀಳ್ಗತೆ)

 

ಫೊನ್ ಕರೆ ೧: *******೭೮೬೭: ನೀವು ಕರೆ ಮಾಡಿದ ಸಂಖ್ಯೆ ಚಾಲನೆಯಲ್ಲಿಲ್ಲ-”…..”
ಫೋನ್ ಕರೆ ೨:*******೬೫೪೭: ನೀವು ಕರೆ ಮಾಡಿದ ಚಂದಾದಾರರು ಯಾವುದೇ ಕರೆಗಳನ್ನು ಸ್ವೀಕರಿಸುತ್ತಿಲ್ಲ– .”……..ಥತ್”
ಫ಼ೋನ್ ಕರೆ ೩: *******೩೪೫೨:ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗಡೆ ಇದ್ದಾರೆ–.”…..ಥತ್ತೇರಿ, ದರಿದ್ರ”
ಫೋನ್ ಕರೆ ೪: ******೫೪೭೮: ಚಂದಾದಾರರು ಬೇರೊಂದು ಸಂಭಾಷಣೆಯಲ್ಲಿ ನಿರತಾರಗಿದ್ದಾರೆ. ದಯವಿಟ್ಟು- “ಥತ್, ಇವನಜ್ಜಿ”
ಫೋನ್ ಕರೆ ೫:*********೮೭೩೪: ಟ್ರಿಣ್..ಟ್ರಿಣ್… ಸಂಬಂಧ ಕಡಿಯಿತು— ”ಇವನ್ಮನೆ ಕಾಯ್ವಾಗ”
ಫೋನ್ ಕರೆ ೬:*******೭೭೮೮ : ಟ್ರಿಣ್–ಟ್ರಿಣ್.. ಹಲೋ .. ಅಬ್ಬ.. ಸಧ್ಯ.. ಈಗಾದರೂ ಸಿಕ್ಕಿತಲ್ಲ. ಸಮಾಧಾನದ ನಿಟ್ಟುಸಿರು ಬಿಟ್ಟು ಯೋಗೀಶ ಆ ಕಡೆಯಿಂದ ಬರುವ ಪ್ರತಿಕ್ರಿಯೆಗಾಗಿ ಕಾದ.
” ಹಲೋ, ಮಾದಕ ಆದರೆ ಇಂಪಾದ ಕಂಠವೊಂದು ಆ ಕಡೆಯಿಂದ ಉಲಿಯಿತು.
ಹಲೋ.. ನಾನು ಯೋಗೀಶ ಅಂತ… ಅ…
ಹೇಳಿ
ನಿಮ್ಮ ಹೆಸರು ಸುಶೀಲಾ ರಾಣಿ ತಾನೆ? ..ಅ…
ಹೌದು ಹೇಳಿ
ಈ ದಿನ ರಾತ್ರಿ ನೀವು ಫ್ರೀಯಾಗಿದ್ದೀರ?…ಅ…
ಹೌದು ಎಂದರೆ ಹೌದು, ಇಲ್ಲ ಎಂದರೆ ಇಲ್ಲ
ಹಾಗೆಂದರೆ? ….
ನೋಡೀ ಸಾರ್, ನೀವ್ಯಾರೋ ನನಗ್ಗೊತ್ತಿಲ್ಲ. ನನ್ನ ಕೆಲಸ ನಿಮಗೆ ಗೊತ್ತು. ನಿಮ್ಮ ಚೌಕಾಸಿಯ ಮೇಲೆ ನನ್ನ ನಿರ್ಧಾರ
ನೋಡಿ, ನನಗೆ ಈ ರಾತ್ರಿ ನಿಮ್ಮ ಸಂಗ ಬೇಕೇ ಬೇಕು. ನಿಮ್ಮ ಚಾರ್ಜ್ ಎಷ್ಟು ತಿಳಿಸಿ.
ಸಾವಿರ ರೂಪಾಯಿ, ಆಗಬಹುದೇ. ನಾನು ಯಾವಾಗ ಬೇಕಾದರೂ ಹೊರಟು ಹೋಗುವುದಕ್ಕೆ ನೀವು ಒಪ್ಪಿಕೊಳ್ಳಬೇಕು.
ಸಾವಿರ ರೂಪಾಯಿ ಸರಿ. ಆದರೆ ಇನ್ನೊಂದು ಶರತ್ತು ಯಾಕೆ?
ನನಗೆ ಬೇಕೆನಿಸಿದರೆ ಇರಬಲ್ಲೆ. ಇಲ್ಲವಾದರೆ ನಿಮ್ಮ ಕೆಲಸದ ನಂತರ ಹೊರಟು ಹೋಗುವ ಸ್ವಾತಂತ್ರ್ಯ ನನಗೆ ಬೇಕು.
ಹಾಗಾದರೆ ಸರಿ
ಮುಂಗಡ ಮುನ್ನೂರೈವತ್ತು ಕೊಡಬೇಕು
ಈಗಲೇ?!! ಏಕೆ
ನೋಡಿ ನಿಮ್ಮನ್ನು ನಂಬಿ ನನ್ನ ಈಗಿರುವ ಅನ್ನಕ್ಕೆ ಕಲ್ಲು ಹಾಕಿಕೊಳ್ಳಲಾರೆ. ನಿಮ್ಮ ಬಳಿಇರುವ ಕಂಪ್ಯೂಟರ್ನಿಂದ ದುಡ್ಡು ವರ್ಗಾಯಿಸಿ ತಿಳಿಸಿ ನಂತರ ಉಳಿದ ವಿಷಯ.
ನನ್ನ ಬಳಿ ಏನಿದೆ, ಏನಿಲ್ಲವೆಂದು ನಿಮಗೆ ಹೇಗೆ ತಿಳಿಯಿತು
ಸ್ವಾಮಿ, ನಾನು ನನ್ನ ಕಸುಬಿನಲ್ಲಿ ಪಳಗಿದವಳು. ಅದಿರಲಿ ಮೊದಲು ನನಗೆ ಹಣ ವರ್ಗಾವಣೆ ಮಾಡಿ.
ನಿಮ್ಮನ್ನು ನಾನು ಹೇಗೆ ನಂಬಲಿ
ಫೋನು ಮಾಡಿದ್ದು ನೀವು. ನನ್ನ ಅವಶ್ಯಕತೆ ಇರುವುದು ನಿಮಗೆ.ಬೇಕಾದರೆ ಮಾಡಿ. ನನಗೀಗಾಗಲೇ ಒಂದು ಬುಕಿಂಗ್ ಇದೆ.
ನೀವು….. ಹೇಗಿದ್ದೀರೋ….???
ಹಾಗೋ.., ನಿಮ್ಮ ನಂಬರಿಗೆ ನನ್ನ ಫೋಟೊ ಕಳಿಸುವೆ. ನೋಡಿ, ನಂತರ ವರ್ಗಾಯಿಸಿ.. ನಿಮಗೆ ಬೇಕಾದರೆ
ಸರಿ..

ಆಧುನಿಕ ವಿದ್ಯುನ್ಮಾನ ಯುಗದ ಅನುಕೂಲತೆಗಳ ಪ್ರಮುಖ ಪ್ರತಿನಿಧಿಯಾದ ಈ ಮೊಬೈಲ್ ಫೋನ್ ಎಂಬ ಮಾಯಿಲ್ ಮರಾಠಿ ಮಂತ್ರವಾದಿಯ ಮಾಯಾಗನ್ನಡಿಯಲ್ಲಿ ಆ ಸಿಹಿಕಂಠದ ಒಡತಿಯ ಭಾವಚಿತ್ರವೊಂದು ಠಣ್ಣನೆ ಪ್ರತ್ಯಕ್ಷವಾಯ್ತು. ಪರವಾಗಿಲ್ಲ ಎಂದುಕೊಂಡ ಯೋಗೀಶ ಬೇಗನೆ ಹಣ ಸಂದಾಯ ಮಾಡಿ ಅವಳಿಗೆ ಕರೆ ಮಾಡಿ ತಿಳಿಸಿ, ಭೇಟಿಯಾಗುವ ಜಾಗವೆಲ್ಲಿಯೆಂದು ಖಾತ್ರಿ ಪಡಿಸಿಕೊಂಡು ತನ್ನ ಕಾರನ್ನೇರಿ ರೊಂಯ್ಯನೆ ಹೊರಟ.
ಸರಿಯಾಗಿ ಏಳು ಮುಕ್ಖಾಲು ಗಂಟೆಗೆ ಹೇಳಿದ ಜಾಗಕ್ಕೆ ಅವನು ಬರುವ ಮೊದಲೇ ಆಕೆ ಬಂದು ನಿಂತಿದ್ದಳು. ಯಾವುದೋ ಸಂಚಿಕೆಯನ್ನು ಮುಖದ ಮುಂದೆ ಹಿಡಿದಿದ್ದಳಾಗಿ ಅದು ಮರೆಯಾಗಿದ್ದರೂ, ಉಟ್ಟ ಬಟ್ಟೆಯ ಮೇಲೆ ಗುರುತು ಹಿಡಿದ ಯೋಗೀಶ ಕಾರು ನಿಲ್ಲಿಸಿ ಅವಳೆಡೆಗೆ ನಡೆದು ಬಂದ.
ಹಲೋ.. ನಾನು ಯೋಗೀಶ .. ಪರಿಚಯಿಸಿಕೊಂಡ
ಹಲೋ ,, ಮುಖದ ಮುಂದಿನ ಪುಸ್ತಕ ತೆಗೆದು ಆಕೆಯೂ ಪ್ರತಿಕ್ರಿಸಿದಳು
ತಾನು ಫೋಟೋದಲ್ಲಿ ಕಂಡ ಮುಖಕ್ಕೂ , ಇಲ್ಲಿದ್ದುದಕ್ಕೂ ವ್ಯತ್ಯಾಸವಿತ್ತು. ಕಣ್ಣು , ಮೂಗು, ಬಾಯಿ, ಹಣೆ, ಎಲ್ಲ ಅದೇ ರೀತಿ ಇದ್ದರೂ, ಅದಷ್ಟೂ ಒಟ್ಟಿಗೆ ಸೇರಿಸಿನೋಡಿದಾಗ ಅಲ್ಲಿಯಷ್ಟು ಸುಂದರವಾಗಿರಲಿಲ್ಲ. ಕಲ್ಪನಾಕಾವ್ಯವನ್ನು ಕಟ್ಟುತ್ತ ಬಂದಿದ್ದ ಯೋಗೀಶನ ಉತ್ಸಾಹ ಜರ್ರನೆ ಇಳಿಯಿತು.
ನೀವು ನಾನು ಮಾತನಾಡಿದ್ದ ಸುಶೀಲಾರಾಣಿ ಅಲ್ಲ. ನನಗೆ ನೀವು ಮೋಸ ಮಾಡಿದ್ದೀರಾ.. ಎಂದ
ಆಕೆ ಸರಕ್ಕನೆ ತಿರುಗಿ.. ನೋಡೀ ಸಾರ್, ನಾನೇ ಸುಶೀಲಾರಾಣಿ.ಧ್ವನಿ, ಹಾವ ಭಾವ ಗೊತ್ತಾಗಲಿಲ್ಲವೇ. ಸುಮ್ಮನೆ ಗಲಾಟೆ ಮಾಡಬೇಡಿ. ನಡೆಯಿರಿ, ನನಗೂ ಬೇರೆ ಕೆಲಸ ಇವೆ. ಜೋರು ಮಾಡಿದಳು
ಇಲ್ಲಿ ನೋಡ್ರೀ, ನೀವೇ ಕಳಿಸಿದ ಫೋಟೊ.ಇಲ್ಲಿಯಷ್ಟು ಸುಂದರವಾಗಿಲ್ಲ.ಆದ್ದರಿಂದ ನೀವು ನನಗೆ ಬೇಡ; ನನ್ನ ಹಣ ನನಗೆ ವಾಪಸ್ ಕೊಡಿ. ಗಲಾಟೆ ಮಾಡಿದ
ಸ್ವಾಮೀ.. , ನಿಮ್ಮಂಥವರನ್ನು ನಾವು ದಿನಾ ನೋಡುತ್ತಲೇ ಇರುತ್ತೇವೆ. ಬಹಳ ಜನ ಕೆಲಸ ಮುಗಿದ ಮೇಲೆ ತಕರಾರು ತೆಗೆಯುತ್ತಾರೆ, ನೀವು ನೋಡಿದರೆ ಮುಂಚೆಯೇ ಮಾಡುತ್ತಿದ್ದೀರ. ಉಳಿದ ಹಣ ಕೊಡಬೇಡಿ. ನೀವು ಬೇಕೆನಿಸಿದರೆ ಬರಬಹುದು. ಇಲ್ಲವಾದರೆ ನಿಮ್ಮ ದಾರಿ ನಿಮಗೆ,ನನ್ನ ದಾರಿ ನನಗೆ. ಸೇರಿಗೆ ಸವ್ವಾ ಸೇರು ಮಾತು ಹುರಿದಳು.
ಇದೇನ್ರೀ, ಧರ್ಮಕ್ಕೆ ಕೊಟ್ಟಹಾಗೆ ಮಾತಾಡ್ತೀರಲ್ಲ. ನಿಮ್ಮನ್ನು ಮುಟ್ಟಿಕೂಡಾ ಇಲ್ಲ.ಮುಂಗಡ ಹಣ ಕೊಡ್ರೀ.ಇಲ್ಲವಾದರೆ ಪೋಲಿಸ್ ಕಂಪ್ಲೇಂಟ್ ಕೊಡ್ತೇನೆ
ಪೋಲೀಸರು ನಾವು ಕಂಡಿರದ ಮೇಯಿಸದ ಪೋಲೀ ದನಗಳೇನಲ್ಲ. ಹೇಳ್ಕೋ ಹೋಗ್ರೀ…
ಕೋರ್ಟಿಗೆ ಹೋಗ್ತೇನೆ
ಅವರಪ್ಪನ ಮನೆಗೂ ಹೋಗ್ರೀ ಬೇಕಾದ್ರೆ. ಸರ ಸರನೆ ಹೊರಟುಬಿಟ್ಟಳು.
ಬೇಡ ನೋಡ್ರೀ,ನನ್ನ ಹಣ ಕೊಡ್ರೀ,ನಾನು ಖಡಕ್ಕಾದ ಮನುಷ್ಯ… ನ್ಯಾಯ ನ್ಯಾಯವೇ…. ಬನ್ರೀ ,,.ರೀ……
ಅವಳು ಹೊರಟೇ ಹೋದಳು
ನಖ ಶಿಖಾಂತ ಕುದಿಯುತ್ತ ಯೋಗೀಶ ತನ್ನ ಫ್ಲ್ಯಾಟಿಗೆ ಮರಳಿದ.
