ಹೋಳಿ ಹಬ್ಬ

ಹೋಳಿ ಹಬ್ಬ
ಮಾಘ -ಫಾಲ್ಗುಣ ಮಾಸಗಳ ಶಶಿರ ಋತು ಮುಗಿದು ಚೈತ್ರ ಮಾಸ ಆರಂಭವಾಗುವ ಸಂಧಿ ಕಾಲದಲ್ಲಿ ಜನಪದವು ಸಂಭ್ರಮದಿಂದ ಆಚರಿಸುವ ಹಬ್ಬವೇ ಹೋಳಿ ಹುಣ್ಣಿಮೆ. ಇದನ್ನು ಕಾಮನ ಹಬ್ಬ, ಕಾಮದಹನದ ಹಬ್ಬ ಅಥವಾ ಕಾಮನ ಹುಣ್ಣಿಮೆ ಎಂದೂ ಆಚರಿಸುತ್ತಾರೆ. ಭಾರತದಲ್ಲಿ ಹಬ್ಬಗಳಿಗೆ ಬರವೇನಿಲ್ಲ ಆದರೆ ಪ್ರತಿ ಹಬ್ಬಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ.
ಹಬ್ಬಗಳ ಪ್ರಾಮುಖ್ಯತೆಯನ್ನು ಪೌರಾಣಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ತಾತ್ವಿಕ ದೃಷ್ಟಿಕೋನಗಳಿಂದ ನೋಡಬಹುದು. ಹೋಳೀ ಹಬ್ಬವನ್ನು ಈ ಆಯಾಮಗಳಿಂದ ನೋಡಿದಾಗ ನಮಗೆ ಕೆಲವು ಕಥೆಗಳು ತಿಳಿದು ಬರುತ್ತವೆ. ’ ಹೋಳಿ ’ ಎಂದರೆ ಸಂಸ್ಕೃತದಲ್ಲಿ ’ಸುಡು’ ಎಂದರ್ಥ. ಹಾಗಾದರೆ ಏನನ್ನು ಸುಡುವುದು?
ಹಿರಣ್ಯಕಶ್ಯಪುವಿನ ಮಗ ಪ್ರಹಲ್ಲಾದನ ಕಥೆ ಎಲ್ಲರಿಗೂ ಗೊತ್ತಿದ್ದೆ. ನಾನು ಎಂಬ ಅಹಂಕಾರದಲ್ಲಿ ಮುಳುಗಿ, ಹರಿ ದ್ವೇಷಿಯಾಗಿ ಸರ್ವ ಶಕ್ತ ತಾನೇ ಆದ್ದರಿಂದ ಎಲ್ಲರೂ ತನ್ನನ್ನೇ ಪೂಜಿಸಬೇಕೆಂದು ಆಗ್ರಹಮಾಡಿದ್ದಲ್ಲದೆ ಮಾಡದವರನ್ನು ಶಿಕ್ಷೆಗೆ ಒಳಪಡಿಸುತ್ತಿದ್ದ. ಅವನ ಮಗ ಮಹಾ ಹರಿ ಭಕ್ತ. ಮಗನೆಂಬ ಮಮಕಾರವನ್ನು ತೊರೆದು ಅವನನ್ನು ಕೊಲ್ಲಿಸಲು ನಾನಾ ಪ್ರಯತ್ನಗಳನ್ನು ಮಾಡಿದ. ಅವುಗಳಲ್ಲಿ ಒಂದು ಅವನನ್ನು ಸುಡುವುದು! ಯಾವ ಶಕ್ತಿಯೂ ಅವನ ಸಹಾಯಕ್ಕೆ ಬರಬಾರದೆಂದು ತನ್ನ ತಂಗಿ ಹೋಳಿಕಾಳನ್ನೇ ಜೊತೆಮಾಡಿ ಪ್ರಹಲ್ಲಾದನನ್ನು ಬೆಂಕಿಯಲ್ಲಿ ಕೂಡಿಸುತ್ತಾನೆ. ಹೋಲಿಕಾ ಬಳಿ ಬೆಂಕಿ ತಾಕದಂತಿರುವ ಮೇಲುವಸ್ತ್ರ ಇರುತ್ತದೆ. ಆಕೆ ಅದನ್ನು ಹೊದೆದು ಪ್ರಹಲ್ಲಾದನನ್ನು ಹಿಡಿದು ಕೂಡಿಸಿಕೊಳ್ಳುತ್ತಾಳೆ. ಆದರೆ ದೈವ ನಿಯಮ ಬೇರೆಯೇ ಇರುತ್ತದೆ. ಆ ಮೇಲುವಸ್ತ್ರ ಗಾಳಿಗೆ ಹಾರಿ ಪ್ರಹಲ್ಲದನ ಮೇಲೆ ಬಿದ್ದು ಅವನನ್ನು ರಕ್ಷಿಸುತ್ತದೆ ಹಾಗೂ ಹೋಲಿಕಾ ಉರಿದು ಬೂದಿಯಾಗುತ್ತಾಳೆ.
ಮಾನವ ಶಕ್ತಿಗೆ ಮೀರಿದ ಬೇರೊಂದು ಪರಮಶಕ್ತಿ ಇರುವುದರ ಸಂಕೇತ ಈ ಕಥೆ. ದುಷ್ಟ ಕಾರ್ಯದಲ್ಲಿ ಭಾಗಿಯಾದಾಗ,ನಾವು ನಂಬಿದ ರಕ್ಷಣೆಗಳು ರಕ್ಷಿಸುವುದಿಲ್ಲ ಎಂಬುದು ಇಲ್ಲಿನ ಮತ್ತೊಂದು ಸಂದೇಶ. ಧರ್ಮಕ್ಕೆ ಜಯ ಎಂಬ ನೀತಿಯ ಬೋಧನೆ ಸಮಾಜಕ್ಕೂ ,ವ್ಯಕ್ತಿಗಳಿಗೂ ಈ ಕಥೆಯಲ್ಲಿ ಅಡಕವಾಗಿದೆ. ಈ ಕಾರಣಕ್ಕೆ ಈ ಹಬ್ಬವನ್ನು ’ಹೋಳಿ’ ಅಥವಾ ’ಹೋಲಿ’ ಎಂದು ಕರೆಯುತ್ತಾರೆ. ಬಾಲ್ಯದಲ್ಲಿ ಧರ್ಮವ ಕುರಿತು ಅಚಲ ನಂಬಿಕೆ ವಿಶ್ವಾಸಗಳು ಮಕ್ಕಳಲ್ಲಿ ಬೆಳೆಯಲೆಂಬುದು ಈ ಕಥೆಯ ಆಶಯ.
ಎರಡೆನೆಯ ಕಥೆ ಮನ್ಮಥ ಅಥವಾ ಕಾಮದಹನಕ್ಕೆ ಸಂಬಂಧಿಸಿದ್ದು. ಕೈಲಾಸವಾಸಿಯಾದ ಶಿವನು ನಿರಾಭರಣ.ಅವನನ್ನು ಮೆಚ್ಚಿ ದಾಕ್ಷಾಯಿಣಿ ಅಥವಾ ಸತಿದೇವಿ ಮದುವೆಯಾಗುತ್ತಾಳೆ. ಅವಳ ತಂದೆ ದಕ್ಷಬ್ರಹ್ಮನಿಗೆ ಈ ಮದುವೆ ಇಷ್ಟವಿರುವುದಿಲ್ಲ. ಶಿವ ಬೈರಾಗಿ, ಬಡವ ಎಂದವನ ಮೂದಲಿಕೆ. ಒಮ್ಮೆ ಅವನು ವಿಶ್ವ ಯಜ್ಞವನ್ನು ಮಾಡಿದಾಗ ಅಲ್ಲಿಗೆ ಹೋದ ತನ್ನ ಮಗಳನ್ನೇ ಮೂದಲಿಸಿದ. ಅಪಮಾನ ತಡೆಯದೆ, ಪುನಃ ಮರಳಿ ಕೈಲಾಸಕೂ ಹೋಗಲಾಗದೆ ಸತಿ ದೇವಿ ಆ ಯಜ್ಞಕುಂಡದಲ್ಲಿ ಬಿದ್ದು ತನ್ನ ಪ್ರಾಣ ಕಳೆದುಕೊಳ್ಳುತ್ತಾಳೆ. ವೀರಭದ್ರನನ್ನು ಕಳಿಸಿ ದಕ್ಷನಿಗೆ ಶಾಸ್ತಿ ಮಾಡಿ ಪರಮಶಿವನು ತಪದಲ್ಲಿ ನಿರತನಾಗುತ್ತಾನೆ. ಇತ್ತ ತಾರಕಾಸುರನ ಕಾಟ ತಾಳಲಾರದೆ ದೇವರುಗಳು ತೊಳಲಾಡುತ್ತ ಶಿವನನ್ನು ಒಲಿಸಿ ಅವನು ಪಾರ್ವತಿಯನ್ನು ಮದುವೆಯಾಗಿ ಮಗನನ್ನು ಪಡೆದು ತಾರಕ ಸಂಹಾರ ಮಾಡಿಸಬೇಕೆಂದು ಬೇಡಿಕೊಳ್ಳುತ್ತಾರೆ. ಶಿವನು ಜಗ್ಗುವುದಿಲ್ಲ. ಆಗ ಕಾಮದೇವನನ್ನು ಕಳಿಸುತ್ತಾರೆ. ಗಿಣಿಯ ಮೇಲೆ ಕುಳಿತು,ಕಬ್ಬಿನ ಬಿಲ್ಲು ಹಿಡಿದು,ಮಲ್ಲಿಗೆ, ಸಂಪಿಗೆ,ಮುಂತಾದ ಹೂಬಾಣಗಳಿಂದ ಶಿವನ ತಪಸ್ಸನ್ನು ಕಷ್ಟಪಟ್ಟು ಭಂಗ ಮಾಡುತ್ತಾನೆ. ಆಗ ಅವನ ಕ್ರೋಧಾಗ್ನಿಗೆ ತುತ್ತಾಗಿ ಬೂದಿಯಾಗುತ್ತಾನೆ. ಮನ್ಮಥನ ಹೆಂಡತಿ ರತಿಯು ರೋದಿಸಿ ಬೇಡಿಕೊಳ್ಳಲು, ಅವನನ್ನು ಬದುಕಿಸಿ ಕೊಡುತ್ತಾನೆ ಆದರೆ ಅನಂಗನಾಗಿ, ಯಾರ ಕಣ್ಣಿಗೂ ಕಾಣದಂತೆ ಉಳಿಸುತ್ತಾನೆ. ಹಾಗಾಗಿ ಇಂದು ಕಾಮ ದೇವ ಕೇವಲ ಮಾನಸ ಪ್ರತಿಮೆ. ಪ್ರತಿಯೊಬ್ಬರ ಮನದಲ್ಲೂ ಆಕಾರ ಅವರವರ ಮನೋಭಿರುಚಿಗೆ ಅನುವಾಗಿ ಇರುತ್ತಾನೆ.
ಶಿವನ ತಪಸ್ಸು ಜೀವನಕ್ಕೆ ಬೇಕಾದ ಏಕಾಗ್ರತೆ, ಗುರಿ ಸಾಧನೆಗೆ ಅವಶ್ಯಕವಾದ ಚಿತ್ತ ಸಂಕಲ್ಪ ಪ್ರತಿನಿಧಿಉತ್ತದೆ. ಕಾಮದೇವ ನಮ್ಮ ಸುತ್ತಲಿನ , ನಮ್ಮ ಉದ್ದೇಶದಿಂದ ದೂರ ಸೆಳೆಯಬಹುದಾದ ವಿದ್ಯಮಾನಗಳನ್ನು ಪ್ರತಿನಿಧಿಸುತ್ತದೆ. ಯೌವನದಲ್ಲಿ ನಮಗಾಗುವ ಚಿತ್ತ ಚಂಚಲೆನೆಗೂ, ಅದನ್ನು ಪ್ರತಿರೋಧಿಸಬೇಕಾದ ಮನೋನಿಗ್ರಹಕ್ಕೂ ಈ ಕಥೆ ಉದಾಹರಣೆ.
