ತಾಜಾ ಮಹಲ್

ತಾಜಾ ಮಹಲ್

ತಾಜಾ ಮಹಲ್

ದಿನ ರಾತ್ರಿಯು ಸ್ವಪ್ನದಲ್ಲಿ
ಮಮತಾಜಳು ನಗೆಯ ಚೆಲ್ಲಿ
ತಾಜಮಹಲು ಬಳಿಗೆ ನೀನು ಬಾರೊ ಎನ್ನುತ
ಆಗ್ರಹವನು ಮಾಡಲಾಗಿ
ನಿಗ್ರಹವನು ವಿಜಯ ನೀಗಿ
ಒಂದು ದಿನ ಹೊರಡಲೆಂದು ಸಿದ್ಧನಾಗುತ

ಮಡದಿಗದನು ಹೇಳದಂತೆ
ಹೆಜ್ಜೆ ಕಳ್ಳ ಬೆಕ್ಕಿನಂತೆ
ಇಡುತ ತನ್ನ ಗಂಟು ಮೂಟೆ ಕಟ್ಟತೊಡಗಿದ

ವಿಜಯನ ನಡವಳಿಕೆ ಕಂಡು
ಮಡದಿ ಅನುಮಾನಗೊಂಡು
ಅವನ ಬೆನ್ನ ಬಿಡದೆ ಹಿಂದೆ ಸುತ್ತ ತೊಡಗಲು
ಇರಿಸು ಮುರಿಸು ಮಾಡಿಕೊಂಡು
ಗುಟ್ಟು ಜತನ ಕಾಯ್ದುಕೊಂಡು
ಸಮಜಾಯಿಶಿ ವಿಜಯ ಮನದೆ ಹೊಸೆದುಕೊಳ್ಳಲು

ಎಲ್ಲಿಗೀಗ ತಮ್ಮ ಪಯಣ
ಎನ್ನ ನಯನದಲ್ಲಿ ನಯನ
ಇಟ್ಟು ನಿಜವ ನುಡಿಯಿರೆಂದು ಜೋರು ಮಾಡಲು

ಕಛೇರಿ ಕೆಲಸ ನನಗೆ ಉಂಟು
ದೂರದೂರಿಗೆಂದು ಗಂಟು
ಕಟ್ಟುತಿರುವೆ ಬರಲು ವಾರ ಬೇಕು ಎನ್ನುತ
ಹೊರಟು ನಿಂತ ವಿಜಯ ಅಂದೆ
ಕರೆದೊಯ್ಯುವೆ ನಿನ್ನ ಮುಂದೆ
ಎನುತ ರಮಿಸಿ ಮಡದಿಯನ್ನು ಬೀಳುಕೊಳ್ಳುತ

ದೂರದಲ್ಲಿ ತಾಜಮಹಲು
ಕಣ್ಣಳತೆಗೆ ಕಾಣುತಿರಲು
ವಿಜಯ ತಾನೆ ಶಹಜಹಾನನಂತೆ ಬೀಗುತ
ಅಂಗಿಹೋಗಿ ಕುರ್ತವಾಯ್ತು
ತಲೆಗೆ ಗರಿಯ ಪೇಠ ಬಂತು
ಕೈಯ್ಯಲೊಂದು ಚೆಂಗುಲಾಬಿ ಹೂವು ಹಿಡಿಯುತ

ಕೊಟ್ಟ ಭಾಷೆ ಮೀರದಂತೆ
ಬಂದೆ ನಿನ್ನ ಅಣತಿಯಂತೆ
ನಿನ್ನ ಒಲವು ನನಗೆ ಈಗ ಬೇಕು ಎನ್ನುತ

ಮಮತಾಜಳ ಬಳ್ಳಿ ನಡುವ
ಬಳಸೆ ಕೈಯ್ಯ ಚಾಚಿದನವ
ಪಕ್ಕದಿ ಮಲಗಿದ್ದ ಸೀತೆ ಮುಖಕೆ ತಾಕಲು
ನಿದ್ರೆಯಲ್ಲಿ ಮಾತ ಕೇಳಿ
ಬಳಿಕ ಮುಖಕೆ ಹಸ್ತ ತಗುಲಿ
ಮಗ್ಗುಲು ಬದಲಿಸಿದ ಸೀತೆ ಎಚ್ಚರಾಗಲು

ಸ್ಲೋ ಮೋಷನ್ ಮೂವಿಯಂತೆ
ಗಾಳಿಯಲ್ಲಿ ತೇಲುವಂತೆ
ಕಾಲು ಕೈಯ್ಯನಾಡಿಸುತ್ತ ಮಡದಿಗೊದೆಯಲು
ಮೊದಲು ಮಾತು ಕೇಳುತಿತ್ತು
ಇದೇನಿಂಥ ಒದೆತ ಬಿತ್ತು
ಎಂದು ಸೀತೆ ನಿದ್ರೆಯಿಂದ ಎದ್ದು ನೋಡಲು

