ಶಕುಂತಲಾ

ಶಕುಂತಲಾ
ಬೆಂಗಳೂರಿನ ಗೌಜು ಗದ್ದಲಗಳಿಂದ ಮುಕ್ತರಾಗಿ ಪ್ರಶಾಂತವಾದ ವಾತಾವರಣದಲ್ಲಿ ತಮ್ಮ ನಿವೃತ್ತ ಜೀವನವನ್ನು ಕಳೆಯುವುದು ಸುಧಾಕರ ಹಾಗೂ ರಮ್ಯಾ ದಂಪತಿಗಳ ಕನಸು.ಅದರಂತೆಯೇ ನಿವೃತ್ತಿಯಾದಾಗ ಬಂದ ಹಣವನ್ನು ಒಟ್ಟುಗೂಡಿಸಿ, ತಮ್ಮಲ್ಲಿದ್ದ ಎರಡು ನಿವೇಶನಗಳನ್ನು ಮಾರಿ ಬಂದ ಹಣದಲ್ಲಿ ಮೈಸೂರಿನಲ್ಲಿ ಅನುಕೂಲಕರವಾದ ಮನೆಯೊಂದನ್ನು ಖರೀದಿಸಿದ್ದರು. ಎರಡು ಅಂತಸ್ತಿನ ಮನೆಗೆ ಒಳಗಡೆಯಿಂದಲೇ ಮೆಟ್ಟಿಲುಗಳಿದ್ದು ಮೇಲಿನ ಮಜಲಿನಲ್ಲಿದ್ದ ಕೋಣೆಗಳನ್ನು ಮಲಗಲು ಉಪಯೋಗಿಸುತ್ತಿದ್ದರು. ರಮ್ಯಾ ಸುಧಾಕರನಿಗಿಂತ ಮೂರು ವರ್ಷ ಚಿಕ್ಕವರಾಗಿದ್ದರೂ ಸ್ವಯಮ್ ಪ್ರೇರಣೆಯಿಂದ ನಿವೃತ್ತಿ ತೆಗೆದುಕೊಂಡಿದ್ದರು. ಇದ್ದ ಒಬ್ಬಳೆ ಮಗಳು ಶಕುಂತಲ ಡಾಕ್ಟರಾಗಿ ಸ್ನಾತಕೋತ್ತರ ಪದವಿ ಪಡೆದು ಮೈಸೂರಿನಲ್ಲೇ ಪ್ರತಿಷ್ಟಿತ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಮಹಡಿಯ ಮೇಲಿನ ಕೋಣೆಯಲ್ಲಿ ಅಂದು ಕುಳಿತು ಶಕುಂತಲೆಯ ಬಗೆಗೇ ಮಾತುಕತೆ ನಡೆಸುತ್ತಿದ್ದರು.
ಎಲ್ಲ ತಂದೆ ತಾಯಿಗಳಂತೆ ಬೆಳೆದ ಮಗಳಿಗೆ ಮದುವೆ ಮಾಡಿ ಕಳಿಸುವ ಯೋಚನೆ ಇವರಿಗೂ ಇತ್ತು. ಓದಿದ, ಲಕ್ಷಣವಾಗಿರುವ, ಬುದ್ಧಿವಂತ,ಚುರುಕು ಬುದ್ಧಿಯ ಹಾಗೂ ಗೌರವಾನ್ವಿತ,ಸ್ಥಿತಿವಂತ ತಂದೆ ತಾಯಿಯರಿರುವ ಅವಳಿಗೆ ಗಂಡು ಸಿಗುವುದೇನೂ ಕಷ್ಟದಾಯಕವಾದ ಕೆಲವಾಗಿರಲಿಲ್ಲ. ಅದೂ ಉತ್ತಮ ಸಂಸ್ಕೃತಿ, ಹಿನ್ನೆಲೆ ಇರುವ ಹೆಣ್ಣುಗಳಿಗೇ ಬರ ಬಂದಿರುವ ಈಗಿನ ಕಾಲದಲ್ಲಿ!. ಆದರೆ ಅವರ ಮುಂದಿದ್ದ ಸಮಸ್ಯೆಯೇ ಬೇರೆ. ಶಕುಂತಲಾಳ ಜನ್ಮ ರಹಸ್ಯ.
****
ಸುಧಾಕರ ಮತ್ತು ರಮ್ಯ ಮದುವೆಯಾಗಿ ಹನ್ನೆರೆಡು ವರ್ಷ ಕಳೆದಿದ್ದರೂ ಅವರಿಗೆ ಮಕ್ಕಳಾಗಿರಲಿಲ್ಲ. ಅನುರೂಪ ದಂಪತಿಗಳಾದ ಅವರು ಮಕ್ಕಳಗಾಗಿ ಮಾಡದ ಪ್ರಯತ್ನವೇ ಇರಲಿಲ್ಲ.ವ್ರತ, ನೇಮ ನಿಷ್ಠೆ, ತೀರ್ಥಯಾತ್ರೆ, ವೈದ್ಯಕೀಯ ತಪಾಸಣೆ ಹೀಗೆ ಲೌಕಿಕ, ಪಾರಮಾರ್ಥಿಕವಾದ ಎಲ್ಲ ಪ್ರಯತ್ನಗಳನ್ನೂ ಮಾಡಿದ್ದರು.ದತ್ತು ಪಡೆಯೋನ ಎಂದರೆ ಇನ್ನೂ ವಯಸ್ಸು ಮೀರಿರಲಿಲ್ಲ.ಹಣ ಹೀಗೆ ಖರ್ಚು ಮಾಡಿದ್ದರೂ ಸ್ವಭಾವತಃ ವ್ಯವಹಾರ ಚತುರನಾದ ಸುಧಾಕರನ ಹೂಡಿಕೆಗಳು ಫಲ ಕೊಟ್ಟು ಇಂದು ಅವರು ಸ್ಥಿತಿವಂತರಾಗಿರಲು ಕಾರಣವಾಗಿತ್ತು. ಕಡೆಯ ಪ್ರಯತ್ನವಾಗಿ ಮಾಡಿದ ಕೃತಕ ಗರ್ಭಧಾರಣೆ ಫಲವಾವಿ ರಮ್ಯಾ ಕಡೆಗೂ ತನ್ನ ಬಸಿರಲ್ಲಿ ಮಗುವನ್ನು ಹೊತ್ತು ಬೆಳೆಸತೊಡಗಿದ್ದಳು. ಎಲ್ಲ್ಲಾ ಸುಸೂತ್ರವಾಗಿಯೇ ನಡೆದಿತ್ತು.ಹೆರಿಗೆಯ ದಿನಗಳು ಸಮೀಪಿಸುತ್ತಾ ರಕ್ತದೊತ್ತಡದಲ್ಲಿ ಏರು-ಪೇರುಗಳು ಕಾಣಿಸಿಕೊಂಡು ಪ್ಲಾಸೆಂಟಲ್ ಅಬ್ರುಪ್ಷನ್ ಎಂಬ ಪರಿಸ್ಥಿತಿ ಉದ್ಭವಿಸಿ ರಮ್ಯಾ ಪರಿಸ್ಥಿತಿ ಗಂಭೀರವಾಗಿತ್ತು. ಮಗುವಿಗೆ ತೀವ್ರ ತೊಂದರೆಯುಂಟಾಗಿ ಹುಟ್ಟುವಾಗಲೇ ಸಾವನ್ನಪ್ಪಿತ್ತು.ರಮ್ಯಾ ಉಳಿದದ್ದೇ ಒಂದು ಪವಾಡವಾಗಿತ್ತು.
