ಕವನದ ಕವನ
ನೋಡಲಾರದ ಗೋಡೆ ಆರುಮೊಳವಿದ್ದಂತೆ
ಕುಡಿಯಲಾರದ ಪೇಯ ಕೊಳಗ ತುಂಬಿರುವಂತೆ
ಓಡಲಾಗದ ಹಾದಿಗಂತ್ಯವೇ ಇರದಂತೆ
ಹಾಡಲಾರದ ಹಾಡು ಇಲ್ಲಿಹುದು ನೋಡು
ರಾಗ-ತಾಳಗಳಿಲ್ಲ ಶೃತಿಲಯದ ಹೆಸರಿಲ್ಲ
ಆಳದಲಿ ಭಾಷೆಯಾ ಪದಗಳರಿವಿಲ್ಲ
ಥಳುಕು ಬಳುಕಿನ ನವ್ಯ ಕಾವ್ಯಗಳ ಹೆಸರಿನಲಿ
ಬಳಸಿರುವ ಪದ ಪುಂಜ ಇಲ್ಲಿ ಇಹುದಲ್ಲ
ಆದಿಪ್ರಾಸಗಳಿಲ್ಲ ಅಂತ್ಯ ಪ್ರಾಸಗಳಿಲ್ಲ
ಹದವರಿತು ಪದಗಳನು ಇಲ್ಲಿ ಬಳಸಿಲ್ಲ
ಮುದದಿಂದ ಭಾಷೆಯ ಸೇವೆಯನೆ ಮಾಡಿಲ್ಲ
ಪದಗಳ ಪದರಿನಲಿ ಹೊಂದಿಕೆಯೆ ಇಲ್ಲ
ಹಾವ ಭಾವದ ಗಂಧ ಗಾಳಿಗಳು ಇಲ್ಲಿಲ್ಲ
ನೋವ ಮರೆಸುತ ತಣಿಸೊ ಗುಣಗಳಿದಕಿಲ್ಲ
ದೇವ ಭಾಷೆಯ ಸೊಬಗು ಸೊಗಸುಗಳು ಇದಕಿಲ್ಲ
ಯಾವ ಪುರುಷಾರ್ಥವೂ ಇದಕೆ ಸೊಂಕಿಲ್ಲ
ಗದ್ಯವೊಂದರ ಸಾಲು ಸಾಲುಗಳ ತುಂಡರಿಸಿ
ಪದ್ಯದಾ ರೂಪದಲಿ ಜೋದಿಸಿಡಲು
ವೇದ್ಯವಾಯಿತು ನನಗೆ ನವ್ಯ ಕಾವ್ಯದ ಶೈಲಿ
ಗದ್ಯವನೆ ಪದ್ಯದಂತೋದುತಿರಲು
ನಮ್ಮ ಭಾಷೆಯ ಕಾವ್ಯ ಲಕ್ಷಣವ ಅರಿತಿರದೆ
ಅನ್ಯ ಭಾಷೆಯ ಕವನ ತರ್ಜುಮೆಯ ಮಾಡಿ
ಕನ್ನಡದ ಸೊಬಗನ್ನು ಸೊಗಡನ್ನು ಬೆರೆಸದೆಯೆ
ಗೀಚಿದಂತಹ ಚಿತ್ರ ಬರೆದಿರುವೆ ನೋಡಿ
ಪಂಪ, ಹರಿಹರ, ಶರಣ ದಾಸರಲಿ ಮೈವೆತ್ತು
ಇಂಪು ಕಂಪುಗಳ ತಾ ಹೀರಿ ಬೆಳೆದಿತ್ತು
ತಂಪು ಹೊತ್ತಿನಲಿ ವಾಚಿಸುವ ಭಾರತದ
ಸೊಂಪು ತಾ ಕನ್ನಡದ ಅಂಗವಾಗಿತ್ತು
ಗೋವಿಂದ ಪೈ ಯಿಂದ ಕುವೆಂಪು ವರೆಗೆ
ಪಂಜೆ ಮಂಗೇಶರಿಂದ ಎಚ್ಹೆಸ್ವಿ ಎದೆಗೆ
ಹೊನಲಾಗಿ ಹರಿದಂಥ ಕನ್ನಡದ ಕಾವ್ಯ
ಮಂಗನಾ ಕೈ ಸಿಕ್ಕ ಮಾಣಿಕ್ಯವಯ್ಯ
ಬರಹ ಕಲಿತಾಕ್ಷಣಕೆ ಕವಿಯಾದೆನಲ್ಲ
ಮರೆಯುತಲಿ ಕನ್ನಡದ ಕಾವ್ಯ ಗುಣವೆಲ್ಲ
ಮೆರೆಯುವಾ ಹಂಬಲವು ಮನೆಯ ಮಾಡಿಹುದಲ್ಲ
ತೊರೆಸುತಲಿ ಗದ್ಯ ಪದ್ಯಗಳ ಭೇದವೆಲ್ಲ.
ಡಾ. ಸುದರ್ಶನ ಗುರುರಾಜರಾವ್.