ಹಾವ ಭಾವ ಮಾಡಿಕೊಂಡು
ಜೊ.. ವಾ..ದಾ ಕಿ.ಯಾ ಎಂದು
ಕನಸು ಕಾಣುತಿದ್ದ ವಿಜಯ ತನಗೆ ಕಾಣಲು
ಮಮತಾಜಳ ಹೆಸರು ಕೇಳಿ
ಕೆಟ್ಟ ಕುತೂಹಲವು ಕೆರಳಿ
ಕನಸಿನಾಟವನ್ನು ಸೀತೆ ಗಮನಿಸುತಿರಲು

ಸಿಟ್ಟು ಪಿತ್ತ ನೆತ್ತಿಗೇರಿ
ಸದ್ದು ಮಾಡದೊಳಗೆ ಸೇರಿ
ಚೊಂಬಿನಲ್ಲಿ ನೀರ ತಂದು ಮೇಲೆ ಸುರಿಯಲು
ಕೋಪ ತಣ್ಣಗಾಗದಿರಲು
ಮತ್ಸರವದು ಎದೆಯ ಸುಡಲು
ಖಾಲಿ ಚೊಂಬಿನಿಂದ ತಲೆಗೆ ಹಾಕಿ ಕುಕ್ಕಲು

ಕನಸೆ ನಿಜವು ಎಂದುಕೊಂಡು
ರಸದನುಭವ ಮನದಿ ಉಂಡು
ನಲಿಯುತಿದ್ದ ವಿಜಯ ಧಿಗ್ಗನೆದ್ದು ಕೂಡಲು
ನಿಶೆಯು ಜರ್ರನೆಂದು ಇಳಿದು
ವಾಸ್ತವತೆಯು ಮನದಿ ಸುಳಿದು
ಕಣ್ಣನುಜ್ಜಿಕೊಂಡು ತಲೆಯನೆತ್ತಿ ನೋಡಲು

ಮಮತಾಜಳ ಜಾಗದಲ್ಲಿ
ಮಡದಿ ಮುಖವು ಕಂಡಿತಲ್ಲಿ
ಕೆಂಡದಂಥ ಕಣ್ಣ ದೃಷ್ಟಿ ಕಂಡು ನಲುಗುತ
ಮೂತಿಯನ್ನು ತಿವಿಸಿಕೊಂಡು
ಮಂಗ ಮುಖವ ಮಾಡಿಕೊಂಡು
ತಡಬಡಾಯಿಸಿ ಮಾತನಾಡೆ ತಾನು ತೊದಲುತ

ಕದ್ದು ಹಾಲು ಕುಡಿದ ಬೆಕ್ಕು
ಮನೆಯಾಕೆಯ ಕೈಗೆ ಸಿಕ್ಕು
ಥಳಿಸಿಕೊಂಡು ನೀರ ಮೇಲೆ ಸುರಿಸಿಕೊಂಡೊಲು
ಕನಸಿನ ಸವಿ ಮಂಡಿಗೆ
ನನಸಿನ ಬಿಸಿ ತುಪ್ಪವಾಗೆ
ಬಾಯಿ ಸುಟ್ಟ ಬೆಕ್ಕಿನಂತೆ ಮೂತಿಮಾಡಲು

ಮಂಚದಿಂದ ಇಳಿಯಿರೆಂದು
ಹರುಕು ಚಾಪೆಯೊಂದ ತಂದು
ಕಲ್ಲಿನಂಥ ದಿಂಬು ಕೊಡುತ ಹೊರಗೆ ನೂಕಲು
ಜಗುಲಿ ಮೇಲೆ ವಿಜಯ ಮಲಗಿ
ಚಳಿಗೆ ದೇಹ ನಡುಗಿ ನಲುಗಿ
ಹರುಷಗೊಂಡ ಸೊಳ್ಳೆ ಅಲ್ಲಿ-ಇಲ್ಲಿ ಕಚ್ಚಲು

ಉರಿತ ಕೆರೆತ ತಾಳದಾಗಿ
ಕೊರೆವ ಚಳಿಯ ಸಹಿಸದಾಗಿ
ಜಗುಲಿಮೇಲೆ ತಕತಕನೆ ವಿಜಯ ಕುಣಿಯಲು
ಕರೆಯಿರಿ ಮಮತಾಜಳನ್ನು
ಓಡಿಸಲಿ ಸೊಳ್ಳೆಗಳನು
ಕಾಯುತಿರುವೆ ನಿಮ್ಮ ಸರಸ ನೋಡಿ ತಣಿಯಲು!!