******* *********
ನಗರದ ಪ್ರತಿಷ್ಟಿತ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯೋಗೀಶ ಸ್ವಭಾವತಃ ಒಳ್ಳೆಯ ಯುವಕನೇ. ಸಾಹಿತ್ಯ ಸಂಗೀತ ಕಲೆ ಧರ್ಮಗಳಲ್ಲಿ ಬಹಳೆ ಆಸಕ್ತಿಯುಳ್ಳವನಾಗಿದ್ದ್ದು ಸಂಸ್ಕೃತದಲ್ಲೂ ಸಾಕಷ್ಟು ಪಾಂಡಿತ್ಯ ಪಡೆದಿದ್ದ. ತಂದೆ ತಾಯಿ ಇಲ್ಲದೆ ಅಜ್ಜಿಯ ಅಶ್ರಯದಲ್ಲಿ ಬೆಳೆದಿದ್ದ ಅವನು ಓದಿಗೆಂದು ಮಠದವರು ನಡೆಸುವ ಶಾಲೆ ಸೇರಿ ಅಲ್ಲಿಯೇ ತನ್ನ ಸ್ವಪ್ರಯತ್ನದಿಂದ ಓದಿ ಮುಂದೆ ಬಂದಿದ್ದ. ಧಾರ್ಮಿಕ ಪರಿಸರದಲ್ಲಿ ಬೆಳೆದ ಅವನಿಗೆ ಸಂಸ್ಕೃತ ಕಥೆ ಕಾವ್ಯಗಳನ್ನು ಓದುವ ಗೀಳು ಇತ್ತು.ನ್ಯಾಯ-ನಿಷ್ಠೆಯಲ್ಲಿ ಅಚಲವಾದ ನಿಲುವು. ಕೆಲವು ಸಲ ಸಣ್ಣ ಸಣ್ಣ ವಿಷಯಗಳಲ್ಲೂ ನ್ಯಾಯಾನ್ಯಾಯದ ವಿಶ್ಲೇಷಣೆ ಮಾಡುತ್ತಾ ವಾದಿಸುವುದು, ಯಾರಿಗೇ,ಯಾವುದೇ ಸಂದರ್ಭದಲ್ಲಿ ಅನ್ಯಾಯ ಆಗಿದೆಯೆಂದು ತನಗನಿಸಿದರೆ ಆ ವಿಚಾರ ತನಗೆ ನೇರ ಸಂಬಂಧಿಸಿಲ್ಲದಿದ್ದರೂ ಅಲ್ಲಿ ಜಗಳ ಆಡುವುದು ಮಾಡುತ್ತಿದ್ದ ಹಾಗೂ ತೊಂದರೆಗೂ ಸಿಕ್ಕಿಹಾಕಿಕೋಳ್ಳುತ್ತಿದ್ದ. ಮದುವೆ ಇನ್ನೂ ಆಗಿರಲಿಲ್ಲ. ಅವನದೆನ್ನುವವರು ಈಗ ಯಾರೂ ಇರಲೂ ಇಲ್ಲ. ಹಾಗೆಂದು ಈ ಕಾಲದ ಫ್ಯಾಷನ್ ಆದ ಲಿವಿಂಗ್ ಇನ್ ಸಂಬಂಧ ಮುಂತಾದುವುಗಳಿಗೂ ಪಕ್ಕಾಗಿರಲಿಲ್ಲ. ಹೆಚ್ಚು ಜನ ಗೆಳಯರು ಇರದ ಕಾರಣ ತನ್ನ ಕೆಲಸ ಮುಗಿದರೆ ಸ್ವಲ್ಪ ಅಡ್ಡಾಡುವುದು, ಅಡಿಗೆ, ಓದು, ಅವನ ದಿನಚರಿಗಳಾಗಿದ್ದವು. ಹೀಗಿರುವಲ್ಲಿ ಒಮ್ಮೆ ಕಾಳಿದಾಸನ ಕುಮಾರಸಂಭವ ಓದಲು ಮೊದಲು ಮಾಡಿದ. ಶುಕ್ರವಾರ ರಾತ್ರಿಯಿಂದ ಸತತ ಓದುತ್ತಿದ್ದವನು ಅದರಲ್ಲಿ ಬರುವ ಶಿವ ಪಾರ್ವತಿಯರ ಪ್ರಣಯವಿಲಾಸದ ವರ್ಣನೆ ಓದುತ್ತಿದ್ದ. ಆ ವಿಲಾಸದ ಸೂಕ್ಷಾತಿಸೂಕ್ಷ್ಮ ಬಣ್ಣನೆ ಓದುತ್ತ-ಓದುತ್ತ ಕಲ್ಪನಾಲೋಕಕ್ಕೆ ಜಾರಿದ ಅವನಿಗೆ ತಕ್ಷಣ ಹೆಣ್ಣಿನ ಸಂಗ ಬೇಕೆಂಬ ಅದಮ್ಯ ಬಯಕೆ ಉಂಟಾಯಿತು. ಮನಸ್ಸಿನಿಂದ ದೂರ ತಳ್ಳಲು ಪ್ರಯತ್ನಿಸಿದಷ್ಟೂ ಮತ್ತೆ ಮತ್ತೆ ನುಗ್ಗಿ ಬರುತ್ತಿತ್ತು. ಹೀಗಾಗಿ ಪ್ರಕೃತಿದತ್ತ ವಾಂಛೆ ಅವನನ್ನು ವೇಶ್ಯೆಯ ಸಂಪರ್ಕಕ್ಕೆ ಬರಲು ಪ್ರೇರೇಪಿಸಿತ್ತು.
ತರಾತುರಿಯಿಂದ ಬಟ್ಟೆ ಹಾಕಿಕೊಂಡು, ಸುಗಂಧ ಪೂಸಿಕೊಂಡು ಕಾರು ತೆಗೆದುಕೊಂಡು ಹೊರತಿದ್ದ. ಅಲ್ಲಿ ಹೋಗಿ ಅವಳನ್ನು ಕಂಡು ಭ್ರಮನಿರಸನಗೊಂಡು ಕುದಿಯುತ್ತಾ ಹಿಂದಿರುಗಿದ್ದ.
***** ******
ಹೆಲ್ಲೊ… ಇದು ಪೋಲೀಸ್ ಸ್ಟೇಷನ್ನಾ…?
ಹೌದು.. ಹೇಳಿ ಏನಾಗ್ಬೇಕು? ಮಹಿಳಾ ಪೇದೆ ಅಲಮೇಲು ಮಾತನಾಡಿದಳು
ಕಂಪ್ಲೇಂಟ್ ಕೊಡಬೇಕು
ಏನು ವಿಚಾರ
ಯೋಗೀಶ ತನ್ನ ಅಹವಾಲು ಹೇಳಿದ; ಅಲಮೇಲು ತಬ್ಬಿಬ್ಬಾದಳು. ಆದರೂ ಸುಧಾರಿಸಿಕೊಂಡು ಸ್ವಲ್ಪ ಜೋರು ದನಿ ಮಾಡಿ ” ಇದೂ ಒಂದು ಕಂಪ್ಲೇಂಟ್ ಕೊಡೋ ವಿಚಾರ ಏನ್ರೀ… ವೇಶ್ಯಾವಾಟಿಕೆಗೆ ಕೈ ಹಾಕಿದ್ದಲ್ಲದೆ ಅವಳ ಮೇಲೆ ದೂರು ಕೊಡುತ್ತೀರಲ್ಲ?! ನಿಮ್ಮನ್ನೇ ಅರೆಸ್ಟ್ ಮಾಡಬಹುದು
ನೋಡಿ ಮೇಡಂ, ಇವಳು ಅಧಿಕೃತವಾಗಿ ನೋಂದಾಯಿಸಿಕೊಂಡಿರುವ ಕಸುಬಿನವಳು. ಇದರಲ್ಲಿ ಕಾನೂನಿನ ಮಿತಿ ನಾನು ಮೀರಿಲ್ಲ.ಅಷ್ಟಕ್ಕೂ ನನ್ನನ್ನು ಅರೆಸ್ಟ್ ಮಾಡಬೇಕೆಂದರೆ ಮಾಡಿ. ಆದರೆ ಇದು ನ್ಯಾಯ ಅನ್ಯಾಯದ ವಿಷಯ. ನನಗೆ ಅನ್ಯಾಯ ಆಗಿರುವುದರಿಂದ ಈ ಕಂಪ್ಲೇಂಟ್. ಅದಕ್ಕೇ ದೂರು ದಾಖ್ಲು ಮಾಡಬೇಕಾಗಿದೆ.ನನ್ನ ಹಣ ನನಗೆ ವಾಪಸ್ ಬೇಕು.
ಇವನು ಯಾರೋ ಬಡಪೆಟ್ಟಿಗೆ ಬಗ್ಗುವ ಅಸಾಮಿಯಲ್ಲ ಎಂದೆಣಿಸಿದ ಅವಳು ” ರೀ ಬರೀ ಮುನ್ನೂರು ರುಪಾಯಿಗೆ ರಾದ್ಧಾಂತ ಮಾಡ್ತೀರೇನ್ರೀ,, ಹೆಣ್ಣೆಂಗುಸು ಹೋಗ್ಲೀ ಬಿಡ್ರೀ.ಈ ಕೆಲಸಕ್ಕೆ ಬಾರದ ಕಂಪ್ಲೇಂಟ್ನಿಂದ ಎಲ್ಲರ ಸಮಯ ಹಾಳು.ಊಟ ಮಾಡಿ ಮಲಿಕ್ಕಳ್ರೀ”
”ಮುನ್ನೂರಲ್ಲ ಮೇಡಂ. ಮುನ್ನೂರೈವತ್ತು!. ಅವಳು ಮೋಸ ಮಾಡಿಲ್ದಿದ್ರೆ ಹಣಕ್ಕೆ ಕೇರ್ ಮಾಡ್ತಿರ್ಲಿಲ್ಲ. ಇದು ಮೋಸದ ವ್ಯವಹಾರ.ನನ್ನ ಹಾಗೆ ಇನ್ನೂ ಬೇರೆಯವ್ರು ಮೋಸ ಹೋಗಬಹುದು. ಅದಕ್ಕೇ ಕಂಪ್ಲೇಂಟ್ ಮಾಡ್ತಿರೋದು.
ಇವನೆಲ್ಲಿ ಗಂಟು ಬಿದ್ದ್ನಪ್ಪಾ ಮಹಾಶಯ.ಶನಿವಾರ ರಾತ್ರಿ ಸ್ವಲ್ಪ ಆರಾಮಾಗಿರೋಣ ಅಂದ್ರೆ … ಎಂದು ಗೊಣಗಿಕೊಳ್ಳುತ್ತಾ,, ತಾನಾದರೂ ಯಾಕಾಗಿ ಈ ಫೋನ್ ಎತ್ತಿಕೊಂಡೆನೋ ಎಂದು ಸಿಟ್ಟು ಬರದಿರಲಿಲ್ಲ ಅವಳಿಗೆ. ತನ್ನ ಎದುರಲ್ಲೇ ಬೀಡಿ ಸೇದುತ್ತ ಕುಳಿತಿದ್ದ ಕಾಳಯ್ಯನ ಮೇಲೆ ಅಸಾಧ್ಯ ಸಿಟ್ಟು ಬಂತು ಅವಳಿಗೆ.ಭಡವ ತಾನು ಫೋನೆತ್ತದೇ ಈಗ ವ್ಯಂಗ್ಯ ನಗು ನಗುತ್ತಿದ್ದಾನೆ.ಅದಕ್ಕೂ ಹೆಚ್ಚಾಗಿ ಈ ರೀತಿಯ ದೂರು ಅವಳಿಗೂ ಹೊಸದು. ಇನ್ಸ್ ಪೆಕ್ಟರ್ ಗೆ ಫೋನ್ ಮಾಡಿ ಕೇಳೋಣವೆಂದರೆ ಮುಜುಗರ. ಈ ದೂರು ದಾಖಲಿಸಿದರೂ, ದಾಖಲಿಸದಿದ್ದರೂ ತನಗೆ ಮಂಗಳಾರತಿ ಗ್ಯಾರಂಟಿ ಎಂದು ಅವಳಿಗೆ ಅನಿಸದಿರಲಿಲ್ಲ. ತನಗಿಂತ ಕೇವಲ ಎರಡು ವರ್ಷ ಸೀನಿಯರ್ ಆಗಿದ್ದರೂ ದೊಣ್ಣೆನಾಯಕನಂತೆ ಆಡುವ ಕಾಳಯ್ಯನ ಮೇಲೆ ಅವಳ ಎಲ್ಲಾ ಕೋಪ ತಿರುಗತೊಡಗಿತು. ಸರಿ, ಏನಾದರಾಗಲಿ. ದೂರು ದಾಖಲಿಸಿ ನೋಡುವ, ನಾಳೆ ಕಳೆಯುವುದರಲ್ಲಿ ಅವನು ತಣ್ಣಗಾಗಿ ಈ ವಿಷಯ ಮರೆತುಬಿಡಬಹುದೆಂದು ಅವನ ವಿವರಗಳನ್ನು ಬರೆದುಕೊಳ್ಳಲು ಪುಸ್ತಕ ತರಲೆಂದು ಧುಮು-ಧುಮು ಗುಡುತ್ತಾ, ಕಾಳಯ್ಯ್ಯನನ್ನು ಕೆಕ್ಕರಿಸಿ ನೋಡುತ್ತ ಹೋದವಳು ಕುರ್ಚಿಯಲ್ಲಿ ಕುಕ್ಕರಿಸಿ, ಬರೆದುಕೊಂಡು ಯೋಗೀಶನಿಗೆ ರೆಫ಼ೆರೆನ್ಸ್ ನಂಬರನ್ನು ಕೊಟ್ಟು ಫೋನು ಕುಕ್ಕಿದಳು. ಕಾಳಯ್ಯ ಮೀಸೆಯಡಿಯಲ್ಲಿ ಕುತ್ಸಿತ ನಗೆ ಬೀರುತ್ತಲೇ ಇದ್ದ. ತನ್ನ ಮೀಸೆಯಂಚಿನಲ್ಲಿ.
**** ***
ಮರುದಿನ ಇನ್ಸ್ ಪೆಕ್ಟರ್ ಸಿದ್ಧಯ್ಯ ಕಛೇರಿಗೆ ಬಂದು ಕಣ್ಣಾಡಿಸಿದಾಗ ಈ ದೂರನ್ನು ಕಂಡು ಅವಾಕ್ಕಾದರು. ಈ ಪ್ರಪಂಚ ಹೀಗೂ ಬದಲಾಯ್ತೇ.. ಎಂದು ಅವರಿಗೆ ಸೋಜಿಗವಾಗದೆ ಇರಲಿಲ್ಲ. ಇದು ಮೋಸದ ಕಾಲಮಿನಡಿ ಬರುತ್ತದೆಯೋ ಅಥವಾ ಗ್ರಾಹಕ ರಕ್ಷಣ ಕಾಯಿದೆಯ ಕಾಲಮಿನಡಿ ಬರುತ್ತದೆಯೋ ಎಂಬ ಗೊಂದಲದಲ್ಲಿ ಬಿದ್ದರು. ತಕ್ಷಣ ಗ್ರಾಹಕ ರಕ್ಷಣಾ ನ್ಯಾಯಾಲಯದ ಮುಖ್ಯಸ್ಥ ಚಿದಂಬರ ಮೂರ್ತಿಗೆ ಫೋನಾಯಿಸಿದರು. ಅ ಕಡೆಯಿಂದ ಚಿದಂಬರ ಮೂರ್ತಿ ಆಗ ತಾನೇ ಈ ದೂರು ದಾಖಲು ಮಾಡಿಕೊಂಡು ಎಲ್ಲಿಂದ ಇದರ ವಿಶ್ಲೇಷಣೆ ಶುರು ಮಾಡಬೇಕೆಂದು ಯೋಚಿಸುತ್ತಿದ್ದರು. ಸಿದ್ಧಯ್ಯನ ಫೋನ್ ಬಂದಿದ್ದು ಅವರಿಗೂ ಸಂತೋಷತಂದಿತು. ಬಹಳ ದಿನಗಳಿಂದ ಭೇಟಿಯಾಗದೇ ಇದ್ದುದರಿಂದಲೂ, ಈ ವಿಚಾರ ತಾವು ನಿಭಾಯಿಸುವ ಇತರ ದೂರುಗಳಿಗಿಂತ ಭಿನ್ನವಾಗಿದ್ದುದರಿಂದಲೂ, ಕಾನೂನಿನಲ್ಲಿ ಈ ವಿಚಾರವಾಗಿ ಇರಬಹುದಾದ ಮಾರ್ಗದರ್ಶನ ಅರಿಯುವ ಕುತೂಹಲದಿಂದಲೂ ಭೇಟಿಯಾಗಿ ಮಾತನಾಡಲು ನಿರ್ಧರಿಸಿದರು. ಸಿದ್ಧಯ್ಯ ತಮ್ಮ ಜೀಪಿನಲ್ಲಿಯೇ ಚಿದಂಬರಮೂರ್ತಿಯ ಕಾರ್ಯಾಲಯಕ್ಕೆ ಧಾವಿಸಿದರು.
ಉಭಯ ಕುಶಲೋಪರಿ- ಕಾಫಿಗಳಾದನಂತರ ಅವರ ಸಂಭಾಷಣೆ ಯೋಗೀಶನ ವಿಚಾರದಲ್ಲಿ ಹೊರಳಿತು. ಈ ಬಗ್ಗೆ ಕಾನೂನಿನಲ್ಲಿ ನಿಖರವಾದ ಸೂಚನೆ ಮಾರ್ಗದರ್ಶನಗಳು ಇರಲಿಲ್ಲ. ಟಿ.ವಿ, ಟೇಪ್ ರೆಕಾರ್ಡೆರ್, ಚಪ್ಪಲಿ, ಫೋನು, ಬಟ್ಟೆ, ಹೀಗೆ ಗ್ರಾಹಕರು ಬಳಸುವ ನಿರ್ಜೀವ ವಸ್ತುಗಳ ಗುಣಮಟ್ಟ,ಕಂಪನಿಗಳ ಗ್ರಾಹಕ ಸೇವೆ ಕುರಿತಾದ ಭಿನ್ನಭಿಪ್ರಾಯಗಳು, ದುಃಖ, ದುಮ್ಮಾನಗಳು ದಾಖಲಾಗಿ ವಿಚಾರಣೆಗೊಳಪಡುತ್ತಿದ್ದವೇ ವಿನಃ ಒಂದು ಜೀವಿಯ ಅದರಲ್ಲೂ ಒಬ್ಬ ವೃತ್ತಿಪರ ವೇಶ್ಯೆಯ ಅಂದ-ಚೆಂದಗಳನ್ನು ಕುರಿತಾದ ಹಾಗೂ ವ್ಯಕ್ತಿನಿಷ್ಠ (ಸಬ್ಜೆಕ್ಟಿವ್) ಅಭಿಪ್ರಾಯಗಳಿಂದ ಬಣ್ಣ ಪಡೆದಿರಬಹುದಾದ ದೂರು ಅವರ ಅನುಭವದಲ್ಲಿ ಇದೇ ಮೊದಲು. ಅಂದ ಚಂದಗಳು ನೋಡುಗರ ಮನಸ್ಥಿತಿ, ಅಭಿರುಚಿ ಮೊದಲಾದ ಅಳೆಯಲಾಗದ ಅಂಶಗಳನ್ನು ಒಳಗೊಂಡಿರುವುದರಿಂದ ಈ ವಿಚಾರದಲ್ಲಿ ಹೇಗೆ ಮುಂದುವರಿಯಬೇಕೆಂಬ ಗೊಂದಲ ಅವರಿಬ್ಬರಿಗೂ. ಯೋಗೀಶನನ್ನು ಕರೆಸಿ ಬೆದರಿಸಿ ಬಲವಂತವಾಗಿ ದುರನ್ನು ಬರಾಖಾಸ್ತು ಗೊಳಿಸುವ ಯೋಚನೆ ಅವರಿಗೆ ಬಂತಾದರೂ ಸಿದ್ಧಯ್ಯ ಆ ರೀತಿಯ ಅಪ್ರಮಾಣಿಕ , ಅಸಡ್ದೆಯಯ ವ್ಯಕ್ತಿ ಅಲ್ಲ. ಚಿದಂಬರ ಮೂರ್ತಿ ಕೂಡಾ ಈ ದೂರು ಪಡೆದುಕೊಳ್ಳಬಹುದಾದ ಹೊಸ ರೂಪಾಂತರಗಳನ್ನೂ,ಭವಿಷ್ಯದಲ್ಲಿ ರೂಪಿಸಬಹುದಾದ ಸಮಾಜಿಕ ಅಯಾಮಗಳ ಸಾಧ್ಯತೆಗಳನ್ನೂ ಕುರಿತು ಕುತೂಹಲಗೊಂಡಿದ್ದರು. ತಾವು ಇದನ್ನು ಬಲವಂತವಾಗಿ ಬರ್ಖಾಸ್ತು ಗೊಳಿಸುವ ಪ್ರಯತ್ನ ಮಾಡಿದರೆ ಯೋಗೀಶ ಹುಟ್ಟಿಸಬಹುದಾದ ಅವಾಂತರಗಳ ಸಾಧ್ಯತೆಯನ್ನು ಅವರು ಪರಿಗಣಿಸದೆ ಇರಲಿಲ್ಲ.
ಸಿದ್ಧಯ್ಯ ಚಿದಂಬರ ಮೂರ್ತಿಯನ್ನು ಕುರಿತು ಹೇಳಿದರು ” ಚಿದಂಬರ, ಈ ಕೇಸು ನೀನೇ ನಿಭಾಯಿಸು;ನಿನಗೆ ಬೇಕಾದ ಸಹಕಾರ, ಸಹಾಯ ನಾನು ಕೊಡುತ್ತೇನೆ”
ಚಿದಂಬರ ಮೂರ್ತಿ ತಲೆಯಾಡಿಸಿದರು; ಸಿದ್ಧಯ್ಯ ಅಲ್ಲಿಂದ ಹೊರಬಿದ್ದರು.
****** ******** *********
ಕೋರ್ಟು ಕಾರ್ಯಾಚರಣೆಗೆ ತಯಾರಾಗಿತ್ತು. ಯೋಗೀಶ ಬಂದಿದ್ದ. ಅವನ ಜೊತೆಗೆ ಯಾರಿರಲಿಲ್ಲ- ಅವನ ಮೊಬೈಲ್ ಫೋನ್ ಹೊರತು. ತಾನು ಹಣ ವರ್ಗಾಯಿಸಿದ್ದ ವಿವರಗಳ ಕಾಗದದ ಪ್ರತಿಗಳನ್ನು ತಂದಿದ್ದ.
ಸುಶೀಲಾರಾಣಿ ಕೂಡಾ ಬಂದಿದ್ದಳು.
ಸಿದ್ಧ್ಯಯ್ಯ, ಮಹಿಳಾ ಪೇದೆ ಅಲಮೇಲು ತಮ್ಮ ಕಂಪ್ಲೇಂಟ್ ಪುಸ್ತಕದ ಸಮೇತ ಬಂದಿದ್ದರು.
ಚಿದಂಬರ ಮೂರ್ತಿ ಬಂದು ತಮ್ಮ ಪೀಠದಲ್ಲಿ ಆಸೀನರಾದರು. ಎಲ್ಲರೂ ಎದ್ದುನಿಂತು ಗೌರವ ಸಲ್ಲಿಸಿ ಕುಳಿತುಕೊಂಡರು.
ಯೋಗೀಶ ತನ್ನ ಪ್ರವರವನ್ನು ಹೇಳಿಕೊಂಡು ಈ ಪ್ರಹಸನದ ವಿವರಗಳನ್ನು ಕೊಟ್ಟು ತನಗಾದ ಅನ್ಯಾಯವನ್ನು ಸರಿಪಡಿಸುವಂತೆ ವಿನಂತಿಸಿಕೊಂಡ. ಭಾವಚಿತ್ರದಲ್ಲಿ ಕಂಡ ಸುಶೀಲಾರಾಣಿ ಜೀವಚಿತ್ರದಲ್ಲಿ ಬೇರೆಯೇ ಆಗಿರುವ ಕಾರಣ ತನಗೆ ಬರೀ ಹಣದ ಮೋಸವಷ್ಟೇ ಅಲ್ಲ, ಭಾವ ಪ್ರಾಪ್ತಿ, ಆ ಉತ್ಕಟ ಮನೋಸ್ಥಿತಿ, ಭ್ರಮನಿರಸನ ಎಲ್ಲ ನಷ್ಟವೇ ಆಗಿರುವುದರಿಂದ ಒಟ್ಟು ಅನ್ಯಾಯದ ಪರಿಮಾಣ ಹೆಚ್ಚ್ಹೇ ಆದರೂ ತಾನು ಮಾನವೀಯ ದೃಷ್ಟಿಯಿಂದ ಬರೀ ತನ್ನ ಹಣದ ಮೊತ್ತವನ್ನು ಮಾತ್ರವಷ್ಟೇ ವಾಪಸ್ ಕೇಳುತ್ತಿದ್ದೇನೆಂದೂ ವಿವರಿಸಿದ. ಅವನ ವಿಚಾರ ಸರಣಿಗೆ, ವಾಗ್ವೈಖರಿಗೆ ನ್ಯಾಯಾಧೀಶರು ತಲೆದೂಗಿದರು. ಅವನ ವಿದ್ವತ್ತು, ಭಾಷೆಯ ಮೇಲಿನ ಹಿಡಿತ, ತಾನಾಡುತ್ತಿರುವ ಮಾತಿನಮೇಲಿನ ನಂಬಿಕೆ ವಿಶ್ವ್ವಸಗಳು ಅವನ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು.
ಸುಶೀಲಾರಾಣಿಯನ್ನು ಕಟಕಟೆಗೆ ಕರೆಯಲಾಯ್ತು.ಬಂದು ನಿಂತುಕೊಂಡಳು. ಅವಳನ್ನು ಅಪಾದಮಸ್ತಕ ದಿಟ್ಟಿಸಿದ ಚಿದಂಬರ ಮೂರ್ತಿಗಳಿಗೆ ಯೋಗೀಶ ಹೇಳಿದ್ದರಲ್ಲಿ ಯಾವ ಉತ್ಪ್ರೇಕ್ಷೆಯೂ ಕಾಣಲಿಲ್ಲ. ಬಹಳ ಸಾಧಾರಣ ರೂಪ ಆದರೆ ಒಳ್ಳೆಯ ಮೈಕಟ್ಟು. ವೇಶ್ಯೆಯರಿಗಿರಬಹುದಾದ ಚೆಲ್ಲು ಚೆಲ್ಲು ಹಾವ ಭಾವ ಅವಳಲ್ಲಿರಲಿಲ್ಲ.ಒಂದು ಬಗೆಯ ಗಾಂಭೀರ್ಯ ಅವಳ ವ್ಯಕ್ತಿತ್ವದಲ್ಲಿ ಕಂಡು ಬರುತ್ತಿತ್ತು. ನಿನ್ನ ಅಹವಾಲು ಏನು ಎಂಬುದಾಗಿ ಅವಳನ್ನು ಪ್ರಶ್ನಿಸಿದರು.
ಗಂಟಲು ಸರಿಪಡಿಸಿಕೊಂಡ ಸುಶೀಲಾರಾಣಿ ಹೇಳಿದಳು. ನೋಡಿ ಸ್ವಾಮಿ,ಈ ವ್ಯಕ್ತಿ ನನಗೆ ಕರೆ ಮಾಡಿದಾಗ ನಾನು ಆಗಲೇ ಒಂದು ಒಪ್ಪಂದ ಮಾಡಿಕೊಂಡಿದ್ದೆ. ಇವರು ತಮ್ಮ ಫೋನಿನಲ್ಲಿ ತಮ್ಮ ಕಷ್ಟಗಳನ್ನು ಹೇಳಿಕೊಂಡರು. ತಾವು ಕಾವ್ಯವೊಂದನ್ನು ಓದಿದ್ದಾಗಿಯೂ,ಅದರಿಂದಾಗಿ ಬಹಳ ಉತ್ಕಟವಾದ ವಾಂಛೆಯಲ್ಲಿ ಸಿಲುಕಿರುವುದಾಗಿಯೂ, ಆ ಕ್ಷಣದಲ್ಲಿ ಹೆಣ್ಣಿನ ಸಹವಾಸಕ್ಕೆ ಹಾತೊರೆಯುತ್ತಿರುವುದಾಗಿಯೂ, ಇದೇ ಅವರ ಮೊದಲ ಅನುಭವವಾಗಲಿರುವುದೆಂದೂ ಹೇಳಿ ಪ್ರಲಾಪಿಸಿಕೊಂಡಾಗ ಇವರ ಮೇಲಿನ ಒಂದು ಬಗೆಯ ಕನಿಕರಕ್ಕೆ ಪಕ್ಕಾಗಿ ನಾನು ಆ ಮೊದಲೇ ನಿಗದಿ ಮಾಡಿದ್ದ ಗ್ರಾಹಕರಿಗೆ ಕರೆ ಮಾಡಿ ಬರುವುದಾಗುವುದಿಲ್ಲ ಎಂದು ಹೇಳಿ ಬಿಟ್ಟೆ. ಅವರಿನ್ನೂ ತಮ್ಮ ಮುಂಗಡ ಹಣ ಸಂದಾಯ ಮಾಡಿರಲಿಲ್ಲವಾದ ಕಾರಣ ಆ ರೀತಿ ಹೇಳುವ ನನ್ನ ಹಕ್ಕನ್ನು ನಾನು ಚಲಾಯಿಸಿ ಇವರಿಗೆ ಒಪ್ಪಿಕೊಂಡದ್ದು. ಆತನೇನೂ ನನ್ನ ಭಾವಚಿತ್ರ ಮಣ್ಣು ಮಸಿ ಕೇಳಿರಲಿಲ್ಲ. ಇವರಿಗೆ ಅದನ್ನೂ ಕಳಿಸಿದ್ದೆ. ಎಲ್ಲ ನೋಡಿ,ನಿರ್ಧರಿಸಿ ಬಂದು ಕಡೆಯಲ್ಲಿ ಕ್ಯಾತೆ ತೆಗೆದರೆ ನಮ್ಮ ಹೊಟ್ಟೆಯ ಪಾಡೇನು ಸಾರ್. ಅಷ್ಟಕ್ಕೂ ನನಗೆ ಸಾವಿರ ರೂಪಾಯಿಯ ನಷ್ಟವೇ ಆಗಿದೆ. ಏನೋ ಈತನಲ್ಲಿ ಇರುವ ಮುಗ್ಧತೆಗೆ ನಾನು ರಿಯಾಯಿತಿ ತೋರಿಸಿ ಅವರು ಕೊಟ್ಟ ಮುಂಗಡ ಹಣ ಮಾತ್ರ ಹಿಡಿದುಕೊಂಡಿದ್ದೇನೆ.ನಮ್ಮ ಸಮಯಕ್ಕೂ ಬೆಲೆ ಇಲ್ಲವೇ ?ಬರೀ ದೇಹಕ್ಕೆ ಮಾತ್ರ ಬೆಲೆಯೋ? ಈ ಗಂಡಸು ಜಾತಿಗೆ ತಮ್ಮ ಸ್ವಾರ್ಥದ ಪರಿಧಿಯ ಒಳಗೆ ಮಾತ್ರವೇ ಯೋಚಿಸಲು ಬರುತ್ತದೆ. ಅದರಾಚೆಗಿನ ಜೀವಿಗಳ ಪರಿವೆಯೇ ಇಲ್ಲ”” ಎಂದು ಅಲವತ್ತುಕೊಂಡಳು.