ತುಂಬಿದ ಬಸಿರಿನ ಪರಿಣಾಮಗಳು ರಮ್ಯಾ ಮೈಮೇಲೆ ಆಗದೇ ಇರಲಿಲ್ಲ. ಮಗುವಿಲ್ಲದಿದ್ದರೂ ಎದೆ ಹಾಲು ಉಕ್ಕುತ್ತಿತ್ತು. ಮಗುವಿಲ್ಲದ ನೋವು ಮನಸ್ಸನ್ನು ಘಾಸಿಗೊಳಿಸಿತ್ತು. ಹೀಗಿರುವಲ್ಲಿ ಮೈ ಮನಗಳ ನೋವನ್ನು ಶಮನಗೊಳಿಸಲು ಬಂದ ಮಗುವೇ ಶಕುಂತಲ. ಅಗೆಲ್ಲಾ ಕಾನೂನಿನ ಕಟ್ಟಳೆಗಳು, ಔಪಚಾರಿಕತೆಯ ಕಬಂಧ ಬಾಹುಗಳು,ಮಾನವೀಯತೆಯ ತುಡಿತಗಳನ್ನು ಹಿಡಿತದಲ್ಲಿಟ್ಟು ಕರುಣೆಯ ಕೊರಳ್ನ್ನು ಹಿಸುಕಿ ಉಸಿರು ಕಟ್ಟಿಸುವ ಕಾಲವಾಗಿರಲಿಲ್ಲ. ಅನಾಥವಾಗಲಿದ್ದ ಮಗುವನ್ನು ತಮ್ಮದಾಗಿಸಿಕೊಳ್ಲಲು ಅವರಿಗೆ ಯಾವ ಅಡ್ಡಿ ಅತಂಕಗಳೂ ಎದುರಾಗಲಿಲ್ಲ. ಆಸ್ಪತ್ರೆಯ ಹಿರಿಯ ವೈದ್ಯರು ಹಾಗು ಹಿರಿಯ ಶಶ್ರೂಶಕಿಯರ ಸಹಕಾರ -ಸಹಮತದೊಂದಿಗೆ ಮಗುವನ್ನು ಕರೆದೊಯ್ದು ಸಾಕಿಕೊಂಡರು. ಹಸಿ ಬಾಣಂತಿಯ ಸ್ಥಿತಿಯಲ್ಲೇ ಮಗುವಿನ ಸಾನ್ನಿಧ್ಯ ದೊರೆತದ್ದಕ್ಕೂ, ಎದೆಹಾಲು ಉಣಿಸುವ ಬಾಂಧವ್ಯಕ್ಕೂ ಪಕ್ಕಾಗಿ ರಮ್ಯಾಳಿಗೆ ಈ ಮಗು ತನ್ನದಲ್ಲವೆಂಬ ಭಾವ ಬರಲೇ ಇಲ್ಲ. ಸುಧಾಕರನಲ್ಲಿ ಆ ಬದಲಾವಣೆ ಬರಲು ಸ್ವಲ್ಪ ಕಾಲ ಹಿಡಿಯಿತು. ಎಷ್ಟೆ ಅಂದರೂ ಗಂಡಸಲ್ಲವೇ! ತನ್ನ ಜೀವತಂತು ಹೊತ್ತು ಬಂದಿರದ ಮಗುವನ್ನು ಮುಕ್ತ ಮನಸ್ಸಿನಿಂದ ಅಂಗೀಕರಿಸಲು ಸ್ವಲ್ಪ ಹಿಂಜರಿಕೆಯಾದರೂ, ಸ್ವಭಾವತಃ ವಿಶಾಲ ಹೃದಯಿಯಾದ ಅವರಿಗೆ ಅದೇನೂ ಅಸಾಧ್ಯವಾಗಲಿಲ್ಲ. ಇತ್ತ ಹೆಂಡತಿ ಅರೋಗ್ಯವಾಗಿ ಸಂತೋಷದಿಂದ ಇದ್ದುದು ಅವರಿಗೆ ನೆಮ್ಮದಿಯನ್ನು ತಂದಿತ್ತು. ಮಗುವಿನ ಜಾತಕ ಇತ್ಯಾದಿಗಳಲ್ಲಿ ತಮ್ಮದೇ ಕುಲ, ಗೋತ್ರ ದಾಖಲಿಸಿದ್ದರು.ವ್ಯವಹಾರ ಹಾಗು ಆಡಳಿತಕ್ಕೆ ಸಂಬಂಧಿಇದ ದಾಖಲೆಗಳಲ್ಲೂ ಶಕುಂತಲಾ ಹೆಸರನ್ನೇ ವಾರಸುದಾರಳನ್ನಾಗಿ ನಮೂದಿಸಿದ್ದರು. ಆದರೆ ಸತ್ಯ ಸತ್ಯವೇ. ಸತ್ಯವನ್ನು ಬಚ್ಚಿಡುವುದೋ ಅಥವಾ ಬಿಚ್ಚಿಡುವುದೋ? ಬಿಚ್ಚುವುದಾದರೆ ಹೇಗೆ ಬಿಚ್ಚುವುದು? ಇದರಿಂದ ಆಗಬಹುದಾದ ಸಾಧಕ ಬಾಧಕಗಳೇನು? ಬಚ್ಚಿಡುವುದರಿಂದಾಗುವ ಅನುಕೂಲಗಳೇನು?ಎನೇ ಮಾಡಿದರೂ ಅದರಿಂದೊದಗಬಹುದಾದ ಮುಂಪರಿಣಾಮಗಳಿಗೆ ಹೇಗೆ ತಯಾರಾಗುವುದು? ಮೂಡಬಹುದಾದ ಪ್ರಶ್ನೆಗಳೇನು?ಅವುಗಳಿಗೆ ತಮ್ಮಲ್ಲಿ ಉತ್ತರವಿದೆಯೇ? ಸತ್ಯ ತಿಳಿದು ಶಕುಂತಲ ತಮ್ಮನ್ನು ತೊರೆಯುವ ನಿರ್ಧಾರಕ್ಕೆ ಬಂದರೆ ಏನು ಮಾಡುವುದು? ಅವಳು ತಮ್ಮನ್ನು ದ್ವೇಷಿಸಿದರೆ ಹೇಗೆ ಸ್ವೀಕರಿಸುವುದು? ಸತ್ಯ ತಿಳಿದು ವಿಚಲಿತಳಾಗಿ ಜೀವನದ ಮುಂದಿನ ನಿರ್ಧಾರಗಳನ್ನು ದುಡುಕಿ ತೆಗೆದುಕೊಂಡರೆಏನು ಮಾಡುವುದು?ಅವಳ ನಿರ್ಧಾರಗಳು ಸರಿಕಾಣದೆ ಹೋದರೆ ತಿಳಿಹೇಳಲು ತಮಗೆ ನೈತಿಕ ಹಕ್ಕು ಇರುವುದೇ? ತಾವೇ ಬೆಳೆಸಿದ ಬಳ್ಳಿ ತಮ್ಮ ಕಣ್ಮುಂದೆಯೇ ಬಾಡುವಂತಾದರೆ ನೋಡಿಕೊಂಡು ಸುಮ್ಮನಿರಲಾದೀತೆ? ಹೀಗೆ ನಾನಾ ಯೋಚನೆಗಳು, ಜಿಜ್ಞಾಸೆಗಳು ಅವರ ಮನದಲ್ಲಿ ಪುಟಿದೇಳುತ್ತಿದ್ದವು. ದಿನವೂ ಸುಧಾಕರನ ಮನದಲ್ಲಿ ಕೊರೆಯುತ್ತಿದ್ದ ವಿಚಾರಗಳವು. ಅದಕ್ಕಾಗಿಯೇ ಈ ದಿನ ಧೃಢನಿರ್ಧಾರ ಮಾಡಿಕೊಂಡು ತಮ್ಮ ಈ ಸಮಸ್ಯೆಗಳ ಸಾಧಕ ಬಾಧಕ ಚರ್ಚಿಸಲು ಕುಳಿತಿದ್ದರು. ಸುಧಾಕರ ಒಂದು ಪೆನ್ನು- ಪೇಪರು ತೆಗೆದುಕೊಂಡು ರಮ್ಯಾಳನ್ನೂ ಕುಳ್ಳಿರಿಸಿಕೊಂಡು ತಮ್ಮ ಮನದಲ್ಲಿ ಮೂಡಿದ ಭಾವನೆಗಳಿಗೆ ಒಂದು ಮೂರ್ತರೂಪ ಕೊಡಲು ಪಟ್ಟಿ ಮಾಡುತ್ತ ವಿಶ್ಲೇಷಿಸುತ್ತಾ ಬರೆದಿಡುತ್ತಿದ್ದರು. ರಮ್ಯಾ ನಡು ನಡುವೆ ಮಾತೃ ಸಹಜವಾದ, ಸ್ತ್ರೀ ಸಹಜವಾದ ಭಾವಾತಿರೇಕಕ್ಕೆ ಒಳ್ಗಾಗಿ ಅಳುವುದೂ,ಬಿಕ್ಕಳಿಸುವುದೂ ನಡೆಸಿದ್ದರೂ ಅವಳನ್ನು ಸಮಾಧಾನಗೊಳಿಸುತ್ತ,ತಿಳಿಹೇಳುತ್ತ ಈ ಸೂಕ್ಷ್ಮವಾದ ವಿಚಾರದಲ್ಲಿ ಆದಷ್ಟೂ ವಸ್ತುನಿಷ್ಠವಾಗಿ ಆಲೋಚಿಸಲು ಉತ್ತೇಜಿಸುತ್ತದ್ದರು. ಎರಡು ಮೂರು ಗಂಟೆಗಳ ಕಾಲ ವಿಚಾರ ವಿನಿಮಯ ಮಾಡಿ ಬಳಲಿದ ಜೀವಗಳು ಹಾಗೆಯೇ ನಿದ್ರೆ ಹೋದರು.
ಅಂದು ಶಕುಂತಲಾ ನಾಲ್ಕು ಗಂಟೆಗೇ ಕೆಲಸ ಮುಗಿಸಿ ಮನೆಗೆ ಬಂದಳು. ತಾಯಿಗಾಗಿ ಅವಳ ಇಷ್ಟದ ಧಾರವಾಹಿಗಳ ಡಿ.ವಿ.ಡಿ ಗಳನ್ನೂ, ತಂದೆಗಾಗಿ ಒಂದು ಟ್ಯಾಬ್ಲೆಟ್ ಕಂಪ್ಯೂಟರನ್ನೂ ಕೊಂಡು ತಂದವಳು ಅಚ್ಚರಿಯ ಉಡುಗೊರೆಯಾಗಿ ಅವರಿಗೆ ಕೊಡಲೆಂದು ಸದ್ದಿಲ್ಲದೆ ಒಳಗೆ ಬಂದಾಗ ಅವರಿಬ್ಬರೂ ಗಾಢ ನಿದ್ರೆಯಲ್ಲಿದ್ದರು. ಅವರವರ ಉಡುಗೊರೆಗಳನ್ನು ಅವರವರ ಪಕ್ಕದಲ್ಲಿಟ್ಟು ಅಲ್ಲಿದ್ದ ಕಾಗದಗಳನ್ನು ಕಂಡು ತನ್ನ ಮದುವೆಗೆ ತಯಾರಿ ನಡೆಸಿರಬಹುದೆಂದು ಯೋಚಿಸಿ ಹೊರಳಿದವಳ ಕಣ್ಣಿಗೆ ಸಾಧ್ಯತೆ-ಬಾಧ್ಯತೆ ಎಂಬ ಒಕ್ಕಣೆಯೂ,ತನ್ನ ಹೆಸರೂ ಅಲ್ಲಲ್ಲಿ ಇಣುಕಿರುವುದೂ ನೋಡಿದಳು. ಒಂದಕ್ಕೊಂದು ಸಂಬಂಧ ಇದೆಯೋ ಇಲ್ಲವೋ ಎಂಬಂತ್ತಿದ್ದ ಒಕ್ಕಣೆಗಳು ಅವಳಿಗೆ ನೇರವಾಗಿ ಅರ್ಥ ಆಗಲಿಲ್ಲ. ಕುತೂಹಲ ಮೂಡಿದರೂ, ಇದುವರೆಗೆ ಬರೀ ವಾತ್ಸಲ್ಯವನ್ನೇ ಸುರಿದಿದ್ದ ತಂದೆ ತಾಯಿಗಳನ್ನು ಸಂಶಯಿಸಲು ಅವಳಿಗೆ ಯಾವ ಕಾರಣಗಳೂ ಇರಲಿಲ್ಲ. ಕಾಗದ ಅಲ್ಲಿಯೇ ಬಿಟ್ಟು ಮುಖತೊಳೆದು ಬಟ್ಟೆ ಬದಲಾಯಿಸಿ ಕೆಳಗೆ ಹೋದಳು.