ಇರುವ ಸುಖವ ಬಿಟ್ಟುಕೊಟ್ಟು
ಸಿಗದ ರಾಣಿಗಾಸೆಪಟ್ಟು
ಮರುಳು ಹಿಡಿದ ತನ್ನ ಬುದ್ಧಿ ಶಪಿಸಿಕೊಳ್ಳುತ
ಮಮತಾಜಳ ಮುಖವೆ ಕಾಣೆ
ಸೀತೆ ನೀನೆ ನನ್ನ ಜಾಣೆ
ಬಾಗಿಲನ್ನು ತೆಗಿಸೆ ರಮಿಸಿ ತಾಜಾ ಮಾಡುತ

ಬಾಗಿಲನ್ನು ಬಿಡದೆ ಬಡಿದ
ಕಿಟಕಿಯಲ್ಲಿ ಕೈಯ್ಯ ಮುಗಿದ
ಮಹಲಿನೊಳಗೆ ಬಿಟ್ಟುಕೊಳಲು ಕಾಡಿ ಬೇಡಿದ
ಅಷ್ಟರಲ್ಲಿ ಬೆಳಕು ಹರಿದು
ಸೀತೆ ಕೋಪ ತಾಪ ಇಳಿದು
ಗಂಡ ಹೆಂಡಿರವರ ಜಗಳ ಸೂರ್ಯ ಮುಗಿಸಿದ.

ಡಾ.ಸುದರ್ಶನ ಗುರುರಾಜರಾವ್

 

ಕಳೆ- ಕಳೆ

ಕಳೆ- ಕಳೆ

ಜನಪದವು ವ್ಯವಹರಿಸೆ ಬೇಕೊಂದು ಭಾಷೆಯು
ಆ ಭಾಷೆ ಬೆಳೆಯಲು ಬೇಕು ಜನಪದದೊಲವು
ಜನಪದದ ನುಡಿತೋಟ ಕಥೆ ಕಾವ್ಯ ತರು ಲತೆಯು
ನಳ ನಳಿಸೆ ಇರಬೇಕು ಅಭಿಮಾನ ಅರಿವು

ಒಟ್ಟು ಸಾವಿರದೊಂದು ಭಾಷೆಗಳ ನಡುವಿನಲಿ
ಪುಟ್ಟ ಉದ್ಯಾನದೊಳ್ ಇರುವ ಕನ್ನಡದ ನುಡಿಯ
ನೆಟ್ಟ ಗಿದ ಮರ ಬಳ್ಳಿ ಫಲ ಪುಷ್ಪ ನೀಡಲು
ತೋಟ ಮಾಲಿಯು ಅದಕೆ ನೀನಾಗು ಗೆಳೆಯ

ಪಂಪ ಕಟ್ಟಿದ ತೋಟ ರನ್ನ ಬೆಳೆಸಿದ ತೋಟ
ಜನ್ನ ಹರಿಹರ ಪೊನ್ನ ರಾಘವಾಂಕರ ತೋಟ
ಗದುಗಿನಾ ನಾರಣನು ನೀರನೆರೆದಿಹ ತೋಟ
ಮುದ್ದಣ ಮನೋರಮೆಯರ್ ವಿಹರಿಸಿದ ತೋಟ

ಶರಣರರಸಿದ ತೋಟ ದಾಸರೊಲುಮೆಯ ತೋಟ
ಗೊರವ ಜಂಗಮ ಜೋಗಿ ಜಾನ ಪದಗಳ ತೋಟ
ಸರಸ್ವತಿಯ ವರತೋಟ ವರಕವಿಗಳಾ ತೋಟ
ಮೇರು ಕೃತಿಗಳು ಮೆರೆವ ಮನಸೆಳೆವ ತೋಟ

ಕಬ್ಬಿಗರ ಕೈತೋಟ ಅಬ್ಬರವಿರದಾ ತೋಟ
ಕಬ್ಬ ಕಾವ್ಯಗಳ ಹಗ್ಗದುಯ್ಯಾಲೆ ತೋಟ
ಇಬ್ಬನಿಯ ತಂಪೆರೆವ ಸಹೃದಯರಾ ತೋಟ
ಹಬ್ಬದೂಟವ ದಿನವು ಬಡಿಸುತಿಹ ತೋಟ