ಚಿದಂಬರ ಮೂರ್ತಿ ಗೊಂದಲದಲ್ಲಿ ಬಿದ್ದರು.ಇಬ್ಬರ ವಾದವೂ ಅವರವರ ದೃಷ್ಟಿಯಲ್ಲಿ ಸರಿಯೇ. ಇಲ್ಲಿ ನ್ಯಾಯ ಅನ್ಯಾಯಗಳ ನಿಷ್ಕರ್ಷೆ ಕಠಿಣ.ಅದನ್ನು ಮೀರಿದ ಆಯಾಮಗಳಲ್ಲಿ ಇದರ ಪರಿಶೀಲನೆ ಅವಲೋಕನೆ ಆಗಬೇಕೆಂದು ಯೋಚಿಸಿದರು.
ಇಲ್ಲಿ ಇರುವುದು ಭಾವಚಿತ್ರ ಹಾಗೂ ಜೀವಚಿತ್ರಗಳಲ್ಲಿನ ಸಾಮ್ಯತೆಗೆ ಸಂಬಂಧಿಸಿದ ಭಿನ್ನಾಭಿಪ್ರಾಯ. ಇದನ್ನು ಮೊದಲು ಬಗೆ ಹರಿಸಿದರೆ ಹಣದ ಸಂಬಂಧಿ ವ್ಯಾಜ್ಯವನ್ನು ಇತ್ಯರ್ಥಗೊಳಿಸಬಹುದೆಂದು ಯೋಚಿಸಿ ಅದರಂತೆ ಅವರಿಬ್ಬರಿಗೂ ತಮ್ಮ ತಮ್ಮ ಬಳಿಯಿರುವ ಹಾಗೂ ಈ ಭಿನ್ನಾಭಿಪ್ರಾಯಕ್ಕೆ ಮೂಲಕಾರಣವಾಗಿರುವ ಚಿತ್ರಗಳನ್ನು ತಮ್ಮ ಪರಿವೀಕ್ಷಣೆಗೆ ಒಪ್ಪಿಸಬೇಕೆಂದು ಸೂಚಿಸಿದರು.
ಎಲ್ಲ ತಯಾರಿ ಮಾಡಿಕೊಂಡು ಬಂದಿದ್ದ ಯೋಗೀಶ ತನ್ನ ಬಳಿಯಿದ್ದ ಭಾವಚಿತ್ರದ ಪ್ರತಿಯನ್ನು ಕೊಟ್ಟ. ಸುಶೀಲಾರಾಣಿ ತಾನು ತನ್ನ ಫೋನಿನಲ್ಲಿ ತಾನೇ ತೆಗೆದಿದ್ದ ಫೋಟೋವನ್ನು ಪರದೆಯ ಮೇಲೆ ತರಿಸಿ ಅವರ ಪರಾಮರ್ಶೆಗೆ ಒಪ್ಪಿಸಿದಳು.
ಏನಾಶ್ಚರ್ಯ!!! ಎರಡೂ ಭಾವಚಿತ್ರಗಳು ಒಂದನ್ನೊಂದು ಹೋಲುತ್ತಿದ್ದವು. ಇಬ್ಬರೂ ಸುಳ್ಳು ಹೇಳುತ್ತಿಲ್ಲ!! ಕತ್ತೆತ್ತಿ ಸುಶೀಲಳನ್ನು ನೋಡಿದರು. ಅವಳು ಆ ದಿನ ಹೇಗಿದ್ದಳೋ ಅದೇ ರೀತಿ ಸಿಂಗರಿಸಿಕೊಂಡು, ಅದೇ ಬಟ್ಟೆಗಳನ್ನು ತೊಟ್ಟು ಬಂದಿದ್ದಳು. ಕಣ್ಣು ಕಿವಿ, ಮೂಗು, ಬಾಯಿ, ಕೇಶ ವಿನ್ಯಾಸ ಎಲ್ಲವು ಅದೇ ಆದರೆ ಫೋಟೋದಲ್ಲಿದ್ದಷ್ಟು ಮುಖ ಸುಂದರವಾಗಿಲ್ಲ. ಅರೇ ಇದು ಹೇಗೆ ಸಾಧ್ಯ? ಅವರಿಗೆ ಅನುಮಾನ ಮೂಡಿತು. ಸುಶೀಲಾ ಏನೋ ಮಸಲತ್ತು ಮಾಡುತ್ತಿರಬಹುದೆಂದು ಅವರಿಗೆ ಅನ್ನಿಸಿತು. ತನ್ನದಲ್ಲದ ಫೋಟೊ ಕಳಿಸಿ ಜನರಿಗೆ ಮರುಳು ಮಾಡುತ್ತಿರಬಹುದೆಂಬ ಸಂದೇಹ ಮೂಡಿತು. ಹೇಳಿದರು,..
” ಸುಶೀಲಾ, ನಿಮ್ಮ ಭಾವಚಿತ್ರಕ್ಕೂ ,ನಿಜರೂಪಕ್ಕೂ ಇರುವ ವ್ಯತ್ಯಾಸ ಖಚಿತವಾಗಿದೆ. ಇದು ನೀವು ಉದ್ದೇಶಪೂರ್ವಕವಾಗಿ ಗ್ರಾಹಕರಿಗೆ ಮರುಳುಮಾಡುವ ಸಂಚಿನಂತೆ ನನಗೆ ಭಾಸವಾಗುತ್ತಿದೆ.ನಿನ್ನಂತೆ ಮೈಕಟ್ಟಿರುವ ಬೇರೆ ಯಾವುದೋ ಫೋಟೊವನ್ನು ತೋರಿಸಿ ಗ್ರಾಹಕರನ್ನು ಆಕರ್ಷಿಸಿ ಅನಂತರ ಅವರಿಂದ ಸುಲಿಗೆ ಮಾಡುವ ಹುನ್ನಾರದಂತೆ ನನಗೆ ಅನಿಸುತ್ತಿದೆ. ಇದಕ್ಕ್ಕೆ ನೀನೇನಾದರೂ ಹೇಳುವುದಿದೆಯೋ?? ಕೇಳಿದರು.
ಸುಶೀಲೆಯ ಕಣ್ಣುಗಳಲ್ಲಿ ನೀರುತುಂಬಿತು. ಗದ್ಗದವಾದ ಕಂಠವನ್ನು ಸರಿಮಾಡಿಕೊಂಡು, ಧೈರ್ಯದಿಂದಲೇ ಹೇಳಿದಳು” ನ್ಯಾಯಾಧೀಶರೇ, ಈ ಪ್ರಪಂಚದಲ್ಲಿ ಯಾವಾಗಲೂ ದುರ್ಬಲ, ನಿರಾಯುಧ, ದೀನ ಹಾಗೂ ಅಸಹಾಯಕರಿಗೆ ಅನ್ಯಾಯವಾಗುವುದೇ ಹೊರತು ಸಶಕ್ತರಿಗಲ್ಲ. ಅದರಲ್ಲೂ ಹೆಣ್ಣು,ವೃತ್ತಿಯಿಂದ ವೇಶ್ಯೆಯಾಗಿರುವ ನನ್ನಂಥವರನ್ನು ಅನುಮಾನಿಸಲು, ದೂರಲು, ಗೂಬೆ ಕೂರಿಸಲು ಪ್ರಪಂಚ ಹೆಚ್ಚು ಕಷ್ಟಪಡಬೇಕಾದ್ದಿಲ್ಲ. ನದಿ ಪ್ರವಾಹದಲ್ಲಿ ದುರ್ಬಲರ ಕಟ್ಟಡಗಳು ಕೊಚ್ಚಿಹೋಗುವಂತೆ, ಕಾಲನ ಪ್ರವಾಹದಲ್ಲಿ ನಾವುಗಳು, ನಮಗಾಗಿರುವ ಅನ್ಯಾಯಗಳು ಜಗತ್ತಿನ ಸ್ಮೃತಿಪಟಲದಿಂದ ಕೊಚ್ಚಿಹೋಗುತ್ತವೆ.ದುರ್ಬಲರಿಗೆ ನ್ಯಾಯಾನ್ಯಾಗಳನ್ನು ಅಧಿಕಾರಯುತವಾಗಿ ಆಗ್ರಹಿಸುವ ಹಕ್ಕನ್ನು ಸಮಾಜ ಯಾವತ್ತಿಗೂ ಕೊಟ್ಟಿಲ್ಲ. ನಾವುಗಳು ಅದನ್ನು ಯಾಚಿಸಬಹುದಷ್ಟೇ. ಸಮಾಜದ ಆತ್ಮಸಾಕ್ಷಿ ನಮಗಾಗಿ ಎಂದೂ ಮಿಡಿದಿಲ್ಲ. ಅದು ಬರೀ ಕಥೆ ಪುರಾಣಗಳ ಆದರ್ಶಗಳಲ್ಲಿ ಮಾತ್ರ. ಸಮಾಜದ ಸೇವೆ ನಾವು ಮಾಡಿದಾಗ್ಯೂ,ಜನರ ವಿಕೃತ ವಾಂಛೆಗಳನ್ನು ಪೂರೈಸಿದ್ದಾಗ್ಯೂ,ನಮಗೆ ತಿರಸ್ಕಾರ ನಿಂದನೆ ದೂಷಣೆಗಳು ಬಳುವಳಿಯೇ ಹೊರತು ಪುರಸ್ಕಾರ, ಆದರ ಪೋಷಣೆಗಳಲ್ಲ.ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಉದ್ದೇಶಪೂರ್ವಕವಾಗಿ ಯಾವ ಅಪಚಾರ ಮಾಡಿಲ್ಲ. ಈತ ಕೇಳಿದ ತಕ್ಷಣ ಆ ಫೋಟೊ ತೆಗೆದು ಕಳಿಸಿದ್ದೇನೆ. ಬೇಕಾದರೆ ಅದರ ಅಡಿಯಲ್ಲಿರುವ ದಿನಾಂಕ ಮತ್ತು ಸಮಯಗಳನ್ನು ಗಮನಿಸಿ. ಕೇವಲ ಎರಡು ನಿಮಿಷಗಳ ಅಂತರ ಇರಬಹುದಷ್ಟೇ. ಅಷ್ಟರಲ್ಲಿ ನಾನು ಪವಾಡ ಸೃಷ್ಟಿಸಲು ಸಾಧ್ಯವಿಲ್ಲ.ಅಂತಹ ಕುಕೃತ್ಯದ ಅವಶ್ಯಕತೆಯೂ ನನಗಿಲ್ಲ.ನನಗಿಲ್ಲಿ ನ್ಯಾಯ ಸಿಗದಿದ್ದರೆ ಮೇಲಿನ ಕೋರ್ಟಿಗೂ ಹೋಗುತ್ತೇನೆ,ಫೀರ್ಯಾದು ಮಾಡುತ್ತೇನೆ ” ಎಂದಳು
ಅವಳ ವಾಗ್ಸರಣಿ,ಯೋಚನಾಲಹರಿ, ದಿಟ್ಟತನ,ತನ್ನಲ್ಲಿ ತಾನು ನಂಬಿಕೆಯಿಟ್ಟು ಮಾತನಾಡಿದ ಪರಿ ಚಿದಂಬರ ಮೂರ್ತಿಯನ್ನು ಮೂಕವಿಸ್ಮಿತರನ್ನಾಗಿಸಿದವು. ಸಿದ್ಧಯ್ಯ ತಲೆದೂಗಿದರು. ತಲೆದೂಗಿದ ಚಿದಂಬರ ಮೂರ್ತಿ ಅವಳು ಹೇಳಿದಂತೆ ಫೋಟೊ ತೆಗೆದ ಸಮಯ ದಿನಾಂಕ ಇತ್ಯಾದಿ ಪರಿಶೀಲಿಸಿದರು.ಯೋಗೀಶ ನೀಡಿದ್ದ ಫೋಟೊ ಕೆಳಗಿನ ವಿವರಗಳಿಗೆ ತಾಳೆ ನೋಡಿದರು.ಯೋಗೀಶನ ಫೋನ್ ಸಂಭಾಷಣೆ ಮುಗಿದ ಸಮಯಕ್ಕೂ, ಸುಶೀಲಾ ಫೋಟೊ ತೆಗೆದ ಸಮಯಕ್ಕೂ ನಲವತ್ತು ಸೆಕೆಂಡುಗಳ ಅಂತರವಿದ್ದು ಅವನ ಮೊಬೈಲಿಗೆ ಫೋಟೊ ಬಂದ ಕ್ಷಣಕ್ಕೆ ಒಂದು ನಿಮಿಷದ ಅಂತರವಿತ್ತು.ಅಂದರೆ ಕೇವಲ ಎರಡು ನಿಮಿಷಗಳ ಒಳಗೆ ಎಲ್ಲ ಪ್ರಕ್ರಿಯೆಗಳು ನಡೆದಿರಬೇಕು.ಅದರೊಳಗೆ ಮೋಸ ನಡೆದಿರಬಹುದಾದ ಸಾಧ್ಯತೆಗಳು ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ಹಾಗಾದರೆ ಈ ಗೋಜಲು ಬಿಡಿಸುವುದು ಹೇಗೆ?
ಸಿದ್ಧ್ಯಯ್ಯನವರ ಕಡೆಗೆ ನೋಡಿದರು. ಮಧ್ಯಂತರ ವಿಶ್ರಾಂತಿ ಬೇಕೆಂದೂ, ಎಲ್ಲರೂ ಊಟಕ್ಕೆ ಹೋಗಬಹುದೆಂದೂ, ನಂತರ ಉಳಿದ ವಿಚಾರಣೆ ನಡೆಸುವುದಾಗಿಯೂ ಹೇಳಿ ಎದ್ದರು. ಯೋಗೀಶ ಸುಶೀಲಳನ್ನು ಕೆಕ್ಕರಿಸಿ ನೋಡುತ್ತಾ ಧಢ ಧಢನೆ ಇಳಿದು ಹೋದ. ಸುಶೀಲ ಗಂಭೀರವಾಗಿ ತಲೆ ತಗ್ಗಿಸಿ ನಡೆದು ಹೋದಳು.
