ಅಮ್ಮನ ಅಂತರಾಳ
ಓ ಕಂದ ಈ ಜಗದಿ ನೀ ಒಂಟಿಯಲ್ಲ
ನಿನ್ನ ತಾಯಿಯು ಸತತ ನಿನಗಿರುವಳಲ್ಲ
ನಿನ್ನ ಪಾಲನೆಗೆಂದು ಮನೆಯಲಾರಿಲ್ಲ
ನೆರಳಲ್ಲಿ ನಿನ ಬಿಡುವ ಭಾಗ್ಯ ನನಗಿಲ್ಲ
ನಿನ್ನ ಹಣೆಯಲಿ ಒಂದು ದೃಷ್ಟಿ ಬೊಟ್ಟಿಟ್ಟು
ಬಂದಿರುವೆ ಕೆಲಸಕ್ಕೆ ಸೊಂಟದಲಿ ಹೊತ್ತು
ಬಿಸಿಲೇನು ಚಳಿಯೇನು ಮಳೆ ಗಾಳಿಯೇನು
ನಿನಗಾಗಿ ಏನೊಂದು ಲೆಕ್ಕಿಸೆನು ನಾನು
ನಾನೆಷ್ಟು ದುಡಿ ದುಡಿದು ದಣಿವಾದರೇನು
ನಿನ್ನ ನಗು ನಿನ್ನ ಮುಖ ಕಂಡು ಮರೆಯುವೆನು
ಓ ಕಂದ ನಿನಗಾಗಿ ಈ ಮಣ್ಣು ಕಲ್ಲು
ನಾ ಹೊರುವೆ ಹೆದರೆದೆಯೆ ದಿನ ರಾತ್ರಿಯಲ್ಲು
ನೀನುಟ್ಟ ಬಟ್ಟೆಯದು ಮಾಸಿದ್ದರೇನು
ಮೈ ಕೈಗೆ ಮಣ ಧೂಳು ಮೆತ್ತಿದ್ದರೇನು
ಜಗದೆಲ್ಲ ಮಕ್ಕಳೊಳು ಸುಂದರನು ನೀನು
ಮಹರಾಜ ನಿನ್ನಬ್ಬೆ ಕಂಗಳಿಗೆ ನೀನು
ಊಟ ಬಟ್ಟೆಗೆ ಹಣಕೆ ಕೊರತೆಯಿರಬಹುದು
ನನ್ನೆದೆಯ ಪ್ರೀತಿಯಿದೋ ತುಂಬಿ ಹರಿದಿಹುದು
ನಿನ್ನ ಬಾಳಿನ ಹಣತೆಯಾ ಬತ್ತಿ ನಾನು
ನನ್ನ ಬೆವರಿನ ತೈಲ ಅದಕೆ ಸುರಿಯುವೆನು
ನಿನ್ನ ಆಸೆಯ ದೀಪ ನಂದದಿರುವಂತೆ
ಕಾಯುವೆನು ಕಣ್ಣೆವೆಯ ನಾ ಮುಚ್ಚದಂತೆ
ನಿನಗಾಗಿ ಕನಸಿಹುದು ನನ್ನ ಎದೆಯಲ್ಲು
ಆ ಶಿಖರದೆತ್ತರಕೆ ನೀ ಬೆಳೆದು ನಿಲ್ಲು!!
ಡಾ. ಸುದರ್ಶನ ಗುರುರಾಜರಾವ್