ಕಬ್ಬಿನಾ ಸಿಹಿರಸವು ಕಬ್ಬಗಳಲ್ಲಿಹ ತೋಟ
ತಬ್ಬಿದರೆ ಮನದೆಲ್ಲ ಮಬ್ಬು ಕಳೆಯುವ ತೋಟ
ನಿಬ್ಬೆರೆಗು ಮಾಡುವಂತಿರುವ ಸುಂದರ ತೋಟ
ಅಬ್ಬೆಯರು ಮಮತೆಯಲಿ ಲಾಲಿ ಹಾಡಿದ ತೋಟ

ತಲ್ಲಣಿಸಿದಾ ಮನವು ತಾಯಿಯನು ಹುಡುಕೊವೊಲು
ಎಲ್ಲು ಸಿಗದಿಹ ಒಲುಮೆ ಅವಳ ಮಡಿಲಿನೊಳಿರಲು
ಅಲ್ಲಿ ತಲೆಯನ್ನಿಟ್ಟು ನೋವ ನೀ ಮರೆಯುವೊಲು
ಬಲ್ಲವನೆ ಬಲ್ಲನೋ ಕನ್ನಡದ ಜೇನ್ಹೊನಲು

ಮನೆಯೊಳಾಡುವ ಭಾಷೆ ಮನವನಾಳುವ ಭಾಷೆ
ಕನ್ನಡದ ನಲ್ನುಡಿಯು ಚೆಲುವು ಮರೆದಿಹ ಭಾಷೆ
ಅನ್ನ ನೀಡದಿದೆಂದು ತೊರೆಯದಿರು ನಿನ ಭಾಷೆ
ನಿನ್ನ ನೀನರಿತರೆ ಮೂಡದಾ ಕ್ಲೀಷೆ

ಜೀವನದ ಓಟದಲಿ ಬೇಕುಗಳ ಬೆನ್ಹಿಡಿದು
ಬೇಕುಗಳ ಕಣ್ಪಟ್ಟಿ ಕಟ್ಟಿ ಓಡುತ ನವೆದು
ಜೀಕುತಲಿ ನೋಡದಲೆ ಕನ್ನಡದ ತೋಟ
ಸಾಗಿದರೆ ಕಾಣದೆಲೊ ವಿಹಂಗಮ ನೋಟ

ತೋಟದಂಚಿನಲೆಲ್ಲೊ ಬೆಳೆದಿದ್ದ ಕಳೆ ಹುಲ್ಲು
ನೋಟವನು ತಪ್ಪಿಸುತ ಒಳನುಗ್ಗುತಿಹುದಲ್ಲೊ
ದಿಟವಾಗಿ ಕಿತ್ತೆಸೆದು ತೊಡೆಯದಿರೆ ನೀನು
ಕಾಟಕ್ಕೆ ಗಿಡ-ಬಳ್ಳಿ ಸೊರಗದಿಹವೇನು?

ಆಂಗ್ಲ ಭಾಷೆಯ ಕಳೆಯು ಕನ್ನಡದಿ ಬೆರೆತಿರಲು
ಆಮ್ಗ್ಲೆ ಪದಗಳೆ ನಮ್ಮ್ಮ ಮಾತೆಲ್ಲ ತುಂಬಿರಲು
ಕಳೆ ಬೆಳೆದ ತೋಟದಂತೆಮ್ಮ ನುಡಿ ಸೊರಗಿರಲು
ಗೆಳೆಯ ಬಾ ನೀ ಜೊತೆಗೆ ಕಳೆಯ ಕಿತ್ತೆಸೆಯಲು

ಕನ್ನಡವ ನುಡಿವಲ್ಲಿ ಶುದ್ಧ ಕನ್ನಡ ನುಡಿದು
ಕನ್ನಡದ ಪದಸಿರಿಯ ಮನದಾಳದಿಂದಗೆದು
ಕನ್ನಡವ ಕನ್ನಡಗ ಸೊಗಡಿನಲೆ ಬಳಸಿದರೆ
ಕನ್ನಡದ ತೋಟದೊಳ್ ಹರಿಯದೇ ಶುಭ್ರತೊರೆ?

ಕನ್ನಡದ ನುಡಿತೋಟ ನಿನ ಸೇವೆ ಬೇಡುತಿದೆ
ಮನ್ನಿಸು ಈ ನನ್ನ ಕೋರಿಕೆಯ ಗೆಳೆಯ
ನಿನ್ನ ಮನೆಯಲಿ ಎಂದು ನೀನಾಡೊ ಮಾತಿನಲಿ
ಕನ್ನಡದ ಪದಗಳನೆ ಬಿಡದೆ ಬಳಸುವೆಯಾ?

ಡಾ. ಸುದರ್ಶನ ಗುರುರಾಜರಾವ್