******* *********
ವಿಚಾರಿಸಿದಷ್ಟೂ ಸಂಕೀರ್ಣವಾಗುತ್ತಿದ್ದ ಈ ಕೇಸಿನ ವೈಚಿತ್ರತೆಯನ್ನು ಚಿಂತಿಸುತ್ತಾ ಇಬ್ಬರೂ ಸ್ನೇಹಿತರು ಊಟ ಮಾಡುತ್ತಿದ್ದರು. ತನಿಖೆ ನಡೆಸುವುದರಲ್ಲಿ ಪಳಗಿದ ಸಿದ್ಧಯ್ಯನವರ ಪೋಲೀಸ್ ತಲೆ ಈ ಘಟನೆಯಲ್ಲಿ ಬಂದಿರುವ ಪಾತ್ರಗಳನ್ನು ಮೆಲುಕು ಹಾಕುತ್ತ ಮೌನವಾಗಿ ಊಟ ಮಾಡುತ್ತಿದ್ದರು. ಚಿದಂಬರ ಮೂರ್ತಿ ಅನ್ಯಮನಸ್ಕರಾಗಿದ್ದರು. ಸುಶೀಲಳ, ಸಮಾಜದ ಸೋಗಲಾಡಿತನವನ್ನು ಬೆತ್ತಲೆಗೊಳಿಸುವಂತಿದ್ದ ಮಾತುಗಳು ಅವರ ತಲೆಯಲ್ಲಿ ಅನುರಣಿಸುತ್ತಿದ್ದವು. ಹೃದಯಾಂತರಾಳದಿಂದ ಬಂದಿದ್ದ ಅವಳ ಮಾತುಗಳ ಹಿನ್ನೆಲೆಯಲ್ಲಿ, ಅವಳಲ್ಲಿ ನಡೆದಿರಬಹುದಾದ ತಾಕಲಾಟಗಳನ್ನು ಊಹಿಸಿಕೊಂಡ ಅವರ ಅಂತರಂಗ ಕಲಕದಿರಲಿಲ್ಲ. ಸಹಾನುಭೂತಿ ಅವಳ ಕಡೆಗಿದ್ದರೂ ನ್ಯಾಯಾಧೀಶರಾಗಿ ಅವರ ಕರ್ತವ್ಯ ಅವರು ಮಾಡಲೇ ಬೇಕಾಗಿತ್ತು. ಇಷ್ಟಕ್ಕೂ ಯೋಗೀಶನದ್ದೇನೂ ತಪ್ಪಿರಲಿಲ್ಲ. ದಾರಿ ಅವರಿಗೆ ಕಾಣಿಸುತ್ತಿರಲಿಲ್ಲ.
ಸಿದ್ಧಯ್ಯನವರ ಪೋಲಿಸ್ ತಲೆ ಕೆಲಸ ಮಾಡಿತು. ತಲೆಯೆತ್ತಿ ”ಚಿದಂಬರ ” ಎಂದರು.
”ಹೇಳು ಸಿದ್ಧ,. ನಿನಗೇನಾದ್ರೂ ಬೆಳಕು ಕಂಡಿತೋ””
” ನೋಡು ಚಿದಂಬರ, ಈಗ ಅವರಿಬ್ಬರ ಹೇಳಿಕೆಗಳಲ್ಲಿ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತಿಲ್ಲ.ಇಬ್ಬರೂ ಅವರವರ ಅಭಿಪ್ರಾಯಗಳಿಗೆ ಬದ್ಧರು ಹಾಗೂ ಸತ್ಯವನ್ನೇ ಹೇಳುತ್ತಿದ್ದಾರೆ. ಆದರೆ ಇಲ್ಲಿ ಮೂಡಿರುವ ಭಿನ್ನಭಿಪ್ರಾಯ ಫೋಟೋಗೆ ಕುರಿತದ್ದು.ಫೋಟೊಗಳಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ ಆದರೆ ಫೋಟೊ ಹಾಗೂ ಅದರ ಮೂಲ ವ್ಯಕ್ತಿಯರ ಸಾಮ್ಯತೆಯಲ್ಲಿ ವ್ಯತ್ಯಾಸ ಗೋಚರಿಸುತ್ತಿದೆ.ಈ ಎರಡು ಅಂಶಗಳ ಮಧ್ಯದ ಪಾತ್ರವೆಂದರೆ ಕ್ಯಾಮೆರಾ. ಕ್ಯಾಮರಾ ಇರುವುದು ಮೊಬೈಲ್ ಫೋನಿನಲ್ಲಿ. ಬೇರೆ ಎಲ್ಲವನ್ನು ಪಕ್ಕಕ್ಕೆ ಸರಿಸಿ ನೋಡಿದಾಗ ಇಲ್ಲಿ ಇನ್ನಷ್ಟು ಕೆದಕಬೇಕಾದ ಅವಶ್ಯಕತೆ ಇದೆ. ಈ ಹಂತದಲ್ಲಿ ಇನ್ನಷ್ಟು ವಿಚಾರಣೆ ನಡೆಸಬೇಕಾಗಿದೆ.ಫೋಟೋಗಳನ್ನು ಬದಲು ಮಾಡುವ ತಂತ್ರಾಂಶಗಳು, ಸಾಫ್ಟ್ ವೇರ್ಗಳು ಇರುವುದು ನಿನಗೂ ತಿಳಿದ ವಿಷಯ. ಅದನ್ನು ಸ್ವಲ್ಪ ಪರೀಕ್ಷಿಸಿ ಬಿಡುವ ಏನಂತೀಯ? ಎಂದರು.
”ಅಂದರೆ ನಿನಗೆ ಸುಶೀಲಳ ಮೇಲೆ ಇನ್ನೂ ಸಂದೇಹವೇ??” ಚಿದಂಬರ ಕೇಳಿದರು.
”ಹಾಗಲ್ಲ. ಯಾವುದನ್ನೂ ಊಹೆಗೆ ಬಿಡಬಾರದೆಂದು ನನ್ನ ಪ್ರಾಮಾಣಿಕ ಅನಿಸಿಕೆ” ಸಿದ್ಧಯ್ಯ ನುಡಿದರು
ಚಿದಂಬರ ತಮ್ಮ ಸ್ನೇಹಿತನ ಕೆಡೆಗೆ ಮೆಚ್ಚುಗೆಯಿಂದ ನೋಡಿದರು.ಇಬ್ಬರು ಊಟ ಮುಗಿಸಿ ವಿಚಾರಣೆಗೆ ಮರಳಿದರು.
ಮತ್ತೆ ಪೀಠಿಕೆ ಹಾಕುತ್ತಾ ಚಿದಂಬರ ಸುಶೀಲಾಳಿಗೆ ಅವಳ ಫೋನು ಕೊಡಲು ಹೇಳಿದರು. ಸಿದ್ಧಯ್ಯನವರಿಗೆ ಅದನ್ನು ಕೊಡುತ್ತಾ ಆಕೆಯ ಫೋಟೋ ತೆಗೆಯಲು ಕೋರಿದರು. ಸುಶೀಲೆಯ ಅನುಮತಿ ಪಡೆದು ಸಿದ್ಧಯ್ಯ ತಾವೆ ಮುತುವರ್ಜಿ ವಹಿಸಿ ಅವಳ ಭಾವಚಿತ್ರವನ್ನು ಫೋನಿನ ಕ್ಯಾಮೆರಾವನ್ನು ಉಪಯೊಗಿಸಿ ತೆಗೆದು ನೋಡಿ ಅವಕ್ಕಾದರು. ಮತ್ತೆ ಅದೇ ರೀತಿಯ ಸುಂದರ ಫೋಟೊ.ಎದುರಿಗಿದ್ದ ಸುಶೀಲಳಿಗಿಂತ ಅತೀ ಸುಂದರ, ಮೊದಲಿನ ಫೋಟೊದಲ್ಲಿದ್ದಂತೆ!! ಚಿದಂಬರಮೂರ್ತಿಗೆ ತೋರಿಸಿದರು. ಈಗ ಅವಾಕ್ಕಾಗುವ ಸರದಿ ಅವರದಾಗಿತ್ತು. ಮತ್ತೊಮ್ಮೆ ತೆಗೆದು ನೋಡಿದರು. ಏನೂ ಬದಲಾವಣೆ ಇರಲಿಲ್ಲ.
ಕೋರ್ಟಿನ ಕ್ಯಾಮೆರಾ ತಂದು ಅದರಲ್ಲಿ ಚಿತ್ರಗಳನ್ನು ತೆಗೆಯಲಾಯಿತು. ಮತ್ತೆ ಅವಾಕ್ಕಾದರು.ಅದರಲ್ಲಿ ಎದುರಿಗಿದ್ದ ಸುಶೀಲಳ ಯಥಾವತ್ ಚಿತ್ರ ಮೂಡಿ ಬಂದಿತ್ತು. ಅಂದರೆ ಈ ಕ್ಯಾಮೆರಾಗಳಲ್ಲಿ ಏನೋ ವ್ಯತ್ಯಾಸ ಇರುವುದು ಸ್ಪಷ್ಟವಾಯಿತು.ಮತ್ತೆ ಪರೀಕ್ಷಿಸಿದರು. ಏನೂ ಹೊಸ ವ್ಯತ್ಯಾಸ ಕಾಣಲಿಲ್ಲ.
ಯೋಗೀಶನ ಚಿತ್ರ ತೆಗೆದರು. ಸುಶೀಲಳ ಕ್ಯಾಮೆರಾದಲ್ಲಿ ಅವನು ಇನ್ನೂ ಸ್ಫುರದ್ರೂಪಿಯಾಗಿ ಕಳೆಯಿಂದ ಕಾಣುತ್ತಿದ್ದ- ಮುಖ ಊದಿಸಿಕೊಂಡಿದ್ದರೂ! ಕೋರ್ಟಿನ ಕ್ಯಾಮೆರಾದಲ್ಲಿ ಮಾಮೂಲಿಯಾಗೆ ಕಂಡುಬಂದ. ಇನ್ನಷ್ಟು ಗೋಜಲಾಯಿತು.
ಸುಶೀಲಳ ಅನುಮತಿ ಪಡೆದು ಅವಳ ಕ್ಯಾಮೆರಾವನ್ನು ತಮ್ಮ ಸುಪರ್ದಿನಲ್ಲಿ ಇಟ್ಟುಕೊಂಡರು.ಅದಕ್ಕೆ ಪ್ರತಿಯಾಗಿ ಆಕೆಗೆ ಉಪಯೋಗಿಸಲು ಬೇರೊಂದು ಫೋನ್ ಕೊಡಮಾಡಿಸಿದರು.ತಮ್ಮ ವಿಶೇಷ ಅಧಿಕಾರವನ್ನು ಬಳಸಿ ಆಕೆಗೆ ಮೂರು ದಿನಗಳ ಭತ್ಯೆಯನ್ನೂ ಕೊಡಮಾಡಿಸಿದರು.ಯೊಗೀಶನ ಮೊಬೈಲ್ ಅನ್ನೂ ತಮ್ಮ ವಶಕ್ಕೆ ತೆಗೆದುಕೊಂಡರು.ಅವನು ತನಗೆ ಯಾವುದೇ ಭತ್ಯೆ ಇತ್ಯಾದಿ ಬೇಡವೆಂದ. ಎರಡು ದಿನ ಕಳೆದು ವಿಚಾರಣೆ ನಡೆಸುವುದಾಗಿ ಹೇಳಿ ಅಂದಿನ ಕಲಾಪ ಮುಗಿಸಿದರು.
ತಲೆ ಬಿಸಿಯಾಗಿತ್ತು. ಡಬಲ್ ಕಾಫಿ ಕುಡಿಯೋಣವೆಂದು ಇಬ್ಬರೂ ಹತ್ತಿರದ ಉಡ್ ಲ್ಯಾಂಡ್ ಹೋಟೆಲ್ಲಿಗೆ ಹೋಗಿ ಒಂದು ಮೂಲೆ ಹಿಡಿದು ಕೂತರು. ಕಾಫಿ ಬರುವವರೆಗೆ ಸುಶೀಲಳ ಮೊಬೈಲ್ ಅನ್ನೂ,ಯೋಗೀಶನದ್ದನ್ನೂ, ತಮ್ಮದನ್ನೂ ಮೇಜಿನ ಮೇಲಿಟ್ಟು ದಿಟ್ಟಿಸತೊಡಗಿದರು.
ಸುಶೀಲಳ ಮಾತು ಕತೆ ನಡತೆಯಲ್ಲಿ ಅವರಿಗೆ ಯಾವ ಮೋಸದ ಕುರುಹುಗಳೂ ಕಂಡುಬರಲಿಲ್ಲ. ಮೊಬೈಲನ್ನು ದಿಟ್ಟಿಸುತ್ತಿದ್ದ ಅವರಿಗೆ ಅದು ಉಳಿದ ಮೊಬೈಲುಗಳಿಗಿಂತ ಭಿನ್ನವಾಗಿದ್ದು ಗಮನಕ್ಕೆ ಬಂತು.ಬರೀ ಚಿತ್ರಗಳನ್ನು ಗಮನಿಸುತ್ತಾ ಉಪಕರಣವನ್ನು ಇಲ್ಲಿಯವರೆಗೆ ಗಮನಿಸಿರಲಿಲ್ಲ. ಅದಕ್ಕೊಂದು ತಯಾರಕ ಕಂಪನಿಯ ಹೆಸರೂ ಇರಲಿಲ್ಲ. ಅಚ್ಚುಕಟ್ಟಾಗಿ ಇದ್ದರೂ ಅದೊಂದು ಕಂಪನಿಯ ಉತ್ಪನ್ನದಂತೆ ಇರದೇ ಇದ್ದುದು ಸಿದ್ಧಯ್ಯನವರ ಅರಿವಿಗೆ ಬಂತು. ಇದನ್ನು ಯಾರೋ ವಿಶೇಷವಾಗಿ ತಯಾರಿಸಿರಬೇಕು ಎಂದೆನ್ನಿಸಿ ತಮ್ಮ ಮಿತ್ರನಿಗೆ ಹೇಳಿದರು. ಅವರೂ ಅನುಮೋದಿಸಿದರು.
ಅಷ್ಟರಲ್ಲಿ ಅಲ್ಲಿಗೊಂದು ಜೋಡಿ ಬಂತು ಹಾಗೂ ಅವರ ಜೊತೆಯಲ್ಲಿ ಒಂದು ನಾಯಿಯೂ ಇತ್ತು. ಸಿದ್ಧಯ್ಯನವರು ಪ್ರಾಣಿಯ ಚಿತ್ರ ಇದರಲ್ಲಿ ಹೇಗೆ ಬರಬಹುದೆಂದು ನೋಡಲು ಅದರ ಕಡೆಗೆ ಕ್ಯಾಮೆರಾ ತಿರುಗಿಸಿ ಕ್ಲಿಕ್ ಮಾಡಿ ಲಗುಬಗೆಯಿಂದ ಪರೀಕ್ಷಿಸಿದರು. ಮತ್ತೊಂದು ಆಶ್ಚರ್ಯ ಅವರಿಗೆ ಕಾದಿತ್ತು. ನಾಯಿಯ ಜೊತೆಯಲ್ಲಿ ಆ ಜೋಡಿಯ ಚಿತ್ರವೂ ಇದ್ದು ನಾಯಿ ಯಥಾವತ್ ಇದ್ದರೂ ಆ ಜೋಡಿಯ ಚಿತ್ರ ಭಿನ್ನವಾಗಿತ್ತು. ಎದುರಿನಿಂದ ನೋಡಲು ಸಭ್ಯ ಸುಂದರಾಗಿದ್ದರೂ ಆ ಕ್ಯಾಮೆರಾದಲ್ಲಿ ಅವರು ಕುರೂಪಿಗಳಾಗಿ ಕಂಡುಬಂದರು!