ಸಂಜೆ ಐದೂವರೆ ವೇಳೆಗೆ ಗಡಿಬಿಡಿಯಿಂದೆದ್ದ ರಮ್ಯಾ-ಸುಧಾಕರ ತಮ್ಮ ಪಕ್ಕದಲ್ಲಿದ್ದ ಉಡುಗೊರೆಯ ಡಬ್ಬಿಗಳನ್ನು ಕಂಡು ಆಶ್ಚರ್ಯ ಆತಂಕ ಗಳಿಂದ ಮುಖ ಮುಖ ನೋಡಿಕೊಂಡರು. ಮೇಜಿನ ಮೇಲಿನ ಹಾಳೆಗಳು ಹಾಗೇ ಇದ್ದವು. ಶಕುಂತಲಾ ಬಂದಿರುವುದು ಸ್ಪಷ್ಟ; ಈ ಬರಹಗಳನ್ನು ನೋಡಿರುವಳೋ ಇಲ್ಲವೋ ಅಸ್ಪಷ್ಟ;ಆಕೆಯ ಮನಸ್ಥಿತಿ ಅನೂಹ್ಯ! ಎಲ್ಲಿಂದ ಹೇಗೆ ಪ್ರಾರಂಭಿಸುವುದು -ಅನಿರ್ಧರಿತ. ಹೀಗೆ ನಾನಾ ಭಾವನೆಗಳು ಅವರ ಮನವನ್ನಾಳಲು ಉಪಕ್ರಮಿಸಿದವು. ಒಬ್ಬರ ಮನಸ್ಸನ್ನು ಒಬ್ಬರು ಓದಿದವರಂತೆ ನಿಟ್ಟುಸಿರು ಬಿಟ್ಟು ಮುಖ ತೊಳೆದು ಕೆಳಕ್ಕೆ ನಡೆದರು.
ಸೋಫ಼್ಹಾ ಮೇಲೆ ಕುಳಿತು ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದ ಶಕುಂತಲಾ ಇವರನ್ನು ಕಂಡು ಛಂಗನೆದ್ದು ಅಮ್ಮನನ್ನು ಆಲಂಗಿಸಿಯೂ, ಅಪ್ಪನಿಗೆ ಜೋತು ಬೀಳುತ್ತಲೂ ಎಂದಿನಂತೆ ವ್ಯವಹರಿಸಿದಳು. ರಮ್ಯಾ ಕಾಫಿ ಮಾಡಲು ತೆರಳಿದರೆ ಅಪ್ಪ ಮಗಳು ಲೋಕಾಭಿರಾಮ ಹರಟೆಗೆ ತೊಡಗಿದರು. ಆದರೂ ಸುಧಾಕರನಿಗೆ ಸ್ವಲ್ಪ ಕಸಿವಿಸಿ.
ಕಾಫಿ ಬಂತು. ಕುಡಿಯುತ್ತಾ ಶಕುಂತಲ ” ಏನೋ ಗಂಡ ಹೆಂಡತಿ ನನ್ನ ಮದುವೆಯ ಬಗ್ಗೆ ಮಸಲತ್ತು ನಡೆಸಿದಂತಿದೆ ” ಮಾತು ತೆಗೆದಳು. ರಮ್ಯಾ ಕೆಮ್ಮಿದಳು ಸುಧಾಕರ ಸ್ವಲ್ಪ ಕಾಫಿ ಮೈಮೇಲೆ ಚೆಲ್ಲಿಕೊಂಡರು. ನಕ್ಕರು ಎಲ್ಲರೂ. ನಂತರದಲ್ಲಿ ಸುಧಾಕರ ಎದ್ದು, ಮುಂದಿನ ಬಾಗಿಲ ಚಿಲಕ ಭದ್ರಪಡಿಸಿ ಬಂದು, ನಡೆಯಿರಿ ಎಲ್ಲರೂ ಮೇಲೆ ಹೋಗಿ ಮಾತನಾಡುವ ಎಂದು ನಡೆದರು. ಇನ್ನು ಎಳೆದಾಡುವುದರಲ್ಲಿ ಅರ್ಥವಿಲ್ಲ ಎಂದೆನಿಸಿತವರಿಗೆ.
ಹಾಸಿಗೆಯ ಮೇಲೆ ಕುಳಿತು ಮಗಳನ್ನು ಪಕ್ಕದಲ್ಲೇ ಕರೆದು ಕುಳ್ಳಿರಿಸಿಕೊಂಡ ಸುಧಾಕರ, ಹಾಳೆಯ ಮೇಲೆ ಕಣ್ಣಾಡಿಸಿದಂತೆ ಮಾಡಿ ಮಗಳೆ ಮುಖ ನೋಡುತ್ತಾ ಹೇಳತೊಡಗಿದರು.
”ನೋಡು ಶಕುಂತಲ ಇದುವರೆಗೆ ನಿನಗೆ ತಿಳಿಯದೇ ಇರುವ ವಿಷಯವೊಂದನ್ನು ಹೇಳಲು ಬಯಸುತ್ತೇವೆ. ಈ ವಿಚಾರವಾಗಿ ನಾನೂ ನಿನ್ನ ತಾಯಿಯೂ ಈ ಮದ್ಯಾಹ್ನ ಚರ್ಚಿಸುತ್ತಿದ್ದೆವು. ನಿನಗೆ ಇಷ್ಟರಲ್ಲೇ ಮದುವೆ ಮಾಡುವುದು ಸರಿಯಷ್ಟೇ? ಆನಂತರದಲ್ಲಿ ನೀನು, ನಿನ್ನ ಸಂಸಾರ, ಮಗು, ಮಕ್ಕಳು ಹೀಗೆ ನಿನ್ನ ಜೀವನದ ನದಿಯ ಪಾತ್ರ ಬೇರೆಡೆಗೆ ಹೊರಳುತ್ತದೆ. ನಾವು ಕೂಡಾ ಇನ್ನೆಷ್ಟುದಿನ ಇರಬಲ್ಲೆವು? ಮನುಷ್ಯನಿಗೆ ಸಂಬಂಧಗಳು ದೈಹಿಕವಾಗಿಯೂ,ಭಾವನಾತ್ಮಕವಾಗಿಯೂ, ದೈವೀಕ ಪ್ರೇರಣೆಯಿಂದಲೂ ಕೂಡಿ ಬರುತ್ತವೆ. ಕೆಲವು ಸಂಬಂಧಗಳು ಗಟ್ಟಿಯಾದರೆ ಮತ್ತೆ ಕೆಲವು ಜೊಳ್ಳು. ಪ್ರತಿಯೊಂದು ಸಂಬಂಧವನ್ನೂ ಸತ್ಯದ ಒರೆಗೆ ಹಚ್ಚಿ ಸತ್ಯದ ತಳಹದಿಯ ಮೇಲೇ ನಿಲ್ಲಿಸುವುದು ಜೀವನಕ್ಕೆ ಅತ್ಯಗತ್ಯ. ಸುಳ್ಳಿನ ಬುನಾದಿಯ ಮೇಲೆ ಕಟ್ಟಿದ ಸಂಬಂಧದ ಸೌಧಗಳು ಬಲಹೀನವಾಗಿದ್ದು ಬಿದ್ದುಹೋಗುತ್ತವೆ. ಸಂಬಂಧಗಳಿಗೆ ಸತ್ಯದ ಪ್ರಮಾಣ ಕೊಡಲು ಕಾಲ ಪ್ರಶಸ್ತವಾಗಿರಬೇಕಷ್ಟೆ. ಈ ದಿನ ನಮಗೆ-ನಿನಗೆ ಆ ಘಳಿಗೆ ಕೂಡಿಬಂದಿರುವುದರಿಂದಲೇ ನಾವೀಗ ಇಲ್ಲಿ ಕುಳಿತು ಮಾತನಾಡುತ್ತಿರುವುದು ಎಂದು ಹೇಳಿ ಕ್ಷಣ ಕಾಲ ಸುಮ್ಮನಾದರು.
ಯಾವತ್ತೂ ತಾತ್ತ್ವಿಕ ನೆಲೆಯಲ್ಲಿ ಚಿಂತಿಸಿ ಸಾತ್ವಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ತನ್ನ ತಂದೆಯ ಈ ಪೀಠಿಕೆಯಿಂದ ಶಕುಂತಲೆಗೇನೂ ಆಶ್ಚರ್ಯವಾಗಲಿಲ್ಲ. ಆದರೂ ಅವರು ಉಲ್ಲೇಖಿಸುತ್ತಿರುವ ಈ ”ಸತ್ಯ” ಏನೆಂಬುದು ಅವಳಿಗೆ ಸ್ಪಷ್ಟವಾಗಲಿಲ್ಲ. ಸುಮ್ಮನೆ ತಲೆಯಾಡಿಸಿದಳು.
ಮುಂದುವರಿದು ಸುಧಾಕರ ಹೇಳಿದರು..