ಈ ವಸಂತ ಋತುವಿನ ಅಗಮನದೊಂದಿಗೆ ಜೀವಸಂಕುಲ ನಳನಳಿಸುತ್ತಿರುವಾಗ ಚಿತ್ತ ಚಂಚಲವಾಗುವುದು ಸಹಜ. ಅದನ್ನು ’ಸುಡು’ ಎಂಬುದೇ ಈ ಆಚರಣೆಯ ಹಿಂದಿನ ಸಂದೇಶ.
ಚಳಿಗಾಲ ಕಳೆದು ವಸಂತಋತು ಕಾಲಿಡುವಾಗ ಹೊಸಚಿಗುರು ಮೂಡಿ, ಹೂ ಅರಳಿ ಸಕಲ ಜೀವರಾಶಿ ಬಣ್ಣಗಳಿಂದ ಕೂಡಿ ನಲಿಯುವಾಗ ಮಾನವ ಮಾತ್ರ ಹಾಗೆ ಇರಬೇಕೆ. ಈ ಸಂತೋಷದಲ್ಲಿ ಭಾಗಿಗಳಾಗಲು ನಾವೂ ಕೂಡ ರಂಗಿನಾಟದಲ್ಲಿ ತೊಡಗುವುದು. ನಮ್ಮ ಜೀವನವನ್ನು ನಿಯಂತ್ರಿಸುತ್ತವೆ ಎಂದು ನಂಬಲಾದ ಗ್ರಹಗಳಿಗೂ ತಮ್ಮ ತಮ್ಮ ಬಣ್ಣಗಳಿದ್ದು, ಈ ಬಣ್ಣಗಳನ್ನು ನಮ್ಮ ಮೇಲೆ ಆರೋಪಿಸಿಕೊಂಡು ಅವುಗಳನ್ನು ಸಂತೃಪ್ತಿಗೊಳಿಸುವುದು ಈ ಹಬ್ಬದ ಇನ್ನೊಂದು ಆಶಯ. ಈ ಸಂದರ್ಭದಲ್ಲಿ ಎಲ್ಲರೂ ತಂತಮ್ಮ ಭೇದ ಭಾವಗಳನ್ನು ಮರೆತು ಒಂದಾಗಿ ಆನಂದಿಸುವುದು ಸಾಮಾಜಿಕ ಆಶಯ. ಲೋಕೋ ವಿಭಿನ್ನ ರುಚಿಃ. ಮನೋಭಾವಗಳಲ್ಲಿ ಭೇದ ಸಹಜ; ಇದು ಜೀವನದ ಅನಿವಾರ್ಯ ಸತ್ಯ. ವಿವಿಧ ಬಣ್ಣಗಳು ಈ ಭೇದವನ್ನೇ ಪ್ರತಿನಿಧಿಸುವುದು. ಎಲ್ಲ ಬಣ್ಣಗಳನ್ನು ಎಲ್ಲರೂ ಎರಚುವುದು ಸಹಿಷ್ಣತೆಯ ಸಂಕೇತ. ಎಲ್ಲ ಬಣ್ಣ ಸೇರಿ ಬಿಳಿಯ ಬಣ್ಣವಾಗುವಂತೆ ಎಲ್ಲ ಭೇದ ಮರೆತು ಶುದ್ಧ ಮನಸ್ಸಿನಿಂದ ಹಬ್ಬವನ್ನು ಆಚರಿಸಿ
ಸಂಭ್ರಮಿಸುವುದು ಆ ಮೂಲಕ ಸಾಮಾಜಿಕ ಒಗ್ಗಟ್ಟಿಗೆ ನಾಂದಿ ಹಾಡುವುದು ಈ ಹಬ್ಬದ ಉನ್ನತ ಆಶಯಗಳಲ್ಲಿ ಒಂದು.