ನಾಯಿಯ ನೆವ ಇಟ್ಟುಕೊಂಡು ಮತ್ತೆರೆಡು ಫೋಟೋಗಳನ್ನು ಹತ್ತಿರದಿಂದಲೇ ತೆಗೆದರು. ಅವೆರೆಡೂ ಕುರೂಪ ಮನುಷ್ಯರ ಚಿತ್ರಗಳನ್ನೇ ತೋರಿಸಿದವು. ಚಿದಂಬರ ತಮ್ಮ ಕ್ಯಾಮೆರಾದಿಂದ ನಾಯಿಯ ಜೊತೆಗೆ ಅವರ ಫೋಟೊಗಳನ್ನು ತೆಗೆದುಕೊಂಡು ಮತ್ತೆ ತಮ್ಮ ಟೇಬಲ್ಲಿಗೆ ಬಂದು ಕುಳಿತು ಪರೀಕ್ಷಿಸತೊಡಗಿದರು. ಚಿದಂಬರರ ಕ್ಯಾಮೆರಾದಲ್ಲಿ ಆ ಜೋಡಿಯೂ ನಾಯಿಯೂ ಯಾವುದೇ ಬದಲಾವಣೆ ತೋರಿಸಿರಲಿಲ್ಲ. ಇವರಿಬ್ಬರೂ ಗಹನ ಚರ್ಚೆಯಲ್ಲಿರುವುದನ್ನೂ, ಸಿದ್ಧಯ್ಯನವರ ಪೋಲೀಸ್ ದಿರಿಸನ್ನೂ ಗಮನಿಸಿದ ಆ ಜೋಡಿ ಇರುಸು ಮುರುಸು ಮಾಡಿಕೊಂಡು ಹೊರಡಲು ಅನುವಾಗುತ್ತಿದ್ದಂತೆಯೇ ಸಿದ್ಧಯ್ಯನವರ ಪೋಲೀಸ್ ತಲೆ ಮತ್ತೆ ಕೆಲಸ ಮಾಡಿತು. ತಕ್ಷಣ ಅವರಿದ್ದಲ್ಲಿಗೆ ಹೋಗಿ,ಅವರಿಂದ ಸಹಾಯ ಬೇಕಿದೆಯೆಂದೂ, ತಮ್ಮ ಅನುಮತಿಯಿಲ್ಲದೆ ಹೋಗಕೂಡದೆಂದೂ ತಾಕೀತು ಮಾಡಿ ವಾಪಸ್ ಬಂದು ”ಚಿದಂಬರ ಇದೊಂದು ಅಸಾಧಾರಣವಾದ ಉಪಕರಣ.ಆ ಇಬ್ಬರನ್ನು ಈಗ ಠಾಣೆಗೆ ಕರೆದೊಯ್ದು ವಿಚಾರಿಸಿದರೆ ಇದರ ಮಹತ್ವ ತಿಳಿಯುವುದು ನಡಿ ಹೋಗೋಣ ” ಎಂದು ಕಾಫಿಯೆಲ್ಲವನ್ನೂ ಒಂದೇ ಗುಟುಕಿಗೆ ಮುಗಿಸಿ, ಆ ಜೋಡಿಯನ್ನು ಕರೆದುಕೊಂಡು ಹೊರಟರು. ಗಲಿಬಿಲಿಗೊಂಡ ಆ ಜೋಡಿ ಗಾಭರಿ ಆತಂಕಗಳಿಗೆ ಒಳಗಾಗಿದ್ದನ್ನು ಇಬ್ಬರೂ ಗಮನಿಸದಿರಲಿಲ್ಲ.
ಠಾಣೆಯಲ್ಲಿ ಕೂಡಿಸಿ ವಿಚಾರಿಸಿದಾಗ ಅವರು ಏನೋ ಮುಚ್ಚು ಮರೆ ಮಾಡುತ್ತಿರುವುದು ತಿಳಿದು ಜೋರು ಮಾಡಿ ದಬಾಯಿಸಿದರು.ಶಿಕ್ಷೆಯ ಭಯವನ್ನೂ ಮೂಡಿಸಿದಾಗ ಅವರಿಬ್ಬರೂ ಕೂಡಿ ಆ ಹೆಂಗಸಿನ ಗಂಡನನ್ನು ಮುಗಿಸುವ ಸಂಚು ರೂಪಿಸುತ್ತಿದ್ದಾರೆಂದು ತಿಳಿದು ದಿಗ್ಭ್ರಮೆಗೊಂಡರು- ಅವರ ಅಪರಾಧಕ್ಕಲ್ಲ- ಕ್ಯಾಮೆರಾ ಅದನ್ನು ಕಾಣಿಸಿದ್ದಕ್ಕೆ!!!. ಅವರ ದಾಖಲೆಗಳನ್ನು ತೆಗೆದುಕೊಂಡು ಎಚ್ಚರಿಕೆ ನೀಡಿ, ಏನಾದರೂ ಪ್ರಮಾದ ನಡೆದರೆ ಜೈಲು ಕಂಬಿ ಎಣಿಸುವ ಗ್ಯಾರಂಟಿ ನೀಡಿ ಅವರನ್ನು ಕಳಿಸಿದರು.
ಈಗ ಈ ಸುಶೀಲಳ ಬಳಿಯಿದ್ದ ಫೋನು ಅಸಾಧಾರಣವೆಂದು ಸಾಬೀತಾಗಿತ್ತು. ತಮ್ಮ ಫೋಟೋಗಳನ್ನು ತೆಗೆದು ನೋಡಿಕೊಳ್ಳಲು ಇಬ್ಬರಿಗೂ ಭಯವಾಯಿತು. ಅದನ್ನು ಜೋಪಾನವಾಗಿಟ್ಟು ತಂತಮ್ಮ ಮನೆಗಳಿಗೆ ನಡೆದರು. ತಮ್ಮ ಮನೆಯವರೆಲ್ಲ ರ ಫೋಟೊ ತೆಗೆದು ಅವರ ಒಳಮರ್ಮ ಅರಿಯುವ ಮನಸ್ಸಾಗದೇ ಇರಲಿಲ್ಲ!! ಆದರೆ ಅದು ತೆರೆಯ ಬಹುದಾದ ಕರಾಳ ಜಗತ್ತು ಇವರಿಗೆ ನಿಭಾಯಿಸಲಸಾಧ್ಯವಾಗುವ ಸಾಧ್ಯತೆ ಮನಗಂಡು ಅ ದುಸ್ಸಾಹಸಕ್ಕೆ ಇಬ್ಬರೂ ಕೈಹಾಕಲಿಲ್ಲ!!.
******** ******
ಎರಡು ದಿನಗಳಲ್ಲಿ ಸಿದ್ಧ್ಹಯ್ಯ ತಮ್ಮ ಪರಿಚಯದ ಹಾಗೂ ಅಪರಾಧ ವಿಭಾಗದ ತಂತ್ರಜ್ಞರ ಭೇಟಿಮಾಡಿ ಸಲಹೆ ಸೂತ್ರಗಳನ್ನು ಕ್ರೋಢೀಕರಿಸಿದರು. ಇತ್ತೀಚಿನ ತಂತ್ರಜ್ಞಾನದ ಬೆಳವಣಿಗೆಗಳು, ತಂತ್ರಾಂಶಗಳ ಕಾರ್ಯ ವೈಖರಿಯ ವಿಧಿ ವಿಧಾನಗಳನ್ನು ಚರ್ಚಿಸಿದರು. ಟಿಪ್ಪಣಿ ಮಾಡಿಕೊಂಡರು. ತಮ್ಮ ಬಳಿ ಇದ್ದ ಫೋನಿನ ಸುಳಿವು ಮಾತ್ರ ಯಾರಿಗೂ ಬಿಟ್ಟುಕೊಡಲಿಲ್ಲ. ತಮ್ಮ ಕಾರ್ಯ ಕಲಾಪಗಳಿಗೆ ಆಸರೆಯಾಗಿರಲೆಂದು ಈ ವಿಷಯದ ಬಗ್ಗೆ ಕಲಿಯುತ್ತಿದ್ದೇನೆಂದಷ್ಟೆ ಅವರು ತಮ್ಮ ಸಂಪರ್ಕಕ್ಕೆ ಬಂದವರಿಗೆ ಮನವರಿಕೆ ಮಾಡಿಕೊಟ್ಟರು. ಹೊಸ ಮಾಹಿತಿಯೊಂದಿಗೆ ತಮ್ಮ ಇಲ್ಲಿಯವರೆಗಿನ ಅನುಭವಗಳನ್ನು ಮಿಳಿತಗೊಳಿಸಿ ಒಂದು ವಿವರಣಾತ್ಮಕ ವರದಿ ಸಿದ್ಧಪಡಿಸಿ ಚಿದಂಬರ ಮೂರ್ತಿಯೊಂದಿಗೆ ಚರ್ಚಿಸಿದರು ಅನಂತರದಲ್ಲಿ ಅವರಿಬ್ಬರೂ ಮುಂದಿನ ಅನ್ವೇಷಣೆಯ ರೂಪು ರೇಷೆ ತಯಾರಿಸಿ ಮರುದಿನಕ್ಕೆ ಮಾನಸಿಕವಾಗಿ ತಯಾರಾದರು. ಇಬ್ಬರಲ್ಲೂ ಆತ್ಮವಿಶ್ವಾಸ ಮೂಡಿತ್ತು,.!!

******* ******
ವಿಚಾರಣೆ ಪುನರಾರಂಭವಾಯ್ತು. ಎಲ್ಲರೂ ತಂತಮ್ಮ ಜಾಗಗಳಲ್ಲಿ ಬಂದು ಕುಳಿತರು. ಮೊದಲು ಸುಶೀಲಳನ್ನು ಕರೆಸಲಾಯ್ತು.ಅವಳನ್ನು ಉದ್ದೇಶಿಸಿ,
ಆ ತನ್ನ ಮೊಬೈಲ್ ಅವಳ ಬಳಿ ಹೇಗೆ ಬಂತು? ಆಕೆ ಅದನ್ನು ಕೊಂಡದ್ದೆಲ್ಲಿ? ಅದನ್ನು ಆಕೆಗೆ ಮಾರಿದವರ್ಯಾರು? ಕೊಂಡುಕೊಂಡ ತದನಂತರದಲ್ಲಿ ಅದರಲ್ಲಿ ಮಾಡಲ್ಪಟ್ಟ ಬದಲಾವಣೆಗಳೇನು? ಅದನ್ನು ಎಷ್ಟು ದಿನದಿಂದ ಉಪಯೋಗಿಸುತ್ತಿದ್ದಾಳೆ? ಅದರಲ್ಲಿ ತೆಗೆದಿರುವ ಫೋಟೊಗಳು ಯಾವುವು? ಎಲ್ಲ ವಿವರಗಳನ್ನು ಕೂಲಂಕುಶವಾಗಿ ವಿವರಿಸಲು ಸೂಚಿಸಿದರು.
ಸುಶೀಲಳಿಗೆ ಆ ಫೋನು ಎಂಟು ತಿಂಗಳ ಹಿಂದೆ ಸಿಕ್ಕಿತೆಂದೂ.ಅದನ್ನು ಅವಳು ಕೊಳ್ಳಲಿಲ್ಲವೆಂದೂ,ಅವಳ ಬಳಿಗೆ ಸತ್ಯವಾನ ಎಂಬ ವ್ಯಕ್ತಿ ಆಗಾಗ್ಗೆ ಬರುತ್ತಿದ್ದನೆಂದೂ,ಬಹಳ ಸೂಕ್ಷ್ಮ ಮತಿ ಹಾಗೂ ಸಹೃದಯಿ ಎಂದೂ, ಮೃದುಸ್ವಭಾವದ ಅವನಿಗೆ ಸಂಬಂಧಿಕರಿದ್ದ ಬಗ್ಗೆ ತನ್ನ ಬಳಿ ಏನೂ ಹೇಳಿರಲಿಲ್ಲವೆಂದೂ,ಬಹಳ ಅಪ್ಯಾಯಮಾನ್ವಾಗಿ ತನ್ನ ಬಳಿ ವ್ಯವಹರಿಸುತ್ತಿದ್ದನೆಂದೂ, ತಮ್ಮನ್ನು ಬರೀ ಭೋಗವಸ್ತುಗಳಾಗಿ ನೋಡುವ ಈ ಜಗತ್ತಿನಲ್ಲಿ ತನಗೂ ಒಂದು ಅಸ್ತಿತ್ವವನ್ನು ಕೊಡುತ್ತಿದ್ದ ಉದಾರ ಮನೋಭಾವಿಯೆಂದೂ,ಎಲ್ಲ ಗುಣವಂತರನ್ನು ಭಗವಂತ ಬೇಗ ಕರೆಸಿಕೊಳ್ಳುವಂತೆ ಅವನೂ ಬೇಗನೆ ತೀರಿಕೊಂಡನೆಂದೂ,ವಾಸ್ತವವಾಗಿ ಈ ಮೊಬೈಲ್ ಫೋನು ಅವನಿಗೇ ಸೇರಿದ್ದೆಂದೂ ಹೇಳಿದಳು.ಕಣ್ಣಲ್ಲಿ ನೀರು ತುಂಬಿ ಬಂದು ಒರೆಸಿಕೊಂಡಳು.
ಸಮಸ್ಯೆ ಇನ್ನೊಂದು ತಿರುವು ಪಡೆದುಕೊಂಡಿತು!!
ಮೊಬೈಲಿಗೆ ಸಂಬಂಧಿಸಿದಂತೆ ಅವನ ವಿಚಾರ ಏನಾದರೂ ಇದೆಯೋ? ಕೇಳಿದರು
ತಲೆದೂಗಿದ ಸುಶೀಲೆ ” ಸತ್ಯವಾನ ಯಾವುದೂ ಗಹನ ವಿಚಾರದಲ್ಲಿ ಮುಳುಗಿದ್ದ. ಅವನು ಇರುವ ಕೆಲಸ ಬಿಟ್ಟು ಯಾವುದೋ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ. ತನ್ನ ಖರ್ಚು ವೆಚ್ಚಗಳ ನಿಭಾವಣೆಗೆ ಅಗಾಗ್ಗೆ ಅರೆಕಾಲಿಕ ಕೆಲಸಗಳನ್ನು ಮಾಡುತ್ತಿದ್ದ. ತನ್ನ ಸಾಧನೆ ಕೈಗೂಡಿದಲ್ಲಿ ಈ ಜಗತ್ತಿನಲ್ಲೇ ಒಂದು ಕ್ರಾಂತಿಕಾರಕ ಬದಲಾವಣೆ ಕಾಣಲಿದೆಯೆಂಬ ಆಶಾಭಾವನೆ ಇಟ್ಟುಕೊಂಡಿದ್ದ. ಅದರಲ್ಲಿ ಯಶಸ್ಸು ಕಂಡಾಕ್ಷಣ ತನ್ನನು ಈ ವೇಶ್ಯಾವೃತ್ತಿಯಿಂದ ಬಿಡಿಸಿ ನನಗೆ ಒಂದು ಬದುಕು ಕಟ್ಟಿಕೊಡುವುದಾಗಿ ಭರವಸೆ ಕೊಟ್ಟಿದ್ದ. ಕೆಲವು ದಿನ ಬಂದಾಗ ಈ ಮೊಬೈಲ್ ಫೋನು ತಂದಿರುತ್ತಿದ್ದಾಗಿಯೂ, ತನ್ನ ಕನಸುಗಳನ್ನು ಸಾಕಾರಗೊಳಿಸುವ ಮಂತ್ರದಂಡ ಅದೆಂದೂ, ತನ್ನಾಸೆ ಕೈಗೂಡುವ ಸಮಯ ದೂರವಿಲ್ಲವೆಂದೂ ಹೇಳಿ, ತನ್ನದೊಂದು ಫೋಟೋ ತೆಗೆದು ತೋರಿಸಿ ತನ್ನನ್ನು ಮುದ್ದಾಡಿದ್ದಾಗಿಯೂ, ಅಂದು ಹೋಗುವ ಅವಸರದಲ್ಲಿ ಮರೆತು ಹೋದವನು ದಾರಿಯ ಅಪಘಾತದಲ್ಲಿ ಅಕಸ್ಮಾತ್ತಾಗಿ ಮೃತನಾದದ್ದಾಗಿಯೂ ಹೇಳಿ ಕಂಬನಿ ಒರೆಸಿಕೊಂಡಳು. ಅವನ ನೆನಪಿಗಾಗಿ ಅದನ್ನು ಕಣ್ಣಿನಲ್ಲಿ ಕಣ್ಣಿಟ್ಟು ಜೋಪಾನ ಮಾಡುತ್ತಿರುವುದಾಗಿ ಹೇಳಿದಳು. ಆ ಫೋನಿನ ಕ್ಯಾಮೆರಾದಲ್ಲಿ ತನ್ನ ಎರಡು ಚಿತ್ರಗಳಲ್ಲದೆ ಇತ್ತೀಚೆಗೆ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿ ಅನಾಥಾಶ್ರಮದಲ್ಲಿ ಬೆಳೆಯುತ್ತಿರುವ ತನ್ನ ಗೆಳತಿಯ ಮಗುವಿನ ಫೋಟೋವೊಂದನ್ನು ತೆಗೆದಿರುವುದಾಗಿಯೂ ಹೇಳಿದಳು.