”ನೀನು ಹುಟ್ಟಿದಾಗಲಿಂದ ನಮ್ಮ ಆರೈಕೆ ಯಲ್ಲಿಯೇ ಬೆಳೆದು ನಿಮ್ಮ ತಾಯಿಯ ಹಾಲನ್ನೇ ಕುಡಿದು ದೊಡ್ಡವಳಾಗಿದ್ದರೂ ಜೀವಶಾಸ್ತ್ರದ ನಿಯಮಗಳ ಪ್ರಕಾರ ನಮ್ಮ ಮಗಳಲ್ಲ; ಅದರೆ ಭಾವಶಾಸ್ತ್ರದ ತತ್ವಗಳ ಅನ್ವಯ ನಮ್ಮ ಮಗಳೆ. ನಮ್ಮ ಜೀವತಂತುಗಳು ನಿನ್ನಲ್ಲಿ ಇಲ್ಲದೇ ಇರಬಹುದು ಅದರೆ ನಮ್ಮ ಭಾವತಂತುಗಳು ನಿನಗಾಗಿಯೂ ನಿನ್ನ ಭಾವತಂತುಗಳು ನಮಗಾಗಿಯೂ ಮಿಡಿಯುತ್ತವೆ- ಸಂಶಯವಿಲ್ಲ. ಇದನ್ನು ನೀನು ಕೂಡಾ ಅನುಮೋದಿಸುವಿಯೆಂದು ಭಾವಿಸುತ್ತೇನೆ ” ಎಂದೆಂದು ಮಗಳ ಮುಖ ನೋಡಿದರು. ಅವಳ ಕಣ್ಣಾಲಿಗಳು ತುಂಬಿದ್ದವು. ರಮ್ಯಾ ಮುಖವನ್ನು ಬೇರೆಡೆಗೆ ತಿರುಗಿಸಿಕೊಂಡಿದ್ದಳು.
ಸುಧಾಕರ ಮೌನ ಮುರಿದು ಹೇಳಿದರು…
ಅಸ್ಪತ್ರೆಯಲ್ಲಿ ಹೆರಿಗೆ ಸಮ್ಯದಲ್ಲಿ ನಡೆದ ಘಟನೆಗಳು, ರಮ್ಯಾಳ ಸಂಕಷ್ಟಗಳು,ರಮ್ಯಾಳ ಜೀವಕ್ಕೆ ಒದಗಿದ್ದ ಅಪಾಯ,ತಮ್ಮದೇ ಮಗು ಉಳಿಯದೇ ಇದ್ದದ್ದು,ಶಕುಂತಲಾ ಹೇಗೆ ಅ ಸಮಯದಲ್ಲಿ ಒದಗಿ ಬಂದದ್ದು ತಮ್ಮ ಬಾಳಿಗೆ ಬೆಳಕನ್ನು ತಂದದ್ದು ಎಲ್ಲವನ್ನು ವಿವರಿಸಿದರು.ಶಕುಂತಲಾ ತನ್ನ ಕಣ್ಣುಗಳನ್ನು ಒರೆಸಿಕೊಂಡು ಅವರಮ್ಮನ ಬಳಿಸರಿದು ಅವಳ ಭುಜ ಹಿಡಿದು ನೀರು ತುಂಬಿದ್ದ ಅವಳ ಕಣ್ಣಿನಲ್ಲಿ ಕಣ್ಣಿಟ್ಟು ಹೇಳಿದಳು.
” ನೀವು ಸತ್ಯ ಹೇಳಿದರೂ ಹೇಳದಿದ್ದರೂ ನಾನು ನಿಮ್ಮ ಮಗಳೇ ಆಗಿರುತ್ತೇನೆ. ಅದರಲ್ಲೂ ಸತ್ಯದ ವೀನೆಯ ಮೇಲಿನ ಭಾವನಾತ್ಮಕ ತಂತುಗಳು ಮಿಡಿಯುವ ಸ್ವರ ಎಂದೂ ಅಪಸ್ವರವಾಗಿರಲಾರದು. ನೀವು ನನ್ನನ್ನು ಹುರಿದುಂಬಿಸಿ ವೈದ್ಯ ಶಾಸ್ತ್ರ ಓದಿಸಿದ ಅರಿವು ಇಂದು ನನಗಾಯಿತು. ನಾನು ಬೇರೆ ಏನೋ ಆಗಿದ್ದರೆ ಈ ವಿಚಾರವನ್ನು ಹೇಗೆ ಸ್ವೀಕರಿಸುತ್ತಿದ್ದೆನೋ ತಿಳಿಯದು. ಆದರೆ ಈ ಹಿನ್ನೆಲೆಯಿಂದ ಯೋಚಿಸಿದಾಗ ನನಗೆ ಯಾವ ಖೇದವೂ ಇಲ್ಲ. ಭಾವನೆಗಳಿಲ್ಲದೆ ಬರೀ ಜೀವತಂತುಗಳಿಂದ ಹೊಮ್ಮುವ ಶಬ್ದ ಶಬ್ದವಾಗುವುದೇ ವಿನ್ಃ ನಾದವಾಗುವುದಿಲ್ಲ.ಅದರ ಅರಿವೂ ಇಂದು ನನಗೆ ಸಾಕಾರವಾಯಿತು. ನಿಮಗೆ ನನ್ನ ಮೇಲಿನ ಅಧಿಕಾರವಾಗಲೀ ,ಹಕ್ಕುಗಳಾಗಲಿ ಯಾವತ್ತೂ ತಂದೆ ತಾಯಿಗಳಾಗಿ ನಿಮ್ಮದೇ. ನಿಮ್ಮ ಅಭಿಲಾಷೆ ಮೀರಿ ನಾನೇನೂ ಮಾಡಲಾರೆ.ಇಷ್ಟು ದಿನದ ನಿಮ್ಮ ಕನಸುಗಳಿಗೆ,ಅಕಾಂಕ್ಷೆಗಳಿಗೆ ಮಣ್ಣೆರೆಚಲಾರೆ. ನೀವು ಹೇಗೆ ಎಲ್ಲ ಪ್ರೀತಿಯನ್ನು ನಿಸ್ವಾರ್ಥದಿಂದ ನನಗೆ ಧಾರೆಯೆರೆದಿದ್ದೀರೋ ಹಾಗೆ ನಾನು ಕೂಡಾ ನಿಮ್ಮ ಮುದ್ದಿನ ಮಗಳಾಗಿಯೇ ಇರುತ್ತೇನೆ ಎಂದಳು- ಹೃದಯ ತುಂಬಿ.
ವಾಸ್ತವತೆಯ ಕಲ್ಲೊಂದು ಅವರ ಮನಗಳ ಕೊಳದಲ್ಲಿ ಮುಳುಗಿ ತರಂಗಗಳನ್ನೆಬ್ಬಿಸಿ ತಳ ಸೇರುವವರೆಗೆ ಅಲ್ಲಿ ಮೌನ ಆವರಿಸಿತ್ತು. ಶಕುಂತಲೆಯೇ ಮೌನ ಮುರಿದು ಮಾತನಾಡಿದಳು.
ಅಪ್ಪಾಜಿ ನಿಮ್ಮ ಕೈಗೆ ನಾನು ಯಾರಿಂದ ಹೇಗೆ ಬಂದೆನೆಂಬ ವಿಚಾರ ನನಗೆ ಹೇಳಲಿಲ್ಲ? ಎಂದಳು.
ಸುಧಾಕರ ತಲೆಯಾಡಿಸುತ್ತಾ,” ಹೌದು ಈ ವಿಚಾರ ನಾನು ನಿನಗಷ್ಟೇ ಅಲ್ಲ ನಿನ್ನ ಅಮ್ಮನಿಗೂ ಕೂಡಾ ಇಲ್ಲಿಯವರೆಗೆ ಹೇಳಿಲ್ಲ. ನೀನು ಸಿಕ್ಕ ಸಂಭ್ರಮದಲ್ಲಿ ಅವಳೂ ಕೂಡಾ ಇಲ್ಲಿಯವರೆಗೆ ಕೇಳೇ ಇಲ್ಲ” ಎಂದರು ಮಡದಿಯೆಡೆಗೆ ಅಭಿಮಾನದಿಂದ ನೋಡುತ್ತಾ.
ಈ ದಿನ ಆ ವಿಚಾರವನ್ನೂ ಅನಾವರಣ ಮಾಡಿ ನನ್ನ ಮನಸ್ಸನ್ನೂ ಹಗುರು ಮಾಡಿಕೊಳ್ಳುತ್ತೇನೆ -ಎಂದಂದು ಹೇಳಲು ಪ್ರಾರಂಭಿಸಿದರು.
