ಸಂವಾದ

ಸಂವಾದ

ಎಲೆ ಜಲವೆ ನೀನೇಕೆ ಹರಿದು ಹೊರಟಿರುವೆ
ಉಷ್ಣ ಶಕ್ತಿಯೆ ನೀನು ಏಕೆ ಪಸರಿಸುವೆ
ಓ ಬೆಳಕೆ ಕತ್ತಲೆಯ ಕಡೆ ಏಕೆ ಓಡಿರುವೆ
ನಿಮ್ಮ ಪಾಡಿಗೆ ನೀವಿರದೇಕೀ ಗೊಡವೆ?

ಓ ಮನುಜ ಪ್ರಕೃತಿಯ ಮಕ್ಕಳು ನಾವು
ನಮ್ಮೊಳಿರುವುದ ಹಂಚಲೆಂದೆ ಹೊರಟಿಹೆವು
ಸರ್ವ ಸಮಾನತೆಗಾಗಿ ಈ ತುಡಿವು
ನಿನಗಿಲ್ಲ ನಮ್ಮ ಈ ಸಂಸ್ಕೃತಿಯ ಅರಿವು!

ಬಲ್ಲೆ ಬಲ್ಲೆನು ನಾನು ನಿಮ್ಮ ನಾಟಕವ
ಪ್ರತಿರೋಧ ಇಲ್ಲದಿರುವೆಡೆಯಲ್ಲಿ ಹರಿವ
ಉಳಿಸುತಲಿ ನಿಮ್ಮೆಲ್ಲ ಶಕ್ತಿ ಸಂಚಯವೆ
ಕೊಡುವಲ್ಲಿ ನಡೆಸುವಿರು ಬಲು ಮೋಸವ!

ಇರುವ ಕಡೆಯೊಳಗಿಂದ ಇರದಿರುವ ಕಡೆಗೆ
ಹರಿವ ನಮ್ಮಲ್ಲೇಕೆ ಮೋಸದಾ ನಡಿಗೆ
ಉಳಿಸಿದಾ ಶಕ್ತಿಯದು ಎಲ್ಲರಿಗು ಕೊಡುಗೆ
ಮೋಸ ವಂಚನೆ ಜಾಲ ನಿಮ್ಮದಡಿಗಡಿಗೆ!!

ಗುಡ್ಡಗಳು ಅಡ್ಡಬರೆ ಜಲವೆ ನೀ ದಾಟಲಾರೆ
ವಾಹಕವು ಇರದಿರಲು ಬಿಸಿಯೆ ಪಸರಿಸಲಾರೆ
ಅಪಾರದರ್ಶಕವು ತಾನಾಗೆ ವಸ್ತು
ಬೆಳಕೆ ನಿನಗಿರದಾಯ್ತು ದಾಟುವಾ ತಾಕತ್ತು!!

ಗುಡ್ಡ ಬೆಟ್ಟಗಳನ್ನು ಮೀರಿ ಹರಿಯುವೆನು
ಸಾಧ್ಯವಿರುವಲ್ಲೆಲ್ಲ ಕೊರಕು ಕೊರೆಯುವೆನು
ಎದುರಾಳಿ ಬಲವರಿತು ತಾಳ್ಮೆ ತೋರುವೆನು
ತಾಳಿದವ ಬಾಳಿಯಾನೆಂದು ಸಾರುವೆನು

ಕೊಟ್ಟದ್ದು ತನಗೆಂದು ತಿಳಿಯೆ ನೀ ಮನುಜ
ಲೋಭ ಮೋಹಗಳೆಂದು ನಿನಗೆ ಬಲು ಸಹಜ!
ಶಾಖವನು ಹರಿಗೊಟ್ಟು ವಾಹಕವು ಉಳಿದು
ಹರಿಯಗೊಡದಿಹ ವಸ್ತು ಬೂದಿಯಾಗುವುದುರಿದು!

“ನಾನು” ಎನ್ನುವ ಭಾವ ನಿನ್ನಲ್ಲಿ ಬರಲು
ಸುತ್ತಲೂ ಗೋಡೆಯನು ನೀ ಕಟ್ಟಿಕೊಳಲು
ಯಾವ ಬುದ್ಧಿಯ ಬೆಳಕು ನಿನ್ನೆಡೆಗೆ ಬರದು
ಬಂದ ಬೆಳಕೆಲ್ಲವೂ ಹಿಂತಿರುಗುತಿಹುದು

ಎಲೆ ಮನುಜ ನಿನಗೊಂದು ಸಂದೇಶ ಬೀರೆ
ತೋರುವೆವು ನಾವ್ ನಿನಗೆ ಈ ಓರೆ ಕೋರೆ
ಸಂದೇಶ ಸ್ವೀಕರಿಸೆ ಕಾಣುವೆ ಯೊ ಬೆಳಕು
ಇಲ್ಲದಿರೆ ನಿನ ಬಾಳು ಬರೀ ಹುಳುಕುಳುಕು

ಯಾವ ಪ್ರಾಣಿಗು ಇರದ ದುರಾಸೆಯ ಚಿಂತೆ
ಪಂಚ ಭೂತಗಳಿಂದಾದ ನನಗೇಕೆ ಅಂತೆ
ನನ್ನ ಬಾಳಾಯ್ತಲ್ಲ ಬರಿ ಮೋಸದಾ ಕಂತೆ
ಉಳಿದ ಜೀವಿತವನ್ನು ಬದುಕುವೆನು ನಿಮ್ಮಂತೆ!!

ಡಾ.ಸುದರ್ಶನ ಗುರುರಾಜರಾವ್

 

Leave a comment