ಹಳೆಯ ಸುಶೀಲಳ ಹಾಗು ಆ ಮಗುವಿನ ಭಾವಚಿತ್ರವನ್ನು ಪರೀಕ್ಷಿಸಲಾಗಿ, ಸುಶೀಲ ತನ್ನ ಸಾತ್ವಿಕ ಸೌಂದರ್ಯದಿಂದ ಕಂಗೊಳಿಸಿದರೆ, ಮಗುವು ಎಲ್ಲ ಮಕ್ಕಳಂತೆ ಮುದ್ದಾಗಿತ್ತು!!
ಯೋಗೀಶನನ್ನು ಉದ್ದೇಶಿಸಿ ಏನಾದರೂ ಹೇಳುವುದಿದೆಯೇ ಕೇಳಿದರು, ಇಲ್ಲವೆಂದು ತಲೆ ಅಲ್ಲಾಡಿಸಿದ.
ಮಧ್ಯಂತರ ವಿರಾಮ ಘೋಷಿಸಿ, ಒಂದು ಗಂಟೆಯ ನಂತರ ಮತ್ತೆ ಸೇರಬೇಕೆಂದು ಸೂಚಿಸಿದರು.
ಚಿದಂಬರ -ಸಿದ್ಧಯ್ಯ ಒಳಗೆ ನಡೆದರು. ಸುಶೀಲ ಎಂದಿನಂತೆ ಗಂಭೀರವಾಗಿ ತಲೆತಗ್ಗಿಸಿ ಹೊರನಡೆದಳು. ಯೋಗೀಶ ಸ್ವಲ್ಪ ಮೆತ್ತಗಾದಂತೆ ಇದ್ದ.
ವಿಚಾರ ವಿನಿಮಯದ ಬಳಿಕ ಒಂದು ನಿರ್ಧಾರಕ್ಕೆ ಬಂದ ಸಿದ್ಧಯ್ಯ -ಚಿದಂಬರರು ಒಂದು ರೀತಿಯ ನೆಮ್ಮದಿಯ ನಿಟ್ಟುಸಿರು ಬಿಟ್ಟರು.ಅಂದಿನ ಊಟ ಅವರಿಗೆ ಹೊಸ ರುಚಿಯ ಅನುಭವ ನೀಡಿತು.
ಎಲ್ಲರೂ ತಿರುಗಿ ಬಂದ ನಂತರ ಚಿದಂಬರ ಮೂರ್ತಿ ಸುಶೀಲೆಯನ್ನು ಉದ್ದೇಶಿಸಿ,.ಸತ್ಯವಾನನ ಸಾವಿನಿಂದ ಸುಶೀಲೆಗಾದ ದುಃಖಕ್ಕೆ ಸಂತಾಪ ವ್ಯಕ್ತಪಡಿಸಿ ಆತ ಆಕೆಯ ಬಳಿ ಬೇರೆ ಏನನ್ನದರೂ ಉಳಿಸಿ ಹೋಗಿದ್ದಾನೆಯೇ ಎಂದು ಕೇಳಿದರು.
ಹೌದೆಂದು ತಲೆ ಆಡಿಸಿದ ಅವಳು ಕೆಲವು ಕಾಗದದ ಹಾಳೆ ಗಳನ್ನೂ, ಒಂದು ನೋಟ್ ಪುಸ್ತಕವನ್ನೂ ಇಟ್ಟಿದ್ದಿದ್ದಾಗಿಯೂ, ಅವುಗಳ ಅಂಕಿ- ಸಂಖ್ಯೆಗಳು, ರೇಖಾಚಿತ್ರಗಳೂ, ಸಾಂಕೇತಿಕ ಚಿನ್ಹೆಗಳು ತನಗೆ ಅರ್ಥವಾಗಲಿಲ್ಲವೆಂದೂ, ಅವನ ಮರಣಾನಂತರ, ಎಸೆಯಲು ಮನಸ್ಸಾಗದೆ ಅಟ್ಟದ ಮೇಲೆ ಇಟ್ಟಿರುವುದಾಗಿಯೂ ಹೇಳಿದಳು.
ಅದನ್ನು ತಂದು ಕೊಡುವುದು ಸಾಧ್ಯವೋ? ಕೇಳಿದರು
ಅಗಬಹುದೆಂದು ಅವಳು ನುಡಿದ ನಂತರ ಸಿದ್ಧಯ್ಯನವರೇ ತಮ್ಮ ಜೀಪಿನಲ್ಲಿ ಕರೆದೊಯ್ದು ನೋಡಿದಾಗ ಕೆಲವು ಜೀರ್ಣವಾಗಿ, ಮಳೆಯ ನೀರಿನಲ್ಲಿ ತೊಪ್ಪೆಯಾಗಿ, ಇನ್ನಷ್ಟು ಹರಿದು ಹೋಗಿ, ಅಕ್ಷರಗಳು ಚಿತ್ರಗಳು ಅಳಿಸಿ ಹೋಗಿದ್ದವು.
ಕೋರ್ಟಿನ ಸಮಕ್ಷಮದಲ್ಲಿ ಪರೀಕ್ಷಿಸಿದ ಚಿದಂಬರ ಸಿದ್ಧಯ್ಯ ಇಬ್ಬರೂ ನಿಟ್ಟುಸಿರು ಬಿಟ್ಟರು.
******* ******* ******
ತೀರ್ಪು ನೀಡುವ ಸಮಯ. ಕೋರ್ಟಿನ ಅವರಣದಲ್ಲಿ ಗದ್ದಲ ಗುಸು-ಗುಸು ಪ್ರಾರಂಭವಾಯ್ತು. ನಿಮಿಷದಿಂದ ನಿಮಿಷಕ್ಕೆ ಹೆಚ್ಚುತ್ತಲೇ ಹೋಯ್ತು. ಗಲಾಟೆ ನಿಲ್ಲಿಸಲು ನ್ಯಾಯಾಧೀಶರ ಸುತ್ತಿಗೆ ಮೇಜನ್ನು ಬಡಿಯುವಾಗ ಕೆಳಗೆ ಸಿಕ್ಕ ಸುಶೀಲಳ ಫೋನು ಪುಡಿ ಪುಡಿಯಾಯ್ತು.ಚಿದಂಬರ ಕುಟ್ಟುತ್ತಲೇ ಇದ್ದರು. ಗಲಾಟೆ ಕಡಿಮೆಯಾಯ್ತು.
ತೀರ್ಪಿಗೆ ಎಲ್ಲರೂ ಕಿವಿ ನಿಮಿರಿಸಿದರು. ತೀರ್ಪು ಸುಶೀಲಳ ಪರವಾಗಿ ಬಿತ್ತು. ಚಿದಂಬರ, ಯೋಗೀಶನನ್ನೇ ಗಮನಿಸುತ್ತ ,ಸುಶೀಲ ತನ್ನ ಸಾಮರ್ಥ್ಯದ ಪರಿಮಿತಿಯಲ್ಲಿ ಪ್ರಾಮಾಣಿಕವಾಗಿ ವ್ಯವಹರಿಸಿದ ಕಾರಣ ಇದರಲ್ಲಿ ಅವಳ ತಪ್ಪು ಸಾಬೀತಾಗುವುದಿಲ್ಲವೆಂದೂ, ಈ ವ್ಯವಹಾರದಲ್ಲಿ ಸಾಂದರ್ಭಿಕ ಕಾರಣಗಳಿಂದ ಹೊಂದಾಣಿಕೆಯಾಗದೆ ಯೋಗೀಶನ ಉದ್ದೇಶ ಸಾಧನೆ ಆಗದೆ ರಸಾಭಾಸ ಅನುಭವಿಸಿದ್ದಕ್ಕಾಗಿ ತಮ್ಮ ಮನಃಪೂರ್ವಕ ಸಹಾನುಭೂತಿ ಇದೆಯೆಂದೂ, ಈ ರೀತಿಯ ಕಟ್ಟಳೆ ತಮಗೆ ಹೊಸ ಅನುಭವವೆಂದೂ, ಇದಕ್ಕೆ ಸಂಬಂಧಿಸಿದಂತೆ ಕಾನೂನು ಮೌನಿಯೆಂದೂ, ಮಾನವೀಯತೆಯನ್ನು ಪ್ರಮುಖ ಅಧಾರವಾಗಿಟ್ಟುಕೊಂಡು ತಮ್ಮ ತೀರ್ಪನ್ನು ನೀಡಿದ್ದಾಗಿಯೂ ವಿವರಿಸಿ ಈ ಕಲಾಪದ ನಂತರ ಇಬ್ಬರೂ ಬಂದು ತಮ್ಮನ್ನು ಭೇಟಿಯಾಗಬೇಕೆಂದು ಸೂಚಿಸಿ ಒಳನಡೆದರು.
ಸಿದ್ಧಯ್ಯ ತಾವೇ ಖುದ್ದಾಗಿ ಯೋಗೀಶ ಸುಶೀಲರನ್ನು ನ್ಯಾಯಾಧೀಶರ ಖಾಸಗೀ ಕೋಣೆಗೆ ಕರೆದೊಯ್ದರು. ಅವರನ್ನು ಸ್ವಾಗತಿಸಿ ಕಾಫೀ ತಿಂಡಿಗಳಿಂದ ಸತ್ಕರಿಸಿದ ಚಿದಂಬರ ಮೂರ್ತಿ ಬಲು ಅಪ್ಯಾಯತೆಯಿಂದ ಅವರ ಕುಶಲ ವಿಚಾರಿಸಿದರು. ಖಟ್ಲೆಯಲ್ಲಿ ಸೋತ ಯೋಗೀಶನ ನಡತೆಯಲ್ಲಿ ಮುಖ ಭಾವದಲ್ಲಿ ಯಾವ ಅಸಮಾಧಾನವೂ ಇರಲಿಲ್ಲ. ಆದರೆ, ಸುಶೀಲೆಯಿಂದ ದೂರಸರಿದು ಕುಳಿತ ಅವನು ಅವಳೊಡನೆ ಯಾವುದೇ ಮಾತುಕತೆಯಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ.
ಚಿದಂಬರ ಮೂರ್ತಿಗಳು ವಿಷಯಕ್ಕೆ ಬಂದರು. ಸುಶೀಲಳ ಬಳಿಯಿದ್ದ ಕ್ಯಾಮೆರಾ ವಿಶೇಷವಾದ ಕ್ಯಾಮೆರಾ ಎಂದೂ ಅದು ಕಣ್ಣಿನ ಮೂಲಕ ತಾನು ಚಿತ್ರ ತೆಗೆಯುವ ಮನುಷ್ಯನ ಆ ಕ್ಷಣದ ಅಂತರಂಗವನ್ನು ಭೇದಿಸಿ ಅದನ್ನು ಮುಖಚಹರೆಯೊಂದಿಗೆ ಮಿಳಿತಗೊಳಿಸಿ ಪರದೆಯ ಮೇಲೆ ಮೂಡಿಸಬಲ್ಲ ಅನೂಹ್ಯ ಸಾಧನವಾಗಿತ್ತೆಂದೂ ತಮ್ಮ ಪ್ರಾಯೋಗಿಕ ಸಂಶೋಧನೆಗಳಿಂದ ಅದು ಧೃಢಪಟ್ಟು ಅದರಿಂದುಂಟಾಗಬಹುದಾದ ಅಲ್ಲೋಲ ಕಲ್ಲೋಲಗಳನ್ನು ತಪ್ಪಿಸಲು ಕೋರ್ಟಿನಲ್ಲಿ, ಎಲ್ಲರ ಸಮಕ್ಷಮದಲ್ಲಿ ಅದನ್ನು ತಾವೇ ಕೈಯ್ಯಾರ ಕುಟ್ಟಿ ಪುಡಿ ಮಾಡಿದೆಯೆಂದೂ, ಅದಕ್ಕಾಗಿ ಸಿದ್ಧಯ್ಯ ಗದ್ದಲ ನಡೆಯುವ ವ್ಯವಸ್ಥೆ ಮಾಡಿದರೆಂದೂ ಹೇಳಿದರು.
ಇವರಿಬ್ಬರಿಗೂ ನಂಬಲಾಗಲಿಲ್ಲ!!
ಸಿದ್ಧಯ್ಯ ತಾವು ಫೋನನ್ನು ಪರೀಕ್ಷಿಸಿದ್ದು, ಹೋಟೆಲಿನಲ್ಲಿ ಆದ ನಾಯಿಯ ಪ್ರಹಸನ,ಅದರ ಮಾಲಿಕರನ್ನು ವಿಚಾರಣೆಗೆ ಒಳಪಡಿಸಿದಾಗ ಹೊರಬಿದ್ದ ಸತ್ಯ, ಅದರಿಂದ ತಾವು ಫೋನು, ಅದರಲ್ಲಿರುವ ಕ್ಯಾಮೆರಾದ ಜಗದಾಶ್ಚರ್ಯಕರವಾದ ಶಕ್ತಿ,ಅದರ ಸಾರ್ವತ್ರಿಕ ಉಪಯೋಗದಿಂದ ಆಗುವ ಪರಿಣಾಮಗಳ ಸಾಧ್ಯತೆ ಬಾಧ್ಯತೆಗಳ ವಿಚಾರ,ತಾವಿಬ್ಬರೂ ನಿದ್ದೆಗೆಟ್ಟು ಮಾಡಿದ ಕೆಲಸಗಳು, ಯೋಚನೆಗಳು, ವಿಚಾರ ವಿನಿಮಯಗಳು ಎಲ್ಲವನ್ನು ತಿಳಿಸಿದರು.