ನಿನ್ನಮ್ಮನಿಗೆ ಹೆರಿಗೆಯ ದಿನಗಳು ಹತ್ತಿರ ಬರುತ್ತಿದ್ದವು. ಆಗ ನಾವು ಬೆಂಗಳೂರಿನಲ್ಲೇ ಇದ್ದೆವು.ರಕ್ತದೊತ್ತಡ ಜಾಸ್ಥಿಯಾದರಿಂದ ನಾನು ಅವಳನ್ನು ಆಸ್ಪತ್ರೆಗೆ ಕರೆದೊಯ್ದೆ. ಅಲ್ಲಿಂದ ಮುಂದೆ ಆದ ಕಥೆ ನಿನಗೆ ಗೊತ್ತೇ ಇದೆ. ಮಗುವನ್ನು ಕಳೆದುಕೊಂಡು ನಾವಿಬ್ಬರೂ ಖಿನ್ನರಾಗಿದ್ದೆವು. ಅಷ್ಟರಲ್ಲಿ ಪಕ್ಕದ ವಾರ್ಡಿನಲ್ಲಿ ಗಲಿಬಿಲಿ ಗಲಾಟೆ ಆಯ್ತು. ರಮ್ಯಾ ಮಲಗಿದ್ದಳು. ನಾನು ಹೋಗಿ ಗಲಾಟೆ ಆಗುವಲ್ಲಿ ನಿಂತೆ. ಯಾರೋ ಶ್ರೀಮಂತರಂತೆ.ಅವರ ಮಗಳು ಅಲ್ಲಿದ್ದಳಂತೆ.ಹಸುಗೂಸನ್ನು ಅಲ್ಲಿಯೇ ಬಿಟ್ಟು ತನ್ನ ತಂದೆ ತಾಯಿಯರೊಡನೆ ಹೊರಟು ಹೋಗಿದ್ದಳಂತೆ. ಮಗುವಿಗೆ ಬೇಕಾದ ಎಲ್ಲ ಸಾಮಾನು ಸರಂಜಾಮುಗಳನ್ನೂ ಅಲ್ಲಿ ಒಪ್ಪವಾಗಿ ಇಟ್ಟಿದ್ದರಂತೆ. ಅವರ್ಯಾರ ಸುಳಿವೂ ಇರಲಿಲ್ಲ. ಆಗೆಲ್ಲ ಈಗಿನಷ್ಟು ಕಂಪ್ಯುಟರ್ ದಾಖಲೆ ಮುಂತಾದ ವ್ಯವಸ್ಥೆ ಇರಲಿಲ್ಲ. ವಿಳಾಸ ಇತ್ಯಾದಿಗಾಗಿ ಹೆಚ್ಚು ತಲೆಕೆಡಿಸಿಕೊಳ್ಳುತ್ತಲೂ ಇರಲಿಲ್ಲ. ಬಹುತೇಕ ನಂಬಿಕೆಯ ಮೇಲೆ ವ್ಯವಹಾರ ನಡೆಯುತ್ತಿದ್ದ ದಿನಗಳವು.ಅವರು ಹೇಳಿದ್ದು ಇವರು ಬರೆದುಕೊಂಡಿದ್ದು. ಆ ಶ್ರೀಮಂತರು ತಮ್ಮ ಎಲ್ಲ ವಿವರಗಳನ್ನು ತಪ್ಪಾಗಿ ಕೊಟ್ಟಿದ್ದರು ಆದರೆ ಅಸ್ಪತ್ರೆಗೆ ಕಟ್ಟಬೇಕಾದ ಹಣ ಸರಿಯಾಗಿ ಸಂದಾಯ ಮಾಡಿದ್ದರು. ಇದೆಲ್ಲಾ ಗಮನಿಸಿದಾಗ ಅವರು ಎಚ್ಚರಿಕೆಯಿಂದಲೇ ಮಗುವನ್ನು ತೊರೆಯುವ ಯೋಚನೆ ಹಾಕಿದ್ದರೆಂದು ಕಾಣುತ್ತದೆ. ಏಕೆ ಹಾಗೆ ಮಾಡಿದರೆಂದು ಅಲ್ಲಿದ್ದ ಯಾವ ವೈದ್ಯರಿಗೂ ಮತ್ಯಾರಿಗೂ ಗೊತ್ತಿರಲಿಲ್ಲ.ಹೀಗಾಗಿ ಗಲಿಬಿಲಿ ನಡೆದಿತ್ತು. ಆಗ ನೀನು ಎರಡು ದಿನದ ಮಗುವಿರಬೇಕು. ಅಳಲು ಮೊದಲು ಮಾಡಿದೆ. ಅಲ್ಲಿದ್ದ ನರ್ಸ್ ನಿನ್ನನ್ನು ತಂದು ರಮ್ಯಾಳಿಗೆ ಕೊಟ್ಟಳು. ನಿನ್ನಮ್ಮನಿಗೆ ಎದೆಹಾಲಿನ ಭಾರ ಇಳಿಯಬೇಕಿತ್ತು.ಅವಳ ಹಾಲು ಕುಡಿದ ಮೊದಲ ಮಗು ನೀನೆ.ಅಷ್ಟರಲ್ಲಿ ಸುಮಾರು ನಲತ್ತು ವಯಸ್ಸಿನ ಹೆಂಗಸೊಬ್ಬಳು ಅಲ್ಲಿಗೆ ಬಂದಳು. ಅವರ ಮನೆಯ ಕೆಲಸದವಳೆಂದು ಪರಿಚಯಿಸಿಕೊಂಡಳು.ಪರಿಸ್ಥಿತಿ ಅವಳಿಗೂ ಅನಿರೀಕ್ಷಿತವಾಗಿತ್ತು. ಸುಮಾರು ಎರಡು ತಿಂಗಳಿಂದ ಅವರ ಮನೆಯಲ್ಲಿ ಇದ್ದಳೆಂದೂ,ಆ ಮನೆಗೆ ಈಗ ಬೀಗ ಹಾಕಿತ್ತೆಂದೂ, ಅವರು ಊರು ಬಿಟ್ಟು ಹೊರಟುಹೋಗಿರಬೇಕೆಂದೂ ಹೇಳಿದಳು. ಕೆಲಸದವಳಾದ ಕಾರಣ ಅವರ ಪೂರ್ವಾಪರ ಅವಳಿಗೂ ಸರಿಯಾಗಿ ತಿಳಿದಿರಲಿಲ್ಲ. ಆದರೂ ಅವರು ಬಹಳ ಸ್ಥಿತಿವಂತರಿದ್ದರೆಂದೂ ಬಹಳ ಗೌಪ್ಯತೆ ಕಾಪಾಡುತ್ತಿದ್ದರೆಂದೂ ,ತಂದೆ ತಾಯಿ, ಮಗಳನ್ನು ಹೊರತು ಪಡಿಸಿ ಅಪರೂಪಕ್ಕೆಂಬಂತೆ ಅವಳ ವಾರಿಗೆಯ ಇನ್ನೊಬ್ಬ ಯುವತಿ ಬರುತ್ತಿದ್ದಳೆಂದು ಹೇಳಿದಳು. ಉಳಿದಂತೆ ಬೇರೆ ಜನ ಬಂದು ಹೋದದ್ದನ್ನು ತಾನು ಕಾಣಲಿಲ್ಲವೆಂದೂ ಸೇರಿಸಿದಳು. ಸಂಜೆಯಾದರೂ ಇನ್ನು ಯಾರ ಸುಳಿವೂ ಇರದಿದ್ದ ಕಾರಣ ಅವರ್ಯಾರೂ ಬರದೆ ಇದ್ದದ್ದು ಬಹುತೇಕ ಖಾತ್ರಿಯಾಯಿತು. ಹಿರಿಯ ವೈದ್ಯರು ನನ್ನನ್ನು ಕರೆದು ಈ ಮಗುವನ್ನು ನೀವು ಸಾಕಿಕೊಳ್ಳಬಲ್ಲಿರಾ? ಎಂದು ಕೇಳಿದರು. ನಾವೂ ಸಂತೋಷದಿಂದ ಒಪ್ಪಿದೆವು. ಆದರೂ ಇನ್ನೂ ನಾಲ್ಕಾರು ದಿನ ಆಸ್ಪತ್ರೆಯಲ್ಲೇ ಇರಿ. ಅಕಸ್ಮಾತಾಗಿ ಅವರು ಬಂದು ಇಲ್ಲದ ರಗಳೆಯಾಗುವುದು ಬೇಡ, ಹಾಗೆಯೇ ಈ ಮಗುವಿನ ಬಗೆಗೆ ಸಾಕಷ್ಟು ಮಾಹಿತಿ ಕಲೆ ಹಾಕಿ ಉಳಿದ ಪರೀಕ್ಷೆಗಳೇನಾದರೂ ಬಾಕಿಯಿದ್ದಲ್ಲಿ ಅವನ್ನು ಮುಗಿಸಿ ಆರೋಗ್ಯಪೂರ್ಣವಾಗಿರುವುದನ್ನು ಖಚಿತಪಡಿಸಿಕೊಂಡೇ ಮನೆಗೆ ತೆರಳಬಹುದೆಂದು ಸಲಹೆ ಮಾಡಿದರು. ಹೀಗಾಗಿ ನೀನು ನಮ್ಮ ಮಡಿಲಿಗೆ ಬಂದೆ ಎಂದಂದು ನಿಲ್ಲಿಸಿದರು.
”ಆಸ್ಪತ್ರೆಯವರು ಪೋಲಿಸ್ ಕಂಪ್ಲೇಂಟ್ ಕೊಡಲಿಲ್ಲವೋ?” ಶಕುಂತಲ ಕೇಳಿದಳು.
ಅದನ್ನೂ ವಿವೇಚಿಸಲಾಯ್ತು. ಆದರೆ ಯಾವ ಪೂರ್ವಾಪರಗಳ ಸರಿಯಾದ ಆಧಾರವಿಲ್ಲದೆ ದೂರು ಯಾರ ಮೇಲೆ ಕೊಡುವುದು? ಅದೂ ಅಲ್ಲದೆ ಅದರಿಂದ ಉಂಟಾಗಬಹುದಾದ ಕೋಲಾಹಲ, ಕಾನೂನು ರಗಳೆಯಿಂದ ನಿನಗೆ ತೊಂದರೆಯಾಗುತ್ತಿತ್ತೇ ವಿನಃ ಯಾವುದೆ ಉಪಕಾರ ಆಗುತ್ತಿರಲಿಲ್ಲ. ನಿನಗೆ ಮಡಿಲಿನ ನಮಗೆ ಮಗುವಿನ ಅವಶ್ಯಕೆತೆ ಇತ್ತು.ಇದನ್ನು ಮನಗಂಡೇ ಡಾ. ಹೆಗಡೆಯವರು ಆ ದಿಶೆಯತ್ತ ಒಲವು ತೋರಲಿಲ್ಲ ಎಂದು ಹೇಳಿದರು.
”ಎಂಥ ವಿಚಿತ್ರ!! ಹಸುಗೂಸನ್ನು ತೊರೆದ ಆ ಹೆಂಗಸಿನ ಬಗೆಗೆ ಏನೂ ತಿಳಿಯಲಿಲ್ಲವೋ?” ಶಕುಂತಲ ಕೇಳಿದಳು. ಹೆಂಗಸು ಎಂದು ಸಂಬೋಧಿಸಿದಳೇ ವಿನಃ ನಮ್ಮಮ್ಮ ಎಂದು ಅನ್ನದಿದ್ದುದು ರಮ್ಯಾಳಿಗೆ ಒಂದು ಬಗೆಯ ಅವ್ಯಕ್ತ ಆನಂದ ತಂದದ್ದಲ್ಲದೆ ಅವಳ ಮೇಲಿನ ಮಮತೆ ಇನ್ನೂ ಹೆಚ್ಚ್ಹಾಯಿತು. ಶಕುಂತಲೆಗೆ ಅದು ತಿಳಿಯದಿರಲಿಲ್ಲ.