ಹೋಳಿ ಹಬ್ಬ (ಕವನ)

ಶಶಿರನು ತೆರಳಿ ವಸಂತನು ತಾ
ಮೂಡುತ ಬರುವಲ್ಲಿ
ಬಿದಿಗೆಯ ಶಶಿ ತಾ ದಿನವೂ
ಬೆಳೆಯುತ ಪೂರ್ಣನಾಗುವಲ್ಲಿ
ಜಗದೆಲ್ಲೆಡೆಯಲು ಜೀವ ಜಾಲ ತಾ
ನಗುತ ನಲಿಯುವಲ್ಲಿ
ಹೋಳಿಯ ಹಬ್ಬವು ಬರುತಿದೆ
ಗೆಳೆಯ ರಂಗನು ತಾ ಚೆಲ್ಲಿ

ಬಾಲಕ ಪ್ರಹ್ಲಾದನು ತಾ ಅಗ್ನಿಯ
ತಾಪದೆ ಪಾರಾಗಿ
ಅವನನು ಸುಡಲು ಹೋದ
ಹೋಲಿಕಾ ಸುಟ್ಟು ಬೂದಿಯಾಗಿ
ದೈವ ಕರುಣೆ ತನ ಭಕ್ತರ
ಪೊರೆವುದು ಎಂದು ಎಲ್ಲ ಕೂಗಿ
ಆಚರಿಸಿದ ದಿನ ಇದುವೇ
ಗೆಳೆಯ ನಮಿಸು ನೀನು ಬಾಗಿ

ಲೋಕದ ಬಾಧ್ಯತೆ ತೊರೆಯುತ ಶಿವ
ತಾ ತಪವನು ಆಚರಿಸೆ
ಸುಮಬಾಣಗಳನು ಹೂಡುತ ಮದನ
ತಪವನು ತಾ ಕೆಡಿಸೆ
ಕ್ರೋಧಾಗ್ನಿಯದು ಕಾಮನ ದೇಹವ
ಸುಟ್ಟು ಬೂದಿಮಾಡಿ
ಪತಿಯ ವಿರಹದಲಿ ರತಿಯು
ಅಳುತಲಿ ಶಿವನ ಕಾಡೆ ಬೇಡಿ

ಕರಗಿದ ಈಶ್ವರ ಮನ್ಮಥನಿಗೆ ತಾ
ನೀಡಿದ ಜೀವವನು
ದೇಹವಿರದ ಬರಿ ಭಾವ ರೂಪಿ
ಕಾಮ ಅನಂಗನನು
ಕಾಮ ದಹನವ ಮಾಡಿ ಈ ದಿನವ
ಎಲ್ಲರು ನೆನೆಯುವರು
ಕಾಮ ನಿಗ್ರಹದ ಅರ್ಥವ ತಿಳಿಯುತ
ಬದುಕನು ನಡೆಸುವರು

ಎಳೆಬಿಸಿಲಿಗೆ ಟಿಸಿಲೊಡೆದು ಮೂಡುತಿಹ
ಜೀವ ಜಾಲ ನೋಡು
ಪ್ರಕೃತಿ ಮಡಿಲಿನ ಜೀವಸಂಕುಲವು
ಬಹು ವಿಧ ಬಣ್ಣದ ಗೂಡು
ರಂಗಿನ ಓಕುಳಿ ನಾವಾಡುವ ಬಾ
ಪ್ರಕೃತಿ ಮಡಿಲಿನಲಿ
ಏಕತೆಯನು ನಾವ್ ಕಾಣುತ
ನಮ್ಮೀ ವೈವಿಧ್ಯತೆಯಲ್ಲಿ

ನಿನ್ನ ಬಣ್ಣವ ನಾ ತಳೆಯುವೆನು
ನನ್ನ ಬಣ್ಣ ನೀ ತಳೆಯೊ
ನಿನ್ನ ಮನವ ನಾ ಅರಿಯುವೆ ಗೆಳೆಯ
ನನ್ನ ಮನವ ನೀ ಅರಿಯೋ
ಏಳು ಬಣ್ಣಗಳು ಸೇರಿ ಶುದ್ಧ
ಬಿಳಿ ಬಣ್ಣವಾಗುವಂತೆ
ನಮ್ಮ ಭೇದಗಳ ಮರೆತರೆ ನಾವು
ಎಲ್ಲ ಒಂದೆ ಅಂತೆ.

ಡಾ. ಸುದರ್ಶನ ಗುರುರಾಜರಾವ್

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s