ವೃತ್ತಿಯಿಂದ ತಂತ್ರಜ್ಞನಾದ ಯೋಗೀಶನ ಕುತೂಹಲ ಕೆರಳಿತು. ”ಈ ರೀತಿಯ ಸಾಧನದಿಂದ ಮನುಷ್ಯ ಮನುಷ್ಯನನ್ನು ಅರಿಯಲು ಬಹಳ ಸಹಕಾರಿಯಲ್ಲವೇ ಸಾರ್. ಅದನ್ನು ಹಾಳುಗೆಡವಿ ನೀವು ಅನ್ಯಾಯ ಮಾಡಿದಿರಿ, ಅದ್ಭುತ ಆವಿಷ್ಕಾರವನ್ನು ನಿರ್ನಾಮ ಮಾಡಿದಿರಿ.ಭಿನ್ನಾಭಿಪ್ರಾಯಗಳನ್ನು,ಸಂಬಂಧಗಳನ್ನು ಮುರಿಯುವ ಸಂದರ್ಭಗಳನ್ನು ಸುಲಭವಾಗಿ ನಿವಾರಿಸಬಹುದಿತ್ತು. ಎಂತಹ ಅಕಾರ್ಯ”” ಯೋಗೀಶ ಹಲುಬಿದ.
ಸಿದ್ಧಯ್ಯ ನಿಧಾನವಾಗಿ ಹೇಳಿದರು. ” ನೋಡು ಯೋಗೀಶ್,ಎಲ್ಲರೂ ನಿನ್ನಂತೆ ನ್ಯಾಯಾನ್ಯಾಯಗಳ ವಿವೇಚನೆ ಇರುವ ಜೀವಿಗಳಾಗಿದ್ದರೆ ಸರಿ. ಆದರೆ ಈ ಪ್ರಪಂಚ ಹಾಗಲ್ಲ. ಈ ಉಪಕರಣ ಸಿಕ್ಕಿದರೆ ಕೋತಿಗೆ ಕಳ್ಳು ಕುಡಿಸಿದಂತೆ. ಮನುಷ್ಯನಿಗೆ ಮನುಷ್ಯನ ಮೇಲಿನ ನಂಬಿಕೆ ಕುಸಿಯುತ್ತದೆ.ಸರಿಯೋ ತಪ್ಪೋ ಈ ಜಗತ್ತು ನಡೆಯುವುದೇ ನಂಬಿಕೆ ಮೇಲೆ. ಇದರ ಜೊತೆಗೆ ಸಮಾಜದಲ್ಲಿ ಸ್ವಲ್ಪ ಮಟ್ಟಿಗಾದರೂ ನೀತಿ ನಿಯಮಗಳ ಚೌಕಟ್ಟು ಇರುವುದರಿಂದ ಅನ್ಯಾಯ ಅಕ್ರಮಗಳು ಹದ್ದುಬಸ್ತಿನಲ್ಲೇ ಇರುತ್ತವೆ. ಅವು ಮಿತಿ ಮೀರಿದಾಗ ಸಮಾಜ ಒಂದು ಬಗೆಯ ಯುಗ ಪಲ್ಲಟಕ್ಕೊಳಗಾಗಿ ಮತ್ತೆ ಹೊಸ ಸಮತೋಲನ ಪಡೆಯುತ್ತದೆ. ಇದೆಲ್ಲವೂ ತನ್ನಿಂತಾನೆ,ತನ್ನೊಳಗಿನಿಂದ ಮೂಡುವ, ನಡೆಯುವ, ಆಗುವ ಪ್ರಕ್ರಿಯೆಯಾದರೇ ಸರಿ. ಲಾಭ ನಷ್ಟ ಸಾವು ನೋವು ಆಯಾ ಸಂದರ್ಭಕ್ಕೆ ತಕ್ಕಂತೆ ಆಗುತ್ತವೆ. ಇಷ್ಟಕ್ಕೂ ಈ ಸಾಧನ ಅನುಮಾನಗಳನ್ನು ಬಲಗೊಳಿಸುವುದೇ ವಿನಃ ತೊಡೆದು ಹಾಕುವ ಸಾಧನವಾಗಲಾರದು.ಒಬ್ಬರ ಮೇಲೆ ಇನ್ನೊಬ್ಬರಿಗಿರಲಿ,ವ್ಯಕ್ತಿ ತನ್ನನ್ನು ತಾನೇ ನಂಬದಂತಾಗುವ ಹಾಗಾಗಿ ಮಾನಸಿಕ ಕ್ಷೋಭೆಗೆ ತುತ್ತಾಗಿ ಸಮಾಜದಲ್ಲಿ ಸಮೂಹ ಸನ್ನಿಯ ಸುನಾಮಿ ಏಳುವುದು ನಿಸ್ಸಂದೇಹವಾಗಿ ಸಾಧ್ಯ. ಆದ್ದರಿಂದಲೇ ನಾವೀ ಈ ಕಷ್ಟಸಾಧ್ಯ ನಿರ್ಧಾರಕ್ಕೆ ಬಂದೆವು ಎಂದರು.
“”ಇನ್ನೂ ಸ್ವಲ್ಪ ವಿವರಿಸುವಿರಾ”” ಸುಶೀಲ ಕೇಳಿದಳು
”ಏಕಿಲ್ಲ” ಎಂದ ಸಿದ್ಧಯ್ಯ ಹೇಳಿದರು. ”ಎದುರಲ್ಲಿ ನಿಂತ ನಿನಗೂ,ಈ ಫೋನಿನಲ್ಲಿ ಮೂಡಿದ ಫೋಟೊ ಗೂ ಸಾಮ್ಯತೆ ಇಲ್ಲದಿದ್ದಾಗ ಇಲ್ಲಿ ಎಲ್ಲವೂ ಸರಳ ವಾಗಿಲ್ಲವೆಂಬ ಅನುಮಾನ ಬಂತು. ಈ ಅನುಮಾನಗಳನ್ನು ಪರಿಹರಿಸಿಕೊಳುವ ವ್ಯವಸ್ಥಿತ ಯೋಜನೆಯೊಂದನ್ನು ನಾವು ರೂಪಿಸಿಕೊಂಡೆವು. ಇದರಲ್ಲಿ ನೀವಿಬ್ಬರೂ ಸುಳ್ಳು ಹೇಳದ ಪ್ರಾಮಾಣಿಕರೆಂದು ನಮಗಾಗಲೇ ಮನವರಿಕೆಯೂ ಆಗಿತ್ತು. ಒಂದೊಂದೇ ಕೊಂಡಿಗಳನ್ನು ಜೋಡಿಸುತ್ತ ಬಂದಾಗ ನಿನ್ನ ಯಥಾರೂಪ,ಕ್ಯಾಮೆರಾ,ಯೋಗೀಶನ ಬಳಿ ಇದ್ದ ಚಿತ್ರ ಹಾಗೂ ಅವುಗಳ ಭಿನ್ನತೆ ಮತ್ತು ಈ ವಿಷಯಗಳ ಅರ್ಥ ಕಲ್ಪಿಸುವ ಕೊಂಡಿ ನಮಗೆ ಸಿಗದ ಕಾರಣ ನಿನ್ನ ಕ್ಯಾಮೆರಾವನ್ನು ಪರೀಕ್ಷೆಗೆ ಒಳಪಡಿಸುವ ನಿರ್ಧಾರ ಮಾಡಿದೆವು. ಇದು ಒಂದು ವಿಶೇಷ ಮಸೂರದ ಮೂಲಕ ಕಣ್ಣಿನ, ಮುಖದ ಸ್ನಾಯುಗಳ ವಿದ್ಯುತ್ತರಂಗಗಳನ್ನು ಸೆರೆಹಿಡಿದು ತನ್ನೊಳಗಿರುವ ತಂತ್ರಾಂಶಕ್ಕೆ ರವಾನಿಸುತ್ತದೆ.ಅದು ತನ್ನ ಪ್ರೊಟೋಕಾಲ್ಗೆ ಅನುಸಾರವಾಗಿ ವ್ಯಕ್ತಿಯ ಮನಸ್ಥಿತಿಯನ್ನು ವ್ಯಕ್ತಿತ್ವವನ್ನು ಗೊತ್ತು ಹಿಡಿದು ಅದನ್ನು ಮುಖಚಹರೆಗೆ ಆರೋಪಿಸಿ ಅದರನುಸಾರವಾಗಿ ರೂಪುಗೊಂಡ ಆ ವ್ಯಕ್ತಿಯ ಚಿತ್ರವನ್ನು ಪರದೆಗೆ ರವಾನಿಸುತ್ತದೆ. ನೀನು ಸದಾ ನಿರ್ಮಲ ಚಿತ್ತಳಾಗಿರುವ ಕಾರಣ ನಿನ್ನ ಸೌಂದರ್ಯ ಆ ಫೋಟೋದಲ್ಲಿ ವೃದ್ಧಿಸಿತ್ತು. ಯೋಗೀಶ ಕೂಡಾ ಸ್ಫುರದ್ರೂಪಿಯೇ ಆಗಿದ್ದ. ನಿಷ್ಕಲ್ಮಷ ಮನಸ್ಸಿನ ಮಗು ಮುದ್ದಾಗಿ ಕಂಗೊಳಿಸಿತ್ತು. ಆದರೆ ತಾವು ಪರೀಕ್ಷಾತ್ಮಕವಾಗಿ ತೆಗೆದ ಹಲವಾರು ಇತರರ ಚಿತ್ರಗಳು ಅವರ ಮನಸ್ಥಿತಿಗೆ ,ಆಲೋಚನೆಗೆ ಹೊಂದಾಣಿಕೆ ತೋರಿಸಿ ಕೆಲವರನ್ನೂ ಕುರೂಪಿಗಳಾಗಿಯೂ ತೋರಿಸಿತು!. ಅದರಿಂದ ನಮ್ಮ ಸಂಶೋಧನೆಗಳ ಮೇಲಿನ ನಂಬಿಕೆ ಬಲಗೊಂಡು ನಿನ್ನಿಂದ ಹಲವು ವಿವರಗಳನ್ನು ಪಡೆದೆವು.ಅನಂತರದಲ್ಲಿ ಸಾಧಕ ಬಾಧಕಗಳನ್ನು ತರ್ಕಿಸಿದೆವು. ಮೂಲಭೂತವಾಗಿ ಇದು ” ಹೃದಯಕೆ ಕಣ್ಣೇ ಸಾಕ್ಷಿ” ಅಥವಾ ’ಫೇಸ್ ಈಸ್ ದ ಇಂಡೆಕ್ಸ್ ಆಫ್ ಮೈಂಡ್” ಎಂಬ ದಾರ್ಶನಿಕರ ಹೇಳಿಕೆಯನ್ನು ಸಾಕಾರಗೊಳಿಸುವ ಅಭೂತಪೂರ್ವ ಆವಿಷ್ಕಾರ. ಆದರೆ ಸತ್ಯ ಯಾವಾಗಲೂ ಸಹ್ಯವಲ್ಲ. ಅದು ಅಲ್ಲದೆ ಎಲ್ಲರೂ ಎಲ್ಲಾ ಸಮಯದಲ್ಲೂ ಸತ್ಯ ನುಡಿಯಲಾರರು.ಹಲವಾರು ಸಂದರ್ಭಗಳಲ್ಲಿ ಸುಳ್ಳುಹೇಳುವುದು ಅನಿವಾರ್ಯವಾಗುತ್ತದೆ. ಜಗತ್ತಿನಲ್ಲಿ ಎಷ್ಟೋ ಬಗೆಯ ಜನಗಳು ಇರುತ್ತಾರೆ. ಒಬ್ಬಬ್ಬರ ಮನೋವ್ಯಾಪಾರವೂ ವಿಭಿನ್ನ. ಈ ವೈವಿಧ್ಯತೆಯಲ್ಲಿ ಏಕತೆ ಮೂಡಿ ಜೀವಿಗಳ ನಡುವಿನ ವ್ಯಾಪಾರ ನಡೆಯುವುದು ನಂಬಿಕೆಯಿಂದ. ಈ ನಂಬಿಕೆ ಗಳು ಬೆಳೆಯಬೆಕಾದರೆ ಏನು ಮಾಡಬೇಕು -ಏನು ಮಾಡಬಾರದು ಎಂಬುದು ನಿಮ್ಮ ಅನುಭವಕ್ಕೆ ಬಂದೇ ಇರುತ್ತದೆ.ಈ ರೀತಿಯ ಕ್ಯಾಮೆರಾ ಸರ್ವವ್ಯಾಪಿಯಾಗಿ ಬಳಕೆಗೆ ಬಂದರೆ ಏನಾಗಬಹುದು ನೀವೇ ಯೋಚಿಸಿ. ಜನಗಳು ಮಾತುಕೇಳಿಸಿಕೊಳ್ಳದೆ ಕ್ಯಾಮೆರಾ ನಿಮ್ಮ ಮುಖಕ್ಕೆ ಹಿಡಿದು ಕೂಡಬಹುದು; ಕೋತಿಗೆ ಮಾಣಿಕ್ಯ ಕೊಟ್ಟಂತಾಗುತ್ತದೆ ಪರಿಸ್ಥಿತಿ. ಹಿಟ್ಲರ್ ಅಥವಾ ಸ್ಟಾಲಿನ್ ರಂತಹ ನರಹಂತಕರ ಕೈಗೆ ಸಿಕ್ಕಿದರೆ, ದುರ್ಮಾರ್ಗಿಗಳ ವಶವಾದರೆ ಆಗಬಹುದಾದ ಅನಾಹುತ ಊಹಿಸಿಕೊಳ್ಳಿ. ನಮ್ಮ ಸುತ್ತಲೂ ಇರುವ ಧೂರ್ತರ ಸಂತೆ ನೋಡಿಯೇ ನಾವು ಈ ವಿಷಯವನ್ನು ಯಾವುದೇ ಕಾರಣಕ್ಕೆ ಬಹಿರಂಗ ಗೊಳಿಸದಂತೆ ಗುಟ್ಟು ಕಾಯ್ದುಕೊಂಡೆವು.ಈ ಉಪಕರಣ ಯಾರ ಅರಿವಿಗೂ ಬಾರದಂತೆ ಮರೆಯಾದರೆ ಒಳಿತು ಎಂಬ ನಮ್ಮ ಮನಸ್ಸಾಕ್ಷಿಯ ತೀರ್ಪಿಗೆ ಅನುಗುಣವಾಗಿ ನಡೆದೆವು. ಇದಕ್ಕೆ ನಿಮ್ಮ ಕ್ಷಮೆ ಇರಲಿ ಎಂದು ಹೇಳಿ ನಿಲ್ಲಿಸಿದರು.
ಯೋಗೀಶ ಸುಶೀಲಳ ಮುಖ ನೋಡಿದ. ಹೊಸ ಕ್ಯಾಮೆರಾದಂತಾದ ಅವನ ಕಣ್ಣಿಗೆ ಅವಳು ಅಪ್ರತಿಮ ಸುಂದರಿಯಾಗಿ ಕಾಣಿಸಿದಳು. ಮೆಟ್ಟಿಲುಗಳನ್ನಿಳಿದು ಜೊತೆಗೆ ಹೋಗುವಾಗ ಅವನ ಅಂತರಾತ್ಮನ ತೀರ್ಪಿಗೆ ಬದ್ಧನಾಗಿ ಅವಳ ಕೈಹಿಡಿದ. ಸುಶೀಲ ಆಕ್ಷೇಪಿಸಲಿಲ್ಲ.

*******************************************************************
ಸುದರ್ಶನ ಗುರುರಾಜರಾವ್.