ಸುಧಾಕರ ತಲೆದೂಗುತ್ತಾ,” ನಿಧಾನವಾಗಿ ಕೆಲವು ವಿಷಯಗಳು ತಿಳಿದವು ಹಿರಿಯ ವೈದ್ಯರಾದ ಹೆಗಡೆಯವರು ನಾನು ನನ್ನ ಜೀವನದಲ್ಲಿ ಕಂಡ ಕೆಲವೇ ಕೆಲವು ಪ್ರಾತಃ ಸ್ಮರಣೀಯರಲ್ಲಿ ಒಬ್ಬರು. ಅವರ ಮಾನವೀಯ ಕಾಳಜಿ, ದೂರದೃಷ್ಟಿ,ಕಳಕಳಿ ಬಹಳ ಅಪರೂಪ. ನೀನು ನಮ್ಮ ಮಡಿಲಿಗೆ ಬರುವುದು ಖಚಿತವಾದ ನಂತರ ಅವರು ನಿನ್ನ ಹುಟ್ಟಿಗೆ ಕಾರಣರಾದ ತಂದೆ ತಾಯಿಯರ ಬಗೆಗೆ ಸಾಧ್ಯವಾದಷ್ಟು ಮಾಹಿತಿ ಕಲೆ ಹಾಕುವ ಬಗೆಗೆ ಯೋಚಿಸತೊಡಗಿದರು. ನನ್ನನ್ನು ಕರೆದು ತಮ್ಮ ಕಾರ್ಯಯೋಜನೆ ತಿಳಿಸಿದರು. ಮಗುವಿಗೆ ಭದ್ರ ನೆಲೆ ಸಿಕ್ಕಿದ್ದು ಅವರಿಗೆ ನೆಮ್ಮದಿ ತಂದಿದೆಯೆಂದೂ ಆದರೆ ಪಾಲಕ ಪೋಷಕರಾಗಿ ಎಷ್ಟುಸಾಧ್ಯವೋ ಅಷ್ಟೂ ವಿವರಗಳು ಮಗುವಿನ ಬಗ್ಗೆ ತಿಳಿದಿದ್ದರೆ ಉತ್ತಮವೆಂದೂ ಮುಂದೆ ಏನಾದರೂ ಖಾಯಿಲೆ ಕಸಾಲೆಗಳು ಬಂದಲ್ಲಿ ಆ ವಿಚಾರಗಳು ಸಹಾಯಕರವಾಗಬಹುದೆಂದೂ ತಿಳಿಸಿದರು. ಹಾಗಾಗಿ ಇನ್ನೂ ಕೆಲವು ದಿನ ಆಸ್ಪತ್ರೆಯಲ್ಲೇ ಉಳಿದರೆ ಅನುಕೂಲವೆಂದು ಕೇಳಿಕೊಂಡರು. ಆ ದಿನವೇ ನಿನ್ನನ್ನು ಬಿಟ್ಟುಹೋಗಿದ್ದ ರೂಂ ಅನ್ನು ಖಾಲಿಮಾಡಲಾಯ್ತು. ಅಲ್ಲೊಂದು ಚಿಕ್ಕ ಫ಼ೈಲ್ ಕಂಡು ಬಂತು. ಅದರಲ್ಲಿ ಆ ಹೆಂಗಸು ಗರ್ಭಿಣಿಯಾದಾಗಿನಿಂದ ನಿಯಮಿತ ತಪಾಸಣೆಗೊಳಪಟ್ಟ ದಾಖಲೆಗಳು ಲಭ್ಯವಾದವು. ತಿಂಗಳಿಗೊಮ್ಮೆ ವೈದ್ಯರು ಪರೀಕ್ಷಿಸಿ ಬರೆದಿದ್ದರು. ಅದರಲ್ಲಿ ವೃಂದಾ ಎಂಬ ಹೆಸರಿತ್ತು ಆದರೆ ನೀನು ಹುಟ್ಟಿದ ಆಸ್ಪತ್ರೆಯಲ್ಲಿ ಸಿಂಧೂ ಎಂಬ ಹೆಸರಿನಿಂದ ದಾಖಲಿಸಿದ್ದರು. ಬೇಕಾಗಿಯೇ ನಿಜ ನಾಮಧೇಯ ಮರೆಮಾಚಿದ್ದು ಸ್ಪಷ್ಟವಾಗಿತ್ತು. ಉಳಿದಂತೆ ವಯಸ್ಸು, ಎತ್ತರ, ಗಾತ್ರ, ತೂಕ ಮುಂತಾದುವು ಸರಿಯಾಗಿಯೇ ತಾಳೆಯಾಗಿದ್ದವು.
ಆಕೆಯನ್ನು ಕ್ರಮವಾಗಿ ನೋಡಿಕೊಂಡ ವೈದ್ಯರ ವಿಳಾಸ ಅದರಿಲ್ಲತ್ತಷ್ಟೇ, ನನ್ನನೂ ಕರೆದುಕೊಂಡು ಹೆಗಡೆಯವರು ಆ ಪ್ರಸೂತಿ ತಜ್ಞೆಯ ಬಳಿಗೆ ಹೋದರು. ವಿಷಯ ವಿವರಿಸಿ, ನನ್ನನ್ನೂ ಪರಿಚಯಿಸಿ ನಾವು ಅಲ್ಲಿಗೆ ಹೋದ ಉದ್ದೇಶ ಹೇಳಿ ಸಾಧ್ಯವಾದಷ್ಟೂ ಮಾಹಿತಿ ನೀಡಲು ಕೋರಿಕೊಂಡರು. ಆಕೆಯೂ ಅದಕ್ಕೆ ಸ್ಪಂದಿಸಿ ಒಪ್ಪಿದಳು. ನಮಗೂ ಕಾಫ್ಹಿ ತರಿಸಿಕೊಟ್ಟು ಹೇಳಲು ಪ್ರಾರಂಭಿಸಿದಳು.
ವೃಂದಾ ಯೆಂಬ ಆ ಯುವತಿ ತನ್ನ ಬಳಿಗೆ ಸುಮಾರು ಆರು ತಿಂಗಳಿನಿಂದ ಬರುತ್ತಿದ್ದಳೆಂದೂ,ಕೆಲವೊಮ್ಮೆ ತಂದೆ ತಾಯಿಯರ ಜೊತೆಗೆ ಬಂದರೆ ಮತ್ತೆ ಕೆಲವು ಸಾರಿ ಆಕೆಯ ಗೆಳತಿ ಇರುತ್ತಿದ್ದಳೆಂದೂ, ಅವರೆಲ್ಲ ಯಾವುದೋ ಒಂದು ಅಸ್ಪಷ್ಟ ಒತ್ತಡಕ್ಕೆ ಸಿಕ್ಕಿದ್ದವರಂತೆ ಕಾಣುತ್ತಿದ್ದರೆಂದೂ ಹೇಳಿದರು. ಒಮ್ಮೆ ತಾಯಿಯೂ, ವೃಂದಾ ಗೆಳತಿಯೂ ಜೊತೆಗೆ ಬಂದಿದ್ದಾಗ, ವೃಂದಾಳನ್ನು ರಕ್ತ ಪರೀಕ್ಷೆಗೆಂದು ಕಳಿಸಿ ಆಕೆಯ ತಾಯಿಯ ಬಳಿ ಮಾತನಾಡತೊಡಗಿದೆ. ಆಕೆಗೂ ತನ್ನ ಮನಸ್ಸಿನ ಭಾರ ಇಳಿಸಿಕೊಳ್ಳಬೇಕಿತ್ತೆಂದು ತೋರುತ್ತದೆ , ಹೇಳಿದಳು ” ವೃಂದಾ, ಶ್ರೀಮಂತ ಮನೆತನದಲ್ಲಿ ಜನಿಸಿದ ಹೆಮ್ಮೆಯ ಕೂಸು. ಮಹತ್ವಾಕಾಂಕ್ಷಿ ತಂದೆಯ ಮಾರ್ಗದರ್ಶನದಲ್ಲಿ ತಾನೂ ಮಹತ್ವಾಕಾಂಕ್ಷಿಯಾಗೇ ಬೆಳೆದಳು.ಗಂಡು ಮಕ್ಕಳಿಲ್ಲದ ಅವರು ಅವಳನ್ನು ವ್ಯವಹಾರದಲ್ಲೂ ಪಳಗಿಸಿದರು. ರೂಪ, ಬುದ್ಧಿ ಎರಡೂ ಚುರುಕು. ಸದಾ ಏನನ್ನಾದರೂ ಸಾಧಿಸುವ ತುಡಿತ ಅವಳಿಗೆ. ಕೆಲವುಸಾರಿ ವಿಚಿತ್ರವೆನ್ನುವಂತೆ ನಡೆದುಕೊಳ್ಳುತ್ತಿದಳು. ಯೌವ್ವನ ಸಹಜ ಅಸೆ ಆಕಾಂಕ್ಷೆಗಳನ್ನು ತೋರಿಸುತ್ತಿದ್ದುದು ಅಪರೂಪವಾದರೂ ಆಗಾಗ ಒಪ್ಪವಾಗಿ ಸಿಂಗರಿಸಿಕೊಳ್ಲುತ್ತಿದ್ದಳು,ಓಡಾಡುತ್ತಿದ್ದಳು. ತಾಯಿಯಾಗಿ ತಾನು ಆ ರೀತಿ ಅವಳಿರಲೆಂದು ಎಷ್ಟು ಬಯಸಿಲ್ಲ?! ಆದರೆ ಈ ಬದಲಾವಣೆ ತಾತ್ಕಾಲಿಕವಾಗಿರುತ್ತಿತ್ತು. ಮತ್ತೆ ತನ್ನ ಓದು, ದುಡಿತ, ವ್ಯವಹಾರ ಹೀಗೆ ಕಳೆದು ಹೋಗುತ್ತಿದ್ದಳು. ಇವಳೇನು ಹೆಂಗಸೋ ಇಲ್ಲ ಹೆಂಗಸಿನ ರೂಪದಲ್ಲಿರುವ ಗಂಡಸೋ ಎನ್ನುವಂತಿತ್ತು ಅವಳ ನಡವಳಿಕೆ. ಹೀಗಿರುವಲ್ಲಿ ಇಂಜಿನಿಯರಿಂಗ್ ಮುಗಿಸಿ ಎಮ್.ಬಿ.ಎ ಓದುತ್ತೇನೆಂದು ಹೇಳಿದಾಗ ಅವರಪ್ಪನಿಗೆ ಬಹಳೆ ಹೆಮ್ಮೆ. ಕಳಿಸಿದರು. ಅಲ್ಲಿಯೇ ಅವಳಿಗೆ ವಿಶ್ವನಾಥನಂತೆ, ಅವಳ ಸಹಪಾಠಿಯಾದವನ ಪರಿಚಯವಾಯ್ತಂತೆ. ನಾವೇನೂ ಅವನನ್ನು ಒಮ್ಮೆಯೂ ಕಾಣಲಿಲ್ಲ ಅವಳೂ ಅವನನ್ನು ಮನೆಗೆ ಕರೆತರಲಿಲ್ಲ ಒಂದೆರೆಡು ಬಾರಿ ಅವಳಲ್ಲಿ ಸ್ತ್ರೀ ಸಹಜ ಬದಲಾಣೆ ಬಂದಿದ್ದಾಗ ನನ್ನಲ್ಲಿ ಹೇಳಿಕೊಂಡಿದ್ದಳು. ಬಡತನದ ಹಿನ್ನೆಲೆಯಿಂದ ಬಂದವನೆಂದೂ, ಅಸಾಧಾರಣ ಬುದ್ಧಿವಂತನೆಂದೂ ಹೇಳಿದ್ದಳು. ಪ್ರೀತಿ, ಪ್ರೇಮ, ಮದುವೆ ಇಂಥದ್ದೆನಾದರೂ ಯೋಚಿಸಿದ್ದೀರಾ ಎಂದದ್ದಕ್ಕೆ ಅದೇನೂ ಇಲ್ಲವೆಂದವಳು ಮೂರು ತಿಂಗಳು ಕಳೆದಾಗ ನನ್ನ ಬಳಿ ಬಂದು ಹೇಳಿದಳು. ದಿಗ್ಭ್ರಮೆಗೊಂಡ ನಾನು ಮುಂದೇನು ಮಾಡಬೇಕೆಂದಿದ್ದೀರಾ ಎಂದರೆ ಉದಾಸೀನ ತೋರಿದಳು. ವೈದ್ಯರಲ್ಲಿಗೆ ನಾನೇ ಕರೆದೊಯ್ದರೆ ಅವರು ಹದಿನಾಲ್ಕು ವಾರ ಕಳೆದಿರುವುದರಿಂದ ಈಗ ಏನೂ ಮಾಡಲು ಬರುವುದಿಲ್ಲವೆಂದು ಕೈಚೆಲ್ಲಿದರು. ವೃಂದಾ ಅಷ್ಟೇನೂ ವಿಚಲಿತಳಾಗಿರಲಿಲ್ಲ. ಕೇಳಿದರೆ ಇದೊಂದು ಜೈವಿಕ ಬದಲಾವಣೆ ಅಷ್ಟೇ ಅದಕ್ಕೇಕೆ ತಲೆ ಕೆಡಿಸಿಕೊಳ್ಳಬೇಕು ಎಂದು ಸಲೀಸಾಗಿ ನಿರ್ವಿಕಾರವಾಗಿ ಹೇಳಿಬಿಟ್ಟಳು. ಇನ್ನು ಅವರಪ್ಪನಿಗೆ ತಿಳಿಸಲೇ ಬೇಕಾಯಿತು. ಒಂದು ರಾತ್ರಿ ಕೂತು ಮಾತುಕತೆ ನಡೆಸಿದೆವು. ವಿಶ್ವನಾಥನ ಬಗೆಗೆ ಕೇಳಿದರು. ಅವನು ಮದುವೆಯ ವಿಚಾರದಲ್ಲಿ ಸ್ಪಂದಿಸುವುದಿಲ್ಲವೆಂದೂ,ಸಂಬಂಧಗಳ ವಿಷಯದಲ್ಲಿ ಅಯೊಮಯವಾಗಿ ವರ್ತಿಸುತ್ತಾನೆಂದೂ, ಒಂದು ಸಂದರ್ಭದಲ್ಲಿ ಭಾವಾವೇಷಕ್ಕೆ ಒಳಗಾಗಿ ಈ ಸ್ಥಿತಿ ಬಂದಿದೆಯೆಂದು ಹೇಳಿದಳು. ತನಗೂ ಮದುವೆಯ ಜಂಜಾಟ ಬೇಡವೆಂದಳು. ಅದಕ್ಕಾಗಿ ನಾವು ತಾತ್ಕಾಲಿಕವಾಗಿ ಬೆಂಗಳೂರಿಗೆ ಬಂದಿದ್ದೇವೆ. ಹೆರಿಗೆಯ ನಂತರ ಇನ್ನೆರೆಡು ತಿಂಗಳಿದ್ದು ಅನಂತರ ವಾಪಸ್ ಹೋಗಲಿದ್ದೇವೆ ಎಂದಷ್ಟೇ ಹೇಳಿದ್ದಳು. ಮಗುವನ್ನು ತೊರೆಯುವ ಯೋಜನೆ ಹೊಸೆದಿದ್ದರೆಂದು ತಮ್ಮ ಗಮನಕ್ಕೆ ಬರದಿದ್ದುದಕ್ಕೆ ಕ್ಷಮೆ ಕೇಳಿದರು.

ಬಹಳ ವಿಚಿತ್ರವಾದ ಕೇಸು ಇದು. ಹೆಂಗಸರು ಹೀಗೂ ಇರಬಹುದೇ? ಡಾ.ಹೆಗಡೆ ತಮ್ಮ ಕೌತುಕ ಹೊರಹಾಕಿದರು. ತಲೆದೂಗುತ್ತಾ ಆ ಲೇಡಿ ಡಾಕ್ಟರು ತಮ್ಮ ಅನುಭವದಲ್ಲೂ ಇಂತಹ ಕೇಸನ್ನು ಮೊದಲ ಬಾರಿಗೆ ನೋಡಿದ್ದಂತೆ. ವೃಂದಾ ಏನೂ ಆಗಿಯೇ ಇಲ್ಲವೆಂಬಂತೆ ಇರುತ್ತಿದ್ದಳಂತೆ. ತನ್ನ ಹೊಟ್ಟೆಯಲ್ಲ್ಲಿ ಬೆಳೆಯುತ್ತಿದ್ದ ಮಗುವಿನ ಬಗೆಗೆ ಕೌತುಕ, ನವಿರು ಭಾವನೆಗಳು, ಕನಸುಗಳು, ಕಾಳಜಿ ಏನೂ ತೊರಿಸುತ್ತಿರಲಿಲ್ಲವಂತೆ. ಈ ರೀತಿ ಸ್ಪಂದನೆಯೇ ತೋರಿಸದ, ಉಳಿದಂತೆ ನಾರ್ಮಲ್ ಆಗಿ ಇರುವಂಥ ಗರ್ಭಿಣಿ ಹೆಂಗಸನ್ನು ಕಂಡಿದ್ದಿಲ್ಲವಂತೆ ಅವರ ಅನುಭವದಲ್ಲು. ನಿಸರ್ಗ ಸಾಮಾನ್ಯವಾಗಿ ಮಗುವನ್ನು ಹೆತ್ತು ಹೊತ್ತು, ಪಾಲಿಸಿ ಪೋಷಿಸುವ ,ಆ ಮೂಲಕ ಪೀಳಿಗೆಯನ್ನು ಉಳಿಸಿ ಬೆಳೆಸುವ ಸಾಮರ್ಥ್ಯ ಹಾಗು ಅದಕ್ಕೆ ಬೇಕಾದ ದೈಹಿಕ ಹಾಗೂ ಮಾನಸಿಕ ಧಾರ್ಢ್ಯತೆಯನ್ನು ಹೆಣ್ಣಿಗೆ ದಯಪಾಲಿಸಿರುತ್ತದೆ.ಇದಕ್ಕೆ ಹೊರತಾದ ಉದಾಹರಣೆ ಎಂದರೆ ಸಮುದ್ರ ಕುದುರೆ. ಅಲ್ಲಿ ಗಂಡು ಪ್ರಾಣಿ ಮಗುವನ್ನು ಹೆರುವುದು ಮತ್ತು ಹೊರುವುದು. ಹಾಗೆಯೇ ಈ ಮಹತ್ಕಾರ್ಯದಲ್ಲಿ ಸಹಕಾರವಾಗುವಂತೆ ಮಗುವನ್ನು ತನ್ನ ಪ್ರಾಣದಂತೆ ಪ್ರೀತಿಸುವ ಸುಮಧುರ ಶಕ್ತಿಯನ್ನು ಕೂಡಾ ತಾಯಿಯಲ್ಲಿ-ಹೆಣ್ಣಿನಲ್ಲಿ ತುಂಬಿರುತ್ತದೆ. ಮಗುವನ್ನು ಕಂಡಾಗ ಮನ ಮಿಡಿದು ಹಾರ್ಮೋನುಗಳು ಸ್ರಾವವಾಗಿ ಆ ಮೂಲಕ ನರಮಂಡಲದಲ್ಲಿ ಆಗುವ ಬದಲಾವಣೆಗಳೇ ಈ ಪ್ರೀತಿಯ ಅಭಿವ್ಯಕ್ತಿಗೆ ಮೂಲಕಾರಣ.ನಿರ್ವ್ಯಾಜ ಪ್ರೀತಿಯನ್ನು ತೋರಬಲ್ಲ ಈ ಕಾರಣಕ್ಕಾಗಿಯೇ ತಾಯಿಗೆ ದೇವರ ಸ್ಥಾನವನ್ನು ಪ್ರಪಂಚದ ಎಲ್ಲ ಧರ್ಮಗಳೂ ಕೊಟ್ಟಿರುವುದು. ಎಲ್ಲ ನಿಯಮಗಳಿಗೂ ಅಪವಾದವಿರುತ್ತದೆ ಹಾಗೂ ಎಲ್ಲ ಗುಣಗಳಲ್ಲೂ ಒಂದು ಬಗೆಯ ಸ್ಪೆಕ್ಟ್ರಂ ಪ್ರಕೃತಿಯಲ್ಲಿ ಇರುತ್ತದೆ. ಕಡುಗಪ್ಪು ಬಣ್ಣದಿಂದ ಕಡುಕೆಂಪು ಬಣ್ಣದ ಮನುಷ್ಯರಿಲ್ಲವೇ ಹಾಗೆ; ಬೆಳಕಿನಲ್ಲಿ ಒಂದು ತುದಿಯಿಂದ ಮತ್ತೊಂದಕ್ಕೆ ಬಣ್ಣಗಳು ಕ್ರಮೇಣ ಬದಲಾಗುವುದಿಲ್ಲವೇ ಹಾಗೆ. ಆದರ್ಶ ತಾಯಿಯರು ಒಂದು ತುದಿಯಲ್ಲಿದ್ದರೆ ಭಾವನಾ ರಹಿತ ತಾಯಂದಿರು ಇನ್ನೊಂದು ತುದಿಯಲ್ಲಿರುವುದು ಸಾಧ್ಯ ಆದರೆ ಇದು ಅಪರೂಪ.ಗಂಡಸರಂತೆ ಯೋಚಿಸುವ, ವ್ಯವಹರಿಸುವ ತಾಯಂದಿರೂ ಇರುವುದು ಸಾಧ್ಯ ;ವೃಂದಾ ಪ್ರಾಯಶಃ ಈ ಗುಂಪಿಗೆ ಸೇರಿರಬಹುದು. ಇಂತಹವರು ಮಕ್ಕಳನ್ನು ಕುರಿತು ಯೋಚಿಸುವುದಿಲ್ಲ. ವೈಜ್ಞಾನಿಕವಾಗಿ ,ತರ್ಕಬದ್ಧವಾಗಿ ಪರಿಸ್ಥಿತಿಯನ್ನು ವಿಶ್ಲೇಷಿಸಿದರೂ ಕೂಡಾ ಒಂದೇ ವ್ಯಕ್ತಿಯಲ್ಲಿ ಸರತಿಯಂತೆ ಈ ಎರಡೂ ಬಗೆಯ ಗುಣಗಳು ಮೇಳೈಸಿರುವುದು, ವ್ಯಕ್ತಗೊಳ್ಳುವ ಪರಿ ಅವರೂ ಮೊದಲು ನೋಡಿದ್ದು. ಈ ರೀತಿಯ ಉದಾಹರಣೆಗಳು ವೈದ್ಯಕೀಯ ಸಾಹಿತ್ಯದಲ್ಲೂ ಅವರಿಗೆ ಕಂಡು ಬಂದಿಲ್ಲವಂತೆ. ಅದು ಏನೇ ಇದ್ದರೂ ಇಂತಹವರ ಆರೈಕೆಯಲ್ಲಿ ಮಕ್ಕಳ ಸಮಗ್ರ ಬೆಳವಣಿಗೆ ಅಸಂಭವ ಅಥವಾ ಕಷ್ಟ. ಹಾಗಾಗಿ ಈ ಮಗುವನ್ನು ಅವರು ತೊರೆದದ್ದು ಒಂದು ಬಗೆಯಲ್ಲಿ ಒಳ್ಳೆಯದೇ ಆಯಿತು. ಇದು ದೇವರು ಕೊಟ್ಟ ವರ ಎಂದೇ ತಿಳಿಯಿರಿ ಎಂದು ಆಕೆ ನುಡಿದ್ದಲ್ಲದೆ ಅವರು ಕೊಟ್ಟಿರುವ ವಿವರಗಳು ಬಹುತೇಕ ನಿಜವಾದರೂ ಅವರ ಹೆಸರು ,ವಿಳಾಸಗಳನ್ನು ಉದ್ದೇಶಪೂರ್ವಕವಾಗಿ ಮರೆ ಮಾಚಿದ್ದಾರೆ. ದಿನ ಪೂರ್ತಿ ನೂರಾರು ರೋಗಿಗಳನ್ನು ನೋಡುವ ನಮಗೆ ಈ ವಿವರಗಳ ಸತ್ಯಾಸತ್ಯತೆ ಕೆದಕುವ ಗೊಡವೆಯಾಗಲೀ , ಸಮಯವಾಗಲೀ ಇರುವುದಿಲ್ಲ. ನಂಬಿಕೆಯ ಮೇಲೆ ವ್ಯವಹಾರ ನಡೆಯುತ್ತಿರುತ್ತದೆ. ಆದರೆ, ’ಆದದ್ದೆಲ್ಲಾ ಒಳಿತೇ ಆಯಿತು’ ಎಂದುಕೊಂಡು ಮುಂದುವರಿಯಿರಿ. ಆಕೆ ತನ್ನ ಹೆಸರು ಊರು ಬದಲಾಯಿಸಿಕೊಂಡು ಮತ್ತೇನೋ ಸಾಧನೆಯಲ್ಲಿ ತೊಡಗಿರಬಹುದು. ಮಗುವಿಗೂ ,ಅದರ ನೂತನ ತಂದೆ-ತಾಯಿಗಳಿಗೂ ಶುಭವಾಗಲಿ ಎಂದು ಹಾರೈಸಿದ್ದಲ್ಲದೆ ಉಳಿದಂತೆ ಯಾವ ಖಾಯಿಲೆ ಕಸಾಲೆಗಳೇನೂ ವೃಂದಾಳಲ್ಲಿ ಕಾಣಿಸದ್ದರಿಂದ ಎಲ್ಲಾ ಒಳ್ಳೆಯದಾಗುವುದೆಂಬ ಭರವಸೆ ನೀಡಿ ನಮ್ಮನ್ನು ಬೀಳ್ಕೊಟ್ಟರು. ಇಷ್ಟು ಹೇಳಿ ಸುಧಾಕರ ತಮ್ಮ ಮಾತು ನಿಲ್ಲಿಸಿದರು.
ಎಲ್ಲರೂ ಮೌನದಿಂದಿದ್ದರು. ರಮ್ಯಾ ತಲೆ ತಗ್ಗಿಸಿಕೊಂಡೇ ಮಾತುಗಳನ್ನು ಕೇಳುತ್ತಿದ್ದರು.ಶಕುಂತಲಾ ತಲೆಯೆತ್ತಿ ನೋಡಿದರೂ ಏನೂ ಮಾತನಾಡದೆ ಸುಮ್ಮನೆ ಕುಳಿತಿದ್ದಳು.ಎಲ್ಲ ವಿಚಾರಗಳು ಮನದಾಳಕ್ಕೆ ಇಳಿಯುವವರೆಗೆ ಸುಮ್ಮನೆ ಕುಳಿತಿದ್ದು ಸುಧಾಕರ ಮುಂದುವರಿದು ” ನೋಡು ಮಗೂ ಮನಸ್ಸೊಂದು ಹಾಲಿನ ಕಡಲು. ಸಮಸ್ಯೆ ಎಂಬ ಮಂದಾರ ಪರ್ವತವನ್ನು ಚಿಂತನೆ ಅಥವಾ ಜಿಜ್ಞಾಸೆಯೆಂಬ ಹಾವಿನಿಂದ ಸುತ್ತಿ ಸತ್ಯ-ಮಿಥ್ಯ, ವಾಸ್ತವ -ಕಾಲ್ಪನಿಕ ಎಂಬುವ ದೇವ ದಾನವರುಗಳಿಂದ ಮಂಥನ ನಡೆಸಿದಾಗ ಮೊದಲು ಬರುವುದು ಕಹಿಯಾದ ವಿಷವೇ. ಅದನ್ನು ನೀಲಕಂಠನಂತೆ ಗಂಟಲಲ್ಲಿ ಇಳಿಸಿಕೊಂಡು, ಸಂಭಾಳಿಸಿಕೊಂಡು ಮುನ್ನಡೆದಾಗಲೇ ಅಮೃತದ ದರ್ಶನ ಆಗುವುದು. ಆದ್ದರಿಂದಲೇ ಇಂದು ಸಮಯ ಪ್ರಶಸ್ತವೆಂದು ಬಗೆದು ಈ ವಿಚಾರವನ್ನೆಲ್ಲ ಬಿಚ್ಚಿಟ್ಟೆ ಅಷ್ಟೇ” ಎಂದರು.
ತಲೆದೂಗಿದ ಶಕುಂತಲೆ,”ಅಪ್ಪಾಜಿ ಈ ಚಿಂತನ ಮಂಥನದಲ್ಲಿ ನನಗೆ ವಿಷಯ ಸಿಕ್ಕಿತೇ ವಿನಃ ಯಾವ ವಿಷದ ದರ್ಶನವೂ ನನಗಾಗಲಿಲ್ಲ. ನಿಮ್ಮಿಬ್ಬರ ವಾತ್ಸಲ್ಯದ ಅಮೃತ ನನ್ನ ಬಳಿ ಇರುವಾಗ ಬೇರೆ ಯಾವುದರ ಹಂಗೂ ನನಗೆ ಬೇಕಾಗಿಯೇ ಇಲ್ಲ. ಆ ವಿಶ್ವಾಮಿತ್ರ-ಮೇನಕೆಯರ ಮಗಳಲ್ಲ ಈ ಶಕುಂತಲ. ಅಂದಿಗೂ, ಇಂದಿಗೂ ಇನ್ನೆಂದಿಗೂ ನಿಮ್ಮಿಬ್ಬರ ಮುದ್ದಿನ ಮಗಳೇ ಎಂದು ರಮ್ಯ-ಸುಧಾಕರರನ್ನು ಅಪ್ಪಿದಾಗ ಆನಂದಾಶ್ರುಗಳು ತುಂಬಿದ ಅವರ ಕಣ್ಣುಗಳಿಗೆ ಪ್ರೀತಿಯ ಅನುಭವದ ಹೊರತು ಬೇರೇನೂ ಕಾಣಿಸುತ್ತಿರಲಿಲ್ಲ.

ಡಾ.ಸುದರ್ಶನ ಗುರುರಾಜರಾವ್.